ಜೂನ್ 29–ಜುಲೈ 5, 2026
ಗೀತೆ 131 “ದೇವರು ಜೊತೆಗೂಡಿಸಿದನು”
ನಿಮ್ಮ ಸಂಗಾತಿನೇ ನಿಮ್ಮ ಪ್ರಾಣ ಸ್ನೇಹಿತರು!
“ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.”—ಜ್ಞಾನೋ. 18:24.
ಈ ಲೇಖನದಲ್ಲಿ ಏನಿದೆ?
ಗಂಡ ಮತ್ತು ಹೆಂಡ್ತಿ ಇಬ್ರೂ ಒಳ್ಳೆ ಫ್ರೆಂಡ್ಸ್ ಆಗಿರಬೇಕು. ಅವ್ರಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇರಬೇಕು. ಆಗ ಅವ್ರ ಸಂಸಾರ ಆನಂದ ಸಾಗರವಾಗಿರುತ್ತೆ.
1. ಒಳ್ಳೆ ಫ್ರೆಂಡ್ಸ್ ದೇವ್ರಿಂದ ಬಂದಿರೋ ಗಿಫ್ಟ್ ಅಂತ ಯಾಕೆ ಹೇಳಬಹುದು?
ನಿಮಗೆ ಒಳ್ಳೆ ಫ್ರೆಂಡ್ಸ್ ಇದ್ದಾರಾ? ಒಳ್ಳೆ ಫ್ರೆಂಡ್ಸ್ ಯೆಹೋವ ನಮಗೆ ಕೊಟ್ಟಿರೋ ಬೆಲೆ ಕಟ್ಟಲಾಗದ ಗಿಫ್ಟ್! ಅವರು ದೇವ್ರನ್ನ ಪ್ರೀತಿಸ್ತಾರೆ, ನಮ್ಮನ್ನೂ ಪ್ರೀತಿಸ್ತಾರೆ. (ಯಾಕೋ. 1:17) ನಾವು ಖುಷಿಪಡ್ವಾಗ ನಮ್ಮ ಖುಷೀಲಿ ಅವ್ರ ಖುಷಿ ಕಾಣ್ತಾರೆ. ನಾವು ಕಣ್ಣೀರು ಹಾಕ್ವಾಗ ನಮ್ಮ ಕಣ್ಣೀರು ಒರೆಸ್ತಾರೆ. ನಾವೇನಾದ್ರೂ ತಪ್ಪು ಮಾಡಿದ್ರೆ ನಮ್ಮನ್ನ ತಿದ್ದುತ್ತಾರೆ. ಅವರು ನಮಗೆ ಯಾವಾಗ್ಲೂ ನಿಯತ್ತಾಗಿ ಇರ್ತಾರೆ. ನಾವು ಅವ್ರನ್ನ ನಂಬಬಹುದು. ಇವ್ರ ಈ ‘ಸಿಹಿಯಾದ ಸ್ನೇಹದಿಂದ ನಮ್ಮ ಮನಸ್ಸಿಗೆ ಖುಷಿ’ ಸಿಗುತ್ತೆ.—ಜ್ಞಾನೋ. 27:9.
2. ಗಂಡ-ಹೆಂಡ್ತಿ ತಮ್ಮ ಮಧ್ಯೆ ಇರೋ ಸ್ನೇಹನ ಯಾಕೆ ಬಲಪಡಿಸ್ಕೊಳ್ತಾ ಇರಬೇಕು? (ಮತ್ತಾಯ 19:6)
2 ಗಂಡ ಮತ್ತು ಹೆಂಡ್ತಿ ಒಬ್ರನ್ನೊಬ್ರು ಪ್ರಾಣ ಸ್ನೇಹಿತರ ಹಾಗೆ ನೋಡೋದು ತುಂಬ ಮುಖ್ಯ. ಅವರು, ‘ನಮ್ಗೆ ಮದುವೆ ಆಯ್ತಲ್ಲ ಬಿಡು’ ಅಂತ ಸುಮ್ಮನೆ ಇರಬಾರದು. ತಮ್ಮ ಸಂಬಂಧನ ಬಲಪಡಿಸ್ಕೊಳ್ತಾ ಇರಬೇಕು. ಒಂದುವೇಳೆ ಈ ಸ್ನೇಹ-ಸಂಬಂಧನ ಅವರು ತಾತ್ಸಾರ ಮಾಡಿದ್ರೆ, ಅವ್ರ ಜೀವನ ನಾಲ್ಕು ಗೋಡೆಗಳ ಮಧ್ಯೆ ಇದ್ರೂ ನಾಲ್ಕು ಮೈಲಿ ದೂರ ಇದ್ದಂತೆ ಆಗಿಬಿಡುತ್ತೆ. ಜಗಳ, ಕೋಪ ಮತ್ತು ಕಿತ್ತಾಟದಲ್ಲೇ ಜೀವನ ಕಳೀಬೇಕಾಗುತ್ತೆ. ಆದ್ರೆ ಅವರು ತಮ್ಮ ಸ್ನೇಹನ ಬಲಪಡಿಸ್ಕೊಳ್ತಾ ಇದ್ರೆ, ಅವ್ರ ಸಂಗಾತಿಗಿಂತ ಬೆಸ್ಟ್ ಫ್ರೆಂಡ್ ಈ ಪ್ರಪಂಚದಲ್ಲೇ ಯಾರೂ ಸಿಗಲ್ಲ ಅಂತ ಅರ್ಥ ಮಾಡ್ಕೊಳ್ತಾರೆ. (ಮತ್ತಾಯ 19:6 ಓದಿ.) ಹಾಗಾಗಿ, ಮದುವೆ ಆಗಿರೋರು ತಮ್ಮ ಸ್ನೇಹ-ಸಂಬಂಧನ ಹೇಗೆ ಬಲಪಡಿಸ್ಕೊಬಹುದು ಅಂತ ಈ ಲೇಖನದಲ್ಲಿ ನೋಡ್ತೀವಿ. ಆದ್ರೆ ಅದಕ್ಕಿಂತ ಮೊದ್ಲು ಮುಂದೆ ಮದುವೆ ಆಗಬೇಕು ಅಂತ ಇರೋರು ಒಳ್ಳೆ ಸಂಗಾತಿನ ಅಂದ್ರೆ ತಮ್ಮ ಪ್ರಾಣ ಸ್ನೇಹಿತರನ್ನ ಹೇಗೆ ಕಂಡ್ಕೊಬಹುದು ಅಂತ ಚರ್ಚಿಸೋಣ.
ನಿಮ್ಮ ಬಾಳ ಸಂಗಾತಿ ಹೇಗಿರಬೇಕು?
3-4. ಒಳ್ಳೆ ಸಂಗಾತಿಯನ್ನ ಕಂಡ್ಕೊಳ್ಳೋಕೆ ಏನು ಮಾಡಬೇಕು? (ಜ್ಞಾನೋಕ್ತಿ 18:22)
3 ನಾವು ದಿಢೀರಂತ ದೊಡ್ಡ ನಿರ್ಧಾರಗಳನ್ನ ಮಾಡಬಾರದು. ಆ ನಿರ್ಧಾರಗಳನ್ನ ತಗೊಳ್ಳೋ ಮುಂಚೆ ಅದ್ರಿಂದ ಆಗೋ ಅಪಾಯ, ಸಿಗೋ ಪ್ರಯೋಜ್ನ ಮತ್ತು ಅದ್ರಿಂದ ಮುಂದೆ ಏನಾಗಬಹುದು ಅಂತೆಲ್ಲಾ ಯೋಚಿಸಬೇಕು. ಯಾಕಂದ್ರೆ ದೊಡ್ಡ ನಿರ್ಧಾರಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತೆ. ಹಾಗಾಗಿ ನಾವು ದೊಡ್ಡ ನಿರ್ಧಾರಗಳನ್ನ ಚೆನ್ನಾಗಿ ಯೋಚ್ನೆ ಮಾಡಿ ತಗೋಬೇಕು.
4 ನೀವು ಯಾರನ್ನ ಮದುವೆ ಆಗ್ತೀರ ಅನ್ನೋದು ಜೀವನದಲ್ಲಿ ತಗೊಳ್ಳೋ ಒಂದು ದೊಡ್ಡ ನಿರ್ಧಾರ! ಮದುವೆ ಏರ್ಪಾಡನ್ನ ಶುರು ಮಾಡಿದ್ದೇ ಯೆಹೋವ. ಹಾಗಾಗಿ ನೀವು ಎಂಥ ವ್ಯಕ್ತಿನ ಮದುವೆ ಆಗಬೇಕು ಅಂತ ಆತನ ಹತ್ರ ಕೇಳೋದೇ ಒಳ್ಳೇದು ಅಲ್ವಾ? ನಿಮಗೆ ಒಳ್ಳೆ ಸಂಗಾತಿ ಸಿಗಬೇಕು ಅನ್ನೋದು ಆತನ ಆಸೆ. ನಿಮಗೇನು ಬೇಕು ಅಂತ ನಿಮಗಿಂತ ಆತನಿಗೇ ಚೆನ್ನಾಗಿ ಗೊತ್ತು. (ಜ್ಞಾನೋಕ್ತಿ 18:22 ಓದಿ; ಯೆಶಾ. 48:17, 18) ಒಳ್ಳೆ ಸಂಗಾತಿಯನ್ನ ಹೇಗೆ ಕಂಡ್ಕೊಬಹುದು ಅಂತ ತಿಳ್ಕೊಳ್ಳೋಕೆ ಯೆಹೋವ ದೇವರು ಬೈಬಲಲ್ಲಿ ತುಂಬ ತತ್ವಗಳನ್ನ ಬರೆಸಿದ್ದಾನೆ. ಅದನ್ನ ನೀವು ಓದಿ ತಿಳ್ಕೊಬೇಕು.
5. ಸತ್ಯದಲ್ಲಿ ಇರೋರನ್ನೇ ಮದುವೆಯಾಗೋದು ಯಾಕಷ್ಟು ಮುಖ್ಯ?
5 ನೀವು ದೀಕ್ಷಾಸ್ನಾನ ತಗೊಂಡಾಗ ಯೆಹೋವನ ಸ್ನೇಹಿತರಾದ್ರಿ. (ಕೀರ್ತ. 25:14) ಹಾಗಾಗಿ ನೀವು ಮದುವೆಯಾಗಬೇಕು ಅಂತಿರೋ ವ್ಯಕ್ತಿ ಕೂಡ ನಿಮ್ಮ ತರಾನೇ ಯೆಹೋವನ ಸ್ನೇಹಿತನಾಗಿರೋದು ತುಂಬ ಮುಖ್ಯ. (1 ಕೊರಿಂ. 7:39) ನೀವು ಈ ನಿರ್ಧಾರ ಮಾಡಿದ್ರೆ ಯೆಹೋವನ ಮಟ್ಟಗಳನ್ನ ಗೌರವಿಸ್ತೀರ ಅಂತ ತೋರಿಸ್ತೀರ. ಅಷ್ಟೇ ಅಲ್ಲ, ನೀವು ಇಷ್ಟಪಟ್ಟ ಸಂಗಾತಿನ ಯೆಹೋವನೂ ಇಷ್ಟಪಡ್ತಾನೆ. ಆತನೇ ನಿಮಗೆ ಅವ್ರನ್ನ ಗಿಫ್ಟ್ ಆಗಿ ಕೊಟ್ಟಿದ್ದಾನೆ ಅಂತ ಅರ್ಥ ಮಾಡ್ಕೊಳ್ತೀರ. (ಜ್ಞಾನೋ. 19:14) ಆಗ ನೀವು ‘ಏರುಪೇರಾದ ನೊಗದಿಂದ’ ಬರೋ ತೊಂದ್ರೆಗಳಿಂದಾನೂ ದೂರ ಇರ್ತೀರ. (2 ಕೊರಿಂ. 6:14) ಆದ್ರೆ ಕೆಲವರು, ‘ಸತ್ಯದಲ್ಲಿ ನನಗೆ ಸರಿಯಾದ ಜೋಡಿ ಸಿಕ್ತಿಲ್ಲ, ಅದಕ್ಕೇ ನಾನು ಬೇರೆಯವ್ರನ್ನ ಮದುವೆಯಾಗ್ತೀನಿ’ ಅಂತ ಅಂದ್ಕೊತಾರೆ. ಇನ್ನು ಕೆಲವರು, ‘ಸತ್ಯದಲ್ಲಿ ಇಲ್ಲದಿದ್ರೂ ಪರ್ವಾಗಿಲ್ಲ, ನಾನು ಈಗ ಈ ವ್ಯಕ್ತಿಯನ್ನ ಪ್ರೀತಿಸ್ತೀನಿ, ಅವರು ಆಮೇಲೆ ಸತ್ಯ ಕಲಿಬಹುದು’ ಅಂತ ಯೋಚಿಸ್ತಾರೆ. ಈ ತರ ಯೋಚಿಸೋದು ದೊಡ್ಡ ತಪ್ಪಲ್ವಾ?
6-7. ‘ಇವ್ರೇ ನಂಗೆ ಸರಿಯಾದ ಜೋಡಿ’ ಅಂತ ಒಪ್ಕೊಳ್ಳೋ ಮುಂಚೆ ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?
6 ಹಾಗಂತ ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ಆಗಿದ್ರೆ ಸಾಕು ಅವನನ್ನ ಮದುವೆ ಆಗಬಹುದು ಅಂತಾನಾ? ಇಲ್ಲ. ಮದುವೆ, ಜೀವನಪೂರ್ತಿ ಇರಬೇಕಾದ ಬಂಧ! ಹಾಗಾಗಿ ನೀವು ಯಾರನ್ನ ಮದುವೆ ಆಗಬೇಕು ಅಂತ ಇದ್ದೀರೋ ಅವ್ರ ಬಗ್ಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ.a ಅವನು ಕುಟುಂಬದವ್ರ ಜೊತೆ ಹೇಗೆ ನಡ್ಕೊಳ್ತಾನೆ? ಅವ್ರನ್ನ ಚೆನ್ನಾಗಿ ನೋಡ್ಕೊಳ್ತಾನಾ? ಅವ್ರಿಗೆ ಗೌರವ ಕೊಡ್ತಾನಾ? ಅವನ ಫ್ರೆಂಡ್ಸ್ ಎಂಥವರು? ಅವನು ಹೇಳೋದನ್ನ ಬೇರೆಯವರು ಒಪ್ಪದೇ ಇದ್ರೆ ಅವನು ಹೇಗೆ ನಡ್ಕೊತಾನೆ? ಬೈಬಲ್ ಪ್ರಕಾರ ತಪ್ಪಲ್ಲದ ವಿಷ್ಯಗಳು ಬಂದಾಗ ಅವನು ‘ನಾನು ಹೇಳೋದೇ ಆಗಬೇಕು’ ಅಂತ ಹಠ ಹಿಡಿತಾನಾ ಅಥವಾ ಮಣಿತಾನಾ? ಅವನಿಗೆ ಹಣದಾಸೆ ಇದ್ಯಾ?
7 ವ್ಯಕ್ತಿನ ನೋಡಿದ ತಕ್ಷಣ ‘ಇವ್ರೇ ನಂಗೆ ಸರಿಯಾದ ಜೋಡಿ’ ಅಂತ ಅಂದ್ಕೊಬೇಡಿ. ಇನ್ನೂ ಕೆಲವು ಪ್ರಶ್ನೆಗಳನ್ನ ಕೇಳ್ಕೊಳ್ಳಿ. ಅವನು ನಿಜವಾಗ್ಲೂ ಯೆಹೋವನನ್ನ ತುಂಬ ಪ್ರೀತಿಸ್ತಾನಾ? ‘ಹೊಸ ವ್ಯಕ್ತಿತ್ವನ’ ಹಾಕ್ಕೊಂಡಿದ್ದಾನಾ? ಯೆಹೋವನ ಸೇವೆ ಜಾಸ್ತಿ ಮಾಡೋಕೆ ನನಗೆ ಸಹಾಯ ಮಾಡ್ತಾನಾ? ನಮ್ಮಿಬ್ರಿಗೂ ಒಂದೇ ರೀತಿಯ ಆಧ್ಯಾತ್ಮಿಕ ಗುರಿಗಳು ಇದ್ಯಾ? ನಾವು ಬರೀ ಸ್ನೇಹಿತರಲ್ಲ, ಮುಂದೆ ನಿಜವಾದ ಪ್ರಾಣ ಸ್ನೇಹಿತರಾಗ್ತೀವಾ? (ಕೊಲೊ. 3:9, 10) ನೀವೊಬ್ಬ ಸಹೋದರಿಯಾಗಿದ್ರೆ, ನೀವು ಇಷ್ಟಪಡ್ತಿರೋ ಸಹೋದರ ‘ನಂಗೆ ಒಳ್ಳೆ ಸ್ನೇಹಿತ ಮತ್ತು ಕುಟುಂಬಕ್ಕೆ ಒಳ್ಳೆ ಯಜಮಾನ ಆಗ್ತಾನಾ?’ ಅಂತ ಕೇಳ್ಕೊಳ್ಳಿ. (1 ಕೊರಿಂ. 11:3) ನೀವೊಬ್ಬ ಸಹೋದರ ಆಗಿದ್ರೆ, ನೀವು ಇಷ್ಟಪಡ್ತಿರೋ ಸಹೋದರಿ ಬಗ್ಗೆ ಈ ಪ್ರಶ್ನೆ ಕೇಳ್ಕೊಳ್ಳಿ, ‘ನಾನು ಅಪರಿಪೂರ್ಣತೆಯಿಂದ ಚಿಕ್ಕಪುಟ್ಟ ತಪ್ಪು ಮಾಡಿದ್ರೆ, ಇವಳು ಕುಟುಂಬದ ತಲೆತನಕ್ಕೆ ಗೌರವ ಕೊಡ್ತಾಳಾ?’ ಇಂಥ ಪ್ರಶ್ನೆಗಳಿಗೆ ಒಂದೇ ದಿನದಲ್ಲಿ ಉತ್ರ ಸಿಗಲ್ಲ. ಆದ್ರಿಂದ ನೀವು ಆ ವ್ಯಕ್ತಿ ಜೊತೆ ಸಮಯ ಕಳೆಯುವಾಗ ಅವ್ರನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ ಮತ್ತು ಅವ್ರ ಬಗ್ಗೆ ತಿಳ್ಕೊಳ್ಳಿ.
8-9. ಮದುವೆ ಆಗಬೇಕು ಅಂತ ಇರೋರಿಗೆ ಸರಿಯಾದ ನಿರ್ಧಾರ ಮಾಡೋಕೆ ಯಾವುದು ಸಹಾಯ ಮಾಡುತ್ತೆ? (ಚಿತ್ರ ನೋಡಿ.)
8 ನಿಮಗೆ ಅನಿಸಿದ್ದೇ ಫೈನಲ್ ಅಂತ ಅಂದ್ಕೊಬೇಡಿ. ಅವ್ರ ಬಗ್ಗೆ ಬೇರೆಯವ್ರ ಹತ್ರ ಕೇಳಿ ತಿಳ್ಕೊಳ್ಳಿ. ಆ ವ್ಯಕ್ತಿ ಬೇರೆಯವ್ರ ಹತ್ರ ಎಂಥ ಹೆಸರು ಮಾಡಿದ್ದಾನೆ? ಅವನಲ್ಲಿ ದೀನತೆ, ದಯೆ ಮತ್ತು ಅರ್ಥ ಮಾಡ್ಕೊಳ್ಳೋ ಗುಣ ಇದ್ಯಾ? ಅಂತ ಕೇಳಿ ನೋಡಿ. ಫ್ರೆಂಚ್ ಗಯಾನದಲ್ಲಿರೋ ಸಹೋದರಿ ಸಾರ, ಡ್ಯಾನಿಯೆಲ್ ಅನ್ನೋ ಸಹೋದರನನ್ನ ಮದುವೆ ಆಗಿದ್ದಾರೆ. ಆದ್ರೆ ಇವರು ಆ ಸಹೋದರನ ಬಗ್ಗೆ ಹೇಗೆ ತಿಳ್ಕೊಂಡ್ರು ಅಂತ ಅವ್ರೇ ಹೇಳ್ತಾರೆ ನೋಡಿ: “ಡ್ಯಾನಿಯೆಲ್ ಬಗ್ಗೆ ಅವ್ರ ರೂಮ್‌ಮೇಟ್ ಮತ್ತು ಪಯನೀಯರ್ ಪಾರ್ಟ್ನರ್ ಇಂದ, ಸಭೆ ಹಿರಿಯರಿಂದ, ನಮ್ಮಿಬ್ರಿಗೂ ಗೊತ್ತಿದ್ದ ಫ್ರೆಂಡ್ಸ್ ಇಂದ ಮತ್ತು ಅವ್ರ ಸಭೇಲಿದ್ದ ಸಹೋದರಿಯರಿಂದಾನೂ ಕೇಳಿ ತಿಳ್ಕೊಂಡೆ.” ನೀವು ದಯೆಯಿಂದ ನೇರವಾಗಿ ಆ ವ್ಯಕ್ತಿ ಹತ್ರಾನೇ, ‘ಈಗ ಅಥವಾ ಹಿಂದೆ ನಿಮ್ಮ ಜೀವನದಲ್ಲಿ ನಡೆದಂಥ ಯಾವುದಾದ್ರೂ ವಿಷ್ಯನ ನನಗೆ ಹೇಳಬೇಕಿದ್ಯಾ’ ಅಂತ ಕೇಳಿ. ಯಾಕಂದ್ರೆ ಆ ವ್ಯಕ್ತಿ ಬಗ್ಗೆ ನಿಮಗೆ ಗೊತ್ತಿಲ್ದೇ ಇರೋ ಕೆಲವು ವಿಷ್ಯಗಳು ಮುಂದೆ ನಿಮ್ಮ ಮದುವೆ ಜೀವನದಲ್ಲಿ ತೊಂದ್ರೆ ಮಾಡಬಹುದು.
9 ಇಷ್ಟೆಲ್ಲಾ ಮಾಡಿದ ಮೇಲೂ ನಿಮಗೆ ಇನ್ನೂ ಏನಾದ್ರೂ ಡೌಟ್ ಇದ್ರೆ ಅಥವಾ ಅನುಭವ ಇರೋ ಕ್ರೈಸ್ತರು ಆ ವ್ಯಕ್ತಿ ಪ್ರಗತಿ ಮಾಡಬೇಕಾದ ವಿಷ್ಯನ ನಿಮಗೆ ಹೇಳಿದ್ರೆ ಅದನ್ನ ಲೈಟಾಗಿ ತಗೋಬೇಡಿ. ಬದಲಿಗೆ ಆ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ, ಮದುವೆ ಮಾಡ್ಕೋಬೇಕಾ ಬೇಡ್ವಾ ಅಂತ ನಿರ್ಧಾರ ಮಾಡಿ.b ಇಲ್ಲಿವರೆಗೂ ನಾವು, ಮುಂದೆ ಮದುವೆ ಆಗೋರ ಬಗ್ಗೆ ನೋಡಿದ್ವಿ. ಈಗ, ಈಗಾಗ್ಲೇ ಮದುವೆ ಆಗಿರೋರ ಬಗ್ಗೆ ನೋಡೋಣ.
ಮದುವೆ ಆಗೋ ಮುಂಚೆ ಆ ವ್ಯಕ್ತಿಯ ನಿಜ ಗುಣಗಳು ಏನು ಅಂತ ಚೆನ್ನಾಗಿ ತಿಳ್ಕೊಳ್ಳಿ (ಪ್ಯಾರ 8-9 ನೋಡಿ)
ಸಂಗಾತಿ ಜೊತೆ ಸಮ್ಯ ಕಳೆಯಿರಿ
10. ಗಂಡ-ಹೆಂಡತಿ ಒಬ್ರಿಗೊಬ್ರು ಸಮ್ಯ ಮಾಡ್ಕೊಳ್ಳೋದು ಯಾಕೆ ಮುಖ್ಯ?
10 ಎಷ್ಟೇ ಬಿಜ಼ಿ ಇದ್ರೂ ಗಂಡ-ಹೆಂಡ್ತಿ ಜೊತೆಯಾಗಿ ಸಮ್ಯ ಕಳೆಯಬೇಕು. ಆಗ ಅವ್ರ ಮಧ್ಯೆ ಇರೋ ಸ್ನೇಹ ಮತ್ತು ಅವ್ರ ಮದುವೆಯ ಬಂಧ ಇನ್ನೂ ಗಟ್ಟಿಯಾಗುತ್ತೆ. ಪ್ರತಿದಿನ ಬೆಳಿಗ್ಗೆಯಿಂದ ಏನೆಲ್ಲಾ ಆಯ್ತು ಅಂತ ಒಬ್ರಿಗೊಬ್ರು ಮಾತಾಡಬಹುದು. ಅವ್ರ ಭಾವನೆಗಳನ್ನ, ನೋವನ್ನ ಹೇಳ್ಕೊಬಹುದು. ಒಬ್ರಿಗೊಬ್ರು ಪ್ರೀತಿ, ಕಾಳಜಿ ತೋರಿಸಬಹುದು ಅಥವಾ ಜೊತೆಯಾಗಿ ಆಟ ಆಡಿ, ಖುಷಿಯಾಗಿರಬಹುದು.
11. ಗಂಡ-ಹೆಂಡತಿಯ ಸಂಬಂಧ ಹೇಗೆ ಹಾಳಾಗಬಹುದು?
11 ಒಳ್ಳೆ ಫ್ರೆಂಡ್ಸ್ ತರ ಇರೋ ಗಂಡ-ಹೆಂಡ್ತಿ ಯಾವಾಗ್ಲೂ ಒಟ್ಟಿಗೆ ಇರಬೇಕು ಅಂತ ಇಷ್ಟಪಡ್ತಾರೆ. ಆದ್ರೆ ಕೆಲವೊಂದು ಸಲ, ಕೆಲವು ಕಾರಣಗಳಿಂದ ಅವರು ಸ್ವಲ್ಪ ಸಮ್ಯದವರೆಗೆ ದೂರ ಇರಬೇಕಾಗೋ ಪರಿಸ್ಥಿತಿ ಬರಬಹುದು. ಆದ್ರೆ ಜಾಸ್ತಿ ಸಮಯ ದೂರ ಇದ್ರೆ ಅದ್ರಿಂದ ತುಂಬ ಅನಾಹುತ ಆಗಬಹುದು. ಉದಾಹರಣೆಗೆ, ಕೆಲವೊಬ್ರು ಕೆಲಸ ಮಾಡೋಕಂತ ಬೇರೆ ದೇಶಕ್ಕೆ ಹೋಗಿದ್ದಾರೆ. ತಮ್ಮ ಕುಟುಂಬನ ಬಿಟ್ಟು ಎಷ್ಟೋ ಸಮ್ಯದವರೆಗೆ ಅಲ್ಲಿ ಒಬ್ರೇ ಇದ್ದಾರೆ. ಆ ಕೆಲಸದಿಂದ ಅವ್ರಿಗೆ ಸ್ವಲ್ಪ ಜಾಸ್ತಿ ಹಣ ಸಿಗಬಹುದು ನಿಜ. ಆದ್ರೆ ತುಂಬ ಸಮಯ ಈ ತರ ದೂರ ಇದ್ರೆ ಮದುವೆ ಜೀವನಕ್ಕೆ ದೊಡ್ಡ ಹೊಡೆತ ಬೀಳುತ್ತೆ.
12-13. (ಎ) ಮದುವೆ ಆಗಿರೋ ಕೆಲವರು ಜೊತೆಯಾಗಿ ಸಮ್ಯ ಕಳೆಯೋಕೆ ಏನೆಲ್ಲಾ ಮಾಡಿದ್ದಾರೆ? (ಚಿತ್ರ ನೋಡಿ.) (ಬಿ) ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಗೆ ಯಾವ ಸ್ಥಾನ ಇದೆ? (“ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಯ ಸ್ಥಾನ” ಅನ್ನೋ ಚೌಕ ನೋಡಿ.)
12 ಗಂಡ-ಹೆಂಡ್ತಿ ಜೊತೆಯಾಗಿ ಸಮಯ ಕಳೆಯೋಕೆ ಏನು ಮಾಡಬಹುದು ಅಂತ ಈಗಾಗ್ಲೇ ಮದುವೆಯಾದ ಕೆಲವರು ಟಿಪ್ಸ್ ಕೊಟ್ಟಿದ್ದಾರೆ. ಗ್ವಾಮ್‌ನಲ್ಲಿರೋ ಲೇಯ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಾನೂ ನನ್ನ ಗಂಡ, ಒಬ್ರನ್ನೊಬ್ರು ಬಿಟ್ಟು ಹೊರಗೆ ಹೋಗೋದು ತುಂಬ ಅಪರೂಪ. ಯಾವಾಗ್ಲೂ ಒಟ್ಟಿಗೆ ಇರ್ತೀವಿ. ಎಲ್ಲಾ ಕೆಲಸಾನೂ ಜೊತೆಯಾಗಿ ಮಾಡ್ತೀವಿ.” ಅಮೆರಿಕಾದಲ್ಲಿರೋ ರಾಕ್ಸೆನ್ ಅನ್ನೋ ಸಹೋದರಿ ಹೇಳೋದು “ನಾವು ತುಂಬ ಬಿಜ಼ಿ ಇರ್ತೀವಿ. ಮುಖ್ಯವಾದ ವಿಷ್ಯಗಳನ್ನ ಮಾಡೋಕೆ ನಾವು ಮುಂಚೆನೇ ಪ್ಲಾನ್ ಮಾಡೋ ತರ ಇಬ್ರೂ ಜೊತೆಯಾಗಿ ಸಮ್ಯ ಕಳೆಯೋಕೂ ಮುಂಚೆನೇ ಪ್ಲಾನ್ ಮಾಡ್ತೀವಿ.” (ಆಮೋಸ 3:3 ಹೋಲಿಸಿ) ಫ್ರಾನ್ಸ್‌ನಲ್ಲಿರೋ ಡೇಮೀನ್ ಅನ್ನೋ ಸಹೋದರ ಹೀಗೆ ಹೇಳ್ತಾರೆ, “ನಾವಿಬ್ರೂ ಒಬ್ರಿಗೊಬ್ರು ಏನಿಷ್ಟ ಅಂತ ತಿಳ್ಕೊಂಡು, ಅದನ್ನ ಇಷ್ಟಪಟ್ಟು ಮಾಡೋಕೆ ಕಲ್ತಿದ್ದೀವಿ.” (ಮತ್ತಾ. 7:12) ಅಮೆರಿಕಾದಲ್ಲಿರೋ ಸಹೋದರಿ ಕೇಟೀ ಹೇಳೋದು, “ನಾವು ಜೊತೆಯಾಗಿ ಸಮಯ ಕಳೆಯುವಾಗ ನಮ್ಮ ಪೋನನ್ನ ಬಳಸಲ್ಲ, ಅದನ್ನ ದೂರ ಇಟ್ಟಿರ್ತೀವಿ. ಇದ್ರಿಂದ ನಮಗೆ ತುಂಬ ಪ್ರಯೋಜ್ನ ಆಗಿದೆ.”
13 ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಸೇವೆಯಲ್ಲಿ ಜೊತೆಯಾಗಿ ಸಮಯ ಕಳೆಯೋದು ತುಂಬ ಮುಖ್ಯ. ಫ್ರಾನ್ಸ್‌ನಲ್ಲಿರೋ ಮಿರಿಯಮ್ ಹೀಗೆ ಹೇಳ್ತಾರೆ, “ನಾವಿಬ್ರೂ ಬೆಳಗ್ಗೆ ಎದ್ದ ತಕ್ಷಣ ಬೈಬಲ್ ಓದ್ತೀವಿ. ನಮಗೆ ಏನಿಷ್ಟ ಆಯ್ತು, ಯಾವ ವಿಷ್ಯಗಳನ್ನ ಪಾಲಿಸಬೇಕು ಅಂತ ಮಾತಾಡ್ಕೊತೀವಿ. ಆಮೇಲೆ ಪ್ರಾರ್ಥನೆ ಮಾಡ್ತೀವಿ. ನನ್ನ ಗಂಡ ಪ್ರಾರ್ಥನೆ ಮಾಡ್ವಾಗ ಅವ್ರಿಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇದೆ ಅಂತ ಅರ್ಥ ಆಗುತ್ತೆ. ಇದನ್ನೆಲ್ಲ ಮಾಡ್ತಾ ಸಮ್ಯ ಕಳೆಯೋದನ್ನ ನಾನು ತುಂಬ ಇಷ್ಟಪಡ್ತೀನಿ.” ಕೇಟೀ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಮ್ಮಿಬ್ರಿಗೆ ಜೊತೆಯಾಗಿ ಸೇವೆ ಮಾಡೋದು ಅಂದ್ರೆ ತುಂಬ ಇಷ್ಟ. ಜನ್ರ ಹತ್ರ ನಾವು ನಮ್ಮ ನಂಬಿಕೆ ಬಗ್ಗೆ ಮಾತಾಡ್ವಾಗ ತುಂಬ ಖುಷಿ ಆಗುತ್ತೆ. ಅಷ್ಟೇ ಅಲ್ಲ, ಒಬ್ಬರಿಂದೊಬ್ರು ಹೊಸ ವಿಷ್ಯಗಳನ್ನ ಕಲಿತಾ ಇದ್ದೀವಿ.”—ಜ್ಞಾನೋ. 27:17.
ಸ್ನೇಹಿತರಂತೆ ಇಬ್ರೂ ಜೊತೆಯಾಗಿ ಸಮಯ ಕಳೀರಿ, ಹೀಗೆ ನಿಮ್ಮ ಬಂಧವನ್ನ ಬಲಪಡಿಸಿ (ಪ್ಯಾರ 12-13 ನೋಡಿ)
ಸಮಸ್ಯೆಗಳು ಬಂದ್ರೂ ಜೊತೆಯಾಗಿರಿ!
14-15. ಕುಟುಂಬ ಜೀವನದಲ್ಲಿ ಬರೋ ಬಿರುಕುಗಳನ್ನ ಗಂಡ-ಹೆಂಡ್ತಿ ಸರಿ ಮಾಡೋಕೆ ಯಾಕೆ ತುಂಬ ಪ್ರಯತ್ನ ಹಾಕಬೇಕು? ಉದಾಹರಣೆ ಕೊಡಿ.
14 ಎಲ್ಲ ಮನುಷ್ಯರೂ ಅಪರಿಪೂರ್ಣರೇ! ಹಾಗಾಗಿ ನೀವು ಯಾರನ್ನೇ ಮದ್ವೆ ಆದ್ರೂ ಮದ್ವೆ ಜೀವನದಲ್ಲಿ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ ಅಂತ ನೆನಪಿಡಿ. ಅದಕ್ಕೇ ಬೈಬಲ್ “ಮದುವೆ ಆದವ್ರಿಗೆ ಜೀವನದಲ್ಲಿ ಕಷ್ಟಸಂಕಟ ಇರುತ್ತೆ” ಅಂತ ಹೇಳುತ್ತೆ. (1 ಕೊರಿಂ. 7:28) ಹಾಗಾಗಿ ಮದುವೆ ಜೀವನ ಯಾವಾಗ್ಲೂ ಹೂವಿನ ಹಾದಿ ತರ ಇರಲ್ಲ. ಕುಟುಂಬದಲ್ಲಿ ಸಮಸ್ಯೆಗಳು ಬಂದಾಗ ಏನೇ ಆದ್ರೂ ದೂರ ಆಗದೇ ಇರೋಕೆ ಮತ್ತು ಆ ಸಮಸ್ಯೆನ ಎದುರಿಸೋಕೆ ಏನು ಮಾಡಬೇಕು?
15 ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ತುಂಬ ಪ್ರಸಿದ್ಧವಾಗಿರೋ ಅರಮನೆ ಬಿರುಕು ಬಿಡ್ತಿದೆ, ಹಾಳಾಗ್ತಿದೆ ಅಂದ್ಕೊಳ್ಳಿ. ಅದನ್ನ ನೋಡ್ಕೊಂಡು ಅಧಿಕಾರಿಗಳು ಸುಮ್ನೆ ಇರ್ತಾರಾ? ಇಲ್ಲ, ಎಷ್ಟೇ ಖರ್ಚಾದ್ರೂ, ಸಮಯ ಹಿಡಿದ್ರೂ ಅದನ್ನ ರಿಪೇರಿ ಮಾಡ್ತಾರೆ. ಯಾಕೆ? ಯಾಕಂದ್ರೆ ಆ ಅರಮನೆ ತುಂಬ ಅಮೂಲ್ಯ! ಅದೇ ತರ, ಎಲ್ಲ ಮದುವೆಗಳು ತುಂಬ ಅಮೂಲ್ಯವಾಗಿದೆ ಅಂತ ನಾವು ನೆನಪಿಡಬೇಕು. ಹೇಳಿ ಮಾಡಿಸಿದ ಜೋಡಿಗಳ ಮದುವೆ ಜೀವನದಲ್ಲೂ ಬಿರುಕುಗಳು ಬರೋದು ಸಾಮಾನ್ಯ! ಹಾಳಾಗ್ತಿರೋ ಅರಮನೆನ ಸರಿ ಮಾಡೋಕೆ ಹೇಗೆ ಆಗುತ್ತೋ ಅದೇ ತರ ತೊಂದ್ರೆ ಇರೋ ಮದುವೆ ಜೀವನಗಳನ್ನೂ ಸರಿ ಮಾಡೋಕೆ ಆಗುತ್ತೆ. ಆದ್ರೆ ಇದನ್ನ ಮಾಡೋಕೆ ತುಂಬ ಪ್ರಯತ್ನ ಹಾಕಬೇಕು. ಕೆಲವೊಮ್ಮೆ ಸರಿ ಮಾಡೋಕೆ ಜಾಸ್ತಿ ಸಮಯ ಹಿಡಿಬಹುದು. ಆದ್ರೂ ನಾವು ಹಾಕೋ ಪ್ರಯತ್ನ ನೋಡಿ ಯೆಹೋವ ಖುಷಿಪಡ್ತಾನೆ. (ಮಲಾ. 2:16) ನೀವು ಹೀಗೆ ಮಾಡಿದ್ರೆ ನಿಮ್ಮ ಸಂಗಾತಿ ಮೇಲೆ ನಿಮಗೆ ಪ್ರೀತಿ, ಗೌರವ ಇದೆ ಅಂತ ತೋರಿಸ್ತೀರ. ಅಷ್ಟೇ ಅಲ್ಲ, ಮದುವೆ ಏರ್ಪಾಡು ಮಾಡಿರೋ ಯೆಹೋವನ ಮೇಲೂ ಪ್ರೀತಿ, ಗೌರವ ಇದೆ ಅಂತ ತೋರಿಸಿಕೊಡ್ತೀರ.
16. ಮದುವೆ ಜೀವನದಲ್ಲಿ ಸವಾಲುಗಳನ್ನ ಎದುರಿಸ್ತಿರೋರಿಗೆ 1 ಕೊರಿಂಥ 13:4-8ಎ ಹೇಗೆ ಸಹಾಯ ಮಾಡುತ್ತೆ? (ಚಿತ್ರ ಮತ್ತು “ಸ್ನೇಹ ಬಲಪಡಿಸಲು ಸಹಾಯ” ಚೌಕ ನೋಡಿ.)
16 ಕುಟುಂಬ ಜೀವನದಲ್ಲಿ ಸವಾಲುಗಳು ಎದುರಾದಾಗ ‘ಸಾಕಪ್ಪ ಸಾಕು’ ಅಂತ ಹೇಳಿ ದೂರ ಆಗೋಕೆ ದಾರಿ ಹುಡುಕಬೇಡಿ. (1 ಕೊರಿಂ. 7:10, 11) ಬದ್ಲಿಗೆ ನಿಮ್ಮಿಬ್ರ ಸ್ನೇಹನ ಜಾಸ್ತಿ ಮಾಡೋಕೆ ದಾರಿ ಹುಡುಕಿ. ಪ್ರೀತಿ ತೋರಿಸೋದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೆನಪಿಸ್ಕೊಳ್ಳಿ. ಪ್ರೀತಿ ಇದ್ರೆ ನಾವು ಹೇಗೆ ನಡ್ಕೊತೀವಿ ಅಂತ 1 ಕೊರಿಂಥ 13:4-8ಎ ಹೇಳುತ್ತೆ (ಓದಿ). ನೀವು ಈ ವಿಷ್ಯದಲ್ಲಿ ಏನಾದ್ರೂ ಪ್ರಗತಿ ಮಾಡಬಹುದಾ ಅಂತ ಯೋಚಿಸಿ. ಒಬ್ರಿಗೊಬ್ರು ದೂರ ಆಗೋಕೆ ದಾರಿ ಹುಡುಕೋ ಬದಲು ಹತ್ರ ಆಗೋಕೆ ದಾರಿ ಹುಡುಕಿ. ನಿಮ್ಮ ಸಂಬಂಧನ ನೀವು ಹೇಗೆ ಪುನಃ ಬಲಪಡಿಸಬಹುದು ಅನ್ನೋದಕ್ಕೆ ಗಮನ ಕೊಡಿ. ‘ಸಹಾಯ ಮಾಡಪ್ಪ’ ಅಂತ ಯೆಹೋವನ ಹತ್ರ ಕೇಳ್ಕೊಳ್ಳಿ. ಸಹಾಯ ಮಾಡೋ ಪ್ರಕಾಶನಗಳನ್ನ ಓದಿ, ವಿಡಿಯೋಗಳನ್ನ ನೋಡಿ. ಹಿರಿಯರಿಂದ, ಸಭೆಯಲ್ಲಿರೋ ಪ್ರೌಢ ಕ್ರೈಸ್ತರಿಂದ ಸಲಹೆಗಳನ್ನ ಕೇಳಿ. ನಿಮ್ಮ ಮದುವೆಯಲ್ಲಿ ಯೆಹೋವ ಮೂರನೇ ಎಳೆ ಆಗಿದ್ದಾನೆ ಅಂತ ಮರೀಬೇಡಿ. ನೀವು ಆತನ ಮೇಲೆ ಆತ್ಕೊಂಡ್ರೆ ಖಂಡಿತ ನಿಮ್ಮ ಮದುವೆ ಬಂಧ ಕಿತ್ತು ಹೋಗಲ್ಲ.—ಪ್ರಸಂ. 4:12.
ಮದುವೆ ಜೀವನದಲ್ಲಿ ಸಮಸ್ಯೆಗಳು ಬಂದ್ರೂ ಜೊತೆಯಾಗಿರಿ (ಪ್ಯಾರ 16 ನೋಡಿ)
17. ಮದುವೆ ಆಗಿರೋರು ಮತ್ತು ಮುಂದೆ ಆಗೋರು ಖುಷಿಯಾಗಿರೋಕೆ ಏನು ಮಾಡಬೇಕು?
17 ನೀವು ಮುಂದೆ ಮದುವೆ ಆಗೋದಾದ್ರೆ ಅಥವಾ ಈಗಾಗಲೇ ಮದುವೆ ಆಗಿದ್ರೆ ಒಂದು ವಿಷ್ಯ ನೆನಪಿಡಿ. ನೀವು ಯಾವಾಗ್ಲೂ ಖುಷಿಯಾಗಿರಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಹಾಗಾಗಿ ನಿಮ್ಮ ಜೀವನ ಪರ್ಯಂತ ನಿಮ್ಮ ಜೊತೆ ಇರೋ ಆ ಪ್ರಾಣ ಸ್ನೇಹಿತನನ್ನ ಸರಿಯಾಗಿ ಆರಿಸ್ಕೊಳ್ಳಿ. ನಿಮಗೆ ಈಗಾಗ್ಲೇ ಮದುವೆ ಆಗಿದ್ರೆ, ನಿಮ್ಮ ಸ್ನೇಹಿತನ ಜೊತೆ ನಿಮಗಿರೋ ಈ ಬಂಧವನ್ನ ಇನ್ನೂ ಜಾಸ್ತಿ ಮಾಡ್ಕೊಳ್ಳಿ. ಕುಟುಂಬ ಜೀವನದಲ್ಲಿ ಸವಾಲುಗಳು ಬಂದ್ರೆ ಯೆಹೋವನ ಸಹಾಯಕ್ಕಾಗಿ ಬೇಡ್ಕೊಳ್ಳಿ. ಆತನ ಮೇಲೆ ಆತ್ಕೊಳ್ಳಿ. ಹೀಗೆ ಮಾಡೋದಾದ್ರೆ ನೀವು ನಿಮ್ಮ ಸಂಗಾತಿ ಜೊತೆ ಯಾವಾಗ್ಲೂ ಖುಷಿ-ಖುಷಿಯಾಗಿ ಇರ್ತೀರ.—ಪ್ರಸಂ. 9:9.
ಗೀತೆ 132 ನನ್ನ ಸಂಗಾತಿ
a ಈ ಪ್ರಶ್ನೆಗಳನ್ನ ಹುಡುಗ ಮತ್ತು ಹುಡುಗಿ ಇಬ್ರೂ ಕೇಳ್ಕೊಬೇಕು.
b ಇನ್ನೂ ಜಾಸ್ತಿ ಟಿಪ್ಸ್‌ಗಳಿಗಾಗಿ ಮೇ 2024ರ ಕಾವಲಿನಬುರುಜುವಿನಲ್ಲಿರೋ “ಮದುವೆ ಆಗೋ ಮುಂಚೆ ಒಳ್ಳೆ ತೀರ್ಮಾನ ಮಾಡೋದು ಹೇಗೆ?” ಅನ್ನೋ ಲೇಖನದ ಕೆಳಗಿರೋ “ಒಬ್ರನ್ನೊಬ್ರು ಚೆನ್ನಾಗಿ ತಿಳ್ಕೊಳ್ಳಿ” ಅನ್ನೋ ಉಪಶೀರ್ಷಿಕೆ ನೋಡಿ.