ಜೂನ್ 22-28, 2026
ಗೀತೆ 85 ಒಬ್ಬರನ್ನೊಬ್ಬರು ಸಂತೋಷದಿಂದ ಸ್ವಾಗತಿಸಿ
ಸಾಂತ್ವನದ ದೇವರಿಂದ ಸಂತೈಸಲು ಕಲೀರಿ
“ದೇವರು ನಮ್ಮನ್ನ ಸಮಾಧಾನ ಮಾಡಿರೋದ್ರಿಂದ ಎಂಥ ಕಷ್ಟದಲ್ಲಿ ಇರುವವ್ರನ್ನೂ ಸಮಾಧಾನ ಮಾಡೋಕೆ ನಮ್ಮಿಂದ ಆಗುತ್ತೆ.” —2 ಕೊರಿಂ. 1:4.
ಈ ಲೇಖನದಲ್ಲಿ ಏನಿದೆ?
ಯೆಹೋವನು ಮತ್ತು ಆತನ ಆರಾಧಕರು ಬೇರೆಯವ್ರನ್ನ ಯಾವಾಗ್ಲೂ ಸಂತೈಸಿದ್ದಾರೆ. ಈ ವಿಷ್ಯದಲ್ಲಿ ಅವ್ರಿಂದ ನಾವೇನು ಕಲಿಬಹುದು ಅಂತ ನೋಡೋಣ.
1. ನಾವ್ಯಾಕೆ ಬೇರೆಯವ್ರಿಗೆ ಸಾಂತ್ವನ ಕೊಡಬೇಕು?
ಕಷ್ಟ ಇಲ್ಲದಿರೋ ಮನುಷ್ಯನೇ ಇಲ್ಲ! ನಮ್ಮೆಲ್ರಿಗೂ “ಬೇರೆಬೇರೆ ತರದ ಕಷ್ಟಗಳು” ಬರುತ್ತೆ. ಆಗೆಲ್ಲ ನಮಗೆ ಸಾಂತ್ವನ ಮತ್ತು ಪ್ರೋತ್ಸಾಹ ಬೇಕಾಗುತ್ತೆ. (1 ಪೇತ್ರ 1:6) ಯಾರಾದ್ರೂ ನಮ್ಮನ್ನ ಪ್ರೋತ್ಸಾಹಿಸಿದಾಗ ನಮಗೆ ತುಂಬ ಖುಷಿಯಾಗುತ್ತೆ ಅಲ್ವಾ? ಅದೇ ತರ ಯಾರಾದ್ರೂ ಕಷ್ಟದಲ್ಲಿದ್ದಾರೆ ಅಂತ ನಮಗೆ ಗೊತ್ತಾದ್ರೆ ಹೋಗಿ ಅವ್ರನ್ನ ಸಂತೈಸಬೇಕು. (ಮತ್ತಾ. 7:12) ಯೆಹೋವ “ಎಲ್ಲ ತರದ ಸಾಂತ್ವನ” ಕೊಡೋ ದೇವರು. ಜನ್ರಿಗೆ ‘ಎಂಥ ಕಷ್ಟ ಇದ್ರೂ ಅವ್ರನ್ನ ಸಮಾಧಾನ ಮಾಡೋದು’ ಹೇಗೆ ಅಂತ ಆತನು ನಮಗೆ ತೋರಿಸ್ತಾನೆ. ಆತನನ್ನ ಅನುಕರಿಸ್ತಾ ನಾವು ‘ಒಬ್ರನ್ನೊಬ್ರು ಸಂತೈಸಬೇಕು.’ (2 ಕೊರಿಂ. 1:3, 4; 1 ಥೆಸ. 4:18) ಆದ್ರೆ ನಾವು ಇದನ್ನ, ‘ಏನೋ ಮಾಡಬೇಕಲ್ಲಾ’ ಅಂತ ಮಾಡದೆ, ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿಯಿಂದ ಮಾಡಬೇಕು. ಹಾಗಾಗಿ ಈ ಲೇಖನದಲ್ಲಿ, (1) ಸಾಂತ್ವನ ಅಂದ್ರೇನು? (2) ನಾವು ಬೇರೆಯವ್ರಿಗೆ ಹೇಗೆ ಸಾಂತ್ವನ ಕೊಡಬಹುದು? ಮತ್ತು (3) ನಮಗೆ ಸಾಂತ್ವನ ಬೇಕಾದಾಗ ನಾವೇನು ಮಾಡಬೇಕು ಅಂತ ನೋಡೋಣ.
ಸಾಂತ್ವನ ಅಂದ್ರೇನು?
2. ಬೈಬಲಲ್ಲಿ ‘ಸಾಂತ್ವನ’ ಅನ್ನೋ ಪದಕ್ಕೆ ಯಾವೆಲ್ಲ ಅರ್ಥ ಇದೆ?
2 ಬೈಬಲಲ್ಲಿ ಭಾಷಾಂತರ ಆಗಿರೋ ‘ಸಾಂತ್ವನ’ ಅನ್ನೋ ಗ್ರೀಕ್ ಪದ ಸನ್ನಿವೇಶಕ್ಕೆ ತಕ್ಕಂತೆ ಬೇರೆಬೇರೆ ಅರ್ಥ ಕೊಡುತ್ತೆ. ಉದಾಹರಣೆಗೆ, ‘ಪ್ರೋತ್ಸಾಹ,’ ‘ಪ್ರೇರೇಪಿಸು’ ಮತ್ತು ‘ಬುದ್ಧಿ ಹೇಳು’ ಅನ್ನೋ ಅರ್ಥ ಕೊಡುತ್ತೆ. (ರೋಮ. 12:8; ‘ಪ್ರೋತ್ಸಾಹ’ ಪದದ ಇಂಗ್ಲಿಷ್ ಸ್ಟಡಿ ನೋಟ್ ನೋಡಿ.) ಸಾಂತ್ವನ ಅನ್ನೋ ಪದದ ಅಕ್ಷರಾರ್ಥ, “ಒಬ್ಬ ವ್ಯಕ್ತಿನ ಪಕ್ಕಕ್ಕೆ ಕರೆದು ಮಾತಾಡು” ಅಂತಾಗಿದೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಬ್ಬ ವ್ಯಕ್ತಿ ತುಂಬ ಕಷ್ಟದಲ್ಲಿದ್ದಾನೆ, ನರಳ್ತಿದ್ದಾನೆ ಅಂತ ಅಂದ್ಕೊಳ್ಳಿ. ಆಗ ಅವನ ಫ್ರೆಂಡ್ ಬಂದು ಅವನಿಗೆ ಬೇಕಾಗಿರೋ ಸಹಾಯ ಮಾಡಿ, ಬೆಂಬಲ ಕೊಡ್ತಾನೆ. ಹೀಗೆ ಅವನು ಯಾವುದೇ ರೀತಿಯಲ್ಲಿ ಸಹಾಯ ಮಾಡಿದ್ರೂ ನೋವಲ್ಲಿದ್ದ ಆ ವ್ಯಕ್ತಿಗೆ ಬಲ ಮತ್ತು ಪ್ರೋತ್ಸಾಹ ಸಿಗುತ್ತೆ. ಇದನ್ನೇ ಸಾಂತ್ವನ ಅಂತ ಕರೆಯೋದು!
3. ಬಾರ್ನಬ ಅವನಿಗೆ ಕೊಟ್ಟ ಹೆಸ್ರಿಗೆ ತಕ್ಕಂತೆ ಹೇಗೆ ಜೀವನ ಮಾಡಿದ? (ಚಿತ್ರ ನೋಡಿ.)
3 ಒಂದನೇ ಶತಮಾನದಲ್ಲಿ ಯೋಸೇಫ ಅನ್ನೋ ಒಬ್ಬ ವ್ಯಕ್ತಿಯಿದ್ದ. ಅವನು ಸಾಂತ್ವನ ಮತ್ತು ಪ್ರೋತ್ಸಾಹ ಕೊಡೋದ್ರಲ್ಲಿ ಎತ್ತಿದ ಕೈ. ಅದಕ್ಕೇ ಅಪೊಸ್ತಲರು ಅವನಿಗೆ ‘ಬಾರ್ನಬ’ ಅಂತ ಹೆಸರಿಟ್ರು. ಆ ಹೆಸ್ರಿನ ಅರ್ಥ ಏನು ಗೊತ್ತಾ? “ಸಾಂತ್ವನದ ಪುತ್ರ” ಅಂತ. (ಅ. ಕಾ. 4:36) ಆ ಹೆಸರು ಅವನಿಗೆ ಹೇಳಿ ಮಾಡಿಸಿದಂತೆ ಇತ್ತು. ಅದಕ್ಕೆ ಬೈಬಲಲ್ಲಿ ಅವನನ್ನ ಎಲ್ಲ ಕಡೆ ‘ಬಾರ್ನಬ’ ಅಂತಾನೇ ಕರೆದಿದ್ದಾರೆ. ಹಾಗಾಗಿ ಅವನ ನಿಜ ಹೆಸರು ಏನಂತ ಎಷ್ಟೋ ಜನ್ರಿಗೆ ಗೊತ್ತೇ ಇಲ್ಲ. ಬಾರ್ನಬ, ಅವನಿಗೆ ಕೊಟ್ಟ ಹೆಸ್ರಿಗೆ ತಕ್ಕಂತೆ ಜೀವನ ಮಾಡಿದ. ಸಹೋದರರು ಏನಾದ್ರೂ ಕಷ್ಟದಲ್ಲಿದ್ರೆ, ತಕ್ಷಣ ಮುಂದೆ ಹೋಗಿ ಸಹಾಯ ಮಾಡ್ತಿದ್ದ. ಉದಾಹರಣೆಗೆ, ಆಗಷ್ಟೇ ಶಿಷ್ಯನಾಗಿದ್ದ ಸೌಲ ಒಂದ್ಸಲ ಯೆರೂಸಲೇಮಿಗೆ ಬರ್ತಾನೆ. ಅಲ್ಲಿರೋ ಕ್ರೈಸ್ತರನ್ನ ಭೇಟಿ ಮಾಡಬೇಕು ಅಂತ ಆಸೆಪಡ್ತಾನೆ. ಆದ್ರೆ ಸೌಲ, ಈ ಮುಂಚೆ ಕ್ರೈಸ್ತರಿಗೆ ಹಿಂಸೆ ಕೊಟ್ಟಿದ್ದನ್ನ ನೆನಸ್ಕೊಂಡು ಎಷ್ಟೊ ಕ್ರೈಸ್ತರು ಅವನನ್ನ ಮಾತಾಡಿಸೋಕೆ ಭಯಪಡ್ತಾರೆ. ಆದ್ರೆ ಬಾರ್ನಬ ಭಯಪಡದೆ ಸೌಲನ ಮೇಲೆ ನಂಬಿಕೆ ಇಟ್ಟು, ಹೋಗಿ ಅವನನ್ನ ಮಾತಾಡಿಸ್ತಾನೆ. ಅಷ್ಟೇ ಅಲ್ಲ, ಅಲ್ಲಿದ್ದ ಬೇರೆ ಅಪೊಸ್ತಲರಿಗೂ ಅವನನ್ನ ಪರಿಚಯ ಮಾಡಿಸ್ತಾನೆ.—ಅ. ಕಾ. 9:26-28.
ಬಾರ್ನಬ ತನಗೆ ಕೊಟ್ಟ ಹೆಸ್ರಿಗೆ ತಕ್ಕಂತೆ ಜೀವಿಸಿದ (ಪ್ಯಾರ 3 ನೋಡಿ)
ಸಾಂತ್ವನ ಕೊಡೋದು ಹೇಗೆ?
4. ಸಾಂತ್ವನ ಕೊಡೋಕೆ ಇರೋ ಬೆಸ್ಟ್ ದಾರಿ ಯಾವುದು? (ರೋಮನ್ನರಿಗೆ 1:11, 12)
4 ಸಾಧ್ಯ ಆದ್ರೆ ನೇರವಾಗಿ ಭೇಟಿ ಮಾಡಿ. ಯೆಹೋವ ಸಾಂತ್ವನ ಕೊಡೋಕೆ ತನ್ನ ಸೇವಕರನ್ನ ಬಳಸ್ತಾನೆ. ಉದಾಹರಣೆಗೆ, ಪ್ರವಾದಿ ಎಲೀಯ ತುಂಬ ಕುಗ್ಗಿ ಹೋದಾಗ ಯೆಹೋವ ತನ್ನ ದೂತನನ್ನ ಕಳಿಸಿ ಅವನಿಗೆ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟನು. (1 ಅರ. 19:4-7) ಸಹೋದರರನ್ನ ನೇರವಾಗಿ ಭೇಟಿ ಮಾಡೋದ್ರಿಂದ ಅವ್ರಿಗೆ ತುಂಬ ಪ್ರೋತ್ಸಾಹ ಸಿಗುತ್ತೆ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (ರೋಮನ್ನರಿಗೆ 1:11, 12 ಓದಿ.) ಆದ್ರಿಂದ ಬೇರೆಯವ್ರಿಗೆ ಸಾಂತ್ವನ ಕೊಡೋಕೆ ನೀವು ನೇರವಾಗಿ ಹೋದಾಗ ಬರೀ ‘ಹಾಯ್-ಬಾಯ್’ ಹೇಳಿ ಬಂದುಬಿಡಬೇಡಿ. ಅವ್ರ ಜೊತೆ ಸ್ವಲ್ಪ ಜಾಸ್ತಿ ಸಮ್ಯ ಕಳೀರಿ. ಅವ್ರಿಗೆ ಬೇಕಾಗಿರೋ ಸಾಂತ್ವನ ಕೊಡಿ. (1 ಕೊರಿಂ. 16:7) ಒಂದುವೇಳೆ ನಿಮಗೆ ನೇರವಾಗಿ ಹೋಗಿ ಭೇಟಿ ಮಾಡೋಕೆ ಆಗ್ತಿಲ್ಲ ಅಂದ್ರೆ ಅವ್ರಿಗೆ ಫೋನ್ ಮಾಡಿ, ಮೆಸೇಜ್ ಮಾಡಿ, ಪತ್ರ ಬರೀರಿ ಅಥವಾ ಒಂದು ಕಾರ್ಡ್ ಕೊಡಿ. ಇದ್ರಿಂದ ಅವ್ರಿಗೆ ತುಂಬ ಪ್ರೋತ್ಸಾಹ ಸಿಗುತ್ತೆ. ಬೇರೆಯವ್ರಿಗೆ ಸಾಂತ್ವನ ಕೊಡೋಕೆ ಯೆಹೋವ ನಿಮ್ಮನ್ನ ಬಳಸಬೇಕು ಅಂತ ಇದ್ದಾನೆ. ಸಹಾಯ ಮಾಡೋಕೆ ನೀವು ರೆಡಿ ಇದ್ದೀರಾ?
5. ಕೆಲವು ಸಲ ನೇರವಾಗಿ ಹೋಗಿ ಸಾಂತ್ವನ ಕೊಡೋಕೆ ಯಾಕೆ ಕಷ್ಟ ಆಗಬಹುದು?
5 ನಾವು ಕೊನೇ ದಿನಗಳಲ್ಲಿ ಜೀವಿಸ್ತಿರೋದ್ರಿಂದ ಹೋಗ್ತಾ-ಹೋಗ್ತಾ ಪರಿಸ್ಥಿತಿ ಇನ್ನೂ ಹದಗೆಡುತ್ತೆ. ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ನಾವು ಸಾಂತ್ವನ ಕೊಡಬೇಕಿರೋ ಪರಿಸ್ಥಿತಿ ಜಾಸ್ತಿ ಬರಬಹುದು. ಆದ್ರೆ ಕೆಲವು ಸಲ ನೇರವಾಗಿ ಭೇಟಿ ಮಾಡೋದು ಅಷ್ಟು ಸುಲಭವಾಗಿರಲ್ಲ. ಆಗ ಏನು ಮಾಡೋದು? ಒಂದ್ಸಲ ಪೌಲ, ರೋಮ್ನ ಜೈಲಲ್ಲಿದ್ದ. ಅಲ್ಲಿಗೆ ಹೋಗಿ ಅವನನ್ನ ಭೇಟಿ ಮಾಡೋದು ಅಷ್ಟು ಸುಲಭ ಆಗಿರ್ಲಿಲ್ಲ. ಆದ್ರೆ ಎಫೆಸದಲ್ಲಿದ್ದ ಒನೇಸಿಫೋರ ತನ್ನ ಪ್ರಾಣನ ಪಣಕ್ಕಿಟ್ಟು ಪೌಲನನ್ನ ಹುಡುಕಿಕೊಂಡು ಹೋಗಿ ಭೇಟಿ ಮಾಡಿದ. ಹೀಗೆ ಅವನಿಗೆ ಸಾಂತ್ವನ ಕೊಟ್ಟ. (2 ತಿಮೊ. 1:16-18) ರಷ್ಯಾದಲ್ಲಿರೋ ನಮ್ಮ ಸಹೋದರರು ಇದನ್ನೇ ಮಾಡ್ತಿದ್ದಾರೆ. ಅಲ್ಲಿರೋ ನಮ್ಮವರಿಗೆಲ್ಲ ಅವ್ರ ನಂಬಿಕೆ ಕಾರಣ ಹಿಂಸೆ ಬಂದಿದೆ. ಕೆಲವ್ರನ್ನ ವಿಚಾರಣೆಗೆ ಅಂತ ಕೋರ್ಟಿಗೆ ಕರ್ಕೊಂಡು ಹೋಗಿದ್ದಾರೆ. ಆಗ ತಮಗೆ ತೊಂದ್ರೆ ಆಗಬಹುದು ಅಂತ ಗೊತ್ತಿದ್ರೂ ಎಷ್ಟೋ ಸಾಕ್ಷಿಗಳು ನಮ್ಮವರಿಗೆ ಪ್ರೋತ್ಸಾಹ ಕೊಡೋಕೆ ಕೋರ್ಟಿಗೆ ಹೋಗಿದ್ದಾರೆ. ನಾವು ಈ ತರ ಧೈರ್ಯ ತೋರಿಸೋಕೆ ಏನು ಮಾಡಬೇಕು? ಈ ಹಿಂದೆ ಯೆಹೋವನ ಸೇವಕರು ಹೇಗೆಲ್ಲ ಧೈರ್ಯ ತೋರಿಸಿದ್ರು ಅಂತ ಓದಿ. ಜೊತೆಗೆ, ಈಗ ಸಾಕ್ಷಿಗಳು ಹಿಂಸೆ ಎದುರಿಸೋಕೆ ಒಬ್ರಿಗೊಬ್ರು ಹೇಗೆ ಸಾಂತ್ವನ, ಬೆಂಬಲ ಕೊಡ್ತಿದ್ದಾರೆ ಅನ್ನೋದನ್ನೂ ಓದಿ ತಿಳ್ಕೊಳ್ಳಿ.
6. ಸಾಂತ್ವನ ಕೊಡೋ ವಿಷ್ಯದಲ್ಲಿ ಯೆಹೋವನಿಂದ ಏನು ಕಲಿಬಹುದು? (ಚಿತ್ರ ನೋಡಿ.)
6 ಚೆನ್ನಾಗಿ ಕೇಳಿಸ್ಕೊಳ್ಳಿ. ಪ್ರವಾದಿ ಎಲೀಯನಿಗೆ ಪ್ರಾಣ ಭಯ ಇತ್ತು. ಆಗ ಅವನು ತನಗೆ ಅನಿಸಿದ್ದನ್ನೆಲ್ಲ ಯೆಹೋವನ ಹತ್ರ ಹೇಳ್ಕೊಂಡ. ದೇವ್ರಿಗೆ ಅವನ ಹೃದಯದಲ್ಲಿ ಏನಿದೆ, ಅವನಿಗೆ ಹೇಗೆ ಅನಿಸ್ತಿದೆ ಅನ್ನೋದು ಈಗಾಗ್ಲೇ ಚೆನ್ನಾಗಿ ಗೊತ್ತಿತ್ತು. ಆದ್ರೂ ಎಲೀಯ ಮಾತಾಡ್ತಿದ್ದಾಗ ಅದನ್ನ ಗಮನ ಕೊಟ್ಟು ಕೇಳಿಸ್ಕೊಂಡನು. ಅವನು ಹೇಳಿದ್ದನ್ನೇ ಮತ್ತೆ-ಮತ್ತೆ ಹೇಳ್ತಿದ್ರೂ ಯೆಹೋವ ಕೋಪ ಮಾಡ್ಕೊಳ್ಳದೇ ಕೇಳಿಸ್ಕೊಂಡನು. (1 ಅರ. 19:9, 10, 14) ಹಬಕ್ಕೂಕ ಸಹ ತನಗಿದ್ದ ಚಿಂತೆನ ಮತ್ತು ಸಂಶಯಗಳನ್ನ ದೇವರ ಹತ್ರ ಹೇಳಿದ. ದೇವರನ್ನೇ ಪ್ರಶ್ನಿಸೋ ತರ ಮಾತಾಡಿಬಿಟ್ಟ. ಆದ್ರೂ ಯೆಹೋವ ಅವನು ಹೇಳಿದ್ದನ್ನ ಕೇಳಿಸ್ಕೊಂಡನು. (ಹಬ. 1:2, 3) ಯೆಹೋವ ಇವತ್ತೂ ನಮ್ಮ ಜೊತೆ ಹಾಗೇ ನಡ್ಕೊತಾನೆ. ನಮಗೆ ಏನು ಬೇಕು ಅಂತ ಆತನಿಗೆ ಚೆನ್ನಾಗಿ ಗೊತ್ತಿದೆ. ಆದ್ರೂ ನಾವು ಪ್ರಾರ್ಥನೆ ಮಾಡಿದಾಗ ಚೆನ್ನಾಗಿ ಕೇಳಿಸ್ಕೊಳ್ತಾನೆ. ನಾವೂ ಯೆಹೋವನ ತರಾನೇ ಇರಬೇಕು. ಸಹೋದರ ಸಹೋದರಿಯರು ಮಾತಾಡ್ವಾಗ, ಅವ್ರ ನೋವನ್ನ ಹಂಚ್ಕೊಳ್ವಾಗ ಕೇಳಿಸ್ಕೊಬೇಕು. ಅವ್ರ ಜೊತೆ ಗೌರವದಿಂದ ನಡ್ಕೊಬೇಕು. ಅವರು ಮಾತಾಡ್ವಾಗ ಮಧ್ಯೆ ಬಾಯಿ ಹಾಕಬಾರದು, ಕೋಪ ಮಾಡ್ಕೊಬಾರದು. ಅವರು ಒರಟಾಗಿ ಮಾತಾಡಿದ್ರೂ, ಹೇಳಿದ್ದನ್ನೇ ಪದೇಪದೇ ಹೇಳ್ತಿದ್ರೂ ನಾವು ಬೇಜಾರು ಮಾಡ್ಕೊಬಾರದು.—ಯಾಕೋ. 1:19; ಪ್ರಸಂ. 7:9.
ಸಹೋದರ ಸಹೋದರಿಯರು ಮಾತಾಡ್ವಾಗ ನೀವು ಯೆಹೋವನ ತರ ಚೆನ್ನಾಗಿ ಕೇಳಿಸ್ಕೊಳ್ಳಿ (ಪ್ಯಾರ 6 ನೋಡಿ)
7. ಒಬ್ಬ ವ್ಯಕ್ತಿಗೆ ಏನು ಅಗತ್ಯ ಇದೆ ಅಂತ ತಿಳ್ಕೊಳೋಕೆ ಏನು ಮಾಡಬಹುದು?
7 ಅವ್ರಿಗೆ ಏನು ಬೇಕಿದೆ ಅಂತ ಅರ್ಥಮಾಡ್ಕೊಳ್ಳಿ. ನಾವು ಬಾಯಿಬಿಟ್ಟು ಏನಾದ್ರೂ ಕೇಳೋ ಮುಂಚೆನೇ ನಮಗೇನು ಬೇಕು ಅಂತ ಯೆಹೋವನಿಗೆ ಗೊತ್ತು. ಯಾಕಂದ್ರೆ ಯೆಹೋವನಿಗೆ ಹೃದಯನ ಓದೋ ಸಾಮರ್ಥ್ಯ ಇದೆ. ಆದ್ರೆ ನಮಗೆ ಆ ಸಾಮರ್ಥ್ಯ ಇಲ್ಲ. ಅದಕ್ಕೇ ಬೇರೆಯವರು ಮಾತಾಡ್ವಾಗ ನಾವು ಚೆನ್ನಾಗಿ ಕೇಳಿಸ್ಕೊಬೇಕು. ‘ನಾನು ಈ ಸನ್ನಿವೇಶದಲ್ಲಿ ಇದ್ದಿದ್ರೆ, ನನಗೆ ಏನು ಬೇಕಿರುತ್ತಿತ್ತೋ ಅದೇ ಇವ್ರಿಗೂ ಬೇಕಿರುತ್ತೆ’ ಅಂತ ನೀವೇ ನಿರ್ಧಾರ ಮಾಡಬೇಡಿ. ನಾವೆಲ್ರೂ ಒಂದೇ ತರ ಇಲ್ಲ, ಹಾಗಾಗಿ ಒಂದೇ ತರ ಯೋಚ್ನೆ ಮಾಡಲ್ಲ. ಅದಕ್ಕೆ ಸಮಯ ಮಾಡ್ಕೊಂಡು ಅವರು ಮಾತಾಡ್ವಾಗ ಚೆನ್ನಾಗಿ ಕೇಳಿಸ್ಕೊಳ್ಳಿ. ಜಾಣ್ಮೆಯಿಂದ ಒಳ್ಳೊಳ್ಳೆ ಪ್ರಶ್ನೆಗಳನ್ನ ಕೇಳ್ತಾ, ಅವ್ರಿಗೆ ಏನು ಬೇಕಿದೆ ಮತ್ತು ಅವ್ರ ಹೃದಯದಲ್ಲಿ ಏನಿದೆ ಅಂತ ತಿಳ್ಕೊಳ್ಳಿ.—ಜ್ಞಾನೋ. 20:5.
8. (ಎ) ಮಾರ್ಥ ಮತ್ತು ಮರಿಯಳಿಗೆ ಯೇಸು ಹೇಗೆ ಸಾಂತ್ವನ ಕೊಟ್ಟನು? (ಬಿ) ಅದ್ರಿಂದ ನಾವೇನು ಕಲಿಬಹುದು? (ಚಿತ್ರ ನೋಡಿ.)
8 ಮಾರ್ಥ ಮತ್ತು ಮರಿಯ ತಮ್ಮನನ್ನ ಕಳ್ಕೊಂಡಾಗ ಅವ್ರಿಗೆ ಯೇಸು ಹೇಗೆ ಸಾಂತ್ವನ ಕೊಟ್ಟನು? ಇಬ್ರಿಗೂ ಇದ್ದಿದ್ದು ಒಂದೇ ನೋವು. ಆದ್ರೆ ಇಬ್ರಿಗೂ ಬೇರೆಬೇರೆ ರೀತಿಲಿ ಯೇಸು ಸಾಂತ್ವನ ಕೊಟ್ಟನು. ಮಾರ್ಥ ಮಾತಾಡೋಕೆ ಬಂದಾಗ ಯೇಸು ಅವಳಿಗೆ, ಸತ್ತವರು ಮತ್ತೆ ಎದ್ದು ಬರ್ತಾರೆ ಅನ್ನೋ ನಿರೀಕ್ಷೆ ಬಗ್ಗೆ ನೆನಪಿಸಿದನು. ಹೀಗೆ ಅದ್ರ ಮೇಲೆ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಆಕೆಗೆ ಸಹಾಯ ಮಾಡಿದನು. ಆದ್ರೆ ಮರಿಯಳ ಹತ್ರ, ಸತ್ತವರು ಮತ್ತೆ ಎದ್ದು ಬರೋದ್ರ ಬಗ್ಗೆ ಮಾತಾಡ್ಲಿಲ್ಲ. ಅವಳು ಅಳುವಾಗ ಯೇಸು ಸಹ ಅತ್ತನು, ‘ಲಾಜರನನ್ನ ಎಲ್ಲಿ ಇಟ್ಟಿದ್ದೀರ?’ ಅಂತ ಕೇಳಿದನು. (ಯೋಹಾ. 11:20-35) ಇದ್ರಿಂದ ನಾವೇನು ಕಲಿಬಹುದು? ಕಷ್ಟದಲ್ಲಿರೋ ಎಲ್ರಿಗೂ ನಾವು ಒಂದೇ ರೀತಿಯಲ್ಲಿ ಸಾಂತ್ವನ ಕೊಟ್ರೆ ಸಹಾಯ ಆಗಲ್ಲ. ಅವ್ರಿಗೆ ಏನು ಬೇಕು, ಅವ್ರ ಅಗತ್ಯ ಏನು ಅಂತ ತಿಳ್ಕೊಂಡು ಅದ್ರ ಪ್ರಕಾರ ಸಾಂತ್ವನ ಕೊಡಬೇಕು.
ಬೇರೆಯವ್ರನ್ನ ಸಂತೈಸುವಾಗ ಅವ್ರಿಗೆ ಏನು ಅಗತ್ಯ ಇದೆ ಅನ್ನೋದನ್ನ ಯೋಚಿಸಿ ತಿಳ್ಕೊಳ್ಳಿ (ಪ್ಯಾರ 8 ನೋಡಿ)a
9. ಬೇರೆಯವ್ರಿಗೆ ಸಾಂತ್ವನ ಕೊಡೋಕೆ ನೀವು ಬೈಬಲನ್ನ ಹೇಗೆ ಬಳಸಬಹುದು? (ರೋಮನ್ನರಿಗೆ 15:4, 5)
9 ಬೈಬಲನ್ನ ಬಳಸಿ. ನೋವಲ್ಲಿ ಇರೋರ ಜೊತೆ ನೀವು, ‘ಸಾಂತ್ವನ ಪಡೆಯೋಕೆ ಸಹಾಯ ಮಾಡೋ ಪವಿತ್ರ ಬರಹಗಳನ್ನ’ ಹಂಚ್ಕೊಂಡ್ರೆ ಅವ್ರಲ್ಲಿ ನಿರೀಕ್ಷೆ ಮೂಡುತ್ತೆ. (ರೋಮನ್ನರಿಗೆ 15:4, 5 ಓದಿ.) ಆ ನಿರೀಕ್ಷೆ ಅವ್ರಿಗೆ ಬೇಕಾಗಿರೋ ಸಾಂತ್ವನ ಮತ್ತು ಪ್ರೋತ್ಸಾಹ ಕೊಡುತ್ತೆ. (ಯೆಶಾಯ 40:31) ಆದ್ರೆ ಬೇರೆಯವ್ರನ್ನ ಪ್ರೋತ್ಸಾಹಿಸೋಕೆ ಸಹಾಯ ಮಾಡೋ ವಚನಗಳನ್ನ ಹುಡುಕೋದು ಹೇಗೆ? ಕೆಲವರು ಅಂಥ ವಚನಗಳನ್ನ ಓದಿ ಒಂದುಕಡೆ ಬರೆದಿಡ್ತಾರೆ. ಅಂಥ ಕೆಲವು ವಚನಗಳನ್ನ ಬಾಳಿಗೆ ಬೆಳಕಾಗೋ ಬೈಬಲ್ ವಚನಗಳು ಅನ್ನೋ ಪುಸ್ತಕದಲ್ಲಿ “ಸಾಂತ್ವನ, ಸಮಾಧಾನ” ಅನ್ನೋ ಭಾಗದ ಕೆಳಗೆ ನೋಡಬಹುದು. ‘ಬೇರೆಯವ್ರಿಗೆ ಸಾಂತ್ವನ ಕೊಡೋಕೆ, ಪ್ರೋತ್ಸಾಹ ಕೊಡೋಕೆ ನಿನ್ನ ವಾಕ್ಯನ ಚೆನ್ನಾಗಿ ಬಳಸೋಕೆ ಸಹಾಯ ಮಾಡಪ್ಪ’ ಅಂತ ನೀವು ಯೆಹೋವನ ಹತ್ರ ಕೇಳ್ಕೊಳ್ಳಿ. ನೀವು ಓದಿರೋ ವಚನಗಳು ಸರಿಯಾದ ಸಮಯಕ್ಕೆ ನೆನಪಾಗೋ ತರ ಪವಿತ್ರಶಕ್ತಿ ನಿಮಗೆ ಸಹಾಯ ಮಾಡುತ್ತೆ.—ಯೋಹಾ. 14:26.
10. ಪ್ರೋತ್ಸಾಹ ಕೊಡ್ವಾಗ ದಯೆಯಿಂದ ಮಾತಾಡೋದು ಯಾಕೆ ಮುಖ್ಯ?
10 ದಯೆಯಿಂದ ಮಾತಾಡಿ. ನಾವು ಈಗಾಗ್ಲೇ ನೋಡಿದಂತೆ ‘ಸಾಂತ್ವನ’ ಅನ್ನೋ ಪದಕ್ಕೆ ‘ಪ್ರೇರಿಸು,’ ‘ಬುದ್ಧಿ ಹೇಳು’ ಅನ್ನೋ ಅರ್ಥನೂ ಇದೆ. ಕೆಲವೊಮ್ಮೆ ನಾವು ಯಾರಿಗೆ ಸಾಂತ್ವನ ಕೊಡ್ತಿದ್ದೀವೋ ಅವರು ತಮಗೆ ಬಂದ ಕಷ್ಟದ ಬಗ್ಗೆ ತಪ್ಪಾಗಿ ಯೋಚ್ನೆ ಮಾಡ್ತಿರಬಹುದು. ಆಗ ಅವ್ರನ್ನ ನಾವು ತಿದ್ದಬೇಕಾದ ಪರಿಸ್ಥಿತಿ ಬರಬಹುದು. ಅಂಥ ಸಮಯದಲ್ಲಿ ‘ಮಾತೇ ಮದ್ದು, ಮಾತೇ ಮೃತ್ಯು’ ಅನ್ನೋ ತರ ನೀವು ಆಡೋ ಮಾತು ಅವ್ರಿಗೆ ಸಹಾಯನೂ ಮಾಡಬಹುದು ಅಥವಾ ನೋವೂ ಮಾಡಬಹುದು ಅಂತ ನೆನಪಿಡಿ. (ಜ್ಞಾನೋ. 12:18) ಹಾಗಾಗಿ ಯೋಚ್ನೆ ಮಾಡಿ ಮಾತಾಡಿ. ಈ ವಿಷ್ಯದಲ್ಲಿ ಯೆಹೋವ ಒಳ್ಳೆ ಮಾದರಿ ಇಟ್ಟಿದ್ದಾನೆ. ಯೆಹೋವ ಎಲೀಯನ ಹತ್ರ ಮಾತಾಡಿದಾಗ ಅವನು, ‘ನಾನು ಮಾಡಿದ ಸೇವೆಗೆ ಒಂಚೂರೂ ಬೆಲೆ ಇಲ್ಲ. ಇಸ್ರಾಯೇಲಲ್ಲಿ ಧರ್ಮಭ್ರಷ್ಟತೆ ತುಂಬಿ ತುಳುಕ್ತಿದೆ’ ಅಂತ ಹೇಳಿದ. ಆಗ ಯೆಹೋವ ಅವನನ್ನ ಹೇಗೆ ತಿದ್ದಿದನು? ಎಲೀಯನಿಗೆ, ‘ನಿಂದೇ ತಪ್ಪು, ನೀನು ಸರಿಯಾಗಿ ಯೋಚ್ನೆ ಮಾಡ್ತಿಲ್ಲ’ ಅಂತ ನೇರವಾಗಿ ಹೇಳಲಿಲ್ಲ. ಬದಲಿಗೆ ಅವನ ಜೊತೆ ದಯೆಯಿಂದ ಮಾತಾಡಿ ಅವನ ಯೋಚ್ನೆನ ಸರಿ ಮಾಡಿದನು. (1 ಅರ. 19:15-18) ಚೆನ್ನಾಗಿ ಯೋಚ್ನೆ ಮಾಡಿದ್ರೆ, ದಯೆಯಿಂದ ಮಾತಾಡಿದ್ರೆ ನಾವೂ ಹೀಗೆ ನಡ್ಕೊಬಹುದು. ಹಾಗಾಗಿ ಸಭೆಯಲ್ಲಿ ಭಾಷಣ ಕೊಡ್ವಾಗ, ಉತ್ರ ಹೇಳುವಾಗ ಅಥವಾ ಬೇರೆಯವ್ರ ಜೊತೆ ಮಾತಾಡ್ವಾಗ ಅವ್ರಿಗೆ ಪ್ರೋತ್ಸಾಹ ಕೊಡೋ ತರ ಮಾತಾಡಿ. ಯಾವತ್ತೂ ಅವ್ರ ಮನಸ್ಸು ಚುಚ್ಚೋ ತರ ಮಾತಾಡಬೇಡಿ.
11. ಕಷ್ಟದಲ್ಲಿ ಇರೋರಿಗೆ ಸಾಂತ್ವನದ ಮಾತುಗಳ ಜೊತೆ ಇನ್ನೂ ಏನು ಬೇಕಾಗುತ್ತೆ? (1 ಯೋಹಾನ 3:18)
11 ಅಗತ್ಯ ಇರೋದನ್ನ ಕೊಡಿ. ಕಷ್ಟದಲ್ಲಿ ಇರೋರಿಗೆ ನಾವು ಯಾವಾಗ್ಲೂ ಮಾತಲ್ಲೇ ಹೊಟ್ಟೆ ತುಂಬಿಸೋಕೆ ಆಗಲ್ಲ ಅಂತ ನೆನಪಿಡಬೇಕು. (1 ಯೋಹಾನ 3:18 ಓದಿ.) ನಾವು ಅವ್ರಿಗೆ ನಮ್ಮ ಕೈಲಾದ ಸಹಾಯನೂ ಮಾಡಬೇಕು. ಈ ವಿಷ್ಯದಲ್ಲಿ ಬಾರ್ನಬ ಒಳ್ಳೇ ಮಾದರಿ. ಒಂದನೇ ಶತಮಾನದಲ್ಲಿ ಹೊಸದಾಗಿ ದೀಕ್ಷಾಸ್ನಾನ ತಗೊಂಡವ್ರಿಗೆ ಕಷ್ಟ ಇತ್ತು. ಅವ್ರಿಗೆ ಸಹಾಯ ಮಾಡೋಕಂತ ಅವನು ತನ್ನ ಹತ್ರ ಇದ್ದ ಜಮೀನನ್ನ ಮಾರಿ, ಅದ್ರಿಂದ ಬಂದ ಹಣನ ಅವ್ರಿಗೆ ಕೊಟ್ಟ. (ಅ. ಕಾ. 4:36, 37) ಇವತ್ತು ನಮ್ಮ ಎಷ್ಟೋ ಸಹೋದರ ಸಹೋದರಿಯರು ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋಕೆ ತುಂಬ ತ್ಯಾಗಗಳನ್ನ ಮಾಡ್ತಿದ್ದಾರೆ. ಪೋಲೆಂಡ್ನಲ್ಲಿರೋ ಗಬ್ರಿಯೇಲಾ ಅನ್ನೋ ಸಹೋದರಿಯ ಅನುಭವ ನೋಡಿ. ಒಂದು ಪ್ರವಾಹದಿಂದ ಅವ್ರ ಮನೆ ಹಾಳಾಯ್ತು. ಅವರು ಹೇಳೋದು, “ನನಗೆ ಮತ್ತು ನಮ್ಮ ಅಪ್ಪ-ಅಮ್ಮನಿಗೆ ತುಂಬ ಭಯ ಆಯ್ತು, ಟೆನ್ಷನ್ ಆಯ್ತು. ‘ಮುಂದೆ ಹೆಂಗಪ್ಪಾ ಜೀವನ’ ಅನ್ನೋ ಚಿಂತೆ ಆಯ್ತು. ಆದ್ರೆ ಅಕ್ಕ-ಪಕ್ಕದ ಸಭೆಯ ಸಹೋದರ ಸಹೋದರಿಯರು ಬಂದು ಒಂದೇ ದಿನದಲ್ಲಿ ತುಂಬ ಕೆಲಸಗಳನ್ನ ಮಾಡ್ಕೊಟ್ರು. ಇದನ್ನೆಲ್ಲ ನೋಡಿದಾಗ ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋಕೆ ಯೆಹೋವ ತನ್ನ ಜನ್ರನ್ನ ಬಳಸ್ತಾನೆ ಅನ್ನೋ ನನ್ನ ನಂಬಿಕೆ ಇನ್ನೂ ಜಾಸ್ತಿ ಆಯ್ತು.”
12. ನೀವು ನಿಯತ್ತಾಗಿದ್ದು ಕಷ್ಟಗಳನ್ನ ತಾಳ್ಕೊಂಡ್ರೆ ಬೇರೆಯವ್ರಿಗೆ ಅದು ಹೇಗೆ ಸಹಾಯ ಆಗುತ್ತೆ?
12 ಕಷ್ಟಗಳನ್ನ ತಾಳ್ಕೊಳ್ಳಿ. ಥೆಸಲೊನೀಕ ಸಭೆಯವರು ಅವ್ರಿಗೆ ಬಂದ ಕಷ್ಟ ಸವಾಲುಗಳನ್ನ ತಾಳ್ಕೊಂಡು ನಂಬಿಗಸ್ತಿಕೆಯಿಂದ ಇದ್ರು. ಇದನ್ನ ನೋಡಿದಾಗ, ‘ನನಗೆ ತುಂಬ ಸಾಂತ್ವನ ಸಿಕ್ತು, ಅವ್ರಿಗೋಸ್ಕರ ನಾನು ಪಟ್ಟ ಕಷ್ಟ ಸಾರ್ಥಕ ಆಯ್ತು’ ಅಂತ ಪೌಲ ಹೇಳಿದ. (1 ಥೆಸ. 3:5-8) ಪೌಲ ತನಗೆ ಗೊತ್ತಿರೋ ಮತ್ತು ಗೊತ್ತಿಲ್ಲದೇ ಇರೋ ಎಷ್ಟೋ ಸಹೋದರರನ್ನ ಪ್ರೋತ್ಸಾಹಿಸಿದ. ಅದಕ್ಕೆ ಅವನು ಏನು ಮಾಡಿದ ಗೊತ್ತಾ? ತನಗೆ ಬರೋ ಎಲ್ಲಾ ಕಷ್ಟ ಸವಾಲುಗಳನ್ನ ತಾಳ್ಕೊಂಡು ನಿಯತ್ತಾಗಿದ್ದ. ಮುಂದೆ ಒಂದು ದಿನ ಇವ್ರೆಲ್ರೂ ತಾನು ಪಟ್ಟ ಕಷ್ಟ ಮತ್ತು ತಾಳ್ಕೊಂಡ ರೀತಿಯನ್ನ ಕೇಳಿಸ್ಕೊಂಡಾಗ ಅವ್ರಿಗೆ ಬಲ ಸಿಗುತ್ತೆ ಅನ್ನೋದನ್ನ ಅರ್ಥ ಮಾಡ್ಕೊಂಡ. (ಕೊಲೊ. 2:1, 2) ನಾವೂ ನಮಗೆ ಬರೋ ಎಲ್ಲ ಕಷ್ಟಗಳನ್ನ ತಾಳ್ಕೊಂಡು ನಿಯತ್ತಾಗಿ ಇರಬೇಕು. ಇದನ್ನ ನೋಡಿದಾಗ ನಮ್ಮ ಎಷ್ಟೋ ಸಹೋದರ ಸಹೋದರಿಯರಿಗೂ ಬಲ ಸಿಗುತ್ತೆ.
13. ನಾವು ಏನು ಮಾಡ್ತಾ ಇರಬೇಕು?
13 ತಾಳ್ಮೆ ತೋರಿಸಿ. ನಾವು ಸಾಂತ್ವನ ಮತ್ತು ಪ್ರೋತ್ಸಾಹ ಕೊಟ್ಟ ತಕ್ಷಣ ಕುಗ್ಗಿ ಹೋಗಿರೋ ಸಹೋದರ ಸಹೋದರಿಯರು ಪಟ್ ಅಂತ ಸರಿಯಾಗಿ ಬಿಡಲ್ಲ. ಕೆಲವು ಸಲ ಅವ್ರಿಗೆ ಚೇತರಿಸ್ಕೊಳ್ಳೋಕೆ ಜಾಸ್ತಿ ಟೈಮ್ ಕೊಡಬೇಕಾಗುತ್ತೆ. ಆದ್ರೆ ನಾವು ಪ್ರಯತ್ನ ಬಿಡಬಾರದು. ಯಾಕಂದ್ರೆ ‘ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ ಇರಿ’ ಅಂತ ಬೈಬಲ್ ಹೇಳುತ್ತೆ. ಹಾಗಾಗಿ ಒಂದು ಸಲ ಪ್ರಯತ್ನ ಮಾಡಿ ಸುಮ್ನೆ ಆಗದೆ, ನಾವು ಆಗಾಗ ಪ್ರೋತ್ಸಾಹಿಸ್ತಾ ಇರಬೇಕು. (1 ಥೆಸ. 5:11) ಈ ತರ ನಾವು ಬೇರೆಯವ್ರಿಗೆ ಸಾಂತ್ವನ ಕೊಡ್ವಾಗ ಮತ್ತು ಸಹಾಯ ಮಾಡ್ವಾಗ ತುಂಬ ತಾಳ್ಮೆ ತೋರಿಸಬೇಕು. (1 ಥೆಸ. 5:14) ನಾವು ಇಲ್ಲಿವರೆಗೂ ಸಾಂತ್ವನ ಕೊಡೋದ್ರ ಬಗ್ಗೆ ನೋಡಿದ್ವಿ. ಕೆಲವೊಮ್ಮೆ ಅದನ್ನ ನಾವೂ ಪಡ್ಕೊಬೇಕಾಗುತ್ತೆ. ಆಗ ಏನು ಮಾಡಬೇಕು?
ಸಾಂತ್ವನ ಪಡ್ಕೊಳ್ಳಿ
14-15. ಕಷ್ಟ ಅಥವಾ ಚಿಂತೆ ನಮ್ಮನ್ನ ಮುತ್ಕೊಂಡಾಗ ನಾವೇನು ಮಾಡಬೇಕು?
14 ಪ್ರಾರ್ಥನೆ ಮಾಡಿ. ಚಿಂತೆ ಮತ್ತು ಕಷ್ಟಗಳು ನಮ್ಮನ್ನ ಮುತ್ಕೊಂಡಾಗ ‘ಸಾಂತ್ವನ ಕೊಡಪ್ಪ’ ಅಂತ ಯೆಹೋವನ ಹತ್ರ ಕೇಳ್ಕೊಳ್ಳಿ. (ಕೀರ್ತ. 94:19) ನಿಮಗೆ ಏನು ಬೇಕು ಅಂತ ನಿರ್ದಿಷ್ಟವಾಗಿ ಹೇಳಿ. (ಕೀರ್ತ. 62:8) ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹಂಚ್ಕೊಳ್ಳಿ. ನಿಮಗೆ ಹೇಗೆ ಅನಿಸ್ತಿದೆ, ನಿಮಗೆ ಏನು ಬೇಕು ಅಂತ ಯೆಹೋವನಿಗೆ ಈಗಾಗ್ಲೇ ಗೊತ್ತು ನಿಜ. ಆದ್ರೂ ನೀವು ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಆತನ ಹತ್ರ ಹೇಳ್ಕೊಬೇಕು. ಅದು ನಿಮಗೆಷ್ಟು ನಂಬಿಕೆ ಇದೆ ಅಂತ ತೋರಿಸುತ್ತೆ! ಕೆಲವೊಮ್ಮೆ ಯೆಹೋವ, ನೀವು ಅಂದ್ಕೊಂಡ ಉತ್ರ ಕೊಡದೇ ಇರಬಹುದು. ಆದ್ರೆ ನಿಮ್ಮ ಪ್ರಾರ್ಥನೆಗೆ ಉತ್ರ ಕೊಟ್ಟೇ ಕೊಡ್ತಾನೆ. (ಮಾರ್ಕ 11:24) ಅದಕ್ಕೆ ಫಿಲಿಪ್ಪಿ 4:6, 7 ಹೀಗೆ ಹೇಳುತ್ತೆ, ‘ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಅಂಗಲಾಚಿ ಬೇಡಿ, ಆಗ ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ. ಈ ರೀತಿ ಆತನು ನಿಮ್ಮ ಹೃದಯನ ಮತ್ತು ಯೋಚ್ನೆನ ಕಾಯ್ತಾನೆ.’
15 ಸಹಾಯ ಕೇಳಿ. ನಿಮಗೆ ಹೇಗೆ ಅನಿಸುತ್ತೆ ಅಂತ ಒಬ್ಬ ಪ್ರೌಢ ಸ್ನೇಹಿತನ ಅಥವಾ ಹಿರಿಯನ ಹತ್ರ ಹಂಚ್ಕೊಳ್ಳಿ. ಸಹೋದರ ಸಹೋದರಿಯರಿಗೆ ನಿಮಗೆ ಸಹಾಯ ಮಾಡಬೇಕು ಅಂತ ತುಂಬ ಇಷ್ಟ ಇರುತ್ತೆ. ಆದ್ರೆ ನಿಮಗೆ ಹೇಗೆ ಅನಿಸುತ್ತೆ ಅಂತ ನೀವು ಹೇಳದೇ ಹೋದ್ರೆ, ನಿಮಗೆ ಏನು ಸಹಾಯ ಮಾಡಬೇಕು, ಏನು ಹೇಳಬೇಕು ಅಂತಾನೇ ಅವ್ರಿಗೆ ಗೊತ್ತಾಗಲ್ಲ. (ಜ್ಞಾನೋ. 14:10) ಅಷ್ಟೇ ಅಲ್ಲ, ನೀವು ಅವ್ರ ಹತ್ರ, ‘ನಂಗೆ ಏನೋ ಹೇಳಬೇಕು ಅನಿಸ್ತಿದೆ. ನೀವು ಕೇಳಿಸ್ಕೊತೀರಾ?’ ಅಂತಾನೂ ಕೇಳಬಹುದು. ‘ನಿಮಗೆ ಯಾವುದಾದ್ರೂ ಸಹಾಯ ಮಾಡಿರೋ ವಚನ ಇದ್ರೆ ಅಥವಾ ಲೇಖನ ಇದ್ರೆ ನನಗೆ ತೋರಿಸಿ’ ಅಂತ ಸಹ ಕೇಳಬಹುದು.
16. (ಎ) ಸಾಂತ್ವನ ಕೊಡೋಕೆ ಬಂದವ್ರೇ ಏನು ಮಾಡಿಬಿಡಬಹುದು? (ಬಿ) ಆಗ ನೀವೇನು ಮಾಡಬೇಕು?
16 ತಾಳ್ಮೆ ತೋರಿಸಿ, ಕ್ಷಮಿಸಿ. ಕೆಲವು ಸಲ ನಾವು ಅಂದ್ಕೊಳ್ಳೋದೇ ಒಂದು, ಆದ್ರೆ ಆಗೋದೇ ಇನ್ನೊಂದು! ಕೆಲವೊಮ್ಮೆ ಸಾಂತ್ವನ ಮಾಡೋಕೆ ಬಂದವ್ರೇ ನೋವಾಗೋ ತರ ಏನಾದ್ರೂ ಹೇಳಬಹುದು ಅಥವಾ ಮಾಡಬಹುದು. ಒಂದುವೇಳೆ ಆ ತರ ಆದ್ರೆ ದಯವಿಟ್ಟು ತಾಳ್ಮೆ ತೋರಿಸಿ, ಅವ್ರನ್ನ ಕ್ಷಮಿಸಿ. (1 ಕೊರಿಂ. 13:4, 7) ಯಾಕೋಬ 3:2ರಲ್ಲಿರೋ ವಿಷ್ಯನ ನೆನಪಿಟ್ಕೊಳ್ಳಿ. ಅಲ್ಲಿ, ‘ನಾವು ಮಾತಾಡ್ವಾಗ ತಪ್ಪೇ ಮಾಡಿಲ್ಲ ಅಂದ್ರೆ ಪರಿಪೂರ್ಣರಾಗಿಬಿಡ್ತೀವಿ’ ಅಂತಿದೆ. ನಿಮಗೇ ಗೊತ್ತಿರೋ ತರ ನಮ್ಮಲ್ಲಿ ಯಾರೂ ಪರಿಪೂರ್ಣರಿಲ್ಲ ಅಲ್ವಾ? ಹಾಗಾಗಿ, ನಮ್ಮ ಸಹೋದರ ಸಹೋದರಿಯಲ್ಲಿರೋ ಒಳ್ಳೆ ವಿಷ್ಯಗಳನ್ನ ನೋಡಿ. ಅವ್ರಿಗೆ ನಿಮಗೆ ಒಳ್ಳೇದು ಮಾಡಬೇಕು ಅನ್ನೋ ಮನಸ್ಸಿದೆ, ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಮಾಡೋಕೆ ಗೊತ್ತಾಗಲ್ಲ ಅನ್ನೋದನ್ನ ಅರ್ಥಮಾಡ್ಕೊಳ್ಳಿ. —ಮತ್ತಾ. 26:41.
17. ನಾವು ಯಾವ ದೃಢ ತೀರ್ಮಾನ ಮಾಡಬೇಕು?
17 ನಾವು ಕೊನೇ ದಿನಗಳಲ್ಲಿ ಇದ್ದೀವಿ, ಪರಿಸ್ಥಿತಿ ಹದಗೆಡ್ತಿದೆ. ಹಾಗಾಗಿ ಯೆಹೋವನ ಶತ್ರುಗಳು ನಮಗೆ ಇನ್ನೂ ಜಾಸ್ತಿ ಹಿಂಸೆ ಮತ್ತು ವಿರೋಧ ತರ್ತಿದ್ದಾರೆ. ಈ ಕಾರಣಗಳಿಂದಾಗಿ ನಮ್ಮೆಲ್ರಿಗೂ ಹಿಂದೆಂದಿಗಿಂತಲೂ ಈಗ ಜಾಸ್ತಿ ಸಾಂತ್ವನ ಮತ್ತು ಪ್ರೋತ್ಸಾಹ ಬೇಕು. ಅದಕ್ಕೇ ನಾವು ಒಬ್ರಿಗೊಬ್ರು ಕಷ್ಟ-ಸುಖದಲ್ಲಿ ಕೈ ಹಿಡಿತಾ ಸಾಂತ್ವನ ಕೊಡ್ತಾ ಇರಬೇಕು ಅನ್ನೋ ದೃಢ ತೀರ್ಮಾನ ಮಾಡೋಣ.
ಗೀತೆ 130 ಕ್ಷಮಿಸುತ್ತಾ ಇರೋಣ
a ಚಿತ್ರ ವಿವರಣೆ : ಇತ್ತೀಚಿಗೆ ತನ್ನ ಹೆಂಡ್ತಿಯನ್ನ ಕಳ್ಕೊಂಡ ಸಹೋದರ ಮಾತಾಡ್ವಾಗ ಒಬ್ಬ ಹಿರಿಯ ಚೆನ್ನಾಗಿ ಕೇಳಿಸ್ಕೊಳ್ತಿದ್ದಾನೆ. ಆಮೇಲೆ ಕೆಲವು ವರ್ಷಗಳ ಹಿಂದೆ ತನ್ನ ಹೆಂಡ್ತಿಯನ್ನ ಕಳ್ಕೊಂಡ ಇನ್ನೊಬ್ಬ ಸಹೋದರನ ಜೊತೆ ಆ ಹಿರಿಯ ಮಾತಾಡ್ತಾ ಇದ್ದಾನೆ. ಅವರು ಹಳೇ ಫೋಟೋಗಳನ್ನ ನೋಡ್ತಿದ್ದಾರೆ.