“ಆತನು ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು”
“ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; [“ಆತನು,” NW] ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.”—ಆದಿಕಾಂಡ 1:27.
1. ಕ್ರೈಸ್ತ ಸ್ತ್ರೀಪುರುಷರಿಗೆ ಸತ್ಯವು ಹೇಗೆ ಒಂದು ಆಶೀರ್ವಾದವಾಗಿದೆ?
ಯೆಹೋವನ ಜನರ ಮಧ್ಯದಲ್ಲಿರುವುದು ಮತ್ತು ಜೀವನದಲ್ಲಿ ಯಾರ ಆದ್ಯತೆಯು ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗುವುದಾಗಿದೆಯೊ, ಅಂತಹ ಸ್ತ್ರೀಪುರುಷರು ಹಾಗೂ ಹುಡುಗಹುಡುಗಿಯರೊಂದಿಗೆ ಸಹವಸಿಸುವುದು ಎಷ್ಟೊಂದು ಆಹ್ಲಾದಕರವಾಗಿದೆ! ಸತ್ಯವು, ಯೆಹೋವ ದೇವರನ್ನು ಅಪ್ರಸನ್ನಗೊಳಿಸುವ ಮನೋಭಾವಗಳಿಂದಲೂ ನಡತೆಯಿಂದಲೂ ನಮ್ಮನ್ನು ಸ್ವತಂತ್ರಗೊಳಿಸಿ, ಕ್ರೈಸ್ತರು ಜೀವಿಸಬೇಕಾದ ವಿಧದಲ್ಲಿ ಜೀವಿಸುವುದು ಹೇಗೆಂದು ನಮಗೆ ಕಲಿಸುತ್ತದೆ. (ಯೋಹಾನ 8:32; ಕೊಲೊಸ್ಸೆ 3:8-10) ಉದಾಹರಣೆಗೆ, ಎಲ್ಲೆಡೆಯೂ ಇರುವ ಜನರಲ್ಲಿ, ಪುರುಷರು ತಮ್ಮ ಪುರುಷತ್ವವನ್ನು ಮತ್ತು ಸ್ತ್ರೀಯರು ತಮ್ಮ ಸ್ತ್ರೀತ್ವವನ್ನು ವ್ಯಕ್ತಪಡಿಸಿಕೊಳ್ಳಬೇಕಾದ ವಿಧದ ಕುರಿತು ಸಂಪ್ರದಾಯಗಳು ಇಲ್ಲವೆ ಕಲ್ಪನೆಗಳಿವೆ. ಅದು, ಪುರುಷರು ಪುರುಷಯೋಗ್ಯ ಗುಣವುಳ್ಳವರಾಗಿ, ಮತ್ತು ಸ್ತ್ರೀಯರು ಸ್ತ್ರೀಸಹಜ ಗುಣವುಳ್ಳವರಾಗಿ ಜನಿಸಿರುವ ಕಾರಣಮಾತ್ರದಿಂದ ಹಾಗಿದೆಯೊ? ಇಲ್ಲವೆ ಪರಿಗಣಿಸಲ್ಪಡಬೇಕಾದ ಇತರ ಅಂಶಗಳೂ ಇವೆಯೊ?
2. (ಎ) ಪುರುಷತ್ವ ಹಾಗೂ ಸ್ತ್ರೀತ್ವದ ಕುರಿತಾಗಿರುವ ನಮ್ಮ ವೀಕ್ಷಣೆಯನ್ನು ಯಾವುದು ನಿರ್ಧರಿಸಬೇಕು? (ಬಿ) ಲಿಂಗ ಸಂಬಂಧವಾದ ವೀಕ್ಷಣೆಗಳಿಗೆ ಏನು ಸಂಭವಿಸಿದೆ?
2 ಕ್ರೈಸ್ತರಾದ ನಮಗಾದರೊ, ನಾವು ಪಡೆದುಕೊಂಡಿರಬಹುದಾದ ವೈಯಕ್ತಿಕ, ಸಾಂಸ್ಕೃತಿಕ, ಇಲ್ಲವೆ ಸಾಂಪ್ರದಾಯಿಕ ದೃಷ್ಟಿಕೋನಗಳು ಯಾವವೇ ಆಗಿರಲಿ, ನಾವು ಅಧೀನರಾಗುವ ಪ್ರಮಾಣಗ್ರಂಥವು ದೇವರ ವಾಕ್ಯವಾಗಿದೆ. (ಮತ್ತಾಯ 15:1-9) ಬೈಬಲು, ಪುರುಷತ್ವ ಮತ್ತು ಸ್ತ್ರೀತ್ವದ ಎಲ್ಲ ಅಂಶಗಳ ಕುರಿತು ವಿಸ್ತೃತವಾಗಿ ಮಾತಾಡುವುದಿಲ್ಲ. ಬದಲಿಗೆ, ನಾವು ವಿಭಿನ್ನ ಸಂಸ್ಕೃತಿಗಳಲ್ಲಿ ಕಂಡುಕೊಳ್ಳುವಂತೆ, ವೈವಿಧ್ಯತೆಗೆ ಅದು ಅವಕಾಶ ನೀಡುತ್ತದೆ. ದೇವರು, ಅವರೇನಾಗಿರಬೇಕೆಂದು ಸೃಷ್ಟಿಸಿದನೊ ಅದಾಗಿರಲು, ಪುರುಷರು ಪುರುಷಯೋಗ್ಯ ಗುಣವುಳ್ಳವರಾಗಿ ಮತ್ತು ಸ್ತ್ರೀಯರು ಸ್ತ್ರೀಸಹಜ ಗುಣವುಳ್ಳವರಾಗಿರಬೇಕು. ಏಕೆ? ಏಕೆಂದರೆ, ಸ್ತ್ರೀಪುರುಷರು ಶಾರೀರಿಕವಾಗಿ ಪರಸ್ಪರ ಪೂರಕರಾಗಿರುವಂತೆ ನಿರ್ಮಿಸಲ್ಪಟ್ಟಿರುವುದಕ್ಕೆ ಕೂಡಿಸಿ, ಅವರು ಪುರುಷಯೋಗ್ಯ ಹಾಗೂ ಸ್ತ್ರೀಸಹಜ ಗುಣಗಳ ಮೂಲಕ ಪರಸ್ಪರ ಪೂರಕರಾಗಿರಲಿದ್ದರು. (ಆದಿಕಾಂಡ 2:18, 23, 24; ಮತ್ತಾಯ 19:4, 5) ಆದರೂ, ಲಿಂಗ ಸಂಬಂಧವಾದ ವೀಕ್ಷಣೆಗಳು ತಿರುಚಲ್ಪಟ್ಟವುಗಳಾಗಿವೆ. ಅನೇಕರು ಪುರುಷತ್ವವನ್ನು ಕಠೋರವಾದ ದಬ್ಬಾಳಿಕೆ, ಗಡುಸುತನ, ಇಲ್ಲವೆ ಗಂಡುತನದ ಗರ್ವದೊಂದಿಗೆ ಸಮಗೊಳಿಸುತ್ತಾರೆ. ಕೆಲವು ಸಂಸ್ಕೃತಿಗಳಲ್ಲಿ, ಪುರುಷನೊಬ್ಬನು ಬಹಿರಂಗವಾಗಿ ಇಲ್ಲವೆ ಖಾಸಗಿಯಾಗಿ ಅಳುವುದು, ವಿರಳ ಇಲ್ಲವೆ ಲಜ್ಜಾಸ್ಪದವಾದ ಸಂಗತಿಯಾಗಿದೆ. ಆದರೂ, ಲಾಜರನ ಸಮಾಧಿಯ ಹೊರಗೆ ನೆರದುಬಂದಿದ್ದ ಗುಂಪಿನಲ್ಲಿದ್ದಾಗ, “ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:35) ಅದು, ಯಾರ ಪುರುಷತ್ವವು ಪರಿಪೂರ್ಣವಾಗಿತ್ತೊ, ಆ ಯೇಸುವಿನ ವಿಷಯದಲ್ಲಿ ಅಯೋಗ್ಯವಾಗಿರಲಿಲ್ಲ. ಇಂದು ಅನೇಕರಿಗೆ ಸ್ತ್ರೀತ್ವದ ಕುರಿತು, ಅದನ್ನು ಬರಿಯ ಶಾರೀರಿಕ ಹಾಗೂ ಲೈಂಗಿಕ ಮನೋಹರತೆ ಎಂಬುದಾಗಿ ಪರಿಗಣಿಸುತ್ತಾ, ಸಮತೆ ತಪ್ಪಿದ ವೀಕ್ಷಣೆಯಿದೆ.
ನಿಜವಾದ ಪುರುಷತ್ವ ಹಾಗೂ ನಿಜವಾದ ಸ್ತ್ರೀತ್ವ
3. ಸ್ತ್ರೀಪುರುಷರು ಭಿನ್ನರಾಗಿರುವುದು ಹೇಗೆ?
3 ನಿಜವಾದ ಪುರುಷತ್ವ ಎಂದರೇನು, ಮತ್ತು ನಿಜವಾದ ಸ್ತ್ರೀತ್ವ ಎಂದರೇನು? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಹೆಚ್ಚಿನ ಸ್ತ್ರೀಪುರುಷರು ದೇಹರಚನೆಯಲ್ಲಿ ಮಾತ್ರವಲ್ಲ, ಬದಲಿಗೆ ವರ್ತನೆ ಹಾಗೂ ಅಭಿರುಚಿಗಳ ವಿಷಯದಲ್ಲಿಯೂ ಪರಸ್ಪರ ಭಿನ್ನರಾಗಿರುತ್ತಾರೆ. ಈ ಭಿನ್ನತೆಗಳಲ್ಲಿ ಕೆಲವು ಜೀವಶಾಸ್ತ್ರೀಯವಾಗಿ ನಿರ್ಧರಿಸಲ್ಪಟ್ಟಿವೆ. . . . ಆದರೆ ದೇಹರಚನೆಗೆ ಸಂಬಂಧಿಸದ ಅನೇಕ ಭಿನ್ನತೆಗಳು, ಪ್ರತಿಯೊಬ್ಬ ವ್ಯಕ್ತಿಯಿಂದ ಕಲಿಯಲ್ಪಡುವ ಲೈಂಗಿಕ ಪಾತ್ರಗಳ ಮೇಲೆ ಆಧಾರಿತವಾಗಿರುವಂತೆ ತೋರುತ್ತವೆ. ಜನರು ಗಂಡು ಅಥವಾ ಹೆಣ್ಣಾಗಿ ಜನಿಸುತ್ತಾರಾದರೂ, ಅವರು ಪುರುಷಯೋಗ್ಯ ಗುಣವುಳ್ಳವರಾಗಿ ಇಲ್ಲವೆ ಸ್ತ್ರೀಸಹಜ ಗುಣವುಳ್ಳವರಾಗಿರಲು ಕಲಿಯುತ್ತಾರೆ.” ನಮ್ಮ ತಳಿಶಾಸ್ತ್ರೀಯ ರಚನೆಯು ಅನೇಕ ವಿಷಯಗಳಿಗೆ ಕಾರಣವಾಗಿರಬಹುದಾದರೂ, ಯೋಗ್ಯವಾದ ಪುರುಷತ್ವ ಇಲ್ಲವೆ ಸ್ತ್ರೀತ್ವದ ವಿಕಸನವು, ದೇವರು ಅಪೇಕ್ಷಿಸುವಂತಹ ವಿಷಯವನ್ನು ನಾವು ಕಲಿತುಕೊಳ್ಳುವ ಮೇಲೆ ಮತ್ತು ಜೀವಿತದಲ್ಲಿ ನಾವು ಬೆನ್ನಟ್ಟಲು ಆರಿಸಿಕೊಳ್ಳುವ ವಿಷಯದ ಮೇಲೆ ಅವಲಂಬಿಸುತ್ತದೆ.
4. ಪುರುಷ ಹಾಗೂ ಸ್ತ್ರೀಯ ಪಾತ್ರಗಳ ಕುರಿತು ಬೈಬಲು ಏನನ್ನು ಪ್ರಕಟಪಡಿಸುತ್ತದೆ?
4 ಆದಾಮನ ಪಾತ್ರವು, ತನ್ನ ಹೆಂಡತಿ ಹಾಗೂ ಮಕ್ಕಳ ತಲೆಯಾಗಿ ನಾಯಕತ್ವವನ್ನು ವಹಿಸುವುದಾಗಿತ್ತೆಂದು ಬೈಬಲ್ ಇತಿಹಾಸವು ಪ್ರಕಟಪಡಿಸುತ್ತದೆ. ಅವನು, ಭೂಮಿಯನ್ನು ತುಂಬಿ, ಅದನ್ನು ವಶಮಾಡಿಕೊಂಡು, ಎಲ್ಲ ಕೆಳವರ್ಗದ ಭೂಸೃಷ್ಟಿಯನ್ನು ಅಧೀನದಲ್ಲಿಟ್ಟುಕೊಳ್ಳಬೇಕೆಂಬ ದೇವರ ಚಿತ್ತದೊಂದಿಗೂ ಅನುವರ್ತಿಸಬೇಕಿತ್ತು. (ಆದಿಕಾಂಡ 1:28) ಹವ್ವಳಿಗಾಗಿದ್ದ ಸ್ತ್ರೀಸಹಜವಾದ ಕೌಟುಂಬಿಕ ಪಾತ್ರವು, ಆದಾಮನಿಗೆ ಒಬ್ಬ “ಸಹಾಯಕಿ” ಮತ್ತು “ಒಬ್ಬ ಪರಿಪೂರಕ”ಳಾಗಿದ್ದು, ಅವನ ತಲೆತನಕ್ಕೆ ಅಧೀನಳಾಗಿ, ಅವರಿಗಾಗಿದ್ದ ದೇವರ ಘೋಷಿತ ಉದ್ದೇಶದ ನೆರವೇರಿಕೆಯಲ್ಲಿ ಅವನೊಂದಿಗೆ ಸಹಕರಿಸುವುದಾಗಿತ್ತು.—ಆದಿಕಾಂಡ 2:18; 1 ಕೊರಿಂಥ 11:3.
5. ಪುರುಷ ಹಾಗೂ ಸ್ತ್ರೀಯ ನಡುವಿನ ಸಂಬಂಧವು ಹೇಗೆ ಹಾನಿಗೊಂಡಿತು?
5 ಆದರೆ ಆದಾಮನು ತನ್ನ ಜವಾಬ್ದಾರಿಯನ್ನು ನೆರವೇರಿಸಲಿಲ್ಲ, ಮತ್ತು ಹವ್ವಳು ತನ್ನ ಸ್ತ್ರೀತ್ವವನ್ನು, ದೇವರಿಗೆ ಅವಿಧೇಯರಾಗುವುದರಲ್ಲಿ ಅವಳ ಜೊತೆಸೇರುವಂತೆ ಆದಾಮನನ್ನು ಸೆಳೆಯಲು ಒಲಿಸುವಂತಹ ವಿಧದಲ್ಲಿ ಉಪಯೋಗಿಸಿದಳು. (ಆದಿಕಾಂಡ 3:6) ತಪ್ಪೆಂದು ತನಗೆ ಗೊತ್ತಿದ್ದ ವಿಷಯವನ್ನು ಉದ್ದೇಶಪೂರ್ವಕವಾಗಿ ಮಾಡುವ ಮೂಲಕ, ಆದಾಮನು ನಿಜವಾದ ಪುರುಷತ್ವವನ್ನು ಪ್ರದರ್ಶಿಸಲು ತಪ್ಪಿದನು. ತನ್ನ ತಂದೆ ಹಾಗೂ ಸೃಷ್ಟಿಕರ್ತನು ಹೇಳಿದ್ದ ಮಾತನ್ನು ಸ್ವೀಕರಿಸುವ ಬದಲಿಗೆ, ಅವನು ಮನೋದಾರ್ಢ್ಯವಿಲ್ಲದೆ ತನ್ನ ಮೋಸಹೋದ ಸಂಗಾತಿಯ ಮಾತನ್ನು ಸ್ವೀಕರಿಸಲು ಆರಿಸಿಕೊಂಡನು. (ಆದಿಕಾಂಡ 2:16, 17) ಬೇಗನೆ ಆ ಪ್ರಥಮ ದಂಪತಿಗಳು, ಯಾವುದನ್ನು ದೇವರು ಅವಿಧೇಯತೆಯ ಪರಿಣಾಮವಾಗಿರುವುದೆಂದು ಪೂರ್ವಭಾವಿಯಾಗಿ ತಿಳಿದಿದ್ದನೊ, ಅದನ್ನು ಅನುಭವಿಸತೊಡಗಿದರು. ಈ ಮೊದಲು ತನ್ನ ಹೆಂಡತಿಯನ್ನು ಅಲಂಕಾರಾತಿಶಯವಾದ, ಕಾವ್ಯಾತ್ಮಕ ಪದಗಳಲ್ಲಿ ವರ್ಣಿಸಿದ್ದ ಆದಾಮನು, ಈಗ ಅವಳ ಕುರಿತು ನೀರಸವಾಗಿ ‘ನೀನು ನನಗೆ ಕೊಟ್ಟ ಸ್ತ್ರೀ’ ಎಂಬುದಾಗಿ ಹೇಳಿದನು. ಅವನ ಅಪರಿಪೂರ್ಣತೆಯು ಈಗ ಅವನ ಪುರುಷತ್ವವನ್ನು ನಷ್ಟಗೊಳಿಸಿ, ತಪ್ಪಾಗಿ ಮಾರ್ಗದರ್ಶಿಸಿತು. ಇದು ಅವನು ‘ತನ್ನ ಹೆಂಡತಿಯ ಮೇಲೆ ದಬ್ಬಾಳಿಕೆ’ (NW) ನಡೆಸುವುದರಲ್ಲಿ ಫಲಿಸಿತು. ಪ್ರತಿಯಾಗಿ ಹವ್ವಳಲ್ಲಿ ತನ್ನ ಗಂಡನಿಗಾಗಿ, ಬಹುಶಃ ಒಂದು ಅತಿಯಾದ ಇಲ್ಲವೆ ಅಸಮತೆಯ ವಿಧದಲ್ಲಿ “ಆಶೆ” ಇರಲಿತ್ತು.—ಆದಿಕಾಂಡ 3:12, 16.
6, 7. (ಎ) ಜಲಪ್ರಳಯದ ಮುಂಚೆ ಪುರುಷತ್ವದ ಯಾವ ವಿಕೃತರೂಪವು ವಿಕಾಸಗೊಂಡಿತು? (ಬಿ) ಜಲಪ್ರಳಯಪೂರ್ವದ ಸನ್ನಿವೇಶದಿಂದ ನಾವು ಏನನ್ನು ಕಲಿಯಬಲ್ಲೆವು?
6 ಪುರುಷತ್ವ ಮತ್ತು ಸ್ತ್ರೀತ್ವದ ದುರುಪಯೋಗವು, ಜಲಪ್ರಳಯದ ಮುಂಚೆ ಮಹತ್ತರವಾಗಿ ವ್ಯಕ್ತವಾಯಿತು. ಸ್ವರ್ಗದಲ್ಲಿದ್ದ ತಮ್ಮ ಮೂಲ ಸ್ಥಾನವನ್ನು ತ್ಯಜಿಸಿಬಿಟ್ಟ ದೇವದೂತರು, ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧಗಳಲ್ಲಿ ಆನಂದಿಸಲು ಮಾನವ ದೇಹಗಳನ್ನು ಧರಿಸಿಕೊಂಡರು. (ಆದಿಕಾಂಡ 6:1, 2) ಆ ಅಸ್ವಾಭಾವಿಕ ಸಂಬಂಧಗಳಿಂದ ಗಂಡುಮಕ್ಕಳು ಮಾತ್ರ ಜನಿಸಿದರೆಂದು ದಾಖಲೆಯು ತಿಳಿಸುತ್ತದೆ. ಮತ್ತು ಆ ಸಂತತಿಯವರು ಮಿಶ್ರಜರಾಗಿದ್ದು, ಸಂತಾನೋತ್ಪತ್ತಿಮಾಡಲು ಅಶಕ್ತರಾಗಿದ್ದರೆಂದು ತೋರುತ್ತದೆ. ಅವರು ಪರಾಕ್ರಮಶಾಲಿಗಳು, ನೆಫೀಲಿಯರು, ಇಲ್ಲವೆ ಕೆಡಹುವವರು—ಏಕೆಂದರೆ ಇತರರನ್ನು ಅವರು ಹೊಡೆದು ಉರುಳಿಸುತ್ತಿದ್ದರು—ಎಂಬುದಾಗಿ ಜ್ಞಾತರಾದರು. (ಆದಿಕಾಂಡ 6:4; ಪಾದಟಿಪ್ಪಣಿ) ಅವರು ಹಿಂಸಾತ್ಮಕರೂ ಆಕ್ರಮಣಶೀಲರೂ ಕೋಮಲವಾದ ಅನುಕಂಪವನ್ನು ತೋರಿಸದವರೂ ಆಗಿದ್ದರೆಂಬುದು ವ್ಯಕ್ತ.
7 ಸ್ಪಷ್ಟವಾಗಿಯೇ, ಶಾರೀರಿಕ ಸೌಂದರ್ಯ, ದೇಹದ ಆಕಾರ, ಗಾತ್ರ, ಇಲ್ಲವೆ ಬಲವು, ಸ್ವತಃ ತಮ್ಮಷ್ಟಕ್ಕೆ ಸ್ವೀಕಾರಾರ್ಹವಾದ ಪುರುಷತ್ವ ಇಲ್ಲವೆ ಸ್ತ್ರೀತ್ವವನ್ನು ನೀಡುವುದಿಲ್ಲ. ಮಾನವ ದೇಹವನ್ನು ಧರಿಸಿಕೊಂಡ ಆ ದೇವದೂತರು ಸ್ಫುರದ್ರೂಪಿಗಳಾಗಿದ್ದಿರಬಹುದು. ಮತ್ತು ನೆಫೀಲಿಯರು ಭಾರಿಗಾತ್ರರೂ ಮಾಂಸಪುಷ್ಟಿವುಳ್ಳರೂ ಆಗಿದ್ದರು, ಆದರೆ ಅವರ ಮಾನಸಿಕ ಮನೋಭಾವವು ವಿಕೃತವಾಗಿತ್ತು. ಆ ಅವಿಧೇಯ ದೇವದೂತರು ಮತ್ತು ಅವರ ಸಂತತಿಯು ಭೂಮಿಯನ್ನು ಲೈಂಗಿಕ ಅನೈತಿಕತೆ ಮತ್ತು ಹಿಂಸಾಚಾರದಿಂದ ತುಂಬಿಸಿತು. ಆದಕಾರಣ, ಯೆಹೋವನು ಆ ಲೋಕಕ್ಕೆ ಒಂದು ಅಂತ್ಯವನ್ನು ತಂದನು. (ಆದಿಕಾಂಡ 6:5-7) ಆದರೆ, ಆ ಜಲಪ್ರಳಯವು ದೆವ್ವಸಂಬಂಧಿತ ಪ್ರಭಾವವನ್ನಾಗಲಿ ಆದಾಮನ ಪಾಪದ ಪರಿಣಾಮಗಳನ್ನಾಗಲಿ ತೆಗೆದುಹಾಕಲಿಲ್ಲ. ಜಲಪ್ರಳಯದ ಅನಂತರ, ಪುರುಷತ್ವ ಮತ್ತು ಸ್ತ್ರೀತ್ವದ ಅಯೋಗ್ಯವಾದ ಪ್ರತಿಬಿಂಬವು ಪುನಃ ಕಾಣಿಸಿಕೊಂಡಿತು, ಮತ್ತು ನಾವು ಕಲಿಯಸಾಧ್ಯವಿರುವ ಒಳ್ಳೆಯ ಹಾಗೂ ಕೆಟ್ಟ—ಎರಡೂ—ಉದಾಹರಣೆಗಳು ಬೈಬಲಿನಲ್ಲಿವೆ.
8. ಯೋಗ್ಯವಾದ ಪುರುಷತ್ವದ ವಿಷಯವಾಗಿ ಯೋಸೇಫನು ಯಾವ ಉತ್ತಮ ಮಾದರಿಯನ್ನಿಟ್ಟನು?
8 ಯೋಸೇಫ ಮತ್ತು ಪೋಟೀಫರನ ಹೆಂಡತಿಯ ಕುರಿತಾದ ವೃತ್ತಾಂತವು, ಯೋಗ್ಯವಾದ ಪುರುಷತ್ವ ಹಾಗೂ ಲೌಕಿಕ ಸ್ತ್ರೀತ್ವದ ನಡುವಿನ ಶಕ್ತಿಶಾಲಿ ವೈದೃಶ್ಯವನ್ನು ಪ್ರಸ್ತುತಪಡಿಸುತ್ತದೆ. ಪೋಟೀಫರನ ಹೆಂಡತಿಯು ಸ್ಫುರದ್ರೂಪಿಯಾದ ಯೋಸೇಫನೊಂದಿಗೆ ಮೋಹಪರವಶಳಾಗಿ, ಅವನನ್ನು ಆಕರ್ಷಿಸಲು ಪ್ರಯತ್ನಿಸಿದಳು. ಆ ಸಮಯದಲ್ಲಿ, ಹಾದರ ಇಲ್ಲವೆ ವ್ಯಭಿಚಾರವನ್ನು ನಿಷೇಧಿಸುವ ಯಾವುದೇ ಲಿಖಿತ ದೈವಿಕ ನಿಯಮವಿರಲಿಲ್ಲ. ಆದರೂ, ಯೋಸೇಫನು ಆ ಅನೈತಿಕ ಸ್ತ್ರೀಯಿಂದ ಓಡಿಹೋಗಿ, ತನ್ನನ್ನು ದೇವರ ನಿಜವಾದ ಮನುಷ್ಯನಾಗಿ—ದೇವರ ಮೆಚ್ಚಿಗೆಯನ್ನು ಪಡೆದಿದ್ದ ಪುರುಷತ್ವವನ್ನು ತೋರಿಸುವವನಾಗಿ—ರುಜುಪಡಿಸಿಕೊಂಡನು.—ಆದಿಕಾಂಡ 39:7-9, 12.
9, 10. (ಎ) ವಷ್ಟಿ ರಾಣಿಯು ತನ್ನ ಸ್ತ್ರೀತ್ವವನ್ನು ಹೇಗೆ ದುರುಪಯೋಗಿಸಿಕೊಂಡಳು? (ಬಿ) ಸ್ತ್ರೀತ್ವದ ಯಾವ ಉತ್ತಮ ಮಾದರಿಯನ್ನು ಎಸ್ತೇರಳು ನಮಗಾಗಿ ಒದಗಿಸಿದಳು?
9 ಎಸ್ತೇರ್ ಮತ್ತು ರಾಣಿ ವಷ್ಟಿಯು, ಸ್ತ್ರೀಯರಿಗಾಗಿ ಒಂದು ಎದ್ದುಕಾಣುವ ವ್ಯತ್ಯಾಸವನ್ನು ಒದಗಿಸಿದರು. ತಾನು ಎಷ್ಟೊಂದು ಸುಂದರಿಯೆಂದರೆ, ರಾಜ ಅಹಷ್ವೇರೋಷನು ತನ್ನ ಇಷ್ಟಗಳಿಗೆ ಯಾವಾಗಲೂ ಒಪ್ಪುವನೆಂದು ವಷ್ಟಿ ನೆನಸಿದಳೆಂಬುದು ವ್ಯಕ್ತ. ಆದರೆ ಅವಳ ಸೌಂದರ್ಯವು, ಕೇವಲ ಮೇಲುಮೇಲಿನದ್ದಾಗಿತ್ತು. ಅವಳಲ್ಲಿ ವಿನಯಶೀಲತೆ ಮತ್ತು ಸ್ತ್ರೀತ್ವದ ಕೊರತೆಯಿತ್ತು, ಏಕೆಂದರೆ ಅವಳು ತನ್ನ ಗಂಡನೂ ರಾಜನೂ ಆದವನಿಗೆ ಅಧೀನತೆಯನ್ನು ತೋರಿಸಲು ತಪ್ಪಿಹೋದಳು. ರಾಜನು ಅವಳನ್ನು ತಿರಸ್ಕರಿಸಿ, ನಿಜವಾಗಿಯೂ ಸ್ತ್ರೀಸ್ವಭಾವವುಳ್ಳ ಒಬ್ಬಾಕೆಯನ್ನು—ಯಾರು ವಾಸ್ತವದಲ್ಲಿ ಯೆಹೋವನಿಗೆ ಭಯಪಟ್ಟಳೊ, ಅಂತಹವಳನ್ನು—ತನ್ನ ರಾಣಿಯಾಗಿರಲು ಆರಿಸಿಕೊಂಡನು.—ಎಸ್ತೇರಳು 1:10-12; 2:15-17.
10 ಎಸ್ತೇರಳು ಕ್ರೈಸ್ತ ಸ್ತ್ರೀಯರಿಗೆ ಒಂದು ಅದ್ಭುತವಾದ ಮಾದರಿಯಾಗಿದ್ದಾಳೆ. ಅವಳು “ರೂಪವತಿಯೂ ಲಾವಣ್ಯವತಿಯೂ” ಆಗಿದ್ದರೂ, “ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣ”ದ ಅಲಂಕಾರವನ್ನು ಪ್ರದರ್ಶಿಸಿದಳು. (ಎಸ್ತೇರಳು 2:7; 1 ಪೇತ್ರ 3:4) ಅವಳು ಆಡಂಬರದ ಅಲಂಕಾರವನ್ನು ಅತಿ ಪ್ರಾಮುಖ್ಯವಾದ ವಿಷಯವಾಗಿ ಎಣಿಸಲಿಲ್ಲ. ಎಸ್ತೇರಳು ಜಾಣ್ಮೆ ಮತ್ತು ಆತ್ಮಸಂಯಮವನ್ನು ತೋರಿಸಿ, ತನ್ನ ಜನರ ಜೀವಗಳು ಗಂಡಾಂತರದಲ್ಲಿದ್ದಾಗಲೂ ಗಂಡನಾದ ಅಹಷ್ವೇರೋಷನಿಗೆ ಅಧೀನಳಾಗಿದ್ದಳು. ಮೌನವಾಗಿರುವುದು ವಿವೇಕಯುತವಾಗಿದ್ದಾಗ ಎಸ್ತೇರಳು ಮೌನವಾಗಿದ್ದಳಾದರೂ, ಅಗತ್ಯವಿದ್ದಾಗ ಮತ್ತು ಅದು ಸೂಕ್ತವಾದ ಸಮಯವಾಗಿದ್ದಾಗ ಅವಳು ನಿರ್ಭೀತಿಯಿಂದ ಮಾತಾಡಿದಳು. (ಎಸ್ತೇರಳು 2:10; 7:3-6) ತನ್ನ ಪ್ರೌಢ ಸೋದರಸಂಬಂಧಿಯಾದ ಮೊರ್ದೆಕೈಯಿಂದ ಅವಳು ಸಲಹೆಯನ್ನು ಸ್ವೀಕರಿಸಿದಳು. (ಎಸ್ತೇರಳು 4:12-16) ತನ್ನ ಜನರ ಕಡೆಗೆ ಅವಳು ಪ್ರೀತಿ ಮತ್ತು ನಿಷ್ಠೆಯನ್ನು ಪ್ರದರ್ಶಿಸಿದಳು.
ಬಾಹ್ಯ ತೋರಿಕೆ
11. ಬಾಹ್ಯ ತೋರಿಕೆಯ ವಿಷಯವಾಗಿ ನಾವು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
11 ಯೋಗ್ಯವಾದ ಸ್ತ್ರೀತ್ವಕ್ಕಿರುವ ಕೀಲಿ ಕೈ ಯಾವುದು? ತಾಯಿಯೊಬ್ಬಳು ಹೇಳಿದ್ದು: “ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.” (ಜ್ಞಾನೋಕ್ತಿ 31:30) ಆದುದರಿಂದ ದೇವರ ಕಡೆಗೆ ಒಂದು ಪೂಜ್ಯಭಾವನೆಯ ಭಯವು ಆವಶ್ಯಕ, ಮತ್ತು ಸ್ತ್ರೀತ್ವಕ್ಕೆ ಶಾರೀರಿಕ ಸೌಂದರ್ಯಕ್ಕಿಂತ ಪ್ರೀತಿದಯೆ, ಆಹ್ಲಾದತೆ, ವಿನಯಶೀಲತೆ, ಮತ್ತು ಒಂದು ಸೌಮ್ಯ ನಾಲಿಗೆಯು ಹೆಚ್ಚನ್ನು ಕೂಡಿಸುತ್ತವೆ.—ಜ್ಞಾನೋಕ್ತಿ 31:26.
12, 13. (ಎ) ದುಃಖಕರವಾಗಿ, ಅನೇಕರ ನುಡಿಯ ವೈಶಿಷ್ಟ್ಯವೇನಾಗಿರುತ್ತದೆ? (ಬಿ) ಜ್ಞಾನೋಕ್ತಿ 11:22ರ ಅರ್ಥವೇನು?
12 ವಿಷಾದಕರವಾಗಿ, ಅನೇಕ ಸ್ತ್ರೀಪುರುಷರ ಬಾಯಿಯು ವಿವೇಕವನ್ನು ವ್ಯಕ್ತಪಡಿಸುವುದಿಲ್ಲ, ಅವರ ನಾಲಿಗೆಯು ಪ್ರೀತಿಪೂರ್ವಕವಾದ ದಯೆಯನ್ನು ತೋರ್ಪಡಿಸುವುದಿಲ್ಲ. ಅವರ ನುಡಿಯು, ದೂಷಣೀಯವೂ ಅಣಕವೂ ಅಸಭ್ಯವೂ ದಯೆದಾಕ್ಷಿಣ್ಯಯಿಲ್ಲದ್ದೂ ಆಗಿದೆ. ಹೊಲಸು ಮಾತು ಪುರುಷತ್ವದ ಗುರುತೆಂದು ಕೆಲವು ಪುರುಷರು ನೆನಸುತ್ತಾರೆ, ಮತ್ತು ಕೆಲವು ಸ್ತ್ರೀಯರು ಅವರನ್ನು ಮೂರ್ಖತನದಿಂದ ಅನುಕರಿಸುತ್ತಾರೆ. ಸ್ತ್ರೀಯೊಬ್ಬಳು ಸುಂದರಳಾಗಿದ್ದರೂ, ವಿವೇಕವಿಲ್ಲದವಳೂ ವಾದಶೀಲಳೂ, ಅಣಕಿಸುವವಳು ಇಲ್ಲವೆ ಅಹಂಕಾರಿಯೂ ಆಗಿರುವಲ್ಲಿ, ಅವಳು ಅತ್ಯುತ್ಕೃಷ್ಟ ಅರ್ಥದಲ್ಲಿ ನಿಜವಾಗಿಯೂ ಸುಂದರಿಯು, ನಿಜವಾಗಿಯೂ ಸ್ತ್ರೀಸಹಜ ಗುಣವುಳ್ಳವಳಾಗಿರಸಾಧ್ಯವೊ? “ಹಂದಿಯ ಮೂತಿಗೆ ಚಿನ್ನದ ಮೂಗುತಿಯು ಹೇಗೋ ಅವಿವೇಕಳಿಗೆ ಸೌಂದರ್ಯವು ಹಾಗೆ.”—ಜ್ಞಾನೋಕ್ತಿ 11:22.
13 ಅಶುದ್ಧ ನುಡಿ, ಅಣಕ, ಇಲ್ಲವೆ ಅವಿವೇಕತನದೊಂದಿಗೆ ಜೊತೆಗೂಡಿರುವ ಸೌಂದರ್ಯವು, ಆ ವ್ಯಕ್ತಿಯು ವ್ಯಕ್ತಪಡಿಸಬಹುದಾದ ಯಾವುದೇ ಸ್ತ್ರೀಸಹಜ ತೋರಿಕೆಯೊಂದಿಗೆ ಸುಸಂಗತವಾಗಿರದು. ವಾಸ್ತವದಲ್ಲಿ, ಅಂತಹ ಅದೈವಿಕ ನಡತೆಯು, ಶಾರೀರಿಕವಾಗಿ ಆಕರ್ಷಕವಾಗಿರುವ ಒಬ್ಬ ವ್ಯಕ್ತಿಯನ್ನು ಸಹ ಕುರೂಪಿಯಾಗಿ ತೋರುವಂತೆ ಮಾಡಬಲ್ಲದು. ಪುರುಷ ಅಥವಾ ಸ್ತ್ರೀಯ ಶಾರೀರಿಕ ತೋರಿಕೆಯು ತಾನೇ, ಕೋಪದ ಕೆರಳುಗಳು, ಅರಚುವಿಕೆ, ಇಲ್ಲವೆ ದೂಷಣೀಯ ನುಡಿಯನ್ನು ಸರಿದೂಗಿಸಲು ಅಥವಾ ನ್ಯಾಯವೆಂದು ಸಮರ್ಥಿಸಲು ಸಾಧ್ಯವಿಲ್ಲವೆಂದು ನಾವು ಸರಳವಾಗಿ ವಿವೇಚಿಸಬಲ್ಲೆವು. ಎಲ್ಲ ಕ್ರೈಸ್ತರು ತಮ್ಮ ಬೈಬಲಾಧಾರಿತ ನುಡಿ ಮತ್ತು ನಡತೆಯಿಂದಾಗಿ ತಮ್ಮನ್ನು ದೇವರಿಗೆ ಮತ್ತು ಜೊತೆ ಮಾನವರಿಗೆ ಆಕರ್ಷಕರನ್ನಾಗಿ ಮಾಡಿಕೊಳ್ಳಸಾಧ್ಯವಿದೆ ಮತ್ತು ಮಾಡಿಕೊಳ್ಳಬೇಕು.—ಎಫೆಸ 4:31.
14. 1 ಪೇತ್ರ 3:3-5ರಲ್ಲಿ ಯಾವ ರೀತಿಯ ಅಲಂಕಾರವು ಹೊಗಳಲ್ಪಟ್ಟಿದೆ, ಮತ್ತು ಅದರ ಕುರಿತು ನಿಮಗೆ ಹೇಗನಿಸುತ್ತದೆ?
14 ಸಮಂಜಸವಾದ ಸ್ತ್ರೀತ್ವ ಹಾಗೂ ಪುರುಷತ್ವವು ಆತ್ಮಿಕ ಗುಣಗಳ ಮೇಲೆ ಆಧಾರಿತವಾಗಿವೆಯಾದರೂ, ಶಾರೀರಿಕ ವರ್ತನೆ ಮತ್ತು ತೋರಿಕೆಯು—ನಾವು ಧರಿಸುವ ಬಟ್ಟೆ ಮತ್ತು ಅದನ್ನು ಧರಿಸಿಕೊಳ್ಳುವ ವಿಧವನ್ನು ಸೇರಿಸಿ—ನಮ್ಮ ಕುರಿತು ಒಂದು ಸಂದೇಶವನ್ನು ಹೇಳುತ್ತವೆ. “ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ. ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದು ಯಾವ ಭೀತಿಗೂ ಗಾಬರಿಪಡದೆ ಒಳ್ಳೇದನ್ನೇ ಮಾಡುವವರಾಗಿದ್ದರು” ಎಂಬುದಾಗಿ ಅಪೊಸ್ತಲ ಪೇತ್ರನು ಕ್ರೈಸ್ತ ಸ್ತ್ರೀಯರಿಗೆ ಸಲಹೆನೀಡಿದಾಗ, ಪ್ರಥಮ ಶತಮಾನದ ಉಡುಗೆ ತೊಡುಗೆ ಮತ್ತು ಕೇಶಾಲಂಕಾರದ ನಿರ್ದಿಷ್ಟ ಶೈಲಿಗಳು ನಿಸ್ಸಂದೇಹವಾಗಿ ಅವನ ಮನಸ್ಸಿನಲ್ಲಿದ್ದವು.—1 ಪೇತ್ರ 3:3-5.
15. ತಮ್ಮ ಉಡುಗೆ ತೊಡುಗೆಯಲ್ಲಿ ಕ್ರೈಸ್ತ ಸ್ತ್ರೀಯರು, ಏನನ್ನು ಪ್ರದರ್ಶಿಸಲು ಪ್ರಯಾಸಪಡಬೇಕು?
15 1 ತಿಮೊಥೆಯ 2:9, 10ರಲ್ಲಿ ಸ್ತ್ರೀಸಹಜ ಉಡುಗೆ ತೊಡುಗೆಯ ಕುರಿತಾದ ಪೌಲನ ಹೇಳಿಕೆಗಳನ್ನು ನಾವು ಕಂಡುಕೊಳ್ಳುತ್ತೇವೆ: “ಸ್ತ್ರೀಯರು ಮಾನಸ್ಥೆಯರಾಗಿಯೂ [“ಸ್ವಸ್ಥ ಮನಸ್ಸು,” NW] ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು . . . ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” ಅಲ್ಲಿ ಅವನು ಸ್ವಸ್ಥ ಮನಸ್ಸನ್ನು ಪ್ರತಿಬಿಂಬಿಸುವ ಡಂಭವಿಲ್ಲದ ಹಾಗೂ ಮರ್ಯಾದೆಗೆ ತಕ್ಕ ಉಡುಗೆ ತೊಡುಗೆಗಾಗಿರುವ ಅಗತ್ಯವನ್ನು ಒತ್ತಿಹೇಳಿದನು.
16, 17. (ಎ) ಇಂದು ಉಡುಗೆ ತೊಡುಗೆಯು ಅನೇಕ ಸ್ತ್ರೀಪುರುಷರಿಂದ ಹೇಗೆ ದುರುಪಯೋಗಿಸಲ್ಪಟ್ಟಿದೆ? (ಬಿ) ಧರ್ಮೋಪದೇಶಕಾಂಡ 22:5ರಲ್ಲಿ ಕಂಡುಕೊಳ್ಳಲ್ಪಡುವ ಬುದ್ಧಿವಾದದಿಂದ ನಾವು ಯಾವ ತೀರ್ಮಾನಕ್ಕೆ ಬರಬೇಕು?
16 ಒಬ್ಬ ಪುರುಷ ಇಲ್ಲವೆ ಸ್ತ್ರೀಗೆ, ಹುಡುಗ ಇಲ್ಲವೆ ಹುಡುಗಿಗೆ ಲೈಂಗಿಕವಾಗಿ ಉದ್ರೇಕಿಸುವ ವಿಧದಲ್ಲಿ ವರ್ತಿಸುವುದು ಇಲ್ಲವೆ ಉಡುಪು ಧರಿಸುವುದು, ನಿಜವಾದ ಪುರುಷತ್ವ ಅಥವಾ ಸ್ತ್ರೀತ್ವವನ್ನು ಹೆಚ್ಚಿಸದು, ಮತ್ತು ಖಂಡಿತವಾಗಿಯೂ ಅದು ದೇವರಿಗೆ ಘನತೆಯನ್ನು ತರದು. ಲೋಕದಲ್ಲಿರುವ ಅನೇಕ ಜನರು ಉಡುಗೆ ತೊಡುಗೆಯಲ್ಲಿ ಮತ್ತು ನಡತೆಯಲ್ಲಿ ಪುರುಷತ್ವ ಇಲ್ಲವೆ ಸ್ತ್ರೀತ್ವವನ್ನು ಪ್ರದರ್ಶಿಸಲು ಅತಿರೇಕಗಳಿಗೆ ಹೋಗುತ್ತಾರೆ. ಇತರರು ಅನೈತಿಕ ಉದ್ದೇಶಗಳ ಕಾರಣ, ಲಿಂಗಗಳ ನಡುವಿನ ಭಿನ್ನತೆಗಳನ್ನು ಅಸ್ಪಷ್ಟಗೊಳಿಸುತ್ತಾರೆ. ಬೈಬಲು ದೇವರ ಆಲೋಚನೆಯನ್ನು ಪ್ರಕಟಪಡಿಸುವುದರಿಂದ ಕ್ರೈಸ್ತರಾದ ನಾವು ಎಷ್ಟೊಂದು ಕೃತಜ್ಞರಾಗಿರಬಲ್ಲೆವು! ಯೆಹೋವನು ಪ್ರಾಚೀನ ಇಸ್ರಾಯೇಲಿಗೆ ಪ್ರಕಟಿಸಿದ್ದು: “ಸ್ತ್ರೀಯು ಪುರುಷವೇಷವನ್ನೂ ಪುರುಷನು ಸ್ತ್ರೀವೇಷವನ್ನೂ ಹಾಕಿಕೊಳ್ಳಕೂಡದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಹೇಯರು.”—ಧರ್ಮೋಪದೇಶಕಾಂಡ 22:5.
17 ಈ ಸಂಬಂಧದಲ್ಲಿ ನವೆಂಬರ್ 1, 1989ರ ಕಾವಲಿನಬುರುಜು ಪತ್ರಿಕೆಯು, ಪುಟ 17ರಲ್ಲಿ ಹೇಳಿದ ವಿಷಯವನ್ನು ಪುನರ್ವಿಮರ್ಶಿಸುವುದರಲ್ಲಿ ನೀವು ಬಹುಶಃ ಆನಂದಿಸುವಿರಿ: “ಒಂದು ನಿರ್ದಿಷ್ಟ ಸ್ಟೈಲ್ ಅತ್ಯಂತ ಫ್ಯಾಷನ್ನಲ್ಲಿದೆಯೋ ಇಲ್ಲವೋ ಎಂಬದು ಪ್ರಶ್ನೆಯಲ್ಲ ಬದಲಾಗಿ ದೇವರ ಸೌವಾರ್ತಿಕನೆಂದು ಹೇಳಿಕೊಳ್ಳುವವನಿಗೆ ಅದು ಒಪ್ಪುತ್ತದೋ ಇಲ್ಲವೋ ಎಂಬದೇ. (ರೋಮಾಪುರ 12:2; 2 ಕೊರಿಂಥ 6:3) ಅತಿ ಅಕ್ರಮ ರೀತಿಯ ಅಥವಾ ಅತಿ ಬಿಗುಪಾದ ಉಡುಪುಗಳು ನಮ್ಮ ಸಂದೇಶವನ್ನು ಅಪಕರ್ಷಿಸಬಲ್ಲವು. ಪುರುಷರನ್ನು ಸ್ತ್ರೀಯಂತೆಯೂ ಸ್ತ್ರೀಯರನ್ನು ಪುರುಷರಂತೆಯೂ ಕಾಣಿಸುವಂತೆ ಬುದ್ಧಿಪೂರ್ವಕವಾಗಿ ರಚಿಸಿದ ಬಟ್ಟೆಗಳನ್ನು ಹಾಕುವುದು ನಿಶ್ಚಯವಾಗಿಯೂ ಅಯೋಗ್ಯವು. (ಧರ್ಮೋಪದೇಶಕಾಂಡ 22:5ನ್ನು ಹೋಲಿಸಿ.) ಹವಾಮಾನಕ್ಕನುಸಾರ, ಉದ್ಯೋಗದ ಸಂಬಂಧದಲ್ಲಿಯೇ ಮುಂತಾದ ಸಮಯಗಳಲ್ಲಿ ಸ್ಥಳಿಕ ಪದ್ಧತಿಗಳು ಬೇರೆ ಬೇರೆಯಾಗಿರಬಹುದು ನಿಶ್ಚಯ. ಆದ್ದರಿಂದ ಕ್ರೈಸ್ತ ಸಭೆಯು ಲೋಕದಾದ್ಯಂತವಿರುವ ಸಹೋದರತ್ವಕ್ಕಾಗಿ ಕಟ್ಟುನಿಟ್ಟಿನ ನಿಯಮವನ್ನು ಮಾಡಲಾರದು.”
18. ಉಡುಗೆ ತೊಡುಗೆ ಮತ್ತು ಕೇಶಾಲಂಕಾರದ ವಿಷಯವಾಗಿ ಬೈಬಲ್ ಸಂಬಂಧಿತ ಸಲಹೆಯನ್ನು ಅನ್ವಯಿಸಿಕೊಳ್ಳುವುದರಲ್ಲಿ ನಾವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು?
18 ಎಂತಹ ಸಮತೆಯ ಹಾಗೂ ತಕ್ಕದಾದ ಸಲಹೆ! ದುಃಖಕರವಾಗಿ ಕೆಲವು ಕ್ರೈಸ್ತರು, ಗಂಡುಹೆಣ್ಣುಗಳು, ಅದು ಯೆಹೋವ ಮತ್ತು ಕ್ರೈಸ್ತ ಸಭೆಯ ಮೇಲೆ ಹೇಗೆ ಪ್ರತಿಫಲಿಸುವುದೆಂಬುದನ್ನು ಪರಿಗಣಿಸದೆಯೇ, ಉಡುಗೆ ತೊಡುಗೆ ಮತ್ತು ಕೇಶಾಲಂಕಾರದ ವಿಷಯದಲ್ಲಿ ಲೋಕವು ಪ್ರವರ್ಧಿಸುವುದೆಲ್ಲವನ್ನು ಕಣ್ಣುಮುಚ್ಚಿ ಅನುಸರಿಸುತ್ತಾರೆ. ಲೋಕದ ಆಲೋಚನೆಯಿಂದ ನಾವು ಪ್ರಭಾವಿಸಲ್ಪಟ್ಟಿದ್ದೇವೊ ಎಂಬುದನ್ನು ನೋಡಲು ನಮ್ಮಲ್ಲಿ ಪ್ರತಿಯೊಬ್ಬರು ಒಂದಿಷ್ಟು ಆತ್ಮ ಪರಿಶೀಲನೆಯನ್ನು ಮಾಡಬಹುದು. ಇಲ್ಲವೆ ನಾವು ಒಬ್ಬ ಗಣ್ಯ, ಅನುಭವಸ್ಥ ಸಹೋದರ ಇಲ್ಲವೆ ಸಹೋದರಿಯನ್ನು ಸಮೀಪಿಸಿ, ಉಡುಪು ಧರಿಸುವ ನಮ್ಮ ಶೈಲಿಯಲ್ಲಿ ನಾವು ಮಾಡಸಾಧ್ಯವಿರುವ ಯಾವುದೇ ಹೊಂದಾಣಿಕೆಗಳ ವಿಷಯವಾಗಿ ಅಭಿಪ್ರಾಯಗಳನ್ನು ಕೇಳಿಕೊಂಡು, ಅನಂತರ ಸಲಹೆಸೂಚನೆಗಳನ್ನು ಗಂಭೀರವಾಗಿ ತೂಗಿನೋಡಬಹುದು.
ಕ್ರೈಸ್ತ ಸ್ತ್ರೀಪುರುಷರು—ನಿಜವಾದ ಸ್ತ್ರೀಪುರುಷರು
19. ಯಾವ ಅನಪೇಕ್ಷಿತ ಪ್ರಭಾವದ ವಿರುದ್ಧ ನಾವು ಹೋರಾಡಬೇಕಾಗಿದೆ?
19 ಈ ಲೋಕದ ದೇವರು ಸೈತಾನನು, ಮತ್ತು ಅವನ ಪ್ರಭಾವವನ್ನು ಲಿಂಗಗಳ ಸಂಬಂಧದಲ್ಲಿರುವ ಗಲಿಬಿಲಿಯಲ್ಲಿ ನೋಡಸಾಧ್ಯವಿದೆ, ಮತ್ತು ಆ ಗಲಿಬಿಲಿಯು ಉಡುಗೆ ತೊಡುಗೆಯ ವಿಷಯವನ್ನು ಬಿಟ್ಟು ಬೇರೆ ವಿಷಯಗಳಲ್ಲಿಯೂ ವ್ಯಕ್ತವಾಗುತ್ತದೆ. (2 ಕೊರಿಂಥ 4:4) ಕೆಲವು ದೇಶಗಳಲ್ಲಿ ಅನೇಕ ಸ್ತ್ರೀಯರು ಬೈಬಲಿನ ಮೂಲತತ್ವಗಳನ್ನು ಕಡೆಗಣಿಸುತ್ತಾ, ತಲೆತನದ ವಿಷಯವಾಗಿ ಪುರುಷರೊಂದಿಗೆ ಸ್ಪರ್ಧಿಸುತ್ತಾರೆ. ಇನ್ನೊಂದು ಕಡೆಯಲ್ಲಿ, ಹೆಚ್ಚಿನ ಪುರುಷರು ಆದಾಮನು ಮಾಡಿದಂತೆ ತಮ್ಮ ತಲೆತನದ ಜವಾಬ್ದಾರಿಗಳನ್ನು ಸುಮ್ಮನೆ ತ್ಯಜಿಸಿಬಿಡುತ್ತಾರೆ. ಜೀವನದಲ್ಲಿ ತಮ್ಮ ಲೈಂಗಿಕ ಪಾತ್ರವನ್ನು ಬದಲಾಯಿಸಲು ಪ್ರಯತ್ನಿಸುವವರೂ ಇದ್ದಾರೆ. (ರೋಮಾಪುರ 1:26, 27) ದೇವರ ಮೆಚ್ಚುಗೆ ಪಡೆದ ಯಾವುದೇ ಬದಲಿ ಜೀವನ ಶೈಲಿಗಳನ್ನು ಬೈಬಲು ಸ್ಥಾಪಿಸುವುದಿಲ್ಲ. ಮತ್ತು ಕ್ರೈಸ್ತರಾಗುವ ಮೊದಲು ತಮ್ಮ ಗುರುತು ಇಲ್ಲವೆ ಲೈಂಗಿಕ ಇಚ್ಛೆಗಳ ವಿಷಯವಾಗಿ ಗಲಿಬಿಲಿಗೊಂಡಿದ್ದವರು, ದೇವರ ಮಟ್ಟ—ಮಾನವ ಪರಿಪೂರ್ಣತೆಯನ್ನು ತಲಪುವ ಎಲ್ಲರಿಂದ ಖಂಡಿತವಾಗಿ ಗಣ್ಯಮಾಡಲ್ಪಡಲಿರುವ ಒಂದು ಮಟ್ಟ—ಕ್ಕನುಸಾರ ಜೀವಿಸುವುದು ಅವರ ನಿತ್ಯ ಒಳಿತಿಗಾಗಿರುವುದು ಎಂಬ ವಿಷಯದಲ್ಲಿ ಭರವಸೆಯನ್ನಿಡಬಲ್ಲರು.
20. ಪುರುಷತ್ವ ಹಾಗೂ ಸ್ತ್ರೀತ್ವದ ಕುರಿತಾದ ನಮ್ಮ ವೀಕ್ಷಣೆಯ ಮೇಲೆ ಗಲಾತ್ಯ 5:22, 23 ಯಾವ ಪ್ರಭಾವವನ್ನು ಬೀರಬೇಕು?
20 ಕ್ರೈಸ್ತ ಸ್ತ್ರೀಪುರುಷರು ದೇವರ ಆತ್ಮದ ಫಲಗಳನ್ನು—ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಮತ್ತು ಶಮೆದಮೆ—ಬೆಳೆಸಿಕೊಂಡು, ಪ್ರದರ್ಶಿಸುವ ಅಗತ್ಯವಿದೆಯೆಂದು ಶಾಸ್ತ್ರಗಳು ತೋರಿಸುತ್ತವೆ. (ಗಲಾತ್ಯ 5:22, 23) ಆ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಪುರುಷರು ತಮ್ಮ ಪುರುಷತ್ವವನ್ನು ಮತ್ತು ಸ್ತ್ರೀಯರು ತಮ್ಮ ಸ್ತ್ರೀತ್ವವನ್ನು ಹೆಚ್ಚಿಸಿಕೊಳ್ಳಲು ಶಕ್ತರಾಗುವಂತೆ, ದೇವರು ತನ್ನ ಮಹಾ ವಿವೇಕವನ್ನು ಉಪಯೋಗಿಸಿದನು. ಆತ್ಮದ ಫಲಗಳನ್ನು ಪ್ರದರ್ಶಿಸುವ ಒಬ್ಬ ಪುರುಷನನ್ನು ಗೌರವಿಸುವುದು ಸುಲಭ, ಮತ್ತು ಹಾಗೆ ಮಾಡುವ ಸ್ತ್ರೀಯನ್ನು ಪ್ರೀತಿಸುವುದೂ ಸುಲಭ.
21, 22. (ಎ) ಜೀವನ ಶೈಲಿಗಳ ವಿಷಯವಾಗಿ ಯೇಸು ಯಾವ ನಮೂನೆಯನ್ನು ಸ್ಥಾಪಿಸಿದನು? (ಬಿ) ಯೇಸು ತನ್ನ ಪುರುಷತ್ವವನ್ನು ಹೇಗೆ ಪ್ರದರ್ಶಿಸಿದನು?
21 ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು ಯೇಸು ಕ್ರಿಸ್ತನಾಗಿದ್ದನು, ಮತ್ತು ಕ್ರೈಸ್ತರು ಅವನ ಜೀವನ ಶೈಲಿಯನ್ನು ಅನುಕರಿಸಬೇಕು. (1 ಪೇತ್ರ 2:21-23) ಯೇಸು ಮಾಡಿದಂತೆಯೇ, ಸ್ತ್ರೀಪುರುಷರಿಬ್ಬರೂ ದೇವರಿಗೆ ನಿಷ್ಠಾವಂತರಾಗಿ ಮತ್ತು ಆತನ ವಾಕ್ಯಕ್ಕೆ ವಿಧೇಯರಾಗಿ ಪರಿಣಮಿಸಬೇಕು. ಯೇಸು, ಪ್ರೀತಿ, ಕೋಮಲತೆ, ಮತ್ತು ಕರುಣೆಯಂತಹ ಅದ್ಭುತ ಗುಣಗಳನ್ನು ಪ್ರದರ್ಶಿಸಿದನು. ಸತ್ಯ ಕ್ರೈಸ್ತರೋಪಾದಿ, ನಾವು ಅವನ ಶಿಷ್ಯರಾಗಿದ್ದೇವೆಂಬುದನ್ನು ರುಜುಪಡಿಸಲು ನಾವು ಅವನನ್ನು ಅನುಕರಿಸಲೇಬೇಕು.—ಯೋಹಾನ 13:35.
22 ಯೇಸು ಕ್ರಿಸ್ತನು ನಿಜವಾದ ಪುರುಷನಾಗಿದ್ದನು, ಮತ್ತು ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿರುವ ಅವನ ಜೀವನ ವೃತ್ತಾಂತವನ್ನು ನಾವು ಅಭ್ಯಾಸಿಸಿದಂತೆ, ಅವನ ಪುರುಷಯೋಗ್ಯ ಗುಣಗಳನ್ನು ನಾವು ನೋಡಬಲ್ಲೆವು. ಅವನು ಎಂದೂ ವಿವಾಹವಾಗಲಿಲ್ಲ, ಆದರೆ ಸ್ತ್ರೀಯರೊಂದಿಗಿನ ಸಮತೆಯ ಸಹವಾಸದಲ್ಲಿ ಅವನು ಆನಂದಿಸಿದನೆಂದು ಬೈಬಲ್ ತೋರಿಸುತ್ತದೆ. (ಲೂಕ 10:38, 39) ಸ್ತ್ರೀಪುರುಷರೊಂದಿಗಿನ ಅವನ ಸಂಬಂಧಗಳು ಯಾವಾಗಲೂ ಶುದ್ಧವಾಗಿಯೂ ಮರ್ಯಾದೆಗೆ ಅನುಗುಣವಾಗಿಯೂ ಇದ್ದವು. ಅವನು ಪುರುಷತ್ವದ ಪರಿಪೂರ್ಣ ಮಾದರಿಯಾಗಿದ್ದಾನೆ. ತನ್ನ ದಿವ್ಯ ಪುರುಷತ್ವ ಹಾಗೂ ಯೆಹೋವನಿಗಾಗಿದ್ದ ನಂಬಿಗಸ್ತಿಕೆಯನ್ನು ಯಾರೊಬ್ಬರೂ—ಪುರುಷನಾಗಲಿ, ಸ್ತ್ರೀಯಾಗಲಿ, ಇಲ್ಲವೆ ಅವಿಧೇಯ ದೇವದೂತನಾಗಲಿ—ಕಸಿದುಕೊಳ್ಳುವಂತೆ ಅವನು ಬಿಡಲಿಲ್ಲ. ತನ್ನ ಜವಾಬ್ದಾರಿಗಳನ್ನು ಸ್ವೀಕರಿಸಿಕೊಳ್ಳುವುದರಿಂದ ಅವನು ಹಿಂಜರಿಯಲಿಲ್ಲ, ಮತ್ತು ಗೊಣಗದೆ ಹಾಗೆ ಮಾಡಿದನು.—ಮತ್ತಾಯ 26:39.
23. ಲಿಂಗಗಳ ಪಾತ್ರಗಳ ಸಂಬಂಧದಲ್ಲಿ, ಸತ್ಯ ಕ್ರೈಸ್ತರು ಸ್ಪಷ್ಟವಾಗಿ ಆಶೀರ್ವದಿಸಲ್ಪಟ್ಟಿರುವುದು ಹೇಗೆ?
23 ಯೆಹೋವನ ಜನರ ಮಧ್ಯದಲ್ಲಿರುವುದು ಮತ್ತು ಜೀವನದಲ್ಲಿ ಯಾರ ಆದ್ಯತೆಯು ಯೆಹೋವ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗುವುದಾಗಿದೆಯೊ, ಅಂತಹ ಸ್ತ್ರೀಪುರುಷರು ಹಾಗೂ ಹುಡುಗಹುಡುಗಿಯರೊಂದಿಗೆ ಸಹವಸಿಸುವುದು ಎಂತಹ ಹರ್ಷವಾಗಿದೆ! ದೇವರ ವಾಕ್ಯಕ್ಕೆ ವಿಧೇಯರಾಗುವುದರಿಂದ ನಾವು ನಿರ್ಬಂಧಿಸಲ್ಪಟ್ಟಿಲ್ಲ. ಬದಲಿಗೆ ಲಿಂಗಗಳ ಸೌಂದರ್ಯ, ಉದ್ದೇಶ, ಮತ್ತು ನಿಶ್ಚಿತವಾದ ಪಾತ್ರಗಳನ್ನು ಕೀಳ್ಮಾಡುವ, ಈ ಲೋಕ ಹಾಗೂ ಅದರ ಮಾರ್ಗಗಳಿಂದ ನಾವು ಮುಕ್ತರಾಗಿದ್ದೇವೆ. ನಾವು ಗಂಡಾಗಿರಲಿ ಹೆಣ್ಣಾಗಿರಲಿ, ಜೀವಿತದಲ್ಲಿನ ನಮ್ಮ ದೇವದತ್ತ ಸ್ಥಾನವನ್ನು ನೆರವೇರಿಸುವುದರಿಂದ ಬರುವ ಯಥಾರ್ಥವಾದ ಸಂತೋಷವನ್ನು ನಾವು ಅನುಭವಿಸಬಲ್ಲೆವು. ಹೌದು, ಸೃಷ್ಟಿಕರ್ತನಾದ ಯೆಹೋವ ದೇವರು, ಆತನು ನಮ್ಮ ಪರವಾಗಿ ಮಾಡಿರುವ ಎಲ್ಲ ಪ್ರೀತಿಪೂರ್ಣ ಒದಗಿಸುವಿಕೆಗಳಿಗಾಗಿ ಮತ್ತು ನಮ್ಮನ್ನು ಗಂಡುಹೆಣ್ಣಾಗಿ ಸೃಷ್ಟಿಸಿರುವುದಕ್ಕಾಗಿ ನಾವು ಆತನಿಗೆ ಎಷ್ಟೊಂದು ಆಭಾರಿಗಳಾಗಿದ್ದೇವೆ!
ನೀವು ಹೇಗೆ ಉತ್ತರಿಸುವಿರಿ?
◻ ಸ್ತ್ರೀಪುರುಷರಿಗಾಗಿ ಯಾವ ಯೋಗ್ಯವಾದ ಪಾತ್ರಗಳನ್ನು ಬೈಬಲು ವರ್ಣಿಸುತ್ತದೆ?
◻ ಜಲಪ್ರಳಯದ ಮುಂಚೆ ಪುರುಷತ್ವವು ಹೇಗೆ ವಿರೂಪಗೊಂಡಿತು, ಮತ್ತು ನಮ್ಮ ಸಮಯದಲ್ಲಿ, ಪುರುಷತ್ವ ಹಾಗೂ ಸ್ತ್ರೀತ್ವದ ಕಡೆಗಿನ ಮನೋಭಾವವು ಹೇಗೆ ತಿರುಚಲ್ಪಟ್ಟಿದೆ?
◻ ತೋರಿಕೆಯ ಕುರಿತಾದ ಯಾವ ಬೈಬಲ್ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ನೀವು ಪ್ರಯತ್ನಿಸುವಿರಿ?
◻ ಕ್ರೈಸ್ತ ಸ್ತ್ರೀಪುರುಷರು ತಾವು ನಿಜವಾದ ಸ್ತ್ರೀಪುರುಷರೆಂದು ಹೇಗೆ ರುಜುಪಡಿಸಿಕೊಳ್ಳಬಲ್ಲರು?
[ಪುಟ 17 ರಲ್ಲಿರುವ ಚಿತ್ರ]
ಎಸ್ತೇರಳು ಸುಂದರಿಯಾಗಿದ್ದರೂ, ತನ್ನ ವಿನಯಶೀಲತೆ ಮತ್ತು ತನ್ನ ಶಾಂತ ಹಾಗೂ ದೀನ ಮನೋವೃತ್ತಿಗಾಗಿ ಅವಳು ವಿಶೇಷವಾಗಿ ಜ್ಞಾಪಿಸಲ್ಪಡುತ್ತಾಳೆ
[ಪುಟ 18 ರಲ್ಲಿರುವ ಚಿತ್ರ]
ನೀಟುಗಾರಿಕೆಗೆ ಸಮಂಜಸವಾದ ಗಮನವನ್ನು ಕೊಡುತ್ತಿರುವಾಗ, ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಒತ್ತನ್ನು ಕೊಡಿರಿ