ಯುವ ಜನರು ಪ್ರಶ್ನಿಸುವುದು . . .
ಈ ಅನಿಸಿಕೆಗಳು ತೊಲಗುವಂತೆ ನಾನು ಹೇಗೆ ಮಾಡಬಲ್ಲಿ?
“ಸಲಿಂಗಿ ಕಾಮವನ್ನು ನಾನು ಈಗ ಅತಿ ಹೊಲಸಾಗಿ ಕಾಣುವುದಾದರೂ, ಕೆಲವೊಮ್ಮೆ ಅದಕ್ಕೆ ಆಕರ್ಷಿಸಲ್ಪಡುವುದನ್ನು ಕಂಡುಕೊಳ್ಳುತ್ತೇನೆ. ಈ ಅನಿಸಿಕೆಗಳು ಕೆಲವು ವೇಳೆ ನನ್ನನ್ನು ಹಗಲೂ ರಾತ್ರಿ ನೆಮ್ಮದಿಗೆಡಿಸುತ್ತವೆ. ‘ಈ ಭೀಷಣವಾದ ಅನಿಸಿಕೆಗಳನ್ನು ತೆಗೆದುಹಾಕು!’ ಎಂಬುದಾಗಿ ಯೆಹೋವನಿಗೆ ನಾನು ನಿರಂತರವಾಗಿ ಪ್ರಾರ್ಥಿಸಿದ್ದೇನೆ, ಅವು ಎಂದಾದರೂ ತೊಲಗಿಸಲ್ಪಡುವವೋ?”—ಡೆನಸ್.a
ಅನೇಕ ಕ್ರೈಸ್ತ ಯುವಜನರು—ಗಂಡುಗಳೂ ಹೆಣ್ಣುಗಳೂ—ಸಹಾಯಕ್ಕಾಗಿ ತದ್ರೀತಿಯ ಹತಾಶವಾದ ಬೇಡಿಕೆಗಳನ್ನು ಮಾಡಿದ್ದಾರೆ. ಸಲಿಂಗಿ ಕಾಮದೆಡೆಗೆ ಒಲವುಳ್ಳವರಾಗಿದ್ದಾರೆಂದು ಅವರಿಗನಿಸಿದರೂ ಯಾವುದು ಆ ಜೀವನ ಶೈಲಿಯ ಸ್ವರೂಪವನ್ನು ನಿರೂಪಿಸುತ್ತದೋ, ಆ ಸ್ವೇಚ್ಛಾ ಸಂಪರ್ಕ, ರೋಗ, ಮತ್ತು ನೀತಿರಾಹಿತ್ಯದ ಭಾಗವಾಗಿರದಂತೆ ಅವರು ಬಯಸುತ್ತಾರೆ. ಹೆಚ್ಚು ಪ್ರಾಮುಖ್ಯವಾಗಿ, ಅವರು ದೇವರನ್ನು ಸಂತೋಷಪಡಿಸಲು ಬಯಸುತ್ತಾರೆ, ಮತ್ತು ಆತನು ತನ್ನ ವಾಕ್ಯದಲ್ಲಿ ಸಲಿಂಗಿ ಕಾಮವನ್ನು ಸ್ಫುಟವಾಗಿ ಖಂಡಿಸುತ್ತಾನೆ.—ರೋಮಾಪುರ 1:26, 27; ಕೊಲೊಸ್ಸೆ 1:10.
ಸಲಿಂಗಿ ಕಾಮಿಗಳು ಬದಲಾಗುವುದು ಅಸಾಧ್ಯವೆಂಬುದಾಗಿ ಅನೇಕ ವೇಳೆ ಸಮರ್ಥಿಸಲ್ಪಡುತ್ತದೆ. ಹಾಗಿದ್ದರೂ ಇದು ನಿಜವಾಗಿರುವುದಿಲ್ಲ. ಕೆಲವು ಆದಿ ಕ್ರೈಸ್ತರು ಸಲಿಂಗಿ ಕಾಮವನ್ನು ಮುಂಚೆ ನಡೆಸುತ್ತಿದ್ದರು, ಆದರೆ ಅವರು ಬದಲಾದರು. (1 ಕೊರಿಂಥ 6:9-11) ಹೌದು, ಜನಸಾಮಾನ್ಯವಾಗಿರುವ ಕಾಲ್ಪನಿಕ ಕಥೆಗಳಿಗೆ ವ್ಯತಿರಿಕ್ತವಾಗಿ ಜನರು ಬದಲಾಗಬಲ್ಲರು ಮತ್ತು ಬದಲಾಗಬೇಕು. ಹಾಗಿದ್ದರೂ, ಒಬ್ಬ ಯುವ ವ್ಯಕ್ತಿ ಯಶಸ್ವಿಕರವಾಗಿ ಸಲಿಂಗಿ ಕಾಮದ ಕ್ರಿಯೆಗಳನ್ನು ತೊಡೆದುಹಾಕುತ್ತಿರುವಾಗಲೇ, ಸಲಿಂಗಿ ಕಾಮದ ಕಾಮನೆಯನ್ನು ಸಂಪೂರ್ಣವಾಗಿ ವರ್ಜಿಸುವುದನ್ನು ಅವನು ಅಥವಾ ಅವಳು ಕ್ಲಿಷ್ಟಕರವಾಗಿ ಕಂಡುಕೊಳ್ಳಬಹುದು. ಒಬ್ಬ ಯುವ ಪುರುಷನು ನಿವೇದಿಸಿದ್ದು: “ನಾನು ನನ್ನ ಅನಿಸಿಕೆಗಳನ್ನು ಬದಲಾಯಿಸಲು ಪ್ರಯತ್ನಿಸಿದ್ದೇನೆ. ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿದ್ದೇನೆ. ನಾನು ಬೈಬಲನ್ನು ಓದುತ್ತೇನೆ. ಇದರ ಕುರಿತಾದ ಭಾಷಣಗಳನ್ನು ಕೇಳಿದ್ದೇನೆ. ಆದರೆ ನನಗೆ ದಿಕ್ಕೇ ತೋಚದಂತಾಗಿದೆ.”
ಇದಕ್ಕೆ ಮಾಂತ್ರಿಕವಾದ ಅಥವಾ ತತ್ಕ್ಷಣದ ಪರಿಹಾರವಿರುವುದಿಲ್ಲ. ಡೆನಸ್ ಜ್ಞಾಪಕ ಮಾಡಿಕೊಳ್ಳುವುದು: “ಒಬ್ಬ ‘ಪುರುಷ’ನಾಗಿ ಪರಿವರ್ತಿತನಾಗುವ ಯತ್ನದಲ್ಲಿ ನನ್ನನ್ನು ನಾನೇ ಅಕ್ರಮ ಸ್ವೇಚ್ಛಾ ಸಂಪರ್ಕದ ಕ್ರಿಯೆಯೊಳಗೆ ನೂಕಿಕೊಂಡೆ. ಇದೆಲ್ಲವು ನಿಷ್ಫಲವಾಗಿತ್ತು ಮತ್ತು ಕೇವಲ ಹೆಚ್ಚು ನೋವನ್ನುಂಟುಮಾಡಿತು.” ಆದರೂ, ಬೈಬಲಿನ ತತ್ವಗಳನ್ನು ಅನ್ವಯಿಸುವುದರ ಮೂಲಕ, ಒಬ್ಬನು ಅಂಥ ಅನಿಸಿಕೆಗಳನ್ನು ನಿಭಾಯಿಸಬಲ್ಲನು.
ತಪ್ಪಾದ ಆಲೋಚನಾ ವಿನ್ಯಾಸಗಳನ್ನು ಗ್ರಹಿಸುವುದು
ಮೊಟ್ಟ ಮೊದಲಾಗಿ, ಆಲೋಚನೆಗಳು ಕ್ರಿಯೆಗಳಿಗಿಂತ ಮುಂದಾಗಿ ಬರುತ್ತವೆಂದು ತಿಳಿಯಿರಿ. (ಯೆಶಾಯ 55:6, 7; ಯಾಕೋಬ 1:14, 15) ವಾಸ್ತವವಾಗಿ, ಡಾ. ವೇನ್ ಡಬ್ಲ್ಯೂ. ಡಯರ್ ಅವಲೋಕಿಸುವುದು: “ಮೊದಲು ಆಲೋಚನೆಯೊಂದರ ಅನುಭವವನ್ನು ಪಡೆದಿರುವ ಹೊರತು ನೀವು (ಉದ್ವೇಗ) ಅನಿಸಿಕೆಯೊಂದನ್ನು ಪಡೆಯಲು ಸಾಧ್ಯವಿಲ್ಲ.” ಆದುದರಿಂದ ಸಲಿಂಗಿ ಕಾಮದ ಕಾಮನೆಗಳ ಮೂಲದಲ್ಲಿ ತನ್ನ ಕುರಿತಾದ, ವಿರುದ್ಧ ಲಿಂಗದ, ಪ್ರೀತಿಯ, ಮತ್ತು ಇತ್ಯಾದಿಯ ಕುರಿತಾದ ವಿಕೃತ ಆಲೋಚನೆಯ ಒಂದು ವಿನ್ಯಾಸವಿರಬಹುದು. ಒಬ್ಬನು ‘ನೂತನ ಮನಸ್ಸನ್ನು ಹೊಂದಿಕೊಂಡು’ ಅಂಥ ಆಲೋಚನೆಗಳನ್ನು ಬದಲಾಯಿಸಲು ಸಾಧ್ಯವಿರುವುದಕ್ಕಿಂತ ಮುಂಚೆ, ಅವುಗಳನ್ನು ಅವನು ಮೊದಲಾಗಿ ಗುರುತಿಸತಕ್ಕದ್ದು. (ರೋಮಾಪುರ 12:2) ಹೀಗೆ ಮಾಡುವುದು, ಒಬ್ಬನು ಸಮ ಲಿಂಗದ ಸದಸ್ಯರ ಕಡೆಗೆ ಏಕೆ ಸೆಳೆಯಲ್ಪಡುತ್ತಾನೆಂಬುದರ ಕುರಿತಾಗಿ ಒಂದು ಅಮೂಲ್ಯವಾದ ಒಳನೋಟವನ್ನು ಒಬ್ಬನಿಗೆ ಕೊಡಬಲ್ಲದು.
ಈ ರೀತಿಯಾಗಿ ಒಬ್ಬ ವ್ಯಕ್ತಿಯು ಹೇಗೆ ಮಾಡಬಲ್ಲನು? ಕೀರ್ತನೆಗಾರನು ಮಾಡಿದಂತೆ, ಒಂದು ವಿಧವು ಪ್ರಾರ್ಥಿಸುವುದಾಗಿದೆ: ‘ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ಮತ್ತು ನನ್ನಲ್ಲಿ ಯಾವುದಾದರೂ ಕೇಡಿನ ಮಾರ್ಗವಿದೆಯೋ ಎಂದು ನೋಡು.’ (ಕೀರ್ತನೆ 139:23, 24) ಒಬ್ಬನ ಅನಿಸಿಕೆಗಳನ್ನು ಒಬ್ಬ ಮುಂದಾಲೋಚನೆಯುಳ್ಳ ಮತ್ತು ಪ್ರೌಢ ಕ್ರೈಸ್ತನೊಂದಿಗೆ ಚರ್ಚಿಸುವುದು ಸಹ ಸಹಾಯಕಾರಿಯಾಗಿರಬಹುದು. ಜ್ಞಾನೋಕ್ತಿ 27:17 ಹೇಳುವಂತೆ, ‘ಕಬ್ಬಿಣವು ಕಬ್ಬಿಣವನ್ನು’ ಹರಿತಮಾಡುತ್ತದೆ. ಹೀಗೆ ಒಬ್ಬ ಯುವ ಪುರುಷನು, ಯಾರು ತಿಳಿವಳಿಕೆಗೆ ಮತ್ತು ಸಹಾನುಭೂತಿಯುಳ್ಳವನೆಂಬುದಕ್ಕೆ ಪ್ರಸಿದ್ಧನಾಗಿದ್ದನೋ ಅಂಥ ಒಬ್ಬ ಕ್ರೈಸ್ತ ಹಿರಿಯನಿಗೆ ತಿಳಿಸಿದನು. ತನ್ನ ರಹಸ್ಯವನ್ನು ಇನ್ನೊಬ್ಬನೊಂದಿಗೆ ಹೇಳುವುದು ಅವನಿಗೆ ಸುಲಭವಾಗಿರಲಿಲ್ಲವಾದರೂ, ಅವರ ಮಧ್ಯೆ ಒಂದು ಅಮೂಲ್ಯವಾದ ಸಂಬಂಧವು ವರ್ಧಿಸಿತು. “ಯಾವುದೇ ವಿಷಯದ ಕುರಿತು ಅವನೊಡನೆ ನಾನು ಮಾತನಾಡಬಲ್ಲೆನು,” ಎಂಬುದಾಗಿ ಅವನು ಹೇಳುತ್ತಾನೆ. ಹಿರಿಯನು ಕಿವಿಗೊಡುವುದು ಮಾತ್ರವಲ್ಲ, ಕೌಶಲಭರಿತವಾಗಿ ಪ್ರಶ್ನಿಸುವುದರ ಮೂಲಕ, ಯುವ ಪುರುಷನ ಅನಿಸಿಕೆಗಳನ್ನು ಮತ್ತು ಆಲೋಚನೆಗಳನ್ನು ಹೊರದೆಗೆಯಲು ಸಹಾಯವನ್ನೀಯುತ್ತಾನೆ.—ಹೋಲಿಸಿ ಜ್ಞಾನೋಕ್ತಿ 20:5.
ಒಬ್ಬ ಹುಡುಗನಿಗೆ ಒಬ್ಬ ತಿರಸ್ಕರಿಸುವ ಅಥವಾ ನಿಂದಿಸುವ ತಂದೆಯಿದ್ದಿರುವುದಾದರೆ, ತಂದೆಯ ಪ್ರೀತಿಗಾಗಿ ಇರುವ ಆವಶ್ಯಕತೆಯನ್ನು ತುಂಬಿಸಲಿಕ್ಕೆ ಸಮ ಲಿಂಗದ ಕಡೆಗೆ ಆಕರ್ಷಿತನಾಗುವುದು ವಾಸ್ತವಿಕವಾಗಿ ಒಂದು ನಿರರ್ಥಕ ಪ್ರಯತ್ನವೇ ಸರಿ ಎಂದು ಅವನು ಕಂಡುಕೊಳ್ಳಬಹುದು. ಒಬ್ಬ ಅನುಕರಣೀಯ ಪುರುಷ ಮಾದರಿಯು ಎಂದೂ ಇಲ್ಲದವನಾಗಿರುವುದರಿಂದ, ಯಾವುದನ್ನು ಡಾ. ಜೋಸೆಫ್ ನಿಕೊಲೇಸೀ “ಪುರುಷತ್ವದೊಂದಿಗೆ ಜತೆಗೂಡಿರುವ ಆ ವಿಶೇಷ ಲಕ್ಷಣಗಳ, ಅಂದರೆ ಬಲ, ಸಾಧನೆ, ಮತ್ತು ಶಕ್ತಿಗಳ ಸಂಬಂಧದಲ್ಲಿ ಬಲಹೀನತೆಯ ಮತ್ತು ಅನರ್ಹತೆಯ ಒಂದು ಪ್ರಜ್ಞೆ” ಎಂದು ಕರೆದರೋ, ಅದನ್ನು ಅವನು ಅನುಭವಿಸಬಹುದು. ಒಬ್ಬ ವ್ಯಕ್ತಿ ಯಾವ ನಿರ್ದಿಷ್ಟವಾದ ಸ್ವಭಾವ ಲಕ್ಷಣಗಳಲ್ಲಿ ತಾನು ಕೊರತೆಯುಳ್ಳವನಾಗಿದ್ದೇನೆಂದು ನೆನಸುತ್ತಾನೋ ಅದರಲ್ಲಿ ಪ್ರತಿಯೊಂದನ್ನು ಪರಿಗಣಿಸುವುದಾದರೆ, ಅವನ ಆಶ್ಚರ್ಯಕ್ಕೆ ಇತರ ಗಂಡಸರಲ್ಲಿ ಇವೇ ಸ್ವಭಾವ ಲಕ್ಷಣಗಳನ್ನು ಅವನು ಆಕರ್ಷಕವೆಂದು ಕಂಡುಕೊಳ್ಳುತ್ತಾನೆಂಬುದನ್ನು ಅವನು ಕಂಡುಹಿಡಿಯಬಹುದು.
ಗತಕಾಲದ ಘೋರ “ಪಾಠಗಳು”
ಇತರ ಯುವಜನರು ತಮ್ಮ ಸಮಸ್ಯೆ ಗತಕಾಲದ ರೋಗಾವಸ್ಥೆಗೆ ಸಂಬಂಧಿಸಿದೆ ಎಂದು ಕಂಡುಕೊಳ್ಳುತ್ತಾರೆ. ಒಬ್ಬ ಹುಡುಗಿ ಜ್ಞಾಪಕ ಮಾಡಿಕೊಳ್ಳುವುದು: “ಸಲಿಂಗಿ ಕಾಮದ ವಿಷಯಗಳನ್ನು ಹೊಂದಿದ್ದ ಅಶ್ಲೀಲ ವಿಷಯ ವರ್ಣನೆಯ ಸಾಹಿತ್ಯಕ್ಕೆ ನಾನು ಒಡ್ಡಲ್ಪಟ್ಟಿದ್ದೆ. ನಾನು ಅಸ್ವಾಭಾವಿಕವಾದ ಕಾಮನೆಗಳನ್ನು ಬೆಳೆಸಲು ತೊಡಗಿದೆ.” ಒಬ್ಬ ಯುವ ಪುರುಷನು ಹೇಳುವುದು: “ನನ್ನ ತಂದೆಯಿಂದ ನಾನು ಅಗಮ್ಯ ಗಮನಕ್ಕೆ ಬಲಿಯಾಗಿದ್ದೆ. ಫಲಿಂತಾಶವಾಗಿ, ಒಬ್ಬ ಗಂಡಸಿನೊಂದಿಗಿನ ಕಾಮವು ನನಗೆ ಸಹಜವಾಗಿ ತೋರಿತು.” ಅಂಥ ನೋಯಿಸುವ ಅನುಭವಗಳು ಅವರು ವಿರುದ್ಧಲಿಂಗದವರನ್ನು ದ್ವೇಷಿಸಲಿಕ್ಕೆ ಅಥವಾ ಅವರಿಗೆ ಭಯಪಡಲಿಕ್ಕೆ ಕೂಡಾ ಅಥವಾ ಪ್ರೀತಿಯನ್ನು ಶಾರೀರಿಕ ಆಪ್ತಸಂಬಂಧದೊಂದಿಗೆ ಸಮೀಕರಿಸಲಿಕ್ಕೆ ಬಲಿಯಾದವರಿಗೆ ಕಲಿಸಬಹುದು. ಒಬ್ಬ ಬಲಿಯು, ಹೀಗೆ ತನ್ನ ಲೈಂಗಿಕ ಕಾಮನೆಗಳನ್ನು “ಒಂದು ಶಾರೀರಿಕ ಆವಶ್ಯಕತೆಯಲ್ಲದ, ಕೋಮಲತೆಗಾಗಿ ಮತ್ತು ತಿಳಿವಳಿಕೆಗಾಗಿರುವ ಒಂದು ಭಾವನಾತ್ಮಕವಾದ ಆವಶ್ಯಕತೆ”ಯೆಂದು ವರ್ಣಿಸುತ್ತಾಳೆ.
ಆದರೆ ಸಲಿಂಗಿಕಾಮದ ಕಾರಣಗಳು ಕ್ಲಿಷ್ಟಕರವಾಗಿವೆ ಎಂಬುದು ಒಪ್ಪತಕ್ಕ ಸಂಗತಿ ಮತ್ತು ಅನೇಕ ವಿದ್ಯಾಮಾನಗಳು ಸರಳ ಸ್ಪಷ್ಟೀಕರಣಕ್ಕೆ ಅಸಾಧ್ಯ.b ಹಾಗಿದ್ದರೂ ತಪ್ಪಾದ ಆಲೋಚನೆಯನ್ನು ಪ್ರಚೋದಿಸಿದ್ದು ಯಾವುದೇ ಆಗಿರಲಿ, ಒಬ್ಬನು ಅದನ್ನು ಸರಿಪಡಿಸಲಿಕ್ಕಾಗಿ ಮಾಡಸಾಧ್ಯವಿರುವ ಅನೇಕ ವಿಷಯಗಳಿವೆ.
ನೂತನ ಮನಸ್ಸನ್ನು ಹೊಂದಿಕೊಳ್ಳುವುದು
ಉತ್ತಮವಾದ ವಿಧವು ದೇವರ ವಾಕ್ಯವನ್ನು ಬಳಸುವುದೇ ಆಗಿದೆ. ಉದಾಹರಣೆಗಾಗಿ, ತಾನು ಯಾವುದರಲ್ಲಿ ಕೊರತೆಯುಳ್ಳವನಾಗಿದ್ದೇನೆಂದು ನೆನಸುತ್ತಾನೋ, ಆ ಪುರುಷತ್ವದ ವಿಶಿಷ್ಟ ಗುಣಗಳನ್ನು ತೋರಿಸುವ ಪುರುಷರಿಗೆ ತಾನು ಆಕರ್ಷಿತನಾಗುತ್ತೇನೆಂದು ಕಂಡುಕೊಳ್ಳುವ ಒಬ್ಬ ಯುವ ಪುರುಷನನ್ನು ಪರಿಗಣಿಸಿರಿ. ಅಥವಾ ವಿರುದ್ಧ ಲಿಂಗದ ಭಯವುಳ್ಳ ಒಬ್ಬ ಯುವ ಸ್ತ್ರೀಯನ್ನು ಪರಿಗಣಿಸಿರಿ. ಪುರುಷತ್ವದ ಒಂದು ಸ್ವಸ್ಥಕರವಾದ ನೋಟವನ್ನು ಇಬ್ಬರೂ ವರ್ಧಿಸಬಲ್ಲ ಒಂದು ವಿಧವು, ಯೇಸುವಿನ ಉದಾಹರಣೆಯನ್ನು ಪರಿಶೀಲಿಸುವುದೇ ಆಗಿದೆ. (1 ಪೇತ್ರ 2:21) ಸೌಮ್ಯತೆಯ ಮೂಲಕ ಸಮತೆಯನ್ನು ಹೊಂದಿದ್ದ ಪುರುಷತ್ವ ಶಕ್ತಿಯ ಒಬ್ಬ ಪರಿಪೂರ್ಣ ಮಾದರಿ ಅವನಾಗಿದ್ದನು. (ಮತ್ತಾಯ 19:14; ಯೋಹಾನ 19:5) ಒಬ್ಬ ಯುವ ಪುರುಷನು ಹೀಗೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ಓದುವುದು ಸಹಾಯಕಾರಿಯೆಂದು ಕಂಡುಕೊಳ್ಳುತ್ತಾನೆ.c ಅವನು ಹೇಳುವುದು, “ಯೇಸುವನ್ನು ತಿಳಿಯುವುದು ಒಬ್ಬ ಪುರುಷನು ಹೇಗಿರಬೇಕೆಂಬುದರ ನನ್ನ ಪ್ರತಿಬಿಂಬವನ್ನು ಪುನರ್ಸ್ಫುಟಗೊಳಿಸುತ್ತದೆ.”
ಕಾಮ, ಪ್ರೀತಿ, ಮತ್ತು ಸಮಲಿಂಗ ಮಿತ್ರತ್ವದಂಥ ವಿಷಯಗಳೊಂದಿಗಿನ ದೇವರ ವೀಕ್ಷಣದ ಕುರಿತಾಗಿರುವ ಬೈಬಲ್ ವಚನಗಳನ್ನು ಮನನ ಮಾಡುವುದು, ತದ್ರೀತಿಯಾಗಿ ಒಬ್ಬನ ಆಲೋಚನೆಯನ್ನು ಸರಿಪಡಿಸುವಲ್ಲಿ ಸಹಾಯಕಾರಿಯಾಗಿದೆ.—ಆದಿಕಾಂಡ 1:27, 28; ರೂತಳು 1:16, 17; 1 ಸಮುವೇಲ 18:1; ಜ್ಞಾನೋಕ್ತಿ 5:18, 19; 1 ಕೊರಿಂಥ 13:4-8.
ತಪ್ಪಾದ ಆಲೋಚನೆಗಳ ಮೇಲೆ ಲಕ್ಷ್ಯವಿಡುವುದರಿಂದ ದೂರವಿರುವುದು ಸಹ ಪ್ರಾಮುಖ್ಯವಾಗಿದೆ. ಹಲವು ಸಂದರ್ಭಗಳಲ್ಲಿ ಈ ಪ್ರಚೋದನೆಗಳು ವಿಶೇಷವಾಗಿ ಒಬ್ಬನು ಏಕಾಂಗಿಯಾಗಿರುವಾಗ, ಖಿನ್ನನಾಗಿರುವಾಗ, ಅಥವಾ ನಿರಾಶನಾಗಿರುವಾಗ ಪ್ರಬಲವಾಗಿರುತ್ತವೆ. (ಜ್ಞಾನೋಕ್ತಿ 24:10) “ನಾವೇನಾಗಿದ್ದೇವೂ ಅದನ್ನು ಪರಿವರ್ತಿಸಲಿಕ್ಕಿರುವ ಏಕಮಾತ್ರ ಹಾದಿ ಕೆಟ್ಟ ಆಲೋಚನೆಗಳನ್ನು ಒಳ್ಳೆಯವುಗಳನ್ನಾಗಿ ಪರಿವರ್ತಿಸುವುದೇ ಆಗಿದೆ,” ಎಂದು ಒಬ್ಬ ಕ್ರೈಸ್ತ ಸ್ತ್ರೀ ಹೇಳುತ್ತಾಳೆ. ಆಕೆಯ ಮೇಲೆ ದುಶ್ಶೀಲದ ಪ್ರಚೋದನೆಯೊಂದು ಬರುವಾಗ, ಸಲಿಂಗಿ ಕಾಮದ ಕುರಿತಾದ ದೇವರ ವೀಕ್ಷಣವನ್ನು ಅವಳು ಜ್ಞಾಪಕಕ್ಕೆ ತಂದುಕೊಳ್ಳುತ್ತಾಳೆ. ಒಬ್ಬ ಹದಿವಯಸ್ಕ ಹುಡುಗನು ಹೇಳುವುದು: “ಸಲಿಂಗಿ ಕಾಮದ ಪ್ರಚೋದನೆಯು ಬರುವಾಗಲೆಲ್ಲಾ, ನನ್ನ ಅಚ್ಚುಮೆಚ್ಚಿನ ಬೈಬಲ್ ವಚನವನ್ನು ಮನನ ಮಾಡುತ್ತೇನೆ.” (ಹೋಲಿಸಿ 2 ಕೊರಿಂಥ 10:4; ಫಿಲಿಪ್ಪಿ 4:8.) ಇತರರು, ನಿದ್ದೆ ಹೋಗಲು ವಾಚ್ ಟವರ್ ಸೊಸೈಟಿಯ ವಿವಿಧ ಬೈಬಲ್ ಆಧರಿತ ಆಡಿಓಕ್ಯಾಸೆಟ್ಗಳ ನಾದವು ಸಹಾಯಕಾರಿಯಾಗಿದೆ ಎಂಬುದಾಗಿ ಕಂಡುಕೊಂಡಿದ್ದಾರೆ.
ಹೇಗೆ ನಮ್ಮ ಆಲೋಚನೆಯು ನಾವು ವರ್ತಿಸುವ ರೀತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೋ ಹಾಗೆಯೇ, ನಾವು ಹೇಗೆ ವರ್ತಿಸುತ್ತೇವೂ ಅದು ನಮ್ಮ ಆಲೋಚನೆಯ ಮತ್ತು ಅನಿಸಿಕೆಯ ಮೇಲೆ ಪರಿಣಾಮವನ್ನುಂಟು ಮಾಡಸಾಧ್ಯವಿದೆ. ಆದುದರಿಂದ ಒಬ್ಬನು ತಪ್ಪಾದ ಕಾಮನೆಯನ್ನು ಪ್ರೇರಿಸುವ ಅಥವಾ ಬಲಪಡಿಸುವ ವರ್ತನೆಯನ್ನು ಮತ್ತು ಸಹವಾಸವನ್ನು ಸಹ ನಿಲ್ಲಿಸಿ ಬಿಡಬೇಕು. (1 ಕೊರಿಂಥ 15:33) ಒಬ್ಬನನ್ನು ದುಷ್ಪ್ರೇರಣೆಗೆ ಗುರಿಪಡಿಸಸಾಧ್ಯವಿರುವ ಸಾರ್ವಜನಿಕ ಶೌಚಾಲಯಗಳ, ಕಡಲ ಕರೆಗಳ, ಬಟ್ಟೆ ಬದಲಾಯಿಸುವ ಸ್ಥಳಗಳ, ಮತ್ತು ಇತರ ಸ್ಥಳಗಳ ಸಂಬಂಧದಲ್ಲಿ ಸಹ ‘ಸದಾ ಎಚ್ಚರಿಕೆಯಿಂದಿರುವ’ ಆವಶ್ಯಕತೆ ಒಬ್ಬನಿಗಿರಬಹುದು.—ಕೀರ್ತನೆ 119:9.
ತೊರೆಯಬೇಕಾದ ಇನ್ನೊಂದು ಅನಾರೋಗ್ಯದ ಚಾಳಿಯು ಮುಷ್ಟಿಮೈಥುನವಾಗಿದೆ. ಅನೇಕ ಸಲಿಂಗಿಕಾಮಿ ಪುರುಷರಿಗೆ ಮತ್ತು ಸ್ತ್ರೀಯರಿಗೆ, ಇದೊಂದು ಹತೋಟಿಗೆ ಮೀರಿದ ಬಲವಾದ ಪ್ರಚೋದನೆಯಾಗಿದೆ. “ನಾನು ಆರು ವರ್ಷ ಪ್ರಾಯದವನಾಗಿದ್ದಂದಿನಿಂದಲೂ ನನಗೆ ಮುಷ್ಟಿಮೈಥುನದ ಕ್ಲೇಶವಿತ್ತು” ಎಂದು ಒಬ್ಬ ಯುವ ಪುರುಷನು ನಿವೇದಿಸಿದನು. “ಲೈಂಗಿಕ ಮನಶ್ಚಿತ್ರ ಕಲ್ಪನೆಯು ನನ್ನ ಸಲಿಂಗಿ ಕಾಮದ ಅನಿಸಿಕೆಗಳನ್ನು ಬಲಪಡಿಸಿತು.” ಈ ಅಶುದ್ಧವಾದ ಚಟವನ್ನು ಎದುರಿಸಿರಿ!d—ಕೊಲೊಸ್ಸೆ 3:5.
ಮತ್ತೊಂದು ಕಡೆ, ಒಬ್ಬನು ವರ್ತನೆಯ ಸ್ವಸ್ಥ ವಿನ್ಯಾಸಗಳನ್ನು ನೆಲೆಗೊಳಿಸುವುದು ಸಹ ಪ್ರಾಮುಖ್ಯವಾಗಿದೆ. ಒಬ್ಬ ಯುವ ಪುರುಷನು ಪುರುಷತ್ವದ ಸ್ವಭಾವ ಲಕ್ಷಣಗಳನ್ನು ವರ್ಧಿಸುವುದಾದರೆ, ಅವನು ಇತರ ಪುರುಷರಿಗೆ ಕಡಿಮೆ ಆಕರ್ಷಿಸಲ್ಪಡಬಹುದೆಂದು ಕೆಲವರು ಭಾವಿಸುತ್ತಾರೆ. ಒಬ್ಬ ಮಗುವಿನೋಪಾದಿ ಎಂದೂ ಒಂದು ಬಲವಾದ ಅನುಕರಣೀಯ ಪುರುಷ ಮಾದರಿಯನ್ನು ಹೊಂದಿಲ್ಲದಿರುವುದಾದರೆ, ಇದನ್ನು ಯಾವ ರೀತಿಯಲ್ಲಿ ಮಾಡಬೇಕೆಂದು ಒಬ್ಬ ಯುವ ಪುರುಷನಿಗೆ ತಿಳಿಯದಿರಬಹುದು ನಿಶ್ಚಯ. ಅವನು ತನ್ನ ಸ್ವಂತ ದೇಹದೊಂದಿಗೆ ಕೂಡ ಅಸಮಾಧಾನ ಪಡಬಹುದು ಮತ್ತು ಕೆಲಸಕ್ಕೆ ಒದಗದವನು ಅಥವಾ ಪೌರುಷ ಕಳೆದವನು ಎಂದೆಣಿಸಬಹುದು. ಶಾರೀರಿಕ ಕೆಲಸದಲ್ಲಿ, ಮಿತವಾದ ವ್ಯಾಯಾಮದಲ್ಲಿ, ಅಥವಾ ಬಿಗುಪಿಲ್ಲದ ಕ್ರೀಡೆಯ ಚಟುವಟಿಕೆಯಲ್ಲಿ ಒಳಗೂಡುವುದು ಈ ಸಂಬಂಧವಾಗಿ ಆಗಿಂದಾಗ್ಗೆ ಸಹಾಯವನ್ನೀಯುತ್ತದೆ. (ಹೋಲಿಸಿ 1 ತಿಮೊಥೆಯ 4:8.) ಹೇಗೆ ಒಬ್ಬ ಯುವ ಪುರುಷನಾದ ತಿಮೊಥೆಯನು ಅಪೊಸ್ತಲ ಪೌಲನಿಗೆ ಒಬ್ಬ ಮಗನಂತಾದನೋ ಹಾಗೆಯೇ, ಒಬ್ಬ ಸಮತೆಯುಳ್ಳ ಹಿರಿಯ ಕ್ರೈಸ್ತನೊಂದಿಗೆ ಒಂದು ಸ್ವಸ್ಥವಾದ ತಿಳಿವಳಿಕೆಯನ್ನು ವೃದ್ಧಿಸುವುದು ಒಬ್ಬನಿಗೆ ವಿಶೇಷವಾಗಿ ಸಹಾಯಕಾರಿಯಾಗಿ ಕಂಡುಬರಬಹುದು. (ಫಿಲಿಪ್ಪಿ 2:19-22; 2 ತಿಮೊಥೆಯ 3:10) ಸ್ಫುಟವಾದ ವರ್ತನೆಯ ಎಲ್ಲೆಗೆರೆಗಳನ್ನು ಸ್ಥಾಪಿಸುವ ಮೂಲಕ ಮತ್ತು ತೆರೆದ ಸಂವಹನವನ್ನು ಹಸನುಗೊಳಿಸುವ ಮೂಲಕ, ಅಂಥ ಒಂದು ಸಂಬಂಧವು ಹೃದಯೋಲ್ಲಾಸವೂ ವಿಶ್ವಾಸಪಾತ್ರವೂ ಆಗಿದ್ದರೂ, ಪ್ರಣಯದ ಯಾವುದೇ ಸೂಚನೆಗಳಿಂದ ಮುಕ್ತವಾಗಿರಸಾಧ್ಯವಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಒಬ್ಬನು ಒಂದು ಪ್ರಬಲವಾದ ಆತ್ಮಿಕ ಆಕ್ರಮಣ ರೀತಿಯನ್ನು ತೆಗೆದುಕೊಳ್ಳತಕ್ಕದ್ದು. ಕ್ರಮವಾದ ಬೈಬಲ್ ಅಧ್ಯಯನ, ಪ್ರಾರ್ಥನೆ, ಮತ್ತು ಒಬ್ಬರ ನಂಬಿಕೆಯನ್ನು ಇತರರೊಂದಿಗೆ ಹಂಚುವುದು ಒಬ್ಬರ ಮನಸ್ಸನ್ನು ಒಂದು ಆತ್ಮಿಕ ಪಥದ ಮೇಲಿರಿಸುವಂತೆ ಸಹಾಯ ಮಾಡುತ್ತದೆ. (ಕೀರ್ತನೆ 55:22; 119:11; ರೋಮಾಪುರ 10:10) ಕೆಲವೊಮ್ಮೆ ಅನರ್ಹತನದ ಅನಿಸಿಕೆಗಳು ಜೊತೆ ಕ್ರೈಸ್ತರೊಡನೆ ಇರುವುದನ್ನು ಕ್ಲಿಷ್ಟಕರವಾಗಿ ಮಾಡಬಹುದು, ಆದರೆ ಬೈಬಲ್ ಒಬ್ಬನು ತನ್ನನ್ನೇ ಬೇರ್ಪಡಿಸಿಕೊಳ್ಳುವುದರ ವಿರುದ್ಧ ಎಚ್ಚರಿಸುತ್ತದೆ. (ಜ್ಞಾನೋಕ್ತಿ 18:1) ಉಭಯ ಲಿಂಗ ಜಾತಿಯ ಕ್ರೈಸ್ತರೊಂದಿಗೆ ಹಿತಕರವಾದ ಸಹವಾಸವು ಒಬ್ಬನನ್ನು ಸಮತೆಯಿಂದ ನಿಲ್ಲಲು ಸಹಾಯ ಮಾಡಸಾಧ್ಯವಿದೆ.—ಇಬ್ರಿಯ 10:24, 25.
ನೀವು ಸಲಿಂಗಿ ಕಾಮದ ಕಾಮನೆಯಿಂದ ಪೀಡಿಸಲ್ಪಡುತ್ತಿರುವುದಾದರೆ, ಈ ಸಲಹೆಗಳು ಸಹಾಯಕವಾಗಿ ಪರಿಣಮಿಸಬಹುದು. ಕೆಟ್ಟ ಅನಿಸಿಕೆಗಳು ಪಟ್ಟುಹಿಡಿಯುವುದಾದರೂ, ಅತಿಶಯವಾಗಿ ಎದೆಗುಂದದಿರಿ. ದೇವರು ನಿಮ್ಮ ಅನಿಸಿಕೆಗಳನ್ನು ಗ್ರಹಿಸುವವನಾಗಿದ್ದಾನೆ ಮತ್ತು ಯಾರು ತನ್ನನ್ನು ಸೇವಿಸಲು ಹೆಣಗುತ್ತಾರೋ ಅವರಿಗೆ ಸಹಾನುಭೂತಿಯುಳ್ಳವನಾಗಿದ್ದಾನೆ. (1 ಯೋಹಾನ 3:19, 20) ನೂತನ ಲೋಕದಲ್ಲಿ, ನಮ್ಮನ್ನು ಬಾಧಿಸುವ ಸಕಲ ವ್ಯಾಧಿಗಳ ವಾಸಿಯಾಗುವಿಕೆಯನ್ನು ಮಾನವಕುಲವು ಅನುಭವಿಸುವುದು. (ಪ್ರಕಟನೆ 21:3, 4) ಅಷ್ಟರ ತನಕ, ದೇವರ ಮೇಲೆ ಆತುಕೊಳ್ಳಿರಿ ಮತ್ತು ತಪ್ಪಾದ ಕಾಮನೆಗಳ ವಿರುದ್ಧ ಹೋರಾಡಿರಿ. (ಗಲಾತ್ಯ 6:9) ಸಮಯದ ಮತ್ತು ದೃಢಸಂಕಲ್ಪದ ಪ್ರಯಾಸದಿಂದ, ಪ್ರಾಯಶಃ ತಪ್ಪಾದ ಕಾಮನೆಗಳು ತಾವೇ ಉಡುಗಿ ಹೋಗಸಾಧ್ಯವಿದೆ.
[ಅಧ್ಯಯನ ಪ್ರಶ್ನೆಗಳು]
a ಹೆಸರುಗಳಲ್ಲಿ ಕೆಲವು ಬದಲಾಯಿಸಲ್ಪಟ್ಟಿವೆ.
b ಫೆಬ್ರವರಿ 8, 1995ರ “ಯುವ ಜನರು ಪ್ರಶ್ನಿಸುವುದು . . . ” ಎಂಬ ನಮ್ಮ ಸಂಚಿಕೆಯನ್ನು ನೋಡಿ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ, ಇವರಿಂದ ಪ್ರಕಾಶಿತ.
d ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) (ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ, ಇವರಿಂದ ಪ್ರಕಾಶಿತ) ಎಂಬ ಪುಸ್ತಕದ 25 ಮತ್ತು 26ನೆಯ ಅಧ್ಯಾಯಗಳು, ಈ ದುಶ್ಚಟವನ್ನು ಒಬ್ಬ ಯುವ ವ್ಯಕ್ತಿಯು ಜಯಿಸಲು ಸಹಾಯಕಾರಿಯಾದ ಪ್ರಾಯೋಗಿಕ ಸಲಹೆಗಳನ್ನು ಒಳಗೊಂಡಿವೆ.
[ಪುಟ 35 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೇಸುವಿನ ಉದಾಹರಣೆಯನ್ನು ಪರಿಶೀಲಿಸುವ ಮೂಲಕ ಪುರುಷತ್ವದ ಒಂದು ಸ್ವಸ್ಥ ನೋಟವನ್ನು ವರ್ಧಿಸಿರಿ