ಬೈಬಲ್ ಸಮಯಗಳಲ್ಲಿ ಯೆರೂಸಲೇಮ್ ಪ್ರಾಕ್ತನಶಾಸ್ತ್ರವು ಏನನ್ನು ಬಯಲುಪಡಿಸುತ್ತದೆ?
ವಿಶೇಷವಾಗಿ 1967ರಂದಿನಿಂದ ಯೆರೂಸಲೇಮಿನಲ್ಲಿ, ಆಸಕ್ತಿಕರವಾದ ಪ್ರಮುಖ ಪ್ರಾಕ್ತನಶಾಸ್ತ್ರಸಂಬಂಧವಾದ ಕಾರ್ಯಕಲಾಪಗಳು ಸಂಭವಿಸಿವೆ. ಭೂಶೋಧನೆಮಾಡಲ್ಪಟ್ಟ ಅನೇಕ ನಿವೇಶನಗಳು, ಈಗ ಸಾರ್ವಜನಿಕರಿಗಾಗಿ ತೆರೆದಿಡಲ್ಪಟ್ಟಿವೆ. ಆದುದರಿಂದ ನಾವು ಅವುಗಳಲ್ಲಿ ಕೆಲವು ನಿವೇಶನಗಳನ್ನು ಸಂದರ್ಶಿಸಿ, ಪ್ರಾಕ್ತನಶಾಸ್ತ್ರವು ಹೇಗೆ ಬೈಬಲ್ ಇತಿಹಾಸದೊಂದಿಗೆ ಸರಿಹೊಂದುತ್ತದೆ ಎಂಬುದನ್ನು ಅವಲೋಕಿಸೋಣ.
ರಾಜ ದಾವೀದನ ಯೆರೂಸಲೇಮ್
ಯಾವ ಕ್ಷೇತ್ರದ ಮೇಲೆ ಪುರಾತನ ದಾವೀದನಗರವು ಕಟ್ಟಲ್ಪಟ್ಟಿತ್ತೋ ಆ ಕ್ಷೇತ್ರವನ್ನು ಬೈಬಲು ಚೀಯೋನ್ ಪರ್ವತವೆಂದು ಸೂಚಿಸುತ್ತಿದ್ದು, ಅದು ಆಧುನಿಕ ಯೆರೂಸಲೇಮಿನ ಮುಖ್ಯಪಟ್ಟಣದಲ್ಲಿ ತೀರ ಅಮುಖ್ಯವಾಗಿ ತೋರುತ್ತದೆ. 1978-85ರ ನಡುವೆ, ಮಾಜಿ ಪ್ರೊಫೆಸರ್ ಯಿಗೆಲ್ ಶೈಲೋರಿಂದ ನಡೆಸಲ್ಪಟ್ಟ ದಾವೀದನಗರದ ಭೂಶೋಧನೆಗಳು, ಆ ಬೆಟ್ಟದ ಪೂರ್ವ ಪಕ್ಕದಲ್ಲಿ ಬಹಳ ದೊಡ್ಡದಾದ ಒಂದು ಮೆಟ್ಟುಗಲ್ಲಿನ ರಚನೆ, ಅಥವಾ ಆಸರೆಯ ಗೋಡೆಯು ಇರುವುದನ್ನು ಬಯಲುಪಡಿಸಿದವು.
ಅದು, ಯಾವುದರ ಮೇಲೆ ಯೆಬೂಸಿಯರು (ದಾವೀದನು ಆ ಪ್ರದೇಶವನ್ನು ವಶಪಡಿಸಿಕೊಳ್ಳುವ ಮೊದಲು ಇದ್ದ ನಿವಾಸಿಗಳು) ಒಂದು ಕೋಟೆಯನ್ನು ಕಟ್ಟಿದರೋ, ಆ ತಾರಸಿಗೋಡೆಗಳ ಒಂದು ದೊಡ್ಡ ಅಡಿಕಟ್ಟಡದ ಅವಶೇಷವಾಗಿರಬೇಕೆಂದು ಪ್ರೊಫೆಸರ್ ಶೈಲೋ ಪ್ರತಿಪಾದಿಸಿದರು. ಈ ತಾರಸಿಗೋಡೆಗಳ ಮೇಲೆ ಕಂಡುಬಂದ ಮೆಟ್ಟುಗಲ್ಲಿನ ರಚನೆಯು, ಯೆಬೂಸಿಯರ ಕೋಟೆಯ ನಿವೇಶನದಲ್ಲಿ ದಾವೀದನಿಂದ ಕಟ್ಟಲ್ಪಟ್ಟ ಹೊಸ ದುರ್ಗಕ್ಕೆ ಸೇರಿದ್ದಾಗಿತ್ತೆಂದು ಅವರು ವಿವರಿಸಿದರು. 2 ಸಮುವೇಲ 5:9ರಲ್ಲಿ ನಾವು ಓದುವುದು: “ದಾವೀದನು ಆ ಕೋಟೆಗೆ ದಾವೀದನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.”
ಈ ರಚನೆಯ ಸಮೀಪವೇ ನಗರದ ಪುರಾತನ ಜಲ ವ್ಯವಸ್ಥೆಗಳ ಪ್ರವೇಶ ಮಾರ್ಗಗಳು ಇವೆ—ಇವುಗಳಲ್ಲಿ ಕೆಲವು ದಾವೀದನ ಕಾಲದಿಂದ ಅಸ್ತಿತ್ವದಲ್ಲಿರುವಂತೆ ತೋರುತ್ತವೆ. ಬೈಬಲಿನಲ್ಲಿ ಯೆರೂಸಲೇಮಿನ ಜಲ ಸುರಂಗ ವ್ಯವಸ್ಥೆಯ ಕುರಿತಾಗಿ ಕೊಡಲ್ಪಟ್ಟಿರುವ ಕೆಲವು ಹೇಳಿಕೆಗಳು, ಪ್ರಶ್ನೆಗಳಿಗೆ ಅವಕಾಶಕೊಟ್ಟಿವೆ. ದೃಷ್ಟಾಂತಕ್ಕಾಗಿ, ದಾವೀದನು ತನ್ನ ಸೈನಿಕರಿಗೆ ಹೇಳಿದ್ದೇನೆಂದರೆ, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲ ಸುರಂಗದ ಮೂಲಕ” ವೈರಿಗಳನ್ನು “ಸಂಪರ್ಕಿಸಲಿ.” (2 ಸಮುವೇಲ 5:8, NW) ದಾವೀದನ ಸೇನಾಧಿಪತಿಯಾದ ಯೋವಾಬನು ಇದನ್ನು ಮಾಡಿದನು. “ಜಲ ಸುರಂಗ” ಎಂಬ ಅಭಿವ್ಯಕ್ತಿಯ ನಿರ್ದಿಷ್ಟಾರ್ಥವೇನು?
ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ರಾಜ ಹಿಜ್ಕೀಯನ ಯಂತ್ರಶಿಲ್ಪಿಗಳಿಂದ ಕೊರೆಯಲ್ಪಟ್ಟಿರಬಹುದಾದ ಮತ್ತು 2 ಅರಸುಗಳು 20:20 ಹಾಗೂ 2 ಪೂರ್ವಕಾಲವೃತ್ತಾಂತ 32:30ರಲ್ಲಿ ಸೂಚಿಸಲ್ಪಟ್ಟಿರುವ, ಪ್ರಸಿದ್ಧ ಸಿಲೋವ ಸುರಂಗದ ಕುರಿತು ಇನ್ನಿತರ ಪ್ರಶ್ನೆಗಳು ಎಬ್ಬಿಸಲ್ಪಟ್ಟಿವೆ. ಸುರಂಗಕೊರೆಯುವವರ ಎರಡು ತಂಡಗಳು, ವಿರುದ್ಧ ದಿಕ್ಕಿನ ತುದಿಗಳಿಂದ ಕೊರೆಯುತ್ತಿದ್ದು, ಒಂದನ್ನೊಂದು ಸಂಧಿಸಲು ಹೇಗೆ ಸಾಧ್ಯವಾಯಿತು? ನೇರವಾದ ಸುರಂಗವನ್ನು ಕೊರೆಯುವುದಕ್ಕೆ ಬದಲಾಗಿ, ಸುರಂಗವನ್ನು ಗಮನಾರ್ಹವಾಗಿ ಉದ್ದವಾಗಿ ಮಾಡುತ್ತಾ, ಅವರು ಡೊಂಕುಡೊಂಕಾದ ಹಾದಿಯನ್ನು ಏಕೆ ಆರಿಸಿಕೊಂಡರು? ವಿಶೇಷವಾಗಿ ಅವರು ಎಣ್ಣೆಯಿಂದ ಉರಿಯುತ್ತಿದ್ದ ದೀಪಗಳನ್ನು ಉಪಯೋಗಿಸಿದ್ದಿರುವುದು ಸಂಭವನೀಯವಾಗಿರುವುದರಿಂದ, ಅವರು ಉಸಿರಾಡಲು ಸಾಕಷ್ಟು ಗಾಳಿಯನ್ನು ಹೇಗೆ ಪಡೆದುಕೊಂಡರು?
ಬೈಬಲ್ಸಂಬಂಧಿತ ಪ್ರಾಕ್ತನಶಾಸ್ತ್ರ ಪುನರ್ವಿಮರ್ಶೆ (ಇಂಗ್ಲಿಷ್) ಎಂಬ ಪತ್ರಿಕೆಯು ಅಂತಹ ಪ್ರಶ್ನೆಗಳಿಗೆ ಸಂಭಾವ್ಯ ಉತ್ತರಗಳನ್ನು ನೀಡಿದೆ. ಈ ಭೂಶೋಧನೆಯ ಭೂವಿಜ್ಞಾನ ಸಂಬಂಧಿತ ಸಮಾಲೋಚಕರಾಗಿದ್ದ ಡ್ಯಾನ್ ಗಿಲ್, ಹೀಗೆ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ: “ದಾವೀದನಗರದ ಕೆಳಗೆ ಚೆನ್ನಾಗಿ ಅಭಿವೃದ್ಧಿಹೊಂದಿರುವ ನೈಸರ್ಗಿಕ ಕಲ್ಲು ಕಾಲುವೆ (ಕಾರ್ಸ್ಟ್) ವ್ಯವಸ್ಥೆ ಇದೆ. ಕಾರ್ಸ್ಟ್ ಎಂಬುದು ಭೂವಿಜ್ಞಾನಸಂಬಂಧವಾದ ಒಂದು ಪದವಾಗಿದ್ದು, ಅಂತರ್ಜಲವು ನೆಲದಡಿಯಿರುವ ಬಂಡೆಕಲ್ಲುಗಳ ಮೂಲಕ ಜಿನುಗಿ, ಅವುಗಳ ಮೂಲಕ ಹರಿಯುವಾಗ ಉಂಟಾದ ನದಿಯ ಮಡುವಿನ ಅಸ್ತವ್ಯಸ್ತ ಪ್ರದೇಶವನ್ನು, ನೆಲಗವಿಗಳನ್ನು ಹಾಗೂ ಕಾಲುವೆಗಳನ್ನು ವರ್ಣಿಸುತ್ತದೆ. . . . ದಾವೀದನಗರದ ಕೆಳಗಿನ ಭೂಮ್ಯಂತರ್ಗತ ಜಲ ಸರಬರಾಯಿ ಯಂತ್ರಾಲಯಗಳ ಕುರಿತಾದ ನಮ್ಮ ಭೂವೈಜ್ಞಾನಿಕ ಪರೀಕ್ಷಣೆಯು, ಕಾರ್ಯಾರ್ಥಕ ಜಲ ಸರಬರಾಯಿ ಯಂತ್ರಾಲಯಗಳಾಗಿ ಸಂಘಟಿಸಲ್ಪಟ್ಟ, ನೈಸರ್ಗಿಕ (ಕಾರ್ಸ್ಟಿಕ್) ದ್ರವೀಭವನ ಕಾಲುವೆಗಳು ಹಾಗೂ ತೋಡುದಾರಿಗಳ ಕೌಶಲಭರಿತ ಮಾನವ ವಿಸ್ತರಣೆಯಿಂದ ಅವುಗಳು ಅಗತ್ಯವಾಗಿ ರೂಪಿಸಲ್ಪಟ್ಟಿದ್ದವೆಂಬುದನ್ನು ಸೂಚಿಸುತ್ತದೆ.”
ಸಿಲೋವ ಸುರಂಗವನ್ನು ಹೇಗೆ ಅಗೆಯಲಾಯಿತೆಂಬುದನ್ನು ವಿವರಿಸಲು ಇದು ಸಹಾಯ ಮಾಡಬಹುದು. ಬೆಟ್ಟದ ಕೆಳಗೆ ನೈಸರ್ಗಿಕ ಕಾಲುವೆಯ ಡೊಂಕು ಡೊಂಕಾದ ಪಥವನ್ನು ಅದು ಅನುಸರಿಸಿದ್ದಿರಸಾಧ್ಯವಿದೆ. ಪ್ರತಿಯೊಂದು ತುದಿಯಿಂದ ಕಾರ್ಯನಡಿಸುತ್ತಿದ್ದ ತಂಡಗಳು, ಈಗಾಗಲೇ ಇದ್ದಂತಹ ನೆಲಗವಿಗಳನ್ನು ಮಾರ್ಪಡಿಸುವ ಮೂಲಕ ತಾತ್ಕಾಲಿಕವಾದ ಸುರಂಗಗಳನ್ನು ತೋಡಿದ್ದಿರಸಾಧ್ಯವಿದೆ. ತದನಂತರ ನೀರು ಗೀಹೋನ್ ಬುಗ್ಗೆಯಿಂದ, ನಗರದ ಗೋಡೆಗಳೊಳಗೆ ಇದ್ದಿರಬಹುದಾದ ಸಿಲೋವ ಕೊಳಕ್ಕೆ ಹರಿಯುವಂತೆ ಮಾಡಲಿಕ್ಕಾಗಿ, ಇಳಿಜಾರಾದ ಕಾಲುವೆಯು ತೋಡಲ್ಪಟ್ಟಿತು. ಇದು ನಿಜವಾಗಿಯೂ ಯಂತ್ರಶಿಲ್ಪಿಗಳ ಒಂದು ಸಾಹಸಕಾರ್ಯವಾಗಿತ್ತು. ಆ ಸುರಂಗದ ಉದ್ದವು 533 ಮೀಟರುಗಳಷ್ಟಾಗಿದ್ದರೂ, ಅದರ ಎರಡು ತುದಿಗಳ ಎತ್ತರದ ವ್ಯತ್ಯಾಸವು ಕೇವಲ 32 ಸೆಂಟಿಮೀಟರುಗಳಾಗಿದೆ.
ಪುರಾತನ ನಗರದ ನೀರಿನ ಮುಖ್ಯ ಮೂಲವು ಗೀಹೋನ್ ಬುಗ್ಗೆಯಾಗಿತ್ತೆಂಬುದನ್ನು ವಿದ್ವಾಂಸರು ಬಹಳ ಸಮಯದ ಹಿಂದೆಯೇ ಮನಗಂಡಿದ್ದಾರೆ. ಅದು ನಗರದ ಗೋಡೆಗಳ ಹೊರಗೆ ಇತ್ತಾದರೂ, ಒಂದು ಸುರಂಗವನ್ನು ಹಾಗೂ 11 ಮೀಟರುಗಳಷ್ಟು ಆಳದ ತೋಡುದಾರಿಯನ್ನು ತೋಡಲು ಸ್ಥಳಾವಕಾಶಮಾಡಿಕೊಡಲು ಸಾಕಾಗುವಷ್ಟು ಸಮೀಪದಲ್ಲಿತ್ತು. ಮತ್ತು ಇದು ಆ ನಗರದ ನಿವಾಸಿಗಳು, ಸಂರಕ್ಷಣಾ ಗೋಡೆಗಳ ಹೊರಗೆ ಹೋಗದೆಯೇ ನೀರನ್ನು ಪಡೆದುಕೊಳ್ಳಲು ಶಕ್ತರಾಗುವಂತೆ ಮಾಡಸಾಧ್ಯವಿತ್ತು. ಇದು ವಾರನ್ನ ತೋಡುದಾರಿ ಎಂದೇ ಪ್ರಸಿದ್ಧವಾಗಿದೆ. 1867ರಲ್ಲಿ ಈ ವ್ಯವಸ್ಥೆಯನ್ನು ಕಂಡುಹಿಡಿದ ಚಾರ್ಲ್ಸ್ ವಾರನ್ನ ನೆನಪಾರ್ಥವಾಗಿ ಇದನ್ನು ಹೀಗೆ ಹೆಸರಿಸಲಾಗಿದೆ. ಆದರೆ ಆ ಸುರಂಗವನ್ನೂ ತೋಡುದಾರಿಯನ್ನೂ ಯಾವಾಗ ಮಾಡಲಾಯಿತು? ಅವು ದಾವೀದನ ಕಾಲದಲ್ಲಿ ಅಸ್ತಿತ್ವದಲ್ಲಿದ್ದವೊ? ಈ ಜಲ ಸುರಂಗವು ಯೋವಾಬನಿಂದ ಉಪಯೋಗಿಸಲ್ಪಟ್ಟಿತ್ತೊ? ಡ್ಯಾನ್ ಗಿಲ್ ಉತ್ತರಿಸುವುದು: “ನಿಜವಾಗಿಯೂ ವಾರನ್ಸ್ ಶ್ಯಾಫ್ ಒಂದು ನೈಸರ್ಗಿಕ ನದಿಯ ಮಡುವಾಗಿತ್ತೋ ಎಂಬುದನ್ನು ಪರೀಕ್ಷಿಸಲಿಕ್ಕಾಗಿ, ಅದರ ಅಸ್ತವ್ಯಸ್ತವಾದ ಗೋಡೆಗಳಿಂದ, ಕಾರ್ಬನ್-14ಕ್ಕಾಗಿ ಸುಣ್ಣದಿಂದ ಕೂಡಿದ ಒಂದು ಚೂರಿನ ಅವಶೇಷವನ್ನು ನಾವು ಪರಿಶೀಲಿಸಿದೆವು. ಅದರಲ್ಲಿ ಅದು ಸೇರಿರಲಿಲ್ಲ; ಆ ಚೂರು 40,000 ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆಯೆಂಬುದನ್ನು ಇದು ಸೂಚಿಸಿತು: ಆ ತೋಡುದಾರಿಯು ಮನುಷ್ಯನಿಂದ ಅಗೆಯಲ್ಪಟ್ಟಿರಸಾಧ್ಯವಿಲ್ಲ ಎಂಬುದಕ್ಕೆ ಇದು ಸ್ಪಷ್ಟವಾದ ಪುರಾವೆಯನ್ನು ಒದಗಿಸುತ್ತದೆ.”
ಹಿಜ್ಕೀಯನ ಕಾಲದ ಅವಶೇಷಗಳು
ಅಶ್ಶೂರ ಜನಾಂಗವು ತನ್ನ ಶತ್ರುಗಳನ್ನೆಲ್ಲಾ ಹೊಡೆದೋಡಿಸುತ್ತಿದ್ದ ಸಮಯದಲ್ಲಿ ರಾಜ ಹಿಜ್ಕೀಯನು ಜೀವಿಸಿದನು. ಅವನ ಆಳಿಕೆಯ ಆರನೆಯ ವರ್ಷದಲ್ಲಿ, ಹತ್ತು-ಕುಲದ ರಾಜ್ಯದ ರಾಜಧಾನಿಯಾಗಿದ್ದ ಸಮಾರ್ಯವನ್ನು ಅಶ್ಶೂರರು ಮುತ್ತಿಗೆಹಾಕಿ ವಶಪಡಿಸಿಕೊಂಡರು. ಎಂಟು ವರ್ಷಗಳ ತರುವಾಯ (ಸಾ.ಶ.ಪೂ. 732) ಅಶ್ಶೂರರು ಪುನಃ ಹಿಂದಿರುಗಿ, ಯೆಹೂದ ಹಾಗೂ ಯೆರೂಸಲೇಮಿಗೆ ಬೆದರಿಕೆಹಾಕಿದರು. ಎರಡನೆಯ ಪೂರ್ವಕಾಲವೃತ್ತಾಂತ 32:1-8, ಹಿಜ್ಕೀಯನ ರಕ್ಷಣಾ ಸೇನಾವ್ಯೂಹವನ್ನು ವರ್ಣಿಸುತ್ತದೆ. ಈ ಕಾಲಾವಧಿಯಿಂದ ಯಾವುದಾದರೂ ದೃಶ್ಯ ಪುರಾವೆಗಳಿವೆಯೊ?
ಹೌದು, 1969ರಲ್ಲಿ, ಪ್ರೊಫೆಸರ್ ನಮಾನ್ ಆವೀಗಾಡರು, ಈ ಕಾಲಾವಧಿಯ ಅವಶೇಷಗಳನ್ನು ಕಂಡುಹಿಡಿದರು. ಭೂಶೋಧನೆಗಳು, ಬಹಳ ದೊಡ್ಡ ಗೋಡೆಯ ಒಂದು ಭಾಗವನ್ನು ಬಯಲುಪಡಿಸಿದವು. ಅದರ ಒಂದು ಪಕ್ಕವು 40 ಮೀಟರುಗಳಷ್ಟು ಉದ್ದವೂ 7 ಮೀಟರುಗಳಷ್ಟು ಅಗಲವೂ, ಅಂದಾಜುಗಳಿಗನುಸಾರ 8 ಮೀಟರುಗಳಷ್ಟು ಎತ್ತರವೂ ಇತ್ತು. ಆ ಗೋಡೆಯ ಒಂದು ಭಾಗವು ತಳಬಂಡೆಯ ಮೇಲೂ ಇನ್ನೊಂದು ಭಾಗವು ಇತ್ತೀಚೆಗೆ ಕಟ್ಟಲ್ಪಟ್ಟ ಮನೆಗಳ ಮೇಲೂ ನೆಲೆಯೂರಿತ್ತು. ಈ ಗೋಡೆಯನ್ನು ಯಾರು ಕಟ್ಟಿದರು ಮತ್ತು ಯಾವಾಗ ಕಟ್ಟಿದರು? “ಬೈಬಲಿನಲ್ಲಿರುವ ಎರಡು ಉದ್ಧೃತ ಭಾಗಗಳು, ಆ ಗೋಡೆಯ ದಿನಾಂಕವನ್ನೂ ಅದರ ಉದ್ದೇಶವನ್ನೂ ಸರಿಯಾಗಿ ಕಂಡುಹಿಡಿಯುವಂತೆ ಆವೀಗಾಡ್ರಿಗೆ ಸಹಾಯಮಾಡಿದವು” ಎಂದು ಪ್ರಾಕ್ತನಶಾಸ್ತ್ರಸಂಬಂಧಿತವಾದ ಒಂದು ಪತ್ರಿಕೆಯು ವರದಿಸುತ್ತದೆ. ಈ ಉದ್ಧೃತ ಭಾಗಗಳನ್ನು ಹೀಗೆ ಓದಲಾಗುತ್ತದೆ: “ಅರಸನು ಧೈರ್ಯಗೊಂಡು ಅಲ್ಲಲ್ಲಿ ಬಿದ್ದುಹೋದ ಪೌಳಿಗೋಡೆಯನ್ನು ಜೀರ್ಣೋದ್ಧಾರಮಾಡಿಸಿ ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿ”ದನು. (2 ಪೂರ್ವಕಾಲವೃತ್ತಾಂತ 32:5) “ಪೌಳಿಗೋಡೆಯನ್ನು ಭದ್ರಪಡಿಸುವದಕ್ಕೆ ಮನೆಗಳನ್ನು ಕೆಡವಿಬಿಟ್ಟಿ.” (ಯೆಶಾಯ 22:10) ಇಂದು ಹಳೆಯ ನಗರದ ಯೆಹೂದಿ ನಿವಾಸಸ್ಥಾನದಲ್ಲಿ, ಬ್ರಾಡ್ ವಾಲ್ (ಅಗಲವಾದ ಗೋಡೆ) ಎಂದು ಕರೆಯಲ್ಪಡುವುದರ ಒಂದು ಭಾಗವನ್ನು ಸಂದರ್ಶಕರು ನೋಡಸಾಧ್ಯವಿದೆ.
ಈ ಸಮಯದಲ್ಲಿ ಯೆರೂಸಲೇಮು, ಈ ಮುಂಚೆ ಅಭಿಪ್ರಯಿಸಿದ್ದುದಕ್ಕಿಂತಲೂ ಹೆಚ್ಚು ವಿಸ್ತೀರ್ಣವುಳ್ಳದ್ದಾಗಿತ್ತು—ಇದು ಯೆರೂಸಲೇಮು ಅಶ್ಶೂರರಿಂದ ಪರಾಜಿತಗೊಳಿಸಲ್ಪಟ್ಟ ಬಳಿಕ, ಉತ್ತರ ರಾಜ್ಯದಿಂದ ನಿರಾಶ್ರಿತರು ಇಲ್ಲಿಗೆ ಪ್ರವಹಿಸಿದ್ದರಿಂದಾಗಿರಬಹುದು—ಎಂದೂ ಅನೇಕ ಭೂಶೋಧನೆಗಳು ಬಯಲುಪಡಿಸುತ್ತವೆ. ಯೆಬೂಸಿಯರ ನಗರವು ಸುಮಾರು 15 ಎಕರೆಗಳಷ್ಟು ಪ್ರದೇಶವನ್ನು ಆವರಿಸಿತೆಂದು ಪ್ರೊಫೆಸರ್ ಶೈಲೋರವರು ಅಂದಾಜುಮಾಡಿದರು. ಸೊಲೊಮೋನನ ಕಾಲದಲ್ಲಿ ಅದು ಬಹುಮಟ್ಟಿಗೆ 40 ಎಕರೆಗಳಷ್ಟು ಪ್ರದೇಶವನ್ನು ಆವರಿಸಿತು. 300 ವರ್ಷಗಳ ಬಳಿಕ, ರಾಜ ಹಿಜ್ಕೀಯನ ಕಾಲದಷ್ಟಕ್ಕೆ ಆ ನಗರದ ಭದ್ರಪಡಿಸಲ್ಪಟ್ಟ ಪ್ರದೇಶವು, ಸುಮಾರು 150 ಎಕರೆಗಳ ವರೆಗೆ ವಿಸ್ತಾರ್ಯಗೊಂಡಿತ್ತು.
ಪ್ರಥಮ ದೇವಾಲಯದ ಕಾಲಾವಧಿಯ ಸಮಾಧಿಗಳು
ಪ್ರಥಮ ದೇವಾಲಯದ ಕಾಲಾವಧಿಯ, ಅಂದರೆ, ಬಾಬೆಲಿನವರು ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನು ನಾಶಪಡಿಸುವುದಕ್ಕೆ ಮೊದಲು ಇದ್ದ ಸಮಾಧಿಗಳು, ಮಾಹಿತಿಯ ಇನ್ನೊಂದು ಮೂಲವಾಗಿವೆ. 1979/80ರಲ್ಲಿ, ಹಿನ್ನೋಮ್ ಕಣಿವೆಯ ಕಡಿದಾದ ಇಳಿಜಾರು ಪ್ರದೇಶಗಳ ಮೇಲೆ ಹೆಣಹೂಳುವ ಗುಹೆಗಳ ಒಂದು ಗುಂಪನ್ನು ಅಗೆದು ಶೋಧಿಸಿದಾಗ, ಪ್ರದರ್ಶನಾತ್ಮಕವಾದ ಕಂಡುಹಿಡಿತಗಳು ಮಾಡಲ್ಪಟ್ಟವು. “ಯೆರೂಸಲೇಮಿನಲ್ಲಿನ ಪ್ರಾಕ್ತನಶಾಸ್ತ್ರದ ಸಂಶೋಧನೆಗಳ ಕುರಿತಾದ ಇಡೀ ಇತಿಹಾಸದಲ್ಲಿ, ಅದರಲ್ಲಿರಬೇಕಾಗಿದ್ದ ಸಮಸ್ತ ವಸ್ತುಗಳಿದ್ದ ಕೆಲವೇ ಪ್ರಥಮ ದೇವಾಲಯ ಭಂಡಾರಗಳಲ್ಲಿ ಇದು ಒಂದಾಗಿದೆ. ಅದರಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ವಸ್ತುಗಳಿದ್ದವು” ಎಂದು ಪ್ರಾಕ್ತನಶಾಸ್ತ್ರಜ್ಞರಾದ ಗೇಬ್ರಿಯಲ್ ಬಾರ್ಕೆ ಹೇಳುತ್ತಾರೆ. ಅವರು ಮುಂದುವರಿಸುವುದು: “ಇಸ್ರೇಲಿನಲ್ಲಿ, ಹಾಗೂ ವಿಶೇಷವಾಗಿ ಯೆರೂಸಲೇಮಿನಲ್ಲಿ ಕಾರ್ಯನಡಿಸುತ್ತಿರುವ ಪ್ರತಿಯೊಬ್ಬ ಪ್ರಾಕ್ತನಶಾಸ್ತ್ರಜ್ಞನ ಅತ್ಯಂತ ಅಚ್ಚುಮೆಚ್ಚಿನ ನಿರೀಕ್ಷೆಯು, ಲಿಖಿತ ವಸ್ತುವಿಷಯವನ್ನು ಕಂಡುಹಿಡಿಯುವುದೇ ಆಗಿದೆ.” ಎರಡು ಚಿಕ್ಕ ಬೆಳ್ಳಿಯ ಸುರುಳಿಗಳನ್ನು ಕಂಡುಹಿಡಿಯಲಾಯಿತು. ಅವುಗಳಲ್ಲಿ ಏನಿತ್ತು?
ಬಾರ್ಕೆ ವಿವರಿಸುವುದು: “ಬಿಚ್ಚಿಕೊಂಡಿದ್ದಂತಹ ಬೆಳ್ಳಿಯ ಪಟ್ಟೆಯನ್ನು ನಾನು ನೋಡಿ, ಅದನ್ನು ಭೂತಗನ್ನಡಿಯ ಕೆಳಗಿಟ್ಟಾಗ, ಬೆಳ್ಳಿಯ ತುಂಬಾ ತೆಳುವಾದ ಹಾಗೂ ನಾಜೂಕಾದ ತಗಡಿನ ಮೇಲೆ ಹರಿತವಾದ ಒಂದು ಉಪಕರಣದಿಂದ ಗೀಚಲ್ಪಟ್ಟು, ನವಿರಾಗಿ ಕೆತ್ತಲ್ಪಟ್ಟ ಅಕ್ಷರಗಳಿಂದ ಅದರ ಮೇಲ್ಮೈಯು ಆವೃತವಾಗಿದ್ದುದನ್ನು ನಾನು ನೋಡಶಕ್ತನಾದೆ. . . . ಆ ಕೆತ್ತನೆ ಲಿಪಿಯಲ್ಲಿ ಸ್ಪಷ್ಟವಾಗಿ ಕಂಡುಬರುವ ದೈವಿಕ ನಾಮವು, ಪುರಾತನ ಹೀಬ್ರು ಲಿಪಿಯಲ್ಲಿ ಬರೆಯಲ್ಪಟ್ಟ ನಾಲ್ಕು ಹೀಬ್ರು ಅಕ್ಷರಗಳಿಂದ—ಯಾಡ್ಹೆವಾಹೆ—ರಚಿಸಲ್ಪಟ್ಟಿದೆ.” ತದನಂತರದ ಒಂದು ಪ್ರಕಾಶನದಲ್ಲಿ, ಬಾರ್ಕೆ ಕೂಡಿಸುವುದು: “ನಮ್ಮ ಆಶ್ಚರ್ಯಕ್ಕೆ, ಬೆಳ್ಳಿಯ ಎರಡೂ ಬಿಲ್ಲೆಗಳ ಮೇಲೆ ಆಶೀರ್ವಚನ ಸೂತ್ರಗಳು ಕೆತ್ತಲ್ಪಟ್ಟಿದ್ದು, ಅವು ಬೈಬಲ್ಸಂಬಂಧಿತ ಯಾಜಕ ಆಶೀರ್ವಾದಗಳೊಂದಿಗೆ ಬಹುಮಟ್ಟಿಗೆ ಹೋಲುವವುಗಳಾಗಿದ್ದವು.” (ಅರಣ್ಯಕಾಂಡ 6:24-26) ಯೆರೂಸಲೇಮಿನಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಕೆತ್ತನೆ ಲಿಪಿಯಲ್ಲಿ, ಯೆಹೋವನ ನಾಮವು ಕಂಡುಕೊಳ್ಳಲ್ಪಟ್ಟದ್ದು ಇದೇ ಮೊದಲ ಬಾರಿಯಾಗಿತ್ತು.
ವಿದ್ವಾಂಸರು ಈ ಬೆಳ್ಳಿಯ ಸುರುಳಿಗಳ ದಿನಾಂಕವನ್ನು ಹೇಗೆ ಗೊತ್ತುಮಾಡಿದರು? ಪ್ರಮುಖವಾಗಿ ಯಾವುದರೊಳಗೆ ಅವುಗಳನ್ನು ಕಂಡುಕೊಳ್ಳಲಾಯಿತೋ ಆ ಪ್ರಾಕ್ತನಶಾಸ್ತ್ರಸಂಬಂಧಿತ ಪ್ರಕರಣಗಳಿಂದಲೇ. ಸಾ.ಶ.ಪೂ. ಏಳನೆಯ ಹಾಗೂ ಆರನೆಯ ಶತಮಾನಗಳಿಗೆ ನಿರ್ದೇಶಿಸುವ, ಕಾಲವನ್ನು ಗೊತ್ತುಮಾಡಬಹುದಾದ 300ಕ್ಕಿಂತಲೂ ಹೆಚ್ಚು ಮಣ್ಣಿನ ಪಾತ್ರೆಗಳ ತುಂಡುಗಳು ಆ ಭಂಡಾರದಲ್ಲಿ ಕಂಡುಕೊಳ್ಳಲ್ಪಟ್ಟವು. ದಿನಾಂಕ ಗೊತ್ತುಮಾಡಲ್ಪಟ್ಟ ಇತರ ಕೆತ್ತನೆಗಳಿಗೆ ಹೋಲಿಸಿದಾಗ, ಈ ಲಿಪಿಪ್ರತಿಯು ಅದೇ ಕಾಲಾವಧಿಗೆ ಸೂಚಿತವಾಗಿದೆ. ಆ ಸುರುಳಿಗಳು, ಯೆರೂಸಲೇಮಿನಲ್ಲಿನ ಇಸ್ರೇಲ್ ಮ್ಯೂಸಿಯಮ್ನಲ್ಲಿ ಪ್ರದರ್ಶಿಸಲ್ಪಟ್ಟಿವೆ.
ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ವಿಧ್ವಂಸ
ನೆಬೂಕದ್ನೆಚ್ಚರನ ಸೇನೆಯು ನಗರಕ್ಕೆ ಬೆಂಕಿಹಚ್ಚಿತೆಂಬುದನ್ನು ವರದಿಸುತ್ತಾ, ಬೈಬಲು ಸಾ.ಶ.ಪೂ. 607ರಲ್ಲಿನ ಯೆರೂಸಲೇಮಿನ ವಿಧ್ವಂಸದ ಕುರಿತಾಗಿ, 2 ಅರಸುಗಳು 25ನೆಯ ಅಧ್ಯಾಯ, 2 ಪೂರ್ವಕಾಲವೃತ್ತಾಂತ 36ನೆಯ ಅಧ್ಯಾಯ, ಮತ್ತು ಯೆರೆಮೀಯ 39ನೆಯ ಅಧ್ಯಾಯದಲ್ಲಿ ತಿಳಿಸುತ್ತದೆ. ಇತ್ತೀಚಿನ ಭೂಶೋಧನೆಗಳು ಈ ಐತಿಹಾಸಿಕ ವೃತ್ತಾಂತವನ್ನು ದೃಢಪಡಿಸಿವೆಯೊ? ಪ್ರೊಫೆಸರ್ ಯಿಗೆಲ್ ಶೈಲೋರಿಗನುಸಾರ, “ಬೈಬಲಿನಲ್ಲಿ [ಬಾಬೆಲಿನವರು ನಾಶಗೈದದ್ದರ] ಕುರಿತಾದ ಪುರಾವೆಯು . . . ಸ್ಫುಟವಾದ ಪ್ರಾಕ್ತನಶಾಸ್ತ್ರಸಂಬಂಧಿತ ಪುರಾವೆಯಿಂದ ಪೂರಕಗೊಳಿಸಲ್ಪಟ್ಟಿದೆ; ವಿವಿಧ ರಚನೆಗಳು ಸಂಪೂರ್ಣವಾಗಿ ವಿಧ್ವಂಸಗೊಳಿಸಲ್ಪಟ್ಟದ್ದು, ಹಾಗೂ ಮನೆಗಳ ಬಗೆ ಬಗೆಯ ಮರದ ಭಾಗಗಳನ್ನು ದಳ್ಳುರಿಯೊಂದು ಕಬಳಿಸಿಬಿಟ್ಟಿತ್ತು.” ಅವರು ಇನ್ನೂ ಹೇಳಿಕೆಯನ್ನಿತ್ತದ್ದು: “ಈ ವಿಧ್ವಂಸದ ಜಾಡುಗಳು, ಯೆರೂಸಲೇಮಿನಲ್ಲಿ ನಡೆಸಲ್ಪಟ್ಟಿರುವ ಪ್ರತಿಯೊಂದು ಭೂಶೋಧನೆಗಳಲ್ಲಿ ಕಂಡುಕೊಳ್ಳಲ್ಪಟ್ಟಿವೆ.”
ಸಂದರ್ಶಕರು, 2,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ಸಂಭವಿಸಿದ ಈ ವಿಧ್ವಂಸದ ಅವಶೇಷಗಳನ್ನು ನೋಡಸಾಧ್ಯವಿದೆ. ಇಸ್ರೇಲೈಟ್ ಟವರ್ (ಇಸ್ರಾಯೇಲ್ಯ ಗೋಪುರ), ಬರ್ನ್ಟ್ ರೂಮ್ (ಸುಟ್ಟ ಕೋಣೆ), ಮತ್ತು ಬುಲೆ ಹೌಸ್ (ಮಣ್ಣಿನ ಮುದ್ರೆಗಳ ಮನೆ)—ಇವು ಸಂರಕ್ಷಿಸಲ್ಪಟ್ಟು, ಸಾರ್ವಜನಿಕರಿಗೆ ನೋಡಲಿಕ್ಕಾಗಿ ಅನುಮತಿಸಲ್ಪಟ್ಟಿರುವ ಜನಪ್ರಿಯ ಪ್ರಾಕ್ತನಶಾಸ್ತ್ರಸಂಬಂಧಿತ ನಿವೇಶನಗಳ ಹೆಸರುಗಳಾಗಿವೆ. ಪ್ರಾಕ್ತನಶಾಸ್ತ್ರಜ್ಞರಾದ ಜೇನ್ ಎಮ್. ಕೇಹಿಲ್ ಹಾಗೂ ಡೇವಿಡ್ ಟಾರ್ಲರರು, ಪುರಾತನ ಯೆರೂಸಲೇಮ್ ಬಯಲುಗೊಳಿಸಲ್ಪಟ್ಟದ್ದು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಸಾರಾಂಶಿಸುವುದು: “ಬಾಬೆಲಿನವರಿಂದ ಯೆರೂಸಲೇಮಿನ ಮೇಲೆ ನಡೆಸಲ್ಪಟ್ಟ ಬಹು ದೊಡ್ಡ ವಿಧ್ವಂಸವು, ಬರ್ನ್ಟ್ ರೂಮ್ ಮತ್ತು ಬುಲೆ ಹೌಸ್ಗಳಂತಹ, ನೆಲವನ್ನು ಅಗೆದುತೆಗೆದಾಗ ಸಿಕ್ಕಿದಂತಹ ಸೀದು ಹೋಗಿರುವ ಅವಶೇಷಗಳ ದಪ್ಪವಾದ ಪದರಗಳ ರಚನೆಗಳಲ್ಲಿ ಮಾತ್ರವಲ್ಲ, ಪೂರ್ವ ದಿಕ್ಕಿನ ಇಳುಕಲನ್ನು ಆವರಿಸುತ್ತಿರುವಂತೆ ಕಂಡುಬಂದ, ಕುಸಿದುಬಿದ್ದ ಕಟ್ಟಡಗಳ ದೊಡ್ಡ ಕಲ್ಲಿನ ಹೆಂಟೆಗಳಲ್ಲಿಯೂ ಸುವ್ಯಕ್ತವಾಗಿದೆ. ಈ ನಗರದ ವಿಧ್ವಂಸದ ಕುರಿತಾದ ಬೈಬಲ್ಸಂಬಂಧಿತ ವರ್ಣನೆಗಳು . . . ಪ್ರಾಕ್ತನಶಾಸ್ತ್ರಸಂಬಂಧಿತ ಪುರಾವೆಗೆ ಅನುಪೂರಕವಾಗಿವೆ.”
ಹೀಗೆ, ದಾವೀದನ ಸಮಯದಿಂದ ಸಾ.ಶ.ಪೂ. 607ರಲ್ಲಿ ಅದು ನಾಶವಾಗುವ ವರೆಗಿನ, ಯೆರೂಸಲೇಮಿನ ಕುರಿತಾದ ಬೈಬಲಿನ ಚಿತ್ರಣವು, ಕಳೆದ 25 ವರ್ಷಗಳಲ್ಲಿ ಮಾಡಲ್ಪಟ್ಟ ಪ್ರಾಕ್ತನಶಾಸ್ತ್ರಸಂಬಂಧಿತ ಭೂಶೋಧನೆಗಳಿಂದ ಅನೇಕ ವಿಧಗಳಲ್ಲಿ ದೃಢೀಕರಿಸಲ್ಪಟ್ಟಿದೆ. ಆದರೆ ಸಾ.ಶ. ಮೊದಲನೆಯ ಶತಮಾನದ ಯೆರೂಸಲೇಮಿನ ಕುರಿತಾಗಿ ಏನು?
ಯೇಸುವಿನ ದಿನದಲ್ಲಿ ಯೆರೂಸಲೇಮ್
ಭೂಶೋಧನೆಗಳು, ಬೈಬಲ್, ಮೊದಲನೆಯ ಶತಮಾನದ ಯೆಹೂದಿ ಇತಿಹಾಸಕಾರನಾದ ಜೋಸೀಫಸ್, ಹಾಗೂ ಇನ್ನಿತರ ಮೂಲಗಳು, ರೋಮನರು ಸಾ.ಶ. 70ರಲ್ಲಿ ಯೆರೂಸಲೇಮನ್ನು ನಾಶಪಡಿಸುವುದಕ್ಕೆ ಮೊದಲು, ಯೇಸುವಿನ ದಿನದಲ್ಲಿದ್ದ ಯೆರೂಸಲೇಮನ್ನು ಚಿತ್ರೀಕರಿಸಲು ವಿದ್ವಾಂಸರಿಗೆ ಸಹಾಯ ಮಾಡುತ್ತವೆ. ಯೆರೂಸಲೇಮಿನಲ್ಲಿ ದೊಡ್ಡ ಹೋಟೆಲೊಂದರ ಹಿಂದೆ ಪ್ರದರ್ಶಿಸಲ್ಪಟ್ಟ ಒಂದು ಸೂಕ್ಷ್ಮ ಪ್ರತಿಕೃತಿಯು, ಹೊಸ ಭೂಶೋಧನೆಗಳು ಬಯಲುಪಡಿಸುವ ವಿಷಯಗಳಿಗನುಸಾರ ಕ್ರಮವಾಗಿ ಕಾಲೋಚಿತಗೊಳಿಸಲ್ಪಡುತ್ತಿದೆ. ಈ ನಗರದ ಪ್ರಮುಖ ವೈಶಿಷ್ಟ್ಯವು ದೇವಾಲಯ ಬೆಟ್ಟ (ಟೆಂಪ್ಲ್ ಮೌಂಟ್) ಆಗಿತ್ತು. ಸೊಲೊಮೋನನ ಸಮಯದ ದೇವಾಲಯಕ್ಕೆ ಹೋಲಿಸುವಾಗ, ಹೆರೋದನು ಇದರ ಗಾತ್ರವನ್ನು ಎರಡರಷ್ಟು ವಿಸ್ತರಿಸಿದ್ದನು. ಪುರಾತನ ಜಗತ್ತಿನಲ್ಲಿ ಇದು ಅತ್ಯಂತ ದೊಡ್ಡ ಮನುಷ್ಯ ನಿರ್ಮಿತ ವೇದಿಕೆಯಾಗಿದ್ದು, ಸುಮಾರು 480 ಮೀಟರುಗಳಷ್ಟು ಅಗಲವೂ 280 ಮೀಟರುಗಳಷ್ಟು ಉದ್ದವೂ ಇತ್ತು. ಕಟ್ಟಡದ ಕೆಲವು ಕಲ್ಲುಗಳು 50 ಟನ್ನುಗಳಷ್ಟು ಭಾರವಿದ್ದು, ಅವುಗಳಲ್ಲಿ ಒಂದು, ಹತ್ತಿರ ಹತ್ತಿರ 400 ಟನ್ನುಗಳಷ್ಟಿದ್ದು, ಒಬ್ಬ ವಿದ್ವಾಂಸನಿಗನುಸಾರ, “ಪುರಾತನ ಜಗತ್ತಿನಲ್ಲೇ ಎಲ್ಲಿಯೂ ಇರದ ಅಸಮಾನವಾದ ಗಾತ್ರ”ದ್ದಾಗಿತ್ತು.
“ಈ ದೇವಾಲಯವನ್ನು ಕೆಡವಿರಿ; ನಾನು ಮೂರು ದಿನದಲ್ಲಿ ಅದನ್ನು ಎಬ್ಬಿಸುವೆನು” ಎಂದು ಯೇಸು ಹೇಳಿದ್ದನ್ನು ಕೇಳಿದಾಗ ಕೆಲವು ಜನರು ತಲ್ಲಣಗೊಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವನು “ತನ್ನ ದೇಹವೆಂಬ ದೇವಾಲಯ”ವನ್ನು ಅರ್ಥೈಸಿದನಾದರೂ, ಅವನು ಬೃಹದಾಕಾರದ ದೇವಾಲಯದ ಕಟ್ಟಡವನ್ನು ಅರ್ಥೈಸಿದನೆಂದು ಅವರು ನೆನಸಿದರು. ಆದುದರಿಂದಲೇ ಅವರು ಹೇಳಿದ್ದು: “ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು; ನೀನು ಮೂರು ದಿನದಲ್ಲಿ ಅದನ್ನು ಎಬ್ಬಿಸುವಿಯೋ?” (ಯೋಹಾನ 2:19-21) ದೇವಾಲಯ ಬೆಟ್ಟದ ಸುತ್ತಮುತ್ತಲಿನ ಭೂಶೋಧನೆಗಳ ಫಲಿತಾಂಶವಾಗಿ, ಇಂದು ಸಂದರ್ಶಕರು ಯೇಸುವಿನ ಕಾಲದ ಗೋಡೆಗಳ ಭಾಗಗಳನ್ನೂ ಇತರ ವಾಸ್ತುಶಿಲ್ಪೀಯ ವೈಶಿಷ್ಟ್ಯಗಳನ್ನೂ ನೋಡಸಾಧ್ಯವಿದೆ ಮತ್ತು ಅವನು ದೇವಾಲಯದ ದಕ್ಷಿಣ ದ್ವಾರಗಳ ವರೆಗೆ ನಡೆದಾಡಿದ್ದಿರಬಹುದಾದ ಮೆಟ್ಟಿಲುಗಳ ಮೇಲೆ ನಡೆದಾಡಲೂ ಸಾಧ್ಯವಿದೆ.
ದೇವಾಲಯ ಬೆಟ್ಟದ ಪಶ್ಚಿಮ ಗೋಡೆಯಿಂದ ಸ್ವಲ್ಪ ದೂರದಲ್ಲಿ, ಹಳೆಯ ನಗರದ ಯೆಹೂದಿ ನಿವಾಸಸ್ಥಾನದಲ್ಲಿ, ಬರ್ನ್ಟ್ ಹೌಸ್ ಹಾಗೂ ಹೆರೋಡಿಯನ್ ಕ್ವಾರ್ಟರ್ ಎಂದು ಪ್ರಸಿದ್ಧವಾಗಿರುವ, ಸಾ.ಶ. ಮೊದಲನೆಯ ಶತಮಾನದ ಚೆನ್ನಾಗಿ ಜೀರ್ಣೋದ್ಧಾರಮಾಡಲ್ಪಟ್ಟ ಎರಡು ಭೂಶೋಧನಾ ನಿವೇಶನಗಳು ಇವೆ. ಬರ್ನ್ಟ್ ಹೌಸ್ನ ಕಂಡುಹಿಡಿತದ ಬಳಿಕ, ಪ್ರಾಕ್ತನಶಾಸ್ತ್ರಜ್ಞರಾದ ನಮಾನ್ ಆವೀಗಾಡರು ಬರೆದುದು: “ಯೆರೂಸಲೇಮಿನ ವಿಧ್ವಂಸದ ಸಮಯದಲ್ಲಿ, ಕ್ರಿ.ಶ. 70ರಲ್ಲಿ ಈ ಕಟ್ಟಡವು ರೋಮನರಿಂದ ದಹಿಸಲ್ಪಟ್ಟಿತೆಂಬುದು ಈಗ ತೀರ ಸ್ಪಷ್ಟವಾಗಿತ್ತು. ಈ ನಗರದಲ್ಲಿನ ಭೂಶೋಧನೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ, ಈ ನಗರದ ದಹನದ ಕುರಿತಾದ ಸುವ್ಯಕ್ತವೂ ಸ್ಪಷ್ಟವೂ ಆದ ಪ್ರಾಕ್ತನಶಾಸ್ತ್ರಸಂಬಂಧಿತ ಪುರಾವೆಯು ಬಯಲಿಗೆ ಬಂದಿತ್ತು.”—12ನೆಯ ಪುಟದಲ್ಲಿರುವ ಛಾಯಾಚಿತ್ರಗಳನ್ನು ನೋಡಿರಿ.
ಈ ಕಂಡುಹಿಡಿತಗಳಲ್ಲಿ ಕೆಲವು, ಯೇಸುವಿನ ಜೀವಿತದಲ್ಲಿ ಸಂಭವಿಸಿದಂತಹ ಕೆಲವು ಘಟನೆಗಳ ಮೇಲೆ ಬೆಳಕನ್ನು ಬೀರುತ್ತವೆ. ಆ ಕಟ್ಟಡಗಳು ಮೇಲ್ನಗರದಲ್ಲಿ ಇದ್ದವು; ಅಲ್ಲಿ ಮಹಾಯಾಜಕರನ್ನು ಒಳಗೊಂಡು ಯೆರೂಸಲೇಮಿನ ಐಶ್ವರ್ಯವಂತ ಜನರು ವಾಸಿಸುತ್ತಿದ್ದರು. ಆ ಮನೆಗಳಲ್ಲಿ ಬಹು ಸಂಖ್ಯೆಯಲ್ಲಿ ಸಂಸ್ಕಾರಸಂಬಂಧವಾದ ಸ್ನಾನಗೃಹಗಳು ಕಂಡುಬಂದವು. ಒಬ್ಬ ವಿದ್ವಾಂಸರು ಗಮನಿಸುವುದು: “ಬಹು ಸಂಖ್ಯೆಯ ಸ್ನಾನಗೃಹಗಳು, ಎರಡನೆಯ ದೇವಾಲಯದ ಕಾಲಾವಧಿಯಲ್ಲಿ ಮೇಲ್ನಗರದ ನಿವಾಸಿಗಳಿಂದ ರೂಢಿಯಾಗಿ ನಡೆಸಲ್ಪಡುತ್ತಿದ್ದ ಸಂಸ್ಕಾರಸಂಬಂಧವಾದ ಶುದ್ಧತೆಯ ನಿಯಮಗಳ ಕಟ್ಟುನಿಟ್ಟಾದ ಆಚರಣೆಗೆ ಸಾಕ್ಷ್ಯವನ್ನೊದಗಿಸುತ್ತವೆ. (ಈ ನಿಯಮಗಳು ಮಿಷ್ನಾದಲ್ಲಿ ದಾಖಲಿಸಲ್ಪಟ್ಟಿದ್ದು, ಇದು ಮಿಕ್ವೆಯ ಕುರಿತಾದ ವಿವರಗಳಿಗಾಗಿ ಹತ್ತು ಅಧ್ಯಾಯಗಳನ್ನು ಮೀಸಲಾಗಿಟ್ಟಿದೆ.)” ಈ ಮಾಹಿತಿಯು, ಈ ಸಂಸ್ಕಾರಗಳ ವಿಷಯದಲ್ಲಿ ಫರಿಸಾಯರಿಗೂ ಶಾಸ್ತ್ರಿಗಳಿಗೂ ಯೇಸು ನುಡಿದ ಹೇಳಿಕೆಗಳನ್ನು ಗಣ್ಯಮಾಡುವಂತೆ ನಮಗೆ ಸಹಾಯ ಮಾಡುತ್ತದೆ.—ಮತ್ತಾಯ 15:1-20; ಮಾರ್ಕ 7:1-15.
ಆಶ್ಚರ್ಯಚಕಿತಗೊಳಿಸುವಷ್ಟು ಹೆಚ್ಚಿನ ಸಂಖ್ಯೆಯ ಕಲ್ಲಿನ ಪಾತ್ರೆಗಳು ಸಹ ಯೆರೂಸಲೇಮಿನಲ್ಲಿ ಕಂಡುಬಂದಿವೆ. ನಮಾನ್ ಆವೀಗಾಡರು ದಾಖಲಿಸುವುದು: “ಹಾಗಾದರೆ, ಅವುಗಳು ಯೆರೂಸಲೇಮಿನ ಮನೆವಾರ್ತೆಯಲ್ಲಿ ಅಷ್ಟು ಅನಿರೀಕ್ಷಿತವಾಗಿ ಮತ್ತು ಅಷ್ಟು ಪರಿಮಾಣಗಳಲ್ಲಿ ಕಂಡುಬಂದದ್ದೇಕೆ? ಇದಕ್ಕೆ ಉತ್ತರವು, ಸಂಸ್ಕಾರಸಂಬಂಧವಾದ ಶುದ್ಧತೆಯ ಕುರಿತಾದ ಯೆಹೂದಿ ನಿಯಮಗಳಾದ ಹಲಾಕಾ ನಿಯಮ ಕ್ಷೇತ್ರದಲ್ಲಿದೆ. ಮಿಷ್ನಾ ನಮಗೆ ಹೇಳುವುದೇನಂದರೆ, ಅಶುದ್ಧತೆಗೆ ಈಡಾಗದ ವಸ್ತುಗಳಲ್ಲಿ ಕಲ್ಲಿನ ಪಾತ್ರೆಗಳು ಸೇರಿವೆ . . . ಸಂಸ್ಕಾರಸಂಬಂಧವಾದ ಕಲುಷಿತತೆಗೆ ಕಲ್ಲು ಎಂದೂ ಈಡಾಗಿರಲಿಲ್ಲ.” ಯೇಸು ದ್ರಾಕ್ಷಾರಸವಾಗಿ ಪರಿವರ್ತಿಸಿದ ನೀರು, ಜೇಡಿಮಣ್ಣಿನ ಪಾತ್ರೆಗಳಲ್ಲಿ ತುಂಬಿಸಲ್ಪಡುವುದರ ಬದಲಿಗೆ ಕಲ್ಲಿನ ಪಾತ್ರೆಗಳಲ್ಲಿ ಏಕೆ ತುಂಬಿಸಲ್ಪಟ್ಟಿತು ಎಂಬುದನ್ನು ಇದು ವಿವರಿಸುತ್ತದೆ ಎಂದು ಸೂಚಿಸಲಾಗಿದೆ.—ಯಾಜಕಕಾಂಡ 11:33; ಯೋಹಾನ 2:6.
ಇಸ್ರೇಲ್ ಮ್ಯೂಸಿಯಮ್ಗೆ ಕೊಡಲ್ಪಡುವ ಒಂದು ಭೇಟಿಯು, ಅಸಾಮಾನ್ಯವಾದ ಎರಡು ಅಸ್ಥಿಪಾತ್ರೆಗಳನ್ನು ತೋರಿಸುವುದು. ಬೈಬಲ್ಸಂಬಂಧಿತ ಪ್ರಾಕ್ತನಶಾಸ್ತ್ರದ ಪುನರ್ವಿಮರ್ಶೆ (ಇಂಗ್ಲಿಷ್)ಯು ವಿವರಿಸುವುದು: “ಮುಖ್ಯವಾಗಿ ಅಸ್ಥಿಪಾತ್ರೆಗಳು, ಸಾ.ಶ. 70ರಲ್ಲಿ ರೋಮನರು ಯೆರೂಸಲೇಮನ್ನು ನಾಶಪಡಿಸುವುದಕ್ಕೆ ಸುಮಾರು ಒಂದು ನೂರು ವರ್ಷಗಳಿಗೆ ಮುಂಚೆಯೇ ಉಪಯೋಗಿಸಲ್ಪಟ್ಟಿದ್ದವು. . . . ಸಮಾಧಿಮಾಡುವ ಗುಹೆಯೊಂದರ ಗೋಡೆಯಲ್ಲಿ ಕೆತ್ತಿರುವ ಒಂದು ಬಿರುಕಿನಲ್ಲಿ ಮೃತ ವ್ಯಕ್ತಿಯನ್ನು ಇಡಲಾಗುತ್ತಿತ್ತು; ಆ ದೇಹವು ಕೊಳೆತುಹೋದ ಅನಂತರ, ಮೂಳೆಗಳನ್ನು ಸಂಗ್ರಹಿಸಿ, ಒಂದು ಅಸ್ಥಿಪಾತ್ರೆಯಲ್ಲಿ—ಸಾಮಾನ್ಯವಾಗಿ ಅಲಂಕೃತ ಸುಣ್ಣಕಲ್ಲಿನಿಂದ ಮಾಡಲ್ಪಡುತ್ತಿದ್ದ ಒಂದು ಪಾತ್ರೆ—ಹಾಕಲಾಗುತ್ತಿತ್ತು.” ಪ್ರದರ್ಶನಕ್ಕಿಡಲ್ಪಟ್ಟಿದ್ದ ಎರಡು ಅಸ್ಥಿಪಾತ್ರೆಗಳು, ಸಮಾಧಿಮಾಡುವ ಒಂದು ಗುಹೆಯಲ್ಲಿ 1990ರ ನವೆಂಬರ್ ತಿಂಗಳಿನಲ್ಲಿ ಕಂಡುಕೊಳ್ಳಲ್ಪಟ್ಟಿದ್ದವು. ಪ್ರಾಕ್ತನಶಾಸ್ತ್ರಜ್ಞರಾದ ಸ್ವೀ ಗ್ರೀನ್ಹಟ್ರು ವರದಿಮಾಡುವುದು: “ಸಮಾಧಿಯಲ್ಲಿದ್ದ ಎರಡು ಅಸ್ಥಿಪಾತ್ರೆಗಳ ಮೇಲೆ ಇದ್ದ ‘ಕಾಯಫ’ . . . ಎಂಬ ಶಬ್ದವು, ಪ್ರಾಕ್ತನಶಾಸ್ತ್ರಸಂಬಂಧವಾದ ಪ್ರಕರಣದಲ್ಲಿ ಪ್ರಪ್ರಥಮ ಬಾರಿಗೆ ಕಂಡುಬರುತ್ತದೆ. ಹೊಸ ಒಡಂಬಡಿಕೆಯಲ್ಲಿ . . . ಉಲ್ಲೇಖಿಸಲ್ಪಟ್ಟಿರುವ, ಮಹಾ ಯಾಜಕನಾದ ಕಾಯಫನ ಕುಟುಂಬದ ಹೆಸರು ಇದಾಗಿರಬಹುದು . . . ಯೆರೂಸಲೇಮಿನಲ್ಲಿರುವ ಈತನ ಮನೆಯಿಂದಲೇ ಯೇಸುವು ರೋಮನ್ ಕಾರ್ಯಭಾರಿಯಾದ ಪೊಂತ್ಯ ಪಿಲಾತನಿಗೆ ಒಪ್ಪಿಸಲ್ಪಟ್ಟನು.” ಒಂದು ಅಸ್ಥಿಪಾತ್ರೆಯಲ್ಲಿ, ಸುಮಾರು 60 ವರ್ಷ ಪ್ರಾಯದ ಪುರುಷನ ಎಲುಬುಗಳಿದ್ದವು. ಈ ಎಲುಬುಗಳು ವಾಸ್ತವದಲ್ಲಿ ಕಾಯಫನ ಎಲುಬುಗಳಾಗಿವೆಯೆಂದು ವಿದ್ವಾಂಸರು ಊಹಿಸುತ್ತಾರೆ. ಒಬ್ಬ ವಿದ್ವಾಂಸನು ಈ ಕಂಡುಹಿಡಿತಗಳನ್ನು ಯೇಸುವಿನ ಸಮಯಕ್ಕೆ ನಿರ್ದೇಶಿಸುತ್ತಾನೆ: “ಇನ್ನೊಂದು ಅಸ್ಥಿಪಾತ್ರೆಯಲ್ಲಿ ಕಂಡುಕೊಳ್ಳಲ್ಪಟ್ಟ ಒಂದು ನಾಣ್ಯವು, ಹೆರೋದ ಅಗ್ರಿಪ್ಪ (ಸಾ.ಶ. 37-44)ನಿಂದ ಟಂಕಒತ್ತಲ್ಪಟ್ಟಿತ್ತು. ಕಾಯಫರ ಆ ಎರಡು ಅಸ್ಥಿಪಾತ್ರೆಗಳು, ಶತಮಾನದ ಆರಂಭದಷ್ಟು ಆದಿಸಮಯಕ್ಕೆ ಸೇರಿದವುಗಳಾಗಿರಬಹುದು.”
ಆ್ಯರಿಸೋನದ ವಿಶ್ವವಿದ್ಯಾನಿಲಯದಲ್ಲಿ, ನಿಯರ್ ಈಸ್ಟರ್ನ್ ಆರ್ಕಿಯಾಲಜಿಯ ಪ್ರೊಫೆಸರರಾದ ವಿಲ್ಯಮ್ ಜಿ. ಡೆವರ್, ಯೆರೂಸಲೇಮಿನ ಕುರಿತಾಗಿ ಹೇಳಿಕೆಯನ್ನಿತ್ತದ್ದು: “ಈ ಪ್ರಮುಖ ನಿವೇಶನದ ಪ್ರಾಕ್ತನಶಾಸ್ತ್ರಸಂಬಂಧಿತ ಇತಿಹಾಸದ ಕುರಿತಾಗಿ, ಗತಿಸಿದ 150 ವರ್ಷಗಳಲ್ಲೆಲ್ಲಾ ನಾವು ಕಲಿತಿರುವುದಕ್ಕಿಂತಲೂ, ಕಳೆದ 15 ವರ್ಷಗಳಲ್ಲಿ ಹೆಚ್ಚನ್ನು ಕಲಿತಿದ್ದೇವೆಂದು ಹೇಳುವುದು ಏನೂ ಅತಿಶಯೋಕ್ತಿಯಲ್ಲ.” ಇತ್ತೀಚಿನ ದಶಕಗಳಲ್ಲಿ ಯೆರೂಸಲೇಮಿನಲ್ಲಿ ನಡೆದ ಪ್ರಾಕ್ತನಶಾಸ್ತ್ರಸಂಬಂಧವಾದ ಪ್ರಮುಖ ಚಟುವಟಿಕೆಗಳಲ್ಲಿ ಅನೇಕ ಚಟುವಟಿಕೆಗಳು, ಬೈಬಲ್ ಇತಿಹಾಸವನ್ನು ಸ್ಫುಟವಾಗಿ ವಿಶದಪಡಿಸುವ ಕಂಡುಹಿಡಿತಗಳನ್ನು ಒದಗಿಸಿವೆಯೆಂಬುದು ನಿಶ್ಚಯ.
[ಪುಟ 9 ರಲ್ಲಿರುವ ಚಿತ್ರ ಕೃಪೆ]
ಎರಡನೆಯ ದೇವಾಲಯದ ಸಮಯದಲ್ಲಿ ಯೆರೂಸಲೇಮ್ ನಗರದ ನಕಲು ಪ್ರತಿ — ಯೆರೂಸಲೇಮಿನ ಹೋಲಿಲ್ಯಾಂಡ್ ಹೋಟೆಲಿನ ಬಯಲಿನಲ್ಲಿ ನೆಲೆಸಿರುತ್ತದೆ
[ಪುಟ 10 ರಲ್ಲಿರುವ ಚಿತ್ರಗಳು]
ಮೇಲೆ: ಯೆರೂಸಲೇಮಿನ ದೇವಾಲಯ ಬೆಟ್ಟದ ನೈರುತ್ಯ ತುದಿ
ಬಲಗಡೆ: ವಾರನ್ನ ತೋಡುದಾರಿಯೊಳಗೆ ಇಳಿದುಹೋಗುವುದು