ಆದಿ ಚರ್ಚು ದೇವರು ತ್ರಯೈಕ್ಯನೆಂದು ಕಲಿಸಿತ್ತೋ?
ಭಾಗ 3—ಕ್ರೈಸ್ತ ಮತ ಸಮರ್ಥಕರು ತ್ರಯೈಕ್ಯ ಬೋಧನೆಯನ್ನು ಕಲಿಸಿದ್ದರೋ?
ತ್ರಯೈಕ್ಯ ಬೋಧನೆಯು ಯೇಸುವಿನಿಂದ ಅಥವಾ ಆತನ ಶಿಷ್ಯರಿಂದ ಹಾಗೂ ಸಾ.ಶ. ಒಂದನೆಯ ಶತಮಾನದ ಅಂತ್ಯದಲ್ಲಿ ಮತ್ತು ಎರಡನೆಯ ಶತಮಾನದ ಆರಂಭದಲ್ಲಿದ್ದ ಅಪೊಸ್ತಲಿಕ ಗುರುಗಳಿಂದ ಕಲಿಸಲ್ಪಡಲಿಲ್ಲವೆಂದು ನವಂಬರ 1, 1991 ರ ಮತ್ತು ಫೆಬ್ರವರಿ 1, 1992 ರ ದ ವಾಚ್ಟವರ್ ಸಂಚಿಕೆಗಳು ತೋರಿಸಿದವು. ಚರ್ಚ್ ಪ್ರಮುಖರು ಅನಂತರ ಎರಡನೆಯ ಶತಮಾನದ ಕೊನೆಯಲ್ಲಿ ಅದನ್ನು ಕಲಿಸಿರೋ?
ನಮ್ಮ ಸಾಮಾನ್ಯ ಶಕದ ಎರಡನೆಯ ಶತಮಾನದ ಸುಮಾರು ಮಧ್ಯ ಭಾಗದಿಂದ ಅದರ ಅಂತ್ಯದ ತನಕ, ಇಂದು ಯಾರನ್ನು ಕ್ರೈಸ್ತ ಮತ ಸಮರ್ಥಕರೆಂದು ಕರೆಯಲಾಗುತ್ತದೋ ಆ ಚರ್ಚ್ ಪ್ರಮುಖರು ಗೋಚರಿಸಿದ್ದರು. ಆ ಕಾಲದ ರೋಮನ್ ಜಗತ್ತಿನಲ್ಲಿ ಹಬ್ಬಿದ್ದ ದ್ವೇಷಕಾರಕ ತತ್ವಜ್ಞಾನಗಳ ವಿರುದ್ಧವಾಗಿ ತಮಗೆ ಪರಿಚಿತವಾದ ಕ್ರೈಸ್ತತ್ವದ ಪಕ್ಷವಹಿಸಿ ಅವರು ಬರೆದಿದ್ದರು. ಅವರ ಬರಹಗಳು ಅಪೊಸ್ತಲಿಕ ಗುರುಗಳ ಬರಹಗಳ ಅಂತ್ಯದ ಸುಮಾರಿಗೆ, ಮತ್ತು ಅನಂತರ ಹೊರಗೆ ಬಂದವು.
ಗ್ರೀಕಿನಲ್ಲಿ ಬರೆದ ಕ್ರೈಸ್ತ ಮತ ಸಮರ್ಥಕರಲ್ಲಿ ಜಸ್ಟಿನ್ ಮಾರ್ಟರ್, ಟಾಟ್ಯನ್, ಎಥೆನಾಗೊರಸ್, ಥಿಯೋಫಿಲಸ್ ಮತ್ತು ಅಲೆಕ್ಸಾಂಡ್ರಿಯದ ಕೆಮ್ಲೆಂಟ್ ಇವರು ಕೂಡಿದ್ದರು. ಟೆರ್ಟುಲ್ಯನ್ ಲ್ಯಾಟಿನ್ನಲ್ಲಿ ಬರೆದ ಕ್ರೈಸ್ತ ಮತ ಸಮರ್ಥಕನು. ಅವರು ಆಧುನಿಕ ಕ್ರೈಸ್ತ ಪ್ರಪಂಚದ ತ್ರಯೈಕ್ಯವನ್ನು—ಮೂರು ಸರಿಸಮಾನ ವ್ಯಕ್ತಿಗಳು (ತಂದೆ, ಮಗ, ಮತ್ತು ಪವಿತ್ರಾತ್ಮ) ಒಂದೇ ದೇವತ್ವದಲ್ಲಿ ಇದ್ದಾರೆ ಮತ್ತು ಅವರಲ್ಲಿ ಪ್ರತಿಯೊಬ್ಬರು ಸತ್ಯದೇವರಾಗಿದ್ದಾರೆ ಆದರೂ ಅವರು ಮೂರು ದೇವರುಗಳಲ್ಲ, ಒಬ್ಬ ದೇವರೆಂದು ಕಲಿಸಿದ್ದರೋ?
“ಮಗನು ಕನಿಷ್ಠನು”
ಡಾ. ಎಚ್.ಆರ್. ಬೊವರ್ ಎ ಶಾರ್ಟ್ ಹಿಸ್ಟೊರಿ ಆಫ್ ದ ಅರ್ಲಿ ಚರ್ಚ್ ಎಂಬ ತನ್ನ ಪುಸ್ತಕದಲ್ಲಿ, ಕ್ರೈಸ್ತ ಮತ ಸಮರ್ಥಕರ ಬೋಧನೆಯ ಒತ್ತಿನ ಕುರಿತು ಹೇಳಿಕೆ ನೀಡುವುದು:
“ಜಸ್ಟಿನ್ [ಮಾರ್ಟರ್] ಲೋಕದ ಸೃಷ್ಟಿಯ ಮುಂಚೆ ದೇವರು ಒಬ್ಬನೇ ಇದ್ದನೆಂದೂ ಮತ್ತು ಮಗನು ಅಲ್ಲಿ ಇರಲಿಲ್ಲವೆಂದೂ ಕಲಿಸಿದನು. . . . ದೇವರು ಲೋಕವನ್ನು ಸೃಷ್ಟಿಸಲು ಅಪೇಕ್ಷಿಸಿದಾಗ . . . ತನಗಾಗಿ ಲೋಕವನ್ನು ಸೃಷ್ಟಿಸಲು ಆತನು ಇನ್ನೊಂದು ದೈವಿಕ ಜೀವಿಯನ್ನು ಉಂಟುಮಾಡಿದನು. ಈ ದಿವ್ಯ ಜೀವಿಯು . . . ಮಗನೆಂದು ಕರೆಯಲ್ಪಟ್ಟನು . . . ಯಾಕಂದರೆ ಅವನು ಹುಟ್ಟಿದವನು, ಅವನನ್ನು ಲೋಗಸ್ ಎಂದು ಕರೆಯಲಾಯಿತು ಯಾಕಂದರೆ ಅವನು ದೇವರ ವಿವೇಚನೆ ಅಥವಾ ಮನಸ್ಸಿನಿಂದ ತೆಗೆಯಲ್ಪಟ್ಟವನು. . . .
“ಹೀಗೆ ಜಸ್ಟಿನ್ ಮತ್ತು ಇತರ ಕ್ರೈಸ್ತ ಮತ ಸಮರ್ಥಕರು ಮಗನು ಒಂದು ಸೃಷ್ಟಿಜೀವಿ ಎಂದು ಕಲಿಸಿದರು. ಆತನೊಬ್ಬ ಉನ್ನತ ಜೀವಿ, ಲೋಕವನ್ನು ಸೃಷ್ಟಿಸಲು ಸಾಕಷ್ಟು ಶಕ್ತಿಯುಕ್ತನಾದ ಜೀವಿ, ಆದರೂ ಸೃಷ್ಟಿಸಲ್ಪಟ್ಟ ಒಬ್ಬಾತನು. ದೇವಜ್ಞಾನ ಶಾಸ್ತ್ರದಲ್ಲಿ ತಂದೆಯೊಂದಿಗೆ ಮಗನ ಈ ಸಂಬಂಧವನ್ನು ಕನಿಷ್ಠತಾವಾದ ಎಂದು ಕರೆಯಲಾಗುತ್ತದೆ, ಅಂದರೆ ಮಗನು ಕೆಳಗಿನ ಮಟ್ಟದವನು, ಅಂದರೆ ತಂದೆಗೆ ದ್ವಿತೀಯನು, ಆತನಲ್ಲಿ ಅವಲಂಬಿಸಿರುವವನು, ಆತನಿಂದ ಉಂಟುಮಾಡಲ್ಪಟ್ಟವನು. ಕ್ರೈಸ್ತ ಮತ ಸಮರ್ಥಕರು ಕನಿಷ್ಠತಾವಾದಿಗಳಾಗಿದ್ದರು.”
ಡಾ. ಮಾರ್ಟಿನ್ ವರ್ನರ್ ದ ಫಾರ್ಮೇಶನ್ ಆಫ್ ಕ್ರಿಶ್ಚನ್ ಡಾಗ್ಮ ಪುಸ್ತಕದಲ್ಲಿ ದೇವರೊಂದಿಗೆ ಮಗನ ಸಂಬಂಧದ ಆರಂಭದ ತಿಳುವಳಿಕೆಯ ಕುರಿತು ತಿಳಿಸುತ್ತಾರೆ:
“ಆ ಸಂಬಂಧವು ನಿಸ್ಸಂದೇಹವಾಗಿ ‘ಕನಿಷ್ಠತೆ’ ಯದ್ದಾಗಿ ತಿಳಿಯಲ್ಪಟ್ಟಿತ್ತು, ಅಂದರೆ ದೇವರಿಗಿಂತ ಕ್ರಿಸ್ತನು ಕನಿಷ್ಠನು ಎಂಬ ಅರ್ಥದಲ್ಲಿ. ಹೊಸ ಒಡಂಬಡಿಕೆಯಲ್ಲಿ ಎಲ್ಲೆಲ್ಲಿ ತಂದೆಯಾದ ದೇವರಿಗೆ ಯೇಸುವಿನ ಸಂಬಂಧವು ಚರ್ಚಿಸಲ್ಪಟ್ಟಿದೆಯೇ ಅಲ್ಲಿ . . . ಅದು ಸ್ಪಷ್ಟವಾಗಿಗಿ ಕನಿಷ್ಠತೆಯದ್ದಾಗಿ ಕಲ್ಪಿಸಲ್ಪಟ್ಟಿದೆ ಮತ್ತು ಪ್ರತಿನಿಧಿಸಲ್ಪಟ್ಟಿದೆ. ಮತ್ತು ಹೊಸ ಒಡಂಬಡಿಕೆಯ ಅತ್ಯಂತ ನಿರ್ಣಾಯಕ ಕನಿಷ್ಠತಾವಾದಿಯು, ಸಮಾನದೃಷ್ಟಿಯ ಸುವಾರ್ತಾ ದಾಖಲೆಗನುಸಾರ, ಯೇಸು ಕ್ರಿಸ್ತನು ತಾನೇ. . . . ಈ ಮೂಲ ಸ್ಥಾನವು, ದೃಢವೂ ವ್ಯಕ್ತವೂ ಆಗಿದ್ದು, ಬಹಳ ಕಾಲದ ತನಕ ತನ್ನನ್ನು ಕಾಪಾಡಿಕೊಳ್ಳಲು ಶಕವ್ತಾಗಿತ್ತು. ‘ನೈಸೀಯಕ್ಕೆ-ಪೂರ್ವದ ಎಲ್ಲಾ ಮಹಾ ದೇವಜ್ಞಾನ ಶಾಸ್ತ್ರಜ್ಞರು ಲೋಗಸ್ ದೇವರಿಗೆ ಕನಿಷ್ಠನೆಂದು ಪ್ರತಿನಿಧಿಸಿದ್ದರು.’”
ಇದನ್ನು ಒಪ್ಪುತ್ತಾ ಆರ್. ಪಿ. ಸಿ. ಹ್ಯಾನ್ಸನ್, ದ ಸರ್ಚ್ ಫಾರ್ ಕ್ರಿಶ್ಚ್ಯನ್ ಡಾಕ್ಟ್ರಿನ್ ಆಫ್ ಗಾಡ್ ನಲ್ಲಿ ಹೇಳುವುದು:
“ಏರ್ಯನ್ ವಾಗ್ವಾದ [ನಾಲ್ಕನೆಯ ಶತಮಾನದಲ್ಲಿ] ದ ಪ್ರಾರಂಭಕ್ಕೆ ಮುಂಚೆ, ಪೂರ್ವದ ಅಥವಾ ಪಶ್ಚಿಮದ ಚರ್ಚಿನಲ್ಲಿ ಯಾವನೇ ದೇವಜ್ಞಾನ ಶಾಸ್ತ್ರಜ್ಞನು ತಂದೆಗೆ ಮಗನು ಸ್ವಲ್ಪಾರ್ಥದಲ್ಲಾದರೂ ಕನಿಷ್ಠನು ಎಂದು ಪರಿಗಣಿಸಿರದೆ ಇರಲ್ಲಿಲ್ಲ.”
ಡಾ. ಆಲ್ವನ್ ಲ್ಯಾಮ್ಸನ್, ದ ಚರ್ಚ್ ಆಫ್ ದ ಫಸ್ಟ್ ತ್ರೀ ಸೆಂಚ್ಯುರಿಸ್ ನಲ್ಲಿ, ನೈಸೀಯ ಮಂಡಲಿ (ಸಾ.ಶ. 325) ಗೆ ಮುಂಚಿನ ಚರ್ಚ್ ಅಧಿಕಾರಿಗಳ ಬೋಧನೆಯ ಕುರಿತು ಈ ಸಾಕ್ಷ್ಯವನ್ನು ಕೂಡಿಸುತ್ತಾನೆ:
“ನೈಸೀಯ-ಪೂರ್ವದ ಪ್ರಮುಖರಿಂದ ಮಗನ ಕನಿಷ್ಠತೆಯು ಏಕರೂಪದಲ್ಲಿ ಅಲ್ಲದಿದ್ದರೂ, ಸರ್ವಸಾಮಾನ್ಯವಾಗಿ ದೃಢೀಕರಿಸಲ್ಪಟ್ಟಿರುತ್ತದೆ. . . . ಅವರು ಮಗನನ್ನು ತಂದೆಗಿಂತ ಪ್ರತ್ಯೇಕನೆಂದು ನೋಡಿದ್ದರೆಂಬದು ಅವನ ಕನಿಷ್ಠತೆಯನ್ನು ಸ್ಪಷ್ಟವಾಗಿಗಿ ಒತ್ತಿಹೇಳುವ ಪರಿಸ್ಥಿತಿಗಳಿಂದ ರುಜುವಾಗುತ್ತದೆ. . . . ಅವರು ಆತನನ್ನು ಪ್ರತ್ಯೇಕನು ಮತ್ತು ಕೆಳಮಟ್ಟದವನು ಎಂದು ಪರಿಗಣಿಸಿದ್ದರು.”
ಇದೇ ರೀತಿಯಲ್ಲಿ, ಗಾಡ್ಸ್ ಆ್ಯಂಡ್ ದ ವನ್ ಗಾಡ್ ಪುಸ್ತಕದಲ್ಲಿ ರಾಬರ್ಟ್ ಎಮ್. ಗ್ರಾಂಟ್, ಕ್ರೈಸ್ತ ಮತ ಸಮರ್ಥಕರ ಕುರಿತು ಹೀಗನ್ನುತ್ತಾನೆ:
“ಕ್ರಿಸ್ತ ಶಾಸ್ತ್ರದ ಸಮರ್ಥನ ವಾದವು, ಹೊಸ ಒಡಂಬಡಿಕೆಯ ವಾದದಂತೆ, ಮೂಲತಃ ಕನಿಷ್ಠತಾವಾದವಾಗಿದೆ. ಹಳೇ ಒಡಂಬಡಿಕೆಯ ಒಬ್ಬನೇ ದೇವರಾದ ತಂದೆಗೆ ಮಗನು ಯಾವಾಗಲೂ ಕೈಕೆಳಗಿನವನಾಗಿದ್ದಾನೆ. . . . ಹೀಗೆ ಈ ಆರಂಭದ ಕರ್ತೃಗಳಲ್ಲಿ ನಾವು ಕಾಣುವುದು ಒಂದು ತ್ರಯೈಕ್ಯ ಬೋಧನೆಯನ್ನಲ್ಲ. . . . ನೈಸೀಯಕ್ಕೆ ಮುಂಚೆ ಕ್ರೈಸ್ತ ದೇವಜ್ಞಾನ ಶಾಸ್ತ್ರವು ಬಹುಮಟ್ಟಿಗೆ ಸಾರ್ವತ್ರಿಕವಾಗಿ ಕನಿಷ್ಠತಾವಾದಿಯಾಗಿತ್ತು.”
ಮಗನು ತಂದೆಯಾದ ದೇವರಿಗೆ ನಿತ್ಯತೆಯಲ್ಲಿ, ಶಕ್ತಿಯಲ್ಲಿ, ಸ್ಥಾನ ಮತ್ತು ವಿವೇಕದಲ್ಲಿ ಸರಿಸಮಾನನೆಂದು ಕ್ರೈಸ್ತ ಪ್ರಪಂಚದ ತ್ರಯೈಕ್ಯವು ಕಲಿಸುತ್ತದೆ. ಆದರೆ ಮಗನು ತಂದೆಯಾದ ದೇವರಿಗೆ ಸರಿಸಮಾನನಲ್ಲವೆಂದು ಕ್ರೈಸ್ತ ಮತ ಸಮರ್ಥಕರು ಹೇಳಿದ್ದಾರೆ. ಮಗನು ಕನಿಷ್ಠನು ಎಂದವರು ವೀಕ್ಷಿಸಿದ್ದರು. ಅದು ತ್ರಯೈಕ್ಯ ಬೋಧನೆಯಲ್ಲ.
ಒಂದನೆಯ-ಶತಕದ ಬೋಧನೆಯನ್ನು ಪ್ರತಿಬಿಂಬಿಸುವುದು
ಒಂದನೆಯ-ಶತಕದ ಕ್ರೈಸ್ತರು ತಂದೆ ಮತ್ತು ಮಗನ ಸಂಬಂಧದ ಕುರಿತು ಏನು ಕಲಿಸಿದ್ದರೋ ಅದನ್ನೇ ಹೆಚ್ಚು ಪ್ರಮಾಣದಲ್ಲಿ ಕ್ರೈಸ್ತ ಮತ ಸಮರ್ಥಕರು ಮತ್ತು ಆದಿ ಚರ್ಚ್ ಪ್ರಮುಖರು ಪ್ರತಿಬಿಂಬಿಸಿದ್ದರು. ಇದು ದ ಫಾರ್ಮೇಶನ್ ಆಫ್ ದ ಕ್ರಿಶ್ಚನ್ ಡಾಗ್ಮ ಎಂಬ ಪುಸ್ತಕದಲ್ಲಿ ಹೇಗೆ ವ್ಯಕ್ತಪಡಿಸಲ್ಪಟ್ಟಿದೆ ಎಂದು ಗಮನಿಸಿರಿ:
“ಆರಂಭದ ಕ್ರೈಸ್ತ ಯುಗದಲ್ಲಿ, ತದನಂತರ ಚರ್ಚಿನಲ್ಲಿ ಕಟು ಹೋರಾಟಗಳನ್ನು ಉಂಟುಮಾಡಿದಂಥ ತ್ರಯೈಕತ್ವದ ಸಮಸ್ಯೆ ಅಥವಾ ವಾಗ್ವಾದದ ಯಾವುದೇ ಸುಳಿವೂ ಇರಲಿಲ್ಲ. ಇದಕ್ಕೆ ಕಾರಣವು ನಿಸ್ಸಂದೇಹವಾಗಿ ಆದಿ ಕ್ರೈಸ್ತತ್ವಕ್ಕೆ ಕ್ರಿಸ್ತನು . . . ದಿವ್ಯ ದೂತ-ಲೋಕದ ಉನ್ನತ ವ್ಯಕ್ತಿ, ಯುಗಾಂತ್ಯದಲ್ಲಿ . . . ದೇವರ ರಾಜ್ಯವನ್ನು ಬರಮಾಡುವ ಕೆಲಸಕ್ಕಾಗಿ ದೇವರಿಂದ ನಿರ್ಮಿಸಲ್ಪಟ್ಟವನೂ ಆರಿಸಲ್ಪಟ್ಟವನೂ ಆಗಿದ್ದನೆಂಬ ನಿಜತ್ವದಲ್ಲಿ ನೆಲೆಗೊಂಡಿತ್ತು.”
ಅಲ್ಲದೆ, ಆದಿ ಚರ್ಚ್ ಪ್ರಮುಖರ ಬೋಧನೆಯ ಕುರಿತು ದ ಇಂಟರ್ನೇಶನಲ್ ಸ್ಟಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯವು ಅಂಗೀಕರಿಸುವುದು:
“ಚರ್ಚಿನ ಅತ್ಯಾರಂಭದ ವಿಚಾರ ಪ್ರವೃತ್ತಿಯಲ್ಲಿ ತಂದೆಯಾದ ದೇವರ ಕುರಿತು ಮಾತಾಡುವಾಗ, ಆತನನ್ನು ಪ್ರಥಮದಲ್ಲಿ ಯೇಸು ಕ್ರಿಸ್ತನ ತಂದೆಯಾಗಿ ಅಲ್ಲ, ಎಲ್ಲಾ ಜೀವದ ಮೂಲನು ಎಂಬ ತಿಳುವಳಿಕೆಯಲ್ಲಿ ಮಾತಾಡುತ್ತಿದ್ದರು. ಆದುದರಿಂದ ತಂದೆಯಾದ ದೇವರು ಅತಿ ಶ್ರೇಷ್ಠನಾದ ದೇವರು ಎಂಬಂತೆ ಇದ್ದಾನೆ. ಆತನಿಗೆ ಆದಿಯಿಲ್ಲದ, ಅಮರ, ನಿರ್ವಿಕಲ್ಪ, ಅವರ್ಣನೀಯ, ಅದೃಶ್ಯ ಮತ್ತು ಅಜನಿತ ಮುಂತಾದ ವರ್ಣನೆಗಳು ಸೇರಿವೆ. ಶೂನ್ಯದಿಂದ ಅವನೆಲ್ಲವನ್ನು . . . ಸೃಷ್ಟ ಜಗತ್ತಿನ ಮೂಲವನ್ನೇ ಉಂಟುಮಾಡಿದನು. . . .
“ಯೋಗ್ಯವಾಗಿ ತಂದೆಯೊಬ್ಬನೇ ದೇವರು ಮತ್ತು ಮಗನು ಮತ್ತು ಆತ್ಮವು ದ್ವಿತೀಯ ಸ್ಥಾನದವರೆಂದು ಇದು ಸೂಚಿಸುವಂತೆ ತೋರುತ್ತದೆ. ಅನೇಕ ಆರಂಭದ ಹೇಳಿಕೆಗಳು ಇದನ್ನು ಬೆಂಬಲಿಸುವಂತೆ ಕಾಣುತ್ತವೆ.”
ಈ ಎನ್ಸೈಕ್ಲೊಪೀಡಿಯ ಈ ಸತ್ಯತೆಗಳ ಸಾರವಿಳಿಸಲು ಮತ್ತು ಆರಂಭದ ಕಾಲಾವಧಿಯಲ್ಲಿ ತ್ರಯೈಕ್ಯ ಬೋಧನೆಯು ಸ್ವೀಕರಿಸಲ್ಪಟ್ಟಿತ್ತು ಎಂದು ವಾದಿಸಲು ಯತ್ನಿಸುತ್ತದೆಯಾದರೂ, ನಿಜತ್ವಗಳು ವಾದವನ್ನು ಸುಳ್ಳುಮಾಡುತ್ತವೆ. ಪ್ರಖ್ಯಾತ ಕ್ಯಾಥ್ಲಿಕ್ ದೇವಜ್ಞಾನ ಶಾಸ್ತ್ರಜ್ಞ ಜಾನ್ ಹೆನ್ರಿ ಕಾರ್ಡಿನಲ್ ನ್ಯೂಮ್ಯಾನ್ನ ಮಾತುಗಳನ್ನು ಗಮನಿಸಿರಿ:
“ನಮ್ಮ ಕರ್ತನು ಯಾವ ಚರ್ಚೆಯ ವಿಷಯವಾಗಿದ್ದಾನೋ ಆ ಇಡೀ ಬೋಧನೆಗಳ ವೃತ್ತವು ಆದಿ ಚರ್ಚಿನಿಂದ ಹೊಂದಿಕೆಯುಳ್ಳದ್ದಾಗಿ ಮತ್ತು ಏಕರೂಪವಾಗಿ ನಿವೇದಿಸಲ್ಪಟ್ಟಿದೆ ಎಂದು ಒಪ್ಪಿಕೊಳ್ಳೋಣ. . . . ಆದರೆ ಕ್ಯಾಥ್ಲಿಕ್ ಬೋಧನೆಯಾದ ತ್ರಯೈಕ್ಯದ ವಿಷಯ ಮಾತ್ರ ಇದು ಬೇರೆಯಾಗಿದೆ ನಿಶ್ಚಯ. ಅದರ ಪರವಾಗಿ ಆದಿ [ಚರ್ಚ್ ಅಧಿಕಾರಿಗಳ] ಒಂದು ಒಟಭ್ಟಿಪ್ರಾಯವು ಅಲ್ಲಿದೆಯೆಂದು ಯಾವ ಅರ್ಥದಲ್ಲಿ ಹೇಳಬಹುದು ಎಂದು ನಾನರಿಯೆ . . .
“ಆ ಆರಂಭದ ಅವಧಿಯ ವಿಶ್ವಾಸ ಪ್ರಮಾಣಗಳು . . . [ತ್ರಯೈಕ್ಯ] ವನ್ನು ತಿಳಿಸುವುದು ಸಹ ಇಲ್ಲ. ಅವು ಮೂವರ ಕುರಿತಾಗಿ ತಿಳಿಸುತ್ತವೆ ಹೌದು, ಆದರೆ ಆ ಬೋಧನೆಯಲ್ಲಿ ಏನಾದರೂ ಮರ್ಮವಿದೆ, ಆ ಮೂವರು ಒಂದಾಗಿದ್ದಾರೆ, ಅವರು ಸರಿಸಮಾನರು, ಸಮಶಾಶ್ವತರು, ಅಸೃಷ್ಟರು, ಸರ್ವಶಕ್ತರು, ಅಸಂವೇದ್ಯರು ಎಂದು ಅವು ಹೇಳಿರುವುದೂ ಇಲ್ಲ ಮತ್ತು ಹಾಗೆಂದು ಅವುಗಳಿಂದ ಅರ್ಥಮಾಡುವುದೂ ಅಶಕ್ಯ.”
ಜಸ್ಟಿನ್ ಮಾರ್ಟರ್ ಕಲಿಸಿದ ವಿಷಯ
ಅತ್ಯಾರಂಭದ ಕ್ರೈಸ್ತ ಮತ ಸಮರ್ಥಕರಲ್ಲಿ ಸುಮಾರು ಸಾ.ಶ. 110 ರಿಂದ 165 ರ ತನಕ ಜೀವಿಸಿದ್ದ ಜಸ್ಟಿನ್ ಮಾರ್ಟರ್ ಒಬ್ಬನು. ಅವನ ಚಾಲ್ತಿ ಬರಹಗಳಲ್ಲಿ ಯಾವುದೂ ಒಂದು ದೇವರಲ್ಲಿ ಮೂವರು ಸಮಾನ ವ್ಯಕ್ತಿಗಳನ್ನು ತಿಳಿಸುವುದಿಲ್ಲ.
ದೃಷ್ಟಾಂತಕ್ಕಾಗಿ, ಕ್ಯಾಥಲಿಕ್ ಜೆರೂಸಲೇಮ್ ಬೈಬಲ್ಗೆ ಅನುಸಾರವಾಗಿ ಜ್ಞಾನೋಕ್ತಿ 8:22-30 ಮಾನವ-ಪೂರ್ವದ ಯೇಸುವಿನ ಕುರಿತು ಹೇಳುವುದು: “ಯಾಹ್ವೆಯು ನನ್ನನ್ನು ಆತನ ಉದ್ದೇಶವು ಪ್ರಕಟವಾಗುವ ಮೊದಲು, ಆತನ ಪುರಾತನ ಕಾರ್ಯಗಳ ಮುಂಚೆ ನಿರ್ಮಿಸಿದನು. . . . ನಾನು ಹುಟ್ಟಿದಾಗ ಸಮುದ್ರವು ಇರಲಿಲ್ಲ. . . . ಬೆಟ್ಟಗುಡ್ಡಗಳು ನಿಲ್ಲುವದಕ್ಕೆ ಮುಂಚೆ ನಾನು ಹುಟ್ಟಿದೆನು . . . ನಾನು ಆತನ [ದೇವರ] ಹತ್ತಿರ ಕುಶಲ ಶಿಲ್ಪಿಯಾಗಿದ್ದೆನು.” ಈ ವಚನಗಳನ್ನು ಚರ್ಚಿಸುತ್ತಾ ಜಸ್ಟಿನ್ ತನ್ನ ಡಯಲಾಗ್ ವಿದ್ ಟ್ರೈಫೋದಲ್ಲಿ ಹೇಳುವುದು:
“ಈ ವಚನ ಪ್ರಕಟಿಸಿಯದೆ ಏನಂದರೆ ಸಮಸ್ತವೂ ನಿರ್ಮಿಸಲ್ಪಡುವ ಮುಂಚೆ ತಂದೆಯಿಂದ ಈ ಸಂತಾನವು ಜನ್ಮಪಡೆಯಿತು, ಮತ್ತು ಯಾವುದು ಜನ್ಮ ಪಡೆಯುತ್ತದೋ ಅದು ಜನ್ಮಕೊಟವ್ಟನಿಗಿಂತ ಸಂಖ್ಯಾತ್ಮಕವಾಗಿ ತೀರಾ ಪ್ರತ್ಯೇಕವೆಂದು ಯಾರೂ ಒಪ್ಪುವನು.”
ಮಗನು ದೇವರಿಂದ ಹುಟ್ಟಿದವನಾದ್ದರಿಂದ, ಮಗನ ಸಂಬಂಧದಲ್ಲಿ ಜಸ್ಟಿನ್ “ದೇವರು” ಎಂಬ ಹೇಳಿಕೆಯನ್ನು ಉಪಯೋಗಿಸುತ್ತಾನೆ. ತನ್ನ ಫರ್ಸ್ಟ್ ಅಪಾಲಜಿಯಲ್ಲಿ ಅವನು ಹೇಳುವುದು: “ವಿಶ್ವದ ತಂದೆಗೆ ಒಬ್ಬ ಮಗನಿದ್ದಾನೆ, ಅವನು ದೇವರ ಪ್ರಥಮ-ಜಾತ ವಾಕ್ಯವೂ ಆದಕಾರಣ ದೇವರೂ ಆಗಿರುತ್ತಾನೆ.” ಬೈಬಲ್ ಸಹ ದೇವರ ಮಗನನ್ನು “ದೇವರು” ಎಂಬ ಪದವಿಯಿಂದ ಸೂಚಿಸುತ್ತದೆ. ಯೆಶಾಯ 9:6, NW, ರಲ್ಲಿ ಅವನನ್ನು “ಶಕ್ತಿಶಾಲಿ ದೇವರು” ಎಂದು ಕರೆಯಲಾಗಿದೆ. ಆದರೆ ಬೈಬಲ್ನಲ್ಲಿ ದೇವದೂತರು, ಮಾನವರು, ಸುಳ್ಳು ದೇವರುಗಳು, ಮತ್ತು ಸೈತಾನನು ಸಹ “ದೇವರುಗಳು” ಎಂದು ಕರೆಯಲ್ಪಟ್ಟಿದ್ದಾರೆ. (ದೇವದೂತರು: ಕೀರ್ತನೆ 8:5; ಇಬ್ರಿಯ 2:6, 7ಕ್ಕೆ ಹೋಲಿಸಿ. ಮಾನವರು: ಕೀರ್ತನೆ 82:6. ಸುಳ್ಳು ದೇವರುಗಳು: ವಿಮೋಚನಕಾಂಡ 12:12; 1 ಕೊರಿಂಥ 8:5. ಸೈತಾನ: 2 ಕೊರಿಂಥ 4:4.) ಹಿಬ್ರೂ ಶಾಸ್ತ್ರದಲ್ಲಿ “ದೇವರು” ಎಂಬದಕ್ಕಿರುವ ಪದ ‘El (ಇಲ್) ಎಂಬದು ಬರೇ “ಶಕ್ತಿಶಾಲಿ” ಅಥವಾ “ಬಲಾಢ್ಯ” ಎಂಬರ್ಥವನ್ನು ಕೊಡುತ್ತದೆ. ಗ್ರೀಕ್ ಶಾಸ್ತ್ರದಲ್ಲಿ ಇದರ ಸಮಾನ ಪದವು theos (ಥಿಯೋಸ್) ಆಗಿದೆ.
ಅದಲ್ಲದೆ, ಯೆಶಾಯ 9:6 ರಲ್ಲಿ ಉಪಯೋಗಿಸಲ್ಪಟ್ಟ ಹಿಬ್ರೂ ಶಬ್ದವು ಮಗ ಮತ್ತು ತಂದೆಯ ನಡುವಣ ನಿಶ್ಚಿತವಾದ ಭೇದವನ್ನು ತೋರಿಸುತ್ತದೆ. ಅಲ್ಲಿ ಮಗನು “ಶಕ್ತಿಶಾಲಿ ದೇವರು” ಎಂದು ಕರೆಯಲ್ಪಟ್ಟಿದ್ದಾನೆ, ‘El Gib.bohr’ (ಇಲ್ ಗಿಬೋರ್), “ಸರ್ವಶಕ್ತ ದೇವರು” ಅಲ್ಲ. ಆ ಪದವು ಹಿಬ್ರೂವಿನಲ್ಲಿ ‘el Shad.dai (ಇಲ್ ಶಡೈ) ಆಗಿದ್ದು ಅದು ಅಸದೃಶವಾಗಿ ಯೆಹೋವನಿಗೆ ಮಾತ್ರ ಅನ್ವಯಿಸುತ್ತದೆ.
ಮಗನನ್ನು “ದೇವರು” ಎಂದು ಜಸ್ಟಿನ್ ಕರೆದರೂ, ಮಗನು ಮೂರು ಸಮಾನ ವ್ಯಕ್ತಿಗಳಲ್ಲಿ ಒಬ್ಬನೆಂದಾಗಲಿ ಅವರಲ್ಲಿ ಪ್ರತಿಯೊಬ್ಬನು ದೇವರಾಗಿದ್ದರೂ ಆ ಮೂವರು ಕೂಡಿ ಒಬ್ಬನೇ ದೇವರಾಗಿದ್ದಾರೆ ಎಂದಾಗಲಿ ಅವನೆಂದೂ ಹೇಳುವುದಿಲ್ಲ. ಬದಲಿಗೆ ತನ್ನ ಡಾಯಲಾಗ್ ವಿದ್ ಟ್ರೈಫೋದಲ್ಲಿ ಅವನನ್ನುವುದು:
“ಅಲ್ಲಿ . . . ಸಮಸ್ತವನ್ನು ನಿರ್ಮಿಸಿದ [ಸರ್ವಶಕ್ತ ದೇವರು] ವನಿಗೆ ಅಧೀನನಾಗಿರುವ ಇನ್ನೊಬ್ಬ ದೇವರು ಮತ್ತು ಕರ್ತನು [ಮಾನವ-ಪೂರ್ವದ ಯೇಸು] ಇದ್ದಾನೆ; ಅವನು [ಮಗನು] ದೇವದೂತನೆಂತಲೂ ಕರೆಯಲ್ಪಟ್ಟಿದ್ದಾನೆ, ಯಾಕಂದರೆ ಅವನು [ಮಗನು] ಮನುಷ್ಯರಿಗೆ—ಯಾರ ಮೇಲೆ ಬೇರೆ ಯಾವ ದೇವರೂ ಇಲ್ಲವೋ ಆ ಸಮಸ್ತವನ್ನು ನಿರ್ಮಿಸಿದಾತನು—ಅವರಿಗೆ ಏನನ್ನು ಪ್ರಕಟಿಸಲು ಬಯಸುತ್ತಾನೋ ಅದನ್ನು ಪ್ರಕಟಿಸುತ್ತಾನೆ. . . .
“ಸಮಸ್ತವನ್ನು ನಿರ್ಮಿಸಿದಾತನಿಗಿಂತ [ಮಗನು] ಪ್ರತ್ಯೇಕನು, ಚಿತ್ತದಲ್ಲಿ [ಪ್ರತ್ಯೇಕ] ಅಲ್ಲ, ಸಂಖ್ಯಾತ್ಮಕವಾಗಿ, ಎಂದು ನನ್ನಭಿಪ್ರಾಯ.”
ಕ್ರೈಸ್ತರು ನಾಸ್ತಿಕರು ಎಂಬ ವಿಧರ್ಮಿ ಆರೋಪದ ವಿರುದ್ಧ ಜಸ್ಟಿನ್ ಎಲ್ಲಿ ಪ್ರತಿವಾದ ನೀಡುತ್ತಾನೋ ಆ ಫರ್ಸ್ಟ್ ಅಪಾಲಜಿಯ 6 ನೆಯ ಅಧ್ಯಾಯದಲ್ಲಿ ಒಂದು ರಸಕರವಾದ ವಾಕ್ಯವು ಕಂಡುಬರುತ್ತದೆ. ಅವನು ಬರೆದದ್ದು:
“ಅವನನ್ನು [ದೇವರನ್ನು], ಮತ್ತು ಮಗನನ್ನು (ಯಾರು ಆತನಿಂದ ಬಂದು ಈ ವಿಷಯಗಳನ್ನು ನಮಗೆ ಕಲಿಸಿದನೋ ಅವನನ್ನು ಮತ್ತು ಹಿಂಬಾಲಿಸಿ ಬರುವ ಮತ್ತು ಆತನಂತೆ ಮಾಡಲ್ಪಟ್ಟ ಬೇರೆ ದೂತ ಗಣವನ್ನು), ಮತ್ತು ಪ್ರವಾದನಾ ಆತ್ಮವನ್ನು ನಾವು ಆರಾಧಿಸುತ್ತೇವೆ ಮತ್ತು ಭಜಿಸುತ್ತೇವೆ.”
ಈ ವಾಕ್ಯದ ತರ್ಜುಮೆಗಾರ ಬರ್ನಾರ್ಟ್ ಲೋಸ ಹೇಳುವುದು: “ಈ ನಿರೂಪಣೆಯಲ್ಲಿ ದೇವದೂತರನ್ನು ಕ್ರೈಸ್ತರಿಂದ ಗೌರವಿಸಲ್ಪಡುವ ಮತ್ತು ಆರಾಧಿಸಲ್ಪಡುವ ವ್ಯಕ್ತಿಗಳಾಗಿ ತಿಳಿಸಿದ್ದು ಸಾಕಾಗದೋ ಎಂಬಂತೆ, ಜಸ್ಟಿನ್ ಪವಿತ್ರಾತ್ಮವನ್ನು ಹೆಸರಿಸುವ ಮುಂಚೆ ದೇವದೂತರನ್ನು ಪ್ರಸ್ತಾಪಿಸಲೂ ಹಿಂಜರಿಯುವುದಿಲ್ಲ.”—ಅನ್ ಎಸ್ಸೇ ಆನ್ ದ ಡೆವಲೆಪ್ಮೆಂಟ್ ಆಫ್ ಕ್ರಿಶ್ಚನ್ ಡಾಕ್ಟ್ರಿನ್ ಸಹ ನೋಡಿರಿ.
ಹೀಗೆ ಕ್ರೈಸ್ತರು ಯಾರನ್ನು ಆರಾಧಿಸಬೇಕು ಎಂಬ ವಿಷಯದಲ್ಲಿ ಶುದ್ಧ ಬೈಬಲ್ ಬೋಧನೆಯಿಂದ ಜಸ್ಟಿನ್ ಮಾರ್ಟರ್ ಅಗಲಿದ್ದಾನೆಂದು ತೋರಿಬಂದರೂ, ದೇವದೂತರು ದೇವರಿಗೆ ಸರಿಸಮಾನರೆಂದು ಪರಿಗಣಿಸುವುದನ್ನು ಬಿಡಿ, ಸ್ವತಃ ಮಗನನ್ನು ಸಹ ತಂದೆಗೆ ಸರಿಸಮಾನನಾಗಿ ಆತನು ವೀಕ್ಷಿಲಿಲ್ಲವೆಂಬದು ಸ್ಫುಟ. ಜಸ್ಟಿನ್ನ ಕುರಿತು ನಾವು ಪುನಃ ಲ್ಯಾಮ್ಸನ್ನ ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಚ್ಯುರಿಸ್ ನಿಂದ ಉಲ್ಲೇಖಿಸುತ್ತೇವೆ.
“ಜಸ್ಟಿನ್ ಮಗನನ್ನು ದೇವರಿಂದ ಪ್ರತ್ಯೇಕನಾಗಿ, ಆತನ ಕೈಕೆಳಗಿನವನಾಗಿ ಪರಿಗಣಿಸಿದ್ದಾನೆ; ಆ ಪ್ರತ್ಯೇಕತೆ ಆಧುನಿಕಾರ್ಥದಲ್ಲಿ ಮೂರು ಮೂರ್ತಿತ್ವಗಳಿಂದ ಅಥವಾ ವ್ಯಕ್ತಿತ್ವಗಳಿಂದ ರೂಪಿಸಿದ ಒಬ್ಬನಾಗಿ ಅಲ್ಲ, . . . ಬದಲಿಗೆ ಸಾರ ಮತ್ತು ಸ್ವಭಾವದಲ್ಲಿ ಪ್ರತ್ಯೇಕತೆಯುಳ್ಳವನು; ಯಾರಿಂದ ಆತನು ತನ್ನೆಲ್ಲಾ ಶಕ್ತಿಗಳನ್ನು ಮತ್ತು ಪದವಿಗಳನ್ನು ಪಡೆದನೋ ಆ ದೇವರಿಂದ ಪ್ರತ್ಯೇಕವಾದ, ಒಂದು ನೈಜ, ಸಾರಭೂತವಾದ, ವೈಯಕ್ತಿಕ ಅಸ್ತಿತ್ವವುಳ್ಳಾತನು; ಆತನ ಕೈಕೆಳಗೆ ಸಂಘಟಿತನಾಗಿದ್ದು, ಎಲ್ಲಾ ವಿಷಯಗಳಲ್ಲಿ ಆತನ ಚಿತ್ತವನ್ನು ಮಾಡಲು ಅಧೀನನಾಗಿರುವಾತನು. ತಂದೆಯು ಸರ್ವ ಶ್ರೇಷ್ಠನು; ಮಗನು ಕೈಕೆಳಗಿನವನು. ತಂದೆಯು ಶಕ್ತಿಯ ಮೂಲನು; ಮಗನು ಅದರ ಗ್ರಾಹಕನು. ತಂದೆ ಮೂಲತಃ ಉದ್ದೇಶಿಸುವವನು; ಮಗನು ಅವನ ಮಂತ್ರಿ ಅಥವಾ ಉಪಕರಣದೋಪಾದಿ ಅದನ್ನು ನಿರ್ವಹಿಸುವವನು. ಅವರು ಸಂಖ್ಯೆಯಲ್ಲಿ ಇಬ್ಬರು, ಆದರೆ ಚಿತ್ತದಲ್ಲಿ ಒಮ್ಮತ ಅಥವಾ ಒಂದಾಗಿದ್ದಾರೆ. ತಂದೆಯ ಚಿತ್ತವು ಯಾವಾಗಲೂ ಮಗನೊಂದಿಗೆ ಮೇಲುಗೈಯಾಗಿ ಇರುವುದು.”
ಅದಲ್ಲದೆ, ಪವಿತ್ರಾತ್ಮವು ತಂದೆಗೆ ಮತ್ತು ಮಗನಿಗೆ ಸರಿಸಮಾನವಾದ ವ್ಯಕ್ತಿಯೆಂದು ಜಸ್ಟಿನ್ ಎಲ್ಲಿಯೂ ತಿಳಿಸುವುದಿಲ್ಲ. ಆದುದರಿಂದ ಆಧುನಿಕ ಕ್ರೈಸ್ತ ಪ್ರಪಂಚದ ತ್ರಯೈಕ್ಯವನ್ನು ಕಲಿಸಿದವನು ಜಸ್ಟಿನ್ ಎಂದು ಯಾವ ಅರ್ಥದಲ್ಲೂ ಪ್ರಾಮಾಣಿಕತೆಯಿಂದ ಹೇಳಸಾಧ್ಯವಿಲ್ಲ.
ಕೆಮ್ಲೆಂಟ್ ಕಲಿಸಿದ ವಿಷಯ
ಅಲೆಕ್ಸಾಂಡ್ರಿಯದ ಕೆಮ್ಲೆಂಟ್ (ಸು. 150 ರಿಂದ ಸಾ.ಶ. 215) ಸಹ ಮಗನನ್ನು “ದೇವರು” ಎಂದು ಕರೆಯುತ್ತಾನೆ. ಬೈಬಲ್ನಲ್ಲಿ ಯೇಸುವಿಗೆ ಎಂದೂ ಸೂಚಿಸಲ್ಪಡದ “ಸೃಷ್ಟಿಕರ್ತ” ಎಂಬ ಶಬ್ದದಿಂದಲೂ ಅವನು ಆತನನ್ನು ಕರೆಯುತ್ತಾನೆ. ಸರ್ವಶಕ್ತನಾದ ನಿರ್ಮಾಣಿಕನಿಗೆ ಮಗನು ಎಲ್ಲಾ ವಿಧಗಳಲ್ಲಿ ಸರಿಸಮಾನನೆಂದು ಅವನು ಅರ್ಥಮಾಡಿದ್ದನೋ? ಇಲ್ಲ. ಎಲ್ಲಿ ಮಗನ ಕುರಿತು ಯೋಹಾನ 1:3, “ಆತನ ಮೂಲಕವಾಗಿ ಸಮಸ್ತವು ಉಂಟಾಯಿತು” ಎಂದು ಹೇಳುತ್ತದೋ ಅದಕ್ಕೆ ಸೂಚಿಸಿ ಕೆಮ್ಲೆಂಟ್ ಪ್ರತ್ಯಕ್ಷವಾಗಿ ಹಾಗೆ ಹೇಳಿದ್ದಿರಬೇಕು. ದೇವರು ತನ್ನ ಮಗನನ್ನು ತನ್ನ ಸೃಷ್ಟಿ ಕ್ರಿಯೆಯಲ್ಲಿ ಕಾರ್ಯಭಾರಿಯಾಗಿ ಉಪಯೋಗಿಸಿದ್ದನು.—ಕೊಲೊಸ್ಸೆ 1:15-17.
ಸರ್ವ ಶ್ರೇಷ್ಠ ದೇವರನ್ನು ಕೆಮ್ಲೆಂಟ್ “ನಮ್ಮ ಕರ್ತನಾದ ಯೇಸುವಿನ ತಂದೆಯೂ ದೇವರೂ” ಎಂದು ಕರೆಯುತ್ತಾನೆ ಮತ್ತು “ಕರ್ತನು ಸೃಷ್ಟಿಕರ್ತನ ಪುತ್ರನು” ಎಂದು ಹೇಳುತ್ತಾನೆ. ಅವನು ಮತ್ತೂ ಅನ್ನುವುದು: “ಎಲ್ಲರ ದೇವರು ಒಳ್ಳೆಯವನೂ ನ್ಯಾಯಿಯಾ ಆದ ಒಬ್ಬನೇ ನಿರ್ಮಾಣಿಕನು, ಮತ್ತು ಮಗನು ತಂದೆಯಲ್ಲಿ ಇದ್ದಾನೆ.” ಹೀಗೆ ಮಗನ ಮೇಲೆ ಒಬ್ಬ ದೇವರು ಇದ್ದಾನೆಂದು ಅವನು ಬರೆದನು.
ದೇವರು “ನಿತ್ಯಜೀವದ ಮೊದಲಿನ ಮತ್ತು ಒಬ್ಬನೇ ನಿಯಾಮಕನು, ಆತನಿಂದ [ದೇವರಿಂದ] ಅದನ್ನು ಪಡೆದ ಮಗನು, ಅದನ್ನು ನಮಗೆ ಕೊಡುತ್ತಾನೆ” ಎಂಬದಾಗಿ ಕೆಮ್ಲೆಂಟ್ ಹೇಳುತ್ತಾನೆ. ಮೂಲತಃ ನಿತ್ಯಜೀವವನ್ನು ಕೊಡುವಾತನು ಅದನ್ನು ದಾಟಿಸುವವನಿಗಿಂತ ಸ್ಪಷ್ಟವಾಗಿಗಿ ಶ್ರೇಷ್ಠನು. ಹೀಗೆ, ದೇವರು “ಅಗ್ರಗಣ್ಯನೂ ಸರ್ವಶ್ರೇಷ್ಠನೂ ಆಗಿದ್ದಾನೆ,” ಎಂದು ಕೆಮ್ಲೆಂಟ್ ಹೇಳುತ್ತಾನೆ. ಅದಲ್ಲದೆ ಮಗನು, “ಯಾರು ಒಬ್ಬನೇ ಸರ್ವಶಕ್ತನೋ ಅವನಿಗೆ ಅತ್ಯಂತ ಹತ್ತಿರದವನು” ಎಂದೂ, ಮತ್ತು ಮಗನು “ತಂದೆಯ ಚಿತ್ತಕ್ಕನುಸಾರ ಎಲ್ಲವನ್ನು ಆಜ್ಞಾಪಿಸುತ್ತಾನೆ” ಎಂದೂ ಅವನು ಹೇಳುತ್ತಾನೆ. ಪುನಃ ಪುನಃ ಕೆಮ್ಲೆಂಟ್ ಮಗನ ಮೇಲೆ ಸರ್ವಶಕ್ತನಾದ ದೇವರ ಸರ್ವ ಶ್ರೇಷ್ಠತೆಯನ್ನು ತೋರಿಸುತ್ತಾನೆ.
ಅಲೆಕ್ಸಾಂಡ್ರಿಯದ ಕೆಮ್ಲೆಂಟ್ ಕುರಿತು ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಚ್ಯುರಿಸ್ನಲ್ಲಿ ನಾವು ಓದುವುದು:
“ಯಾವುದರಲ್ಲಿ ಮಗನ ಕನಿಷ್ಠತೆಯು ಸ್ಪಷ್ಟವಾಗಿಗಿ ಒಪ್ಪಲ್ಪಟ್ಟಿದೆಯೋ ಅಂಥ ಹಲವಾರು ವಾಕ್ಯಗಳನ್ನು ಕೆಮ್ಲೆಂಟ್ನಿಂದ ನಾವು ಉಲ್ಲೇಖಿಸಬಹುದಾಗಿದೆ. . . .
“ಕೆಮ್ಲೆಂಟ್ನನ್ನು ಸಾಮಾನ್ಯ ಗಮನದಿಂದ ಓದುವ ಯಾವನಾದರೂ, ಅವನು ಮಗನನ್ನು ತಂದೆಯೊಂದಿಗೆ ಸಂಖ್ಯಾತ್ಮಕ ಅನನ್ಯತೆಯಲ್ಲಿ ಒಂದಾಗಿರುವುದಾಗಿ ಪರಿಗಣಿಸಿದ್ದನೆಂದು ಒಂದು ಕ್ಷಣಕ್ಕಾದರೂ ಕಲ್ಪಿಸುವುದು ಹೇಗೆಂದು ನಮಗೆ ಆಶ್ಚರ್ಯ. ನಮಗೆ ತೋರುವ ಪ್ರಕಾರ, ಆತನ ಆತುಕೊಳ್ಳುವ ಮತ್ತು ಕೆಳಮಟ್ಟದ ಸ್ವಭಾವವು, ಎಲ್ಲೆಲ್ಲಿಯೂ ಗುರುತಿಸಲ್ಪಡುತ್ತದೆ. ದೇವರು ಮತ್ತು ಮಗನು ಸಂಖ್ಯಾತ್ಮಕವಾಗಿ ಪ್ರತ್ಯೇಕರು ಎಂದು ಕೆಮ್ಲೆಂಟ್ ನಂಬಿದ್ದನು; ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅವರು ಎರಡು ವ್ಯಕ್ತಿಗಳು—ಒಬ್ಬನು ಶ್ರೇಷ್ಠನು, ಇನ್ನೊಬ್ಬನು ಕನಿಷ್ಠನು.”
ಅದಲ್ಲದೆ, ಪುನಃ ಹೀಗೆ ಹೇಳಬಹುದು: ಕೆಮ್ಲೆಂಟ್ ಕೆಲವು ಸಾರಿ ಬೈಬಲ್ ಯೇಸುವಿನ ಕುರಿತು ಏನು ಹೇಳುತ್ತದೋ ಅದನ್ನು ಮೀರಿ ಹೋಗುವಂತೆ ತೋರಿದರೂ, ಒಬ್ಬ ದೇವರಲ್ಲಿ ಮೂರು ಸರಿಸಮಾನ ವ್ಯಕ್ತಿಗಳು ಕೂಡಿರುವ ಒಂದು ತ್ರಯೈಕ್ಯದ ಕುರಿತು ಅವನು ಎಲ್ಲಿಯೂ ಮಾತನಾಡುವುದಿಲ್ಲ. ಜಸ್ಟಿನ್ ಮತ್ತು ಕೆಮ್ಲೆಂಟನ ಕಾಲದ ನಡುವಣ ಅವಧಿಯಲ್ಲಿ ಜೀವಿಸಿದ್ದ ಟಾಟ್ಯನ್, ಥಿಯೋಫಿಲಸ್ ಮತ್ತು ಅಥೆನಗೊರಸ್ ಮುಂತಾದ ಕ್ರೈಸ್ತ ಮತ ಸಮರ್ಥಕರಲ್ಲೂ ತದ್ರೀತಿಯ ವೀಕ್ಷಣೆಗಳಿದ್ದವು. ಅವರು “ಸ್ವತಃ ಜಸ್ಟಿನ್ಗಿಂತ ಹೆಚ್ಚು ಉತ್ತಮ ತ್ರಯೈಕ್ಯವಾದಿಗಳಲ್ಲ; ಅಂದರೆ ಅವರು ಅಖಂಡವಾದ, ಮೂವರು ಸರಿಸಮಾನರಲ್ಲಿ ನಂಬಿಕೆ ಇಡಲಿಲ್ಲ, ಬದಲಿಗೆ ಈ ನಂಬಿಕೆಯೊಂದಿಗೆ ಪೂರಾ ಅಸಂಗತವಾದ ಒಂದು ಬೇರೆ ಬೋಧನೆಯನ್ನು ಕಲಿಸಿದ್ದರು,” ಎಂದು ಲ್ಯಾಮ್ಸನ್ ಹೇಳುತ್ತಾನೆ.”
ಟೆರ್ಟುಲ್ಯನ್ನ ದೇವಜ್ಞಾನ ಶಾಸ್ತ್ರ
ಲ್ಯಾಟಿನ್ ಪದವಾದ ಟ್ರಿನಿಟಾಸ್ನ್ನು ಮೊದಲಾಗಿ ಉಪಯೋಗಿಸಿದವನು ಟೆರ್ಟುಲ್ಯನ್ (ಸು. 160 ರಿಂದ ಸಾ.ಶ. 230). ಹೆನ್ರಿ ಚಾಡ್ವಿಕ್ನಿಂದ ಗಮನಿಸಲ್ಪಟ್ಟ ಪ್ರಕಾರ, ದೇವರು ‘ಮೂವರು ವ್ಯಕ್ತಿಗಳು ಕೂಡಿರುವ ಒಂದು ದ್ರವ್ಯ’ ಎಂದು ಟೆರ್ಟುಲ್ಯನ್ ಪ್ರಸ್ತಾಪಿಸಿದ್ದನು. ಆದರೂ ಮೂವರು ಸರಿಸಮಾನ ಮತ್ತು ಸಮಶಾಶ್ವತ ವ್ಯಕ್ತಿಗಳ ಅವನ ವಿಚಾರವಾಗಿತ್ತೆಂದು ಇದರ ಅರ್ಥವಲ್ಲ. ಆದರೆ ತ್ರಯೈಕ್ಯ ಬೋಧನೆಯ ಕಡೆಗೆ ಕಾರ್ಯನಡಿಸಿದ್ದ ಅನಂತರದ ಲೇಖಕರು ಅವನ ವಿಚಾರಗಳ ಮೇಲೆ ತಳವೂರಿ ಕಟ್ಟಿದರು.
ಟೆರ್ಟುಲ್ಯನ್ನ ತಂದೆ, ಮಗ ಮತ್ತು ಪವಿತ್ರಾತ್ಮದ ಕಲ್ಪನೆಯು ಕ್ರೈಸ್ತ ಪ್ರಪಂಚದ ತ್ರಯೈಕ್ಯಕ್ಕಿಂತ ಎಷ್ಟೋ ವ್ಯತ್ಯಾಸವುಳ್ಳದ್ದು, ಯಾಕಂದರೆ ಅವನು ಕನಿಷ್ಠತಾವಾದಿಗಳಲ್ಲಿ ಒಬ್ಬನು. ಮಗನು ತಂದೆಗಿಂತ ಕನಿಷ್ಠನು ಎಂದವನು ವೀಕ್ಷಿಸಿದ್ದನು. ಎಗೆನ್ಸ್ಟ್ ಹರ್ಮಜೇನಸ್ನಲ್ಲಿ ಅವನು ಬರೆದದ್ದು:
“ಜನಿಸದೆ ಮತ್ತು ಸೃಷ್ಟಿಯಾಗದೆ ಅಸ್ತಿತ್ವದಲ್ಲಿರುವವನು ದೇವರೊಬ್ಬನೇ ಅಲ್ಲದೆ ಬೇರೆ ಯಾರಾದರೂ ಇದ್ದಾರೆಂದು ನಾವು ನೆನಸಬಾರದು. . . . ಏಕ-ಜಾತನೂ ಪ್ರಥಮ-ಜಾತ ವಾಕ್ಯವೂ ಆದ ದೇವಪುತ್ರನಿಗಿಂತ ಹಿರಿಯನು ಮತ್ತು ಈ ಕಾರಣದಿಂದಾಗಿ ಖಂಡಿತ ಹೆಚ್ಚು ಘನವಂತನು ತಂದೆಯೇ ಹೊರತು ಬೇರೆ ಯಾವುದೂ ಇರುವುದು ಹೇಗೆ? . . . ಅಸ್ತಿತ್ವವನ್ನು ಕೊಡಲು ಒಬ್ಬ ನಿರ್ಮಾಣಿಕನು ಬೇಕಾಗದ [ದೇವರು], ಜೀವಪಡೆಯಲು ಒಬ್ಬ ಕರ್ತೃವು ಬೇಕಾಗಿದ್ದ [ಮಗ] ನಿಗಿಂತ ದರ್ಜೆಯಲ್ಲಿ ಎಷ್ಟೋ ಹೆಚ್ಚು ಉನ್ನತನು.”
ಅಲ್ಲದೆ, ಅಗ್ನೆಯೆಸ್ಟ್ ಪ್ರಾಕ್ಸಿಯಾಸ್ನಲ್ಲಿ, ಮಗನು ಸರ್ವಶಕ್ತನಾದ ದೇವರಿಗಿಂತ ಪ್ರತ್ಯೇಕನು ಮತ್ತು ಆತನ ಕೈಕೆಳಗಿನವನು ಎಂದು ಹೀಗೆ ಹೇಳುವ ಮೂಲಕ ಅವನು ತೋರಿಸುತ್ತಾನೆ:
“ತಂದೆಯು ಸಂಪೂರ್ಣ ದ್ರವ್ಯವಾಗಿರುತ್ತಾನೆ, ಆದರೆ ಮಗನು ಆ ಸಂಪೂರ್ಣದಿಂದ ಬಂದವನು ಮತ್ತು ಅದರ ಭಾಗವಾಗಿದ್ದಾನೆ. ಅವನು ತಾನೇ ಒಪ್ಪಿಕೊಂಡದ್ದು: ‘ನನ್ನ ತಂದೆ ನನಗಿಂತ ದೊಡ್ಡವನು.’ . . . ಹೀಗೆ ಮಗನಿಗಿಂತ ತಂದೆ ದೊಡ್ಡವನಾಗಿರುವುದರಿಂದ ಮಗನಿಗಿಂತ ಪ್ರತ್ಯೇಕನು, ಜನ್ಮ ಕೊಟ್ಟವನು ಒಬ್ಬನು, ಜನ್ಮ ಪಡೆದವನು ಇನ್ನೊಬ್ಬನು ಹೇಗೋ ಹಾಗೆ. ಕಳುಹಿಸಿದವನು ಒಬ್ಬನು ಮತ್ತು ಕಳುಹಿಸಲ್ಪಟ್ಟವನು ಇನ್ನೊಬ್ಬನು. ಮತ್ತು ಪುನಃ, ಉಂಟುಮಾಡುವವನು ಒಬ್ಬನು ಮತ್ತು ಯಾರ ಮೂಲಕವಾಗಿ ವಿಷಯವು ಉಂಟಾಯಿತೋ ಅವನು ಇನ್ನೊಬ್ಬನು.”
ಅಗ್ನೆಯಸ್ಟ್ ಹವೆಜೆನಿಸ್ನಲ್ಲಿ, ಟೆರ್ಟುಲ್ಯನ್ ಮುಂದರಿಸುತ್ತಾ, ಮಗನು ವ್ಯಕ್ತಿಯಾಗಿ ಅಸ್ತಿತ್ವದಲ್ಲಿರದ ಒಂದು ಕಾಲವಿತ್ತು ಎಂದು ಹೇಳುತ್ತಾನೆ, ಹೀಗೆ ದೇವರಂತೆ ಮಗನು ಒಬ್ಬ ಶಾಶ್ವತ ವ್ಯಕ್ತಿಯೆಂತ ತಾನು ಪರಿಗಣಿಸಿಲ್ಲವೆಂದು ತೋರಿಸುತ್ತಾನೆ. ಕಾರ್ಡಿನಲ್ ನ್ಯೂಮ್ಯಾನ್ ಹೇಳಿದ್ದು: “ನಮ್ಮ ಕರ್ತನ ಶಾಶ್ವತ ಸಂತತಿಯ ಬೋಧನೆಯ ಮೇಲೆ ಟೆರ್ಟುಲ್ಯನ್ನನ್ನು ಅಸಂಪ್ರದಾಯಿ [ಸಂಪ್ರದಾಯಬದ್ಧವಲ್ಲದ ಬೋಧನೆಗಳನ್ನು ನಂಬುವವನು] ಎಂತ ಪರಿಗಣಿಸಲೇ ಬೇಕು.” ಟೆರ್ಟುಲ್ಯನ್ ಕುರಿತು ಲ್ಯಾಮ್ಸನ್ ಪ್ರಕಟಿಸುವುದು:
“ಗ್ರೀಕರಿಂದ ಅದು ಕರೆಯಲ್ಪಟ್ಟ ಪ್ರಕಾರ, ಈ ಕಾರಣ ಅಥವಾ ಲೋಗಸ್, ಟೆರ್ಟುಲ್ಯನ್ ನಂಬಿದ ಪ್ರಕಾರ, ಅನಂತಕಾಲದಿಂದ ತಂದೆಯ ಕೇವಲ ಒಂದು ಗುಣವಾಗಿ ಅಸ್ತಿತ್ವದಲ್ಲಿದ್ದು, ತದನಂತರ ವಾಕ್ಯ ಅಥವಾ ಮಗನಾಗಿ ಪರಿವರ್ತಿಸಲ್ಪಟ್ಟನು ಅಂದರೆ ಒಂದು ನೈಜ ವ್ಯಕ್ತಿಯಾದನು. ಆದರೂ, ಅವನಿಗೆ ಟೆರ್ಟುಲ್ಯನ್ ತಂದೆಗೆ ಕನಿಷ್ಠನಾದ ಒಂದು ದರ್ಜೆಯನ್ನು ನೇಮಿಸಿದ್ದಾನೆ. . .
“ಪ್ರಚಲಿತ ದಿನದಲ್ಲಿ ತ್ರಯೈಕ್ಯದ ಕುರಿತು ದೊರೆಯುವ ಯಾವುದೇ ವಿವರಣೆಗೆ ಅನುಸಾರ ತೀರ್ಮಾನಿಸಿದಲ್ಲಿ, ಟೆರ್ಟುಲ್ಯನ್ನನ್ನು [ಪಾಷಂಡಿಯಾಗಿರುವ] ಶಾಪದಿಂದ ಮುಕ್ತಗೊಳಿಸುವ ಪ್ರಯತ್ನಗಳು ವ್ಯರ್ಥವೇ ಸರಿ. ಪರೀಕ್ಷೆಯನ್ನು ಅವನು ಒಂದು ಕ್ಷಣವಾದರೂ ತಾಳ ಶಕ್ತನಲ್ಲ.”
ತ್ರಯೈಕ್ಯ ಇಲ್ಲ
ಕ್ರೈಸ್ತ ಧರ್ಮ ಸಮರ್ಥಕರ ಎಲ್ಲಾ ಮಾತುಗಳನ್ನು ನೀವು ಓದುವುದಾದರೆ, ಬೈಬಲ್ ಬೋಧನೆಗಳಿಂದ ಅವರು ಸ್ವಲ್ಪ ಮಟ್ಟಿಗೆ ಓರೆಯಾಗಿ ಹೋದರೂ, ಅವರಲ್ಲಿ ಯಾರೂ ತಂದೆ, ಮಗ, ಮತ್ತು ಪವಿತ್ರಾತ್ಮವು ನಿತ್ಯತೆ, ಶಕ್ತಿ, ಸ್ಥಾನ ಮತ್ತು ವಿವೇಕದಲ್ಲಿ ಸರಿಸಮಾನವೆಂದು ಕಲಿಸಲಿಲ್ಲ.
ಐರಿನೇಯಸ್, ಹಿಪೊಲೈಟಸ್, ಅರೇನ್ಜಸ್, ಸಿಪ್ರಿಯೇನಸ್, ನೊವಾಟಿಯೇನಸ್ ಮುಂತಾದ ಎರಡನೆಯ ಮತ್ತು ಮೂರನೆಯ ಶತಕದ ಬೇರೆ ಲೇಖಕರ ವಿಷಯದಲ್ಲೂ ಇದು ಸತ್ಯವಾಗಿದೆ. ಕೆಲವರು ತಂದೆ ಮತ್ತು ಮಗನನ್ನು ನಿರ್ಧಿಷ್ಟ ವಿಷಯಗಳಲ್ಲಿ ಸಮೀಕರಿಸಿದರೂ, ಬೇರೆ ವಿಧಾನಗಳಲ್ಲಿ ಅವರು ಮಗನನ್ನು ತಂದೆಯಾದ ದೇವರಿಗೆ ಕನಿಷ್ಠನಾಗಿ ವೀಕ್ಷಿಸಿದ್ದರು. ಅವರಲ್ಲಿ ಯಾರೂ ಪವಿತ್ರಾತ್ಮವನ್ನು ತಂದೆ ಮತ್ತು ಮಗನಿಗೆ ಸಮಾನವೆಂದು ಊಹನೆಮಾಡಲೂ ಇಲ್ಲ. ಉದಾಹರಣೆಗೆ, ದೇವರ ಮಗನು “ಸಮಸ್ತ ಸೃಷ್ಟಿಗೆ ಜ್ಯೇಷ್ಠನು” ಎಂದೂ ಮತ್ತು ಶಾಸ್ತ್ರವಚನಗಳು ಅವನನ್ನು “ಸಮಸ್ತ ಸೃಷ್ಟಿ ಕ್ರಿಯೆಯ ಅತ್ಯಂತ ಪುರಾತನ” ವ್ಯಕ್ತಿಯೆಂದು ತಿಳಿದಿವೆ ಎಂದೂ ಅರೇನ್ಜಸ್ (ಸು. 185 ರಿಂದ ಸಾ.ಶ. 254) ಹೇಳುತ್ತಾನೆ.31
ಈ ಆದಿ ಚರ್ಚ್ ಅಧಿಕಾರಿಗಳ ಯಾವುದೇ ಉದ್ದೇಶಯುಕ್ತ ವಾಚನವು, ಅವರ ಕಾಲದಲ್ಲಿ ಕ್ರೈಸ್ತ ಪ್ರಪಂಚದ ತ್ರಯೈಕ್ಯ ಬೋಧನೆಯು ಅಸ್ತಿತ್ವದಲ್ಲಿರಲಿಲ್ಲವೆಂದು ತೋರಿಸುವುದು. ದ ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಚ್ಯುರಿಸ್ ಹೇಳುವ ಪ್ರಕಾರ:
“ಆಧುನಿಕ ಜನಪ್ರಿಯ ಬೋಧನೆಯಾದ ತ್ರಯೈಕ್ಯವು . . . ಜಸ್ಟಿನ್ನ ಬರಹಗಳಿಂದ ಯಾವ ಬೆಂಬಲವನ್ನೂ ಪಡೆಯುವುದಿಲ್ಲ. ಮತ್ತು ಇದೇ ಅವಲೋಕನೆಯನ್ನು ನೈಸೀಯ-ಪೂರ್ವದ ಎಲ್ಲಾ ಪ್ರಮುಖರ ವಿಷಯದಲ್ಲಿ ಅಂದರೆ ಕ್ರಿಸ್ತನ ಜನನದ ನಂತರ ಮೂರು ಶತಮಾನಗಳ ವರೆಗಿನ ಎಲ್ಲಾ ಕ್ರೈಸ್ತ ಲೇಖಕರ ವಿಷಯದಲ್ಲೂ ಮಾಡಬಹುದು. ತಂದೆ, ಮಗ ಮತ್ತು ಪ್ರವಾದನೆಯ ಅಥವಾ ಪವಿತ್ರಾತ್ಮದ ಕುರಿತು ಅವರು ಹೇಳುತ್ತಾರೆ ನಿಜ, ಆದರೆ ಇಂದಿನ ತ್ರಯೈಕ್ಯವಾದಿಗಳಿಂದ ಒಪ್ಪಲ್ಪಟ್ಟ ಪ್ರಕಾರ ಸರಿಸಮಾನತೆಯುಳ್ಳವರಾಗಿ ಅಲ್ಲ, ಒಂದೇ ಸಂಖ್ಯಾತ್ಮಕ ಸಾರವುಳ್ಳವರಾಗಿಯೂ ಅಲ್ಲ. ಅದಕ್ಕೆ ತೀರಾ ವಿರುದ್ಧವಾದುದು ಸತ್ಯ. ಈ ಪ್ರಮುಖರಿಂದ ವಿವರಿಸಲ್ಪಟ್ಟ ತ್ರಯೈಕ್ಯ ಬೋಧನೆಯು ಆಧುನಿಕ ಬೋಧನೆಗಿಂತ ಮೂಲತಃ ಬೇರೆಯಾಗಿದೆ. ಮಾನವ ಅಭಿಪ್ರಾಯಗಳ ಇತಿಹಾಸದಲ್ಲಿ ಬೇರೆ ಯಾವುದೇ ನಿಜತ್ವದಂತೆ ನಾವಿದನ್ನು ಪರೀಕ್ಷೆಯ ಕೆಳಗೆ ದೃಢವಾಗಿ ನಿಲ್ಲುವ ನಿಜತ್ವವಾಗಿ ಹೇಳುತ್ತೇವೆ.”
ಕಾರ್ಯತಃ ಟೆರ್ಟುಲ್ಯನ್ಗೆ ಮುಂಚೆ ತ್ರಯೈಕ್ಯದ ಪ್ರಸ್ತಾಪವೂ ಇರಲಿಲ್ಲ. ಮತ್ತು ಟೆರ್ಟುಲ್ಯನ್ನ “ಅಸಂಪ್ರದಾಯ” ತ್ರಯೈಕ್ಯವು ಇಂದು ನಂಬಲ್ಪಡುವುದಕ್ಕಿಂತ ಬಹಳಷ್ಟು ಬೇರೆಯಾಗಿತ್ತು. ಹೀಗಿರಲಾಗಿ, ಇಂದು ತಿಳುವಳಿಕೆಯಲ್ಲಿರುವ ತ್ರಯೈಕ್ಯ ಬೋಧನೆಯು ವಿಕಾಸಗೊಂಡದ್ದು ಹೇಗೆ? ಅದು ಸಾ.ಶ. 325 ರ ನೈಸೀಯ ಮಂಡಲಿಯಲ್ಲಾಯಿತೋ? ಈ ಲೇಖನ ಮಾಲೆಯ 4 ನೆಯ ಭಾಗದಲ್ಲಿ ಈ ಪ್ರಶ್ನೆಗಳನ್ನು ಕಾವಲಿನಬುರುಜಿನ ಮುಂದಿನ ಸಂಚಿಕೆಯೊಂದರಲ್ಲಿ ನಾವು ಪರೀಕ್ಷಿಸುವೆವು. (w92 4/1)
References:
1. A Short History of the Early Church, by Harry R. Boer, 1976, page 110.
2. The Formation of Christian Dogma, by Martin Werner, 1957, page 125.
3. The Search for the Christian Doctrine of God, by R. P. C. Hanson, 1988, page 64.
4. The Church of the First Three Centuries, by Alvan Lamson, 1869, pages 70-1.
5. Gods and the One God, by Robert M. Grant, 1986, pages 109, 156, 160.
6. The Formation of Christian Dogma, pages 122, 125.
7. The International Standard Bible Encyclopedia, 1982, Volume 2, page 513.
8. An Essay on the Development of Christian Doctrine, by John Henry Cardinal Newman, Sixth Edition, 1989, pages 14-18.
9. The Ante-Nicene Fathers, edited by Alexander Roberts and James Donaldson, American Reprint of the Edinburgh Edition, 1885, Volume I, page 264.
10. Ibid., page 184.
11. The Ante-Nicene Fathers, Volume 1, page 223.
12. Ibid., page 164.
13. A Short History of Christian Doctrine, by Bernhard Lohse, translated from the German by F. Ernest Stoeffler, 1963, second paperback printing, 1980, page 43.
14. An Essay on the Development of Christian Doctrine, page 20.
15. The Church of the First Three Centuries, pages 73-4, 76.
16. The Ante-Nicene Fathers, Volume II, page 234.
17. Ibid., page 227.
18. Ibid., page 228.
19. Ibid.
20. Ibid., page 593.
21. Ibid.
22. Ibid., page 524.
23. The Church of the First Three Centuries, pages 124-5.
24. Ibid., page 95.
25. The Early Church, by Henry Chadwick, 1980 printing, page 89.
26. The Ante-Nicene Fathers, Volume III, page 487.
27. Ibid., pages 603-4.
28. Ibid., page 478.
29. An Essay on the Development of Christian Doctrine, pages 19, 20.
30. The Church of the First Three Centuries, pages 108-9.
31. The Ante-Nicene Fathers, Volume IV, page 560.
32. The Church of the First Three Centuries, pages 75-6.
[ಪುಟ 27 ರಲ್ಲಿರುವ ಚಿತ್ರ]
ಕೆಮ್ಲೆಂಟ್
[ಕೃಪೆ]
Historical Pictures Service
[ಪುಟ 28 ರಲ್ಲಿರುವ ಚಿತ್ರ]
ಟೆರ್ಟುಲ್ಯನ್
[ಕೃಪೆ]
Historical Pictures Service