ಆದಿ ಚರ್ಚು ದೇವರು ತ್ರಯೈಕ್ಯನೆಂದು ಕಲಿಸಿತ್ತೋ?
ಭಾಗ 2_ಅಪೊಸ್ತಲಿಕ ಗುರುಗಳು ತ್ರಯೈಕ್ಯ ಬೋಧನೆಯನ್ನು ಕಲಿಸಿದ್ದರೋ?
ನವಂಬರ 1, 1991ರ ವಾಚ್ಟವರ್ನಲ್ಲಿ, ಈ ಲೇಖನಮಾಲೆಯ 1ನೆಯ ಭಾಗವು—ತಂದೆ, ಮಗ, ಮತ್ತು ಪವಿತ್ರಾತ್ಮವು ಸಮಾನ ವ್ಯಕ್ತಿಗಳು ಆದರೆ ಒಬ್ಬ ದೇವರಾಗಿದ್ದಾರೆ ಎಂಬ ತ್ರಯ್ಯೆಕ್ಯ ಬೋಧನೆಯನ್ನು ಯೇಸು ಮತ್ತು ಆತನ ಅಪೊಸ್ತಲರು ಕಲಿಸಿದ್ದರೋ ಇಲ್ಲವೋ ಎಂಬದನ್ನು ಚರ್ಚಿಸಿತ್ತು. ಅವರು ಕಲಿಸಲಿಲ್ಲ ಎಂಬ ಸ್ಪಷ್ಟ ರುಜುವಾತು ಬೈಬಲ್ನಿಂದ, ಇತಿಹಾಸಕಾರರಿಂದ ಮತ್ತು ವೇದಶಾಸ್ತ್ರಜ್ಞರಿಂದ ದೊರೆತದೆ. ಅನಂತರ ಶೀಘ್ರದಲ್ಲೇ ಹಿಂಬಾಲಿಸಿದ ಚರ್ಚ್ ಮುಖಂಡರ ಕುರಿತೇನು—ಅವರು ಒಂದು ತ್ರಯೈಕ್ಯವನ್ನು ಕಲಿಸಿದ್ದರೋ?
“ಅಪೊಸ್ತಲಿಕ ಗುರುಗಳು” ಎಂಬ ಹೆಸರು ನಮ್ಮ ಸಾಮಾನ್ಯ ಶಕದ ಒಂದನೆಯ ಶತಮಾನದ ಕೊನೆಯಲ್ಲಿ ಮತ್ತು ಎರಡನೆಯ ಶತಮಾನದ ಆರಂಭದಲ್ಲಿ ಕ್ರೈಸ್ತತ್ವದ ಕುರಿತು ಬರೆದ ಚರ್ಚ್ ಪುರುಷರಿಗೆ ಉಪಯೋಗಿಸಲ್ಪಟ್ಟಿದೆ. ಅವರಲ್ಲಿ ರೋಮ್ನ ಕೆಮ್ಲೆಂಟ್, ಇಗ್ನೇಶಿಯಸ್, ಪಾಲಿಕಾರ್ಪ್, ಹರ್ಮಸ್ ಮತ್ತು ಪಪೀಯಸ್ ಕೆಲವರಾಗಿದ್ದರು.
ಅವರು ಕೆಲವು ಅಪೊಸ್ತಲರ ಸಮಕಾಲೀನರೆಂದು ಹೇಳಲ್ಪಡುತ್ತಿದ್ದರು. ಹೀಗೆ, ಅವರು ಅಪೊಸ್ತಲರ ಬೋಧನೆಗಳ ಚಿರಿಪರಿಚಯವುಳ್ಳರಾಗಿದ್ದಿರಬೇಕು. ಆ ಪುರುಷರು ಏನು ಬರೆದರೋ ಅದರ ಕುರಿತು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು:
“ಎಲ್ಲಾ ಒಟ್ಟಿಗೆ ತಕ್ಕೊಳ್ಳುವುದಾದರೆ, ಅಪೊಸ್ತಲಿಕ ಗುರುಗಳ ಬರಹಗಳು ಹೊಸ ಒಡಂಬಡಿಕೆಯನ್ನು ಬಿಟ್ಟು ಬೇರೆ ಯಾವುದೇ ಕ್ರೈಸ್ತ ಸಾಹಿತ್ಯಕ್ಕಿಂತ ಚಾರಿತ್ರಿಕವಾಗಿ ಹೆಚ್ಚು ಮೌಲ್ಯವುಳ್ಳದ್ದಾಗಿವೆ.”
ಅಪೊಸ್ತಲರು ತ್ರಯೈಕ್ಯ ಬೋಧನೆಯನ್ನು ಕಲಸಿದ್ದದ್ದಾದರೆ, ಆ ಅಪೊಸ್ತಲಿಕ ಗುರುಗಳು ಸಹಾ ಅದನ್ನು ಕಲಿಸಬೇಕಿತ್ತು. ಅದು ಅವರ ಕಲಿಸುವಿಕೆಯಲ್ಲಿ ಪ್ರಧಾನವಾಗಿರಬೇಕಿತ್ತು, ಯಾಕಂದರೆ ದೇವರು ಯಾರು ಎಂದು ಜನರಿಗೆ ತಿಳಿಸುವುದಕ್ಕಿಂತ ಹೆಚ್ಚು ಮಹತ್ವದ್ದು ಬೇರೆ ಯಾವುದೂ ಇರಲಿಲ್ಲ. ಹೀಗಿರಲಾಗಿ, ಅವರು ತ್ರಯೈಕ್ಯ ಬೋಧನೆಯನ್ನು ಕಲಿಸಿದ್ದರೋ?
ನಂಬಿಕೆಯ ಒಂದು ಆರಂಭದ ಹೇಳಿಕೆ
ಕ್ರೈಸ್ತ ನಂಬಿಕೆಯ ಕುರಿತಾದ ಅತಿ ಆದಿಯ ಬೈಬಲ್ಯೇತರ ಹೇಳಿಕೆಗಳಲ್ಲಿ ಒಂದು ದಿ ಡಿಡಾಕೆ ಅಥವಾ ಟೀಚಿಂಗ್ ಆಫ್ ದಿ ಟೆಲ್ವ್ ಅಪೊಸ್ಟಲ್ಸ್ [ಹನ್ನೆರಡು ಅಪೊಸ್ತಲರ ಕಲಿಸುವಿಕೆ] ಎಂಬ 16 ಚಿಕ್ಕ ಅಧ್ಯಾಯಗಳ ಪುಸ್ತಕದಲ್ಲಿ ಕಂಡು ಬರುತ್ತದೆ. ಕೆಲವು ಇತಿಹಾಸಗಾರರು ಅದರ ತಾರೀಕನ್ನು ಸುಮಾರು ಸಾ.ಶ. 100 ಅಥವಾ ಅದಕ್ಕೆ ಮುಂಚೆಗೆ ಹಾಕುತ್ತಾರೆ. ಅದರ ಲೇಖಕ ಅಜ್ಞಾತ.
ಕ್ರೈಸ್ತರಾಗಬೇಕಾದರೆ ಜನರು ತಿಳಿಯುವ ಅಗತ್ಯವಿರುವ ವಿಷಯಗಳ ಕುರಿತು ದಿ ಡಿಡಾಕೆ ವ್ಯವಹರಿಸುತ್ತದೆ. ಅದರ 7ನೆಯ ಅಧ್ಯಾಯದಲ್ಲಿ, “ತಂದೆಯ, ಮಗನ, ಮತ್ತು ಪವಿತ್ರಾತ್ಮದ ಹೆಸರಿನಲ್ಲಿ” ದೀಕ್ಷಾಸ್ನಾನವನ್ನು ಯೇಸು ಮತ್ತಾಯ 28:19ರಲ್ಲಿ ಬಳಸಿದ ಆದೇ ಮಾತಿನಲ್ಲಿ ಅದು ವಿಧಿಸುತ್ತದೆ. ಆದರೆ ಆ ಮೂವರು ನಿತ್ಯತೆ, ಶಕ್ತಿ, ಸ್ಥಾನ ಮತ್ತು ವಿವೇಕದಲ್ಲಿ ಸಮಾನರು ಎಂಬದರ ಕುರಿತು ಅದು ಏನೂ ಹೇಳುವುದಿಲ್ಲ. ದಿ ಡಿಡಾಕೆ ತನ್ನ 10ನೆಯ ಅಧ್ಯಾಯದಲ್ಲಿ ಈ ಕೆಳಗಿನ ನಂಬಿಕೆಯ ಅರಿಕೆಯನ್ನು ಒಂದು ಪ್ರಾರ್ಥನಾರೂಪವಾಗಿ ಹೇಳುವುದು:
“ಪವಿತ್ರನಾದ ತಂದೆಯೇ, ನಮ್ಮ ಹೃದಯದಲ್ಲಿ ನಿನ್ನ ಪವಿತ್ರ ನಾಮವು ನಿವಾಸಿಸುವಂತೆ ಮಾಡಿದಕ್ಕಾಗಿ ಮತ್ತು ನಿನ್ನ ಸೇವಕನಾದ ಯೇಸುವಿನ ಮೂಲಕ ಪ್ರಕಟಪಡಿಸಿದ ಜ್ಞಾನ, ನಂಬಿಕೆ ಮತ್ತು ಅಮರತ್ವಕ್ಕಾಗಿ ನಾವು ನಿನಗೆ ಉಪಕಾರ ಹೇಳುತ್ತೇವೆ. ನಿನಗೆ ಸದಾ ಮಹಿಮೆಯು ಸಲ್ಲುತ್ತಿರಲಿ! ಸರ್ವಶಕ್ತ ಧಣಿಯಾಗಿರುವ ನೀನು ಎಲ್ಲವನ್ನು ನಿನ್ನ ನಾಮ ಮಹತ್ತಿಗಾಗಿ ಉಂಟು ಮಾಡಿದ್ದೀ . . . ಮತ್ತು ದಯೆಯಿಂದ ನಮಗೆ ಆತ್ಮಿಕ ಆಹಾರ ಮತ್ತು ಪಾನವನ್ನು ಮತ್ತು ನಿತ್ಯಜೀವವನ್ನು ನಿನ್ನ ಸೇವಕನಾದ ಯೇಸುವಿನ ಮೂಲಕ ದಯಪಾಲಿಸಿದ್ದೀ.”
ಇದರಲ್ಲಿ ಯಾವ ತ್ರಯೈಕ್ಯವೂ ಇಲ್ಲ. ದ ಇನ್ಫ್ಲುಯೆನ್ಸ್ ಆಫ್ ಗ್ರೀಕ್ ಐಡಿಯಸ್ ಆನ್ ಕ್ರಿಶ್ಚಿಯಾನಿಟಿ ಯಲ್ಲಿ, ಎಡ್ವಿನ್ ಹೆಕ್ ಮೇಲಿನ ಕಥನವನ್ನು ಉಲ್ಲೇಖಿಸುತ್ತಾ, ಅನಂತರ ಅನ್ನುವುದು:
“ಮೂಲ ಕ್ರೈಸ್ತತ್ವದ ಪ್ರಭಾವ ರಂಗದಲ್ಲಿ ಈ ಸರಳ ಕಲ್ಪನೆಗಳ ಮೇಲೆ ಯಾವುದೇ ಮಹಾ ಪ್ರಗತಿಯು ಇದ್ದಂತೆ ಕಾಣುವುದಿಲ್ಲ. ಒತ್ತು ಹಾಕಲ್ಪಟ್ಟ ಬೋಧನೆಯು ಯಾವುದೆಂದರೆ, ದೇವರು ಇದ್ದಾನೆ, ಆತನು ಒಬ್ಬನೇ, ಆತನು ಸರ್ವಶಕ್ತನೂ ಶಾಶ್ವತನೂ ಆಗಿದ್ದಾನೆ, ಅವನೇ ಈ ಲೋಕವನ್ನು ಉಂಟುಮಾಡಿದವನು, ಮತ್ತು ಅವನ ಕೃಪೆಯು ಆತನ ಎಲ್ಲಾ ಕಾರ್ಯಗಳ ಮೇಲಿದೆ. ಮನಃಕಲ್ಪಿತ ತತ್ವಜ್ಞಾನದ ಚರ್ಚೆಗೆ ಅಲ್ಲಿ ಯಾವ ಅವಕಾಶವೂ ಇರಲಿಲ್ಲ.”
ರೋಮ್ನ ಕೆಮ್ಲೆಂಟ್
ಆ ಶಹರದ ಒಬ್ಬ “ಬಿಷಪ”ನೆಂದು ನೆನಸಲಾಗಿದ್ದ ರೋಮ್ನ ಕೆಮ್ಲೆಂಟನು ಕ್ರೈಸ್ತತ್ವದ ಮೇಲಣ ಬರಹಗಳ ಇನ್ನೊಂದು ಆರಂಭದ ಮೂಲ. ಅವನು ಸುಮಾರು ಸಾ.ಶ. 100ರಲ್ಲಿ ಸತ್ತನೆಂದು ನಂಬಲಾಗಿದೆ. ಅವನಿಂದ ಬರೆದದ್ದೆಂದು ಹೇಳಲ್ಪಡುವ ಸಮಾಚಾರದಲ್ಲಿ ಅವನು ತ್ರಯೈಕ್ಯದ ಕುರಿತು ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ತಿಳಿಸಿರುವುದೇ ಇಲ್ಲ. ಫಸ್ಟ್ ಇಪಿಸಲ್ತ್ ಆಫ್ ಕೆಮ್ಲೆಂಟ್ ಟು ದ ಕೊರಿಂಥಿಯನ್ಸ್ ನಲ್ಲಿ, ಅವನು ಹೇಳುವುದು:
“ಸರ್ವಶಕ್ತನಾದ ದೇವರಿಂದ ಯೇಸು ಕ್ರಿಸ್ತನ ಮೂಲಕವಾಗಿ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚುತ್ತಾ ಬರಲಿ.”
“ಅಪೊಸ್ತಲರು ನಮಗೆ ಕರ್ತನಾದ ಯೇಸು ಕ್ರಿಸ್ತನಿಂದ ಬಂದ ಸುವಾರ್ತೆಯನ್ನು ಸಾರಿದ್ದಾರೆ; ಯೇಸು ಕ್ರಿಸ್ತನಾದರೋ ದೇವರಿಂದ ಹಾಗೆ ಮಾಡಿದ್ದಾನೆ. ಆದುದರಿಂದ ಕ್ರಿಸ್ತನು ದೇವರಿಂದ ಕಳುಹಿಸಲ್ಪಟ್ಟವನು, ಮತ್ತು ಅಪೊಸ್ತಲರು ಕ್ರಿಸ್ತನಿಂದ ಕಳುಹಿಸಲ್ಪಟ್ಟರು.”
“ಸಕಲವನ್ನು ಕಾಣುವಾತನಾದ, ಸಕಲ ಆತ್ಮಗಳ ಅಧಿಪತಿಯೂ ಸಕಲ ಜೀವಿಗಳ ಕರ್ತನೂ—ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ಮತ್ತು ಆತನ ಮೂಲಕ ನಮ್ಮನ್ನು ಒಂದು ವಿಶೇಷ ಜನರಾಗುವುದಕ್ಕೆ ಆರಿಸಿಕೊಂಡವನೂ—ಆಗಿರುವ ದೇವರು, ಆತನ ಮಹಿಮೆಯುಳ್ಳ ಮತ್ತು ಪರಿಶುದ್ಧ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ನಂಬಿಕೆ, ಭಯಭಕ್ತಿ, ಶಾಂತಿ, ತಾಳ್ಮೆ ಮತ್ತು ದೀರ್ಘಶಾಂತಿಯನ್ನು ಅನುಗ್ರಹಿಸಲಿ.”
ಯೇಸು ಅಥವಾ ಪವಿತ್ರಾತ್ಮವು ದೇವರಿಗೆ ಸರಿಸಮಾನವೆಂದು ಕೆಮ್ಲೆಂಟ್ ಹೇಳುವುದಿಲ್ಲ. ಅವನು ಸರ್ವಶಕ್ತನಾದ ದೇವರನ್ನು (ಕೇವಲ “ತಂದೆ”ಯಾಗಿ ಅಲ್ಲ) ಮಗನಿಗಿಂತ ತೀರಾ ಪ್ರತ್ಯೇಕವಾಗಿ ನಿರೂಪಿಸಿದ್ದಾನೆ. ಕ್ರಿಸ್ತನು ದೇವರಿಂದ “ಕಳುಹಿಸಲ್ಪಟ್ಟವನು” ಮತ್ತು ಕ್ರಿಸ್ತನು ದೇವರಿಂದ “ಆರಿಸಲ್ಪಟ್ಟವನು” ಆಗಿರುವುದರಿಂದ, ದೇವರು ಶ್ರೇಷ್ಠನಾಗಿ ಹೇಳಲ್ಪಟ್ಟಿದ್ದಾನೆ. ದೇವರು ಮತ್ತು ಕ್ರಿಸ್ತನು ಎರಡು ಪ್ರತ್ಯೇಕ ಮತ್ತು ಅಸಮಾನ ವ್ಯಕ್ತಿಗಳೆಂದು ತೋರಿಸುತ್ತಾ, ಕೆಮ್ಲೆಂಟ್ ಹೇಳಿದ್ದು:
ವಿಶ್ವದ ನಿರ್ಮಾಣಿಕನು ಇಡೀ ಲೋಕದಲ್ಲಿ ತಾನಾದುಕೊಂಡವರ ವಿಶಿಷ್ಟ ಸಂಖ್ಯೆಯನ್ನು ತನ್ನ ಪ್ರಿಯ ಮಗುವಾದ ಯೇಸು ಕ್ರಿಸ್ತನ ಮೂಲಕ ಹಾನಿತಟ್ಟದಂತೆ ಉಳಿಸುವಂತೆ ನಾವು ಯಥಾರ್ಥವಾದ ಪ್ರಾರ್ಥನೆ ಮತ್ತು ವಿಜ್ಞಾಪನೆಯಿಂದ ಬೇಡಿಕೊಳ್ಳುತ್ತೇವೆ. . . . [ದೇವರಾದ] ನೀನೊಬ್ಬನೇ ‘ಮಹೋನ್ನತರಲ್ಲಿ ಮಹೋನ್ನತನು’ ಎಂದು ನಾವು ಅಂಗೀಕರಿಸುತ್ತೇವೆ. . . . ಆತ್ಮಗಳ ರಕ್ಷಕನೂ ಸಕಲ ಜೀವಿಗಳ ದೇವರೂ ನೀನೊಬ್ಬನೇ.”
“ನೀನೊಬ್ಬನೇ ದೇವರೆಂದೂ ಮತ್ತು ಯೇಸು ಕ್ರಿಸ್ತನು ನಿನ್ನ ಮಗುವೆಂದೂ ಸಕಲ ಜನಾಂಗಗಳು ಅಂಗೀಕರಿಸಲಿ.”
ಕೆಮ್ಲೆಂಟ್ ದೇವರನ್ನು (ಕೇವಲ “ತಂದೆ” ಅಲ್ಲ) “ಮಹೋನ್ನತ”ನೆಂದು ಕರೆಯುತ್ತಾನೆ, ಮತ್ತು ಯೇಸುವನ್ನು ದೇವರ “ಮಗು”ವೆಂದು ನಿರ್ದೇಶಿಸುತ್ತಾನೆ. ಯೇಸುವಿನ ಕುರಿತು ಅವನು ಇದನ್ನೂ ಗಮನಿಸಿದನು: “ಆತನು ದೇವರ ವೈಭವದ ಪ್ರತಿಬಿಂಬವಾಗಿರುವುದರಿಂದ, ಆತನು ದೇವದೂತರಿಗಿಂತ ಶ್ರೇಷ್ಠನು, ಯಾಕಂದರೆ ಆತನ ಪದವಿಯು ಅವರಿಗಿಂತ ಹೆಚ್ಚು ವಿಶೇಷತೆಯುಳ್ಳದ್ದು.” ಯೇಸು ದೇವರ ವೈಭವವನ್ನು ಪ್ರತಿಬಿಂಬಿಸುತ್ತಾನೆ, ಆದರೆ ಅದಕ್ಕೆ ಸಮಾನನಾಗಿಲ್ಲ, ಚಂದ್ರನು ಸೂರ್ಯಬೆಳಕನ್ನು ಪ್ರತಿಬಿಂಬಿಸುತ್ತಾನಾದರೂ ಆ ಬೆಳಕಿನ ಮೂಲವಾದ ಸೂರ್ಯನಿಗೆ ಹೇಗೆ ಸಮಾನನಾಗಿಲ್ಲವೋ ಹಾಗೆಯೇ.
ಸ್ವರ್ಗೀಯ ತಂದೆಯಾಗಿರುವ ದೇವರಿಗೆ ದೇವರ ಕುಮಾರನು ಸರಿಸಮಾನನಾಗಿದ್ದಲ್ಲಿ, ಯೇಸು ದೇವದೂತರಿಗಿಂತ ಶ್ರೇಷ್ಠನೆಂದು ಹೇಳುವ ಅವಶ್ಯಕತೆ ಕೆಮ್ಲಂಟ್ಗೆ ಇರುತ್ತಿರಲಿಲ್ಲ, ಯಾಕಂದರೆ ಅದು ಸ್ವತಃಸಿದ್ಧವಾಗಿರುತ್ತಿತ್ತು. ಮತ್ತು ಮಗನು ದೇವದೂತರಿಗಿಂತ ಶ್ರೇಷ್ಠನಾಗಿರುವಾಗ, ಅವನು [ಮಗನು] ಸರ್ವಶಕ್ತನಾದ ದೇವರಿಗಿಂತ ಕೆಳಗಿನವನು ಎಂಬ ಅವನ ಅಂಗೀಕಾರವನ್ನು ಅವನ ಪದಪ್ರಯೋಗವು ತೋರಿಸುತ್ತದೆ.
ಕೆಮ್ಲೆಂಟನ ಸ್ಥಾನವು ತೀರಾ ಸ್ಪಷ್ಟ: ಮಗನು ತಂದೆಗಿಂತ ಕೆಳಗಿನವನು ಮತ್ತು ಆತನಿಗೆ ದ್ವಿತೀಯನು. ತಂದೆಯೊಂದಿಗೆ ದೇವತ್ವದಲ್ಲಿ ಯೇಸು ಪಾಲಿಗನೆಂದು ಕೆಮ್ಲೆಂಟ್ ಎಂದೂ ವೀಕ್ಷಿಸಲಿಲ್ಲ. ಮಗನು ತಂದೆಯ ಮೇಲೆ ಅಂದರೆ ದೇವರ ಮೇಲೆ ಅವಲಂಬಿತನು ಎಂದವನು ತೋರಿಸಿದನು ಮತ್ತು ತಂದೆಯು ತನ್ನ ಸ್ಥಾನವನ್ನು ಯಾರೊಂದಿಗೂ ಪಾಲಿಗನಾಗದ, ‘ಒಬ್ಬನೇ ದೇವರು’ ಎಂದು ನಿಶ್ಚಿತವಾಗಿ ಹೇಳಿದ್ದಾನೆ. ಮತ್ತು ಕೆಮ್ಲೆಂಟ್ ಪವಿತ್ರಾತ್ಮಕ್ಕೆ ಬೇರೆಲಿಯ್ಲೂ ದೇವರೊಂದಿಗೆ ಸಮಾನತ್ವವನ್ನು ಕೊಡುವುದಿಲ್ಲ. ಹೀಗೆ, ಕೆಮ್ಲೆಂಟ್ನ ಬರಹಗಳಲ್ಲಿ ತ್ರಯೈಕ್ಯವು ಇಲ್ಲವೇ ಇಲ್ಲ.
ಇಗ್ನೇಶಿಯಸ್
ಅಂತಿಯೋಕ್ಯದ ಒಬ್ಬ ಬಿಷಪನಾದ ಇಗ್ನೇಶಿಯಸ್, ಸಾ.ಶ. ಒಂದನೆಯ ಶತಮಾನದ ಸುಮಾರು ಮಧ್ಯದಿಂದ ಎರಡನೆಯ ಶತಕದ ಆರಂಭದಲ್ಲಿ ಜೀವಿಸಿದ್ದನು. ಅವನಿಗೆ ಸೇರಿದ್ದೆಂದು ಹೇಳುವ ಬರಹಗಳು ವಿಶ್ವಾಸಾರ್ಹವೆಂದು ಭಾವಿಸಿದರೂ, ಅವುಗಳಲ್ಲೊಂದರಲ್ಲೂ ತಂದೆ, ಮಗ, ಮತ್ತು ಪವಿತ್ರಾತ್ಮದ ಸರಿಸಮಾನತೆಯು ತೋರಿಬರುವುದಿಲ್ಲ.
ಮಗನು ನಿತ್ಯತೆಯಲ್ಲಿ, ಶಕ್ತಿಯಲ್ಲಿ, ಸ್ಥಾನ ಮತ್ತು ವಿವೇಕದಲ್ಲಿ ತಂದೆಗೆ ಸರಿಸಮಾನನೆಂದು ಇಗ್ನೇಶಿಯಸ್ ಒಂದುವೇಳೆ ಹೇಳಿದರೂ ಕೂಡಾ, ಅದು ಇನ್ನೂ ಒಂದು ತ್ರಯೈಕ್ಯವಾಗಲಾರದು, ಯಾಕಂದರೆ ಪವಿತ್ರಾತ್ಮವು ಆ ರೀತಿಯಲ್ಲಿ ದೇವರಿಗೆ ಸಮಾನವಾಗಿದೆ ಎಂದು ಅವನು ಎಲ್ಲಿಯೂ ಹೇಳಿರುವುದಿಲ್ಲ. ಆದರೆ ಮಗನು ತಂದೆಗೆ ಆ ವಿಧಗಳಲ್ಲಿ ಯಾ ಬೇರೆ ಯಾವುದೇ ರೀತಿಯಲ್ಲಿ ಸಮಾನನು ಎಂದು ಇಗ್ನೇಶಿಯಸ್ ಹೇಳಿದ್ದೇ ಇಲ್ಲ. ಬದಲಿಗೆ ಶ್ರೇಷ್ಠನಾದ ಸರ್ವಶಕ್ತ ದೇವರಿಗೆ ಮಗನು ಅಧೀನನು ಎಂದು ಅವನು ತೋರಿಸಿದ್ದಾನೆ.
ತಂದೆ ಮತ್ತು ಅವನ ಮಗನ ನಡುವೆ ಪ್ರತ್ಯೇಕತೆ ತೋರಿಸುತ್ತಾ, ಸರ್ವಶಕ್ತನಾದ ದೇವರು “ಜಾತನಲ್ಲದ ಮತ್ತು ಆಗೋಚರನಾದ ಒಬ್ಬನೇ ಸತ್ಯ ದೇವರೂ, ಎಲ್ಲರ ಕರ್ತನೂ, ಏಕಜಾತ ಪುತ್ರನ ತಂದೆಯೂ ಜನಕನೂ ಆಗಿದ್ದಾನೆ” ಎಂದು ಇಗ್ನೇಶಿಯಸ್ ಕರೆಯುತ್ತಾನೆ. ಅವನು “ತಂದೆಯಾದ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನು” ಎಂಬದಾಗಿ ಸೂಚಿಸಿ ಹೇಳಿದ್ದಾನೆ. ಮತ್ತು ಅವನು ಘೋಷಿಸಿದ್ದು: “ಸರ್ವಶಕ್ತನಾದ ಒಬ್ಬನೇ ದೇವರಿದ್ದಾನೆ, ಅವನು ತನ್ನನ್ನು ತನ್ನ ಮಗನಾದ ಯೇಸು ಕ್ರಿಸ್ತನ ಮುಖಾಂತರ ಪ್ರಕಟಪಡಿಸಿದನು.”
ವ್ಯಕ್ತಿಯೋಪಾದಿ ಮಗನು ಶಾಶ್ವತನಲ್ಲ, ನಿರ್ಮಿಸಲ್ಪಟ್ಟವನು ಎಂದು ಇಗ್ನೇಶಿಯಸ್ ತೋರಿಸುತ್ತಾನೆ, ಯಾಕಂದರೆ ಮಗನು ಹೇಳಿದ್ದು: “ಕರ್ತನು [ಸರ್ವಶಕ್ತನಾದ ದೇವರು] ನನ್ನನ್ನು ತನ್ನ ಮಾರ್ಗಗಳ ಪ್ರಾರಂಭದಲ್ಲಿ ಸೃಷ್ಟಿಸಿದನು.” ತದ್ರೀತಿಯಲ್ಲಿ, ಇಗ್ನೇಶಿಯಸ್ ಹೇಳಿದ್ದು: “ವಿಶ್ವದ ದೇವರು ಒಬ್ಬನೇ, ಅವನೇ ಕ್ರಿಸ್ತನ ತಂದೆ, ‘ಆತನು ಸಮಸ್ತಕ್ಕೂ ಮೂಲಕಾರಣನು’ ಮತ್ತು ನಮಗೆ ಒಬ್ಬನೇ ಕರ್ತ; ಆತನು ಕರ್ತನಾದ ಯೇಸು ಕ್ರಿಸ್ತನೇ, ‘ಆತನ ಮುಖಾಂತರ ಸಮಸ್ತವೂ ಉಂಟಾಯಿತು.’” ಅವನು ಇದನ್ನೂ ಬರೆದಿದ್ದಾನೆ:
“ಪವಿತ್ರಾತ್ಮ ತಾನಾಗಿಯೇ ಏನನ್ನೂ ಹೇಳುವುದಿಲ್ಲ, ಕ್ರಿಸ್ತನು ಹೇಳಿದ್ದನ್ನೇ ಹೇಳುತ್ತಾನೆ. . . . ತನ್ನ ತಂದೆಯಿಂದ ದೊರೆತ ವಿಷಯಗಳ ಕುರಿತು ಕರ್ತನು ಸಹಾ ನಮಗೆ ಪ್ರಕಟಿಸಿದ ಹಾಗೆಯೇ. ಯಾಕಂದರೆ ಅವನು [ಮಗನು] ಹೇಳುವುದು, ‘ನೀವು ಕೇಳುವ ಮಾತುಗಳು ನನ್ನದಲ್ಲ, ನನ್ನನ್ನು ಕಳುಹಿಸಿಕೊಟ್ಟ ತಂದೆಯದ್ದೇ.’”
“ನೀರವತೆಯಿಂದ ಹೊರಬಂದ ಆತನ ವಾಕ್ಯವೂ ಮತ್ತು ತನ್ನನ್ನು ಕಳುಹಿಸಿದಾತನನ್ನು ಎಲ್ಲಾ ವಿಧಗಳಲ್ಲಿ ಮೆಚ್ಚಿಸಿದವನೂ ಆದ ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ತನ್ನನ್ನು ಪ್ರಕಟಪಡಿಸಿದ ಒಬ್ಬನೇ ದೇವರು ಇದ್ದಾನೆ. . . . ಯೇಸು ಕ್ರಿಸ್ತನು ತಂದೆಗೆ ಅಧೀನನು.”
ಇಗ್ನೇಶಿಯಸ್ ಮಗನನ್ನು “ವಾಕ್ಯವಾದ ದೇವರು” ಎಂದು ಕರೆದಿದ್ದಾನೆ ನಿಜ. ಆದರೆ ಮಗನಿಗೆ “ದೇವರು” ಎಂಬ ಶಬ್ದವನ್ನು ಬಳಸಿದ ಮೂಲಕ ಸರ್ವಶಕ್ತನಾದ ದೇವರೊಂದಿಗೆ ಸಮಾನತ್ವ ಎಂದರ್ಥ ಮಾಡುವ ಅಗತ್ಯವಿಲ್ಲ. ಬೈಬಲ್ ಸಹಾ ಯೆಶಾಯ 9:6ರಲ್ಲಿ ಮಗನನ್ನು “ದೇವರು” ಎಂದು ಕರೆಯುತ್ತದೆ. ಯೋಹಾನ 1:18 ಮಗನನ್ನು “ಏಕಜಾತ ದೇವರು (god)” ಎಂದು ಕರೆದಿದೆ. ತಂದೆಯಾದ ಯೆಹೋವ ದೇವರಿಂದ ಶಕ್ತಿಯನ್ನೂ ಅಧಿಕಾರವನ್ನೂ ಪಡೆದವನಾದ ಮಗನನ್ನು “ಶಕ್ತಿಶಾಲಿ” ಎಂದು ಯೋಗ್ಯವಾಗಿಯೇ ಕರೆಯಬಹುದು, “god” ಪದದ ಮೂಲಾರ್ಥವು ಅದೇ.—ಮತ್ತಾಯ 28:18; 1 ಕೊರಿಂಥ 8:6; ಇಬ್ರಿಯ 1:2.
ಆದರೂ, ಇಗ್ನೇಶಿಯಸ್ಗೆ ಸೇರಿದ್ದೆಂದು ಹೇಳಲಾಗುವ 15 ಪತ್ರಗಳನ್ನು ವಿಶ್ವಾಸಾರ್ಹವೆಂದು ಸ್ವೀಕರಿಸಬಹುದೋ? ದ ಆ್ಯನ್ಟಿ-ನಿಸೀನ್ ಫಾದರ್ಸ್, ಸಂಪುಟ 1 ರ ಸಂಪಾದಕರಾದ ಅಲೆಕ್ಸಾಂಡರ್ ರಾಬರ್ಟ್ಸ್ ಮತ್ತು ಜೇಮ್ಸ್ ಡಾನಲ್ಡ್ಸನ್ ಹೇಳುವುದು:
“ಇಗ್ನೆಶಿಯಸ್ನ ಪತ್ರಗಳೆಂದು ವಾದಿಸಲ್ಪಟ್ಟವುಗಳಲ್ಲಿ ಮೊದಲಿನ ಎಂಟು ಪತ್ರಗಳು ಕೃತ್ರಿಮವೆಂದು ಈಗ ಠೀಕಾಕಾರರ ಸಾರ್ವತ್ರಿಕ ಅಭಿಪ್ರಾಯವಾಗಿರುತ್ತದೆ. ಅವು ಒಂದು ಅನಂತರದ ಕಾಲಾವಧಿಯ ಉತ್ಪಾದನೆಯೆಂಬ ಖಚಿತ ಪುರಾವೆಗಳನ್ನು ತಾವೇ ಕೊಡುತ್ತವೆ. . . . ಮತ್ತು ಅವೀಗ ಸಾಮಾನ್ಯ ಒಪ್ಪಿಗೆಯಿಂದ ಸುಳ್ಳು ಪತ್ರಗಳೆಂದು ಬದಿಗೆ ತಳ್ಳಲ್ಪಟ್ಟಿವೆ.”
“ಯುಸೀಬಿಯಸ್ನಿಂದ ಅಂಗೀಕರಿಸಲ್ಪಟ್ಟ ಏಳು ಪತ್ರಿಕೆಗಳಲ್ಲಿ . . . ಒಂದು ಸಂಕ್ಷಿಪ್ತರೂಪದ ಮತ್ತು ಒಂದು ದೀರ್ಘವಾದ ಎರಡು ಗ್ರೀಕ್ ಪರಿಷ್ಕೃತ ಪ್ರತಿಗಳು ನಮ್ಮ ವಶದಲ್ಲಿವೆ. . . . ಸಂಕ್ಷಿಪ್ತ ರೂಪದ ಪತ್ರಿಕೆಯು . . . ದೀರ್ಘದ್ದಕ್ಕಿಂತ ಹೆಚ್ಚು ಆದ್ಯತೆಯಿಂದ ಸ್ವೀಕರಿಸಲ್ಪಡುತ್ತದಾದರೂ, ಅದು ಕೂಡಾ ಪ್ರಕ್ಷೇಪದಿಂದ ಪೂರ್ಣ ಮುಕ್ತವೆಂದು ಅಥವಾ ಅದರ ವಿಶ್ವಾಸಾರ್ಹತೆಯು ನಿಸ್ಸಂಶಯವೆಂದು ಪರಿಗಣಿಸ ಸಾಧ್ಯವಿಲ್ಲವೆಂಬ ಗಮನಾರ್ಹ ಅಭಿಪ್ರಾಯವು ಪಂಡಿತರಲ್ಲಿ ನೆಲೆಸಿದೆ.”
ಅವನ ಬರಹಗಳ ಸಂಕ್ಷಿಪ್ತ ಪತ್ರವನ್ನು ನಿಜವೆಂದು ನಾವು ಸ್ವೀಕರಿಸಿದಲ್ಲಿ, ಕ್ರಿಸ್ತನು ದೇವರ ಕೈಕೆಳಗಿನವನಾಗಿ ತೋರಿಸುವ ಕೆಲವು ವಾಕ್ಯಗಳನ್ನು (ದೀರ್ಘ ಪತ್ರದ) ಅದು ತೆಗೆದುಹಾಕುತ್ತದೆ, ಆದರೆ ಸಂಕ್ಷಿಪ್ತ ಪ್ರತಿಯಲ್ಲಿ ಉಳಿದಿರುವ ವಚನಗಳು ಮತ್ತೂ ಒಂದು ತ್ರಯೈಕ್ಯವನ್ನು ತೋರಿಸುವುದಿಲ್ಲ. ಮತ್ತು ಅವನ ಪತ್ರಗಳಲ್ಲಿ ಯಾವುದೇ ಸತ್ಯವಿರಲಿ, ಬಹಳ ಹೆಚ್ಚೆಂದರೆ ಇಗ್ನೇಶಿಯಸ್ ದೇವರ ಮತ್ತು ಆತನ ಮಗನ ದ್ವಿತ್ವವನ್ನು ನಂಬಿದ್ದನೆಂದು ವ್ಯಕ್ತ. ಆದರೆ ಇದು ಸರಿಸಮಾನತೆಯ ದ್ವಿತ್ವವಲ್ಲ ಖಂಡಿತ, ಯಾಕಂದರೆ ಮಗನು ಯಾವಾಗಲೂ ದೇವರಿಗಿಂತ ಕಡಿಮೆಯವನಾಗಿ ಮತ್ತು ಆತನ ಕೈಕೆಳಗಿನವನಾಗಿ ತೋರಿಸಲ್ಪಟ್ಟಿದ್ದಾನೆ. ಹೀಗೆ, ಒಬ್ಬನು ಇಗ್ನೇಶಿಯಸ್ನ ಬರಹಗಳನ್ನು ಹೇಗೆಯೇ ವೀಕ್ಷಿಸಲಿ, ಅವುಗಳಲ್ಲಿ ತ್ರಯೈಕ್ಯ ಬೋಧನೆಯು ಕಂಡುಬರಲಾರದು.
ಪಾಲಿಕಾರ್ಪ್
ಸ್ಮುರ್ನದ ಪಾಲಿಕಾರ್ಪ್ ಒಂದನೆಯ ಶತಕದ ಕೊನೆಯಲ್ಲಿ ಜನಿಸಿದ್ದನು ಮತ್ತು ಎರಡನೆಯ ಶತಕದ ಮಧ್ಯದಲ್ಲಿ ಸತ್ತನು. ಅವನು ಅಪೊಸ್ತಲ ಯೋಹಾನನ್ನು ಸಂಪರ್ಕಿಸಿದ್ದನೆಂದು ಹೇಳಲಾಗಿದೆ ಮತ್ತು ಅವನು ಇಪಿಸಲ್ತ್ ಆಫ್ ಪಾಲಿಕಾರ್ಪ್ ಟು ದ ಫಿಲಿಪ್ಪಿಯನ್ಸ್ ಪತ್ರಿಕೆಯನ್ನು ಬರೆದಿದ್ದನೆಂದು ಹೇಳುತ್ತಾರೆ.
ಪಾಲಿಕಾರ್ಪನ ಬರಹದಲ್ಲಿ ಒಂದು ತ್ರಯೈಕ್ಯವನ್ನು ಸೂಚಿಸುವ ಏನಾದರೂ ವಿಷಯ ಇತ್ತೋ? ಇಲ್ಲ, ಅದು ಅದನ್ನು ತಿಳಿಸಿರುವುದೂ ಇಲ್ಲ. ನಿಶ್ಚಯವಾಗಿ ಅವನೇನಂದನೋ ಅದು ಯೇಸು ಮತ್ತು ಅವನ ಶಿಷ್ಯರು ಮತ್ತು ಅಪೊಸ್ತಲರು ಕಲಿಸಿದ್ದ ವಿಷಯಕ್ಕೆ ಹೊಂದಿಕೆಯಲ್ಲಿದೆ. ದೃಷ್ಟಾಂತಕ್ಕಾಗಿ, ಅವನ ಇಪಿಸಲ್ತ್ನಲ್ಲಿ, ಪಾಲಿಕಾರ್ಪ್ ಹೇಳಿದ್ದು:
“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆದಾತನು, ಮತ್ತು ದೇವರ ಮಗನಾದ ಯೇಸು ಕ್ರಿಸ್ತನು ತಾನೇ, . . . ನಿಮ್ಮನ್ನು ನಂಬಿಕೆ ಮತ್ತು ಸತ್ಯದಲ್ಲಿ ಬಲಗೊಳಿಸಲಿ.”
ಕೆಮ್ಲೆಂಟ್ನಂತೆ, ಪಾಲಿಕಾರ್ಪ್ ಒಂದು ದೇವತ್ವದಲ್ಲಿ ತ್ರಯೈಕ್ಯದ “ತಂದೆ” ಮತ್ತು “ಮಗ”ನ ಸಮಾನತ್ವದ ಸಂಬಂಧದ ಕುರಿತು ಮಾತಾಡುವುದಿಲ್ಲ. ಬದಲಿಗೆ, ಕೇವಲ ‘ಯೇಸುವಿನ ತಂದೆ’ ಎಂದು ಹೇಳದೆ ಯೇಸುವಿನ “ದೇವರು ಮತ್ತು ತಂದೆ” ಎಂದು ಹೇಳಿರುತ್ತಾನೆ. ಹೀಗೆ ಬೈಬಲ್ ಲೇಖಕರು ಪದೇ ಪದೇ ಮಾಡಿದಂತೆಯೇ, ಅವನು ದೇವರನ್ನು ಯೇಸುವಿನಿಂದ ಪ್ರತ್ಯೇಕಿಸುತ್ತಾನೆ. 2 ಕೊರಿಂಥ 1:3ರಲ್ಲಿ ಪೌಲನು ಅನ್ನುವುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ.” ಅವನು ಕೇವಲ ‘ಯೇಸುವಿನ ತಂದೆಗೆ ಸ್ತೋತ್ರವಾಗಲಿ’ ಎಂದು ಹೇಳುವುದಿಲ್ಲ ಬದಲಿಗೆ ಯೇಸುವಿನ “ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ” ಅಂದಿದ್ದಾನೆ.
ಅಲ್ಲದೆ, ಪಾಲಿಕಾರ್ಪ್ ಹೇಳುವುದು: “ಸರ್ವಶಕ್ತನಾದ ದೇವರಿಂದಲೂ ಮತ್ತು ನಮ್ಮ ರಕ್ಷಕನಾದ ಕರ್ತನಾದ ಯೇಸು ಕ್ರಿಸ್ತನಿಂದಲೂ ಶಾಂತಿಯಾಗಲಿ.” ಇಲ್ಲಿ ಪುನಃ ಯೇಸು ಸರ್ವಶಕ್ತನಾದ ದೇವರಿಂದ ಪ್ರತ್ಯೇಕನಾಗಿದ್ದಾನೆ, ಸಮಾನತೆಯುಳ್ಳ ತ್ರಯೈಕ್ಯ ದೇವರಲ್ಲಿ ಒಬ್ಬನಲ್ಲ.
ಹರ್ಮಸ್ ಮತ್ತು ಪಪೀಯಸ್
ಇನ್ನೊಬ್ಬ ಅಪೊಸ್ತಲಿಕ ಗುರುವು ಎರಡನೆಯ ಶತಮಾನದ ಮೊದಲನೆ ಭಾಗದಲ್ಲಿ ಬರೆದ ಹರ್ಮಸ್. ಆತನ ಕೃತಿಯಾದ ಶೆಪ್ಪರ್ಡ್, ಯಾ ಪಾಸ್ಟರ್ ನಲ್ಲಿ, ಅವನು ದೇವರನ್ನು ಒಂದು ತ್ರಯೈಕ್ಯವಾಗಿ ತಿಳಿದಿದ್ದನೆಂದು ಒಬ್ಬನು ನಂಬುವುದಕ್ಕೆ ನಡಿಸುವ ಯಾವ ವಿಷಯವನ್ನಾದರೂ ತಿಳಿಸುತ್ತಾನೋ? ಅವನು ಏನಂದಿರುವನೋ ಅದರ ಕೆಲವು ಉದಾಹರಣೆಗಳನ್ನು ಗಮನಿಸಿರಿ:
“ಒಬ್ಬ ಮನುಷ್ಯನು ಪವಿತ್ರಾತ್ಮವು ಮಾತಾಡುವಂತೆ ಬಯಸಿದರೆ ಅದು ಮಾತಾಡಲಾರದು, ಆದರೆ ದೇವರು ಮಾತಾಡುವಂತೆ ಬಯಸುವಾಗ ಮಾತ್ರವೇ ಅದು ಮಾತಾಡುತ್ತದೆ. . . . ದೇವರು ದ್ರಾಕ್ಷೇತೋಟವನ್ನು ನೆಟ್ಟನು, ಅಂದರೆ ಅವನು ಜನರನ್ನು ನಿರ್ಮಿಸಿದನು, ಮತ್ತು ಅವರನ್ನು ತನ್ನ ಮಗನಿಗೆ ಕೊಟ್ಟನು. ಮತ್ತು ಮಗನು ತನ್ನ ದೂತರನ್ನು ಅವರ ಮೇಲೆ ಕಾವಲಾಗಿ ಇಟ್ಟನು.”
“ದೇವರ ಮಗನು ಅವನ ಎಲ್ಲಾ ಸೃಷ್ಟಿಗಿಂತ ಹಿರಿಯನಾಗಿದ್ದಾನೆ.”
ಆತ್ಮವು ಮಾತಾಡುವಂತೆ ದೇವರು (ಕೇವಲ ತಂದೆಯಲ್ಲ) ಬಯಸುವಾಗ ಅದು ಮಾತಾಡುತ್ತದೆ ಎಂದು ಹೇಳಿದ ಮೂಲಕ ಇಲ್ಲಿ ಹರ್ಮಸ್ ಪವಿತ್ರಾತ್ಮಕ್ಕಿಂತ ದೇವರು ಶ್ರೇಷ್ಠನೆಂಬದನ್ನು ತೋರಿಸುತ್ತಾನೆ. ಮತ್ತು ದೇವರು ದ್ರಾಕ್ಷೇತೋಟವನ್ನು ತನ್ನ ಮಗನಿಗೆ ಕೊಟ್ಟನು ಎಂದು ಹೇಳಿದ ಮೂಲಕ ಅವನು ಮಗನಿಗಿಂತ ತಂದೆಯ ಶ್ರೇಷ್ಠತೆಯನ್ನು ತೋರಿಸುತ್ತಾನೆ. ದೇವರ ಮಗನು ಮಗನ ಸೃಷ್ಟಿಜೀವಿಗಳಿಗಿಂತ ಹಿರಿಯನು ಎಂದೂ ಅವನು ಹೇಳುತ್ತಾನೆ, ಅಂದರೆ ದೇವರ ಮಗನು ದೇವರ ಚತುರ ಶಿಲ್ಪಿಯಾಗಿ ನಿರ್ಮಿಸಿದ ಸೃಷ್ಟಿಜೀವಿಗಳು, ಯಾಕಂದರೆ “ಭೂಪರಲೋಕಗಳಲ್ಲಿರುವ ಸರ್ವವು ಆತನ ಮುಖಾಂತರವಾಗಿ ಸೃಷ್ಟಿಸಲ್ಪಟ್ಟಿತು.” (ಕೊಲೊಸ್ಸೆ 1:15, 16) ವಾಸ್ತವಾಂಶವೇನಂದರೆ ಮಗನು ಶಾಶ್ವತನಲ್ಲ. ಉಚ್ಛ ದರ್ಜೆಯ ಆತ್ಮಿಕ ಜೀವಿಯಾಗಿ, ದೇವದೂತರುಗಳಂಥ ಬೇರೆ ಆತ್ಮಿಕ ಜೀವಿಗಳಿಗಿಂತ ಮುಂಚೆ ಅವನು ನಿರ್ಮಿಸಲ್ಪಟ್ಟನು, ಅವರು ಆತನ ಮೂಲಕವಾಗಿ ನಿರ್ಮಿಸಲ್ಪಟ್ಟರು.
ಜೆ. ಎನ್. ಡಿ. ಕೆಲ್ಲಿ ತನ್ನ ಅರ್ಲಿ ಕ್ರಿಶ್ಚನ್ ಡಾಕ್ಟ್ರಿನ್ಸ್ ಪುಸ್ತಕದಲ್ಲಿ ದೇವರ ಮಗನ ಕುರಿತು ಹರ್ಮಸ್ನ ದೃಷ್ಟಿಕೋನವನ್ನು ಬರೆದದ್ದು:
“ಹಲವಾರು ಕಥನಗಳಲ್ಲಿ ದೇವರ ಆಂತರಿಕ ಸಮಿತಿಯಲ್ಲಿ ಕೂಡಿರುವ ಆರು ದೇವದೂತರುಗಳಲ್ಲಿ ಶ್ರೇಷ್ಠನಾದ ಮತ್ತು ‘ಅತಿ ಗೌರವಾರ್ಹನೂ’ ‘ಪವಿತ್ರನೂ’ ‘ಮಹಿಮಾಭರಿತನೂ’ ಆಗಿ ನಿಯತವಾಗಿ ವರ್ಣಿಸಲ್ಪಟ್ಟ ಒಬ್ಬ ದೇವದೂತನ ಕುರಿತು ನಾವು ಓದುತ್ತೇವೆ. ಈ ದೇವದೂತನಿಗೆ ಮೀಕಾಯೇಲ್ ಎಂಬ ಹೆಸರು ಕೊಡಲ್ಪಟ್ಟಿದೆ, ಮತ್ತು ಹರ್ಮಸ್ ಅವನನ್ನು ದೇವರ ಮಗನೆಂದು ಪರಿಗಣಿಸಿದನು ಮತ್ತು ಅವನನ್ನು ಪ್ರಧಾನದೂತ ಮೀಕಾಯೇಲನಿಗೆ ಸಮೀಕರಿಸಿದ್ದನೆಂಬ ತೀರ್ಮಾನವನ್ನು ಮಾಡದಿರುವುದು ಕಷ್ಟ.”
“ಕ್ರಿಸ್ತನನ್ನು ಒಬ್ಬ ಸರ್ವಶ್ರೇಷ್ಠ ದೇವದೂತನಾಗಿ ಅರ್ಥವಿವರಣೆ ಮಾಡುವ ಪ್ರಯತ್ನಗಳ . . . ರುಜುವಾತೂ ಅಲ್ಲಿದೆ. . . . ನಿರ್ದಿಷ್ಟಾರ್ಥದಲ್ಲಿ ತ್ರಯೈಕ್ಯ ಬೋಧನೆಯ ಕುರಿತು ಮಾತ್ರ ಯಾವ ಸುಳಿವೂ ಇಲ್ಲ, ನಿಶ್ಚಯ.”
ಪಪೀಯಸ್ ಕೂಡ ಅಪೊಸ್ತಲ ಯೋಹಾನನನ್ನು ತಿಳಿದಿದ್ದನೆಂದು ಹೇಳಲ್ಪಟ್ಟಿದೆ. ಎರಡನೆಯ ಶತಮಾನದ ಆರಂಭದಲ್ಲಿ ಅವನು ಬರೆದದ್ದು ಸಂಭವನೀಯ, ಆದರೆ ಇಂದು ಅವನ ಬರಹಗಳ ಕೇವಲ ಅವಶಿಷ್ಟಗಳು ಮಾತ್ರ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಅವನು ತ್ರಯೈಕ್ಯ ಬೋಧನೆಯ ಕುರಿತು ಏನೂ ಹೇಳುವುದಿಲ್ಲ.
ಹೊಂದಿಕೆಯುಳ್ಳ ಬೋಧನೆ
ದೇವರ ಸರ್ವ ಶ್ರೇಷ್ಠತ್ವ ಮತ್ತು ಯೇಸುವಿನೊಂದಿಗೆ ಆತನ ಸಂಬಂಧದಲ್ಲಿ, ಅಪೊಸ್ತಲಿಕ ಗುರುಗಳ ಬೋಧನೆಯು, ಬೈಬಲಿನಲ್ಲಿ ದಾಖಲೆಯಾಗಿರುವ ಪ್ರಕಾರವೇ ಯೇಸುವಿನ, ಆತನ ಶಿಷ್ಯರ ಮತ್ತು ಅಪೊಸ್ತಲರ ಬೋಧನೆಗೆ ಸಾಧಾರಣ ಹೊಂದಿಕೆಯಾಗಿಯೇ ಇದೆ. ಅವರೆಲ್ಲರು ದೇವರು ತ್ರಯೈಕ್ಯನಲ್ಲ, ಒಬ್ಬ ಪ್ರತ್ಯೇಕ, ಶಾಶ್ವತ, ಸರ್ವಜ್ಞಾನಿ ವ್ಯಕ್ತಿಯಾಗಿದ್ದಾನೆಂದು ಹೇಳುತ್ತಾರೆ. ಮತ್ತು ದೇವರ ಕುಮಾರನು ಒಬ್ಬ ಪ್ರತ್ಯೇಕ, ಕಿರಿಯ, ದೇವರಿಂದ ಆತನ ಚಿತ್ತವನ್ನು ನೆರವೇರಿಸುವುದರಲ್ಲಿ ಆತನ ಸೇವೆಗಾಗಿ ನಿರ್ಮಿಸಲ್ಪಟ್ಟ ಒಂದು ಕೈಕೆಳಗಿನ ಆತ್ಮಿಕ ಜೀವಿಯಾಗಿ ಅವರು ತಿಳಿಸುತ್ತಾರೆ. ಮತ್ತು ಪವಿತ್ರಾತ್ಮವು ಎಲ್ಲಿಯೂ ದೇವರಿಗೆ ಸರಿಸಮಾನವಾದದ್ದಾಗಿ ಹೇಳಲ್ಪಟ್ಟಿಲ್ಲ.
ಹೀಗೆ, ಒಂದನೆಯ ಶತಮಾನದ ಕೊನೆಯ ಮತ್ತು ಎರಡನೆಯ ಶತಕದ ಆರಂಭದ ಅಪೊಸ್ತಲಿಕ ಗುರುಗಳ ಬರಹಗಳಲ್ಲಿ, ಕ್ರೈಸ್ತ ಪ್ರಪಂಚದ ತ್ರಯೈಕತ್ವಕ್ಕೆ ಯಾವ ಆಧಾರವೂ ಇರುವುದಿಲ್ಲ. ಅವರು ದೇವರು, ಯೇಸು ಮತ್ತು ಪವಿತ್ರಾತ್ಮದ ಕುರಿತು ಬೈಬಲು ಹೇಳುವಂತೆಯೇ ಮಾತಾಡಿದ್ದಾರೆ. ಉದಾಹರಣೆಗಾಗಿ, ಅಪೊಸ್ತಲರ ಕೃತ್ಯಗಳು 7:55, 56 ನೋಡಿರಿ.
“ಸೆಫ್ತನನು ಪವಿತ್ರಾತ್ಮ ಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿ ನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿರುವ ಯೇಸುವನ್ನೂ ಕಂಡು—ಅಗೋ, ಆಕಾಶವು ತೆರೆದಿರುವುದನ್ನೂ ಮನುಷ್ಯ ಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನೋಡುತ್ತೇನೆ ಅಂದನು.”—ಕ್ಯಾಥ್ಲಿಕ್ ಜೆರೂಸಲೇಮ್ ಬೈಬಲ್.
ಸೆಫ್ತನನು ಪರಲೋಕದಲ್ಲಿ ದೇವರನ್ನು ಮತ್ತು ಆತನ ಪಕ್ಕದಲ್ಲಿ ಯೇಸುವು ನಿಂತಿರುವ ಒಂದು ದರ್ಶನವನ್ನು ಕಂಡನು. ಮಗನು ಕೇವಲ “ತಂದೆ” ಎಂಬಾತನ ಪಕ್ಕದಲ್ಲಿ ಅಲ್ಲ, ಯೇಸುವಿಗಿಂತ ಗುರುತಿನಲ್ಲಿ ತೀರಾ ಪ್ರತ್ಯೇಕನಾದ “ದೇವರ” ಪಕ್ಕದಲ್ಲಿ ನಿಂತಿದ್ದನು. ಮತ್ತು ಸೆಫ್ತನನು ಏನನ್ನು ಕಂಡನೋ ಅದರಲ್ಲಿ ಯಾವ ಮೂರನೆಯ ವ್ಯಕ್ತಿಯೂ ಒಳಗೂಡಿರಲಿಲ್ಲ. ಪರಲೋಕದಲ್ಲಿ ಯೇಸು ಮತ್ತು ಆತನ ತಂದೆಯೊಂದಿಗೆ ಪವಿತ್ರಾತ್ಮವು ಕಂಡು ಬರಲಿಲ್ಲ.
ಅದು ಪ್ರಕಟನೆ 1:1ಕ್ಕೆ ಸದೃಶವಾಗಿದೆ, ಅದು ಹೇಳುವುದು: “ಇದು ದೇವರಿಂದ ಯೇಸು ಕ್ರಿಸ್ತನಿಗೆ ಕೊಡಲ್ಪಟ್ಟ ಪ್ರಕಟನೆಯು.” (ದಿ ಜೆರೂಸಲೇಮ್ ಬೈಬಲ್) ಪುನಃ, ಪುನರುತಿಥ್ತ ಯೇಸುವು ಪರಲೋಕದಲ್ಲಿ ದೇವರಿಂದ ಪೂರಾ ಪ್ರತ್ಯೇಕ ವ್ಯಕ್ತಿಯಾಗಿ ತೋರಿಸಲ್ಪಟ್ಟಿದ್ದಾನೆ ಮತ್ತು ಪವಿತ್ರಾತ್ಮವು ತಿಳಿಸಲ್ಪಟ್ಟಿರುವುದಿಲ್ಲ. ಯೇಸು ತ್ರಯೈಕ್ಯದ ದ್ವಿತೀಯ ವ್ಯಕ್ತಿಯಾಗಿದ್ದಲ್ಲಿ, ಸರ್ವ ಜ್ಞಾನಿಯಾಗಿದ್ದಲ್ಲಿ, ಅವನಿಗೆ ಒಂದು ಪ್ರಕಟನೆಯು “ಕೊಡಲ್ಪಡುವುದು” ಹೇಗೆ ಸಾಧ್ಯ?
ಇಂಥ ವಚನಗಳು ತ್ರಯೈಕ್ಯವಿಲ್ಲವೆಂಬದನ್ನು ಸ್ಪಷ್ಟವಾಗಿಗಿ ತೋರಿಸುತ್ತವೆ. ಮತ್ತು ದೇವರು ಒಬ್ಬ ತ್ರಯೈಕ್ಯನೆಂದು ಇಡೀ ಬೈಬಲಿನಲ್ಲಿ ಯಾವ ಶಾಸ್ತ್ರವಚನವೂ ತಿಳಿಸುವುದಿಲ್ಲ. ಅಪೊಸ್ತಲಿಕ ಗುರುಗಳ ಬರಹಗಳು ಇದನ್ನು ಪ್ರತಿಬಿಂಬಿಸಿವೆ. ಅವರು ಕ್ರೈಸ್ತ ಪ್ರಪಂಚದ ತ್ರಯೈಕ್ಯವನ್ನು ಕಲಿಸಲಿಲ್ಲವೆಂಬದು ಅತ್ಯಂತ ನಿಶ್ಚಯ.
ಕ್ರೈಸ್ತತ್ವದ ಕುರಿತಾದ ಬರಹಗಳ ಮುಂದಣ ಪ್ರಧಾನ ಗುಂಪು ಎರಡನೆಯ ಶತಮಾನದ ಕೊನೆಯಲ್ಲಿ ಬಂತು. ಅವು ಅಪಾಲಜಿಸ್ಟ್ಗಳೆಂದು ಕರೆಯಲ್ಪಟ್ಟ ಚರ್ಚ್ ಪುರುಷರ ಕೃತಿಗಳಾಗಿದ್ದವು. ಅವರು ತ್ರಯೈಕ್ಯವನ್ನು ಕಲಿಸಿದ್ದರೋ? ಮುಂದಿನ ಒಂದು ಸಂಚಿಕೆಯಲ್ಲಿ, ಈ ಲೇಖನಮಾಲೆಯ 3ನೆಯ ಭಾಗವು ಅವರ ಬೋಧನೆಗಳ ಮೇಲೆ ಹೇಳಿಕೆಯನ್ನೀಯುವುದು. (w92 2/1)
References:
1. The New Encyclopædia Britannica, 15th Edition, 1985, Micropædia, Volume 1, page 488.
2. A Dictionary of Christian Theology, edited by Alan Richardson, 1969, page 95; The New Encyclopædia Britannica, 15th Edition, 1985, Micropædia, Volume 4, page 79.
3. The Apostolic Fathers, Volume 3, by Robert A. Kraft, 1965, page 163.
4. Ibid., pages 166-7.
5. The Influence of Greek Ideas on Christianity, by Edwin Hatch, 1957, page 252.
6. The Ante-Nicene Fathers, Alexander Roberts and James Donaldson, editors, American Reprint of the Edinburgh Edition, 1885, Volume I, pages 5, 16, 21.
7. The Library of Christian Classics, Volume 1, Early Christian Fathers, translated and edited by Cyril C. Richardson, 1953, pages 70-1.
8. Ibid., page 60.
9. The Ante-Nicene Fathers, Volume I, page 52.
10. Ibid., page 58.
11. Ibid., page 62.
12. Ibid., page 108.
13. Ibid., page 116.
14. Ibid., page 53.
15. The Apostolic Fathers, Volume 4, by Robert M. Grant, 1966, page 63.
16. The Ante-Nicene Fathers, Volume I, pages 46-7; Cyclopedia of Biblical, Theological, and Ecclesiastical Literature, by John McClintock and James Strong, reprinted by Baker Book House Co., 1981, Volume IV, pages 490-3; The Catholic Encyclopedia, 1910, Volume VII, pages 644-7.
17. The Ante-Nicene Fathers, Volume I, page 35.
18. Ibid., page 33.
19. The Ante-Nicene Fathers, Volume II, pages 27, 35.
20. The Apostolic Fathers (Loeb’s Classical Library) with an English Translation by Kirsopp Lake, 1976, page 249.
21. Early Christian Doctrines, by J. N. D. Kelly, Second Edition, 1960, pages 94-5.