ಯೆಹೋವನ ಮಾರ್ಗವು ಜೀವಿತದ ಅತ್ಯುತ್ತಮ ಮಾರ್ಗ
ಎರ್ಕಿ ಕನ್ಕಾನ್ಪರಿಂದ ಹೇಳಲ್ಪಟ್ಟದ್ದು
ಬಾಲ್ಯದ ಸಮಯದಿಂದಲೂ ನನ್ನ ಗುರಿಯು ಯೆಹೋವನ ಸಾಕ್ಷಿಗಳ ಫಿನ್ಲ್ಯಾಂಡ್ ಬ್ರಾಂಚ್ನಲ್ಲಿ ಅಥವಾ ಬೆತೆಲ್ ಎಂದು ಕರೆಯಲ್ಪಡುವ ಅದರಲ್ಲಿ ಸೇವೆ ಮಾಡುವುದಾಗಿತ್ತು. ಹೀಗೆ ಒಬ್ಬ ಸಂಚಾರ ಸೇವಕರು 1941 ರ ಬೇಸಗೆಯಲ್ಲಿ, “ಭವಿಷ್ಯತ್ತಿಗಾಗಿ ನಿನ್ನ ಯೋಜನೆಗಳೇನು?” ಎಂದು ನನ್ನನ್ನು ಕೇಳಿದಾಗ ನಾನು ಉತ್ತರಿಸಿದ್ದು: “ನನಗೆ ಯಾವಾಗಲೂ ಬೆತೆಲಿಗೆ ಹೋಗಲು ಮನಸ್ಸಿತ್ತು.”
“ಆ ಕನಸುಗಳನ್ನು ನೀನು ತ್ಯಜಿಸಿಬಿಡುವುದು ಒಳ್ಳೆಯದು, ನೀನೆಂದೂ ಆಮಂತ್ರಿಸಲ್ಪಡಲಾರೆ” ಎಂದರವರು. ಮೊದಮೊದಲು ನಾನು ಬಹಳವಾಗಿ ನಿರಾಶೆಗೊಂಡೆ, ಆದರೆ ಅನಂತರ ಆ ವಿಷಯವನ್ನು ಕೇವಲ ಯೆಹೋವನ ಹಸ್ತಗಳಲ್ಲಿ ಬಿಡುವಂತೆ ನಾನು ನಿರ್ಣಯಿಸಿದೆ. ಅನಂತರ ಕೆಲವು ತಿಂಗಳುಗಳಲ್ಲೇ ಬೆತೆಲ್ನಲ್ಲಿ ಸೇವೆ ಮಾಡಲು ನನಗೆ ಆಮಂತ್ರಣ ಬಂತು.
1941 ರ ನವಂಬರದ ಒಂದು ಅತಿ ಚಳಿಯ, ತಿಳಿಯಾದ ದಿನ ಹೆಲ್ಸಿಂಕಿಯಲ್ಲಿ ಬ್ರಾಂಚ್ ಆಫೀಸಿನ ಬಾಗಿಲ ಗಂಟೆಯನ್ನು ಒತ್ತಿದಾಗ ನಾನೊಬ್ಬ ನಾಚುವ, 17 ವಯಸ್ಸಿನ ಗ್ರಾಮೀಣ ಬಾಲಕನಾಗಿದ್ದೆ. ಬ್ರಾಂಚ್ ಮೇಲ್ವಿಚಾರಕರಾದ ಕಾರ್ಲೊ ಹಾರ್ಟೆವ ನನ್ನನ್ನು ಕೂಡಲೇ ಸ್ವಾಗತಿಸಿದರು. ಆ ಸಮಯದಲ್ಲಿ ಫಿನ್ಲ್ಯಾಂಡ್ ಬ್ರಾಂಚ್ನ ಮೇಲ್ವಿಚಾರದ ಕೆಳಗೆ 1,135 ಸಾಕ್ಷಿಗಳು ಇದ್ದರು.
ಒಂದು ಕ್ರೈಸ್ತ ಪಿತ್ರಾರ್ಜಿತ
1914 ರಲ್ಲಿ ನನ್ನ ತಂದೆಯವರು ದ ಡಿವೈನ್ ಪ್ಲಾನ್ ಆಫ್ ಏಜಸ್ ಎಂಬ ವಾಚ್ ಟವರ್ ಪ್ರಕಾಶನದ ಒಂದು ಪ್ರತಿಯನ್ನು ಪಡೆಕೊಂಡಿದ್ದರು. ಆದರೆ ಆನಂತರ ಬೇಗನೇ ಮೊದಲನೆಯ ಲೋಕ ಯುದ್ಧವು ಆರಂಭಿಸಿತು, ಮತ್ತು ಅವರಿಗೆ ಅದನ್ನು ಓದುವ ಸಂದರ್ಭ ಸಿಗಲಿಲ್ಲ.
ರಾಷ್ಟ್ರೀಯ ಸ್ವಾತಂತ್ರ್ಯಕ್ಕಾಗಿ ಫಿನ್ಲ್ಯಾಂಡಿನ ಹೋರಾಟವು ಸಮಸ್ಯೆಗಳನ್ನು ಉಂಟುಮಾಡಿತ್ತು. ಬಿಳಿ ಮತ್ತು ಕೆಂಪು—ಎಂಬ ಎರಡು ಬಲಾಢ್ಯ ಗುಂಪುಗಳು ರೂಪಿಸಲ್ಪಟ್ಟವು. ಬಿಳಿಯರು ಬಂಡವಾಳಗಾರರನ್ನು ಮತ್ತು ಮಧ್ಯಮ ವರ್ಗದವರನ್ನು ಪ್ರತಿನಿಧಿಸಿದಾಗ ಕೆಂಬಣ್ಣದವರು ಕಾರ್ಮಿಕರನ್ನು ಪ್ರತಿನಿಧಿಸಿದ್ದರು. ನನ್ನ ತಂದೆ ಎರಡೂ ಗುಂಪುಗಳಿಂದ ಪೂರ್ಣ ಪ್ರತ್ಯೇಕವಾಗಿ ಉಳಿದು, ತಟಸ್ಥರಾಗಿರಲು ಪ್ರಯತ್ನಿಸಿದ್ದರು. ಆದರೂ ಎರಡೂ ಗುಂಪುಗಳು ಅವರನ್ನು ಸಂಶಯಾಸ್ಪದರಾಗಿ ನೋಡಿದರು.
ಪರಿಣಮಿಸಿದ ಪ್ರಕಾರ, ತಂದೆಯು ಎರಡು ಸಾರಿ ಮರಣ ಶಿಕ್ಷೆಗೆ ಗುರಿಯಾದರು, ಒಮ್ಮೆ ಬಿಳಿಯರಿಂದ ಮತ್ತು ಇನ್ನೊಮ್ಮೆ ಕೆಂಬಣ್ಣದವರಿಂದ. ಒಮ್ಮೆ ಒಬ್ಬ ಮನುಷ್ಯನು ಕೊಲಿಮಾಡಲ್ಪಟ್ಟಾಗ, ಕೊಲೆಮಾಡಿದವನನ್ನು ಹಿಡಿಯಲಾಗಲಿಲ್ಲ, ಆಗ ಹತ್ತು ಮಂದಿ ಯುವಕರೊಂದಿಗೆ ನನ್ನ ತಂದೆಯನ್ನೂ ಹಿಡಿದು ಮರಣ ಶಿಕ್ಷೆಗೆ ಗುರಿಮಾಡಲಾಯಿತು. ನನ್ನ ತಂದೆಯ ಅಧ್ಯಾಪಕರೊಬ್ಬರು ಜ್ಯೂರಿಯ ಸದಸ್ಯರಲ್ಲೊಬ್ಬರಾಗಿದ್ದರಿಂದ ಅವರು ನನ್ನ ತಂದೆಗೆ ಬಿಡುಗಡೆಯನ್ನು ಶಿಫಾರಸು ಮಾಡಿದರು, ಮತ್ತು ಅದನ್ನು ನೀಡಲಾಯಿತು. ಆ ಬೇರೆ ಒಂಭತ್ತು ಯುವಕರನ್ನು ದೇಹಾಂತಗೊಳಿಸಲಾಯಿತು.
ಇನ್ನೊಂದು ಸಂದರ್ಭದಲ್ಲಿ ತಂದೆಗೆ ಪುನಃ ಒಂದು ಮರಣಶಿಕ್ಷೆಯಿಂದ ವಿನಾಯಿತಿ ದೊರೆಯಿತು. ತದನಂತರ ಅವರು ಅಕ್ಷರಾರ್ಥವಾಗಿ ಭೂಗತಕ್ಕಿಳಿಯಲು ನಿರ್ಣಯಿಸಿದರು. ಅವರು ಮತ್ತು ಅವರ ಸಹೋದರನು ತೋಡಿ ಮಾಡಿದ ಒಂದು ನೆಲಮನೆಯಲ್ಲಿ ಯುದ್ಧವು ಮುಗಿಯುವ ತನಕ ವಾಸಮಾಡಿದರು. ಅವರನ್ನು ಸಜೀವವಾಗಿರಿಸಲು ಅವರ ಕಿರಿಯ ಸಹೋದರನು ಅವರಿಗೆ ಅನ್ನಪಾನಗಳನ್ನು ಒದಗಿಸಿದನು.
1918 ರಲ್ಲಿ ಯುದ್ಧವು ಕೊನೆಗೊಂಡ ಮೇಲೆ ತಂದೆ ಮದುವೆಯಾದರು ಮತ್ತು ಆ ನೆಲಮನೆಯ ಸಮೀಪ ಒಂದು ಮನೆಯನ್ನು ಕಟ್ಟಿದರು. ನನಗದರ ಚೆನ್ನಾದ ಪರಿಚಯ ಅನಂತರ ಆಯಿತು ಹೇಗಂದರೆ ಅದು ನನ್ನ ಆಟದ ಬಯಲಾಗಿತ್ತು. ಅಲ್ಲಿ ನೆಲದಡಿಯಲ್ಲಿ ಗುಪ್ತವಾಗಿ ಅವಿತಿದ್ದಾಗ ಬಹಳ ಪ್ರಾರ್ಥನೆಯನ್ನು ಮಾಡಿದ್ದೆ ಎಂದು ತಂದೆ ನನಗೆ ಹೇಳಿದ್ದರು. ದೇವರನ್ನು ಸೇವಿಸುವ ವಿಧವನ್ನು ಒಂದುವೇಳೆ ತಾನೆಂದಾದರೂ ಕಲಿತರೆ ತಾನದನ್ನೇ ಮಾಡುವೆನೆಂದು ಅವರು ದೇವರಿಗೆ ವಚನ ಕೊಟ್ಟಿದ್ದರು.
ಮದುವೆಯ ನಂತರ ತುಸು ಸಮಯದಲ್ಲಿ ಒಂದು ವ್ಯಾಪಾರ ಸಂಚಾರಕ್ಕೆ ಹೋಗುವಾಗ ಓದಲು ಏನಾದರೂ ಒಯ್ಯಲು ತಂದೆ ನಿರ್ಧರಿಸಿದರು. ವರ್ಷಗಳ ಹಿಂದೆ ಅವರು ಖರೀದಿಸಿದ್ದ ಡಿವೈನ್ ಪ್ಲಾನ್ ಆಫ್ ಏಜಸ್ ಮೇಲಟ್ಟದಲ್ಲಿ ಅವರಿಗೆ ಸಿಕ್ಕಿತು. ಅವರದನ್ನು “ಯೆಹೋವನ ದಿನ” ಎಂಬ ಅಧ್ಯಾಯಕ್ಕೆ ತೆರೆದು ಓದ ತೊಡಗಿದರು. ಅವರು ತಮ್ಮಲ್ಲೇ ಹೀಗಂದುಕೊಂಡರು. “ಇದು ಸತ್ಯ, ಇದು ಸತ್ಯ.” ಮೇಲಟ್ಟದಿಂದ ಇಳಿಯುತ್ತಾ, ನನ್ನ ತಾಯಿಗೆ ಅವರಂದದ್ದು: “ಸತ್ಯ ಧರ್ಮ ನನಗೆ ಸಿಕ್ಕಿತು.”
ಬಹುಮಟ್ಟಿಗೆ ಆ ಕೂಡಲೇ ತಂದೆ ತಾನು ಕಲಿತ ವಿಷಯಗಳ ಕುರಿತು ಇತರರಿಗೆ, ಮೊದಲಾಗಿ ಸಂಬಂಧಿಕರಿಗೆ ಮತ್ತು ನೆರೆಯವರಿಗೆ ಸಾರತೊಡಗಿದರು. ಅನಂತರ ಬಹಿರಂಗ ಭಾಷಣಗಳನ್ನು ಕೊಡಲಾರಂಭಿಸಿದರು. ತುಸು ಸಮಯದಲ್ಲಿ ಆ ಕ್ಷೇತ್ರದ ಇತರರು ಅವರೊಂದಿಗೆ ಜತೆಗೂಡಿದರು. ಆಗ ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಸಂಪರ್ಕಕ್ಕೆ ಬಂದ ಮೇಲೆ ತಂದೆಯವರು 1923 ರಲ್ಲಿ ದೀಕ್ಷಾಸ್ನಾನವನ್ನು ಪಡಕೊಂಡರು. ಮಕ್ಕಳು ಹುಟ್ಟಿದಾಗ—ಕಟ್ಟಕಡೆಗೆ ನಾವು ನಾಲ್ವರು—ತಂದೆ ನಮಗೆ ಕಲಿಸುವುದನ್ನು ದುರ್ಲಕ್ಷಿಸಲಿಲ್ಲ. ವಾಸ್ತವದಲ್ಲಿ ಒಂದು ಸಭೆಯು ಸ್ಥಾಪಿಸಲ್ಪಟ್ಟ ನಂತರ ನಾವು ಪ್ರತಿಯೊಂದು ಕೂಟಕ್ಕೆ ಹಾಜರಾಗುವುದನ್ನು ಅವಶ್ಯಪಡಿಸಲಾಯಿತು.
ಆರಂಭದ ಸ್ಮರಣೆಗಳು
ನನ್ನ ಆರಂಭದ ಮರುಸ್ಮರಣೆಗಳು 1929 ರಲ್ಲಿ ನಾನು ಐದು ವರ್ಷದವನಿದ್ದಾಗ ನಮ್ಮ ಹುಟ್ಟೂರಿನ ಸಭೆಯಿಂದ ಏರ್ಪಡಿಸಲ್ಪಟ್ಟ ಒಂದು ಸಮ್ಮೇಲನದ ಕುರಿತಾಗಿತ್ತು. ಹತ್ತಿರದ ಸಭೆಗಳಿಂದ ಅನೇಕ ಜನರು ಒಟ್ಟುಗೂಡಿದ್ದರು ಮತ್ತು ಬ್ರಾಂಚ್ ಆಫೀಸಿನ ಒಬ್ಬ ಪ್ರತಿನಿಧಿಯವರು ಸಹ ಹಾಜರಿದ್ದರು. ಸಮ್ಮೇಳನಗಳಲ್ಲಿ ಮಕ್ಕಳನ್ನು ಆಶೀರ್ವದಿಸುವುದು, ಕಡಿಮೆಪಕ್ಷ ಫಿನ್ಲ್ಯಾಂಡ್ನಲ್ಲಿ, ಆ ದಿನಗಳಲ್ಲಿ ವಾಡಿಕೆಯಾಗಿತ್ತು. ಆದುದರಿಂದ ಬೆತೆಲ್ನಿಂದ ಬಂದ ಸಹೋದರನು ಯೇಸು ತನ್ನ ಶುಶ್ರೂಷೆಯಲ್ಲಿ ಮಾಡಿದ ಹಾಗೆ, ಮಕ್ಕಳನ್ನು ಆಶೀರ್ವದಿಸಿದನು. ನಾನದನ್ನು ಎಂದೂ ಮರೆತಿರುವುದಿಲ್ಲ.—ಮಾರ್ಕ 10:16.
ಇನ್ನೊಂದು ಆರಂಭದ ಸ್ಮರಣೆಯು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು 1931 ರಲ್ಲಿ ಸ್ವೀಕರಿಸಿದ್ದೇ. ಆ ಸಂದರ್ಭದ ವಿಶೇಷತೆಯ ಅರಿವುಳ್ಳವರಾಗಿ ನನ್ನ ತಂದೆಯವರು ನಮ್ಮ ಹೊಸ ಹೆಸರಿನ ಕುರಿತಾದ ಪ್ರಕಟನೆಯನ್ನು ಸಭೆಗೆ ಗಂಭೀರವಾಗಿ ಓದಿಹೇಳಿದ್ದರು.
ನನಗೆಷ್ಟು ನೆನಪಿದೆಯೇ ಅಷ್ಟು ಹಿಂದಿನಿಂದ ನಾನು ನನ್ನ ತಂದೆಯೊಂದಿಗೆ ಸಾರಲು ಹೋಗುತ್ತಿದ್ದೆನು. ಮೊದಮೊದಲು ನಾನು ಬರೇ ನಿಂತು ಅವರು ಹೇಳುವುದನ್ನು ಕೇಳುತ್ತಿದ್ದೆ, ಕ್ರಮೇಣ ನಾನಾಗಿಯೇ ಕಾರ್ಯನಡಿಸ ತೊಡಗಿದೆ. 1935 ರಲ್ಲಿ ಒಬ್ಬ ಸಂಚಾರ ಮೇಲ್ವಿಚಾರಕರು ನಮ್ಮನ್ನು ಸಂದರ್ಶಿಸಿದಾಗ, ನಾನು ನಮ್ಮೆಲ್ಲಾ ನೆರೆಯವರ ಬಳಿಗೆ ಹೋಗಿ ಕೂಟಕ್ಕೆ ಹಾಜರಾಗಲು ಅವರನ್ನು ಆಮಂತ್ರಿಸಿದೆ. ಅವರಿಗೆ ಕಿರು ಪುಸ್ತಕಗಳನ್ನೂ ನೀಡಿದೆ ಮತ್ತು ಕೆಲವರು ಅವನ್ನು ಸ್ವೀಕರಿಸಿದ್ದರು.
ಶಾಲೆ ಮತ್ತು ಒಂದು ಮಹತ್ವದ ನಿರ್ಣಯ
ನಾವು ನಾಲ್ವರು ಮಾತ್ರವೇ ಶಾಲೆಯಲ್ಲಿ ಸಾಕ್ಷಿ ಹೆತ್ತವರ ಮಕ್ಕಳಾಗಿದ್ದೆವು, ಮತ್ತು ಇತರ ಯುವಕರೊಂದಿಗೆ ಅಕ್ರೈಸ್ತ ವರ್ತನೆಗಳಲ್ಲಿ ಕೂಡದರ್ದಿಂದಾಗಿ ಆಗಿಂದಾಗ್ಯೆ ಹಾಸ್ಯಕ್ಕೆ ಗುರಿಯಾಗುತ್ತಿದ್ದೆವು. ಶಾಲಾ ಸಹಪಾಠಿಗಳು ನನ್ನನ್ನು ಧೂಮಪಾನ ಮಾಡುವಂತೆ ಸೆಳೆಯ ಪ್ರಯತ್ನಿಸಿದರೂ ನಾನೆಂದೂ ಮಾಡಲೊಲ್ಲದ್ದಿದೆ. ನಮ್ಮನ್ನು ರಸ್ಸಲೈಟ್ಸ್ (ರಸ್ಸಲ್ರು ವಾಚ್ ಟವರ್ ಸೊಸೈಟಿಯ ಮೊದಲ ಪ್ರೆಸಿಡೆಂಟರು) ಅಥವಾ ಹಾರ್ಟೆವಲೈಟ್ಸ್ (ಹಾರ್ಟೆವ ಆಗಿನ ಫಿನ್ಲ್ಯಾಂಡ್ ಬ್ರಾಂಚ್ ಮೇಲ್ವಿಚಾರಕರು) ಎಂದು ಪರಿಹಾಸ್ಯದಿಂದ ಕರೆಯುತ್ತಿದ್ದರು. ಯಾರು ಒಮ್ಮೆ ನಮಗೆ ಗೇಲಿಮಾಡಿದ್ದರೋ ಆ ಕೆಲವು ಯುವಕರು ಕೊನೆಗೆ ಸಾಕ್ಷಿಗಳಾಗಿ ಪರಿಣಮಿಸಿದರೆಂದು ಹೇಳಲೂ ನಾನು ಸಂತೋಷಿಸುತ್ತೇನೆ.
ನನ್ನ ಅಧ್ಯಾಪಕರು ಅಧಿಕ ವಿದ್ಯಾಭ್ಯಾಸಕ್ಕಾಗಿ ನನ್ನ ಉತ್ತೇಜಿಸುತ್ತಿದ್ದರು ಮತ್ತು ನಾನೊಮ್ಮೆ ಇಂಜಿನಿಯರನಾಗುವುದನ್ನೂ ಪರಿಗಣಿಸಿದ್ದೆನು. ಆದರೆ ನನ್ನ ಜೀವಿತದ ಸಂಧಿಕಾಲವಾಗಿ ರುಜುವಾದ ಒಂದು ಯೆಹೋವನ ಸಾಕ್ಷಿಗಳ ಸಮ್ಮೇಲನವು 1939 ರ ವಸಂತ ಋತುವಿನಲ್ಲಿ ಪೋರೆಯಲ್ಲಿ ನಡೆಯಿತು. ನನ್ನ ಕಿರಿಯ ಸಹೋದರ ಟುಮೋ ಮತ್ತು ನಾನು ಇಬ್ಬರೂ ನಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡೆವು ಮತ್ತು ಆ ಸಮ್ಮೇಳನದಲ್ಲಿ ಮೇ 28, 1939 ರಂದು ನೀರಿನ ದೀಕ್ಷಾಸ್ನಾನದ ಮೂಲಕ ಅದನ್ನು ಸೂಚಿಸಿದೆವು. ತದನಂತರ, ಸಪ್ಟಂಬರದ ಆರಂಭದಲ್ಲಿ 2 ನೆಯ ಲೋಕ ಯುದ್ಧವು ಪ್ರಾರಂಭಗೊಂಡಿತು.
ಯೂರೋಪಿನಲ್ಲಿ ಪರಿಸ್ಥಿತಿಗಳು ಗಮನಾರ್ಹವಾಗಿ ಬದಲಾವಣೆಗೊಂಡವು. ಫಿನ್ಲ್ಯಾಂಡ್ ಮತ್ತು ರಶ್ಯಾದ ನಡುವಣ ಸನ್ನಿವೇಶವು ವಿಷಮಾವಸ್ಥೆಗಿಳಿಯಿತು. ಹರ್ಮಗೆದ್ದೋನ್ ಹತ್ತರಿಸುತ್ತಾ ಇದೆ ಎಂದು ತಂದೆ ಒತ್ತಿಹೇಳಿದರು, ನಮ್ಮನ್ನು ಪಯನೀಯರರಾಗುವಂತೆ ಪ್ರೋತ್ಸಾಹಿಸಿದರು. ಹೀಗೆ 1940 ರ ದಶಂಬರದಲ್ಲಿ ನಾನು ಮತ್ತು ನನ್ನ ತಮ್ಮ ಉತ್ತರ ಫಿನ್ಲ್ಯಾಂಡ್ನಲ್ಲಿ ಪಯನೀಯರ ಸೇವೆಯನ್ನು ಆರಂಭಿಸಿದೆವು.
ಪಯನೀಯರಿಂಗ್ ಮತ್ತು ಬೆತೆಲ್ ಸೇವೆ
ಪಯನೀಯರ ಸೇವೆ ಮಾಡಿದಾಗ ನಾವು ಹೆಚ್ಚಿನ ಸಮಯ ಒರ್ಯೊ ಕಾಲ್ಯೋನೊಂದಿಗೆ ವಾಸಿಸಿದೆವು. ಅವನು ಸುಮಾರು 30 ವರ್ಷಗಳ ಹಿಂದೆ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ಬೈಬಲ್ ವಿದ್ಯಾರ್ಥಿಯಾಗಿದ್ದ ಒಬ್ಬ ಸಹೋದರನು. ಒರ್ಯೊ ಅತ್ಯಂತ ಸ್ನೇಹಭಾವದವನು, ನಮಗೆ ಹಿತಕರವಾದ ವಾತಾವರಣವನ್ನು ಒದಗಿಸಲು ಅವನು ಬಹು ಪ್ರಯಾಸಪಟ್ಟನು. ಅವನ ಸ್ವಂತ ಸಹೋದರ ಕ್ಯೋಸ್ಟ್ ಕ್ಯಾಲ್ಯೋ 1937 ರಿಂದ 1940 ರ ತನಕ ಫಿನ್ಲ್ಯಾಂಡಿನ ಪ್ರೆಸಿಡೆಂಟನಾಗಿ ಕಾರ್ಯ ನಡಿಸಿದ್ದನು. ಒಳ್ಳೇ ಸರಕಾರಕ್ಕೆ ಮತ್ತು ಬಾಳುವ, ಲೋಕವ್ಯಾಪಕ ಶಾಂತಿಗೆ ದೇವರ ರಾಜ್ಯವೊಂದೇ ನಿರೀಕ್ಷೆಯೆಂದು ವಿವರಿಸಿದ ಪೂರ್ಣ ಸಾಕ್ಷಿಯನ್ನು ಓರ್ಯೊ ತನ್ನ ಸಹೋದರನಿಗೆ ಕೊಟ್ಟಿದ್ದನೆಂತ ನಮಗೆ ಹೇಳಿದನು.
ಸಮಯವು ಸಂದಷ್ಟಕ್ಕೆ ಬೆತೆಲ್ ಕುಟುಂಬದ ಸದಸ್ಯನಾಗುವ ನನ್ನ ಅಪೇಕ್ಷೆಯು ಮತ್ತಷ್ಟು ಬೆಳೆಯಿತು. ಅದಕ್ಕಾಗಿ ಆಶಾಗೋಪುರ ಕಟ್ಟುವ ವಿರುದ್ಧ ಸರ್ಕಿಟ್ ಮೇಲ್ವಿಚಾರಕರು ಕೊಟ್ಟಿದ್ದ ಎಚ್ಚರಿಕೆಯ ಮಧ್ಯೆಯೂ, ಸಂತೋಷಕರವಾಗಿ, ಬೆತೆಲ್ ಸೇವೆಗಾಗಿ ನನ್ನ ಅರ್ಜಿಯು ಸ್ವೀಕರಿಸಲ್ಪಟ್ಟಿತು. ಅಲ್ಲಿ ನನಗೆ ದೊರೆತ ಮೊದಲ ಕೆಲಸ ಓಲೆಕಾರನದ್ದು. ಅದರೂ, ಬೇಗನೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸುಯೋಗ ಸಿಕ್ಕಿತು. ಅಲ್ಲಿ ನಾನು ನಮ್ಮ ಚಿಕ್ಕ ಪ್ರೆಸ್ರೂಮ್, ಶಿಪ್ಪಿಂಗ್ ಮುಂತಾದ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದೆ.
ತಾಟಸ್ಥ್ಯವನ್ನು ಕಾಪಾಡುವುದು
1942 ರಲ್ಲಿ ನನ್ನ 18 ನೆಯ ವಯಸ್ಸಿನಲ್ಲಿ ನನ್ನನ್ನು ಮಿಲಿಟರಿ ಸೇವೆಗಾಗಿ ಕರೆಯಲಾಯಿತು. ಅದಕ್ಕೆ ಸೇರಲು ನಾನು ನಿರಾಕರಿಸಿದೆ, ನನ್ನನ್ನು ದೀರ್ಘಾವಧಿಗಳ ವಿಧಿವತ್ತಾದ ವಿಚಾರಣೆಗೆ ಒಳಪಡಿಸಿದರು, ಎರಡು ಸಲ ಪಿಸ್ತೂಲನ್ನು ನನ್ನೆಡೆಗೆ ಗುರಿಯಿಟ್ಟರು. ಬೇರೆ ಸಮಯದಲ್ಲಿ ದೈಹಿಕ ಹಿಂಸಾಚಾರವನ್ನೆಸಗಲಾಯಿತು. ಅಲ್ಲದೆ, ವಿಚಾರಣೆಯ ಸಮಯದಲ್ಲಿ ಕಟು ಚಳಿಯ ಶಾಖರಹಿತ ಸೆರೆಮನೆಯ ಕೊಠಡಿಯಲ್ಲಿ ನನ್ನನ್ನು ಬಂಧಿಸಿದ್ದರು.
ಕೊನೆಗೆ 1943 ರ ಜನವರಿಯಲ್ಲಿ, ನನಗೆ ಮತ್ತು ಇತರ ಸಾಕ್ಷಿಗಳಿಗೆ ಶಿಕ್ಷೆಯನ್ನು ವಿಧಿಸುವ ಸಮಯವು ಬಂತು. ನಮ್ಮನ್ನು ವಿಚಾರಣೆಗೊಳಪಡಿಸಿದ್ದ ಸೇನಾಧಿಕಾರಿಯು ನಮ್ಮ ಶಿಕ್ಷೆಯು ಹತ್ತು ವರ್ಷಗಳಿಗಿಂತ ಕಡಿಮೆಯಾಗಬಾರದೆಂದು ತಗಾದೆ ಮಾಡಿದನು. ಸೈನ್ಯದ ಪಾದ್ರಿಯು ಅದಕ್ಕಿಂತಲೂ ಕಟು ಶಿಕ್ಷೆಯನ್ನು ಕೊಡುವಂತೆ ಕೇಳಿದನು. ನಮಗೆ ‘ಮರಣ ಶಿಕ್ಷೆ ಕೊಡುವಂತೆ ಅಥವಾ ಈ ದೇಶದ್ರೋಹಿಗಳಿಗೆ ತಕ್ಕ ಶಾಸ್ತಿಯಾಗುವಂತೆ ಅವರನ್ನು ಬೇಹುನೋಡುವ ಪ್ಯಾರಾಷೂಟಿಸ್ಟ್ [ಬಹುಮಟ್ಟಿಗೆ ಮರಣ ಖಂಡಿತ] ಗಳಾಗಿ ರಶ್ಯಾಕ್ಕೆ ಕಳುಹಿಸುವಂತೆ’ ಪತ್ರದ ಮೂಲಕ ತಗಾದೆ ಮಾಡಿದ್ದನು.
ಒಂದು ಅಣಕ ವಿಚಾರಣೆಯು ಏರ್ಪಡಿಸಲ್ಪಟ್ಟಿತು. ನನ್ನನ್ನು ಕೋರ್ಟಿನ ಮುಂದೆ ಕರೆಯಲಾಯಿತು ಮತ್ತು ಮರಣ ಶಿಕ್ಷೆ ವಿಧಿಸಲಾಯಿತು. ಆದರೂ ಇದು ಇನ್ನೊಂದು ವಿಧದ ಜಬರಿಸುವಿಕೆಯಾಗಿತ್ತು ಯಾಕಂದರೆ ತರುವಾಯ ಆ ದಿನದಲ್ಲೇ ನನ್ನನ್ನು ಪುನಃ ಕೋರ್ಟಿನ ಮುಂದೆ ತರಲಾಯಿತು ಮತ್ತು ಮೂರುವರೆ ವರುಷಗಳ ಸೆರೆಮನೆವಾಸವನ್ನು ವಿಧಿಸಲಾಯಿತು. ಈ ಶಿಕ್ಷೆಯ ವಿರುದ್ಧ ನಾನು ಅಪ್ಪೀಲು ಮಾಡಿದಾಗ ಅದನ್ನು ಎರಡು ವರ್ಷಕ್ಕೆ ಇಳಿಸಿದರು.
ಸೆರೆಮನೆಯಲ್ಲಿ ಆಹಾರ ಅಭಾವವಿತ್ತು, ಬೇರೆ ಕೈದಿಗಳಿಂದ ನಿಂದಾಸ್ಪದ ಬೆದರಿಕೆಗಳೂ ಅಲ್ಲಿದ್ದವು. ಎರಡು ಸಾರಿ ಸಲಿಂಗಿಕಾಮಿಗಳಿಂದ ನಾನು ಆಕ್ರಮಿಸಲ್ಪಟ್ಟೆ, ಸುದೈವದಿಂದ ತಪ್ಪಿಸಿಕೊಳ್ಳ ಶಕ್ತನಾದೆನು. ಅವನ ತಗಾದೆಗಳಿಗೆ ಒಪ್ಪದಿದ್ದರೆ ನನ್ನನ್ನು ಕೊಲ್ಲುವೆನೆಂದು ಅವರಲ್ಲೊಬ್ಬ ಬೆದರಿಕೆ ಹಾಕಿದ. ಆದರೆ ನನ್ನೆಲ್ಲಾ ಪರೀಕ್ಷೆಗಳಲ್ಲಿ ಮಾಡಿದಂತೆ ನಾನು ಯೆಹೋವನಿಗೆ ಮೊರೆಯಿಟ್ಟೆ ಮತ್ತು ಆತನು ನನಗೆ ನೆರವಾದನು. ಕಾರ್ಯತಃ ಆ ಸೆರೆವಾಸಿಯ ಬೆದರಿಕೆ ಒಂದು ಅಲ್ಪ ವಿಷಯವಾಗಿರಲಿಲ್ಲ, ಅವನು ಮುಂಚೆ ಕೊಂದಿದ್ದನು. ಅವನ ಬಿಡುಗಡೆಯ ನಂತರವೂ ಅವನು ಇನ್ನೊಂದು ಕೊಲೆಮಾಡಿ, ಪುನಃ ಸೆರೆಮನೆಗೆ ಹಿಂತಿರುಗಿದ್ದನು.
ಯೆಹೋವನ ಸಾಕ್ಷಿಗಳು ವಿಶ್ವಾಸಪಾತ್ರತೆಗೆ ಹೆಸರುವಾಸಿಯಾಗಿರುವ ಕಾರಣದಿಂದಲೇ ನನ್ನನ್ನು ನಂಬಿಕೆಯ ಕೈದಿಯನ್ನಾಗಿ ಮಾಡಿದರೆಂಬದಕ್ಕೆ ಸಂದೇಹವಿಲ್ಲ. ಬೇರೆ ಸೆರೆವಾಸಿಗಳಿಗೆ ಆಹಾರ ಭತ್ಯಗಳನ್ನು ನೀಡುವುದೇ ನನ್ನ ಕೆಲಸವಾಗಿತ್ತು ಮತ್ತು ಸೆರೆಮನೆಯ ವಠಾರದಲ್ಲಿ ಮುಕ್ತವಾಗಿ ನಡೆಯಲು ನನ್ನನ್ನು ಬಿಡಲಾಗಿತ್ತು. ಆದ್ದರಿಂದ ನನಗೆ ಸಾಕಷ್ಟು ಆಹಾರವು ಸಿಗುತ್ತಿತ್ತು ಮಾತ್ರವಲ್ಲ ನನ್ನ ಕ್ರೈಸ್ತ ಸಹೋದರರಿಗೂ ಒಳ್ಳೇ ಪರಾಮರಿಕೆ ಸಿಗುವಂತೆ ನೋಡಲು ಶಕ್ತನಾದೆನು. ಸಹೋದರರಲ್ಲೊಬ್ಬನು ಸೆರೆಮನೆಯಲ್ಲಿ ತನ್ನ ಮೈತೂಕವನ್ನೂ ಹಲವಾರು ಕಿಲೊಗ್ರಾಮ್ ಹೆಚ್ಚಿಸ ಶಕ್ತನಾದನು, ಆಹಾರದ ಅಭಾವವನ್ನು ಪರಿಗಣಿಸುವಲ್ಲಿ ಇದು ಅತ್ಯಂತ ಅಪೂರ್ವ!
ಸಪ್ಟಂಬರ 1944 ರಲ್ಲಿ ನನಗೆ ಸೆರೆಮನೆಯಿಂದ ಬಿಡುಗಡೆಯಾಯಿತು, ಸಹೋದರ ಹಾರ್ಟೆವರಿಗೆ ಬಿಡುಗಡೆಯಾದದ್ದೂ ಅದೇ ದಿನದಲ್ಲಿ. ನನ್ನ ಬಿಡುಗಡೆ ಬೆತೆಲ್ ಸೇವೆಗೆ ಹಿಂತಿರುಗುವ ಅರ್ಥದಲ್ಲಿತ್ತು. ‘ಈ ಸೆರೆಮನೆಯ ಜೀವಿತಕ್ಕಿಂತ ಬೆತೆಲ್ನಲ್ಲಿ ದಿನಕ್ಕೆ 16 ತಾಸಿನ ಕಷ್ಟದ ಸೇವೆ ಎಷ್ಟೋ ಮಿಗಿಲಾದದ್ದು’ ಎಂದು ನಾನು ನೆನಸಿಕೊಂಡೆ. ಅಂದಿನಿಂದ ನಾನೆಂದೂ ಕೆಲಸ ಮಾಡುವುದನ್ನು ಬಿಟ್ಟಿರುವುದಿಲ್ಲ!
ವಿವಿಧ ಸೇವಾ ಸುಯೋಗಗಳು
ತರುವಾಯ 1944ರಲ್ಲಿ ಮಾರ್ಗಿಟ್ ಎಂಬ ಒಬ್ಬ ಸುಂದರಿ ಯುವ ಪಯನೀಯರಳು ನನಗೆ ಸಿಕ್ಕಿದಳು, ಅವಳಲ್ಲಿ ನನಗಿದ್ದ ಆಸಕ್ತಿಗೆ ಆಕೆಯು ಪ್ರತಿಕ್ರಿಯೆ ತೋರಿಸಿದಳು ಮತ್ತು ಫೆಬ್ರವರಿ 9, 1946 ರಲ್ಲಿ ನಾವು ಮದುವೆಯಾದೆವು. ವಿವಾಹ ದಂಪತಿಗಳಾದ ಮೊದಲನೆ ವರ್ಷದಲ್ಲಿ, ನಾನು ಬೆತೆಲ್ನಲ್ಲಿ ಸೇವೆ ಮಾಡುತ್ತಿದ್ದಾಗ ಮಾರ್ಗಿಟ್ ಹೆಲ್ಸಿಂಕಿಯಲ್ಲಿ ಪಯನೀಯರಳಾಗಿ ಸೇವೆ ಮಾಡಿದಳು. ಅನಂತರ ಜನವರಿ 1947 ರಲ್ಲಿ ಸರ್ಕಿಟ್ ಕೆಲಸಕ್ಕೆ ನಮ್ಮನ್ನು ನೇಮಿಸಲಾಯಿತು.
ಸಂಚಾರ ಸೇವೆಯಲ್ಲಿ ನಾವು ಹೆಚ್ಚಾಗಿ ಕುಟುಂಬಗಳೊಂದಿಗೆ ಉಳುಕೊಂಡೆವು, ಅವರೊಂದಿಗೆ ಒಂದೇ ಕೋಣೆಯಲ್ಲಿ ಭಾಗಿಗಳಾದೆವು. ತಮಗಿದದ್ದರಲ್ಲಿ ಉತ್ತಮವಾದದ್ದನ್ನು ಅವರು ಒದಗಿಸಿದರ್ದೆಂದು ನಮಗೆ ಗೊತ್ತಿತ್ತು, ಮತ್ತು ನಾವೆಂದೂ ಗುಣುಗುಟ್ಟಲಿಲ್ಲ. ಆ ದಿನಗಳಲ್ಲಿ ಸರ್ಕಿಟುಗಳು ಚಿಕ್ಕದಾಗಿದ್ದವು ಮತ್ತು ಕೆಲವು ಸಭೆಗಳಲ್ಲಿ ಸ್ನಾನಿತರಾಗಿದ್ದ ಸಾಕ್ಷಿಗಳೂ ಇರಲಿಲ್ಲ!
1948 ರಲ್ಲಿ ಬೆತೆಲ್ ಸೇವೆಗೆ ಹಿಂತಿರುಗಲು ನಮ್ಮನ್ನು ಆಮಂತ್ರಿಸಲಾಯಿತು. ಎರಡು ವರ್ಷಗಳ ಮೇಲೆ ವಾಲೆಸ್ ಎಂಡ್ರೆಸ್ ಅಮೆರಿಕದಿಂದ ಫಿನ್ಲ್ಯಾಂಡ್ಗೆ ಬಂದರು, ಮತ್ತು ಅನಂತರ ಬೇಗನೇ ಅವರನ್ನು ಬ್ರಾಂಚ್ ಮೇಲ್ವಿಚಾರಕರಾಗಿ ನೇಮಿಸಲಾಯಿತು. ನಾವು ಇಂಗ್ಲಿಷ್ ಕಲಿಯುವುದನ್ನು ಮುಂದರಿಸುವಂತೆ ಅವರು ಹೃತ್ಪೂರ್ವಕವಾಗಿ ಪ್ರೋತ್ಸಾಹಿಸಿದರು, ಮತ್ತು ನಾವು ಹಾಗೆಯೇ ಮಾಡಿದೆವು. ಹೀಗೆ ಫೆಬ್ರವರಿ 1952 ರಲ್ಲಿ ನ್ಯೂ ಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿ ಪ್ರಾರಂಭಿಸಿದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ 19 ನೆಯ ವರ್ಗಕ್ಕೆ ಹಾಜರಾಗಲು ನಾವು ಆಮಂತ್ರಿಸಲ್ಪಟ್ಟೆವು.
ಪದವೀಧರರಾದ ಮೇಲೆ ನಾವು ಹಿಂದೆ ಫಿನ್ಲ್ಯಾಂಡಿಗೆ ನೇಮಿತರಾದೆವು. ಆದರೆ ನಾವು ಅಮೆರಿಕವನ್ನು ಬಿಟ್ಟು ಬರುವ ಮುಂಚೆ ನ್ಯೂ ಯಾರ್ಕ್ ಬ್ರೂಕ್ಲಿನ್ನಲ್ಲಿ ಯೆಹೋವನ ಸಾಕ್ಷಿಗಳ ಅಂತರ್ರಾಷ್ಟ್ರೀಯ ಮುಖ್ಯ ಕಾರ್ಯಾಲಯದ ಪ್ರಿಂಟಿಂಗ್ ಪ್ರೆಸ್ಸುಗಳಲ್ಲಿ ಕೆಲಸಮಾಡಲು ನನಗೆ ತರಬೇತು ಕೊಡಲಾಯಿತು.
ಫಿನ್ಲ್ಯಾಂಡಿಗೆ ಹಿಂದಿರುಗಿದಾಗ ನಮಗೆ ಸಂಚಾರ ಸೇವೆಯ ನೇಮಕವು ಸಿಕ್ಕಿತು, ಆದರೆ 1955 ರಲ್ಲಿ ನಮ್ಮನ್ನು ಫಿನ್ಲ್ಯಾಂಡ್ ಬ್ರಾಂಚ್ಗೆ ಹಿಂದೆ ಆಮಂತ್ರಿಸಲಾಯಿತು. ಆ ವರುಷ ನಾನು ಫ್ಯಾಕ್ಟರಿ ಮೇಲ್ವಿಚಾರಕನಾದೆನು ಮತ್ತು ಎರಡು ವರ್ಷಗಳ ಅನಂತರ 1957 ರಲ್ಲಿ ಬ್ರಾಂಚ್ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆನು. 1976 ರಿಂದ ನಾನು ಫಿನ್ಲ್ಯಾಂಡ್ ಬ್ರಾಂಚ್ ಕಮಿಟಿಯ ಕಾರ್ಡಿನೇಟರಾಗಿ ಕಾರ್ಯನಡಿಸಿದ್ದೇನೆ.
ಸಂತೋಷಕರವಾಗಿ ನನ್ನ ತಂದೆ ಮತ್ತು ತಾಯಿ ಇಬ್ಬರೂ ತಮ್ಮ ಮರಣದ ತನಕ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರು. ಸಕಾಲದಲ್ಲಿ ತಂದೆಯ ಸಂಬಂಧಿಕರಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿ ಸಾಕ್ಷಿಗಳಾಗಿ ಪರಿಣಮಿಸಿದರು. ಮತ್ತು ಈ ದಿನದ ತನಕವೂ ನನ್ನ ಸಹೋದರ ಮತ್ತು ಸಹೋದರಿಯರು ಮತ್ತು ಅವರ ಕುಟುಂಬಗಳು ಎಲ್ಲರೂ ಯೆಹೋವನನ್ನು ಸೇವಿಸುತ್ತಿದ್ದಾರೆ, ನನ್ನ ಸಹೋದರಿಯರಲ್ಲಿ ಒಬ್ಬಳು ಪಯನೀಯರಳಾಗಿದ್ದಾಳೆ.
ಒಂದು ಸಮೃದ್ಧ, ಪ್ರತಿಫಲದಾಯಕ ಜೀವನ
ದಾಟಿದ ವರ್ಷಗಳು ಕೆಲಸ ಮತ್ತು ಹೆಚ್ಚು ಕೆಲಸದಿಂದ ತುಂಬಿದ್ದವು, ಆದರೆ ಆ ಕೆಲಸವು ದೇವರ ಕೆಲಸವಾಗಿದುದ್ದರಿಂದ ಸಮೃದ್ಧವೂ ಫಲದಾಯಕವೂ ಆಗಿತ್ತು ನಿಶ್ಚಯ. (1 ಕೊರಿಂಥ 3:6-9) ನನ್ನ ಜೀವಿತವೆಲ್ಲವೂ ಸುಗಮ ಸಾಗುವಿಕೆ ಮತ್ತು ಸುಖಾನುಭವದ್ದು ಎಂದಲ್ಲ. ತೊಂದರೆಗಳು ಮತ್ತು ಕಷ್ಟಗಳು ಸಹ ಅಲ್ಲಿದ್ದವು. ನಮ್ಮನ್ನು ಶಿಸ್ತುಗೊಳಿಸುವ ಅಗತ್ಯವಿದೆ ಎಂಬದನ್ನು ನಾನು ಬಾಲ್ಯದಿಂದಲೇ ಮನಗಂಡಿದ್ದೇನೆ. ನಾವು ಇಷ್ಟೈಸುವ ವಿಷಯವನ್ನೇ ಯಾವಾಗಲೂ ಮಾಡಲಾರೆವು. ನನಗೆ ಆಗಿಂದಾಗ್ಯೆ ತಿದ್ದುಪಾಟು ದೊರೆತದೆ, ಮತ್ತು ಕ್ರಮೇಣ ಜೀವಿತದ ಯೋಗ್ಯ ಮಾರ್ಗವನ್ನು ನಾನು ಕಲಿತೆನು.
ಉದಾಹರಣೆಗೆ, ಯುದ್ಧದ ಸಮಯದಲ್ಲಿ ಅನುಭವಿಸಿದ ಸಂಕಟಗಳು ಮತ್ತು ಅಭಾವಗಳು ಸುಖಭೋಗರಹಿತವಾದ ಜೀವನ ನಡಿಸಲು ನನಗೆ ಕಲಿಸಿವೆ. ಒಂದು ವಿಷಯವು ನಿಜವಾಗಿ ಆವಶ್ಯವೂ, ಅಲ್ಲವೋ ಎಂಬದನ್ನು ವಿವೇಚಿಸಲು ನಾನು ಕಲಿತೆನು. ನನಗಿದು ಬೇಕೋ, ಬೇಡವೂ ಎಂದು ನನಗೆ ನಾನೇ ಕೇಳುವ ಹವ್ಯಾಸ ನನಗಿನ್ನೂ ಇದೆ. ಮತ್ತು ಎಷ್ಟೆಂದರೂ ಅದು ಅಷ್ಟು ಮಹತ್ವದ್ದಲ್ಲ ಎಂಬ ಮನವರಿಕೆಯಾಗುವಾಗ, ನಾನದನ್ನು ಖರೀದಿಸುವುದಿಲ್ಲ.
ಯೆಹೋವನು ತನ್ನ ಸಂಸ್ಥೆಯ ಮೂಲಕ ಕೊಡುವ ಮಾರ್ಗದರ್ಶನೆಯು ಸ್ಫುಟವಾಗಿ ತೋರಿಬರುತ್ತದೆ. ನನ್ನ ಕಾಲಾವಧಿಯಲ್ಲಿ ಫಿನ್ಲ್ಯಾಂಡ್ ಬ್ರಾಂಚ್ನ ಯೆಹೋವನ ಸಾಕ್ಷಿಗಳ ಸಂಖ್ಯೆಯು 1,135 ರಿಂದ 18,000 ಕ್ಕಿಂತಲೂ ಹೆಚ್ಚಾಗುವುದನ್ನು ಕಾಣುವ ಸಂತೋಷ ನನಗೆ ಸಿಕ್ಕಿದೆ! ನನ್ನ ಕೆಲಸವು ಆಶೀರ್ವದಿಸಲ್ಪಟ್ಟಿದೆ ಎಂದು ನಾನು ನಿಜವಾಗಿ ಕಾಣಬಲ್ಲೆನು, ಆದರೆ ಅದು ನಮ್ಮ ಕಾರ್ಯವಾದುದರಿಂದ ಅಲ್ಲ, ಯೆಹೋವನ ಕಾರ್ಯವಾದುದರಿಂದಲೇ ಆಶೀರ್ವದಿಸಲ್ಪಟ್ಟಿತು ಎಂದು ನನಗೆ ಗೊತ್ತಿದೆ. (1 ಕೊರಿಂಥ 3:6, 7) ಜೀವಿತದಾರಂಭದಿಂದಲೇ ನಾನು ಯೆಹೋವನ ಮಾರ್ಗವನ್ನು ಆರಿಸಿಕೊಂಡೆ, ಮತ್ತು ಅದು ನಿಜವಾಗಿಯೂ ಜೀವಿತದ ಅತ್ಯುತ್ತಮ ಮಾರ್ಗವಾಗಿ ರುಜುವಾಯಿತು. (w92 4/1)
[ಪುಟ 23 ರಲ್ಲಿರುವ ಚಿತ್ರ]
ಇಂದು ಎರ್ಕಿ ಕನ್ಕಾನ್ಪ ತಮ್ಮ ಪತ್ನಿ ಮಾರ್ಗಿಟ್ ಜತೆಯಲ್ಲಿ