ಜೀವನ ಕಥೆ
ಯೆಹೋವ ನನ್ನನ್ನ ರೂಪಿಸೋಕೆ ಬಿಟ್ಟುಕೊಟ್ಟೆ
ನಾನು ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್ ಬೆತೆಲ್‌ನಲ್ಲಿ ಬೈಂಡರಿ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡ್ತಿದ್ದೆ. ನನ್ನ ಕೆಲಸದ ಮೊದಲನೇ ದಿನವನ್ನ ಯಾವತ್ತೂ ಮರೆಯೋಕಾಗಲ್ಲ. ಆ ಡಿಪಾರ್ಟ್‌ಮೆಂಟ್ ಒಳಗೆ ಕಾಲು ಇಡ್ತಿದ್ದಂಗೆ ಬೈಂಡಿಂಗ್ ಮಿಷಿನ್‌ನಿಂದ ಬರುತ್ತಿದ್ದ ದೊಡ್ಡ ಶಬ್ದ, ಪುರುಸೊತ್ತೇ ಇಲ್ಲದೇ ಕೆಲಸ ಮಾಡ್ತಿದ್ದ ಆ ಮಿಷಿನ್‌ಗಳು, ಪೇಪರ್‌ನಿಂದ ಬರ್ತಿದ್ದ ಧೂಳು, ಆ ಮಿಷಿನ್‌ನ ಎಣ್ಣೆಯ ಘಾಟು ಅದೆಲ್ಲಾ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.
ಅಲ್ಲಿ ತುಂಬ ವಿಷ್ಯಗಳಿದ್ರೂ ನನ್ನ ಮನಸ್ಸಿಗೆ ಮುಟ್ಟಿದ್ದು ಮಾತ್ರ ಅಲ್ಲಿದ್ದ ಜನ್ರು. ತುಂಬ ಯುವ ಸಹೋದರ, ಸಹೋದರಿಯರು ಅಲ್ಲಿ ಕೆಲಸ ಮಾಡ್ತಿದ್ರು. ಪ್ರತಿದಿನ ಅದೇ ಕೆಲಸ ಮಾಡ್ತಿದ್ರೂ, ಹೊಗಳಿಕೆ ಸಿಗದೇ ಇದ್ರೂ ಅವ್ರೆಲ್ಲ ತುಂಬ ಖುಷಿ, ತೃಪ್ತಿಯಿಂದ ಸೇವೆ ಮಾಡ್ತಿದ್ರು. ದೀನತೆಯಿಂದ ಸೇವೆ ಮಾಡೋದಂದ್ರೆ ಏನು ಅಂತ ನಾನು ಅವ್ರಿಂದ ಕಲಿತೆ.
ಒಳ್ಳೆ ಗುಣಗಳನ್ನ ಬೆಳೆಸ್ಕೊಳ್ಳೋಕೆ ಯೆಹೋವ ಇವತ್ತಿನವರೆಗೂ ನನಗೆ ಸಹಾಯ ಮಾಡ್ತಾ, ನನ್ನನ್ನ ರೂಪಿಸ್ತಾ ಬಂದಿದ್ದಾನೆ. ಆ ಕಥೆನ ಹೇಳೋಕೆ ಮುಂಚೆ ಬೌದ್ಧ ಧರ್ಮದಲ್ಲಿದ್ದ ನನಗೆ ಸತ್ಯ ಹೇಗೆ ಸಿಕ್ತು ಅಂತ ಹೇಳ್ತೀನಿ ಬನ್ನಿ.
ಚಿಕ್ಕವನಿದ್ದಾಗಲೇ ಸತ್ಯ ದೇವರು ಯಾರು ಅಂತ ಹುಡುಕ್ತಿದ್ದೆ
ನಾನು ಹುಟ್ಟಿದ್ದು, ಬೆಳೆದಿದ್ದೆಲ್ಲ ಅಮೆರಿಕದ ಚಿಕಾಗೋ ಪಟ್ಟಣದಲ್ಲಿ. ನಮ್ಮಪ್ಪ-ಅಮ್ಮಂಗೆ ನಾಲ್ಕು ಜನ ಮಕ್ಕಳು, ಅವ್ರಲ್ಲಿ ನಾನೇ ಮೊದಲನೇಯವನು. ನಮ್ಮಪ್ಪ-ಅಮ್ಮ ಜಪಾನಿನವರು. ಆದ್ರೆ ಅಮೆರಿಕದಲ್ಲಿ ಜೀವನ ಚೆನ್ನಾಗಿರುತ್ತೆ ಅಂತ ಅವರು ಚಿಕಾಗೋಗೆ ಬಂದ್ರು. ಮಕ್ಕಳೆಲ್ಲ ಚೆನ್ನಾಗಿ ಓದಬೇಕು, ಯಶಸ್ಸು ಪಡೀಬೇಕು ಅನ್ನೋದು ಅವ್ರ ಕನಸಾಗಿತ್ತು.
ನಮ್ಮ ಅಪ್ಪ-ಅಮ್ಮ ಪಕ್ಕಾ ಬೌದ್ಧ ಧರ್ಮದ ಭಕ್ತರಾಗಿದ್ರು. ಅಮ್ಮ ಹುಟ್ಟಿ-ಬೆಳೆದ ಮನೆಲಿ ಬೌದ್ಧ ಧರ್ಮದ ದೇವಸ್ಥಾನ ಇತ್ತು. ಅಮ್ಮನ ತಂದೆ ಮತ್ತು ಇಬ್ರು ತಮ್ಮಂದಿರು ಬೌದ್ಧ ಧರ್ಮದ ಸನ್ಯಾಸಿಗಳಾಗಿದ್ರು. ಅದಕ್ಕೆ ನಮ್ಮ ಮನೆಯಲ್ಲಿ ಎಲ್ರೂ ಆ ಧರ್ಮಕ್ಕೆ ತುಂಬ ಬೆಲೆ ಕೊಡ್ತಿದ್ರು. ನಾನು ಸ್ಕೂಲಿಂದ ಬಂದ ತಕ್ಷಣ ಬೌದ್ಧ ಧರ್ಮದ ಮೂರ್ತಿಗೆ ಧೂಪ ಹಾಕ್ತಿದ್ದೆ ಮತ್ತು ಅದ್ರ ಮುಂದೆ ಅನ್ನ, ನೀರು ಇಡ್ತಿದ್ದೆ. ಪ್ರತಿ ಭಾನುವಾರ ನಾವು ಬೌದ್ಧ ಧರ್ಮದ ದೇವಸ್ಥಾನಗಳಿಗೆ ಹೋಗಿ ಮೂರ್ತಿಗಳ ಮುಂದೆ ಮಂತ್ರನ ಜಪಿಸ್ತಿದ್ವಿ. ಮನೇಲಿದ್ದ ಮೂರ್ತಿಗೂ ಅಲ್ಲಿದ್ದ ಮೂರ್ತಿಗೂ ಜಾಸ್ತಿ ವ್ಯತ್ಯಾಸ ಇರಲಿಲ್ಲ. ದೇವಸ್ಥಾನದಲ್ಲಿದ್ದ ಮೂರ್ತಿ ಸ್ವಲ್ಪ ದೊಡ್ಡದಾಗಿರುತ್ತಿತ್ತು, ಅದಕ್ಕೆ ಬಂಗಾರದ ಲೇಪನ ಹಾಕಿರ್ತಿದ್ರು.
ನನಗಿನ್ನೂ ನೆನಪಿದೆ, ಸುಮಾರು ಏಳು ವರ್ಷ ಇರುವಾಗ ನಾನು ಮನೆಯಲ್ಲಿದ್ದ ಮೂರ್ತಿ ಮುಂದೆ ನಿಂತ್ಕೊಂಡು, ‘ಸತ್ತ ಮೇಲೆ ನನಗೇನಾಗುತ್ತೆ?’ ಅಂತ ಯೋಚಿಸಿದೆ. ಬೌದ್ಧ ಧರ್ಮದಲ್ಲಿ, ಸತ್ತ ಮೇಲೆ ನಮ್ಮ ಆತ್ಮ ಎಲ್ಲೋ ಹೋಗಿ ಜೀವಿಸುತ್ತೆ ಅಂತ ಕಲಿಸ್ತಾರೆ. ಇದ್ರ ಬಗ್ಗೆ ಯೋಚ್ನೆ ಮಾಡಿದಾಗ ‘ನಾನೂ ಒಂದಿನ ಸತ್ತು ಹೋಗ್ತೀನಿ. ನನ್ನ ಆತ್ಮ ಎಲ್ಲೋ ಹೋಗಿ ಬದುಕುತ್ತೆ. ಆದ್ರೆ ನಾನು ಮನುಷ್ಯನಾಗಿ ಖುಷಿಯಾಗಿ ಇರೋಕಾಗಲ್ಲ’ ಅಂತ ಅನಿಸ್ತು. ಆಗ ತುಂಬ ಬೇಜಾರಾಯ್ತು, ಒಂದು ಕ್ಷಣ ದಿಕ್ಕೇ ತೋಚದಂಗೆ ಆಯ್ತು.
ನನಗೆ ಸುಮಾರು 15 ವರ್ಷ ಇದ್ದಾಗ ಬೌದ್ಧ ಧರ್ಮದ ಸಂಪ್ರದಾಯ, ಆಚಾರ-ವಿಚಾರಗಳಿಗೆಲ್ಲಾ ಅರ್ಥನೇ ಇಲ್ಲ ಅಂತ ಅನಿಸೋಕೆ ಶುರುವಾಯ್ತು. ಜೀವನದಲ್ಲಿ ನಾನೇನೋ ಕಳ್ಕೊಂಡಿದ್ದೀನಿ ಅಂತ ಅನಿಸ್ತು. (ಮತ್ತಾ. 5:3) ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ, ನಮ್ಮೆಲ್ರಿಗಿಂತ ಶಕ್ತಿಶಾಲಿಯಾಗಿರುವ ಒಬ್ಬ ದೇವರು ಇರಲೇಬೇಕು, ಆ ದೇವರ ಬಗ್ಗೆ ನಾನು ಕಲಿಬೇಕು ಅಂದ್ಕೊಂಡೆ. ನನ್ನೆಲ್ಲ ಪ್ರಶ್ನೆಗಳಿಗೆ ಬೈಬಲಲ್ಲಿ ಉತ್ರ ಸಿಗಬಹುದು ಅಂತ ಯೋಚಿಸಿದೆ. ಅದಕ್ಕೆ ಈಗಾಗ್ಲೇ ಬೇರೆಯವರು ಬಳಸಿರೋ ಕಿಂಗ್ ಜೇಮ್ಸ್ ವರ್ಷನ್ ಬೈಬಲನ್ನ ಬೌದ್ಧ ಧರ್ಮದ ಹಬ್ಬ ಒಂದ್ರಲ್ಲಿ ಕೊಂಡ್ಕೊಂಡೆ. ನಿಜ ಹೇಳಬೇಕಂದ್ರೆ ಬೈಬಲ್ ತಗೊಳ್ಳೋಕೆ ಅದು ಸೂಕ್ತವಾದ ಜಾಗ ಆಗಿರಲಿಲ್ಲ. ಆದ್ರೂ ತಗೊಂಡೆ!
ನನಗೆ ಸತ್ಯ ಕಲಿಸಿದ ವಿಲ್ಸನ್ ಭಾಶು ಜೊತೆ
ನನಗೆ 17 ವರ್ಷ ಇದ್ದಾಗ ಒಂದಿನ ನಾನು ನಾಯಿನ ವಾಕಿಂಗ್ ಕರ್ಕೊಂಡು ಹೋಗ್ತಿದ್ದೆ. ಆಗ ಸಹೋದರ ವಿಲ್ಸನ್ ಭಾಶು ನನಗೆ, “ಭವಿಷ್ಯದ ಬಗ್ಗೆ ದೇವರು ಏನ್ ಮಾತು ಕೊಟ್ಟಿದ್ದಾನೆ ಗೊತ್ತಾ?” ಅಂತ ಕೇಳಿದ್ರು. ಆ ಪ್ರಶ್ನೆ ತುಂಬ ಆಸಕ್ತಿಕರ ಆಗಿದ್ರಿಂದ ಅದ್ರ ಬಗ್ಗೆ ನಾವು ತುಂಬ ಹೊತ್ತು ಮಾತಾಡಿದ್ವಿ. ಸಹೋದರ ವಿಲ್ಸನ್ ಪ್ರಕಟಣೆ 17:1ನ್ನ ತೋರಿಸಿ, “ಆ ವೇಶ್ಯೆ ಕೂತಿದ್ದ ‘ನೀರು’ ಯಾವುದನ್ನ ಸೂಚಿಸುತ್ತೆ ಗೊತ್ತಾ?” ಅಂತ ಕೇಳಿದ್ರು. ನಾನು ‘ಗೊತ್ತಿಲ್ಲ’ ಅಂದೆ. ಆಗ ಅವರು 15ನೇ ವಚನನ ತೋರಿಸಿ ‘ಆ ನೀರು ಜನ್ರನ್ನ ಸೂಚಿಸುತ್ತೆ’ ಅಂತ ಹೇಳಿದ್ರು. ಯೆಹೋವನ ಸಾಕ್ಷಿಗಳು ಬೈಬಲಿಂದಾನೇ ಉತ್ರ ಕೊಡೋದನ್ನ ನೋಡಿದಾಗ ನನಗೆ ತುಂಬ ಖುಷಿ ಆಯ್ತು. ಸಹೋದರ ವಿಲ್ಸನ್ ಅಲ್ಲಿಂದ ಹೋಗೋಕೂ ಮುಂಚೆ ನಿತ್ಯಜೀವಕ್ಕೆ ನಡೆಸುವ ಸತ್ಯವು ಅನ್ನೋ ಪುಸ್ತಕ ಕೊಟ್ರು. ಆ ನೀಲಿ ಬಣ್ಣದ ಚಿಕ್ಕ ಪುಸ್ತಕ ನನ್ನ ಜೀವನನೇ ಬದಲಾಯಿಸಿಬಿಡ್ತು.
ಹತ್ತು ದಿನ ಆದ್ಮೇಲೆ ನಾನು ಮೊದಲನೇ ಸಲ ಕೂಟಕ್ಕೆ ಹೋದೆ. ರಾಜ್ಯ ಸಭಾಗೃಹದಲ್ಲಿದ್ದ ಸಹೋದರ, ಸಹೋದರಿಯರು ನನ್ನ ಜೊತೆ ತುಂಬ ಪ್ರೀತಿ-ದಯೆಯಿಂದ ಮಾತಾಡಿದ್ರು. ಅದನಂತೂ ನಾನು ಯಾವತ್ತೂ ಮರಿಯಲ್ಲ. ಆವತ್ತಿಂದ ತಪ್ಪದೇ ಕೂಟಕ್ಕೆ ಹೋಗೋಕೆ ಶುರುಮಾಡಿದೆ. ಇದಾದ್ಮೇಲೆ ಸಹೋದರ ವಿಲ್ಸನ್ ನನ್ನ ಜೊತೆ ಬೈಬಲ್ ಅಧ್ಯಯನ ಶುರುಮಾಡಿದ್ರು. ಬೈಬಲಿಂದ ಕಲೀತಿದ್ದ ಸತ್ಯಗಳು ನನಗೆ ಎಷ್ಟು ಇಷ್ಟ ಆಗ್ತಿತ್ತಂದ್ರೆ ಕೆಲವು ಸಲ ಸುಮಾರು ಎಂಟು ಗಂಟೆ ಬೈಬಲಿಂದ ಚರ್ಚೆ ಮಾಡ್ತಿದ್ವಿ. ನಾನು ಬೈಬಲ್ ಅಧ್ಯಯನ ಮಾಡ್ತಿರೋದು ಅಪ್ಪ-ಅಮ್ಮನಿಗೆ ಗೊತ್ತಾಯ್ತು. ಅವರು ವಿರೋಧಿಸೋಕೆ ಶುರುಮಾಡಿದ್ರು. ಆದ್ರೆ ಬೈಬಲನ್ನ ಕಲಿತಾ ಹೋದಂಗೆ ನಾನು ಕಲಿತಿರೋ ವಿಷ್ಯಗಳೆಲ್ಲ ಸತ್ಯ ಅಂತ ನನಗೆ ಗೊತ್ತಾಯ್ತು. ಅದಕ್ಕೆ 1983ರಲ್ಲಿ ದೀಕ್ಷಾಸ್ನಾನ ತಗೊಂಡೆ.
ಪಯನೀಯರ್ ಸೇವೆ ಮಾಡೋಕೆ ಯೂನಿವರ್ಸಿಟಿಯನ್ನೇ ಬಿಟ್ಟೆ
ದೀಕ್ಷಾಸ್ನಾನ ತಗೊಳ್ಳೋ ಸಮಯದಲ್ಲಿ ನಾನು ಒಂದು ಯೂನಿವರ್ಸಿಟಿಯಲ್ಲಿ ಮೆಡಿಕಲ್ ಓದ್ತಿದ್ದೆ. ಆ ಯೂನಿವರ್ಸಿಟಿ ತುಂಬ ಹೆಸರುವಾಸಿಯಾಗಿತ್ತು. ನನ್ನನ್ನ ಓದಿಸೋಕೆ ಅಪ್ಪ-ಅಮ್ಮ ತುಂಬ ತ್ಯಾಗಗಳನ್ನ ಮಾಡಿದ್ರು. ನಾನು ಓದೋದನ್ನ ಬೇಕಿದ್ರೆ ಮುಂದುವರೆಸಬಹುದಿತ್ತು. ಆದ್ರೆ ಯೆಹೋವನಿಗೆ ಮೊದಲನೇ ಸ್ಥಾನ ಕೊಟ್ಟು ಪೂರ್ಣ ಸಮಯ ಆತನ ಸೇವೆ ಮಾಡಬೇಕು ಅನ್ನೋದು ನನ್ನಾಸೆ ಆಗಿತ್ತು.
ಅಪ್ಪ ನನಗೆ, “ನೀನೇನಾದ್ರೂ ಓದೋದನ್ನ ನಿಲ್ಲಿಸಿದ್ರೆ ಮನೆಯಿಂದ ಒದ್ದು ಹೊರಗೆ ಹಾಕ್ತೀನಿ” ಅಂತ ಹೇಳಿದ್ರು. ಆಗ ನನಗೆ ತುಂಬ ಬೇಜಾರಾಯ್ತು, ಏನು ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ಅಪ್ಪ-ಅಮ್ಮ ಅಂದ್ರೆ ನನಗೆ ತುಂಬ ಇಷ್ಟ, ಅವ್ರ ಮನಸ್ಸು ನೋಯಿಸೋಕೆ ಒಂಚೂರು ಇಷ್ಟ ಇರಲಿಲ್ಲ. ಅದಕ್ಕೆ ಎಷ್ಟೋ ರಾತ್ರಿ ಕ್ಯಾಂಪಸ್‌ನ ಮೈದಾನಕ್ಕೆ ಹೋಗಿ ನಕ್ಷತ್ರ ತುಂಬಿರೋ ಆಕಾಶ ನೋಡ್ಕೊಂಡು “ಯೆಹೋವ, ಸರಿಯಾಗಿರೋ ತೀರ್ಮಾನ ಮಾಡೋಕೆ ನನಗೆ ದಯವಿಟ್ಟು ಸಹಾಯ ಮಾಡಪ್ಪಾ” ಅಂತ ಕೇಳ್ಕೊಳ್ತಿದ್ದೆ. ಕೊನೆಗೂ ಯೂನಿವರ್ಸಿಟಿಯಲ್ಲಿ ಓದೋದನ್ನ ನಿಲ್ಲಿಸಬೇಕು ಅಂತ ತೀರ್ಮಾನ ಮಾಡಿದೆ. ಅಪ್ಪ ಹೇಳಿದಂಗೆ ನನ್ನನ್ನ ಮನೆಯಿಂದ ಹೊರಗೆ ಹಾಕಿದ್ರು. ಆಗ ನಾನು ಸಹೋದರ ವಿಲ್ಸನ್‌ಗೆ ಕಾಲ್ ಮಾಡಿ ಏನೆಲ್ಲಾ ಆಯ್ತು ಅಂತ ಹೇಳಿದೆ. ಅವರು ‘ನಮ್ಮನೆಗೆ ಬಾ’ ಅಂತ ಕರೆದ್ರು. ನಾನು ಬಟ್ಟೆ-ಬರೆನೆಲ್ಲ ಒಂದು ಬ್ಯಾಗಿಗೆ ಹಾಕೊಂಡು ಬಸ್ ಹತ್ತಿ ಅವ್ರ ಅಪಾರ್ಟ್‌ಮೆಂಟಿಗೆ ಹೋದೆ. ಆಗ ಏನೋ ಒಂಥರ ಶಾಂತಿ-ನೆಮ್ಮದಿ ನನ್ನ ಮನಸ್ಸನ್ನ ಆವರಿಸಿದಂಗೆ ಆಯ್ತು, ಯಾಕಂದ್ರೆ ನಾನು ಸರಿಯಾಗಿರೋದನ್ನೇ ಮಾಡಿದ್ದೀನಿ ಅಂತ ನನಗೆ ಗೊತ್ತಿತ್ತು.
ಇನ್ಮುಂದೆ ಯೆಹೋವನಿಗೆ ಪೂರ್ಣ ಸಮಯದ ಸೇವೆ ಮಾಡೋಕೆ ನನಗೆ ಯಾವ ತಡೆನೂ ಇರಲಿಲ್ಲ. ಪಂಜರದಿಂದ ಹೊರಗೆ ಬಂದ ಪಕ್ಷಿ ತರ ನನಗನಿಸ್ತು. ಅದಕ್ಕೆ ನಾನು 1984ರಲ್ಲಿ ಪಯನೀಯರ್ ಸೇವೆ ಶುರುಮಾಡಿದೆ.
ಈ ಸೇವೆ ಮಾಡುವಾಗ ಯೆಹೋವ ನನಗೆ ತುಂಬ ಒಳ್ಳೊಳ್ಳೆ ಗುಣಗಳನ್ನ ಕಲಿಸಿದನು. ಅದ್ರಲ್ಲಿ ಒಂದು ಛಲ. ಒಂದಿನ ನನಗೆ ಸೇವೆಗೆ ಹೋಗೋಕೆ ಮನಸ್ಸೇ ಇರಲಿಲ್ಲ, ಯಾಕಂದ್ರೆ ಮಧ್ಯಾಹ್ನ ಹೊತ್ತಲ್ಲಿ ನನ್ನ ಜೊತೆ ಸೇವೆ ಮಾಡೋಕೆ ಯಾರೂ ಬರ್ತಿರಲಿಲ್ಲ. ಇದ್ರಿಂದ ನಾನು ಕುಗ್ಗಿ ಹೋಗಿಬಿಟ್ಟಿದ್ದೆ. ಆದ್ರೂ ಮನಸ್ಸು ಮಾಡಿ ಆವತ್ತು ಸೇವೆಗೆ ಹೋದೆ. ಒಂದೆರಡು ಗಂಟೆ ಸೇವೆ ಮಾಡಿದ ಮೇಲೆ ಇನ್ನೊಂದೇ ಒಂದು ಅಪಾರ್ಟ್‌ಮೆಂಟಲ್ಲಿ ಸೇವೆ ಮಾಡಿ ಹೋಗೋಣ ಅಂತ ಅಂದ್ಕೊಂಡೆ. ನನಗೆ ತುಂಬ ಸುಸ್ತಾಗಿತ್ತು, ಬೇಜಾರಾಗಿತ್ತು, ಅದೂ ಅಲ್ಲದೆ ಮಳೆ ಬರೋ ತರನೂ ಇತ್ತು. ಆದ್ರೂ ಹಾಗೋ ಹೀಗೋ ಮಾಡಿ ಮೂರನೇ ಮಹಡಿಗೆ ಹತ್ತಿ ಹೋದೆ. ಅಲ್ಲಿ ಫಿಲಿಪ್ಪಿನೊ ಜಾಗದಿಂದ ಬಂದಿದ್ದ ಒಬ್ಬ ವ್ಯಕ್ತಿ ನಿಂತ್ಕೊಂಡಿದ್ದ. ಅವನನ್ನ ನೋಡಿದ ತಕ್ಷಣ ‘ಇವನಂತೂ ಖಂಡಿತ ಕೇಳಿಸ್ಕೊಳ್ಳಲ್ಲ’ ಅಂದ್ಕೊಂಡೆ. ಆದ್ರೆ ನಾನು ಅಂದ್ಕೊಂಡಿದ್ದು ತಪ್ಪಾಗಿತ್ತು. ಆ ವ್ಯಕ್ತಿ ಸ್ಟಡಿ ತಗೊಳ್ಳೋಕೆ ಶುರುಮಾಡಿದ. ಈಗ ಅವನು ನಮ್ಮ ಸಹೋದರನಾಗಿದ್ದಾನೆ.
ಬ್ರೂಕ್ಲಿನ್ ಬೆತೆಲ್‌ನಲ್ಲಿ ನಾನು ಕಲಿತ ಪಾಠಗಳು
ನಾನು ಸಹೋದರ ವಿಲ್ಸನ್ ಜೊತೆ ಎರಡು ವರ್ಷ ಇದ್ದೆ. ಆಮೇಲೆ 1985ರಲ್ಲಿ ನನಗೆ ಬ್ರೂಕ್ಲಿನ್ ಬೆತೆಲ್‌ನಲ್ಲಿ ಸೇವೆ ಮಾಡೋ ಆಮಂತ್ರಣ ಸಿಕ್ತು. ನಾನು ಈ ಲೇಖನದ ಆರಂಭದಲ್ಲಿ ಹೇಳಿದ ಹಾಗೆ ನನಗೆ ಮೊದಲು ಬೈಂಡಿಂಗ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡೋ ನೇಮಕ ಸಿಕ್ತು. ಒಂದಿನ ನಾನು ಪುಸ್ತಕದ ಕವರ್‌ನ ಮುದ್ರಣ ಮಾಡುವಾಗ ಒಂದು ತಪ್ಪು ಮಾಡಿ ಬಿಟ್ಟೆ. ಇದರಿಂದ ನೂರಾರು ಪುಸ್ತಕದ ಕವರ್‌ಗಳು ಹಾಳಾಗಿ ಹೋಯ್ತು. ಸಹೋದರರು ನನಗೆ ‘ಇದೆಲ್ಲಾ ಹೇಗಾಯ್ತು ಅಂತ ಮೇಲ್ವಿಚಾರಕರಿಗೆ ಹೇಳು’ ಅಂದ್ರು. ಆಗ ನಾನು ಈ ತಪ್ಪು ಯಾಕೆ ಆಯ್ತು ಅಂತ ಒಂದಷ್ಟು ಕಾರಣಗಳನ್ನ ಹೇಳ್ದೆ, ಆದರೆ ಒಂದು ವಿಷ್ಯ ಹೇಳೋದಕ್ಕೆ ಮಾತ್ರ ತಪ್ಪಿಹೋದೆ. ಆಗ ಮೇಲ್ವಿಚಾರಕರು, “ತಪ್ಪಾಯ್ತು, ಕ್ಷಮಿಸಿ ಅಂತ ಹೇಳೋದು ಯಾವಾಗಲೂ ಒಳ್ಳೇದು” ಅಂತ ದಯೆಯಿಂದ ಹೇಳಿದ್ರು. ಆಗ ನನಗೆ, ತಪ್ಪನ್ನ ಒಪ್ಕೊಳ್ಳೋದು ಮತ್ತು ಕ್ಷಮೆ ಕೇಳೋದು ಎಷ್ಟು ಮುಖ್ಯ ಅಂತ ಅರ್ಥ ಆಯ್ತು.
ಬ್ರೂಕ್ಲಿನ್ ಬೆತೆಲನ್ನ ನೋಡೋಕೆ ಬಂದವ್ರಿಗೆ ಬೈಂಡರಿ ಡಿಪಾರ್ಟ್‌ಮೆಂಟ್‌ನ ತೋರಿಸ್ತಿದ್ದಾರೆ
ಬೇರೆಯವರ ಸೇವೆ ಮಾಡೋದಂದ್ರೆ ಏನು ಅಂತ ಬೆತೆಲಿನಲ್ಲಿ ನಂಬಿಗಸ್ತಿಕೆಯಿಂದ ಸೇವೆ ಮಾಡ್ತಿದ್ದ ವಯಸ್ಸಾದ ಸಹೋದರ ಸಹೋದರಿಯರನ್ನ ನೋಡಿ ಕಲಿತೆ. ಒಂದಿನ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಮಿಲ್ಟನ್ ಹೆನ್ಶೆಲ್ ಮಧ್ಯಾಹ್ನ ಊಟಕ್ಕೆ ನಮ್ಮ ಟೇಬಲಲ್ಲಿ ಕೂತಿದ್ರು. ಆವತ್ತು ಡೈನಿಂಗ್ ಹಾಲ್ ಪೂರ್ತಿ ತುಂಬ ಜನ ಇದ್ರು. ಇದ್ರಿಂದ ವೇಟರ್ಸ್ ಊಟ ಬಡಿಸೋಕೆ ಲೇಟ್ ಮಾಡ್ತಿದ್ರು. ಆಗ ಯುವಕರಾಗಿದ್ದ ನಾವೆಲ್ಲಾ ‘ಯಾಕೆ ಇಷ್ಟು ಲೇಟ್ ಮಾಡ್ತಿದ್ದಾರೆ’ ಅಂತ ಗೊಣಗ್ತಿದ್ವಿ. ಆಗ ಸಹೋದರ ಹೆನ್ಶಲ್ ಒಂದು ಮಾತೂ ಆಡದೇ ಎದ್ದು ಹೋಗಿ ವೇಟರ್ಸ್‌ಗೆ ಸಹಾಯ ಮಾಡೋಕೆ ಶುರು ಮಾಡಿದ್ರು. ಟೇಬಲ್‌ಗಳಿಗೆ ನೀರಿನ ಜಗ್ಗು, ಬ್ರೆಡ್ಡು ಮತ್ತು ಬೆಣ್ಣೆ ಇರೋ ತಟ್ಟೆನ ತಗೊಂಡು ಹೋಗಿ ಕೊಟ್ರು. ಈ ಘಟನೆಯಂತೂ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಹಾಗೇ ಉಳಿದಿದೆ. ಅವರು ದೀನತೆಯಿಂದ ಮಾಡಿದ ಈ ಕೆಲಸ ಯೇಸು ತನ್ನ ಶಿಷ್ಯರಿಗೆ ಮಾಡಿದ ಸೇವೆನ ನೆನಪು ಮಾಡ್ತು.—ಯೋಹಾ. 13:3-5.
“ನೀನು ಜಪಾನೀಸ್ ಭಾಷೆ ಕಲಿಬೇಕು!”
ಸಹೋದರಿ ಮಿಚಿಕೋ ಓಡಾ ಮತ್ತು ಅವ್ರ ಗಂಡನ ಜೊತೆ
1987ರಲ್ಲಿ ನಾನು ಒಂದುಸಲ ಜಪಾನಿಗೆ ಹೋದೆ. ಅಲ್ಲಿರೋ ಸಹೋದರ ಸಹೋದರಿಯರ ದೀನತೆ, ಹುರುಪು ನೋಡಿ ನನಗೆ ತುಂಬ ಖುಷಿ ಆಯ್ತು. ಅವ್ರಿಗೆ ಸಹಾಯ ಮಾಡಬೇಕು ಅನಿಸ್ತು. ಆದ್ರೆ ನಾನು ಜಪಾನೀಸ್ ಭಾಷೆ ಕಲಿತಿರಲಿಲ್ಲ. ಒಂದಿನ ಬೆತೆಲ್‌ನಲ್ಲಿದ್ದ ಮಿಚಿಕೋ ಓಡಾ ಅನ್ನೋ ಸಹೋದರಿ ನನಗೆ “ನೀನು ಜಪಾನೀಸ್ ಭಾಷೆ ಕಲಿಬೇಕು!” ಅಂತ ಹೇಳಿದ್ರು. ನಾನು ಅವರು ಹೇಳಿದ ಹಾಗೇ ಮಾಡಿದೆ. ಅವರು ಆಡಿದ ಆ ಒಂದೇ ಒಂದು ಮಾತಿಂದ ನನ್ನ ಇಡೀ ಜೀವನನೇ ಬದಲಾಯ್ತು.
ಕೆಲವು ತಿಂಗಳಾದ ಮೇಲೆ ನನ್ನನ್ನ ನ್ಯೂಯಾರ್ಕ್‌ನಲ್ಲಿದ್ದ ಜಪಾನೀಸ್ ಭಾಷೆ ಮಾತಾಡೋ ಸಭೆಗೆ ಕಳಿಸಿದ್ರು. ಈ ಭಾಷೆ ಕಲ್ತಿದ್ರಿಂದ ಯೆಹೋವನ ಸೇವೆ ಮಾಡೋಕೆ ನನಗೆ ಬೇರೆ ಬೇರೆ ಅವಕಾಶಗಳು ಸಿಕ್ತು. 1989ರಲ್ಲಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಒಂದು ಅಧಿವೇಶನ ನಡೀತು. ಜಪಾನೀಸ್ ಭಾಷೆಯಲ್ಲಿ ನಾನು ಹಾಜರಾದ ಮೊದಲನೇ ಅಧಿವೇಶನ ಇದಾಗಿತ್ತು. ಈ ಅಧಿವೇಶನದಲ್ಲಿ ಮಿವಾಕೊ ಒನಾಮಿ ಅನ್ನೋ ಪಯನೀಯರ್ ಸಹೋದರಿ ಡ್ರಾಮದಲ್ಲಿ ಒಂದು ಪಾತ್ರ ಮಾಡಿದ್ರು. ಅದೇನೋ ಗೊತ್ತಿಲ್ಲ, ಆ ಸಹೋದರಿ ನನ್ನ ಕಣ್ಮನ ಸೆಳೆದುಬಿಟ್ರು.
1992ರಲ್ಲಿ ನಾನು ಮತ್ತು ಮಿವಾಕೊ ಮದುವೆ ಆದ್ವಿ. ನಮ್ಮಿಬ್ಬರಿಗೂ ಬ್ರೂಕ್ಲಿನ್ ಬೆತೆಲ್‌ನಲ್ಲಿ ಜೊತೆಯಾಗಿ ಸೇವೆ ಮಾಡೋ ಅವಕಾಶ ಸಿಕ್ತು. ಮಿವಾಕೊ ಏನೇ ಮಾಡಿದ್ರೂ ತುಂಬ ಯೋಚ್ನೆ ಮಾಡ್ತಾಳೆ, ಬೇರೆಯವ್ರಿಗೆ ಕಾಳಜಿ ತೋರಿಸ್ತಾಳೆ, ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತಾಳೆ. ಬೇರೆಯವ್ರ ಜೊತೆ ದಯೆಯಿಂದ ನಡ್ಕೊಳ್ಳೋಕೆ ನಾನು ಅವಳನ್ನ ನೋಡಿ ಕಲ್ತಿದ್ದೀನಿ. ಅವಳು ಯೆಹೋವ ನನಗೆ ಕೊಟ್ಟಿರೋ ಒಂದು ಗಿಫ್ಟ್. ಅವಳು ನನ್ನ ಜೊತೆ ಇರೋದ್ರಿಂದ ನಾನು ಖುಷಿಯಾಗಿ, ನೆಮ್ಮದಿಯಾಗಿದ್ದೀನಿ.
ನಮ್ಮ ಮದುವೆ ದಿನ
ಜಪಾನ್ ಬ್ರಾಂಚ್‌ನಲ್ಲಿ ಕೆಲಸ ಮತ್ತು ನನ್ನ ಸೇವೆ
ಸ್ವಲ್ಪ ಸಮಯ ಆದ್ಮೇಲೆ ಜಪಾನಿನಲ್ಲಿದ್ದ ಮಿವಾಕೊ ಅವ್ರ ಅಪ್ಪ-ಅಮ್ಮನಿಗೆ ತುಂಬ ಹುಷಾರಿಲ್ಲದಂಗೆ ಆಯ್ತು. ಅದಕ್ಕೆ ನಮ್ಮನ್ನ ಜಪಾನ್ ಬ್ರಾಂಚ್‌ಗೆ ಕಳಿಸಿದರು. ಇದ್ರಿಂದ ನಾವು ಅವ್ರ ಹತ್ತಿರಾನೇ ಇದ್ದು ಬೇಕಾಗಿರೋ ಸಹಾಯ ಮಾಡಬಹುದಿತ್ತು. ಹಾಗಾಗಿ ನಾವು 1999ರಲ್ಲಿ ಜಪಾನ್ ಬ್ರಾಂಚ್‌ಗೆ ಶಿಫ್ಟ್ ಆದ್ವಿ.
ಜಪಾನಿನ ಬೆತೆಲ್ ಕುಟುಂಬದವರು ನಮ್ಮನ್ನ ತುಂಬ ಪ್ರೀತಿಯಿಂದ ಸ್ವಾಗತಿಸಿದರು. ಆ ಹೊಸ ಜಾಗಕ್ಕೆ ನಾವು ಬೇಗನೇ ಹೊಂದಿಕೊಂಡ್ವಿ. ಅಲ್ಲಿನ ಸಹೋದರ ಸಹೋದರಿಯರು ಉದಾರವಾಗಿ ಕೊಡೋದ್ರಲ್ಲಿ, ಅತಿಥಿ ಸತ್ಕಾರ ತೋರಿಸೋದ್ರಲ್ಲಿ ಎತ್ತಿದ ಕೈ. ಅವ್ರಿಂದ ನಾನು ಎಷ್ಟೋ ಒಳ್ಳೊಳ್ಳೆ ಗುಣಗಳನ್ನ ಕಲಿತೆ. ಹೀಗೆ ಯೆಹೋವ ನನ್ನನ್ನ ರೂಪಿಸೋಕೆ ಬಿಟ್ಟುಕೊಟ್ಟೆ. ಅವರು ತಮ್ಮ ಕೆಲಸನ ಗಂಭೀರವಾಗಿ ತಗೊಂಡು ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾರೆ. ಅವರು ಒಬ್ಬೊಬ್ರೇ ಕೆಲಸ ಮಾಡೋಕ್ಕಿಂತ ಗುಂಪಾಗಿ ಕೆಲಸ ಮಾಡೋಕೆ ಇಷ್ಟಪಡ್ತಾರೆ. ಯಾಕಂದ್ರೆ ಅವ್ರ ಸಂಸ್ಕೃತಿ ಪ್ರಕಾರ ಒಬ್ರೇ ಕೆಲಸ ಮಾಡಿ ಹೊಗಳಿಕೆ ಪಡಿಯೋದಕ್ಕಿಂತ ಗುಂಪಾಗಿ ಕೈಜೋಡಿಸಿ ಕೆಲಸ ಮಾಡೋದು ತುಂಬ ಒಳ್ಳೇದು ಅಂತ ನಂಬ್ತಾರೆ. ದೀನತೆಯಿಂದ ಬೇರೆಯವರ ಜೊತೆ ಕೆಲಸ ಮಾಡೋದು ಎಷ್ಟು ಮುಖ್ಯ ಅಂತ ನಾನು ಅವ್ರಿಂದ ಕಲಿತೆ. ಅಷ್ಟೇ ಅಲ್ಲ, ಯೆಹೋವನ ಉದ್ದೇಶನ ಪೂರೈಸೋಕೆ ಒಂದು ಚಿಕ್ಕ ಪಾತ್ರ ಆದ್ರೂ ನಾನು ಅದನ್ನ ಚೆನ್ನಾಗಿ ಮಾಡಬೇಕು ಅಂತ ಕಲಿತೆ.
ನಾನು ಅಮೆರಿಕದಲ್ಲಿ ಹುಟ್ಟಿದ್ದರಿಂದ ಜಪಾನಿನಲ್ಲಿರೋ ಸಹೋದರರು ಕೆಲವೊಂದು ವಿಷ್ಯಗಳನ್ನ ಯಾಕೆ ಹೀಗೆ ಮಾಡ್ತಾರೆ ಅಂತ ನನಗೆ ಅರ್ಥನೇ ಆಗ್ತಿರಲಿಲ್ಲ. ಆಗ ನಾನು ಕೋಪ ಮಾಡಿಕೊಳ್ಳದೆ ತಾಳ್ಮೆಯಿಂದ ಇರೋಕೆ ಕಲಿಬೇಕಿತ್ತು. ಆಮೇಲೆ ಹೋಗ್ತಾ ಹೋಗ್ತಾ ಒಂದು ಮುಖ್ಯವಾದ ವಿಷ್ಯ ನನಗೆ ಅರ್ಥ ಆಯ್ತು. ಅದೇನಂದ್ರೆ ಸಂಘಟನೆ ಕೊಡೋ ನಿರ್ದೇಶನಕ್ಕೆ ತಕ್ಕಂತೆ ಮಾಡೋ ಯಾವುದೇ ನಿರ್ಧಾರನ ಯೆಹೋವ ಆಶೀರ್ವದಿಸ್ತಾನೆ. ಕೊನೆಗೆ ನಡೆಯೋದು ಯೆಹೋವನ ಇಷ್ಟಾನೇ ಅಂತ ಅರ್ಥಮಾಡ್ಕೊಂಡೆ.
ನನಗೆ ಬೆತೆಲ್‌ನಲ್ಲಿ ಸಿಕ್ಕ ತರಬೇತಿನ ಮೋಶೆಗೆ ಸಿಕ್ಕ ತರಬೇತಿಗೆ ಹೋಲಿಸ್ತೀನಿ. ಅವನು 40 ವರ್ಷ ಕುರುಬನಾಗಿದ್ದಾಗ ದೀನತೆ ಬೆಳೆಸ್ಕೊಳ್ಳೋಕೆ ಯೆಹೋವ ಅವನಿಗೆ ಸಹಾಯ ಮಾಡಿದನು. ಮೋಶೆ ತರನೇ ನಾನೂ ಚೆನ್ನಾಗಿ ಓದಿದ್ದೆ. ಇದ್ರಿಂದ ನನ್ನಲ್ಲಿ ಹೆಮ್ಮೆ ಇತ್ತು, ಜಾಸ್ತಿ ನನ್ನ ಮೇಲೆನೇ ಆತ್ಕೊತಿದ್ದೆ. ಆದ್ರೆ ಬೆತೆಲ್, ದೀನತೆ ತೋರಿಸೋಕೆ, ಯೆಹೋವನ ಮೇಲೆ ಜಾಸ್ತಿ ಆತ್ಕೊಳ್ಳೋಕೆ ಕಲಿಸಿತು. ಯೆಹೋವ ತಾಳ್ಮೆಯಿಂದ ಮೋಶೆಗೆ ತರಬೇತಿ ಕೊಟ್ಟ ಹಾಗೇ ಇವತ್ತಿನ ತನಕ ನನಗೂ ತಾಳ್ಮೆಯಿಂದ ತರಬೇತಿ ಕೊಡ್ತಿದ್ದಾನೆ.
ಜಪಾನ್ ಬ್ರಾಂಚ್‌ನಲ್ಲಿ ಕೆಲಸ ಮಾಡ್ತಿರೋದು
ಮಿವಾಕೊ ಅವ್ರ ಅಪ್ಪ-ಅಮ್ಮ ಸಾಯೋ ತನಕ ಅಂದ್ರೆ ಸುಮಾರು 24 ವರ್ಷಗಳು ನಾವು ಅವ್ರನ್ನ ನೋಡ್ಕೊಂಡ್ವಿ. ಅವ್ರನ್ನ ಎಷ್ಟೋ ಸಲ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕಾಗಿತ್ತು, ಫೋನ್ ಕಾಲ್ ಬಂದ್ರೆನೇ ಭಯ ಆಗ್ತಿತ್ತು. ಅವ್ರ ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗ್ತಾ ಬಂತು. ಎಷ್ಟರ ಮಟ್ಟಿಗೆ ಅಂದ್ರೆ ಅವ್ರಿಗೆ ಎದ್ದೇಳಕ್ಕೂ ಆಗ್ತಿರಲಿಲ್ಲ. ಕೂಟಗಳಿಗೆ ಹೋಗೋಕೆ, ಸೇವೆಗೆ ಹೋಗೋಕೆ ಆಗ್ತಿರಲಿಲ್ಲ. ಅವರು ಸಾಯೋಕೂ ಕೆಲವು ವಾರಗಳ ಮುಂಚೆ ವೀಲ್‌ಚೇರನಲ್ಲೇ ಇರಬೇಕಾಯ್ತು. ಇಷ್ಟೆಲ್ಲಾ ಸಮಸ್ಯೆ ಇದ್ರೂ ಅವ್ರಿಗೆ ಯೆಹೋವನ ಮೇಲಿದ್ದ ಪ್ರೀತಿ ಒಂಚೂರು ಕಮ್ಮಿ ಆಗಿರಲಿಲ್ಲ. ಅವರು ಸತ್ಯದ ಬಗ್ಗೆ ಮಾತಾಡುವಾಗ ಅವ್ರ ಮುಖ ಖುಷಿಯಿಂದ ಅರಳುತ್ತಿತ್ತು. ಪರಿಸ್ಥಿತಿ ಹೇಗೇ ಇದ್ರೂ ಯೆಹೋವನ ಸೇವೆ ಮಾಡ್ತಾ ಇರೋಕೆ, ಸಂತೋಷ-ಸಂತೃಪ್ತಿ ಕಂಡ್ಕೊಳ್ಳೋಕೆ ನಾನು ಅವ್ರನ್ನ ನೋಡಿ ಕಲಿತೆ.
ಒಕಿನಾವದಲ್ಲಿ ಮಿವಾಕೊ ಜೊತೆ ಸೇವೆ ಮಾಡ್ತಿರೋದು
2024ರಲ್ಲಿ ನಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಆಯ್ತು. 30ಕ್ಕಿಂತ ಜಾಸ್ತಿ ವರ್ಷಗಳಿಂದ ಬೆತೆಲಲ್ಲಿ ಸೇವೆ ಮಾಡ್ತಿದ್ದ ನಮಗೆ ಒಕಿನಾವ ಅನ್ನೋ ದ್ವೀಪದಲ್ಲಿ ವಿಶೇಷ ಪಯನೀಯರ್ ಆಗಿ ಸೇವೆ ಮಾಡೋ ನೇಮಕ ಸಿಕ್ತು. ಇಲ್ಲಿ ನಾವು ಮಿಲಿಟರಿ ಕೇಂದ್ರದ ಹತ್ರ ಇರೋ ಕುಟುಂಬಗಳಿಗೆ ಸಾರ್ತಾ ಇದ್ದೀವಿ. ಬೆತೆಲಲ್ಲಿ ನಮಗೆ ಸಿಕ್ಕ ಒಳ್ಳೆ ತರಬೇತಿ ಈ ಹೊಸ ಜೀವನಕ್ಕೆ ಹೊಂದ್ಕೊಳ್ಳೋಕೆ ಸಹಾಯ ಮಾಡ್ತು. ನಾವು ಒಳ್ಳೆ ಶೆಡ್ಯೂಲ್ ಮಾಡ್ಕೊಂಡು, ಸಮಯನ ಸರಿಯಾಗಿ ಬಳಸ್ತಿರೋದ್ರಿಂದ ಸೇವೆನ ಚೆನ್ನಾಗಿ ಮಾಡೋಕೆ ಆಗ್ತಿದೆ. ಯೆಹೋವ ದೇವರು ನಮಗೆ ಒಳ್ಳೆ ಬೈಬಲ್ ವಿದ್ಯಾರ್ಥಿಗಳನ್ನ ಕೊಟ್ಟಿದ್ದಾನೆ. ಅವರು ನಮಗೆ ಕುಟುಂಬದ ತರನೇ ಆಗಿ ಬಿಟ್ಟಿದ್ದಾರೆ. ಜನ್ರನ್ನ ಪ್ರೀತಿ ಮಾಡೋದು ಎಷ್ಟು ಮುಖ್ಯ ಅಂತ ಮೊದಲಿಗಿಂತ ಈಗ ಚೆನ್ನಾಗಿ ಅರ್ಥ ಆಗಿದೆ. ಇಂಥ ಅದ್ಭುತ ನೇಮಕ ಕೊಟ್ಟಿರೋದಕ್ಕೆ ನಾವು ದಿನಾ ಯೆಹೋವನಿಗೆ ಥ್ಯಾಂಕ್ಸ್ ಹೇಳ್ತೀವಿ.
ಯೆಹೋವ ನನ್ನನ್ನ ಇನ್ನೂ ರೂಪಿಸಬೇಕು ಅಂತ ಇಷ್ಟಪಡ್ತೀನಿ
ಈಗ ನನ್ನ ಕುಟುಂಬದವರು ಸತ್ಯನ ವಿರೋಧಿಸ್ತಿಲ್ಲ, ಹಾಗಂತ ಯೆಹೋವನನ್ನ ಆರಾಧಿಸ್ತಾನೂ ಇಲ್ಲ. ಯಾರೆಲ್ಲಾ ತಮ್ಮ ಕುಟುಂಬನ ಬಿಟ್ಟು ತನ್ನ ಶಿಷ್ಯರಾಗ್ತಾರೋ ಅವ್ರಿಗೆ ನೂರು ಪಟ್ಟು ಜಾಸ್ತಿ ಸಿಗುತ್ತೆ ಅಂತ ಯೇಸು ಮಾತು ಕೊಟ್ಟಿದ್ದಾನೆ. (ಮಾರ್ಕ 10:29, 30) ಆ ಮಾತು ನನ್ನ ವಿಷ್ಯದಲ್ಲಿ ನಿಜ ಆಗಿದೆ. ಪ್ರಪಂಚದ ಎಲ್ಲಾ ಕಡೆ ಇರೋ ಲೆಕ್ಕ ಇಲ್ಲದಷ್ಟು ಸಹೋದರ ಸಹೋದರಿಯರು ನಮಗೆ ಪ್ರೀತಿ, ಕಾಳಜಿ ತೋರಿಸಿದ್ದಾರೆ.
ನನ್ನ ಹತ್ರ ಸಹೋದರ ವಿಲ್ಸನ್ ಕೊಟ್ಟ ಸತ್ಯ ಪುಸ್ತಕ ಇನ್ನೂ ಇದೆ. ಆ ನೀಲಿ ಬಣ್ಣದ ಪುಸ್ತಕ ನೋಡಿದಾಗೆಲ್ಲಾ ತನ್ನ ಬಗ್ಗೆ ತಿಳ್ಕೊಳ್ಳೋಕೆ ಯೆಹೋವ ನನಗೆ ಹೇಗೆ ಸಹಾಯ ಮಾಡಿದನು ಅನ್ನೋದು ನೆನಪಾಗುತ್ತೆ. (1 ಪೂರ್ವ. 28:9) ಹಾಗಾಗಿ ಯೆಹೋವ ನನ್ನನ್ನ ರೂಪಿಸ್ತಾ ಇರೋಕೆ ಬಿಟ್ಟುಕೊಡಬೇಕು, ಬೇರೆಯವರು ಸತ್ಯ ಕಲಿತು ಶಾಶ್ವತ ಜೀವ ಪಡ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡಬೇಕು ಅಂತ ನಾನು ದೃಢ ತೀರ್ಮಾನ ಮಾಡಿದ್ದೀನಿ.