ಸೆಪ್ಟೆಂಬರ್ 28–ಅಕ್ಟೋಬರ್ 4, 2026
ಗೀತೆ 79 ಸ್ಥಿರವಾಗಿ ನಿಲ್ಲಲು ಕಲಿಸೋಣ
ಯೆಹೋವನನ್ನ ಸವಿದು ನೋಡೋಕೆ ಬೇರೆಯವ್ರಿಗೆ ಸಹಾಯ ಮಾಡಿ
“ಶಾಶ್ವತ ಜೀವ ಸಿಗಬೇಕಾದ್ರೆ ಒಬ್ಬನೇ ಸತ್ಯ ದೇವರಾಗಿರೋ ನಿನ್ನನ್ನ . . . ತಿಳ್ಕೊಳ್ಳಲೇಬೇಕು.” —ಯೋಹಾ. 17:3.
ಈ ಲೇಖನದಲ್ಲಿ ಏನಿದೆ?
ಬೈಬಲ್ ವಿದ್ಯಾರ್ಥಿಗಳು ಯೆಹೋವನನ್ನ ಸವಿದು ನೋಡೋಕೆ, ಅಂದ್ರೆ ಆತನ ಗುಣಗಳೇನು, ಆತನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ತಿಳ್ಕೊಳ್ಳೋಕೆ ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.
1. ಬೈಬಲ್ ಟೀಚರ್ ಆಗಿ ನಿಮಗೆ ಯಾವಾಗ ಖುಷಿಯಾಗುತ್ತೆ?
ನಿಮ್ಮ ಬೈಬಲ್ ವಿದ್ಯಾರ್ಥಿ ಮೊದಲನೇ ಸಲ ಮೀಟಿಂಗ್ ಬಂದಾಗ, ಉತ್ರ ಹೇಳಿದಾಗ, ಕಲಿತಿರೋ ಸತ್ಯಾನ ಬೇರೆಯವ್ರ ಹತ್ರ ಹಂಚ್ಕೊಂಡಾಗ ಮತ್ತು ನಿಧಾನವಾಗಿ ತನ್ನನ್ನೇ ಯೆಹೋವನಿಗೆ ಸಮರ್ಪಿಸ್ಕೊಂಡಾಗ ನಿಮಗೆ ತುಂಬ ಖುಷಿ ಆಗುತ್ತೆ ಅಲ್ವಾ? ಒಬ್ಬ ವ್ಯಕ್ತಿ ಯೆಹೋವನಿಗೆ ಹತ್ರ ಆಗೋಕೆ, ಪ್ರಗತಿ ಮಾಡೋಕೆ ಯೆಹೋವನೇ ಮುಖ್ಯ ಕಾರಣ. ಹಾಗಾಗಿ ಎಲ್ಲಾ ಮಹಿಮೆ ಮತ್ತು ಗೌರವವನ್ನ ನಾವು ಯೆಹೋವನಿಗೆ ಸಲ್ಲಿಸಬೇಕು.—1 ಕೊರಿಂ. 3:5-9; 3 ಯೋಹಾ. 3, 4.
2. ಬೈಬಲ್ ವಿದ್ಯಾರ್ಥಿಗಳು ಏನು ಮಾಡಬೇಕಂತ ಯೆಹೋವ ಇಷ್ಟಪಡ್ತಾನೆ? (1 ತಿಮೊತಿ 2:3, 4)
2 “ಎಲ್ಲಾ ತರದ ಜನ್ರು ರಕ್ಷಣೆ ಪಡಿಬೇಕು, ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು ಅನ್ನೋದೇ [ದೇವರ] ಇಷ್ಟ.” (1 ತಿಮೊತಿ 2:3, 4 ಓದಿ.) ನೋಡಿದ್ರಾ, ಎಲ್ರೂ ತನ್ನ ಬಗ್ಗೆ ತಿಳ್ಕೊಬೇಕು, ತನ್ನ ಉದ್ದೇಶವನ್ನ ಅರ್ಥ ಮಾಡ್ಕೊಬೇಕು ಅನ್ನೋದು ಯೆಹೋವನ ಆಸೆ. (ಯೆರೆ. 9:24) ಜನ ಯೆಹೋವನನ್ನ ತಿಳ್ಕೊಬೇಕು ಅಂದ್ರೆ ಸರಿಯಾದ ಜ್ಞಾನ ಪಡ್ಕೊಬೇಕು. “ಸರಿಯಾದ ಜ್ಞಾನ” ಅಂದ್ರೇನು? ಒಬ್ಬ ವ್ಯಕ್ತಿ ದೇವ್ರ ಬಗ್ಗೆ ಮಾಹಿತಿ ಸಂಗ್ರಹಿಸಿ, ಆತನ ಬಗ್ಗೆ ಬರೀ ಜ್ಞಾನ ಪಡ್ಕೊಂಡ್ರೆ ಅದನ್ನ ಸರಿಯಾದ ಜ್ಞಾನ ಅಂತ ಹೇಳೋಕೆ ಆಗಲ್ಲ. ಬದ್ಲಿಗೆ ಆ ಜ್ಞಾನ ದೇವ್ರಿಗೆ ಹತ್ರ ಆಗೋಕೆ, ಬದಲಾವಣೆ ಮಾಡೋಕೆ ಆ ವ್ಯಕ್ತಿಯನ್ನ ಪ್ರೇರೇಪಿಸಬೇಕು. ಇದೇ ಸರಿಯಾದ ಜ್ಞಾನ ಆಗಿದೆ ಅಂತ ಒಬ್ಬ ಬೈಬಲ್ ವಿದ್ವಾಂಸ ಹೇಳ್ತಾನೆ. ಯಾವಾಗ ವಿದ್ಯಾರ್ಥಿ ಯೆಹೋವನ ಜ್ಞಾನ ಪಡ್ಕೊಂಡು ತನ್ನನ್ನೇ ಬದಲಾಯಿಸ್ಕೊಳ್ತಾನೋ ಆಗ ಅದು ಅವನಿಗೆ ‘ಶಾಶ್ವತ ಜೀವದ’ ದಾರಿಯನ್ನೂ ತೆರೆಯುತ್ತೆ.—ಯೋಹಾ. 17:3.
3. ಈ ಲೇಖನದಲ್ಲಿ ಏನು ಕಲಿತೀವಿ?
3 ಬೇರೆಯವ್ರಿಗೆ ತನ್ನ ಬಗ್ಗೆ ಕಲಿಸೋ ದೊಡ್ಡ ಸುಯೋಗವನ್ನ ಯೆಹೋವ ನಮ್ಮೆಲ್ರಿಗೂ ಕೊಟ್ಟಿದ್ದಾನೆ. ಈ ಲೇಖನದಲ್ಲಿ ನಾವು, ಬೈಬಲ್ ವಿದ್ಯಾರ್ಥಿಗಳು ಯಾಕೆ ಯೆಹೋವನನ್ನ ಚೆನ್ನಾಗಿ ತಿಳ್ಕೊಬೇಕು, ಅವರು ಯೆಹೋವನನ್ನ ಚೆನ್ನಾಗಿ ತಿಳ್ಕೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು, ಮತ್ತು ಯೆಹೋವನ ಬಗ್ಗೆ ಅವರು ಪಡ್ಕೊಂಡಿರೋ ಜ್ಞಾನವನ್ನ ತಮ್ಮ ಜೀವನದಲ್ಲಿ ಪಾಲಿಸೋಕೆ ನಾವು ಹೇಗೆ ಸಹಾಯ ಮಾಡಬಹುದು ಅಂತಾನೂ ನೋಡೋಣ.
ಯೆಹೋವನನ್ನ ಚೆನ್ನಾಗಿ ತಿಳ್ಕೊಳ್ಳಲು ವಿದ್ಯಾರ್ಥಿಗೆ ಸಹಾಯ ಮಾಡಿ
4. ಮಾರ್ಕ 12:30ರ ಪ್ರಕಾರ ಬೈಬಲ್ ಸ್ಟಡಿ ಮಾಡ್ವಾಗ ನಮ್ಮ ಮುಖ್ಯ ಗುರಿ ಏನಾಗಿರಬೇಕು?
4 ಯೆಹೋವನನ್ನ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ಪ್ರೀತಿಸಬೇಕು ಅನ್ನೋದೇ ದೊಡ್ಡ ಆಜ್ಞೆ. (ಮಾರ್ಕ 12:30 ಓದಿ.) ಈ ತರ ಪ್ರೀತಿಸಬೇಕಂದ್ರೆ ಮೊದಲು ವಿದ್ಯಾರ್ಥಿ ಯೆಹೋವನ ಬಗ್ಗೆ ತಿಳ್ಕೊಬೇಕು. ವಿದ್ಯಾರ್ಥಿ ನಮಗೋ, ಕೆಲವು ಬೋಧನೆಗಳಿಗೋ ಅಥವಾ ನಮ್ಮ ಸಂಘಟನೆಗೋ ತನ್ನನ್ನ ಸಮರ್ಪಿಸ್ಕೊಬಾರದು. ಅವನು ಯೆಹೋವನಿಗೆ ಮಾತ್ರ ತನ್ನನ್ನ ಸಮರ್ಪಿಸ್ಕೊಬೇಕು. ಹಾಗಾಗಿ ನಾವು ಬೈಬಲ್ ಸ್ಟಡಿ ಮಾಡ್ವಾಗ ನಮ್ಮ ವಿದ್ಯಾರ್ಥಿ ಯೆಹೋವನನ್ನ ತಿಳ್ಕೊಂಡು ಆತನನ್ನ ಪ್ರೀತಿಸೋಕೆ ಸಹಾಯ ಮಾಡೋದೇ ನಮ್ಮ ಮುಖ್ಯ ಗುರಿಯಾಗಿರಬೇಕು.
5. ನಿಮ್ಮ ಬೈಬಲ್ ವಿದ್ಯಾರ್ಥಿಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಅವನು ಏನು ಮಾಡ್ತಾನೆ?
5 ಪ್ರೀತಿ ಮತ್ತು ವಿಧೇಯತೆ ಒಂದೇ ನಾಣ್ಯದ ಎರಡು ಮುಖ ಇದ್ದಂತೆ! ನಿಮ್ಮ ವಿದ್ಯಾರ್ಥಿ ಯೆಹೋವನ ಬಗ್ಗೆ ಕಲಿತು ಆತನನ್ನ ಪ್ರೀತಿಸಬೇಕು. ಆಗ ಆತನಿಗೆ ವಿಧೇಯತೆ ತೋರಿಸಬೇಕು ಅಂತ ವಿದ್ಯಾರ್ಥಿಗೆ ಅನಿಸುತ್ತೆ. ಅದಕ್ಕೆ ಯೇಸು, “ನಾನು ನನ್ನ ಅಪ್ಪನನ್ನ ಎಷ್ಟು ಪ್ರೀತಿಸ್ತೀನಿ ಅಂತ ಲೋಕ ತಿಳ್ಕೊಳ್ಳೋಕೆ ಅಪ್ಪ ನನಗೆ ಹೇಳಿದ ತರಾನೇ ಮಾಡ್ತಾ ಇದ್ದೀನಿ” ಅಂತ ಹೇಳಿದನು. (ಯೋಹಾ. 14:31) ನಿಮ್ಮ ವಿದ್ಯಾರ್ಥಿ ಯೆಹೋವ ಹೇಳಿದ್ದನ್ನ ಪಾಲಿಸೋಕೆ, ಆತನಿಗೆ ನಿಷ್ಠೆ ತೋರಿಸೋಕೆ ಮುಖ್ಯವಾಗಿ ಸಹಾಯ ಮಾಡೋದು ಯೆಹೋವನ ಮೇಲಿರೋ ಪ್ರೀತಿನೇ!—1 ಯೋಹಾ. 5:3.
6. ನಿಮ್ಮ ವಿದ್ಯಾರ್ಥಿ ಸರಿಯಾದ ನಿರ್ಧಾರ ಮಾಡೋಕೆ ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ಯಾಕೆ ಮುಖ್ಯ? ಉದಾಹರಣೆ ಕೊಡಿ.
6 ವಿದ್ಯಾರ್ಥಿ ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಂಡ್ರೆ ಸರಿಯಾದ ನಿರ್ಧಾರನ ಮಾಡ್ತಾನೆ. ಒಬ್ಬ ವ್ಯಕ್ತಿ ಕಾರ್ ಓಡಿಸೋದನ್ನ ಕಲಿಯೋಕೆ ಬೇರೆಯವರು ಓಡಿಸೋದನ್ನ ನೋಡಿದ್ರೆ ಅಥವಾ ಒಂದು ಬುಕ್ ಓದಿದ್ರೆ ಸಾಕಾಗಲ್ಲ. ಬದ್ಲಿಗೆ ಅವನು ತುಂಬ ಸಲ ಪ್ರಾಕ್ಟೀಸ್ ಮಾಡಬೇಕು. ಆಗ ಅವನಿಗೆ ಯಾವ ರೋಡಲ್ಲಿ ಹೇಗೆ ಓಡಿಸಬೇಕು, ಪರಿಸ್ಥಿತಿನ ಹೇಗೆ ನಿಭಾಯಿಸಬೇಕು ಅಂತ ಗೊತ್ತಾಗುತ್ತೆ. ಅದೇ ತರ ಒಬ್ಬ ಬೈಬಲ್ ವಿದ್ಯಾರ್ಥಿ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಬರೀ ಸ್ಟಡಿ ಮಾಡಿದ್ರೆ, ಬೈಬಲ್ ಓದಿದ್ರೆ ಸಾಕಾಗಲ್ಲ. ಅವನು ಬೈಬಲ್ ತತ್ವಗಳನ್ನ ಬಳಸಿ ಜೀವನದಲ್ಲಿ ನಿರ್ಧಾರ ಮಾಡಬೇಕು. ಆಗ ಯೆಹೋವ ಹೇಗೆ ಸಹಾಯ ಮಾಡ್ತಿದ್ದಾನೆ ಅಂತ ಅವನು ಕಣ್ಣಾರೆ ನೋಡ್ತಾನೆ. ಇದನ್ನೆಲ್ಲ ಮಾಡಿದ್ರೆ ಅವನು ಜೀವನದಲ್ಲಿ ಎಂಥದ್ದೇ ಪರಿಸ್ಥಿತಿ ಬಂದ್ರೂ ಸರಿಯಾದ ನಿರ್ಧಾರ ಮಾಡೋಕೆ ರೆಡಿ ಆಗಿರ್ತಾನೆ.
7. ಯೆಹೋವನನ್ನ ಚೆನ್ನಾಗಿ ತಿಳ್ಕೊಂಡಿದ್ದು ಯೋಸೇಫನಿಗೆ ಸರಿಯಾದ ನಿರ್ಧಾರ ಮಾಡೋಕೆ ಹೇಗೆ ಸಹಾಯ ಮಾಡ್ತು?
7 ಯೋಸೇಫ ಯೆಹೋವನನ್ನ ಚೆನ್ನಾಗಿ ತಿಳ್ಕೊಂಡಿದ್ದ. ಅದಕ್ಕೆ ಪೋಟೀಫರನ ಹೆಂಡತಿ ಲೈಂಗಿಕ ಅನೈತಿಕತೆಗೆ ಒತ್ತಾಯ ಮಾಡಿದಾಗ ಅವನು ಒಪ್ಕೊಂಡಿಲ್ಲ. ಯೋಸೇಫ ಚಿಕ್ಕ ವಯಸ್ಸಿಂದಾನೇ ಆದಾಮ-ಹವ್ವ ಬಗ್ಗೆ ಮತ್ತು ಅಬ್ರಹಾಮ-ಸಾರ ಬಗ್ಗೆ ತುಂಬ ವಿಷ್ಯಗಳನ್ನ ಕಲ್ತಿದ್ದ. (ಆದಿ. 2:24; 20:3, 6) ಈ ಘಟನೆಗಳಿಂದ ಯೆಹೋವ ಮದುವೆ ಮತ್ತು ಲೈಂಗಿಕ ಅನೈತಿಕತೆನ ಹೇಗೆ ನೋಡ್ತಾನೆ ಅಂತ ಅರ್ಥ ಮಾಡ್ಕೊಂಡಿದ್ದ. ಅದಕ್ಕೆ “ಈ ಮಹಾ ಕೆಟ್ಟ ಕೆಲಸ ಮಾಡಿ ದೇವರ ವಿರುದ್ಧ ಪಾಪ ಮಾಡೋಕೆ ನನ್ನಿಂದ ಸಾಧ್ಯನೇ ಇಲ್ಲ” ಅಂತ ಹೇಳಿದ. (ಆದಿ. 39:7-9) ಯೋಸೇಫನಿಗೆ ಯೆಹೋವನ ಪ್ರಕಾರ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಆತನಿಗೆ ಯಾವ ವಿಷ್ಯ ನೋವು ಮಾಡುತ್ತೆ ಅಂತ ಅರ್ಥ ಮಾಡ್ಕೊಂಡಿದ್ದ. ಅದಕ್ಕೆ ಸರಿಯಾದ ನಿರ್ಧಾರ ಮಾಡಿದ. ನಮ್ಮ ವಿದ್ಯಾರ್ಥಿಗಳು ಯೆಹೋವನನ್ನ ಚೆನ್ನಾಗಿ ತಿಳ್ಕೊಳ್ಳೋಕೆ ನಾವು ಸಹಾಯ ಮಾಡಬೇಕು. ಆಗ ಅವರೂ ತಮ್ಮ ಜೀವನದಲ್ಲಿ ಸರಿಯಾದ ನಿರ್ಧಾರ ಮಾಡ್ತಾರೆ ಮತ್ತು ಯೆಹೋವನ ಮನಸ್ಸನ್ನ ಖುಷಿಪಡಿಸ್ತಾರೆ.
ಯೆಹೋವನನ್ನ ಅರ್ಥ ಮಾಡ್ಕೊಳ್ಳೋಕೆ ಕಲಿಸಿ
8. ವಿದ್ಯಾರ್ಥಿ ಯೆಹೋವನನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳೋಕೆ ನೀವು ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕವನ್ನ ಹೇಗೆ ಬಳಸಬಹುದು?
8 ವಿದ್ಯಾರ್ಥಿ ಯೆಹೋವನ ಬಗ್ಗೆ ಚೆನ್ನಾಗಿ ಕಲಿಯೋಕೆ ಹೇಗೆ ಸಹಾಯ ಮಾಡಬಹುದು? ಯೋಬನಿಗೆ ತನ್ನ ಬಗ್ಗೆ ಕಲಿಸೋಕೆ ಯೆಹೋವ ಪ್ರಶ್ನೆಗಳನ್ನ ಕೇಳಿದನು. ನಿಮಗೆ ಗೊತ್ತಾ? 50ಕ್ಕಿಂತ ಜಾಸ್ತಿ ಪ್ರಶ್ನೆಗಳನ್ನ ಕೇಳಿದನು. (ಯೋಬ 38:1–41:34) ನಾವೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಬಹುದು. ವಿದ್ಯಾರ್ಥಿ ಯೆಹೋವನ ವ್ಯಕ್ತಿತ್ವದ ಬಗ್ಗೆ ಹಂತ ಹಂತವಾಗಿ ಕಲಿಯೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿ ತುಂಬ ಪ್ರಶ್ನೆಗಳನ್ನ ಕೊಡಲಾಗಿದೆ. (“ಕಲಿಸೋಕೆ ಸಹಾಯ ಮಾಡೋ ಪ್ರಶ್ನೆಗಳು” ಅನ್ನೋ ಚೌಕ ನೋಡಿ.) ನೀವು ಮರೆಯದೇ ಸ್ಟಡಿ ಮಾಡ್ವಾಗ ಈ ಪ್ರಶ್ನೆಗಳನ್ನ ಕೇಳಿ.
9-10. (ಎ) ಬೈಬಲ್ ಓದ್ವಾಗ ಅದ್ರಿಂದ ಪೂರ್ತಿ ಪ್ರಯೋಜ್ನ ಪಡ್ಕೊಳ್ಳೋಕೆ ವಿದ್ಯಾರ್ಥಿ ಏನು ಮಾಡಬೇಕು? (ಯಾಕೋಬ 5:11) (ಬಿ) ಬೈಬಲ್ ಘಟನೆಯಿಂದ ಯೆಹೋವನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ಹೇಗೆ ಅರ್ಥ ಮಾಡ್ಕೊಬಹುದು? ಒಂದು ಉದಾಹರಣೆ ಕೊಡಿ.
9 ಬೈಬಲ್ ಸ್ಟಡಿ ಆರಂಭದಲ್ಲೇ ‘ಬೈಬಲ್ ಓದೋಕೆ ಶುರು ಮಾಡಿ’ ಅಂತ ವಿದ್ಯಾರ್ಥಿಗೆ ಪ್ರೋತ್ಸಾಹಿಸಬಹುದು.a ಪ್ರತಿ ಸಲ ಬೈಬಲ್ ಓದಿದ ಮೇಲೆ, ಯೆಹೋವ ಈ ಘಟನೆನ ಯಾಕೆ ಬೈಬಲಲ್ಲಿ ಬರೆಸಿದ್ದಾನೆ, ಈ ಘಟನೆಯಿಂದ ಯೆಹೋವನ ಯಾವ ಗುಣ ಎದ್ದು ಕಾಣುತ್ತೆ ಅಂತ ಯೋಚಿಸೋಕೆ ಹೇಳಬಹುದು. ಶಿಷ್ಯ ಯಾಕೋಬ ಇದನ್ನೇ ಮಾಡಿದ. ಅವನು ಯೋಬನ ಬಗ್ಗೆ ಮಾತಾಡ್ವಾಗ ಬರೀ ಅವನ ತಾಳ್ಮೆ ಬಗ್ಗೆ ಹೇಳಿ ಸುಮ್ಮನಾಗ್ಲಿಲ್ಲ. ಬದಲಿಗೆ ಯೋಬನ ಘಟನೆಯಿಂದ ಯೆಹೋವನಲ್ಲಿ ಕೋಮಲ ಮಮತೆ ಮತ್ತು ಕರುಣೆ ಇದೆ ಅಂತಾನೂ ಕಲಿಸಿದ.—ಯಾಕೋಬ 5:11 ಓದಿ.
10 ಬೈಬಲಲ್ಲಿರೋ ಒಂದೊಂದು ಘಟನೆ ಓದಿದ್ಮೇಲೂ ಅದ್ರಿಂದ ಯೆಹೋವನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ವಿದ್ಯಾರ್ಥಿ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡಬೇಕು. ಉದಾಹರಣೆಗೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರೋ “ಪ್ರತಿದಿನ ಬೈಬಲ್ ಓದಿ ಆನಂದಿಸಿ” ಅನ್ನೋ ಚಾರ್ಟ್ ಇದೆ. ಅಲ್ಲಿರೋ “ಸಿಂಹಗಳ ಗುಂಡಿಯಲ್ಲಿ ದಾನಿಯೇಲ” ಅನ್ನೋ ವಿಷ್ಯನ ವಿದ್ಯಾರ್ಥಿ ಓದಬೇಕು ಅಂತಿದ್ದಾನೆ ಅಂದ್ಕೊಳ್ಳಿ. ಆಗ ನೀವು ಅವನಿಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳೋಕೆ ಹೇಳಿ: ‘ಯೆಹೋವ ದಾನಿಯೇಲನನ್ನ ಯಾಕೆ ಕಾಪಾಡಿದನು? ನಾನು ಏನು ಮಾಡಿದ್ರೆ ಯೆಹೋವನಿಗೆ ಖುಷಿ ಆಗುತ್ತೆ ಅಂತ ಈ ಘಟನೆ ತೋರಿಸುತ್ತೆ?’ (ದಾನಿ. 6:10, 22) ‘ದಾನಿಯೇಲನ ಮೇಲೆ ಅಪವಾದ ಹಾಕಿದವ್ರಿಗೆ ಏನಾಯ್ತು? ನಾನೇನು ಮಾಡಿದ್ರೆ ಯೆಹೋವನಿಗೆ ಬೇಜಾರಾಗುತ್ತೆ ಅಂತ ಈ ಘಟನೆ ತೋರಿಸುತ್ತೆ?’ (ದಾನಿ. 6:4, 5, 24) ಕೊನೆಗೆ ಅವನು ಈ ಘಟನೆಯಿಂದ ಯೆಹೋವನಲ್ಲಿರೋ ಬೇರೆ ಯಾವ ಗುಣಗಳು ಎದ್ದು ಕಾಣುತ್ತೆ ಅನ್ನೋದ್ರ ಬಗ್ಗೆನೂ ಯೋಚ್ನೆ ಮಾಡಬಹುದು.—ದಾನಿ. 6:26, 27.
11. ಬೈಬಲ್ ಸ್ಟಡಿ ಯೆಹೋವನಿಂದ ಸಿಕ್ಕಿರೋ ಗಿಫ್ಟ್ ಅಂತ ನೋಡೋಕೆ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಬಹುದು?
11 ಬೈಬಲ್ ಸ್ಟಡಿಯಿಂದ ನನಗೆ ತುಂಬ ಪ್ರಯೋಜ್ನ ಆಗ್ತಿದೆ ಅಂತ ವಿದ್ಯಾರ್ಥಿ ಹೇಳಿದಾಗ ನಮಗೆ ತುಂಬ ಖುಷಿ ಆಗುತ್ತೆ. ಆದ್ರೆ ಅವನಿಗೆ ಆಗ್ತಿರೋ ಈ ಎಲ್ಲಾ ಪ್ರಯೋಜನಕ್ಕೆ ಮುಖ್ಯ ಕಾರಣ, ಮಹಾ ಬೋಧಕನಾಗಿರೋ ಯೆಹೋವನೇ ಅಂತ ನಾವು ಅವನಿಗೆ ಅರ್ಥ ಮಾಡಿಸಬೇಕು. (ಯೆಶಾ. 30:20, 21) ‘ನೀವು ತುಂಬ ಚೆನ್ನಾಗಿ ಬೈಬಲ್ ಸ್ಟಡಿ ಮಾಡ್ತೀರ. ನಿಮ್ಮಿಂದ ನನಗೆ ತುಂಬ ಹೆಲ್ಪ್ ಆಗ್ತಿದೆ’ ಅಂತ ವಿದ್ಯಾರ್ಥಿ ನಿಮ್ಮನ್ನ ಹಾಡಿ ಹೊಗಳಬಹುದು. ಅವನು ಈ ತರ ಮನಸಾರೆ ಹೇಳೋದ್ರಲ್ಲಿ ಏನೂ ತಪ್ಪಿಲ್ಲ. ಆದ್ರೆ ಆ ಹೊಗಳಿಕೆ ಯೆಹೋವನಿಗೆ ಸಲ್ಲುವ ತರ ಮಾಡೋದು ನಮ್ಮ ಕರ್ತವ್ಯ!
ಕಲ್ತಿದ್ದನ್ನ ಪಾಲಿಸೋಕೆ ಸಹಾಯ ಮಾಡಿ
12-13. ವಿದ್ಯಾರ್ಥಿ ಯಾವುದಾದ್ರೂ ಒಂದು ಬೈಬಲ್ ಘಟನೆನ ಓದಿ ಅರ್ಥ ಮಾಡ್ಕೊಳ್ಳೋಕೆ ಕಷ್ಟಪಡ್ತಿದ್ರೆ, ಈಗಾಗ್ಲೇ ಅವನಿಗೆ ಯೆಹೋವನ ಬಗ್ಗೆ ಗೊತ್ತಿರೋ ವಿಷ್ಯ ಹೇಗೆ ಸಹಾಯ ಮಾಡುತ್ತೆ? (ಚಿತ್ರ ನೋಡಿ.)
12 ಸರಿಯಾದ ಜ್ಞಾನದಿಂದ ಪೂರ್ತಿ ಪ್ರಯೋಜ್ನ ಪಡಿಬೇಕಂದ್ರೆ ಅದನ್ನ ಬಳಸೋಕೆ ಕಲಿಬೇಕು. ನಿಮ್ಮ ವಿದ್ಯಾರ್ಥಿ ಜ್ಞಾನವನ್ನ ಬಳಸೋಕೆ ನೀವು ಹೇಗೆ ಸಹಾಯ ಮಾಡಬಹುದು? ಯಾವುದಾದ್ರೂ ಬೈಬಲ್ ಘಟನೆನ ಅರ್ಥ ಮಾಡ್ಕೊಳ್ಳೋಕೆ ವಿದ್ಯಾರ್ಥಿ ಕಷ್ಟಪಡ್ತಿದ್ರೆ, ಅವನಿಗೆ ಈಗಾಗ್ಲೇ ಯೆಹೋವನ ಬಗ್ಗೆ ಏನು ಗೊತ್ತೋ ಅದ್ರ ಬಗ್ಗೆ ಯೋಚ್ನೆ ಮಾಡೋಕೆ ನೀವು ಹೇಳಿ. ಉದಾಹರಣೆಗೆ, ಹಿಂದೆ ಯೆಹೋವ ಕೊಟ್ಟಿರೋ ನ್ಯಾಯ ತೀರ್ಪಿನ ಬಗ್ಗೆ ಓದಿದಾಗ ಅವನಿಗೆ, ‘ಯೆಹೋವ ಯಾಕೆ ಕೆಲವರನ್ನ ಕೊಂದು, ಇನ್ನು ಕೆಲವರನ್ನ ಕಾಪಾಡಿದ್ದಾನೆ?’ ಅನ್ನೋ ಪ್ರಶ್ನೆ ಬರಬಹುದು.
13 ಇಂಥ ಟೈಮಲ್ಲಿ ವಿದ್ಯಾರ್ಥಿಗೆ ಈಗಾಗ್ಲೇ ಯೆಹೋವನ ಬಗ್ಗೆ ಗೊತ್ತಿರೋದನ್ನ ನೆನಪಿಸಬೇಕು. ಇದನ್ನ ಮಾಡೋಕೆ ನೀವು ಅವನಿಗೆ ಕೆಲವೊಂದು ಪ್ರಶ್ನೆಗಳನ್ನ ಕೇಳಬಹುದು. ‘ಯೆಹೋವ ಜೀವವನ್ನ ಎಷ್ಟು ಅಮೂಲ್ಯವಾಗಿ ನೋಡ್ತಾನೆ? (2 ಪೇತ್ರ 3:9) ಪಾಪಿಗಳಾಗಿರೋ ನಮ್ಮ ಜೀವ ಕಾಪಾಡೋಕೆ ಯೆಹೋವ ಎಷ್ಟರ ಮಟ್ಟಿಗೆ ತ್ಯಾಗ ಮಾಡಿದ್ದಾನೆ? (ಎಫೆ. 2:4, 5) ಯೆಹೋವ ಅಮಾಯಕರಿಗೆ ಶಿಕ್ಷೆ ಕೊಡ್ತಾನಾ? ತಪ್ಪು ಮಾಡಿರೋರು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಯೆಹೋವ ಬಿಡ್ತಾನಾ?’ (ವಿಮೋ. 34:6, 7) ಕೆಲವೊಂದು ಸಲ ಬೈಬಲಿನಲ್ಲಿ ಯೆಹೋವ ಯಾಕೆ ಈ ನಿರ್ಧಾರ ಮಾಡಿದ್ದಾನೆ ಅನ್ನೋ ಪೂರ್ತಿ ಮಾಹಿತಿ ಇಲ್ಲ. ನಿಜ ಹೇಳಬೇಕಂದ್ರೆ ಆ ಪೂರ್ತಿ ವಿವರ ನಮಗೆ ಬೇಕಿಲ್ಲ. ಯಾಕಂದ್ರೆ ನಮ್ಮ ಯೆಹೋವ ಎಂಥವನು ಅಂತ ನಮಗೆ ಗೊತ್ತು. ಯೆಹೋವ ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ ಅನ್ನೋ ಭರವಸೆನೂ ನಮಗಿದೆ.
ಬೈಬಲಿನಲ್ಲಿರೋ ಒಂದು ಘಟನೆಯನ್ನ ಅರ್ಥಮಾಡ್ಕೊಳ್ಳೋಕೆ ವಿದ್ಯಾರ್ಥಿ ಕಷ್ಟಪಡ್ತಿದ್ರೆ, ಅವನಿಗೆ ಈಗಾಗ್ಲೇ ಯೆಹೋವನ ಬಗ್ಗೆ ಗೊತ್ತಿರೋ ವಿಷ್ಯಗಳ ಬಗ್ಗೆ ಯೋಚಿಸೋಕೆ ಸಹಾಯ ಮಾಡಿ (ಪ್ಯಾರ 12-13 ನೋಡಿ)
14. ಸಭೆಯಲ್ಲಿರೋ ಒಬ್ರ ಜೊತೆ ಬೆರೆಯೋಕೆ ವಿದ್ಯಾರ್ಥಿ ಕಷ್ಟಪಡ್ತಿದ್ರೆ, ನೀವು ಹೇಗೆ ಸಹಾಯ ಮಾಡಬಹುದು?
14 ನಿಮ್ಮ ವಿದ್ಯಾರ್ಥಿ ಈಗ ಕೂಟಗಳಿಗೆ ಬರೋಕೆ ಶುರು ಮಾಡಿದ್ದಾರೆ ಅಂದ್ಕೊಳ್ಳಿ. ಆದ್ರೆ ಸಭೆಯಲ್ಲಿರೋ ಯಾರೋ ಒಬ್ರ ಜೊತೆ ಅವನಿಗೆ ಬೆರೆಯೋಕೆ ಕಷ್ಟ ಆಗ್ತಿದೆ. ಅವರು ವಿದ್ಯಾರ್ಥಿಗೆ ನೋವು ಮಾಡೋ ತರ ಏನೋ ಮಾಡಿದ್ದಾರೆ. ನೀವೀಗ ಏನು ಮಾಡ್ತೀರಾ? ಯೆಹೋವ ಸಹೋದರರನ್ನ ಹೇಗೆ ನೋಡ್ತಾನೆ ಅಂತ ವಿದ್ಯಾರ್ಥಿ ಯೋಚ್ನೆ ಮಾಡೋಕೆ ಸಹಾಯ ಮಾಡಬೇಕು. ಇಂಥ ಪ್ರಶ್ನೆಗಳನ್ನ ಕೇಳಬಹುದು, ‘ಯೆಹೋವ ಆ ಸಹೋದರ ಅಥವಾ ಸಹೋದರಿಗೆ ಪ್ರೀತಿ ತೋರಿಸೋಕೆ ಏನು ತ್ಯಾಗ ಮಾಡಿದ್ದಾನೆ? (ಯೋಹಾ. 3:16) ಕ್ರೈಸ್ತ ಐಕ್ಯತೆ ಯೆಹೋವನಿಗೆ ಎಷ್ಟು ಮುಖ್ಯ? (ಕೀರ್ತ. 133:1) ಸಭೆಯಲ್ಲಿರೋ ಐಕ್ಯತೆನ ಕಾಪಾಡೋಕೆ ನೀನು ಪ್ರಯತ್ನ ಹಾಕೋದನ್ನ ನೋಡಿದಾಗ ಯೆಹೋವನಿಗೆ ಹೇಗೆ ಅನಿಸುತ್ತೆ? (2 ಕೊರಿಂ. 13:11) ನಾವು ಬೇರೆಯವ್ರಲ್ಲಿರೋ ತಪ್ಪನ್ನ ನೋಡದೆ, ಅವ್ರಲ್ಲಿರೋ ಒಳ್ಳೆ ಗುಣಗಳನ್ನ ನೋಡಿದಾಗ ಯಹೋವನಿಗೆ ನಮ್ಮ ಬಗ್ಗೆ ಹೇಗೆ ಅನಿಸುತ್ತೆ?’
15-16. (ಎ) ವಿದ್ಯಾರ್ಥಿ ಒಂದು ದೊಡ್ಡ ನಿರ್ಧಾರ ಮಾಡೋ ಸನ್ನಿವೇಶ ಬಂದಾಗ ಯೇಸು ತರ ಹೇಗೆ ನಡ್ಕೊಬಹುದು? (ಯೋಹಾನ 8:29) (ಬಿ) ಸಹೋದರಿ ಮ್ಯಾರಿಯನ್ ತನ್ನ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡಿದಳು? (ಚಿತ್ರ ನೋಡಿ.)
15 ವಿದ್ಯಾರ್ಥಿಗೆ ಈಗಾಗ್ಲೇ ಯೆಹೋವನ ಬಗ್ಗೆ ಇರೋ ಜ್ಞಾನ ಬಳಸಿ, ಅವನು ಹೇಗೆ ಒಳ್ಳೆ ನಿರ್ಧಾರ ಮಾಡಬಹುದು ಅಂತ ಕಲಿಸಿ. ನೀವು ಅವನಿಗೆ ಸಹಾಯ ಮಾಡೋಕಂತ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರೋ ಪಾಠ 35ನ್ನ ತೋರಿಸಬಹುದು. ಅಲ್ಲಿ ಒಳ್ಳೆ ತೀರ್ಮಾನ ಮಾಡೋದು ಹೇಗೆ? ಅಂತಿದೆ. ಆದ್ರೆ ನಿಮ್ಮ ವಿದ್ಯಾರ್ಥಿ ತುಂಬ ಪ್ರಾರ್ಥನೆ ಮಾಡಿದ್ರೂ, ಎಷ್ಟೇ ಸಂಶೋಧನೆ ಮಾಡಿದ್ರೂ ಒಂದು ನಿರ್ಧಾರ ಮಾಡೋಕೆ ಇನ್ನೂ ಒದ್ದಾಡ್ತಿದ್ರೆ ಏನು ಮಾಡಬಹುದು? ಕೆಲವೊಮ್ಮೆ ಬೈಬಲಲ್ಲಿ ಒಂದೇ ವಿಷ್ಯದ ಬಗ್ಗೆ ತುಂಬ ತತ್ವಗಳಿರುತ್ತೆ. ಆಗ ಯಾವುದನ್ನ ಪಾಲಿಸಬೇಕು ಅಂತ ಅವನಿಗೆ ಗೊತ್ತಾಗಲ್ಲ. ಆಗ ನೀವು ಯೇಸು ಬಗ್ಗೆ ಯೋಚ್ನೆ ಮಾಡೋಕೆ ಪ್ರೋತ್ಸಾಹಿಸಬಹುದು. ‘ನನ್ನ ತಂದೆ ಇಷ್ಟ ಪಡೋದನ್ನೇ ನಾನು ಯಾವಾಗ್ಲೂ ಮಾಡ್ತೀನಿ’ ಅಂತ ಯೇಸು ಹೇಳಿದನು. (ಯೋಹಾನ 8:29 ಓದಿ.) ನಿಮ್ಮ ವಿದ್ಯಾರ್ಥಿನೂ ಇದೇ ತರ ಮಾಡಬೇಕು. ‘ನಾನು ಇಲ್ಲಿವರೆಗೂ ಮಾಡಿದ ಸಂಶೋಧನೆ ನೋಡಿದ್ರೆ, ನಂಗೆ ಈಗಾಗ್ಲೇ ಯೆಹೋವನ ಬಗ್ಗೆ ಗೊತ್ತಿರೋ ವಿಷ್ಯ ನೋಡಿದ್ರೆ ನಾನು ಯಾವ ನಿರ್ಧಾರ ಮಾಡಿದ್ರೆ ಆತನಿಗೆ ಇಷ್ಟ ಆಗಬಹುದು’ ಅಂತ ಯೋಚಿಸೋಕೆ ಸಹಾಯ ಮಾಡಿ. ‘ಯಾವ ನಿರ್ಧಾರ ಮಾಡಿದ್ರೆ ಯೆಹೋವನಿಗೆ ಖುಷಿಯಾಗುತ್ತೋ, ಅದೇ ಸರಿಯಾದ ನಿರ್ಧಾರ’ ಅಂತ ಆಗ ಅವನು ಅರ್ಥ ಮಾಡ್ಕೊಳ್ತಾನೆ.
16 ಚಿಲಿ ದೇಶದಲ್ಲಿರೋ ಸಹೋದರಿ ಮ್ಯಾರಿಯನ್ ಒಬ್ಬ ಸ್ತ್ರೀಗೆ ಬೈಬಲ್ ಅಧ್ಯಯನ ಮಾಡ್ತಿದ್ದಾರೆ. ಆ ಸ್ತ್ರೀ ಕುಟುಂಬದವ್ರೆಲ್ಲ ಅವಳಿಗೆ ಕೈ ತುಂಬ ಸಂಬಳ ಸಿಗೋ ಕೆಲಸಾನ ಒಪ್ಕೊ ಅಂತ ಒತ್ತಾಯ ಮಾಡ್ತಿದ್ರು. ಆದ್ರೆ ಆ ಕೆಲಸ ಒಪ್ಕೊಂಡ್ರೆ ಕೆಲವು ಸಲ ಕೂಟಕ್ಕೆ ಹೋಗೋಕೆ ಆಗ್ತಿರಲಿಲ್ಲ. ಆಗ ಮ್ಯಾರಿಯನ್ ಹೇಗೆ ಸಹಾಯ ಮಾಡಿದ್ರು? ಅವರು ಹೇಳೋದು, “‘ಈ ಕೆಲಸನ ನೀನು ಒಪ್ಕೊಂಡ್ರೆ, ಯೆಹೋವನಿಗೆ ಖುಷಿ ಆಗುತ್ತಾ ಅಥವಾ ಬೇಜಾರಾಗುತ್ತಾ ಅಂತ ಯೋಚ್ನೆ ಮಾಡು’ ಅಂತ ಹೇಳಿದೆ. ಅಷ್ಟೇ ಅಲ್ಲ, ‘ಇದ್ರ ಬಗ್ಗೆ ನೀನು ಯೆಹೋವನ ಹತ್ರ ನಿರ್ದಿಷ್ಟವಾಗಿ ಪ್ರಾರ್ಥನೆ ಮಾಡು. ಯೆಹೋವ ನಿಂಗೆ ಹೇಗೆ ಸಹಾಯ ಮಾಡ್ತಾನೆ ಅಂತ ಗಮನಿಸು’ ಅಂತಾನೂ ಹೇಳಿದೆ. ಅವಳು ಚೆನ್ನಾಗಿ ಯೋಚ್ನೆ ಮಾಡಿದ ಮೇಲೆ ಆ ಕೆಲಸನ ಬೇಡ ಅಂತ ಹೇಳಿದಳು. ಆಮೇಲೆ ಅವಳಿಗೆ ಕೂಟಗಳಿಗೆ ಬರೋಕೆ ಸಹಾಯ ಮಾಡೋ ಕೆಲಸ ಸಿಕ್ತು.” ನೋಡಿದ್ರಾ, ಯಾವ ನಿರ್ಧಾರ ತಗೋಬೇಕು ಅಂತ ವಿದ್ಯಾರ್ಥಿಗೆ ಸಹೋದರಿ ನೇರವಾಗಿ ಹೇಳಲಿಲ್ಲ. ಬದ್ಲಿಗೆ ಅವಳಿಗೆ ಈಗಾಗ್ಲೇ ಯೆಹೋವನ ಬಗ್ಗೆ ಏನು ಗೊತ್ತಿತ್ತೋ ಅದ್ರ ಬಗ್ಗೆ ಧ್ಯಾನ ಮಾಡಿ ಒಳ್ಳೆ ನಿರ್ಧಾರ ತಗೊಳ್ಳೋಕೆ ಸಹಾಯ ಮಾಡಿದಳು. ಇದ್ರಿಂದ ವಿದ್ಯಾರ್ಥಿಗೆ ಮ್ಯಾರಿಯನ್ ಜೊತೆ ಮತ್ತು ಯೆಹೋವನ ಜೊತೆ ಇದ್ದ ಸ್ನೇಹ ಇನ್ನಷ್ಟು ಬೆಳೀತು. “ಅವಳಿಗೆ ಈಗ, ದೇವರ ಆರಾಧನೆಗೆ ಮೊದಲನೇ ಸ್ಥಾನ ಕೊಟ್ರೆ ಯೆಹೋವ ನಮ್ಮನ್ನ ಖಂಡಿತ ನೋಡ್ಕೊಳ್ತಾನೆ ಅನ್ನೋ ನಂಬಿಕೆ ಇದೆ” ಅಂತ ಮ್ಯಾರಿಯನ್ ಹೇಳ್ತಾಳೆ.
ಯೆಹೋವನ್ನ ಮೆಚ್ಚಿಸೋ ನಿರ್ಧಾರಗಳನ್ನ ಮಾಡೋಕೆ ನಿಮ್ಮ ವಿದ್ಯಾರ್ಥಿಗೆ ಸಹಾಯ ಮಾಡಿ (ಪ್ಯಾರ 15-16 ನೋಡಿ)b
ಯೆಹೋವನನ್ನ ಚೆನ್ನಾಗಿ ತಿಳ್ಕೊಂಡ್ರೆ ಸಿಗೋ ಆಶೀರ್ವಾದ
17. ಜ್ಞಾನ ಪಡ್ಕೊಳ್ಳೋದ್ರ ಜೊತೆಗೆ ವಿದ್ಯಾರ್ಥಿ ಇನ್ನೂ ಏನು ಮಾಡಬೇಕು ಅನ್ನೋದು ನಮ್ಮ ಆಸೆ?
17 ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕನ ಬಳಸ್ತಾ ನಾವು ಮಾಡೋ ಬೈಬಲ್ ಸ್ಟಡಿಯಿಂದ ವಿದ್ಯಾರ್ಥಿಗಳು ತುಂಬ ವಿಷ್ಯಗಳನ್ನ ಕಲಿತಾರೆ. ಸತ್ತವರ ಸ್ಥಿತಿ ಬಗ್ಗೆ, ಬಿಡುಗಡೆ ಬೆಲೆ ಬಗ್ಗೆ ಮತ್ತು ದೇವರ ಆಳ್ವಿಕೆ ಬಗ್ಗೆ ಬೈಬಲಿನಲ್ಲಿರೋ ಬೋಧನೆಗಳನ್ನ ಅವರು ತಿಳ್ಕೊಳ್ತಾರೆ. ಅಷ್ಟೇ ಅಲ್ಲ, ಕೂಟಗಳು ಅಂದ್ರೇನು, ಅದು ಹೇಗೆ ನಡೆಯುತ್ತೆ, ಹಿರಿಯರ ಏರ್ಪಾಡು ಅಂದ್ರೇನು ಮತ್ತು ಆಡಳಿತ ಮಂಡಳಿಯ ಕೆಲಸಗಳೇನು ಅನ್ನೋ ಸಂಘಟನೆಯ ವಿಷ್ಯಾನೂ ಅವರು ಕಲಿತಾರೆ. ಆದ್ರೆ ನಮ್ಮ ವಿದ್ಯಾರ್ಥಿ ಬರೀ ಈ ತರ ಜ್ಞಾನ ಪಡ್ಕೊಂಡ್ರೆ ಸಾಕಾಗಲ್ಲ. ಬದ್ಲಿಗೆ ಅವರು ಯೆಹೋವನನ್ನ ಚೆನ್ನಾಗಿ ತಿಳ್ಕೊಳ್ಳೋಕೆ ಕಲಿಬೇಕು ಅನ್ನೋದೇ ನಮ್ಮ ಆಸೆ.
18. ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋರಿಗೆ ಯಾವ ಆಶೀರ್ವಾದ ಸಿಗುತ್ತೆ?
18 ಯೆಹೋವನ ಬಗ್ಗೆ ಬೇರೆಯವ್ರಿಗೆ ತಿಳಿಸೋ ಅವಕಾಶ ಸಿಕ್ಕಿರೋದು ನಮ್ಮೆಲ್ರಿಗೂ ಒಂದು ದೊಡ್ಡ ಸುಯೋಗ ಅಲ್ವಾ? ಇವತ್ತು ಯೆಹೋವನ ಬಗ್ಗೆ ಕಲಿತು ಆತನನ್ನ ಆರಾಧಿಸ್ತಿರೋರು ಸಂತೃಪ್ತಿಯ ಜೀವನ ನಡೆಸ್ತಿದ್ದಾರೆ. (ಕೀರ್ತ. 25:12-15) ಅಷ್ಟೇ ಅಲ್ಲ, ಮುಂದೆ ಯಾರೆಲ್ಲಾ ‘ಸತ್ಯ ದೇವರಾಗಿರೋ ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಳ್ತಾರೋ ಅವ್ರಿಗೆಲ್ಲಾ ಶಾಶ್ವತ ಜೀವ ಕೊಡ್ತೀನಿ’ ಅಂತಾನೂ ಮಾತು ಕೊಟ್ಟಿದ್ದಾನೆ. (1 ಯೋಹಾ. 5:20) ‘ಯಾರು ನನ್ನನ್ನ ತಿಳ್ಕೊಳ್ಳೋಕೆ, ನನ್ನನ್ನ ಪ್ರೀತಿಸೋಕೆ ಪ್ರಯತ್ನ ಹಾಕ್ತಾರೋ ಅವ್ರನ್ನ ನಾನೂ ತಿಳ್ಕೊಳ್ತೀನಿ’ ಅಂತ ಯೆಹೋವ ಹೇಳಿದ್ದಾನೆ. (1 ಕೊರಿಂ. 8:3) ನೋಡಿದ್ರಾ? ಯೆಹೋವ ತನ್ನ ಬಗ್ಗೆ ಕಲಿಯೋರನ್ನ ಸ್ನೇಹಿತರಾಗಿ ಸ್ವೀಕರಿಸ್ತಾನೆ. ಒಬ್ಬನೇ ಸತ್ಯ ದೇವರಾಗಿರೋ ಯೆಹೋವನನ್ನ ಆರಾಧಿಸ್ತಿರೋದು ನಮಗೆ ಸಿಕ್ಕಿರೋ ದೊಡ್ಡ ಆಶೀರ್ವಾದ ಅಲ್ವಾ!
ಗೀತೆ 84 ಸಾರಲು ಹೋಗೋಣ
a ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 5ರಲ್ಲಿ ಕೊಟ್ಟಿರೋ ಗುರಿ: “ಪ್ರತಿದಿನ ಬೈಬಲ್ ಓದಿ ಆನಂದಿಸಿ” ಅನ್ನೋ ಚಾರ್ಟ್ ಉಪಯೋಗಿಸಿ ಪ್ರತಿದಿನ ಬೈಬಲ್ ಓದಿ.
b ಚಿತ್ರ ವಿವರಣೆ: ಸಹೋದರಿ ಮ್ಯಾರಿಯನ್ರ ಬೈಬಲ್ ವಿದ್ಯಾರ್ಥಿ, ‘ಕೆಲಸ ಬೇಡ’ ಅಂತ ಹೇಳ್ತಿರೋ ಚಿತ್ರ.