ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜುಲೈ ಪು. 14-19
  • ಯೆಹೋವನನ್ನ ಸವಿದು ನೋಡ್ತಿದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನನ್ನ ಸವಿದು ನೋಡ್ತಿದ್ದೀರಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನನ್ನ ತಿಳ್ಕೊಳ್ಳೋದು ಅಂದ್ರೇನು?
  • ಯಾಕೆ ಯೆಹೋವನ ಬಗ್ಗೆ ತಿಳ್ಕೊಳ್ತಾ ಇರ್ಬೇಕು?
  • ನಾವು ಯೆಹೋವನನ್ನ ಹೇಗೆ ಚೆನ್ನಾಗಿ ತಿಳ್ಕೊಬಹುದು?
  • ಕಲಿಯೋಕೆ ಕೊನೆನೇ ಇಲ್ಲ!
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • “ನೀವು ಯಾರನ್ನ ಆರಾಧಿಸಬೇಕಂತ” ಇದ್ದೀರಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜುಲೈ ಪು. 14-19

ಸೆಪ್ಟೆಂಬರ್‌ 21-27, 2026

ಗೀತೆ 12 ಅತ್ಯುನ್ನತ ದೇವ – ಯೆಹೋವ!

ಯೆಹೋವನನ್ನ ಸವಿದು ನೋಡ್ತಿದ್ದೀರಾ?

“ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ ಹೃದಯದಿಂದ . . . ಆತನ ಸೇವೆ ಮಾಡು.”—1 ಪೂರ್ವ. 28:9.

ಈ ಲೇಖನದಲ್ಲಿ ಏನಿದೆ?

ಯೆಹೋವನನ್ನ ಸವಿದು ನೋಡೋದು ಅಥವಾ ತಿಳ್ಕೊಳ್ಳೋದು ಅಂದ್ರೆ ಏನು, ಆತನನ್ನ ಯಾಕೆ ತಿಳ್ಕೋಬೇಕು ಮತ್ತು ಹೇಗೆ ತಿಳ್ಕೋಬಹುದು ಅಂತ ನೋಡೋಣ.

1. ಯೆಹೋವನ ಜ್ಞಾನ, ವಿವೇಕ ಮತ್ತು ಕೆಲಸಗಳ ಬಗ್ಗೆ ಯೋಚಿಸುವಾಗ ನಮಗೆ ಹೇಗೆ ಅನಿಸುತ್ತೆ?

ನೀವು ಯೆಹೋವನನ್ನ ಎಷ್ಟು ಚೆನ್ನಾಗಿ ತಿಳ್ಕೊಂಡಿದ್ದೀರಾ? ಯೆಹೋವನ ಜ್ಞಾನ ಸಮುದ್ರಕ್ಕಿಂತ ಆಳ, ಆತನ ವಿವೇಕ ಆಕಾಶಕ್ಕಿಂತ ವಿಶಾಲ. ಆತನು ಮಾಡಿರೋ ಪ್ರತಿಯೊಂದು ಕೆಲಸ ಅತ್ಯದ್ಭುತ! ಯೆಹೋವನ ವಿವೇಕದ ಮುಂದೆ ನಾವು ಎಷ್ಟು ಚಿಕ್ಕವರು ಅನಿಸುತ್ತಲ್ವಾ? ಅದಕ್ಕೆ ಪೌಲ, “ಆಹಾ! ದೇವರ ಆಶೀರ್ವಾದಗಳು ಎಷ್ಟೋ ಅಪಾರ! ಆತನ ವಿವೇಕ, ಜ್ಞಾನ ಎಷ್ಟೋ ಅಗಾಧ! ಆತನ ತೀರ್ಪುಗಳನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಮ್ಮಿಂದ ಅಸಾಧ್ಯ! ಆತನ ಕೆಲಸಗಳನ್ನ ಪೂರ್ತಿ ತಿಳ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೂ ಮೀರಿದ ವಿಷ್ಯ” ಅಂತ ಬರೆದ.—ರೋಮ. 11:33, 34.

2. ನಾವು ಯೆಹೋವನ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಖಂಡಿತ ಸಾಧ್ಯ ಅಂತ ಹೇಗೆ ಹೇಳಬಹುದು?

2 ನಾವು ಎಷ್ಟೇ ವರ್ಷದಿಂದ ಯೆಹೋವನ ಬಗ್ಗೆ ಕಲಿತಿದ್ರೂ ಆತನನ್ನ ಪೂರ್ತಿಯಾಗಿ ತಿಳ್ಕೊಳ್ಳೋಕೆ ಆಗಲ್ಲ. ರಾಜ ದಾವೀದ, “ನನ್ನ ಮಗನಾದ ಸೊಲೊಮೋನ, ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ ಹೃದಯದಿಂದ, ಖುಷಿ ಖುಷಿಯಿಂದ ಆತನ ಸೇವೆ ಮಾಡು . . . ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ, ಸಹಾಯ ಮಾಡ್ತಾನೆ” ಅಂತ ಹೇಳಿದ. (1 ಪೂರ್ವ. 28:9) ಅಷ್ಟೇ ಅಲ್ಲ, ಅಪೊಸ್ತಲ ಯೋಹಾನ ಒಂದನೇ ಶತಮಾನದ ಕ್ರೈಸ್ತರಿಗೆ ‘ಸತ್ಯದೇವರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಬೇಕಾದ ತಿಳುವಳಿಕೆ ನಮಗೆ ಯೇಸು ಕೊಟ್ಟಿದ್ದಾನೆ’ ಅಂತ ಹೇಳಿದ. (1 ಯೋಹಾ. 5:20) ಯೇಸು ಕೂಡ, ‘ಯಾರಿಗೆಲ್ಲ ನಾನು ನನ್ನ ತಂದೆ ಬಗ್ಗೆ ಕಲಿಸ್ತೀನೋ, ಅವರೆಲ್ರಿಗೂ ಆತನ ಬಗ್ಗೆ ತಿಳ್ಕೊಳ್ಳೋ ಅವಕಾಶ ಇದೆ’ ಅಂತ ಹೇಳಿದನು.—ಮತ್ತಾ. 11:27.

3. ಈ ಲೇಖನದಲ್ಲಿ ನಾವೇನು ಕಲಿತೀವಿ?

3 ನಮಗೆ ಯೆಹೋವನ ಬಗ್ಗೆ ಈಗಾಗ್ಲೇ ಗೊತ್ತಿದೆ ಅಂತ ನಾವು ಆತನ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳೋದನ್ನ ನಿಲ್ಲಿಸಬಾರದು. (ಯೋಹಾ. 17:3; ಸ್ಟಡಿ ನೋಟ್‌ ನೋಡಿ.) ನಾವೇನು ಮಾಡಿದ್ರೆ ಆತನಿಗೆ ಖುಷಿಯಾಗುತ್ತೆ ಮತ್ತು ಆತನ ಮೇಲಿರೋ ನಂಬಿಕೆನ ಹೆಚ್ಚು ಮಾಡ್ಕೊಳೋಕೆ ನಾವೇನು ಮಾಡಬೇಕು ಅಂತ ಕಲಿತಾ ಇರ್ಬೇಕು. ನಾವು ಎಷ್ಟೇ ವರ್ಷಗಳಿಂದ ಯೆಹೋವನನ್ನ ಆರಾಧಿಸ್ತಾ ಇದ್ರೂ ಈ ಮೂರು ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋದು ಒಳ್ಳೇದು. (1) ಯೆಹೋವನನ್ನ ತಿಳ್ಕೊಳ್ಳೋದು ಅಂದ್ರೆ ಏನು? (2) ನಾವು ಯೆಹೋವನನ್ನ ಯಾಕೆ ತಿಳ್ಕೊಬೇಕು? ಮತ್ತು (3) ನಾವು ಆತನನ್ನ ಹೇಗೆ ತಿಳ್ಕೊಬಹುದು? ಅಂತ ಈ ಲೇಖನದಲ್ಲಿ ನೋಡೋಣ.

ಯೆಹೋವನನ್ನ ತಿಳ್ಕೊಳ್ಳೋದು ಅಂದ್ರೇನು?

4. ಯೆಹೋವನನ್ನ ತಿಳ್ಕೊಳ್ಳೋದ್ರಲ್ಲಿ ಏನೆಲ್ಲಾ ಸೇರಿದೆ?

4 ಇದನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ಬಾಬೆಲ್‌ ಬಂಧಿವಾಸದಿಂದ ವಾಪಸ್‌ ಬಂದ ಯೆಹೂದ್ಯರಿಗೆ ಏನು ಹೇಳಿದನು ಅಂತ ನಾವು ತಿಳ್ಕೊಬೇಕು. ಆತನು ಅವ್ರಿಗೆ, “ನಾನು ಯೆಹೋವ ಅಂತ ತಿಳ್ಕೊಳ್ಳೋ ಮನಸ್ಸನ್ನ [ಹೃದಯವನ್ನ] ಅವ್ರಿಗೆ ಕೊಡ್ತೀನಿ” ಅಂತ ಹೇಳಿದನು. (ಯೆರೆ. 24:7, ಪಾದಟಿಪ್ಪಣಿ.) ಈಗಾಗ್ಲೇ ವಾಪಸ್‌ ಬಂದ ಯೆಹೂದ್ಯರಿಗೆ ಯೆಹೋವನ ಬಗ್ಗೆ ಕೆಲವು ಮುಖ್ಯ ವಿಷ್ಯಗಳು ಗೊತ್ತಿತ್ತು. ಆದ್ರೆ ಅವರಿನ್ನೂ ಜಾಸ್ತಿ ತಿಳ್ಕೊಬೇಕಿತ್ತು. ಆದ್ರೆ ಇದನ್ನ ಮಾಡೋಕೆ ಅವರು ತಮ್ಮ ಹೃದಯನ ಕೊಡಬೇಕಿತ್ತು, ಇಷ್ಟಪಟ್ಟು ಪ್ರಯತ್ನ ಹಾಕಬೇಕಿತ್ತು. ‘ತಿಳ್ಕೊ’ ಅನ್ನೋ ಪದದ ಬಗ್ಗೆ ಒಂದು ರೆಫರೆನ್ಸ್‌ ಹೀಗೆ ಹೇಳುತ್ತೆ, “ಒಬ್ಬ ವ್ಯಕ್ತಿ ಪ್ರೀತಿ ಪ್ರೇಮದ ಕಥೆಗಳನ್ನ ಓದೋದಕ್ಕೂ ಅವನೇ ಸ್ವತಃ ಪ್ರೀತಿಲಿ ಬೀಳೋದಕ್ಕೂ ವ್ಯತ್ಯಾಸ ಇದೆ. ಅದೇ ತರಾನೇ ದೇವರ ಬಗ್ಗೆ ಜ್ಞಾನ ಪಡ್ಕೊಳ್ಳೋದಕ್ಕೂ ದೇವರನ್ನೇ ತಿಳ್ಕೊಳ್ಳೋದಕ್ಕೂ ವ್ಯತ್ಯಾಸ ಇದೆ.” ಹಾಗಾಗಿ ನಾವು ದೇವ್ರಿಗೊಂದು ಹೆಸರಿದೆ, ಅದು ಯೆಹೋವ, ಆತನೇ ದೇವರು ಅನ್ನೋ ವಿಷ್ಯಗಳನ್ನ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ. ಆತನು ಎಂಥವನು, ಆತನಲ್ಲಿ ಯಾವೆಲ್ಲ ಒಳ್ಳೆ ಗುಣಗಳಿವೆ ಅಂತ ಸವಿದು ನೋಡಬೇಕು.

5. ಯೆಹೋವನನ್ನ ಚೆನ್ನಾಗಿ ತಿಳ್ಕೊಳ್ಳೋದ್ರ ಬಗ್ಗೆ ನಾವು ರಾಜ ಯೋಷೀಯನಿಂದ ಏನು ಕಲಿಬಹುದು?

5 ನಾವು ಯೆಹೋವನನ್ನ ತಿಳ್ಕೊಳ್ತಾ ಹೋದಂತೆ ಆತನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತ ಅರ್ಥ ಮಾಡ್ಕೊಳ್ತೀವಿ. ಯೋಷೀಯ ಇದನ್ನ ಹೇಗೆ ಅರ್ಥ ಮಾಡ್ಕೊಂಡ ಅಂತ ನೋಡಿ. ಅವನ ಬಗ್ಗೆ ಬೈಬಲ್‌, “ಅವನ ಆಳ್ವಿಕೆಯ 8ನೇ ವರ್ಷದಲ್ಲಿ ಅವನು ಇನ್ನೂ ಹುಡುಗನಾಗಿ ಇದ್ದಾಗಲೇ ತನ್ನ ಪೂರ್ವಜ ದಾವೀದನ ದೇವರನ್ನ ಆರಾಧಿಸೋಕೆ” ಅಂದ್ರೆ ಹುಡುಕೋಕೆ ಶುರುಮಾಡಿದ ಅಂತ ಹೇಳುತ್ತೆ. (2 ಪೂರ್ವ. 34:3) ಹುಡುಕಿದ ಅಂದ್ರೆ ಏನರ್ಥ? ಅವನು ಯೆಹೋವನ ಬಗ್ಗೆ ಓದಿ, ಕಲಿತು ಸುಮ್ಮನೇ ಆಗ್ಲಿಲ್ಲ. ಕಲಿತಿದನ್ನ ಜೀವನದಲ್ಲಿ ಪಾಲಿಸ್ತಿದ್ದ. ಅದಕ್ಕೆ ಯೆಹೋವ ಪ್ರವಾದಿ ಯೆರೆಮೀಯನಿಗೆ ಯೋಷೀಯನ ಬಗ್ಗೆ ‘ಅವನು ನ್ಯಾಯವಾಗಿ ನಡಿತಿದ್ದ. ಕಷ್ಟದಲ್ಲಿ ಇರೋರಿಗೆ, ಬಡವ್ರಿಗೆ ಅವನು ನ್ಯಾಯ ಕೊಡಿಸ್ತಿದ್ದ. ಹೀಗೆ ಅವನು ನನ್ನನ್ನ ತಿಳ್ಕೊಂಡಿದ್ದಾನೆ ಅಂತ ತೋರಿಸ್ಕೊಟ್ಟ’ ಅಂತ ಹೇಳಿದನು.—ಯೆರೆ. 22:15, 16.

6. ಕೀರ್ತನೆ 9:10ರ ಪ್ರಕಾರ ನಾವು ಯೆಹೋವನನ್ನ ಚೆನ್ನಾಗಿ ತಿಳ್ಕೊಂಡ್ರೆ ಏನು ಮಾಡ್ತೀವಿ?

6 ಕೀರ್ತನೆ 9:10 ಓದಿ. ನಾವು ಎಷ್ಟು ಹೆಚ್ಚು ಯೆಹೋವನನ್ನ ತಿಳ್ಕೊಳ್ತೀವೋ ಅಷ್ಟೇ ಹೆಚ್ಚು ಆತನ ಮೇಲೆ ನಂಬಿಕೆನ ಬೆಳೆಸ್ಕೊಳ್ತೀವಿ. ಪೌಲನು ಈ ತರನೇ ಯೆಹೋವನ ಮೇಲೆ ನಂಬಿಕೆನ ಬೆಳೆಸ್ಕೊಂಡ. ಅದಕ್ಕೆ ಅವನು ಸಾಯೋಕ್ಕಿಂತ ಮುಂಚೆ ಸಲ ಜೈಲಲ್ಲಿದ್ದಾಗ, “ನಾನು ನಾಚಿಕೆಪಡಲ್ಲ. ಯಾಕಂದ್ರೆ ನಾನು ನಂಬಿರೋ ದೇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು” ಅಂತ ಹೇಳಿದ. (2 ತಿಮೊ. 1:12) ಪೌಲ ಇಲ್ಲಿವರೆಗೂ ತನ್ನ ಜೀವನದಲ್ಲಿ ಯೆಹೋವ ಎಂಥವನು ಅನ್ನೋದನ್ನ ಸವಿದು ನೋಡಿದ್ದ. ಇದು ಅವನಿಗೆ ಯೆಹೋವನ ಮೇಲೆ ಬೆಟ್ಟದಷ್ಟು ನಂಬಿಕೆನ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತು. ಹಾಗಾಗಿ ಅವನು ‘ನಾನು ಇಲ್ಲಿವರೆಗೂ ನಂಬಿಗಸ್ತನಾಗಿ ಮಾಡಿದ ಸೇವೆನ ಯೆಹೋವ ಖಂಡಿತ ಮರೆಯಲ್ಲ. ಮುಂದೆ ಒಂದು ದಿನ ನನ್ನನ್ನ ಖಂಡಿತ ಮತ್ತೆ ಎಬ್ಬಿಸ್ತಾನೆ’ ಅಂತ ದೃಢ ಭರವಸೆಯಿಂದಿದ್ದ.

ಯಾಕೆ ಯೆಹೋವನ ಬಗ್ಗೆ ತಿಳ್ಕೊಳ್ತಾ ಇರ್ಬೇಕು?

7. ವರ್ಷಗಳು ಉರುಳಿದಂತೆ ನಾವು ಏನು ಮಾಡಿಬಿಡಬಹುದು?

7 ಮೊದಮೊದ್ಲು ಯೆಹೋವನ ಬಗ್ಗೆ ನಾವು ಕೇಳಿಸ್ಕೊಂಡಾಗ ಆತನ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಪ್ರಯತ್ನ ಹಾಕಿರ್ತೀವಿ. ಆದ್ರೆ ಸಮಯ ಹೋಗ್ತಾಹೋಗ್ತಾ ಅದನ್ನ ನಾವು ಕಮ್ಮಿ ಮಾಡಿ ಬಿಡಬಹುದು. ಯಾಕೆ? ನಾವು ವೈಯಕ್ತಿಕವಾಗಿ ಅಥವಾ ಸಭೆಯಲ್ಲಿ ಬೈಬಲ್‌ ಓದೋವಾಗ ಏನು ಮಾಡ್ತೀವಿ? ಕಲಿತ ವಿಷ್ಯ ವೈಯಕ್ತಿಕವಾಗಿ ನನಗೆ ಹೇಗೆ ಸಹಾಯ ಮಾಡುತ್ತೆ ಅಥವಾ ಅದನ್ನ ಬೇರೆಯವ್ರಿಗೆ ಸಹಾಯ ಮಾಡೋಕೆ ನಾವು ಹೇಗೆ ಉಪಯೋಗಿಸಬಹುದು ಅಂತ ಜಾಸ್ತಿ ಗಮನಿಸ್ತೀವಿ. ಈ ತರ ಮಾಡಿ ಅಂತ ಬೈಬಲೇ ನಮ್ಮನ್ನ ಪ್ರೋತ್ಸಾಹಿಸುತ್ತೆ. (2 ತಿಮೊ. 3:16, 17) ಆದ್ರೆ ಬೈಬಲ್‌ ಅದ್ರ ಲೇಖಕನಾದ ಯೆಹೋವನ ಬಗ್ಗೆ ತುಂಬ ವಿಷ್ಯಗಳನ್ನ ಕಲಿಸುತ್ತೆ ಅನ್ನೋದನ್ನ ಮರೀಬೇಡಿ. (ಕೀರ್ತ. 25:8-10) ಅದಕ್ಕೆ ಬೈಬಲ್‌ ಓದೋವಾಗ ಈ ವಿಷ್ಯಗಳಿಂದ ಯೆಹೋವನ ಬಗ್ಗೆ ಏನು ಕಲಿಬಹುದು ಅಂತಾನೂ ಯೋಚಿಸಿ.a

8. ಯೆಹೋವನನ್ನ ಚೆನ್ನಾಗಿ ತಿಳ್ಕೊಂಡ್ರೆ ಆತನ ಜೊತೆಗಿರೋ ನಮ್ಮ ಸ್ನೇಹ ಏನಾಗುತ್ತೆ?

8 ಯೆಹೋವನ ಬಗ್ಗೆ ನಾವು ತಿಳ್ಕೊಳ್ತಾ ಹೋದ್ರೆ, ಆತನ ಜೊತೆಗಿರೋ ನಮ್ಮ ಸ್ನೇಹನೂ ಬಲವಾಗ್ತಾ ಹೋಗುತ್ತೆ. ನೀವು ಪ್ರತಿದಿನ ಬೈಬಲ್‌ ಓದಿದ್ಮೇಲೆ, ಬ್ರಾಡ್ಕಾಸ್ಟಿಂಗ್‌ ನೋಡಿದ್ಮೇಲೆ, ಸಮ್ಮೇಳನ ಅಥವಾ ಅಧಿವೇಶನಕ್ಕೆ ಹಾಜರಾದ್ಮೇಲೆ ಯೆಹೋವನ ಬಗ್ಗೆ ನಿಮಗೆ ಹೇಗೆ ಅನ್ಸುತ್ತೆ? ‘ಯೆಹೋವನಿಗೆ ಇನ್ನೂ ಹತ್ರ ಆಗಿದ್ದೀನಿ’ ಅಂತ ಅನಿಸುತ್ತಲ್ವಾ? ಕಾರಣ, ನಾವಲ್ಲಿ ಯೆಹೋವನ ಬಗ್ಗೆ ಜಾಸ್ತಿ ವಿಷ್ಯಗಳನ್ನ ತಿಳ್ಕೊಂಡಿರ್ತೀವಿ. ಇದು ಆತನನ್ನ ಹಾಡಿ ಹೊಗಳೋಕೆ, ಆತನಿಗೆ ಕೃತಜ್ಞತೆ ತೋರಿಸೋಕೆ ನಮ್ಮನ್ನ ಪ್ರಚೋದಿಸುತ್ತೆ. ಕೀರ್ತನೆಗಾರ, ಯೆಹೋವನ ಪ್ರೀತಿ ಮತ್ತು ಕಾಳಜಿನ ಸವಿದು ನೋಡಿದ್ಮೇಲೆ ಹೀಗೆ ಹೇಳಿದ, “ದೇವರು ನನ್ನ ಹೃದಯವನ್ನ ಕಾಪಾಡ್ತಾನೆ. ಆತನೇ ನನ್ನ ಬಂಡೆ. ಯಾವಾಗ್ಲೂ ಆತನೇ ನನ್ನ ಪಾಲು.” (ಕೀರ್ತನೆ 73:24-28 ಓದಿ.) ಯೆಹೋವನನ್ನ ತಿಳ್ಕೊಳೋಕೆ ನಾವು ಹಾಕೋ ಪ್ರತಿಯೊಂದು ಪ್ರಯತ್ನನೂ ಆತನ ಜೊತೆಗಿರೋ ಸ್ನೇಹನ ಅಮೂಲ್ಯವಾಗಿ ನೋಡೋಕೆ ನಮಗೆ ಸಹಾಯ ಮಾಡುತ್ತೆ.

9. ನಾವು ಯೆಹೋವನನ್ನ ‘ಮನಸ್ಸಲ್ಲಿ ಇಟ್ಕೊಂಡ್ರೆ’ ಏನು ಮಾಡ್ತೀವಿ? ಉದಾಹರಣೆ ಕೊಡಿ.

9 ನಾವು ಯೆಹೋವನನ್ನ ಯಾವಾಗ್ಲೂ ನಮ್ಮ ‘ಮನಸ್ಸಲ್ಲಿ ಇಟ್ಕೊಬೇಕು.‘ ಇದನ್ನ ಹೇಗೆ ಮಾಡೋದು? ಆತನು ಎಂಥವನು, ನಾವು ಮಾಡೋ ವಿಷ್ಯಗಳಿಂದ ಆತನಿಗೆ ಹೇಗನಿಸುತ್ತೆ ಅಂತ ನಾವು ಯೋಚಿಸ್ತಾ ಇರಬೇಕು. ಆಗ ನಾವು ಸರಿಯಾದ ನಿರ್ಧಾರಗಳನ್ನೇ ಮಾಡ್ತೀವಿ. (ಜ್ಞಾನೋ. 3:5, 6) ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಎಷ್ಟೋ ಸಹೋದರ ಸಹೋದರಿಯರು ತಾವು ಕೆಲಸ ಮಾಡೋ ಟೇಬಲ್‌ ಮೇಲೆ, ಪರ್ಸಲ್ಲಿ ಅಥವಾ ಫೋನಲ್ಲಿ ಅವ್ರ ಸಂಗಾತಿ ಫೋಟೋನ ಇಟ್ಕೊಂಡಿರ್ತಾರೆ. ಇದು ಅವ್ರ ಸಂಗಾತಿನ ಆಗಾಗ ನೆನಪಿಸ್ಕೊಳ್ಳೋಕೆ, ಸಂಗಾತಿಗೆ ಇಷ್ಟ ಆಗೋ ನಿರ್ಧಾರಗಳನ್ನ ಮಾಡೋಕೆ ಮತ್ತು ಸಂಗಾತಿಗೆ ಬೇಜಾರಾಗದೆ ಇರೋ ತರ ನಡ್ಕೊಳ್ಳೋಕೆ ಸಹಾಯ ಮಾಡುತ್ತೆ. ಅದೇ ತರ ನಾವು ಯೆಹೋವನನ್ನ ನಮ್ಮ ಮನಸ್ಸಿನಲ್ಲಿಟ್ಟು ಆತನ ಬಗ್ಗೆ ಯೋಚಿಸ್ತಾ ಇರ್ಬೇಕು. ಆಗ ಆತನಿಗೆ ಇಷ್ಟ ಆಗೋ ನಿರ್ಧಾರಗಳನ್ನ ಮಾಡ್ತೀವಿ.—ಕೀರ್ತ. 19:13, 14.

10. ನಾವು ಯೆಹೋವನ ಬಗ್ಗೆ ಜಾಸ್ತಿ ಕಲಿತಾ ಹೋದ ಹಾಗೆ ಏನು ಮಾಡ್ತೀವಿ?

10 ನಮ್ಮನ್ನ ಯೆಹೋವ ತನ್ನನ್ನ ಹೋಲುವಂಥ ರೀತಿಯಲ್ಲಿ ಸೃಷ್ಟಿಸಿದ್ದಾನೆ. ಅದಕ್ಕೆ ಆತನಲ್ಲಿರೋ ಗುಣಗಳನ್ನ ನಾವೂ ತೋರಿಸೋಕಾಗುತ್ತೆ. (ಆದಿ. 1:26) ಎಷ್ಟು ಹೆಚ್ಚು ನಾವು ಯೆಹೋವನ ಗುಣಗಳ ಬಗ್ಗೆ ತಿಳ್ಕೊಳ್ತೀವೋ ಅಷ್ಟೇ ಹೆಚ್ಚು ಆತನನ್ನ ಅನುಕರಿಸ್ತೀವಿ. ಆದ್ರೆ ಯೇಸುವಿನ ಸಮಯದಲ್ಲಿದ್ದ ಪಂಡಿತರು ಮತ್ತು ಫರಿಸಾಯರು ದೇವರ ಗುಣಗಳನ್ನ ತೋರಿಸ್ತಿರಲಿಲ್ಲ, ಅದಕ್ಕೆ ಯೇಸು ಅವ್ರನ್ನ ಎಚ್ಚರಿಸಿದನು. ಅವರು ಚಿಕ್ಕ-ಚಿಕ್ಕ ವಿಷ್ಯಗಳಿಗೆ ಗಮನ ಕೊಟ್ರು “ಆದ್ರೆ ನಿಯಮ ಪುಸ್ತಕದಲ್ಲಿರೋ ನ್ಯಾಯ, ಕರುಣೆ, ನಂಬಿಗಸ್ತಿಕೆ ಇಂಥ ಪ್ರಾಮುಖ್ಯ ವಿಷ್ಯಗಳನ್ನ ತಲೆಗೆ ಹಾಕೊಳ್ಳಲ್ಲ” ಅಂತ ಹೇಳಿದನು. (ಮತ್ತಾ. 23:23) ನಾವು ಅವರ ತರ ಇರಬಾರದು. ಯೆಹೋವ ಕೊಡೋ ತತ್ವ ಮತ್ತು ನಿಯಮಗಳ ಹಿಂದೆ ಇರೋ ಆತನ ಗುಣಗಳನ್ನ ತಿಳ್ಕೊಳೋಕೆ ಕೈಲಾದ ಎಲ್ಲಾ ಪ್ರಯತ್ನ ಹಾಕಬೇಕು. ಹೀಗೆ ಮಾಡಿದ್ರೆ ನಾವು ಆ ಗುಣಗಳನ್ನ ತೋರಿಸೋಕಾಗುತ್ತೆ.—1 ಯೋಹಾ. 4:8, 11.

ನಾವು ಯೆಹೋವನನ್ನ ಹೇಗೆ ಚೆನ್ನಾಗಿ ತಿಳ್ಕೊಬಹುದು?

11. ನಿಮಗೆ ಯೆಹೋವನ ಪರಿಚಯ ಹೇಗಾಯ್ತು?

11 ಮೊದಮೊದ್ಲು ನಿಮಗೆ ಯೆಹೋವನನ್ನ ಯಾರು ಪರಿಚಯ ಮಾಡಿಸಿದ್ರು? ನೀವು ಸತ್ಯದಲ್ಲೇ ಬೆಳೆದಿದ್ರೆ ನಿಮ್ಮ ಅಪ್ಪ-ಅಮ್ಮ ಯೆಹೋವನ ಬಗ್ಗೆ ಕಲಿಸಿರಬಹುದು. ಅವರು ಬೈಬಲಿನಲ್ಲಿರೋ ಕಥೆಗಳನ್ನ ಹೇಳ್ತಾ ಸೃಷ್ಟಿನ ತೋರಿಸ್ತಾ ಯೆಹೋವನ ಗುಣಗಳನ್ನ ಮತ್ತು ಆತನ ವ್ಯಕ್ತಿತ್ವವನ್ನ ಅರ್ಥ ಮಾಡಿಸಿರಬಹುದು. ಒಂದುವೇಳೆ ನೀವು ಯೆಹೋವನ ಸಾಕ್ಷಿಗಳಿಂದ ಸತ್ಯನ ಕಲ್ತಿರೋದಾದ್ರೆ, ಅವರು ನಿಮಗೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕವನ್ನ ಬಳಸಿ ಬೈಬಲಿನಲ್ಲಿರೋ ಘಟನೆಗಳನ್ನ ಹೇಳ್ತಾ, ಸೃಷ್ಟಿನ ತೋರಿಸ್ತಾ ಯೆಹೋವನ ಸುಂದರ ಗುಣಗಳನ್ನ ತಿಳಿಸಿರುತ್ತಾರೆ.b (ನೆಹೆ. 8:8; ಅ. ಕಾ. 14:17) ಈಗ ನಾವು ಯೆಹೋವನ ಬಗ್ಗೆ ಇನ್ನೂ ಚೆನ್ನಾಗಿ ಕಲಿತಾ ಇರೋಕೆ ಏನು ಮಾಡಬೇಕು ಅಂತ ನೋಡೋಣ.

12-13. ನಾವು ಬೈಬಲ್‌ ಘಟನೆಗಳಿಂದ ಯೆಹೋವನ ಬಗ್ಗೆ ಏನು ಕಲಿಬಹುದು? ಒಂದು ಉದಾಹರಣೆ ಕೊಡಿ. (ಯೆರೆಮೀಯ 39:15-18) (ಚಿತ್ರ ನೋಡಿ.)

12 ನಾವು ಬೈಬಲಿನಲ್ಲಿ ಯೆಹೋವನ ಬಗ್ಗೆ ಓದಿ ಅಧ್ಯಯನ ಮಾಡಬೇಕು. ಯೆಹೋವನಲ್ಲಿ ಯಾವೆಲ್ಲ ಗುಣಗಳಿವೆ ಅಂತ ಕೆಲವೊಮ್ಮೆ ಬೈಬಲ್‌ ನೇರವಾಗಿ ಹೇಳುತ್ತೆ. (ವಿಮೋ. 34:6, 7) ಅಷ್ಟೇ ಅಲ್ಲ, ಜನ ಹೇಗೆ ನಡ್ಕೊಂಡ್ರು, ಅವರು ಯಾವ ನಿರ್ಧಾರ ಮಾಡಿದ್ರು ಅನ್ನೋದ್ರ ಬಗ್ಗೆನೂ ಬೈಬಲಿನಲ್ಲಿ ಇದೆ. ಇಂಥ ಘಟನೆಗಳ ಬಗ್ಗೆ ನಾವು ಧ್ಯಾನಿಸಬೇಕು. ಆಗ ಯೆಹೋವನಿಗೆ ಅವರ ಬಗ್ಗೆ ಹೇಗೆ ಅನಿಸ್ತು, ಆತನಲ್ಲಿ ಯಾವೆಲ್ಲ ಒಳ್ಳೆ ಗುಣಗಳಿವೆ ಅಂತ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ.

13 ಇದಕ್ಕೊಂದು ಉದಾಹರಣೆ ನೋಡಿ. ನೀವು ಯೆರೆಮೀಯ 38:6-13ನೇ ವಚನ ಓದ್ತಿದ್ದೀರಾ ಅಂತ ಅಂದ್ಕೊಳ್ಳಿ. ಅಲ್ಲಿ ಇಥಿಯೋಪ್ಯದ ಎಬೆದ್ಮೆಲೆಕ ಯೆರೆಮೀಯನನ್ನ ಕಾಪಾಡಿದ ಅಂತ ಇದೆ. ಇದನ್ನ ಓದಿದಾಗ ನಿಮ್ಗೆ ಹೇಗನಿಸುತ್ತೆ? ಎಬೆದ್ಮೆಲೆಕನ ತರ ನಾವು ತ್ಯಾಗಗಳನ್ನ ಮಾಡಬೇಕು, ಧೈರ್ಯ ತೋರಿಸಬೇಕು, ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸಬೇಕು ಅಂತ ಅನಿಸುತ್ತಲ್ವಾ? ಆದ್ರೆ ಆ ವಚನಗಳಿಂದ ಯೆಹೋವನಲ್ಲಿ ಯಾವೆಲ್ಲ ಗುಣಗಳಿದೆ ಅಂತ ನಿಮಗೆ ಕಂಡುಹಿಡಿಯೋಕೆ ಆಗುತ್ತಾ? (ಯೆರೆಮೀಯ 39:15-18 ಓದಿ.) ಯೆಹೋವನು ನ್ಯಾಯವಾಗಿ ನಡ್ಕೊಳ್ತಾನೆ, ಭೇದಭಾವ ಮಾಡಲ್ಲ ಮತ್ತು ಯಾರಾದ್ರೂ ಒಳ್ಳೇದು ಮಾಡ್ದಾಗ ಅವ್ರನ್ನ ಆತನು ಮೆಚ್ಕೊಳ್ತಾನೆ ಅಂತ ಈ ಘಟನೆಯಲ್ಲಿರೋ ಯಾವ ವಚನ ತೋರಿಸುತ್ತೆ? ಈ ಘಟನೆಯಿಂದ ಯೆಹೋವನಲ್ಲಿರೋ ಇನ್ನು ಬೇರೆ ಯಾವ ಗುಣಗಳನ್ನ ಕಂಡುಹಿಡಿಯೋಕೆ ಆಗುತ್ತೆ ಅಂತಾನೂ ಯೋಚಿಸಿ. ಅಷ್ಟೇ ಅಲ್ಲ, ನೀವು ಬೈಬಲ್‌ ಓದುವಾಗೆಲ್ಲಾ ಯೆಹೋವನ ಗುಣಗಳ ಬಗ್ಗೆ ಧ್ಯಾನಿಸಿ. ಆಗ ಯೆಹೋವನನ್ನ ಹಾಡಿ ಹೊಗಳಬೇಕು ಅಂತ ನಿಮಗನಿಸುತ್ತೆ.

ಎಬೆದ್ಮೆಲೆಕ ಮತ್ತು ಕೆಲವು ಪುರುಷರು ಯೆರೆಮೀಯನನ್ನ ಗುಂಡಿಯಿಂದ ಮೇಲೆ ಎತ್ತುತ್ತಿದ್ದಾರೆ. ಬೇರೆ ಕೆಲವು ಪುರುಷರು ಕತ್ತಿ ಹಿಡ್ಕೊಂಡು ಕಾಯ್ತಿದ್ದಾರೆ.

ಕೆಸರಿನ ಗುಂಡಿಯಲ್ಲಿದ್ದ ಯೆರೆಮೀಯನನ್ನ ಎಬೆದ್ಮೆಲೆಕ ಧೈರ್ಯವಾಗಿ ಕಾಪಾಡಿದ (ಪ್ಯಾರ 12-13)


14. ಸೃಷ್ಟಿನ ನೋಡಿದಾಗ ಯೆಹೋವನ ಬಗ್ಗೆ ಕಲಿಯೋಕೆ ಏನು ಮಾಡಬೇಕು?

14 ಸೃಷ್ಟಿಯ ಬಗ್ಗೆ ಧ್ಯಾನಿಸಿದ್ರೆ ಯೆಹೋವನ ಗುಣಗಳನ್ನ ಅರ್ಥ ಮಾಡ್ಕೊಳ್ಳೋಕಾಗುತ್ತೆ. (ಕೀರ್ತ. 145:9, 10) ಹಾಗಂತ ಬರೀ ಸೃಷ್ಟಿನ ನೋಡ್ತಾ ಹೋದ್ರೆ ಸಾಕಾಗಲ್ಲ. ಯಾಕಂದ್ರೆ ಕೆಲವು ಜನರು ಸೃಷ್ಟಿನ ನೋಡ್ತಾ, ಅಧ್ಯಯನ ಮಾಡೋದ್ರಲ್ಲೇ ಇಡೀ ಜೀವನ ಕಳೆದಿದ್ದಾರೆ. ಆದ್ರೂ ಅವರು ದೇವರು ಇದ್ದಾನೆ ಅಂತ ಮತ್ತು ಆತನಲ್ಲಿ ಯಾವೆಲ್ಲ ಗುಣಗಳಿದೆ ಅಂತ ಸ್ವಲ್ಪನೂ ಅರ್ಥ ಮಾಡ್ಕೊಂಡಿಲ್ಲ. ಆದ್ರೆ ಅಪೊಸ್ತಲ ಪೌಲ, “ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ” ಅಂತ ಹೇಳಿದ್ದಾನೆ. (ರೋಮ. 1:20) ಈ ವಚನವನ್ನ ಒಂದು ಭಾಷಾಂತರ, ‘ಸೃಷ್ಟಿನ ನೋಡ್ದಾಗ ಅದನ್ನ ಅರ್ಥ ಮಾಡ್ಕೊಳ್ಳೋ ಕಣ್ಣುಗಳಿಗೆ ದೇವರ ಗುಣಗಳನ್ನೂ ನೋಡೋಕಾಗುತ್ತೆ’ ಅಂತ ಭಾಷಾಂತರ ಮಾಡಿದೆ. ಹಾಗಾಗಿ ನಾವು ಅದ್ಭುತ ಸೃಷ್ಟಿನ ನೋಡ್ದಾಗ ಅದ್ರ ಬಗ್ಗೆ ಚೆನ್ನಾಗಿ ಯೋಚಿಸಬೇಕು ಮತ್ತು ಇದರಿಂದ ದೇವರಲ್ಲಿರೋ ಯಾವ ಗುಣಗಳು ನಮಗೆ ಗೊತ್ತಾಗುತ್ತೆ ಅಂತ ಅರ್ಥ ಮಾಡ್ಕೊಬೇಕು.

15. ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಸಹೋದರ ಪ್ಯಾಟ್ರಿಕ್‌ ಏನು ಮಾಡಿದ್ರು ಮತ್ತು ನೀವೇನು ಮಾಡ್ಬಹುದು? (ಚಿತ್ರ ನೋಡಿ.)

15 ಇವತ್ತು ನಮ್ಮಲ್ಲಿ ಹೆಚ್ಚಿನವರು ದೊಡ್ಡದೊಡ್ಡ ಸಿಟಿಗಳಲ್ಲಿ ಇರೋದ್ರಿಂದ ಪ್ರಾಣಿ-ಪಕ್ಷಿಗಳನ್ನ, ಮರ-ಗಿಡಗಳನ್ನ ನೋಡೋಕಾಗ್ತಿಲ್ಲ. ಹಾಗಿದ್ರೂ ನಾವು ಸೃಷ್ಟಿನ ನೋಡಿ ಪಾಠಗಳನ್ನ ಕಲಿಬಹುದಾ? ಪ್ಯಾಟ್ರಿಕ್‌ ಅನ್ನೋ ಸಹೋದರನ ಅನುಭವ ನೋಡಿ. ಇವರು ಕಾಂಗೋ ದೇಶದ ದೊಡ್ಡ ಸಿಟಿಯಲ್ಲಿ ವಾಸಿಸ್ತಿದ್ದಾರೆ. ಅವರು ಹೇಳೋದು, “ನಾನು ನನ್ನ ಬಾಲ್ಕನಿ ಇಂದ ಸೃಷ್ಟಿನ ನೋಡೋಕೆ ತುಂಬ ಪ್ರಯತ್ನ ಹಾಕ್ತೀನಿ. ಆಗ ಚಿಕ್ಕಪುಟ್ಟ ಕೀಟಗಳು ಮತ್ತು ಪಕ್ಷಿಗಳು ಊಟನ ಹುಡ್ಕೊಂಡು, ಗೂಡು ಕಟ್ಟೋಕೆ ಜಾಗನ ಹುಡ್ಕೊಂಡು ಬರೋದನ್ನ ಗಮನಿಸಿದ್ದೀನಿ. ಒಂದ್ಸಲ ಕೆಲವು ಪಕ್ಷಿಗಳು ಗೂಡು ಕಟ್ಟೋದನ್ನ ನೋಡ್ದೆ. ಅವು ನಮ್ಮ ಮನೆ ಸುತ್ತ-ಮುತ್ತ ಇದ್ದ ಚಿಕ್ಕ-ಚಿಕ್ಕ ವಸ್ತುಗಳನ್ನ ತಗೊಂಡು ತಮ್ಮ ಮರಿಗಳಿಗೋಸ್ಕರ ಸೂಪರ್‌ ಆಗಿ ಗೂಡು ಕಟ್ಕೊಳ್ತಿದ್ವು.” ಇದನ್ನ ನೋಡಿದ್ಮೇಲೆ ಸೃಷ್ಟಿಕರ್ತನ ಬಗ್ಗೆ ಸಹೋದರ ಪ್ಯಾಟ್ರಿಕ್‌ ತುಂಬ ಯೋಚಿಸಿದ್ರು. “ನಮ್ಮ ಕಣ್ಣಿಗೆ ಅಷ್ಟು ಸರಿಯಾಗಿ ಕಾಣಿಸದೆ ಇರೋ ಈ ಪುಟಾಣಿ ಜೀವಿಗಳನ್ನೇ ಯೆಹೋವ ಇಷ್ಟು ಚೆನ್ನಾಗಿ ನೋಡ್ಕೊಳ್ತಾನೆ ಅಂದ್ಮೇಲೆ, ಖಂಡಿತ ನನ್ನ ಅಗತ್ಯಗಳನ್ನೂ ಪೂರೈಸ್ತಾನೆ, ನನ್ನ ಕೈಯನ್ನ ಬಿಡಲ್ಲ ಅನ್ನೋ ನನ್ನ ನಂಬಿಕೆ ಹೆಚ್ಚಾಗಿದೆ” ಅಂತ ಅವರು ಹೇಳ್ತಾರೆ.

ದೊಡ್ಡ ಸಿಟಿಯಲ್ಲಿ ವಾಸಿಸ್ತಿರೋ ಒಬ್ಬ ಸಹೋದರಿ ತನ್ನ ಮನೆ ಬಾಲ್ಕನಿಯಲ್ಲಿರೋ ಗಿಡಗಳಿಗೆ ನೀರು ಹಾಕ್ತಿದ್ದಾಳೆ. ಆಗ ಹೂವಿನ ಮೇಲಿರೋ ಹಮ್ಮಿಂಗ್‌ ಬರ್ಡ್‌ನ ನೋಡಿ ಖುಷಿಪಡ್ತಿದ್ದಾಳೆ.

ಸೃಷ್ಟಿಯಲ್ಲಿ ಕಾಣೋ ವಿಷ್ಯಗಳ ಬಗ್ಗೆ ಧ್ಯಾನಿಸ್ತಾ ಯೆಹೋವನನ್ನ ಇನ್ನೂ ಚೆನ್ನಾಗಿ ತಿಳ್ಕೊಳ್ಳಿ (ಪ್ಯಾರ 15 ನೋಡಿ)


16. (ಎ) ಯೆಹೋವನನ್ನ ಇನ್ನೂ ಚೆನ್ನಾಗಿ ತಿಳ್ಕೊಳ್ಳೋಕೆ ಮರಿಯಳಿಗೆ ಯಾವುದು ಸಹಾಯ ಮಾಡ್ತು? (ಬಿ) ಅವಳ ಮಾದರಿನ ನಾವು ಹೇಗೆ ಅನುಕರಿಸಬಹುದು? (ಚಿತ್ರ ನೋಡಿ.)

16 ಯೆಹೋವ ನಮಗೆ ಮಾಡಿರೋ ಸಹಾಯದ ಬಗ್ಗೆ ನಾವು ಧ್ಯಾನ ಮಾಡಬೇಕು. ಇದನ್ನೇ ಯೇಸುವಿನ ಅಮ್ಮ ಮರಿಯ ಮಾಡಿದಳು. ಅವಳಿಗೆ ಯೆಹೋವನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಯೆಹೋವನಿಂದ ಆಶೀರ್ವಾದನೂ ಪಡ್ಕೊಂಡಿದ್ದಳು. (ಲೂಕ 1:30) ಆಮೇಲೆ ಅವಳಿಗೆ ದೇವರ ಮಗನ ತಾಯಿಯಾಗೋ ಒಂದು ದೊಡ್ಡ ನೇಮಕ ಸಿಕ್ತು. ಆಗ ಅವಳಿಗೆ ತುಂಬ ಚಿಂತೆ ಆಗಿರುತ್ತೆ. ಆಗ ಯೆಹೋವ, ಗಬ್ರಿಯೇಲ ದೇವದೂತ ಮತ್ತು ಅವಳ ಸಂಬಂಧಿಕಳಾದ ಎಲಿಸಬೆತ್‌ನ ಮೂಲಕ ಅವಳನ್ನ ಬಲಪಡಿಸಿ, ಧೈರ್ಯ ತುಂಬಿದನು. ಅವಳಿಗಾದ ಈ ಅನುಭವದ ಬಗ್ಗೆ ಮರಿಯ ಯೋಚಿಸಿ, ಧ್ಯಾನ ಮಾಡಿದಳು. ಆಗ ಯೆಹೋವನಿಗೆ ಎಷ್ಟು ಶಕ್ತಿ, ಕರುಣೆ ಇದೆ ಅಂತ ತಿಳ್ಕೊಂಡಳು. ಅಷ್ಟೇ ಅಲ್ಲ, ಆತನು ಭೇದಭಾವ ಮಾಡಲ್ಲ, ನನ್ನಂಥ ಸಾಮಾನ್ಯ ವ್ಯಕ್ತಿಗೂ ಗಮನ ಕೊಡ್ತಾನೆ ಅಂತ ಅರ್ಥ ಮಾಡ್ಕೊಂಡ್ಳು. (ಲೂಕ 1:46-55) ನೋಡಿದ್ರಾ? ಅವಳು ಯೆಹೋವ ಮಾಡಿದ ಸಹಾಯದ ಬಗ್ಗೆ ಯೋಚ್ನೆ ಮಾಡಿದ್ರಿಂದ ಯೆಹೋವನ ಮೇಲೆ ಕೃತಜ್ಞತೆ ಬೆಳೆಸ್ಕೊಂಡಳು. ಹಾಗಾಗಿ ನಾವೂ ಆತನು ಸರಿಯಾದ ಸಮಯದಲ್ಲಿ ನಮಗೆ ಮಾಡಿದ ಸಹಾಯದ ಬಗ್ಗೆ ಯೋಚ್ನೆ ಮಾಡಬೇಕು. ಆಗ ನಾವೂ ಕೃತಜ್ಞತೆ ಬೆಳೆಸ್ಕೊಬಹುದು. (ಇಬ್ರಿ. 4:16) ನಮಗೆ ಯೆಹೋವನಿಂದ ಸಹಾಯ ಸಿಕ್ಕಾಗ, ‘ಇದ್ರಿಂದ ನಾನು ಯೆಹೋವನ ಬಗ್ಗೆ ಏನು ಕಲಿಬಹುದು? ನನಗಾದ ಈ ಅನುಭವದಿಂದ ಯೆಹೋವನಲ್ಲಿರೋ ಯಾವ ಗುಣಗಳ ಬಗ್ಗೆ ನಾನು ತಿಳ್ಕೊಬಹುದು?’ ಅಂತ ಕೇಳ್ಕೊಬೇಕು.

ಚಿತ್ರ: ಯೆಹೋವ ತನಗೆ ಸಹಾಯ ಮಾಡಿದ್ರ ಬಗ್ಗೆ ಒಬ್ಬ ಸಹೋದರ ಯೋಚಿಸ್ತಿದ್ದಾನೆ. 1. ಸಭೆಯಲ್ಲಿ ತನಗೆ ಸಿಕ್ಕಿರೋ ನೇಮಕದ ಬಗ್ಗೆ ಪ್ರಾರ್ಥನೆ ಮಾಡ್ತಿದ್ದಾನೆ. 2. ತನಗೆ ಸಿಕ್ಕಿದ ನೇಮಕವನ್ನ ಚೆನ್ನಾಗಿ ಮಾಡಿದ್ದಾನೆ.

ಯೆಹೋವನ ನಿಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಯೋಚಿಸಿ ನೋಡಿ, ಆಗ ಆತನ ಬಗ್ಗೆ ಇನ್ನೂ ಚೆನ್ನಾಗಿ ತಿಳ್ಕೊಳ್ತೀರ (ಪ್ಯಾರ 16 ನೋಡಿ)c


ಕಲಿಯೋಕೆ ಕೊನೆನೇ ಇಲ್ಲ!

17-18. ಯೆಹೋವನ ಬಗ್ಗೆ ಕಲಿಯೋಕೆ ಕೊನೆನೇ ಇಲ್ಲ ಅಂತ ಯಾಕೆ ಹೇಳಬಹುದು?

17 ತುಂಬ ಬೇಗನೆ ಯೆಹೋವ ನಮಗೆ ಒಂದು ಹೊಸ ಲೋಕನ ಕೊಡ್ತಾನೆ. ತೀರಿ ಹೋಗಿರೋ ನಮ್ಮ ಆಪ್ತರನ್ನ ಮತ್ತೆ ಎಬ್ಬಿಸ್ತಾನೆ. ಅಲ್ಲಿ ನಾವು ಪರಿಪೂರ್ಣರಾಗ್ತಾ ಹೋಗ್ತೀವಿ. ಅಷ್ಟೇ ಅಲ್ಲ, ಯೆಹೋವ ನಮಗೆ ಆಗ ಹೊಸ ಸುರುಳಿಗಳನ್ನೂ ಕೊಡ್ತಾನೆ. ಅದ್ರಿಂದ ನಾವು ಏನು ಮಾಡಬೇಕು, ಹೇಗಿರಬೇಕು ಅಂತ ಕಲಿತೀವಿ. (ಪ್ರಕ. 20:12) ಆಗ ನಾವು ಸೃಷ್ಟಿನ ಇನ್ನೂ ಹತ್ರದಿಂದ ನೋಡ್ತೀವಿ. (ಯೆಶಾ. 11:6-9) ಎಷ್ಟೋ ಹೊಸಹೊಸ ವಿಷ್ಯಗಳನ್ನ ಕಲಿತೀವಿ. ಹೀಗೆ ನಾವು ಯೆಹೋವನ ಬಗ್ಗೆ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ.

18 ಯೆಹೋವನ ಬಗ್ಗೆ ಕಲಿಯೋಕೆ ಕೊನೆನೇ ಇಲ್ಲ! ಆತನು ಕೋಟ್ಯಾನುಕೋಟಿ ವರ್ಷಗಳಿಂದ ಜೀವಿಸ್ತಾ ಇರೋದ್ರಿಂದ ಆತನ “ಜ್ಞಾನಕ್ಕೆ ಮಿತಿನೇ ಇಲ್ಲ.” (ಕೀರ್ತ. 90:2; 147:5) ಹಾಗಾಗಿ “ಸತ್ಯ ದೇವರು ಮಾಡಿರೋ ಕೆಲಸವನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ಯಾವತ್ತೂ ಆಗಲ್ಲ.” (ಪ್ರಸಂ. 3:11) ಆದ್ರೆ ಆತನ ಬಗ್ಗೆ ನಮಗೆ ಈಗಾಗ್ಲೇ ಗೊತ್ತಿರೋ ವಿಷ್ಯಕ್ಕಿಂತ ಇನ್ನೂ ಜಾಸ್ತಿ ವಿಷ್ಯಗಳನ್ನ ತಿಳ್ಕೊಬಹುದು. ಹಾಗಾಗಿ ನಾವು ಸತ್ಯದಲ್ಲಿ ಎಷ್ಟೇ ವರ್ಷಗಳಿಂದ ಇದ್ರೂ ಯೆಹೋವನ ಬಗ್ಗೆ ಕಲಿಯೋಕೆ ಸಿಗೋ ಪ್ರತಿಯೊಂದು ಅವಕಾಶನ ಚೆನ್ನಾಗಿ ಬಳಸ್ಕೊಳ್ಳೋಣ.

ನೀವೇನು ಹೇಳ್ತೀರಾ?

  • ಯೆಹೋವನನ್ನ ತಿಳ್ಕೊಳ್ಳೋದು ಅಂದ್ರೆ ಏನು?

  • ಯೆಹೋವನನ್ನ ಯಾಕೆ ತಿಳ್ಕೊಬೇಕು?

  • ಯೆಹೋವನನ್ನ ಹೇಗೆ ತಿಳ್ಕೊಬಹುದು?

ಗೀತೆ 28 ಯೆಹೋವನ ಸ್ನೇಹವನ್ನು ಗಳಿಸೋಣ

a ಹೊಸಲೋಕ ಭಾಷಾಂತರದ “ಬೈಬಲಿನ ಪರಿಚಯ” ವಿಭಾಗದ ಪ್ರಶ್ನೆ 20 ಅನ್ನು ನೋಡಿ.

b ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 07 ಪಾಯಿಂಟ್‌ 5-7 ಅನ್ನು ನೋಡಿ.

c ಚಿತ್ರದ ವಿವರಣೆ : ಗಾಬರಿ ಆಗೋ ಕಾಯಿಲೆಯಿಂದ ನರಳ್ತಿರೋ ಸಹೋದರ ವಾರಮಧ್ಯದ ಕೂಟದಲ್ಲಿ ತನ್ನ ನೇಮಕವನ್ನ ಮಾಡೋಕೆ ಯೆಹೋವ ಹೇಗೆ ಸಹಾಯ ಮಾಡಿದ ಅಂತ ಧ್ಯಾನಿಸ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ