ಸೆಪ್ಟೆಂಬರ್ 14-20, 2026
ಗೀತೆ 45 ನನ್ನ ಹೃದಯದ ಧ್ಯಾನ
ಯೆಶಾಯ ಪುಸ್ತಕ ಸಾಂತ್ವನದ ಚಿಲುಮೆ!
“ಯೆಹೋವ ಹೀಗೆ ಹೇಳ್ತಿದ್ದಾನೆ . . . ‘ತಾಯಿ ತನ್ನ ಮಗನನ್ನ ಸಂತೈಸೋ ತರ ನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ.’”—ಯೆಶಾ. 66:12, 13.
ಈ ಲೇಖನದಲ್ಲಿ ಏನಿದೆ?
ನಾವು ಕುಗ್ಗಿ ಹೋದಾಗ, ಹೃದಯ ಒಡೆದು ಹೋದಾಗ ಯೆಶಾಯ ಪುಸ್ತಕದಲ್ಲಿರೋ ವಚನಗಳು ನಮಗೆ ಸಾಂತ್ವನ ಕೊಟ್ಟು ನವ ಚೈತನ್ಯ ತುಂಬಿಸುತ್ತೆ. ಅದು ಹೇಗೆ ಅಂತ ನೋಡೋಣ.
1-2. ನಾವು ಕುಗ್ಗಿ ಹೋದಾಗ ಯೆಹೋವ ಏನು ಮಾಡ್ತಾನೆ?
ಸ್ವಲ್ಪ ಊಹಿಸ್ಕೊಳ್ಳಿ, ಒಂದು ಮಗು ಬಿಕ್ಕಿಬಿಕ್ಕಿ ಅಳ್ತಿದೆ. ಅವನು ಬೆಳೆದು ಬಂದಿರೋ ಊರು, ಆಟ ಆಡಿದ ರಸ್ತೆ, ಅವನ ಫ್ರೆಂಡ್ಸ್‌ನೆಲ್ಲ ಬಿಟ್ಟು ಈಗ ಒಂದು ಹೊಸ ಊರಿಗೆ ಹೋಗ್ತಿರಬಹುದು ಅಥವಾ ಅವನು ಮಾಡಿರೋ ಯಾವುದೋ ಒಂದು ತಪ್ಪನ್ನ ನೆನಸ್ಕೊಂಡು ಹೆದರಿಕೊಂಡಿರಬಹುದು. ಇದನ್ನೆಲ್ಲಾ ನೋಡಿದಾಗ ಅವನ ಮೇಲೆ ತುಂಬ ಪ್ರೀತಿ ಇಟ್ಕೊಂಡಿರೋ ತಾಯಿ ಏನು ಮಾಡ್ತಾಳೆ? ಅವನ ಹತ್ರ ಓಡಿ ಬಂದು, ಅಪ್ಕೊಂಡು ‘ಅಳಬೇಡ ಪುಟ್ಟ ಏನಾಯ್ತು ಹೇಳು’ ಅಂತ ತಿಳ್ಕೊಳ್ತಾಳೆ. ಆಮೇಲೆ ‘ಏನೂ ಆಗಲ್ಲ, ನಾನು ನಿನ್ನ ಜೊತೆ ಇರ್ತೀನಿ’ ಅಂತ ಧೈರ್ಯ ತುಂಬ್ತಾಳೆ.
2 ಬೈಬಲ್, ಯೆಹೋವನನ್ನ ತುಂಬ ಪ್ರೀತಿ ಮತ್ತು ಕಾಳಜಿ ತೋರಿಸೋ ತಾಯಿಗೆ ಹೋಲಿಸುತ್ತೆ. ಯಾಕಂದ್ರೆ ಯೆಹೋವನೇ ಸ್ವತಃ “ತಾಯಿ ತನ್ನ ಮಗನನ್ನ ಸಂತೈಸೋ ತರ ನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ” ಅಂದಿದ್ದಾನೆ. (ಯೆಶಾ. 66:13) ‘ತಾಯಿ ಪ್ರೀತಿಗಿಂತ ಮಿಗಿಲಾದದ್ದು ಯಾವುದು ಇಲ್ಲ’ ಅಂತ ಜನ ಹೇಳ್ತಾರೆ. ‘ಒಂದುವೇಳೆ ಅಂಥ ತಾಯಿ ತನ್ನ ಮಗುನ ಮರೆತ್ರೂ ಮರಿಬಹುದು, ಆದ್ರೆ ನಾನು ಮರೆಯಲ್ಲ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಇಡೀ ಪ್ರಪಂಚದಲ್ಲಿ ಯೆಹೋವನ ಪ್ರೀತಿನೇ ತುಂಬ ದೊಡ್ಡದು! (ಯೆಶಾ. 49:15) ನಾವು ಕುಗ್ಗಿ ಹೋದಾಗ, ನೋವಲ್ಲಿ ನಮ್ಮ ಹೃದಯ ಒಡೆದು ಹೋದಾಗ ತನ್ನ ವಾಕ್ಯವಾದ ಬೈಬಲ್ ಮೂಲಕ ಸಾಂತ್ವನ ಕೊಟ್ಟು ಆತನು ನಮ್ಮನ್ನ ಬಲಪಡಿಸ್ತಾನೆ.—ರೋಮ. 15:4.
3. ನಾವು ಈ ಲೇಖನದಲ್ಲಿ ಏನು ಕಲಿತೀವಿ?
3 ಯೆಶಾಯ ಪುಸ್ತಕ ಸಾಂತ್ವನದ ಚಿಲುಮೆ! ಯೆಹೋವ ಇದ್ರಲ್ಲಿ ಸಾಂತ್ವನ ಕೊಡೋ ಎಷ್ಟೋ ವಚನಗಳನ್ನ ತುಂಬಿಸಿದ್ದಾನೆ. (ಯೆಶಾ. 40:1) ಯೆಹೂದ್ಯರು ಕಷ್ಟದಲ್ಲಿ ನರಳ್ತಿದ್ದಾಗ ಅವ್ರಿಗೆ ಸಾಂತ್ವನ ಕೊಡಬೇಕಂತಾನೇ ಯೆಹೋವ ಈ ಪುಸ್ತಕನ ಬರೆಸಿದನು. ಇವತ್ತು ನಾವು ಕೂಡ ‘ಕೊನೆ ದಿನಗಳಲ್ಲಿ ತುಂಬ ಕಷ್ಟಪಡ್ತಿದ್ದೀವಿ.’ (2 ತಿಮೊ. 3:1) ಹಾಗಾಗಿ ನಮಗೂ ಸಾಂತ್ವನದ ಅಗತ್ಯ ತುಂಬಾನೇ ಇದೆ. ಈಗ ನಾವು ಆ ಪುಸ್ತಕದಲ್ಲಿರೋ ಅಂಥ ಸಾಂತ್ವನ ಕೊಡೋ ಕೆಲವು ವಚನಗಳನ್ನ ನೋಡೋಣ. ಅವು ನಮಗೆ (1) ದಿಢೀರಂತ ಪರಿಸ್ಥಿತಿ ಬದಲಾದಾಗ, (2) ತಪ್ಪು ಮಾಡಿದ್ರಿಂದ ಮನಸಾಕ್ಷಿ ಕಿತ್ತು ತಿನ್ನುವಾಗ ಮತ್ತು (3) ಸಾವಿನ ನೋವು ಮತ್ತೆಮತ್ತೆ ಕಾಡಿದಾಗ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.
ದಿಢೀರಂತ ಪರಿಸ್ಥಿತಿ ಬದಲಾದಾಗ
4. ದಿಢೀರಂತ ಪರಿಸ್ಥಿತಿ ಬದಲಾದಾಗ ನಮಗೆ ಹೇಗನಿಸುತ್ತೆ?
4 ನಮ್ಮ ಜೀವನ ದಿಢೀರಂತ ತಲೆ ಕೆಳಗಾಗಬಹುದು. (ಪ್ರಸಂ. 9:11; 1 ಕೊರಿಂ. 7:31) ಇದ್ದಕ್ಕಿದ್ದಂತೆ ಗಂಭೀರ ಕಾಯಿಲೆ, ಹಣಕಾಸಿನ ತೊಂದ್ರೆ ಬರಬಹುದು, ನಮ್ಮ ನೇಮಕ ಬದಲಾಗಬಹುದು ಅಥವಾ ನಾವಿರೋ ಕಡೆ ರಾಜಕೀಯ ಗಲಾಟೆಗಳಾಗಬಹುದು. ಆಗ ‘ಮುಂದೆ ಹೆಂಗಪ್ಪಾ ಜೀವನ’ ಅನ್ನೋ ಚಿಂತೆಯಲ್ಲೇ ಮುಳುಗಬಹುದು. ಈ ತರ ಅನಿಸೋದು ಮಾಮೂಲಿನೇ. ಸಹೋದರ ಜೋಸೆಫ್, ಹತ್ರತ್ರ 17 ವರ್ಷ ಬೆತೆಲಲ್ಲಿ ಸೇವೆ ಮಾಡಿದ್ಮೇಲೆ ಅವ್ರ ನೇಮಕ ಬದಲಾಯ್ತು. ಅವ್ರನ್ನ ಪಯನೀಯರ್ ಆಗಿ ಕಳಿಸಲಾಯ್ತು. ಅವರು ಹೇಳೋದು, “ನಂಗೆ ದಾರಿನೇ ಕಾಣಲಿಲ್ಲ. ಬೆತೆಲಿಂದ ಹೊರಗೆ ಬಂದ್ಮೇಲೆ ಹೊಸ ಜೀವನ ಶುರು ಮಾಡೋಕೆ ತುಂಬ ಕಷ್ಟ ಆಯ್ತು. ಏನು ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ.” ಕೆಲವೊಮ್ಮೆ ನಮ್ಮ ಪರಿಸ್ಥಿತಿನೂ ದಿಢೀರಂತ ಬದಲಾಗಬಹುದು. ಆಗ ಯೆಶಾಯ ಪುಸ್ತಕದಲ್ಲಿರೋ ವಚನಗಳಿಂದ ಯೆಹೋವ ಹೇಗೆ ಸಾಂತ್ವನ ಕೊಡ್ತಾನೆ ಅಂತ ತಿಳ್ಕೊಳ್ಳೋಣ.
5. ಯೆಶಾಯ 42:16ರಲ್ಲಿ ಯೆಹೋವ ಏನಂತ ಮಾತು ಕೊಟ್ಟಿದ್ದಾನೆ? (ಚಿತ್ರ ನೋಡಿ.)
5 ಯೆಶಾಯ 42:16 ಓದಿ. ದಿಢೀರಂತ ಪರಿಸ್ಥಿತಿ ಬದಲಾದಾಗ ನಮಗೆ “ಕುರುಡರ” ತರ, ‘ಪರಿಚಯ ಇಲ್ಲದ ದಾರಿಗಳಲ್ಲಿ ನಡಿಯೋ’ ತರ, ‘ಅಂಧಕಾರದ’ ತರ, ‘ಏರುಪೇರಾದ ಪ್ರದೇಶದಲ್ಲಿ ಇರೋ’ ತರ ಅನಿಸಬಹುದು. ಆದ್ರೆ ಯೆಹೋವ ದೇವರು ಅಂಥ ಸನ್ನಿವೇಶದಲ್ಲೂ ‘ನಾನು ನಿಮ್ಮ ಕೈ ಬಿಡಲ್ಲ’ ಅಂತ ಮಾತು ಕೊಟ್ಟಿದ್ದಾನೆ. ನಾವು ದಟ್ಟವಾದ ಕಾಡಲ್ಲಿ ನಡೀತಿರುವಾಗ ನಮ್ಮ ಜೊತೆ ಇದ್ದು ನಮ್ಮನ್ನ ಮುನ್ನಡೆಸ್ತಾನೆ. ಕತ್ತಲೆಯಲ್ಲಿ ನಡಿತಿರುವಾಗ ಆತನು ಬೆಳಕಿನ ತರ ದಾರಿ ತೋರಿಸ್ತಾನೆ. ಏರುಪೇರಾದ ಪ್ರದೇಶದಲ್ಲಿ ನಡೀತಿದ್ರೆ ಆ ನೆಲವನ್ನ ಸಮತಟ್ಟಾಗಿ ಮಾಡ್ತಾನೆ. ಇದನ್ನೆಲ್ಲಾ ಯೆಹೋವ ತನ್ನ ವಾಕ್ಯವಾದ ಬೈಬಲ್ ಮತ್ತು ಸಂಘಟನೆಯನ್ನ ಬಳಸಿ ಸಲಹೆಗಳನ್ನ ಕೊಡೋ ಮೂಲಕ ಮಾಡ್ತಾನೆ. (ಕೀರ್ತ. 119:105; ಯೆಶಾ. 30:21) ಅಷ್ಟೇ ಅಲ್ಲ, ಸಹೋದರ ಸಹೋದರಿಯರನ್ನ ಬಳಸಿ ನಮಗೆ ಬೇಕಾಗಿರೋ ಸಹಾಯನೂ ಮಾಡ್ತಾನೆ. ಹಾಗಾಗಿ ಏನೇ ಕಷ್ಟ ಬಂದ್ರು ಭಯಪಡದೇ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಡಿ. ಯಾಕಂದ್ರೆ ಆತನು ನಿಮ್ಮ ಪರಿಸ್ಥಿತಿನ ಅರ್ಥಮಾಡ್ಕೊಂಡು ಪ್ರೀತಿ ಮತ್ತು ಕಾಳಜಿಯಿಂದ ಮುನ್ನಡೆಸ್ತಾನೆ.—ಯೆಶಾ. 41:10; 1 ಪೇತ್ರ 5:6, 7.
ದಿಢೀರ್ ಅಂತ ಪರಿಸ್ಥಿತಿ ಬದಲಾದ್ರೂ ಯೆಹೋವ ಮಾತ್ರ ಯಾವತ್ತೂ ನಿಮ್ಮನ್ನ ಕೈಬಿಡಲ್ಲ (ಪ್ಯಾರ 5 ನೋಡಿ)b
6. ನಮ್ಮ ಜೀವನದಲ್ಲಿ ದಿಢೀರಂತ ಪರಿಸ್ಥಿತಿ ಬದಲಾದಾಗ ಭಯಪಡಬೇಕಾ? ವಿವರಿಸಿ.
6 ಸಹೋದರ ಜೋಸೆಫ್ ಬೆತೆಲಿಂದ ಹೊರಗೆ ಬಂದ್ಮೇಲೆ ಅವ್ರಿಗೆ ಯೆಹೋವ ಹೇಗೆ ಸಹಾಯ ಮಾಡಿದನು ಗೊತ್ತಾ? ಅವರು ಹೇಳೋದು, “ಈ ಬದಲಾವಣೆ ಆಗ್ತಿರೋ ಸಮಯದಲ್ಲಿ ಯೆಹೋವ ಮಾಡಿದ ಸಹಾಯನ ಮತ್ತು ಪ್ರೀತಿನ ನಾವು ಕಣ್ಣಾರೆ ನೋಡಿದ್ವಿ. ಆತನು ಎಷ್ಟೋ ಸಹೋದರ ಸಹೋದರಿಯರ ಮೂಲಕ ನಮಗೆ ತುಂಬ ಸಹಾಯ ಮಾಡಿದನು. ಅವರು ನಮಗೆ ಅಗತ್ಯ ಇರೋ ವಸ್ತುಗಳನ್ನ ಕೊಟ್ಟರು, ಸಂತೈಸೋ ಮಾತುಗಳನ್ನ ಹೇಳಿದ್ರು. ಯೆಹೋವ ಇವತ್ತಿನವರೆಗೂ ಇವ್ರ ಮೂಲಕ ನಮಗೆ ಸಹಾಯ ಮಾಡ್ತಾನೇ ಇದ್ದಾನೆ. (ಯೆಶಾ. 54:10; 58:11) ಬ್ರಾಡ್ಕಾಸ್ಟಿಂಗ್ ಹಾಡಿನಲ್ಲಿರೋ ‘ನಾಳೆ ಏನಾಗುತ್ತೋ ನನಗೆ ಗೊತ್ತೇ ಇಲ್ಲ, ಜೊತೆ ನೀನಿದ್ದಾಗ ನಾನು ಒಂಟಿಯಲ್ಲ’a ಅನ್ನೋ ಈ ಲೈನ್ ನನಗೆ ತುಂಬ ಇಷ್ಟ.” ನಿಮ್ಮ ಜೀವನದಲ್ಲೂ ಎಷ್ಟೇ ದೊಡ್ಡ ಬದಲಾವಣೆ ಆದ್ರೂ ಯೆಹೋವ ನಿಮಗೆ ಬೇಕಾಗಿರೋ ಬಲ ಮತ್ತು ಮಾರ್ಗದರ್ಶನವನ್ನ ಕೊಟ್ಟೇ ಕೊಡ್ತಾನೆ ಅಂತ ದೃಢ ಭರವಸೆಯಿಂದ ಇರಿ. ಎಲ್ಲಾ ಟೈಮಲ್ಲೂ ಜೀವನ ನಾವು ಯೋಚನೆ ಮಾಡಿದಂತೆ ಇರಲ್ಲ. ಆದ್ರೆ ಒಂದಂತೂ ನೆನಪಿಡಿ, ಪ್ರತಿ ಹೆಜ್ಜೆಯಲ್ಲೂ ಯೆಹೋವ ನಮ್ಮ ಕೈ ಹಿಡಿದು ನಡೆಸ್ತಾನೇ ಇರ್ತಾನೆ.
ತಪ್ಪು ಮಾಡಿದ್ರಿಂದ ಮನಸಾಕ್ಷಿ ಕಿತ್ತು ತಿನ್ನುವಾಗ
7. ಹಿಂದೆ ಮಾಡಿದ ತಪ್ಪಿಂದ ಕೆಲವ್ರಿಗೆ ಹೇಗನಿಸುತ್ತೆ?
7 ನಾವು ಗಂಭೀರ ತಪ್ಪು ಮಾಡಿದ್ರೆ, ಪಶ್ಚಾತ್ತಾಪಪಡಬೇಕು. ಹಿರಿಯರ ಹತ್ರ ಹೇಳಬೇಕು. ಆಗ ಅವರು ಪ್ರೀತಿಯಿಂದ ಸಹಾಯ ಮಾಡ್ತಾರೆ. ಆಮೇಲೆ ಆ ತಪ್ಪನ್ನ ಮತ್ತೆ ಮಾಡದೇ ಇರೋಕೆ ಪೂರ್ತಿ ಪ್ರಯತ್ನ ಹಾಕಬೇಕು. (ಜ್ಞಾನೋ. 28:13; ಯಾಕೋ. 5:14-16; 1 ಯೋಹಾ. 1:9) ಕೆಲವೊಮ್ಮೆ ಕ್ಷಮೆ ಸಿಕ್ಕಿದ ಮೇಲೂ ‘ತಪ್ಪು ಮಾಡಿ ಬಿಟ್ನಲ್ಲಾ’ ಅಂತ ಮನಸ್ಸಾಕ್ಷಿ ಚುಚ್ಚಿ ತಿಂತಾ ಇರುತ್ತೆ. ಆಗ ‘ಯೆಹೋವ ನನ್ನ ಕ್ಷಮಿಸಲ್ವೇನೋ’ ಅಂತ ಅನಿಸಿಬಿಡುತ್ತೆ. (2 ಕೊರಿಂ. 2:7) ಈ ತರ ಅನಿಸೋದು ಸಹಜನೇ. ರಾಜ ದಾವೀದನಿಗೂ ಹೀಗನಿಸ್ತು. ಅದಕ್ಕೆ ಅವನು, “ನನ್ನ ಪಾಪದಿಂದಾಗಿ ನನ್ನ ಎಲುಬಲ್ಲಿ ಶಾಂತಿನೇ ಇಲ್ಲ. ನಾನು ಮರಗಟ್ಟಿ ಹೋಗಿದ್ದೀನಿ, ಸಂಪೂರ್ಣವಾಗಿ ನಲುಗಿಹೋಗಿದ್ದೀನಿ, ಅಂತ ಬರೆದ.” (ಕೀರ್ತ. 38:3, 8) ನಿಮಗೂ ಹೀಗೆ ಅನಿಸ್ತಿದ್ರೆ ಯೆಶಾಯ ಪುಸ್ತಕದಿಂದ ಖಂಡಿತ ಸಾಂತ್ವನ ಸಿಗುತ್ತೆ!
8-9. ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೆ ಅಂತ ಯೆಶಾಯ 1:18 ಹೇಳುತ್ತೆ?
8 ಯೆಶಾಯ 1:18 ಓದಿ. ಯೆಹೋವ ನಮ್ಮನ್ನ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ ಅಂತ ಬೈಬಲಿನಲ್ಲಿ ಉದಾಹರಣೆಗಳನ್ನ ಬರೆಸಿಟ್ಟಿದ್ದಾನೆ. ಆತನು, “ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ” ಅಂತ ಹೇಳಿದ್ದಾನೆ. ಕಡುಗೆಂಪು ಬಣ್ಣ ನಮ್ಮ ಬಟ್ಟೆ ಮೇಲೆ ಬಿದ್ರೆ ಆ ಕಲೆನಾ ಸುಲಭವಾಗಿ ತೆಗೆಯೋಕಾಗಲ್ಲ. ಆದ್ರೆ ನಮ್ಮ ಪಾಪ ಎಷ್ಟೇ ಕೆಂಪಾಗಿದ್ರೂ ಅದನ್ನ ‘ನಾನು ಪೂರ್ತಿಯಾಗಿ ಕ್ಷಮಿಸ್ತೀನಿ’ ಅಂದ್ರೆ ತೆಗೆದುಹಾಕ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಯೆಹೋವ ನಮ್ಮನ್ನ ಕ್ಷಮಿಸಿದ ಮೇಲೆ ಆ ಪಾಪದ ಕಲೆ ನಮ್ಮ ಜೀವನದಲ್ಲಿ ಮತ್ತೆ ಯಾವತ್ತೂ ಕಾಣಿಸಲ್ಲ.
9 ಇದಕ್ಕೆ ಒಳ್ಳೆ ಉದಾಹರಣೆ ರಾಜ ದಾವೀದ. ಅವನು ವ್ಯಭಿಚಾರ ಮತ್ತು ಕೊಲೆ ಮಾಡಿದ. ಆದ್ರೂ ಯೆಹೋವ ಅವನನ್ನ ಪೂರ್ತಿಯಾಗಿ ಕ್ಷಮಿಸಿ, ಅವನನ್ನ ನೀತಿವಂತ ಅಂತ ಕರೆದನು. (2 ಸಮು. 11:3, 4, 14, 15; 12:13; 1 ಅರ. 9:4, 5) ನೋಡಿದ್ರಾ, ದಾವೀದ ಮಾಡಿದ ತಪ್ಪುಗಳಿಂದ ಯೆಹೋವ ಅವನನ್ನ ಅಳೀಲಿಲ್ಲ. ಬದಲಿಗೆ ಅವನು ನಿಯತ್ತಾಗಿ ಇದ್ದಿದ್ದನ್ನ ನೋಡಿ ಮೆಚ್ಕೊಂಡನು. ನಾವೂ ತಪ್ಪುಗಳಿಗೆ ಪಶ್ಚಾತ್ತಾಪಪಟ್ರೆ ನಮ್ಮನ್ನೂ ಪೂರ್ತಿಯಾಗಿ ಕ್ಷಮಿಸ್ತಾನೆ. ಶುದ್ಧ ಮನಸ್ಸಾಕ್ಷಿ ಪಡ್ಕೊಳ್ಳೋಕೆ ಸಹಾಯ ಮಾಡ್ತಾನೆ. ಇಷ್ಟೆಲ್ಲಾ ಆದ್ರೂ ಮನಸ್ಸಾಕ್ಷಿ ಇನ್ನೂ ಚುಚ್ಚುತ್ತಾ ಇದ್ರೆ ಯೆಶಾಯ ಪುಸ್ತಕದಿಂದ ಬೇರೆ ಯಾವ ಸಹಾಯ ಸಿಗುತ್ತೆ?
10. ಯೆಶಾಯ 38:17ರಲ್ಲಿ ನಮಗೆ ಸಾಂತ್ವನ ಕೊಡೋ ಯಾವ ಮಾತನ್ನ ಯೆಹೋವ ಹೇಳಿದ್ದಾನೆ?
10 ಯೆಶಾಯ 38:17 ಮತ್ತು ಪಾದಟಿಪ್ಪಣಿ ಓದಿ. “ನೀನು ನನ್ನ ಪಾಪಗಳನ್ನ ನಿನ್ನ ಕಣ್ಣ ಮುಂದಿಂದ ತೆಗೆದುಹಾಕಿದ್ದೀಯ” ಅಥವಾ “ನಿನ್ನ ಬೆನ್ನ ಹಿಂದೆ ಹಾಕಿದ್ದೀಯ” ಅಂತ ಈ ವಚನ ಹೇಳುತ್ತೆ. ಅಂದ್ರೆ ಒಬ್ಬ ವ್ಯಕ್ತಿ ತಾನು ಮಾಡಿರೋ ತಪ್ಪಿಗೆ ಪಶ್ಚಾತ್ತಾಪಪಟ್ಟ ಮೇಲೆ ಯೆಹೋವ ಆ ತಪ್ಪನ್ನ ಮತ್ತೆ ನೋಡಲ್ಲ ಅಥವಾ ಅದ್ರ ಬಗ್ಗೆ ಯೋಚ್ನೆನೂ ಮಾಡಲ್ಲ. ಈ ವಚನನ ಒಂದು ರೆಫರೆನ್ಸ್, “ನಾನು ತಪ್ಪೇ ಮಾಡಿಲ್ವೇನೋ ಅನ್ನೋ ತರ ನನ್ನನ್ನ ನೋಡ್ತಿಯ” ಅಂತ ಹೇಳುತ್ತೆ. ಯೆಹೋವ ಒಂದ್ಸಲ ಕ್ಷಮಿಸಿದ ಮೇಲೆ ಆ ವ್ಯಕ್ತಿ ತಪ್ಪೇ ಮಾಡಿಲ್ವೇನೋ ಅನ್ನೋ ತರ ನೋಡ್ತಾನೆ. ಅದನ್ನ ಮತ್ತೆ ನೆನಸ್ಕೊಂಡು ನಮಗೆ ಶಿಕ್ಷೆ ಕೊಡಲ್ಲ ಅಥವಾ ನಮ್ಮನ್ನ ದೂರಲ್ಲ. ಅದಕ್ಕೆ ಆತನು “ನಿನ್ನ ಪಾಪಗಳನ್ನ ನೆನಪಿಸ್ಕೊಳ್ಳಲ್ಲ” ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 43:25) ಇದನ್ನೆಲ್ಲಾ ಕೇಳಿದಾಗ ನಮಗೆ ಎಷ್ಟು ನೆಮ್ಮದಿ ಆಗುತ್ತಲ್ವಾ! ಇಡೀ ವಿಶ್ವದ ನ್ಯಾಯಾಧೀಶನಾಗಿರೋ ಯೆಹೋವನೇ ನಮ್ಮ ತಪ್ಪನ್ನ ಸ್ವಲ್ಪನೂ ಮನಸ್ಸಲ್ಲಿ ಇಟ್ಕೊಳ್ಳದೆ ಪೂರ್ತಿ ಕ್ಷಮಿಸ್ತಾನೆ, ಅಂದ್ಮೇಲೆ ನಾವ್ಯಾಕೆ ಅದನ್ನ ಮನಸ್ಸಲ್ಲಿ ಇಟ್ಕೊಂಡು ಕೊರಗ್ತಾ ಇರಬೇಕು?
ಹಿಂದೆ ಮಾಡಿರೋ ತಪ್ಪು ಈಗಿನ ಖುಷಿನ ಕಿತ್ಕೊಳ್ಳೋಕೆ ಬಿಡಬೇಡಿ
11. ನಾವು ಹಿಂದೆ ಏನೇ ತಪ್ಪು ಮಾಡಿದ್ರೂ ಯೆಹೋವ ಈಗ ನಮ್ಮಲ್ಲಿ ಏನು ನೋಡ್ತಾನೆ? (ಚಿತ್ರ ನೋಡಿ.)
11 ಹಿಂದೆ ಮಾಡಿದ ತಪ್ಪಿಂದ ಮನಸಾಕ್ಷಿ ಆಗಾಗ ನಿಮ್ಮನ್ನ ಚುಚ್ಚುತ್ತಾ ಇದ್ರೆ, ‘ನಾನು ನಿಮ್ಮನ್ನ ಕ್ಷಮಿಸ್ತೀನಿ’ ಅಂತ ಯೆಹೋವ ಕೊಟ್ಟಿರೋ ಮಾತನ್ನ ನೆನಪಿಸ್ಕೊಳ್ಳಿ. ಸಾಮಾನ್ಯವಾಗಿ ಮನುಷ್ಯರು ‘ಕ್ಷಮಿಸಿದ್ದೀನಿ’ ಅಂತ ಹೇಳ್ತಾರೆ, ಆದ್ರೆ ಮುಂದೆ ಒಂದಿನ ಅದನ್ನ ಮತ್ತೆ ನೆನಪಿಸ್ಕೊಳ್ತಾರೆ. ಆದ್ರೆ ಯೆಹೋವ ಹಾಗಲ್ಲ, ಆತನು ನಿಜವಾಗ್ಲೂ ಉದಾರವಾಗಿ, ಪೂರ್ತಿಯಾಗಿ ಕ್ಷಮಿಸ್ತಾನೆ. (ಯೆಶಾ. 57:16) ಯೆಹೋವ ದೇವ್ರಿಗೆ ನಾವು ಹಿಂದೆ ಯಾವ ತಪ್ಪು ಮಾಡಿದ್ವಿ ಅನ್ನೋದು ಮುಖ್ಯ ಅಲ್ಲ. ಈಗ ಹೇಗಿದ್ದೀವಿ, ಮುಂದೆ ಎಂಥಾ ವ್ಯಕ್ತಿ ಆಗೋಕೆ ಪ್ರಯತ್ನ ಹಾಕ್ತಿದ್ದೀವಿ ಅನ್ನೋದೇ ಮುಖ್ಯ. (ಯೆಶಾ. 55:7) ಯೆಹೋವ ನಮ್ಮ ಮೇಲೆ ಇಷ್ಟು ಪ್ರೀತಿ, ಕರುಣೆ ಇಟ್ಟಿದ್ದಾನೆ ಅಂತ ನೋಡ್ದಾಗ ನಮಗೆ ಎಷ್ಟು ಖುಷಿ ಆಗುತ್ತಲ್ವಾ! ಹಾಗಾಗಿ ನಾವು ಹಿಂದೆ ಮಾಡಿರೋ ತಪ್ಪುಗಳು ನಮ್ಮ ಈಗಿನ ಖುಷಿನ ಮತ್ತು ಮುಂದೆ ಸಿಗೋ ಆಶೀರ್ವಾದನ ಕಿತ್ಕೊಳ್ಳೋಕೆ ಬಿಡದೇ ಇರೋಣ.
ನಾವು ಹಿಂದೆ ಮಾಡಿರೋ ತಪ್ಪಿಂದ ಯೆಹೋವ ನಮ್ಮನ್ನ ಅಳಿಯಲ್ಲ (ಪ್ಯಾರ 11 ನೋಡಿ)c
ತೀರಿ ಹೋಗಿರೋರನ್ನ ನೆನಸ್ಕೊಂಡು ಕುಗ್ಗಿ ಹೋದಾಗ
12. ನಾವು ಇಷ್ಟಪಡೋರು ಸತ್ತು ಹೋದಾಗ ಹೇಗನಿಸುತ್ತೆ?
12 ನಾವು ಇಷ್ಟಪಡೋರು ಸತ್ತು ಹೋದಾಗ ಆಗೋ ನೋವನ್ನ ಮಾತಲ್ಲಿ ಹೇಳೋಕಾಗಲ್ಲ. ವರ್ಷಗಳೇ ಕಳೆದ್ರೂ ಆ ನೋವು ಮಾಸಿ ಹೋಗಲ್ಲ. ಅಂಥ ಟೈಮಲ್ಲಿ, ‘ಯೆಹೋವ ಯಾಕೆ ಇದನ್ನೆಲ್ಲಾ ಆಗೋಕೆ ಬಿಟ್ರು?’ ಅನಿಸಿಬಿಡುತ್ತೆ. ಸಹೋದರ ಮೈಕಲ್‌ಗೂ ಹಾಗೆ ಅನಿಸ್ತು. ಅವ್ರ ಅಪ್ಪ-ಅಮ್ಮ ಬೆಂಕಿಯಲ್ಲಿ ಸುಟ್ಟು ಹೋದ್ರು. ಅವರು ಹೇಳೋದು, “ನನ್ನ ಹೃದಯ ನುಚ್ಚು ನೂರಾಯ್ತು. ನನಗೆ ಯೆಹೋವನ ಮೇಲೂ ಕೋಪ ಬಂತು. ಇದೆಲ್ಲಾ ಆಗೋಕೆ ಯೆಹೋವ ಯಾಕೆ ಬಿಟ್ರು ಅನಿಸ್ತು. ನಮ್ಮ ಅಪ್ಪ-ಅಮ್ಮನ ಸಾವಿಗೆ ಯೆಹೋವ ಕಾರಣ ಅಲ್ಲ ಅಂತ ನನಗೆ ಗೊತ್ತು. ಆದ್ರೆ ಅವರು ಸಾಯುವಾಗ ಯೆಹೋವ ತಡಿಲೂ ಇಲ್ವಲ್ಲಾ ಅಂತ ಅನಿಸಿಬಿಡ್ತು.” ನಾವಿಂಥ ನೋವಲ್ಲಿದ್ದಾಗ ಯೆಹೋವ ನಮಗೆ ಸಾಂತ್ವನ ಮತ್ತೆ ನಿರೀಕ್ಷೆಯನ್ನ ಹೇಗೆ ಕೊಡ್ತಾನೆ?
13. ನಮಗೆ ಸಾಂತ್ವನ ಕೊಡೋ ಯಾವ ಮಾತನ್ನ ಯೆಶಾಯ 25:8ರಲ್ಲಿ ಯೆಹೋವ ಹೇಳಿದ್ದಾನೆ?
13 ಯೆಶಾಯ 25:8 ಓದಿ. ‘ಮರಣವನ್ನ ಶಾಶ್ವತವಾಗಿ ನುಂಗಿಹಾಕ್ತೀನಿ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಸ್ವಲ್ಪ ಯೋಚಿಸಿ, ನಾವು ಇನ್ಮುಂದೆ ಸಾವಿನ ಮನೆಗೆ ಹೋಗಬೇಕಾಗಿರಲ್ಲ, ದುಃಖಪಡೋ ಅವಶ್ಯಕತೆನೂ ಇರಲ್ಲ. (ಯೆಶಾ. 35:10) ಅಷ್ಟೇ ಅಲ್ಲ, ನಾವು ಇಷ್ಟಪಡೋರನ್ನ ‘ಇಲ್ಲೇ ಮಣ್ಣು ಮಾಡಿದ್ದು’ ಅಂತ ನೆನಸ್ಕೊಂಡು ಕೊರಗೋ ಅಗತ್ಯನೂ ಇರಲ್ಲ. ಯಾಕಂದ್ರೆ ನೀವು ಇಷ್ಟಪಡೋರು ನಿಮ್ಮ ಕಣ್ಣು ಮುಂದೆನೇ ಆರೋಗ್ಯವಾಗಿ, ಖುಷಿಯಾಗಿ ಸದಾಕಾಲ ಇರ್ತಾರೆ. ಇದೆಲ್ಲ ಕೇಳೋಕಷ್ಟೇ ಚೆನ್ನಾಗಿರುತ್ತೆ. ಆದ್ರೆ ನಿಜ ಆಗಲ್ಲ ಅಂತ ಅಂದ್ಕೊಬೇಡಿ. ಈ ಮಾತು ಕೊಟ್ಟಿರೋದು ನಮ್ಮೆಲ್ರನ್ನೂ ಸೃಷ್ಟಿ ಮಾಡಿರೋ ಯೆಹೋವ ದೇವರು!—ಪ್ರಕ. 21:4, 5.
14. ಸತ್ತವರು ಮತ್ತೆ ಎದ್ದು ಬರೋ ಸಮಯದ ಬಗ್ಗೆ ಯೋಚಿಸಿದಾಗ ನಿಮಗೆ ಹೇಗನಿಸುತ್ತೆ? (ಯೆಶಾಯ 26:19) (ಚಿತ್ರ ನೋಡಿ.)
14 ಯೆಶಾಯ 26:19 ಓದಿ. ಇನ್ಮುಂದೆ ಯಾರೂ ಸಾಯದೇ ಇರೋ ತರ ಯೆಹೋವ ನೋಡ್ಕೊಳ್ಳೋದಷ್ಟೇ ಅಲ್ಲ, ಸತ್ತಿರೋರನ್ನೂ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಅದಕ್ಕೆ ಆತನು, “ನನ್ನ ಜನ್ರ ಶವಗಳಿಗೆ ಜೀವ ಬರುತ್ತೆ” ಅಂತ ಹೇಳಿದ್ದಾನೆ. ಇಲ್ಲಿ ‘ನನ್ನ ಜನರು’ ಅಂತ ಯೆಹೋವ ಹೇಳ್ತಾ ಇರೋದ್ರಿಂದ ‘ಸತ್ತಿರೋರನ್ನ ಎಬ್ಬಿಸೋ ಕರ್ತವ್ಯ ನನಗಿದೆ’ ಅಂತ ಮಾತು ಕೊಡ್ತಿದ್ದಾನೆ. ಹಾಗಾಗಿ ಅವ್ರನ್ನ ತನ್ನ ನೆನಪಲ್ಲಿ ಇಟ್ಕೊಂಡಿದ್ದಾನೆ. ತಾನು ನಿರ್ಧರಿಸಿರೋ ಸಮಯದಲ್ಲಿ ಅವ್ರನ್ನ ಆತನು ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಬೆಳಗ್ಗಿನ ಜಾವ ಬೀಳೋ ಇಬ್ಬನಿ, ಒಣಗಿ ಹೋಗಿರೋ ಎಷ್ಟೋ ಮರ ಗಿಡಗಳಿಗೆ ಜೀವ ತುಂಬುತ್ತೆ. ಅದೇ ತರ ಜೀವದ ಮೂಲ ಆಗಿರೋ ಯೆಹೋವ ಸತ್ತು ಹೋಗಿರೋ ನಮ್ಮವ್ರಿಗೆ ಮತ್ತೆ ಜೀವ ಬರೋ ತರ ಮಾಡ್ತಾನೆ. ಅವ್ರನ್ನ ಮತ್ತೆ ನೋಡಿದಾಗ, ಅಪ್ಪಿಕೊಂಡಾಗ ಎಷ್ಟು ಚೆನ್ನಾಗಿರುತ್ತಲ್ವಾ!—ಮಾರ್ಕ 5:42 ಹೋಲಿಸಿ.
ಸತ್ತುಹೋಗಿರೋ ನಮ್ಮ ಪ್ರಿಯರು ಖಂಡಿತ ಮತ್ತೆ ಜೀವಂತವಾಗಿ ಎದ್ದು ಬರ್ತಾರೆ (ಪ್ಯಾರ 14 ನೋಡಿ)
15. ಸತ್ತವ್ರನ್ನ ಮತ್ತೆ ಎಬ್ಬಿಸ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತು, ನಾವು ಸಾವಿನ ನೋವಲ್ಲೇ ಕೊರಗದೇ ಇರೋಕೆ ಹೇಗೆ ಸಹಾಯ ಮಾಡುತ್ತೆ?
15 ಸತ್ತಿರೋರನ್ನ ಮತ್ತೆ ಎಬ್ಬಿಸ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತು ನಮಗೆ ಈಗ ಆಗ್ತಿರೋ ನೋವನ್ನ ಪೂರ್ತಿ ತೆಗೆದುಹಾಕಲ್ಲ ನಿಜ. ಆದ್ರೂ ಈ ಮಾತು, ಸತ್ತಿರೋ ನಮ್ಮವ್ರನ್ನ ಯೆಹೋವ ಮರೆತಿಲ್ಲ ಅಂತ ಸಾಂತ್ವನ ಕೊಡುತ್ತೆ. ಈ ನಿರೀಕ್ಷೆನೇ ಸಹೋದರ ಮೈಕಲ್‌ಗೂ ಸಹಾಯ ಮಾಡ್ತು. ಅವರು ಹೇಳೋದು, “ಯೆಶಾಯ 26:19ರಲ್ಲಿರೋ ಮಾತು ಯೆಹೋವ, ನನ್ನ ಅಪ್ಪ-ಅಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ಅರ್ಥಮಾಡಿಸ್ತು. ಹಾಗಾಗಿ ಅವ್ರನ್ನ ಮತ್ತೆ ಎಬ್ಬಿಸೋ ತನಕ ಯೆಹೋವ ಅವ್ರನ್ನ ಮರೆಯಲ್ಲ ಅಂತ ನಂಗೆ ಗೊತ್ತಾಯ್ತು. ಇದ್ರಿಂದ ನನಗೆ ಬೇಕಾಗಿರೋ ಸಾಂತ್ವನ ಮತ್ತು ಬಲ ಸಿಕ್ತು.” ಹಾಗಾಗಿ ಸಾವಿನ ನೋವಲ್ಲೇ ಕೊರಗೋ ಅಗತ್ಯ ಇಲ್ಲ. ‘ಮತ್ತೆ ಜೀವಂತವಾಗಿ ಎಬ್ಬಿಸ್ತೀನಿ’ ಅಂತ ಯೆಹೋವ ಕೊಟ್ಟಿರೋ ಮಾತನ್ನ ಯಾವಾಗ್ಲೂ ಯೋಚಿಸ್ತಾ ಇರೋಣ. ಆಗ ಅದು ಈಗ ಆಗ್ತಿರೋ ನೋವನ್ನ ತಾಳ್ಕೊಳ್ಳೋಕೆ ಸಹಾಯ ಆಗುತ್ತೆ.
16. ನೀವು ಕಷ್ಟಪಡ್ತಾ ಇರುವಾಗ ಬೈಬಲಿನಲ್ಲಿರೋ ಯಾವ ವಚನ ನಿಮಗೆ ಸಾಂತ್ವನ ಕೊಟ್ಟಿದೆ?
16 ಯೆಶಾಯ ಪುಸ್ತಕನ ಸಾಂತ್ವನದ ಚಿಲುಮೆ ಅಂತ ಹೇಳಿದ್ದು ಎಷ್ಟು ನಿಜ ಅಲ್ವಾ? ಇಲ್ಲಿವರೆಗೂ ಆ ಪುಸ್ತಕದಿಂದ ಸಾಂತ್ವನ ಕೊಡೋ ಎಷ್ಟೋ ವಚನಗಳನ್ನ ನೋಡಿದ್ವಿ. ಅದು ನಮ್ಮ ಪರಿಸ್ಥಿತಿ ದಿಢೀರಂತ ಬದಲಾದಾಗ, ತಪ್ಪು ಮಾಡಿದ್ರಿಂದ ಮನಸಾಕ್ಷಿ ನಮ್ಮನ್ನ ಕಿತ್ತು ತಿನ್ನುವಾಗ ಮತ್ತು ಸಾವಿನ ನೋವಲ್ಲಿ ಕೊರಗುವಾಗ ಹೇಗೆ ಸಹಾಯ ಮಾಡುತ್ತೆ ಅಂತ ತಿಳ್ಕೊಂಡ್ವಿ. ತನ್ನ ವಾಕ್ಯನ ಬಳಸಿ ಯೆಹೋವ ನಮಗೆ ಈ ತರ ಸಾಂತ್ವನ ಕೊಡ್ತಾ ಇರೋದಕ್ಕೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿನೇ! (ಕೀರ್ತ. 94:19) ಒಬ್ಬೊಬ್ರಿಗೆ ಒಂದೊಂದು ವಚನ ಸಾಂತ್ವನ ಕೊಡುತ್ತೆ. ನೀವು ಕಷ್ಟದಲ್ಲಿರುವಾಗ ನಿಮಗೆ ಯಾವುದಾದ್ರೂ ವಚನ ಸಾಂತ್ವನ ಕೊಟ್ಟಿದ್ಯಾ? ಹಾಗಾದ್ರೆ ಆ ವಚನವನ್ನ ಮರೆಯದೇ ಇರೋಕೆ ಬಾಯಿಪಾಠ ಮಾಡಿ, ಒಂದು ಪುಸ್ತಕದಲ್ಲಿ ಬರೆದಿಡಿ ಅಥವಾ ನಿಮ್ಮ ಕಣ್ಣಿಗೆ ಕಾಣಿಸೋ ಜಾಗದಲ್ಲಿ ಅದನ್ನ ಅಂಟಿಸಿ. ಯೆಹೋವ ಬೈಬಲಿನಲ್ಲಿ ಸಾಂತ್ವನದ ನಿಧಿಗಳನ್ನ ಅಡಗಿಸಿ ಇಟ್ಟಿದ್ದಾನೆ. ನೀವು ಅದನ್ನ ಚೆನ್ನಾಗಿ ಹುಡುಕಿ ತೆಗಿಬೇಕು ಅನ್ನೋದೇ ಆತನ ಆಸೆ.
ಗೀತೆ 3 ಯೆಹೋವ ನಮ್ಮ ಆಶ್ರಯ, ವಿಶ್ವಾಸ
a “ಜೊತೆಗಿರುವ ಯೆಹೋವ” ಅನ್ನೋ ಬ್ರಾಡ್‌ಕಾಸ್ಟಿಂಗ್ ಹಾಡನಲ್ಲಿ ಬರೋ ಸಾಲುಗಳು.
b ಚಿತ್ರ ವಿವರಣೆ: ಬೆತೆಲಿನಿಂದ ಹೊರಗೆ ಬಂದಿರೋ ಒಂದು ದಂಪತಿಯನ್ನ ಸಭೆಯವರು ಸ್ವಾಗತಿಸ್ತಿದ್ದಾರೆ.
c ಚಿತ್ರ ವಿವರಣೆ: ಒಬ್ಬ ಸಹೋದರ ತಾನು ಹಿಂದೆ ಮಾಡಿರೋ ತಪ್ಪಿಂದ ಹೊರಗೆ ಬಂದು ಈಗ ಪಯನೀಯರ್ ಸೇವಾ ಶಾಲೆಯನ್ನ ಹಾಜರಾಗ್ತಿದ್ದಾನೆ.