ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜುಲೈ ಪು. 2-7
  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಂಬಿಕೆ ಮತ್ತು ದೀನತೆ ತೋರಿಸಿ
  • ಅನ್ಯಾಯ ಆದಾಗ ತಾಳ್ಮೆ ತೋರಿಸಿ
  • ನಿಷ್ಠೆಯಿಂದ ಯೆಹೋವನ ಸೇವೆ ಮಾಡಿ
  • ವಿವೇಕಿಗಳಾದ ಗಿಬ್ಯೋನ್ಯರು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಗಿಬ್ಯೋನ್ಯರಿಂದ ಕಲಿಯೋ ಪಾಠಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋಶುವ ಮತ್ತು ಗಿಬ್ಯೋನ್ಯರು
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜುಲೈ ಪು. 2-7

ಸೆಪ್ಟೆಂಬರ್‌ 7-13, 2026

ಗೀತೆ 88 ನಿನ್ನ ದಾರಿಗಳನ್ನ ನನಗೆ ಕಲಿಸು

ಗಿಬ್ಯೋನ್ಯರಿಂದ ಕಲಿಯೋ ಪಾಠಗಳು

“ಗಿಬ್ಯೋನಿನ ಜನ್ರು ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಂಡು ಅವ್ರ ಜೊತೆ ಸೇರಿದ್ದಾರೆ.”—ಯೆಹೋ. 10:1

ಈ ಲೇಖನದಲ್ಲಿ ಏನಿದೆ?

ಗಿಬ್ಯೋನ್ಯರಿಂದ ಮತ್ತು ಯೆಹೋವ ಅವ್ರ ಜೊತೆ ನಡ್ಕೊಂಡ ರೀತಿಯಿಂದ ನಾವೇನು ಪಾಠ ಕಲಿಬಹುದು ಅಂತ ನೋಡೋಣ.

1-2. ಗಿಬ್ಯೋನ್ಯರ ಬಗ್ಗೆ ನಾವು ಯಾಕೆ ಕಲಿಬೇಕು?

ಅದು ಸಾ.ಶ.ಪೂ. 1473ನೇ ಇಸವಿ. ಇಸ್ರಾಯೇಲ್‌ ಜನಾಂಗ ಈಗಷ್ಟೇ ಮಾತು ಕೊಟ್ಟ ದೇಶವನ್ನ ಆಕ್ರಮಿಸೋಕೆ ಶುರು ಮಾಡಿದೆ. ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಪಟ್ಟಣಗಳ ವಿರುದ್ಧ ಹೋರಾಡಿ ಅದ್ಭುತ ಜಯ ಸಾಧಿಸಿದ್ದಾರೆ. ಆದ್ರೆ ಆಮೇಲೆ ಒಂದು ಗುಂಪಿನ ಜನ, ‘ನಾವು ತುಂಬ ದೂರದಿಂದ ಬಂದವರು, ನಮಗೆ ನಿಮ್ಮ ಜೊತೆ ಯುದ್ಧ ಮಾಡೋಕೆ ಇಷ್ಟ ಇಲ್ಲ. ಶಾಂತಿಯಿಂದ ಇರೋಕೆ ಇಷ್ಟ ಪಡ್ತೀವಿ’ ಅಂತ ಅವ್ರ ಹತ್ರ ಶಾಂತಿ ಒಪ್ಪಂದ ಮಾಡ್ಕೊಳ್ತಾರೆ.

2 ಆ ಗುಂಪಲ್ಲಿ ಗಿಬ್ಯೋನ್ಯ ಜನಾಂಗದವರಿದ್ರು. ಗಿಬ್ಯೋನ್ಯರ ಬಗ್ಗೆ ಬೈಬಲಲ್ಲಿ ಇದೇ ಮೊದಲನೇ ಸಲ ಹೇಳಿರೋದು. ಆದ್ರೆ ಅದಾದ್ಮೇಲೆ ಅವರು ನೂರಾರು ವರ್ಷಗಳ ಕಾಲ ಇಸ್ರಾಯೇಲ್ಯರ ಜೊತೆಯಲ್ಲೇ ಜೀವಿಸ್ತಾ ಇದ್ದಿದ್ರಿಂದ ಇವ್ರ ಬಗ್ಗೆ ಮತ್ತೆಮತ್ತೆ ಹೇಳಲಾಗಿದೆ. ಇವ್ರಿಂದ ನಾವು ಒಳ್ಳೊಳ್ಳೆ ಪಾಠಗಳನ್ನ ಕಲಿಬಹುದು. ಜೊತೆಗೆ ಯೆಹೋವನಲ್ಲಿರೋ ಒಳ್ಳೆ ಗುಣಗಳ ಬಗ್ಗೆನೂ ಅರ್ಥ ಮಾಡ್ಕೊಬಹುದು.

ನಂಬಿಕೆ ಮತ್ತು ದೀನತೆ ತೋರಿಸಿ

3. (ಎ) ಗಿಬ್ಯೋನ್ಯರು ಯಾರು? (ಬಿ) ಅವರು ಯಾಕೆ ಇಸ್ರಾಯೇಲ್ಯರ ಜೊತೆ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಬಯಸಿದ್ರು?

3 ಇಸ್ರಾಯೇಲ್ಯರು ಮಾತು ಕೊಟ್ಟ ದೇಶಕ್ಕೆ ಕಾಲಿಟ್ಟಾಗ ಕಾನಾನ್ಯರ ಏಳು ಬಲಿಷ್ಠ ದೇಶಗಳ ವಿರುದ್ಧ ಹೋರಾಡಿ ಸೋಲಿಸಬೇಕಿತ್ತು. ಈ ದೇಶಗಳಲ್ಲಿ ಜನಸಂಖ್ಯೆ ಮತ್ತು ಸೈನಿಕರ ಸಂಖ್ಯೆ ಇಸ್ರಾಯೇಲ್ಯರಿಗಿಂತ ಜಾಸ್ತಿ ಇತ್ತು. ಈ ಏಳು ದೇಶಗಳಲ್ಲಿ ಒಂದು ದೇಶ ಹಿವ್ವಿಯರದ್ದು. ಈ ಹಿವ್ವಿಯರಲ್ಲಿ ಒಂದು ಬಲಿಷ್ಠ ಜನಾಂಗ ಗಿಬ್ಯೋನ್ಯರದ್ದು. ಗಿಬ್ಯೋನ್ಯರ ಪಟ್ಟಣದ ಸುತ್ತಲೂ ಒಂದು ಬಲಿಷ್ಠವಾದ ಕೋಟೆ ಇತ್ತು. (ಧರ್ಮೋ. 7:1) ಗಿಬ್ಯೋನ್ಯರ ಗಂಡಸ್ರೆಲ್ಲ ವೀರ ಸೈನಿಕರಾಗಿದ್ದರು. (ಯೆಹೋ. 10:2) ಕಾನಾನಿನ ಎಲ್ಲಾ ದೇಶಗಳು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡ್ಬೇಕು ಅಂತ ನಿರ್ಧಾರ ಮಾಡಿದ್ರು. ಆದ್ರೆ ಗಿಬ್ಯೋನ್ಯರು ಮಾತ್ರ ಇದ್ರ ಬಗ್ಗೆ ಯೋಚನೆನೂ ಮಾಡೋಕೆ ಹೋಗ್ಲಿಲ್ಲ. ಯಾಕಂದ್ರೆ ಇಸ್ರಾಯೇಲ್ಯರನ್ನ ಕಾಪಾಡೋಕೆ ಸ್ವತಃ ಯೆಹೋವನೇ ಯುದ್ಧ ಮಾಡ್ತಿದ್ದಾನೆ ಅಂತ ಅರ್ಥ ಮಾಡಿಕೊಂಡಿದ್ರು. ಈಗಾಗ್ಲೇ ಯೆಹೋವನು ಇಸ್ರಾಯೇಲ್ಯರಿಗೆ, ‘ಕಾನಾನ್ಯರನ್ನ ನಾಶ ಮಾಡ್ತೀನಿ, ಅವ್ರ ದೇಶವನ್ನ ನಿಮಗೆ ಕೊಡ್ತೀನಿ’ ಅಂತ ಮಾತು ಕೊಟ್ಟಿದ್ದು ಗಿಬ್ಯೋನ್ಯರಿಗೂ ಗೊತ್ತಿತ್ತು. (ವಿಮೋ. 34:11; ಯೆಹೋ. 9:24) ಹಾಗಾಗಿ ಗಿಬ್ಯೋನ್ಯರು ಇಸ್ರಾಯೇಲ್ಯರ ಹತ್ರ ಶಾಂತಿ ಒಪ್ಪಂದ ಮಾಡ್ಕೊಬೇಕು ಅಂತ ಗಿಲ್ಗಾಲಿನಲ್ಲಿದ್ದ ಯೆಹೋಶುವನ ಹತ್ರ ಒಂದು ಗುಂಪನ್ನa ಕಳಿಸಿದ್ರು.

4. (ಎ) ಯೆಹೋಶುವ 9:8-13ರ ಪ್ರಕಾರ ಗಿಬ್ಯೋನ್ಯರು ಹೇಗೆ ನಾಟಕ ಮಾಡಿದ್ರು? (ಚಿತ್ರ ನೋಡಿ.) (ಬಿ) ಅದು ನಾಟಕ ಅಂತ ಇಸ್ರಾಯೇಲ್ಯರಿಗೆ ಗೊತ್ತಾದಾಗ ಏನಾಯ್ತು?

4 ಯೆಹೋಶುವ 9:8-13 ಓದಿ. ಗಿಬ್ಯೋನ್ಯರು ಇಸ್ರಾಯೇಲ್ಯರ ಮುಂದೆ “ದೂರ ದೇಶದಿಂದ ಬಂದಿದ್ದೀವಿ “ಅಂತ ನಾಟಕ ಆಡಿದ್ರು. ಜೊತೆಗೆ ‘ಯೆಹೋವನು ಇಸ್ರಾಯೇಲ್ಯರಿಗೆ ಈಜಿಪ್ಟ್‌ ವಿರುದ್ಧ ಹೋರಾಡೋಕೆ, ರಾಜ ಸಿಹೋನ ಮತ್ತು ಓಗನ ವಿರುದ್ಧ ಗೆಲ್ಲೋಕೆ ಹೇಗೆ ಸಹಾಯ ಮಾಡಿದನು ಅನ್ನೋದು ನಮಗೆ ಗೊತ್ತು’ ಅಂದ್ರು. ಆದ್ರೆ ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಪಟ್ಟಣವನ್ನ ವಶ ಮಾಡಿಕೊಂಡಿದ್ರ ಬಗ್ಗೆ ಅವರು ಮಾತಾಡ್ಲಿಲ್ಲ. ಈ ಪಟ್ಟಣಗಳು ಆಗಷ್ಟೇ ನಾಶ ಆಗಿತ್ತು. ಆ ವಿಷ್ಯ ಇನ್ನೂ ದೂರದ ದೇಶದವರೆಗೆ ತಲುಪೋಕೆ ಸಾಧ್ಯ ಇರ್ಲಿಲ್ಲ. ಹಾಗಾಗಿ ಅದ್ರ ಬಗ್ಗೆ ಮಾತಾಡದೆ ಜಾಣತನ ತೋರಿಸಿದ್ರು. ಆದ್ರೆ ಇಸ್ರಾಯೇಲಿನ ನಾಯಕರು ಯೆಹೋವನನ್ನ ಒಂದು ಮಾತೂ ಕೇಳದೆ ಗಿಬ್ಯೋನ್ಯರು ಹೇಳಿದ್ದನ್ನ ನಂಬ್ಕೊಂಡು ಅವ್ರ ಜೊತೆ ಶಾಂತಿ ಒಪ್ಪಂದ ಮಾಡ್ಕೊಂಡ್ರು. (ಯೆಹೋ. 9:14, 15) ಇದಾಗಿ ಸ್ವಲ್ಪದ್ರಲ್ಲೇ ಗಿಬ್ಯೋನ್ಯರು ಮಾಡಿದ್ದು ನಾಟಕ ಅಂತ ಇಸ್ರಾಯೇಲ್ಯರಿಗೆ ಗೊತ್ತಾಯ್ತು. ಆದ್ರೆ ಅವರು ಈಗಾಗ್ಲೇ “ದೇವರಾದ ಯೆಹೋವನ ಮೇಲೆ ಆಣೆಯಿಟ್ಟು ಅವ್ರಿಗೆ ಮಾತು ಕೊಟ್ಟಿದ್ರಿಂದ” ಅದನ್ನ ವಾಪಸ್‌ ತಗೊಳೋಕೆ ಆಗ್ಲಿಲ್ಲ. (ಯೆಹೋ. 9:16-19) ಅದಕ್ಕೇ ಗಿಬ್ಯೋನ್ಯರಿಗೆ ‘ನೀವು ನಮ್ಮ ಜೊತೆನೇ ಇರಬಹುದು, ಆದ್ರೆ ದಾಸರ ಕೆಲಸ ಮಾಡಬೇಕಾಗುತ್ತೆ’ ಅಂತ ಹೇಳಿದ್ರು. ಹಾಗಾಗಿ ಅವ್ರಿಗೆ ‘ಎಲ್ಲ ಇಸ್ರಾಯೇಲ್ಯರಿಗಾಗಿ, ಯೆಹೋವ ಆರಿಸ್ಕೊಳ್ಳೋ ಜಾಗದಲ್ಲಿರೋ ಯಜ್ಞವೇದಿಗಾಗಿ ಸೌದೆ ಕೂಡಿಸೋ, ನೀರು ತುಂಬಿಸೋ’ ಕೆಲಸವನ್ನ ಕೊಡಲಾಯ್ತು.—ಯೆಹೋ. 9:27.

ಕೆಲವು ಗಿಬ್ಯೋನ್ಯರು ಯೆಹೋಶುವ ಮತ್ತು ಇನ್ನು ಕೆಲವು ಇಸ್ರಾಯೇಲ್ಯ ಸೈನಿಕರ ಮುಂದೆ ಮಂಡಿಯೂರಿ ಬೇಡ್ಕೊತ್ತಿದ್ದಾರೆ. ಅವರು ತಮ್ಮ ಹರಿದಿರೋ ಬಟ್ಟೆಗಳನ್ನ ಮತ್ತು ಚರ್ಮದ ಚೀಲನ ತೋರಿಸ್ತಿದ್ದಾರೆ.

ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಗಿಬ್ಯೋನ್ಯರು ಯೆಹೋಶುವನ ಮುಂದೆ ನಾಟಕ ಆಡಿದ್ರು (ಪ್ಯಾರ 4 ನೋಡಿ)


5. ಗಿಬ್ಯೋನ್ಯರು ಯೆಹೋವನ ಮೇಲೆ ನಂಬಿಕೆ ಇದೆ ಅಂತ ಹೇಗೆ ತೋರಿಸ್ಕೊಟ್ರು?

5 ಗಿಬ್ಯೋನ್ಯರು ಇಸ್ರಾಯೇಲ್ಯರ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಅಮೋರಿಯ ರಾಜರ ಕಿವಿಗೆ ಬಿತ್ತು. ಅದಕ್ಕೆ ಐದು ಅಮೋರಿಯ ರಾಜರು ಗಿಬ್ಯೋನಿನ ಮೇಲೆ ಮುತ್ತಿಗೆ ಹಾಕಿದ್ರು. ಆಗ ಗಿಬ್ಯೋನ್ಯರು ‘ನಮ್ಮನ್ನ ಕಾಪಾಡು’ ಅಂತ ಯೆಹೋಶುವನನ್ನ ಬೇಡ್ಕೊಂಡ್ರು. (ಯೆಹೋ. 10:3-7) ಅದಕ್ಕೆ ಯೆಹೋಶುವ ಸೈನ್ಯ ತಗೊಂಡು ಯುದ್ಧಕ್ಕೆ ಹೋದನು. ಯೆಹೋವ ಆ ಸೈನ್ಯವನ್ನ ಆಶೀರ್ವದಿಸಿದನು. ದೊಡ್ಡ ಆಲಿಕಲ್ಲಿನ ಮಳೆ ಬಂದು ಅಮೋರಿಯರ ಸೈನಿಕರನ್ನ ಪೂರ್ತಿ ಸೋಲಿಸ್ತು. ಅದ್ಭುತವಾಗಿ ಸೂರ್ಯ-ಚಂದ್ರರು ಚಲಿಸದೆ ನಿಂತುಬಿಟ್ರು. (ಯೆಹೋ. 10:9-14) ನೋಡಿದ್ರಾ, ಗಿಬ್ಯೋನ್ಯರು ಶಾಂತಿ ಒಪ್ಪಂದ ಮಾಡಿಕೊಂಡ್ರು ಮತ್ತು ಕಷ್ಟ ಬಂದಾಗ ಸಹಾಯಕ್ಕಾಗಿ ಯೆಹೋಶುವನನ್ನ ಬೇಡಿಕೊಂಡರು. ಇದ್ರಿಂದ ಗಿಬ್ಯೋನ್ಯರಿಗೆ ಯೆಹೋವನ ಮೇಲೆ ಎಷ್ಟು ನಂಬಿಕೆ ಇತ್ತು ಅಂತ ಗೊತ್ತಾಗುತ್ತೆ.

6. ಯೆಹೋವನು ಗಿಬ್ಯೋನ್ಯರ ಜೊತೆ ನಡ್ಕೊಂಡ ರೀತಿಯಿಂದ ನಾವೇನು ಕಲಿಬಹುದು?

6 ಈ ಘಟನೆಯಿಂದ ನಾವು ಯೆಹೋವನ ಬಗ್ಗೆ ಏನು ಕಲಿತೀವಿ? ಯೆಹೋವ ದೀನತೆ ಮತ್ತು ಕರುಣೆ ಇರೋ ದೇವರು. ಈ ಹಿಂದೆ ಯೆಹೋವನು ಇಸ್ರಾಯೇಲ್ಯರಿಗೆ “ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು” ಅಂತ ಹೇಳಿದ್ದನು. (ಅರ. 33:51, 52) ಆದ್ರೆ ಇಸ್ರಾಯೇಲ್ಯರು ಶಾಂತಿ ಒಪ್ಪಂದ ಮಾಡ್ಕೊಂಡಿದ್ರಿಂದ ಗಿಬ್ಯೋನ್ಯರು ಅಲ್ಲೇ ಇರೋಕೆ ಯೆಹೋವ ಕರುಣೆ ತೋರಿಸಿ ಒಪ್ಕೊಂಡನು. ಇಸ್ರಾಯೇಲಿನ ನಾಯಕರು ತನ್ನನ್ನ ಒಂದು ಮಾತೂ ಕೇಳದೇ ಒಪ್ಪಂದ ಮಾಡ್ಕೊಂಡಿದ್ರೂ ಯೆಹೋವ ಅವರ ಮೇಲೆ ಕೋಪ ಮಾಡ್ಕೊಳ್ಳಲಿಲ್ಲ. ಅದಕ್ಕೆ ಅವರು ಮಾತು ಕೊಟ್ಟಂತೆ ಗಿಬ್ಯೋನ್ಯರಿಗೆ ಆತನು ಆಶ್ರಯ ಕೊಟ್ಟನು ಮತ್ತು ಅವರನ್ನು ಅದ್ಭುತವಾಗಿ ಕಾಪಾಡಿದನು.—ಯೆಹೋ. 9:26; 11:19.

7. ಗಿಬ್ಯೋನ್ಯರ ತರ ನಾವು ಹೇಗೆ ನಂಬಿಕೆ ಮತ್ತು ದೀನತೆ ತೋರಿಸಬಹುದು? (ಚಿತ್ರ ನೋಡಿ.)

7 ಗಿಬ್ಯೋನ್ಯರಿಂದ ನಾವು ಯಾವ ಪಾಠ ಕಲಿಬಹುದು? ಅವತ್ತು ಗಿಬ್ಯೋನ್ಯರಿಗೆ ಯೆಹೋವ ದೇವ್ರ ಬಗ್ಗೆ ಗೊತ್ತಿದ್ದಕ್ಕಿಂತ ಹೆಚ್ಚು ವಿಷ್ಯಗಳನ್ನ ಇವತ್ತು ನಾವು ತಿಳ್ಕೊಂಡಿದ್ದೀವಿ. ಹಾಗಾಗಿ ನಾವು ಯೆಹೋವ ದೇವರ ಮೇಲೆ ಬೆಟ್ಟದಷ್ಟು ನಂಬಿಕೆ ಬೆಳೆಸ್ಕೊಬೇಕು. (ಕೀರ್ತ. 40:4, 5) ನಾವು ಅವ್ರ ತರ ಯೆಹೋವನ ಸೇವೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡೋಕೂ ರೆಡಿ ಇರಬೇಕು. (ಯೆಹೋ. 9:23, 27) ಲೂಕ್‌ ಅನ್ನೋ ಒಬ್ಬ ಯುವ ಸಹೋದರ ಬೆತೆಲಲ್ಲಿ ತುಂಬ ವರ್ಷಗಳಿಂದ ಸೇವೆ ಮಾಡ್ತಿರೋ ಒಬ್ಬ ವಯಸ್ಸಾದ ಸಹೋದರನನ್ನ ಗಮನಿಸಿದ. ಆ ವಯಸ್ಸಾದ ಸಹೋದರನಿಗೆ ಬೆತೆಲಲ್ಲಿ ಮಾಡೋಕೆ ತುಂಬ ಕೆಲಸ ಇತ್ತು, ದೊಡ್ಡ ಜವಾಬ್ದಾರಿ ಇತ್ತು. ಹಾಗಿದ್ರೂ ರಾಜ್ಯ ಸಭಾಗೃಹ ನಿರ್ಮಾಣ ಕೆಲಸ ನಡಿತಾ ಇದ್ದಾಗ ಒಂದು ರಾತ್ರಿ ವಸ್ತುಗಳನ್ನ ಕಾಯೋ ಕೆಲಸ ಮಾಡಿದ್ರು. ಲೂಕ್‌ ಹೇಳೋದು, “ನಮ್ಮಲ್ಲಿ ದೀನತೆ ಇದೆ ಅಂತ ನಾವು ಅಂದ್ಕೊಂಡ್ರೆ ಸಾಕಾಗಲ್ಲ. ನಾವು ಯಾವ ರೀತಿ ಕೆಲಸಗಳನ್ನ ಮಾಡ್ತೀವಿ, ಯಾವ ರೀತಿ ಕೆಲಸಗಳನ್ನ ಮಾಡಲ್ಲ ಅನ್ನೋದ್ರಲ್ಲಿ ನಮ್ಮಲ್ಲಿ ದೀನತೆ ಇದ್ಯಾ ಇಲ್ವಾ ಅಂತ ಗೊತ್ತಾಗುತ್ತೆ.” ನಮಗೆ ಯಾವುದೇ ಕಷ್ಟಗಳು ಬಂದ್ರೂ ನಾವು ಯೆಹೋವನ ಮೇಲೆ ಪ್ರತಿದಿನ ಆತುಕೊಳ್ಳೋಣ. ಸಂಘಟನೆಯಲ್ಲಿ ನಮಗೆ ಯಾವುದೇ ನೇಮಕ ಸಿಕ್ಕಿದ್ರೂ ದೀನತೆಯಿಂದ ಅದನ್ನ ಮಾಡೋಣ.

ಚಿತ್ರ: ಚಿಕ್ಕ-ಪುಟ್ಟ ಕೆಲಸ ಮಾಡ್ತಿರೋ ಚಿತ್ರ. 1. ಒಬ್ಬ ಗಿಬ್ಯೋನ ನೀರಿನ ಚೀಲವನ್ನ ಎತ್ಕೊಂಡು ಹೋಗ್ತಿದ್ದಾನೆ. 2. ಒಬ್ಬ ವಯಸ್ಸಾದ ಸಹೋದರ ರಾಜ್ಯ ಸಭಾಗೃಹದಲ್ಲಿ ಗಾರ್ಡನ್‌ ಕೆಲಸ ಮಾಡ್ತಿದ್ದಾನೆ.

ಗಿಬ್ಯೋನ್ಯರ ಹಾಗೆ ನಾವು ಚಿಕ್ಕಪುಟ್ಟ ಕೆಲಸಗಳನ್ನ ಮಾಡೋಕೂ ರೆಡಿ ಇರಬೇಕು (ಪ್ಯಾರ 7 ನೋಡಿ)


ಅನ್ಯಾಯ ಆದಾಗ ತಾಳ್ಮೆ ತೋರಿಸಿ

8. ರಾಜ ಸೌಲ ಗಿಬ್ಯೋನ್ಯರಿಗೆ ಯಾವ ಅನ್ಯಾಯ ಮಾಡಿದ?

8 ನೂರಾರು ವರ್ಷ ಆದಮೇಲೆ ರಾಜ ಸೌಲನ ಸಮಯದಲ್ಲಿ ಗಿಬ್ಯೋನ್ಯರ ಬಗ್ಗೆ ಬೈಬಲ್‌ ಮತ್ತೆ ಮಾತಾಡುತ್ತೆ. ‘ಸೌಲ, ಇಸ್ರಾಯೇಲ್‌ ಮತ್ತು ಯೆಹೂದದ ಜನ್ರ ಮೇಲಿನ ಹುಚ್ಚು ಅಭಿಮಾನದಿಂದಾಗಿ ಗಿಬ್ಯೋನ್ಯರನ್ನ ಸಾಯಿಸೋಕೆ ಪ್ರಯತ್ನಿಸಿದ್ದ,’b ಎಷ್ಟೋ ಗಿಬ್ಯೋನ್ಯರನ್ನ ಕೊಂದ. (2 ಸಮು. 21:2, 5, 6) ಗಿಬ್ಯೋನ್ಯರಿಗೆ ದೊಡ್ಡ ಅನ್ಯಾಯ ಆಯ್ತು. ನೂರಾರು ವರ್ಷಗಳಿಂದ ಇಸ್ರಾಯೇಲ್ಯರ ಮತ್ತು ಗಿಬ್ಯೋನ್ಯರ ಮಧ್ಯೆ ಇದ್ದ ಈ ಶಾಂತಿ ಒಪ್ಪಂದಕ್ಕೆ ಅವನು ಕಿಂಚಿತ್ತೂ ಬೆಲೆ ಕೊಡ್ಲಿಲ್ಲ.

9. ಗಿಬ್ಯೋನ್ಯರಿಗಾದ ಅನ್ಯಾಯನ ಯೆಹೋವ ದೇವರು ಮರೆತುಬಿಟ್ರಾ?

9 ಗಿಬ್ಯೋನ್ಯರಿಗಾದ ಅನ್ಯಾಯಕ್ಕೆ ತಕ್ಷಣ ನ್ಯಾಯ ಸಿಕ್ತಾ? ಇಲ್ಲ. ಸೌಲನ ನಂತ್ರ ದಾವೀದ ರಾಜನಾದ, ಆಗ ಇಸ್ರಾಯೇಲಿನಲ್ಲಿ ಮೂರು ವರ್ಷ ಬಿಡದೆ ಬರಗಾಲ ಬಂತು. ಈ ಬರಗಾಲಕ್ಕೆ ಕಾರಣ ಏನು ಅಂತ ದಾವೀದ ಯೆಹೋವನ ಹತ್ರ ಕೇಳಿದ. ಆಗ ಯೆಹೋವ, ‘ಸೌಲ ಮತ್ತು ಅವನ ಕುಟುಂಬದವರ ಮೇಲೆ ರಕ್ತಾಪರಾಧ ಇದೆ. ಅವರು ಹಲವಾರು ವರ್ಷಗಳ ಹಿಂದೆ ಗಿಬ್ಯೋನ್ಯರಿಗೆ ಅನ್ಯಾಯ ಮಾಡಿದ್ರು’ ಅಂತ ಹೇಳಿದನು.—2 ಸಮು. 21:1.

10. ನಿಯಮ ಪುಸ್ತಕನ ಗಿಬ್ಯೋನ್ಯರು ಪಾಲಿಸ್ತಿದ್ರು ಅಂತ 2 ಸಮುವೇಲ 21:3-6 ಹೇಗೆ ತೋರಿಸುತ್ತೆ?

10 2 ಸಮುವೇಲ 21:3-6 ಓದಿ. ‘ಸೌಲ ಗಿಬ್ಯೋನ್ಯರಿಗೆ ಮಾಡಿದ ಅನ್ಯಾಯಕ್ಕೆ ಪ್ರಾಯಶ್ಚಿತ್ತವಾಗಿ ನಾನೇನಾದ್ರೂ ಮಾಡಬಹುದಾ’ ಅಂತ ದಾವೀದ ಕೇಳಿದ. ಆದ್ರೆ ಗಿಬ್ಯೋನ್ಯರು, ಈಗ ದಾವೀದನ ಹತ್ರ ಈ ಅವಕಾಶ ಬಳಸ್ಕೊಂಡು ತುಂಬ ಹಣ ಮಾಡ್ಕೊಬಹುದು ಅಂದ್ಕೊಳ್ಳಲಿಲ್ಲ. ನಮಗೆ ಮಾಡಿರೋ ನಷ್ಟವನ್ನ “ಚಿನ್ನ, ಬೆಳ್ಳಿಯಿಂದ ಭರಿಸಕ್ಕಾಗಲ್ಲ” ಅಂತ ದಾವೀದನಿಗೆ ಹೇಳಿದ್ರು. (ಅರ. 35:30, 31) ಯಾಕಂದ್ರೆ ಗಿಬ್ಯೋನ್ಯರಿಗೆ ನಿಯಮ ಪುಸ್ತಕ ತುಂಬ ಚೆನ್ನಾಗಿ ಗೊತ್ತಿತ್ತು. ಪ್ರಾಣಕ್ಕೆ ಪ್ರಾಣನೇ ಪ್ರಾಯಶ್ಚಿತ್ತ. ಹಣ ಕೊಟ್ಟು ಕೊಲೆಗಾರನನ್ನ ಬಿಡಿಸೋಕೆ ಆಗಲ್ಲ ಅಂತ ಅವರು ಅರ್ಥ ಮಾಡ್ಕೊಂಡಿದ್ರು. ಅಷ್ಟೇ ಅಲ್ಲ, ರಾಜನ ಅನುಮತಿ ಇಲ್ಲದೇ ಕೊಲೆಗಾರರ ಪ್ರಾಣವನ್ನು ತೆಗೆಯೋಕೆ ಆಗಲ್ಲ ಅನ್ನೋದೂ ಅವ್ರಿಗೆ ಗೊತ್ತಿತ್ತು. ಅದಕ್ಕೇ ರಾಜ ದಾವೀದ, ಗಿಬ್ಯೋನ್ಯರನ್ನ ಕೊಲ್ಲೋದ್ರಲ್ಲಿ ಬಹುಶಃ ಭಾಗವಹಿಸಿದ್ದ ಸೌಲನ ಕುಟುಂಬಕ್ಕೆ ಸೇರಿದ ಏಳು ಗಂಡು ಮಕ್ಕಳನ್ನ ಅವರ ಕೈಗೆ ಒಪ್ಪಿಸ್ತಾನೆ. ಸ್ವಲ್ಪ ಸಮಯದ ನಂತರ ವಾಪಸ್‌ ಮಳೆ ಬರುತ್ತೆ, ಬರಗಾಲ ನಿಂತು ಹೋಗುತ್ತೆ.— 2 ಸಮು. 21:9, 10, 14.

11. ಈ ಘಟನೆಯಿಂದ ಯೆಹೋವನ ಬಗ್ಗೆ ನಾವೇನು ಕಲಿಬಹುದು?

11 ಈ ಘಟನೆಯಿಂದ ಯೆಹೋವನ ಬಗ್ಗೆ ಏನು ಕಲಿಬಹುದು? ಯೆಹೋವ ದೇವರು ನ್ಯಾಯವನ್ನ ಪ್ರೀತಿಸ್ತಾನೆ. (ಕೀರ್ತ. 37:28) ಇವತ್ತು ಜನ, ಬೇರೆ ದೇಶ, ಭಾಷೆ ಮತ್ತು ಬಣ್ಣದವ್ರ ಜೊತೆ ತುಂಬ ತಪ್ಪಾಗಿ ನಡ್ಕೊಳ್ತಾರೆ. ಆದ್ರೆ ಯೆಹೋವ, ಎಲ್ಲರೂ ಎಲ್ರ ಜೊತೆನೂ ನ್ಯಾಯವಾಗಿ ನಡ್ಕೋಬೇಕು ಅಂತ ಬಯಸ್ತಾನೆ. ತನ್ನ ಸೇವಕರಿಗೂ ಹಿಂಸೆ ಬಂದಿದೆ, ಅನ್ಯಾಯ ಆಗಿದೆ. ಯೆಹೋವನು ಸರಿಯಾಗಿರೋ ಸಮಯದಲ್ಲಿ ಅವ್ರಿಗೆ ನ್ಯಾಯ ಕೊಡ್ತಾನೆ. ಈ ಘಟನೆಯಿಂದ ನಾವು ಇನ್ನೇನು ಕಲಿಬಹುದು? ಇಸ್ರಾಯೇಲ್ಯರು ಗಿಬ್ಯೋನ್ಯರಿಗೆ ಒಂದ್ಸಲ ಮಾತು ಕೊಟ್ಟಮೇಲೆ ಅದ್ರ ಪ್ರಕಾರ ನಡ್ಕೋಬೇಕು ಅಂತ ಯೆಹೋವ ದೇವರು ಬಯಸಿದನು. ನಾವು ಸಹ ಯಾರಿಗಾದ್ರೂ ಒಂದ್ಸಲ ಮಾತು ಕೊಟ್ಟಮೇಲೆ ಅದೇ ತರ ನಡ್ಕೊಬೇಕಂತ ಯೆಹೋವ ನಮ್ಮಿಂದಾನೂ ಬಯಸ್ತಾನೆ.—ಆಮೋಸ 1:9 ಹೋಲಿಸಿ.

12. ನಮಗೆ ಅನ್ಯಾಯ ಆದಾಗ ಗಿಬ್ಯೋನ್ಯರ ತರ ನಾವು ಏನು ಮಾಡಬಹುದು?

12 ಗಿಬ್ಯೋನ್ಯರಿಂದ ನಾವು ಯಾವ ಪಾಠ ಕಲಿಬಹುದು? ಕೆಲವೊಮ್ಮೆ ನಮ್ಮ ಸಹೋದರರಿಂದ ನಮಗೆ ಅನ್ಯಾಯ ಆಗಬಹುದು. ಆದ್ರೂ ಯೆಹೋವನು ಆ ವಿಷ್ಯನ ಸರಿ ಮಾಡೋವರೆಗೂ ನಾವು ತಾಳ್ಮೆಯಿಂದ ಕಾಯಬೇಕು. ಆಗ ಯೆಹೋವನ ಮೇಲೆ ನಮಗೆ ನಂಬಿಕೆ ಇದೆ ಅಂತ ತೋರಿಸ್ತೀವಿ. ಸಹೋದರಿ ಲಾರ ಫ್ರೆಂಚ್‌ ಅವ್ರ ಅನುಭವ ನೋಡಿ. ಸಹೋದರಿ 1926ರಲ್ಲಿ ಕೆನಡಾ ಬೆತೆಲಲ್ಲಿ ಸೇವೆ ಶುರು ಮಾಡಿದ್ರು. 10 ವರ್ಷ ಆದ್ಮೇಲೆ ಅವ್ರಿಗೆ ಒಂದು ದೊಡ್ಡ ಅನ್ಯಾಯ ಆಯ್ತು. ಅವರು ಧರ್ಮಭ್ರಷ್ಟರ ಗುಂಪಿನ ಜೊತೇಲಿ ಸಹವಾಸ ಮಾಡ್ತಿದ್ದಾರೆ ಅಂತ ಆರೋಪ ಬಂತು. ಆಮೇಲೆ ಅವ್ರನ್ನ ಬೆತೆಲಿಂದ ಕಳಿಸಿಬಿಟ್ರು. ಆಗ ಸಹೋದರಿ ಫ್ರೆಂಚ್‌ ಯಾರನ್ನಾದ್ರೂ ದೂರಿದ್ರಾ? ಅವ್ರಿಗೆ ತುಂಬ ನೋವಾಯ್ತು. ಆದ್ರೆ ಯಾವತ್ತೂ ಅವರು ಯಾರನ್ನೂ ದೂರಲಿಲ್ಲ. ಬದಲಿಗೆ ಮುಂದಿನ 4 ವರ್ಷ ಹುರುಪಿನಿಂದ ಪಯನೀಯರ್‌ ಸೇವೆ ಮಾಡಿದ್ರು. ಅವರ ಈ ತಾಳ್ಮೆಗೆ ಏನಾದ್ರೂ ಪ್ರಯೋಜನ ಸಿಕ್ತಾ? 1940ರಲ್ಲಿ ಅವ್ರನ್ನ ಮತ್ತೆ ಬೆತೆಲಿಗೆ ಕರೆದ್ರು! ಅವ್ರಿಗೆ ಖುಷಿ ಆಯ್ತು, ತಮ್ಮ ಜೀವನದ ಮುಂದಿನ 50 ವರ್ಷ, ಕೊನೇ ಉಸಿರು ಇರೋವರೆಗೂ ಬೆತೆಲಲ್ಲಿ ನಂಬಿಗಸ್ತರಾಗಿ ಸೇವೆ ಮಾಡಿದ್ರು. ನಾವು ಸಹೋದರಿ ಫ್ರೆಂಚ್‌ ತರ ನಮಗೆ ಅನ್ಯಾಯ ಆದಾಗ ಸರಿಯಾಗಿರೋದನ್ನ ಮಾಡೋದನ್ನ ಬಿಡಬಾರದು. ಬದಲಿಗೆ ಯೆಹೋವ ತನ್ನ ಸಮಯದಲ್ಲಿ ನ್ಯಾಯ ಕೊಡೋವರೆಗೂ ತಾಳ್ಮೆಯಿಂದ ಕಾಯಬೇಕು.—ಯೆಶಾ. 26:3, 4.

ನಿಷ್ಠೆಯಿಂದ ಯೆಹೋವನ ಸೇವೆ ಮಾಡಿ

13. (ಎ) “ನೆತಿನಿಮ್‌” ಅಂದ್ರೆ ಯಾರು? (ಬಿ) ಇವರು ಬಂಧಿವಾಸದ ನಂತರ ಏನು ಮಾಡಿದರು?

13 ಸುಮಾರು 500 ವರ್ಷಗಳ ನಂತರ ಗಿಬ್ಯೋನ್ಯರ ಬಗ್ಗೆ ಬೈಬಲ್‌ ಮತ್ತೆ ಮಾತಾಡುತ್ತೆ. ಈಗ ಯೆಹೂದ್ಯರು ಬಾಬೆಲಿನ ಬಂಧಿವಾಸದಲ್ಲಿ 70 ವರ್ಷ ಕಳೆದಿದ್ದಾರೆ. ಸಾ.ಶ.ಪೂ. 537ರಲ್ಲಿ ಯೆಹೂದ್ಯರ ಒಂದು ಗುಂಪು ರಾಜ್ಯಪಾಲನಾದ ಜೆರುಬ್ಬಾಬೆಲನ ಜೊತೇಲಿ ಯೆರೂಸಲೇಮಿಗೆ ವಾಪಸ್‌ ಬಂತು. (ಎಜ್ರ 2:1, 2, 58) ಇನ್ನೊಂದು ಗುಂಪು ನಕಲುಗಾರನಾದ ಎಜ್ರನ ಜೊತೆ ಸಾ.ಶ.ಪೂ. 468ರಲ್ಲಿ ಯೆರೂಸಲೇಮಿಗೆ ವಾಪಸ್‌ ಬಂತು. (ಎಜ್ರ 7:1-7) ಈ ಎರಡೂ ಗುಂಪುಗಳು ಚಿಕ್ಕದಾಗಿತ್ತು. ಅವುಗಳಲ್ಲಿ “ನೆತಿನಿಮ್‌” ಕುಟುಂಬಗಳು ಇತ್ತು. (ಎಜ್ರ 2:58 ಮತ್ತು 7:7ರ ಪಾದಟಿಪ್ಪಣಿ ನೋಡಿ.) ಈ ನೆತಿನಿಮ್‌ ಕುಟುಂಬ ಇಸ್ರಾಯೇಲ್ಯರಲ್ಲದ ಜನ, ಆದ್ರೆ ದೇವಾಲಯದ ಸೇವಕರಾಗಿ ಕೆಲ್ಸ ಮಾಡ್ತಿದ್ದವರು. ಇವ್ರಲ್ಲಿ ಹೆಚ್ಚಿನವರು ಗಿಬ್ಯೋನಿನ ವಂಶದವರು ಆಗಿರೋ ಸಾಧ್ಯತೆ ಇದೆ.—“ನೆತಿನಿಮ್‌” ಅನ್ನೋ ಪದವಿವರಣೆ ನೋಡಿ.

14. ಗಿಬ್ಯೋನ್ಯರು ಹೇಗೆ ಯೆಹೋವನಿಗೆ ನಿಷ್ಠೆ ತೋರಿಸಿದ್ರು? (1 ಪೂರ್ವಕಾಲವೃತ್ತಾಂತ 9:2 ಮತ್ತು ಪಾದಟಿಪ್ಪಣಿ)

14 1 ಪೂರ್ವಕಾಲವೃತ್ತಾಂತ 9:2 ಮತ್ತು ಪಾದಟಿಪ್ಪಣಿ ಓದಿ. ಬಂಧಿವಾಸಿಗಳಾಗಿದ್ದ ಯೆಹೂದ್ಯರಲ್ಲಿ ಎಲ್ರೂ ಯೆರೂಸಲೇಮಿಗೆ ವಾಪಸ್‌ ಬರಲಿಲ್ಲ. ಯೆರೂಸಲೇಮಿಗೆ ಮೊದಲು ಬಂದವ್ರಲ್ಲಿ ಕೆಲವರು ದೇವಾಲಯದಲ್ಲಿ ಸೇವೆ ಮಾಡ್ತಿದ್ರು. ಇಷ್ಟಕ್ಕೂ ಯಾಕೆ ಎಲ್ರೂ ವಾಪಸ್‌ ಬರಲಿಲ್ಲ? ಯಾಕಂದ್ರೆ ಬಾಬೆಲಿನಲ್ಲಿದ್ದ ಯೆಹೂದ್ಯರಲ್ಲಿ ಹೆಚ್ಚಿನವರು ಹಣ, ಆಸ್ತಿನ ಈಗಾಗ್ಲೇ ಸಂಪಾದಿಸಿದ್ರು. ಈಗ ವಾಪಸ್‌ ಯೆರೂಸಲೇಮಿಗೆ ಹೋಗಿ ಆ ಗೋಡೆಗಳನ್ನ ಕಟ್ಟೋದು, ಅದಕ್ಕಾಗಿ ತ್ಯಾಗ ಮಾಡೋಕೆ ಅವ್ರಿಗೆ ಇಷ್ಟ ಇರ್ಲಿಲ್ಲ. ಆದ್ರೆ ನಂಬಿಗಸ್ತ ಬಂಧಿವಾಸಿಗಳಾಗಿದ್ದ ಕೆಲವ್ರಿಗೆ ಯೆರೂಸಲೇಮಿನ ಗೋಡೆಗಳನ್ನ ಕಟ್ಟಬೇಕು, ಸತ್ಯಾರಾಧನೆನ ಮತ್ತೆ ಶುರು ಮಾಡಬೇಕು ಅನ್ನೋ ಆಸೆ ಇತ್ತು. ಇವ್ರಲ್ಲಿ ಗಿಬ್ಯೋನ್‌ ವಂಶಸ್ಥರು ಕೂಡ ಇದ್ದಿರಬಹುದು. ಬೇರೆ ಯೆಹೂದ್ಯರ ತರ ಗಿಬ್ಯೋನ್ಯ ವಂಶಸ್ಥರಿಗೆ ಇಸ್ರಾಯೇಲಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಹಾಗಿದ್ರೂ ಅವರು ದೇವಾಲಯದಲ್ಲಿ ತಮಗೆ ಕೊಟ್ಟ ಕೆಲಸಗಳನ್ನ ಮಾಡೋಕೆ, ಯೆರೂಸಲೇಮಿನ ಗೋಡೆಗಳನ್ನ ಕಟ್ಟೋಕೆ ಅವರ ಕೈಯಲ್ಲಾದ ಎಲ್ಲಾ ಸಹಾಯ ಮಾಡಬೇಕಂತ ವಾಪಸ್‌ ಬಂದ್ರು.—ನೆಹೆ. 3:26.

15. ಗಿಬ್ಯೋನ್ಯರ ಈ ಘಟನೆಯಿಂದ ಯೆಹೋವ ದೇವರ ಬಗ್ಗೆ ನಾವು ಏನು ಕಲಿಬಹುದು?

15 ಈ ಘಟನೆಯಿಂದ ಯೆಹೋವನ ಬಗ್ಗೆ ನಾವು ಏನು ಕಲಿತೀವಿ? ತನ್ನನ್ನ ನಿಷ್ಠೆಯಿಂದ ಆರಾಧಿಸೋರನ್ನ ಯೆಹೋವ ತುಂಬ ಮೆಚ್ಕೊಳ್ತಾನೆ. ಅವರ ಕೈಯನ್ನ ಯಾವತ್ತೂ ಆತನು ಬಿಡಲ್ಲ. ಇದು ಗಿಬ್ಯೋನ್ಯರ ಉದಾಹರಣೆಯಿಂದ ಗೊತ್ತಾಗುತ್ತೆ. ಮಾತು ಕೊಟ್ಟ ದೇಶನ ಇಸ್ರಾಯೇಲ್ಯರು ಆಕ್ರಮಿಸಿದ ಯೆಹೋಶುವನ ಸಮಯದಿಂದ ಇಲ್ಲಿವರೆಗೆ ಯೆಹೋವ ದೇವರು ಗಿಬ್ಯೋನ್ಯ ಜನಾಂಗವನ್ನ ಕಾಪಾಡ್ತಾ ಬರ್ತಿದ್ದನು. ನಿಮಗೆ ಗೊತ್ತಾ? ಸುಮಾರು 1,000 ವರ್ಷಗಳಿಂದ ಅವ್ರನ್ನ ನೋಡ್ಕೊಳ್ತಾ ಬರ್ತಿದ್ದನು. ಸಾ.ಶ.ಪೂ. 607ರಲ್ಲಿ ಯೂದಾಯ ಮತ್ತು ಯೆರೂಸಲೇಮಿನ ನಾಶ ಆದಾಗ್ಲೂ ಗಿಬ್ಯೋನ್ಯರು ಪಾರಾದರು. ಬಂಧಿವಾಸ ಮುಗಿದಮೇಲೆ ಗಿಬ್ಯೋನ್ಯರು ಸತ್ಯಾರಾಧನೆಯಲ್ಲಿ ಹುರುಪಿನಿಂದ ಪಾಲ್ಗೊಳ್ತಾ ಇದ್ರು ಮತ್ತು ದೇವಾಲಯದಲ್ಲಿ ಲೇವಿಯರಿಗೆ ಸಹಾಯ ಮಾಡ್ತಾ ಇದ್ರು. ಹಾಗಾಗಿ, ಕೆಲವರು ದೇವಾಲಯದ ಹತ್ತಿರದಲ್ಲೇ ವಾಸ ಮಾಡ್ತಿದ್ರು ಅಂತ ಅನಿಸುತ್ತೆ. (ಎಜ್ರ 2:70; ನೆಹೆ. 11:21) ದೇವಾಲಯಕ್ಕೆ ಇವರು ಮಾಡ್ತಿದ್ದ ಸಹಾಯನ ಮನಸ್ಸಲ್ಲಿಟ್ಟು ಪರ್ಷಿಯಾದ ರಾಜ ಇವ್ರಿಗೆ ‘ತೆರಿಗೆ, ಕಪ್ಪ ಮತ್ತು ಸುಂಕ ಕೊಡಬೇಕಾಗಿರೋ ಅಗತ್ಯ ಇಲ್ಲ’ ಎಂದು ಹೇಳಿದನು.—ಎಜ್ರ 7:24.

16. ಗಿಬ್ಯೋನ್ಯರ ತರ ನಾವು ಹೇಗೆ ನಿಷ್ಠೆ ತೋರಿಸಬಹುದು?

16 ಗಿಬ್ಯೋನ್ಯರಿಂದ ನಾವೇನು ಕಲಿಬಹುದು? ಯೆಹೋವನ ಆರಾಧನೆನ ಬೆಂಬಲಿಸೋಕೆ ನಮ್ಮ ಕೈಯಲ್ಲಿ ಆಗಿದ್ದನ್ನೆಲ್ಲ ನಾವು ಮಾಡಬೇಕು. ಇದಕ್ಕೆ ಯಾವುದು ಸಹಾಯ ಮಾಡುತ್ತೆ? ಯೆಹೋವನ ಮೇಲೆ ನಮಗಿರೋ ಪ್ರೀತಿ ಮತ್ತು ಆತನನ್ನ ಮೆಚ್ಚಿಸಬೇಕು ಅಂತ ನಮಗಿರೋ ಆಸೆ. ಫಿಲಿಪ್ಪೀನ್ಸ್‌ನಲ್ಲಿರೋ ಸಹೋದರ ಆಲ್ವಿನ್‌ ಇದನ್ನ ಹೇಗೆ ಮಾಡಿದ್ರು ಅಂತ ನೋಡಿ. ಅವರಿಗೆ ಒಂದು ದೊಡ್ಡ ಕೆಲಸ ಇತ್ತು, ಕೈ ತುಂಬ ಸಂಬಳ ಸಿಗ್ತಿತ್ತು. ಆದ್ರೆ ಅವ್ರಿಗೆ ಯೆಹೋವನಿಗೆ ಹೆಚ್ಚು ಸೇವೆ ಮಾಡಬೇಕು ಅನ್ನೋ ಆಸೆ ಇತ್ತು. ಯಾವಾಗೆಲ್ಲ ಸಭೆಯಲ್ಲಿ ಸರ್ಕಿಟ್‌ ಮೇಲ್ವಿಚಾರಕರ ಭೇಟಿ ನಡೀತಿತ್ತೋ, ಆಗೆಲ್ಲ ಕೆಲಸಕ್ಕೆ ರಜೆ ತಗೊಂಡು ಹೆಚ್ಚು ಸಮಯ ಸೇವೆ ಮಾಡ್ತಿದ್ರು. ಹೀಗೆ ಸೇವೆಯಲ್ಲಿರೋ ಆನಂದನ ನೋಡ್ತಿದ್ರು. ಸ್ವಲ್ಪ ಸಮಯ ಆದಮೇಲೆ ಯೆಹೋವನಿಗೆ ಪ್ರಾರ್ಥನೆ ಮಾಡಿ, ಕೊನೆಗೂ ಕೆಲಸನ ಬಿಡಬೇಕು ಅಂತ ನಿರ್ಧಾರ ಮಾಡಿದ್ರು. ಆಮೇಲೆ ಪಯನೀಯರ್‌ ಸೇವೆ ಮಾಡೋಕೆ ಸಹಾಯ ಮಾಡೋ ಒಂದು ಚಿಕ್ಕ ಕೆಲಸನ ಹುಡುಕಿದ್ರು. ಮೊದಲು ಬರ್ತಿದ್ದಷ್ಟು ಹಣ ಈಗ ಬರಲ್ಲ, ಇನ್ನು ಮೇಲೆ ಕೆಲವು ತ್ಯಾಗಗಳನ್ನ ಮಾಡಬೇಕಾಗುತ್ತೆ ಅಂತ ಗೊತ್ತಿದ್ರೂ ಅವರು ಈ ನಿರ್ಧಾರ ಮಾಡಿದ್ರು. ಕೊನೆಗೂ ಅವರು ಅಂದ್ಕೊಂಡ ಗುರಿ ಮುಟ್ಟಿದ್ರು. ಅವರು ಮತ್ತು ಅವರ ಹೆಂಡತಿ, ಸುಮಾರು 21 ಜನ ಸತ್ಯ ಕಲಿಯೋಕೆ ಸಹಾಯ ಮಾಡಿದ್ರು. ಈ ದಂಪತಿ ಹಾಕಿದ ಪ್ರಯತ್ನನ ಯೆಹೋವ ಖಂಡಿತ ಮೆಚ್ಚಿಕೊಂಡನು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಯೆಹೋವನ ಸೇವೆ ಮಾಡೋಕೆ ನಾವು ಯಾವುದೇ ತ್ಯಾಗ ಮಾಡಿದ್ರೂ ಆತನು ನಮ್ಮನ್ನು ತುಂಬ ಮೆಚ್ಚಿಕೊಳ್ತಾನೆ. ಅಷ್ಟೇ ಅಲ್ಲ, ನಮಗೆ ಏನು ಅಗತ್ಯ ಇದೆಯೋ ಅದನ್ನ ಖಂಡಿತ ನೋಡ್ಕೊಳ್ತಾನೆ.—ಮತ್ತಾ. 6:33.

17. ಗಿಬ್ಯೋನ್ಯರಿಂದ ನಾವು ಏನೆಲ್ಲಾ ಕಲಿತ್ವಿ?

17 ಗಿಬ್ಯೋನ್ಯರ ಈ ಘಟನೆಗಳು ಯೆಹೋವ ದೇವ್ರಲ್ಲಿರೋ ಮುತ್ತಿನಂಥ ಗುಣಗಳನ್ನ ನಮಗೆ ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಸ್ತಲ್ವಾ? ಯೆಹೋವಲ್ಲಿ ದೀನತೆ, ಕರುಣೆ, ನ್ಯಾಯ ಮತ್ತು ನಿಷ್ಠೆ ಇದೆ ಅಂತ ಕಲಿತ್ವಿ. ತನಗೆ ಯಾರೆಲ್ಲ ನಿಷ್ಠೆಯಿಂದ ಸೇವೆ ಮಾಡ್ತಾರೋ ಅವ್ರನ್ನ ಯೆಹೋವ ದೇವರು ಯಾವಾಗ್ಲೂ ಆಶೀರ್ವದಿಸ್ತಾನೆ ಅಂತ ಕೂಡ ನೋಡಿದ್ವಿ. ನಾವು ಗಿಬ್ಯೋನ್ಯರ ಹಾಗೆ ಯೆಹೋವನ ಮೇಲೆ ಬೆಟ್ಟದಷ್ಟು ನಂಬಿಕೆನ ಬೆಳೆಸ್ಕೊಬೇಕು. ಆಗ ಜೀವನದಲ್ಲಿ ಎಂಥ ಕಷ್ಟ ಪರೀಕ್ಷೆಗಳು ಬಂದ್ರೂ ನಾವು ಆತನ ಮೇಲೆ ಆತ್ಕೊಳ್ತೀವಿ. ಆ ನಂಬಿಕೆ ನಮಗೆ ಸಂಘಟನೆಯಲ್ಲಿ ಯಾವುದೇ ನೇಮಕಗಳು ಸಿಕ್ಕಿದ್ರೂ ಅದನ್ನ ದೀನತೆಯಿಂದ ಮಾಡೋಕೆ ನಮಗೆ ಸಹಾಯ ಮಾಡುತ್ತೆ. ಅಕಸ್ಮಾತ್‌ ನಮಗೇನಾದ್ರೂ ಅನ್ಯಾಯ ಆಗೋದಾದ್ರೆ, ಯೆಹೋವನು ಖಂಡಿತ ಸರಿಯಾಗಿರೋ ಸಮಯದಲ್ಲಿ ಅದನ್ನ ಸರಿ ಮಾಡ್ತಾನೆ ಅಂತ ತಾಳ್ಮೆಯಿಂದ ಕಾಯಬೇಕುಮತ್ತು ಸತ್ಯಾರಾಧನೆನ ಹುರುಪಿನಿಂದ ಮಾಡಬೇಕು. ನಾವು ಇದನ್ನೆಲ್ಲ ಮಾಡ್ತಿರೋದಾದ್ರೆ ಖಂಡಿತ ಗಿಬ್ಯೋನ್ಯರ ಜೀವನ ಕಥೆಯಿಂದ ನಾವು ಪಾಠ ಕಲ್ತಿದೀವಿ ಅಂತ ತೋರಿಸ್ಬಹುದು.

ಈ ವಿಷ್ಯಗಳಲ್ಲಿ ಗಿಬ್ಯೋನ್ಯರಿಂದ ನಾವೇನು ಕಲಿಬಹುದು?

  • ನಂಬಿಕೆ ಮತ್ತು ದೀನತೆ ತೋರಿಸೋದ್ರಲ್ಲಿ

  • ಅನ್ಯಾಯ ಸಹಿಸ್ಕೊಳ್ಳೋದ್ರಲ್ಲಿ

  • ನಿಷ್ಠೆಯಿಂದ ಸತ್ಯಾರಾಧನೆನ ಬೆಂಬಲಿಸೋದ್ರಲ್ಲಿ

ಗೀತೆ 3 ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ

a ಇಸ್ರಾಯೇಲ್ಯರ ಹತ್ರ ಮಾತಾಡೋಕೆ ಬಂದ ಗಿಬ್ಯೋನ್ಯರಲ್ಲಿ ಹಿವ್ವಿಯ ದೇಶದ ಕೆಫೀರಾ, ಬೇರೋತ್‌, ಕಿರ್ಯತ್‌ಯಾರೀಮ್‌ ಅನ್ನೋ ಬೇರೆ ಮೂರು ಪಟ್ಟಣಗಳ ಜನರೂ ಇದ್ದರು.—ಯೆಹೋ. 9:17.

b ಸೌಲ ಯಾಕೆ ಗಿಬ್ಯೋನ್ಯರನ್ನ ಕೊಲ್ಲೋ ತಪ್ಪು ಮಾಡಿದ ಅಂತ ಬೈಬಲ್‌ ಹೇಳೋದಿಲ್ಲ. ಆದ್ರೆ ಅವನಿಗೆ ತನ್ನ ರಾಜ್ಯದ ಮೇಲೆ ಇದ್ದ ಹುಚ್ಚು ಅಭಿಮಾನ ಅವನು ಈ ಕೆಲ್ಸ ಮಾಡುವಂತೆ ಅವನನ್ನ ಪ್ರಚೋದಿಸಿರಬಹುದು ಅಂತ ವಿದ್ವಾಂಸರು ಹೇಳಿದ್ದಾರೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ