ಜೀವನ ಕಥೆ
ಕ್ಯೂಬಾದಲ್ಲಿ 70 ವರ್ಷಗಳ ಯೆಹೋವನ ಸೇವೆ
ನಾನು 1947ರಲ್ಲಿ ಕೆರೀಬಿಯನ್ ದ್ವೀಪಗಳಲ್ಲಿ ಒಂದಾದ ಕ್ಯೂಬಾದಲ್ಲಿ ಹುಟ್ಟಿದೆ. ಇದು ಉತ್ತರದ ಕೆರೀಬಿಯನ್ ಸಮುದ್ರದ ಬೆಚ್ಚಗಿನ ನೀರು ಮತ್ತು ಅಟ್ಲಾಂಟಿಕ್ ಸಾಗರದ ನೀರು ಸೇರೋ ಜಾಗದಲ್ಲಿದೆ. ನಾನು, ಅಪ್ಪ-ಅಮ್ಮ ಮತ್ತು ನನ್ನ ಇಬ್ರು ತಂಗಿಯರು ಎಸ್ಮರಾಲ್ಡಾ ಅನ್ನೋ ಸುಂದರವಾದ ಹಳ್ಳಿಯಲ್ಲಿ ಜೀವನ ಮಾಡ್ತಿದ್ವಿ.
ಆ ಪುಟ್ಟ ಹಳ್ಳಿಲಿ ನಾವು ತುಂಬ ಖುಷಿಯಾಗಿ, ನೆಮ್ಮದಿಯಾಗಿ ಜೀವನ ಮಾಡ್ತಿದ್ವಿ. ನಮ್ಮ ಅಜ್ಜ-ಅಜ್ಜಿ, ಸಂಬಂಧಿಕರೆಲ್ಲಾ ತುಂಬ ಹತ್ರದಲ್ಲೇ ಇದ್ರು. ತಿನ್ನೋಕೆ ಹೊಟ್ಟೆ ತುಂಬ ಊಟ ಇತ್ತು, ಜೀವನ ಖುಷಿಯಾಗಿ ಸಾಗ್ತಿತ್ತು.
ನನಗೆ ಸುಮಾರು ಐದು ವರ್ಷ ಇರುವಾಗ ಅಪ್ಪ-ಅಮ್ಮ ವಾಲ್ಟನ್ ಜೋನ್ಸ್ ಅನ್ನೋರ ಜೊತೆ ಬೈಬಲ್ ಸ್ಟಡಿ ತಗೊಳ್ಳೋಕೆ ಶುರು ಮಾಡಿದ್ರು. ಆ ಸಹೋದರನಿಗೆ ಸಾರೋದಂದ್ರೆ ತುಂಬ ಇಷ್ಟ. ಅವರು ನಮ್ಮ ಹಳ್ಳಿಗೆ ಬರೋಕೆ ಸುಮಾರು 10 ಗಂಟೆ ನಡ್ಕೊಂಡು ಬರ್ತಿದ್ರು. ಪ್ರತಿ ಸಲ ಅವರು ಬಂದಾಗ ನಾವು, ನಮ್ಮ ಸಂಬಂಧಿಕರೆಲ್ಲಾ ಅಜ್ಜ-ಅಜ್ಜಿ ಮನೆಲಿ ಸೇರ್ತಿದ್ವಿ, ಗಂಟೆಗಟ್ಟಲೇ ಬೈಬಲ್ ಬಗ್ಗೆ ಕಲಿತಿದ್ವಿ. ಅಪ್ಪ-ಅಮ್ಮಂಗೆ, ಪೆಡ್ರೋ ಚಿಕ್ಕಪ್ಪಂಗೆ ಮತ್ತು ಎಲಾ ಅತ್ತೆಗೆ ಬೈಬಲಿಂದ ಕಲಿತಿರೋ ವಿಷ್ಯ ತುಂಬ ಇಷ್ಟ ಆಯ್ತು. ಅದಕ್ಕೆ ಬೇಗ ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಯಾದ್ರು. ನಮ್ಮ ಎಲಾ ಅತ್ತೆಗೆ ಈಗ ಸುಮಾರು 100 ವರ್ಷ. ಈಗ್ಲೂ ಅವರು ಕ್ಯೂಬಾದಲ್ಲಿ ಪಯನೀಯರ್ ಆಗಿ ಸೇವೆ ಮಾಡ್ತಿದ್ದಾರೆ.
ನಾನು ಚಿಕ್ಕವನಿದ್ದಾಗ ಕ್ಯೂಬಾದಲ್ಲಿ ಸೇವೆ ಮಾಡೋಕೆ, ಕೂಟಕ್ಕೆ ಹೋಗೋಕೆ ಯಾವ ತೊಂದ್ರೆನೂ ಇರಲಿಲ್ಲ. ಸೇವೆಗೆ ಹೋಗುವಾಗ ಬ್ಯಾಗ್ ತುಂಬ ಪ್ರಕಾಶನಗಳನ್ನ ತಗೊಂಡು ಹೋಗ್ತಿದ್ವಿ, ಮನೆ-ಮನೆ ಸೇವೆಗೆ ಹೆಸರುವಾಸಿಗಳಾಗಿದ್ವಿ. ಸೇವೆ ಮಾಡೋಕೋಸ್ಕರ ಸಿಕ್ಕಾಪಟ್ಟೆ ನಡೀತಿದ್ವಿ! ನಿಜವಾಗ್ಲೂ ಆಗ ‘ಪರಿಸ್ಥಿತಿ ತುಂಬ ಚೆನ್ನಾಗಿತ್ತು,’ ಆಗ ನಾವು ಸೇವೆಲಿ ಕಳೆದ ಕ್ಷಣಗಳನ್ನ ಮರೆಯೋಕೆ ಆಗಲ್ಲ. ಆದ್ರೆ ಪರಿಸ್ಥಿತಿ ಹೀಗೆ ಇರಲಿಲ್ಲ, ಮುಂದೆ ‘ಕಷ್ಟಕರ’ ಸಮಯ ಬರೋಕಿತ್ತು.—2 ತಿಮೊ. 4:2.
ಕಷ್ಟಕರ ಸಮಯ
ನನಗೆ ಸುಮಾರು ಐದು ವರ್ಷ ಇರುವಾಗ ನಮ್ಮಪ್ಪ ಮತ್ತು ಪೆಡ್ರೋ ಚಿಕ್ಕಪ್ಪ ಸಮ್ಮೇಳನಕ್ಕೋಸ್ಕರ ದ್ವೀಪದ ಇನ್ನೊಂದು ಭಾಗಕ್ಕೆ ಹೋದ್ರು. ಅವರು ಅಲ್ಲಿ ಕಲುಷಿತ ನೀರನ್ನ ಕುಡಿದಿದ್ರಿಂದ ಇಬ್ರಿಗೂ ಟೈಫಾಯಿಡ್ ಜ್ವರ ಬಂದುಬಿಡ್ತು. ನಂಗಿನ್ನೂ ಚೆನ್ನಾಗಿ ನೆನಪಿದೆ, ಅವರು ವಾಪಸ್ ಬಂದ್ಮೇಲೆ ಮಾವನಿಗೆ ಪೂರ್ತಿ ಕೂದಲು ಉದುರಿ ಹೋಯ್ತು, ಅವರೇನೋ ಬದುಕಿದ್ರು. ಆದ್ರೆ ನಮ್ಮಪ್ಪ ತೀರಿಹೋದ್ರು. ಆಗ ಅವ್ರಿಗೆ 32 ವರ್ಷ ಅಷ್ಟೇ.
ಆಮೇಲೆ ನಮ್ಮಮ್ಮ ಅವ್ರ ಅಣ್ಣ ಇರೋ ಜಾಗಕ್ಕೆ ಶಿಫ್ಟ್ ಆಗೋಣ ಅಂದ್ಕೊಂಡ್ರು. ಅದಕ್ಕೆ ನಾವು ಲಾಂಬಿಯೋ ಅನ್ನೋ ಹಳ್ಳಿಗೆ ಶಿಫ್ಟ್ ಆದ್ವಿ. ನಾವು ತುಂಬ ಪ್ರೀತಿಸ್ತಿದ್ದ ಅಜ್ಜ-ಅಜ್ಜಿನಾ, ಸಂಬಂಧಿಕರನ್ನೆಲ್ಲಾ ಬಿಟ್ಟು ಹೋಗೋಕೆ ತುಂಬ ಕಷ್ಟ ಆಯ್ತು. ಆದ್ರೂ ಕುಟುಂಬವಾಗಿ ನಾವು ಯೆಹೋವನ ಆರಾಧನೆ ಮಾಡೋದನ್ನ ಮುಂದುವರೆಸಿದ್ವಿ.
ಆಗಸ್ಟ್ 26, 1957ರಲ್ಲಿ ಲಾಂಬಿಯೋಗೆ ಹತ್ರ ಇದ್ದ ಒಂದು ಕೆರೆಲಿ ನಾನು ದೀಕ್ಷಾಸ್ನಾನ ತಗೊಂಡೆ. ಆಗ ನನಗೆ 10 ವರ್ಷ. ಬರೀ ಇನ್ನು ಎರಡು ವರ್ಷದಲ್ಲಿ ಕ್ಯೂಬಾದಲ್ಲಿದ್ದ ಯೆಹೋವನ ಸಾಕ್ಷಿಗಳ ಜೀವನ ಬದಲಾಗುತ್ತೆ ಅಂತ ನಾನು ಕನಸು-ಮನಸ್ಸಲ್ಲೂ ಅಂದ್ಕೊಂಡಿರಲಿಲ್ಲ. 1959ರಲ್ಲಿ ಕ್ಯೂಬಾದ ಸರ್ಕಾರ ಬಿದ್ದು ಕಮ್ಯೂನಿಸ್ಟ್ ಸರ್ಕಾರ ಬಂತು.
ಕಮ್ಯೂನಿಸ್ಟ್ ಸರ್ಕಾರ ಮಿಲಿಟರಿ ಸೇವೆಗೆ ತುಂಬ ಒತ್ತು ಕೊಡ್ತಿತ್ತು. ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ, ಮಿಲಿಟರಿ ವಿಷ್ಯದಲ್ಲಿ ತಲೆ ಹಾಕದೇ ಇರೋದ್ರಿಂದ ತುಂಬ ಕಷ್ಟ ಅನುಭವಿಸಬೇಕಾಯ್ತು. ಬರ್ತಾ-ಬರ್ತಾ ಸೇವೆಗೆ, ಕೂಟಕ್ಕೆ ಹೋಗೋಕೆ ನಮಗೆ ತುಂಬ ಕಷ್ಟ ಆಯ್ತು. ಆ ಸರ್ಕಾರದವರು ನಿಧಾನವಾಗಿ ನಮ್ಮ ಸೇವೆ ಮತ್ತು ಕೂಟನ ನಿಷೇಧ ಮಾಡಿಬಿಟ್ರು. ನೂರಾರು ನಂಬಿಗಸ್ತ ಸಹೋದರರನ್ನ ಜೈಲ್‌ಗೆ ಹಾಕಿದ್ರು. ಕೆಲವ್ರನ್ನ ಆಗಾಗ ತುಂಬ ಹೊಡಿತಿದ್ರು, ಊಟನೂ ಕೊಡ್ತಿರಲಿಲ್ಲ. ಕೆಲವೊಂದು ಸಲ ಅವರು ಕೊಡೋ ಊಟದಲ್ಲಿ ರಕ್ತ ಇರ್ತಿತ್ತು. ಬೈಬಲ್ ರಕ್ತನ ತಿನ್ನಬಾರದು ಅಂತ ಹೇಳಿರೋದ್ರಿಂದ ಆ ಊಟನ ಅವರು ತಿನ್ನೋಕೆ ಆಗ್ತಿರಲಿಲ್ಲ.
ಇಷ್ಟೆಲ್ಲಾ ತೊಂದ್ರೆ ಇದ್ರೂ ಯೆಹೋವನನ್ನ ಆರಾಧಿಸೋಕೆ ಸೇರಿ ಬರೋದನ್ನ ಮಾತ್ರ ನಾವು ನಿಲ್ಲಿಸಲಿಲ್ಲ. (ಇಬ್ರಿ. 10:25) ನಾವು ಹೊಲಗಳಲ್ಲಿ ಮತ್ತು ಬೇರೆಬೇರೆ ಜಾಗಗಳಲ್ಲಿ ಸಮ್ಮೇಳನಗಳನ್ನ ನಡೆಸ್ತಿದ್ವಿ. ನನಗಿನ್ನೂ ಚೆನ್ನಾಗಿ ನೆನಪಿದೆ, ಒಂದುಸಲ ಸಮ್ಮೇಳನ ನಡೆಸೋಕೆ ಒಬ್ಬ ಸಹೋದರ ಅವ್ರ ಕುರಿಗಳ ಹಟ್ಟಿನ ಬಿಟ್ಕೊಟ್ರು. ಆದ್ರೆ ಅದನ್ನ ಕ್ಲೀನ್ ಮಾಡೋಕಾಗ್ಲಿ ಅಥವಾ ಕುರಿಗಳನ್ನ ಅಲ್ಲಿಂದ ಹೊರಗೆ ಕಳಿಸೋಕಾಗ್ಲಿ ನಮಗೆ ಸಮಯ ಇರಲಿಲ್ಲ. ಅದಕ್ಕೆ ನಿಜವಾದ ಕುರಿಗಳು ಮತ್ತು ಆಧ್ಯಾತ್ಮಿಕ ಕುರಿಗಳು ಒಟ್ಟಿಗೆ ಆ ಸಮ್ಮೇಳನ ಹಾಜರಾದ್ವಿ!—ಮೀಕ 2:12.
ಆ ಸಮಯದಲ್ಲಿ ನಮಗೆ ಆಧ್ಯಾತ್ಮಿಕ ಆಹಾರ ತಲುಪಿಸೋಕೆ ಸಹೋದರರು ತುಂಬ ಕಷ್ಟಪಟ್ಟು ಕೆಲಸ ಮಾಡ್ತಿದ್ರು. ಅವ್ರನ್ನೆಲ್ಲ ನಾವು ಯಾವತ್ತೂ ಮರೆಯಕ್ಕಾಗಲ್ಲ. ಉದಾಹರಣೆಗೆ, ಸಮ್ಮೇಳನ ಕಾರ್ಯಕ್ರಮನ ಮೊದಲೇ ಕ್ಯಾಸೆಟ್ ಟೇಪ್‌ಗಳಲ್ಲಿ ರೆಕಾರ್ಡ್ ಮಾಡಿ ಅದನ್ನ ಕ್ಯೂಬಾದ ಎಲ್ಲಾ ಕಡೆ ಕಳಿಸ್ತಿದ್ರು. ಕೆಲವು ಸಲ ಸಮ್ಮೇಳನದ ಎಲ್ಲಾ ಭಾಷಣಗಳನ್ನ ತಯಾರಿ ಮಾಡಿ, ಭಾಷಣ ಕೊಟ್ಟು, ರೆಕಾರ್ಡ್ ಮಾಡೋಕೆ ಬರೀ ಇಬ್ರು ಸಹೋದರರನ್ನ ನೇಮಿಸ್ತಿದ್ರು. ಆ ಸಹೋದರರು ಯಾರಿಗೂ ಗೊತ್ತಾಗದೇ ಇರೋ ಜಾಗದಲ್ಲಿ ರೆಕಾರ್ಡಿಂಗ್ ಮಾಡ್ತಾ ಇದ್ರು. ಇದ್ರಿಂದ ರೆಕಾರ್ಡಿಂಗ್‌ನಲ್ಲಿ ಕೆಲವು ಸಲ ಕೋಳಿ ಕೂಗೋ ಶಬ್ದ ಮತ್ತು ಬೇರೆ ಶಬ್ದಗಳೂ ಕೇಳಿಸ್ತಿತ್ತು. ಒಂದುವೇಳೆ ಸಮ್ಮೇಳನ ನಡೆಯೋ ಜಾಗದಲ್ಲಿ ಕರೆಂಟ್ ಇಲ್ಲಾಂದ್ರೆ ಏನು ಮಾಡ್ತಿದ್ರು ಗೊತ್ತಾ? ಒಬ್ಬ ಸಹೋದರ, ಕರೆಂಟ್ ಉತ್ಪಾದಿಸೋ ಯಂತ್ರಕ್ಕೆ (ಡೈನಮೋಗೆ) ಜೋಡಿಸಿರೋ ಸೈಕಲ್‌ನ ತುಳಿತಿದ್ರು. ಆಗ ಅದ್ರಿಂದ ಕರೆಂಟ್ ಉತ್ಪಾದನೆ ಆಗ್ತಿತ್ತು. ಹೀಗೆ ನಾವು ಆ ಕ್ಯಾಸೆಟ್ ಹಾಕಿ ಕಾರ್ಯಕ್ರಮನ ಕೇಳಿಸ್ಕೊಳ್ತಿದ್ವಿ. ಬೇರೆ ದೇಶದಲ್ಲಿದ್ದ ಸಹೋದರರಿಗೆ ಹೋಲಿಸಿದ್ರೆ ನಮ್ಮ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ, ಅವ್ರಿಗೆ ಸಿಗ್ತಿದ್ದಷ್ಟು ಪ್ರಕಾಶನಗಳು ನಮಗೆ ಸಿಗ್ತಿರಲಿಲ್ಲ. ಆದ್ರೂ ನಮಗೆ ಯಾವತ್ತೂ ಆಧ್ಯಾತ್ಮಿಕ ಆಹಾರದ ಕೊರತೆ ಆಗ್ಲಿಲ್ಲ. ನಾವೆಲ್ರೂ ಒಟ್ಟಿಗೆ ಖುಷಿ-ಖುಷಿಯಾಗಿ ಯೆಹೋವನ ಸೇವೆ ಮಾಡ್ತಿದ್ವಿ.—ನೆಹೆ. 8:10.
ಪಯನೀಯರ್ ಸೇವೆ ಮತ್ತು ನಮ್ಮ ಕುಟುಂಬ ಜೀವನ
ನನಗೆ 18 ವರ್ಷ ಆದಾಗ ನಾನು ಫ್ಲೋರಿಡಾದಲ್ಲಿ ರೆಗ್ಯುಲರ್ ಪಯನೀಯರ್ ಸೇವೆ ಶುರುಮಾಡಿದೆ. ಒಂದು ವರ್ಷ ಆದ್ಮೇಲೆ ನನ್ನನ್ನ ಕ್ಯೂಬಾದ ಒಂದು ಮುಖ್ಯ ಪಟ್ಟಣವಾದ ಕಮಾಗ್ವೆಗೆ ವಿಶೇಷ ಪಯನೀಯರ್ ಆಗಿ ನೇಮಿಸಿದ್ರು. ಅಲ್ಲೇ ನಾನು ಎಮಿಲಿಯನ ಭೇಟಿ ಮಾಡಿದೆ. ಅವಳ ಊರು ಸ್ಯಾಂಟಿಯಾಗೊ ಡಿ ಕ್ಯೂಬಾ. ನಾವು ಒಬ್ರನ್ನೊಬ್ರು ಚೆನ್ನಾಗಿ ಅರ್ಥಮಾಡ್ಕೊಂಡ್ವಿ, ಒಂದು ವರ್ಷದಲ್ಲೇ ಮದುವೆ ಆದ್ವಿ.
(ಎಡಕ್ಕೆ) ಹಿರಿಯರಿಗಾಗಿರುವ ರಾಜ್ಯ ಸೇವಾ ಶಾಲೆ—ಕಮಾಗ್ವೆ, ಕ್ಯೂಬಾ, 1966
(ಬಲಕ್ಕೆ) ನಮ್ಮ ಮದುವೆ ದಿನ, 1967
ಆಮೇಲೆ ನಾನು ಸರ್ಕಾರದ ಕೈ ಕೆಳಗಿದ್ದ ಒಂದು ಸಕ್ಕರೆ ಫ್ಯಾಕ್ಟರಿಯಲ್ಲಿ ಪೂರ್ಣ ಸಮಯ ಕೆಲಸಕ್ಕೆ ಸೇರ್ಕೊಂಡೆ. ಇದ್ರಿಂದ ನಾನು ಮತ್ತು ಎಮಿಲಿಯ ಪಯನೀಯರ್ ಸೇವೆನ ನಿಲ್ಲಿಸಬೇಕಾಯ್ತು. ಆದ್ರೂ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅನ್ನೋದು ನಮ್ಮಾಸೆ ಆಗಿತ್ತು. ಅದಕ್ಕೆ ನಾನು ಬೆಳಗ್ಗಿನ ಜಾವ 3 ಗಂಟೆಯಿಂದ 11 ಗಂಟೆ ಶಿಫ್ಟ್‌ನಲ್ಲಿ ಕೆಲಸ ಮಾಡ್ತಿದ್ದೆ. ಬೆಳಗ್ಗೆ ಬೇಗ ಏಳೋದು ನನಗೆ ಒಂಚೂರು ಇಷ್ಟ ಇರಲಿಲ್ಲ. ಆದ್ರೂ ಹಾಗೆ ಮಾಡಿದ್ರಿಂದ ಚೆನ್ನಾಗಿ ಸೇವೆ ಮಾಡೋಕೆ ಮತ್ತು ಎಮಿಲಿಯ ಜೊತೆ ಎಲ್ಲಾ ಕೂಟಗಳಿಗೆ ಹೋಗೋಕಾಯ್ತು.
1969ರಲ್ಲಿ ನಮ್ಮ ಮಗ ಗುಸ್ಟವೋ ಹುಟ್ಟಿದ. ಆಗ ಮುಂದಾಳತ್ವ ವಹಿಸ್ತಿದ್ದ ಸಹೋದರರು, ‘ನಿಮಗೆ ಸರ್ಕಿಟ್ ಕೆಲಸ ಮಾಡೋಕಾಗುತ್ತಾ?’ ಅಂತ ಕೇಳಿದ್ರು. ಆ ಕಾಲದಲ್ಲೆಲ್ಲ ಮಕ್ಕಳಿದ್ರೂ ಸರ್ಕಿಟ್ ಕೆಲಸ ಮಾಡೋದು ಕ್ಯೂಬಾದಲ್ಲಿ ಸಾಮಾನ್ಯವಾಗಿತ್ತು. ಅಲ್ಲಿಂದ ನಮ್ಮ ಜೀವನದ ಹೊಸ ಅಧ್ಯಾಯ ಶುರುವಾಯ್ತು. ಆ ಸೇವೆ ಮಾಡ್ತಾ ನಾವು ತುಂಬ ಖುಷಿಯಾಗಿದ್ವಿ, ಅಷ್ಟೇ ಬಿಜ಼ಿಯಾಗೂ ಇದ್ವಿ. ಹೀಗೆ ನಾನು ಮತ್ತು ಎಮಿಲಿಯ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕಾಯ್ತು. ಇದು ಯೆಹೋವ ನಮಗೆ ಕೊಟ್ಟಿರೋ ಆಶೀರ್ವಾದ. ನಾವು ಸರ್ಕಿಟ್ ಕೆಲಸದಲ್ಲಿರುವಾಗ್ಲೇ ನಮ್ಮ ಎರಡನೇ ಮಗ ಒಬೇದ್ ಮತ್ತು ಮೂರನೇ ಮಗ ಅಬ್ನೇರ್ ಹುಟ್ಟಿದ್ರು. ಕೆಲವು ವರ್ಷಗಳಾದ್ಮೇಲೆ ನಮ್ಮ ಮಗಳು ಮೆಹೆಲಿ ಹುಟ್ಟಿದಳು.
ನಾವು ತುಂಬ ವರ್ಷ ಸರ್ಕಿಟ್ ಕೆಲಸ ಮಾಡಿದ್ವಿ. ನಮ್ಮ ಜೀವನದ ಪುಟಗಳನ್ನ ಹಿಂದೆ ತಿರುಗಿಸಿ ನೋಡಿದ್ರೆ ಆ ಎಲ್ಲಾ ವರ್ಷಗಳು ಯೆಹೋವ ದೇವರು ಕ್ಯೂಬಾದಲ್ಲಿರೋ ತನ್ನ ಜನ್ರಿಗೆ ಮಾಡಿರೋ ಸಹಾಯ ನೆನಪಾಗಿ ತುಂಬ ಖುಷಿಯಾಗುತ್ತೆ. ನಾವು ನಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸೋಕೆ, ಆತನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ತುಂಬ ಪ್ರಯತ್ನ ಹಾಕಿದ್ವಿ. ಈ ಪ್ರಯತ್ನನೂ ಯೆಹೋವ ಆಶೀರ್ವದಿಸಿದ್ದಾನೆ. ಬನ್ನಿ, ಸರ್ಕಿಟ್ ಕೆಲಸ ಮಾಡುವಾಗ ನಮ್ಮ ಜೀವನ ಹೇಗಿತ್ತು ಅಂತ ಸ್ವಲ್ಪ ಹೇಳ್ತೀನಿ.
ನಿಷೇಧದ ಸಮಯದಲ್ಲಿ ನಮ್ಮ ಸರ್ಕಿಟ್ ಸೇವೆ
1960 ಮತ್ತು 70ರ ದಶಕದಲ್ಲಿ ನಿಷೇಧದ ಬಿಸಿ ನಮಗೆ ತಟ್ಟೋಕೆ ಶುರುವಾಯ್ತು, ಪರಿಸ್ಥಿತಿ ತುಂಬ ಹಾಳಾಯ್ತು. ಅಧಿಕಾರಿಗಳು ರಾಜ್ಯ ಸಭಾಗೃಹಗಳನ್ನ ಮುಚ್ಚಿಸಿದ್ರು, ಮಿಷನರಿಗಳನ್ನ ದೇಶದಿಂದ ಕಳಿಸಿಬಿಟ್ರು, ಎಷ್ಟೋ ಯುವ ಸಹೋದರರನ್ನ ಅರೆಸ್ಟ್ ಮಾಡಿ ಜೈಲ್‌ಗೆ ಹಾಕಿದ್ರು. ಅಷ್ಟೇ ಅಲ್ಲ, ಹವಾನದಲ್ಲಿದ್ದ ನಮ್ಮ ಬ್ರಾಂಚ್ ಆಫೀಸ್‌ನೂ ಮುಚ್ಚಿಸಿಬಿಟ್ರು.
1990ರ ದಶಕದಲ್ಲಿ ಸರ್ಕಿಟ್ ಕೆಲಸ
ನಿಷೇಧ ಇದ್ದಿದ್ರಿಂದ ನಾವು ಶನಿವಾರ, ಭಾನುವಾರ ಮಾತ್ರ ಸಭೆಗಳನ್ನ ಭೇಟಿ ಮಾಡ್ತಿದ್ವಿ. ಇದ್ರಿಂದ ಪ್ರತಿ ಸಭೆನ ಎರಡು ವಾರ ಭೇಟಿಮಾಡಬೇಕಿತ್ತು. ಹೀಗೆ ಹೋಗುವಾಗ ನಾವು ತುಂಬ ವಸ್ತುಗಳನ್ನ ತಗೊಂಡು ಹೋಗ್ತಿರಲಿಲ್ಲ, ಸೈಕಲಲ್ಲಿ ಹೋಗ್ತಿದ್ವಿ. ಇದ್ರಿಂದ ಪೊಲೀಸರ ಮತ್ತು ಬೇರೆಯವ್ರ ಗಮನ ನಮ್ಮ ಕಡೆ ಬರ್ತಾ ಇರ್ಲಿಲ್ಲ. ನಮ್ಮ ಭೇಟಿ ಬಗ್ಗೆ ಯಾರಿಗೂ ಗೊತ್ತಾಗದೇ ಇರೋ ತರ ನಾವು ನೋಡ್ಕೊಬೇಕಿತ್ತು, ಅದಕ್ಕೆ ಸಂಬಂಧಿಕರನ್ನ ಭೇಟಿ ಮಾಡೋ ತರ ಹೋಗ್ತಿದ್ವಿ. ಇದು ಸುಲಭ ಆಗಿತ್ತು. ಆದ್ರೆ ಹೀಗೆ ಹೋಗುವಾಗ ನಾವು ಬಂದಿರೋ ಉದ್ದೇಶ ಅವ್ರನ್ನ ಆಧ್ಯಾತ್ಮಿಕವಾಗಿ ಬಲಪಡಿಸೋದು ಅನ್ನೋದನ್ನ ಮರೀಬಾರದಿತ್ತು. (ಮಾರ್ಕ 10:29, 30) ಇಷ್ಟೆಲ್ಲ ಪ್ರಯತ್ನ ಹಾಕಿದ್ರೂ ನಾವು ಹುಷಾರಾಗಿರಬೇಕಿತ್ತು. ಯಾಕಂದ್ರೆ ಕೆಲವು ಸಲ ಪೊಲೀಸರು ನಮ್ಮ ಹಿಂದೆ ಬರ್ತಿದ್ರು, ಪ್ರಶ್ನೆಗಳನ್ನ ಕೇಳ್ತಿದ್ರು. ನಾವೇನಾದ್ರೂ ಸಿಕ್ಕಾಕೊಂಡ್ರೆ ಯಾರ ಮನೆಲಿ ಉಳ್ಕೊಂಡಿದ್ವೋ ಅವ್ರನ್ನೂ ಅರೆಸ್ಟ್ ಮಾಡಿಬಿಡ್ತಿದ್ರು.—ರೋಮ. 16:4.
ನಮ್ಮ ಸರ್ಕಿಟ್‌ನಲ್ಲಿದ್ದ ತುಂಬ ಸಹೋದರ ಸಹೋದರಿಯರು ಬಡವರಾಗಿದ್ರು. ಆದ್ರೂ ಅವ್ರ ಹತ್ರ ಏನಿದ್ಯೋ ಅದನ್ನ ನಮ್ಮ ಜೊತೆ ಧಾರಾಳವಾಗಿ ಹಂಚ್ಕೊಳ್ತಿದ್ರು. ಕೆಲವು ಜಾಗಗಳಲ್ಲಂತೂ ತುಂಬ ಸೊಳ್ಳೆಗಳು ಇರ್ತಿದ್ವು. ಸಹೋದರರು ನಮ್ಮನ್ನ ಎಷ್ಟು ಪ್ರೀತಿಸ್ತಿದ್ರು ಅಂದ್ರೆ ನಾವು ಆರಾಮವಾಗಿ ನಿದ್ದೆ ಮಾಡ್ಬೇಕಂತ ಅವ್ರ ಹತ್ರ ಇದ್ದ ಒಂದೇ ಒಂದು ಸೊಳ್ಳೆ ಪರದೆಯನ್ನ ನಮಗೆ ಕೊಡ್ತಿದ್ರು. ಬೇರೆ ಕೆಲವರು ಅವ್ರ ಹತ್ರ ಅಷ್ಟೇನು ಊಟ ಇಲ್ಲಾಂದ್ರೂ ಇರೋದನ್ನ ನಮ್ಮ ಜೊತೆ ಹಂಚ್ಕೊಳ್ತಿದ್ರು. ನಿಜ ಹೇಳ್ಬೇಕಂದ್ರೆ, ಕೆಲವು ಸಲ ನಾವೇ ಊಟ ತಗೊಂಡು ಬಂದು ನಮ್ಮನ್ನ ಉಳಿಸ್ಕೊಂಡಿರೋರ ಜೊತೆ ಹಂಚ್ಕೊಳ್ತಿದ್ವಿ.
ನಾವು ಸಭೆಗಳನ್ನ ಭೇಟಿ ಮಾಡೋಕೆ ಹೋಗುವಾಗ ಎಲ್ಲಾ ಮಕ್ಕಳನ್ನ ಕರ್ಕೊಂಡು ಹೋಗೋಕೆ ಆಗ್ತಿರ್ಲಿಲ್ಲ. ಒಂದು ಮಗುನ ಮಾತ್ರ ಕರ್ಕೊಂಡು ಹೋಗ್ತಿದ್ವಿ. ಬೇರೆ ಮಕ್ಕಳನ್ನ ಅಮ್ಮ ಮತ್ತು ತಂಗಿ ಜೊತೆ ಬಿಟ್ಟು ಹೋಗ್ತಿದ್ವಿ. ಮಗುನ ಕರ್ಕೊಂಡು ಹೋಗೋದ್ರಿಂದ ನಮಗೆ ಒಳ್ಳೇದೇ ಆಗ್ತಿತ್ತು. ಕೆಲವು ಸಲ ಪೊಲೀಸರು ನಮ್ಮ ಬ್ಯಾಗ್‌ನೆಲ್ಲ ಚೆಕ್ ಮಾಡ್ತಿದ್ರು. ಆಗ ನಾವು ಪ್ರಕಾಶನಗಳನ್ನ ಮಗುವಿನ ಗಲೀಜು ಡೈಪರ್ ಇಡ್ತಿದ್ದ ಬ್ಯಾಗ್ ಒಳಗೆ ಮುಚ್ಚಿಡ್ತಿದ್ವಿ, ಯಾಕಂದ್ರೆ ಆ ಬ್ಯಾಗ್‌ನ ಪೊಲೀಸರು ಚೆಕ್ ಮಾಡ್ತಿರ್ಲಿಲ್ಲ.
ಎಮಿಲಿಯ ಮಕ್ಕಳನ್ನ ಚೆನ್ನಾಗಿ ಬೆಳೆಸಿದ್ದಾಳೆ, ಪೂರ್ಣ ಸಮಯದ ಸೇವೆ ಮಾಡೋಕೂ ನನಗೆ ಸಹಾಯ ಮಾಡಿದ್ದಾಳೆ. ಅವಳ ಬಗ್ಗೆ ನನಗೆ ಹೆಮ್ಮೆ ಅನಿಸುತ್ತೆ. ನಾನು ಪೂರ್ಣ ಸಮಯ ಕೆಲಸ ಮಾಡ್ತಾ ಸರ್ಕಿಟ್ ಕೆಲಸನೂ ಮಾಡ್ತಿದ್ದೆ. ಹೇಗೆ ಗೊತ್ತಾ? ಕೆಲವೊಮ್ಮೆ ವಾರದಲ್ಲಿ ಒಂದು ಅಥವಾ ಎರಡು ದಿನ ಎರಡು ಶಿಫ್ಟ್ ಕೆಲಸ ಮಾಡ್ತಿದ್ದೆ. ಇದ್ರಿಂದ ನನಗೆ ಶನಿವಾರ, ಭಾನುವಾರ ರಜೆ ಸಿಗ್ತಿತ್ತು. ಸ್ವಲ್ಪ ದಿನ ಆದ್ಮೇಲೆ ನಾನು ಸೂಪರ್‌ವೈಸರ್ ಆದೆ. ಆಗ ನಾನು ಏಳು ದಿನಾನೂ ಕೆಲಸ ಮಾಡಬೇಕಿತ್ತು, ಮಾಡಲ್ಲ ಅಂತ ಹೇಳೋಕೆ ಆಗ್ತಿರ್ಲಿಲ್ಲ. ಅದಕ್ಕೆ ಒಂದು ಉಪಾಯ ಮಾಡಿದೆ. ನನ್ನ ಕೈಕೆಳಗೆ ಕೆಲಸ ಮಾಡೋರಿಗೆ ಸಾಕಷ್ಟು ಕೆಲಸ ಕೊಡ್ತಿದ್ದೆ, ಅದನ್ನ ಅವರು ಶನಿವಾರ, ಭಾನುವಾರ ಮಾಡ್ತಿದ್ರು. ಆ ಸಮಯದಲ್ಲಿ ನಾನು ಸಭೆಗಳನ್ನ ಭೇಟಿ ಮಾಡ್ತಿದ್ದೆ. ನನಗೆ ಗೊತ್ತಿರೋ ಮಟ್ಟಿಗೆ, ನಾನು ಶನಿವಾರ, ಭಾನುವಾರ ಕೆಲಸ ಮಾಡ್ತಿರ್ಲಿಲ್ಲ ಅಂತ ನಮ್ಮ ಬಾಸ್‌ಗಳಿಗೆ ಯಾವತ್ತೂ ಗೊತ್ತಾಗ್ಲಿಲ್ಲ!
ನೇಮಕ ಬದಲಾದ್ರೂ ಸಂತೋಷ ಕಳ್ಕೊಳ್ಳಲಿಲ್ಲ
ನಿಷೇಧ ತೆಗೆದ ಮೇಲೆ ಬಹಿರಂಗವಾಗಿ ನಡೆದ ಮೊದಲ ಅಧಿವೇಶನ, 1994
ಅದು 1994ರ ಇಸವಿ. ಒಂದಿನ ಕ್ಯೂಬಾದಲ್ಲಿ ಮುಂದಾಳತ್ವ ವಹಿಸ್ತಿದ್ದ ಸಹೋದರರು ಎಲ್ಲಾ ಸಂಚರಣ ಮೇಲ್ವಿಚಾರಕರನ್ನ ಹವಾನದಲ್ಲಿ ನಡೆಯೋ ಒಂದು ವಿಶೇಷ ಕೂಟಕ್ಕೆ ಹಾಜರಾಗೋಕೆ ಹೇಳಿದ್ರು. 80 ಸಂಚರಣ ಮೇಲ್ವಿಚಾರಕರು ಆ ಕೂಟಕ್ಕೆ ಹೋದ್ವಿ. ತುಂಬ ವರ್ಷಗಳ ನಂತ್ರ ಒಬ್ರನ್ನೊಬ್ರು ನೋಡಿದಾಗ ನಮಗೆ ತುಂಬ ಖುಷಿ ಆಯ್ತು. ಆ ಕೂಟದಲ್ಲಿ ಮೊದ್ಲು ಸಂಘಟನೆಯಲ್ಲಾಗೋ ಕೆಲವು ಹೊಂದಾಣಿಕೆಗಳ ಬಗ್ಗೆ ಚರ್ಚೆ ಮಾಡಿದ್ರು. ಆಮೇಲೆ ಒಂದು ಪ್ರಕಟಣೆ ಮಾಡಿದ್ರು. ಅದನ್ನ ಕೇಳಿದಾಗ ನಮ್ಮ ಹೃದಯನೇ ಬಾಯಿಗೆ ಬಂದಂಗೆ ಆಯ್ತು. ‘ನಿಮ್ಮೆಲ್ರ ಹೆಸ್ರುಗಳನ್ನ ಅಧಿಕಾರಿಗಳಿಗೆ ಕೊಡ್ಬೇಕು ಅಂತ ಇದ್ದೀವಿ’ ಅಂತ ಹೇಳಿದ್ರು! ಯಾಕೆ ಗೊತ್ತಾ?
ಇದಕ್ಕೆ ಕಾರಣ ಏನಂತ ಆಮೇಲೆ ಅವ್ರೇ ವಿವರಿಸಿದ್ರು. ಅದೇನಂದ್ರೆ ನಮ್ಮ ಸಹೋದರರು ಸರ್ಕಾರಿ ಅಧಿಕಾರಿಗಳ ಮತ್ತು ಯೆಹೋವನ ಸಾಕ್ಷಿಗಳ ಸಂಬಂಧನ ಚೆನ್ನಾಗಿ ಮಾಡೋಕೆ ಅವ್ರ ಹತ್ರ ಹೋಗಿ ಮಾತಾಡಿದ್ರು. ಆಗ ಅಧಿಕಾರಿಗಳು, ಎಲ್ಲಾ ಸಂಚರಣ ಮೇಲ್ವಿಚಾರಕರ ಹೆಸ್ರುಗಳನ್ನ ಕೊಡಿ ಅಂತ ಕೇಳಿದ್ರು. ಹಾಗಾಗಿ ನಾವೆಲ್ರೂ ನಮ್ಮ ಹೆಸ್ರುಗಳನ್ನ ಕೊಡೋಕೆ ಒಪ್ಕೊಂಡ್ವಿ. ಅವತ್ತಿಂದ ಸರ್ಕಾರಿ ಅಧಿಕಾರಿಗಳು ನಮ್ಮ ಜೊತೆ ಚೆನ್ನಾಗಿ ನಡ್ಕೊಳ್ಳೋಕೆ ಶುರುಮಾಡಿದ್ರು.
ಹೋಗ್ತಾ-ಹೋಗ್ತಾ ಪರಿಸ್ಥಿತಿ ಸ್ವಲ್ಪ ಸುಧಾರಿಸ್ತು. ನಾವೊಂದು ಧರ್ಮ ಅಂತ ಕಾನೂನುಬದ್ಧವಾಗಿ ಇನ್ನೂ ನೋಂದಣಿ ಆಗಿರ್ಲಿಲ್ಲಾಂದ್ರೂ ಒಟ್ಟಾಗಿ ಕೂಟಕ್ಕೆ ಸೇರಿ ಬರ್ತಿದ್ವಿ, ಧೈರ್ಯವಾಗಿ ಸಿಹಿಸುದ್ದಿ ಸಾರ್ತಿದ್ವಿ. ಸ್ವಲ್ಪ ಸಮಯ ಆದ್ಮೇಲೆ ಒಂದು ವಿಷ್ಯ ಗೊತ್ತಾಯ್ತು. ಅದೇನಂದ್ರೆ, ಅಧಿಕಾರಿಗಳ ಹತ್ರ ಈಗಾಗ್ಲೇ ಕೆಲವು ಸಂಚರಣ ಮೇಲ್ವಿಚಾರಕರ ಹೆಸ್ರುಗಳಿತ್ತು. ಆದ್ರೆ ಅವ್ರ ಹತ್ರ ಇರೋ ಹೆಸ್ರುಗಳು ಸರಿನಾ ಅಂತ ತಿಳ್ಕೊಳ್ಳೋಕೆ ನಮ್ಮ ಹೆಸ್ರುಗಳನ್ನ ಕೊಡೋಕೆ ಹೇಳಿದ್ರು.
1994ರ ಸೆಪ್ಟೆಂಬರ್ ತಿಂಗಳಲ್ಲಿ ನಮ್ಮ ಬ್ರಾಂಚ್ ಆಫೀಸ್‌ನ ಮತ್ತೆ ತೆರೆಯೋಕೆ ಅನುಮತಿ ಸಿಕ್ತು. 20 ವರ್ಷಗಳ ಹಿಂದೆ ಮುಚ್ಚಿದ್ದ ಅದೇ ಕಟ್ಟಡನ ನಾವು ಮತ್ತೆ ಉಪಯೋಗಿಸೋಕೆ ಶುರುಮಾಡಿದ್ವಿ.
1996ರಲ್ಲಿ ಒಬ್ಬ ಸಹೋದರ ನನಗೆ ಫೋನ್ ಮಾಡಿ, ‘ನೀವು ಬೆತೆಲಿಗೆ ಬರೋಕಾಗುತ್ತಾ?’ ಅಂತ ಕೇಳಿದ್ರು. ಅದನ್ನ ಕೇಳಿದ ತಕ್ಷಣ ತುಂಬ ಆಶ್ಚರ್ಯ ಆಯ್ತು. ನಾನು ಅವ್ರಿಗೆ, ‘ನಮ್ಮ ಜೊತೆ ಇನ್ನೂ ಇಬ್ರು ಮಕ್ಕಳಿದ್ದಾರೆ. ಅವ್ರನ್ನ ಬೆಳೆಸೋ ಜವಾಬ್ದಾರಿ ಇದೆ’ ಅಂತ ಹೇಳಿದೆ. ಆಗ ಅವರು ನನ್ನ ಪರಿಸ್ಥಿತಿನ ಚೆನ್ನಾಗಿ ಅರ್ಥಮಾಡ್ಕೊಂಡ್ರು. ಆಮೇಲೆ, ‘ಆದ್ರೂ ಪರ್ವಾಗಿಲ್ಲ. ನೀವು ಬೆತೆಲಿಗೆ ಬಂದು ಸೇವೆ ಮಾಡಿ’ ಅಂದ್ರು. ನಾವು ಆ ನೇಮಕನ ಒಪ್ಕೊಂಡು ಹವಾನಗೆ ಕುಟುಂಬವಾಗಿ ಶಿಫ್ಟ್ ಆದ್ವಿ.
(ಎಡಕ್ಕೆ) 2000ದ ದಶಕದ ಆರಂಭದಲ್ಲಿ, ಎಮಿಲಿಯ ಕ್ಯೂಬಾ ಬ್ರಾಂಚ್‌ನ ಬಟ್ಟೆ ಹೊಲಿಯೋ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡ್ತಿರೋದು
(ಬಲಕ್ಕೆ) ಸಮ್ಮೇಳನ ಹಾಲ್‌ನ ಸಮರ್ಪಣೆ, 2012
ನಿಜ ಹೇಳಬೇಕಂದ್ರೆ ಮೊದಮೊದ್ಲು ನನಗೆ ಬೆತೆಲ್ ಸೇವೆ ಅಷ್ಟೇನೂ ಇಷ್ಟ ಆಗ್ಲಿಲ್ಲ. ತುಂಬ ವರ್ಷ ನಾನು ಸಂಚರಣ ಕೆಲಸ ಮಾಡಿದ್ರಿಂದ ನನ್ನ ಮನಸ್ಸೆಲ್ಲಾ ಸಾರೋದರ ಕಡೆನೇ ಇತ್ತು. ಆಫೀಸಲ್ಲಿ ಕೂತು ಕೆಲಸ ಮಾಡೋಕೆ ಕಷ್ಟ ಆಗ್ತಿತ್ತು. ಆಗ ಬೆತೆಲ್‌ನಲ್ಲಿದ್ದ ಕೆಲವರು ಮತ್ತು ನನ್ನ ಹೆಂಡ್ತಿ ನನ್ನ ಯೋಚ್ನೆನ ಸರಿ ಮಾಡ್ಕೊಳ್ಳೋಕೆ ಸಹಾಯ ಮಾಡಿದ್ರು. ಹೋಗ್ತಾ-ಹೋಗ್ತಾ ನಾನು ಮತ್ತೆ ಖುಷಿ ಕಂಡ್ಕೊಂಡೆ. ಈಗ ಬೆತೆಲಲ್ಲಿ ಸಂತೋಷವಾಗಿ ಸೇವೆ ಮಾಡ್ತಿದ್ದೀನಿ.
(ಎಡಕ್ಕೆ) ಕ್ರೈಸ್ತ ದಂಪತಿಗಳಿಗಾಗಿರುವ ಬೈಬಲ್ ಶಾಲೆಯ ಪದವಿ ಪ್ರಧಾನ ಕಾರ್ಯಕ್ರಮ, 2013
(ಬಲಕ್ಕೆ) ಕ್ಯೂಬಾದ ಬ್ರಾಂಚ್ ಕಮಿಟಿ, 2013
ಸರ್ಕಿಟ್ ಸಮ್ಮೇಳನದಲ್ಲಿ ನಮ್ಮ ಮಗಳು ಮತ್ತು ಅಳಿಯನ ಜೊತೆ
ಈಗ ನಮ್ಮಿಬ್ರಿಗೆ ವಯಸ್ಸಾಗಿದೆ, ಆದ್ರೆ ನಿಜವಾಗ್ಲೂ ತುಂಬ ಸಂತೋಷ ಇದೆ. ಯಾಕಂದ್ರೆ ಇಷ್ಟು ವರ್ಷಗಳಲ್ಲಿ ಎಷ್ಟೋ ಸಹೋದರ ಸಹೋದರಿಯರು ನಮಗೆ ಪರಿಚಯ ಆಗಿದ್ದಾರೆ, ಅವ್ರ ಜೊತೆ ಸೇವೆ ಮಾಡೋ ಅವಕಾಶ ಸಿಕ್ಕಿದೆ. ಅದ್ರಲ್ಲೂ ನಮ್ಮ ಮಕ್ಕಳು, ಮೊಮ್ಮಕ್ಕಳು ಯೆಹೋವನ ಆರಾಧನೆ ಮಾಡ್ತಿರೋದನ್ನ ನೋಡುವಾಗ ಆಗೋ ಖುಷಿನ ಮಾತಲ್ಲಿ ಹೇಳೋಕಾಗಲ್ಲ. ವಯಸ್ಸಾಗಿದ್ದ ಅಪೊಸ್ತಲ ಯೋಹಾನ, “ನನ್ನ ಮಕ್ಕಳು ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಾ ಇದ್ದಾರೆ ಅಂತ ಕೇಳಿಸ್ಕೊಳ್ಳೋದಕ್ಕಿಂತ ಸಂತೋಷದ ವಿಷ್ಯ ನನಗೆ ಬೇರೆ ಯಾವುದೂ ಇಲ್ಲ” ಅಂತ ಹೇಳಿದ. ನಮಗೂ ಹಾಗೇ ಅನಿಸುತ್ತೆ.—3 ಯೋಹಾ. 4.
ನಾವು ಬೆತೆಲಲ್ಲಿ ಸೇವೆ ಮಾಡೋಕೆ ಶುರುಮಾಡಿ ಸುಮಾರು 30 ವರ್ಷ ಕಳೆದಿದೆ. ಈಗ ನಮಗೆ ವಯಸ್ಸಾಗಿದ್ರೂ, ಕೆಲವು ಆರೋಗ್ಯ ಸಮಸ್ಯೆಗಳಿದ್ರೂ ನೇಮಕಾನ ಚೆನ್ನಾಗಿ ಮಾಡೋಕೆ ನಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡ್ತಿದ್ದೀವಿ. ನಾವು ಸೇವೆ ಮಾಡುವಾಗ ಕೆಲವು ಸಮಸ್ಯೆಗಳು ಬಂತು, ಆದ್ರೂ ಸುಮಾರು 70 ವರ್ಷಗಳಿಂದ ಕ್ಯೂಬಾದಲ್ಲಿ ‘ಖುಷಿಯಾಗಿರೋ ದೇವ್ರಿಗೆ’ ಸೇವೆ ಮಾಡೋ ಒಂದು ಅದ್ಭುತ ಅವಕಾಶ ನಮಗೆ ಸಿಕ್ಕಿದೆ! ಇದ್ರ ಬಗ್ಗೆ ಯೋಚ್ನೆ ಮಾಡುವಾಗ ಮನಸ್ಸು ತುಂಬಿ ಬರುತ್ತೆ.—1 ತಿಮೊ. 1:11; ಕೀರ್ತ. 97:1.