ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜೂನ್‌ ಪು. 20-25
  • ಯೆಹೋವನ ಮಾತನ್ನ ಗಮನಕೊಟ್ಟು ಕೇಳಿಸ್ಕೊತಿದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಮಾತನ್ನ ಗಮನಕೊಟ್ಟು ಕೇಳಿಸ್ಕೊತಿದ್ದೀರಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೆನಪಿಡಿ, ಮಾತಾಡ್ತಿರೋದು ಯೆಹೋವ!
  • ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಕಾರಣ . . .
  • ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಸಹಾಯ ಮಾಡಿ
  • ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಏನು ಮಾಡಬೇಕು?
  • ಯೆಹೋವನ ಮಾತನ್ನ ಕೇಳಿಸ್ಕೊಳ್ತಾ ಇರಿ
  • ದೇವ್ರ ಬಗ್ಗೆ ತಡಮಾಡದೆ ಕಲಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಕಲಿಸೋ ಕಲೆಯನ್ನ ಬೆಳೆಸ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
    2025-2026ರ ಸಮ್ಮೇಳನ ಕಾರ್ಯಕ್ರಮ ಸಂಚರಣ ಮೇಲ್ವಿಚಾರಕನೊಂದಿಗೆ.
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜೂನ್‌ ಪು. 20-25

ಆಗಸ್ಟ್‌ 31–ಸೆಪ್ಟೆಂಬರ್‌ 6, 2026

ಗೀತೆ 89 ಆಲಿಸಿ, ಪಾಲಿಸಿ, ಖುಷಿಯಾಗಿರಿ!

ಯೆಹೋವನ ಮಾತನ್ನ ಗಮನಕೊಟ್ಟು ಕೇಳಿಸ್ಕೊತಿದ್ದೀರಾ?

“ಚೆನ್ನಾಗಿ ಕೇಳಿಸ್ಕೊಳ್ಳಿ.”—ಲೂಕ 8:18.

ಈ ಲೇಖನದಲ್ಲಿ ಏನಿದೆ?

ಕೂಟಗಳಲ್ಲಿ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋದು ಯಾಕೆ ಮುಖ್ಯ ಮತ್ತು ಅದನ್ನ ಹೇಗೆ ಮಾಡಬಹುದು ಅಂತ ನೋಡೋಣ.

1-2. (ಎ) ಯೆಹೋವ ದೇವರು ಇವತ್ತು ಆಧ್ಯಾತ್ಮಿಕ ಆಹಾರನ ಹೇಗೆ ಕೊಡ್ತಿದ್ದಾನೆ? (ಕೀರ್ತನೆ 23:1, 2, 5) (ಬಿ) ಕೂಟಗಳ ಬಗ್ಗೆ ಈ ಲೇಖನದಲ್ಲಿ ಏನು ಕಲಿತೀವಿ?

“ಯೆಹೋವ ನನ್ನ ಕುರುಬ, ನನಗೆ ಯಾವ ಕೊರತೆನೂ ಇರಲ್ಲ” ಅಂತ ದಾವೀದ ಹೇಳಿದ. ಈ ಮಾತು ಇವತ್ತೂ ನೂರಕ್ಕೆ ನೂರು ಸತ್ಯ ಅಲ್ವಾ! ಯೆಹೋವ ದೇವರು ನಮಗೆ ಉದಾರವಾಗಿ ಆಧ್ಯಾತ್ಮಿಕ ಆಹಾರ ಕೊಡ್ತಿದ್ದಾನೆ. ಹಾಗಾಗಿ ನಮಗೆ ಆಧ್ಯಾತ್ಮಿಕವಾಗಿ ಯಾವ ಕೊರತೆನೂ ಇಲ್ಲ.—ಕೀರ್ತನೆ 23:1, 2, 5 ಓದಿ.

2 ಯೆಹೋವ ಆಧ್ಯಾತ್ಮಿಕ ಆಹಾರನ ಇವತ್ತು ಹೇಗೆ ಕೊಡ್ತಿದ್ದಾನೆ? ಕೂಟಗಳಲ್ಲಿ! ಆದ್ರೆ ನಾವು ಕೂಟಗಳಲ್ಲಿ ತುಂಬ ಸಲ ಕೇಳಿಸ್ಕೊಂಡಿದ್ದನ್ನೇ ಮತ್ತೆ-ಮತ್ತೆ ಕೇಳಿಸ್ಕೊಳ್ತೀವಿ ಅಲ್ವಾ! ಯಾಕೆ? ಯಾಕಂದ್ರೆ ‘ಸತ್ಯದಲ್ಲಿ ಬಲವಾಗಿ ಇರೋರಿಗೂ’ ಇಂಥ ಮರುಜ್ಞಾಪನಗಳು ಬೇಕು ಅಂತ ಬೈಬಲ್‌ ಹೇಳುತ್ತೆ. (2 ಪೇತ್ರ 1:12) ಆದ್ರೆ ಈಗಾಗ್ಲೇ ನಿಮಗೆ ಗೊತ್ತಿರೋ ವಿಷ್ಯನ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಕಷ್ಟ ಆಗುತ್ತೆ ಅಂತ ಅನಿಸಬಹುದು. ಒಂದುವೇಳೆ ಕಷ್ಟ ಆಗ್ತಿದ್ರೆ ಖಂಡಿತ ಈ ಲೇಖನ ನಿಮಗೆ ಸಹಾಯ ಮಾಡುತ್ತೆ. (1) ಕೂಟಗಳಲ್ಲಿ ಗಮನಕೊಟ್ಟು ಕೇಳಿಸ್ಕೊಳ್ಳೋದು ಯಾಕೆ ತುಂಬ ಮುಖ್ಯ? (2) ಎಲ್ರೂ ಗಮನಕೊಟ್ಟು ಕೇಳಿಸ್ಕೊಳೋಕೆ ಭಾಷಣಗಾರ ಹೇಗೆ ಸಹಾಯ ಮಾಡಬಹುದು? (3) ನಾವು ಚೆನ್ನಾಗಿ ಗಮನ ಕೊಟ್ಟು ಕೇಳಿಸ್ಕೊಳೋಕೆ ಯಾವ ಸಲಹೆಗಳನ್ನ ಪಾಲಿಸಬೇಕು ಅಂತ ಈ ಲೇಖನದಲ್ಲಿ ನೋಡೋಣ. ಆದ್ರೆ ಮೊದಲೂ ಕೂಟಗಳಲ್ಲಿ ನಮಗೆ ನಿಜವಾಗ್ಲೂ ಕಲಿಸ್ತಿರೋದು ಯಾರು ಅಂತ ತಿಳ್ಕೊಳೋಣ.’

ನೆನಪಿಡಿ, ಮಾತಾಡ್ತಿರೋದು ಯೆಹೋವ!

3. (ಎ) ಯೆಹೋವ ನಮ್ಮ ಜೊತೆ ಹೇಗೆ ಮಾತಾಡ್ತಾನೆ? (ಬಿ) ಯೆಹೋವನ ಆರಾಧಕರು ಆತನ ವಾಕ್ಯನ ಯಾವೆಲ್ಲ ವಿಧಾನಗಳಲ್ಲಿ ಚೆನ್ನಾಗಿ ಬಳಸ್ತಾರೆ?

3 ಯೆಹೋವ ದೇವರು ತನ್ನ ವಾಕ್ಯವಾದ ಬೈಬಲ್‌ ಮೂಲಕ ನಮ್ಮ ಹತ್ರ ಮಾತಾಡ್ತಾನೆ. (2 ತಿಮೊ. 3:16, 17) ಈ ವಿಷ್ಯ ಯೇಸುಗೆ ಚೆನ್ನಾಗಿ ಗೊತ್ತಿತ್ತು! ಅದಕ್ಕೆ ಯೇಸು ಜನ್ರ ಹತ್ರ ಮಾತಾಡ್ವಾಗ ದೇವರ ವಾಕ್ಯನ ಚೆನ್ನಾಗಿ ಬಳಸಿದನು. ಇದನ್ನ ನೋಡಿ ಜನ ಆಶ್ಚರ್ಯದಿಂದ, “ರಬ್ಬಿಗಳ ಶಾಲೆಗೆ ಹೋಗದೇ ಇರೋ ಇವನಿಗೆ ಪವಿತ್ರ ಗ್ರಂಥದ ವಚನಗಳು ಇಷ್ಟು ಚೆನ್ನಾಗಿ ಹೇಗೆ ಗೊತ್ತು?” ಅಂದ್ರು. (ಯೋಹಾ. 7:15) ಯೇಸು ದೇವರ ವಾಕ್ಯನ ಇಷ್ಟು ಚೆನ್ನಾಗಿ ಬಳಸಿದ್ದನ್ನ ನೋಡಿ ದೀನತೆ ಇದ್ದ ಜನ್ರಿಗೆ ತುಂಬ ಖುಷಿ ಆಯ್ತು. ಯೇಸು ಅಷ್ಟೇ ಅಲ್ಲ, ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು, ಉದಾಹರಣೆಗೆ ಅಪೊಸ್ತಲ ಪೌಲ ಮತ್ತು ಅಪೊಲ್ಲೋಸ ಕೂಡ ಜನ್ರ ಹತ್ರ ದೇವರ ಬಗ್ಗೆ ಮಾತಾಡ್ವಾಗ ದೇವರ ವಾಕ್ಯನ ತುಂಬ ಚೆನ್ನಾಗಿ ಬಳಸಿದ್ರು. (ಅ. ಕಾ. 17:2, 3; 18:24, 28) ಯೆಹೋವನ ಸಾಕ್ಷಿಗಳಾದ ನಾವು ಕೂಡ ಬೈಬಲನ್ನ ತುಂಬ ಚೆನ್ನಾಗಿ ಬಳಸ್ತೀವಿ. ನಾವು ಓದೋ ಲೇಖನಗಳು, ನೋಡೋ JW ಪ್ರಸಾರ ಮತ್ತು ವಿಡಿಯೋಗಳು, ಕೇಳಿಸ್ಕೊಳ್ಳೋ ಭಾಷಣಗಳಿಗೂ ಬೈಬಲೇ ಆಧಾರ! ನಮ್ಮ ಕೂಟಗಳಿಗೆ ಹೊಸದಾಗಿ ಬಂದ ಎಷ್ಟೋ ಜನ ನಾವು ಚೆನ್ನಾಗಿ ಬೈಬಲ್‌ ಬಳಸೋದನ್ನ ನೋಡಿ ಮೆಚ್ಕೊಂಡಿದ್ದಾರೆ. ಕೂಟಗಳಲ್ಲಿ ಭಾಷಣ ಕೊಡೋರು ಬೈಬಲನ್ನ ಆಧಾರವಾಗಿ ಇಟ್ಕೊಂಡೇ ಕಲಿಸ್ತಾರೆ. ಹಾಗಂತ ಅವರು ಬರೀ ಬೈಬಲನ್ನ ಓದಿ ಸುಮ್ನೆ ಆಗಲ್ಲ, ಓದಿರೋ ವಿಷ್ಯನ ಹೇಗೆ ಅನ್ವಯಿಸಬೇಕು ಅಂತಾನೂ ಕಲಿಸ್ತಾರೆ.—ಲೂಕ 24:32.

4. “ಗಮನಕೊಡಿ,” “ಕೇಳಿಸ್ಕೊಳ್ಳಿ” ಅನ್ನೋ ಪದದ ಅರ್ಥ ಏನು?

4 ಬೈಬಲಲ್ಲಿ, “ಗಮನಕೊಡಿ” “ಕೇಳಿಸ್ಕೊಳ್ಳಿ” ಅನ್ನೋ ಪದಗಳನ್ನ ತುಂಬ ಸಲ ಬಳಸಲಾಗಿದೆ. ಹೆಚ್ಚಿನ ಸಲ ಇದ್ರ ಅರ್ಥ ವಿಧೇಯತೆ ತೋರಿಸಿ ಅಂತಾಗಿದೆ. ಯೆಹೋವ ದೇವರು ಕೂಟಗಳಲ್ಲಿ ತನ್ನ ವಾಕ್ಯದ ಮೂಲಕ ತನಗೆ ಏನು ಇಷ್ಟ, ಏನು ಇಷ್ಟ ಇಲ್ಲ ಅಂತ ಕಲಿಸ್ತಾನೆ. ನಾವು ಅದಕ್ಕೆ ಗಮನ ಕೊಟ್ಟಾಗ ವಿಧೇಯತೆ ತೋರಿಸೋಕೆ ಸುಲಭ ಆಗುತ್ತೆ. ನಾವು ದೇವರ ಮಾತಿನ ಪ್ರಕಾರ ನಡ್ಕೊಂಡಾಗ ಯೆಹೋವನಿಗೆ ನಮ್ಮನ್ನ ನೋಡಿ ಖುಷಿ ಆಗುತ್ತೆ.—ಜ್ಞಾನೋ. 27:11.

ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಕಾರಣ . . .

5. ಯೆಹೋವನ ಮೇಲೆ ಪ್ರೀತಿ ಇದ್ರೆ ನಾವು ಏನು ಮಾಡ್ತೀವಿ? (ಯೋಹಾ. 4:23, 24; 1 ಯೋಹಾ. 5:3)

5 ಯೆಹೋವನ ಮೇಲಿರೋ ಪ್ರೀತಿ. (ಮತ್ತಾ. 22:37) ನಾವು ಯೆಹೋವನ ಬಗ್ಗೆ ಎಷ್ಟು ಜಾಸ್ತಿ ಕಲಿತೀವೋ ಆತನ ಮೇಲಿರೋ ಪ್ರೀತಿನೂ ಅಷ್ಟೇ ಜಾಸ್ತಿ ಆಗುತ್ತೆ. ಆ ಪ್ರೀತಿ, ಆತನ ಮಾತು ಕೇಳೋಕೆ, ವಿಧೇಯತೆ ತೋರಿಸೋಕೆ ಮತ್ತು ಆತನಿಗೆ ಇಷ್ಟ ಆಗೋ ತರ ಆರಾಧನೆ ಮಾಡೋಕೆ ನಮ್ಮನ್ನ ಪ್ರಚೋದಿಸುತ್ತೆ.—ಯೋಹಾನ 4:23, 24; 1 ಯೋಹಾನ 5:3 ಓದಿ.

6. ಕೂಟಗಳಲ್ಲಿ ಗಮನ ಕೊಡೋದ್ರಿಂದ ಏನು ಪ್ರಯೋಜ್ನ?

6 ಜನ್ರ ಮೇಲಿರೋ ಪ್ರೀತಿ. (ಮತ್ತಾ. 22:39) ನಮ್ಮ ಸಹೋದರ ಸಹೋದರಿಯರಿಗೆ ಮತ್ತು ಸತ್ಯದಲ್ಲಿ ಇಲ್ಲದೇ ಇರೋರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೆಹೋವ ಕೂಟಗಳಲ್ಲಿ ಕಲಿಸ್ತಾನೆ. ಉದಾಹರಣೆಗೆ, ಜನ್ರನ್ನ ಪ್ರೀತಿಸಿ ಶಿಷ್ಯರಾಗೋಕೆ ಕಲಿಸಿ ಅನ್ನೋ ಬ್ರೋಷರ್‌ ನಾವು ಜನ್ರಿಗೆ ಸಿಹಿಸುದ್ದಿ ಸಾರೋಕೆ ಸಹಾಯ ಮಾಡೋ ಗುಣಗಳನ್ನು ಬೆಳೆಸ್ಕೊಳ್ಳೋಕೆ ಸಹಾಯ ಮಾಡುತ್ತೆ. ಸೇವೆಗೆ ಹೋದಾಗ ಜನರ ಹತ್ರ ಮಾತು ಶುರು ಮಾಡೋಕೆ ನಿಮಗೆ ಕಷ್ಟ ಆಗ್ತಿದ್ಯಾ? ಒಂದುವೇಳೆ ಕಷ್ಟ ಆಗ್ತಿದ್ರೆ ವಾರಮಧ್ಯದ ಕೂಟಗಳಲ್ಲಿ ನಮ್ಮ ಸಹೋದರ ಸಹೋದರಿಯರು ಮಾಡೋ ಅಭಿನಯಗಳಿಗೆ ಚೆನ್ನಾಗಿ ಗಮನ ಕೊಡಿ. ಆಗ ಮಾತಾಡೋ ಕೌಶಲ್ಯಗಳನ್ನ ನೀವು ಬೆಳೆಸ್ಕೊಳ್ತೀರ.

7. ಯೆಹೋವನ ಮಾತನ್ನ ಕೇಳ್ತಿರೋದು ಯಾಕೆ ಮುಖ್ಯ?

7 ಜೀವದ ಮೇಲಿರೋ ಪ್ರೀತಿ. ಹಿಂದಿನ ಕಾಲದಲ್ಲಿ ಯಾರು ದೇವರ ಮಾತನ್ನ ಕೇಳಿದ್ರೋ ಅವರು ತಮ್ಮ ಜೀವವನ್ನ ಉಳಿಸ್ಕೊಂಡ್ರು. ಅದೇ ತರ ನಾವು ಇವತ್ತು ಆತನ ಮಾತನ್ನ ಕೇಳಿದ್ರೆ ನಮ್ಮ ಜೀವವನ್ನೂ ಉಳಿಸ್ಕೋತೀವಿ. (ಧರ್ಮೋ. 32:44-47) ನಾವು ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋದ್ರಿಂದ ನಮಗೆ ಪ್ರೋತ್ಸಾಹ ಸಿಗುತ್ತೆ. ಇದ್ರಿಂದ ನಮ್ಮ ಜೀವನದಲ್ಲಿ ಏನೇ ಕಷ್ಟಗಳು ಬಂದ್ರೂ ಹೊಸ ಲೋಕ ಬರೋವರೆಗೂ ತಾಳ್ಕೊಂಡು ಹೋಗೋಕೆ ಸಹಾಯ ಆಗುತ್ತೆ. (ರೋಮ. 8:25) ಅದ್ರಲ್ಲೂ ನಾವು ಕೊನೇ ದಿನಗಳಲ್ಲಿ ಜೀವನ ಮಾಡ್ತಾ ಇರೋದ್ರಿಂದ ಈಗ ನಾವು ವಿಧೇಯತೆ ತೋರಿಸೋದು ತುಂಬ ಮುಖ್ಯ. ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ರೆ ಮಾತ್ರ ನಮ್ಮ ಪ್ರಾಣ ಕಾಪಾಡ್ಕೊತೀವಿ.—ಮತ್ತಾ. 24:42-44; ಪ್ರಕ. 1:3.

ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಸಹಾಯ ಮಾಡಿ

8. ಭಾಷಣ ಕೊಡೋ ನೇಮಕ ಇರೋರು ಯಾಕೆ ಮಾತಾಡೋ ಕಲೆಯನ್ನ ಬೆಳೆಸಿಕೊಳ್ತಾ ಇರಬೇಕು?

8 ಸಭೆಯಲ್ಲಿ ಕಲಿಸೋ ಜವಾಬ್ದಾರಿ ಇರೋರು, ಅದ್ರಲ್ಲೂ ಸಾರ್ವಜನಿಕ ಭಾಷಣ ಕೊಡೋರು ಮಾತಾಡೋ ಸಾಮರ್ಥ್ಯನ ಬೆಳೆಸ್ಕೊಳ್ತಾ ಇರಬೇಕು. ಚೆನ್ನಾಗಿ ತಯಾರಿ ಮಾಡಿ ಬೈಬಲ್‌ ಆಧಾರಿತವಾಗಿ ಅವರು ಕೊಡೋ ಭಾಷಣಗಳು ಹೊಸಬ್ರನ್ನ ಸತ್ಯದ ಕಡೆಗೆ ಸೆಳೆಯುತ್ತೆ. ಈಗಾಗ್ಲೇ ಸತ್ಯದಲ್ಲಿ ಇರೋರು ಅದ್ರಲ್ಲೇ ಉಳಿಯೋಕೂ ಸಹಾಯ ಮಾಡುತ್ತೆ. ಹಾಗಾಗಿ ನಿಮಗೆ ಕೂಟದಲ್ಲಿ ಯಾವುದೇ ಭಾಗ ಸಿಗಲಿ, ಇದು ಮಾಮೂಲಿ ವಿಷ್ಯ ಅಂತ ಅಂದ್ಕೊಬೇಡಿ. ಸಭೆಯವ್ರಿಗೆ ಅದ್ರಿಂದ ತುಂಬ ಪ್ರಯೋಜ್ನ ಸಿಗುತ್ತೆ ಅಂತ ನೆನಪಿಡಿ. ಹಾಗಾಗಿ ನಿಮ್ಮ ಕೈಲಾದಷ್ಟು ಚೆನ್ನಾಗಿ ತಯಾರಿಸಿ. ಒಂದುವೇಳೆ ನಿಮಗೆ ಸಭೆಯಲ್ಲಿ ಬೋಧಿಸೋ ಸುಯೋಗ ಇದ್ರೆ ಮುಂದೆ ಕೊಟ್ಟಿರೋ ಸಲಹೆಗಳನ್ನ ದಯವಿಟ್ಟು ನಿಮ್ಮ ಭಾಷಣಗಳಲ್ಲಿ ಅನ್ವಯಿಸ್ಕೊಳ್ಳೋಕೆ ಪ್ರಯತ್ನ ಹಾಕಿ. ಇಲ್ಲಿ ಕೊಟ್ಟಿರೋ ಹೆಚ್ಚಿನ ಅಂಶಗಳು ಸಾರ್ವಜನಿಕ ಭಾಷಣ ಕೊಡೋರಿಗೆ ಅಂತಾನೇ ಇರೋದಾದ್ರೂ ಅದ್ರಲ್ಲಿರೋ ತತ್ವಗಳನ್ನ ನೀವು ಯಾವುದೇ ನೇಮಕ ಮಾಡುವಾಗ್ಲೂ ಅನ್ವಯಿಸ್ಕೊಬಹುದು.—2 ತಿಮೊ. 4:2; ತೀತ 1:9.

9. ನಿಮ್ಮ ಭಾಷಣ ಸುಲಭವಾಗಿ ಅರ್ಥ ಆಗಬೇಕಂದ್ರೆ ನೀವೇನು ಮಾಡಬೇಕು?

9 ಭಾಷಣದಲ್ಲಿರೋ ಅಂಶಗಳನ್ನ ಕ್ರಮಬದ್ಧವಾಗಿ ಜೋಡಿಸಿ. ನಿಮ್ಮ ಭಾಷಣ ಸಭಿಕರಿಗೆ ಸುಲಭವಾಗಿ ಅರ್ಥ ಆಗೋ ತರ ಇರಬೇಕು. ಹಾಗಾಗಿ ಒಂದೇ ಸಲ ಹೆಚ್ಚು ಅಂಶಗಳನ್ನ ಹೇಳೋಕೆ ಹೋಗಬೇಡಿ. ಒಂದುವೇಳೆ ಹಾಗೆ ಮಾಡಿದ್ರೆ, ಮುಖ್ಯ ಅಂಶ ಯಾವುದು ಅಂತ ಸಭಿಕರಿಗೆ ಅರ್ಥ ಆಗಲ್ಲ. ನೀವು ನಿಮ್ಮ ಭಾಷಣದ ಅಂಶಗಳನ್ನ ಕ್ರಮಬದ್ಧವಾಗಿ ಜೋಡಿಸೋಕೆ ಏನು ಮಾಡಬಹುದು? ಈ ಕೆಲವು ಸಲಹೆಗಳನ್ನ ಪಾಲಿಸಿ: (1) ಭಾಷಣದಲ್ಲಿರೋ ಮುಖ್ಯ ವಿಷ್ಯಗಳನ್ನ ಆರಂಭದಲ್ಲೇ ಸ್ಪಷ್ಟವಾಗಿ ತಿಳಿಸಿ. (2) ಒಂದೊಂದೇ ಅಂಶವನ್ನ ವಿವರಿಸಿ. ನೀವು ಒಂದು ಮುಖ್ಯ ವಿಷ್ಯದಿಂದ ಇನ್ನೊಂದು ಮುಖ್ಯ ವಿಷಯಕ್ಕೆ ತಕ್ಷಣ ಹಾರಬೇಡಿ. ಒಂದು ಮುಖ್ಯ ವಿಷ್ಯ ಮಾತಾಡಿದ ನಂತರ ಸ್ವಲ್ಪ ನಿಲ್ಲಿಸಿ, ಸ್ಪಷ್ಟವಾಗಿ ಮುಂದಿನ ಅಂಶನ ಹೇಳಿ. (3) ಕೊನೆಗೆ, ಕಲಿತ ಮುಖ್ಯ ವಿಷ್ಯಗಳನ್ನ ಸಾರಾಂಶಿಸಿ.

10. ಭಾಷಣದಲ್ಲಿರೋ ಅಂಶಗಳ ರುಚಿ ತಿಳ್ಕೊಳ್ಳೋದು ಯಾಕೆ ಮುಖ್ಯ?

10 ಭಾಷಣದಲ್ಲಿರೋ ಅಂಶಗಳ ಮೌಲ್ಯ ಅಥವಾ ರುಚಿ ತಿಳ್ಕೊಳ್ಳಿ. ಆಗ ನೀವು ಸಭೆ ಮುಂದೆ ಅದ್ರ ಬಗ್ಗೆ ಹುರುಪಿಂದ ಮಾತಾಡ್ತೀರ. (ಜ್ಞಾನೋ. 2:4, 5; ಅ. ಕಾ. 4:20) ಈ ರುಚಿ ತಿಳ್ಕೊಳ್ಳೋಕೆ ಏನು ಮಾಡಬೇಕು? ಕೊಟ್ಟಿರೋ ವಚನಗಳ ಬಗ್ಗೆ ಚೆನ್ನಾಗಿ ಧ್ಯಾನ ಮಾಡಬೇಕು, ರೆಫರೆನ್ಸ್‌ಗಳನ್ನ ತೆರೆದು ಓದಬೇಕು. ಆಗ ನಮಗೆ ಒಳ್ಳೊಳ್ಳೆ ಅಂಶಗಳು ಸಿಗುತ್ತೆ. ಅಮೆರಿಕಾದಲ್ಲಿರೋ 70 ವರ್ಷದ ಒಬ್ಬ ಸಹೋದರ, ಅವರು ಚಿಕ್ಕವರಿದ್ದಾಗ ಕೇಳಿಸ್ಕೊಂಡ ಒಂದು ಭಾಷಣದ ಬಗ್ಗೆ ಏನು ಹೇಳ್ತಾರೆ ನೋಡಿ, “ಒಬ್ಬ ಸಹೋದರ ಬೈಬಲ್‌ ಓದೋದು, ಧ್ಯಾನ ಮಾಡೋದು ಎಷ್ಟು ಮುಖ್ಯ ಅಂತ ಒಂದು ಭಾಷಣ ಕೊಟ್ಟಿದ್ದು ನಂಗೆ ಇನ್ನೂ ನೆನಪಿದೆ. ಧ್ಯಾನ ಮಾಡೋದು ಹೇಗೆ ಅಂತ ಎಷ್ಟು ಚೆನ್ನಾಗಿ ಅವರು ಹೇಳಿಕೊಟ್ರು ಅಂದ್ರೆ ಆ ಭಾಷಣ, ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿಬಿಡ್ತು. ನಾನು ಬಿಡದೇ ಬೈಬಲ್‌ ಓದೋಕೆ ಯೆಹೋವನ ಸ್ನೇಹನ ಇನ್ನಷ್ಟು ಬಲಪಡಿಸ್ಕೊಳ್ಳೋಕೆ ನನಗೆ ಸಹಾಯ ಮಾಡ್ತು.”

11. ಭಾಷಣ ಕೊಡ್ವಾಗ ಯಾವುದ್ರ ಬಗ್ಗೆ ಯೋಚಿಸಬೇಕು ಮತ್ತು ಏನು ಮಾಡಬೇಕು? (1 ತಿಮೊತಿ 4:13-16)

11 ನಿಮ್ಮ ಸಭಿಕರ ಅಗತ್ಯದ ಬಗ್ಗೆ ಯೋಚಿಸಿ, ಅವ್ರೇನು ಮಾಡಬೇಕು ಅಂತ ಸಲಹೆ ನೀಡಿ. ನಿಮ್ಮ ಭಾಷಣದಲ್ಲಿ ಸಾಮಾನ್ಯ ವಿಷ್ಯಾನೇ ಹೇಳ್ತಾ ಹೋಗಬೇಡಿ. ಬೈಬಲ್‌ ಬಳಸ್ತಾ ನಿರ್ದಿಷ್ಟ ಪ್ರೋತ್ಸಾಹ ಮತ್ತು ಸಲಹೆಗಳನ್ನ ಕೊಡಿ. ಎಫೆಸದಲ್ಲಿ ತಿಮೊತಿ ತನ್ನ ನೇಮಕನ ಚೆನ್ನಾಗಿ ಮಾಡೋಕೆ ಪೌಲ ಅವನಿಗೆ ನಿರ್ದಿಷ್ಟವಾದ ಸಲಹೆಗಳನ್ನ ಕೊಟ್ಟ. (1 ತಿಮೊತಿ 4:13-16 ಓದಿ.) ಇದ್ರಿಂದ ತಿಮೊತಿ ಆಧ್ಯಾತ್ಮಿಕವಾಗಿ ಬಲವಾಗಿರೋಕೆ ಸಹಾಯ ಆಯ್ತು. ಆದ್ರಿಂದ ನೀವು ಸಹ ನಿಮ್ಮ ಸಭಿಕರ ಅಗತ್ಯ ಏನು ಅಂತ ಯೋಚಿಸಿ. ಅವರು ಕಲಿತಿರೋ ಅಂಶಗಳನ್ನ ಹೇಗೆ ಅನ್ವಯಿಸ್ಕೊಬಹುದು ಅಂತ ನಿರ್ದಿಷ್ಟವಾಗಿ ತಿಳಿಸಿ.

12. ಭಾಷಣ ಕೊಡ್ವಾಗ ಸ್ವಾಭಾವಿಕವಾಗಿ ಮಾತಾಡೋದು ಯಾಕೆ ತುಂಬ ಒಳ್ಳೇದು?

12 ನಿಮ್ಮ ಭಾಷಣವನ್ನ ಗಟ್ಟಿಯಾಗಿ ಪ್ರಾಕ್ಟೀಸ್‌ ಮಾಡಿ, ಆಗ ಸ್ವಾಭಾವಿಕವಾಗಿ ಮಾತಾಡ್ತೀರ. ಭಾಷಣದ ಪ್ರತಿಯೊಂದು ಪದವನ್ನ ಬರೆದಿಟ್ಟು, ಇರೋದನ್ನ ಹಾಗೇ ಓದಿದ್ರೆ ಜನ್ರ ಹೃದಯ ಮುಟ್ಟೋಕೆ ಆಗಲ್ಲ. ಸ್ವಾಭಾವಿಕವಾಗಿ ಮಾತಾಡೋದಾದ್ರೆ ಸಭಿಕರಿಗೆ ಭಾಷಣ ಚೆನ್ನಾಗಿ ಅರ್ಥ ಆಗುತ್ತೆ. ಅದು ಅವ್ರ ಹೃದಯ ಮುಟ್ಟುತ್ತೆ. ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಅನ್ನೋ ಕಿರುಹೊತ್ತಗೆ ಹೀಗೆ ಹೇಳುತ್ತೆ, “ಸ್ವಾಭಾವಿಕವಾಗಿ, ಮನದಾಳದಿಂದ ಮಾತಾಡಿ. ಆಗ ನೀವು ಮಾತಾಡುತ್ತಿರುವ ವಿಷಯದಲ್ಲಿ ಮತ್ತು ನಿಮಗೆ ಕಿವಿಗೊಡುತ್ತಿರುವ ಜನರಲ್ಲಿ ನಿಮಗೆ ಆಸಕ್ತಿ ಇದೆ ಎಂದು ಗೊತ್ತಾಗುತ್ತದೆ.” ನೀವು ಹೀಗೆ ಮನದಾಳದಿಂದ ಮಾತಾಡಿದ್ರೆ, ನಿಮ್ಮ ಭಾಷಣ ಲವಲವಿಕೆಯಿಂದ, ಆಸಕ್ತಿಕರವಾಗಿ ಮತ್ತು ಪ್ರೋತ್ಸಾಹಿಸೋ ತರ ಇರುತ್ತೆ. ಇದನ್ನ ಕೇಳೋಕೆ ಸಭಿಕರಿಗೂ ಖುಷಿಯಾಗುತ್ತೆ.

13. ಸಭೆಯಲ್ಲಿ ಬೋಧಿಸೋ ನೇಮಕ ಇರೋರು ಅನುಭವ ಇರೋ ಭಾಷಣಕಾರರ ಹತ್ರ ಸಲಹೆ ಕೇಳೋದು ಯಾಕೆ ಒಳ್ಳೇದು? (ಚಿತ್ರ ನೋಡಿ.)

13 ಅನುಭವ ಇರೋ ಭಾಷಣಕಾರರ ಹತ್ರ ಸಲಹೆ ಕೇಳಿ. ಇದನ್ನ ನೀವು ಹೇಗೆ ಮಾಡಬಹುದು? ನೀವು ತಯಾರಿಸಿರೋ ಭಾಷಣದ ನೋಟ್ಸನ್ನ ಅವ್ರಿಗೆ ತೋರಿಸಿ, ಅವ್ರ ಸಲಹೆ ಪಡ್ಕೊಳ್ಳಿ. ಅದ್ರ ಜೊತೆಗೆ ಅವ್ರ ಮುಂದೆ ನೀವು ಒಂದ್ಸಲ ಭಾಷಣ ಮಾಡಿ ತೋರಿಸಿ, ಇನ್ನೂ ಏನು ಪ್ರಗತಿ ಮಾಡಬಹುದು ಅಂತ ಕೇಳಬಹುದು. (ಜ್ಞಾನೋ. 1:5) ನೆನಪಿಡಿ, ಯಾರಿಗೂ ತಮ್ಮ ಬೆನ್ನು ಕಾಣಿಸಲ್ಲ. ಹಾಗಾಗಿ ನಾವು ಸ್ಪಷ್ಟವಾಗಿ ಮಾತಾಡ್ತಿದ್ದೀವಾ? ನಾವು ಹೇಳ್ತಿರೋ ವಿಷ್ಯ ಸಭಿಕರಿಗೆ ಸಹಾಯ ಆಗ್ತಿದ್ಯಾ? ಅಂತ ನಾವು ಯಾರನ್ನಾದ್ರೂ ಕೇಳಿ ತಿಳ್ಕೊಳ್ಳಬೇಕು. ನಾವೆಲ್ರೂ ಬೋಧಕರಾಗಿ, ಚೆನ್ನಾಗಿ ಪ್ರಗತಿ ಮಾಡಬೇಕು. ಆಗ ದೇವರ ವಾಕ್ಯದಲ್ಲಿ ಇರೋ ಮುತ್ತು ರತ್ನಗಳನ್ನ ಸಭಿಕರಿಗೆ ಪ್ರಯೋಜ್ನ ಆಗೋ ರೀತಿಯಲ್ಲಿ ಕಲಿಸೋಕೆ ಆಗುತ್ತೆ.a

ಅನುಭವ ಇರೋ ಸಹೋದರನ ಮುಂದೆ ಒಬ್ಬ ಸಹೋದರ ರಾಜ್ಯಸಭಾಗೃಹದಲ್ಲಿ ತನ್ನ ಭಾಷಣವನ್ನ ಪ್ರ್ಯಾಕ್ಟೀಸ್‌ ಮಾಡ್ತಿದ್ದಾನೆ. ಅವನು ಭಾಷಣ ಕೊಡ್ವಾಗ ಅನುಭವೀ ಸಹೋದರ ನೋಟ್ಸ್‌ ಮಾಡ್ಕೊತಿದ್ದಾನೆ.

ಚೆನ್ನಾಗಿ ಭಾಷಣ ಕೊಡೋಕೆ ಅನುಭವ ಇರೋ ಭಾಷಣಗಾರರ ಸಲಹೆ ಕೇಳಿ (ಪ್ಯಾರ 13 ನೋಡಿ)


ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಏನು ಮಾಡಬೇಕು?

14. ಕೀರ್ತನೆ 119ನ್ನ ಬರೆದವನ ಮನೋಭಾವನ ನಾವು ಯಾಕೆ ಬೆಳೆಸ್ಕೊಬೇಕು? (ಕೀರ್ತನೆ 119:24, 111, 167)

14 ಯೆಹೋವನು ಕೊಡೋ ಮರುಜ್ಞಾಪನಗಳು ಎಷ್ಟು ಮುಖ್ಯ ಅಂತ ನಾವು ಅರ್ಥ ಮಾಡ್ಕೊಂಡ್ರೆ ಗಮನಕೊಟ್ಟು ಕೇಳಿಸ್ಕೊಳ್ಳೋಕೆ ಕಲಿತೀವಿ. ಈ ‘ಕೊನೆ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡ್ತಿದೆ.’ ಹಾಗಾಗಿ ಇರೋ ಈ ಸಮಸ್ಯೆಗಳನ್ನ ನಿಭಾಯಿಸೋಕೆ ಖಂಡಿತ ನಮ್ಮೆಲ್ರಿಗೂ ದೇವರು ಕೊಡೋ ಮರುಜ್ಞಾಪನಗಳು ಬೇಕೇ ಬೇಕು. (2 ತಿಮೊ. 3:1) ಒಂದುವೇಳೆ ನೀವು ಕೂಟಗಳಲ್ಲಿ ಕೇಳಿದ ಅದೇ ವಿಷ್ಯಗಳನ್ನ ಮತ್ತೆ-ಮತ್ತೆ ಕೇಳ್ತಿದ್ದೀರ ಅಂತ ನಿಮಗೆ ಅನಿಸ್ತಿದ್ರೆ 119ನೇ ಕೀರ್ತನೆ ಬರೆದವನ ಮನೋಭಾವನ ಬೆಳೆಸ್ಕೊಬೇಕು.—ಕೀರ್ತನೆ 119:24, 111, 167 ಓದಿ.

15. ಆಧ್ಯಾತ್ಮಿಕ ಆಹಾರದ ಕಡೆಗೆ ಗಣ್ಯತೆ, ಗೌರವವನ್ನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು?

15 ನಾವೆಲ್ರೂ ಆಧ್ಯಾತ್ಮಿಕ ಆಹಾರದ ಕಡೆಗೆ ಗಣ್ಯತೆ, ಗೌರವವನ್ನ ಬೆಳೆಸ್ಕೊಬೇಕು, ಕಾಪಾಡ್ಕೊಬೇಕು. ಯೆಹೋವನು ಇಸ್ರಾಯೇಲ್ಯರಿಗೆ ಕಾಡಲ್ಲಿ ಮನ್ನ ಕೊಟ್ಟಾಗ ಕೂಡ ಅವರು ಇದೇ ತರ ಗಣ್ಯತೆ, ಗೌರವವನ್ನ ಕಾಪಾಡ್ಕೊಬೇಕಿತ್ತು. (ವಿಮೋ. 16:15, 31) ಮೊದಲು ಮನ್ನ ನೋಡಿದಾಗ ಅವ್ರಿಗೆ ತುಂಬ ಖುಷಿ ಆಯ್ತು. ಇದು ಯೆಹೋವ ದೇವರು ಸ್ವತಃ ಕೊಟ್ಟಿರೋ ಆಹಾರ, ತಿನ್ನೋಕೆ ತುಂಬ ರುಚಿಯಾಗಿದೆ, ಇದ್ರಿಂದ ನಮ್ಮ ಪ್ರಾಣ ಉಳೀತಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು. ಅದಕ್ಕೆ ಮೊದಮೊದಲು ಅದನ್ನ ತುಂಬ ಗೌರವಿಸ್ತಿದ್ರು. ಆದ್ರೆ ಹೋಗ್ತಾಹೋಗ್ತಾ ಕೆಲವ್ರಿಗೆ ಪ್ರತಿದಿನ ತಿಂದಿದ್ದನ್ನೇ ತಿಂದು-ತಿಂದು ಬೇಜಾರಾಗೋಯ್ತು. (ಅರ. 21:5) ಇವ್ರಿಂದ ನಮಗೇನಾದ್ರೂ ಪಾಠ ಇದ್ಯಾ? ಅವ್ರ ತರ ನಾವು ಯಾವತ್ತೂ ಆಗಬಾರದು. ಆಧ್ಯಾತ್ಮಿಕ ಆಹಾರನ ನಾವು ಯಾವತ್ತೂ ಕೂಡ ಮಾಮೂಲಿಯಾಗಿ ನೋಡಬಾರದು. ಕೂಟಗಳಲ್ಲಿ ಹೇಳಿದ್ದನ್ನೇ ಮತ್ತೆಮತ್ತೆ ಹೇಳ್ತಾರೆ ಅಂತ ಅದನ್ನ ತಾತ್ಸಾರ ಮಾಡಬಾರದು. ಆಧ್ಯಾತ್ಮಿಕ ಆಹಾರದ ಕಡೆಗೆ ನಮ್ಮ ಗಣ್ಯತೆಯನ್ನ ಕಾಪಾಡ್ಕೊಳ್ಳೋಕೆ ನಾವು ಮೂರು ವಿಷ್ಯ ನೆನಪಿಡಬೇಕು. (1) ನಮಗೆ ಆಧ್ಯಾತ್ಮಿಕ ಆಹಾರನ ಯೆಹೋವನೇ ಕೊಡ್ತಿರೋದು. (2) ಈ ಆಹಾರನ ಯೆಹೋವನ ಸಂಘಟನೆ ತುಂಬ ಯೋಚಿಸಿ ನಮಗೋಸ್ಕರ ತಯಾರು ಮಾಡ್ತಿದೆ. (3) ಈ ಆಧ್ಯಾತ್ಮಿಕ ಆಹಾರದಿಂದ ಸಿಗೋ ವಿವೇಕದಿಂದ ನಾವೀಗ ಒಳ್ಳೆ ತೀರ್ಮಾನ ಮಾಡಬಹುದು ಮತ್ತು ಮುಂದೆ ಶಾಶ್ವತ ಜೀವ ಪಡ್ಕೊಬಹುದು.—ಜ್ಞಾನೋ. 3:13, 16-18; ಯೋಹಾ. 17:3.

16. ಕೂಟಗಳಲ್ಲಿ ಚೆನ್ನಾಗಿ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಯಾವ ಸಲಹೆಗಳು ಸಹಾಯ ಮಾಡುತ್ತೆ? (“ಗಮನಕೊಟ್ಟು ಕೇಳಿಸ್ಕೊಳ್ಳೋಕೆ ಹೀಗೂ ಮಾಡಿ” ಅನ್ನೋ ಚೌಕ ನೋಡಿ.)

16 ಕೆಲವು ಸಲಹೆಗಳನ್ನ ಪಾಲಿಸಿದ್ರೆ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಕಲಿತೀರ. ಯಾವ ಸಲಹೆಗಳು? ಸುಮಾರು 30 ವರ್ಷಗಳಿಂದ ಸೇವೆ ಮಾಡ್ತಿರೋ ಆ್ಯಶ್ಲಿ ಅನ್ನೋ ಸಹೋದರ ಹೀಗೆ ಹೇಳ್ತಾರೆ, “ನಾನು ಚೆನ್ನಾಗಿ ತಯಾರಿಸೋದ್ರಿಂದ ಕೂಟಗಳಲ್ಲಿ ಗಮನ ಕೊಡೋಕೆ ಸುಲಭ ಆಗುತ್ತೆ. ಒಂದುವೇಳೆ ನಾನು ತಯಾರಿ ಮಾಡಿಲ್ಲ ಅಂದ್ರೆ ನನಗೆ ಉತ್ರ ಹೇಳೋಕೆ ಕಷ್ಟ ಆಗುತ್ತೆ. ನನ್ನ ಮನಸ್ಸು ಎಲ್ಲೆಲ್ಲೋ ಅಲೆದಾಡ್ತಾ ಇರುತ್ತೆ.” 52 ವರ್ಷಗಳಿಂದ ಸೇವೆ ಮಾಡ್ತಿರೋ ಜೋಸೆಫ್‌ ಅನ್ನೋ ಸಹೋದರ ಹೀಗೆ ಹೇಳ್ತಾರೆ, “ನನಗೆ ಗೊತ್ತಿರೋ ವಿಷ್ಯಗಳನ್ನೇ ಮತ್ತೆ ಭಾಷಣದಲ್ಲಿ ಕೇಳಿಸ್ಕೊಂಡಾಗ್ಲೂ ನನಗೆ ಖುಷಿಯಾಗುತ್ತೆ. ಯಾಕಂದ್ರೆ ನಾನು ಅದೇ ವಿಷ್ಯಾನ ಬೇರೆಬೇರೆ ಸಹೋದರರು ಬೇರೆಬೇರೆ ದೃಷ್ಟಿಕೋನಗಳಿಂದ ಕೊಡೋದನ್ನ ನೋಡ್ತೀನಿ. ಆಗ ನನಗೆ ಅದು ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ. ಒಂದುವೇಳೆ ಅಷ್ಟು ಚೆನ್ನಾಗಿ ಭಾಷಣ ಕೊಡೋಕೆ ಬರದಿರೋ ಸಹೋದರ ಒಂದು ಭಾಷಣ ಕೊಡ್ತಿರೋದಾದ್ರೆ ನಾನು ಅವರು ಮಾತಾಡ್ತಿರೋ ರೀತಿ ಮೇಲಲ್ಲ, ಅವರು ಕಲಿಸ್ತಿರೋ ವಿಷ್ಯಕ್ಕೆ ಗಮನಕೊಡ್ತೀನಿ. ಯಾಕಂದ್ರೆ ಆ ಸಹೋದರನನ್ನ ಯೆಹೋವನೇ ಬಳಸ್ತಿದ್ದಾನೆ. ಆ ಭಾಷಣದ ಮೂಲಕ ಯೆಹೋವ ನನಗೇನು ಕಲಿಸ್ತಿದ್ದಾನೆ ಅನ್ನೋದಕ್ಕೆ ನಾನು ಗಮನ ಕೊಡ್ತೀನಿ.”

ಗಮನಕೊಟ್ಟು ಕೇಳಸ್ಕೊಳ್ಳೋಕೆ ಹೀಗೂ ಮಾಡಿ:

ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ ಅಂತ ಸುಮಾರು ವರ್ಷದಿಂದ ಯೆಹೋವನನ್ನ ಆರಾಧಿಸ್ತಿರೋ ಕೆಲವ್ರನ್ನ ಕೇಳಿದಾಗ ಅವರು ಈ ಕಿವಿ ಮಾತುಗಳನ್ನ ಹೇಳಿದ್ದಾರೆ:

  • 1986ರಲ್ಲಿ ದೀಕ್ಷಾಸ್ನಾನ ತಗೊಂಡ ಶುಫಾನ್‌ ಹೀಗೆ ಹೇಳ್ತಾರೆ “ನಾನು ಸಭೆಯಲ್ಲಿ ಮುಂದಿನ ಸಾಲುಗಳಲ್ಲಿ ಕೂತ್ಕೊಳ್ತೀನಿ. ಆಗ ಭಾಷಣಕಾರನಿಗೆ, ವಿಡಿಯೋಗಳಿಗೆ ಚೆನ್ನಾಗಿ ಗಮನ ಕೊಡೋಕಾಗುತ್ತೆ.”

  • 1983ರಲ್ಲಿ ದೀಕ್ಷಾಸ್ನಾನ ತಗೊಂಡ ಡೇವಿಡ್‌ ಹೀಗೆ ಹೇಳ್ತಾರೆ “ಚೆನ್ನಾಗಿ ಗಮನ ಕೊಡೋಕೆ ಸಹಾಯ ಮಾಡು ಅಂತ ನಾನು ಯೆಹೋವ ದೇವ್ರಿಗೆ ತುಂಬ ಸಲ ಪ್ರಾರ್ಥನೆ ಮಾಡ್ತೀನಿ. ಕೂಟಗಳಿಗೆ ಹೋಗೋದು, ಗಮನ ಕೊಟ್ಟು ಕೇಳಿಸ್ಕೊಳ್ಳೋದು, ಕೈ ಎತ್ತಿ ಉತ್ರ ಹೇಳೋದೆಲ್ಲ ನನ್ನ ಆರಾಧನೆಯ ಭಾಗ ಅಂತ ನಾನು ನೆನಪಿಡ್ತೀನಿ.”

  • 1982ರಲ್ಲಿ ದೀಕ್ಷಾಸ್ನಾನ ತಗೊಂಡ ನಿಕೊಲಸ್‌ ಹೀಗೆ ಹೇಳ್ತಾರೆ, “ಕೂಟದಲ್ಲಿ ನೇಮಕ ಮಾಡಿದ ಪ್ರತಿಯೊಬ್ರಿಗೂ ಅವರು ಬಳಸಿದ ಉದಾಹರಣೆ ಅಥವಾ ಹೇಳಿದ ವಿಷ್ಯಕ್ಕಾಗಿ ನಿರ್ದಿಷ್ಟವಾಗಿ ಥ್ಯಾಂಕ್ಸ್‌ ಹೇಳೋ ಗುರಿ ಇಡಿ.”

  • 1988ರಲ್ಲಿ ದೀಕ್ಷಾಸ್ನಾನ ತಗೊಂಡ ಅಗಸ್ಟಿನ್‌ ಹೀಗೆ ಹೇಳ್ತಾರೆ, “ನಂಬಿಗಸ್ತ ಆಳು ಒಂದು ವಿಷ್ಯನಾ ಕೂಟದಲ್ಲಿ ಮತ್ತೆ ಮತ್ತೆ ಹೇಳ್ತಿದ್ದಾರೆ ಅಂದ್ರೆ ಆ ವಿಷ್ಯ ಸರಿಯಾದ ಸಮಯಕ್ಕೆ ಸಿಗ್ತಿರೋ ಆಹಾರ ಅಂತ ನಾನು ಅಂದ್ಕೊಳ್ತೀನಿ.”

17. ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ನೀವು ಇನ್ನು ಏನೆಲ್ಲಾ ಮಾಡಬಹುದು? (ಚಿತ್ರ ನೋಡಿ.)

17 ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ, ಮುಂದಿರೋ ಸಲಹೆಗಳಲ್ಲಿ ಒಂದೆರಡಾದ್ರೂ ಪಾಲಿಸಿ. (1) ಕೂಟಕ್ಕೆ ಹೋಗೋ ಮುಂಚೆ ನೀವು ಒಂದುವೇಳೆ ಊಟ ಮಾಡೋದಾದ್ರೆ ದಯವಿಟ್ಟು ಸ್ವಲ್ಪ ತಿನ್ನಿ. ಆಗ ಎಚ್ಚರವಾಗಿದ್ದು ಗಮನ ಕೊಡೋಕಾಗುತ್ತೆ. (2) ಕೂಟಕ್ಕೆ ಬೇಗ ಬನ್ನಿ. ಚೆನ್ನಾಗಿ ಗಮನ ಕೊಡೋಕೆ ಎಲ್ಲಿ ಕೂತ್ಕೋಬೇಕು ಅಂತ ನೋಡಿ. (3) ಕೂಟ ನಡೀವಾಗ ಮೊಬೈಲ್‌ ಅಥವಾ ಟ್ಯಾಬ್‌ಗಳು ನಿಮ್ಮನ್ನ ಅಪಕರ್ಷಿಸದಂಥ ಸೆಟ್ಟಿಂಗ್‌ನಲ್ಲಿಡಿ. (4) ಇವತ್ತು ಕೂಟದಲ್ಲಿ ಏನೆಲ್ಲ ಕಲಿಬಹುದು ಅಂತ ಯೋಚ್ನೆ ಮಾಡಿ. (5) ಭಾಷಣ ಕೊಡ್ತಿರೋರ ಮೇಲೆ ಗಮನ ಇಡಿ. (6) ಭಾಷಣದ ಕೆಲವೊಂದು ಮುಖ್ಯ ವಿಷ್ಯಗಳನ್ನ ನೋಟ್ಸ್‌ ಮಾಡಿ ಅಥವಾ ಅದಕ್ಕೆ ಸಂಬಂಧಿಸಿದ ಚಿತ್ರ ಬರೀರಿ. (7) ಭಾಷಣದ ಮುಖ್ಯ ವಚನ ಯಾವುದು, ಅದನ್ನ ಭಾಷಣಕಾರ ಹೇಗೆ ವಿವರಿಸ್ತಾರೆ ಅನ್ನೋದಕ್ಕೆ ಗಮನ ಕೊಡಿ. (8) ಭಾಷಣದಲ್ಲಿ ಕಲಿತಿರೋ ವಿಷ್ಯನ ನಾನು ಸಭೆಯಲ್ಲಿ ಮತ್ತು ಸೇವೆಯಲ್ಲಿ ಹೇಗೆ ಬಳಸಬಹುದು ಅಂತ ನಿಮ್ಮನ್ನೇ ಕೇಳ್ಕೊಳ್ಳಿ. (9) ಸಮ್ಮೇಳನ ಅಥವಾ ಅಧಿವೇಶನದಲ್ಲಿ ಆಯಾ ದಿನದ ಮುಖ್ಯ ವಿಷ್ಯ ಏನು, ಅವತ್ತು ಯಾವ ಭಾಷಣಗಳಿವೆ ಮತ್ತು ಪ್ರತಿಯೊಂದು ಭಾಷಣಕ್ಕೆ ಇರೋ ಮುಖ್ಯ ವಚನ ಯಾವುದು ಅನ್ನೋದನ್ನ ಮೊದಲೇ ನೋಡ್ಕೊಳ್ಳಿ. (10) ಸಂಗೀತ ಮತ್ತು ವಿಡಿಯೋ ಪ್ರದರ್ಶನ ಹಾಕಿದಾಗ ಅದನ್ನ ಕೂತು ಚೆನ್ನಾಗಿ ಕೇಳಿಸಿಕೊಳ್ಳಿ. ಹೀಗೆ, ಕಾರ್ಯಕ್ರಮಕ್ಕಾಗಿ ನಿಮ್ಮ ಹೃದಯವನ್ನ ಸಿದ್ಧ ಮಾಡಿಕೊಳ್ಳಿ.

“ಕಾವಲಿನಬುರುಜು” ನಡೀವಾಗ ಒಬ್ಬ ಸಹೋದರ ಮೆಸೇಜ್‌ ಮಾಡ್ತಿದ್ದಾನೆ.

ದೇವರು ಕೊಡೋ ಮರುಜ್ಞಾಪನಗಳಿಗೆ ಗಮನಕೊಡಿ, ಫೋನ್‌, ಟ್ಯಾಬ್‌ ನಿಮ್ಮನ್ನ ಅಪಕರ್ಷಿಸದಂತೆ ನೋಡ್ಕೊಳ್ಳಿ (ಪ್ಯಾರ 17 ನೋಡಿ)


ಯೆಹೋವನ ಮಾತನ್ನ ಕೇಳಿಸ್ಕೊಳ್ತಾ ಇರಿ

18. ಕೂಟಗಳಲ್ಲಿ ನಾವು ಯಾಕೆ ಗಮನ ಕೊಟ್ಟು ಕೇಳಿಸ್ಕೊಳ್ತಾ ಇರಬೇಕು?

18 ಕೂಟಗಳಲ್ಲಿ ನಾವು ಗಮನ ಕೊಟ್ಟು ಕೇಳಿಸ್ಕೊಳ್ಳೋದು ತುಂಬ ಮುಖ್ಯ. ಆಗ ಮಾತ್ರ ನಾವು ಯೆಹೋವ ನಡೆಸೋ ‘ಆ ಒಳ್ಳೆ ದಾರಿಲಿ’ ಹೋಗೋಕೆ ಆಗುತ್ತೆ. (ಕೀರ್ತ. 23:3; 31:3) (ಲೂಕ 8:18) ಕೂಟಗಳಲ್ಲಿ ಯೆಹೋವನು ನಮಗೆ ಸಲಹೆ ಮತ್ತು ತಿದ್ದುಪಾಟು ಕೊಡ್ತಾನೆ. ಇವಕ್ಕೆ ನಾವು ಚೆನ್ನಾಗಿ ಗಮನ ಕೊಡಬೇಕು. ಇಲ್ಲಾಂದ್ರೆ ದೋಣಿ ದಡದಿಂದ ತೇಲಿ ಹೋಗೋ ತರ ನಾವು ಸತ್ಯದಿಂದ ತೇಲಿ ಹೋಗಿಬಿಡ್ತೀವಿ. ಆದ್ರೆ ಕೂಟಗಳಲ್ಲಿ ನಮಗೆ ಸಿಗೋ ಸಲಹೆಗಳು, ತಿದ್ದುಪಾಟು ನಾವು ಯೆಹೋವನಿಗೆ ಯಾವಾಗ್ಲೂ ಹತ್ರ ಇರೋಕೆ ಸಹಾಯ ಮಾಡುತ್ತೆ. ಹಾಗಾಗಿ ನಾವೆಲ್ರೂ ಕೂಟಗಳಲ್ಲಿ ಚೆನ್ನಾಗಿ ಗಮನ ಕೊಟ್ಟು ಕೇಳಿಸ್ಕೊಬೇಕು, ಪಾಲಿಸಬೇಕು. ನಾವು ಯೆಹೋವ ಹೇಳೋದನ್ನ ಗಮನ ಕೊಟ್ಟು ಕೇಳಿಸಿಕೊಳ್ತಾ ಇದ್ರೆ, ಈಗ್ಲೂ ಮತ್ತೆ ಮುಂದೆ ಶಾಶ್ವತ ಜೀವನದಲ್ಲೂ ಖುಷಿಯಾಗಿರ್ತಿವಿ.—ಕೀರ್ತ. 119:2, 14.

ನೀವೇನು ಹೇಳ್ತೀರಾ?

  • ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋದು ಯಾಕೆ ಮುಖ್ಯ?

  • ಸಭಿಕರು ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಭಾಷಣಕಾರರು ಹೇಗೆ ಸಹಾಯ ಮಾಡಬಹುದು?

  • ನೀವು ಗಮನ ಕೊಟ್ಟು ಕೇಳಿಸ್ಕೊಳ್ಳೋಕೆ ಏನು ಮಾಡಬೇಕು?

ಗೀತೆ 87 ಬನ್ನಿ! ಚೈತನ್ಯ ಪಡೆಯಿರಿ

a ಒಳ್ಳೆ ಭಾಷಣಗಾರರಾಗಲು ಮತ್ತು ಚೆನ್ನಾಗಿ ಕಲಿಸಲು ಬೇಕಾದ ಕೌಶಲ್ಯಗಳ ಬಗ್ಗೆ ಹೆಚ್ಚಿನ ಸಲಹೆಗಳನ್ನ ತಿಳಿಯಲು ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಕಿರುಹೊತ್ತಗೆ ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕವನ್ನ ನೋಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ