ಜುಲೈ 20-26, 2026
ಗೀತೆ 135 ಯೆಹೋವನ ಸ್ನೇಹಪರ ಮನವಿ: “ನನ್ನ ಮಗನೇ, ವಿವೇಕಿಯಾಗಿರು”
ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ವಿವೇಕದಿಂದ ನಿರ್ಧಾರ ಮಾಡಿ
“ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.”—ಜ್ಞಾನೋ. 14:15.
ಈ ಲೇಖನದಲ್ಲಿ ಏನಿದೆ?
ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾ ಬೇಡ್ವಾ ಅಂತ ತೀರ್ಮಾನ ಮಾಡ್ವಾಗ ಯಾವ ಅಂಶಗಳನ್ನ ಮತ್ತು ಬೈಬಲ್ ತತ್ವಗಳನ್ನ ಮನಸ್ಸಲ್ಲಿ ಇಟ್ಕೊಬೇಕು ಅಂತ ನೋಡೋಣ.
1-2. (ಎ) ಯುವಜನ್ರು ಯಾವ ನಿರ್ಧಾರ ಮಾಡಬೇಕಾಗುತ್ತೆ? (ಬಿ) ಹೆಚ್ಚಿನ ವಿದ್ಯಾಭ್ಯಾಸ ಅಂದ್ರೇನು? (“ಪದವಿವರಣೆ ನೋಡಿ.”)
‘ನೀನು ದೊಡ್ಡವನಾದ್ಮೇಲೆ ಏನಾಗಬೇಕು ಅಂತ ಅಂದ್ಕೊಂಡಿದ್ಯಾ?’ ನೀವು ಚಿಕ್ಕವರಾಗಿದ್ರೆ ಈ ಪ್ರಶ್ನೆನಾ ನಿಮಗೆ ಒಬ್ರಲ್ಲ ಒಬ್ರು ತುಂಬ ಸಲ ಕೇಳಿರ್ತಾರೆ. ಆದ್ರೆ ಜೀವನದಲ್ಲಿ ನಾವು ಮಾಡಬಹುದಾದ ಬೆಸ್ಟ್ ಕೆಲಸ ಯಾವುದು ಗೊತ್ತಾ? ಯೆಹೋವನಿಗೆ ನಮ್ಮ ಸಮಯ, ಶಕ್ತಿ ಕೊಡ್ತಾ ಪಯನೀಯರ್ ಸೇವೆ ಅಥವಾ ಇತರ ಪೂರ್ಣ ಸಮಯದ ಸೇವೆನ ಮಾಡೋದು. ಆದ್ರೆ ಆಗ್ಲೂ ನಮ್ಮ ಖರ್ಚನ್ನ ನಾವು ನೋಡ್ಕೊಬೇಕಾಗುತ್ತೆ. (2 ಥೆಸ. 3:10) ಹಾಗಾಗಿ ನೀವು ‘ನಾನು ಮುಂದೆ ಏನು ಕೆಲಸ ಮಾಡಬೇಕು’ ಅಂತ ಯೋಚ್ನೆ ಮಾಡಿರ್ತೀರ.
2 ದೊಡ್ಡವರಾದ್ಮೇಲೆ ಒಂದು ಕೆಲಸ ಹುಡ್ಕೊಳ್ಳೋಕೆ ‘ನಾನು ಎಷ್ಟು ಓದಬೇಕಾಗುತ್ತೆ’ ಅಂತ ಕೆಲವು ಮಕ್ಕಳು ಅಪ್ಪ-ಅಮ್ಮನ ಹತ್ರ ಮಾತಾಡ್ತಾರೆ. ಆದ್ರಿಂದ ಆಯಾ ಜಾಗದಲ್ಲಿ, ಸರ್ಕಾರ ಅವಶ್ಯಪಡಿಸೋ ಶಾಲಾ ಶಿಕ್ಷಣ ಮುಗಿದ್ಮೇಲೆ ಹೆಚ್ಚಿನ ವಿದ್ಯಾಭ್ಯಾಸ ಮಾಡೋ ನಿರ್ಧಾರ ಮಾಡ್ತಾರೆ.a ನಿಮಗೂ ‘ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾ’ ಅನ್ನೋ ಯೋಚ್ನೆ ಬಂದಿರಬಹುದು. ಹಾಗಾದ್ರೆ ಈ ಲೇಖನದಲ್ಲಿರೋ ಬೈಬಲ್ ತತ್ವಗಳು ಒಳ್ಳೆ ನಿರ್ಧಾರ ಮಾಡೋಕೆ ಸಹಾಯ ಮಾಡುತ್ತೆ. ಹಾಗಾಗಿ ನೀವು ಈ ತತ್ವಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡೋದು ಒಳ್ಳೇದು. ಈ ಲೇಖನ ಯುವಜನ್ರ ಬಗ್ಗೆ ಮಾತಾಡೋದಾದ್ರೂ ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಯೋಚ್ನೆ ಮಾಡ್ತಿರೋ ಪ್ರತಿಯೊಬ್ಬ ಕ್ರೈಸ್ತನಿಗೂ ಸಹಾಯ ಮಾಡುತ್ತೆ. ಮಕ್ಕಳಿಗೆ ಒಳ್ಳೆ ಮಾರ್ಗದರ್ಶನ ಕೊಡೋಕೆ ಅಪ್ಪ-ಅಮ್ಮನಿಗೂ ಸಹಾಯ ಮಾಡುತ್ತೆ.
ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾ?
3. ಕೆಲವರು ಯಾಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅನ್ನೋ ನಿರ್ಧಾರ ತಗೊಳ್ತಾರೆ?
3 ದೇಶದಿಂದ ದೇಶಕ್ಕೆ ವಿದ್ಯಾಭ್ಯಾಸದ ಅಗತ್ಯ ಬದಲಾಗ್ತಾ ಹೋಗುತ್ತೆ. ಕೆಲವೊಂದು ದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಅಂದ್ರೂ ಜೀವನ ಸಾಗಿಸೋಕೆ ಸಹಾಯ ಮಾಡೋ ಕೆಲಸ ಸಿಗುತ್ತೆ. ಇನ್ನು ಕೆಲವು ದೇಶಗಳಲ್ಲಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ರೆ ಮಾತ್ರ ಕಮ್ಮಿ ಸಮಯದ ಅಥವಾ ಜಾಸ್ತಿ ಸಂಬಳ ಸಿಗೋ ಕೆಲಸ ಸಿಗುತ್ತೆ. ಇಂಥ ಕೆಲಸ, ಒಬ್ಬ ಕ್ರೈಸ್ತನಿಗೆb ಜಾಸ್ತಿ ಸಿಹಿಸುದ್ದಿ ಸಾರೋಕೆ ಮತ್ತು ಬೇರೆ-ಬೇರೆ ತರದ ಸೇವೆ ಮಾಡೋಕೆ ಸಹಾಯ ಮಾಡುತ್ತೆ. ಆದ್ರೆ ಈ ತರ ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಒಬ್ಬ ಕ್ರೈಸ್ತ ತನ್ನ ಸಮಯ, ಶಕ್ತಿ ಮತ್ತು ಹಣನ ಖರ್ಚು ಮಾಡಬೇಕಾಗುತ್ತೆ. ಅಷ್ಟೇ ಅಲ್ಲ, ಎಷ್ಟೋ ಸವಾಲುಗಳನ್ನೂ ಎದುರಿಸಬೇಕಾಗುತ್ತೆ.
4. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾ ಬೇಡ್ವಾ ಅಂತ ಯಾರು ನಿರ್ಧಾರ ಮಾಡಬೇಕು? (ಪಾದಟಿಪ್ಪಣಿ ನೋಡಿ.)
4 “ಪ್ರತಿಯೊಬ್ಬನು ತನ್ನ ಹೊರೆಯನ್ನ ತಾನೇ ಹೊತ್ಕೊಬೇಕು” ಅಂತ ಬೈಬಲ್ ಹೇಳುತ್ತೆ. (ಗಲಾ. 6:5, ಸ್ಟಡಿ ನೋಟ್ ನೋಡಿ.) ಹಾಗಾಗಿ ಪ್ರೌಢ ವಯಸ್ಸಿನ ಪ್ರತಿಯೊಬ್ಬ ಕ್ರೈಸ್ತ, ‘ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾ’ ಅಂತ ತಾನೇ ನಿರ್ಧಾರ ಮಾಡಬೇಕು.c ಆದ್ರೆ ಮಕ್ಕಳು ಇನ್ನೂ ಚಿಕ್ಕವರಿರುವಾಗ ಅವ್ರ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರ ಮಾಡೋ ಜವಾಬ್ದಾರಿ ಅಪ್ಪ-ಅಮ್ಮನಿಗೆ ಇರುತ್ತೆ. (ಎಫೆ. 6:1) ಅವರು ಈ ನಿರ್ಧಾರನ ಚೆನ್ನಾಗಿ ಮಾಡಿದ್ರೆ, ಅದನ್ನ ನೋಡಿ ಮಕ್ಕಳು ದೊಡ್ಡವರಾದ್ಮೇಲೆ ತಮ್ಮ ವಿದ್ಯಾಭ್ಯಾಸದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ ತಾವೇ ಒಳ್ಳೆ ನಿರ್ಧಾರ ಮಾಡ್ತಾರೆ.—ಜ್ಞಾನೋ. 22:6.
5. ಒಬ್ಬ ವ್ಯಕ್ತಿ ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಯಾವಾಗ ಯೋಚ್ನೆ ಮಾಡಬಹುದು? ಯಾಕೆ? ( ಚಿತ್ರ ನೋಡಿ.)
5 ಶಾಲಾ ಶಿಕ್ಷಣ ಮುಗಿಸೋ ಮುಂಚೆನೇ ಕೆಲವು ಯುವಜನರು ಹೆಚ್ಚಿನ ವಿದ್ಯಾಭ್ಯಾಸ ಪಡಿಬೇಕಾ ಬೇಡ್ವಾ ಅಂತ ನಿರ್ಧಾರ ಮಾಡಬೇಕಾಗುತ್ತೆ. ಆಗ ಅವ್ರೇ ನಿರ್ಧಾರ ಮಾಡದೇ ಅಪ್ಪ-ಅಮ್ಮನ ಜೊತೆ ಮಾತಾಡಿ ನಿರ್ಧಾರ ಮಾಡಿದ್ರೆ ಚೆನ್ನಾಗಿರುತ್ತೆ. ಆಗ ಇದ್ರ ಬಗ್ಗೆ ಒಟ್ಟಿಗೆ ಯೋಚಿಸೋಕೆ, ತಿಳ್ಕೊಳೋಕೆ ಅವರೆಲ್ರಿಗೂ ಸಮಯ ಸಿಗುತ್ತೆ. ಅವರು ಯಾವ ಸಬ್ಜೆಕ್ಟ್ ತಗೊಂಡ್ರೆ ಮುಂದೆ ಒಳ್ಳೆ ಕೆಲಸ ಸಿಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ ನಿರ್ಧಾರ ಮಾಡೋಕೂ ಸಹಾಯ ಆಗುತ್ತೆ. ಹಾಗಂತ ಶಾಲಾ ಶಿಕ್ಷಣ ಮುಗಿಯೋ ಮುಂಚೆನೇ ಪ್ರತಿಯೊಬ್ರೂ ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರ ಮಾಡಬೇಕು ಅಂತನಾ? ಹಾಗೇನಿಲ್ಲ. (ಜ್ಞಾನೋ. 21:5) ಎಷ್ಟೋ ಯುವಜನರು ಸ್ಕೂಲ್ ಮುಗಿದ್ಮೇಲೆ ಮೊದಲು ಒಂದು ಕೆಲ್ಸ ಹುಡ್ಕೊಂಡು ಪಯನೀಯರ್ ಸೇವೆ ಶುರು ಮಾಡಿದ್ದಾರೆ. ಆಮೇಲೆ ಹೆಚ್ಚಿನ ವಿದ್ಯಾಭ್ಯಾಸ ತಗೋಬೇಕಾ ಬೇಡ್ವಾ ಅಂತ ನಿರ್ಧಾರ ಮಾಡಿದ್ದಾರೆ. ಜೀವನದಲ್ಲಿ ಮುಂದೆ ಯಾವಾಗಾದ್ರೂ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂತ ಅನಿಸಿದ್ರೂ ಆಗ ಆ ವ್ಯಕ್ತಿ ಅದನ್ನ ಮಾಡಬಹುದು.
ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಧಾರ ಮಾಡೋಕೆ ಸಹಾಯ ಮಾಡ್ತಾರೆ (ಪ್ಯಾರ 5 ನೋಡಿ)
6. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಧಾರ ಮಾಡೋಕೆ ಯಾವುದು ಸಹಾಯ ಮಾಡುತ್ತೆ?
6 ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ನಿರ್ಧಾರ ಮಾಡೋಕೆ ಯಾವುದು ಸಹಾಯ ಮಾಡುತ್ತೆ? ಪ್ರಾರ್ಥನೆ! (ಯಾಕೋ. 1:5) ಅಷ್ಟೇ ಅಲ್ಲ, ಮೊದಲನೇದಾಗಿ ನೀವು ಯಾಕೆ ಓದಬೇಕು ಅಂತಿದ್ದೀರಾ, ನಿಮ್ಮ ಉದ್ದೇಶ ಏನು ಅಂತ ಪರೀಕ್ಷೆ ಮಾಡಿ. (ಕೀರ್ತ. 26:2) ಎರಡನೇದಾಗಿ, ನೀವು ಏನು ಓದಬೇಕು ಅಂತಿದ್ದೀರಾ ಅನ್ನೋದ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. (ಜ್ಞಾನೋ. 14:15) ನಾವೀಗ ಈ ಎರಡು ಹೆಜ್ಜೆಗಳ ಬಗ್ಗೆ ನೋಡೋಣ.
ನಿಮ್ಮ ಉದ್ದೇಶ ಏನು?
7. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಯೋಚ್ನೆ ಮಾಡ್ತಿರೋ ಒಬ್ಬ ಕ್ರೈಸ್ತ ಏನು ಮಾಡಬೇಕು?
7 ಹೆಚ್ಚಿನ ವಿದ್ಯಾಭ್ಯಾಸ ಮಾಡೋದ್ರ ಬಗ್ಗೆ ನೀವು ಯೋಚ್ನೆ ಮಾಡ್ತಿದ್ರೆ ಈ ಪ್ರಶ್ನೆ ಕೇಳ್ಕೊಳ್ಳಿ: ‘ನಾನು ಯಾಕೆ ಈ ವಿದ್ಯಾಭ್ಯಾಸ ಮಾಡಬೇಕು ಅಂತಿದ್ದೀನಿ?’ ತುಂಬ ಜನ ತಮಗೆ ಇಷ್ಟವಾಗಿರೋ ಕೆಲಸ ಸಿಗಲಿ, ಕೈ ತುಂಬ ದುಡ್ಡು ಸಿಗಲಿ ಅನ್ನೋ ಉದ್ದೇಶದಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡ್ತಾರೆ. ಈ ಉದ್ದೇಶ ತಪ್ಪಾ? ಹಾಗೇನಿಲ್ಲ. (1 ತಿಮೊ. 5:8) ಆದ್ರೆ ಬೈಬಲ್, ವಸ್ತುಗಳನ್ನ ಜಾಸ್ತಿ ಪ್ರೀತಿಸೋದು, ಹಣ ಇದ್ರೆ ಮಾತ್ರ ಭದ್ರತೆ ಸಿಗುತ್ತೆ ಅಂತ ಅಂದ್ಕೊಳ್ಳೋದು ಅಪಾಯಕ್ಕೆ ನಡೆಸುತ್ತೆ ಅಂತ ಎಚ್ಚರಿಸುತ್ತೆ. (ಜ್ಞಾನೋ. 23:4, 5; 1 ತಿಮೊ. 6:8-10; 1 ಯೋಹಾ. 2:17) ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡೋದ್ರ ಉದ್ದೇಶ ಆಸ್ತಿ ಮಾಡಬೇಕು, ಹೆಸರು ಮಾಡಬೇಕು ಅನ್ನೋದಾಗಿದ್ರೆ ಜೀವನದಲ್ಲಿ ನಿಜ ಖುಷಿನೇ ಇರಲ್ಲ. ಅಷ್ಟೇ ಅಲ್ಲ, ನೀವು ಯೆಹೋವನಿಂದಾನೂ ದೂರ ಹೋಗಿಬಿಡಬಹುದು.
8-9. (ಎ) ಕ್ರೈಸ್ತರು ವಿದ್ಯಾಭ್ಯಾಸನ ಹೇಗೆ ನೋಡಬೇಕು? (ಮತ್ತಾಯ 6:33) (ಬಿ) ಜೋಸ್ಫಿನ, ಮೊರಿನ್ ಮತ್ತು ಐರಿಸ್ ಅವ್ರಿಂದ ನೀವೇನು ಕಲಿತ್ರಿ?
8 ಹಾಗಾದ್ರೆ ನಾವು ವಿದ್ಯಾಭ್ಯಾಸನ ಹೇಗೆ ನೋಡಬೇಕು? ವಿದ್ಯಾಭ್ಯಾಸ ಅಥವಾ ಬೇರೆ ಯಾವುದೇ ವಿಷ್ಯ ನಮಗೆ ಯೆಹೋವನಿಗಿಂತ, ಆತನ ಸೇವೆಗಿಂತ ಮುಖ್ಯ ಆಗಬಾರದು. (ಮತ್ತಾ. 22:37, 38; ಫಿಲಿ. 3:8) ನಮ್ಮ ವಿದ್ಯಾಭ್ಯಾಸ, ನಾವು ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡೋಕೆ ನಮಗೆ ಬೆಂಬಲ ಕೊಡಬೇಕು ಅನ್ನೋದನ್ನ ಮನಸ್ಸಲ್ಲಿಡಿ.—ಮತ್ತಾಯ 6:33 ಓದಿ.
9 ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಸರಿಯಾಗಿ ಯೋಚಿಸೋಕೆ ಕೆಲವು ಕ್ರೈಸ್ತರಿಗೆ ಏನು ಸಹಾಯ ಮಾಡಿದೆ ಗೊತ್ತಾ? ಚಿಲಿ ದೇಶದಲ್ಲಿರೋ ಜೋಸ್ಫಿನಾ ಅನ್ನೋ ಸಹೋದರಿ ಹೇಳೋದು, “ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ರಿಂದ ಯೆಹೋವನ ಸೇವೆನಾ ಜಾಸ್ತಿ ಮಾಡೋಕೆ ಸಹಾಯ ಆಯ್ತು. ನಮ್ಮ ವಿದ್ಯಾಭ್ಯಾಸ ನಮಗಿರೋ ಆಧ್ಯಾತ್ಮಿಕ ಗುರಿಗಳನ್ನ ಮುಟ್ಟೋಕೆ ಸಹಾಯ ಮಾಡಬೇಕೇ ಹೊರತು ಅದ್ರಿಂದ ಯಾವತ್ತೂ ನಮ್ಮನ್ನ ದೂರ ಕರ್ಕೊಂಡು ಹೋಗಬಾರದು.” ಮೊರಿನ್ ಅನ್ನೋ ಸಹೋದರಿ ಒಂದು ವರ್ಷದ ಹೇರ್ ಸ್ಟೈಲಿಸ್ಟ್ ಕೋರ್ಸ್ ಮಾಡಿದ್ರು. ಅವರು ಹೇಳೋದು, “ನನಗೆ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋ ಗುರಿ ಇತ್ತು. ಈ ಗುರಿನ ಮುಟ್ಟೋಕೆ ಸಹಾಯ ಮಾಡೋ ಕೋರ್ಸ್ಗಾಗಿ ಹುಡುಕ್ತಿದ್ದೆ. ಹೇರ್ ಸ್ಟೈಲಿಸ್ಟ್ ಕೋರ್ಸ್ ಮುಗಿದ ಮೇಲೆ ಕೆಲಸ ಮಾಡಿ ಸ್ವಲ್ಪ ಹಣ ಕೂಡಿಟ್ಟೆ. ಆಮೇಲೆ ಅಗತ್ಯ ಇರೋ ಕಡೆ ಹೋದೆ. ಅಲ್ಲಿ ನಾನು ಮಾಡಿದ ಕೋರ್ಸಿಂದ ನನಗೆ ಒಂದು ಕೆಲಸ ಸಿಕ್ತು.” ತುಂಬ ವರ್ಷ ಓದಿ ಡೆಂಟಿಸ್ಟ್ ಆಗಿರೋ ಸಹೋದರಿ ಐರಿಸ್ ಹೇಳೋದು, “ಹೆಚ್ಚಿನ ವಿದ್ಯಾಭ್ಯಾಸದಿಂದ ಕೆಲವು ಪ್ರಯೋಜನಗಳಿದೆ ನಿಜ. ಆದ್ರೆ ಅದು ಯಾವತ್ತೂ ಜೀವನದಲ್ಲಿ ನಿಜ ಯಶಸ್ಸು ಮತ್ತು ಸಂತೃಪ್ತಿ ಕೊಡಲ್ಲ. ಜೀವನದಲ್ಲಿ ನಿಜವಾದ ಯಶಸ್ಸು, ಸಂತೃಪ್ತಿ ಬೇಕಂದ್ರೆ ಯೆಹೋವನಿಗೆ ಯಾವಾಗ್ಲೂ ಮುಖ್ಯ ಸ್ಥಾನ ಕೊಡಬೇಕು.” ಹಾಗಾಗಿ ನಮ್ಮ ಜೀವನದಲ್ಲಿ ಯೆಹೋವನಿಗೆ, ಆತನ ಸ್ನೇಹ ಸಂಬಂಧಕ್ಕೆ ಮುಖ್ಯವಾದ ಸ್ಥಾನ ಕೊಟ್ರೆ ಒಳ್ಳೊಳ್ಳೆ ನಿರ್ಧಾರಗಳನ್ನ ಮಾಡ್ತೀವಿ. ಇದ್ರಿಂದ ಜೀವನ ಪೂರ್ತಿ ಖುಷಿಯಾಗಿ ಇರ್ತೀವಿ.
ವಿದ್ಯಾಭ್ಯಾಸದ ಬಗ್ಗೆ ಏನೆಲ್ಲಾ ಯೋಚಿಸಬೇಕು?
10. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರ ಮಾಡ್ವಾಗ ಧರ್ಮೋಪದೇಶಕಾಂಡ 32:29ರಲ್ಲಿರೋ ತತ್ವ ಹೇಗೆ ಸಹಾಯ ಮಾಡುತ್ತೆ?
10 ನಿಮ್ಮ ಮನಸ್ಸಲ್ಲಿ, ‘ನಾನು ಈ ಕೋರ್ಸ್ ಮಾಡಬೇಕು, ಈ ಟ್ರೈನಿಂಗ್ ತಗೋಬೇಕು’ ಅನ್ನೋ ಯೋಚ್ನೆ ಇರಬಹುದು. ಆದ್ರೆ ನಿರ್ಧಾರ ಮಾಡೋ ಮುಂಚೆ ಈ ಫೀಲ್ಡಲ್ಲಿ ಅಥವಾ ಬೇರೆ ಫೀಲ್ಡಲ್ಲಿ ‘ಇನ್ನೂ ಯಾವೆಲ್ಲ ಆಯ್ಕೆಗಳಿವೆ’ ಅಂತ ಯೋಚಿಸಿ. (ಜ್ಞಾನೋಕ್ತಿ 18:17 ಹೋಲಿಸಿ.) ಇವತ್ತು ವಿದ್ಯಾಭ್ಯಾಸ ಮಾಡೋಕೆ ಆನ್ಲೈನ್ ಕೋರ್ಸ್ನಂಥ ತುಂಬ ಆಪ್ಷನ್ಸ್ ಇವೆ. ಆದ್ರೆ, ‘ಜೀವನ ಸಾಗಿಸೋಕೆ ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡ್ಲೇಬೇಕಾ’ ಅಂತ ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಿ. ಫಿನ್ಲ್ಯಾಂಡಲ್ಲಿರೋ ಜೊಹನ್ನಾ ಅನ್ನೋ ಸಹೋದರಿ ಯಾವುದೇ ಹೆಚ್ಚಿನ ಶಿಕ್ಷಣನ ತಗೊಳ್ಳಲಿಲ್ಲ. ಅವರು ಹೇಳೋದು, “ಸ್ಕೂಲ್ ಮುಗಿದ್ಮೇಲೆ ಪಾರ್ಟ್ಟೈಮ್ ಕೆಲಸ ಶುರು ಮಾಡಿದೆ, ಪಯನೀಯರ್ ಸೇವೆ ಆರಂಭಿಸಿದೆ. ಇಲ್ಲಿವರೆಗೂ ಎಷ್ಟೋ ಬೇರೆ-ಬೇರೆ ಕೆಲಸಗಳನ್ನ ಮಾಡಿದ್ದೀನಿ. ಯೆಹೋವ, ‘ನಮ್ಮ ಅಗತ್ಯಗಳನ್ನ ನೋಡ್ಕೊಳ್ತೀನಿ’ ಅಂತ ಮಾತು ಕೊಟ್ಟಿರೋದು ನಿಜ ಆಗಿದ್ದನ್ನ ಕಣ್ಣಾರೆ ನೋಡಿದ್ದೀನಿ.” ನೀವು ಯಾವುದೇ ರೀತಿಯ ಹೆಚ್ಚಿನ ವಿದ್ಯಾಭ್ಯಾಸ ತಗೊಂಡ್ರೂ ಅದ್ರಲ್ಲಿ ಪ್ರಯೋಜ್ನನೂ ಇರುತ್ತೆ, ಸಮಸ್ಯೆಗಳೂ ಇರುತ್ತೆ. ಹಾಗಾಗಿ ಹೀಗೆ ಕೇಳ್ಕೊಳ್ಳಿ, ‘ನಾನು ತಗೊಳ್ಳೋ ಈ ನಿರ್ಧಾರದಿಂದ ಸಮಸ್ಯೆಗಳು ಜಾಸ್ತಿ ಬರುತ್ತಾ ಅಥವಾ ಪ್ರಯೋಜ್ನಗಳು ಜಾಸ್ತಿ ಸಿಗುತ್ತಾ?’ (ಧರ್ಮೋಪದೇಶಕಾಂಡ 32:29 ಓದಿ; 1 ಕೊರಿಂ 10:23) ನಾವೀಗ ಈ ವಿಷ್ಯಾನ ತೂಗಿ ನೋಡೋಕೆ ಸಹಾಯ ಮಾಡೋ ಅಂಶಗಳನ್ನ ನೋಡೋಣ.
11. ಹೆಚ್ಚಿನ ವಿದ್ಯಾಭ್ಯಾಸ ಆರಿಸ್ಕೊಳ್ಳೋ ಮುಂಚೆ ಅದಕ್ಕೆ ಎಷ್ಟು ಸಮಯ ಕೊಡಬೇಕಾಗುತ್ತೆ ಅಂತ ಯೋಚ್ನೆ ಮಾಡೋದು ಯಾಕೆ ಮುಖ್ಯ? (ಚಿತ್ರ ನೋಡಿ.)
11 ಎಷ್ಟು ಹೊತ್ತು? ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ರೆ ನಾನು ಪ್ರತಿ ವಾರ ಕ್ಲಾಸ್ ಅಟೆಂಡ್ ಮಾಡೋಕೆ, ಹೋಮ್ವರ್ಕ್ ಮಾಡೋಕೆ ಎಷ್ಟು ಗಂಟೆ ಕೊಡಬೇಕಾಗುತ್ತೆ? ಇಷ್ಟೆಲ್ಲ ಸಮಯ ಓದಿ, ಆಮೇಲೆ ಆಧ್ಯಾತ್ಮಿಕ ಕೆಲಸಗಳನ್ನ ಮಾಡೋಕೆ, ಕುಟುಂಬದಲ್ಲಿರೋ ಜವಾಬ್ದಾರಿಗಳನ್ನು ನಿರ್ವಹಿಸೋಕೆ ನನ್ನಿಂದಾಗುತ್ತಾ? (ಫಿಲಿ. 1:10) ಕೆಲವೊಂದು ಸಲ ಓದಿ-ಓದಿ ಸುಸ್ತಾಗೋದ್ರಿಂದ ‘ಕೂಟಗಳಿಗೆ ತಯಾರಿ ಮಾಡೋಕೆ, ವೈಯಕ್ತಿಕ ಅಧ್ಯಯನ ಮಾಡೋಕಾಗುತ್ತಾ’ ಅಂತ ಯೋಚಿಸಿ. ಭಾರತದ ಸಹೋದರ ಜೆರೋಸ್ ಹೇಳೋದು, “ನಾನು ಹೆಚ್ಚಿನ ವಿದ್ಯಾಭ್ಯಾಸ ಆರಿಸ್ಕೊಂಡಿದ್ರಿಂದ ಆಧ್ಯಾತ್ಮಿಕ ವಿಷ್ಯಕ್ಕೆ ಗಮನ ಕೊಡೋಕೆ ಕಷ್ಟ ಆಯ್ತು. ಕೆಲವೊಂದು ಸಲ ಕೂಟಗಳನ್ನ ತಪ್ಪಿಸ್ತಿದ್ದೆ. ನಾನು ಆವತ್ತು ತಗೊಂಡಿದ್ದ ಕೋರ್ಸು, ನನಗಿದ್ದ ಸಮಯ ಮತ್ತು ಶಕ್ತಿನೆಲ್ಲಾ ಹಾಳು ಮಾಡ್ತು.” ಆದ್ರೆ ಇನ್ನು ಕೆಲವು ಕೋರ್ಸುಗಳು ಜಾಸ್ತಿ ಸಮಯ ತಗೊಳಲ್ಲ. ಕೆಲವೊಂದು ಪಾರ್ಟ್ಟೈಮ್ ಕೋರ್ಸ್ಗಳಿರುತ್ತೆ. ಇನ್ನೂ ಕೆಲವು ಕೋರ್ಸ್ಗಳಲ್ಲಿ ಅಷ್ಟೇನೂ ಹೋಮ್ವರ್ಕ್ ಕೊಡಲ್ಲ. ಉದಾಹರಣೆಗೆ, ಮೊಜಾಂಬಿಕ್ನಲ್ಲಿರೋ ಸಹೋದರಿ ರೆಬೆಕ್ಕ ಹೇಳೋದು, “ನಾನು ಆರಿಸ್ಕೊಂಡ ಕೋರ್ಸು, ಪ್ರತಿದಿನ ಎರಡು ತಾಸು ಇರ್ತಿತ್ತು ಅಷ್ಟೇ. ಇದ್ರಿಂದ ನಾನು ಆರಾಮಾಗಿ ಪಯನೀಯರ್ ಸೇವೆ ಮಾಡೋಕಾಯ್ತು.”
ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂತ ಯೋಚಿಸ್ತಿದ್ರೆ, ನಿಮಗಿರೋ ಬೇರೆಲ್ಲ ಜವಾಬ್ದಾರಿಗಳನ್ನ ಪೂರೈಸೋಕೆ ಸಾಕಷ್ಟು ಸಮಯ ಸಿಗುತ್ತಾ ಅಂತಾನೂ ಯೋಚಿಸಿ (ಪ್ಯಾರ 11 ನೋಡಿ)
12. ವಿದ್ಯಾಭ್ಯಾಸದ ವಿಷ್ಯದಲ್ಲಿ ನಿಮ್ಮ ಸಮಯನ ಚೆನ್ನಾಗಿ ಬಳಸೋಕೆ ಏನು ಮಾಡಬೇಕು? (ಪ್ರಸಂಗಿ 12:1)
12 ಎಷ್ಟು ತಿಂಗಳು ಅಥವಾ ವರ್ಷ? ನಾನು ಈ ವಿದ್ಯಾಭ್ಯಾಸ ಮಾಡಿ ಮುಗಿಸೋಕೆ ಎಷ್ಟು ತಿಂಗಳು ಅಥವಾ ವರ್ಷ ಹಿಡಿಯುತ್ತೆ ಅಂತಾನೂ ಯೋಚಿಸಿ. ನನಗಿರೋ ಈ ಸಮಯದಲ್ಲಿ ಈ ವಿದ್ಯಾಭ್ಯಾಸ ಮಾಡೋದೇ ಸರಿಯಾದ ಆಯ್ಕೆನಾ? (ಎಫೆ. 5:15-17) ನೀವು ಯುವಕರಾಗಿದ್ರೆ, ‘ಈ ವಿದ್ಯಾಭ್ಯಾಸನ ಮಾಡ್ಕೊಂಡು, ನನ್ನ ಈ ಯೌವನದಲ್ಲಿ ಯೆಹೋವನಿಗೆ ನಾನು ಬೆಸ್ಟ್ ಕೊಡೋಕೆ ಆಗುತ್ತಾ, ಪೂರ್ಣ ಸಮಯದ ಸೇವೆನ ಮಾಡೋಕೆ ಆಗುತ್ತಾ?’ ಅಂತ ಯೋಚಿಸಿ. (ಪ್ರಸಂಗಿ 12:1 ಓದಿ.) ನೀವು ಅಂದ್ಕೊಂಡಿರೋ ಫೀಲ್ಡಲ್ಲೇ ಇನ್ನೂ ಚಿಕ್ಕ ಕೋರ್ಸ್ ಇದ್ಯಾ ಅಂತಾನೂ ತಿಳ್ಕೊಳ್ಳಿ. ಉದಾಹರಣೆಗೆ, ಕೆಲವೊಂದು ಕಡೆ ಯೂನಿವರ್ಸಿಟಿಗಿಂತ ಕಮ್ಮಿ ಸಮಯ ಮತ್ತು ಹಣದಲ್ಲಿ ವೃತ್ತಿಪರ ಮತ್ತು ಕೈಗಾರಿಕಾ ಕಾಲೇಜುಗಳು ಕೆಲವು ಕೌಶಲ್ಯಗಳನ್ನ ಕಲಿಸುತ್ತೆ. ಚಿಲಿಯಲ್ಲಿರೋ ಮಾರಿಯೋ ಅನ್ನೋ ಸಹೋದರ ಹೇಳೋದು, ‘ನಾನು ಎರಡು ವರ್ಷದ ಟೆಕ್ನಿಕಲ್ ಕೋರ್ಸ್ ಮಾಡಿದೆ. ಅದು ಯೂನಿವರ್ಸಿಟಿಗಿಂತ ಕಮ್ಮಿ ಖರ್ಚಿನಲ್ಲಿ ಮುಗೀತು. ವಾರದಲ್ಲಿ ನಾಲ್ಕು ದಿನ ಮಾತ್ರ ಕ್ಲಾಸ್ ಇರ್ತಿತ್ತು. ಹಾಗಾಗಿ ಆರಾಮಾಗಿ ಪಯನೀಯರ್ ಸೇವೆ ಮಾಡೋಕಾಯ್ತು.’
13. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ನಾವು ಎಲ್ಲಿ ಇರ್ತೀವಿ ಅನ್ನೋದು ಯಾಕೆ ಮುಖ್ಯ?
13 ಯಾವ ಜಾಗ? ನೀವಿರೋ ಕಡೆನೇ ವಿದ್ಯಾಭ್ಯಾಸ ಮಾಡೋಕೆ ಅವಕಾಶ ಇರಬಹುದು. ಆದ್ರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವು ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದ್ರೆ ಏನು ಮಾಡ್ತೀರಾ? ಹಾಸ್ಟೆಲಲ್ಲಿ ಇರಬೇಕಾದ ಪರಿಸ್ಥಿತಿ ಬಂದ್ರೆ ಏನು ಮಾಡ್ತೀರಾ? ನೀವು ಕುಟುಂಬನ ಬಿಟ್ಟು ಹೋದ್ರೆ ತುಂಬ ತೊಂದ್ರೆಗಳನ್ನ ಎದುರಿಸಬೇಕಾಗುತ್ತೆ. ಅದ್ರಲ್ಲೂ ಸತ್ಯದಲ್ಲಿ ಇಲ್ಲದವ್ರ ಜೊತೆ ರೂಮ್ಮೇಟ್ ಆದ್ರೆ ಆ ಅಪಾಯಗಳು ಇನ್ನೂ ಜಾಸ್ತಿ. (ಜ್ಞಾನೋ. 22:3; 1 ಕೊರಿಂ. 15:33) ಮೊಜಾಂಬಿಕ್ನಲ್ಲಿರೋ ಮತ್ತೀಯಸ್ ಅನ್ನೋ ಸಹೋದರ ಹೇಳೋದು, ‘ನಾನು ಕಮ್ಮಿ ಖರ್ಚಲ್ಲಿ ಬರೀ ಒಂದು ವರ್ಷದ ಕೋರ್ಸ್ ತಗೊಂಡೆ. ಆದ್ರೂ ನಾನು ಮಾಡಿದ ನಿರ್ಧಾರದ ಬಗ್ಗೆ ಇವತ್ತಿಗೂ ಬೇಜಾರಿದೆ. ಆ ವರ್ಷ ಓದೋಕೆ ಅಂತ ನಾನು ಹಾಸ್ಟೆಲಲ್ಲಿ ಇರಬೇಕಾಯ್ತು. ಪ್ರತಿದಿನ ತಪ್ಪು ಮಾಡೋ ಒತ್ತಡ ಬರ್ತಿತ್ತು. ಅದಕ್ಕೇ ನಾನು ಹೇಳೋದು ಏನಂದ್ರೆ, ಓದೋಕೆ ಅಂತ ಕುಟುಂಬದವ್ರಿಂದ ದಯವಿಟ್ಟು ದೂರ ಹೋಗಬೇಡಿ. ಅದ್ರಿಂದ ಅಪಾಯಗಳು ಜಾಸ್ತಿ.’ ರಷ್ಯಾದಲ್ಲಿರೋ ಸಹೋದರಿ ಹೇಳೋದು, ‘ನಾನು ಹಾಸ್ಟೆಲಲ್ಲಿ ಇರಲಿಲ್ಲ. ಬದ್ಲಿಗೆ ಮನೆಯಲ್ಲಿ ಅಪ್ಪ-ಅಮ್ಮನ ಜೊತೆ ಇದ್ದೆ. ಇದ್ರಿಂದ ಎಷ್ಟೋ ಒತ್ತಡಗಳು ಕಮ್ಮಿ ಆಯ್ತು.’ ನೀವು ಸಹ ಆನ್ಲೈನ್ ಕೋರ್ಸ್ಗಳ ಮೂಲಕ ನಿಮ್ಮ ವಿದ್ಯಾಭ್ಯಾಸ ಮುಗಿಸೋಕೆ ಆಗುತ್ತಾ ಅಂತಾನೂ ಯೋಚಿಸಬಹುದು.
14. ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಯೋಚ್ನೆ ಮಾಡ್ವಾಗ ಲೂಕ 14:28ರಲ್ಲಿರೋ ತತ್ವ ಹೇಗೆ ಸಹಾಯ ಮಾಡುತ್ತೆ?
14 ಎಷ್ಟು ಖರ್ಚು? ಕೆಲವು ಕೋರ್ಸಿಗೆ ಕಮ್ಮಿ ಖರ್ಚಾಗುತ್ತೆ ಅಥವಾ ಕೆಲವೊಂದು ಸಲ ಆ ಖರ್ಚನ್ನ ಸರ್ಕಾರನೇ ನೋಡ್ಕೊಳ್ಳುತ್ತೆ. ಅಂಥ ಟೈಮಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡೋಕೆ ಜಾಸ್ತಿ ಖರ್ಚು ಮಾಡೋ ಅವಶ್ಯಕತೆ ಇರಲ್ಲ. ಆದ್ರೆ ಇನ್ನೂ ಕೆಲವು ಸಲ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತುಂಬ ದುಡ್ಡು ಸುರಿಬೇಕಾಗುತ್ತೆ. ಕಾಲೇಜ್ ಫೀಸ್ ಕಟ್ಟೋದಲ್ಲದೇ ಟ್ಯೂಷನ್ಗೂ ತುಂಬ ಖರ್ಚು ಮಾಡಬೇಕಾಗುತ್ತೆ. ಹಾಗಾಗಿ ಕೋರ್ಸ್ ಮುಗಿಯೋ ಮುಂಚೆನೇ ಎಷ್ಟೋ ವಿದ್ಯಾರ್ಥಿಗಳು ಸಾಲದಲ್ಲಿ ಮುಳುಗಿ ಹೋಗಿರ್ತಾರೆ. ಮೊಜಾಂಬಿಕ್ನಲ್ಲಿರೋ ಅಡಿಲ್ಸನ್ ಅನ್ನೋ ಸಹೋದರ ಹೇಳೋದು, ‘ವಿದ್ಯಾಭ್ಯಾಸದ ಬಗ್ಗೆ ನಾನು ಮಾಡಿರೋ ನಿರ್ಧಾರದಿಂದ ಬೇಜಾರಾಗಿದೆ. ನಾನು ನಾಲ್ಕು ವರ್ಷದ ಒಂದು ಕೋರ್ಸ್ ತಗೊಂಡೆ. ಇದಕ್ಕೆ ದುಡ್ಡು ಕಟ್ಟೋಕೆ ನನ್ನ ಕುಟುಂಬದವರು ಎಷ್ಟೋ ಸಲ ಊಟ ಮತ್ತು ಅಗತ್ಯ ವಸ್ತುಗಳನ್ನ ತ್ಯಾಗ ಮಾಡಿದ್ರು.’ ಹಾಗಾಗಿ ನೀವು ಒಂದು ಕೋರ್ಸ್ ತಗೊಳ್ಳೋ ಮುಂಚೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ, ‘ಇದಕ್ಕೆ ಎಷ್ಟು ಖರ್ಚಾಗುತ್ತೆ? ಇದನ್ನ ನಾನು ಅಥವಾ ನನ್ನ ಕುಟುಂಬ ಕಟ್ಟೋಕೆ ಆಗುತ್ತಾ? ಕಮ್ಮಿ ಖರ್ಚಲ್ಲಿ ನಾನು ಬೇರೆ ಯಾವುದಾದ್ರೂ ಕೋರ್ಸ್ ಮಾಡಬಹುದಾ?’ (ಲೂಕ 14:28 ಓದಿ.) ‘ಒಂದುವೇಳೆ ನಾನು ಸಾಲ ತಗೊಂಡ್ರೆ ಅದನ್ನ ತೀರಿಸೋಕೆ ಎಷ್ಟು ಸಮಯ ಬೇಕಾಗುತ್ತೆ, ಈ ಕೋರ್ಸ್ನಿಂದ ನನಗೆ ಸಿಗೋ ಕೆಲಸದಲ್ಲಿ ಸಾಲ ತೀರಿಸೋಕಾಗುತ್ತಾ?’—ಜ್ಞಾನೋ. 22:7.
15. ಕೋರ್ಸಿಗೆ ಸೇರಿಕೊಳ್ಳೋ ಮುಂಚೆ, ಕೆಲಸ ಮಾಡೋಕೆ ಇದ್ರಿಂದ ನನಗೆ ಸಾಕಷ್ಟು ಅವಕಾಶಗಳು ಸಿಗುತ್ತಾ ಅಂತ ಯೋಚ್ನೆ ಮಾಡೋದು ಯಾಕೆ ಮುಖ್ಯ?
15 ಕೆಲಸ ಸಿಗುತ್ತಾ? ನೀವಿರೋ ಊರಲ್ಲಿ ಅಥವಾ ನೀವು ಹೋಗಬೇಕಂತ ಅಂದ್ಕೊಂಡಿರೋ ಜಾಗದಲ್ಲಿ ಯಾವ ಕೆಲಸಕ್ಕೆ ಡಿಮ್ಯಾಂಡ್ ಇದೆ ಅಂತ ಯೋಚಿಸಿ. ಅಷ್ಟೇ ಅಲ್ಲ, ನಾನು ತಗೊಳ್ತಿರೋ ಕೋರ್ಸ್ ನಿಜವಾಗ್ಲೂ ಕೆಲಸ ಕೊಡಿಸುತ್ತಾ ಅಂತಾನೂ ಯೋಚಿಸಿ. ಯಾಕಂದ್ರೆ ಕೆಲವೊಮ್ಮೆ ಕಾಲೇಜುಗಳಲ್ಲಿ ಜಾಸ್ತಿ ಥಿಯರಿ, ತತ್ವಜ್ಞಾನ, ಮೇಧಾವಿತನ ಮತ್ತು ಕಷ್ಟವಾದ ಕಾನ್ಸೆಪ್ಟ್ಗಳನ್ನ ಕಲಿಸ್ತಾರೆ. ಇದ್ರಿಂದ ನಮ್ಮ ಜ್ಞಾನ ಹೆಚ್ಚಾಗುತ್ತೆ ನಿಜ, ಆದ್ರೆ ಕೆಲಸಕ್ಕೆ ಬೇಕಾಗೋ ಕೌಶಲ್ಯಗಳು ಸಿಗಲ್ಲ. (ಕೊಲೊ. 2:8) ಭಾರತದಲ್ಲಿರೋ ಒಬ್ಬ ಸಹೋದರಿ ಹೇಳೋದು, “ನಾನು ತಗೊಂಡಿದ್ದ ಕೋರ್ಸಲ್ಲಿ, ನನ್ನ ಕೆಲಸಕ್ಕೆ ಬೇಕಾದ ಯಾವುದೇ ಕೌಶಲ್ಯಗಳನ್ನೂ ಕಲಿಸಲಿಲ್ಲ. ಇದ್ರಿಂದ ನಾನು ಓದಿದ ಫೀಲ್ಡಲ್ಲಿ ಕೆಲಸ ಸಿಗಲಿಲ್ಲ.” ಇನ್ನೂ ಕೆಲವು ಕೋರ್ಸ್ಗಳಿಗೆ ಅಷ್ಟೇನೂ ಸ್ಕೋಪ್ ಇರಲ್ಲ. ಆ ಫೀಲ್ಡಲ್ಲಿ ಬರೀ ಬೆರಳೆಣಿಕೆಯಷ್ಟು ಕೆಲಸ ಸಿಗಬಹುದು! ಉದಾಹರಣೆಗೆ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನಲ್ಲಿರೋ ಸಬ್ಲೈಮ್ ಅನ್ನೋ ಸಹೋದರ, ಎ.ಸಿ. ರಿಪೇರಿ ಮಾಡೋ ಕೋರ್ಸ್ ಮಾಡಿದ್ರು. ಅವರು ಹೇಳೋದು, “ನಾನಿರೋ ಕಡೆ ವಸ್ತುಗಳು ಹಾಳಾದ್ರೆ ಜನ ತಾವೇ ಅದನ್ನ ರಿಪೇರಿ ಮಾಡ್ಕೊಳ್ತಾರೆ. ಇದ್ರಿಂದ ನನಗೆ ಕೆಲಸ ಸಿಗೋದು ತುಂಬ ಕಷ್ಟ ಆಯ್ತು.”
16. ನೀವು ಯಾವ ತರದ ಕೆಲಸ ಮಾಡಬೇಕು ಅಂತಿದ್ದೀರ ಅಂತ ಮೊದಲೇ ಯೋಚ್ನೆ ಮಾಡೋದು ಯಾಕೆ ಮುಖ್ಯ?
16 ನಿಮಗೆ ಎಂಥ ಕೆಲಸ ಸಿಗಬಹುದು ಅನ್ನೋದ್ರ ಬಗ್ಗೆನೂ ಯೋಚ್ನೆ ಮಾಡಿ. ಆ ಕೆಲಸದಲ್ಲಿ ನಿಮಗೆ ಖುಷಿ ಸಿಗುತ್ತಾ? (ಪ್ರಸಂ. 3:12, 13) ಆ ಕೆಲಸದ ವಾತಾವರಣ ಹೇಗಿರುತ್ತೆ? ಅಲ್ಲಿ ಸೇಫ್ಟಿ ಇರುತ್ತಾ? ಪೈಪೋಟಿ ಅಥವಾ ಒತ್ತಡ ಇರುತ್ತಾ? ಈ ಕೆಲಸಕ್ಕೆ ಸಾಮಾನ್ಯವಾಗಿ ಎಷ್ಟು ಸಂಬಳ ಬರುತ್ತೆ? ಆ ಸಂಬಳದಲ್ಲಿ ಜೀವನ ನಡೆಸ್ಕೊಂಡು ಹೋಗೋಕಾಗುತ್ತಾ? ಈ ಕೆಲಸನ ಉಳಿಸ್ಕೊಳ್ಳೋಕೆ ನಾನು ಆಗಾಗ ಹೆಚ್ಚಿನ ವಿದ್ಯಾಭ್ಯಾಸ ಪಡೀತಾ ಹೋಗಬೇಕಾ? ಅದೆಲ್ಲದಕ್ಕಿಂತ ಮುಖ್ಯವಾಗಿ ಈ ಕೆಲಸ ಮಾಡ್ಕೊಂಡು ನಾನು ದೇವರ ಆಳ್ವಿಕೆಗೆ ಮೊದಲನೇ ಸ್ಥಾನ ಕೊಡೋಕೆ ಆಗುತ್ತಾ? ಅಂತ ಕೇಳಿಕೊಳ್ಳಿ. (ಪ್ರಸಂ. 12:13) ಕೆಲಸ ಸಿಗೋದೇ ಕಮ್ಮಿ ಆಗಿರೋದ್ರಿಂದ ‘ಇದೇ ಬೇಕು, ಅದೇ ಬೇಕು’ ಅಂತ ಹಠ ಹಿಡಿಯೋಕೆ ಆಗಲ್ಲ ನಿಜ. ಆದ್ರೆ ಏನು ಓದಬೇಕು ಅನ್ನೋ ವಿಷಯದಲ್ಲಿ ಮೊದ್ಲೇ ಸರಿಯಾದ ನಿರ್ಧಾರ ಮಾಡಿದ್ರೆ ಮುಂದೆ ಅನುಕೂಲವಾದ ಕೆಲಸ ಮಾಡೋ ಅವಕಾಶ ಸಿಗಬಹುದು. ಭಾರತದಲ್ಲಿರೋ ತಬಿಥಾ ಅನ್ನೋ ಸಹೋದರಿ ಆರು ತಿಂಗಳು ಟೈಲರಿಂಗ್ ಕೋರ್ಸ್ ಮಾಡಿದ್ರು. ಅವರು ಹೇಳೋದು, ‘ಈ ಕೆಲಸನ ಆರಿಸ್ಕೊಂಡಿದ್ರಿಂದ ಪಯನೀಯರ್ ಸೇವೆ ಮಾಡೋಕೆ ಆಗ್ತಿದೆ. ಈ ಕೆಲಸಕ್ಕಿರೋ ಡಿಮ್ಯಾಂಡ್ ಯಾವತ್ತೂ ಕಮ್ಮಿ ಆಗಲ್ಲ. ನಾನು ಇದೇ ಟೈಮಲ್ಲಿ ಕೆಲಸ ಮಾಡಬೇಕು ಅಂತ ಏನಿಲ್ಲ. ನಂಗೆ ಅನುಕೂಲ ಇದ್ದಾಗ ಮಾಡಬಹುದು. ಈ ಕೆಲ್ಸ ಮಾಡೋಕೆ ಜಾಸ್ತಿ ಬಂಡವಾಳನೂ ಹಾಕಬೇಕಿಲ್ಲ.’ ತಬಿಥಾ ಈ ಕೆಲಸ ಮಾಡ್ತಿರೋದ್ರಿಂದ ಈಗ ಖುಷಿ-ಖುಷಿಯಾಗಿ ಪಯನೀಯರ್ ಸೇವೆ ಮಾಡ್ತಿದ್ದಾರೆ.
17. (ಎ) ವಿದ್ಯಾಭ್ಯಾಸದ ಬಗ್ಗೆ ಒಳ್ಳೆ ನಿರ್ಧಾರ ಮಾಡೋಕೆ ಒಬ್ಬ ಕ್ರೈಸ್ತ ಹೆಚ್ಚಿನ ಮಾಹಿತಿನ ಎಲ್ಲಿ ಪಡ್ಕೊಬಹುದು? (ಬಿ) ಒಳ್ಳೆ ನಿರ್ಧಾರ ಮಾಡೋಕೆ ಯಾವ ತತ್ವಗಳು ನಿಮಗೆ ಸಹಾಯ ಮಾಡುತ್ತೆ? (“ಬೈಬಲ್ ತತ್ವಗಳ ಬಗ್ಗೆ ಯೋಚಿಸಿ” ಚೌಕ ನೋಡಿ.)
17 ಇಲ್ಲಿವರೆಗೂ ಹೆಚ್ಚಿನ ವಿದ್ಯಾಭ್ಯಾಸನ ಆರಿಸ್ಕೊಳ್ಳೋ ಮುಂಚೆ ಯಾವೆಲ್ಲ ವಿಷ್ಯಗಳನ್ನ ಮನಸ್ಸಲ್ಲಿ ಇಡಬೇಕು ಅಂತ ತಿಳ್ಕೊಂಡ್ವಿ. ಆದ್ರೆ ವಿದ್ಯಾಭ್ಯಾಸದ ಬಗ್ಗೆ ಇನ್ನೂ ಜಾಸ್ತಿ ಮಾಹಿತಿ ಬೇಕಂದ್ರೆ ಏನು ಮಾಡಬೇಕು? ಕೋರ್ಸ್ ಬಗ್ಗೆ ಕಾಲೇಜ್ಗಳಲ್ಲಿ ಅಥವಾ ಅವ್ರ ವೆಬ್ಸೈಟಲ್ಲಿ ಹುಡುಕಬಹುದು. ಈ ಕೋರ್ಸ್ ಮಾಡಿದ್ರೆ ಎಷ್ಟು ಕೆಲಸ ಸಿಗುತ್ತೆ, ಆ ಕೆಲಸಗಳಿಗೆ ಡಿಮ್ಯಾಂಡ್ ಇದ್ಯಾ ಅಂತಾನೂ ಹುಡುಕಿ. ಈ ಕೋರ್ಸನ್ನ ಮಾಡಿರೋರ ಹತ್ರ ಮತ್ತು ಆ ಕೆಲಸ ಮಾಡ್ತಿರೋರ ಹತ್ರನೂ ಹೋಗಿ ಮಾತಾಡಿ. (ಜ್ಞಾನೋ. 13:10) ‘ಈ ಕೋರ್ಸ್ ಮಾಡಿದ್ರೆ ಅಥವಾ ಈ ಕೆಲಸ ಮಾಡಿದ್ರೆ ಏನೆಲ್ಲಾ ಪ್ರಯೋಜ್ನ ಆಗುತ್ತೆ, ಯಾವೆಲ್ಲಾ ತೊಂದ್ರೆಗಳು ಬರಬಹುದು’ ಅಂತ ಕೇಳಿ. ಅಷ್ಟೇ ಅಲ್ಲ, ಖುಷಿಯಾಗಿ ಯೆಹೋವನ ಸೇವೆ ಮಾಡ್ತಿರೋ ನಮ್ಮ ಸಹೋದರರನ್ನೂ ಕೇಳಿ ನೋಡಿ. (ಜ್ಞಾನೋ. 15:22) ಅವರು ಯಾವ ಕೋರ್ಸ್ ಅಥವಾ ಕೆಲಸದ ಬಗ್ಗೆ ಹೇಳ್ತಾರೆ ಅಂತ ತಿಳ್ಕೊಳ್ಳಿ. ನೀವು ಯೋಚ್ನೆನೇ ಮಾಡಿಲ್ಲದೇ ಇರೋ ಕೋರ್ಸ್ ಬಗ್ಗೆ ಅವರು ನಿಮಗೆ ಹೇಳಬಹುದು.
18. ನಾವು ಏನನ್ನ ನೆನಪಲ್ಲಿ ಇಡಬೇಕು?
18 ನಾವು ಇಲ್ಲಿವರೆಗೂ ಹೆಚ್ಚಿನ ವಿದ್ಯಾಭ್ಯಾಸ ಮಾಡೋದ್ರಿಂದ ಸಿಗೋ ಪ್ರಯೋಜ್ನಗಳು ಮತ್ತು ಎದುರಾಗೋ ಸವಾಲುಗಳ ಬಗ್ಗೆ ನೋಡಿದ್ವಿ. ಹಾಗಾಗಿ ತೀರ್ಮಾನ ಮಾಡೋ ಮುಂಚೆ ಪ್ರಾರ್ಥನೆ ಮಾಡಿ. ನೆನಪಿಡಿ, ಹೆಚ್ಚಿನ ವಿದ್ಯಾಭ್ಯಾಸದಿಂದ ಒಳ್ಳೆ ಕೆಲಸ ಸಿಗಬಹುದು, ಮುಂದೆ ಹಣಕಾಸಿನ ತೊಂದ್ರೆ ಬರದೇ ಇರಬಹುದು. ಆದ್ರೆ ಅದ್ರಿಂದ ಜೀವನದಲ್ಲಿ ಸಂತೋಷ ಸಿಗಲ್ಲ, ಅದು ಸಿಗೋದು ಯೆಹೋವನ ಜೊತೆ ಇರೋ ಸ್ನೇಹದಿಂದ ಮಾತ್ರ! (ಕೀರ್ತ. 16:9, 11) ನಾವು ಹೆಚ್ಚು ವಿದ್ಯಾಭ್ಯಾಸ ಮಾಡಿದ್ರೂ, ಮಾಡದೇ ಇದ್ರೂ ಯೆಹೋವ ತನ್ನ ಜನ್ರನ್ನ ಖಂಡಿತ ನೋಡ್ಕೊಳ್ತಾನೆ. ಹಾಗಂತ ಆತನೇ ಮಾತುಕೊಟ್ಟಿದ್ದಾನೆ! (ಇಬ್ರಿ. 13:5) ಒಂದುವೇಳೆ ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡೋ ತೀರ್ಮಾನ ಮಾಡಿದ್ರೆ ಆಗೇನು? ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ್ಲೂ ಯೆಹೋವನ ಜೊತೆ ನಿಮಗಿರೋ ಸಂಬಂಧನ ಕಳ್ಕೊಳ್ಳದೇ ಇರೋಕೆ ನೀವೇನು ಮಾಡಬೇಕು? ಈ ಪ್ರಶ್ನೆಗೆ ಮುಂದಿನ ಲೇಖನದಲ್ಲಿ ಉತ್ರ ತಿಳ್ಕೊಳ್ಳೋಣ.
ಗೀತೆ 45 ನನ್ನ ಹೃದಯದ ಧ್ಯಾನ
a ಪದವಿವರಣೆ: ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ “ಹೆಚ್ಚಿನ ವಿದ್ಯಾಭ್ಯಾಸ” ಅನ್ನೋ ಪದ ಬಳಸಲಾಗಿದೆ. ಇದು ಸರ್ಕಾರ ತಿಳಿಸಿರೋ ಮೂಲಭೂತ ಶಿಕ್ಷಣದ ನಂತರ ಮಾಡೋ ಯಾವುದೇ ರೀತಿಯ ಹೆಚ್ಚುವರಿ ಶಿಕ್ಷಣವನ್ನ ಅಥವಾ ತರಬೇತಿಯನ್ನ ಸೂಚಿಸುತ್ತೆ. ಇದ್ರಲ್ಲಿ ಯೂನಿವರ್ಸಿಟಿ ಶಿಕ್ಷಣ, ಅಪ್ರೆಂಟಿಶಿಷ್, ವೃತ್ತಿಪರ ಮತ್ತು ತಾಂತ್ರಿಕ ತರಬೇತಿ, ಚಿಕ್ಕ ಅವಧಿಯ ಕೋರ್ಸ್ಗಳು ಹಾಗೂ ದೀರ್ಘಕಾಲಿಕ ವಿದ್ಯಾಭ್ಯಾಸಗಳೆಲ್ಲ ಸೇರಿವೆ.
b ಇಲ್ಲಿರೋ ಮಾಹಿತಿ ಸಹೋದರಿಯರಿಗೂ ಅನ್ವಯಿಸುತ್ತೆ.
c ಈ ಹಿಂದೆ ನಮ್ಮ ಪ್ರಕಾಶನಗಳು ಕೆಲವೊಂದು ರೀತಿಯ ಹೆಚ್ಚಿನ ವಿದ್ಯಾಭ್ಯಾಸ ಮಾಡೋದನ್ನ ನಿರುತ್ತೇಜಿಸಿತ್ತು. ಉದಾಹರಣೆಗೆ, ಅಕ್ಟೋಬರ್ 1, 2005ರ ಕಾವಲಿನಬುರುಜುವಿನಲ್ಲಿ “ಹೆತ್ತವರೇ, ನಿಮ್ಮ ಮಕ್ಕಳಿಗೆ ಎಂಥ ಭವಿಷ್ಯವಿರಬೇಕೆಂದು ಬಯಸುತ್ತೀರಿ?” ಅನ್ನೋ ಲೇಖನ ಇತ್ತು. ಅದ್ರಲ್ಲಿ ಉನ್ನತ ಶಿಕ್ಷಣದಿಂದ ಬರೋ ಅಪಾಯಗಳ ಬಗ್ಗೆ ತಿಳಿಸಲಾಗಿತ್ತು. ಈ ಅಪಾಯಗಳು ಇವತ್ತಿಗೂ ಇರೋದಾದ್ರೂ ಉನ್ನತ ಶಿಕ್ಷಣ ಮಾಡಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋದು ಒಬ್ಬ ಕ್ರೈಸ್ತನ ವೈಯಕ್ತಿಕ ನಿರ್ಧಾರ. ಆದ್ರೆ ಈ ನಿರ್ಧಾರ ಮಾಡೋ ಮುಂಚೆ ಪ್ರತಿಯೊಬ್ಬ ಕ್ರೈಸ್ತ ಬೈಬಲ್ ತತ್ವಗಳ ಬಗ್ಗೆ ಯೋಚಿಸಿ, ಪ್ರಾರ್ಥನೆ ಮಾಡಿ ನಿರ್ಧಾರ ಮಾಡಬೇಕು. ಚಿಕ್ಕ ಮಕ್ಕಳ ವಿಷ್ಯದಲ್ಲಿ ಕುಟುಂಬದ ಯಜಮಾನ ಈ ನಿರ್ಧಾರ ಮಾಡಬೇಕಾಗುತ್ತೆ. ಅವರು ಯಾವುದೇ ನಿರ್ಧಾರ ಮಾಡಿದ್ರೂ ಅದ್ರ ಬಗ್ಗೆ ಯಾವ ಕ್ರೈಸ್ತನೂ ತೀರ್ಪು ಮಾಡಬಾರದು, ಹಿರಿಯರು ಸಹ ತೀರ್ಪು ಮಾಡಬಾರದು.—ಯಾಕೋ. 4:12.