ಜುಲೈ 13-19, 2026
ಗೀತೆ 34 ನಿಯತ್ತಾಗಿ ಬಾಳೋದೇ ನನ್ನಾಸೆ
ಮನಸ್ಸಾಕ್ಷಿಗೆ ತತ್ವಗಳಿಂದ ಕಲಿಸಿ
“ಪ್ರತಿಯೊಬ್ಬನು ತನ್ನ ಹೊರೆಯನ್ನ ತಾನೇ ಹೊತ್ಕೊಬೇಕು.”—ಗಲಾ. 6:5.
ಈ ಲೇಖನದಲ್ಲಿ ಏನಿದೆ?
ನಮ್ಮ ಮನಸ್ಸಾಕ್ಷಿಗೆ ಸರಿಯಾದ ದಾರಿ ಯಾವುದು ಅಂತ ತೋರಿಸಬೇಕಂದ್ರೆ ನಾವು ಅದಕ್ಕೆ ಬೈಬಲ್ ತತ್ವಗಳನ್ನ ಕಲಿಸಬೇಕು. ಅದನ್ನ ಹೇಗೆ ಕಲಿಸೋದು ಅಂತ ಈ ಲೇಖನದಲ್ಲಿ ನೋಡೋಣ.
1-2. (ಎ) ಆದಾಮ-ಹವ್ವರಿಗೆ ಯೆಹೋವ ಯಾವ ಗಿಫ್ಟ್ ಕೊಟ್ಟನು? (ಬಿ) ಅದಕ್ಕೆ ಅವರು ಹೇಗೆ ಕೃತಜ್ಞತೆ ತೋರಿಸಬಹುದಿತ್ತು?
ಪ್ರಾಣಿಗಳಿಗೆ ಮತ್ತು ಮಷೀನ್‌ಗಳಿಗೆ ಹೋಲಿಸಿದ್ರೆ ಮನುಷ್ಯರು ತುಂಬ ಸ್ಪೆಷಲ್. ಯಾಕಂದ್ರೆ ಅವ್ರ ಹತ್ರ ಒಂದು ಅಮೂಲ್ಯ ಗಿಫ್ಟ್ ಇದೆ. ಅದೇ ಇಚ್ಛಾಸ್ವಾತಂತ್ರ್ಯ! ಈ ಗಿಫ್ಟ್‌ನ ನಿಜ ಬೆಲೆ ಏನು ಅಂತ ನಿಜ ಕ್ರೈಸ್ತರಿಗೆ ಮಾತ್ರ ಚೆನ್ನಾಗಿ ಗೊತ್ತು. ಆದ್ರೆ ಪ್ರಾಣಿಗಳಿಗೆ ಮತ್ತು ಮಷೀನ್‌ಗಳಿಗೆ ಈ ಗಿಫ್ಟ್ ಇಲ್ಲ. ಪ್ರಾಣಿಗಳಿಗೆ ಹುಟ್ಟರಿವಿರುತ್ತೆ ಮತ್ತು ಮಷೀನ್‌ಗಳಿಗೆ ಏನು ಮಾಡಬೇಕು, ಏನು ಮಾಡಬಾರದು ಅಂತ ಮುಂಚೆನೇ ಪ್ರೋಗ್ರಾಮ್ ಮಾಡಲಾಗಿರುತ್ತೆ. ಆದ್ರೆ ಮನುಷ್ಯರಿಗೆ ಇಚ್ಛಾಸ್ವಾತಂತ್ರ್ಯ ಇರೋದ್ರಿಂದ ಅವ್ರಿಗೆ ಇಷ್ಟ ಆಗಿರೋದನ್ನ ಮಾಡಬಹುದು. ಯೆಹೋವ ದೇವರು, ಆದಾಮ-ಹವ್ವರನ್ನ ತನ್ನ ಹೋಲಿಕೆಯಲ್ಲಿ ಸೃಷ್ಟಿ ಮಾಡಿದನು ಅಂತ ಬೈಬಲ್ ಹೇಳುತ್ತೆ. (ಆದಿ. 1:26, 27) ಹಾಗಾಗಿ ಆದಾಮ-ಹವ್ವರಿಗೆ ತಮ್ಮ ಸ್ವಂತ ನಿರ್ಧಾರಗಳನ್ನ ಮಾಡೋ ಸ್ವಾತಂತ್ರ್ಯ ಇತ್ತು.
2 ಯೆಹೋವ ದೇವರು ಆದಾಮ-ಹವ್ವರಿಗೆ ಪ್ರತಿ ಹೆಜ್ಜೆ-ಹೆಜ್ಜೆಯಲ್ಲೂ ನಿಯಮಗಳನ್ನ ಇಟ್ಟು ಅವ್ರ ಮೇಲೆ ಅನಾವಶ್ಯಕ ಭಾರ ಹೊರಿಸಲಿಲ್ಲ. ಆತನು ಅವ್ರಿಗೆ ‘ಈ ಭೂಮಿನ ನೋಡ್ಕೊಳ್ಳಿ, ನಿಮ್ಮ ಮಕ್ಕಳನ್ನ ಈ ಭೂಮಿಲಿ ತುಂಬಿಸಿ. ಸರಿ ಯಾವುದು, ತಪ್ಪು ಯಾವುದು ಅಂತ ಹೇಳೋ ಹಕ್ಕು ನನಗಿದೆ, ಅದನ್ನ ಒಪ್ಕೊಳ್ಳಿ ಮತ್ತು ಗೌರವಿಸಿ’ ಅಂತ ಹೇಳಿದನು. ನೋಡಿದ್ರಾ, ಯೆಹೋವ ದೇವರು ಅವ್ರಿಂದ ಜಾಸ್ತಿ ಏನೂ ಕೇಳ್ಕೊಂಡಿಲ್ಲ. (ಆದಿ. 1:28; 2:16, 17) ಇಷ್ಟೆಲ್ಲಾ ಸ್ವಾತಂತ್ರ್ಯ ಕೊಟ್ಟ ಯೆಹೋವನಿಗೆ ಆದಾಮ-ಹವ್ವ ಏನು ಮಾಡಬಹುದಿತ್ತು? ಅವರು ಖುಷಿ-ಖುಷಿಯಾಗಿ ಆತನು ಹೇಳಿದ ಮಾತನ್ನ ಕೇಳಬೇಕಿತ್ತು. ಹೀಗೆ, ‘ನಮಗೆ ಯೆಹೋವನ ಮೇಲೆ ಪ್ರೀತಿ ಇದೆ, ಆತನನ್ನ ಖುಷಿಪಡ್ಸೋಕೆ ಮನಸ್ಸಿದೆ ಮತ್ತು ಆತನು ಕೊಟ್ಟ ಈ ಎಲ್ಲ ವಿಷ್ಯಗಳಿಗೆ ಕೃತಜ್ಞತೆ ಇದೆ’ ಅಂತ ತೋರಿಸಿ ಕೊಡಬಹುದಿತ್ತು.—ಜ್ಞಾನೋ. 23:15.
3. ಆದಾಮ-ಹವ್ವ ಇಚ್ಛಾ ಸ್ವಾತಂತ್ರ್ಯನ ಯಾವ ರೀತಿ ಬಳಸಿದ್ರು?
3 ಆದಾಮ-ಹವ್ವ ಯೆಹೋವನ ಮಾತನ್ನ ಕೇಳಲಿಲ್ಲ. ಅವ್ರಿಗೆ ಕೊಟ್ಟ ಅಮೂಲ್ಯ ಗಿಫ್ಟ್ ಆದ ಇಚ್ಛಾಸ್ವಾತಂತ್ರ್ಯನ ಅವರು ಸರಿಯಾಗಿ ಉಪಯೋಗಿಸಲಿಲ್ಲ ಅಂತ ಬೈಬಲ್ ಹೇಳುತ್ತೆ. ಅವರು ಯಾಕೆ ಹೀಗೆ ಮಾಡಿದ್ರು? ಯಾಕಂದ್ರೆ ಅವ್ರಿಗೆ ಯೆಹೋವನ ಮೇಲಿರೋ ಪ್ರೀತಿಗಿಂತ, ಆತನು ಅವ್ರಿಗಾಗಿ ಮಾಡಿರೋ ವಿಷ್ಯಗಳಿಗೆ ಕೃತಜ್ಞತೆ ತೋರಿಸೋದಕ್ಕಿಂತ ಅವ್ರ ಸ್ವಾರ್ಥ ಆಸೆಗಳೇ ದೊಡ್ಡದಾಗಿಬಿಟ್ಟಿತು. (ಆದಿ. 3:1-7) ಅವರು ಅವತ್ತು ಮಾಡಿದ ಆ ದೊಡ್ಡ ತಪ್ಪಿಂದ ಇವತ್ತಿನವರೆಗೂ ನಾವು ನರಳ್ತಾ ಇದ್ದೀವಿ.—ರೋಮ. 5:12.
4. (ಎ) ಗಲಾತ್ಯ 6:5ರ ಪ್ರಕಾರ ನಾವೇನು ಮಾಡಬೇಕು? (ಬಿ) ಈ ಲೇಖನದಲ್ಲಿ ಯೆಹೋವ ಕೊಟ್ಟಿರೋ ಇನ್ಯಾವ ಗಿಫ್ಟ್ ಬಗ್ಗೆ ಚರ್ಚೆ ಮಾಡ್ತೀವಿ?
4 ಪ್ರತಿದಿನ ನಾವು ತುಂಬ ನಿರ್ಧಾರಗಳನ್ನ ಮಾಡಬೇಕಾಗುತ್ತೆ. ಅದ್ರಲ್ಲಿ ಕೆಲವು ಚಿಕ್ಕದು, ಇನ್ನೂ ಕೆಲವು ದೊಡ್ಡದು. (ಗಲಾತ್ಯ 6:5 ಓದಿ.) ಹಾಗಾಗಿ ನಮಗೆ ಸರಿಯಾದ ನಿರ್ಧಾರಗಳನ್ನ ಮಾಡೋಕೆ ಕೆಲವೊಮ್ಮೆ ಕನ್‌ಫ್ಯೂಸ್ ಆಗಬಹುದು. ಯೆಹೋವನಿಗೆ ಇಷ್ಟ ಆಗಿರೋ ನಿರ್ಧಾರಗಳನ್ನ ಮಾಡೋಕೆ ಏನು ಮಾಡಬೇಕು? ನಾನೇ ಎಲ್ಲ ಸರಿಯಾಗಿ ಮಾಡ್ತೀನಿ ಅಂತ ಅಂದ್ಕೊಳ್ಳದೆ ನಮಗೆ ಯೆಹೋವನ ಸಹಾಯ ಬೇಕು ಅಂತ ಅರ್ಥ ಮಾಡ್ಕೊಬೇಕು. (ಜ್ಞಾನೋ. 16:3; ಯೆರೆ. 10:23) ಯೇಸು ಒಬ್ಬ ಪರಿಪೂರ್ಣ ವ್ಯಕ್ತಿ, ಯಾವತ್ತೂ ತಪ್ಪೇ ಮಾಡಿಲ್ಲ. ಆದ್ರೂ ಆತನೇ ಯೆಹೋವನ ಹತ್ರ ಸಹಾಯಕ್ಕಾಗಿ ಬೇಡ್ಕೊಂಡ ಅಂದ್ಮೇಲೆ, ಧೂಳಿನ ತರ ಇರೋ ನಾವು ಯೆಹೋವನ ಹತ್ರ ಇನ್ನೆಷ್ಟು ಸಹಾಯಕ್ಕಾಗಿ ಬೇಡ್ಕೊಬೇಕಲ್ವಾ? (ಇಬ್ರಿ. 5:7) ನಮಗೆ ಸಹಾಯ ಆಗಲಿ ಅಂತ ಯೆಹೋವ ದೇವರು ಇನ್ನೊಂದು ಗಿಫ್ಟ್‌ನ ಕೊಟ್ಟಿದ್ದಾನೆ. ಅದು ನಮಗೆ ಸರಿಯಾದ ನಿರ್ಧಾರಗಳನ್ನ ತಗೊಳೋಕೆ ಸಹಾಯ ಮಾಡುತ್ತೆ. ಅದೇ ನಮ್ಮ ಮನಸ್ಸಾಕ್ಷಿ! ಅದ್ರ ಬಗ್ಗೆ ನಾವೀಗ ನೋಡೋಣ.
ಮನಸ್ಸಾಕ್ಷಿ ಅಂದ್ರೇನು?
5. (ಎ) ಮನಸ್ಸಾಕ್ಷಿ ಅಂದ್ರೇನು? (ಬಿ) ಮನಸ್ಸಾಕ್ಷಿ ನಮಗೆ ಹೇಗೆ ಸಹಾಯ ಮಾಡುತ್ತೆ? (ರೋಮನ್ನರಿಗೆ 2:14, 15)
5 ಮನಸ್ಸಾಕ್ಷಿ ಅಂದ್ರೆ ಯಾವುದು ಸರಿ ಯಾವುದು ತಪ್ಪು ಅಂತ ತಿಳಿಸೋ ಒಳಗಿನ ಭಾವನೆ. ದೇವರ ನಿಯಮಗಳ ಗಂಧ-ಗಾಳಿನೇ ಗೊತ್ತಿಲ್ಲದೆ ಇರೋ ವ್ಯಕ್ತಿಗೂ ಮನಸ್ಸಾಕ್ಷಿ ಇರುತ್ತೆ. (2 ಕೊರಿಂ. 4:2) ಮನಸ್ಸು ಅನ್ನೋ ಕೊರ್ಟ್‌ನಲ್ಲಿ, ಮನಸ್ಸಾಕ್ಷಿನೇ ಜಡ್ಜ್. ನಾವು ತಪ್ಪಾಗಿ ನಡ್ಕೊಂಡಾಗ, ತಪ್ಪಾಗಿ ಯೋಚ್ನೆ ಮಾಡ್ದಾಗ ಅದು ನಮ್ಮನ್ನ ದೂರುತ್ತೆ ಅಥವಾ ಸಮರ್ಥಿಸುತ್ತೆ. (ರೋಮನ್ನರಿಗೆ 2:14, 15 ಓದಿ.) ಅಷ್ಟೇ ಅಲ್ಲ, ನಮ್ಮ ಮನಸ್ಸಾಕ್ಷಿ ಎಚ್ಚರಿಕೆಯ ಗಂಟೆ ತರಾನೂ ಕೆಲಸ ಮಾಡುತ್ತೆ. ತಪ್ಪು ಅಂತ ಗೊತ್ತಿದ್ರೂ ಅದನ್ನ ಮಾಡೋಕೆ ಹೋದಾಗ ಅದು ನಮ್ಮನ್ನ ಎಚ್ಚರಿಸುತ್ತೆ. (1 ಸಮು. 26:8-11) ಕೆಲವೊಮ್ಮೆ ಮನಸ್ಸಾಕ್ಷಿ ಫ್ರೆಂಡ್ ತರಾನೂ ಕೆಲಸ ಮಾಡುತ್ತೆ. ಯಾವುದು ಸರಿ ಅಂತ ನಮಗೆ ಗೊತ್ತಿದ್ಯೋ, ‘ಅದನ್ನ ಮಾಡು’ ಅಂತ ನಮ್ಮನ್ನ ಪ್ರೋತ್ಸಾಹಿಸುತ್ತೆ. ಆದ್ರೆ ನಮಗೆ ಇಚ್ಛಾಸ್ವಾತಂತ್ರ್ಯ ಈಗಾಗ್ಲೇ ಇದೆ ಅಲ್ವಾ ಹಾಗಾದ್ರೆ ಈ ಮನಸ್ಸಾಕ್ಷಿ ಯಾಕೆ ಬೇಕು? ನಮಗೆ ಇಚ್ಛಾಸ್ವಾತಂತ್ರ್ಯ ಇದೆ ಅಂದ ತಕ್ಷಣ ನಾವು ಮಾಡೋದೆಲ್ಲಾ ಸರಿಯಾಗಿರುತ್ತೆ, ಅದು ಯೆಹೋವನಿಗೆ ಇಷ್ಟ ಆಗುತ್ತೆ ಅಂತ ಹೇಳೋಕಾಗಲ್ಲ. ಅದಕ್ಕೇ ನಮಗೆ ಮನಸ್ಸಾಕ್ಷಿ ಬೇಕು! ಇದು ಸರಿ ಮತ್ತು ತಪ್ಪು ನಿರ್ಧಾರಗಳ ಮಧ್ಯೆ ಇರೋ ವ್ಯತ್ಯಾಸನ ಕಂಡುಹಿಡಿಯೋಕೆ ಸಹಾಯ ಮಾಡುತ್ತೆ.
6. ನಮ್ಮ ಮನಸ್ಸಾಕ್ಷಿ ಯಾವಾಗ್ಲೂ ಸರಿಯಾಗಿ ಕೆಲಸ ಮಾಡುತ್ತಾ?
6 ನಮ್ಮ ಮನಸ್ಸಾಕ್ಷಿ ಯಾವಾಗ್ಲೂ ಸರಿಯಾಗೇ ಕೆಲಸ ಮಾಡುತ್ತೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ನಾವು ಅಪರಿಪೂರ್ಣರಾಗಿ ಇರೋದ್ರಿಂದ ನಮ್ಮ ಮನಸ್ಸಾಕ್ಷಿನೂ ಅಪರಿಪೂರ್ಣ. ನಾವು ಬೆಳೆದು ಬಂದಿರೋ ರೀತಿ, ನಮ್ಮ ಸುತ್ತ-ಮುತ್ತ ಇರೋ ಜನ, ಸಂಸ್ಕೃತಿ, ನಮ್ಮ ಕೆಟ್ಟ ಆಸೆಗಳು ಮನಸ್ಸಾಕ್ಷಿ ಮೇಲೆ ಪ್ರಭಾವ ಬೀರುತ್ತೆ. ನಮ್ಮ ಮನಸ್ಸಾಕ್ಷಿ ‘ಕೊಳಕಾಗುತ್ತೆ, ಸೂಕ್ಷ್ಮ ಆಗುತ್ತೆ, ಅಶುದ್ಧ ಆಗುತ್ತೆ ಮತ್ತು ಕಬ್ಬಿಣದಿಂದ ಬರೆ ಹಾಕಿರೋ ಜಾಗದ ತರ ಮರಗಟ್ಟಿ ಹೋಗುತ್ತೆ’ ಅಂತ ಬೈಬಲ್ ಹೇಳುತ್ತೆ. (1 ಕೊರಿಂ. 8:12; ತೀತ 1:15; 1 ತಿಮೊ. 4:2; ಇಬ್ರಿ. 10:22) ಈ ತರ ಹಾಳಾದ ಮನಸ್ಸಾಕ್ಷಿ ಸರಿ ದಾರಿ ತೋರಿಸಲ್ಲ. ಹಾಗಂತ ಅದ್ರಿಂದ ನಮಗೆ ಯಾವುದೇ ಪ್ರಯೋಜ್ನ ಇಲ್ವಾ? ಹಾಳಾಗಿರೋ ತಕ್ಕಡಿನ ರಿಪೇರಿ ಮಾಡಿದ್ರೆ ಅದು ಗ್ಯಾರಂಟಿ ಆಗಿ ಸರಿಯಾದ ತೂಕ ತೋರಿಸುತ್ತೆ. ಅದೇ ತರ ಹಾಳಾದ ಮನಸ್ಸಾಕ್ಷಿನ ರಿಪೇರಿ ಮಾಡಿದ್ರೆ ಅದೂ ನಮಗೆ ಸರಿಯಾದ ದಾರಿ ತೋರಿಸುತ್ತೆ. (1 ಪೇತ್ರ 3:16) ಅದನ್ನ ಹೇಗೆ ರಿಪೇರಿ ಮಾಡೋದು ಅಂತ ನೋಡೋಣ.
ಮನಸ್ಸಾಕ್ಷಿಗೆ ಕಲಿಸೋದು ಹೇಗೆ?
7-8. (ಎ) ಮನಸ್ಸಾಕ್ಷಿಗೆ ಕಲಿಸೋಕೆ ಏನು ಮಾಡಬೇಕು? (ಬಿ) ಬೈಬಲ್ ತತ್ವಗಳು ನಮಗೆ ಹೇಗೆ ಸಹಾಯ ಮಾಡುತ್ತೆ? ಉದಾಹರಣೆ ಕೊಡಿ. (ಚಿತ್ರ ನೋಡಿ.)
7 ಯಾವುದು ಸರಿ, ಯಾವುದು ತಪ್ಪು ಅಂತ ನಮ್ಮ ಮನಸ್ಸಾಕ್ಷಿಗೆ ನಾವು ಯಾವಾಗ್ಲೂ ಕಲಿಸ್ತಾ ಇರ್ಬೇಕು. ಇದನ್ನ ಮಾಡೋಕೆ ನಾವು ಪ್ರತಿದಿನ ಬೈಬಲ್ ಓದಬೇಕು. ಯೆಹೋವ ಕೊಟ್ಟಿರೋ ನಿಯಮಗಳನ್ನ ನಾವು ಚೆನ್ನಾಗಿ ಅರ್ಥಮಾಡ್ಕೊಂಡಾಗ, ಆತನ ಯೋಚ್ನೆ ಏನು ಅಂತ ನಮಗೆ ಚೆನ್ನಾಗಿ ಅರ್ಥ ಆಗುತ್ತೆ. ಆದ್ರೆ ನಾವು ಹಿಂದಿನ ಲೇಖನದಲ್ಲಿ ನೋಡಿರೋ ತರ ನಿಯಮಗಳು ಕೇವಲ ಕೆಲವು ಸನ್ನಿವೇಶಗಳಲ್ಲಿ ಮಾತ್ರ ಅನ್ವಯಿಸುತ್ತೆ. ಹಾಗಾಗಿ ನಾವು ಬೈಬಲಲ್ಲಿ ತತ್ವಗಳನ್ನ ಹುಡುಕಬೇಕು. ಈ ತತ್ವಗಳೇ, ಒಂದು ವಿಷ್ಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಮತ್ತು ಯೆಹೋವನ ಯೋಚ್ನೆ ಏನು ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ.—ಯೆಶಾ. 55:9.
8 ನೀವು ಮರುಭೂಮಿಯಲ್ಲಿ ಪ್ರಯಾಣ ಮಾಡ್ತಿದ್ದೀರ ಅಂತ ಅಂದ್ಕೊಳ್ಳಿ. ಅಲ್ಲಿ ಸರಿಯಾಗಿರೋ ರೋಡ್‌ಗಳಿರಲ್ಲ, ಫುಟ್‌ಪಾತ್ ಇರಲ್ಲ, ರಸ್ತೆ ಚಿಹ್ನೆಗಳು ಇರಲ್ಲ. ಸೂರ್ಯ ನಕ್ಷತ್ರಗಳು ಚಲಿಸೋ ದಿಕ್ಕನ್ನ ನೋಡಿ ನಾವು ಪ್ರಯಾಣನ ಮಾಡಬಹುದು ನಿಜ. ಆದ್ರೆ ನಮ್ಮ ಕೈಯಲ್ಲಿ ಮ್ಯಾಪ್ ಇದ್ರೆ, ಅದ್ರಲ್ಲೂ ಲ್ಯಾಂಡ್ ಮಾರ್ಕ್‌ಗಳು ಇದ್ರೆ ಅದನ್ನ ನೋಡಿ ನಾವು ನಮ್ಮ ಗುರಿನ ಇನ್ನೂ ಸುಲಭವಾಗಿ ಮುಟ್ಟಬಹುದು. ನಾವು ಹೋಗ್ತಿರೋದು ಸರಿ ದಾರಿನ ಅಥವಾ ತಪ್ಪಾಗಿರೋ ದಾರಿಗೆ ಬಂದಿದ್ದೀವಾ ಅಂತ ಕಂಡುಹಿಡಿಯೋಕೂ ಈ ಮ್ಯಾಪ್ ಸಹಾಯ ಮಾಡುತ್ತೆ. ನಮ್ಮ ಜೀವನಾನೂ ಈ ಮರುಭೂಮಿಯಲ್ಲಿ ಮಾಡೋ ಪ್ರಯಾಣದ ತರ. ನಮ್ಮೆಲ್ಲರಿಗೂ ಒಂದು ಗುರಿ ಇದೆ. ಅದು ಯೆಹೋವನನ್ನ ಮೆಚ್ಚಿಸಬೇಕು ಅನ್ನೋದೇ. ಹಾಗಾದ್ರೆ ನಮಗಿರೋ ಮ್ಯಾಪ್ ಯಾವುದು? ಅದೇ ಬೈಬಲ್. ಅದು ನಮಗೆ ಯಾವ ನಿರ್ಧಾರಗಳನ್ನ ತಗೋಬೇಕು ಅಂತ ಸಹಾಯ ಮಾಡುತ್ತೆ. ಬೈಬಲ್ ತತ್ವಗಳು ಆ ಮ್ಯಾಪ್‌ನಲ್ಲಿರೋ ಲ್ಯಾಂಡ್ ಮಾರ್ಕ್ಸ್ ತರ. ಆ ತತ್ವಗಳನ್ನ ಮನಸ್ಸಲ್ಲಿಟ್ಟು ನಮ್ಮ ಜೀವನಾನ ನಡೆಸಿದ್ರೆ ನಾವು ಖಂಡಿತ ಗುರಿ ತಲುಪ್ತೀವಿ.
ಮ್ಯಾಪಲ್ಲಿರೋ ಲ್ಯಾಂಡ್‌ಮಾರ್ಕ್‌ಗಳ ತರ ಬೈಬಲ್ ತತ್ವಗಳು ನಾವು ಸರಿಯಾದ ದಾರಿಯಲ್ಲೇ ಹೋಗ್ತಿದ್ದೀವಿ ಅನ್ನೋದನ್ನ ತಿಳಿಸುತ್ತೆ (ಪ್ಯಾರ 8 ನೋಡಿ)
9. ರೋಮನ್ನರಿಗೆ 9:1ರ ಪ್ರಕಾರ ಮನಸ್ಸಾಕ್ಷಿಗೆ ಚೆನ್ನಾಗಿ ಕಲಿಸೋಕೆ ಯಾವುದು ಸಹಾಯ ಮಾಡುತ್ತೆ?
9 ನಮ್ಮ ಮನಸ್ಸಾಕ್ಷಿಗೆ ಸರಿಯಾಗಿ ಕಲಿಸೋಕೆ ನಮಗೆ ಪವಿತ್ರಶಕ್ತಿಯ ಸಹಾಯ ಬೇಕು. (ರೋಮನ್ನರಿಗೆ 9:1 ಓದಿ.) ಈ ಪವಿತ್ರಶಕ್ತಿ ಒಂದು ವಿಷ್ಯದ ಬಗ್ಗೆ ಯೆಹೋವ ಹೇಗೆ ಯೋಚ್ನೆ ಮಾಡ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ಯೆಹೋವನಿಗೆ ಇಷ್ಟ ಆಗಿರೋ ವಿಷ್ಯಗಳನ್ನ ಮಾಡೋ ಬಯಕೆ ಮತ್ತು ಶಕ್ತಿನ ಕೊಡುತ್ತೆ. (ಫಿಲಿ. 2:13) ಆದ್ರೆ ನಾವು ಪವಿತ್ರಶಕ್ತಿಯನ್ನ ಪಡ್ಕೊಳ್ಳೋಕೆ ಏನು ಮಾಡಬೇಕು?
10. ಪವಿತ್ರಶಕ್ತಿಯ ಸಹಾಯ ಪಡ್ಕೊಬೇಕಾದ್ರೆ ಏನು ಮಾಡಬೇಕು? (ಲೂಕ 11:10, 13)
10 ಪವಿತ್ರಶಕ್ತಿಗಾಗಿ ಬೇಡ್ಕೊಳ್ಳಿ. (ಲೂಕ 11:10, 13 ಓದಿ.) ಯೆಹೋವ ತನ್ನ ಮಾತನ್ನ ಕೇಳೋರಿಗೆ ಪವಿತ್ರಶಕ್ತಿಯನ್ನ ಕೊಡ್ತಾನೆ. (ಯೋಹಾ. 3:34) ಎಷ್ಟು ಕೊಡ್ತಾನೆ ಗೊತ್ತಾ? ಅಲ್ಪ-ಸ್ವಲ್ಪ ಅಲ್ಲ, ಕೈ ತೆರೆದು ಧಾರಾಳವಾಗಿ ಅದನ್ನ ಕೊಡ್ತಾನೆ. (ಜ್ಞಾನೋ. 1:23; ಯಾಕೋ. 1:5) ಮನಸ್ಸಾಕ್ಷಿಗೆ ಕಲಿಸೋಕೆ ಇನ್ನೂ ಯಾವ ವಿಷ್ಯ ಸಹಾಯ ಮಾಡುತ್ತೆ?
11. (ಎ) ನಮ್ಮ ಜೀವನದ ಮುಖ್ಯ ಗುರಿ ಏನು? (ಬಿ) ಮನಸ್ಸಾಕ್ಷಿ ಸರಿಯಾಗಿ ಕೆಲಸ ಮಾಡ್ತಿದ್ಯಾ ಅಂತ ಚೆಕ್ ಮಾಡೋದು ಯಾಕೆ ಮುಖ್ಯ?
11 ಯೆಹೋವನನ್ನ ಯಾವಾಗ್ಲೂ ಮೆಚ್ಚಿಸೋಕೆ ಪ್ರಯತ್ನಿಸಿ. (ಜ್ಞಾನೋ. 8:34, 35) ಇದು ನಮ್ಮ ಜೀವನದ ಮುಖ್ಯ ಗುರಿಯಾಗಿರಬೇಕು. ಈ ಗುರಿನ ನಾವು ನಮ್ಮ ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮನಸ್ಸಲ್ಲಿ ಇಟ್ಕೊಂಡ್ರೆ ನಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡೋಕೆ ಇದು ಸಹಾಯ ಮಾಡುತ್ತೆ. ಒಳ್ಳೆ ಮನಸ್ಸಾಕ್ಷಿ ಅಂದ್ರೆ ಏನು? ಒಳ್ಳೆ ಮನಸ್ಸಾಕ್ಷಿಯಲ್ಲಿ ಯೆಹೋವನ ತರ ಯೋಚಿಸೋ ಮನಸ್ಸು ಮತ್ತು ಯೆಹೋವನ ತರ ಭಾವನೆಗಳಿರೋ ಹೃದಯ ಇರುತ್ತೆ. ಆದ್ರೆ ನಾವು ಕೊನೆ ದಿನಗಳಲ್ಲಿ ಜೀವಿಸ್ತಾ ಇರೋದ್ರಿಂದ ನಮ್ಮ ಮನಸ್ಸು ಮತ್ತು ಹೃದಯನ ಹಾಳು ಮಾಡೋ ವಿಷ್ಯಗಳೇ ಎಲ್ಲ ಕಡೆ ತುಂಬ್ಕೊಂಡಿದೆ. ನಾವು ಆಗಾಗ ಬೈಬಲ್ ನೇರವಾಗಿ ಹೇಳ್ದೆ ಇರೋ ವಿಷ್ಯಗಳ ಬಗ್ಗೆನೂ ನಿರ್ಧಾರ ಮಾಡಬೇಕಾಗೋ ಸನ್ನಿವೇಶಗಳು ಬರುತ್ತೆ. ಉದಾಹರಣೆಗೆ, ಮನೋರಂಜನೆ, ಕೆಲಸ, ಶಿಕ್ಷಣ ಮತ್ತು ಬೇರೆಯವ್ರ ಜೊತೆ ಇರೋ ನಮ್ಮ ಸಂಬಂಧ. ಇಂಥ ವಿಷ್ಯಗಳ ಬಗ್ಗೆ ನಿರ್ಧಾರ ಮಾಡ್ವಾಗ ನಮಗೆ ಒಳ್ಳೆ ಮನಸ್ಸಾಕ್ಷಿ ಇದ್ರೆ ತುಂಬ ಸಹಾಯ ಆಗುತ್ತೆ. ಆದ್ರೆ ನಾವು ಮಾಡೋ ನಿರ್ಧಾರ ಯೆಹೋವನಿಗೆ ಮೆಚ್ಚುಗೆ ಆಗುತ್ತಾ ಅಂತ ಕಂಡುಹಿಡಿಯೋದು ಹೇಗೆ?—2 ಕೊರಿಂ. 1:12.
12. ನಿಮ್ಮ ಮನಸ್ಸಾಕ್ಷಿ ನಿಮ್ಮನ್ನ ಸರಿ ದಾರಿಯಲ್ಲಿ ನಡೆಸೋಕೆ ಸಹಾಯ ಮಾಡ್ತಿದ್ಯಾ ಅಂತ ತಿಳ್ಕೊಳ್ಳೋಕೆ ಏನು ಮಾಡಬೇಕು? (ಎಫೆಸ 5:10)
12 ಬೈಬಲ್ ಓದಿ ಧ್ಯಾನ ಮಾಡಿ. (ಕೀರ್ತ. 49:3) ನೀವು ಬೈಬಲ್ ಓದ್ವಾಗ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡೋ ಬೈಬಲ್ ತತ್ವಗಳನ್ನ ಹುಡುಕಿ. (ಎಫೆಸ 5:10 ಓದಿ.) ಜೀವನದಲ್ಲಿ ದೊಡ್ಡ-ದೊಡ್ಡ ಕಷ್ಟಗಳು ಬಂದಾಗ ಬೈಬಲ್ ತತ್ವಗಳಿಗಾಗಿ ಹುಡುಕಿ, ಈ ತತ್ವಗಳು ನಮ್ಮ ಮನಸ್ಸಾಕ್ಷಿ ಸರಿಯಾದ ನಿರ್ಧಾರ ತಗೊಳ್ಳೋಕೆ ನಮಗೆ ಸಹಾಯ ಮಾಡ್ತಿದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ. (ಜ್ಞಾನೋ. 2:4-9, 11-13) ಅಷ್ಟೇ ಅಲ್ಲ, ನಮ್ಮ ಮನಸ್ಸಾಕ್ಷಿನ ತಿದ್ದಿ ಸರಿಪಡಿಸುತ್ತೆ ಮತ್ತು ಸರಿ ದಾರಿಯಲ್ಲಿ ನಡೆಸೋಕೂ ಸಹಾಯ ಮಾಡುತ್ತೆ.—ಇಬ್ರಿ. 5:14.
13. ನಾವು ನಿರ್ಧಾರಗಳನ್ನ ಮಾಡ್ವಾಗ ಯಾವ ತಪ್ಪು ಮಾಡೋಕೆ ಹೋಗಬಾರದು? ಉದಾಹರಣೆ ಕೊಡಿ.
13 ಮೊದಲೇ ನಿರ್ಧಾರ ಮಾಡ್ಬಿಟ್ಟು ಅದನ್ನ ಬೆಂಬಲಿಸೋ ತತ್ವಗಳನ್ನ ಹುಡುಕಬೇಡಿ. ಕ್ರಿಸ್ತ ಪೂರ್ವ 607ರಲ್ಲಿ ಯೆರೂಸಲೇಮ್ ನಾಶ ಆದ್ಮೇಲೂ ಕೆಲವು ಇಸ್ರಾಯೇಲ್ಯರು ಅಲ್ಲೇ ಉಳ್ಕೊಂಡ್ರು. ಅವ್ರ ತರ ನಾವು ಇರಬಾರದು. ಯಾಕೆ? ಯಾಕಂದ್ರೆ ಅವರು ಯೆರೆಮೀಯನಿಗೆ, “ನಾವು ಯಾವ ದಾರಿಯಲ್ಲಿ ನಡಿಬೇಕು, ಏನು ಮಾಡಬೇಕು ಅಂತ ನಿನ್ನ ದೇವರಾದ ಯೆಹೋವನೇ ನಮಗೆ ಹೇಳಲಿ” ಅಂತ ಹೇಳಿದ್ರು. (ಯೆರೆ. 42:3-6) ಆದ್ರೆ ಅವರು ತಮ್ಮ ಮನಸ್ಸಲ್ಲಿ ಈಗಾಗ್ಲೇ ಒಂದು ನಿರ್ಧಾರ ಮಾಡಿ ಬಿಟ್ಟಿದ್ರು. ಯೆಹೋವ ಹೇಳಿದ ಮಾತು ಅವ್ರಿಗೆ ಇಷ್ಟ ಆಗದೇ ಇದ್ದಾಗ ಅವರು ಮೊದಲು ಅಂದ್ಕೊಂಡಿದ್ದ ತರಾನೇ ಮಾಡಿಬಿಟ್ರು. ಇದು ಅನಾಹುತಕ್ಕೆ ನಡೆಸ್ತು. (ಯೆರೆ. 42:19-22; 43:1, 2, 4) ಹಾಗಾಗಿ ನಾವು ಒಂದು ನಿರ್ಧಾರ ಮಾಡೋ ಮುಂಚೆ ಬೈಬಲ್ ತತ್ವಗಳು ಏನು ಹೇಳುತ್ತೆ ಅಂತ ಮೊದಲು ತಿಳ್ಕೊಬೇಕು. ಆಗ ನಮಗೆ ಯೆಹೋವನ ಯೋಚ್ನೆ ಏನು ಅಂತ ಗೊತ್ತಾಗುತ್ತೆ ಮತ್ತು ಅದ್ರ ಪ್ರಕಾರ ನಡ್ಕೊಳ್ತೀವಿ.
14. ಬೈಬಲ್ ತತ್ವಗಳ ಪ್ರಕಾರ ನಿರ್ಧಾರಗಳನ್ನ ಮಾಡೋದು ಯಾಕಷ್ಟು ಮುಖ್ಯ?
14 ಬೈಬಲ್ ತತ್ವಗಳ ಪ್ರಕಾರ ನಿರ್ಧಾರಗಳನ್ನ ಮಾಡಿ. (ಮತ್ತಾ. 7:24-29; ಯಾಕೋ. 1:23-25) ನಾವು ಬೈಬಲ್ ತತ್ವಗಳನ್ನ ಮನಸ್ಸಲ್ಲಿಟ್ಟು ನಿರ್ಧಾರಗಳನ್ನ ಮಾಡಿದ್ರೆ ಮಾತ್ರ ಪವಿತ್ರಶಕ್ತಿಗೆ ತಕ್ಕಂತೆ ನಡ್ಕೊಳ್ತಾ ಇರ್ತೀವಿ. ಇದನ್ನ ನೋಡಿ ಯೆಹೋವ ಇನ್ನೂ ಜಾಸ್ತಿ ಪವಿತ್ರಶಕ್ತಿಯನ್ನ ನಮಗೆ ಕೊಡ್ತಾನೆ. (ಅ. ಕಾ. 5:32) ಆದ್ರೆ ಒಂದುವೇಳೆ ನಾವು ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡ್ಕೊಳ್ಳಲಿಲ್ಲ ಅಂದ್ರೆ ಏನೆಲ್ಲ ಆಗಬಹುದು? ನಾವು ‘ದುಃಖದಲ್ಲಿ ಮುಳುಗಿ ಹೋಗಬಹುದು ಅಥವಾ ಪವಿತ್ರಶಕ್ತಿಯ ವಿರುದ್ಧ ಕೆಲಸ ಮಾಡಿಬಿಡಬಹುದು.’ (ಎಫೆ. 4:30; ಯೆಶಾ. 63:10; ಅ. ಕಾ. 7:51) ಅಷ್ಟೇ ಅಲ್ಲ, ಯೆಹೋವ ನಮಗೆ ಪವಿತ್ರಶಕ್ತಿ ಬರದೇ ಇರೋ ತರಾನೂ ತಡೆಯಬಹುದು. (ಕೀರ್ತ. 51:11; 1 ಥೆಸ. 5:19) ಆಗ ನಮ್ಮ ಪರಿಸ್ಥಿತಿ ಬಾಂಡ್ಲಿ ಇಂದ ಬೆಂಕಿಗೆ ಬಿದ್ದಂಗೆ ಆಗಿಬಿಡುತ್ತೆ. ಪವಿತ್ರಶಕ್ತಿಯಿಂದ ಸಿಗೋ ಬಲ ನಮಗೆ ಸಿಗದೇ ಇದ್ರೆ ನಮ್ಮ ಜೀವನ ಅಲ್ಲೋಲ ಕಲ್ಲೋಲ ಆಗುತ್ತೆ.—ಎಫೆ. 3:16.
ಸೂಕ್ತವಾದ ತತ್ವಗಳನ್ನ ಹುಡುಕೋದು ಹೇಗೆ?
15-16. (ಎ) ಸೂಕ್ತವಾದ ಬೈಬಲ್ ತತ್ವಗಳನ್ನ ಹುಡುಕೋಕೆ ಏನು ಮಾಡಬೇಕು? (ಬಿ) ಸಿಗರೇಟ್ ಸೇದೋದನ್ನ ಬಿಡೋಕೆ ವಿದ್ಯಾರ್ಥಿಗೆ ಯಾವ ಬೈಬಲ್ ತತ್ವಗಳು ಸಹಾಯ ಮಾಡುತ್ತೆ?
15 ಅಧ್ಯಯನ ಸಾಧನಗಳನ್ನ ಬಳಸಿ. ತತ್ವಗಳನ್ನ ಹುಡುಕೋದು ಹೇಗೆ ಅಂತ ಗೊತ್ತಿಲ್ಲಾಂದ್ರೆ ಅದನ್ನ ಪಾಲಿಸೋಕೆ ಆಗಲ್ಲ. ಹಾಗಾಗಿ ನಾವು ಮೊದಲು ಬೈಬಲ್ ತತ್ವಗಳನ್ನ ಹುಡುಕೋದು ಹೇಗೆ ಅಂತ ಕಲಿಬೇಕು. ಉದಾಹರಣೆಗೆ, ನಿಮ್ಮ ಬೈಬಲ್ ವಿದ್ಯಾರ್ಥಿ ಸಿಗರೇಟ್ ಸೇದೋದನ್ನ ಬಿಡೋಕೆ ಒಪ್ಪದೇ ಇದ್ರೆ ಏನು ಮಾಡ್ತೀರಾ? ಆ ವಿದ್ಯಾರ್ಥಿ ನಿಮಗೆ, ‘ಸಿಗರೇಟ್ ಸೇದೋದ್ರ ಬಗ್ಗೆ ಬೈಬಲ್ ಎಲ್ಲೂ ಹೇಳಲ್ಲ ಅಲ್ವಾ, ಅಂದ್ಮೇಲೆ ಅದನ್ನ ತಪ್ಪು ಅಂತ ನಾವು ಹೇಗೆ ಹೇಳ್ಬಹುದು’ ಅಂತ ಕೇಳಬಹುದು. ಇಂಥ ಸನ್ನಿವೇಶದಲ್ಲಿ ಬೈಬಲ್ ತತ್ವಗಳನ್ನ ಹುಡುಕಿ, ಸಿಗರೇಟ್ ಸೇದೋದು ತಪ್ಪು ಅಂತ ಅರ್ಥಮಾಡ್ಸೋಕೆ ವಿದ್ಯಾರ್ಥಿಗೆ ನೀವು ಹೇಗೆ ಸಹಾಯ ಮಾಡಬಹುದು? ನಿಮಗೆ ಸಹಾಯ ಮಾಡೋಕೆ ಅಂತಾನೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋ ಪುಸ್ತಕ ಇದೆ. ಇದ್ರಲ್ಲಿ “ತಂಬಾಕು ಮತ್ತು ಧೂಮಪಾನ” ಅನ್ನೋ ಶೀರ್ಷಿಕೆ ಕೆಳಗೆ “ಧೂಮಪಾನದ ಬಗ್ಗೆ ದೇವರ ನೋಟವೇನು?” ಅನ್ನೋ ಲೇಖನ ಇದೆ. (ಕಾವಲಿನಬುರುಜು, ಜೂನ್ 1, 2014 ನೋಡಿ.) ಈ ಲೇಖನ ಓದ್ವಾಗ ಅವನಿಗೆ ಸಹಾಯ ಮಾಡೋ ಎಷ್ಟೋ ತತ್ವಗಳು ಮತ್ತು ವಚನಗಳು ಸಿಗುತ್ತೆ. ಅದು ಯಾವುದು ಅಂತ ನೋಡೋಣ.
16 ಆ ಲೇಖನದಲ್ಲಿ ಐದು ತತ್ವಗಳನ್ನ ಕೊಟ್ಟಿದ್ದಾರೆ. (1) ನಮ್ಮ ಪ್ರಾಣ ತೆಗೆಯೋ ವಿಷ್ಯಕ್ಕೆ ಯಾವತ್ತೂ ದಾಸರಾಗಬಾರದು. (ರೋಮ. 6:16) (2) ನಮ್ಮ ದೇಹಕ್ಕೆ ಹಾನಿ ಮಾಡೋ ಎಲ್ಲಾ ವಿಷ್ಯಗಳಿಂದ ದೂರ ಇರಬೇಕು. (2 ಕೊರಿಂ. 7:1) (3) ನಾವು ಪೂರ್ಣ ಪ್ರಾಣದಿಂದ ಯೆಹೋವನನ್ನ ಆರಾಧನೆ ಮಾಡಬೇಕು. (ಮತ್ತಾ. 22:37) (4) ನಮ್ಮ ಅಭ್ಯಾಸಗಳು ಮತ್ತು ನಡ್ಕೊಳ್ಳೋ ರೀತಿ ಬೇರೆಯವ್ರಿಗೆ ತೊಂದ್ರೆ ಕೊಡಬಾರದು. (ಮತ್ತಾ. 22:39; 1 ಕೊರಿಂ. 10:24) (5) ಸರಿಯಾಗಿ ಇರೋದನ್ನ ಮಾಡೋಕೆ ಯೆಹೋವ ಬಲ ಕೊಡ್ತಾನೆ. (ಫಿಲಿ. 4:13) ಹಾಗಾಗಿ ಸಿಗರೇಟ್ ಸೇದೋದ್ರ ಬಗ್ಗೆ ಬೈಬಲ್‌ನಲ್ಲಿ ಎಲ್ಲೂ ನೇರವಾಗಿ ಹೇಳಿಲ್ಲಾಂದ್ರೂ ಈ ತತ್ವಗಳು ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳೋಕೆ ವಿದ್ಯಾರ್ಥಿಗೆ ಸಹಾಯ ಮಾಡುತ್ತೆ.
17. ಮದುವೆ ಏರ್ಪಾಡು ಮಾಡ್ತಿರೋರು ಸೂಕ್ತವಾದ ತತ್ವಗಳನ್ನ ಹೇಗೆ ಹುಡುಕಬಹುದು?
17 ಮದುವೆ ಏರ್ಪಾಡುಗಳನ್ನ ಮಾಡ್ತಿರೋ ಹುಡುಗ-ಹುಡುಗಿ ಸೂಕ್ತವಾಗಿರೋ ಬೈಬಲ್ ತತ್ವಗಳನ್ನ ಹೇಗೆ ಹುಡುಕಬಹುದು? ಇದಕ್ಕೂ ಅದೇ ಸಂಶೋಧನಾ ಸಾಧನ ಸಹಾಯ ಮಾಡುತ್ತೆ. ಆ ಪುಸ್ತಕದಲ್ಲಿ “ಮದುವೆ ಮತ್ತು ಔತಣ” ಅನ್ನೋ ಶೀರ್ಷಿಕೆ ಕೆಳಗೆ, ಬೈಬಲ್ ತತ್ವಗಳನ್ನ ತಿಳಿಸೋ ಹಲವಾರು ಲೇಖನಗಳಿವೆ. ಉದಾಹರಣೆಗೆ, ಅಲ್ಲಿರೋ ಆರು ತತ್ವಗಳನ್ನ ನೋಡಿ. (1) ಎಲ್ಲಾ ಏರ್ಪಾಡುಗಳು ಯೆಹೋವನಿಗೆ ಗೌರವ ಕೊಡ್ಬೇಕು. (1 ಕೊರಿಂ. 10:31, 32) (2) ಮದುವೆಯಲ್ಲಿ ಹಾಕೋ ಬಟ್ಟೆ ಸಭ್ಯವಾಗಿರಬೇಕು, ಸೂಕ್ತವಾಗಿರಬೇಕು ಮತ್ತು ಅತಿಯಾಗಿ ಅನಿಸಬಾರದು. (1 ತಿಮೊ. 2:9; 1 ಪೇತ್ರ 3:3, 4) (3) ಲೋಕದ ಜನ್ರ ತರ ಆಡಂಬರ ಪ್ರದರ್ಶನ ಮಾಡಬಾರದು. (ಯೋಹಾ. 17:14; ಯಾಕೋ. 1:27; 1 ಯೋಹಾ. 2:15, 16) (4) ಎಲ್ಲಾ ಏರ್ಪಾಡುಗಳು ಅಚ್ಚುಕಟ್ಟಾಗಿ ಆಗಬೇಕು. (1 ಕೊರಿಂ. 14:40) (5) ರಿಸೆಪ್ಷನ್‌ನಲ್ಲಿ ಲಂಗುಲಗಾಮಿಲ್ಲದ ಮೋಜು-ಮಸ್ತಿ ಮಾಡ್ತಾ ಕುಡಿಕತನದಲ್ಲಿ ಮುಳುಗಿ ಹೋಗಬಾರದು. (ಗಲಾ. 5:21) (6) ಇಡೀ ಕಾರ್ಯಕ್ರಮವನ್ನ ನೋಡ್ಕೊಳ್ಳೋಕೆ ಒಬ್ಬ ಮೇಲ್ವಿಚಾರಕ ಇರ್ಬೇಕು.—ಯೋಹಾ. 2:8, 9.
18-19. (ಎ) ಇನ್ಯಾವ ಸಾಧನಗಳು ನಮಗೆ ಸಹಾಯ ಮಾಡುತ್ತೆ? (ಬಿ)ಹಬ್ಬ-ಆಚರಣೆಗಳ ಬಗ್ಗೆ ನಿರ್ಧಾರ ಮಾಡೋಕೆ ಈ ಸಾಧನದಲ್ಲಿರೋ ಯಾವ ತತ್ವ ನಿಮಗೆ ಸಹಾಯ ಮಾಡುತ್ತೆ? (“ಈ ವಿಷ್ಯಗಳಿಗಿರೋ ತತ್ವಗಳನ್ನ ಹುಡುಕಿ” ಅನ್ನೋ ಚೌಕ ನೋಡಿ.)
18 ತುಂಬ ಜನ್ರಿಗೆ ತತ್ವಗಳನ್ನ ಹುಡುಕೋಕೆ ಇನ್ನೊಂದು ಸಾಧನಾನೂ ಸಹಾಯ ಮಾಡಿದೆ. ಅದೇ ಬಾಳಿಗೆ ಬೆಳಕಾಗೋ ಬೈಬಲ್ ವಚನಗಳು ಅನ್ನೋ ಪುಸ್ತಕ. ಈ ಪುಸ್ತಕದಲ್ಲಿ ಒಂದೊಂದು ವಿಷ್ಯಗಳ ಕೆಳಗೆ ಅದಕ್ಕೆ ಸಂಬಂಧಿಸಿರೋ ಎಷ್ಟೋ ವಚನಗಳನ್ನ ಕೊಡಲಾಗಿದೆ. ನಿಮಗೆ ಬೇಕಾಗಿರೋ ವಿಷ್ಯಾನ ಆರಿಸ್ಕೊಂಡ ಮೇಲೆ, ಅದ್ರ ಕೆಳಗೆ ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನ ಮತ್ತು ವಚನಗಳನ್ನ ನೀವು ನೋಡಬಹುದು. ಇದು ತತ್ವಗಳನ್ನ ಹುಡುಕೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ಒಬ್ಬ ಕ್ರೈಸ್ತನಿಗೆ, ‘ನಾನು ಇಂಥ ಹಬ್ಬ-ಆಚರಣೆಗಳಿಗೆ ಹೋಗಬೇಕಾ?’ ಅನ್ನೋ ಪ್ರಶ್ನೆ ಬರಬಹುದು. ಆಗ ಅವನು ಆ ಪುಸ್ತಕದಲ್ಲಿ ಇರೋ “ಹಬ್ಬ ಆಚರಣೆಗಳು” ಅನ್ನೋ ಶೀರ್ಷಿಕೆ ಕೆಳಗಿರೋ “ಕ್ರೈಸ್ತರು ಮಾಡದೇ ಇರೋ ಆಚರಣೆಗಳು” ಅನ್ನೋ ಉಪಶೀರ್ಷಿಕೆನ ನೋಡ್ಬಹುದು.
19 ಅಲ್ಲಿ “ಸುಳ್ಳು ಧರ್ಮಕ್ಕೆ ಸಂಬಂಧಪಟ್ಟ ಆಚರಣೆಗಳಲ್ಲಿ ಭಾಗವಹಿಸೋದು ತಪ್ಪು ಯಾಕೆ?” ಅನ್ನೋ ಪ್ರಶ್ನೆ ಇದೆ. (1 ಕೊರಿಂ. 10:21; 2 ಕೊರಿಂ. 6:14-18; ಎಫೆ. 5:10, 11) ಇದ್ರ ಕೆಳಗೆ ಕೆಲವು ಆಚರಣೆಗಳ ಉದಾಹರಣೆಗಳನ್ನ ಕೊಡಲಾಗಿದೆ. ಅದ್ರಲ್ಲೊಂದು “ರಾಷ್ಟ್ರೀಯ ಹಬ್ಬ-ಆಚರಣೆಗಳು.” ಅಲ್ಲಿ ತುಂಬ ವಚನಗಳನ್ನ ಕೊಡಲಾಗಿದೆ. ಆ ವಚನಗಳಲ್ಲಿ ಬೈಬಲ್ ತತ್ವಗಳಿವೆ. ಈ ತತ್ವಗಳು, ಒಬ್ಬ ವ್ಯಕ್ತಿ ಸೈನಿಕರಿಗೆ ಗೌರವ ಕೊಡೋ ಆಚರಣೆಗಳಿಗೆ, ನಡೆದ ಯುದ್ಧಗಳನ್ನ ನೆನಸ್ಕೊಳ್ಳೋ ಆಚರಣೆಗಳಿಗೆ, ದೊಡ್ಡ ದೊಡ್ಡ ವ್ಯಕ್ತಿಗಳನ್ನ ಆರಾಧಿಸೋ ಆಚರಣೆಗಳಿಗೆ ಹೋಗ್ಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋಕೆ ಸಹಾಯ ಮಾಡುತ್ತೆ. ನಮ್ಮ ಮನಸ್ಸಾಕ್ಷಿಗೆ ಸರಿಯಾಗಿ ಕಲಿಸೋಕೆ ಯೆಹೋವನ ಸಂಘಟನೆ ನಮಗೆ ತುಂಬ ಸಾಧನಗಳನ್ನ ಕೊಟ್ಟಿದೆ. ಇದ್ರಿಂದ ನಮಗೆ ಎಷ್ಟೊಂದು ಪ್ರಯೋಜ್ನ ಇದೆ ಅಲ್ವಾ?
ಒಳ್ಳೆ ಮನಸ್ಸಾಕ್ಷಿ ಇದೆ ಅಂತ ತೋರಿಸ್ಕೊಡಿ
20. ನಮ್ಮ ಮನಸ್ಸಾಕ್ಷಿಗೆ ಚೆನ್ನಾಗಿ ಕಲಿಸಿದ್ದೀವಿ ಅಂತ ಹೇಗೆ ತೋರಿಸ್ಕೊಡಬಹುದು?
20 ಇಚ್ಛಾಸ್ವಾತಂತ್ರ್ಯ ನಮ್ಮೆಲ್ಲರಿಗೂ ತುಂಬ ಅಮೂಲ್ಯ! ಆದ್ರೆ ಇದನ್ನ ನಾವು ಚೆನ್ನಾಗಿ ಉಪಯೋಗಿಸೋಕೆ ಮೊದ್ಲು ನಮ್ಮ ಮನಸ್ಸಾಕ್ಷಿಗೆ ಚೆನ್ನಾಗಿ ಕಲಿಸಬೇಕು. ಈ ತರ ನಾವು ನಮ್ಮ ಮನಸ್ಸಾಕ್ಷಿಗೆ ಚೆನ್ನಾಗಿ ತರಬೇತಿ ಕೊಟ್ರೆ ಯೆಹೋವನಿಗೆ ಗೌರವ ಕೊಡೋ ನಿರ್ಧಾರಗಳನ್ನ ಮಾಡ್ತೀವಿ. ಆತನಿಗೆ ಇಷ್ಟ ಆಗೋ ತರ ನಡ್ಕೊಳ್ತೀವಿ. ಇದನ್ನೆಲ್ಲಾ ಮಾಡೋಕೆ ನಮಗೆ ಯೆಹೋವನ ಪವಿತ್ರಶಕ್ತಿ ಬೇಕು. ಹಾಗಾಗಿ ನಾವು ಪವಿತ್ರಶಕ್ತಿಗಾಗಿ ಯೆಹೋವನ ಹತ್ರ ಬೇಡ್ಕೊಬೇಕು ಮತ್ತು ಅದ್ರ ಮಾರ್ಗದರ್ಶನದ ಪ್ರಕಾರ ನಡ್ಕೊಬೇಕು. ಬೈಬಲ್‌ನಲ್ಲಿರೋ ತತ್ವಗಳು ಕೂಡ ನಮ್ಮ ಮನಸ್ಸಾಕ್ಷಿನ ಮಾರ್ಗದರ್ಶಿಸುತ್ತೆ. ಹಾಗಾಗಿ ನಾವು ಈ ಎಲ್ಲ ಅಮೂಲ್ಯ ಗಿಫ್ಟ್‌ಗಳನ್ನ ಚೆನ್ನಾಗಿ ಬಳಸ್ಕೊಳ್ಳೋಣ, ಆಗ ಯೆಹೋವನ ವಾಕ್ಯಕ್ಕೆ ಎಷ್ಟು ಶಕ್ತಿ ಇದೆ ಅಂತ ನಾವು ನಮ್ಮ ಜೀವನದಲ್ಲಿ ಸವಿದು ನೋಡ್ತಿವಿ.—2 ತಿಮೊ. 3:16, 17; ಇಬ್ರಿ. 4:12.
ಗೀತೆ 135 ಯೆಹೋವನ ಸ್ನೇಹಪರ ಮನವಿ: “ನನ್ನ ಮಗನೇ, ವಿವೇಕಿಯಾಗಿರು”