ಜುಲೈ 27–ಆಗಸ್ಟ್ 2, 2026
ಗೀತೆ 56 ಸದಾ ಸಂತೋಷದ ದಾರಿ
ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ರೂ ಯೆಹೋವನ ಸ್ನೇಹ ಬಿಡಬೇಡಿ!
“ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.”—ಫಿಲಿ. 3:16.
ಈ ಲೇಖನದಲ್ಲಿ ಏನಿದೆ?
ಹೆಚ್ಚಿನ ವಿದ್ಯಾಭ್ಯಾಸ ಮಾಡೋ ನಿರ್ಧಾರ ಮಾಡಿದ್ರೆ ಯೆಹೋವನ ಜೊತೆ ನಿಮಗಿರೋ ಸ್ನೇಹನ ಕಾಪಾಡ್ಕೊಳ್ಳೋಕೆ ಮರೀಬೇಡಿ. ಇದಕ್ಕೆ ಸಹಾಯ ಮಾಡೋ ನಾಲ್ಕು ಬೈಬಲ್ ತತ್ವಗಳನ್ನ ನೋಡೋಣ.
1-2. (ಎ) ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂತ ನಿರ್ಧಾರ ಮಾಡಿರೋದಾದ್ರೆ ಏನು ಮಾಡ್ತಾ ಇರಬೇಕು? (ಬಿ) “ಅದೇ ದಾರೀಲಿ” ಕ್ರಮಬದ್ಧವಾಗಿ ‘ಮುಂದುವರಿಯೋಣ’ ಅನ್ನೋ ಮಾತಿನ ಅರ್ಥ ಏನು? (ಫಿಲಿಪ್ಪಿ 3:16)
ಸರ್ಕಾರ ಅವಶ್ಯಪಡಿಸೋ ಶಾಲಾ ಶಿಕ್ಷಣ ಮುಗಿದ ಮೇಲೆ ಕೆಲವು ಯೆಹೋವನ ಸೇವಕರು ಹೆಚ್ಚಿನ ವಿದ್ಯಾಭ್ಯಾಸ ಮಾಡೋ ನಿರ್ಧಾರ ಮಾಡ್ತಾರೆ. ಯೆಹೋವನ ಸೇವೆನ ಮಾಡ್ತಾ ಹೋಗೋಕೆ ಬೇಕಾದ ಒಂದು ಕೆಲಸ ಹುಡ್ಕೊಳ್ಳೋಕೆ ಈ ವಿದ್ಯಾಭ್ಯಾಸ ಸಹಾಯ ಮಾಡುತ್ತೆ ಅನ್ನೋದು ಅವ್ರ ಯೋಚ್ನೆ. ಒಂದುವೇಳೆ ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ, ಯೆಹೋವನ ಜೊತೆ ನಿಮಗಿರೋ ಸ್ನೇಹನ ಬಿಟ್ಟುಬಿಡಬೇಡಿ. (ಯಾಕೋ. 4:8ಎ) ಈ ಹಿಂದೆ ಶಾಲೆಯಲ್ಲಿ ನೀವು ನಂಬಿಕೆಯ ಪರೀಕ್ಷೆಗಳನ್ನ ಚೆನ್ನಾಗಿ ಎದುರಿಸಿರಬಹುದು. ಇನ್ಮೇಲೂ ನೀವು “ಅದೇ ದಾರೀಲಿ” ಕ್ರಮಬದ್ಧವಾಗಿ ಮುಂದುವರಿಬೇಕು. ಯೆಹೋವನ ಸೇವೆನ ನಿಯತ್ತಾಗಿ ಮಾಡ್ತಾ ಇರಬೇಕು.—ಫಿಲಿಪ್ಪಿ 3:16 ಓದಿ.
2 “ಅದೇ ದಾರೀಲಿ” ಕ್ರಮಬದ್ಧವಾಗಿ ‘ಮುಂದುವರಿಯೋಣ’ ಅನ್ನೋ ಈ ವಾಕ್ಯ ಗ್ರೀಕ್ ಭಾಷೆಯಲ್ಲಿ ಸೈನಿಕರು ಮಾಡೋ ಮಾರ್ಚಿಂಗ್ನ ನೆನಪಿಸುತ್ತೆ. ಸೈನಿಕರು ಒಟ್ಟೊಟ್ಟಿಗೆ ಕ್ರಮಬದ್ಧವಾಗಿ ನಡೆಯೋದನ್ನ ಸೂಚಿಸುತ್ತೆ. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಅಂತ ನಿರ್ಧಾರ ಮಾಡಿದ್ರೆ ಸಹೋದರರ ಜೊತೆ ಯೆಹೋವನ ಸೇವೆನ ಕ್ರಮಬದ್ಧವಾಗಿ ಮುಂದುವರಿಸಬೇಕು, ಯಾವತ್ತೂ ನಿಲ್ಲಿಸಬಾರದು. ನಾವೀಗ ನಾಲ್ಕು ಬೈಬಲ್ ತತ್ವಗಳನ್ನ ಈ ಲೇಖನದಲ್ಲಿ ನೋಡೋಣ. ಈ ತತ್ವಗಳು ನಿಮಗೇನು ಹೊಸದಲ್ಲ, ಈ ಹಿಂದೆ ನೀವು ಅದನ್ನ ಅನ್ವಯಿಸಿದ್ದೀರ. ಇನ್ನು ಮುಂದೆ ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ್ಲೂ ಅದನ್ನ ಅನ್ವಯಿಸ್ಕೊಬೇಕು. ಅಷ್ಟೇ ಅಲ್ಲ, ಓದು ಮುಗಿಸಿದ ಮೇಲೂ ಅದನ್ನ ಅನ್ವಯಿಸಿಕೊಳ್ತಾ ಇರಬೇಕು.
ಆಧ್ಯಾತ್ಮಿಕ ರೂಢಿ ಬಿಟ್ಟು ಬಿಡಬೇಡಿ!
3. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಪ್ರತಿದಿನದ ಟೈಮ್ ಟೇಬಲ್ ಏನಾಗಬಹುದು?
3 ಸವಾಲು. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಅಸೈನ್ಮೆಂಟ್, ಪ್ರಾಜೆಕ್ಟ್ಸ್ ಅಂತ ಹೊಸದಾಗಿ ಏನೇನೋ ಮಾಡಬೇಕಾಗುತ್ತೆ. ಹಾಗಾಗಿ ನಿಮ್ಮ ಪ್ರತಿ ದಿನದ ಟೈಮ್ ಟೇಬಲ್ ಬದಲಾಗುತ್ತೆ. ನೀವು ಚೆನ್ನಾಗಿ ಓದಬೇಕು ಅಂತ ಬಯಸೋದ್ರಿಂದ ನಿಧಾನವಾಗಿ ಯೆಹೋವನ ಸೇವೆನ ಎರಡನೇ ಸ್ಥಾನಕ್ಕೆ ಇಟ್ಟು ಬಿಡಬಹುದು. ಆಗ ನೀವು ಮೀಟಿಂಗ್, ಸೇವೆ, ವೈಯಕ್ತಿಕ ಅಧ್ಯಯನ ಮತ್ತು ಪ್ರಾರ್ಥನೆನ ಪಕ್ಕಕ್ಕೆ ಇಡೋ ಸಾಧ್ಯತೆ ಇದೆ.—ಪ್ರಕ. 2:4.
4. “ಒಡೆಯನ ಕೆಲಸವನ್ನ ಹೆಚ್ಚೆಚ್ಚು” ಮಾಡೋದು ಯಾಕೆ ಮುಖ್ಯ? (1 ಕೊರಿಂಥ 15:58)
4 ಒಂದನೇ ಕೊರಿಂಥ 15:58 ಓದಿ. ಸೈಕಲ್ ಮೇಲೆ ಸುಮ್ನೆ ಕೂತ್ಕೊಂಡ್ರೆ ಅದು ಮುಂದೆ ಹೋಗಲ್ಲ. ಅದನ್ನ ತುಳಿತಾ ಇರಬೇಕು. ನಾವೂ ಬರೀ ಯೆಹೋವನ ಸಾಕ್ಷಿ ಆಗಿದ್ರೆ ಸಾಕಾಗಲ್ಲ, ಯೆಹೋವನ ಸೇವೆ ಮಾಡ್ತಾ ಮುಂದೆ ಹೋಗ್ತಾ ಇರಬೇಕು. ಅದಕ್ಕೇ ಬೈಬಲ್ “ಒಡೆಯನ ಕೆಲಸವನ್ನ ಹೆಚ್ಚೆಚ್ಚು ಮಾಡಿ” ಅಂತ ಹೇಳುತ್ತೆ. ಇದ್ರರ್ಥ ಯೆಹೋವನ ಕೆಲಸ ಮಾಡೋದ್ರಲ್ಲಿ ಏನೋ ಸ್ವಲ್ಪ ಸಮಯ ಕಳೆಯೋದಲ್ಲ, ‘ಈ ಕೆಲ್ಸನೇ ಎಲ್ಲಕ್ಕಿಂತ ಮುಖ್ಯ’ ಅಂತ ಅರ್ಥ ಮಾಡ್ಕೊಂಡು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಬೇಕು. ನೀವು ಮೊದಲು ಯೆಹೋವನ ಆರಾಧಕರು, ಆಮೇಲೆ ಕಾಲೇಜಲ್ಲಿ ವಿದ್ಯಾರ್ಥಿಗಳು ಅಂತ ನೆನಪಿಡಿ! (ಮತ್ತಾ. 22:37) ಸಮಾಂತ ಅನ್ನೋ ಯುವ ಸಹೋದರಿ ಹೇಳೋದು, “ನನ್ನ ವಿದ್ಯಾಭ್ಯಾಸ ಯಾವತ್ತಾದ್ರೂ ಯೆಹೋವನ ಸೇವೆಗೆ ಅಡ್ಡ ಬಂದ್ರೆ, ನಾನು ಅದನ್ನ ನಿಲ್ಲಿಸ್ತೀನಿ ಅಂತ ನಿರ್ಧಾರ ಮಾಡಿದ್ದೆ.”
5. ಯೆಹೋವನ ಸೇವೆಲಿ ಚುರುಕಾಗಿರೋಕೆ ನೀವೇನು ಮಾಡಬೇಕು?
5 ಹೆಚ್ಚಿನ ವಿದ್ಯಾಭ್ಯಾಸ ಮಾಡೋ ಮುಂಚೆ ನೀವೇನು ಮಾಡಬೇಕು? ನಿಮ್ಮ ಜೀವನದಲ್ಲಿ ಯಾವಾಗ್ಲೂ ಯೆಹೋವನಿಗೆ ಮೊದಲ ಸ್ಥಾನ ಕೊಡೋ ತರ ನೋಡ್ಕೊಳ್ಳಿ. ಇದನ್ನ ಮಾಡೋಕೆ ಕೆಲವು ಪ್ರಶ್ನೆಗಳನ್ನ ಕೇಳ್ಕೊಳ್ಳಿ. ಮೀಟಿಂಗ್ ಮತ್ತು ಸೇವೆಗೆ ಹೋಗೋಕೆ, ವೈಯಕ್ತಿಕ ಅಧ್ಯಯನ ಮಾಡೋಕೆ ಏನೆಲ್ಲಾ ಪ್ಲಾನ್ ಮಾಡಿದ್ದೀನಿ? (ಯೆಹೋ. 1:8; ಮತ್ತಾ. 28:19, 20; ಇಬ್ರಿ. 10:25) ಹೋದ ವರ್ಷ ನಾನು ಓದ್ವಾಗ ಯೆಹೋವನಿಗೆ ಮೊದಲ ಸ್ಥಾನ ಕೊಟ್ನಾ? ‘ಇಲ್ಲ, ಇನ್ನೂ ಚೆನ್ನಾಗಿ ಮಾಡಬೇಕಾಗಿತ್ತು’ ಅಂತ ಅನಿಸಿದ್ರೆ ಮಾಡಬೇಕಾಗಿರೋ ಬದಲಾವಣೆ ಮಾಡ್ಕೊಳ್ಳಿ. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಯೆಹೋವನ ಸೇವೇಲಿ ನೀವು ಚುರುಕಾಗಿರಬೇಕು ಅಂತ ದೃಢ ನಿರ್ಧಾರ ಮಾಡಿ. ಯೆಹೋವನ ಸೇವೆನೇ ತ್ಯಾಗ ಮಾಡೋಷ್ಟರ ಮಟ್ಟಿಗೆ ನಿಮ್ಮ ವಿದ್ಯಾಭ್ಯಾಸನ ಮನಸ್ಸಿಗೆ ಹಚ್ಕೋಬೇಡಿ.a—ಮತ್ತಾ. 6:24.
6. ನೀವು ಯೆಹೋವನಿಗೆ ಮೊದಲ ಸ್ಥಾನ ಕೊಡ್ತಿದ್ದೀರ ಇಲ್ವಾ ಅಂತ ತಿಳ್ಕೊಳೋಕೆ ಏನೆಲ್ಲಾ ಪ್ರಶ್ನೆ ಕೇಳ್ಕೊಬಹುದು? (ಚಿತ್ರ ನೋಡಿ.)
6 ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಆಗಿಂದಾಗ್ಗೆ ಸ್ವಪರೀಕ್ಷೆ ಮಾಡ್ಕೊಳ್ತಾ ಇರಿ. ನಾನು ಈಗ್ಲೂ ಯೆಹೋವನಿಗೆ ಮೊದಲ ಸ್ಥಾನ ಕೊಡ್ತಾ ಇದ್ದೀನಾ? ಅಂತ ಕೇಳ್ಕೊಳ್ಳಿ. ಇದು ನಮಗೆ ಹೇಗೆ ಗೊತ್ತಾಗುತ್ತೆ? ‘ನಾನು ಆಗಾಗ ಮೀಟಿಂಗ್ ಮಿಸ್ ಮಾಡ್ತಿದ್ದೀನಾ? ಕೂಟಗಳಿಗೆ ಲೇಟ್ ಆಗಿ ಹೋಗ್ತಿದ್ದೀನಾ? ಮೀಟಿಂಗ್ ನಡೆಯುವಾಗ್ಲೂ ಸ್ಕೂಲ್ ಪ್ರಾಜೆಕ್ಟ್ ಬಗ್ಗೆನೇ ಯೋಚ್ನೆ ಮಾಡ್ತಿದ್ದೀನಾ? ಯಾವಾಗ್ಲೂ ಜ಼ೂಮಲ್ಲೇ ಮೀಟಿಂಗ್ ನೋಡಬೇಕು ಅಂದ್ಕೊಳ್ತಿದ್ದೀನಾ? ಇತ್ತೀಚಿಗೆ ಬೈಬಲ್ ಓದೋದನ್ನ, ಪ್ರಾರ್ಥನೆ ಮಾಡೋದನ್ನ ಕಮ್ಮಿ ಮಾಡಿದ್ದೀನಾ? ಏನೋ ಹೋಗ್ಬೇಕಲ್ಲ ಅಂತ ಸೇವೆಗೆ ಹೋಗಿ, ಬೇಗ ಮುಗಿಸಿದ್ರೆ ಸಾಕಪ್ಪ ಅಂತ ಅನಿಸ್ತಿದ್ಯಾ?’ ಅಂತೆಲ್ಲ ಕೇಳ್ಕೊಳ್ಳಿ. ನಿಮ್ಮಲ್ಲಿ ಇಂಥ ಸೂಚನೆಗಳು ಕಾಣಿಸ್ತಿದ್ರೆ ಪರಿಸ್ಥಿತಿ ಕೈ ಮೀರಿ ಹೋಗೋ ಮುಂಚೆ ಬದಲಾವಣೆಗಳನ್ನ ಮಾಡ್ಕೊಳ್ಳಿ. ನಿಮ್ಮ ಮತ್ತು ಯೆಹೋವನ ಸ್ನೇಹದ ಮಧ್ಯೆ ವಿದ್ಯಾಭ್ಯಾಸ ಒಂದು ಗೋಡೆ ತರ ಬರದಂತೆ ನೋಡ್ಕೊಳ್ಳಿ.
ನಿಮ್ಮ ವಿದ್ಯಾಭ್ಯಾಸ, ನಿಮ್ಮ ಜೀವನದಲ್ಲಿ ಯೆಹೋವನಿಗಿರೋ ಸ್ಥಾನವನ್ನ ಕಿತ್ಕೊಳ್ಳೋಕೆ ಬಿಡಬೇಡಿ (ಪ್ಯಾರ 6 ನೋಡಿ)
ಯೋಚನಾ ಸಾಮರ್ಥ್ಯವನ್ನ ಕಾಪಾಡ್ಕೊಳ್ಳಿ
7. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ನಿಮ್ಮ ಯೋಚ್ನೆಯಲ್ಲಿ ಯಾವ ಬದಲಾವಣೆ ಆಗೋ ಸಾಧ್ಯತೆ ಇದೆ?
7 ಸವಾಲು. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಕೆಲವು ಕೋರ್ಸ್ಗಳು ‘ಈ ಲೋಕದ ತತ್ವಜ್ಞಾನವನ್ನ, ಅರ್ಥವಾಗದ ಮೋಸದ ಮಾತುಗಳನ್ನ’ ಕಲಿಸುತ್ತೆ. ಉದಾಹರಣೆಗೆ, ದೇವರೇ ಇಲ್ಲ, ಮಂಗನಿಂದ ಮಾನವ ಅಂದ್ರೆ ವಿಕಾಸವಾದನ್ನೆಲ್ಲ ಕಲಿಸ್ತಾರೆ. (ಕೊಲೊ. 2:8) ಇಂಥ ವಿಷ್ಯಗಳು ‘ನನಗೆ ಯಾರ ಸಹಾಯನೂ ಬೇಕಿಲ್ಲ. ನನ್ನಷ್ಟಕ್ಕೇ ನಾನು ಬದುಕಬಹುದು’ ಅನ್ನೋ ಅಹಂಕಾರನ ಬೆಳೆಸುತ್ತೆ. ಒಬ್ಬ ಸಹೋದರ ಹೇಳೋದು, “ಅಲ್ಲಿ ನಮಗೆ ಬರೀ ಕೌಶಲ್ಯವನ್ನ ಹೇಳ್ಕೊಡಲ್ಲ, ನಾವು ಹೇಗೆ ಯೋಚ್ನೆ ಮಾಡಬೇಕು ಅನ್ನೋದನ್ನೂ ಕಲಿಸ್ತಾರೆ. ಯೆಹೋವನ ಯೋಚನೆಗಿಂತ ತೀರಾ ವಿರುದ್ಧವಾಗಿರೋ ವಿಷ್ಯಗಳನ್ನ ಕಲಿಸ್ತಾರೆ. ಉದಾಹರಣೆಗೆ, ಜೀವನದ ನಿಜ ಸಂತೋಷ ಮತ್ತು ಯಶಸ್ಸು ನಮ್ಮ ಕೈಯಲ್ಲೇ ಇದೆ. ನಮಗೆ ಯಾರ ಸಹಾಯನೂ ಬೇಕಿಲ್ಲ ಅಂತ ನಮ್ಮ ತಲೆಗೆ ತುಂಬಿಸ್ತಾರೆ. ಈ ಯೋಚ್ನೆ, ನಾವು ನಮ್ಮ ಮನಸ್ಸಲ್ಲೇ ಯೆಹೋವನನ್ನ ಮೂಲೆಗುಂಪು ಮಾಡೋ ತರ ಮಾಡಿಬಿಡುತ್ತೆ. ಆದ್ರಿಂದ ನಂಗೆ ಯೆಹೋವನ ಮೇಲೆ ನಂಬಿಕೆ ಇಡೋಕೆ ತುಂಬ ಕಷ್ಟ ಆಯ್ತು.”
8. ಯೋಚನಾ ಸಾಮರ್ಥ್ಯವನ್ನ ಕಾಪಾಡ್ಕೊಳ್ಳೋದು ಯಾಕೆ ಮುಖ್ಯ? (ಜ್ಞಾನೋಕ್ತಿ 5:1, 2)
8 ಜ್ಞಾನೋಕ್ತಿ 5:1, 2 ಓದಿ. “ಬುದ್ಧಿಯನ್ನ” ಅಥವಾ ಯೋಚನಾ ಸಾಮರ್ಥ್ಯವನ್ನ ‘ಕಾಪಾಡಿಕೊಳ್ಳಿ’ ಅಂತ ಬೈಬಲ್ ನಮ್ಮನ್ನೆಲ್ಲ ಎಚ್ಚರಿಸುತ್ತೆ. ಒಂದು ವಿಷ್ಯನಾ ನಾವು ಯಾವಾಗ ಕಾಪಾಡ್ತೀವಿ? ಅದಕ್ಕೆ ಅಪಾಯ ಬಂದಾಗ ಅಲ್ವಾ? ಇಲ್ಲಿ ನಮ್ಮ ಬುದ್ಧಿಗೆ ಅಂದ್ರೆ ನಮ್ಮ ಯೋಚನಾ ಸಾಮರ್ಥ್ಯಕ್ಕೆ ಅಪಾಯ ಬರೋ ಸಾಧ್ಯತೆ ಇದೆ, ಹಾಗಾಗಿ ನಾವು ಅದನ್ನ ಕಾಪಾಡ್ಕೊಬೇಕು ಅಂತ ಬೈಬಲ್ ಹೇಳ್ತಿದೆ. (1 ಪೇತ್ರ 5:8) ಈ ಲೋಕದ ಮನೋಭಾವ ಸರಿ-ತಪ್ಪಿನ ಬಗ್ಗೆ, ಜೀವ ಹೇಗೆ ಬಂತು ಅನ್ನೋದ್ರ ಬಗ್ಗೆ ಮತ್ತು ದೇವರ ಬಗ್ಗೆ ನಮಗಿರೋ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸುತ್ತೆ. ಜನ ಅವ್ರ ಯೋಚ್ನೆಗಳನ್ನ ಕಲಿಸ್ತಾ ‘ಇದೇ ವಿವೇಕ’ ಅಂತ ಹೇಳ್ತಾರೆ. ಆದ್ರೆ “ಈ ಲೋಕದ ವಿವೇಕ ದೇವರ ದೃಷ್ಟಿಯಲ್ಲಿ ಹುಚ್ಚುತನ” ಅಂತ ಬೈಬಲ್ ಹೇಳುತ್ತೆ.—1 ಕೊರಿಂ. 3:18-20.
9. ಯೋಚನಾ ಸಾಮರ್ಥ್ಯನ ಕಾಪಾಡ್ಕೊಳ್ಳೋಕೆ ನೀವೇನು ಮಾಡಬೇಕು?
9 ಹೆಚ್ಚಿನ ವಿದ್ಯಾಭ್ಯಾಸ ಮಾಡೋ ಮುಂಚೆ ನೀವೇನು ಮಾಡಬೇಕು? ಬೈಬಲಿಂದ ಕಲ್ತಿರೋ ವಿಷ್ಯಗಳ ಬಗ್ಗೆ ನಿಮಗಿರೋ ನಂಬಿಕೆನ ಈಗಲೇ ಬಲಪಡಿಸ್ಕೊಳ್ಳಿ. ಆಗ ನಿಮ್ಮ ಯೋಚನಾ ಸಾಮರ್ಥ್ಯವನ್ನ ಕಾಪಾಡ್ಕೊತ್ತೀರ. ಇದನ್ನ ಮಾಡೋಕೆ ಕೆಲವು ಪ್ರಶ್ನೆಗಳನ್ನ ಕೇಳ್ಕೊಳ್ಳಿ. ದೇವರು ಇದ್ದಾನೆ ಅಂತ ನಾನು ಯಾಕೆ ನಂಬ್ತೀನಿ? ಬೈಬಲನ್ನು ದೇವರೇ ಬರೆಸಿದ್ದು ಅಂತ ನನಗೆ ಯಾಕೆ ಅನ್ಸುತ್ತೆ? ಸರಿ-ತಪ್ಪಿನ ಬಗ್ಗೆ ಈ ಲೋಕಕ್ಕಿಂತ ಬೈಬಲ್ ಹೇಳೋದೇ ಯಾಕೆ ಸರಿಯಾಗಿದೆ? ನೀವು ಈ ಮುಂಚೆ ಓದ್ವಾಗ ಈ ಲೋಕದ ಯೋಚ್ನೆಯನ್ನ, ಬೋಧನೆಗಳನ್ನ ಕೇಳಿಸ್ಕೊಂಡಿರಬಹುದು. ನಿಮ್ಮ ಕ್ಲಾಸ್ಮೇಟ್ಸ್, ನಿಮ್ಮ ಟೀಚರ್ ವಿಕಾಸವಾದ ನಂಬೋದನ್ನ ನೋಡಿದಾಗ ದೇವ್ರ ಮೇಲೆ ನಿಮ್ಮ ನಂಬಿಕೆ ಕಮ್ಮಿ ಆಯ್ತಾ? ಅಥವಾ ನಿಮ್ಮ ಕ್ಲಾಸ್ಮೇಟ್ಸ್ ತಪ್ಪಾಗಿ ನಡ್ಕೊಳ್ಳೋದನ್ನ ನೋಡಿ ನಿಮಗೂ ತಪ್ಪು ಮಾಡಬೇಕು ಅನ್ನೋ ಆಸೆ ಬಂತಾ? ‘ಹೌದು, ನಾನು ಇನ್ನೂ ಸ್ವಲ್ಪ ಬದಲಾವಣೆ ಮಾಡ್ಕೊಬೇಕು’ ಅಂತ ನಿಮಗೆ ಅನ್ಸಿದ್ರೆ ಬೈಬಲ್ ಬಗ್ಗೆ ನಿಮಗಿರೋ ನಂಬಿಕೆನ ಇನ್ನಷ್ಟು ಬಲಪಡಿಸ್ಕೊಳ್ಳಿ. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಯಾವಾಗ್ಲೂ ನಿಮ್ಮ ಯೋಚನಾ ಸಾಮರ್ಥ್ಯನ ಕಾಪಾಡ್ಕೊಳ್ತಾ ಇರಬೇಕು ಅಂತ ನೆನಪಲ್ಲಿಡಿ.—2 ತಿಮೊ. 2:16-18.b
10. ನಿಮ್ಮ ಯೋಚನಾ ಸಾಮರ್ಥ್ಯವನ್ನ ಕಾಪಾಡ್ಕೊಳ್ತಾ ಇರೋಕೆ ನೀವೇನು ಮಾಡಬೇಕು?
10 ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಆಗಿಂದಾಗ್ಗೆ ನಮ್ಮನ್ನ ನಾವು ಸ್ವಪರೀಕ್ಷೆ ಮಾಡ್ಕೊಳ್ತಾ ಇರಬೇಕು. ನಿಮ್ಮನ್ನ ನೀವು ಹೀಗೆ ಕೇಳ್ಕೊಳ್ಳಿ, ‘ನನ್ನ ಸುತ್ತಲೂ ಇರೋರು ತಪ್ಪಾಗಿ ನಡ್ಕೊಳ್ತಿದ್ರೂ ಅವರು ಮಾಡ್ತಿರೋದು ಸರಿ ಅಂತ ಇತ್ತೀಚಿಗೆ ನನಗೆ ಅನಿಸ್ತಿದ್ಯಾ? ಈ ಲೋಕದ ತತ್ವಜ್ಞಾನ ಕಲಿಸೋದನ್ನ ನಾನು ಕಣ್ಮುಚ್ಚಿ ನಂಬ್ತೀನಾ ಅಥವಾ ತೂಗಿ ನೋಡ್ತೀನಾ? ಮನುಷ್ಯರಿಗಿರೋ ಎಲ್ಲಾ ಸಮಸ್ಯೆಗಳಿಗೆ ದೇವರ ಆಳ್ವಿಕೆ ಮಾತ್ರನೇ ಪರಿಹಾರ ಕೊಡುತ್ತೆ ಅಂತ ಪೂರ್ತಿಯಾಗಿ ನಂಬ್ತಿದ್ದೀನಾ? ನಿಮ್ಮ ಯೋಚನಾ ಸಾಮರ್ಥ್ಯವನ್ನ ಕಾಪಾಡ್ಕೊಳ್ಳೋಕೆ ದೇವರ ವಾಕ್ಯವನ್ನ ಬಿಡದೇ ಚೆನ್ನಾಗಿ ಓದ್ತಾ ಇರಬೇಕು. ನೀವು ಮಾಡೋ ಬೈಬಲ್ ಅಧ್ಯಯನ ಮತ್ತು ಧ್ಯಾನ ಸತ್ಯದ ಮೇಲೆ ನಿಮಗಿರೋ ನಂಬಿಕೆನ ಬಲಿಷ್ಠ ಮಾಡುತ್ತೆ.—1 ತಿಮೊ. 4:15.
ಸಮಯನ ಸರಿಯಾಗಿ ಬಳಸಿ
11. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಸಮಯದ ವಿಷ್ಯದಲ್ಲಿ ನಿಮಗೆ ಯಾವ ಸವಾಲು ಬರಬಹುದು?
11 ಸವಾಲು. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ದಿನಕ್ಕೆ 24 ಗಂಟೆ ಕೂಡ ಸಾಕಾಗಲ್ಲ. ಅದ್ರಲ್ಲೂ ಮುಖ್ಯವಾಗಿ ನೀವು ಪರೀಕ್ಷೆಗೋಸ್ಕರ ಓದ್ವಾಗ ಅಥವಾ ಒಂದು ಡೆಡ್ಲೈನ್ ಒಳಗೆ ಪ್ರಾಜೆಕ್ಟ್ನ ಮುಗಿಸಬೇಕಾದಾಗ ತುಂಬ ಕಷ್ಟ ಆಗುತ್ತೆ. ಹಾಗಾಗಿ ಸಮಯನ ಸರಿಯಾಗಿ ಬಳಸೋಕೆ ಕಲಿಬೇಕು. ಇಲ್ಲಾಂದ್ರೆ ನಿಮಗೆ ಹೆಚ್ಚು ಒತ್ತಡ ಆಗುತ್ತೆ. ಎದ್ದು-ಬಿದ್ದು ಎಲ್ಲ ಮಾಡೋಕೆ ಹೋಗಿ ಸುಸ್ತಾಗಿ ಹೋಗ್ತೀರ. ನೀವು ಸ್ವಲ್ಪ ರೆಸ್ಟ್ ಮಾಡೋಕೆ, ಆರೋಗ್ಯ ನೋಡ್ಕೊಳ್ಳೋಕೆ ಮತ್ತು ಮನಶ್ಶಾಂತಿ ಕಾಪಾಡ್ಕೊಳ್ಳೋಕೆ ಟೈಮ್ ಮಾಡ್ಕೊಳ್ಳೋದು ತುಂಬ ಮುಖ್ಯ.
12. ನೀವು ಯಾವೆಲ್ಲ ವಿಷ್ಯಗಳಿಗೆ ಸಮಯ ಮಾಡ್ಕೊಳ್ಳೋದು ಮುಖ್ಯ? (ಎಫೆಸ 5:15, 16)
12 ಎಫೆಸ 5:15, 16 ಓದಿ. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಮುಖ್ಯವಾದ ವಿಷ್ಯಗಳಿಗೆ ಸಮಯ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ ಆಗುತ್ತೆ. ಹಾಗಾಗಿ ನೀವು ಬ್ಯಾಲೆನ್ಸ್ ಮಾಡೋಕೆ ಕಲಿಬೇಕು. ಉದಾಹರಣೆಗೆ, ಓದೋದ್ರಲ್ಲೇ ಮುಳುಗಿ ಹೋಗೋ ಬದಲು ಸಹೋದರರ ಜೊತೆ, ನಿಮ್ಮ ಕುಟುಂಬದವ್ರ ಜೊತೆ ಸಹವಾಸ ಮಾಡೋಕೆ ಸಮಯ ಮಾಡ್ಕೊಬೇಕು. (ಕೀರ್ತ. 133:1; ಜ್ಞಾನೋ. 18:1) ಯೆಹೋವನಿಗೆ ಹತ್ರ ಆಗೋ ವಿಷ್ಯಗಳನ್ನ ಮಾಡೋಕೂ ಸಮಯ ಮಾಡ್ಕೊಳ್ಳೋದು ತುಂಬನೇ ಮುಖ್ಯ. (ಮತ್ತಾ. 6:33) ನಿಮಗೆ ನಿಮ್ಮ ಕುಟುಂಬದಲ್ಲೂ ಮಾಡೋಕೆ ಕೆಲವೊಂದು ಜವಾಬ್ದಾರಿ ಇರುತ್ತೆ ಅಥವಾ ಕುಟುಂಬಕ್ಕಾಗಿ ನೀವು ಒಂದು ಕೆಲಸಾನೂ ಮಾಡಬೇಕಾಗಬಹುದು. ಇದೆಲ್ಲದ್ರ ಜೊತೆಯಲ್ಲಿ ನಿಮ್ಮ ಆರೋಗ್ಯ ನೋಡ್ಕೊಳ್ಳೋಕೆ, ಸಾಕಷ್ಟು ವಿಶ್ರಾಂತಿ ತಗೊಳೋಕೆ ಮತ್ತು ವ್ಯಾಯಾಮ ಮಾಡೋಕೂ ನೀವು ಸಮಯ ಮಾಡ್ಕೊಬೇಕು. (ಪ್ರಸಂ. 4:6; 1 ತಿಮೊ. 4:8) ಇದನ್ನೆಲ್ಲಾ ನೀವು ಮಾಡಬೇಕಂದ್ರೆ ಒಂದು ಒಳ್ಳೆ ಟೈಮ್ ಟೇಬಲ್ ಇರಬೇಕು.
13. ನೀವು ಸಮಯನ ಚೆನ್ನಾಗಿ ಬಳಸಬೇಕಂದ್ರೆ ಏನು ಮಾಡಬೇಕು?
13 ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡೋ ಮುಂಚೆ ಏನು ಮಾಡಬೇಕು? ‘ಯೋಜನೆ ಮಾಡೋರು ಯಶಸ್ಸು ಪಡಿತಾರೆ’ ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 21:5) ಇದನ್ನ ಮನಸ್ಸಲ್ಲಿಟ್ಟು ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡೋದಕ್ಕಿಂತ ಮೊದಲೇ ಒಂದು ಒಳ್ಳೆ ಟೈಮ್ ಟೇಬಲ್ ಮಾಡ್ಕೊಬೇಕು. ಇದನ್ನ ಮಾಡೋಕೆ ನೀವು ನಿಮ್ಮನ್ನೇ ಈ ತರ ಪ್ರಶ್ನೆ ಕೇಳ್ಕೊಳ್ಳಿ, ‘ಹೋದ ವರ್ಷಗಳಲ್ಲಿ ನಾನು ನನ್ನ ಸಮಯನ ಹೇಗೆ ಬಳಸಿದೆ?’ ‘ನಾನು ಸಮಯನ ಇನ್ನೂ ಚೆನ್ನಾಗಿ ಬಳಸಬೇಕಾಗಿತ್ತು’ ಅಂತ ನಿಮಗೆ ಅನಿಸಿದ್ರೆ, ಈಗ ನೀವು ಯಾವ ಬದಲಾವಣೆಗಳನ್ನ ಮಾಡ್ಕೊಬಹುದು? ನೆನಪಿಡಿ, ಸಮಯನ ನೀವು ಕಂಟ್ರೋಲ್ ಮಾಡಬೇಕೇ ಹೊರತೂ ಸಮಯ ನಿಮ್ಮನ್ನ ಕಂಟ್ರೋಲ್ ಮಾಡಬಾರದು.c
14. ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?
14 ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ತಿರುವಾಗ ಆಗಿಂದಾಗ್ಲೇ ಸ್ವಪರೀಕ್ಷೆ ಮಾಡ್ಕೊಳ್ತಾ ಇರಬೇಕು. ಉದಾಹರಣೆಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ, ನನಗೆ ಈಗಿರೋ ಟೈಮ್ ಟೇಬಲಲ್ಲಿ ಸಾಕಷ್ಟು ವಿಶ್ರಾಂತಿ ತಗೊಳೋಕೆ, ವ್ಯಾಯಾಮ ಮಾಡೋಕೆ ಸಮಯ ಇದ್ಯಾ? ನಾನು ಸಹೋದರ ಸಹೋದರಿಯರ ಜೊತೆ ಸಹವಾಸ ಮಾಡೋಕೆ ಸಮಯ ಮಾಡ್ಕೊಳ್ತಿದ್ದೀನಾ? ನಾನು ನನ್ನ ಹೋಮ್ವರ್ಕ್ನ ಸರಿಯಾದ ಸಮಯಕ್ಕೆ ಮುಗಿಸ್ತಿದ್ದೀನಾ? ಒಂದುವೇಳೆ ನಾನು ಮುಗಿಸ್ತಿಲ್ಲಾಂದ್ರೆ ನನಗೆ ಮಾಡೋಕೆ ತುಂಬ ಕೆಲಸ ಇದೆ ಅಂತಾನಾ ಅಥವಾ ಆಮೇಲೆ ಮಾಡಿದ್ರೆ ಆಯ್ತು ಅಂತ ನಾನು ಮುಂದೂಡ್ತಿದ್ದೀನಾ? ಈ ಎಲ್ಲ ವಿಷ್ಯಗಳಲ್ಲಿ ನಾನು ಬದಲಾವಣೆ ಮಾಡಬೇಕು ಅಂತ ನನ್ನ ಸ್ನೇಹಿತರಿಗೆ ಮತ್ತು ಕುಟುಂಬದವ್ರಿಗೆ ಅನಿಸ್ತಿದ್ಯಾ? ಈ ಎಲ್ಲ ಪ್ರಶ್ನೆಗೆ ಉತ್ರ ನೋಡಿದ್ಮೇಲೆ, ನಿಮ್ಗೆ ನಿಮ್ಮ ಟೈಮ್ ಟೇಬಲಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೋಬೇಕು ಅಂತ ಅನಿಸಬಹುದು ಅಥವಾ ನೀವು ಇನ್ನಷ್ಟು ಶಿಸ್ತಿಂದ ನಡ್ಕೊಬೇಕು ಅಂತ ಅನಿಸಬಹುದು. ದಯವಿಟ್ಟು ತಡ ಮಾಡದೇ ಬೇಗ ಬದಲಾವಣೆಗಳನ್ನ ಮಾಡ್ಕೊಳ್ಳಿ. ಯಾರು ಈಗಾಗ್ಲೇ ಅವ್ರ ಸಮಯನ ಚೆನ್ನಾಗಿ ಬಳಸ್ತಿದ್ದಾರೋ ಅವ್ರ ಹತ್ರ, ಸಮಯನ ಚೆನ್ನಾಗಿ ಬಳಸೋಕೆ ನನಗೂ ಏನಾದ್ರೂ ಸಲಹೆ ಕೊಡಿ ಅಂತ ಕೇಳಿ.—ಜ್ಞಾನೋ. 11:14.
“ವಿವೇಕಿ ಜೊತೆ ಸಹವಾಸ” ಮಾಡ್ತಾ ಇರಿ
15. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ಇನ್ಯಾವ ಸವಾಲುಗಳು ಬರಬಹುದು?
15 ಸವಾಲು. ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ನಿಮ್ಮ ಜೊತೆಯಲ್ಲಿ ಓದ್ತಿರೋರು ಸ್ಕೂಲ್ ಅಥವಾ ಕಾಲೇಜ್ ಮುಗಿದ್ಮೇಲೆ, ‘ಬಾರೋ ಆಟಾಡೋಕೆ, ಬಾರೋ ಸುತ್ತಾಡೋಕೆ ಹೋಗೋಣ’ ಅಂತ ನಿಮ್ಮನ್ನ ಕರೀಬಹುದು. ಆಗ ನಿಮಗೂ ಅವ್ರ ಜೊತೆಯಲ್ಲಿ ಹೋಗಬೇಕು ಅಂತ ಅನಿಸಬಹುದು. ನೀವು ಅವ್ರ ಜೊತೆ ಕ್ಲಾಸಲ್ಲಿ ಜಾಸ್ತಿ ಸಮಯ ಕಳೆಯೋದ್ರಿಂದ, ನಿಮಗೆ ಇಷ್ಟ ಆಗೋ ವಿಷ್ಯಗಳೇ ಅವ್ರಿಗೂ ಇಷ್ಟ ಆಗೋದ್ರಿಂದ ಸಭೆಯಲ್ಲಿ ಇರೋರಿಗಿಂತ ಇವ್ರ ಜೊತೆ ಸಮಯ ಕಳೆಯೋಕೆ ನಿಮಗೆ ಜಾಸ್ತಿ ಖುಷಿ ಆಗಬಹುದು. ಆದ್ರೆ ನೀವು ಹುಷಾರಾಗಿರಬೇಕು. ಯಾಕಂದ್ರೆ ನೀವು ಒಂದೇ ಕ್ಲಾಸ್ ರೂಮಲ್ಲಿ ಇರಬಹುದು, ಆದ್ರೆ ಸರಿ-ತಪ್ಪಿನ ವಿಷ್ಯದಲ್ಲಿ ನಿಮಗೆಲ್ಲ ಒಂದೇ ನಂಬಿಕೆ ಇಲ್ಲ! ನೀವು ಅವ್ರ ಜೊತೆಯಲ್ಲಿ ಜಾಸ್ತಿ ಸಮಯ ಕಳೀತಾ ಹೋದ್ರೆ ನಿಮಗೇ ಗೊತ್ತಿಲ್ಲದೇ ನೀವೂ ಅವ್ರ ತರಾನೇ ಯೋಚ್ನೆ ಮಾಡೋಕೆ ಕಲಿತುಬಿಡ್ತೀರ. (1 ಕೊರಿಂ. 15:33) 4 ವರ್ಷ ಎಲೆಕ್ಟ್ರಿಕಲ್ ಅಪ್ರೆಂಟಿಶಿಪ್ ಮಾಡಿದ ಮೈಕೆಲ್ ಅನ್ನೋ ಸಹೋದರನಿಗೆ ಹೀಗೇ ಆಯ್ತು. ಅವರು ಹೇಳೋದು, “ನನ್ನ ಜೊತೆ ಕೆಲಸ ಮಾಡ್ತಿದ್ದವರು, ವಿರುದ್ಧ ಲಿಂಗದವರ ಬಗ್ಗೆ ಅಶ್ಲೀಲವಾಗಿ ಮಾತಾಡ್ತಿದ್ರು, ತಪ್ಪಾಗಿರೋ ಮ್ಯೂಸಿಕ್ ಕೇಳಿಸ್ಕೊಳ್ತಿದ್ರು ಮತ್ತು ಕೆಟ್ಟ ಮಾತು ಆಡ್ತಿದ್ರು. ನಾನು ಅವ್ರ ಜೊತೇನೇ ವಾರದಲ್ಲಿ 40 ಗಂಟೆ ಸಮಯ ಕಳೀಬೇಕಾಗ್ತಿತ್ತು. ಹಾಗಾಗಿ ಹೋಗ್ತಾ-ಹೋಗ್ತಾ ಅವರು ಮಾತಾಡ್ತಿರೋದು ಅಷ್ಟೇನೂ ತಪ್ಪಲ್ಲ ಅನ್ನೋ ತರ ನನಗೆ ಅನಿಸಿಬಿಡ್ತು.
16. “ವಿವೇಕಿ ಜೊತೆ ಸಹವಾಸ” ಮಾಡೋದು ಅಂದ್ರೇನು? (ಜ್ಞಾನೋಕ್ತಿ 13:20)
16 ಜ್ಞಾನೋಕ್ತಿ 13:20 ಓದಿ. ನಾವು ಕೆಟ್ಟ ಸಹವಾಸ ಮಾಡಿದ್ರೆ ಅಪಾಯದಲ್ಲಿ ಸಿಕ್ಕಿ ಹಾಕೊಳ್ತೀವಿ. ಆದ್ರೆ ‘ವಿವೇಕಿ ಜೊತೆ ಸಹವಾಸ ಮಾಡಿದ್ರೆ ವಿವೇಕಿ ಆಗ್ತೀವಿ’ ಅಂತ ಬೈಬಲ್ ಹೇಳುತ್ತೆ. ನಾವು ಯಾರ ಜೊತೆ ಜಾಸ್ತಿ ಸಮಯ ಕಳಿತೀವೋ, ನಾವೂ ಅವರ ತರಾನೇ ಆಗ್ತೀವಿ. ನಾವು ಒಳ್ಳೆಯವರ ಜೊತೆ ಜಾಸ್ತಿ ಸಮಯ ಕಳೆದ್ರೆ ಒಳ್ಳೇದು ಕಲೀತೀವಿ, ಕೆಟ್ಟವರ ಜೊತೆ ಸಮಯ ಕಳೆದ್ರೆ ಕೆಟ್ಟವರಾಗ್ತೀವಿ. ಹಾಗಾಗಿ ಯಾರು ನಿಮ್ಮ ಬಗ್ಗೆ ನಿಜವಾಗಿರೋ ಕಾಳಜಿ ಮತ್ತು ಪ್ರೀತಿಯನ್ನ ತೋರಿಸ್ತಾರೋ, ನಿಮ್ಮ ತರಾನೇ ಯೆಹೋವನನ್ನ ಪೂರ್ಣ ಮನಸ್ಸಿನಿಂದ ಆರಾಧಿಸ್ತಾರೋ ಅಂಥವ್ರ ಜೊತೆ ಮಾತ್ರ ಫ್ರೆಂಡ್ ಆಗಿ.—ಕೀರ್ತ. 101:6, 7; 119:63.
17. ಕೆಟ್ಟ ಸಹವಾಸದಿಂದ ದೂರ ಇರೋಕೆ ಏನು ಮಾಡಬೇಕು?
17 ಹೆಚ್ಚಿನ ವಿದ್ಯಾಭ್ಯಾಸ ಮಾಡೋ ಮುಂಚೆ ನೀವೇನು ಮಾಡಬೇಕು? ನೀವು ನಿಮ್ಮ ಕ್ಲಾಸ್ಮೇಟ್ಸ್ ಜೊತೆ ಎಷ್ಟು ಸಹವಾಸ ಮಾಡ್ತೀರ, ಅವ್ರ ಜೊತೆ ಎಷ್ಟು ಸಮಯ ಕಳಿತೀರ ಅಂತ ಒಂದು ಬೌಂಡರಿ ಹಾಕ್ಕೊಳ್ಳಿ. ಟ್ರೆಂಟನ್ ಅನ್ನೋ ಒಬ್ಬ ಯುವ ಸಹೋದರ ಹೀಗೆ ಹೇಳ್ತಾರೆ, “ನಾನು ನನ್ನ ಕ್ಲಾಸ್ಮೇಟ್ಸ್ ಜೊತೇಲಿ ಚೆನ್ನಾಗಿ ಮಾತಾಡ್ತೀನಿ. ಹಾಗಂತ ಅವರ ಜೊತೆ ನಾನು ಸ್ಕೂಲ್ ಮುಗಿದಮೇಲೆ ಸಮಯ ಕಳಿಯಲ್ಲ. ಅವರು ನನ್ನ ಕ್ಲಾಸ್ಮೇಟ್ಸ್ ಅಷ್ಟೇ, ನನ್ನ ಕ್ಲೋಸ್ ಫ್ರೆಂಡ್ಸ್ ಅಲ್ಲ ಅಂತ ನಾನು ನೆನಪಿಡ್ತೀನಿ”. ನೀವು ಯಾವ ಬೌಂಡರಿಗಳನ್ನ ಇಟ್ಕೊಬಹುದು? ಇದನ್ನ ತಿಳ್ಕೊಳ್ಳೋಕೆ ನಿಮ್ಮನ್ನೇ ಈ ಪ್ರಶ್ನೆ ಕೇಳ್ಕೊಳ್ಳಿ, ‘ಹೋದ ವರ್ಷಗಳಲ್ಲಿ ನಾನು ಯಾವ ಬೌಂಡರಿ ಇಟ್ಟಿದ್ದೆ?’ ನಿಮಗೆ ‘ನಾನು ಇನ್ನು ಸ್ವಲ್ಪ ಬದಲಾವಣೆ ಮಾಡಬೇಕು’ ಅಂತ ಅನ್ಸಿದ್ರೆ ಈಗ ಯಾವ ವಿಷ್ಯಗಳಲ್ಲಿ ಬೌಂಡರಿ ಇಡೋಕೆ ಇಷ್ಟಪಡ್ತೀರ ಅಂತ ಯೋಚ್ನೆ ಮಾಡಿ. ನೀವು ಯಾವಾಗ್ಲೂ ವಿವೇಕಿಗಳ ಜೊತೆ ಸಹವಾಸ ಮಾಡಬೇಕು, ಯೆಹೋವನನ್ನ ಪ್ರೀತಿಸದ ಜನರ ಜೊತೆ ಸಹವಾಸ ಮಾಡೋದ್ರಲ್ಲೇ ಮುಳುಗಿ ಹೋಗಬಾರದು ಅಂತ ನೆನಪಿಡಿ.d
18. ಯಾವೆಲ್ಲ ಪ್ರಶ್ನೆಗಳನ್ನ ಕೇಳ್ಕೊಂಡ್ರೆ ನಿಮಗೆ ಪ್ರಯೋಜ್ನ ಆಗಬಹುದು? (ಚಿತ್ರ ನೋಡಿ.)
18 ಆಗಿಂದಾಗ್ಗೆ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ, ‘ನಾನು ಬರ್ತಾ-ಬರ್ತಾ ನನ್ನ ಕ್ಲಾಸ್ಮೇಟ್ಸ್ಗೆ ತುಂಬ ಹತ್ರ ಆಗ್ತಾ ಇದ್ದೀನಾ? ಅವ್ರನ್ನ ತುಂಬ ಹಚ್ಕೊಳ್ತಾ ಇದ್ದೀನಾ? ನಾನು ಅವ್ರ ತರಾನೇ ಮಾತಾಡೋದನ್ನ, ಯೋಚಿಸೋದನ್ನ ಮತ್ತು ನಡ್ಕೊಳೋದನ್ನ ಕಲಿತಾ ಇದೀನಾ? ನನ್ನ ಸಹವಾಸದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?’ (ಕೀರ್ತ. 1:1) ನೀವು ಇತ್ತೀಚಿಗೆ ತಪ್ಪಾಗಿ ನಡ್ಕೊಳ್ತಿದ್ದೀರಾ ಅಂತ ನಿಮಗೆ ಅನ್ಸಿದ್ರೆ, ಬೇಗ ಬದಲಾವಣೆಗಳನ್ನ ಮಾಡ್ಕೊಳ್ಳಿ. ಯೆಹೋವನನ್ನ ಯಾರು ಪ್ರೀತಿಸ್ತಾರೋ ಅಂಥವ್ರ ಜೊತೆ ಮಾತ್ರ ನೀವು ಸ್ನೇಹ ಮಾಡೋಕೆ ದೃಢ ನಿರ್ಧಾರ ಮಾಡಿ. ಅವಕಾಶ ಸಿಕ್ಕಾಗೆಲ್ಲ ನಿಮ್ಮ ಕ್ಲಾಸ್ಮೇಟ್ಸ್ಗೆ ಸಿಹಿಸುದ್ದಿ ಸಾರೋಕೆ ಹಿಂಜರಿಬೇಡಿ. ಅವ್ರಿಗೆ ಸತ್ಯ ಕಲಿಸೋಕೆ ನಿಮಗಿಂತ ಬೆಸ್ಟ್ ವ್ಯಕ್ತಿ ಇನ್ಯಾರೂ ಇಲ್ಲ ಅನ್ನೋದನ್ನ ನೆನಪಿಡಿ.
ನಿಮ್ಮ ಕ್ಲಾಸ್ಮೇಟ್ಸ್ಗೆ ಸಿಹಿಸುದ್ದಿ ಸಾರೋಕೆ ಭಯಪಡಬೇಡಿ (ಪ್ಯಾರ 18 ನೋಡಿ) )e
ತಯಾರಿ ಮಾಡಿ, ಹೆಜ್ಜೆ ಇಡಿ
19. ಹೆಚ್ಚಿನ ವಿದ್ಯಾಭ್ಯಾಸ ಮಾಡ್ವಾಗ ನಿಮಗೆ ಬರೋ ಸವಾಲುಗಳನ್ನ ಎದುರಿಸೋಕೆ ನೀವು ಹೇಗೆ ತಯಾರಾಗಿ ಇರಬಹುದು? ಉದಾಹರಣೆ ಕೊಡಿ.
19 ಬೆಟ್ಟ ಹತ್ತೋಕೆ ಹೋಗೋರು ಮೊದಲೇ ಚೆನ್ನಾಗಿ ತಯಾರಿ ಮಾಡ್ತಾರೆ. ಅವರು ಬೆಟ್ಟ ಹತ್ತುವಾಗ ಯಾವೆಲ್ಲ ಸವಾಲುಗಳು ಬರುತ್ತೆ ಅಂತ ಪ್ರತಿಯೊಂದನ್ನು ಮೊದ್ಲೇ ತಿಳ್ಕೊಳ್ಳೋಕೆ ಆಗಲ್ಲ. ಹಾಗಿದ್ರೂ ಅವರು ಎಲ್ಲ ಪರಿಸ್ಥಿತಿಗೂ ಮೊದಲೇ ತಯಾರಾಗಿ ಇರ್ತಾರೆ. ಅದಕ್ಕೆ ತಕ್ಕಂಥ ಬಟ್ಟೆ ಹಾಕ್ತಾರೆ. ಅವ್ರ ಮನಸ್ಸಲ್ಲಿ ಒಂದು ಗುರಿ ಇರುತ್ತೆ. ಅವರು ಎಲ್ಲಿಗೆ ಹೋಗ್ಬೇಕು ಅನ್ನೋದು ಅವ್ರಿಗೆ ಗೊತ್ತಿರುತ್ತೆ. ಹೆಚ್ಚಿನ ವಿದ್ಯಾಭ್ಯಾಸ ಮಾಡೋಕೆ ಮುಂಚೆ ನೀವೂ ಹೀಗೆ ಚೆನ್ನಾಗಿ ತಯಾರಾಗಿರಬೇಕು. ಬಲವಾದ ನಂಬಿಕೆಯನ್ನ ಬೆಳೆಸ್ಕೊಂಡಿರಬೇಕು. ದೇವರು ಕೊಟ್ಟಿರೋ ರಕ್ಷಾಕವಚವನ್ನ ಪೂರ್ತಿಯಾಗಿ ಹಾಕೊಬೇಕು. ಜೊತೆಗೆ, ನಿಮ್ಮ ಮನಸ್ಸಲ್ಲಿ ಗುರಿ ಸ್ಪಷ್ಟವಾಗಿರಬೇಕು. ನಿಮ್ಮ ಗುರಿ ಏನು? ಈ ಲೋಕ ಯಾವುದನ್ನ ಯಶಸ್ಸು ಅಂತ ಹೇಳುತ್ತೋ ಅದನ್ನ ಪಡಿಯೋದಲ್ಲ, ನೀವು ಮಾಡೋ ಪ್ರತಿಯೊಂದು ಕೆಲಸದಲ್ಲೂ ಯೆಹೋವನಿಗೆ ಮಹಿಮೆ ಬರೋ ತರ ನಡ್ಕೊಳ್ಳೋದೇ.—ಎಫೆ. 6:11-13; 1 ಕೊರಿಂ. 9:26, 27; 10:31.
20. ‘ನೀವು ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಇಲ್ವಾ’ ಅಂತ ತಿಳ್ಕೊಳ್ಳೋದು ಹೇಗೆ?
20 “ನೀವು ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಇಲ್ವಾ ಅಂತ ಪರೀಕ್ಷಿಸ್ಕೊಳ್ತಾ ಇರಿ” ಅಂತ ಬೈಬಲ್ ನಮ್ಮೆಲ್ರನ್ನ ಪ್ರೋತ್ಸಾಹಿಸುತ್ತೆ. (2 ಕೊರಿಂ. 13:5) ಅದ್ರಲ್ಲೂ ನೀವು ಹೆಚ್ಚಿನ ವಿದ್ಯಾಭ್ಯಾಸ ಮಾಡೋ ನಿರ್ಧಾರ ಮಾಡಿದ್ರೆ ದಯವಿಟ್ಟು ಇದನ್ನ ಮಾಡ್ತಾ ಇರಿ. ಈ ಲೇಖನದಲ್ಲಿ ಕಲಿತಂಥ ವಿಷ್ಯಗಳ ಬಗ್ಗೆ ನೀವು ಆಗಿಂದಾಗ್ಗೆ ನಿಮ್ಮನ್ನ ಪ್ರಶ್ನೆ ಮಾಡ್ಕೊಳ್ತಾ ಇದ್ರೆ ತುಂಬ ಪ್ರಯೋಜನ ಸಿಗುತ್ತೆ. ನೀವು ಯಾವೆಲ್ಲ ಪ್ರಶ್ನೆಗಳನ್ನ ಕೇಳ್ಕೊಬಹುದು? ನಾನು ಎಲ್ಲಾ ಆಧ್ಯಾತ್ಮಿಕ ರೂಢಿಗಳನ್ನ ಬಿಡದೇ ಮಾಡ್ತಾ ಇದ್ದೀನಾ? ಈ ಲೋಕದ ವಿವೇಕದಿಂದ ನನ್ನ ಯೋಚನಾ ಸಾಮರ್ಥ್ಯವನ್ನ ನಾನು ಕಾಪಾಡ್ಕೊಳ್ತಾ ಇದ್ದೀನಾ? ನಾನು ಸಮಯನ ಸರಿಯಾಗಿ ಬಳಸ್ತಾ ಇದ್ದೀನಾ? ನಾನು ಕೆಟ್ಟ ಸಹವಾಸ ಮಾಡದೇ ಯೆಹೋವನನ್ನ ಪ್ರೀತಿಸೋ ಜನ್ರ ಜೊತೆ ಸಹವಾಸ ಮಾಡ್ತಿದ್ದೀನಾ ಅಂತ ಕೇಳ್ಕೊಳ್ಳಿ. ಈ ಪ್ರಶ್ನೆಗಳನ್ನ ನೀವು ಶಾಲೆಯಲ್ಲಿ, ಕೆಲಸದಲ್ಲಿ ಅಥವಾ ಎಲ್ಲೇ ಇದ್ರೂ ಕೇಳ್ಕೊಬಹುದು. ನೀವು ಯಾವುದೇ ಪರಿಸ್ಥಿತಿಯಲ್ಲಿದ್ರೂ ಯಾವಾಗ್ಲೂ ಯೆಹೋವನ ಮೇಲೆ ನಿಮಗಿರೋ ನಂಬಿಕೆನ ಬಲಪಡಿಸ್ಕೊಳ್ಳಿ. ನೀವು ಇದನ್ನ ಮಾಡ್ತಿರೋದಾದ್ರೆ ನೀವು ಹಾಕೋ ಎಲ್ಲ ಪ್ರಯತ್ನವನ್ನ ನೋಡಿ ಯೆಹೋವನು ಖಂಡಿತ ನಿಮ್ಮನ್ನ ಆಶೀರ್ವದಿಸೇ ಆಶೀರ್ವದಿಸ್ತಾನೆ.—ಜ್ಞಾನೋ. 3:5, 6.
ಗೀತೆ 87 “ಬನ್ನಿ! ಚೈತನ್ಯ ಪಡೆಯಿರಿ”
a ನೀವು ಯೆಹೋವನ ಸೇವೆಯಲ್ಲಿ ಚುರುಕಾಗಿರೋಕೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ jw.org ವೆಬ್ಸೈಟಲ್ಲಿರೋ “ಯುವಜನರ ಪ್ರಶ್ನೆಗಳು. . . ದೀಕ್ಷಾಸ್ನಾನ ಆದ್ಮೇಲೆ ನಾನೇನು ಮಾಡಬೇಕು?—ಭಾಗ 1: ಯೆಹೋವನಿಗೆ ಇನ್ನೂ ಹತ್ರ ಆಗಿ” ಅನ್ನೋ ಲೇಖನ ನೋಡಿ.
b ನಿಮ್ಮ ಯೋಚನಾ ಸಾಮರ್ಥ್ಯನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಮೇ 2019ರ ಕಾವಲಿನಬುರುಜುವಿನ “‘ಈ ಲೋಕದ ವಿವೇಕವನ್ನು’ ನಂಬಿ ಮೋಸ ಹೋಗಬೇಡಿ” ಅನ್ನೋ ಲೇಖನ ನೋಡಿ.
c ನಿಮ್ಮ ಪ್ರತಿದಿನದ ಟೈಮ್ ಟೇಬಲನ್ನ ಚೆನ್ನಾಗಿ ಪ್ಲಾನ್ ಮಾಡಲು ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ jw.org ವೆಬ್ಸೈಟಲ್ಲಿರೋ “ಯುವಜನರ ಪ್ರಶ್ನೆಗಳು . . . ನಾನು ನನಗಿರೋ ಸಮಯನ ಹೇಗೆ ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು?” ಅನ್ನೋ ಲೇಖನ ನೋಡಿ.
d ಚೆನ್ನಾಗಿ ಯೋಚ್ನೆ ಮಾಡಿ ಸರಿಯಾದ ಫ್ರೆಂಡ್ಸ್ ಮಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ “ಒಳ್ಳೇ ಸ್ನೇಹಿತರನ್ನ ಮಾಡಿಕೊಳ್ಳಿ” ಅನ್ನೋ ಪಾಠ 48 ಅನ್ನು ನೋಡಿ.
e ಚಿತ್ರ ವಿವರಣೆ:ಹೇರ್ಸ್ಟೈಲಿಂಗ್ ಕೋರ್ಸ್ ಮಾಡ್ತಿರೋ ಒಬ್ಬ ಸಹೋದರಿ ತನ್ನ ಕ್ಲಾಸ್ಮೇಟ್ಗೆ ಸಿಹಿಸುದ್ದಿ ಸಾರ್ತಿದ್ದಾಳೆ.