ಜುಲೈ 6-12, 2026
ಗೀತೆ 96 ಯೆಹೋವನ ಅಮೂಲ್ಯ ಗ್ರಂಥ
ಬೈಬಲ್ ತತ್ವಗಳ ಮಹತ್ವ!
“ನಿಮ್ಮ ದೇಹಗಳನ್ನ . . . ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ ಪವಿತ್ರ ಸೇವೆ ಸಲ್ಲಿಸಿ.”— ರೋಮ. 12:1.
ಈ ಲೇಖನದಲ್ಲಿ ಏನಿದೆ?
ಬೈಬಲ್ ತತ್ವಗಳು ಅಂದ್ರೇನು ಮತ್ತು ಬೈಬಲ್ ಓದ್ವಾಗ ಅವುಗಳನ್ನ ಕಂಡುಹಿಡಿಯೋದು ಹೇಗೆ ಅಂತ ನೋಡೋಣ.
1-2. (ಎ) ಬೈಬಲ್ ಒಂದು ಹಳೇ ಪುಸ್ತಕ ಅಂತ ಯಾಕೆ ಹೇಳಬಹುದು? (ಬಿ) ಅದ್ರಿಂದ ಇವತ್ತಿಗೂ ಏನಾದ್ರೂ ಪ್ರಯೋಜನ ಇದ್ಯಾ?
ಬೈಬಲಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅದನ್ನ ಸುಮಾರು 3,500 ವರ್ಷಗಳ ಹಿಂದೆ ಬರೆಯೋಕೆ ಶುರು ಮಾಡಿದ್ರು. ಅದನ್ನ ಬರೆದು ಮುಗಿಸಿ ಹತ್ರತ್ರ 2,000 ವರ್ಷಗಳಾಗಿದೆ. ಹಾಗಿದ್ರೂ ‘ದೇವರ ವಾಕ್ಯದ’ ಪ್ರತಿಯೊಂದು ಪುಟ ಈಗ್ಲೂ ಜೀವಂತವಾಗಿದೆ. ಪ್ರತಿಯೊಂದು ಸಾಲಿಗೂ ತುಂಬ ಶಕ್ತಿ ಇದೆ. (ಇಬ್ರಿ. 4:12; 2 ತಿಮೊ. 3:16, 17) ಇನ್ನೇನು ಮುಗಿದು ಹೋಗುತ್ತಿದ್ದ ಲಕ್ಷಾಂತರ ಜೀವಗಳಿಗೆ ಹೊಸ ಜೀವನ ಕಥೆಯನ್ನ ಕೊಟ್ಟಿದೆ. ಈ ವಿಷ್ಯ ನಮ್ಮೆಲ್ಲರ ಜೀವನದಲ್ಲೂ ನಿಜ ಅಲ್ವಾ?
2 ವಸ್ತುಗಳು ಹಳೆದಾಗ್ತಾ ಹೋದಂತೆ ಅದ್ರ ಬೆಲೆ ಕಡಿಮೆ ಆಗುತ್ತೆ. ಆದ್ರೆ ಬೈಬಲಿನ ಮಹತ್ವ ಯಾಕೆ ಕಮ್ಮಿ ಆಗ್ತಿಲ್ಲ? ಅದಕ್ಕೆ ಎರಡು ಕಾರಣ ಇದೆ. ಒಂದು, ಬೈಬಲಲ್ಲಿರೋ ಪ್ರತಿಯೊಂದು ಮಾತನ್ನ ನಮ್ಮನ್ನೆಲ್ಲ ಸೃಷ್ಟಿ ಮಾಡಿರೋ “ಜೀವ ಇರೋ” ದೇವರೇ ಬರೆಸಿದ್ದಾನೆ. (1 ತಿಮೊ. 4:10; ರೋಮ. 16:26, 27) ಎರಡು, ಬೈಬಲಲ್ಲಿ ದೇವರು ತತ್ವಗಳನ್ನ ಬರೆಸಿಟ್ಟಿದ್ದಾನೆ, ಇದಕ್ಕೆ ಎಕ್‌ಸ್ಪೈರಿ ಡೇಟ್ ಇಲ್ಲ. ಹಾಗಾಗಿ ಮನುಷ್ಯರು ಯಾವುದೇ ಕಾಲದಲ್ಲಿ ಜೀವಿಸ್ತಿರಲಿ, ಯಾವುದೇ ಸಮಸ್ಯೆನ ಎದುರಿಸ್ತಿರಲಿ ಬೈಬಲ್ ತತ್ವಗಳು ಅವ್ರ ಬದುಕಿಗೆ ಬೆನ್ನೆಲುಬಾಗಿ ಯಾವಾಗ್ಲೂ ನಿಲ್ಲುತ್ತೆ.
3. ಈ ಲೇಖನದಲ್ಲಿ ಏನು ಕಲಿತೀವಿ?
3 ಈ ಲೇಖನದಲ್ಲಿ, ಬೈಬಲ್ ತತ್ವಗಳು ಅಂದ್ರೇನು? ಅವು ಇವತ್ತು ಯಾಕೆ ತುಂಬ ಪ್ರಾಮುಖ್ಯ? ಬೈಬಲ್ ಓದ್ವಾಗ ಅವುಗಳನ್ನ ಕಂಡುಹಿಡಿಯೋದು ಹೇಗೆ? ಅನ್ನೋ ಮೂರು ಪ್ರಶ್ನೆಗಳಿಗೆ ಉತ್ರ ನೋಡೋಣ. ಇದ್ರ ಜೊತೆಗೆ, ಯೇಸು ಕಲಿಸ್ವಾಗ ಬೈಬಲ್ ತತ್ವಗಳ ಪ್ರಾಮುಖ್ಯತೆಯನ್ನ ಹೇಗೆ ತೋರಿಸಿದನು ಅಂತಾನೂ ನೋಡೋಣ.
ಬೈಬಲ್ ತತ್ವಗಳು ಅಂದ್ರೇನು?
4. ಬೈಬಲ್ ತತ್ವಗಳು ಅಂದ್ರೇನು?
4 ಬೈಬಲ್ ತತ್ವಗಳು ಅಂದ್ರೆ ಬೈಬಲಿನಲ್ಲಿರೋ ಮುಖ್ಯವಾದ ಸತ್ಯಗಳು. ಇದನ್ನ ಆಧರಿಸಿ ದೇವರು ನಿಯಮಗಳನ್ನ ಕೊಟ್ಟಿದ್ದಾನೆ. ಕೆಲವೊಮ್ಮೆ ಈ ತತ್ವಗಳು ನಿಯಮದ ತರಾನೂ ಕಾಣ್ಸುತ್ತೆ. (ಮತ್ತಾ. 22:37) ಆದ್ರೆ ತತ್ವಗಳು ನಿಯಮಗಳಿಗಿಂತ ಶ್ರೇಷ್ಠವಾಗಿದೆ! ಹೆಚ್ಚಿನ ಸಲ ನಿಯಮಗಳು ಯಾವುದೋ ಒಂದು ವಿಷ್ಯಕ್ಕೆ, ಒಂದು ಸಮಯಕ್ಕೆ ಅಥವಾ ಒಂದು ಸನ್ನಿವೇಶಕ್ಕೆ ಮಾತ್ರ ಅನ್ವಯಿಸುತ್ತೆ. ಆದ್ರೆ ತತ್ವಗಳು, ಸಮಯ ಮತ್ತು ಸನ್ನಿವೇಶದ ಮೇಲೆ ಹೊಂದ್ಕೊಂಡಿಲ್ಲ. ತತ್ವಗಳಲ್ಲಿ ಯೆಹೋವನ ಯೋಚ್ನೆ ಎದ್ದು ಕಾಣುತ್ತೆ, ಒಂದು ನಿಯಮನ ಆತನು ಯಾಕೆ ಕೊಟ್ಟಿದ್ದಾನೆ ಅನ್ನೋ ಕಾರಣ ತಿಳಿಸುತ್ತೆ. ಯೆಹೋವ ಇಟ್ಟಿರೋ ಒಂದೊಂದು ನಿಯಮದ ಹಿಂದೇನೂ ಒಂದೊಂದು ಬಲವಾದ ಕಾರಣ ಇದೆ. ಆತನು ಇಟ್ಟಿರೋ ನಿಯಮಗಳ ಹಿಂದಿರೋ ತತ್ವಗಳನ್ನ ನಾವು ಬೇರೆ-ಬೇರೆ ಸನ್ನಿವೇಶಕ್ಕೆ ಅನ್ವಯಿಸಬಹುದು. ಈ ತತ್ವಗಳು ಎಂದಿಗೂ ಬದಲಾಗಲ್ಲ. (ಕೀರ್ತ. 119:111) ಆದ್ರೆ ನಿಯಮಗಳು ಸಮಯಕ್ಕೆ ತಕ್ಕಂತೆ ಬದಲಾಗ್ತಾ ಇರುತ್ತೆ.—ಯೆಶಾ. 40:8.
5. ನಿಯಮಕ್ಕೂ ತತ್ವಕ್ಕೂ ಇರೋ ವ್ಯತ್ಯಾಸನ ತಿಳ್ಕೊಳೋಕೆ ಒಂದು ಉದಾಹರಣೆ ಕೊಡಿ. (ಚಿತ್ರ ನೋಡಿ.)
5 ನಿಯಮಕ್ಕೂ ತತ್ವಕ್ಕೂ ವ್ಯತ್ಯಾಸ ಇದೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಅಮ್ಮ, ತನ್ನ ಚಿಕ್ಕ ಮಗನಿಗೆ ‘ಸ್ಟವ್‌ನ ಮುಟ್ಟಬೇಡ’ ಅಂತ ಹೇಳ್ತಾಳೆ. ಇದು ನಿಯಮ, ಇದ್ರ ಹಿಂದೆ ಇರೋ ತತ್ವ ಏನು? ‘ಸ್ಟವ್‌ನ ಮುಟ್ಟಬೇಡ ಅದು ಬಿಸಿಯಾಗಿದೆ, ಮುಟ್ಟಿದ್ರೆ ನಿನಗೆ ಗಾಯ ಆಗುತ್ತೆ’ ಅನ್ನೋದು. ಈ ತತ್ವ ಬರೀ ಸ್ಟವ್‌ಗೆ ಮಾತ್ರ ಅನ್ವಯಿಸುತ್ತಾ? ಇಲ್ಲ. ಐರನ್ ಬಾಕ್ಸ್, ಹೀಟರ್ ಹೀಗೆ ಬಿಸಿ ಇರೋ ಬೇರೆ ಯಾವುದೇ ವಸ್ತುನ ಮುಟ್ಟಿದ್ರೆ ಗಾಯ ಆಗುತ್ತೆ ಅನ್ನೋದು ಅದ್ರ ಅರ್ಥ. ಈ ತತ್ವ ಬರೀ ಮನೆಯಲ್ಲಿ ಮಾತ್ರ ಅಲ್ಲ, ಬಿಸಿಯಾಗಿರೋ ವಸ್ತು ಎಲ್ಲೇ ಇದ್ರೂ ಅದನ್ನ ಮುಟ್ಟಬಾರದು ಅನ್ನೋ ಎಚ್ಚರಿಕೆ ಕೊಡುತ್ತೆ. ಆದ್ರೆ ಆ ಮಗ ದೊಡ್ಡವನಾದ ಮೇಲೆ, ‘ನಮ್ಮಮ್ಮ ಸ್ಟವ್ ಮುಟ್ಟಬಾರದು ಅಂತ ಹೇಳಿದ್ರು, ಅದಕ್ಕೆ ನಾನು ಅದನ್ನ ಮುಟ್ಟಲ್ಲ’ ಅಂತ ಅಂದ್ಕೊಳ್ತಾನಾ? ಇಲ್ಲ. ಬದ್ಲಿಗೆ ಅಮ್ಮ ಅದನ್ನ ಯಾಕೆ ಹೇಳಿದ್ರು ಅನ್ನೋ ತತ್ವನ ಅರ್ಥ ಮಾಡ್ಕೊಂಡು ಈ ಸಲ ಅದನ್ನ ಬಳಸ್ವಾಗ ಹುಷಾರಾಗಿರ್ತಾನೆ. ನೋಡಿದ್ರಾ? ಅವನು ದೊಡ್ಡವನಾದ್ಮೇಲೆ ಆ ನಿಯಮ ಹೋಯ್ತು. ಆದ್ರೆ ಅದ್ರ ಹಿಂದೆ ಇದ್ದ ತತ್ವ ಬದಲಾಯ್ತಾ? ಇಲ್ಲ!
ನಿಯಮ ಬದಲಾಗಬಹದು ಆದ್ರೆ ಅದ್ರ ಹಿಂದಿರೋ ತತ್ವ ಯಾವತ್ತೂ ಬದಲಾಗಲ್ಲ (ಪ್ಯಾರ 5 ನೋಡಿ)
ಬೈಬಲ್ ತತ್ವಗಳಿಂದ ಏನು ಪ್ರಯೋಜ್ನ?
6. (ಎ) ಬೈಬಲ್ ಮೂಲಕ ಯೆಹೋವ ನಮಗೆ ಏನು ಕೊಟ್ಟಿದ್ದಾನೆ? (ಬಿ) ಯೆಹೋವ ನಮಗೆ ಗೌರವ ಕೊಡ್ತಿದ್ದಾನೆ ಅಂತ ಹೇಗೆ ಗೊತ್ತಾಗುತ್ತೆ?
6 ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ಅಪಾಯಗಳಿಂದ ನಮ್ಮನ್ನ ತಪ್ಪಿಸೋಕೆ ನಿಯಮಗಳನ್ನ ಕೊಟ್ಟಿದ್ದಾನೆ. (ಯಾಕೋ. 2:11) ಆ ನಿಯಮಗಳ ಹಿಂದಿರೋ ತತ್ವಗಳನ್ನ, ಆತನ ಯೋಚ್ನೆಯನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಸಹಾಯ ಮಾಡ್ತಾನೆ. ಇದನ್ನ ಬೈಬಲ್ ಮೂಲಕ ಮಾಡ್ತಾನೆ. ಜೀವನದಲ್ಲಿ ಸರಿಯಾಗಿರೋ ನಿರ್ಧಾರಗಳನ್ನ ಮಾಡೋಕೆ ಬೇಕಾಗಿರೋ ಮಾರ್ಗದರ್ಶನನೂ ಕೊಡ್ತಾನೆ. ಎಲ್ಲದಕ್ಕೂ ನಿಯಮಗಳನ್ನ ಕೊಡದೆ ತತ್ವಗಳನ್ನ ಕೊಟ್ಟು ನಾವೇ ನಿರ್ಧಾರ ಮಾಡೋಕೆ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಇದ್ರಿಂದ ಯೆಹೋವನು ನಮ್ಮನ್ನ ಗೌರವಿಸ್ತಾನೆ ಅಂತ ಗೊತ್ತಾಗುತ್ತೆ. ಹಾಗಾಗಿ ಯೆಹೋವನನ್ನ ಪ್ರೀತಿಸೋಣ, ಆತನು ಇಟ್ಟಿರೋ ಮಟ್ಟಗಳು ಸರಿಯಾಗಿದೆ ಅಂತ ನಮ್ಮ ನಿರ್ಧಾರಗಳಿಂದ ತೋರಿಸೋಣ.—ಗಲಾ. 5:13.
7. ಬೈಬಲ್ ತತ್ವಗಳು ಎಷ್ಟು ಮುಖ್ಯ ಅಂತ ಅರ್ಥ ಮಾಡ್ಕೊಳ್ಳೋಕೆ ಉದಾಹರಣೆ ಕೊಡಿ. (ಚಿತ್ರ ನೋಡಿ.)
7 ಬೈಬಲ್ ತತ್ವಗಳನ್ನ ಅನ್ವಯಿಸೋದ್ರಿಂದ ಏನು ಪ್ರಯೋಜ್ನ ಅಂತ ಅರ್ಥ ಮಾಡ್ಕೊಳ್ಳೋಕೆ ಉದಾಹರಣೆ ನೋಡೋಣ. ಹೈವೇ ರೋಡಲ್ಲಿ ಗಾಡಿ ಓಡಿಸ್ವಾಗ, ರಸ್ತೆ ಬದಿಯಲ್ಲಿ ಕೆಲವು ಚಿಹ್ನೆಗಳಿರುತ್ತೆ. ಅದ್ರಲ್ಲಿ ಒಂದು, ನಿಯಮಗಳನ್ನ ಸೂಚಿಸುತ್ತೆ. ಉದಾಹರಣೆಗೆ, ಎಷ್ಟು ಸ್ಪೀಡಲ್ಲಿ ಗಾಡಿ ಓಡಿಸಬೇಕು ಗಾಡಿಯನ್ನ ಎಲ್ಲಿ ನಿಲ್ಲಿಸಬೇಕು ಅನ್ನೋ ಚಿಹ್ನೆಗಳು. ಇದನ್ನ ಮೀರಿ ಗಾಡಿ ಓಡಿಸಿದ್ರೆ ದಂಡ ಬೀಳುತ್ತೆ. ಇದನ್ನ ನಾವು ಬೈಬಲಲ್ಲಿರೋ ನಿಯಮಗಳಿಗೆ ಹೋಲಿಸಬಹುದು. ಎರಡನೇದು, ಅಪಾಯಗಳನ್ನ ಎಚ್ಚರಿಸುತ್ತೆ. ಇದನ್ನ ನಾವು ಬೈಬಲಲ್ಲಿರೋ ತತ್ವಗಳಿಗೆ ಹೋಲಿಸಬಹುದು. ಉದಾಹರಣೆಗೆ, ಜಾರುವಂತಹ ರಸ್ತೆ, ಪ್ರಾಣಿಗಳು ದಾಟುವ ಪ್ರದೇಶ, ಅಪಘಾತ ವಲಯ ಅನ್ನೋ ಚಿಹ್ನೆಗಳು. ಇನ್ನೂ ಕೆಲವೊಮ್ಮೆ ಮಳೆ ಬರುವಾಗ, ಮಂಜು ಬೀಳುವಾಗ ಯಾವುದೇ ಚಿಹ್ನೆ ಇಲ್ಲಾಂದ್ರೂ ಡ್ರೈವರ್ ಪರಿಸ್ಥಿತಿಗೆ ತಕ್ಕಂತೆ ಹುಷಾರಾಗಿ ಗಾಡಿ ಓಡಿಸಬೇಕಾಗುತ್ತೆ. ಇಲ್ಲಾಂದ್ರೆ ಅದ್ರಿಂದ ಅಪಾಯ ಆಗುತ್ತೆ. ಅದೇ ರೀತಿಯಲ್ಲಿ ಬೈಬಲಿನಲ್ಲಿ ಕೆಲವು ನಿಯಮಗಳು ಮತ್ತು ತತ್ವಗಳಿವೆ. ನಿಯಮಗಳನ್ನ ಕ್ರೈಸ್ತರು ಚಾಚೂ ತಪ್ಪದೆ ಪಾಲಿಸ್ತಾರೆ. ಅದ್ರ ಜೊತೆಗೆ ತತ್ವಗಳನ್ನೂ ಮನಸ್ಸಲ್ಲಿ ಇಡ್ತಾರೆ. ಆದ್ರಿಂದ ಯೆಹೋವನಿಗೆ ಬೇಜಾರಾಗೋ ಯಾವುದೇ ವಿಷ್ಯನಾ ಮಾಡೋಕೆ ಮತ್ತು ಅದ್ರ ಬಗ್ಗೆ ಯೋಚ್ನೆ ಮಾಡೋಕೆ ಹೋಗಲ್ಲ. ಅವರು ಈ ರೀತಿ ನಡ್ಕೊಬೇಕಂದ್ರೆ ಯೆಹೋವನ ತರ ಯೋಚ್ನೆ ಮಾಡೋದನ್ನ ಕಲಿಬೇಕಾಗುತ್ತೆ.
ಡ್ರೈವರ್ ಅಪಾಯದಿಂದ ತಪ್ಪಿಸ್ಕೊಳ್ಳೋಕೆ ರಸ್ತೆ ಬದಿಯಲ್ಲಿರೋ ಚಿಹ್ನೆಗಳು ಸಹಾಯ ಮಾಡುತ್ತೆ. ಅದೇ ತರ ಬೈಬಲ್ ತತ್ವಗಳೂ ನಾವು ಅಪಾಯದಿಂದ ತಪ್ಪಿಸ್ಕೊಳ್ಳೋಕೆ ಸಹಾಯ ಮಾಡುತ್ತೆ (ಪ್ಯಾರ 7 ನೋಡಿ)
8. ಬೈಬಲ್ ತತ್ವಗಳನ್ನ ಹುಡುಕೋಕೆ ಕಲಿತ್ರೆ ನಮಗೇನು ಪ್ರಯೋಜ್ನ ಅಂತ ರೋಮನ್ನರಿಗೆ 12:1, 2 ಹೇಳುತ್ತೆ?
8 ಬೈಬಲ್ ತತ್ವಗಳನ್ನ ಹುಡುಕಿ ಅದ್ರ ಪ್ರಕಾರ ಜೀವನ ಮಾಡೋದ್ರಿಂದ ನಮಗೆ ಬೇರೆ ಪ್ರಯೋಜ್ನಗಳು ಇದೆ. ಉದಾಹರಣೆಗೆ, ಒಂದು ವಿಷ್ಯದ ಬಗ್ಗೆ ಯೆಹೋವ ದೇವ್ರ ತರ ಯೋಚ್ನೆ ಮಾಡೋದು ಹೇಗೆ ಅಂತ ಕಲಿತೀವಿ. ಇದನ್ನ ಕಲಿಯೋಕೆ ನಾವೇನು ಮಾಡ್ಬೇಕು? ಬೈಬಲ್ ಓದ್ವಾಗ ‘ಇದ್ರಿಂದ ನಾನು ಯಾವ ಪಾಠ ಕಲಿಬಹುದು,’ ‘ಯೆಹೋವ ದೇವರು ಈ ಪಾಠಗಳನ್ನ ಯಾಕೆ ಬೈಬಲಿನಲ್ಲಿ ಬರೆಸಿದ್ದಾನೆ,’ ಮತ್ತು ‘ಇದ್ರಿಂದ ನನಗೇನು ಪ್ರಯೋಜ್ನ’ ಅಂತ ಯೋಚಿಸಬೇಕು. ಹೀಗೆ ಯೋಚಿಸ್ವಾಗ, ನಮ್ಮ ಯೋಚನಾ ಸಾಮರ್ಥ್ಯ ಬಳಸಿ ಯೆಹೋವನಿಗೆ ನಾವು ಪವಿತ್ರ ಸೇವೆ ಸಲ್ಲಿಸ್ತೀವಿ. ಅಷ್ಟೇ ಅಲ್ಲ, ದೇವರು ಇಷ್ಟ ಪಡೋ ವಿಷ್ಯಗಳು ಯಾವಾಗ್ಲೂ ಪರಿಪೂರ್ಣವಾಗಿ, ಸರಿಯಾಗಿರುತ್ತೆ ಅಂತ ಅರ್ಥಮಾಡ್ಕೊಳ್ತೀವಿ.—ರೋಮನ್ನರಿಗೆ 12:1, 2 ಓದಿa
9. ಬೈಬಲ್ ತತ್ವಗಳ ಪ್ರಕಾರ ಜೀವನ ಮಾಡಿದ್ರೆ ನಮಗೆ ಇನ್ನೂ ಯಾವ ಪ್ರಯೋಜ್ನ ಸಿಗುತ್ತೆ? (ಇಬ್ರಿಯ 5:13, 14)
9 ಬೈಬಲ್ ತತ್ವಗಳ ಪ್ರಕಾರ ಜೀವನ ಮಾಡೋಕೆ ಕಲಿತ್ರೆ ಪ್ರೌಢ ಕ್ರೈಸ್ತರಾಗ್ತೀವಿ. ಆಗ ಯೆಹೋವನ ಜೊತೇಲಿ ಇರೋ ನಮ್ಮ ಸ್ನೇಹ-ಸಂಬಂಧ ಇನ್ನೂ ಬಲವಾಗುತ್ತೆ. (ಇಬ್ರಿಯ 5:13, 14 ಓದಿ.) ಚಿಕ್ಕ ಮಕ್ಕಳಿಗೆ ಅವರು ಏನು ಮಾಡಬೇಕು, ಏನು ಮಾಡಬಾರದು ಅಂತ ಅಪ್ಪ-ಅಮ್ಮ ಹೇಳ್ತಾ ಇರಬೇಕು. ಆದ್ರೆ ಮಕ್ಕಳು, ಅಪ್ಪ-ಅಮ್ಮ ಇಡೋ ನಿಯಮಗಳನ್ನೆಲ್ಲಾ ಯಾಕೆ ಪಾಲಿಸ್ತಾರೆ? ಒಂದುವೇಳೆ ಪಾಲಿಸಿಲ್ಲ ಅಂದ್ರೆ ಅಪ್ಪ-ಅಮ್ಮ ಎಲ್ಲಿ ಹೊಡಿತಾರೋ ಅನ್ನೋ ಭಯದಿಂದ ಅಲ್ವಾ? ಆದ್ರೆ ಯೆಹೋವ ನಮ್ಮನ್ನ ಪುಟಾಣಿ ಮಕ್ಕಳ ತರ ನೋಡ್ತಾ ಇಲ್ಲ. ಪ್ರೌಢ ವ್ಯಕ್ತಿಗಳ ತರ ನೋಡ್ತಿದ್ದಾನೆ. ಅದಕ್ಕೆ ನಮಗೆ ಪ್ರತಿಯೊಂದು ವಿಷ್ಯಕ್ಕೂ ನಿಯಮಗಳನ್ನ ಕೊಟ್ಟಿಲ್ಲ. ನಾವು ಆತನ ಇಷ್ಟ ಏನು ಅಂತ ಅರ್ಥ ಮಾಡ್ಕೊಂಡು ಒಳ್ಳೆ ನಿರ್ಧಾರಗಳನ್ನ ಮಾಡ್ತೀವಿ ಅಂತ ನಂಬಿಕೆ ಇಟ್ಟಿದ್ದಾನೆ. ನಾವು ಅದೇ ತರ ಒಳ್ಳೆ ನಿರ್ಧಾರಗಳನ್ನ ಮಾಡಿದಾಗ ಅದನ್ನ ನೋಡಿ ಯೆಹೋವನಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ?—ಕೀರ್ತ. 147:11; ಜ್ಞಾನೋ. 23:15, 26; 27:11.
ಬೈಬಲ್ ತತ್ವಗಳನ್ನ ಕಂಡುಹಿಡಿಯೋದು ಹೇಗೆ?
10. ಬೈಬಲ್ ತತ್ವಗಳನ್ನ ಕಂಡುಹಿಡಿಯೋಕೆ ಏನು ಮಾಡಬೇಕು?
10 ನಾವು ಬೈಬಲ್ ಓದ್ವಾಗ ಅದ್ರಲ್ಲಿರೋ ಪಾಠನ ಹುಡುಕೋಕೆ ಪ್ರಯತ್ನ ಹಾಕಬೇಕು. ಆಗ ನಮಗೆ ಅದ್ರಲ್ಲಿರೋ ತತ್ವಗಳು ಸಿಗುತ್ತೆ. ಇದು ನಮಗೆ ಒಂದು ವಿಷ್ಯದ ಬಗ್ಗೆ ಯೆಹೋವ ಹೇಗೆ ಯೋಚಿಸ್ತಾನೆ, ಏನು ಅಂದ್ಕೊಳ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ನಾವು ಒಂದು ನಿಯಮದ ಹಿಂದೆ ಇರೋ ಕಾರಣಗಳನ್ನ ತಿಳ್ಕೊಳ್ಳೋಕೆ ಪ್ರಯತ್ನ ಮಾಡಿದಾಗ್ಲೂ ತತ್ವಗಳನ್ನ ಕಂಡುಹಿಡಿಬಹುದು. ನಾವು ಎಷ್ಟು ಹೆಚ್ಚಾಗಿ ನಿಯಮದ ಹಿಂದೆ ಇರೋ ಕಾರಣಗಳನ್ನ ತಿಳ್ಕೊಳ್ತೀವೋ, ಅಷ್ಟೇ ಚೆನ್ನಾಗಿ ಯೆಹೋವನನ್ನ ಅರ್ಥ ಮಾಡ್ಕೊಳ್ತೀವಿ. ಆತನ ಯೋಚ್ನೆನ ತಿಳ್ಕೊಬೇಕಂದ್ರೆ ಸಹಾಯಕ್ಕಾಗಿ ಪ್ರಾರ್ಥನೆ ಮಾಡಬೇಕು. ಅಷ್ಟೇ ಅಲ್ಲ, ನಮ್ಮ ಯೋಚನಾ ಸಾಮರ್ಥ್ಯವನ್ನ ಹೆಚ್ಚು ಮಾಡ್ಕೊಳ್ಳೋಕೆ ನಮ್ಮ ಕೈಲಾಗೋ ಪ್ರಯತ್ನ ಹಾಕಬೇಕು. (ಜ್ಞಾನೋ. 2:10-12) ಇದನ್ನ ಮಾಡೋಕೆ ನಾವು ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ದೇವರು ಯಾಕೆ ಈ ನಿಯಮನ ಕೊಟ್ಟಿದ್ದಾನೆ? ಯೆಹೋವ ಈ ವಿಷ್ಯನ ಇಷ್ಟಪಡಲ್ಲ ಅಂದ್ಮೇಲೆ, ಇದೇ ತರ ಇರೋ ಬೇರೆ ವಿಷ್ಯದ ಬಗ್ಗೆ ಆತನಿಗೆ ಹೇಗೆ ಅನ್ಸುತ್ತೆ? ಬೈಬಲಲ್ಲಿರೋ ಈ ಕಥೆಯಿಂದ ನಾನು ಯಾವ ಪಾಠ ಕಲಿತೆ? ಇದನ್ನ ನನ್ನ ಜೀವನದಲ್ಲಿ ಹೇಗೆ ಅನ್ವಯಿಸ್ಕೊಬಹುದು?’ ಬೈಬಲ್ ಕಥೆಗಳನ್ನ ಮತ್ತು ನಿಯಮಗಳನ್ನ ಓದ್ವಾಗ, ಅದ್ರಲ್ಲಿರೋ ಪಾಠಗಳನ್ನ, ಅದ್ರ ಹಿಂದೆ ಇರೋ ಕಾರಣಗಳನ್ನ ಅರ್ಥಮಾಡ್ಕೊಳ್ಳಿ. ಹೀಗೆ ಮಾಡಿದ್ರೆ ಯೆಹೋವನಿಗೆ ಇಷ್ಟವಾಗೋ ಒಳ್ಳೊಳ್ಳೆ ನಿರ್ಧಾರಗಳನ್ನ ಮಾಡೋಕೆ ಸಹಾಯ ಆಗುತ್ತೆ.
11. ಬೈಬಲ್ ತತ್ವಗಳನ್ನ ಕಂಡುಹಿಡಿಯೋಕೆ ಯೇಸು ಹೇಗೆ ಸಹಾಯ ಮಾಡಿದನು? (ಚಿತ್ರ ನೋಡಿ.)
11 ಬೆಟ್ಟದ ಭಾಷಣದಲ್ಲಿ ಯೇಸು ಬೈಬಲ್ ತತ್ವಗಳನ್ನ ಹೇಗೆ ಕಂಡುಹಿಡಿಯೋದು ಅಂತ ತೋರಿಸ್ಕೊಟ್ಟನು. ಈಗ ನಾವು ಅಂಥ ಮೂರು ಉದಾಹರಣೆಗಳನ್ನ ನೋಡೋಣ. ಮೊದಲು ಯೇಸು ಒಂದು ನಿಯಮನ ಹೇಳಿದನು. ಆಮೇಲೆ ಅದ್ರ ಹಿಂದಿರೋ ತತ್ವನ, ಯೆಹೋವನ ಯೋಚ್ನೆನ ಅರ್ಥ ಮಾಡಿಸಿದನು. ಯೇಸು ಕಲಿಸಿದ ಆ ತತ್ವಗಳ ಬಗ್ಗೆ ನಾವು ಯೋಚ್ನೆ ಮಾಡೋದಾದ್ರೆ, ಅದನ್ನ ಇವತ್ತೂ ಹೇಗೆ ಅನ್ವಯಿಸ್ಕೊಬಹುದು ಅಂತ ನಮಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಅದನ್ನ ನಮ್ಮ ಜೀವನದಲ್ಲಿ ಅನ್ವಯಿಸಿಕೊಂಡ್ರೆ ನಮಗೆ ಏನೆಲ್ಲಾ ಪ್ರಯೋಜ್ನ ಸಿಗುತ್ತೆ ಅಂತಾನೂ ನಾವು ತಿಳ್ಕೊಬಹುದು.
ಬೈಬಲ್ ನಿಯಮಗಳ ಹಿಂದೆ ಇರೋ ತತ್ವಗಳನ್ನ ಹೇಗೆ ಹುಡುಕೋದು ಅಂತ ಯೇಸು ತನ್ನ ಬೆಟ್ಟದ ಭಾಷಣದಲ್ಲಿ ತೋರಿಸಿದನು (ಪ್ಯಾರ 11 ನೋಡಿ)
12. ಮತ್ತಾಯ 5:21, 22ರಲ್ಲಿರೋ ನಿಯಮದ ಹಿಂದಿರೋ ತತ್ವ ಏನು? (ಚಿತ್ರ ನೋಡಿ.)
12 ಮತ್ತಾಯ 5:21, 22 ಓದಿ. “ಕೊಲೆ ಮಾಡಬಾರದು.” ಈ ನಿಯಮದ ಹಿಂದೆ ಇರೋ ತತ್ವ ಏನು? ನಾವು ಯಾರನ್ನೂ ದ್ವೇಷಿಸಬಾರದು. ನಮ್ಮ ಮಾತಲ್ಲಿ, ನಡತೇಲಿ ಮತ್ತು ಯೋಚ್ನೇಲೂ ಯಾರನ್ನೂ ದ್ವೇಷಿಸಬಾರದು ಅಂತ ಯೆಹೋವ ಇಷ್ಟಪಡ್ತಾನೆ ಅನ್ನೋದೇ. ನಾವು ಯಾರನ್ನೂ ನೇರವಾಗಿ ಕೊಲ್ಲದೆ ಇದ್ರೂ, ನಮ್ಮ ಸಹೋದರರನ್ನ ದ್ವೇಷಿಸೋದಾದ್ರೆ ಈ ನಿಯಮದ ಹಿಂದೆ ಇರೋ ತತ್ವನ ಮುರಿದ ಹಾಗೆ ಆಗುತ್ತೆ. ಯಾರಾದ್ರೂ ‘ಸಹೋದರನ ಮೇಲೆ ಕೋಪ ಇಟ್ಕೊಂಡ್ರೆ’ ಅಥವಾ ಕೆಟ್ಟ ಮಾತುಗಳಿಂದ ಅವನಿಗೆ ಅವಮಾನ ಮಾಡಿದ್ರೆ, ಅವನು ಯೆಹೋವನಿಗೆ “ಲೆಕ್ಕಕೊಡಬೇಕು” ಅಂತ ಯೇಸು ಹೇಳಿದನು. ಇಂಥ ಕೋಪ, ದ್ವೇಷ ಇರೋದ್ರಿಂದಾನೆ ಇವತ್ತು ಎಷ್ಟೋ ಜನ ಒಬ್ರನ್ನೊಬ್ರು ಕೊಲ್ಲೋಕೆ ಹೋಗ್ತಿರೋದು ಅಲ್ವಾ?—1 ಯೋಹಾ. 3:15.
13. ಮತ್ತಾಯ 5:21, 22ರಲ್ಲಿರೋ ತತ್ವನ ನಾವು ಹೇಗೆ ಅನ್ವಯಿಸ್ಕೊಬಹುದು? (ಚಿತ್ರ ನೋಡಿ.)
13 ಮತ್ತಾಯ 5:21, 22ರಲ್ಲಿರೋ ತತ್ವನ ನಾವು ಇವತ್ತು ಹೇಗೆ ಅನ್ವಯಿಸ್ಕೊಬಹುದು? ನಾವು ಯಾರ ಮೇಲೆನೂ ಹಗೆ ಸಾಧಿಸಬಾರದು ಅಥವಾ ಮನಸ್ಸಲ್ಲಿ ಕೋಪ ಇಟ್ಕೊಬಾರದು. (ಯಾಜ. 19:18; ಯೋಬ 36:13) ಇಟ್ಕೊಂಡ್ರೆ ಏನಾಗಬಹುದು ಅಂತ ಯೋಚ್ನೆ ಮಾಡಿ. ಇದ್ರಿಂದ ನಮ್ಮ ಹೃದಯದಲ್ಲಿ ದ್ವೇಷ ಇನ್ನೂ ಜಾಸ್ತಿಯಾಗುತ್ತೆ. ಒಂದಲ್ಲ ಒಂದು ದಿನ ಕೋಪದಲ್ಲಿ ಬೇರೆಯವ್ರಿಗೆ ನೋವಾಗೋ ತರ ನಾವು ಏನಾದ್ರೂ ಹೇಳಿಬಿಡಬಹುದು ಅಥವಾ ಮಾಡಿಬಿಡಬಹುದು. (ಜ್ಞಾನೋ. 10:12) ಉದಾಹರಣೆಗೆ, ನಮಗೆ ಯಾರ ಮೇಲೆ ಬೇಜಾರು ಇದ್ಯೋ ಆ ವ್ಯಕ್ತಿ ಬಗ್ಗೆ ಹರಟೆ ಮಾತು ಮಾತಾಡಬಹುದು. ಇಲ್ದೆ ಇರೋದನ್ನೆಲ್ಲ ಹೇಳಿ ಅವನ ಹೆಸ್ರಿಗೆ ಮಸಿ ಬಳಿಬಹುದು. (ಜ್ಞಾನೋ. 20:19; 25:23) ಸೋಶಿಯಲ್ ಮೀಡಿಯಾ, ಇಂಟರ್ನೆಟ್, ಮೆಸೇಜ್‌ಗಳೆಲ್ಲ ಇಲ್ದೆ ಇರೋ ಆ ಕಾಲದಲ್ಲೇ ಯೇಸು ಕೊಟ್ಟ ಈ ತತ್ವ ಇವತ್ತಿರೋ ಕ್ರೈಸ್ತರು ಅದನ್ನೆಲ್ಲಾ ಬಳಸ್ವಾಗ ಹುಷಾರಾಗಿರೋಕೆ ಸಹಾಯ ಮಾಡುತ್ತಲ್ವಾ? ಹಾಗಾಗಿ ಈ ತತ್ವನ ಮನಸ್ಸಲ್ಲಿಟ್ಟು ನಾವು ಹುಷಾರಾಗಿ ಇರಬೇಕು. ಇಲ್ಲಾಂದ್ರೆ ಒಬ್ಬ ವ್ಯಕ್ತಿ ವರ್ಷದಿಂದ ಸಂಪಾದಿಸಿರೋ ಒಳ್ಳೆ ಹೆಸ್ರನ್ನ ನಾವು ನಿಮಿಷದಲ್ಲಿ ಸರ್ವನಾಶ ಮಾಡಿಬಿಡ್ತೀವಿ.
(ಪ್ಯಾರ 12-13 ನೋಡಿ)
14. ಮತ್ತಾಯ 5:27, 28ರಲ್ಲಿ ಯಾವ ತತ್ವ ಇದೆ? (ಚಿತ್ರ ನೋಡಿ.)
14 ಮತ್ತಾಯ 5:27, 28 ಓದಿ. “ವ್ಯಭಿಚಾರ ಮಾಡಬಾರದು.” ಈ ನಿಯಮದ ಹಿಂದೆ ಇರೋ ತತ್ವ ಏನು? ಯೆಹೋವನು ಅನೈತಿಕತೆನ ದ್ವೇಷಿಸ್ತಾನೆ. ಅಷ್ಟೇ ಅಲ್ಲ ಅನೈತಿಕತೆಗೆ ನಡೆಸೋ ಆಲೋಚನೆಗಳನ್ನೂ ದ್ವೇಷಿಸ್ತಾನೆ. ಒಬ್ಬ ಗಂಡ ತನ್ನ ಹೆಂಡೆತಿಯನ್ನ ಬಿಟ್ಟು ಬೇರೆ ಸ್ತ್ರೀಯನ್ನ ಲೈಂಗಿಕ ದೃಷ್ಟಿಯಿಂದ ನೋಡೋದಾದ್ರೆ ಅವನು ಪಾಪ ಮಾಡಿದಂತೆ ಆಗುತ್ತೆ. ಹಾಗಾಗಿ ಅನೈತಿಕ ವಿಷ್ಯಗಳು ನಮ್ಮ ಹೃದಯದಲ್ಲಿ ಬೇರುರೋಕೆ ಬಿಡಬಾರದು. ಅದೆಷ್ಟೇ ಕಷ್ಟ ಆಗಲಿ ಅದನ್ನ ತಕ್ಷಣ ನಮ್ಮ ಹೃದಯದಿಂದ ಕಿತ್ತು ಬಿಸಾಕಬೇಕು. (ಮತ್ತಾ. 5:29, 30) ಇಲ್ಲಿರೋ ತತ್ವ ಮದುವೆ ಆಗದಿರೋ ಕ್ರೈಸ್ತರಿಗೂ ಅನ್ವಯಿಸುತ್ತೆ.
15. ಮತ್ತಾಯ 5:27, 28ರಲ್ಲಿರೋ ತತ್ವನ ನಾವು ಹೇಗೆ ಅನ್ವಯಿಸ್ಕೊಬಹುದು? (ಚಿತ್ರ ನೋಡಿ.)
15 ಮತ್ತಾಯ 5:27, 28ರಲ್ಲಿರೋ ತತ್ವನ ನಾವು ಇವತ್ತು ಹೇಗೆ ಅನ್ವಯಿಸ್ಕೊಬಹುದು? ಅನೈತಿಕ ಆಸೆಗಳ ಬಗ್ಗೆನೇ ಯೋಚ್ನೆ ಮಾಡ್ತಾ ಕಾಲ ಕಳಿಬಾರದು. (2 ಸಮು. 11:2-4; ಯೋಬ 31:1-3) ಒಬ್ಬ ಪ್ರೌಢ ಕ್ರೈಸ್ತ ಯಾವುದೇ ರೀತಿಯ ಅಶ್ಲೀಲ ಪುಸ್ತಕನ ಓದಲ್ಲ ಅಥವಾ ಅಶ್ಲೀಲ ವಿಡಿಯೋಗಳನ್ನ ನೋಡಲ್ಲ. ‘ನಾನು ಅನೈತಿಕತೆನ ಬರಿ ನೋಡ್ತಿದ್ದೀನಿ ಅಷ್ಟೇ, ನಾನೇನು ಮಾಡ್ತಿಲ್ವಲ್ಲಾ’ ಅಂತ ಅವನು ಯಾವತ್ತೂ ನೆಪ ಕೊಡಲ್ಲ. ‘ನಾನು ನೋಡ್ತಿರೋದು ಗಂಡು-ಹೆಣ್ಣು ಮಧ್ಯೆ ನಡೆಯೋ ಸಹಜ ಲೈಂಗಿಕತೆಯನ್ನ ಅಷ್ಟೇ. ನಾನೇನೂ ಬೇರೆ ತರದ ಅಸ್ವಾಭಾವಿಕ ಲೈಂಗಿಕತೆಯನ್ನ ನೋಡ್ತಿಲ್ವಲ್ಲಾ’ ಅಂತಾನೂ ಅವನು ಯಾವತ್ತೂ ಯೋಚಿಸಲ್ಲ. ಯೇಸುವಿನ ಸಮಯದಲ್ಲಿ ಮೊಬೈಲ್, ಟಿವಿ, ಫೋಟೋ ಮತ್ತು ವಿಡಿಯೋ ಇದ್ಯಾವುದೂ ಇರಲಿಲ್ಲ. ಆದ್ರೂ ಅವತ್ತು ಯೇಸು ಕಲಿಸಿದ ಆ ತತ್ವ ಇಂಥ ವಿಷ್ಯಗಳನ್ನ ನೋಡೋರ ಬಗ್ಗೆ ಯೆಹೋವ ದೇವ್ರಿಗೆ ಹೇಗೆ ಅನ್ಸುತ್ತೆ ಅನ್ನೋದನ್ನ ನಮಗೆ ಅರ್ಥ ಮಾಡ್ಸುತ್ತೆ. ಅನೈತಿಕ ಮೆಸೇಜ್‌ಗಳನ್ನ ಕಳ್ಸೋದು, ವಿಡಿಯೋಗಳನ್ನ ನೋಡೋದು ಖಂಡಿತ ಯೆಹೋವ ದೇವ್ರಿಗೆ ತುಂಬಾನೇ ಬೇಜಾರು ಮಾಡುತ್ತೆ. ಈ ತತ್ವನ ಮದುವೆ ಆಗಿರೋರು ಅನ್ವಯಿಸ್ಕೊಂಡ್ರೆ ಯಾವಾಗ್ಲೂ ತಮ್ಮ ಸಂಗಾತಿಗೆ ನಿಯತ್ತಾಗಿ ಇರ್ತಾರೆ, ಅವ್ರಿಗೆ ದ್ರೋಹ ಮಾಡಲ್ಲ. (ಮಲಾ. 2:15) ನಮಗೆ ಮದುವೆ ಆಗಿರಲಿ ಆಗದೆ ಇರಲಿ, ಈ ತತ್ವನ ನಾವು ಅನ್ವಯಿಸ್ಕೊಂಡ್ರೆ ಯಾವತ್ತೂ ಲೈಂಗಿಕ ಅನೈತಿಕತೆಯ ದಾರಿಗೆ ಹೋಗಲ್ಲ.—ಜ್ಞಾನೋ. 5:3-14.
(ಪ್ಯಾರ 14-15 ನೋಡಿ)
16. ಮತ್ತಾಯ 5:43, 44ರಲ್ಲಿ ಯಾವ ತತ್ವ ಇದೆ? (ಚಿತ್ರ ನೋಡಿ.)
16 ಮತ್ತಾಯ 5:43, 44 ಓದಿ. ‘ನಿಮ್ಮ ನೆರೆಯವನನ್ನ ಪ್ರೀತಿಸಿ.’ ಈ ನಿಯಮದ ಹಿಂದೆ ಇರೋ ತತ್ವ ಏನು? ನಾವು ಎಲ್ರನ್ನೂ ನಮ್ಮ ನೆರೆಯವರ ತರ ನೋಡ್ಬೇಕು ಮತ್ತು ಪ್ರೀತಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಯೇಸುವಿನ ಸಮಯದಲ್ಲಿದ್ದ ಯೆಹೂದ್ಯರು ಈ ನಿಯಮನ ತಪ್ಪಾಗಿ ಅರ್ಥ ಮಾಡ್ಕೊಂಡಿದ್ರು. ಅದಕ್ಕೆ ಅವರು, ‘ಶತ್ರುಗಳನ್ನ ದ್ವೇಷಿಸಿದ್ರೆ ಪರವಾಗಿಲ್ಲ’ ಅಂತ ಅಂದ್ಕೊಂಡಿದ್ರು. ಆದ್ರೆ ನಿಜವಾಗ್ಲೂ ಈ ನಿಯಮದ ಅರ್ಥ ಅದೇನಾ? ಈ ನಿಯಮದ ಹಿಂದೆ ಇರೋ ತತ್ವ ಏನು? ನಾವು ಎಲ್ರನ್ನೂ ನಮ್ಮ ನೆರೆಯವರ ತರ ನೋಡ್ಬೇಕು, ಅವ್ರೆಲ್ಲರನ್ನ ಪ್ರೀತಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅನ್ನೋದೇ. ಯೇಸುವಿಗೆ ಈ ತತ್ವ ಚೆನ್ನಾಗಿ ಅರ್ಥ ಆಗಿತ್ತು. ಹಾಗಾಗಿ ಜನ ಯಾವುದೇ ಭಾಷೆ, ಯಾವುದೇ ಊರಿಗೆ ಸೇರಿರಲಿ ಅವ್ರನ್ನ ನಾವು ನಮ್ಮ ನೆರೆಯವರ ತರ ನೋಡ್ಬೇಕು ಅಂತ ಯೆಹೋವ ಬಯಸ್ತಾನೆ ಅಂತ ಯೇಸು ಅರ್ಥ ಮಾಡ್ಕೊಂಡನು.—ಮತ್ತಾ. 5:45-48.
17. ಮತ್ತಾಯ 5:43, 44ರಲ್ಲಿರೋ ತತ್ವನ ಅನ್ವಯಿಸೋದ್ರಿಂದ ನಮಗೇನು ಪ್ರಯೋಜ್ನ? (ಚಿತ್ರ ನೋಡಿ.)
17 ಮತ್ತಾಯ 5:43, 44ರಲ್ಲಿರೋ ತತ್ವನ ನಾವು ಇವತ್ತು ಹೇಗೆ ಅನ್ವಯಿಸ್ಕೊಬಹುದು? ನಾವು ನಮ್ಮ ನೆರೆಯವ್ರನ್ನ ಪ್ರೀತಿಸೋದಾದ್ರೆ ದಂಗೆ, ಜಗಳ ಮತ್ತು ಯುದ್ಧಗಳಲ್ಲಿ ತಲೆಹಾಕಲ್ಲ. (ಯೆಶಾ. 2:4; ಮೀಕ 4:3) ಜನ ಯಾವುದೇ ದೇಶ, ಭಾಷೆ, ಜಾತಿಗೆ ಸೇರಿರಲಿ ಅವ್ರೆಲ್ಲರನ್ನ ನಾವು ಪ್ರೀತಿಸ್ತೀವಿ, ಅವ್ರ ಜೊತೆ ದಯೆಯಿಂದ ನಡ್ಕೊಳ್ತೀವಿ. (ಅ. ಕಾ. 10:34, 35) ನಮಗೆ ಅಥವಾ ನಮ್ಮವರಿಗೆ ಯಾರಾದ್ರೂ ಬೇಜಾರು, ನೋವು ಮಾಡಿದ್ರೂ ನಾವು ಅವ್ರ ಮೇಲೆ ಕೋಪ ಇಟ್ಕೊಳ್ಳದೆ ಉದಾರವಾಗಿ ಕ್ಷಮಿಸ್ತೀವಿ.—ಮತ್ತಾ. 18:21, 22; ಮಾರ್ಕ 11:25; ಲೂಕ 17:3, 4.
(ಪ್ಯಾರ 16-17 ನೋಡಿ)
ತತ್ವಗಳಿಗೆ ತಕ್ಕಂತೆ ಜೀವಿಸಿ
18. (ಎ) ನಾವು ಯಾವ ದೃಢ ನಿರ್ಧಾರ ಮಾಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನು ಕಲಿತೀವಿ?
18 ನಾವು ಪುಟಾಣಿ ಮಕ್ಕಳಲ್ಲ. ಯೆಹೋವನ ದೃಷ್ಟಿಯಲ್ಲಿ ಪ್ರೌಢ ವ್ಯಕ್ತಿಗಳು. ಇದನ್ನ ಕೇಳಿಸ್ಕೊಂಡಾಗ ನಮಗೆ ಎಷ್ಟು ಖುಷಿ ಆಗುತ್ತಲ್ವ, ಅದಕ್ಕೆ ನಾವು ನಿರ್ಧಾರಗಳನ್ನ ಮಾಡ್ವಾಗ ಬೈಬಲ್ ತತ್ವಗಳನ್ನ ಅನ್ವಯಿಸ್ಕೊಬೇಕು ಅಂತ ಯೆಹೋವ ಇಷ್ಟಪಡ್ತಾನೆ. (1 ಕೊರಿಂ. 14:20) ಆದ್ರೆ ನಾವು ಮಾಡೋ ನಿರ್ಧಾರಗಳು ಹೇಗಿರಬೇಕು? ಅದು ಯಾವಾಗ್ಲೂ ‘ಯೆಹೋವನ ಇಷ್ಟದ’ ಪ್ರಕಾರ ಇರಬೇಕು ಅಂತ ನಾವು ನೆನಪಿಡೋಣ. (ಎಫೆ. 5:17) ನಾವು ಯಾಕೆ ಈ ತರ ಯೋಚ್ನೆ ಮಾಡಿ ನಿರ್ಧಾರ ಮಾಡ್ತೀವಿ? ತಪ್ಪಾದ ನಿರ್ಧಾರ ಮಾಡಿದ್ರೆ ಯೆಹೋವ ಶಿಕ್ಷೆ ಕೊಡ್ತಾನೆ ಅಂತಾನ? ಇಲ್ಲ. ಬದಲಿಗೆ ನಾವು ಮಾಡೋ ನಿರ್ಧಾರಗಳು ಯೆಹೋವನಿಗೆ ಇಷ್ಟ ಆಗಬೇಕು ಅಂತ. ಈ ರೀತಿ ಯೆಹೋವನಿಗೆ ಇಷ್ಟ ಆಗೋ ನಿರ್ಧಾರಗಳನ್ನ ಮಾಡೋಕೆ ನಮಗೆ ಇನ್ನೂ ಒಂದು ವಿಷ್ಯ ಸಹಾಯ ಮಾಡುತ್ತೆ. ಅದೇ ನಮ್ಮ ಮನಸ್ಸಾಕ್ಷಿ. ಅದ್ರ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಗೀತೆ 95 ಬೆಳಕು ಪ್ರಕಾಶವಾಯ್ತು
a ಕ್ರೈಸ್ತರು ಬೈಬಲ್ ತತ್ವಗಳನ್ನ ಚೆನ್ನಾಗಿ ತೂಗಿ ನೋಡಬೇಕು. ಒಂದು ನಿರ್ಧಾರ ಮಾಡೋ ಮುಂಚೆ, ಆ ವಿಷ್ಯದ ಬಗ್ಗೆ ಮಾತಾಡೋ ಬೈಬಲ್ ತತ್ವಗಳು ಹೇಗೆ ಒಂದಕ್ಕೊಂದು ಸಂಬಂಧಸಿದೆ ಅಂತ ಅರ್ಥಮಾಡ್ಕೊಬೇಕು. ಆಗ ನಾವು ಒಳ್ಳೆ ನಿರ್ಧಾರ ಮಾಡೋಕಾಗುತ್ತೆ. ಇದನ್ನ ಮಾಡೋಕೆ ನಾವು ಯೆಹೋವ ಕೊಟ್ಟಿರೋ ಯೋಚನಾ ಸಾಮರ್ಥ್ಯವನ್ನ ಬಳಸಬೇಕು. ಈ ರೀತಿ ಮಾಡೋ ನಿರ್ಧಾರವನ್ನ ಯೆಹೋವ ಮೆಚ್ತಾನೆ ಮತ್ತು ಆಶೀರ್ವದಿಸ್ತಾನೆ. ಒಂದನೇ ಶತಮಾನದಲ್ಲಿದ್ದ ಯೆಹೊದಿಗಳು ಕ್ರೈಸ್ತರಾಗೋ ಮುಂಚೆ ಅವ್ರ ಧರ್ಮ ಗುರುಗಳು ಇಟ್ಟಿದ್ದ ಎಷ್ಟೋ ನಿಯಮಗಳನ್ನ ಪಾಲಿಸ್ತಿದ್ರು. ಆದ್ರೆ ಇವರು ಸತ್ಯ ಕಲಿತ ಮೇಲೆ ತತ್ವಗಳನ್ನ ಮನಸ್ಸಲಿಟ್ಟು ಯೆಹೋವನಿಗೆ ಇಷ್ಟ ಆಗೋ ನಿರ್ಧಾರಗಳನ್ನ ಮಾಡೋಕೆ ಕಲಿಬೇಕಿತ್ತು.