ಮೇ 18-24, 2026
ಗೀತೆ 35 “ಹೆಚ್ಚು ಪ್ರಮುಖ ವಿಷಯಗಳನ್ನು ಮಾಡೋಣ”
ಯೆಹೋವನ ಇಷ್ಟದ ಮೇಲೆ ಗಮನವಿರಲಿ
“ಯೆಹೋವನ ಇಷ್ಟ ಏನಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಾ ಇರಿ.”—ಎಫೆ. 5:17.
ಈ ಲೇಖನದಲ್ಲಿ ಏನಿದೆ?
ನಮ್ಮ ಜೀವನದಲ್ಲಾಗೋ ಕೆಲವು ವಿಷ್ಯಗಳು ನಾವು ಯಾವುದ್ರ ಮೇಲೂ ಗಮನ ಕೊಡದಂತೆ ಮಾಡಿಬಿಡುತ್ತೆ. ಆದ್ರೆ ನಾವು ಯಾವಾಗ್ಲೂ ಯೆಹೋವನ ಇಷ್ಟದ ಮೇಲೆ ಗಮನ ಕೊಡೋಕೆ ಏನು ಮಾಡಬೇಕು ಅಂತ ನೋಡೋಣ.
1-2. ಒಂದು ಮುಖ್ಯ ಕೆಲಸ ಸಹ ನಮ್ಮನ್ನ ಹೇಗೆ ಅಪಕರ್ಷಿಸೋಕೆ ಸಾಧ್ಯತೆ ಇದೆ?
ನೆನಸಿ, ನೀವು ಕಾರ್ ಓಡಿಸ್ತಿದೀರ, ನಿಮ್ಗೆ ಒಂದು ಫೋನ್ ಬರುತ್ತೆ. ಆ ಫೋನ್ ಮಾಡ್ತಿರೋರಿಗೆ ನಿಮ್ಮ ಸಹಾಯ ಬೇಕಿದೆ ಅಂತ ನಿಮಗೆ ಗೊತ್ತು. ಈಗ ನೀವು ಫೋನ್ ಎತ್ತಿ ಮಾತಾಡ್ತೀರಾ ಅಥವಾ ಹುಷಾರಾಗಿ ಗಾಡಿ ಓಡಿಸೋದ್ರ ಕಡೆಗೆ ಗಮನ ಕೊಡ್ತೀರಾ? ಯಾವುದನ್ನ ಮಾಡೋದು ಸರಿಯಾಗಿರುತ್ತೆ? ನಮ್ಮೆಲ್ರ ಜೀವನದಲ್ಲಿ ಇದೇ ತರ ಪರಿಸ್ಥಿತಿ ಬರುತ್ತೆ. ನಾವೊಂದು ಕೆಲಸ ಮಾಡ್ತಿರ್ತೀವಿ, ಆದ್ರೆ ಇದ್ದಕ್ಕಿದ್ದಂತೆ ನಮ್ಮ ಗಮನ ಇನ್ನೊಂದು ಕೆಲಸದ ಮೇಲೆ ಹೋಗಿಬಿಡುತ್ತೆ. ಆಗ, ‘ನಾನು ಯಾವ ಕೆಲಸ ಮಾಡೋದು ಮುಖ್ಯ ಆಗಿರುತ್ತೆ, ಯಾವ ಕೆಲಸಕ್ಕೆ ನಾನು ಗಮನ ಕೊಡೋದು ಸರಿಯಾಗಿರುತ್ತೆ’ ಅಂತ ನಾವು ನಿರ್ಧಾರ ಮಾಡಬೇಕಾಗುತ್ತೆ.
2 ನಮಗೆಲ್ಲ ಮಾಡೋಕೆ ತುಂಬ ಕೆಲಸ ಇದೆ! ಅದನ್ನೆಲ್ಲಾ ಮಾಡೋಕೆ ದಿನದ 24 ಗಂಟೆ ಸಾಕಾಗಲ್ಲ ಅಂತ ಅನಿಸಬಹುದು. ಆದ್ರೆ ಇವೆಲ್ಲವುಗಳಿಗಿಂತ ಯೆಹೋವನ ಸೇವೆ ಮಾಡೋದು, ಆತನ ಆರಾಧನೆ ಮಾಡೋದೇa ಮುಖ್ಯ ಅಂತ ನಮಗೆ ಗೊತ್ತಿದೆ. (ಮತ್ತಾ. 6:33) ಹಾಗಾಗಿ ಒಂದು ರೀತಿಯಲ್ಲಿ ಯೆಹೋವನ ಜನರು ಆ ಕಾರ್ ಡ್ರೈವರ್ ತರ ಇದ್ದಾರೆ. ಯೆಹೋವನ ಸೇವೆ ಮಾಡದಂತೆ ನಮ್ಮನ್ನ ಯಾವ ವಿಷ್ಯಗಳು ಅಪಕರ್ಷಿಸುತ್ತೆ ಅಂತ ನಾವು ಕಂಡುಹಿಡಿಬೇಕು.—ಜ್ಞಾನೋ. 4:25; ಮತ್ತಾ. 6:22.
3. ಈ ಲೇಖನದಲ್ಲಿ ಏನು ಕಲಿತೀವಿ?
3 ಯಾವಾಗ್ಲೂ ಯೆಹೋವನ ಸೇವೆ ಕಡೆಗೆ ಗಮನ ಕೊಡಬೇಕು ಅನ್ನೋ ಆಸೆ ನಮಗಿರುತ್ತೆ. ಆದ್ರೂ ಸುಲಭವಾಗಿ ನಮ್ಮ ಗಮನ ಬೇರೆ ವಿಷ್ಯಗಳ ಕಡೆಗೆ ಹೋಗಿ ಬಿಡುತ್ತೆ. (ಲೂಕ 21:34-36) ಆ ರೀತಿ ಆಗದೆ ನಾವು ಯಾವಾಗ್ಲೂ ಯೆಹೋವನ ಸೇವೆ ಕಡೆಗೆ ಗಮನ ಕೊಡಬೇಕಂದ್ರೆ ಏನು ಮಾಡಬೇಕು? ಇದಕ್ಕೆ ಸಹಾಯ ಮಾಡೋ ಮೂರು ವಿಷ್ಯಗಳನ್ನ ಈಗ ನೋಡೋಣ. (1) ನಾವು ಯಾವ ವಿಷ್ಯಗಳಿಂದ ಅಪಕರ್ಷಿತರಾಗ್ತೇವೆ, (2) ಯೇಸು ತನಗೆ ಬಂದ ಅಪಕರ್ಷಣೆಗಳನ್ನ ಹೇಗೆ ನಿಭಾಯಿಸಿದನು ಮತ್ತು (3) ನಾವು ಇವತ್ತು ಹೇಗೆ ಅಪಕರ್ಷಣೆಗಳನ್ನ ಜಯಿಸಬಹುದು?
ಅಪಕರ್ಷಣೆಗಳು
4-6. ನಮಗೆ ಯಾವ ರೀತಿಯ ಅಪಕರ್ಷಣೆಗಳು ಬರಬಹುದು?
4 ನಾವೆಲ್ರೂ ಜೀವನದಲ್ಲಿ ಗಮನ ಕೊಡ್ಲೇಬೇಕಾದ ತುಂಬ ಮುಖ್ಯ ವಿಷಯಗಳಿವೆ. ಉದಾಹರಣೆಗೆ, ನಮ್ಮ ಆರೋಗ್ಯ, ನಮ್ಮ ಕುಟುಂಬ. ಆದ್ರೆ ನಾವು ಮೂರು ಹೊತ್ತು ಈ ವಿಷ್ಯಗಳ ಬಗ್ಗೇ ಯೋಚಿಸ್ತಾ ಚಿಂತೆಯಲ್ಲೇ ಮುಳುಗೋದ್ರೆ ಈ ಮುಖ್ಯ ವಿಷ್ಯಗಳೇ ನಮಗೆ ಅಪಕರ್ಷಣೆ ಆಗಿಬಿಡುತ್ತೆ.
5 ಇದ್ರ ಜೊತೆಗೆ ರಾಜಕೀಯ ಗಲಾಟೆಗಳು, ಕೆಲಸ ಮತ್ತು ಹಣಕಾಸಿನ ತೊಂದ್ರೆ, ಹರಡ್ತಾ ಇರೋ ಅಂಟು ರೋಗಗಳು ನಮ್ಮ ನಿದ್ದೆ ಕೆಡಿಸುತ್ತೆ. (2 ತಿಮೊ. 3:1) ‘ಇದನ್ನೆಲ್ಲ ಹೆಂಗಪ್ಪಾ ನಿಭಾಯಿಸೋದು’ ಅಂತ ನಾವು ಮೂರು ಹೊತ್ತೂ ತಲೆ ಕೆಡಿಸ್ಕೊಬಹುದು.
6 ಇಂಥ ಪರಿಸ್ಥಿತಿಗಳಿಂದಾಗಿ ಕೆಲವ್ರ ಜೀವನ ತಲೆ ಕೆಳಗಾಗಿರೋದನ್ನ ನೀವು ನೋಡಿರಬಹುದು. ಅವ್ರ ಕುಟುಂಬ ಇಂಥ ವಿಷ್ಯಗಳಿಂದಾಗಿ ಕುಗ್ಗಿ ಹೋಗಿರುತ್ತೆ. ನಮಗ್ಯಾರಿಗೂ ಕಷ್ಟದಲ್ಲೇ ಕೈ ತೊಳೆಯೋಕೆ ಇಷ್ಟ ಇಲ್ಲ. ನಾವು ಆ ತರ ಇರಬೇಕು ಅಂತ ಯೆಹೋವ ದೇವರು ನಮ್ಮನ್ನ ಸೃಷ್ಟಿನೂ ಮಾಡಿಲ್ಲ. ಆದ್ರೆ ಒಂದಾದ ಮೇಲೆ ಒಂದು ಕಷ್ಟ ಬರ್ತಾ ಇದ್ರೆ, ಜೀವನದಲ್ಲಿ ಖುಷಿನೇ ಇಲ್ವೇನೋ ಅಂತ ಅನಿಸಿಬಿಡುತ್ತೆ. ಹಾಗಾಗಿ ಕೆಲವರು ಖುಷಿ ಪಡ್ಕೊಳ್ಳೋಕೆ ಮನೋರಂಜನೆ ಹಿಂದೆ ಹೋಗಿದ್ದಾರೆ. ನಿಮಗೂ ಈ ತರ ಅನಿಸಿದ್ಯಾ? ಯೇಸುಗೂ ಕೆಲವು ಅಪಕರ್ಷಣೆಗಳು ಬಂತು. ಆದ್ರೂ ಆತನು ಯೆಹೋವನ ಆರಾಧನೆ ಮಾಡೋದ್ರ ಕಡೆಗೆ ಹೇಗೆ ಗಮನ ಕೊಟ್ಟನು ಅಂತ ನೋಡೋಣ.
ಯೇಸು ಹೇಗೆ ನಿಭಾಯಿಸಿದನು?
7. ಯೇಸುಗೂ ಅಪಕರ್ಷಣೆಗಳು ಇತ್ತಾ?
7 ಯೇಸು ತನ್ನ ಗಮನನ ಬೇರೆ ಕಡೆಗೆ ಕೊಡೋ ಸಾಧ್ಯತೆ ಇತ್ತಾ? ಇತ್ತು! ಆದ್ರೆ ಆತನು ಹಾಗೆ ಮಾಡ್ಲಿಲ್ಲ. ಆತನ ಸಮಯದಲ್ಲಿ ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ತುಂಬ ತೊಂದ್ರೆಗಳಿತ್ತು. ಉದಾಹರಣೆಗೆ, ಯೇಸು ಬಡವ್ರನ್ನ, ಕಾಯಿಲೆ ಬಿದ್ದವ್ರನ್ನ ನೋಡ್ತಿದ್ದನು. (ಮತ್ತಾ. 14:14; ಮಾರ್ಕ 14:7) ರೋಮನ್ ಸಾಮ್ರಾಜ್ಯ, ಯೆಹೂದ್ಯರಿಗೆ ಮಾಡ್ತಿದ್ದ ಅನ್ಯಾಯ ಆತನ ಕಣ್ಣಿಗೆ ಬಿತ್ತು. ಯೇಸು ಅದ್ಭುತ ಮಾಡೋದನ್ನ ನೋಡಿ ಜನ್ರೆಲ್ಲ ಸೇರಿ ಆತನನ್ನ ರಾಜ ಮಾಡಬೇಕು ಅಂತ ಅಂದ್ಕೊಂಡ್ರು. (ಯೋಹಾ 6:14, 15) ಅಷ್ಟೇ ಅಲ್ಲ, ಸೈತಾನ ಕೂಡ ಯೇಸುಗೆ ಇಡೀ ಲೋಕದ ರಾಜನಾಗೋಕೆ ಒಂದು ಅಡ್ಡದಾರಿ ತೋರಿಸಿದ. ಈ ಎಲ್ಲ ಸಂದರ್ಭದಲ್ಲೂ ಯೇಸು ತನ್ನ ಗಮನನ ಆ ವಿಷ್ಯಗಳ ಕಡೆಗೆ ಕೊಡ್ಲಿಲ್ಲ. (ಮತ್ತಾ. 4:8, 9) ಒಂದ್ಸಲ ಅಪೊಸ್ತಲ ಪೇತ್ರ ಯೇಸುಗೆ, “ನಿನಗೆ ಯಾವತ್ತೂ ಹಾಗೆ ಆಗಬಾರದು” ಅಂತ ಹೇಳಿ ಆತನ ಗಮನನ ಬೇರೆ ಕಡೆಗೆ ಹೋಗೋ ತರ ಮಾಡ್ದ. ಆದ್ರೆ ಯೇಸು ಆಗ್ಲೂ ಅವನ ಮಾತಿಗೆ ಗಮನ ಕೊಡಲಿಲ್ಲ.—ಮತ್ತಾ. 16:21, 22.
8. ಯೇಸು ತನಗೆ ಬಂದ ಅಪಕರ್ಷಣೆಗಳನ್ನ ಹೇಗೆ ಜಯಿಸಿದನು?
8 ಯೇಸು ಈ ಎಲ್ಲಾ ಅಪಕರ್ಷಣೆಗಳನ್ನ ಜಯಿಸೋಕೆ ಏನು ಮಾಡಿದನು? 3 ವಿಷಯಗಳನ್ನ ಮಾಡಿದನು. ಒಂದು, ಯಾವಾಗ್ಲೂ ಯೆಹೋವನ ತರಾನೇ ಯೋಚ್ನೆ ಮಾಡ್ತಿದ್ದನು. (ಯೋಹಾ. 8:28; 14:9) ಎರಡು, ಯೆಹೋವನ ಸೇವೆ ಮಾಡೋದ್ರಲ್ಲಿ ಯಾವಾಗ್ಲೂ ಬಿಜ಼ಿ ಆಗಿದ್ದನು. (ಮತ್ತಾ. 9:35) ಮೂರು, ಯಾವುದು ಮುಖ್ಯ ಅಂತ ಸ್ಪಷ್ಟವಾಗಿ ಅರ್ಥ ಮಾಡಿಕೊಂಡನು. (ಯೋಹಾ. 4:34) ಹಾಗಾಗಿ ಸೈತಾನ ಆಸೆ ತೋರಿಸಿದಾಗ ಯೇಸು ಬಲಿ ಬೀಳಲಿಲ್ಲ. ಪೇತ್ರ ತನಗೆ ಒಳ್ಳೆದನ್ನೇ ಹೇಳಿದ್ರೂ ಅದು ದೇವರ ಇಷ್ಟದ ಪ್ರಕಾರ ಇಲ್ಲ ಅಂತ ಅರ್ಥ ಮಾಡಿಕೊಂಡನು. (ಮತ್ತಾ. 4:10; 16:23) ನಿಜ, ಯೇಸುಗೆ ಬಂದ ಅದೇ ಅಪಕರ್ಷಣೆಗಳು ನಮಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ನಮಗೆ ಯಾವುದೇ ಅಪಕರ್ಷಣೆಗಳು ಬರಲಿ, ನಾವು ಯೇಸು ತರಾನೇ ನಡ್ಕೊಂಡ್ರೆ ಅವನ್ನೆಲ್ಲಾ ಚೆನ್ನಾಗಿ ಜಯಿಸಬಹುದು.
ನಾವು ಹೇಗೆ ನಿಭಾಯಿಸಬಹುದು?
9. ‘ಯೆಹೋವನ ಇಷ್ಟ ಏನು ಅಂತ ಅರ್ಥ ಮಾಡ್ಕೊಳ್ಳೋಕೆ’ ಏನು ಮಾಡಬೇಕು? (ಎಫೆಸ 5:17)
9 ಯೆಹೋವನ ತರ ಯೋಚಿಸೋಕೆ ಕಲೀರಿ. ಇದನ್ನ ಮಾಡ್ತಾ ಇದ್ರೆ ‘ಯೆಹೋವನ ಇಷ್ಟ ಏನಂತ ನಾವು ಅರ್ಥ ಮಾಡ್ಕೊಳ್ತೀವಿ.’ (ಎಫೆಸ 5:17 ಓದಿ.) ಹಾಗಾಗಿ ನಾವು ದೇವರ ವಾಕ್ಯವನ್ನ ಚೆನ್ನಾಗಿ ಓದಬೇಕು ಮತ್ತು ಧ್ಯಾನ ಮಾಡಬೇಕು. ನಿಜ, ನಮಗೆ ಕೆಲವೊಂದು ಸನ್ನಿವೇಶಗಳಲ್ಲಿ ಯೆಹೋವನ ಇಷ್ಟ ಏನಂತ ನೇರವಾಗಿ ಗೊತ್ತಾಗಲ್ಲ. ಆದ್ರೆ ನಾವು ಬೈಬಲನ್ನ ಚೆನ್ನಾಗಿ ಓದ್ತಿದ್ರೆ, ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡ್ಕೊಳ್ತೀವಿ, ಅರ್ಥ ಮಾಡ್ಕೊಂಡಿದ್ದನ್ನ ಜೀವನದಲ್ಲಿ ಪಾಲಿಸೋಕು ಮುಂದೆ ಬರ್ತೀವಿ.
10. ಯೆಹೋವನ ತರ ಯೋಚ್ನೆ ಮಾಡೋಕೆ ನಾವೇನು ಮಾಡಬೇಕು?
10 ನಾವು ಬೈಬಲನ್ನ ಓದುವಾಗ ಯೆಹೋವನು ಜನ್ರ ಜೊತೆ ಹೇಗೆ ನಡ್ಕೊಂಡನು ಅಂತ ಯೋಚಿಸಬೇಕು. ಆಗ ನಮಗೆ ಆತನ ಯೋಚನೆ ಏನು ಅಂತ ಗೊತ್ತಾಗುತ್ತೆ. (ಯೆರೆ. 45:5) ಇದನ್ನ ಮಾಡೋಕೆ ನಾವು ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ಈ ಘಟನೆಯಿಂದ ಯೆಹೋವನ ಬಗ್ಗೆ ನಾನೇನು ಕಲಿತೀನಿ? ಯೆಹೋವ ದೇವರ ತರ ಯೋಚ್ನೆ ಮಾಡೋಕೆ ನಾನು ನನ್ನ ಯೋಚ್ನೆಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ?’ ಈ ಪ್ರಶ್ನೆಗಳು ನಮ್ಮ ಯೋಚ್ನೆನ ಬದ್ಲಾಯಿಸೋಕೆ ಸಹಾಯ ಮಾಡುತ್ತೆ. ನಮ್ಮ ಯೋಚನೆಗಿಂತ ಯೆಹೋವನ ಯೋಚನೆನೇ ಶ್ರೇಷ್ಠ! (ಯೆಶಾ. 55:9) ಹಾಗಾಗಿ, ‘ಯೆಹೋವನೇ, ನಾನು ನಿನ್ನ ತರಾನೇ ಯೋಚ್ನೆ ಮಾಡೋಕೆ, ನಿನ್ನ ಯೋಚ್ನೆಗಳನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡು’ ಅಂತ ಕೇಳ್ಕೊಬೇಕು.—1 ಯೋಹಾ. 5:14; ಕೀರ್ತ. 143:10.
11. ನಾವೇನು ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ?
11 ಅಂತ್ಯ ಬರೋಕೂ ಮುಂಚೆ ನಾವು ತಯಾರಾಗಿರಬೇಕು ಅನ್ನೋದು ಯೆಹೋವನ ಆಸೆ. (ಮತ್ತಾ. 24:44) ಇಂಥ ಸಮಯದಲ್ಲಿ ನಾವು ಅಪಕರ್ಷಿತರಾಗಬಾರದು ಅಂತ ಯೆಹೋವನು ಇಷ್ಟಪಡ್ತಾನೆ. (ಮತ್ತಾ. 6:31, 32) ಆದ್ರೆ ಜೀವನದಲ್ಲಿ ಕಾಯಿಲೆಗಳು, ಹಣಕಾಸಿನ ತೊಂದ್ರೆ, ಕೆಲಸದಲ್ಲಿ ಒತ್ತಡ ಮತ್ತು ಕುಟುಂಬದಲ್ಲಿ ಸಮಸ್ಯೆ ಸಾಮಾನ್ಯ ಆಗಿಬಿಟ್ಟಿದೆ. ಇದ್ರಿಂದ ನಾವು ಕೆಲವೊಮ್ಮೆ ಚಿಂತೆಯಲ್ಲೇ ಮುಳುಗಿ ಹೋಗ್ತೀವಿ. ಆದ್ರೆ ದೇವ್ರಿಗೆ ಇದು ಇಷ್ಟ ಇಲ್ಲ. ನಾವು ಈ ತರ ಕುಗ್ಗಿ ಹೋದಾಗ ಯೆಹೋವ ‘ಸಹಾಯ ಮಾಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಅದಕ್ಕೆ ಆತನು, ‘ನೀವು ನನ್ನ ಮೇಲೆ ಆತ್ಕೊಳಿ, ಇದನ್ನೆಲ್ಲ ನಿಭಾಯಿಸೋಕೆ ನಿಮಗೆ ಬೇಕಾಗಿರೋ ವಿವೇಕ ಮತ್ತು ಬಲನ ನಾನು ಕೊಡ್ತೀನಿ’ ಅಂತ ಹೇಳಿದ್ದಾನೆ.—ಕೀರ್ತ. 55:22; ಜ್ಞಾನೋ. 3:5-7.
12. ಈಗ ಲೋಕದಲ್ಲಿ ನಡೆಯುತ್ತಿರೋ ವಿಷಯಗಳನ್ನ ನೋಡಿ ಅಪಕರ್ಷಿತರಾಗಬಾರದು ಅಂದ್ರೆ ಏನು ಮಾಡಬೇಕು? (ಮತ್ತಾಯ 5:3)
12 ಯೆಹೋವನ ಸೇವೆ ಮಾಡೋದ್ರಲ್ಲಿ ಬಿಜ಼ಿ ಆಗಿರಿ. ನಮ್ಮ ಸುತ್ತಮುತ್ತಲೂ ನಡೀತಿರೋ ವಿಷ್ಯಗಳನ್ನ ನೋಡಿ ಕೆಲವೊಮ್ಮೆ ನಾವು ಕುಗ್ಗಿ ಹೋಗ್ತೀವಿ. ಆದ್ರೆ ಅವುಗಳನ್ನ ಬದಲಾಯಿಸೋ ಶಕ್ತಿ ನಮಗಿಲ್ಲ. ಅವುಗಳನ್ನ ನೋಡಿ ನಾವು ಅಪಕರ್ಷಿತರಾಗಬಾರದು ಅಂದ್ರೆ ಯೆಹೋವನ ಸೇವೆ ಮಾಡೋದ್ರಲ್ಲಿ ಬಿಜ಼ಿ ಆಗಿರ್ಬೇಕು. ಆಗ ಯೆಹೋವನ ಜೊತೆ ನಮಗಿರೋ ಸ್ನೇಹದ ಬಗ್ಗೆ ಜಾಸ್ತಿ ಯೋಚ್ನೆ ಮಾಡ್ತೀವಿ. ಇದ್ರಿಂದ ನಾವು ಸಂತೋಷವಾಗಿ ಇರ್ತೀವಿ. (ಮತ್ತಾಯ 5:3 ಓದಿ.) ಯೆಹೋವನ ಜೊತೆ ಇರೋ ಸ್ನೇಹನ ಹೆಚ್ಚು ಮಾಡ್ಕೊಳೋಕೆ ನಾವು ಬೈಬಲನ್ನ ಚೆನ್ನಾಗಿ ಓದಿ ಆತನ ಬಗ್ಗೆ ತಿಳ್ಕೊಬೇಕು. ಜೊತೆಗೆ, ನಮ್ಮ ಕೈಲಾದಷ್ಟು ಸೇವೆ ಮಾಡಬೇಕು. ನಾವು ಇದನ್ನ ಮಾಡ್ತಾ ಇದ್ರೆ ಯೆಹೋವ ದೇವರು ನಮ್ಮನ್ನ ಮೆಚ್ಕೊಳ್ತಾನೆ. ಅಷ್ಟೇ ಅಲ್ಲ, ನಾವು ನಮ್ಮ ಸಮಯನ ವಿವೇಚನೆಯಿಂದ ಉಪಯೋಗಿಸ್ತಾ ಇರೋಕೂ ಆಗುತ್ತೆ.—ಜ್ಞಾನೋ. 23:15.
13. ‘ನಮ್ಮ ಸಮಯನ ಚೆನ್ನಾಗಿ ಬಳಸೋಕೆ’ ನಾವೇನು ಮಾಡಬೇಕು?
13 ಕ್ರೈಸ್ತರು ‘ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಬೇಕು’ ಅಂತ ಬೈಬಲ್ ಪ್ರೋತ್ಸಾಹಿಸುತ್ತೆ. (ಎಫೆ. 5:15, 16; “ಮುಖ್ಯವಾದ ವಿಷ್ಯಕ್ಕೆ ಸಮಯ” ಅನ್ನೋ ಇಂಗ್ಲಿಷ್ ಸ್ಟಡಿ ನೋಟ್ ನೋಡಿ.) ಇಲ್ಲಿ ಬೈಬಲ್, ಪ್ರತಿದಿನದ ಕೆಲಸಗಳಿಗೆ ಸಮಯ ಕೊಡೋದ್ರ ಬಗ್ಗೆ ಹೇಳ್ತಿಲ್ಲ. ಬದಲಿಗೆ, ಅಂತ್ಯ ಬರೋಕೆ ಮುಂಚೆ ಯೆಹೋವನ ಸೇವೆಗೆ ಹೆಚ್ಚು ಸಮಯ ಕೊಡಿ ಅಂತ ಪ್ರೇರಿಸ್ತಾ ಇದೆ. ನಾವು ಇದನ್ನ ಹೇಗೆ ಮಾಡಬಹುದು? ಪ್ರತಿದಿನ ಲೋಕದಲ್ಲಿ ಏನಾಗ್ತಿದೆ ಅಂತ ತಿಳ್ಕೊಳ್ಳೋಕೆ ಮೂರು ಹೊತ್ತು ನ್ಯೂಸ್ ನೋಡೋದ್ರಲ್ಲೇ ಸಮಯ ಕಳಿಬಾರ್ದು. ಅದ್ರಲ್ಲಿ ಬರೋ ಕೆಟ್ಟ ಸುದ್ದಿಗಳು ನಮ್ಮ ಮನಸ್ಸನ್ನ ಕುಗ್ಗಿಸುತ್ತೆ. ಯೆಹೋವನ ಸೇವೆಗೆ ನಮ್ಮಲ್ಲಿ ಉತ್ಸಾಹನೇ ಇಲ್ಲದಂತೆ ಮಾಡಿಬಿಡುತ್ತೆ. ಅದಕ್ಕೇ ನಾವು ‘ಎಷ್ಟು ಸಮಯ ನೋಡ್ಬೇಕು, ಏನನ್ನ ನೋಡಬೇಕು, ಓದಬೇಕು’ ಅನ್ನೋದ್ರ ಬಗ್ಗೆ ಒಂದು ಮಿತಿ ಇಟ್ಕೊಳ್ಳೋದು ಎಷ್ಟು ಒಳ್ಳೇದಲ್ವಾ? ಆಗ ನಾವು ಸ್ವಲ್ಪ ಸಮಯ ಉಳಿಸೋಕೆ ಆಗುತ್ತೆ. ಆ ಸಮಯನ ಬಳಸಿ, ಯೆಹೋವನ ಸೇವೆ ಜಾಸ್ತಿ ಮಾಡೋಕೆ, ಹೆಚ್ಚು ಪುನರ್ಭೇಟಿಗಳನ್ನ ಮಾಡೋಕೆ ಆಗುತ್ತೆ. ಜನರು ರಕ್ಷಣೆ ಪಡೆಯೋಕೆ ‘ಸತ್ಯದ ಸರಿಯಾದ ಜ್ಞಾನ ಪಡ್ಕೊಳೋಕೆ’ ನಮಗೆ ಸಿಗೋ ಪ್ರತಿಯೊಂದು ಅವಕಾಶನ ನಾವು ಬಳಸ್ಕೊಳ್ಳೋದು ತುಂಬ ಮುಖ್ಯ ಅನ್ನೋದನ್ನ ನಾವು ನೆನಪಲ್ಲಿ ಇಡಬೇಕು.—1 ತಿಮೊ. 2:4.
14. ಯೆಹೋವನ ಸೇವೆಯಲ್ಲಿ ಬಿಜ಼ಿ ಆಗಿರೋದ್ರಿಂದ ನಮಗೆ ಸಿಗೋ ಇನ್ನೊಂದು ಪ್ರಯೋಜನ ಯಾವುದು? (ಚಿತ್ರ ನೋಡಿ.)
14 ನಾವು ಯೆಹೋವನ ಸೇವೆಲಿ ಬಿಜ಼ಿ ಆಗಿದ್ರೆ ಏನು ಪ್ರಯೋಜನ ಗೊತ್ತಾ? ಈ ಲೋಕದಲ್ಲಿ ನಡೀತಿರೋ ರಾಜಕೀಯ ಗಲಾಟೆ, ಹಣಕಾಸಿನ ತೊಂದ್ರೆ, ಹರಡ್ತಿರೋ ಅಂಟು ರೋಗಗಳನ್ನ ನೋಡಿ ಕಂಗಾಲಾಗಲ್ಲ. ಈ ಎಲ್ಲಾ ವಿಷ್ಯಗಳು ಬೈಬಲ್ ಭವಿಷ್ಯವಾಣಿಯ ನೆರವೇರಿಕೆಗೆ ರುಜುವಾತಾಗಿದೆ ಅಂತ ಅರ್ಥ ಮಾಡ್ಕೊಳ್ತೀವಿ. ಯೆಹೋವನು ಖಂಡಿತ ತನ್ನ ಉದ್ದೇಶನ ಆದಷ್ಟು ಬೇಗ ನೆರವೇರಿಸ್ತಾನೆ ಅಂತ ಧೈರ್ಯದಿಂದ ಇರ್ತೀವಿ. ನಾವು ಶಾಂತಿಯಿಂದಿದ್ದು, ಯೆಹೋವನು ಇದನ್ನೆಲ್ಲ ನಿಭಾಯಿಸೋಕೆ ನಮಗೆ ಸಹಾಯ ಮಾಡ್ತಾನೆ ಅಂತ ನಂಬಿಕೆ ಇಡ್ತೀವಿ.—ಕೀರ್ತ. 16:8; 112:1, 6-8.
ಲೋಕದಲ್ಲಿ ನಮ್ಮನ್ನ ಅಪಕರ್ಷಿಸೋ ತುಂಬ ವಿಷ್ಯಗಳು ನಡೀತಿದೆ, ಆದ್ರೂ ನಾವು ಆಧ್ಯಾತ್ಮಿಕ ವಿಷ್ಯಗಳ ಮೇಲೆ ಗಮನ ಇಡಬೇಕು (ಪ್ಯಾರ 14 ನೋಡಿ)b
15. ‘ನಾವು ಚೆನ್ನಾಗಿ ಯೋಚನೆ’ ಮಾಡೋಕೆ ಕಲಿತ್ರೆ ಏನು ಮಾಡ್ತೀವಿ? (1 ಪೇತ್ರ 4:7)
15 ಮುಖ್ಯವಾದ ವಿಷಯಗಳಿಗೆ ಗಮನ ಕೊಡಿ. ಎಷ್ಟೋ ಜನ ಇವತ್ತು ಲೋಕದಲ್ಲಿ ಮನೋರಂಜನೆ ನೋಡ್ತಾ ಮೋಜು-ಮಸ್ತಿ ಮಾಡೋದ್ರಲ್ಲೇ ತುಂಬ ಸಮಯ ಕಳಿತಿದ್ದಾರೆ. ಈ ಲೋಕ ಅಂತ್ಯ ಆಗುತ್ತೆ ಅನ್ನೋದ್ರ ಬಗ್ಗೆ ಅವರು ತಲೆನೇ ಕೆಡಿಸ್ಕೊಳ್ತಿಲ್ಲ. ಖುಷಿಯಾಗಿರೋಕೆ ಮನೋರಂಜನೆ ನೋಡೋದು ತಪ್ಪಲ್ಲ. ಆದ್ರೆ ಅದಕ್ಕೆ ಅದರದ್ದೇ ಆದ ಸ್ಥಾನ ಇದೆ. (1 ಪೇತ್ರ 4:7 ಓದಿ) ಇದ್ರ ಅರ್ಥ ಏನು? ಮನೋರಂಜನೆ ವಿಷ್ಯದಲ್ಲಿ ನಾವು ವಿವೇಚನೆ ಬಳಸಿ ಒಳ್ಳೆ ನಿರ್ಧಾರಗಳನ್ನ ಮಾಡೋಕೆ ಕಲಿಬೇಕು. ಈ ತರ ನಾವು ಚೆನ್ನಾಗಿ ಯೋಚ್ನೆ ಮಾಡಿದ್ರೆ ಮನೋರಂಜನೆ ನೋಡ್ತಾ, ಮಜಾ ಮಾಡೋ ವಿಷ್ಯದಲ್ಲಿ ಜಾಸ್ತಿ ಸಮಯ ಕಳೆಯೋದಿಲ್ಲ. ಬದ್ಲಿಗೆ ಆ ವಿಷ್ಯಗಳಲ್ಲಿ ಒಳ್ಳೆ ನಿರ್ಧಾರಗಳನ್ನ ಮಾಡ್ತೀವಿ. ಆ ನಿರ್ಧಾರಗಳು ನಾವು ಯೆಹೋವನ ತರ ಯೋಚ್ನೆ ಮಾಡೋಕೆ ಕಲ್ತಿದ್ದೀವಿ ಹಾಗೂ ಯಾವುದು ಮುಖ್ಯ ಅಂತ ಅರ್ಥ ಮಾಡ್ಕೊಂಡಿದ್ದೀವಿ ಅಂತ ತೋರಿಸಿ ಕೊಡುತ್ತೆ.—2 ತಿಮೊ. 1:7.
16. ಸಾವು ಹತ್ರ ಇದ್ದಾಗ್ಲೂ ಯೇಸು ಯಾವುದ್ರ ಮೇಲೆ ಗಮನ ಇಟ್ಟನು?
16 ಯೇಸುಗೆ ಯಾವುದು ಮುಖ್ಯ ಅಂತ ಗೊತ್ತಿತ್ತು. ಹಾಗಾಗಿ ಆತನು ಯಾವಾಗ್ಲೂ ಅದ್ರ ಮೇಲೆ ಗಮನ ಇಟ್ಟನು. ತನ್ನ ಸಾವು ಹತ್ರ ಇದೆ ಅಂತ ಗೊತ್ತಾದಾಗ್ಲೂ, ಆ ಕೊನೆ ಕ್ಷಣಗಳಲ್ಲೂ ಯೆಹೋವನಿಗೆ ನಿಯತ್ತಾಗಿದ್ದು ಆತನ ಇಷ್ಟಾನೇ ಮಾಡಿದನು. ಇದನ್ನ ಮಾಡೋಕೆ ಯೇಸು ಪದೇಪದೇ ಯೆಹೋವನ ಸಹಾಯ ಕೇಳ್ತಾ ಪ್ರಾರ್ಥನೆ ಮಾಡ್ತಿದ್ದನು. ಆದ್ರೆ ಆತನ ಶಿಷ್ಯರು ಹಾಗಿರಲಿಲ್ಲ. ಅವ್ರಿಗೂ ಯಾವುದು ಮುಖ್ಯ ಅಂತ ತುಂಬ ಚೆನ್ನಾಗಿ ಗೊತ್ತಿತ್ತು. ಆದ್ರೆ ಅವರು ‘ದುಃಖಪಟ್ಟು ಸುಸ್ತಾಗಿದ್ದರಿಂದ’ ನಿದ್ದೆಗೆ ಜಾರಿದ್ರು.—ಲೂಕ 22:39-46; ಯೋಹಾ. 19:30.
17. (ಎ) ಇವತ್ತು ತುಂಬ ಜನ ಯಾಕೆ ಸೋಶಿಯಲ್ ಮೀಡಿಯಾನ ಬಳಸ್ತಿದ್ದಾರೆ? (ಬಿ) ಇದ್ರಿಂದ ಅವರು ಏನು ಕಳ್ಕೊತಿದ್ದಾರೆ? (ಚಿತ್ರ ನೋಡಿ.)
17 ಯೇಸುವಿನ ಶಿಷ್ಯರ ತರಾನೇ ನಮಗೂ ಕೆಲವು ಸಲ ಕಷ್ಟ ಆಗಬಹುದು. ಭಾವನಾತ್ಮಕವಾಗಿ ನಾವು ಕುಗ್ಗಿ ಹೋಗಬಹುದು. ನಮ್ಮ ಸುತ್ತಮುತ್ತ ನಡೀತಿರೋ ವಿಷ್ಯಗಳು ನಮಗೆ ತುಂಬ ಚಿಂತೆ ಮಾಡೋ ತರ ಮಾಡಬಹುದು. ಇದ್ರಿಂದ ತಪ್ಪಿಸ್ಕೊಳ್ಳೋಕೆ ಇವತ್ತು ಎಷ್ಟೊಂದು ಜನ ಸೋಶಿಯಲ್ ಮೀಡಿಯಾ ಹಿಂದೆ ಹೋಗ್ತಿದ್ದಾರೆ. ಅದನ್ನ ಬಳಸಿ ತಮ್ಮ ಫ್ರೆಂಡ್ಸ್‌ಗೆ, ಕುಟುಂಬದವ್ರಿಗೆ ಹೊಸಹೊಸ ಫೋಟೋಗಳನ್ನ, ನ್ಯೂಸ್‌ಗಳನ್ನ ಶೇರ್ ಮಾಡ್ತಾರೆ. ಅಷ್ಟೇ ಅಲ್ಲ, ಅದನ್ನ ನೋಡ್ತಾ ಸಮಯ ಹೋಗೋದನ್ನೇ ಮರೆತು ಹೋಗ್ತಾರೆ. ಅಂಥವರು, ‘ನಾವು ಎಲ್ಲ ವಿಷ್ಯದಲ್ಲೂ ಅಪ್ಡೇಟ್ ಆಗಿರಬೇಕು’ ಅಂತ ಅಂದ್ಕೊಂಡು ಅವ್ರಿಗಿರೋ ಸಮಯ ಶಕ್ತಿಯೆಲ್ಲ ಅದಕ್ಕೆ ಸುರೀತಿದ್ದಾರೆ. ಆದ್ರೆ ಈ ವಿಷ್ಯದಲ್ಲಿ ನಾವು ಎಚ್ಚರ ವಹಿಸಬೇಕು. ಅದಕ್ಕೆ ನಾವು ನಮ್ಮನ್ನೇ ಹೀಗೆ ಕೇಳ್ಕೊಳ್ಬೇಕು: ‘ಸೋಷಿಯಲ್ ಮೀಡಿಯಾ ಬಳಸ್ತಿರೋದ್ರಿಂದ ನಾನು ನಿಜವಾಗ್ಲೂ ಖುಷಿಯಾಗಿದ್ದೀನಾ? ಅದು ನನಗೆ ನಿಜವಾಗ್ಲೂ ಸಹಾಯ ಮಾಡ್ತಿದ್ಯಾ ಅಥವಾ ಮುಖ್ಯ ವಿಷ್ಯಗಳಿಂದ ನನ್ನನ್ನ ದೂರ ಮಾಡ್ತಿದ್ಯಾ?’
ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಿದ್ರೆ, ನಾವು ಇಂಟರ್ನೆಟ್ ಮತ್ತು ಮನೋರಂಜನೆಯಿಂದ ಅಪಕರ್ಷಿತರಾಗಲ್ಲ (ಪ್ಯಾರ 17 ನೋಡಿ)
18. ಮನೋರಂಜನೆ ಆಯ್ಕೆ ಮಾಡುವಾಗ ನಾವು ಯಾಕೆ ಸರಿಯಾದ ನಿರ್ಧಾರ ಮಾಡಬೇಕು?
18 ಇತ್ತೀಚಿಗೆ ಇಂಟರ್ನೆಟಲ್ಲಿ, ಒಟಿಟಿ ಪ್ಲಾಟ್‌ಫಾರ್ಮ್ಸ್‌ನಲ್ಲಿ ಫಿಲ್ಮಂ, ಶಾರ್ಟ್ ವಿಡಿಯೋಸ್, ವೆಬ್ ಸೀರೀಸ್, ರೀಲ್ಸ್ ನೋಡೋದು ಅಥವಾ ವಿಡಿಯೋ ಗೇಮ್ ಆಡೋದು ಜಾಸ್ತಿ ಆಗಿದೆ. ಇದೆಲ್ಲ ನೋಡೋಕೆ ಖುಷಿ ಕೊಡುತ್ತೆ, ಆದ್ರೆ ಒಂದ್ಸಲ ಇದು ಚಟ ಆಗ್ಬಿಟ್ರೆ ಆಮೇಲೆ ಬಿಡೋದು ತುಂಬ ಕಷ್ಟ. ಹಾಗಾಗಿ ನಾವು ಎಂಥ ವಿಷ್ಯಗಳನ್ನ ನೋಡ್ತಿದ್ದೀವಿ, ಎಷ್ಟು ಸಮಯ ನೋಡ್ತಿದ್ದೀವಿ ಅನ್ನೋದ್ರ ಬಗ್ಗೆ ನಾವು ಸರಿಯಾದ ನಿರ್ಧಾರ ಮಾಡಬೇಕು. ಇಂಥ ವಿಡಿಯೋಗಳನ್ನ ತಯಾರಿಸೋ ಕಂಪನಿಗಳು ಹಿಂಸೆ, ಅನೈತಿಕತೆ ಇರೋ ಬೇರೆ ವಿಡಿಯೋಗಳನ್ನ ನೋಡೋಕೆ ಪ್ರಚೋದನೆ ಕೊಡ್ತಾ ಇರ್ತಾರೆ. ಏಷ್ಯಾದ ಒಬ್ಬ ಸಹೋದರನಿಗೆ ಹೀಗೇ ಆಯ್ತು. ಅವರು ಮೊದಮೊದಲು ಇಂಟರ್ನೆಟಲ್ಲಿ ಫಿಲ್ಮಂ ಹೈಲೈಟ್ಸ್‌ನ ನೋಡ್ತಾ ಇದ್ರು. ಹೋಗ್ತಾಹೋಗ್ತಾ ಅವ್ರಿಗೆ ಇಂಟರ್ನೆಟಲ್ಲಿ ‘ಆ ವಿಡಿಯೋ ನೋಡು, ಈ ವಿಡಿಯೋ ನೋಡು’ ಅನ್ನೋ ಮೆಸೇಜ್ ಬರ್ತಿತ್ತು. ಅವುಗಳನ್ನ ಅವರು ಕ್ಲಿಕ್ ಮಾಡ್ತಾ ಅವ್ರಿಗೇ ಗೊತ್ತಿಲ್ಲದೆ ಅಶ್ಲೀಲ ವಿಷ್ಯಗಳನ್ನ ನೋಡೋಕೆ ಶುರು ಮಾಡಿಬಿಟ್ರು. ಆದ್ರೆ ಕೊನೆಗೆ ಹಿರಿಯರ ಮತ್ತು ಅವ್ರ ಸ್ನೇಹಿತರ ಸಹಾಯದಿಂದ ಕೆಲವೊಂದು ದೃಢ ನಿರ್ಧಾರಗಳನ್ನ ಮಾಡಿದ್ರು. ತಪ್ಪಾದ ಆ್ಯಪ್‌ಗಳನ್ನ ಡಿಲೀಟ್ ಮಾಡಿದ್ರು. ಫೋನನ್ನ ಎಷ್ಟು ಸಮಯ ಬಳಸಬೇಕು ಅನ್ನೋದ್ರ ಬಗ್ಗೆ ಒಂದು ಮಿತಿ ಇಟ್ಕೊಂಡ್ರು. ನೋಡಿದ್ರಾ? ಈ ಸಹೋದರನ ಅನುಭವ ನಾವು ಮನೋರಂಜನೆನ ನೋಡುವಾಗ ಸರಿಯಾದ ನಿರ್ಧಾರ ಮಾಡೋದು ಎಷ್ಟು ಮುಖ್ಯ ಅಂತ ತೋರಿಸುತ್ತೆ.
19. ಮನೋರಂಜನೆ ಮತ್ತು ಸುತ್ತಾಡೋ ವಿಷಯಗಳಲ್ಲೇ ಜಾಸ್ತಿ ಸಮಯ ಕಳೆಯೋದು ಒಳ್ಳೇದಲ್ಲ ಯಾಕೆ?
19 ಮನೋರಂಜನೆ ಮತ್ತು ಸುತ್ತಾಡೋಕೆ ಹೋಗೋ ವಿಷ್ಯಗಳಲ್ಲೂ ನಾವು ಸರಿಯಾದ ನಿರ್ಧಾರ ಮಾಡಬೇಕು. ಮನೋರಂಜನೆ ಮತ್ತು ಸುತ್ತಾಡೋಕೆ ಹೋಗೋದಂದ್ರೆ ನಮಗೆಲ್ಲ ಇಷ್ಟಾನೇ. ಅದು ನಮಗೆ ಖುಷಿ ಕೊಡುತ್ತೆ, ನಾವು ಆರೋಗ್ಯವಾಗಿ ಇರೋಕೂ ಸಹಾಯ ಮಾಡುತ್ತೆ. ಆದ್ರೆ ನಾವು ಹುಷಾರಾಗಿರಬೇಕು. ಯಾಕಂದ್ರೆ ಜಾಸ್ತಿ ಸಮಯನ ಅದ್ರಲ್ಲೇ ಕಳೆದುಬಿಟ್ರೆ ಮುಖ್ಯವಾಗಿರೋ ವಿಷ್ಯಗಳಿಗೆ ನಮಗೆ ಸಮಯನೇ ಇರಲ್ಲ. (ಫಿಲಿ. 1:10) ಹಾಗಾಗಿ ನಾವು ಈ ವಿಷ್ಯಗಳಿಗೆ ಎಷ್ಟು ಸಮಯ ಕೊಡ್ತಿದ್ದೀವಿ ಅಂತ ಚೆನ್ನಾಗಿ ಯೋಚ್ನೆ ಮಾಡಿ ಒಳ್ಳೆ ನಿರ್ಧಾರ ತಗೊಬೇಕು. ಅದಕ್ಕೆ ನಾವು ಈ ಪ್ರಶ್ನೆಗಳನ್ನ ಕೇಳ್ಕೊಬೇಕು: ‘ಮನೋರಂಜನೆ ಮತ್ತು ಸುತ್ತಾಡೋ ವಿಷ್ಯದಲ್ಲಿ ನಾನು ಜಾಸ್ತಿ ಸಮಯ ಕಳಿತಿದ್ದೀನಾ? ಎಲ್ಲ ಕೊನೆಯಾಗೋ ಸಮಯ ಹತ್ರ ಇರೋದ್ರಿಂದ ನಾನು ಮುಖ್ಯವಾದ ವಿಷ್ಯಗಳಿಗೆ ಗಮನ ಕೊಟ್ಟು ಆ ದಿನಕ್ಕೋಸ್ಕರ ತಯಾರಾಗ್ತಿದ್ದೀನಾ?’
20. ಅಪಕರ್ಷಣೆಗಳ ವಿರುದ್ಧ ಹೋರಾಡೋದ್ರಿಂದ ಏನು ಪ್ರಯೋಜನ?
20 ಈ ಲೋಕದಲ್ಲಿ ನಮಗೆ ತುಂಬ ಅಪಕರ್ಷಣೆಗಳು ಬರುತ್ತೆ. ಆದ್ರೆ ಅವು ಯೆಹೋವನ ಸೇವೆನ ತಡೆಯದಂತೆ ನಾವು ನೋಡ್ಕೊಳ್ಳೋಣ. ಹೀಗೆ ಮಾಡಿದ್ರೆ ನಮಗೆ ತುಂಬ ಪ್ರಯೋಜನ ಆಗುತ್ತೆ. (ಯೆಶಾ. 48:17) ಈ ಲೋಕದಲ್ಲಿ ನಡೀತಿರೋ ವಿಷ್ಯಗಳು ನಮ್ಮನ್ನ ಕಂಗಾಲು ಮಾಡದೇ ಇರೋ ತರ ನೋಡ್ಕೊಳೋಣ. ಏನೇ ಸಮಸ್ಯೆ ಬಂದ್ರೂ ನಾವು ಯೆಹೋವನ ಸಹಾಯದಿಂದ ಜಯಿಸಬಹುದು. ಹಾಗಾಗಿ ನಾವೆಲ್ರೂ ಯೆಹೋವನ ತರ ಯೋಚ್ನೆ ಮಾಡೋಕೆ ಪ್ರಯತ್ನ ಹಾಕೋಣ. ಯೆಹೋವನ ಸೇವೆ ಮಾಡ್ತಾ ಬಿಜ಼ಿ ಆಗಿರೋಣ. ಮನೋರಂಜನೆಗೆ ಅದರದ್ದೇ ಆದ ಸ್ಥಾನ ಕೊಡೋಣ. ಮುಖ್ಯವಾದ ವಿಷ್ಯಗಳಿಗೆ ಹೆಚ್ಚು ಗಮನ ಕೊಡೋಣ. ಹೀಗೆ ಮಾಡಿದ್ರೆ ನಾವು ಅಪಕರ್ಷಣೆಗಳ ವಿರುದ್ಧ ಬರೀ ಹೋರಾಡಲ್ಲ, ಬದಲಿಗೆ ಅವನ್ನ ಜಯಿಸಿ ಮುಂದೆ ಸಿಗೋ ‘ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಳ್ತೀವಿ.’—1 ತಿಮೊ. 6:19.
ಗೀತೆ 114 ತಾಳ್ಮೆಯಿಂದಿರಿ!
a ಪದ ವಿವರಣೆ: ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳು ಅಂದ್ರೆ ಯೆಹೋವನನ್ನ ಆರಾಧಿಸಲು ನಾವು ಮಾಡೋ ಪ್ರತಿಯೊಂದು ವಿಷ್ಯ ಅದ್ರಲ್ಲಿ ಬರುತ್ತೆ. ಉದಾ. ಬೈಬಲ್ ಓದಿ ಧ್ಯಾನಿಸೋದು, ಕೂಟಗಳಿಗೆ ಹಾಜರಾಗೋದು, ಕುಟುಂಬ ಆರಾಧನೆ ಮಾಡೋದು ಮತ್ತು ಸಿಹಿಸುದ್ದಿ ಸಾರೋದು. ನಮ್ಮ ರಾಜ್ಯ ಸಭಾಗೃಹಗಳನ್ನ ಶುಚಿ ಮಾಡೋದು, ಕಟ್ಟಡ ಕಟ್ಟೋ ಕೆಲಸದಲ್ಲಿ ಕೈ ಜೋಡಿಸೋದು, ಪರಿಹಾರ ಕೆಲಸನ ಬೆಂಬಲಿಸೋದು, ನಮ್ಮ ಅಧಿವೇಶನಗಳಲ್ಲಿ ಸ್ವಯಂಸೇವಕರಾಗಿ ಕೆಲ್ಸ ಮಾಡೋದು ಅಥವಾ ಬೆತೆಲಲ್ಲಿ ಸೇವೆ ಮಾಡೋದು ಕೂಡ ಯೆಹೋವನ ಆರಾಧನೆಯಲ್ಲಿ ಸೇರಿದೆ.
b ಚಿತ್ರ ವಿವರಣೆ: ಲೋಕದಲ್ಲಿ ನಡಿತಿರೋ ತಲೆ ಕೆಡಿಸೋ ವಿಷ್ಯಗಳಿಗೆ ಗಮನ ಕೊಡದೇ ಒಂದು ದಂಪತಿ ಸಿಹಿಸುದ್ದಿ ಸಾರೋ ಕೆಲಸದ ಮೇಲೆ ಗಮನ ಇಟ್ಟಿದ್ದಾರೆ.