ಮೇ 11-17, 2026
ಗೀತೆ 7 ಯೆಹೋವ, ನಮ್ಮ ಶಕ್ತಿ
ವಿಶ್ವದ ರಾಜನಲ್ಲಿ ನಂಬಿಕೆ ಇಡಿ
“ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು.”—ಕೀರ್ತ 83:18.
ಈ ಲೇಖನದಲ್ಲಿ ಏನಿದೆ?
ಯೆಹೋವನೇ ವಿಶ್ವದ ರಾಜನಾಗಿದ್ದಾನೆ. ಈಗ ಮತ್ತು ಮುಂದೆ ಬರೋ ಕಷ್ಟಗಳನ್ನ ನಿಭಾಯಿಸೋಕೆ ನಮಗೆ ಆತನು ಸಹಾಯ ಮಾಡ್ತಾನೆ. ಇದ್ರ ಬಗ್ಗೆ ನಮಗಿರೋ ನಂಬಿಕೆಯನ್ನ ಹೆಚ್ಚು ಮಾಡ್ಕೊಳ್ಳೋಕೆ ಈ ಲೇಖನ ಸಹಾಯ ಮಾಡುತ್ತೆ.
1. ಯೋಬನಿಗೆ ಯಾವೆಲ್ಲ ಕಷ್ಟಗಳು ಬಂತು?
ನಂಬಿಗಸ್ತ ಯೋಬನ ಬದುಕು ಬೀದಿಗೆ ಬಂದುಬಿಡ್ತು. ಅವನು ತನ್ನ ಆರೋಗ್ಯ, ಆಸ್ತಿಪಾಸ್ತಿ ಮತ್ತು ಮಕ್ಕಳನ್ನೆಲ್ಲಾ ಕಳ್ಕೊಂಡು ಬಿಟ್ಟ. ಜೊತೆಗೆ ಅವನ ಮಾನ ಮರ್ಯಾದೆನೂ ಮಣ್ಣು ಪಾಲಾಯ್ತು. ಅವನು ನಂಬ್ಕೊಂಡಿದ್ದ “ಸ್ನೇಹಿತರು” ಅವನಿಗೆ ಮನಸ್ಸು ನೋಯಿಸೋ ತರ ಮಾತಾಡಿದ್ರು. ಅವನು ಕಟ್ಕೊಂಡಿದ್ದ ಹೆಂಡ್ತಿ “ದೇವ್ರಿಗೆ ಶಾಪ ಹಾಕಿ ಸತ್ತುಹೋಗು!” ಅಂತ ಬೈದುಬಿಟ್ಟಳು. (ಯೋಬ 2:9; 15:4, 5; 19:1-3) ನೋಡಿದ್ರಾ? ಯೋಬನ ಜೀವನದಲ್ಲಿ ಸಮಸ್ಯೆಗಳ ಸುರಿಮಳೆನೇ ಬಂತು. ಇದೆಲ್ಲದ್ರಿಂದ ಅವನಿಗೆ, ‘ದೇವರು ನನ್ನ ಕೈ ಬಿಟ್ಟುಬಿಟ್ಟಿದ್ದಾನಾ? ದೇವ್ರಿಗೆ ನನ್ನ ಮೇಲೆ ಪ್ರೀತಿ ಇಲ್ವಾ? ನಾನು ಆತನನ್ನ ಆರಾಧನೆ ಮಾಡೋದ್ರಿಂದ ಏನೂ ಪ್ರಯೋಜನ ಇಲ್ವಾ’ ಅಂತ ಅನಿಸಿರಬಹುದು.
2-3. (ಎ) ನಮಗೆ ಯಾವ ಸಂಶಯ ಬರಬಹುದು? (ಬಿ) ಯೋಬ ಪುಸ್ತಕದಿಂದ ನಾವೇನು ಕಲಿತೀವಿ?
2 ನಾವು ಕೊನೆ ದಿನಗಳಲ್ಲಿ ಜೀವಿಸ್ತಾ ಇದ್ದೀವಿ. ಅದಕ್ಕೇ ಪರಿಸ್ಥಿತಿ ‘ತುಂಬ ಹದಗೆಟ್ಟಿದೆ’ ಅಂತ ಬೈಬಲ್ ಹೇಳುತ್ತೆ. (2 ತಿಮೊ. 3:1) ಹಾಗಾಗಿ ಯೆಹೋವನ ಮೇಲೆ ನಮಗಿರೋ ನಂಬಿಕೆಗೆ ಬೆಂಕಿಯಂಥ ಪರೀಕ್ಷೆಗಳು ಬರುತ್ತೆ. ಆದ್ರೆ ಜೀವನದಲ್ಲಿ ಒಂದಾದ್ಮೇಲೆ ಒಂದು ಕಷ್ಟಗಳು ಬರ್ತಾನೆ ಇದ್ರೆ, ಆಕಾಶನೇ ತಲೆ ಮೇಲೆ ಬಿದ್ದಂತೆ ಅನ್ಸುತ್ತೆ. ಆಗ ನಮಗೆ ಅದನ್ನ ತಾಳ್ಕೊಳ್ಳೋಕೆ ಶಕ್ತಿನೇ ಇರಲ್ಲ. ಈ ತರ ನಮ್ಗೆ ಕಷ್ಟಗಳು ಬಂದಾಗ ‘ನಿಜವಾಗ್ಲೂ ದೇವರು ನಮ್ಮ ಬಗ್ಗೆ ಯೋಚ್ನೆ ಮಾಡ್ತಾನಾ, ಆತನು ನಮಗೆ ಸಹಾಯ ಮಾಡ್ತಾನಾ’ ಅನ್ನೋ ಸಂಶಯ ಬಂದು ಬಿಡುತ್ತೆ.
3 ನಿಮಗೂ ಯಾವತ್ತಾದ್ರೂ ಇಂಥ ಸಂಶಯ ಬಂದಿದ್ರೆ ಬೇಜಾರಾಗಬೇಡಿ. ನಾವು ಯೆಹೋವನಿಗೆ ನಿಯತ್ತಾಗಿದ್ರೆ ಆತನು ನಮ್ಮನ್ನ ಕಾಪಾಡ್ತಾನೆ ಅಂತ ಯೋಬ ಕಲಿತ. ನಾವೂ ಯೆಹೋವನ ಮೇಲೆ ಅದೇ ತರ ನಂಬಿಕೆ ಬೆಳೆಸ್ಕೊಬಹುದು. ಇದನ್ನ ಮಾಡೋಕೆ ಯೋಬ ಪುಸ್ತಕ ಸಹಾಯ ಮಾಡುತ್ತೆ. ಇದ್ರಲ್ಲಿ ಎರಡು ಮುಖ್ಯ ವಿಷ್ಯಗಳಿವೆ: ಒಂದು, ಯೆಹೋವನೇ ವಿಶ್ವದ ರಾಜ ಅನ್ನೋ ಸತ್ಯಾಂಶ. ಎರಡು, ಆತನಿಗೆ ಈ ಭೂಮಿಯಲ್ಲಿ ನಡೆಯೋ ಯಾವುದೇ ಘಟನೆಯನ್ನ, ಯಾವುದೇ ಪರಿಸ್ಥಿತಿಯನ್ನ ಬೇಕಾದ್ರೂ ತನ್ನ ನಿಯಂತ್ರಣದಲ್ಲಿ ಇಟ್ಕೊಳ್ಳೋ ಶಕ್ತಿ ಇದೆ. ಈ ಕಾರಣದಿಂದನೇ ಆತನು ತನ್ನ ಉದ್ದೇಶನ ಖಂಡಿತ ನೆರವೇರಿಸ್ತಾನೆ. ಅಷ್ಟೇ ಅಲ್ಲ, ಆತನು ತನ್ನ ಜನ್ರಿಗೆ ಯಾವುದೇ ಶಾಶ್ವತ ಹಾನಿ ಆಗದ ಹಾಗೆ ನೋಡ್ಕೊಳ್ತಾನೆ.
ಸೈತಾನ ಮಧ್ಯೆ ತಲೆ ಹಾಕಿದ!
4. ಸ್ವರ್ಗದಲ್ಲಿ ನಡೆದ ಕೂಟಕ್ಕೆ ಯಾರು ಕೂಡ ಬಂದ್ರು?
4 ಒಮ್ಮೆ “ದೇವದೂತರು” ದೇವರ ಮುಂದೆ ಸೇರಿ ಬರಬೇಕಾದ ದಿನ ಬಂತು. ಆಗ “ಸೈತಾನ ಕೂಡ ಅಲ್ಲಿ ಬಂದ.” (ಯೋಬ 1:6) ದೇವರ ಮುಖ್ಯ ವಿರೋಧಿಯನ್ನ “ಸೈತಾನ” ಅಂತ ಮೊದಲ ಬಾರಿಗೆ ಬೈಬಲಲ್ಲಿ ಕರೆದಿರೋದು ಇಲ್ಲೇನೇ! ನಿಮಗೆ ಗೊತ್ತಾ? ಯೆಹೋವ ಆದಿಕಾಂಡ 3:15ರಲ್ಲಿ ಇರೋ ಮಾತುಗಳನ್ನ ಹೇಳೋ ಅಷ್ಟರಲ್ಲೇ ಸೈತಾನ ಯೆಹೋವನಿಗೆ ಶತ್ರು ಆಗಿಬಿಟ್ಟಿದ್ದ. ಆದ್ರಿಂದ ಯೆಹೋವನಿಗೆ ನಂಬಿಗಸ್ತ ಮಗನಾಗಿ ಉಳಿಯೋ ಅವಕಾಶ ಅವನು ಕಳ್ಕೊಂಡ. ಜೊತೆಗೆ ನಂಬಿಗಸ್ತ ದೇವದೂತರಿಗೆ ಮತ್ತು ಭೂಮಿಯಲ್ಲಿರೋ ನಂಬಿಗಸ್ತ ಮನುಷ್ಯರಿಗೆ ಅವನು ಶತ್ರು ಆಗಿಬಿಟ್ಟ. ಇದ್ರಿಂದ ಸೈತಾನ ಆ “ಸ್ತ್ರೀಯ” ಸಂತಾನದಲ್ಲಿ ಬರಲ್ಲ. ಈ ಸ್ತ್ರೀಯ ಸಂತಾನ ನಿಯತ್ತಾಗಿರೋ ಆತ್ಮಜೀವಿಗಳಿರೋ ಯೆಹೋವನ ಕುಟುಂಬವಾಗಿದೆ. ಇಲ್ಲಿಂದಾನೇ ಯೆಹೋವ ಹೇಳಿದ “ಸಂತಾನ” ಬರಲಿಕ್ಕಿತ್ತು.
5. ಸ್ವರ್ಗದಲ್ಲಿ ನಡೆದ ಆ ಮೀಟಿಂಗ್‌ನಿಂದ ನಮಗೆ ಯಾವೆಲ್ಲ ವಿಷ್ಯಗಳು ಗೊತ್ತಾಗುತ್ತೆ?
5 ಸ್ವರ್ಗದಲ್ಲಿ ನಡೆದ ಆ ಮೀಟಿಂಗಲ್ಲಿ ಏನು ಆಯ್ತು ಅನ್ನೋದನ್ನ ಯೆಹೋವನು ಬರೆಸಿದ್ದಾನೆ. ಅಲ್ಲಿ ಸೈತಾನ ಹೇಳಿದನ್ನ ನೋಡಿದ್ರೆ ಅವನೆಷ್ಟು ಕುತಂತ್ರಿ, ದೇವಜನ್ರನ್ನ ಎಷ್ಟು ದ್ವೇಷಿಸ್ತಾನೆ ಅಂತ ಗೊತ್ತಾಗುತ್ತೆ. (ಯೋಬ 1:9 ಮತ್ತು ಪ್ರಕ. 12:10 ಹೋಲಿಸಿ.) ಸ್ವರ್ಗದ ಆ ಘಟನೆಯ ಬಗ್ಗೆ ಓದಿದಾಗ ಯೆಹೋವನು ತನ್ನ ಅಧಿಕಾರನ ಪರಿಪೂರ್ಣವಾಗಿ ಮತ್ತು ನ್ಯಾಯವಾಗಿ ಬಳಸ್ತಾನೆ ಅನ್ನೋ ಭರವಸೆ ಮೂಡುತ್ತೆ. ಅಷ್ಟೇ ಅಲ್ಲ, ಬೇರೆಯವರು ಏನು ಮಾಡಬಹುದು, ಏನು ಮಾಡಬಾರದು ಅಂತ ಮಿತಿ ಇಡೋ ಅಧಿಕಾರ ಕೂಡ ಯೆಹೋವನಿಗಿದೆ ಅಂತ ನಮಗೆ ಗೊತ್ತಾಗುತ್ತೆ.
ಮಿತಿ ಇಡೋ ಅಧಿಕಾರ ಇದೆ
6. ಸ್ವರ್ಗದಲ್ಲಿ ನಡೆದ ಆ ಕೂಟದ ಮೇಲೆ ಯೆಹೋವನಿಗೆ ಪೂರ್ತಿ ಅಧಿಕಾರ ಇತ್ತು ಅಂತ ಹೇಗೆ ಹೇಳಬಹುದು? (ಯೋಬ 1:7, 8)
6 ಯೋಬ 1:7, 8 ಓದಿ. ಸ್ವರ್ಗದಲ್ಲಿ ಆದ ಆ ಮೀಟಿಂಗ್‌ನ ಯೆಹೋವನೇ ನಡೆಸಿದನು. ಈಗಾಗ್ಲೇ ಸೈತಾನ ನಂಬಿಗಸ್ತ ಯೋಬನ ಮೇಲೆ ಒಂದು ಕಣ್ಣಿಟ್ಟಿದ್ದ ಅಂತ ಯೆಹೋವನಿಗೆ ಗೊತ್ತಿತ್ತು. ಹಾಗಾಗಿ ಆ ಮೀಟಿಂಗ್‌ನಲ್ಲಿ ಯೆಹೋವ ಸೈತಾನನಿಗೆ “ನನ್ನ ಸೇವಕನಾದ ಯೋಬನನ್ನ ಗಮನಿಸಿದ್ಯಾ?” ಅಂತ ಕೇಳಿದನು. ಯೆಹೋವ ತನಗಿದ್ದ ಅಧಿಕಾರ ಮತ್ತು ಶಕ್ತಿ ಬಳಸಿ ಹೇಗೆ ಯೋಬನಿಗೆ ಸಹಾಯ ಮಾಡಿದನು ಅಂತ ನೋಡೋಣ.
7. ಮನುಷ್ಯರು ಯೆಹೋವನನ್ನ ಯಾಕೆ ಆರಾಧಿಸ್ತಾರೆ ಅಂತ ಯೋಬ 1:10, 11ರಲ್ಲಿ ಸೈತಾನ ಹೇಳಿದ್ದಾನೆ?
7 ಯೋಬ 1:10, 11 ಓದಿ. ಯೆಹೋವ ವಿಶ್ವದ ರಾಜನಾಗಿದ್ದಾನೆ. ಆತನು ಯಾವಾಗ್ಲೂ ತನಗಿರೋ ಅಧಿಕಾರನ, ಶಕ್ತಿನ ನ್ಯಾಯವಾಗಿ ಬಳಸ್ತಾನೆ. (ಯೆರೆ. 32:17; ದಾನಿ. 4:35) ಆದ್ರೆ ‘ಯೆಹೋವ ತನ್ನ ಅಧಿಕಾರನ ತಪ್ಪಾಗಿ ಬಳಸ್ತಿದ್ದಾನೆ, ಯೋಬನ ತರ ಇರೋ ಜನ್ರನ್ನ ಲಂಚ ಕೊಟ್ಟು ತನಗೆ ಆರಾಧನೆ ಮಾಡೋ ತರ ಬುಟ್ಟಿಗೆ ಹಾಕೊಳ್ತಿದ್ದಾನೆ’ ಅಂತ ಸೈತಾನ ಆರೋಪ ಹಾಕಿದ. ಅಷ್ಟೇ ಅಲ್ಲ, ದೇವರನ್ನ ಆರಾಧಿಸೋರು ಕೂಡ ಸ್ವಾರ್ಥ ಆಸೆಯಿಂದ ಇದನ್ನ ಮಾಡ್ತಿದ್ದಾರೆ ಅಂತ ಹೇಳಿದ. ಇದನ್ನೆಲ್ಲಾ ಕೇಳಿಸ್ಕೊಂಡಾಗ ಯೆಹೋವ ದೇವರು ಏನು ಮಾಡಿದನು?
8-9. ಯೆಹೋವ ಸೈತಾನನಿಗೆ ಯಾವ ಮಿತಿಯನ್ನಿಟ್ಟನು ಮತ್ತು ಯಾಕೆ? (ಯೋಬ 1:12) (ಚಿತ್ರ ನೋಡಿ.)
8 ಯೋಬ 1:12 ಓದಿ. ಯೆಹೋವ ದೇವರು ಸೈತಾನನಿಗೆ ಒಂದು ಬೌಂಡರಿ ಇಟ್ಟನು, ಅದ್ರ ಒಳಗೇ ಅವನು ಪರೀಕ್ಷೆ ಮಾಡಬೇಕಿತ್ತು. ಯೆಹೋವ ಎಲ್ರ ಮುಂದೆ ಸೈತಾನನಿಗೆ, “[ಯೋಬನನ್ನ] ಮಾತ್ರ ನೀನು ಮುಟ್ಟಬಾರದು!” ಅಂತ ಹೇಳಿದನು. ನೋಡಿದ್ರಾ, ಯೆಹೋವನು ಸೈತಾನನಿಗೆ ಒಂದು ಮಿತಿಯನ್ನ ಇಟ್ಟನು. ಆ ಬೌಂಡರಿನ ದಾಟಿ ಹೋಗೋ ಅಧಿಕಾರ ಆಗಲಿ, ಶಕ್ತಿಯಾಗಲಿ ಸೈತಾನನಿಗೆ ಇರಲಿಲ್ಲ. ಹಾಗಾಗಿ ಯೆಹೋವ ಹೇಳಿದ್ದನ್ನ ಬೇರೆ ದಾರಿಯಿಲ್ಲದೆ ಸೈತಾನ ಪಾಲಿಸಬೇಕಿತ್ತು. ಇವತ್ತೂ ಅಷ್ಟೇ, ಸೈತಾನನಿಗೆ ಯೆಹೋವ ಏನು ಮಾಡೋಕೆ ಅನುಮತಿ ಕೊಟ್ಟಿದ್ದಾನೋ ಅದನ್ನಷ್ಟೇ ಅವನ ಕೈಯಲ್ಲಿ ಮಾಡೋಕ್ಕಾಗೋದು. ಯೆಹೋವ ದೇವರು ತನಗಿದ್ದ ಅಧಿಕಾರನ, ಶಕ್ತಿಯನ್ನ ಬಳಸಿ ಯೋಬನನ್ನ ಸೈತಾನನಿಂದ ಕಾಪಾಡಿದನು ಮತ್ತು ತಾನು ಎಷ್ಟು ನ್ಯಾಯವಂತ ಅಂತನೂ ತೋರಿಸಿದನು.
9 ಯೋಬನ ವಿರುದ್ಧ ಸೈತಾನ ಮಾಡಿದ ಎಲ್ಲ ಪ್ರಯತ್ನಗಳು ಮೊದಲಿಗೆ ಸಂಪೂರ್ಣವಾಗಿ ಮಣ್ಣುಪಾಲಾಯ್ತು. ಯೋಬ ಯೆಹೋವನಿಗೆ ತುಂಬ ನಿಯತ್ತಾಗಿ ನಡ್ಕೊಂಡ. (ಯೋಬ 1:22) ಇಷ್ಟೆಲ್ಲಾ ಆದ್ರೂ ಸೈತಾನ, ಯೋಬನನ್ನ ಪರೀಕ್ಷೆ ಮಾಡೋದನ್ನ ಸೈತಾನ ನಿಲ್ಲಿಸಲಿಲ್ಲ.
ಎಲ್ಲರ ಮುಂದೆ ಸೈತಾನ ತನ್ನ ಸವಾಲನ್ನ ಹೇಳೋಕೆ ಯೆಹೋವ ಅವಕಾಶ ಕೊಟ್ಟನು (ಪ್ಯಾರ 8-9 ನೋಡಿ)
10. ಸೈತಾನ ಯೋಬನನ್ನ ಇನ್ನೊಂದು ಸಲ ಪರೀಕ್ಷೆ ಮಾಡೋಕೆ ಯೆಹೋವ ಯಾಕೆ ಬಿಟ್ಟನು? (ಯೋಬ 2:2-6)
10 ಯೋಬ 2:2-6 ಓದಿ. ಈ ಸಲ ಸೈತಾನ ಯೋಬನ ಮೇಲೆ ಇನ್ನೂ ಕಠಿಣ ಪರೀಕ್ಷೆ ತರ್ತಾನೆ. ಯೋಬನಿಗೆ ಪ್ರಾಣ ಹೋಗೋ ಪರಿಸ್ಥಿತಿ ಬಂದ್ರೆ ಖಂಡಿತ ಅವನು ದೇವರನ್ನ ಬೈತಾನೆ ಅಂತ ಅವನು ಹೇಳ್ತಾನೆ. ಸೈತಾನನ ಈ ಪ್ರಶ್ನೆಗೆ ಉತ್ರ ಕೊಡೋಕ್ಕೋಸ್ಕರ ಯೆಹೋವ ದೇವರು, ನಂಬಿಗಸ್ತ ಮನುಷ್ಯನಾದ ಯೋಬನನ್ನ ಇನ್ನೊಂದು ಸಲ ಪರೀಕ್ಷೆ ಮಾಡೋಕೆ ಸೈತಾನನಿಗೆ ಅವಕಾಶ ಕೊಡ್ತಾನೆ. ಆದ್ರೆ ಈ ಸಲ ಕೂಡ ಸೈತಾನನಿಗೆ ಇನ್ನೊಂದು ಮಿತಿ ಇಡ್ತಾನೆ. ಯೆಹೋವ ಯಾವ ಮಿತಿ ಇಟ್ಟನು? ‘ಯೋಬನ ಜೀವ ಮಾತ್ರ ತೆಗಿಬೇಡ’ ಅನ್ನೋ ಷರತ್ತನ್ನ ಯೆಹೋವ ದೇವರು ಇಟ್ಟನು. ಸೈತಾನ ಬೇರೆ ದಾರಿ ಇಲ್ದೆ ಯೆಹೋವ ಇಟ್ಟ ಮಿತಿಯೊಳಗೇನೇ ತನ್ನ ಕೆಲಸ ಮಾಡಬೇಕಿತ್ತು. ಯೆಹೋವ ಇಟ್ಟ ಮಿತಿನ ದಾಟಿ ಹೋಗೋಕೆ ಸೈತಾನನಿಗೆ ಆಗ್ಲಿಲ್ಲ. ಇದ್ರಿಂದ ಎಲ್ಲದ್ರ ಮೇಲೆ ತನಗೆ ಅಧಿಕಾರ ಇದೆ, ಎಲ್ಲನೂ ತನ್ನ ನಿಯಂತ್ರಣದಲ್ಲೇ ಇದೆ ಅಂತ ಯೆಹೋವ ತೋರಿಸ್ಕೊಟ್ಟನು.
ಯೋಬನ ಕಷ್ಟಗಳನ್ನೆಲ್ಲ ತೆಗೆದುಹಾಕಿದನು
11. ಯೋಬನ ಕಷ್ಟಗಳನ್ನ ತೆಗೆದು ಹಾಕಿದ್ಮೇಲೆ ಯೆಹೋವ ಅವನನ್ನ ಹೇಗೆ ಆಶೀರ್ವದಿಸಿದನು? (ಯೋಬ 42:10-13)
11 ಯೋಬ 42:10-13 ಓದಿ. ಆರು ಮೂರು ಆಗ್ಲಿ, ಮೂರು ಆರು ಆಗ್ಲಿ ಯೋಬ ಅಂತೂ ತನ್ನ ನಿಷ್ಠೆ ಬಿಟ್ಕೊಡಲ್ಲ ಅಂತ ತೋರಿಸ್ಕೊಟ್ಟ. ಹಾಗಾಗಿ ಯೋಬನ ಮೇಲೆ ಸೈತಾನ ತರ್ತಿದ್ದ ಪರೀಕ್ಷೆಗಳಿಗೆ ಯೆಹೋವ ಒಂದು ಫುಲ್‌ಸ್ಟಾಪ್ ಹಾಕಿದನು. ಅವನ ಎಲ್ಲ ಕಷ್ಟಗಳನ್ನ ತೆಗೆದುಹಾಕಿದನು. ಹೀಗೆ ಇನ್ನೊಂದು ಸಲ ಸೈತಾನ, ಯೆಹೋವನ ಮುಂದೆ ಕೈಲಾಗದೇ ಗಪ್‌ಚುಪ್ ಅಂತ ಇರಬೇಕಾಯ್ತು. ಇದಾದ್ಮೇಲೆ ಇನ್ಯಾವತ್ತೂ ತನ್ನ ಪ್ರೀತಿಯ ಸೇವಕನಾದ ಯೋಬನನ್ನ ಮತ್ತೆ ನೇರವಾಗಿ ಪರೀಕ್ಷೆ ಮಾಡೋಕೆ ಯೆಹೋವನು ಸೈತಾನನಿಗೆ ಅನುಮತಿ ಕೊಡ್ಲಿಲ್ಲ.
12. ಯೆಹೋವನು ತನ್ನ ಕೆಲವು ಆರಾಧಕರನ್ನ ಹೇಗೆ ಕಾಪಾಡಿದ್ದಾನೆ?
12 ಈ ಕೊನೆ ದಿನಗಳಲ್ಲಿ ಯೆಹೋವನು ತನ್ನ ಶಕ್ತಿ ಬಳಸಿ ಎಷ್ಟೋ ಜನ್ರನ್ನ ಕಾಪಾಡಿರೋ ಅನುಭವಗಳಿವೆ. ಉದಾಹರಣೆಗೆ, 1945ರಲ್ಲಿ ನಾಜ಼ಿ ಸೆರೆ ಶಿಬಿರದಲ್ಲಿದ್ದ 230 ಯೆಹೋವನ ಸಾಕ್ಷಿಗಳು ಸಾವಿನ ನಡಿಗೆಯನ್ನು ಪಾರಾದ್ರು. ಆಗ ತಮಗಾದ ಆ ಭಯಂಕರ ಅನುಭವವನ್ನ ವಿವರಿಸ್ತಾ ಅವರು ಹೀಗೆ ಹೇಳ್ತಾರೆ, “ನಾವು ಸುಮಾರು ಸಮಯದಿಂದ ಹಲವಾರು ಕಷ್ಟಗಳನ್ನ ಎದುರಿಸಬೇಕಾಯ್ತು. ಒಂದು ರೀತಿಯಲ್ಲಿ ಬೆಂಕಿಯ ಕುಲುಮೆಯಿಂದ ನಾವು ಪಾರಾಗಿದ್ದೀವಿ ಅಂತ ಹೇಳಬಹುದು. ಬೆಂಕಿ ನಮ್ಮನ್ನ ಸುಡೋದು ಬಿಡಿ, ಅದ್ರ ವಾಸನೆ ಕೂಡ ನಮ್ಮ ಮೈಗೆ ಅಂಟಲಿಲ್ಲ . . . ನಮಗೆ ಯೆಹೋವ ಪೂರ್ತಿ ಶಕ್ತಿಯನ್ನ ಕೊಟ್ಟಿದ್ದಾನೆ. ನಮಗೀಗ ಒಂದೇ ಒಂದು ಆಸೆ ಇದೆ . . . ಈ ಸಿಂಹದ ಬೋನಿಂದ ಬಿಡುಗಡೆಯಾದ ತಕ್ಷಣ ನಾವು ಯೆಹೋವನನ್ನ . . . ಪೂರ್ಣ ಮನಸ್ಸಿನಿಂದ ಶಾಶ್ವತವಾಗಿ ಆರಾಧಿಸೋ ಅವಕಾಶ ಸಿಗಬೇಕು. ಇದೇ ನಮ್ಗೆ ಸಿಗೋ ದೊಡ್ಡ ಆಶೀರ್ವಾದ.”—ದಾನಿಯೇಲ 3:27; 6:22 ಹೋಲಿಸಿ.
13. ಕಷ್ಟಗಳು ಬಂದಾಗ ನಾವು ಯೆಹೋವನ ಬಗ್ಗೆ ಏನನ್ನ ನೆನಪು ಮಾಡ್ಕೊಬೇಕು? (ಚಿತ್ರಗಳನ್ನ ನೋಡಿ.)
13 ನಮಗೂ ಜೀವನದಲ್ಲಿ ಕಷ್ಟ ಬಂದಾಗ ಸಿಂಹದ ಬೋನಿನಲ್ಲಿ ಬಿದ್ದಂಗೆ ಅನ್ಸುತ್ತೆ. (1 ಪೇತ್ರ 5:8-10) ಆಗ ಕೆಲವೊಮ್ಮೆ ನಾವು ಕುಗ್ಗಿ ಹೋಗಬಹುದು ಅಥವಾ ಈ ಕಷ್ಟಗಳಿಗೆ ಕೊನೆನೇ ಇಲ್ವೇನೋ ಅಂತ ಅನಿಸಬಹುದು. ಆಗೆಲ್ಲ ನಾವು ಯೋಬನ ಅನುಭವನ ನೆನಪು ಮಾಡ್ಕೊಬೇಕು, ಅದು ನಮಗೆ ಸಹಾಯ ಮಾಡುತ್ತೆ. ಯೆಹೋವನಿಗೆ ನಮ್ಮ ಕಷ್ಟಗಳನ್ನ ತೆಗೆದುಹಾಕೋ ಸಾಮರ್ಥ್ಯ ಮತ್ತು ಶಕ್ತಿ ಇದೆ ಅಂತ ನಾವು ಪೂರ್ತಿಯಾಗಿ ನಂಬಬೇಕು. ಆತನು ಬಯಸಿದ್ರೆ ನಮ್ಮ ಕಷ್ಟಗಳನ್ನ ಈಗಲೇ ತೆಗೆದುಹಾಕಬಹುದು ಅಥವಾ ಮುಂದೆನೂ ತೆಗೆದುಹಾಕಬಹುದು. ಒಂದಂತೂ ನಿಜ, ಯೆಹೋವನು ಸೈತಾನನ ಲೋಕಕ್ಕೆ ಯಾವಾಗ ಅಂತ್ಯ ತರಬೇಕು ಅನ್ನೋ ಸಮಯನ ಈಗಾಗ್ಲೇ ಫಿಕ್ಸ್ ಮಾಡಿದ್ದಾನೆ. ಅದನ್ನ ದಾಟಿ ಖಂಡಿತ ಈ ಲೋಕ ಇನ್ನು ಒಂದು ದಿನಾನೂ ಮುಂದುವರಿಯಲ್ಲ.
ಯೆಹೋವ, ತನ್ನ ಸೇವಕರ ಕಷ್ಟಗಳಿಗೆ ಫುಲ್‌ಸ್ಟಾಪ್ ಹಾಕ್ತಾನೆ (ಪ್ಯಾರ 13 ನೋಡಿ)
ನಿಯತ್ತಾಗಿ ಇರೋರಂದ್ರೆ ಯೆಹೋವನಿಗೆ ಅಚ್ಚುಮೆಚ್ಚು
14-15. ತನ್ನ ಆರಾಧಕರನ್ನ ಆಶೀರ್ವದಿಸೋಕೆ ಯೆಹೋವನಿಗೆ ಹೇಗೆ ಅನ್ಸುತ್ತೆ? (ಯೋಬ 14:15) ( ಚಿತ್ರನ ನೋಡಿ.)
14 ಯೋಬ 14:15 ಓದಿ. ನಂಬಿಗಸ್ತ ಆರಾಧಕರು ಅಂದ್ರೆ ಯೆಹೋವನಿಗೆ ಯಾವಾಗ್ಲೂ ಅಚ್ಚುಮೆಚ್ಚು. ಹೀಗೆ ತೀರಿ ಹೋಗಿರೋರನ್ನ ಆತನು ಮತ್ತೆ ಎಬ್ಬಿಸೋಕೆ ತುದಿಗಾಲಲ್ಲಿ ಇದ್ದಾನೆ. ಆದಷ್ಟು ಬೇಗ ಸಾವಿಂದ ಆಗ್ತಿರೋ ನೋವನ್ನ ಆತನು ಪೂರ್ತಿಯಾಗಿ ತೆಗೆದುಹಾಕ್ತಾನೆ. ಅವರು ಕಳ್ಕೊಂಡ ಖುಷಿನ ಮತ್ತೆ ಕೊಡ್ತಾನೆ.—ಯೆಶಾ. 65:17.
15 ಯೋಬ ತನ್ನ ಕಷ್ಟಗಳೆಲ್ಲ ಮುಗಿದ ಮೇಲೂ ಸೈತಾನನ ಲೋಕದಲ್ಲೇ ಬದುಕಬೇಕಾಯ್ತು. ಹಾಗಿದ್ರೂ ಯೆಹೋವ ಅವನಿಗೆ ಆರೋಗ್ಯ ಮತ್ತು ಇನ್ನು ಎಷ್ಟೋ ವಿಷ್ಯಗಳನ್ನ ಕೊಟ್ಟು ಆಶೀರ್ವದಿಸಿದನು. ಇದು ಭವಿಷ್ಯದಲ್ಲಿ ಯೆಹೋವ ಇನ್ನು ಎಷ್ಟೋ ವಿಷ್ಯಗಳಲ್ಲಿ ತನ್ನನ್ನ ಆಶೀರ್ವದಿಸ್ತಾನೆ ಅಂತ ಯೋಬನಿಗೆ ತೋರಿಸಿತು. ತನಗೆ ನಿಯತ್ತಾಗಿರೋರು ಯಾವಾಗ್ಲೂ ಖುಷಿಯಾಗಿ ಇರಬೇಕು ಅಂತ ಆತನು ಇಷ್ಟಪಡ್ತಾನೆ ಅಂತ ಇದ್ರಿಂದ ನಮಗೆ ಗೊತ್ತಾಗುತ್ತೆ. ಅದಕ್ಕೆ ಈ ಭೂಮಿಯಲ್ಲಿ ಪರಿಪೂರ್ಣವಾಗಿ ಜೀವನವನ್ನ ಆನಂದಿಸೋ ಅವಕಾಶವನ್ನ ಯೆಹೋವನು ನಮಗೆ ಕೊಟ್ಟಿದ್ದಾನೆ. (ಪ್ರಕ. 21:3, 4) ವಿಶ್ವದ ರಾಜನಾಗಿರೋ ಯೆಹೋವನಿಗೆ ನಮ್ಮೆಲ್ಲರಿಗೂ ಒಳ್ಳೆ ಜೀವನ ಕೊಡಬೇಕು ಆಸೆ ಆತನಿಗೆ ಇದೆ. ಇದ್ರ ಬಗ್ಗೆ ನಾವು ಯೋಚ್ನೆ ಮಾಡಿದಾಗ ನಮಗೆ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಬೇಕಾಗಿರೋ ಬಲ ಸಿಗುತ್ತಲ್ವಾ?
ಪರೀಕ್ಷೆ ಆದ ನಂತರ, ಯೋಬ ಮತ್ತು ಅವನ ಹೆಂಡ್ತಿ ತುಂಬ ಆಶೀರ್ವಾದ ಪಡ್ಕೊಂಡ್ರು (ಪ್ಯಾರ 14-15 ನೋಡಿ)
16. ವಿಶ್ವದ ರಾಜನಾದ ಯೆಹೋವನ ಮೇಲೆ ನಂಬಿಕೆ ಇಡೋಕೆ ನಮಗೆ ಇನ್ಯಾವ ಕಾರಣ ಇದೆ?
16 ಯೋಬ ಸುಮಾರು ವರ್ಷ ಬದುಕಿದ ನಂತರ ಕೊನೆಗೊಂದು ದಿನ ತೀರಿಹೋದ. ಆದ್ರೆ ವಿಶ್ವದ ರಾಜನಾಗಿರೋ ಯೆಹೋವನು ಸರ್ವಶಕ್ತ ದೇವರು. ಆತನಿಗೆ ಮರಣದ ಮೇಲೂ ಅಧಿಕಾರ ಇದೆ. (ಧರ್ಮೋ. 32:39) ಹಾಗಾಗಿ ತಾನು ಯಾರನ್ನ ಪ್ರೀತಿಸ್ತಾನೋ ಅವ್ರನ್ನ ತಾನು ನಿರ್ಧರಿಸಿರೋ ಸಮಯದಲ್ಲಿ ಮತ್ತೆ ಜೀವಂತವಾಗಿ ಎಬ್ಬಿಸ್ತಾನೆ. ಇದನ್ನ ಯಾರಿಂದಲೂ ತಡಿಯೋಕೆ ಆಗಲ್ಲ.—ರೋಮ. 8:38, 39.
ಯೆಹೋವನನ್ನ ಪೂರ್ತಿ ನಂಬಿ
17. ಯೆಹೋವನ ಜನ್ರನ್ನ ನಾಶ ಮಾಡೋಕೆ ಸೈತಾನ ಹಾಕಿರೋ ಕುತಂತ್ರಗಳೆಲ್ಲ ಹೇಗೆ ಮಣ್ಣು ಪಾಲಾಗಿದೆ?
17 ಯೆಹೋವನನ್ನ ಪೂರ್ತಿಯಾಗಿ ನಂಬೋಕೆ ಯೋಬ ಪುಸ್ತಕ ನಮಗೆ ತುಂಬ ಬಲವಾದ ಕಾರಣಗಳನ್ನ ಕೊಡುತ್ತೆ. ಯೆಹೋವನ ಜನ್ರನ್ನ ನಿರ್ನಾಮ ಮಾಡಬೇಕಂತ ಸೈತಾನ ಪ್ರಯತ್ನ ಹಾಕ್ತಾ ಬಂದಿದ್ದಾನೆ. ಆದ್ರೆ ಅವನು ಪ್ರತಿ ಸಾರಿ ಸೋತು ಹೋಗಿದ್ದಾನೆ. ಇದನ್ನ ನೋಡಿದಾಗ ನಮಗೆ ಎಷ್ಟು ಖುಷಿ ಆಗುತ್ತಲ್ವಾ? ಯೆಹೋವನೇ ವಿಶ್ವದ ರಾಜ ಅನ್ನೋದಕ್ಕೆ 90 ಲಕ್ಷ ಯೆಹೋವನ ಆರಾಧಕರು ಇವತ್ತು ಜೀವಂತ ಸಾಕ್ಷಿಯಾಗಿದ್ದಾರೆ. ಯೆಹೋವನ ಜನ್ರ ವಿರುದ್ಧ ಪದೇಪದೇ ಎಷ್ಟೇ ಆಯುಧಗಳನ್ನ ಸೈತಾನ ತಯಾರಿಸಿದ್ರೂ ಅದ್ಯಾವುದೂ ಜಯ ಸಾಧಿಸಿಲ್ಲ. (ಯೆಶಾ. 54:17) ಬಲಿಷ್ಠವಾಗಿರೋ ದೇಶಗಳು, ಧಾರ್ಮಿಕ ಸಂಘಟನೆಗಳು ಕೂಡ ಯೆಹೋವನ ಜನ್ರನ್ನ ಅವ್ರ ನಂಬಿಕೆಯನ್ನ ನಾಶ ಮಾಡೋಕಾಗಲಿಲ್ಲ. ಸೈತಾನ ಸುಳ್ಳುಗಾರ, ಮೋಸಗಾರ ಮತ್ತು ಕೊಲೆಗಾರ ಆಗಿದ್ದಾನೆ. ನಾವು ಸಿಹಿಸುದ್ದಿ ಸಾರಿದಾಗ ಈ ವಿಷ್ಯ ಜನರೆಲ್ಲರಿಗೂ ಗೊತ್ತಾಗುತ್ತೆ. ಇದನ್ನ ತಡಿಯೋಕೆ ಯಾರಿಂದನೂ ಆಗಲ್ಲ. ನಾವು ಸತ್ರೂ ಯೆಹೋವ ನಮ್ಮನ್ನ ಮತ್ತೆ ಎಬ್ಬಿಸ್ತಾನೆ. ಹಾಗಾಗಿ ಸಾವು ಕೂಡ ನಮ್ಮ ನಿಯತ್ತನ್ನ ಮುರಿಯೋಕೆ ಆಗಲ್ಲ.—ಹೋಶೇ. 13:14.
18. ಭವಿಷ್ಯವನ್ನ ಎದುರಿಸೋಕೆ ನಾವ್ಯಾಕೆ ಭಯಪಡಬೇಕಾಗಿಲ್ಲ?
18 ಯೋಬನ ಜೀವನದ ಬಗ್ಗೆ ನಾವು ಧ್ಯಾನ ಮಾಡ್ತಾ ಹೋದ ಹಾಗೆ ಭವಿಷ್ಯದಲ್ಲಿ ಬರೋ ಕಷ್ಟಗಳನ್ನ ನಿಭಾಯಿಸೋಕೆ ಬೇಕಾಗಿರೋ ಧೈರ್ಯ ನಮಗೆ ಸಿಗುತ್ತೆ. ಮಹಾ ಸಂಕಟದಲ್ಲಿ ಯೆಹೋವನ ಜನ್ರು ಬಲಹೀನರ ತರ ಸೈತಾನನಿಗೆ ಮತ್ತು ಅವನ ಪಕ್ಷದವ್ರಿಗೆ ಕಾಣಿಸಬಹುದು. ಆದ್ರೆ ಯೋಬನ ದಿನದಲ್ಲಾದ ಹಾಗೆ ಯೆಹೋವನು ಎಲ್ಲವನ್ನ ತನ್ನ ನಿಯಂತ್ರಣಕ್ಕೆ ತಗೊಳ್ತಾನೆ. ತನ್ನ ಜನ್ರಿಗೆ ಶಾಶ್ವತ ಹಾನಿ ಮಾಡೋಕೆ ಆತನು ಸೈತಾನನನ್ನ ಯಾವತ್ತೂ ಬಿಡಲ್ಲ. ಮನುಷ್ಯರೆಲ್ಲರಿಗೆ ಸೈತಾನ ಕೊಡ್ತಾ ಇರೋ ಎಲ್ಲ ಕಷ್ಟಗಳನ್ನ ಅಂತ್ಯ ಮಾಡೋ ಸಮಯ ಬಾಗಿಲಲ್ಲೇ ಇದೆ. ಆಗ ಸೈತಾನ ಮತ್ತು ಅವನ ದೂತರನ್ನ ಸಾವಿರ ವರ್ಷಗಳ ಕಾಲ ಅಗಾಧ ಸ್ಥಳಕ್ಕೆ ಹಾಕಲಾಗುತ್ತೆ. (ಲೂಕ 8:31; ಪ್ರಕ. 20:1-3) ಆಮೇಲೆ ಅವರನ್ನೆಲ್ಲ ಸಂಪೂರ್ಣವಾಗಿ ನಾಶ ಮಾಡಲಾಗುತ್ತೆ. (ಪ್ರಕ. 20:10) ಯೆಹೋವ ಹೇಳಿದ ಹಾಗೆ ಸೈತಾನನನ್ನ ಜಜ್ಜಿ ಹಾಕಲಾಗುತ್ತೆ. ಹೀಗೆ ಸೈತಾನ ಸರ್ವನಾಶ ಆದಾಗ ಅವನ ಈ ಹೆಸ್ರನ್ನ ಇನ್ಯಾರೂ ಇನ್ಯಾವತ್ತೂ ಎತ್ತಲ್ಲ.—ಆದಿ. 3:15; ರೋಮ. 16:20.
19. ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಟ್ಟವ್ರಿಗೆ ಮುಂದೆ ಯಾವ ಆಶೀರ್ವಾದ ಸಿಗುತ್ತೆ? (ಚಿತ್ರ ನೋಡಿ.)
19 ಯೆಹೋವನ ಆರಾಧಕರು ಹೊಸ ಲೋಕದಲ್ಲಿ ಪರಿಪೂರ್ಣವಾಗಿ, ಸಂತೋಷವಾಗಿ ಜೀವಿಸೋ ಸಮಯಕ್ಕಾಗಿ ಕಾಯ್ತಾ ಇದ್ದಾರೆ. ಆಗ ನಮ್ಮ ಜೀವನ ನಾವು ಊಹಿಸಿರೋದಕ್ಕಿಂತ ತುಂಬ ಚೆನ್ನಾಗಿರುತ್ತೆ. “ನೋಡು, ನಾನು ಎಲ್ಲ ಹೊಸದಾಗಿ ಮಾಡ್ತಾ ಇದ್ದೀನಿ” ಅಂತ ಯೆಹೋವನೇ ಹೇಳಿದ್ದಾನೆ. (ಪ್ರಕ. 21:5) ಆಗ ಏನೆಲ್ಲ ಹೊಸದಾಗುತ್ತೆ ಗೊತ್ತಾ? ಮನುಷ್ಯನ ಇತಿಹಾಸದಲ್ಲಿ ಇಲ್ಲಿವರೆಗೂ ನೋಡದೆ ಇರೋ ಶಾಂತಿ, ನೆಮ್ಮದಿ ತುಂಬಿ ತುಳುಕುತ್ತೆ. ಸೈತಾನ ಮತ್ತು ಅವನ ದೂತರಿಂದ ನಮಗೆ ಯಾವ ತೊಂದರೆನೂ ಇರಲ್ಲ. ಆಗ ನಮಗೆ ಎಷ್ಟು ನೆಮ್ಮದಿ ಆಗುತ್ತೆ ಅಂತ ಯೋಚ್ನೆ ಮಾಡಿ. ಈ ಸೈತಾನನ ಲೋಕದಲ್ಲಿ ಹಲವಾರು ಚಿಂತೆಗಳಿಂದಾಗಿ ನಾವು ಎಷ್ಟೋ ದಿನ ನಿದ್ದೆಯಿಲ್ಲದೆ ಜೀವಿಸ್ತಿರಬಹುದು. ಆದ್ರೆ ಆಗ ಯಾವುದೇ ಚಿಂತೆಯಿಂದ ನಾವು ಒಂದು ರಾತ್ರಿ ಕೂಡ ನಿದ್ದೆಗೆಡಲ್ಲ. ಯಾರೆಲ್ಲಾ ಹರ್ಮಗೆದೋನನ್ನ ಪಾರಾಗ್ತಾರೋ, ಅವರು ಎಷ್ಟೊಂದು ಅದ್ಭುತಗಳನ್ನ ನೋಡ್ತಾರೆ! ಎಷ್ಟೋ ಜನ ಪರಿಪೂರ್ಣ ಆರೋಗ್ಯ ಪಡೆಯೋದನ್ನ, ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರೋದನ್ನ ನೋಡ್ತಾರೆ. ಆಗ ನಾವು ಸ್ವರ್ಗದಲ್ಲಿರೋ ನಮ್ಮ ತಂದೆ ಯೆಹೋವ ಅಂದ್ಕೊಂಡ ಹಾಗೆ ‘ನಿಜ ಜೀವನ’ ಅಂದ್ರೇನು ಅಂತ ತಿಳ್ಕೊತೀವಿ.
ಹಿಂದೆ ಪರೀಕ್ಷೆಗಳನ್ನ ತಾಳ್ಮೆಯಿಂದ ಎದುರಿಸಿದವರು ಯೆಹೋವನಿಂದ ಆಶೀರ್ವಾದ ಪಡ್ಕೊತಾರೆ (ಪ್ಯಾರ 19 ನೋಡಿ)
20. ನೀವೇನು ನಿರ್ಧಾರ ಮಾಡಿದ್ದೀರಾ?
20 ಈ ಕೊನೇ ದಿನಗಳಲ್ಲಿ ನಾವು ಇನ್ನು ಎಷ್ಟೋ ಕಷ್ಟಗಳನ್ನ ಎದುರಿಸಬೇಕಾಗಿದೆ. ಹಾಗಾಗಿ ವಿಶ್ವದ ರಾಜನಾದ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಡೋಣ. ಆತನಿಗೆ ಬೆಂಬಲ ಕೊಡೋಣ. ಆತನ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ತೋರಿಸೋಣ. ಅಷ್ಟೇ ಅಲ್ಲ ಸೈತಾನ ಸುಳ್ಳುಗಾರ ಅಂತ ನಿರೂಪಿಸೋಣ. ಹಾಗಾಗಿ ನಾವೆಲ್ಲ ವಿಶ್ವದ ರಾಜನಾದ ಯೆಹೋವ ತರೋ ರಾಜ್ಯಕ್ಕಾಗಿ ಎದುರು ನೋಡೋಣ. ಅಲ್ಲಿವರೆಗೂ ಆತನಿಗೆ ನಿಯತ್ತಾಗಿ ಸೇವೆ ಮಾಡ್ತಾ ಇರೋಣ. ಆಗ ಆತನು ನಮಗೆ ಲೆಕ್ಕ ಮಾಡಲಾಗದಷ್ಟು ಆಶೀರ್ವಾದಗಳನ್ನ ಕೊಡ್ತಾನೆ!
ಗೀತೆ 153 ಯೆಹೋವ ಕೊಡು ಧೈರ್ಯ