ಮೇ 25-31, 2026
ಗೀತೆ 135 ಯೆಹೋವನ ಸ್ನೇಹಪರ ಮನವಿ: “ನನ್ನ ಮಗನೇ, ವಿವೇಕಿಯಾಗಿರು”
ವಿವೇಚನೆ ಬಳಸಿ, ‘ಯಶಸ್ಸು ಗಳಿಸಿ!’
“ಒಂದು ವಿಷ್ಯದ ಬಗ್ಗೆ ಸೂಕ್ಷ್ಮ ವಿವೇಚನೆ ಇರುವವನು ಯಶಸ್ಸು ಪಡಿತಾನೆ.”—ಜ್ಞಾನೋ. 16:20.
ಈ ಲೇಖನದಲ್ಲಿ ಏನಿದೆ?
ಕಷ್ಟಗಳನ್ನ ಚೆನ್ನಾಗಿ ನಿಭಾಯಿಸೋಕೆ ವಿವೇಚನೆ ಸಹಾಯ ಮಾಡುತ್ತೆ. ಅದು ಹೇಗೆ ಅಂತ ನೋಡೋಣ.
1-2. (ಎ) ವಿವೇಚನೆ ಅಂದ್ರೆ ಏನು? (ಬಿ) ಅದ್ರಿಂದ ಏನು ಪ್ರಯೋಜನ?
ಜನ ನಿಮಗೆ ಕೊಡಬೇಕಾದ ಗೌರವವನ್ನ ಕೊಡದೆ ಯಾವತ್ತಾದ್ರೂ ಅವಮಾನ ಮಾಡಿದ್ದಾರಾ? ನಿಮ್ಮ ಬಗ್ಗೆ ಯಾವತ್ತಾದ್ರೂ ತಪ್ಪರ್ಥ ಮಾಡ್ಕೊಂಡಿದ್ದಾರಾ? ನಿಮಗೆ ಬೇಜಾರ್ ಮಾಡಿದ್ದಾರಾ? ಅಥವಾ ಒಂದು ಕಷ್ಟದ ನೇಮಕ ನೋಡಿ ಭಯ ಬಿದ್ದಿದ್ದೀರಾ? ಇಂಥ ಸನ್ನಿವೇಶಗಳಲ್ಲಿ ಯೆಹೋವನಿಗೆ ಇಷ್ಟ ಆಗೋ ತರ ಸರಿಯಾಗಿ ನಡ್ಕೊಳ್ಳೋದು ಕಷ್ಟಾನೇ. ಆದ್ರೆ ನಮ್ಮಲ್ಲಿ ಒಂದು ಗುಣ ಇದ್ರೆ ಎಷ್ಟೇ ಕಷ್ಟ ಆದ್ರೂ ನಾವು ಆತನಿಗೆ ಇಷ್ಟ ಆಗೋ ತರ ನಡ್ಕೊಬಹುದು. ಆ ಗುಣ ವಿವೇಚನೆ!
2 ವಿವೇಚನೆ ಅಂದ್ರೆ, ಒಂದು ವಿಷ್ಯ ನಡೆದಾಗ ಬರೀ ಮೇಲೆ-ಮೇಲೆ ನೋಡದೆ, ಅದ್ರ ಹಿಂದಿರೋ ಕಾರಣಗಳನ್ನ ಅರ್ಥ ಮಾಡ್ಕೊಳ್ಳೋದು. ಉದಾಹರಣೆಗೆ, ಒಂದು ವಿಷ್ಯ ನಡೆದಾಗ ಅಥವಾ ಯಾರಾದ್ರೂ ನಮ್ಮನ್ನ ನೋಯಿಸಿದಾಗ ‘ಯಾಕೆ ಹಿಂಗಾಯ್ತು? ಅವರು ಯಾಕೆ ಈ ತರ ನಡ್ಕೊಂಡ್ರು’ ಅಂತ ಯೋಚಿಸಿ ಕಾರಣಗಳನ್ನ ತಿಳ್ಕೊಳ್ಳೋದು ವಿವೇಚನೆ! ನಾವು ಈ ಗುಣ ತೋರಿಸಿದ್ರೆ ವಿವೇಕದಿಂದ, ಜಾಣತನದಿಂದ ನಡ್ಕೊತೀವಿ. ವಿವೇಚನೆ ಇರೋ ವ್ಯಕ್ತಿ ಹೇಗೆಲ್ಲಾ ನಡ್ಕೊಳ್ತಾನೆ? ಅವನು ತನ್ನ ‘ಮಾತಿನ ಮೇಲೆ ಹತೋಟಿ ಇಟ್ಕೊತಾನೆ.’ ಯಾವಾಗ ಮಾತಾಡಬೇಕು, ಯಾವಾಗ ‘ಸುಮ್ಮನಿರಬೇಕು’ ಅಂತ ಯೋಚಿಸ್ತಾನೆ. (ಜ್ಞಾನೋ. 10:19; ಕೀರ್ತ. 4:4) ತನ್ನ ಕೋಪನ ಕಂಟ್ರೋಲ್ ಮಾಡ್ಕೊಳ್ತಾನೆ. ಬೇರೆಯವರು ತಪ್ಪು ಮಾಡಿದಾಗ ಮನಸ್ಸಿಗೆ ಹಚ್ಕೊಳ್ಳದೇ ಬಿಟ್ಟು ಬಿಡ್ತಾನೆ. ಯಾರಾದ್ರೂ ಸಲಹೆ ಕೊಟ್ಟಾಗ ಮನಸಾರೆ ಸ್ವೀಕರಿಸ್ತಾನೆ. (ಜ್ಞಾನೋ. 19:20) ಅಷ್ಟೇ ಅಲ್ಲ, ಕೋಪ ತೋರಿಸೋ ಸನ್ನಿವೇಶ ಬಂದಾಗ್ಲೂ ಸರಿಯಾಗಿರೋದನ್ನೇ ಮಾಡ್ತಾನೆ. ಅವನು ಕಿರಿಚಾಡಲ್ಲ, ಕೂಗಾಡಲ್ಲ. ಇದ್ರಿಂದ ಯೆಹೋವನ ಮನಸ್ಸಿಗೂ ಖುಷಿಯಾಗುತ್ತೆ, ತನ್ನ ಗೌರವನೂ ಕಾಪಾಡ್ಕೊತಾನೆ. ಅವನಿಂದ ಬೇರೆಯವ್ರಿಗೆ ಯಾವ ತೊಂದ್ರೆನೂ ಆಗಲ್ಲ. ಈಗ ನಾವು ವಿವೇಚನೆ ತೋರಿಸಿದ ಮೂರು ಬೈಬಲ್ ಉದಾಹರಣೆ ನೋಡೋಣ. ಅವರು ಈ ಗುಣ ತೋರಿಸಿದ್ರಿಂದ ದೀನರಾಗಿರೋಕೆ, ಸಮಾಧಾನವಾಗಿರೋಕೆ ಮತ್ತು ಪೂರ್ತಿಯಾಗಿ ಯೆಹೋವನ ಮೇಲೆ ಆತ್ಕೊಳೋಕೆ ಹೇಗೆ ಸಹಾಯ ಆಯ್ತು ಅಂತ ಕಲಿಯೋಣ.
ಅಹಂಕಾರ ಅಲ್ಲ, ದೀನತೆ ತೋರಿಸಿ
3. ನಾಮಾನ ಯಾರು?
3 ನಮಗೆ ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ ತಗ್ಗಿಬಗ್ಗಿ ನಡೀಬೇಕು. ಅಹಂಕಾರನ ಬಿಟ್ಟು ಬಿಡಬೇಕು. (1 ಪೇತ್ರ 5:5) ವಿವೇಚನೆ ನಮಗೆ ದೀನತೆ ತೋರಿಸಿ ತಗ್ಗಿಬಗ್ಗಿ ನಡೆಯೋಕೆ ಸಹಾಯ ಮಾಡುತ್ತೆ. ಇದಕ್ಕೊಂದು ಒಳ್ಳೆ ಉದಾಹರಣೆ, ನಾಮಾನ. ಅವನು ಇಸ್ರಾಯೇಲಿನ ಉತ್ತರ ಭಾಗದಲ್ಲಿರೋ ಸಿರಿಯ ಅನ್ನೋ ರಾಜ್ಯದಲ್ಲಿ ಜೀವಿಸ್ತಿದ್ದ. ಆ ಸಿರಿಯ ಸೈನ್ಯದ ಮುಖ್ಯ ಸೇನಾಪತಿಯಾಗಿದ್ದ. ಆದ್ರೆ ಇವನಿಗೆ ಕುಷ್ಟರೋಗ ಇತ್ತು. ಅದ್ರಿಂದ ಅವನು ದಿನಾ ತುಂಬ ನರಳ್ತಿದ್ದ.—2 ಅರ. 5:1.
4. ನಾಮಾನ ಹೇಗೆ ವಿವೇಚನೆ ತೋರಿಸಿದ?
4 ನಾಮಾನನ ಮನೆಯಲ್ಲಿ ಇಸ್ರಾಯೇಲಿನ ಒಂದು ಪುಟ್ಟ ಹುಡುಗಿ ಕೆಲಸ ಮಾಡ್ತಿದ್ದಳು. ನಾಮಾನನಿಗೆ ಕುಷ್ಠರೋಗ ಇದೆ ಅಂತ ಗೊತ್ತಾದಾಗ ಅವಳು ನಾಮಾನನ ಹೆಂಡ್ತಿ ಹತ್ರ ಹೋಗಿ, ‘ಇಸ್ರಾಯೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆ. ಅವನು ಈ ಕಾಯಿಲೆಯನ್ನ ಗ್ಯಾರಂಟಿ ವಾಸಿ ಮಾಡ್ತಾನೆ’ ಅಂತ ಹೇಳಿದಳು. (2 ಅರ. 5:2, 3) ಆಗ ನಾಮಾನ, ‘ಇವಳು ಚೋಟುದ್ದ ಇದ್ದಾಳೆ. ಅದ್ರಲ್ಲೂ ನನ್ನ ಶತ್ರು ದೇಶದವಳು. ಇವಳ ಮಾತು ಕೇಳಿಬಿಟ್ರೆ ನನ್ನ ಕಾಯಿಲೆ ವಾಸಿ ಆಗಿ ಬಿಡುತ್ತಾ’ ಅಂತ ಅಂದ್ಕೊಬಹುದಿತ್ತು. ಆದ್ರೆ ಅವನು ಆ ತರ ಅಂದ್ಕೊಳ್ಳಲಿಲ್ಲ. ಅಹಂಕಾರ ತೋರಿಸದೆ ವಿವೇಚನೆ ತೋರಿಸ್ತಾ ಈ ಪುಟ್ಟ ಹುಡುಗಿ ಹೇಳಿದ ವಿಷ್ಯಗಳನ್ನ ಮನಸ್ಸಿಗೆ ತಗೊಂಡ. ಅದಕ್ಕೆ ಅವನು ಸಿರಿಯದ ರಾಜನ ಹತ್ರ ಹೋಗಿ, ‘ನಾನು ನನ್ನ ಕಾಯಿಲೆ ವಾಸಿ ಮಾಡ್ಕೊಳ್ಳೋಕೆ ಇಸ್ರಾಯೇಲಿಗೆ ಹೋಗಬೇಕು’ ಅಂತಾನೂ ಕೇಳಿದ.—2 ಅರ. 5:4, 5.
5. ನಾಮಾನ ಇಸ್ರಾಯೇಲಿಗೆ ಹೋದಾಗ ಏನಾಯ್ತು?
5 ನಾಮಾನ ಆಮೇಲೆ ಇಸ್ರಾಯೇಲಿನ ರಾಜನಾದ ಯೆಹೋರಾಮನ ಆಸ್ಥಾನಕ್ಕೆ ಬಂದ. ಇಲ್ಲಿ ತನ್ನ ಕಾಯಿಲೆ ವಾಸಿ ಆಗುತ್ತೆ ಅಂತ ಅವನು ಅಂದ್ಕೊಂಡ. ಆದ್ರೆ ಇವನ್ನ ನೋಡಿ ಇಸ್ರಾಯೇಲಿನ ರಾಜ, ‘ನಾನು ಹೇಗೆ ಇವನ ಕುಷ್ಠ ವಾಸಿ ಮಾಡಲಿ? ಇದೆಲ್ಲ ನೋಡಿದ್ರೆ ಸಿರಿಯದ ರಾಜ ಕಾಲು ಕೆರ್ಕೊಂಡು ನನ್ನ ಜೊತೆ ಯುದ್ಧ ಮಾಡೋಕೆ ಬರೋ ಕಾಣ್ತಿದೆ’ ಅಂತ ಭಯಪಡ್ತಾನೆ. ಈ ವಿಷ್ಯ ಪ್ರವಾದಿ ಎಲೀಷನ ಕಿವಿಗೆ ಬಿದ್ದಾಗ, ‘ಅವನನ್ನ ನನ್ನತ್ರ ಕಳಿಸ್ಕೊಡು’ ಅಂತ ರಾಜ ಯೆಹೋರಾಮನನ್ನ ಹೇಳ್ತಾನೆ. (2 ಅರ. 5:6-9) ಆಗ ನಾಮಾನ, ‘ಎಲೀಷ ನನ್ನನ್ನ ನೋಡೋಕೆ ಬರ್ತಾನೆ, ನನ್ನನ್ನ ಮಾತಾಡಿಸ್ತಾನೆ’ ಅಂತ ಅಂದ್ಕೊಳ್ತಾನೆ. ಆದ್ರೆ ನಾಮಾನ ಅಂದ್ಕೊಂಡಿದ್ದೆ ಒಂದು, ಆದ್ರೆ ಅಲ್ಲಿ ಆಗಿದ್ದೇ ಒಂದು. ಎಲೀಷ ಅವನನ್ನ ನೋಡೊಕ್ಕಾಗಲಿ, ಮಾತಾಡೊಕ್ಕಾಗಲಿ ಮನೆಯಿಂದ ಹೊರಗೆ ಬರಲಿಲ್ಲ. ಬದಲಿಗೆ ತನ್ನ ಸಂದೇಶವಾಹಕನ ಮೂಲಕ, ‘ನಾಮಾನ ವಾಸಿಯಾಗಬೇಕು ಅಂದ್ರೆ ಏನು ಮಾಡಬೇಕು’ ಅಂತ ಹೇಳಿ ಕಳುಹಿಸಿದ.—2 ಅರ. 5:10.
6. (ಎ) ನಾಮಾನನಿಗೆ ಯಾಕೆ ಸಿಟ್ಟು ಬಂತು? (ಬಿ) ನಾಮಾನನ ಸೇವಕರು ಹೇಗೆ ವಿವೇಚನೆ ತೋರಿಸಿದ್ರು ಮತ್ತು ಅದ್ರಿಂದ ಏನಾಯ್ತು? (2 ಅರಸು 5:13, 14)
6 ಸಂದೇಶವಾಹಕ ಹೇಳಿದ್ದನ್ನ ಕೇಳಿಸ್ಕೊಂಡಾಗ ನಾಮಾನನಿಗೆ “ತುಂಬ ಸಿಟ್ಟು ಬರುತ್ತೆ.” ಅದಕ್ಕೆ ವಾಪಸ್ ತನ್ನ ದೇಶಕ್ಕೆ ಹೋಗಬೇಕು ಅಂತ ನಿರ್ಧಾರ ಮಾಡ್ತಾನೆ. (2 ಅರ. 5:11, 12) ಯಾಕೆ? ‘ನಾನೊಬ್ಬ ಸೇನಾಧಿಪತಿ ಆಗಿದ್ರೂ ಇವರು ನನಗೆ ಕೊಡಬೇಕಾದ ಗೌರವ ಕೊಡ್ತಿಲ್ಲ. ಇವರು ನನಗಲ್ಲ, ನನ್ನ ರಾಜ್ಯಕ್ಕೂ ಅವಮಾನ ಮಾಡ್ತಿದ್ದಾರೆ’ ಅಂತ ಅವನಿಗೆ ಅನಿಸಿರಬಹುದು. ‘ಅದೇನೇ ಆಗ್ಲಿ, ನಾನು ಹುಷಾರಾಗಿಲ್ಲ ಅಂದ್ರೂ ಪರ್ವಾಗಿಲ್ಲ, ನಾನು ವಾಪಸ್ ಮನೆಗೆ ಹೋಗ್ತೀನಿ’ ಅಂತ ನಾಮಾನ ಅಂದ್ಕೊಳ್ತಾನೆ. ಆದ್ರೆ ಆಗ ಅವನ ಸೇವಕರು, ‘ಸ್ವಾಮಿ ಇದ್ರ ಬಗ್ಗೆ ಇನ್ನೊಂದು ಸಲ ಯೋಚ್ನೆ ಮಾಡಿ. ಎಲೀಷ ಹೇಳಿದಂತೆ ಮಾಡಬಹುದಲ್ವಾ’ ಅಂತ ಕೇಳ್ಕೊಳ್ತಾರೆ. ಆಗ ನಾಮಾನ ತನ್ನ ಅಹಂಕಾರನ ಪಕ್ಕಕ್ಕಿಟ್ಟು ದೀನತೆಯಿಂದ ಎಲೀಷ ಹೇಳಿದಂತೆ ಮಾಡ್ತಾನೆ. ಇದ್ರಿಂದ ಅವನು ಕುಷ್ಠರೋಗ ಪೂರ್ತಿಯಾಗಿ ವಾಸಿ ಆಗುತ್ತೆ.—2 ಅರಸು 5:13, 14 ಓದಿ.
7. ನಾಮಾನನಿಂದ ನಾವೇನು ಕಲಿಬಹುದು? (ಜ್ಞಾನೋಕ್ತಿ 22:4) (ಚಿತ್ರ ನೋಡಿ.)
7 ಈ ಘಟನೆಯಿಂದ ನಾವೇನು ಕಲಿಬಹುದು? ನಮ್ಮಲ್ಲಿ ವಿವೇಚನೆ ಇದ್ರೆ, ಮೇಲೆ-ಮೇಲೆ ಕಾಣಿಸೋ ವಿಷ್ಯಗಳನ್ನ ಅಥವಾ ನಮಗೆ ಅನಿಸಿದನ್ನ ‘ಸರಿ’ ಅಂತ ಅಂದ್ಕೊಳ್ಳಲ್ಲ. ಬದಲಿಗೆ ಅದ್ರ ಹಿಂದೆ ಇರೋ ಕಾರಣಗಳನ್ನ ಅರ್ಥ ಮಾಡ್ಕೊಳ್ತೀವಿ. ವಿವೇಚನೆ ಇದ್ರೆ ದೀನತೆಯನ್ನ ತೋರಿಸ್ತೀವಿ. ಆಗ ‘ನನಗೆ ಎಲ್ಲ ಗೊತ್ತಿಲ್ಲ. ನನಗೆ ಬೇರೆಯವರ ಸಹಾಯ ಬೇಕು’ ಅಂತ ಅರ್ಥ ಮಾಡ್ಕೊಳ್ತೀವಿ. ಮುಖ್ಯವಾಗಿ ಯೆಹೋವನ ಸಹಾಯ ಪಡ್ಕೊಳ್ತೀವಿ. ನಾಮಾನ ಯೆಹೋವನ ಸೇವಕ ಆಗಿಲ್ಲ ಅಂದ್ರೂ ವಿವೇಚನೆ ಮತ್ತು ದೀನತೆ ತೋರಿಸಿದ. ಪುಟ್ಟ ಹುಡುಗಿ, ತನ್ನ ಸೇವಕರು ಮತ್ತು ಮುಖ್ಯವಾಗಿ ಯೆಹೋವನ ಪ್ರತಿನಿಧಿ ಎಲೀಷ ಹೇಳಿದ ಮಾತನ್ನ ಕೇಳಿದ. ಹೀಗೆ ಅಹಂಕಾರ ಪಕ್ಕಕ್ಕಿಟ್ಟು ವಿವೇಚನೆಯಿಂದ ನಡ್ಕೊಂಡ. ಇದ್ರಿಂದ ಒಳ್ಳೆ ನಿರ್ಧಾರ ಮಾಡಿ ಯಶಸ್ಸು ಪಡ್ಕೊಂಡ. ನಾವೇನು ಕಲಿಬಹುದು? ಕೆಲವೊಂದು ಸಲ ನಮಗೂ ಯಾರಾದ್ರೂ ಸಲಹೆ ಕೊಟ್ಟಾಗ ಇಷ್ಟ ಆಗದೇ ಇರಬಹುದು ಅಥವಾ ಸಂಘಟನೆಯಿಂದ ಬರೋ ನಿರ್ದೇಶನ ಪೂರ್ತಿಯಾಗಿ ಅರ್ಥ ಆಗದೇ ಇರಬಹುದು. ಅಂಥ ಟೈಮಲ್ಲಿ ನಾವೇನು ಹೇಳ್ತೀವಿ, ಹೇಗೆ ನಡ್ಕೊಳ್ತೀವಿ ಅನ್ನೋದು ‘ನನ್ನಲ್ಲಿ ದೀನತೆ ಇದೆ ಅಂತ ತೋರಿಸ್ತಿದ್ಯಾ ಅಥವಾ ಅಹಂಕಾರ ಇದೆ ಅಂತ ತೋರಿಸ್ತಿದ್ಯಾ’ ಅಂತ ಕೇಳ್ಕೋಬೇಕು.—ಜ್ಞಾನೋಕ್ತಿ 22:4 ಓದಿ.
ನಾಮಾನ ದೀನತೆಯಿಂದ ಬೇರೆಯವ್ರ ಮಾತನ್ನ ಕೇಳಿಸಿಕೊಂಡ; ಬೇರೆಯವರು ಏನಾದ್ರೂ ಹೇಳುವಾಗ, ಸಲಹೆ ಕೊಟ್ಟಾಗ ಅಥವಾ ಸಂಘಟನೆಯಿಂದ ಮಾರ್ಗದರ್ಶನೆ ಬಂದಾಗ ನಾವೂ ಹಾಗೇ ಕೇಳಿಸ್ಕೊಬೇಕು (ಪ್ಯಾರ 7 ನೋಡಿ)
ಕೋಪ ಅಲ್ಲ, ಸಮಾಧಾನ ತೋರಿಸಿ
8. ನಮಗೆ ಯಾವಾಗ ಸಮಾಧಾನವಾಗಿ ಇರೋಕೆ ಕಷ್ಟ ಆಗುತ್ತೆ?
8 ಕಿರಿಕಿರಿ ಆದಾಗ್ಲೂ, ರೇಗಿ ಹೋದಾಗ್ಲೂ ಕೋಪ ಮಾಡ್ಕೊಳ್ಳದೆ, ಸಮಾಧಾನವಾಗಿರೋಕೆ ವಿವೇಚನೆ ಸಹಾಯ ಮಾಡುತ್ತೆ. ಆದ್ರೆ ಈ ತರ ನಡ್ಕೊಳ್ಳೋದು ಯಾವಾಗ್ಲೂ ಸುಲಭ ಅಲ್ಲ. ಅದ್ರಲ್ಲೂ ನಮಗೆ ಯಾರಾದ್ರೂ ನೋವು ಮಾಡಿಬಿಟ್ರೆ, ಅನ್ಯಾಯವಾಗಿ ನಡ್ಕೊಂಡ್ರೆ ತುಂಬಾನೇ ಕಷ್ಟ ಆಗುತ್ತೆ. (ಎಫೆ. 4:26 “ಕೋಪ ಬಂದ್ರೂ” ಇಂಗ್ಲಿಷ್ ಸ್ಟಡಿ ನೋಟ್ ನೋಡಿ) ಆದ್ರೆ ಇಂಥ ಸನ್ನಿವೇಶದಲ್ಲೂ ದಾವೀದ ಮತ್ತು ಅಬೀಗೈಲ್ ವಿವೇಚನೆಯಿಂದ ನಡ್ಕೊಂಡರು. ಅದು ಹೇಗೆ ಅಂತ ನೋಡೋಣ.
9. ನಾಬಾಲ, ದಾವೀದನ ಜೊತೆ ಹೇಗೆ ನಡ್ಕೊಂಡ?
9 ದಾವೀದ ಮತ್ತು ಅವನ ಸೇವಕರು ಈಗ ಪಾರಾನಿನ ಕಾಡಲ್ಲಿ ಅಲೆಮಾರಿಗಳಾಗಿ ಇದ್ದಾರೆ. (1 ಸಮು. 25:1) ಅವರು ಶ್ರೀಮಂತನಾಗಿದ್ದ ನಾಬಾಲನ ಕುರುಬರನ್ನ ಮತ್ತು ಅವನ ಕುರಿ ಮಂದೆಯನ್ನ ಕಾಪಾಡಿದ್ರು. (1 ಸಮು. 25:15, 16) ಇದಾಗಿ ಸ್ವಲ್ಪ ಸಮಯ ಆದ್ಮೇಲೆ ಕುರಿಗಳ ಉಣ್ಣೆ ಕತ್ತರಿಸೋ ಸಮಯ ಬಂತು. ಆಗ ದಾವೀದ, ನಾಬಾಲನ ಹತ್ರ ತನ್ನ ಸೇವಕರನ್ನ ಕಳಿಸಿ, ‘ನೀನು ಹೇಗಿದ್ದೀಯಾ? ನೀನು ಯಾವಾಗ್ಲೂ ಚೆನ್ನಾಗಿ ಇರಬೇಕು. ನೀನು ನಮಗೆ, ನಿನ್ನ ಕೈಲಾದ ಸಹಾಯ ಮಾಡ್ತೀಯ? ತಿನ್ನೋಕೆ ನಮಗೆ ಒಂದಿಷ್ಟು ಆಹಾರ ಕೊಡ್ತೀಯಾ’ ಅಂತ ದೀನತೆಯಿಂದ ಕೇಳ್ತಾನೆ. (1 ಸಮು. 25:6-8) ಆದ್ರೆ ನಾಬಾಲ, ದಾವೀದನ ಸಹಾಯಕ್ಕೆ ಎಳ್ಳಷ್ಟೂ ಬೆಲೆ ಕೊಡದೆ, ಒರಟಾಗಿ ನಡ್ಕೊಳ್ತಾನೆ. ದಾವೀದನಿಗೆ ಮತ್ತು ಅವನ ಸೇವಕರಿಗೆ ಅವಮಾನ ಮಾಡ್ತಾನೆ.—1 ಸಮು. 25:10, 11.
10. ದಾವೀದ ಮತ್ತು ಅಬೀಗೈಲ್ ಹೇಗೆ ವಿವೇಚನೆ ತೋರಿಸಿದ್ರು? (1 ಸಮುವೇಲ 25:32, 33) (ಚಿತ್ರ ನೋಡಿ.)
10 ನೀವು ಈ ಸನ್ನಿವೇಶದಲ್ಲಿ ಇದ್ದಿದ್ರೆ ಹೇಗೆ ನಡ್ಕೊಳ್ತಿದ್ರಿ? ನಾಬಾಲ ಮಾಡಿದ್ದನ್ನ ದಾವೀದ ಕೇಳಿಸ್ಕೊಂಡಾಗ ಅವನ ಕೋಪ ನೆತ್ತಿಗೆ ಏರುತ್ತೆ. ಮೊದ್ಲೇ ಅವನು ಯುದ್ಧವೀರ! ಅವನಿಗೆ ಎಷ್ಟು ಕೋಪ ಬಂತು ಅಂದ್ರೆ, ನಾಬಾಲನನ್ನ ಕೊಂದೇ ಬಿಡಬೇಕು ಅಂದ್ಕೊಳ್ತಾನೆ. ಕೊಲ್ಲೋಕೂ ಹೊರಟೇ ಬಿಡ್ತಾನೆ. (1 ಸಮು. 25:13, 21, 22) ಆದ್ರೆ ಆಗ ನಾಬಾಲನ ಹೆಂಡ್ತಿ ಅಬೀಗೈಲ್ ಬರ್ತಾಳೆ. ಅವಳು ವಿವೇಚನೆ ತೋರಿಸ್ತಾಳೆ. ಹೇಗೆ? ‘ದಾವೀದ ಅಷ್ಟು ಕೋಪದಲ್ಲಿದ್ರೂ ಅವನು ತುಂಬ ಒಳ್ಳೆ ವ್ಯಕ್ತಿ’ ಅಂತ ಅಬೀಗೈಲ್ ಅರ್ಥ ಮಾಡ್ಕೊತಾಳೆ. ಅದಕ್ಕೆ ಅವನು, ತನ್ನ ಕೋಪ ತಣ್ಣಗೆ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾಳೆ. ಒಳ್ಳೆ ಉಡುಗೊರೆಗಳನ್ನ ಕೊಟ್ಟು ದೀನತೆಯಿಂದ ಒಂದು ಚಿಕ್ಕ ಸಲಹೆಯನ್ನೂ ಕೊಡ್ತಾಳೆ. (1 ಸಮು. 25:18, 23-31) ಅಬೀಗೈಲ್ ಹೇಳೋದನ್ನ ಕೇಳಿಸ್ಕೊಳ್ಳೋ ಮೂಲಕ ದಾವೀದನೂ ವಿವೇಚನೆ ತೋರಿಸ್ತಾನೆ. ಅಬೀಗೈಲ್ ಹೇಳ್ತಿರೋದು ಯೆಹೋವನ ಇಷ್ಟದ ಪ್ರಕಾರನೇ ಇದೆ ಅಂತ ಅರ್ಥ ಮಾಡ್ಕೊಳ್ತಾನೆ. ಹೀಗೆ ದಾವೀದ ತನ್ನ ಕೋಪನ ಪಕ್ಕಕ್ಕಿಟ್ಟು ಸಮಾಧಾನ ಮಾಡ್ಕೊಳ್ತಾನೆ. ತನ್ನ ಕೈಯಿಂದ ದೊಡ್ಡ ಪಾಪ ಆಗದೆ ಇರೋ ತರನೂ ನೋಡ್ಕೊಳ್ತಾನೆ.—1 ಸಮುವೇಲ 25:32, 33 ಓದಿ.
ಒತ್ತಡದ ಸಂದರ್ಭದಲ್ಲಿ ದಾವೀದ ಮತ್ತು ಅಬೀಗೈಲ್ ವಿವೇಚನೆಯಿಂದ ನಡ್ಕೊಂಡ್ರು, ಹೀಗೆ ದೊಡ್ಡ ದುರಂತನ ತಪ್ಪಿಸಿದ್ರು (ಪ್ಯಾರ 10 ನೋಡಿ)
11. ಕೋಪನ ಕಂಟ್ರೋಲ್ ಮಾಡ್ಕೊಳ್ಳೋಕೆ ವಿವೇಚನೆ ಹೇಗೆ ಸಹಾಯ ಮಾಡುತ್ತೆ? (ಜ್ಞಾನೋಕ್ತಿ 19:11)
11 ಈ ಘಟನೆಯಿಂದ ನಾವೇನು ಕಲಿಬಹುದು? ಕೆಲವೊಂದು ಸಲ, ಕೋಪ ಮಾಡ್ಕೊಳ್ಳೋಕೆ ನಮಗೆ ನ್ಯಾಯವಾದ ಕಾರಣ ಇರುತ್ತೆ. ಆದ್ರೆ ವಿವೇಚನೆ ಇದ್ರೆ ಅಂಥ ಟೈಮಲ್ಲೂ ನಾವು ಶಾಂತಿ ಮತ್ತು ಸಮಾಧಾನದಿಂದ ನಡ್ಕೊಳ್ತೀವಿ. ನಾವು ಕೋಪದಲ್ಲಿ ಏನಾದ್ರೂ ಮಾಡಿಬಿಟ್ರೆ, ಹೇಳ್ಬಿಟ್ರೆ ಏನೆಲ್ಲಾ ಆಗಬಹುದು ಅಂತ ಯೋಚ್ನೆ ಮಾಡೋಕೂ ಇದ್ರಿಂದ ಸಹಾಯ ಆಗುತ್ತೆ. (ಜ್ಞಾನೋಕ್ತಿ 19:11 ಓದಿ.) ಅಬೀಗೈಲ್, ದಾವೀದನಿಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡಿಸಿದಳು. ಆಗ ದಾವೀದ ತನ್ನ ಕೋಪನ ಕಂಟ್ರೋಲ್ ಮಾಡ್ಕೊಂಡ. ನಿಮಗೂ ಯಾವುದಾದ್ರೂ ವಿಷ್ಯ ಕೋಪ ತರಿಸ್ತಿದ್ರೆ, ಕಿರಿಕಿರಿ ಮಾಡ್ತಿದ್ರೆ ಏನು ಮಾಡ್ತಿರಾ? ಹಿಂದೆ ಮುಂದೆ ಯೋಚ್ನೆ ಮಾಡ್ದೆ, ದುಡುಕಿ ಏನಾದ್ರೂ ಮಾಡೋಕೆ ಹೋಗಬೇಡಿ. (ಯಾಕೋ. 1:19) ಅದ್ರ ಬಗ್ಗೆ ಪ್ರಾರ್ಥನೆ ಮಾಡಿ, ಸ್ವಲ್ಪ ಟೈಮ್ ತಗೊಂಡು ಆ ವಿಷ್ಯದ ಬಗ್ಗೆ ಯೋಚ್ನೆ ಮಾಡಿ. ಆಗ ನೀವೂ ಸಮಾಧಾನದಿಂದ ನಡ್ಕೊಳ್ತೀರ.
12. ಸಮಾಧಾನವಾಗಿರೋಕೆ, ವಿವೇಚನೆ ತೋರಿಸೋಕೆ ಬೇರೆಯವರು ನಮಗೆ ಹೇಗೆ ಸಹಾಯ ಮಾಡ್ತಾರೆ?
12 ದಾವೀದ ಪೂರ್ತಿ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ಅಬೀಗೈಲನ್ನ ಬಳಸಿದನು. ಅದೇ ತರ ನಮಗೂ ಒಂದು ವಿಷ್ಯ ಚೆನ್ನಾಗಿ ಅರ್ಥ ಮಾಡಿಸೋಕೆ ಯೆಹೋವ ಕೆಲವೊಮ್ಮೆ ಬೇರೆಯವ್ರನ್ನ ಉಪಯೋಗಿಸ್ತಾನೆ. ಅದಕ್ಕೇ ಕೋಪ ಬಂದಾಗ ದುಡುಕಿ ಏನೇನೋ ಮಾತಾಡೋ ಬದಲು, ಒಬ್ಬ ಪ್ರೌಢ ಕ್ರೈಸ್ತನ ಹತ್ರ ಹೋಗಿ ಸಹಾಯ ಕೇಳಿ. ಅವರು ನಿಮಗೆ ಯೆಹೋವನ ಯೋಚ್ನೆ ಏನು ಅಂತ ಅರ್ಥ ಮಾಡಿಸ್ತಾರೆ. (ಜ್ಞಾನೋ. 12:15; 20:18) ಕೆಲವೊಂದು ಸಲ ನಿಮಗಷ್ಟೇ ಅಲ್ಲ, ನಿಮ್ಮ ಸ್ನೇಹಿತರಿಗೂ ಕೋಪ ಬರಬಹುದು. ಆಗ ನೀವು ಅಬೀಗೈಲ್ ತರ ಇರ್ತೀರಾ? ಕೋಪನ ಕಮ್ಮಿ ಮಾಡ್ಕೊಂಡು ಯೆಹೋವನ ತರ ಯೋಚ್ನೆ ಮಾಡೋಕೆ ನೀವು ಅವ್ರಿಗೆ ಸಹಾಯ ಮಾಡ್ತೀರಾ? ನೀವು ಈ ತರ ಬೇರೆಯವ್ರಿಗೆ ವಿವೇಚನೆ ತೋರಿಸೋಕೆ, ಸಮಾಧಾನವಾಗಿ ನಡ್ಕೊಳ್ಳೋಕೆ ಸಹಾಯ ಮಾಡೋದನ್ನ ಯೆಹೋವ ಖಂಡಿತ ಆಶೀರ್ವದಿಸ್ತಾನೆ.
ಭಯ ಅಲ್ಲ, ನಂಬಿಕೆ ತೋರಿಸಿ
13. ಭಯಪಡದೆ ಇರೋಕೆ ವಿವೇಚನೆ ಹೇಗೆ ಸಹಾಯ ಮಾಡುತ್ತೆ?
13 ಜೀವನದಲ್ಲಿ ಬರೋ ಕಷ್ಟಗಳನ್ನ ನೋಡಿ ಕೆಲವೊಮ್ಮೆ ಭಯಪಡ್ತೀವಿ. ಆದ್ರೆ ವಿವೇಚನೆ ಇದ್ರೆ ನಾವು ಕಷ್ಟಗಳನ್ನ ನೋಡಿ ಭಯಪಡಲ್ಲ. ಬದಲಿಗೆ ಯೆಹೋವನಿಗಿರೋ ಅಪಾರವಾದ ಶಕ್ತಿ ಮುಂದೆ ಆ ಕಷ್ಟಗಳು ಏನೇನೂ ಅಲ್ಲ ಅಂತ ಅರ್ಥ ಮಾಡ್ಕೊಳ್ತೀವಿ. (ಕೀರ್ತ. 27:1) ಅದೆಷ್ಟೇ ದೊಡ್ಡ ಕಷ್ಟ ಬಂದ್ರೂ ‘ಇದಕ್ಕೆ ಪರಿಹಾರನೇ ಇಲ್ಲ’ ಅಂತ ಅನಿಸಿದ್ರೂ ಯೆಹೋವ ನಮಗೆ ಸಹಾಯ ಮಾಡ್ತಾನೆ. ಈ ವಿಷ್ಯನ ನಾವು ಪ್ರವಾದಿ ಯೋನನಿಂದ ಕಲಿಬಹುದು. ಅವನಿಗೊಂದು ಕಷ್ಟದ ನೇಮಕ ಸಿಕ್ತು. ಅದನ್ನ ಮಾಡೋಕೆ ತುಂಬ ವಿವೇಚನೆ ಬೇಕಿತ್ತು. ಆದ್ರೆ ಏನಾಯ್ತು ಅಂತ ನೋಡೋಣ ಬನ್ನಿ.
14. ಯೋನ, ಯೆಹೋವ ಕೊಟ್ಟ ಕೆಲಸನ ಮಾಡದೆ ಯಾಕೆ ಓಡಿಹೋದ?
14 ಯೆಹೋವ ದೇವರು ಯೋನನಿಗೆ, ‘ನೀನು, ನಿನೆವೆ ಜನ್ರ ಹತ್ತಿರ ಹೋಗಿ, ನೀವು ನಾಶ ಆಗ್ತೀರ ಅಂತ ಹೇಳು’ ಅಂದನು. ಇದು ತುಂಬ ಕಷ್ಟಕರವಾದ ನೇಮಕ ಆಗಿತ್ತು. (ಯೋನ 1:1, 2) ನಿಮಗೆ ಆ ನೇಮಕ ಸಿಕ್ಕಿದ್ರೆ ಏನು ಮಾಡ್ತಿದ್ರಿ? ನಿನೆವೆ ಪಟ್ಟಣ ಇಸ್ರಾಯೇಲ್‌ನಿಂದ ತುಂಬ ದೂರದಲ್ಲಿತ್ತು. ಕಾಲ್ನಡಿಗೆಯಲ್ಲಿ ಹೋಗಿ ಆ ಪಟ್ಟಣ ಸೇರೋಕೆ ಹತ್ತತ್ರ ಒಂದು ತಿಂಗಳಾದ್ರೂ ಬೇಕಾಗ್ತಿತ್ತು. ಅಲ್ಲಿದ್ದ ಜನರು ತುಂಬ ಕ್ರೂರಿಗಳು, ಕಟುಕರು! ಅದಕ್ಕೆ ನಿನೆವೆನ ‘ರಕ್ತದೋಕುಳಿ ಹರಿಸೋ ಪಟ್ಟಣ’ ಅಂತಾನೂ ಕರೀತಿದ್ರು. (ನಹೂ. 3:1, 7) ಈ ಎಲ್ಲ ಕಾರಣದಿಂದ ಯೋನ ಆ ನೇಮಕ ಮಾಡದೆ ಭಯಪಟ್ಟು ಓಡಿ ಹೋದ.—ಯೋನ 1:3.
15. ಯೋನ ಹೇಗೆ ಯೆಹೋವನ ಮೇಲೆ ಬಲವಾದ ಭರವಸೆ ಬೆಳೆಸ್ಕೊಂಡ? (ಯೋನ 2:6-9)
15 ಯೋನ ಈ ತರ ಓಡುವಾಗ ಯೆಹೋವ ತನ್ನ ಅಪಾರ ಶಕ್ತಿಯಿಂದ ಅದ್ಭುತವಾಗಿ ಅವನ ಜೀವವನ್ನ ಕಾಪಾಡ್ತಾನೆ. (ಯೋನ 1:15, 17) ಆಗ ಅವನು, ಒಂದು ಪಾಠ ಕಲಿತಾನೆ. ತನ್ನ ಮುಂದೆ ಇರೋ ಆ ಕಷ್ಟವಾದ ನೇಮಕ ನೋಡಿ, ‘ನಾನು ಭಯ ಪಡಬಾರದು. ಅದು ಎಂಥದ್ದೇ ಅಪಾಯ ಬರಲಿ, ಯೆಹೋವ ನನ್ನ ಜೊತೆ ಬಂಡೆ ತರ ಇದ್ದು ಸಹಾಯ ಮಾಡ್ತಾನೆ’ ಅಂತ ಕಲಿತಾನೆ. (ಯೋನ 2:6-9 ಓದಿ.) ಅದಕ್ಕೆ ಯೆಹೋವ ಅವನಿಗೆ ಆ ನೇಮಕ ಮಾಡೋಕೆ ಮತ್ತೆ ಇನ್ನೊಂದು ಚಾನ್ಸ್ ಕೊಡ್ತಾನೆ. ಈ ಸಲ ಯೋನ ಭಯ ಪಡ್ಲಿಲ್ಲ. ಧೈರ್ಯದಿಂದ ಅದನ್ನ ಒಪ್ಕೊಳ್ತಾನೆ. ನಿನೆವೆಗೆ ಹೋಗಿ ಸಾರ್ತಾನೆ ಮತ್ತು ಯಶಸ್ಸು ಪಡೀತಾನೆ.—ಯೋನ 3:5.
16. ನಮಗೆ ಭಯ ಆದಾಗ ನಾವೇನು ಮಾಡಬೇಕು? (ಜ್ಞಾನೋಕ್ತಿ 29:25) (ಚಿತ್ರ ನೋಡಿ.)
16 ಈ ಘಟನೆಯಿಂದ ನಾವೇನು ಕಲಿಬಹುದು? ಯೆಹೋವನ ಸೇವೆಗೆ ಯಾವುದೇ ವಿಷ್ಯ ಅಡ್ಡ ಬರದಂತೆ ನೋಡ್ಕೊಬೇಕು. (ಜ್ಞಾನೋಕ್ತಿ 29:25 ಓದಿ.) ಯೋನ ವಿವೇಚನೆ ತೋರಿಸಿದ್ರಿಂದ ಅವನ ನೇಮಕದಲ್ಲಿದ್ದ ಕಷ್ಟಗಳಿಗೆ ಗಮನ ಕೊಡಲಿಲ್ಲ. ಬದಲಿಗೆ ಯೆಹೋವನ ಕೊಡೋ ಸಹಾಯ ಎಷ್ಟು ದೊಡ್ಡದು ಅನ್ನೋದ್ರ ಮೇಲೆ ಗಮನ ಕೊಟ್ಟ. ಅದೇ ತರ ನಾವು ಭಯಪಡೋ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಬಾರದು. ಬದ್ಲಿಗೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಿದ್ದಾನೆ, ಈ ಹಿಂದೆ ಹೇಗೆಲ್ಲ ಕಾಪಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಬೇಕು. ನಮ್ಮ ಮಧ್ಯೆ ಇರೋ ಎಷ್ಟೋ ಸಹೋದರ ಸಹೋದರಿಯರೂ ಈ ತರ ಭಯಪಡಿಸೋ ಸನ್ನಿವೇಶನ ಜಯಿಸಿದ್ದಾರೆ. ಕಷ್ಟಕರ ನೇಮಕಗಳು ಸಿಕ್ಕಾಗ ಅದನ್ನ ಯೆಹೋವನ ಸಹಾಯದಿಂದ ನಿಭಾಯಿಸಿದ್ದಾರೆ. ಅವರ ಅನುಭವಗಳ ಬಗ್ಗೆ ನಾವು ಧ್ಯಾನಿಸಬೇಕು.a (ಇಬ್ರಿ. 13:6) ಹಾಗಾಗಿ ನಾವೆಲ್ರೂ ಯೆಹೋವನನ್ನ ಪೂರ್ತಿಯಾಗಿ ನಂಬೋಣ. ಬೇರೆಯವರೂ ನಂಬೋಕೆ ಸಹಾಯ ಮಾಡೋಣ. ಹೀಗೆ ವಿವೇಚನೆ ತೋರಿಸೋಣ.
ದೇವರ ಮಾರ್ಗದರ್ಶನೆ ಸ್ವೀಕರಿಸೋಕೆ ಮತ್ತು ಕಷ್ಟಕರ ನೇಮಕವನ್ನ ಮಾಡೋಕೆ ವಿವೇಚನೆ ಸಹಾಯ ಮಾಡುತ್ತೆ ಅಂತ ಯೋನನ ಉದಾಹರಣೆ ನಮಗೆ ಕಲಿಸುತ್ತೆ (ಪ್ಯಾರ 16 ನೋಡಿ)
ವಿವೇಚನೆ ಪಡ್ಕೊಳ್ಳಿ ಮತ್ತು ಕಾಪಾಡ್ಕೊಳ್ಳಿ
17. ನಾವು ಜಾಸ್ತಿ ವಿವೇಚನೆ ಪಡ್ಕೊಳ್ಳೋಕೆ ಏನು ಮಾಡಬೇಕು?
17 ನಾವು ವಿವೇಚನೆ ತೋರಿಸಿದ್ರೆ ಎಂಥದ್ದೇ ಸನ್ನಿವೇಶ ಬಂದ್ರೂ ಅದನ್ನ ಚೆನ್ನಾಗಿ ನಿಭಾಯಿಸಬಹುದು ಅಂತ ಕಲಿತ್ವಿ. ಆದ್ರೆ ಜಾಸ್ತಿ ವಿವೇಚನೆ ಪಡ್ಕೊಳ್ಳೋದು ಹೇಗೆ? ವಿವೇಚನೆಯ ಮೂಲ ಯೆಹೋವನೇ. ಆತನು ವಿವೇಚನೆಯನ್ನ ತನ್ನ ವಾಕ್ಯವಾದ ಬೈಬಲ್ ಮತ್ತು ಪವಿತ್ರಶಕ್ತಿಯ ಮೂಲಕ ತನ್ನ ಆರಾಧಕರಿಗೆ ಕೊಡ್ತಾನೆ. (ನೆಹೆ. 9:20; ಕೀರ್ತ. 32:8) ಅಷ್ಟೇ ಅಲ್ಲ, ನಾವು ಸರಿಯಾದ ನಿರ್ಧಾರಗಳನ್ನ ಮಾಡೋಕೆ, ನಮ್ಮ ಭಾವನೆಗಳನ್ನ ಕಂಟ್ರೋಲ್‌ನಲ್ಲಿ ಇಟ್ಕೊಳ್ಳೋಕೆ ಒಳ್ಳೆ ಸಲಹೆಗಳನ್ನ ಕೊಡ್ತಾನೆ. (ಕೀರ್ತ. 119:97-101) ಆದ್ರಿಂದ ನಾವು ಬೈಬಲ್ ಓದಿ, ಪ್ರಾರ್ಥನೆ ಮಾಡಿ, ಪವಿತ್ರಶಕ್ತಿಯ ಸಹಾಯ ಕೇಳಿದ್ರೆ ನಮಗೆ ವಿವೇಚನೆ ಸಿಗುತ್ತೆ. ಈ ಗುಣ ನಮ್ಮಲ್ಲಿ ಇದ್ರೆ, ನಾವು ಒಂದು ವಿಷ್ಯ ನಡೆದಾಗ ಬರೀ ಮೇಲೆ-ಮೇಲೆ ಅಲ್ಲ, ಅದ್ರ ಹಿಂದೆ ಇರೋ ಕಾರಣಗಳನ್ನ ಅರ್ಥ ಮಾಡ್ಕೊಳ್ತೀವಿ. ಆಗ ಯೆಹೋವನಿಗೆ ಇಷ್ಟ ಆಗೋ ತರ ಮಾತಾಡ್ತೀವಿ ಮತ್ತು ನಡ್ಕೊಳ್ತೀವಿ.—ಜ್ಞಾನೋ. 21:11, ಪಾದಟಿಪ್ಪಣಿ.
18. ನೀವೇನು ಮಾಡಬೇಕು ಅಂತ ನಿರ್ಧಾರ ಮಾಡಿದ್ದೀರಾ?
18 ಯೆಹೋವನಿಂದ ಬರೋ ಈ ವಿವೇಕನ ಪಡ್ಕೊಳ್ಳೋಕೆ ನಾವೆಲ್ರೂ ಪ್ರಯತ್ನ ಹಾಕೋಣ. (ಕೀರ್ತ. 14:2) ಹೀಗೆ ಮಾಡಿದ್ರೆ, ‘ವಿವೇಚನೆ ಅಥವಾ ತಿಳುವಳಿಕೆಯ ದಾರಿಯಿಂದ ನಾವು ತಪ್ಪಿ’ ಬೇರೆ ಕಡೆ ಹೋಗಲ್ಲ. (ಜ್ಞಾನೋ. 21:16) ಬದಲಿಗೆ ಎಂಥದ್ದೇ ಸನ್ನಿವೇಶ ಬಂದ್ರೂ ವಿವೇಚನೆ ತೋರಿಸ್ಲೇಬೇಕು ಅಂತ ದೃಢ ತೀರ್ಮಾನ ಮಾಡ್ತೀವಿ. ಹೀಗೆ ಮಾಡಿದ್ರೆ ನಾವು ಖಂಡಿತ ಯಶಸ್ಸು ಪಡಿತೀವಿ.
ಗೀತೆ 45 ನನ್ನ ಹೃದಯದ ಧ್ಯಾನ
a ಉದಾಹರಣೆಗೆ, JW Library® ಅಥವಾ jw.org ನಲ್ಲಿ “ಯೆಹೋವನ ಸಾಕ್ಷಿಗಳ ಜೀವನ ಕಥೆಗಳು” ಅನ್ನೋ ಲೇಖನ ಸರಣಿಯಲ್ಲಿ ಜಾರ್ಜ್ ಫೋರ್ಚಲ್ಯನ್ (ಇಂಗ್ಲೀಷ್) ಅವರ ಅನುಭವ ನೋಡಿ.