ಮೇ 4-10, 2026
ಗೀತೆ 53 ಸಾರೋಣವೇ?
ಕಲಿಸೋ ಕಲೆಯನ್ನ ಬೆಳೆಸ್ಕೊಳ್ಳಿ
‘ದೇವರ ಸಂದೇಶವನ್ನ ಸಾರು . . . ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸು.’—2 ತಿಮೊ. 4:2.
ಈ ಲೇಖನದಲ್ಲಿ ಏನಿದೆ?
ಕಲಿಸೋ ಕಲೆಯನ್ನ ಹೆಚ್ಚು ಮಾಡ್ಕೊಳ್ಳೋಕೆ ಯಾವ ಮೂರು ವಿಷ್ಯಗಳು ಸಹಾಯ ಮಾಡುತ್ತೆ ಅಂತ ನೋಡೋಣ.
1. ನಾವು ಏನನ್ನ ಬೆಳೆಸ್ಕೊಳ್ಳಬೇಕು ಮತ್ತು ಯಾಕೆ? (2 ತಿಮೊತಿ 4:2) (ಚಿತ್ರ ನೋಡಿ.)
‘ನನ್ನ ಶಿಷ್ಯರಾಗೋಕೆ ಕಲಿಸಿ, ನಾನು ನಿಮಗೆ ಹೇಳ್ಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡಿಯೋಕೆ ಅವ್ರಿಗೆ ಕಲಿಸಿ’ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 28:19, 20) ಇದ್ರರ್ಥ ಎಲ್ಲಾ ಕ್ರೈಸ್ತರು ಕೂಡ ಈ ಕಲಿಸೋ ಕೆಲಸನ ಮಾಡಬೇಕಂತ ಯೇಸು ಇಷ್ಟಪಡ್ತಾನೆ. ‘ಒಳ್ಳೆ ಮನಸ್ಸಿನ ಯೋಗ್ಯ ಜನ್ರನ್ನ’ ಯೆಹೋವನೇ ತನ್ನ ಕಡೆಗೆ ಸೆಳೀತಾನೆ ಅನ್ನೋದು ನಿಜಾನೇ. ದೇವದೂತರು ಅಂಥ ವ್ಯಕ್ತಿಗಳ ಕಡೆಗೆ ನಮ್ಮನ್ನ ಮಾರ್ಗದರ್ಶಿಸ್ತಾರೆ. (ಅ. ಕಾ. 13:48; ಯೋಹಾ. 6:44; ಪ್ರಕ. 14:6) ಆದ್ರೂ ನಾವು ನಮ್ಮ ಕೈಯಲ್ಲಾಗೋ ಕೆಲವು ವಿಷ್ಯಗಳನ್ನ ಮಾಡಬೇಕು. ಉದಾಹರಣೆಗೆ, ಅಪೊಸ್ತಲ ಪೌಲ ಮತ್ತು ಬಾರ್ನಬ ಏನ್ ಮಾಡಿದ್ರು ಅಂತ ನೋಡಿ. ಅವರು ಇಕೋನ್ಯದ ಸಭಾಮಂದಿರಕ್ಕೆ ಹೋಗಿ ಸಾರಿದಾಗ ಅಲ್ಲಿ “ಎಷ್ಟು ಚೆನ್ನಾಗಿ ಮಾತಾಡಿದರಂದ್ರೆ ಯೆಹೂದ್ಯರಲ್ಲಿ ಮತ್ತು ಗ್ರೀಕರಲ್ಲಿ ತುಂಬ ಜನ ಶಿಷ್ಯರಾದ್ರು.” (ಅ. ಕಾ. 14:1) ನೋಡಿದ್ರಾ? ಪೌಲ ಮತ್ತು ಬಾರ್ನಬ ಕಲಿಸೋ ಕಲೆಯನ್ನ ಕರಗತ ಮಾಡ್ಕೊಂಡಿದ್ರು. (2 ತಿಮೊತಿ 4:2 ಓದಿ.) ಎಲ್ಲಾ ಕ್ರೈಸ್ತರು ಕೂಡ ಈ ಕಲಿಸುವ ಕಲೆಯನ್ನ ಚೆನ್ನಾಗಿ ಬೆಳೆಸಿಕೊಳ್ಳಬೇಕು ಅಂತ ನಮಗೆ ಇದ್ರಿಂದ ಗೊತ್ತಾಗುತ್ತೆ.
ನಾವು ‘ಕಲಿಸೋ ಕಲೆಯನ್ನ’ ಯೇಸು ಮತ್ತು ಪೌಲ, ಬಾರ್ನಬರಂಥ ಶಿಷ್ಯರಿಂದ ಕಲಿಬಹುದು (ಪ್ಯಾರ 1 ನೋಡಿ)
2. ಕಲಿಸೋ ಕಲೆಯನ್ನ ಬೆಳೆಸ್ಕೊಳ್ಳೋಕೆ ಆಗಲ್ಲ ಅಂತ ಕೆಲವ್ರಿಗೆ ಯಾಕೆ ಅನಿಸುತ್ತೆ?
2 ‘ನಂಗೆ ಅಷ್ಟು ಚೆನ್ನಾಗಿ ಮಾತಾಡೋಕೆ ಬರಲ್ಲ, ನಾನ್ ಅಷ್ಟು ಚೆನ್ನಾಗಿ ಓದಿಲ್ಲ’ ಅಂತ ಕೆಲವರು ಅನಿಸಬಹುದು. ಬೈಬಲಲ್ಲೂ ಕೆಲವ್ರಿಗೆ ಹೀಗೆ ಅನಿಸಿದೆ. (ವಿಮೋ. 4:10; ಯೆರೆ. 1:6) ಇನ್ನು ಕೆಲವರು, ‘ನಾನು ಎಷ್ಟೇ ಕಲಿಸಿದ್ರೂ ಜನ ಅದನ್ನ ಕಿವಿಗೇ ಹಾಕೊಳ್ಳಲ್ಲ’ ಅಂತ ಕುಗ್ಗಿ ಹೋಗ್ತಾರೆ. ಆದ್ರೆ ನಿಜ ಏನಂದ್ರೆ, ನಾವು ಸಾರೋ ಪ್ರತಿಯೊಬ್ರೂ ಪ್ರಗತಿ ಮಾಡ್ತಾರೆ ಅಂತ ನಾವು ಹೇಳಕ್ಕಾಗಲ್ಲ. ಯಾಕಂದ್ರೆ ಅವರು ಪ್ರಗತಿ ಮಾಡೋದು-ಬಿಡೋದು ಬರೀ ನಮ್ಮ ಪ್ರಯತ್ನದ ಮೇಲೆ ಹೊಂದ್ಕೊಂಡಿಲ್ಲ. ಯೆಹೋವ ಮತ್ತು ದೇವದೂತರು ಆ ವ್ಯಕ್ತಿಯಲ್ಲಿ ಒಳ್ಳೇ ಮನಸ್ಸು ಇದ್ಯಾ ಇಲ್ವಾ ಅಂತ ಕೂಡ ನೋಡ್ತಾರೆ. ಹಾಗಿದ್ರೂ ನಾವು ಸಿಹಿಸುದ್ದಿ ಸಾರುವಾಗ ನಮ್ಮ ಕೈಲಾದಷ್ಟು ಮಟ್ಟಿಗೆ ಚೆನ್ನಾಗಿ ಮಾಡಬೇಕು. ಹಾಗಾಗಿ ಈ ಲೇಖನದಲ್ಲಿ ಕಲಿಸೋ ಕಲೆಯನ್ನ ಬೆಳೆಸ್ಕೊಳ್ಳೋಕೆ ಸಹಾಯ ಮಾಡೋ ಮೂರು ವಿಷ್ಯಗಳನ್ನ ನೋಡೋಣ.
ಆಸಕ್ತಿ ತೋರಿಸಿ
3. ಯೇಸು ಜನ್ರ ಮನಸ್ಸು ಮುಟ್ಟೋ ತರ ಕಲಿಸೋಕೆ ಕಾರಣ ಏನು?
3 “ಮನುಷ್ಯನ ಮನಸ್ಸಿನಲ್ಲಿ ಏನಿದೆ ಅಂತ ಆತನಿಗೆ [ಯೇಸುಗೆ] ಚೆನ್ನಾಗಿ ಗೊತ್ತಿತ್ತು” ಅಂತ ಬೈಬಲ್ ಹೇಳುತ್ತೆ. (ಯೋಹಾ. 2:25) ಅದ್ರರ್ಥ, ಮನುಷ್ಯರ ಯೋಚ್ನೆ ಏನು, ಅವ್ರ ಉದ್ದೇಶ ಏನು ಅನ್ನೋದು ಯೇಸುಗೆ ಇಂಚಿಂಚು ಗೊತ್ತು ಅಂತ. ಅದಕ್ಕೆ ಆತನು ಅವ್ರ ಅಗತ್ಯಗಳನ್ನ ಅರ್ಥ ಮಾಡ್ಕೊಂಡು ಅವ್ರ ಹೃದಯ ಮುಟ್ಟೋ ತರ ಕಲಿಸ್ತಿದ್ದನು. ಜನ್ರ ಪರಿಸ್ಥಿತಿನ ನೋಡಿದಾಗ, ಅವರು ಆಧ್ಯಾತ್ಮಿಕವಾಗಿ ಸೊರಗಿ ಹೋಗಿದ್ದಾರೆ, ನೂರಾರು ಪದ್ಧತಿಗಳಿಂದಾಗಿ ಬಳಲಿ ಹೋಗಿದ್ದಾರೆ ಮತ್ತು ಮನುಷ್ಯರು ಇಟ್ಟಿರೋ ನಿಯಮಗಳಿಂದ ಬೇಸತ್ತು ಹೋಗಿದ್ದಾರೆ ಅನ್ನೋದನ್ನೆಲ್ಲ ಯೇಸು ಗಮನಿಸಿದನು. (ಮತ್ತಾ. 9:36; 23:4) ಅದಕ್ಕೆ ಈ ಎಲ್ಲ ವಿಷ್ಯಗಳನ್ನ ಮನಸ್ಸಲ್ಲಿಟ್ಟು ಬೆಟ್ಟದ ಭಾಷಣದಲ್ಲಿ ಅವ್ರ ಜೀವನ ಸುಧಾರಿಸೋ ವಿಷ್ಯಗಳನ್ನ ಕಲಿಸಿದನು. ಯೇಸು ಕಲಿಸಿದ ವಿಷ್ಯಗಳು ಜನ್ರ ಮನಸ್ಸು ಮುಟ್ಟಿತು. ಆತನು ಹೇಳ್ತಿದ್ದ ವಿಷ್ಯಗಳನ್ನ ಕೇಳಿಸ್ಕೊಳ್ಳೋಕೆ ಆ ಜನ ಹಾತೊರಿತಾ ಇದ್ರು.
4. ಜನ್ರಿಗೆ ಆಸಕ್ತಿ ತೋರಿಸೋಕೆ ನಾವೇನು ಮಾಡಬೇಕು? (ಚಿತ್ರ ನೋಡಿ.)
4 ಸೈತಾನನ ಲೋಕದಲ್ಲಿ ಕಷ್ಟ ಇಲ್ಲದಿರೋ ಮನುಷ್ಯನೇ ಇಲ್ಲ. ಪ್ರತಿಯೊಬ್ರಿಗೂ ಒಂದಲ್ಲ ಒಂದು ಕಷ್ಟ ಇದೆ. ಒಬ್ಬ ವ್ಯಕ್ತಿಗೆ ಬೈಬಲ್ ಕೊಡೋ ನಿರೀಕ್ಷೆ ಬಗ್ಗೆ ಗೊತ್ತೇ ಇಲ್ಲಾಂದ್ರೆ ‘ಹದಗೆಟ್ಟಿರೋ’ ಈ ಲೋಕದ ಪರಿಸ್ಥಿತಿಲಿ ಅವನ ಜೀವನ ಕತ್ತಲಲ್ಲಿ ಕಳೆದೋದಂತೆ ಇರುತ್ತೆ. (2 ತಿಮೊ. 3:1; ಯೆಶಾ. 65:13, 14.) ಇದನ್ನ ನಾವು ಅರ್ಥ ಮಾಡ್ಕೊಂಡ್ರೆ ನಮ್ಮ ಟೆರಿಟೊರಿಯಲ್ಲಿ ಇರೋ ಜನ್ರಿಗೆ ಆಸಕ್ತಿ ತೋರಿಸೋಕಾಗುತ್ತೆ. ಇದನ್ನ ನಾವು ಹೇಗೆ ಮಾಡಬಹುದು? ನಮ್ಮ ಟೆರಿಟೊರಿಯಲ್ಲಿ ಇರೋ ಜನ ಇತ್ತೀಚಿಗೆ ಯಾವ ವಿಷ್ಯದ ಬಗ್ಗೆ ತುಂಬ ಯೋಚಿಸ್ತಿದ್ದಾರೆ? ಅದ್ರ ಬಗ್ಗೆ ಯಾವುದಾದ್ರೂ ನ್ಯೂಸ್ ಬಂತಾ? ಶಾಲೆಗೆ ಹೋಗೋ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಹೆತ್ತವರು ಚಿಂತೆ ಮಾಡ್ತಿದ್ದಾರಾ? ನಾನಿರೋ ಜಾಗದಲ್ಲಿ ಜನ ಕೆಲಸಕ್ಕೋಸ್ಕರ ತುಂಬ ಪರದಾಡ್ತಿದ್ದಾರಾ? ಈ ತರ ಯೋಚ್ನೆ ಮಾಡಿ ನೋಡಿ.
ವಿದ್ಯಾರ್ಥಿಯ ಪರಿಸ್ಥಿತಿಯನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ ಮತ್ತು ಅವ್ರಿಗೆ ಕಾಳಜಿ ತೋರಿಸಿ (ಪ್ಯಾರ 4 ನೋಡಿ)
5. ಯೇಸುಗೂ ಫರಿಸಾಯರಿಗೂ ಏನು ವ್ಯತ್ಯಾಸ ತಿಳಿಸಿ. (ಮತ್ತಾಯ 11:28-30)
5 ಯೇಸುಗೆ ಜನ್ರ ಮೇಲೆ ತುಂಬ ಪ್ರೀತಿ ಮತ್ತು ಆಸಕ್ತಿ ಇತ್ತು. ಅದಕ್ಕೆ ಜನ್ರ ಜೊತೆಲಿ ತುಂಬ ಚೆನ್ನಾಗಿ ನಡ್ಕೊಳ್ತಿದ್ದ. ಆದ್ರೆ ಫರಿಸಾಯರು ಇದಕ್ಕೆ ತದ್ವಿರುದ್ಧವಾಗಿದ್ರು. ಜನ್ರನ್ನ ಕೀಳಾಗಿ ನೋಡ್ತಿದ್ರು, ಅವ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ರು. (ಮತ್ತಾ. 23:13; ಯೋಹಾ. 7:49) ಆದ್ರೆ ಯೇಸು ಜನ್ರಿಗೆ ದಯೆ ತೋರಿಸ್ತಿದ್ದನು, ಗೌರವ ಕೊಡ್ತಿದ್ದನು. ಆತನು “ಮೃದುಸ್ವಭಾವ, ದೀನಮನಸ್ಸು” ಇರೋ ವ್ಯಕ್ತಿಯಾಗಿದ್ದನು. ಈ ಎಲ್ಲಾ ಗುಣಗಳು ಆತನಲ್ಲಿ ಇದ್ದಿದ್ರಿಂದಾನೇ ಒಳ್ಳೆ ಬೋಧಕನಾದನು. (ಮತ್ತಾಯ 11:28-30 ಓದಿ.) ನಾವೂ ಯೇಸು ತರಾನೇ ಜನ್ರಿಗೆ ದಯೆ ತೋರಿಸಬೇಕು, ಗೌರವ ಕೊಡಬೇಕು.
6. ನಾವು ಸಾರಿದಾಗ ಯಾರಾದ್ರೂ ನಮ್ಮನ್ನ ವಿರೋಧಿಸಿದ್ರೆ ಹೇಗೆ ನಡ್ಕೊಬೇಕು?
6 ನಾವು ಸಾರಿದಾಗ ಕೆಲವೊಬ್ರು ‘ಬೇಡ’ ಅಂತಾರೆ, ಕೋಪದಿಂದ ಬೈದುಬಿಡ್ತಾರೆ. ಆಗ ಏನು ಮಾಡಬೇಕು? ಬರೀ ತಾಳ್ಕೊಂಡ್ರೆ ಸಾಕು ಅಂತ ಯೇಸು ಹೇಳಿದ್ನಾ? ಇಲ್ಲ. “ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ, ಯಾರು ನಿಮ್ಮನ್ನ ಹಿಂಸಿಸ್ತಾರೋ ಅವ್ರಿಗಾಗಿ ಪ್ರಾರ್ಥನೆ ಮಾಡಿ. ನಿಮ್ಮ ಮೇಲೆ ಶಾಪ ಹಾಕುವವ್ರನ್ನ ಆಶೀರ್ವದಿಸಿ” ಅಂತ ಹೇಳಿದನು. (ಲೂಕ 6:27, 28) ಇದನ್ನೆಲ್ಲಾ ಮಾಡಬೇಕಂದ್ರೆ ನಾವು ಜನ ಯಾಕೆ ಆ ರೀತಿ ನಡ್ಕೊಳ್ತಿದ್ದಾರೆ, ಯಾಕೆ ನಮ್ಮನ್ನ ವಿರೋಧಿಸ್ತಿದ್ದಾರೆ ಅಂತ ಯೋಚ್ನೆ ಮಾಡಬೇಕು. ಕೆಲವ್ರಂತೂ ಸಾರೋ ಕೆಲಸನ ನಿಲ್ಲಿಸಬೇಕು ಅಂತ ಪಣ ತೊಟ್ಟಿರ್ತಾರೆ ನಿಜ. ಆದ್ರೆ ಎಲ್ರೂ ಹಾಗಿರಲ್ಲ. ಕೆಲವ್ರಿಗೆ ಅವ್ರ ಕುಟುಂಬದ ಸಮಸ್ಯೆ, ಬೇರೆ ಯಾವುದೋ ಕಷ್ಟ ಇರಬಹುದು ಅಥವಾ ನಾವು ತಪ್ಪಾಗಿರೋ ಸಮಯದಲ್ಲಿ ಅವ್ರ ಮನೆ ಮುಂದೆ ಹೋಗಿರಬಹುದು. ಪರಿಸ್ಥಿತಿ ಏನೇ ಆಗಿರಲಿ, ನಾವು “ಯಾವಾಗ್ಲೂ ಮೃದುವಾಗಿ, ಮಧುರವಾಗಿ ಮಾತಾಡಬೇಕು. ಆಗ ಯಾರಿಗೆ ಹೇಗೆ ಉತ್ತರ ಕೊಡಬೇಕು” ಅಂತ ನಮಗೆ ಗೊತ್ತಾಗುತ್ತೆ. (ಕೊಲೊ. 4:6) ಜನ್ರ ಮೇಲೆ ನಮಗೆ ಪ್ರೀತಿ, ಆಸಕ್ತಿ ಇರೋದಾದ್ರೆ ನಾವು ಅವ್ರ ಪರಿಸ್ಥಿತಿಯನ್ನ, ಅವ್ರ ಅಗತ್ಯಗಳನ್ನ ಅರ್ಥ ಮಾಡ್ಕೊಳ್ತೀವಿ. ಆಗ ಅವರು ನಮ್ಮನ್ನ ಬೈದ್ರೂ ನಾವು ಬೇಜಾರು ಮಾಡ್ಕೊಳ್ಳಲ್ಲ. ಬದ್ಲಿಗೆ ಇನ್ನೂ ಚೆನ್ನಾಗಿ ಕಲಿಸೋಕೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಯೋಚಿಸ್ತೀವಿ.
ಬೈಬಲ್ ಬಳಸಿ
7. ದೇವರ ವಾಕ್ಯವನ್ನ ಆಧರಿಸಿ ಯೇಸು ಕಲಿಸ್ತಿದ್ದನು ಅಂತ ಹೇಗೆ ಹೇಳಬಹುದು? (ಯೋಹಾನ 7:14-16)
7 ಯೇಸು ಸ್ವಂತ ಬುದ್ಧಿಯಿಂದ ಯಾವುದನ್ನೂ ಕಲಿಸಲಿಲ್ಲ. ಪ್ರತಿಯೊಂದನ್ನೂ ಬೈಬಲ್ ಆಧಾರಿತವಾಗಿ ಕಲಿಸ್ತಿದ್ದನು. ಬೈಬಲಲ್ಲಿದ್ದ ವಿಷ್ಯಗಳನ್ನ ಜನ ಸುಲಭವಾಗಿ ಅರ್ಥ ಮಾಡ್ಕೊಳ್ಳೋ ತರ, ನೆನಪಿಟ್ಕೊಳ್ಳೋ ತರ ಕಲಿಸ್ತಾ ಇದ್ದನು. ‘ಯೇಸು ಕಲಿಸೋ ರೀತಿ ನೋಡಿ ಜನ್ರಿಗೆ ತುಂಬ ಆಶ್ಚರ್ಯ ಆಗ್ತಿತ್ತು. ಯಾಕಂದ್ರೆ ಆತನು ಪಂಡಿತರ ಹಾಗೆ ಕಲಿಸದೆ ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದನು’ ಅಂತ ಬೈಬಲ್ ಹೇಳುತ್ತೆ. (ಮಾರ್ಕ 1:22 “ಪಂಡಿತರ ಹಾಗೆ ಕಲಿಸದೆ” ಇಂಗ್ಲಿಷ್ ಸ್ಟಡಿ ನೋಟ್ ನೋಡಿ.) ಯೇಸುವಿನ ಸಮಯದಲ್ಲಿ ಪಂಡಿತರೆಲ್ಲಾ ಜನ್ರಿಗೆ ಬೋಧಿಸುವಾಗ ದೊಡ್ಡ-ದೊಡ್ಡ ರಬ್ಬಿಗಳು, ಬೋಧಕರು ಹೇಳಿದ ವಿಷ್ಯಗಳನ್ನ ಕಲಿಸ್ತಿದ್ರು. ಆದ್ರೆ ಯೇಸು ಹಾಗೆ ಮಾಡ್ತಿರಲಿಲ್ಲ, ಆತನು ದೇವರ ವಾಕ್ಯನ ಚೆನ್ನಾಗಿ ಬಳಸ್ತಾ ಇದ್ದನು. ಯೇಸು ದೇವರ ಮಗನಾಗಿರೋದ್ರಿಂದ, ಸ್ವರ್ಗದಲ್ಲಿ ಏನೆಲ್ಲಾ ನಡೆಯುತ್ತೆ ಅನ್ನೋದು ಆತನಿಗೆ ಗೊತ್ತಿತ್ತು. ಹಾಗಂತ ಆತನು ತನ್ನ ಜ್ಞಾನಭಂಡಾರನೆಲ್ಲಾ ಬಳಸಿ ಜನ್ರ ಮನಸ್ಸನ್ನ ಗೆಲ್ಲೋ ತರ ಏನೇನೋ ವಿಷ್ಯಗಳನ್ನ ಹೇಳಲಿಲ್ಲ. ಬದಲಿಗೆ ದೇವರ ಇಷ್ಟ ಏನು, ದೇವರ ವಾಕ್ಯ ಏನು ಹೇಳುತ್ತೆ ಅಂತ ಮಾತ್ರ ಕಲಿಸಿದನು. (ಯೋಹಾನ 7:14-16 ಓದಿ.) ನಮ್ಮೆಲ್ರಿಗೂ ಯೇಸು ಎಂಥ ಒಳ್ಳೆ ಮಾದರಿ ಇಟ್ಟಿದ್ದಾನೆ ಅಲ್ವಾ!
8. ಅಪೊಸ್ತಲ ಪೇತ್ರ ಹೇಗೆ ಯೇಸುವನ್ನ ಅನುಕರಿಸಿದ?
8 ಯೇಸುವಿನ ಶಿಷ್ಯರು ಕೂಡ ದೇವರ ವಾಕ್ಯವನ್ನ ಚೆನ್ನಾಗಿ ಬಳಸಿದ್ರು. ಉದಾಹರಣೆಗೆ, ಕ್ರಿ.ಶ. 33ರ 50ನೇ ದಿನದ ಹಬ್ಬದಲ್ಲಿ ಪೇತ್ರ ಕೊಟ್ಟ ಭಾಷಣದ ಬಗ್ಗೆ ಯೋಚ್ನೆ ಮಾಡಿ. ಪೇತ್ರ ಜಾಸ್ತಿ ಏನೂ ಓದಿರಲಿಲ್ಲ. ಆದ್ರೂ ಭವಿಷ್ಯವಾಣಿಗಳೆಲ್ಲ ಯೇಸು ಕ್ರಿಸ್ತನಲ್ಲಿ ಹೇಗೆ ನೆರವೇರಿತು ಅಂತ ಕಲಿಸಿದ. ಬೈಬಲ್ ವಚನಗಳನ್ನ ಬಳಸಿ, ಬಿಡಿಸಿ-ಬಿಡಿಸಿ ವಿವರಿಸಿದ. (ಅ. ಕಾ. 2:14-37) ಇದ್ರಿಂದಾಗಿ ಏನಾಯ್ತು? ಜನ ಅವನ ಮಾತನ್ನ ಮನಸಾರೆ ಒಪ್ಪಿ ದೀಕ್ಷಾಸ್ನಾನ ತಗೊಂಡ್ರು. “ಅದೇ ದಿನ ಸುಮಾರು 3,000 ಜನ ಶಿಷ್ಯರಾದರು” ಅಂತ ಬೈಬಲ್ ಹೇಳುತ್ತೆ.—ಅ. ಕಾ. 2:41.
9. ಕಲಿಸುವಾಗ ನಾವು ಯಾಕೆ ಬೈಬಲನ್ನ ಚೆನ್ನಾಗಿ ಬಳಸಬೇಕು?
9 ಬೈಬಲಿಗಿಂತ ಚೆನ್ನಾಗಿ ಬೇರೆ ಯಾವ ವಿಷ್ಯನೂ ಜನ್ರ ಹೃದಯನ ಮುಟ್ಟೋಕೆ ಆಗಲ್ಲ. (ಇಬ್ರಿ. 4:12) ಹಾಗಾಗಿ ನಾವು ಕಲಿಸುವಾಗ ಬೈಬಲನ್ನ ಚೆನ್ನಾಗಿ ಬಳಸಬೇಕು. ನಾವು ‘ದೇವರ ಸಂದೇಶನ ಸಾರಬೇಕೇ’ ಹೊರತು ನಮ್ಮ ಸ್ವಂತ ಆಲೋಚನೆಗಳನ್ನಲ್ಲ. (2 ತಿಮೊ. 4:2) “ಯೆಹೋವನೇ ವಿವೇಕ ಕೊಡ್ತಾನೆ, ಜ್ಞಾನ ತಿಳುವಳಿಕೆಯ ಮಾತುಗಳು ಆತನ ಬಾಯಿಂದಾನೇ ಬರುತ್ತೆ” ಅಂತ ಜ್ಞಾನೋಕ್ತಿ 2:6 ಹೇಳುತ್ತೆ. ಹಾಗಾಗಿ ನಾವು ಬೈಬಲನ್ನ ಬಳಸಿದಾಗೆಲ್ಲ ಯೆಹೋವನನ್ನ ಮಾತಾಡೋಕೆ ಬಿಟ್ಟ ಹಾಗೆ ಇರುತ್ತೆ. (ಮಲಾ. 2:7) ಮನುಷ್ಯನ ವಿವೇಕಕ್ಕಿಂತ ಮಿಗಿಲಾದ ಶ್ರೇಷ್ಠ ಜ್ಞಾನ ಬೈಬಲಲ್ಲಿದೆ. ಇದನ್ನ ನಾವು ಜನ್ರಿಗೆ ಅರ್ಥ ಮಾಡಿಸಬೇಕು. ಬೈಬಲಲ್ಲಿರೋ ವಿಷ್ಯನ ದೇವರೇ ಕೊಟ್ಟಿರೋದು. ಅದ್ರಲ್ಲಿ ಇರೋ ವಿಷ್ಯಗಳು ದೇವರನ್ನ ಮೆಚ್ಚಿಸೋಕೆ, ಸಂತೋಷವಾದ ಜೀವನವನ್ನ ನಡೆಸೋಕೆ ಮತ್ತು ಸಂತೃಪ್ತಿ ಪಡ್ಕೊಳ್ಳೋಕೆ ಸಹಾಯ ಮಾಡುತ್ತೆ ಅಂತ ನಾವು ಜನ್ರಿಗೆ ಕಲಿಸಬೇಕು.—2 ತಿಮೊ. 3:16, 17.
10. ‘ನಾನು ಬೈಬಲಿಂದ ಕಲಿತಾ ಇದ್ದೀನಿ’ ಅಂತ ವಿದ್ಯಾರ್ಥಿ ಅರ್ಥ ಮಾಡ್ಕೊಬೇಕಾದ್ರೆ ನೀವೇನು ಮಾಡಬೇಕು?
10 ನೀವು ಬೈಬಲ್ ಅಧ್ಯಯನಕ್ಕಾಗಿ ತಯಾರಿಸುವಾಗ, ವಿದ್ಯಾರ್ಥಿಯ ಗಮನ ಬೈಬಲ್ ಮೇಲೆ ಬರೋಕೆ ನಾನೇನು ಮಾಡಬೇಕು ಅಂತ ಯೋಚಿಸಿ. ಚಿತ್ರಗಳು, ವಿಡಿಯೋಗಳು ಕಲಿತಿದ್ದನ್ನ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ ನಿಜ. ಆದ್ರೆ ನಾವು ಕಲಿತಿರೋದು ಮುಖ್ಯವಾಗಿ ಬೈಬಲಿಂದಾನೇ ಅಂತ ವಿದ್ಯಾರ್ಥಿ ನೆನಪಿಡಬೇಕು. ಹಾಗಾಗಿ ನೀವು ಮುಖ್ಯ ವಚನಗಳನ್ನ ಚರ್ಚಿಸುವಾಗ ಅದ್ರ ನಿಜ ಅರ್ಥ ಏನು ಅಂತ ವಿದ್ಯಾರ್ಥಿ ಕಂಡುಹಿಡಿಯೋಕೆ ಸಹಾಯ ಮಾಡಿ. ಚಿತ್ರಗಳನ್ನ, ವಿಡಿಯೋಗಳನ್ನ ತೋರಿಸುವಾಗ ಅದ್ರ ಹಿಂದೆ ಇರೋ ಬೈಬಲ್ ತತ್ವಗಳನ್ನ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡಿ. ಹಾಗಂತ ನೀವು ಬೈಬಲ್ ವಚನಗಳ ಬಗ್ಗೆ ಜಾಸ್ತಿ ಮಾತಾಡಬೇಕು ಅಥವಾ ತುಂಬ ವಚನಗಳನ್ನ ತೋರಿಸಬೇಕು ಅಂತೇನಿಲ್ಲ. ಬದ್ಲಿಗೆ ಓದಿದ ವಚನಗಳ ಅರ್ಥನ ವಿದ್ಯಾರ್ಥಿ ಗ್ರಹಿಸೋಕೆ ನೀವು ಸ್ವಲ್ಪ ಹೆಚ್ಚು ಸಮಯ ಕೊಡಬೇಕು. ಅಗತ್ಯ ಇದ್ರೆ ಮತ್ತೆ ಆ ವಚನನ ಇನ್ನೊಂದು ಸಲ ಓದಿಸಬೇಕು. ಈ ತರ ಮಾಡಿದ್ರೆ ನೀವು ಯಾವುದೋ ಪುಸ್ತಕನ, ಚಿತ್ರವನ್ನ ಅಥವಾ ವಿಡಿಯೋನ ಅಧ್ಯಯನ ಮಾಡ್ತಿಲ್ಲ, ಬದ್ಲಿಗೆ ಬೈಬಲ್ ಅಧ್ಯಯನ ಮಾಡ್ತಿದ್ದೀರ ಅಂತ ವಿದ್ಯಾರ್ಥಿಗೆ ಅರ್ಥ ಆಗುತ್ತೆ.—1 ಕೊರಿಂ. 2:13.
11-12. (ಎ) ನಾವು ಹೇಗೆ ಬೈಬಲ್ ವಿದ್ಯಾರ್ಥಿಗಳಿಗೆ ತಾಳ್ಮೆ ತೋರಿಸಬಹುದು? (ಅಪೊಸ್ತಲರ ಕಾರ್ಯ 17:1-4) (ಚಿತ್ರ ನೋಡಿ.) (ಬಿ) ಬೈಬಲ್ ಬಗ್ಗೆ ಏನೂ ಗೊತ್ತಿಲ್ಲದೇ ಇರೋರಿಗೆ ನಾವು ಹೇಗೆ ಸಹಾಯ ಮಾಡಬಹುದು?
11 ಕೆಲವು ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ವಿದ್ಯಾರ್ಥಿಗೆ ಕಷ್ಟ ಆಗಬಹುದು. ಆಗ ನೀವು ‘ತಾಳ್ಮೆಯಿಂದ ಕಲಿಸಬೇಕು.’ ಎಲ್ರೂ ಒಂದೇ ತರ ಪ್ರಗತಿ ಮಾಡೋಕಾಗಲ್ಲ ಅನ್ನೋದನ್ನ ನೀವು ನೆನಪಿಡಬೇಕು. ನಿಮಗೆ ಯಾವುದು ಸುಲಭವಾಗಿ ಅರ್ಥ ಆಯ್ತೋ, ಅದನ್ನ ವಿದ್ಯಾರ್ಥಿ ಅರ್ಥ ಮಾಡ್ಕೊಳ್ಳೋಕೆ ಸ್ವಲ್ಪ ಜಾಸ್ತಿ ಸಮಯ ಬೇಕಾಗಬಹುದು. ಪೌಲ ಥೆಸಲೋನಿಕದವ್ರಿಗೆ ಸತ್ಯ ಕಲಿಸಿದಾಗ ಅವರು ಅದನ್ನ ಬೇಗ ಅರ್ಥ ಮಾಡ್ಕೊಳ್ಳಲಿಲ್ಲ. ಅದಕ್ಕೆ ಅವನು ಆಗಾಗ ಹೋಗಿ ಅವ್ರಿಗೆ ಬೈಬಲ್ ವಚನಗಳನ್ನ ವಿವರಿಸಿ ಹೇಳ್ತಾ ಇರಬೇಕಾಯ್ತು.—ಅಪೊಸ್ತಲರ ಕಾರ್ಯ 17:1-4 ಓದಿ.
12 ನೀವು ಇನ್ನೊಂದು ರೀತಿಲೂ ತಾಳ್ಮೆ ತೋರಿಸಬಹುದು. ವಿದ್ಯಾರ್ಥಿಯ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೋಕೆ ಪ್ರಶ್ನೆಗಳನ್ನ ಕೇಳಬೇಕು. ಆದ್ರೆ ನೀವೇ ಜಾಸ್ತಿ ಮಾತಾಡೋಕೆ ಹೋಗಬಾರದು. ವಿದ್ಯಾರ್ಥಿ ಮಾತಾಡ್ವಾಗ ಚೆನ್ನಾಗಿ ಕೇಳಿಸ್ಕೊಬೇಕು. ಅವ್ರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೊಬೇಕು. ಕಲಿತಿರೋ ವಿಷ್ಯದ ಬಗ್ಗೆ ದೇವರ ಯೋಚ್ನೆ ಏನು ಅಂತ ವಿದ್ಯಾರ್ಥಿ ಚೆನ್ನಾಗಿ ಅರ್ಥ ಮಾಡ್ಕೊಬೇಕು. ಆದ್ರಿಂದ ಈ ಪಾಠದಲ್ಲಿರೋ ಯಾವ ವಚನ ಓದಿದ್ರೆ ಚೆನ್ನಾಗಿರುತ್ತೆ ಅಂತ ನೀವು ಕಂಡುಹಿಡಿಬೇಕು. ಕೆಲವ್ರಿಗಂತೂ ಬೈಬಲ್ ಬಗ್ಗೆ ಏನೇನೂ ಗೊತ್ತಿರಲ್ಲ. ಅಂಥವ್ರ ಕೈಗೆ ನೀವು ಒಂದು ಮುದ್ರಿತ ಬೈಬಲ್ ಕೊಟ್ರೆ ತುಂಬ ಪ್ರಯೋಜನ ಆಗುತ್ತೆ. ಉದಾಹರಣೆಗೆ, ನೀವು ಅವ್ರಿಗೆ ಹೊಸ ಲೋಕ ಭಾಷಾಂತರದಲ್ಲಿರೋ “ಬೈಬಲಿನ ಪರಿಚಯ” ಅನ್ನೋ ಭಾಗನ ತೋರಿಸಬಹುದು. ಆಮೇಲೆ ಬೈಬಲಲ್ಲಿ ಯಾವೆಲ್ಲಾ ವಿಷ್ಯಗಳಿವೆ ಅಂತ ಚುಟುಕಾಗಿ ಹೇಳಬಹುದು. ಉದಾಹರಣೆಗೆ, 15ನೇ ಪ್ರಶ್ನೆ ಕೆಳಗೆ ಇರೋ ವಚನಗಳಲ್ಲಿ ಒಂದೆರಡು ವಚನಗಳನ್ನ ಬಳಸಿ, ಜೀವನದಲ್ಲಿ ಸಂತೋಷ ಪಡ್ಕೊಳ್ಳೋಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ ಅಂತ ತಿಳಿಸಬಹುದು. ಸರಳವಾಗಿ ಹೇಳೋದಾದ್ರೆ ಬೈಬಲಿಗೆ ಇರೋ ಶಕ್ತಿನ ನೀವು ವಿದ್ಯಾರ್ಥಿಗೆ ಅರ್ಥ ಮಾಡಿಸಿಬಿಟ್ರೆ ಕಲಿಸೋ ಕಲೆಯನ್ನ ನೀವು ಕರಗತ ಮಾಡ್ಕೊಂಡಿದ್ದೀರ ಅಂತ ಹೇಳಬಹುದು.
ಚೆನ್ನಾಗಿ ಕಲಿಸುವವರು ಜಾಸ್ತಿ ಮಾತಾಡಲ್ಲ, ಜಾಸ್ತಿ ಕೇಳಿಸ್ಕೊತಾರೆ (ಪ್ಯಾರ 11-12 ನೋಡಿ)
ಗಮನ ಯೆಹೋವನ ಕಡೆ ತಿರುಗಿಸಿ
13. ನಾವು ಕಲಿಸುವಾಗ ಗಮನ ಯಾರ ಮೇಲೆ ಹೋಗೋ ತರ ಮಾಡಬೇಕು?
13 ನಾವು ಬೈಬಲ್ ಅಧ್ಯಯನ ಮಾಡೋದ್ರ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಯೆಹೋವನ ಬಗ್ಗೆ ಜಾಸ್ತಿ ಕಲಿತು ಆತನಿಗೆ ಹತ್ರ ಆಗಬೇಕು ಅನ್ನೋದೆ. (ಯಾಕೋ. 4:8) ಹಾಗಾಗಿ ನಾವು ಮಾಡೋ ಕೆಲಸನ ಸ್ಟೇಜ್ ಮೇಲೆ ಲೈಟ್ ಹಾಕೋ ವ್ಯಕ್ತಿಗೆ ಹೋಲಿಸಬಹುದು. ನಾಟಕ ನಡೀವಾಗ ಅವನು ಆ ಲೈಟ್‌ನ ತನ್ನ ಮೇಲೆ ಹಾಕ್ಕೊಳಲ್ಲ, ಮುಖ್ಯ ಪಾತ್ರಧಾರಿ ಮೇಲೆ ಹಾಕ್ತಾನೆ. ಅದೇ ತರಾನೇ ನಾವು ಕಲಿಸುವಾಗ ವಿದ್ಯಾರ್ಥಿ ಗಮನ ನಮ್ಮ ಮೇಲೆ ಬರೋ ತರ ಮಾಡ್ಕೊಬಾರದು, ಯೆಹೋವನ ಮೇಲೆ ಹೋಗೋ ತರ ಮಾಡಬೇಕು.
14. ವಿದ್ಯಾರ್ಥಿ ಯೆಹೋವನನ್ನ ಮೆಚ್ಚಿಸೋ ತರ ಮಾಡೋಕೆ ನೀವೇನು ಮಾಡಬಹುದು?
14 ಯೆಹೋವನ ಮೇಲೆ ಪ್ರೀತಿ ಬೆಳೆಸ್ಕೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ. ಆಗ ಅವನು ಯೆಹೋವನನ್ನ ಮೆಚ್ಚಿಸೋಕೆ ಪ್ರಯತ್ನ ಹಾಕ್ತಾನೆ. (ಜ್ಞಾನೋ. 27:11) ಒಂದು ಕಂಪನಿಗೆ ಸೇರಿಕೊಳ್ಳೋಕೆ ರೂಲ್ಸ್ ಫಾಲೋ ಮಾಡಿದ್ರೆ ಸಾಕಾಗುತ್ತೆ. ಇದೇ ತರ ಯೆಹೋವನ ಸಾಕ್ಷಿ ಆಗೋಕೆ ನಿಮ್ಮ ವಿದ್ಯಾರ್ಥಿ ಕೆಲವು ರೂಲ್ಸ್ ಫಾಲೋ ಮಾಡಿದ್ರೆ ಸಾಕಾಗುತ್ತೆ ಅಂತ ಅಂದ್ಕೊಬೇಡಿ. ನಿಮ್ಮ ವಿದ್ಯಾರ್ಥಿ ತನ್ನ ಜೀವನದಲ್ಲಿ ಬದಲಾವಣೆಗಳನ್ನ ಮಾಡಿ ಯೆಹೋವನನ್ನ ಮೆಚ್ಚಿಸಬೇಕು. ಉದಾಹರಣೆಗೆ, ನಿಮ್ಮ ವಿದ್ಯಾರ್ಥಿ ಯಾವುದಾದ್ರೂ ಕೆಟ್ಟ ಚಟನ ಬಿಡೋಕೆ ಒದ್ದಾಡ್ತಿದ್ದಾನಾ? ಹಾಗಾದ್ರೆ ಅವನ ಹತ್ರ ಈ ತರ ಪ್ರಶ್ನೆಗಳನ್ನ ಕೇಳಿ: “ಯೆಹೋವ ದೇವರು ಯಾಕೆ ಈ ಚಟನ ಇಷ್ಟಪಡಲ್ಲ? ನಿನಗೆ ಅದು ಖುಷಿ ಕೊಡ್ತಿದ್ರೂ ನೀನು ಅದನ್ನ ಬಿಡಬೇಕು ಅಂತ ಯೆಹೋವ ಯಾಕೆ ಹೇಳ್ತಿದ್ದಾನೆ? ಆತನು ಇದನ್ನ ಹೇಳ್ತಿರೋದ್ರಿಂದ ಆತನಿಗೆ ನಿನ್ನ ಮೇಲೆ ಪ್ರೀತಿ ಇದೆ ಅಂತ ಹೇಗೆ ಗೊತ್ತಾಗುತ್ತೆ?” ಇಂಥ ಪ್ರಶ್ನೆಗಳನ್ನ ಕೇಳ್ತಾ ಆ ವ್ಯಕ್ತಿ ಯೆಹೋವನ ಬಗ್ಗೆ ಯೋಚ್ನೆ ಮಾಡೋ ತರ ಮಾಡಿ. ಇದನ್ನ ಮಾಡೋಕೆ ನೀವೆಷ್ಟು ಪ್ರಯತ್ನ ಹಾಕ್ತೀರೋ ಅಷ್ಟೇ ಹೆಚ್ಚಾಗಿ ಆ ವ್ಯಕ್ತಿ ಯೆಹೋವ ಎಷ್ಟು ಒಳ್ಳೆ ಅಪ್ಪ ಅಂತ ಅರ್ಥ ಮಾಡ್ಕೊಳ್ತಾನೆ. ಹೀಗೆ ಮಾಡಿದ್ರೆ ನಿಮ್ಮ ವಿದ್ಯಾರ್ಥಿ ಯೆಹೋವನನ್ನ ಮೆಚ್ಚಿಸೋಕೆ ಹೆಚ್ಚು ಪ್ರಯತ್ನ ಹಾಕ್ತಾನೆ.
ಕಲಿಸೋ ಕಲೆಯನ್ನ ಕಲಿತಾ ಇರಿ
15. ನೀವು ಇನ್ನೂ ಚೆನ್ನಾಗಿ ಕಲಿಸೋಕೆ ಏನು ಮಾಡಬೇಕು?
15 ‘ಇನ್ನೂ ಚೆನ್ನಾಗಿ ಕಲಿಸೋಕೆ ನಂಗೆ ಸಹಾಯ ಮಾಡಪ್ಪ’ ಅಂತ ಯೆಹೋವನಿಗೆ ಪ್ರಾರ್ಥನೆ ಮಾಡಿ. (1 ಯೋಹಾ. 5:14) ಅದ್ರ ಜೊತೆಗೆ, ಸಭಾ ಕೂಟಗಳಲ್ಲಿ ಸಿಗೋ ತರಬೇತಿಗೆ ಹೆಚ್ಚು ಗಮನ ಕೊಡಿ. ಚೆನ್ನಾಗಿ ಕಲಿಸೋ ಸಹೋದರ ಸಹೋದರಿನ ನಿಮ್ಮ ಬೈಬಲ್ ಸ್ಟಡಿಗೆ ಕರ್ಕೊಂಡು ಹೋಗಿ. ‘ನಾನು ಇನ್ನೂ ಚೆನ್ನಾಗಿ ಕಲಿಸೋಕೆ ಏನು ಮಾಡಬೇಕು’ ಅಂತ ಅವ್ರ ಹತ್ರ ಕೇಳಿ. ನೆನಪಿಡಿ, ನೀವು ಕಲಿಸ್ತಿರೋ ಪುಸ್ತಕ ನಿಮಗೆ ಚೆನ್ನಾಗಿ ಪರಿಚಯ ಆಗಿದೆ, ಆದ್ರೆ ವಿದ್ಯಾರ್ಥಿಗೆ ಅದು ಹೊಸದು. ಹಾಗಾಗಿ ನೀವು ಚರ್ಚೆ ಮಾಡ್ತಿರೋ ವಿಷ್ಯದ ಬಗ್ಗೆ ಅವ್ರಿಗೆ ಹೇಗೆ ಅನಿಸುತ್ತೆ ಅಂತ ಯೋಚ್ನೆ ಮಾಡಿ. ನೀವು ಕಲಿಸ್ತಿರೋ ವಿಷ್ಯದಿಂದ ಅವ್ರಿಗೆ ಏನು ಪ್ರಯೋಜನ ಸಿಗುತ್ತೆ ಅನ್ನೋದನ್ನ ಚೆನ್ನಾಗಿ ಅರ್ಥ ಮಾಡಿಸಿ. ನೀವು ಈ ತರ ಮಾಡಿದ್ರೆ ವಿದ್ಯಾರ್ಥಿ ಯೆಹೋವನ ಜೊತೇಲಿ ಒಂದು ಒಳ್ಳೆ ಸ್ನೇಹ ಬೆಳೆಸ್ಕೊತಾನೆ ಮತ್ತು ನಿಜ ಸಂತೋಷ ಅಂದ್ರೇನು ಅಂತ ಅರ್ಥ ಮಾಡ್ಕೊಳ್ತಾನೆ.—ಕೀರ್ತ. 1:1-3.
16. ಕಲಿಸೋ ಕಲೆಯನ್ನ ಕರಗತ ಮಾಡ್ಕೊಳ್ಳೋದ್ರಿಂದ ಏನು ಪ್ರಯೋಜನ?
16 ಯೆಹೋವನ ಬಗ್ಗೆ ಬೇರೆಯವ್ರಿಗೆ ಕಲಿಸಿದಾಗ ಸಿಗೋ ಸಂತೋಷ ಅಷ್ಟಿಷ್ಟಲ್ಲ. ಈ ಕಲಿಸೋ ಕೆಲಸ ಹೊಸ ಲೋಕದಲ್ಲೂ ಇರುತ್ತೆ. ಆಗ್ಲೂ ನಾವು ಅದ್ರಿಂದ ಸಂತೋಷ ಪಡೀಬಹುದು. ಹಾಗಾಗಿ ನಾವೀಗ ಜನ್ರಿಗೆ ಆಸಕ್ತಿ ತೋರಿಸೋಣ, ಬೈಬಲನ್ನ ಚೆನ್ನಾಗಿ ಬಳಸೋಣ ಮತ್ತು ಅವ್ರ ಗಮನ ಯೆಹೋವ ಮೇಲೆ ಹೋಗೋ ಹಾಗೆ ಮಾಡೋಣ. ಹೀಗೆ ಮಾಡಿದ್ರೆ ನಾವು ನಮ್ಮ ಕಲಿಸೋ ಕಲೆಯನ್ನ ಕರಗತ ಮಾಡಿಕೊಳ್ತೀವಿ.
ಗೀತೆ 65 ಮುನ್ನಡೆ ಮುನ್ನಡೆ