ಯೆಹೋವನ ಬಗ್ಗೆ ಕಲಿಯಲು ಅಂಧರಿಗೆ ಸಹಾಯ ಮಾಡಿ
1. ಅಂಧರಿಗೆ ಯೇಸು ಹೇಗೆ ಕನಿಕರ ತೋರಿಸಿದನು?
1 ಯೇಸುವಿನ ಮರಣಕ್ಕಿಂತ ಕೆಲವು ದಿನಗಳ ಮುಂಚೆ ನಡೆದಂಥ ಘಟನೆ. ಯೇಸು ಯೆರಿಕೋ ಪಟ್ಟಣವನ್ನು ಬಿಟ್ಟು ಹೋಗುತ್ತಿರುವಾಗ ಇಬ್ಬರು ಕುರುಡರು “ಕರ್ತನೇ . . . ನಮಗೆ ಕರುಣೆ ತೋರಿಸು” ಎಂದು ಅಂಗಲಾಚಿದರು. ಇನ್ನು ಸ್ವಲ್ಪ ಸಮಯದಲ್ಲಿ ತಾನು ಅನುಭವಿಸಲಿದ್ದ ಕಷ್ಟಗಳ ಬಗ್ಗೆ ಯೇಸುವಿಗೆ ಚಿಂತೆಯಿತ್ತು. ಆದರೂ ಅವರ ಕೂಗಿಗೆ ಕಿವಿಗೊಟ್ಟನು. ಕನಿಕರದಿಂದ ಹತ್ತಿರ ಕರೆದು ವಾಸಿ ಮಾಡಿದನು. (ಮತ್ತಾ. 20:29-34) ಅಂಧರಿಗೆ ಯೇಸು ತೋರಿಸಿದಂಥ ಕನಿಕರವನ್ನು ನಾವು ಹೇಗೆ ಅನುಕರಿಸಬಹುದು?
2. ಕಣ್ಣು ಕಾಣದಿರುವವರಿಗೆ ನೀವು ಹೇಗೆ ಸಾಕ್ಷಿ ನೀಡಬಹುದು?
2 ಸಹಾಯ ಮಾಡಲು ಸಿದ್ಧರಿರಿ: ಕಣ್ಣು ಕಾಣದಿರುವವರು ಯಾರಾದರೂ ನಿಮಗೆ ಸಿಕ್ಕಿದರೆ ನೀವೇನು ಮಾಡಬಹುದು? ಮೊದಲು ನಿಮ್ಮ ಪರಿಚಯ ಮಾಡಿಕೊಂಡು ಅವರಿಗೆ ಸಹಾಯ ಏನಾದರೂ ಬೇಕಾ ಅಂತ ಕೇಳಿ. ತಮಗೆ ಕಣ್ಣು ಕಾಣದಿರುವುದರಿಂದ ಜನರು ತಮ್ಮನ್ನು ಮೋಸ ಮಾಡಬಹುದೆಂಬ ಭಯದಿಂದ ಸಹಾಯ ಪಡೆಯಲು ಅವರು ಹಿಂಜರಿಯಬಹುದು. ಆದರೆ ಸ್ನೇಹಪರವಾಗಿ ಮಾತಾಡುವ ಮೂಲಕ ಈ ಪರಿಸ್ಥಿತಿಯನ್ನು ನೀವು ಗೆಲ್ಲಬಹುದು. ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಿ, ಕೆಲವರಿಗೆ ಕಣ್ಣು ಅಲ್ಪ ಸ್ವಲ್ಪ ಕಾಣಿಸಬಹುದು. ಹಾಗಾಗಿ ವಿವೇಚನೆ ಬಳಸಿ ಅವರಿಗೆ ಎಷ್ಟು ಸಹಾಯ ಬೇಕಾಗಬಹುದು ಅಂತ ತಿಳಿದುಕೊಂಡು ಸಹಾಯ ಮಾಡಿ. ಆಮೇಲೆ, ‘ನಾವು ಬೈಬಲಿನ ಸಾಂತ್ವನಕರ ವಿಷಯಗಳನ್ನು ತಿಳಿಸುತ್ತಿದ್ದೀವಿ. ಒಂದು ವಚನ ಓದಿ ಹೇಳಬಹುದಾ?’ ಅಂತ ಕೇಳಿ. ಅವರು ಒಪ್ಪಿದರೆ ಕೀರ್ತನೆ 146:8 ಅಥವಾ ಯೆಶಾಯ 35:5, 6ನ್ನು ಓದಿ. ಒಂದುವೇಳೆ ಆ ವ್ಯಕ್ತಿಗೆ ಬ್ರೇಲ್ ಲಿಪಿ ಓದಲು ಗೊತ್ತಿರುವುದಾದರೆ, ‘ಬೈಬಲ್ ಬಗ್ಗೆ ಹೆಚ್ಚನ್ನು ತಿಳಿಸುವ ಬ್ರೇಲ್ ಪ್ರಕಾಶನವನ್ನು ತಂದುಕೊಟ್ಟರೆ ಓದಲು ಇಷ್ಟಪಡುತ್ತೀರಾ?’ ಅಂತ ಕೇಳಿ. jw.org ವೆಬ್ಸೈಟಿನಿಂದ ಆಡಿಯೋ ರೂಪದ ಪ್ರಕಾಶನಗಳನ್ನು ಪಡೆಯಲು ಸಹಾಯ ಮಾಡಿ. ಅವರ ಹತ್ತಿರ ಕಂಪ್ಯೂಟರ್ ಇದ್ದು ಅದರಲ್ಲಿ ಸ್ಕ್ರೀನ್ನಲ್ಲಿರುವ ಮಾಹಿತಿಯನ್ನು ಗಟ್ಟಿಯಾಗಿ ಓದಿ ತಿಳಿಸುವ ಸ್ಕ್ರೀನ್ ರೀಡರ್ ಪ್ರೋಗ್ರಾಮ್ ಇದ್ದರೆ ಇನ್ನೂ ಒಳ್ಳೇದು. ಆಗ ಅವರು jw.org ವೆಬ್ಸೈಟ್ನಲ್ಲಿರುವ ಮುದ್ರಿತ ಲೇಖನಗಳನ್ನು RTF (ರಿಚ್ ಟೆಕ್ಸ್ಟ್ ಫಾರ್ಮ್ಯಾಟ್) ರೂಪದಲ್ಲಿ ಡೌನ್ಲೋಡ್ ಮಾಡಿಕೊಂಡು ಅದರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು.—“ಅಂಧರಿಗೆ ಸಹಾಯ ಮಾಡುವಾಗ ನೆನಪಿನಲ್ಲಿಡಬೇಕಾದ ಅಂಶಗಳು” ಎಂಬ ಭಾಗ ನೋಡಿ.
3. ನಿಮ್ಮ ಸೇವಾಕ್ಷೇತ್ರದಲ್ಲಿ ಅಂಧರನ್ನು ಹೇಗೆ ಹುಡುಕಬಹುದು?
3 ಅಂಧರು ಎಲ್ಲಿ ಸಿಗಬಹುದು ಅಂತ ತಿಳಿದುಕೊಳ್ಳಿ: ಮನೆ-ಮನೆ ಸೇವೆಯಲ್ಲಿ ಇಂಥವರು ಸಿಗುವುದು ಅಪರೂಪ. ಯಾಕೆಂದರೆ ಅಪರಿಚಿತರು ತಮ್ಮ ಮನೆ ಬಾಗಿಲಿಗೆ ಬಂದಾಗ ಸಾಮಾನ್ಯವಾಗಿ ಅವರು ಮಾತಾಡಲು ಹಿಂಜರಿಯುತ್ತಾರೆ. ಹಾಗಾಗಿ ಅವರಿಗೆ ಸಾಕ್ಷಿ ನೀಡಬೇಕೆಂದರೆ ಮೊದಲು ಅವರನ್ನು ‘ಹುಡುಕಬೇಕು.’ (ಮತ್ತಾ. 10:11) ಇವರು ಎಲ್ಲಿ ಸಿಗುತ್ತಾರೆ ಎಂದು ಯೋಚನೆ ಮಾಡಿ. ನಿಮ್ಮ ಸಹಪಾಠಿ ಅಥವಾ ಸಹೋದ್ಯೋಗಿಗಳಲ್ಲಿ ಯಾರಾದರೂ ಅಂಧರಿದ್ದಾರಾ? ಅವರ ಹತ್ತಿರ ಮಾತಾಡಿ. ನಿಮ್ಮ ಸೇವಾಕ್ಷೇತ್ರದಲ್ಲಿ ಅಂಧರ ಶಾಲೆಯಿದೆಯಾ? ಆ ಶಾಲೆಯ ಲೈಬ್ರರಿಯಲ್ಲಿ ಇಡಲು ನಮ್ಮ ಬ್ರೇಲ್ ಪ್ರಕಾಶನಗಳನ್ನು ಕೊಡಿ. ನಿಮಗೆ ಗೊತ್ತಿರುವವರ ಸಂಬಂಧಿಕರು ಯಾರಾದರೂ ಅಂಧರಿದ್ದಾರಾ? ನಿಮ್ಮ ಸೇವಾಕ್ಷೇತ್ರದಲ್ಲಿ ಅಂಧರ ಕ್ಷೇಮಕ್ಕಾಗಿರುವ ಸಂಸ್ಥೆಗಳು ಅಥವಾ ವಸತಿಗೃಹಗಳು ಇವೆಯಾ? ಹಾಗಿದ್ದರೆ ಅವರ ಕುಟುಂಬ ಸದಸ್ಯನ ಹತ್ತಿರ ಅಥವಾ ಸಂಸ್ಥೆಯ ಮುಖ್ಯಸ್ಥನ ಇಲ್ಲವೇ ರಿಸೆಪ್ಶನಿಸ್ಟ್ ಹತ್ತಿರ ಮೊದಲು ಮಾತಾಡಿ. ‘ಅಂಧರಿಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳಿಗೆ ತುಂಬಾ ಆಸಕ್ತಿಯಿದೆ. ಅವರಿಗಾಗಿ ಬ್ರೇಲ್ ಪ್ರಕಾಶನಗಳನ್ನು ಮತ್ತು ಆಡಿಯೋ ರೆಕಾರ್ಡಿಂಗ್ಗಳನ್ನು ತಂದು ಕೊಡಬಹುದಾ?’ ಎಂದು ಕೇಳಿ. ದೇವರು ಬಹು ಬೇಗನೆ ಎಲ್ಲ ಅಂಧರಿಗೆ ಶಾಶ್ವತವಾಗಿ ಕಣ್ಣು ಕಾಣಿಸುವಂತೆ ಮಾಡುವನೆಂಬ ಬೈಬಲಿನ ವಾಗ್ದಾನದ ಬಗ್ಗೆ ತಿಳಿಸಿ. ಸಾಧ್ಯವಾದರೆ jw.org ವೆಬ್ಸೈಟ್ನಲ್ಲಿರುವ ಕಣ್ಣಿಲ್ಲದ ನನಗೆ ಇದು ಕಣ್ಣಾಗಿದೆ [ಇಂಗ್ಲಿಷ್] ಎಂಬ ವಿಡಿಯೋ ತೋರಿಸಿ. ಒಬ್ಬ ಕಣ್ಣು ಕಾಣದ ವ್ಯಕ್ತಿಗೆ ಬ್ರೇಲ್ ಲಿಪಿಯಲ್ಲಿರುವ ಬೈಬಲ್ ಹೇಗೆ ಸಹಾಯ ಮಾಡಿತು ಅಂತ ಆ ವಿಡಿಯೋದಲ್ಲಿದೆ. ಹೀಗೆ ನಿಮ್ಮ ಭೇಟಿಯ ಉದ್ದೇಶವನ್ನು ಮೊದಲು ಅವರಿಗೆ ಸ್ಪಷ್ಟವಾಗಿ ತಿಳಿಸಿದರೆ, ಕಣ್ಣು ಕಾಣದಿರುವವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಅವರು ನಿಮಗೆ ಅನುಮತಿ ಕೊಡಬಹುದು.
4. ಸಹೋದರಿ ಜ್ಯಾನೆಟ್ರ ಅನುಭವದಿಂದ ಯಾವ ಪಾಠಗಳನ್ನು ಕಲಿಯಬಹುದು?
4 ಈ ಅನುಭವವನ್ನು ಗಮನಿಸಿ. ಕಣ್ಣು ಕಾಣದಿರುವ ಸಹೋದರಿ ಜ್ಯಾನೆಟ್, ಅಂಧರ ವಸತಿಗೃಹವೊಂದಕ್ಕೆ ಭೇಟಿ ನೀಡಿ ಒಬ್ಬ ಯುವತಿಯ ಹತ್ತಿರ ಮಾತಾಡಿದರು. “ಯೇಸು ಅಂಧರನ್ನು ವಾಸಿಮಾಡುವ ಮೂಲಕ ಅಂಧರಿಗಾಗಿ ಮುಂದೆ ಭವಿಷ್ಯದಲ್ಲಿ ಏನು ಮಾಡಲಿದ್ದಾನೆ ಅಂತ ತೋರಿಸಿಕೊಟ್ಟನು” ಎಂದು ಅವಳಿಗೆ ಹೇಳಿದರು. ಆಮೇಲೆ ಪ್ರಕಟನೆ 21:3, 4ನ್ನು ಓದಿ ದೇವರ ರಾಜ್ಯದ ಮೂಲಕ ಈ ಮಾತುಗಳು ಹೇಗೆ ನೆರವೇರುವವು ಅಂತ ವಿವರಿಸಿದರು. ಆಗ ಆ ಯುವತಿ ಒಂದು ಕ್ಷಣ ಸುಮ್ಮನಿದ್ದು “ನಾವು ಕುರುಡರಾಗಿರುವುದಕ್ಕೆ ಕಾರಣ, ನಾವು ಅಥವಾ ನಮ್ಮ ಪೂರ್ವಜರು ಮಾಡಿದ ಕರ್ಮ ಅಂತ ಜನ ಹೇಳುತ್ತಾರೆ. ಆದರೆ ಅಂಧರಾದ ನಿಮಗೆ ನಮ್ಮ ಪರಿಸ್ಥಿತಿ ಅರ್ಥ ಆಗುತ್ತೆ, ತುಂಬಾ ಒಳ್ಳೇ ವಿಷಯ ಹೇಳಿದ್ರಿ” ಅಂತ ತನ್ನ ಭಾವನೆ ವ್ಯಕ್ತಪಡಿಸಿದಳು. ಇದಾದ ಮೇಲೆ ಸಹೋದರಿ ಜ್ಯಾನೆಟ್ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ಡೌನ್ಲೋಡ್ ಮಾಡಿಕೊಳ್ಳಲು ಬೇಕಾದ ಲಿಂಕ್ ಅನ್ನು ಆಕೆಗೆ ಇ-ಮೇಲ್ ಮೂಲಕ ಕಳುಹಿಸಿದರು. ಈಗ ಆ ಪುಸ್ತಕದಿಂದ ಅವಳು ವಾರಕ್ಕೆ ಎರಡು ಬಾರಿ ಅಧ್ಯಯನ ಮಾಡುತ್ತಿದ್ದಾಳೆ.
5. ಯೇಸುವಿನಂತೆ ಅಂಧರಿಗೆ ದೃಷ್ಟಿ ಕೊಡಲು ನಮ್ಮಿಂದ ಆಗದಿದ್ದರೂ ಅವರ ಕಡೆ ನಿಜವಾದ ಕಾಳಜಿ ತೋರಿಸುವುದಾದರೆ ಯಾವ ಆಶೀರ್ವಾದಗಳನ್ನು ಪಡೆಯಬಹುದು?
5 ಯೇಸುವಿನಂತೆ ಅಂಧರಿಗೆ ದೃಷ್ಟಿ ಕೊಡಲು ನಮ್ಮಿಂದಾಗುವುದಿಲ್ಲ. ಆದರೆ ಅವರಿಗೆ ಮತ್ತು ಈ ಲೋಕದ ದೇವರಾದ ಸೈತಾನನು ಯಾರನ್ನೆಲ್ಲಾ ಆಧ್ಯಾತ್ಮಿಕವಾಗಿ ಕುರುಡರನ್ನಾಗಿ ಮಾಡಿದ್ದಾನೋ ಅವರಿಗೆ ದೇವರ ವಾಕ್ಯದ ಬೆಳಕಿನ ಕುರಿತು ಕಲಿಸಲು ನಮ್ಮಿಂದಾಗುತ್ತದೆ. (2 ಕೊರಿಂ. 4:4) ಯೆರಿಕೋ ಪಟ್ಟಣದ ಹತ್ತಿರ ಯೇಸು ಅಂಧರನ್ನು ವಾಸಿ ಮಾಡಲು ಕಾರಣ ಅವನಿಗಿದ್ದ ಕನಿಕರ. (ಮತ್ತಾ. 20:34) ಅಂಥದ್ದೇ ಕನಿಕರವನ್ನು ನಾವು ಅಂಧರ ಕಡೆ ತೋರಿಸಬೇಕು. ಆಗ, ಅವರಿಗೆ ಶಾಶ್ವತವಾಗಿ ದೃಷ್ಟಿ ಕೊಡಲಿರುವ ಯೆಹೋವ ದೇವರ ಬಗ್ಗೆ ತಿಳಿಸುವ ಸುಯೋಗ ನಮ್ಮದಾಗುತ್ತದೆ.