ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
ಭ್ರಷ್ಟವಾದ ಈ ಹಳೆಯ ಲೋಕದ ಅಂತಿಮ ದಿನಗಳಲ್ಲಿ, ನಮ್ಮ ಆಧ್ಯಾತ್ಮಿಕ ವಸ್ತ್ರಗಳನ್ನು ಮತ್ತು ನಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುವುದು ಅತಿ ಪ್ರಾಮುಖ್ಯವಾಗಿದೆ. (ಪ್ರಕ. 16:15) ಆದುದರಿಂದ, 2006ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮುಖ್ಯ ವಿಷಯವು ಸೂಕ್ತವಾಗಿಯೇ “ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ” ಎಂದಾಗಿದೆ.—ಕೊಲೊ. 3:10, NW.
ಮೊದಲನೆಯ ದಿನ: ಮೊದಲ ಭಾಷಣಮಾಲೆಯು, “ನೂತನ ವ್ಯಕ್ತಿತ್ವದ ಅಂಶಗಳನ್ನು ಪ್ರದರ್ಶಿಸುವುದು” ಎಂದಾಗಿದೆ. ಮತ್ತು ಇದು, ನೂತನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೇಗೆ ಪ್ರಯೋಜನವನ್ನು ತರುತ್ತದೆ ಎಂಬುದನ್ನು ಎತ್ತಿತೋರಿಸುತ್ತದೆ. ನೂತನ ವ್ಯಕ್ತಿತ್ವವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಇದನ್ನು, “ಯೋಗ್ಯ ರೀತಿಯಲ್ಲಿ ಧ್ಯಾನಿಸಲಿಕ್ಕಾಗಿ ನಿಮ್ಮನ್ನು ಶಿಸ್ತುಗೊಳಿಸಿಕೊಳ್ಳುವುದು” ಮತ್ತು “ನೂತನ ವ್ಯಕ್ತಿತ್ವವನ್ನು ರೂಪಿಸುವಂಥ ಶಿಕ್ಷಣ” ಎಂಬ ಮೊದಲನೆಯ ದಿನದ ಕೊನೆಯ ಎರಡು ಭಾಷಣಗಳು ಪರಿಗಣಿಸುವವು.
ಎರಡನೆಯ ದಿನ: “ಜ್ಞಾನಿಗಳ ನಾಲಿಗೆಯನ್ನು ಬೆಳೆಸಿಕೊಳ್ಳುವುದು” ಎಂಬ ಎರಡನೆಯ ಭಾಷಣಮಾಲೆಯಲ್ಲಿ, ನೂತನ ವ್ಯಕ್ತಿತ್ವವು ನಮ್ಮ ನಾಲಿಗೆಯ ಉಪಯೋಗವನ್ನು ಹೇಗೆ ಪ್ರಭಾವಿಸಬಲ್ಲದು ಎಂಬುದನ್ನು ಪರಿಗಣಿಸಲಾಗುವುದು. “ಕೆಡುಕನನ್ನು ನೀವು ಜಯಿಸುತ್ತಿದ್ದೀರೊ?” ಎಂಬುದು ಸಾರ್ವಜನಿಕ ಭಾಷಣದ ಮುಖ್ಯ ವಿಷಯವಾಗಿದೆ. ಸೈತಾನನ ತಂತ್ರೋಪಾಯಗಳ ವಿರುದ್ಧ ಎಚ್ಚರದಿಂದಿರುವ ಅಗತ್ಯವನ್ನು ಈ ಭಾಷಣವು ಎತ್ತಿತೋರಿಸುತ್ತದೆ. ಸಮ್ಮೇಳನದ ಕೊನೆಯ ಎರಡು ಭಾಷಣಗಳು, “ಪ್ರಪಂಚದ ದೋಷವು ಹತ್ತದಂತೆ ನೋಡಿಕೊಳ್ಳಿರಿ” ಮತ್ತು “ನಮ್ಮ ಆಂತರ್ಯವನ್ನು ದಿನೇದಿನೇ ಹೊಸದುಗೊಳಿಸುತ್ತಾ ಇರುವುದು” ಎಂದಾಗಿವೆ. ಈ ಎರಡು ಭಾಷಣಗಳು, ದೇವರ ನೀತಿಯ ಮಾರ್ಗಗಳಿಗೆ ವಿರುದ್ಧವಾಗಿರುವ ಮನೋಭಾವಗಳನ್ನು ಮತ್ತು ನಡತೆಯನ್ನು ತ್ಯಜಿಸಲು ಹಾಗೂ ಯೆಹೋವನ ಆರಾಧನೆಯಲ್ಲಿ ಸ್ಥಿರಚಿತ್ತರಾಗಿ ಉಳಿಯಲು ನಮಗೆ ಸಹಾಯಮಾಡುವವು.
ನೂತನ ವ್ಯಕ್ತಿತ್ವವನ್ನು ಧರಿಸಲು ಮತ್ತು ಅದನ್ನು ಕಾಪಾಡಿಕೊಳ್ಳಲು ಸಿಗುವ ಈ ಉತ್ತೇಜನಕ್ಕಾಗಿ ನಾವು ಬಹಳ ಕಾತರದಿಂದ ಎದುರುನೋಡುತ್ತಿದ್ದೇವೆ!