ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ
ಈ ‘ಕಠಿನಕಾಲಗಳಲ್ಲಿ’ ಯೆಹೋವನ ಅನುಗ್ರಹವನ್ನು ಪಡೆದು ಅದನ್ನು ಕಾಪಾಡಿಕೊಳ್ಳಲು ನಮಗೆ ದೈವಿಕ ವಿವೇಕದ ಅಗತ್ಯವಿದೆ. (2 ತಿಮೊ. 3:1) 2005ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮವು “‘ಮೇಲಣಿಂದ ಬರುವ ವಿವೇಕ’ದಿಂದ ಮಾರ್ಗದರ್ಶಿಸಲ್ಪಡಿರಿ” ಎಂಬ ಮುಖ್ಯ ವಿಷಯವನ್ನು ವಿಕಸಿಸುವಾಗ ನಮಗೆ ಪ್ರಾಯೋಗಿಕ ಬುದ್ಧಿವಾದ ಮತ್ತು ಪ್ರೋತ್ಸಾಹವನ್ನು ನೀಡುವುದು.—ಯಾಕೋ. 3:17, NW.
“‘ಮೇಲಣಿಂದ ಬರುವ ವಿವೇಕವನ್ನು’ ನಮ್ಮ ಜೀವನದಲ್ಲಿ ಪ್ರದರ್ಶಿಸುವುದು” ಎಂಬ ಮೊದಲನೆಯ ಭಾಷಣಮಾಲೆಯು ನೈತಿಕವಾಗಿ ಶುದ್ಧರಾಗಿರುವುದರಲ್ಲಿ, ಸಮಾಧಾನಪ್ರವೃತ್ತಿಯುಳ್ಳವರಾಗಿರುವುದರಲ್ಲಿ, ನ್ಯಾಯಸಮ್ಮತರಾಗಿರುವುದರಲ್ಲಿ ಮತ್ತು ವಿಧೇಯತೆ ತೋರಿಸಲು ಸಿದ್ಧರಾಗಿರುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ನೋಡಲು ನಮಗೆ ಸಹಾಯಮಾಡುವುದು. ಅನಂತರ, ಸ್ವರ್ಗೀಯ ವಿವೇಕದ ಇತರ ಮೂರು ವೈಶಿಷ್ಟ್ಯಗಳ ಕಡೆಗೆ ಸರ್ಕಿಟ್ ಮೇಲ್ವಿಚಾರಕನು ಗಮನಹರಿಸುವನು. ಕ್ರೈಸ್ತ ಶುಶ್ರೂಷಕರನ್ನು ‘ಶಾಸ್ತ್ರಾಭ್ಯಾಸಮಾಡದ ಸಾಧಾರಣರು’ ಎಂದು ಕೆಲವರು ವೀಕ್ಷಿಸುವುದಾದರೂ, ದೇವರ ವಿವೇಕದ ಕುರಿತು ಮಾತಾಡಲು ಅವರು ಹೇಗೆ ಸುಸಜ್ಜಿತರಾಗಿದ್ದಾರೆ ಎಂಬುದನ್ನು ತೋರಿಸುತ್ತಾ ಜಿಲ್ಲಾ ಮೇಲ್ವಿಚಾರಕನು ಮೊದಲನೆಯ ದಿನವನ್ನು ಕೊನೆಗೊಳಿಸುವನು.—ಅ. ಕೃ. 4:13.
ಎರಡನೆಯ ದಿನದಂದು, “ಭಕ್ತಿವರ್ಧಕ ವಿಷಯಗಳನ್ನು ಬೆನ್ನಟ್ಟಿರಿ” ಎಂಬ ಭಾಷಣಮಾಲೆಯು, ನಮ್ಮನ್ನು ಆಧ್ಯಾತ್ಮಿಕವಾಗಿ ಛಿದ್ರಗೊಳಿಸಬಲ್ಲ ವಿಷಯಗಳನ್ನು ಗುರುತಿಸಿ ಅವನ್ನು ತ್ಯಜಿಸಲು ನಮಗೆ ಸಹಾಯಮಾಡುವುದು. ನಾವು ಸಭಾ ಕೂಟಗಳಲ್ಲಿ, ಕ್ಷೇತ್ರ ಶುಶ್ರೂಷೆಯಲ್ಲಿ ಮತ್ತು ಕುಟುಂಬ ವೃತ್ತದೊಳಗೆ ಹೇಗೆ ಇತರರ ಭಕ್ತಿಯನ್ನು ವರ್ಧಿಸಬಲ್ಲೆವು ಎಂಬುದನ್ನೂ ಈ ಭಾಷಣಮಾಲೆಯು ತೋರಿಸುವುದು. “ದೈವಿಕ ವಿವೇಕವು ನಮಗೆ ಪ್ರಯೋಜನನೀಡುವಂಥ ವಿಧ” ಎಂಬ ಬಹಿರಂಗ ಭಾಷಣವು ನಾವು ನಮ್ಮ ಜೀವಿತಗಳಲ್ಲಿ ದೈವಿಕ ಮೂಲತತ್ತ್ವಗಳನ್ನು ಅನ್ವಯಿಸುತ್ತಾ ಹೋಗುವಾಗ ಸಿಗುವ ಪ್ರಯೋಜನಗಳ ವಿಷಯದಲ್ಲಿ ನಮ್ಮ ಗಣ್ಯತೆಯನ್ನು ಗಾಢಗೊಳಿಸುವುದು. “ದೈವಿಕ ವಿವೇಕಕ್ಕನುಗುಣವಾಗಿ ಕ್ರಿಯೆಗೈಯುವುದು ನಮ್ಮನ್ನು ಕಾಪಾಡುತ್ತದೆ” ಎಂಬ ಸಮಾಪ್ತಿಯ ಭಾಷಣವು ಈ ಕಡೇ ದಿವಸಗಳಲ್ಲಿ ವಿವೇಕಕ್ಕಾಗಿ ನಾವು ಯೆಹೋವನ ಕಡೆಗೆ ತಿರುಗುವೆವು ಎಂಬ ನಮ್ಮ ದೃಢಸಂಕಲ್ಪವನ್ನು ಬಲಪಡಿಸುವುದು.
ಪ್ರತಿ ಸಮ್ಮೇಳನದ ಮುಖ್ಯ ಘಟನೆಯು ಹೊಸ ಶಿಷ್ಯರ ದೀಕ್ಷಾಸ್ನಾನವಾಗಿರುತ್ತದೆ. ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಕಾವಲಿನಬುರುಜು ಅಧ್ಯಯನವು ಸಹ ಕಾರ್ಯಕ್ರಮದಲ್ಲಿ ಸೇರಿಸಲ್ಪಟ್ಟಿದೆ. ಯೆಹೋವನು ತಾನು ಒದಗಿಸುವ ವಿವೇಕದಿಂದ ನಾವೆಲ್ಲರೂ ಪ್ರಯೋಜನ ಪಡೆಯಬೇಕೆಂದು ಬಯಸುತ್ತಾನೆ. ಸರ್ಕಿಟ್ ಸಮ್ಮೇಳನದಲ್ಲಿ ನಮಗೆ ಒದಗಿಸಲ್ಪಡಲಿರುವ ಬುದ್ಧಿವಾದ ಮತ್ತು ಪ್ರೋತ್ಸಾಹದಿಂದ ನಾವು ಆಧ್ಯಾತ್ಮಿಕವಾಗಿ ಸಂಪದ್ಭರಿತರಾಗುವೆವು.—ಜ್ಞಾನೋ. 3:13-18.