ವಿಧ್ವಂಸಕತೆಯನ್ನು—ನಿರ್ಮೂಲಗೊಳಿಸಲು ಸಾಧ್ಯವಿದೆ
“ಹದಿವಯಸ್ಕರ ವಿಧ್ವಂಸಕತೆಯನ್ನು, ವಯಸ್ಕರು ಹಾಗೂ ಅವರ ಮಟ್ಟಗಳಿಗೆ ತೋರಿಸಲ್ಪಡುವ ಅಗೌರವ ಮತ್ತು ದ್ವೇಷದ ಅಭಿವ್ಯಕ್ತಿಯಾಗಿ ಸದಾ ಪರಿಗಣಿಸಲಾಗಿದೆ” ಎಂದು ಜೇನ್ ನಾರ್ಮನ್ ಮತ್ತು ಮೈರನ್ ಡಬ್ಲ್ಯೂ. ಹ್ಯಾರಿಸ್ ಎಂಬ ಬರಹಗಾರರು ವಿವರಿಸುತ್ತಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಏನನ್ನೂ ಮಾಡಸಾಧ್ಯವಿಲ್ಲವೆಂದು ಅನೇಕ ಯುವ ಜನರು ನೆನಸುವುದಾದರೂ, “ಹೆತ್ತವರು ತಮ್ಮ ಮಕ್ಕಳ ಕಡೆಗೆ ಹೆಚ್ಚಿನ ಗಮನವನ್ನು ಕೊಡುವುದಾದರೆ, ಮತ್ತು ಹದಿವಯಸ್ಕರು ಅತಿಯಾಗಿ ಬೇಸರಗೊಳ್ಳದಿದ್ದರೆ, ಹದಿವಯಸ್ಕ ವಿಧ್ವಂಸಕತೆಯನ್ನು ನಿಗ್ರಹಿಸಸಾಧ್ಯವೆಂದು ಮೂವರಲ್ಲಿ ಒಬ್ಬರು ನೆನಸುತ್ತಾರೆ” ಎಂದು ಆ ಬರಹಗಾರರು ವರದಿಸಿದರು. ಯುವ ಜನರನ್ನು ಕಾರ್ಯಮಗ್ನರನ್ನಾಗಿಟ್ಟು, ಹೆತ್ತವರು ಅವರಿಗೆ ಉತ್ತಮವಾದ ನಿಯಂತ್ರಣವನ್ನು ನೀಡುವಂತೆ ಏರ್ಪಡಿಸುವ ಮೂಲಕ ವಿಧ್ವಂಸಕತೆಯನ್ನು ಕಡಿಮೆಮಾಡಬಹುದಾದರೂ, ಅದು ತಾನೇ ಮೂಲ ಕಾರಣಗಳನ್ನು ತೆಗೆದುಹಾಕುವುದೊ?
ಒಬ್ಬಂಟಿಗರಾಗಿರುವಾಗ ಯಾವ ಹಾನಿಯನ್ನು ಉಂಟುಮಾಡದ ಅನೇಕ ಯುವ ಜನರು, ಗುಂಪಿನಲ್ಲಿರುವಾಗ ಇಲ್ಲವೆ ಮತ್ತೊಬ್ಬರ ಜೊತೆಯಲ್ಲಿರುವಾಗ, ತಿಳಿಗೇಡಿತನದ ಹಾಗೂ ಅಸಹ್ಯವಾದ ಕಾರ್ಯಗಳನ್ನು ಮಾಡಿ ಗಮನವನ್ನು ಸೆಳೆಯಲು ಪ್ರಯತ್ನಿಸಬಹುದು. ನೆಲ್ಸನ್ನ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವನು ಅಮಲೌಷಧದ ಇಲ್ಲವೆ ಮದ್ಯದ ಅಮಲಿನಲ್ಲಿರುವಾಗ, ತನ್ನ ಕೋಪ ಹಾಗೂ ಅಸಮಾಧಾನವನ್ನು ವಿಧ್ವಂಸಕತೆಯ ಕೃತ್ಯಗಳ ಮೂಲಕ ವ್ಯಕ್ತಪಡಿಸಿದನು. ಕ್ಯಾತೊಲಿಕ್ ಚರ್ಚಿನಲ್ಲಿ ಭೂಸುಧಾರಣೆ ಹಾಗೂ ದುಡಿಮೆಯ ಹಕ್ಕುಗಳ ವಿಷಯವಾಗಿ ನೀಡಲ್ಪಟ್ಟ ಪ್ರಸಂಗಗಳಿಂದ ಕೆರಳಿದ ಯೋಸೆ, ಮುಷ್ಕರಗಳಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿ, ಪ್ರತಿಭಟನೆಯ ಒಂದು ರೂಪವಾಗಿ ವಿಧ್ವಂಸಕತೆಯನ್ನು ಸಂಘಟಿಸಿದನು. ಆದರೆ, ಗಲಭೆ ಇಲ್ಲವೆ ವಿಧ್ವಂಸಕತೆಗಿಂತಲೂ ಬಹಳಷ್ಟು ಉತ್ತಮವಾದುದನ್ನು ನೆಲ್ಸನ್ ಹಾಗೂ ಯೋಸೆ, ಇಬ್ಬರೂ ಕಂಡುಕೊಂಡರು.
ವಿಧ್ವಂಸಕತೆಯ ಕೆಲವು ಗಹನವಾದ ಕಾರಣಗಳು
ಕೆಲವು ಯೌವನಸ್ಥರು ವಿಧ್ವಂಸಕತೆಯಲ್ಲಿ ತೊಡಗುವುದರ ಕಾರಣಗಳನ್ನು ನಾವು ನಿಕಟವಾಗಿ ಪರಿಶೀಲಿಸೋಣ. ಗಲಿಬಿಲಿಗೊಂಡಿರುವ ಅನೇಕ ತರುಣರು, “ಲೋಕವನ್ನು ಹುಚ್ಚರಿಂದ ತುಂಬಿರುವ ಒಂದು ಅಸ್ತವ್ಯಸ್ತ ಸ್ಥಳವಾಗಿ ವರ್ಣಿಸುತ್ತಾರೆ.” ಹಾಗಿದ್ದರೂ, ಅನೇಕರು ನಂಬುವುದಕ್ಕೆ ವ್ಯತಿರಿಕ್ತವಾಗಿ ವರದಿಯೊಂದು ಹೇಳಿದ್ದು: “ಹದಿವಯಸ್ಕರು ತಮ್ಮ ಜೀವಿತಗಳ ದಿಕ್ಕಿನ ಬಗ್ಗೆ ಖಂಡಿತವಾಗಿಯೂ ಯೋಚಿಸುತ್ತಾರೆ. ವಯಸ್ಕರು ನೆನಸುವುದಕ್ಕಿಂತಲೂ ಹೆಚ್ಚಾಗಿ ಅವರು ಲೋಕದ ಕುರಿತೂ ಸಾಕಷ್ಟು ಚಿಂತಿಸುವವರಾಗಿದ್ದಾರೆ.” ಹೀಗೆ, ತಿಳಿದೊ ತಿಳಿಯದೆಯೊ ವಿಧ್ವಂಸಕತೆಯಲ್ಲಿ ಒಳಗೊಂಡಿರುವ ಒಬ್ಬ ಯುವಕನು, ಆಳವಾಗಿ ಬೇರೂರಿರುವ ನಿರಾಶೆಗಳನ್ನು, ಬಗೆಹರಿಸಲ್ಪಡದ ಸಮಸ್ಯೆಗಳನ್ನು, ಇಲ್ಲವೆ ಪೂರೈಸಲ್ಪಡದ ಅಗತ್ಯಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಿರಬಹುದು. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಅಧ್ಯಯನಕ್ಕನುಸಾರ, ಸಮೀಕ್ಷೆಗೆ “ಉತ್ತರನೀಡಿದ ಪ್ರತಿಯೊಬ್ಬರೂ, ಅಂದರೆ ಅದರಲ್ಲಿ ತೊಡಗಿದವರು ಸಹ ವಿಧ್ವಂಸಕತೆಯನ್ನು ಸಮರ್ಥಿಸಲಿಲ್ಲ ಅಥವಾ ಅದನ್ನು ಸರಿಯೆಂದು ಸಾಧಿಸಲಿಲ್ಲ.”
ಯುವಕ ಅಥವಾ ಯುವತಿಗೆ ಮೆಚ್ಚಿಕೆಯ ಮಾತು ಇಲ್ಲವೆ ಉತ್ತೇಜನ ದೊರೆಯುವುದೇ ವಿರಳವಾಗಿರಬಹುದು. ಶಿಕ್ಷಣವು ಹೆಚ್ಚೆಚ್ಚು ಪ್ರಾಮುಖ್ಯವಾಗುತ್ತಿದ್ದು, ಹೆಚ್ಚಿನ ಉದ್ಯೋಗಗಳಿಗೆ ವಿಶೇಷ ಡಿಗ್ರಿಗಳು ಇಲ್ಲವೆ ತಾಂತ್ರಿಕ ಕೌಶಲಗಳು ಬೇಕಾಗಿರುವುದರಿಂದ, ಅವನು ಅಥವಾ ಅವಳು ದಿಗಿಲುಗೊಳ್ಳಬಹುದು. ಅಲ್ಲದೆ ಹೆತ್ತವರು, ಶಿಕ್ಷಕರು, ಅಥವಾ ಸಮವಯಸ್ಕರು ಆ ವ್ಯಕ್ತಿಯು ತಾನೇ ಏನಾಗಿದ್ದಾನೆ ಎಂಬುದರ ಕಡೆಗೆ ಹೆಚ್ಚಿನ ಗಮನಕೊಡದೆ, ಅವನು ಅಥವಾ ಅವಳು ಸಾಧಿಸುವ ವಿಷಯದ ಮೇಲೆ ಒತ್ತನ್ನು ಹಾಕುತ್ತಾ ಬಹಳ ಟೀಕಾತ್ಮರೂ ತಗಾದೆ ಮಾಡುವವರೂ ಆಗಿರಬಹುದು. ಅನೇಕರು ತಮ್ಮಲ್ಲೇ ಅತೃಪ್ತರಾಗಿರುವ ಕಾರಣ, ದಂಗೆಯೇಳುತ್ತಾರೆ ಇಲ್ಲವೆ ಧ್ವಂಸಮಾಡುತ್ತಾರೆ. ಇಂತಹ ಸಂಕಟವನ್ನು, ಹೆತ್ತವರ ಪ್ರೀತಿ ಹಾಗೂ ಗಮನವು ಸಾಕಷ್ಟು ಮಟ್ಟಿಗೆ ಕಡಿಮೆಮಾಡಲಾರದೊ?
ಕೆಲವು ಅಧಿಕಾರಿಗಳು ಗೀರು ಬರಹ ಮತ್ತು ಇತರ ಪ್ರಕಾರಗಳ ಬಾಲಾಪರಾಧವನ್ನು ನಿಯಂತ್ರಿಸಲು ಪ್ರಯತ್ನಿಸುವುದನ್ನು ನಿಲ್ಲಿಸಿರುವುದಾದರೂ, ಆ ವಿಧ್ವಂಸಕತೆಯನ್ನು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ನಿಯಂತ್ರಿಸುವಂತೆ ಚಿಂತಿತ ಜನರು ಇನ್ನೂ ನಿರೀಕ್ಷಿಸುತ್ತಾರೆ. ಶಾಸನದ ಕುರಿತು, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ವಿಧ್ವಂಸಕತೆಯು ಜುಲ್ಮಾನೆಗೆ ಇಲ್ಲವೆ ಸೆರೆವಾಸದ ಶಿಕ್ಷೆಗೆ ಯೋಗ್ಯವಾಗಿದೆ. ಮಕ್ಕಳು ಒಳಗೂಡುವ ವಿಧ್ವಂಸಕತೆಯ ಕ್ರಿಯೆಗಳಿಗೆ ಹೆತ್ತವರನ್ನು ಜವಾಬ್ದಾರರನ್ನಾಗಿ ಮಾಡುವ ನಿಯಮಗಳು ಕೆಲವು ಸ್ಥಳಿಕ ಸರಕಾರಗಳಲ್ಲಿವೆ. ಆದರೂ ವಿಧ್ವಂಸಕತೆಯ ಹೆಚ್ಚಿನ ಕೃತ್ಯಗಳಿಗೆ ದಂಡನೆಯನ್ನು ವಿಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಗಳಲ್ಲಿ ನ್ಯಾಯತೀರ್ಪನ್ನು ವಿಧಿಸುವುದು ಸಹ ಕಷ್ಟಕರವಾಗಿರುತ್ತದೆ. ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ವಿಧ್ವಂಸಕತೆಯಿಂದಾದ ನಷ್ಟದ ಮೊತ್ತವು ಮೊಕದ್ದಮೆಯನ್ನು ಹೂಡುವಷ್ಟು ದೊಡ್ಡದಾಗಿರುವುದಿಲ್ಲ.” ಕೇವಲ 3 ಪ್ರತಿಶತದಷ್ಟು ತಪ್ಪಿತಸ್ಥರು ಮಾತ್ರ ದಸ್ತಗಿರಿ ಮಾಡಲ್ಪಡುತ್ತಾರೆಂದು ಒಂದು ವರದಿಯು ತೋರಿಸುತ್ತದೆ.
ಬಾಲಾಪರಾಧದ ಒಂದು ಪ್ರಧಾನ ಕಾರಣವನ್ನು ತಡೆಗಟ್ಟುವ ಅತ್ಯುತ್ತಮ ವಿಧಾನವು, ಮಕ್ಕಳ ಅತ್ಯುತ್ತಮ ಪಾಲನೆಪೋಷಣೆ ಆಗಿದೆಯೆಂದು ನೀವು ಒಪ್ಪಿಕೊಳ್ಳಬಹುದು. ಆದರೆ ಕುಟುಂಬ ಜೀವಿತವು ಕ್ಷೀಣಿಸುವಾಗ, ಸಮುದಾಯಗಳು ಕಷ್ಟದಲ್ಲಿ ಸಿಕ್ಕಿಕೊಳ್ಳುತ್ತವೆ. ಬ್ರೆಸಿಲಿನ ಸಾವೊ ಪೌಲೊ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಆನ ಲೂಯಿಸಾ ಮೇಯೀರ ಡೀ ಮಾಟ್ಟೋಸ್ ಗಮನಿಸುವುದೇನೆಂದರೆ, ಯುವ ಜನರ ಸಮಸ್ಯೆಗಳಿಗೆ “ಹೆತ್ತವರ ಕಟ್ಟುನಿಟ್ಟಿಲ್ಲದ ಮೇಲ್ವಿಚಾರಣೆ, ನಿಯಮಗಳ ಕೊರತೆ, ಪರಸ್ಪರ ಮಾತುಕತೆಯ ಕೊರತೆ, ಅಲಕ್ಷ್ಯ, ಉದಾಸೀನತೆಯು” ಕೆಲವು ಕಾರಣಗಳಾಗಿವೆ.
ನಮ್ಮ ಸಮಯದಲ್ಲಿ ನಾವು ಯೇಸುವಿನ ಮಾತುಗಳ ನೆರವೇರಿಕೆಯನ್ನು ಖಂಡಿತವಾಗಿಯೂ ನೋಡಿದ್ದೇವೆ: “ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು.” (ಮತ್ತಾಯ 24:12) ಮತ್ತು 2 ತಿಮೊಥೆಯ 3:1-4ರಲ್ಲಿ ದಾಖಲಿಸಲ್ಪಟ್ಟ ಮಾತುಗಳು ನಿಜವಾಗುತ್ತಿರುವುದನ್ನು ಯಾರು ತಾನೇ ಅಲ್ಲಗಳೆಯಬಲ್ಲರು? ಅಪೊಸ್ತಲ ಪೌಲನು ಬರೆದುದು: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗಿರುವರು. ನಿಜತ್ವವೇನೆಂದರೆ, ಇಂತಹ ಗುಣಗಳಿರುವ ಜನರೊಂದಿಗೆ ಜೀವಿಸುವುದು ತಾನೇ ಬಾಲಾಪರಾಧಕ್ಕೆ ನೆರವು ನೀಡುತ್ತದೆ. ಆದರೆ ಸೋಲನ್ನೊಪ್ಪಿಕೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ರೀತಿಯಲ್ಲಿ ಸಮುದಾಯಗಳು ವಿಧ್ವಂಸಕತೆಯನ್ನು ನಿರ್ಮೂಲಗೊಳಿಸುವುದರಲ್ಲಿ ಸೋತುಹೋಗಿವೆ, ಆದರೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸುವುದರಲ್ಲಿ ಸಫಲರಾಗಿ, ಇನ್ನು ಮುಂದೆ ಅಸಭ್ಯರೂ ಇಲ್ಲವೆ ನಿರ್ಲಕ್ಷ್ಯರೂ ಆಗಿರದ ಜನರನ್ನು ನಾವು ಕಾಣಸಾಧ್ಯವಿದೆ. ಅವರ ವಿಷಯದಲ್ಲಿ ವಿಧ್ವಂಸಕತೆಯನ್ನು ತಡೆಗಟ್ಟಲಾಗಿದೆ.
ಯುವ ಜನರಿಗೆ ಸ್ವಸ್ಥಕರ ಮಾರ್ಗದರ್ಶನ
ವಿಧ್ವಂಸಕರು ಮತ್ತು ಇತರರು, ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವಂತೆ ಯಾವುದು ಸಹಾಯ ಮಾಡಿದೆ? ಕೆಲವು ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಇದನ್ನು ನಂಬಲು ಅಸಾಧ್ಯವಾಗಿದ್ದರೂ, ಅತ್ಯುತ್ಕೃಷ್ಟವೂ ಸಮಯೋಚಿತವೂ ಆದ ಮಾರ್ಗದರ್ಶನವನ್ನು ಬೈಬಲು ಒದಗಿಸುತ್ತದೆ. ಅದನ್ನು ಅನುಸರಿಸುವ ಮೂಲಕ, “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು” ಎಂಬ ದೇವರ ನಿರ್ದಿಷ್ಟ ನಿಯಮಕ್ಕೆ ವಿಧೇಯರಾಗುವಂತೆ ಮಾಜಿ ವಿಧ್ವಂಸಕರು ಪ್ರಚೋದಿಸಲ್ಪಟ್ಟಿದ್ದಾರೆ. (ವಿಮೋಚನಕಾಂಡ 23:2) ಅನೇಕರು ತಾವು ಹಿಂದೆಂದೂ ಅರ್ಥಮಾಡಿಕೊಳ್ಳದಿದ್ದ ನಂಬಿಕೆಗಳು ಹಾಗೂ ಬೋಧನೆಗಳ ಕುರಿತು ದೇವರ ವಾಕ್ಯದಲ್ಲಿರುವ ಸತ್ಯದಿಂದ ಆಕರ್ಷಿತರಾಗಿದ್ದಾರೆ. ಮತ್ತು ಅವರು ಕಲಿತಂತಹ ವಿಷಯಗಳು ಅವರನ್ನು ಬಹಳವಾಗಿ ಪ್ರಭಾವಿಸಿದೆ. ಸಾವೊ ಪೌಲೊದ ಒಬ್ಬ ಯುವಕನಾದ ಯೋಸೆಯ ಅನುಭವವನ್ನು ಪರಿಗಣಿಸಿರಿ. ಆರಾಧನೆಯಲ್ಲಿ ಮೂರ್ತಿಗಳನ್ನು ಬಳಸಬೇಕೆಂಬ ನಂಬಿಕೆಯನ್ನು ಅವನಲ್ಲಿ ಮೂಡಿಸಲಾಗಿತ್ತು. ದೇವರಿಗೆ ಯೆಹೋವ ಎಂಬ ಹೆಸರಿದೆ ಎಂದು, ಮತ್ತು ಆತನು ಮೂರ್ತಿ ಪೂಜೆಯನ್ನು ಸಮ್ಮತಿಸುವುದಿಲ್ಲವೆಂದು ಯೋಸೆ ತಿಳಿದುಕೊಂಡಾಗ, ದೇವರನ್ನು ಮೆಚ್ಚಿಸಲಿಕ್ಕಾಗಿ ಬೇಕಾದ ಬದಲಾವಣೆಗಳನ್ನು ಅವನು ಮಾಡಿದನು.—ವಿಮೋಚನಕಾಂಡ 20:4, 5; ಕೀರ್ತನೆ 83:18; 1 ಯೋಹಾನ 5:21; ಪ್ರಕಟನೆ 4:11.
ಹಿಂಸಾತ್ಮಕ ಗ್ಯಾಂಗುಗಳು ಮತ್ತು ಮುಷ್ಕರಗಳಲ್ಲಿ, ಒಂದರ ನಂತರ ಮತ್ತೊಂದು ನಿರುತ್ಸಾಹಗೊಳಿಸುವ ಘಟನೆಯನ್ನು ಅನುಭವಿಸುವುದರ ಬದಲು, ನೆಲ್ಸನ್ ಭವಿಷ್ಯತ್ತಿಗಾಗಿ ನಿಜವಾದ ನಿರೀಕ್ಷೆಯನ್ನು ಕಂಡುಕೊಂಡನು. ಇದು ಅವನಿಗೆ ಭಾರೀ ಉಪಶಮನವನ್ನು ನೀಡಿತು. ಅವನು ಹೇಳುವುದು: “ನನ್ನ ಕೆಟ್ಟ ಸಹವಾಸ ಹಾಗೂ ಅಮಲೌಷಧದ ಗೀಳಿನ ಕಾರಣ ಕುಟುಂಬದಿಂದ ತಿರಸ್ಕರಿಸಲ್ಪಡುತ್ತಿದ್ದ ನಾನು, ಈಗ ಮನೆಯಲ್ಲೇ ಬಹಳವಾಗಿ ಗೌರವಿಸಲ್ಪಡುವ ವ್ಯಕ್ತಿಯಾಗಿದ್ದೇನೆ. ನನ್ನ ಅಣ್ಣಂದಿರಿಗೆ ಸಲಹೆ ನೀಡುವಂತೆ ತಂದೆಯವರು ನನ್ನನ್ನು ಕೇಳಿಕೊಳ್ಳುತ್ತಾರೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಸಿಸಲು ತೊಡಗಿದ ಸಮಯದಂದಿನಿಂದ, ಜೀವಿತದಲ್ಲಿ ಒಂದು ಉದ್ದೇಶವಿದೆಯೆಂದು ಗೊತ್ತಿರುವ ಕಾರಣ ನಾನು ಸಂತೋಷವನ್ನು ಕಂಡುಕೊಂಡಿದ್ದೇನೆ.” ಹಿಂಸಾತ್ಮಕ ವಾತಾವರಣದಲ್ಲಿ ಜೀವಿಸುತ್ತಿದ್ದ ಮಾರ್ಕೊ ಎಂಬ ನಗರವಾಸಿಗೆ, ದೇವರ ರಾಜ್ಯವು ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡುವುದೆಂಬ ಅರಿವು ತಾನೇ ಹೃದಯೋಲ್ಲಾಸಕರವಾಗಿದೆ.—ಪ್ರಕಟನೆ 21:3, 4.
ಈ ಮೊದಲು ಒಂದು ಗ್ಯಾಂಗಿನ ಸದಸ್ಯನೂ, ಬೀದಿಯಲ್ಲಿ ಜಗಳಮಾಡುವವನೂ, ವಿಧ್ವಂಸಕನೂ ಆಗಿದ್ದ ವ್ಯಕ್ತಿಯ ವಿದ್ಯಮಾನವನ್ನು ಪರಿಗಣಿಸಿರಿ. ತುಂಬ ವೇದನಾಮಯ ಬಾಲ್ಯಾವಸ್ಥೆಯನ್ನು ಅನುಭವಿಸಿದ ವಾಲ್ಟರ್ ಎಂಬ ಅನಾಥನು, ಈ ಭ್ರಷ್ಟ ಹಾಗೂ ದುಷ್ಟ ವ್ಯವಸ್ಥೆಯ ಮಧ್ಯದಲ್ಲೂ ದೇವಜನರಿದ್ದಾರೆಂಬ ವಿಷಯದಿಂದ ಬಹಳ ಪ್ರಭಾವಿತನಾದನು. ಅವರು ತಮ್ಮ ಜೀವಿತಗಳಲ್ಲಿ ಬೈಬಲ್ ಸಿದ್ಧಾಂತಗಳನ್ನು ಅನ್ವಯಿಸಲು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ, ಮತ್ತು ಸಹಾನುಭೂತಿ, ಪರಿಗಣನೆ, ಹಾಗೂ ದಯೆಯನ್ನು ತೋರಿಸುತ್ತಾರೆ. ವಾಲ್ಟರ್ ವಿವರಿಸುವುದು: “ಯೇಸುವಿನ ವಾಗ್ದಾನದಂತೆಯೇ, ‘ಸಹೋದರರು ಸಹೋದರಿಯರು, ತಾಯಂದಿರು ಹಾಗೂ ತಂದೆಗಳು’ ಇರುವ ಒಂದು ದೊಡ್ಡ ಕುಟುಂಬ ಈಗ ನನಗಿದೆ. ಭವಿಷ್ಯತ್ತಿನ ಸಂಬಂಧದಲ್ಲಿ, ಜನರು ದೇವರ ನೀತಿಯ ಸರಕಾರದಲ್ಲಿ ಸಂತೋಷ ಹಾಗೂ ಐಕ್ಯದಲ್ಲಿ ಜೀವಿಸಲಿರುವ ಸಮಯಕ್ಕಾಗಿ ನಾನು ಎದುರುನೋಡುತ್ತೇನೆ.”—ಮಾರ್ಕ 10:29, 30; ಕೀರ್ತನೆ 37:10, 11, 29.
ಪ್ರತಿಭಟನೆಗಿಂತಲೂ ಉತ್ತಮವಾದದ್ದು
ಈ ಮಾಜಿ ವಿಧ್ವಂಸಕರು ತಮ್ಮ ಜೊತೆಮಾನವರಿಗೆ ಪರಿಗಣನೆ ಹಾಗೂ ಪ್ರೀತಿಯನ್ನು ತೋರಿಸುವುದರ ಜೊತೆಗೆ, “ಕೆಟ್ಟತನವನ್ನು ಹಗೆ”ಮಾಡಲು ಕಲಿತುಕೊಂಡಿದ್ದಾರೆ. (ಕೀರ್ತನೆ 97:10; ಮತ್ತಾಯ 7:12) ನಿಮ್ಮ ಕುರಿತೇನು? ನೀವು ವ್ಯಾಪಕವಾಗಿರುವ ವಿಧ್ವಂಸಕತೆಯ ಪರಿಣಾಮಗಳಿಂದ ಕಷ್ಟಾನುಭವಿಸುವ ಜನರಲ್ಲಿ ಒಬ್ಬರಾಗಿರುವುದಾದರೆ, ದೇವರ ವಾಕ್ಯದ ಅಧ್ಯಯನದಿಂದ ಯೆಹೋವನು ನಿಮ್ಮ ಆರೈಕೆಯನ್ನು ಮಾಡಬಯಸುವ ಒಬ್ಬ ನಿಜವಾದ ಪ್ರೀತಿಪರ ಸ್ವರ್ಗೀಯ ತಂದೆಯೆಂದು ನಿಮಗೆ ತಿಳಿದುಬರುವುದು. (1 ಪೇತ್ರ 5:6, 7) ವೈಯಕ್ತಿಕ ಬಲಹೀನತೆಗಳು ಇಲ್ಲವೆ ಬಡತನದ ಎದುರಿನಲ್ಲೂ, ಆತ್ಮಿಕವಾಗಿ ಬೆಳೆಯಲು ದೇವರು ನಿಮಗೆ ಸಹಾಯ ಮಾಡಬಲ್ಲನು. ಅದು ತಾನೇ ಒಂದು ಅದ್ಭುತಕರ ಅನುಭವವಾಗಿದೆ!
ಬೈಬಲ್ ಸತ್ಯವನ್ನು ಕಲಿತುಕೊಳ್ಳುವ ಅವಕಾಶ ಎಲ್ಲ ರೀತಿಯ ಜನರಿಗೆ ದೊರಕಬೇಕೆಂದು ಯೆಹೋವನು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ನಿಜವಾಗಿಯೂ ಬಯಸುತ್ತಾರೆ. ದೇವರ ವಾಕ್ಯವು, ವ್ಯಕ್ತಿಗಳು ಸದ್ಯದ ಜೀವಿತದಲ್ಲಿ ವಿಧ್ವಂಸಕರಾಗಿ ಇರದಿರುವಂತೆ ಸಹಾಯ ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಬಲ್ಲದು. ದೈವಿಕ ತತ್ವಗಳನ್ನು ಅನ್ವಯಿಸುವುದರಲ್ಲಿ ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ಅದು ಅವರನ್ನು ಪ್ರಚೋದಿಸಬಲ್ಲದು. ಫಲಸ್ವರೂಪವಾಗಿ, ಅವರು ಶುದ್ಧತೆ ಹಾಗೂ ಶಿಷ್ಟಾಚಾರಕ್ಕೆ ಪ್ರಸಿದ್ಧವಾದ ಒಂದು ಅಂತಾರಾಷ್ಟ್ರೀಯ ಸಹೋದರತ್ವದ, ಅಂದರೆ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಭೆಯ ಸದಸ್ಯರಾಗುತ್ತಾರೆ. ಎಫೆಸ 4:24ಕ್ಕನುಸಾರ, ಈ ಪ್ರಾಮಾಣಿಕ ಕ್ರೈಸ್ತರು ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ, ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ಆ ನೂತನ ಸ್ವಭಾವವನ್ನು’ ಧರಿಸಿಕೊಳ್ಳುತ್ತಾರೆ. ಬೇಗನೆ ಈ ಲೋಕವು ಇಂತಹ ಜನರಿಂದ ತುಂಬಿರುವುದು, ಏಕೆಂದರೆ ಇಂತಹವರು ಮಾತ್ರ ಬದುಕಿ ಉಳಿದು ಸದಾಕಾಲ ಜೀವಿಸುವರು.—ಹೋಲಿಸಿ ಲೂಕ 23:43.
ವಿಧ್ವಂಸಕತೆಯಿಂದ ಮುಕ್ತವಾದ ಒಂದು ಲೋಕವು ಸಾಧ್ಯ
ವಿಧ್ವಂಸಕತೆಯನ್ನು ನಿಜವಾಗಿಯೂ ತೆಗೆದುಹಾಕಸಾಧ್ಯವೆಂದು ನೀವು ನಂಬುತ್ತೀರೊ? ಹಾಗಿರುವಲ್ಲಿ, ಅಂತಹ ಒಂದು ಗಮನಾರ್ಹವಾದ ಬದಲಾವಣೆಯು ಹೇಗೆ ಬರುವುದು? ಬೇಗನೆ ದೇವರ ರಾಜ್ಯವು ಈ ದುಷ್ಟ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದು. ದೇವರ ನೀತಿಯ ನಿಯಮಗಳ ಉದ್ದೇಶಪೂರ್ವಕ ಉಲ್ಲಂಘನೆಗೆ ಭೂನಿವಾಸಿಗಳು ಜವಾಬ್ದಾರರಾಗಿರುವರು. (ಹೋಲಿಸಿ ಯೆಶಾಯ 24:5, 6.) “ದ್ರೋಹಿಗಳೆಲ್ಲರೂ ನಾಶವಾಗುವರು,” ಆದರೆ ನೀತಿಯನ್ನು ಪ್ರೀತಿಸುವವರು ಪಾರಾಗುವರು. ಯೆಹೋವನು “ಇಕ್ಕಟ್ಟಿನಲ್ಲಿ . . . ಅವರಿಗೆ ದುರ್ಗಸ್ಥಾನ. ಯೆಹೋವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದ್ದರಿಂದ ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು.”—ಕೀರ್ತನೆ 37:38-40.
ವಿಧ್ವಂಸಕತೆಯ ಬೇರುಗಳು ಸಂಪೂರ್ಣವಾಗಿ ಕಿತ್ತೆಸೆಯಲ್ಪಡುವವು. ಹಾಗೆಯೇ ಎಲ್ಲ ಪಾತಕ, ದಬ್ಬಾಳಿಕೆ, ಕಷ್ಟಾನುಭವ, ಮತ್ತು ದುಷ್ಟತನವು ಕೂಡ ನಿರ್ಮೂಲವಾಗುವುದು. ಹೊಸ ಲೋಕದಲ್ಲಿ ಶಾಂತಿ, ನೀತಿ, ಪ್ರಶಾಂತತೆ, ಮತ್ತು ಭದ್ರತೆಯು ಮುಖ್ಯ ವೈಶಿಷ್ಟ್ಯಗಳಾಗಿರುವವು. ಅಕ್ಷರಾರ್ಥ ರೀತಿಯಲ್ಲಿ ಸತ್ಯವಾಗಿ ಪರಿಣಮಿಸಲಿರುವುದನ್ನು ಯೆಶಾಯ 32:18 ವರ್ಣಿಸುತ್ತದೆ: “ನನ್ನ ಜನರು ಸಮಾಧಾನನಿವಾಸದಲ್ಲಿಯೂ ನಿರ್ಭಯನಿಲಯಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.” ಹೌದು, ಇತರರಿಗೆ ಪ್ರೀತಿ ಹಾಗೂ ಪರಿಗಣನೆಯನ್ನು ತೋರಿಸುವ ಜನರಿಂದ ಈ ಸುಂದರ, ಭೌಗೋಲಿಕ ಪ್ರಮೋದವನವು ತುಂಬಿರುವುದು.
ಇತರ ಲಕ್ಷಾಂತರ ಜನರೊಂದಿಗೆ, ಮಾಜಿ ವಿಧ್ವಂಸಕರು ಈಗಾಗಲೇ ಯೆಹೋವ ದೇವರೊಂದಿಗೆ ಒಂದು ಆಪ್ತ ಸಂಬಂಧದಲ್ಲಿ ಆನಂದಿಸುತ್ತಿದ್ದಾರೆ. ಅವರು ವಿಧ್ವಂಸಕ ಕೃತ್ಯಗಳಲ್ಲಿ ಈಗ ಭಾಗವಹಿಸುವುದಿಲ್ಲ. ಹೊಸ ಲೋಕದಲ್ಲಿ ಜೀವವನ್ನು ಪಡೆಯುವಂತೆ ನಿಮಗೆ ಮಾರ್ಗದರ್ಶನ ನೀಡಲು ದೇವರ ವಾಕ್ಯಕ್ಕೆ ನೀವು ಸಹ ಅನುಮತಿ ನೀಡುವಿರೊ? “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು” ಎಂಬುದಾಗಿ ಯೆಹೋವನ ಘೋಷಣೆಯನ್ನು ದಾಖಲಿಸಿಟ್ಟ ಗತಕಾಲದ ಕೀರ್ತನೆಗಾರನನ್ನು ಅನುಕರಿಸಲು ನಮಗೆ ಸಕಾರಣವಿದೆ.—ಕೀರ್ತನೆ 32:8.
[ಪುಟ 7 ರಲ್ಲಿರುವ ಚಿತ್ರ]
ಹೆತ್ತವರ ಗಮನ ಹಾಗೂ ಪ್ರೀತಿಯು ಯುವ ಜನರನ್ನು ರಕ್ಷಿಸುತ್ತದೆ