ನಮ್ಮ ದಿನಗಳಿಗೆ ಸಂದೇಶನೀಡುವ ಒಂದು ವಿವೇಕಪೂರ್ಣ ಗ್ರಂಥ
“ವಿವೇಕ ತುಂಬಿರುವ ಚೀಲವು, ಮುತ್ತುಗಳು ತುಂಬಿರುವ ಚೀಲಕ್ಕಿಂತಲೂ ಎಷ್ಟೋ ಬೆಲೆಯುಳ್ಳದ್ದು” (NW) ಎಂದು ಪೂರ್ವಜನಾದ ಯೋಬನು ಗಮನಿಸಿದನು. ಅವನು ತನ್ನ ಕಾಲದ ಅತ್ಯಂತ ಐಶ್ವರ್ಯವಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದನು. (ಯೋಬ 1:3; 28:18; 42:12) ವ್ಯಕ್ತಿಯೊಬ್ಬನು ತನ್ನ ಜೀವಿತವನ್ನು ಯಶಸ್ವಿಗೊಳಿಸುವುದರಲ್ಲಿ, ಪ್ರಾಪಂಚಿಕ ಸ್ವತ್ತುಗಳಿಗಿಂತ ವಿವೇಕಕ್ಕೇ ಹೆಚ್ಚಿನ ಮೌಲ್ಯವಿದೆ. ವಿವೇಕಿ ಅರಸನಾದ ಸೊಲೊಮೋನನು ಹೇಳಿದ್ದು: “ಧನವು ಹೇಗೋ ಹಾಗೆ ಜ್ಞಾನವೂ [“ವಿವೇಕವು,” NW] ಆಶ್ರಯ; ಜ್ಞಾನಕ್ಕೆ [“ವಿವೇಕಕ್ಕೆ,” NW] ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.”—ಪ್ರಸಂಗಿ 7:12.
ಆದರೆ, ಇಂತಹ ವಿವೇಕವನ್ನು ಇಂದು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಸಲಹೆ ನೀಡುವಂತೆ, ಜನರು ಸಲಹಾ ಅಂಕಣಗಾರರು, ಮನೋಶಾಸ್ತ್ರಜ್ಞರು, ಮನೋರೋಗ ತಜ್ಞರು, ಕ್ಷೌರಿಕರು ಮತ್ತು ಟ್ಯಾಕ್ಸಿ ಚಾಲಕರನ್ನೂ ಕೇಳುತ್ತಾರೆ. ಮತ್ತು ಎಣಿಕೆಯಿಲ್ಲದಷ್ಟು ಪರಿಣತರು, ಯೋಗ್ಯವಾದ ಶುಲ್ಕಕ್ಕೆ ಯಾವುದೇ ವಿಷಯದ ಕುರಿತು ಸಲಹೆನೀಡಲು ಸದಾ ಸಿದ್ಧರಾಗಿರುತ್ತಾರೆ. ಆದರೆ, ಹೆಚ್ಚಿನ ವೇಳೆ ಇಂತಹ “ವಿವೇಕ”ದ ನುಡಿಗಳು ಕೇವಲ ನಿರಾಶೆಗೆ, ಕೆಲವೊಮ್ಮೆ ಅನರ್ಥಕ್ಕೂ ನಡೆಸಿವೆ. ಹಾಗಾದರೆ, ನಾವು ನಿಜ ವಿವೇಕವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ?
ಮನುಷ್ಯರ ಕಾರ್ಯಕಲಾಪಗಳಲ್ಲಿ ಸೂಕ್ಷ್ಮ ಪರಿಜ್ಞಾನವನ್ನು ಹೊಂದಿದ್ದ ಯೇಸು ಕ್ರಿಸ್ತನು ಒಮ್ಮೆ ಹೇಳಿದ್ದು: “ವಿವೇಕವು ತನ್ನ ಕೆಲಸಗಳಿಂದ ನೀತಿಯುಳ್ಳದ್ದೆಂದು ರುಜುವಾಗುತ್ತದೆ.” (ಮತ್ತಾಯ 11:19, NW) ಜನರು ಎದುರಿಸುವ ಕೆಲವೊಂದು ಸಾಮಾನ್ಯ ಸಮಸ್ಯೆಗಳ ಕಡೆಗೆ ನಾವು ಗಮನಹರಿಸೋಣ. ಅವರಿಗೆ ಯಾವ ವಿವೇಕಯುತ ಮಾತುಗಳು ನಿಜವಾಗಿಯೂ ನೆರವು ನೀಡಿವೆ, ಮತ್ತು ‘ಮುತ್ತುಗಳ ಚೀಲ’ಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿ ಪರಿಣಮಿಸಿವೆ ಎಂಬುದನ್ನು ನೋಡೋಣ. ನೀವು ಸಹ ‘ವಿವೇಕ ತುಂಬಿರುವ ಚೀಲವನ್ನು’ ಕಂಡುಕೊಂಡು, ಅದರಿಂದ ಪ್ರಯೋಜನ ಪಡೆದುಕೊಳ್ಳಲು ಶಕ್ತರಾಗಬಹುದು.
ನೀವು ಖಿನ್ನತೆಯಿಂದ ಕಷ್ಟಾನುಭವಿಸುತ್ತಿದ್ದೀರೊ?
“ಈ ಇಪ್ಪತ್ತನೆಯ ಶತಮಾನವು ಆತಂಕದ ಯುಗದಲ್ಲಿ ಆಗಮಿಸಿರುವುದಾದರೆ, ವಿಷಣ್ಣತೆಯ ಯುಗದ ಆರಂಭದೊಂದಿಗೆ ನಿರ್ಗಮಿಸುವುದು” ಎಂಬುದಾಗಿ ಲಂಡನಿನ ಇಂಟರ್ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಗಮನಿಸುತ್ತದೆ. ಅದು ಕೂಡಿಸಿ ಹೇಳುವುದೇನೆಂದರೆ, “ಭಾರಿ ಖಿನ್ನತೆಯ ವಿಷಯದಲ್ಲಿ ನಡೆಸಿದ ಪ್ರಥಮ ಅಂತಾರಾಷ್ಟ್ರೀಯ ಅಧ್ಯಯನವು, ಲೋಕವ್ಯಾಪಕವಾಗಿ ಆ ರೋಗದಲ್ಲಿ ನಿರಂತರ ಅಭಿವೃದ್ಧಿಯನ್ನು ಪ್ರಕಟಿಸುತ್ತದೆ. ಟೈವಾನ್, ಲೆಬನಾನ್ ಮತ್ತು ನ್ಯೂಸೀಲೆಂಡ್ನಂತಹ ಬೇರೆ ಬೇರೆ ರಾಷ್ಟ್ರಗಳಲ್ಲಿ, ಕ್ರಮಾನುಗತವಾದ ಪ್ರತಿಯೊಂದು ಸಂತತಿಯು ಈ ವ್ಯಾಧಿಗೆ ಹೆಚ್ಚು ತುತ್ತಾಗುತ್ತಿದೆ.” 1955ರ ತರುವಾಯ ಜನಿಸಿದವರನ್ನು ತಮ್ಮ ಅಜ್ಜಅಜ್ಜಿಯರಿಗೆ ಹೋಲಿಸುವಾಗ, ಈಗಿನವರು ಖಿನ್ನತೆಯನ್ನು ಅನುಭವಿಸುವ ಸಾಧ್ಯತೆಯು ಮೂರು ಪಟ್ಟುಗಳಿಗಿಂತಲೂ ಹೆಚ್ಚಾಗಿದೆ.
ಭಾರಿ ಖಿನ್ನತೆಯನ್ನು ಅನುಭವಿಸಿದ ಮತ್ತು ತನ್ನ ಹೆಚ್ಚಿನ ಸಮಯವನ್ನು ಹಾಸಿಗೆಯ ಮೇಲೆಯೇ ಕಳೆದ ಟೊಮೋಯಿಯ ವಿಷಯದಲ್ಲಿ ಇದು ಸತ್ಯವಾಗಿತ್ತು. ಅವಳಿಗೆ ತನ್ನ ಎರಡು ವರ್ಷ ಪ್ರಾಯದ ಮಗನನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದಾಗ, ಆಕೆ ತನ್ನ ಹೆತ್ತವರ ಮನೆಗೆ ಸ್ಥಳಾಂತರಿಸಿದಳು. ಟೊಮೋಯಿಯ ಮಗನಷ್ಟೇ ವಯಸ್ಸಿನ ಮಗಳಿದ್ದ ಒಬ್ಬ ನೆರೆಯಾಕೆ ಬೇಗನೆ ಅವಳ ಸ್ನೇಹಿತೆಯಾದಳು. ತನ್ನಲ್ಲಿ ಅಯೋಗ್ಯತೆಯ ಭಾವನೆಗಳಿರುವುದಾಗಿ ಟೊಮೋಯಿ ಆ ನೆರೆಯಾಕೆಗೆ ಹೇಳಿದಾಗ, ಅವಳು ಒಂದು ಪುಸ್ತಕದಲ್ಲಿದ್ದ ವಚನವನ್ನು ಟೊಮೋಯಿಗೆ ತೋರಿಸಿದಳು. ಅದು ಹೇಳಿದ್ದು: “ಕಣ್ಣು ಕೈಗೆ—ನೀನು ನನಗೆ ಅವಶ್ಯವಿಲ್ಲವೆಂದೂ, ತಲೆಯು ಕಾಲುಗಳಿಗೆ—ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದಕ್ಕಾಗುವದಿಲ್ಲ. ದೇಹದಲ್ಲಿ ಅಲ್ಪಬಲವುಳ್ಳವುಗಳಾಗಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?”a ಲೋಕದಲ್ಲಿ ಪ್ರತಿಯೊಬ್ಬರಿಗೂ ಅವರವರ ಸ್ಥಾನವಿದೆಯೆಂದು ಮತ್ತು ಅವರ ಅಗತ್ಯವಿದೆಯೆಂದು ಟೊಮೋಯಿ ಗ್ರಹಿಸಿದಾಗ, ಅವಳ ಕಣ್ಣುಗಳು ಕಣ್ಣೀರಿನಿಂದ ತುಂಬಿದವು.
ಈ ನುಡಿಗಳನ್ನು ಒಳಗೊಂಡಿದ್ದ ಗ್ರಂಥವನ್ನು ಪರಿಶೀಲಿಸುವಂತೆ ಆ ನೆರೆಯಾಕೆಯು ಶಿಫಾರಸ್ಸು ಮಾಡಿದಳು. ಟೊಮೋಯಿ ಅದಕ್ಕೆ ಸಮ್ಮತಿಸಿದಳಾದರೂ, ಅದು ವರೆಗೂ ಅವಳು ಯಾವ ವಿಷಯವನ್ನು ಮಾಡಲೂ, ಅಂದರೆ ಸರಳವಾದ ಒಪ್ಪಿಗೆಯನ್ನು ಕೊಡಲೂ ಶಕ್ತಳಾಗಿರಲಿಲ್ಲ. ಖರೀದಿ ಮಾಡಲು ಮತ್ತು ಪ್ರತಿದಿನ ಟೊಮೋಯಿಯೊಂದಿಗೆ ಅಡಿಗೆ ಮಾಡಲು ಆ ನೆರೆಯಾಕೆಯು ಸಹಾಯಮಾಡಿದಳು. ಒಂದು ತಿಂಗಳ ತರುವಾಯ, ಟೊಮೋಯಿ ಇತರ ಗೃಹಿಣಿಗಳಂತೆಯೇ ಪ್ರತಿದಿನ ಬೆಳಗ್ಗೆ ಎದ್ದು, ಬಟ್ಟೆಗಳನ್ನು ಒಗೆದು, ಮನೆಯನ್ನು ಸ್ವಚ್ಛಗೊಳಿಸಿ, ಖರೀದಿ ಮಾಡಿ, ಊಟವನ್ನು ತಯಾರಿಸುತ್ತಿದ್ದಳು. ಅವಳು ಅನೇಕ ತೊಂದರೆಗಳನ್ನು ಜಯಿಸಬೇಕಾದರೂ, ಅವಳು ಹೇಳಿದ್ದು: “ನಾನು ಕಂಡುಕೊಂಡಿದ್ದ ವಿವೇಕದ ಮಾತುಗಳಂತೆಯೇ ನಡೆದುಕೊಳ್ಳುವುದಾದರೆ, ಎಲ್ಲ ಕೆಲಸಗಳನ್ನು ಪೂರೈಸಲು ನನ್ನಿಂದ ಸಾಧ್ಯವಾಗುವುದೆಂಬ ಭರವಸೆ ನನಗಿತ್ತು.”
ತಾನು ಕಂಡುಕೊಂಡಿದ್ದ ವಿವೇಕವನ್ನು ಅನ್ವಯಿಸಿಕೊಳ್ಳುವ ಮೂಲಕ, ಟೊಮೋಯಿ ಖಿನ್ನತೆಯ ಮಂಕುಕವಿದ ದಿನಗಳ ಮೇಲೆ ಜಯಸಾಧಿಸಿದಳು. ಈಗ ಟೊಮೋಯಿ ಪೂರ್ಣ ಸಮಯದ ಕೆಲಸಮಾಡುತ್ತಾ, ತನ್ನ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಗೊಳಿಸಿದ ಅದೇ ಮಾತುಗಳನ್ನು ಇತರರೂ ಅನ್ವಯಿಸಿಕೊಳ್ಳುವಂತೆ ಸಹಾಯಮಾಡುತ್ತಾಳೆ. ವಿವೇಕದ ಆ ನುಡಿಗಳು, ಇಂದು ಎಲ್ಲ ಜನತೆಗೆ ಒಂದು ಸಂದೇಶವನ್ನು ನೀಡುತ್ತಿರುವ ಪ್ರಾಚೀನ ಗ್ರಂಥದಲ್ಲಿ ಅಡಕವಾಗಿವೆ.
ನೀವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೊ?
ಲೋಕದ ಎಲ್ಲೆಡೆಯೂ ವಿವಾಹ ವಿಚ್ಛೇದದ ಪ್ರಮಾಣವು ಅನುಕ್ರಮವಾಗಿ ಹೆಚ್ಚಾಗುತ್ತಿದೆ. ಒಂದು ಕಾಲದಲ್ಲಿ ಜನರು ತಮ್ಮ ಅನ್ಯೋನ್ಯ ಕುಟುಂಬಗಳ ಕುರಿತು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ಪ್ರಾಚ್ಯ ದೇಶಗಳಲ್ಲೂ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕಾರ್ಯಸಾಧಕವಾಗಿರುವ ವಿವೇಕಯುತ ವೈವಾಹಿಕ ಮಾರ್ಗದರ್ಶನವನ್ನು ನಾವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
ಅಂತ್ಯರಹಿತ ವೈವಾಹಿಕ ಸಮಸ್ಯೆಗಳಿದ್ದ ಶೂಗೊ ಮತ್ತು ಮಿಹೋಕೋ ಎಂಬ ದಂಪತಿಗಳ ವಿದ್ಯಮಾನವನ್ನು ಪರಿಗಣಿಸಿರಿ. ಅವರು ಎಲ್ಲ ಚಿಕ್ಕಪುಟ್ಟ ವಿಷಯಗಳಿಗಾಗಿ ಜಗಳವಾಡಿದರು. ಶೂಗೊ ಮುಂಗೋಪಿಯಾಗಿದ್ದನು, ಮತ್ತು ಅವನು ಮಿಹೋಕೋವಿನಲ್ಲಿ ತಪ್ಪು ಕಂಡುಕೊಂಡಾಗಲೆಲ್ಲ ಅವಳು ಬಿರುಸಾದ ಪ್ರತ್ಯುತ್ತರವನ್ನು ನೀಡುತ್ತಿದ್ದಳು. ‘ಯಾವುದಾದರೊಂದು ವಿಷಯದಲ್ಲಿ ನಾವಿಬ್ಬರೂ ಸಮ್ಮತಿಸಲು ಸಾಧ್ಯವೇ ಇಲ್ಲವೆಂದು’ ಮಿಹೋಕೋ ನೆನಸಿದಳು.
ಒಂದು ದಿನ ಸ್ತ್ರೀಯೊಬ್ಬಳು ಮಿಹೋಕೋಳನ್ನು ಸಂದರ್ಶಿಸಿ, ಒಂದು ಗ್ರಂಥದಿಂದ ಈ ಮುಂದಿನ ಮಾತುಗಳನ್ನು ಓದಿಹೇಳಿದಳು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”b ಮಿಹೋಕೋಳಿಗೆ ಧರ್ಮದಲ್ಲಿ ಅಭಿರುಚಿ ಇರಲಿಲ್ಲವಾದರೂ, ಆ ನುಡಿಗಳಿದ್ದ ಗ್ರಂಥವನ್ನು ಅಭ್ಯಸಿಸಲು ಅವಳು ಒಪ್ಪಿಕೊಂಡಳು. ಅವಳಿಗೆ ತನ್ನ ಕುಟುಂಬ ಜೀವಿತವನ್ನು ಸುಧಾರಿಸುವ ಆಸಕ್ತಿಯಿತ್ತು. ಆದುದರಿಂದ, ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು ಎಂಬ ಶೀರ್ಷಿಕೆಯುಳ್ಳ ಪ್ರಕಾಶನವನ್ನು ಚರ್ಚಿಸಲಾಗುತ್ತಿದ್ದ ಕೂಟಕ್ಕೆ ಹಾಜರಾಗುವಂತೆ ಅವಳು ಆಮಂತ್ರಿಸಲ್ಪಟ್ಟಾಗ, ಮಿಹೋಕೋ ಮತ್ತು ಅವಳ ಗಂಡನು ಮನಪೂರ್ವಕವಾಗಿ ಒಪ್ಪಿಕೊಂಡರು.c
ಕೂಟಕ್ಕೆ ಹಾಜರಾಗಿದ್ದವರು ತಾವು ಕಲಿತುಕೊಳ್ಳುತ್ತಿದ್ದ ವಿಷಯವನ್ನು ನಿಜವಾಗಿಯೂ ಕಾರ್ಯರೂಪದಲ್ಲಿ ಹಾಕುತ್ತಿದ್ದರು ಮತ್ತು ಅವರು ಆನಂದಿತರಾಗಿದ್ದರೆಂಬುದನ್ನು ಶೂಗೊ ಗಮನಿಸಿದನು. ತನ್ನ ಪತ್ನಿ ಅಭ್ಯಸಿಸುತ್ತಿದ್ದ ಪುಸ್ತಕವನ್ನು ಪರಿಶೀಲಿಸಲು ಅವನು ನಿರ್ಧರಿಸಿದನು. ಬೇಗನೆ ಒಂದು ವಾಕ್ಯವು ಅವನ ಗಮನವನ್ನು ಸೆಳೆಯಿತು: “ದೀರ್ಘಶಾಂತನು ಕೇವಲ ಬುದ್ಧಿವಂತನು; ಮುಂಗೋಪಿಯು ಮೂರ್ಖತನವನ್ನು ಧ್ವಜವಾಗಿ ಎತ್ತುವನು.”d ಈ ತತ್ವವನ್ನು ತನ್ನ ಜೀವಿತದಲ್ಲಿ ಅನ್ವಯಿಸಲು ಅವನಿಗೆ ಸ್ವಲ್ಪ ಸಮಯ ಹಿಡಿಯಿತಾದರೂ, ಅವನಲ್ಲಿ ನಿಧಾನವಾಗಿ ಆದ ಬದಲಾವಣೆಯು, ಅವನ ಪತ್ನಿಯನ್ನು ಸೇರಿಸಿ ಅವನ ಸುತ್ತಲೂ ಇದ್ದವರಿಗೆ ಗೋಚರವಾಯಿತು.
ತನ್ನ ಗಂಡನಲ್ಲಾದ ಬದಲಾವಣೆಗಳನ್ನು ಕಂಡು, ಮಿಹೋಕೋ ಸಹ ಕಲಿಯುತ್ತಿದ್ದ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕತೊಡಗಿದಳು. ಬಹಳಷ್ಟು ಸಹಾಯಕಾರಿಯಾಗಿದ್ದ ಒಂದು ತತ್ವವು ಇದಾಗಿತ್ತು: “ತೀರ್ಪುಮಾಡ ಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು.”e ಆದುದರಿಂದ ತಮ್ಮಲ್ಲಿರುವ ಒಳ್ಳೆಯ ವಿಷಯಗಳ ಕುರಿತು ಮಾತಾಡಲು ಮತ್ತು ಪರಸ್ಪರ ತಪ್ಪು ಕಂಡುಹಿಡಿಯುವ ಬದಲು ತಮ್ಮನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಕುರಿತು ಚರ್ಚಿಸಲು ಮಿಹೋಕೋ ಮತ್ತು ಅವಳ ಪತಿ ನಿರ್ಧರಿಸಿದರು. ಇದರ ಪರಿಣಾಮವು ಏನಾಗಿತ್ತು? ಮಿಹೋಕೋ ಜ್ಞಾಪಿಸಿಕೊಳ್ಳುವುದು: “ಇದು ನನ್ನನ್ನು ನಿಜವಾಗಿಯೂ ಸಂತೋಷಗೊಳಿಸಿತು. ನಾವು ಪ್ರತಿ ಸಂಜೆ ಊಟದ ಸಮಯದಲ್ಲಿ ಇದನ್ನು ಮಾಡುತ್ತೇವೆ. ನಮ್ಮ ಮೂರು ವರ್ಷ ಪ್ರಾಯದ ಮಗನೂ ಈ ಸಂಭಾಷಣೆಯಲ್ಲಿ ಸೇರಿಕೊಳ್ಳುತ್ತಾನೆ. ಇದು ನಮಗೆ ನಿಜವಾಗಿಯೂ ಚೈತನ್ಯದಾಯಕವಾಗಿದೆ!”
ತಾವು ಪಡೆದುಕೊಂಡ ಅರ್ಥಭರಿತ ಸಲಹೆಯನ್ನು ಈ ಕುಟುಂಬವು ಕಾರ್ಯರೂಪಕ್ಕೆ ಹಾಕಿದಾಗ, ತಮ್ಮ ವೈವಾಹಿಕ ಸಂಬಂಧವನ್ನು ಛಿದ್ರಗೊಳಿಸುತ್ತಿದ್ದ ಸಮಸ್ಯೆಗಳನ್ನು ಜಯಿಸಲು ಅವರು ಶಕ್ತರಾದರು. ಇದು ಅವರಿಗೆ ಮುತ್ತುಗಳ ಚೀಲಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುವುದಿಲ್ಲವೋ?
ನಿಮ್ಮ ಜೀವನವನ್ನು ಸಫಲಗೊಳಿಸಲು ನೀವು ಬಯಸುತ್ತೀರೊ?
ಇಂದು ಅನೇಕರಿಗೆ, ಜೀವನದ ಮುಖ್ಯ ಗುರಿಯು ಹಣದ ಶೇಖರಣೆಯಾಗಿದೆ. ಕೋಟಿಗಟ್ಟಲೆ ಡಾಲರುಗಳನ್ನು ಧರ್ಮಕಾರ್ಯಕ್ಕೆ ದಾನವಾಗಿ ನೀಡಿದ, ಅಮೆರಿಕದ ಒಬ್ಬ ಶ್ರೀಮಂತ ವ್ಯಾಪಾರಿಯು ಒಮ್ಮೆ ಹೇಳಿದ್ದು: “ಹಣದ ಮೋಹ ಕೆಲವರಿಗಿರುವುದಾದರೂ, ಯಾರೊಬ್ಬರೂ ಒಂದೇ ಸಮಯಕ್ಕೆ ಎರಡು ಜೋಡಿ ಪಾದರಕ್ಷೆಗಳನ್ನು ಧರಿಸಸಾಧ್ಯವಿಲ್ಲ.” ಈ ವಾಸ್ತವಾಂಶವನ್ನು ಒಪ್ಪಿಕೊಳ್ಳುವವರ ಸಂಖ್ಯೆ ಕಡಿಮೆಯಿರುವುದಾದರೂ, ಹಣದ ವ್ಯಾಮೋಹದಿಂದ ದೂರವಿರುವವರ ಸಂಖ್ಯೆ ಅದಕ್ಕಿಂತಲೂ ಕಡಿಮೆ.
ಬಡತನದಲ್ಲಿ ಬೆಳೆದ ಹೀಟೋಶೀಗೆ ಧನವಂತನಾಗುವ ತೀವ್ರ ಬಯಕೆಯಿತ್ತು. ಸಾಮಾನ್ಯ ಜನರನ್ನು ಶೋಷಣೆಗೆ ಗುರಿಮಾಡುವ ಸಾಹುಕಾರರನ್ನು ನೋಡಿದ ಬಳಿಕ, ಅವನು ತೀರ್ಮಾನಿಸಿದ್ದು: “ಸಿಕ್ಕಿದ ಹಣವನ್ನೆಲ್ಲಾ ದೋಚಿಕೊಳ್ಳುವವನೇ ಗೆದ್ದವನು.” ಹಣದ ಪ್ರಭಾವದಲ್ಲಿ ಹೀಟೋಶೀಗೆ ಎಷ್ಟೊಂದು ನಂಬಿಕೆಯಿತ್ತೆಂದರೆ, ಅದರಿಂದ ಮನುಷ್ಯರನ್ನೂ ಖರೀದಿಸಸಾಧ್ಯವೆಂದು ಅವನು ನೆನಸಿದನು. ಹಣವನ್ನು ಶೇಖರಿಸುವ ಸಲುವಾಗಿ, ಅವನು ಒಂದು ದಿನವೂ ಗೈರುಹಾಜರಾಗದೆ ವರ್ಷವಿಡೀ ತನ್ನ ಕೊಳಾಯಿ ವ್ಯಾಪಾರದಲ್ಲಿ ಪ್ರಯಾಸಪಟ್ಟು ದುಡಿದನು. ಅವನು ಎಷ್ಟೇ ಕಷ್ಟಪಟ್ಟು ದುಡಿದರೂ, ಆ ಗುತ್ತಿಗೆದಾರರ ಕೈಕೆಳಗೆ ಕೆಲಸಮಾಡುತ್ತಿದ್ದ ಕಾರಣ ಅವರಷ್ಟು ಶಕ್ತಿಶಾಲಿಯಾಗಲು ಸಾಧ್ಯವೇ ಇಲ್ಲವೆಂಬುದನ್ನು ಬೇಗನೆ ಗ್ರಹಿಸಿದನು. ಆಶಾಭಂಗ ಮತ್ತು ದಿವಾಳಿತನದ ಭಯವು, ಅವನ ಅನುದಿನದ ಅನುಭವವಾಯಿತು.
ಆ ಸಮಯದಲ್ಲಿ, ಹೀಟೋಶೀಯ ಮನೆಯನ್ನು ವ್ಯಕ್ತಿಯೊಬ್ಬನು ಸಂದರ್ಶಿಸಿದನು. ಯೇಸು ಕ್ರಿಸ್ತನು ಹೀಟೋಶೀಗಾಗಿ ಸತ್ತಿರುವುದು ಅವನಿಗೆ ಗೊತ್ತೊ ಎಂದು ಅವನನ್ನು ಕೇಳಿದನು. ತನ್ನಂತಹ ವ್ಯಕ್ತಿಗಾಗಿ ಯಾರೊಬ್ಬರೂ ಪ್ರಾಣವನ್ನು ಕೊಡಲಾರರೆಂದು ಹೀಟೋಶೀಗೆ ಅನಿಸಿದ ಕಾರಣ, ಹೆಚ್ಚಿನ ಚರ್ಚೆಗಳಿಗಾಗಿ ಅವನು ಒಪ್ಪಿಕೊಂಡನು. ಮುಂದಿನ ವಾರ ಅವನೊಂದು ಭಾಷಣಕ್ಕೆ ಹಾಜರಾಗಿ, ‘ಕಣ್ಣನ್ನು ಸರಳವಾಗಿ ಇಡುವುದರ’ ಕುರಿತು ಬುದ್ಧಿವಾದವನ್ನು ಕೇಳಿ ಆಶ್ಚರ್ಯಚಕಿತನಾದನು. ‘ಸರಳವಾದ’ ಕಣ್ಣು, ದೂರದೃಷ್ಟಿಯುಳ್ಳ ಹಾಗೂ ಆತ್ಮಿಕ ವಿಷಯಗಳ ಮೇಲೆ ಕೇಂದ್ರೀಕೃತವಾದ ಕಣ್ಣೆಂದು, ಮತ್ತು “ಕೆಟ್ಟ” ಕಣ್ಣು, ತತ್ಕ್ಷಣದ ಶಾರೀರಿಕ ಬಯಕೆಗಳ ಮೇಲೆ ಕೇಂದ್ರೀಕೃತವಾಗಿದ್ದು, ದೂರದೃಷ್ಟಿಯಿಲ್ಲದ್ದಾಗಿದೆ ಎಂದು ಭಾಷಣಕರ್ತನು ವಿವರಿಸಿದನು. “ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ” ಎಂಬ ಸಲಹೆಯು ಅವನ ಮೇಲೆ ಭಾರಿ ಪ್ರಭಾವವನ್ನು ಬೀರಿತು.f ಸ್ವತ್ತುಗಳ ಸಂಪಾದನೆಗಿಂತಲೂ ಹೆಚ್ಚು ಪ್ರಾಮುಖ್ಯವಾದ ಯಾವುದೊ ವಿಷಯವೊಂದಿದೆ! ಇಂತಹ ವಿಷಯವನ್ನು ಅವನು ಎಂದಿಗೂ ಕೇಳಿರಲಿಲ್ಲ.
ಪ್ರಭಾವಿತನಾದ ಅವನು, ಕಲಿಯುತ್ತಿದ್ದ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕತೊಡಗಿದನು. ಹಣಕ್ಕಾಗಿ ಪ್ರಯಾಸಪಡುವ ಬದಲು, ಅವನು ತನ್ನ ಜೀವಿತದಲ್ಲಿ ಆತ್ಮಿಕ ಮೌಲ್ಯಗಳಿಗೆ ಪ್ರಥಮ ಸ್ಥಾನವನ್ನು ಕೊಡಲಾರಂಭಿಸಿದನು. ತನ್ನ ಕುಟುಂಬದ ಆತ್ಮಿಕ ಕ್ಷೇಮವನ್ನು ನೋಡಿಕೊಳ್ಳಲೂ ಅವನು ಸಮಯವನ್ನು ವ್ಯಯಿಸಿದನು. ಇದು ಕೆಲಸಕ್ಕಾಗಿ ಕಡಿಮೆ ಸಮಯವನ್ನು ಅರ್ಥೈಸಿತು. ಹಾಗಿದ್ದರೂ ವ್ಯಾಪಾರದಲ್ಲಿ ಅವನಿಗೆ ಒಳ್ಳೆಯ ಲಾಭವಿತ್ತು. ಏಕೆ?
ತನಗೆ ನೀಡಲಾಗುತ್ತಿದ್ದ ಸಲಹೆಗೆ ಅವನು ಪ್ರತಿಕ್ರಿಯಿಸಿದಂತೆ, ಅವನು ಆಕ್ರಮಣಶೀಲ ವ್ಯಕ್ತಿಯಾಗುವ ಬದಲು ಸೌಮ್ಯ ಹಾಗೂ ಸ್ನೇಹಭಾವದ ವ್ಯಕ್ತಿಯಾಗಿ ಮಾರ್ಪಟ್ಟನು. ಅವನು ಈ ಮುಂದಿನ ಬುದ್ಧಿವಾದದಿಂದ ಬಹಳ ಪ್ರಭಾವಿತನಾದನು: “ಈಗಲಾದರೋ ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ. ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.”g ಈ ಬುದ್ಧಿವಾದದ ಅನುಸರಣೆಯು ಅವನನ್ನು ಐಶ್ವರ್ಯವಂತನಾಗಿ ಮಾಡಲಿಲ್ಲವಾದರೂ, ಅವನ “ನೂತನಸ್ವಭಾವ”ವು ಅವನ ಗಿರಾಕಿಗಳ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಿ, ಅವರ ನಂಬಿಕೆ ಹಾಗೂ ಭರವಸೆಯನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಸಹಾಯಮಾಡಿತು. ಹೌದು, ಅವನು ಕಂಡುಕೊಂಡ ವಿವೇಕದ ನುಡಿಗಳು, ತನ್ನ ಜೀವನವನ್ನು ಸಫಲಗೊಳಿಸಲು ಅವನಿಗೆ ಸಹಾಯಮಾಡಿದವು. ಅವನ ವಿಷಯದಲ್ಲಿ, ಆ ನುಡಿಗಳ ಅಕ್ಷರಾರ್ಥ ಮೌಲ್ಯವು, ಮುತ್ತುಗಳ ಇಲ್ಲವೆ ಹಣದ ಚೀಲಕ್ಕಿಂತಲೂ ಹೆಚ್ಚಾಗಿತ್ತು.
ನೀವು ಆ ಚೀಲವನ್ನು ತೆರೆದುನೋಡುವಿರೋ?
ಈ ಮೇಲಿನ ಉದಾಹರಣೆಗಳಲ್ಲಿ ಕಂಡುಬಂದ ವ್ಯಕ್ತಿಗಳಿಗೆ ಅಷ್ಟೊಂದು ಅಮೂಲ್ಯವಾಗಿ ಪರಿಣಮಿಸಿದ ವಿವೇಕ ತುಂಬಿದ ಚೀಲವನ್ನು ನೀವು ಗುರುತಿಸಬಲ್ಲಿರೋ? ಅದು ಭೂಮಿಯಲ್ಲಿ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟ ಮತ್ತು ಎಲ್ಲೆಡೆಯೂ ಸುಲಭವಾಗಿ ದೊರೆಯುವ ಪುಸ್ತಕವಾದ ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ವಿವೇಕವಾಗಿದೆ. ಬಹುಶಃ ನಿಮ್ಮಲ್ಲಿ ಒಂದು ಪ್ರತಿಯಿದೆ ಇಲ್ಲವೆ ಒಂದನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಹೇಗೆ ಅಮೂಲ್ಯವಾದ ಮುತ್ತುಗಳ ಒಂದು ಚೀಲವನ್ನು ಉಪಯೋಗಿಸದಿದ್ದರೆ ಪ್ರಯೋಜನವಾಗಲಾರದೊ ಹಾಗೆಯೇ ಕೇವಲ ಒಂದು ಬೈಬಲನ್ನು ಹೊಂದಿರುವುದು ಪ್ರಯೋಜನಕರವಾಗಿರುವುದಿಲ್ಲ. ಆ ಚೀಲವನ್ನು ತೆರೆದು, ಬೈಬಲಿನ ವಿವೇಕಯುತ ಸಲಹೆ ಮತ್ತು ಸಮಯೋಚಿತ ಬುದ್ಧಿವಾದವನ್ನು ಅನ್ವಯಿಸಿಕೊಂಡು, ಅದು ಜೀವಿತದ ಸಮಸ್ಯೆಗಳನ್ನು ಸಫಲವಾಗಿ ನಿಭಾಯಿಸಲು ನಿಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ಸ್ವತಃ ನೋಡಿರಿ.
ನಿಮಗೆ ಮುತ್ತುಗಳ ಚೀಲವೊಂದು ಕೊಡಲಾಗುವಲ್ಲಿ ನೀವು ಆಭಾರಿಗಳಾಗಿರಲಾರಿರೋ ಮತ್ತು ಕೃತಜ್ಞತೆಯನ್ನು ಸಲ್ಲಿಸಸಾಧ್ಯವಾಗುವಂತೆ ನಿಮ್ಮ ದಾತನು ಯಾರೆಂದು ತಿಳಿದುಕೊಳ್ಳಲು ನೀವು ಪ್ರಯತ್ನಿಸಲಾರಿರೋ? ಆದರೆ ಬೈಬಲನ್ನು ನೀಡಿದ ದಾತನು ಯಾರೆಂದು ನಿಮಗೆ ಗೊತ್ತೊ?
‘ಪ್ರತಿಯೊಂದು ಶಾಸ್ತ್ರವಚನವು ದೈವಪ್ರೇರಿತವಾಗಿದ್ದು, ಪ್ರಯೋಜನಕರವಾಗಿದೆ’ ಎಂದು ಬೈಬಲ್ ಹೇಳುವಾಗ, ಅದರಲ್ಲಿರುವ ವಿವೇಕದ ಮೂಲನು ಯಾರೆಂದು ಅದು ತಿಳಿಸುತ್ತದೆ. (2 ತಿಮೊಥೆಯ 3:16) “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂಬುದಾಗಿಯೂ ಅದು ಹೇಳುತ್ತದೆ. (ಇಬ್ರಿಯ 4:12) ಆದುದರಿಂದಲೇ ಬೈಬಲಿನಲ್ಲಿರುವ ವಿವೇಕಯುತ ನುಡಿಗಳು ಸಮಯೋಚಿತವೂ ಪರಿಣಾಮಕಾರಿಯೂ ಆಗಿವೆ. ಈ ಉದಾರ ದಾತನಾದ ಯೆಹೋವ ದೇವರ ಕುರಿತು ಕಲಿತುಕೊಳ್ಳುವಂತೆ ನಿಮಗೆ ಸಹಾಯಮಾಡಲು ಯೆಹೋವನ ಸಾಕ್ಷಿಗಳು ಹರ್ಷಿಸುವರು. ಇದರಿಂದಾಗಿ ನೀವು ಬೈಬಲಿನಲ್ಲಿ, ಅಂದರೆ ನಮ್ಮ ದಿನಗಳಿಗೆ ಸಂದೇಶನೀಡುವ ಒಂದು ವಿವೇಕಪೂರ್ಣ ಗ್ರಂಥದಲ್ಲಿ ಕಂಡುಕೊಳ್ಳಲ್ಪಡುವ “ವಿವೇಕ ತುಂಬಿದ ಚೀಲ”ದ ಫಲಾನುಭವಿಗಳಾಗಿರುವ ಪ್ರತೀಕ್ಷೆಯನ್ನು ಪಡೆಯುವಿರಿ.
[ಅಧ್ಯಯನ ಪ್ರಶ್ನೆಗಳು]
a ಈ ಉದ್ಧರಣೆಯು 1 ಕೊರಿಂಥ 12:21, 22ರಿಂದ ತೆಗೆಯಲಾಗಿದೆ.
c ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 4 ರಲ್ಲಿರುವ ಚೌಕ/ಚಿತ್ರಗಳು]
ಭಾವನಾತ್ಮಕ ಸಮತೂಕವನ್ನು ಕಾಪಾಡಿಕೊಳ್ಳಲು ಸಹಾಯಮಾಡುವ ವಿವೇಕದ ನುಡಿಮುತ್ತುಗಳು
“ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನಾದ್ದರಿಂದ ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.”—ಕೀರ್ತನೆ 130:3, 4.
“ಹರ್ಷಹೃದಯದಿಂದ ಹಸನ್ಮುಖ; ಮನೋವ್ಯಥೆಯಿಂದ ಆತ್ಮಭಂಗ.”—ಜ್ಞಾನೋಕ್ತಿ 15:13.
“ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಆರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?”—ಪ್ರಸಂಗಿ 7:16.
“ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.
“ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.”—ಎಫೆಸ 4:26.
[ಪುಟ 5 ರಲ್ಲಿರುವ ಚೌಕ/ಚಿತ್ರಗಳು]
ಸಂತೋಷಕರ ಕುಟುಂಬ ಜೀವಿತಕ್ಕಾಗಿ ವಿವೇಕದ ನುಡಿಮುತ್ತುಗಳು
“ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22.
“ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುವದು; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುವದು.”—ಜ್ಞಾನೋಕ್ತಿ 18:15.
“ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.”—ಜ್ಞಾನೋಕ್ತಿ 25:11.
“ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:13, 14.
“ನನ್ನ ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.”—ಯಾಕೋಬ 1:19.
[ಪುಟ 6 ರಲ್ಲಿರುವ ಚೌಕ/ಚಿತ್ರಗಳು]
ಜೀವನವನ್ನು ಸಫಲಗೊಳಿಸಲಿಕ್ಕಾಗಿ ಸಹಾಯ ಮಾಡುವ ವಿವೇಕದ ನುಡಿಮುತ್ತುಗಳು
“ಮೋಸದ ತ್ರಾಸು ಯೆಹೋವನಿಗೆ ಅಸಹ್ಯ; ನ್ಯಾಯದ ತೂಕ ಆತನಿಗೆ ಸಂತೋಷ.”—ಜ್ಞಾನೋಕ್ತಿ 11:1.
“ಗರ್ವದಿಂದ ಭಂಗ ಉಬ್ಬಿನಿಂದ ದೊಬ್ಬು.”—ಜ್ಞಾನೋಕ್ತಿ 16:18.
“ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.”—ಜ್ಞಾನೋಕ್ತಿ 25:28.
“ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.”—ಪ್ರಸಂಗಿ 7:9.
“ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.”—ಪ್ರಸಂಗಿ 11:1.
“ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.”—ಎಫೆಸ 4:29.
[ಪುಟ 7 ರಲ್ಲಿರುವ ಚಿತ್ರ]
“ವಿವೇಕ ತುಂಬಿದ ಚೀಲ”ದ ಫಲಾನುಭವಿಯಾಗಲು, ಬೈಬಲಿನ ಅಧ್ಯಯನವು ಪ್ರಥಮ ಹೆಜ್ಜೆಯಾಗಿದೆ