ರಾಜ್ಯ ಘೋಷಕರು ವರದಿ ಮಾಡುತ್ತಾರೆ
‘ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ’ ಸಾರುವುದು
ಬಾಸ್ನಿಯ ಮತ್ತು ಹೆರ್ಸಗೋವಿನ ದೇಶವು ಯುದ್ಧದಲ್ಲಿ ಮುಳುಗಿದ್ದಾಗ, ಸಾವಿರಾರು ಜನರು ವಿಪರೀತ ಕಷ್ಟತೊಂದರೆಗಳನ್ನು ಅನುಭವಿಸಿದರು. ಆ ಕಠಿನವಾದ ಸಮಯದಲ್ಲಿ, ಜನರಿಗೆ ಉತ್ತೇಜನ ಹಾಗೂ ನಿರೀಕ್ಷೆಯನ್ನು ಕೊಡಲು ಯೆಹೋವನ ಸಾಕ್ಷಿಗಳು ತಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡಿದರು. ಸಾರಾಯೆವೊ ನಗರದಲ್ಲಿ ಸ್ವಲ್ಪ ಸಮಯಕ್ಕಾಗಿ ನೆರವಿನ ಕೆಲಸದಲ್ಲಿ ಸಹಾಯಮಾಡಿದ ಸಾಕ್ಷಿಯೊಬ್ಬನು ಬರೆದ ಪತ್ರದಿಂದ, ಈ ಕೆಳಗಿನ ಕೆಲವೊಂದು ಉದ್ಧರಣೆಗಳನ್ನು ತೆಗೆಯಲಾಗಿದೆ.
“ಇಲ್ಲಿ ಜೀವನವು ಕಠಿನವಾಗಿದ್ದರೂ, ಜನರು ಬೈಬಲ್ ಸತ್ಯಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಪಟ್ಟುಹಿಡಿದು ಮುಂದುವರಿಯುವುದರಲ್ಲಿ ಸ್ಥಳೀಯ ಸಾಕ್ಷಿಗಳು ಅತ್ಯುತ್ತಮ ಮಾದರಿಗಳಾಗಿದ್ದಾರೆ. ಭೌತಿಕವಾಗಿ ಅವರಲ್ಲಿ ಏನೂ ಇಲ್ಲದಿದ್ದರೂ, ಉತ್ಸಾಹಕ್ಕೆ ಅವರಲ್ಲಿ ಕೊರತೆಯೇ ಇಲ್ಲ. ಬಹುಮಟ್ಟಿಗೆ ಸಭೆಯಲ್ಲಿರುವ ಎಲ್ಲ ಯುವ ಜನರು ಪೂರ್ಣ ಸಮಯದ ಶುಶ್ರೂಷೆಯಲ್ಲಿದ್ದಾರೆ. ಈ ಹುರುಪಿನಿಂದ ಉತ್ತೇಜಿಸಲ್ಪಟ್ಟ ಹೊಸ ಪ್ರಚಾರಕರು, ಸೇವೆಯಲ್ಲಿ ತೊಡಗಿದ ಮೊದಲ ತಿಂಗಳಿನಿಂದಲೇ 60 ಇಲ್ಲವೆ ಹೆಚ್ಚಿನ ತಾಸುಗಳನ್ನು ವ್ಯಯಿಸುವುದು ಅಸಾಮಾನ್ಯ ಸಂಗತಿಯಲ್ಲ.
“ಮನೆ ಮನೆಯ ಸಾಕ್ಷಿಕಾರ್ಯವಲ್ಲದೆ, ಜನರನ್ನು ತಲಪುವ ಹಲವಾರು ಇತರ ವಿಧಾನಗಳನ್ನೂ ನಾವು ಪ್ರಯೋಗಿಸಿ ನೋಡಿದ್ದೇವೆ. ಉದಾಹರಣೆಗೆ, ಆ ನಗರದಲ್ಲಿರುವ ಅನೇಕ ಸ್ಮಶಾನಗಳಲ್ಲಿ ಬೈಬಲ್ ಪ್ರಕಾಶನಗಳನ್ನು ಹಂಚುವ ಮೂಲಕ ನಮಗೆ ಒಳ್ಳೆಯ ಫಲಿತಾಂಶಗಳು ಸಿಕ್ಕಿವೆ.
“ಆಸ್ಪತ್ರೆಗಳಲ್ಲೂ ಸಾಕ್ಷಿನೀಡಲ್ಪಟ್ಟಿದೆ. ಸಾರಾಯೆವೊ ನಗರದಲ್ಲಿರುವ ಒಂದು ಆಸ್ಪತ್ರೆಯ ಹೃದ್ರೋಗದ ವಿಭಾಗದಲ್ಲಿನ ಹಿರಿಯ ವೈದ್ಯನು ಡಿಸೆಂಬರ್ 8, 1996ರ ಅವೇಕ್! ಪತ್ರಿಕೆಯನ್ನು ಸ್ವೀಕರಿಸಿದನು. ಆ ಪತ್ರಿಕೆಯ ಮುಖ್ಯ ಶೀರ್ಷಿಕೆಯು, “ಹೃದಯಾಘಾತ—ಏನು ಮಾಡಸಾಧ್ಯವಿದೆ?” ಎಂದಾಗಿದೆ. ಇತರ ವೈದ್ಯರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ ಅವನು ಹೆಚ್ಚಿನ ಪ್ರತಿಗಳಿಗಾಗಿ ವಿನಂತಿಸಿದನು. ತರುವಾಯ, ಅವನ ವಿಭಾಗದಲ್ಲಿರುವ ಎಲ್ಲ ರೋಗಿಗಳನ್ನು ಸಂದರ್ಶಿಸುವ ಅನುಮತಿ ಸಾಕ್ಷಿಗಳಿಗೆ ನೀಡಲಾಯಿತು. ಹೀಗೆ, ಸ್ವಲ್ಪ ಸಮಯದಲ್ಲಿ ಎಲ್ಲ ರೋಗಿಗಳಿಗೆ ಹಂಚಿದ ಪತ್ರಿಕೆಯ ಒಟ್ಟು ಸಂಖ್ಯೆಯು 100ಕ್ಕಿಂತಲೂ ಹೆಚ್ಚಾಗಿತ್ತು. ಈ ಮೊದಲು, ಉತ್ತೇಜನ ಹಾಗೂ ನಿರೀಕ್ಷೆಯನ್ನು ಕೊಡಲು ತಮ್ಮನ್ನು ಯಾರೂ ಆಸ್ಪತ್ರೆಯಲ್ಲಿ ಸಂದರ್ಶಿಸಿರಲಿಲ್ಲವೆಂದು ಅನೇಕ ರೋಗಿಗಳು ಹೇಳಿದರು.
“ಮತ್ತೊಂದು ಸಂದರ್ಭದಲ್ಲಿ ಮಕ್ಕಳ ಚಿಕಿತ್ಸಾ ವಿಭಾಗವನ್ನು ಸಂದರ್ಶಿಸಿ, ಮಕ್ಕಳಿಗೆ ಸೂಕ್ತವಾದ ಲೇಖನಗಳುಳ್ಳ ಪತ್ರಿಕೆಗಳನ್ನು ನೀಡಲಾಯಿತು. ಅಲ್ಲಿಯ ಹಿರಿಯ ವೈದ್ಯೆ, ಓದುವ ಕೋಣೆಗಾಗಿ ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬ ಪ್ರಕಾಶನದ ಕೆಲವು ಪ್ರತಿಗಳನ್ನೂ ಸ್ವೀಕರಿಸಿದಳು. ಆಸ್ಪತ್ರೆಗೆ ತಮ್ಮ ಮಕ್ಕಳೊಂದಿಗೆ ಬರುವ ತಾಯಂದಿರು, ಅವರ ಮಕ್ಕಳಿಗೆ ಪ್ರತಿದಿನ ಬೈಬಲ್ ಕಥೆಗಳನ್ನು ಓದಿ ಹೇಳುತ್ತಾರೆ. ಈ ವೈದ್ಯೆಯನ್ನು ಮನೆಯಲ್ಲೂ ಭೇಟಿಮಾಡುವ ಏರ್ಪಾಡುಗಳು ಮಾಡಲ್ಪಟ್ಟಿವೆ.
“ಸಾರಾಯೆವೊದಲ್ಲಿ ವಿಭಿನ್ನ ರಾಷ್ಟ್ರಗಳಿಗೆ ಸೇರಿದ ಸಾವಿರಾರು ನೇಟೊ [ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್] ಸೈನಿಕರಿದ್ದಾರೆ. ಇವರಿಗೂ ಸಂಪೂರ್ಣವಾಗಿ ಸಾಕ್ಷಿಯು ನೀಡಲ್ಪಟ್ಟಿದೆ. ಕೆಲವೊಮ್ಮೆ ನಾವು ಒಂದು ಶಸ್ತ್ರಸಜ್ಜಿತ ವಾಹನದಿಂದ ಮತ್ತೊಂದು ವಾಹನಕ್ಕೆ ಹೋಗಿ, ಎಲ್ಲ ಜನಾಂಗಗಳಿಗೆ ಸುವಾರ್ತೆ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಉಪಯೋಗಿಸುತ್ತಾ, ಹಲವಾರು ಭಾಷೆಗಳಲ್ಲಿರುವ ಕಾವಲಿನಬರುಜು ಮತ್ತು ಎಚ್ಚರ! ಪತ್ರಿಕೆಯನ್ನು ನೀಡುತ್ತೇವೆ. ಹೀಗೆ, ಇಟ್ಯಾಲಿಯನ್ ಸೈನಿಕರ ಬ್ಯಾರಕ್ಗಳಲ್ಲಿ 200ಕ್ಕಿಂತಲೂ ಹೆಚ್ಚಿನ ಪತ್ರಿಕೆಗಳು ವಿತರಿಸಲ್ಪಟ್ಟವು. ಆಶ್ಚರ್ಯಕರ ಸಂಗತಿಯೇನೆಂದರೆ, ತಾವು ಇದು ವರೆಗೂ ಮೊದಲು ಯೆಹೋವನ ಸಾಕ್ಷಿಗಳೊಂದಿಗೆ ಎಂದೂ ಮಾತಾಡಿರಲಿಲ್ಲವೆಂದು ಅನೇಕ ಇಟ್ಯಾಲಿಯನ್ ಸೈನಿಕರು ಹೇಳಿದರು. ಅಂತಹವರನ್ನು ನಾವು ಸಾರಾಯೆವೊ ನಗರದಲ್ಲಿ ಸಂಪರ್ಕಿಸುವಂತಾಯಿತು.
“ಒಂದು ದಿನ, ಒಂದು ಶಸ್ತ್ರಸಜ್ಜಿತ ವಾಹನವು ರಸ್ತೆಬದಿಯಲ್ಲಿ ನಿಂತಿತ್ತು. ನಾನು ನನ್ನ ಛತ್ರಿಯಿಂದ ವಾಹನದ ಕಿಟಕಿಯನ್ನು ತಟ್ಟಿದಾಗ, ಒಬ್ಬ ಸೈನಿಕನು ಹೊರಗೆ ಬಂದನು. ಅವನಿಗೆ ‘ಶಾಂತಿಯ ಸಂದೇಶವಾಹಕರು—ಅವರು ಯಾರಾಗಿದ್ದಾರೆ?’ ಎಂಬ ಶೀರ್ಷಿಕೆಯು ಕಾವಲಿನಬರುಜು ಪತ್ರಿಕೆಯನ್ನು ನಾನು ನೀಡಿದೆ. ಆ ಸೈನಿಕನು ನನ್ನನ್ನು ನೋಡಿ, ‘ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಲ್ಲವೇ?’ ಎಂದು ಕೇಳಿದನು. ಹೌದೆಂದು ತಿಳಿದುಕೊಂಡ ನಂತರ, ಅವನು ಹೇಳಿದ್ದು, ‘ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ, ನೀವು ಇಲ್ಲಿಯೂ ಇದ್ದೀರಲ್ಲ! ಭೂಮಿಯ ಮೇಲೆ ಸಾಕ್ಷಿಗಳಿಲ್ಲದ ಯಾವ ಸ್ಥಳವಾದರೂ ಇದೆಯೇ?’”
ಅಪೊಸ್ತಲ ಪೌಲನು ಉತ್ತೇಜಿಸಿದ್ದು: “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ಲೋಕದಾದ್ಯಂತವಿರುವ ತಮ್ಮ ಜೊತೆ ವಿಶ್ವಾಸಿಗಳಂತೆ, ಸಾರಾಯೆವೊದಲ್ಲಿರುವ ಯೆಹೋವನ ಸಾಕ್ಷಿಗಳು, ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಮತ್ತು ಶಸ್ತ್ರಸಜ್ಜಿತ ವಾಹನಗಳಲ್ಲಿರುವ ಸೈನಿಕರನ್ನು ಸಂದರ್ಶಿಸುತ್ತಾ ಇದನ್ನೇ ಮಾಡುತ್ತಿದ್ದಾರೆ.