ರಾಶೀ—ಒಬ್ಬ ಪ್ರಭಾವಶಾಲಿ ಬೈಬಲ್ ವ್ಯಾಖ್ಯಾನಕಾರ
ಹೀಬ್ರು ಭಾಷೆಯಲ್ಲಿ ಮುದ್ರಿಸಲ್ಪಟ್ಟ ಪ್ರಥಮ ಪುಸ್ತಕಗಳಲ್ಲಿ ಒಂದು ಯಾವುದು? ಅದು ಪೆಂಟಟ್ಯೂಕ್ (ಮೋಶೆಯ ಐದು ಪುಸ್ತಕಗಳು)ನ ವ್ಯಾಖ್ಯಾನವಾಗಿದೆ. ಅದು 1475ರಲ್ಲಿ ಇಟಲಿಯ ರೆಜೀಯೊ ಕ್ಯಾಲಬ್ರೀಯದಲ್ಲಿ ಪ್ರಕಾಶಿಸಲ್ಪಟ್ಟಿತು. ಅದರ ಗ್ರಂಥಕರ್ತನು ಯಾರು? ರಾಶೀ ಎಂಬುದಾಗಿ ಜ್ಞಾತನಾಗಿದ್ದ ಒಬ್ಬ ವ್ಯಕ್ತಿಯೇ.
ಒಂದು ವ್ಯಾಖ್ಯಾನಕ್ಕೆ ಇಷ್ಟೊಂದು ಘನತೆ ಗೌರವ ಏಕೆ ನೀಡಲಾಯಿತು? ರಾಶೀ—ಆ ವ್ಯಕ್ತಿಯೂ ಅವನ ಲೋಕವೂ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಎಸ್ರಾ ಶೆರೆಶೆವೆಸ್ಕೀ ಹೇಳುವುದೇನೆಂದರೆ, ರಾಶೀಯ ವ್ಯಾಖ್ಯಾನವು “ಯೆಹೂದ್ಯರ ಮನೆಗಳಲ್ಲಿ ಮತ್ತು ಸಾರ್ವಜನಿಕ ಅಧ್ಯಯನ ಗೃಹಗಳಲ್ಲಿ ಮೂಲಭೂತ ಗ್ರಂಥವಾಗಿ ಪರಿಣಮಿಸಿತು. ಯೆಹೂದಿ ಸಾಹಿತ್ಯದ ಬೇರೆ ಯಾವ ಕೃತಿಗೂ ಇಷ್ಟೊಂದು ಮನ್ನಣೆ ನೀಡಲ್ಪಟ್ಟಿಲ್ಲ . . . ಪೆಂಟಟ್ಯೂಕ್ನ ಕುರಿತು ರಾಶೀಯು ಬರೆದ ವ್ಯಾಖ್ಯಾನವನ್ನು ವಿವರಿಸುವಂತಹ 200ಕ್ಕಿಂತಲೂ ಹೆಚ್ಚಿನ ಉತ್ಕೃಷ್ಟ ವ್ಯಾಖ್ಯಾನಗಳು ಇರುವುದಾಗಿ ತಿಳಿದುಬಂದಿದೆ.”
ರಾಶೀಯ ವ್ಯಾಖ್ಯಾನದಿಂದ ಯೆಹೂದ್ಯರು ಮಾತ್ರ ಪ್ರಭಾವಿಸಲ್ಪಟ್ಟಿದ್ದಾರೊ? ಹೀಬ್ರು ಶಾಸ್ತ್ರಗಳ ಕುರಿತಾದ ರಾಶೀಯ ವ್ಯಾಖ್ಯಾನವು ಶತಮಾನಗಳಿಂದ ಬೈಬಲ್ ಭಾಷಾಂತರಗಳನ್ನು ಪ್ರಭಾವಿಸಿದೆ ಎಂಬುದನ್ನು ಅನೇಕರು ಅರ್ಥಮಾಡಿಕೊಂಡಿಲ್ಲ. ಆದರೆ ರಾಶೀಯು ಯಾರಾಗಿದ್ದನು, ಮತ್ತು ಅವನು ಇಷ್ಟೊಂದು ಪ್ರಭಾವಶಾಲಿಯಾಗಿದ್ದದ್ದು ಹೇಗೆ?
ರಾಶೀ ಯಾರಾಗಿದ್ದನು?
ರಾಶೀ ಫ್ರಾನ್ಸ್ನ ಟ್ರೋಯಸ್ನಲ್ಲಿ, 1040ನೆಯ ವರ್ಷದಲ್ಲಿ ಜನಿಸಿದನು.a ಯೌವನಸ್ಥನಾಗಿದ್ದಾಗ ಅವನು ರೈನ್ಲೆಂಡ್ನ ವರ್ಮ್ಸ್ ಮತ್ತು ಮೈನ್ಸ್ನಲ್ಲಿನ ಯೆಹೂದಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದುಕೊಂಡನು. ಅಲ್ಲಿ ಅವನು, ಯೂರೋಪ್ನ ಅತ್ಯಂತ ಪ್ರಖ್ಯಾತ ಯೆಹೂದಿ ಪಂಡಿತರಲ್ಲಿ ಕೆಲವರ ವಿದ್ಯಾರ್ಥಿಯಾಗಿದ್ದನು. ಅವನು ತನ್ನ 25ರ ಪ್ರಾಯದಲ್ಲಿ ಟ್ರೋಯಸ್ಗೆ ಹಿಂದಿರುಗುವಂತೆ ಅವನ ವ್ಯಕ್ತಿಗತ ಸನ್ನಿವೇಶಗಳು ಅಗತ್ಯಪಡಿಸಿದವು. ಈಗಾಗಲೇ ಒಬ್ಬ ಪ್ರಮುಖ ಪಂಡಿತನೆಂದು ಗುರುತಿಸಲ್ಪಟ್ಟ ರಾಶೀ, ಬೇಗನೆ ಸ್ಥಳೀಯ ಯೆಹೂದಿ ಸಮುದಾಯದ ಧಾರ್ಮಿಕ ನಾಯಕನಾದನು ಮತ್ತು ತನ್ನ ಸ್ವಂತ ಧಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿದನು. ಸಕಾಲದಲ್ಲಿ, ಯೆಹೂದಿ ವಿದ್ಯಾಭ್ಯಾಸದ ಈ ಹೊಸ ಕೇಂದ್ರವು, ಜರ್ಮನಿಯಲ್ಲಿ ರಾಶೀಯ ಶಿಕ್ಷಕರು ಸ್ಥಾಪಿಸಿದ್ದ ಕೇಂದ್ರಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಯಿತು.
ಆ ಸಮಯದಲ್ಲಿ ಫ್ರಾನ್ಸ್ನಲ್ಲಿದ್ದ ಯೆಹೂದ್ಯರು, ಕ್ರೈಸ್ತರೆಂದು ಹೇಳಿಕೊಂಡ ತಮ್ಮ ನೆರೆಯವರೊಂದಿಗೆ ಸಾಧಾರಣ ರೀತಿಯ ಶಾಂತಿ ಮತ್ತು ಸಾಮರಸ್ಯವನ್ನು ಅನುಭವಿಸಿದರು. ಇದು ರಾಶೀಯ ಪಾಂಡಿತ್ಯಪೂರ್ಣ ಚಟುವಟಿಕೆಗಳಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿತು. ಹಾಗಿದ್ದರೂ, ಈ ಪಂಡಿತನು ತನ್ನನ್ನು ಬೇರೆಯವರಿಂದ ಪ್ರತ್ಯೇಕಿಸಿಕೊಳ್ಳಲಿಲ್ಲ. ಶಿಕ್ಷಕ ಹಾಗೂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನೋಪಾದಿ ಅವನಿಗೆ ದೊಡ್ಡ ಸ್ಥಾನಮಾನವಿದ್ದರೂ, ರಾಶೀ ತನ್ನ ಜೀವನೋಪಾಯಕ್ಕಾಗಿ ದ್ರಾಕ್ಷಾರಸವನ್ನು ತಯಾರಿಸುತ್ತಿದ್ದ. ಇಂತಹ ಸಾಮಾನ್ಯ ಕಸುಬುಗಳ ತಿಳಿವಳಿಕೆಯಿಂದಾಗಿ ಅವನು ಸರ್ವಸಾಧಾರಣ ಯೆಹೂದ್ಯರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡನು. ಇದು ಅವರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಹಾನುಭೂತಿಯನ್ನು ತೋರಿಸಲು ಅವನಿಗೆ ಸಹಾಯಮಾಡಿತು. ಟ್ರೋಯಸ್ ಇದ್ದ ಸ್ಥಳವು ಸಹ ರಾಶೀಯ ಪರಿಜ್ಞಾನಕ್ಕೆ ನೆರವುನೀಡಿತು. ಪ್ರಧಾನ ವ್ಯಾಪಾರ ಹೆದ್ದಾರಿಗಳ ಬಳಿ ನೆಲೆಸಿರುವ ಈ ನಗರವು, ಒಂದು ಮಹಾ ನಗರವಾಗಿತ್ತು. ಈ ಕಾರಣ ರಾಶೀ, ವಿವಿಧ ರಾಷ್ಟ್ರಗಳ ಆಚಾರವಿಚಾರಗಳೊಂದಿಗೆ ಚಿರಪರಿಚಿತನಾದನು.
ಒಂದು ವ್ಯಾಖ್ಯಾನದ ಅಗತ್ಯ ಏಕೆ ಇತ್ತು?
ಯೆಹೂದ್ಯರು ಗ್ರಂಥಪಠನಕ್ಕೆ ಸುಪ್ರಸಿದ್ಧರಾಗಿದ್ದರು. ಆದರೆ “ಆ ಗ್ರಂಥ”ವಾದ ಬೈಬಲು ಹೀಬ್ರು ಭಾಷೆಯಲ್ಲಿತ್ತು. ಮತ್ತು ಆಗ ಜನರು ಅರಬಿಕ್, ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಮತ್ತು ಇನ್ನಿತರ ಭಾಷೆಗಳನ್ನು ಮಾತಾಡುತ್ತಿದ್ದರು. ಹೆಚ್ಚಿನ ಯೆಹೂದ್ಯರಿಗೆ ಚಿಕ್ಕಂದಿನಿಂದ ಹೀಬ್ರು ಭಾಷೆಯು ಕಲಿಸಲಾಯಿತಾದರೂ, ಅವರು ಬೈಬಲ್ ಸಂಬಂಧಿತ ಅನೇಕ ಪದಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲಿಲ್ಲ. ಮತ್ತು ಅನೇಕ ಶತಮಾನಗಳ ವರೆಗೆ ರಬ್ಬಿಸಂಬಂಧಿತ ಯೆಹೂದಮತದಲ್ಲಿದ್ದ ಒಂದು ಬಲವಾದ ಪ್ರವೃತ್ತಿಯ ಕಾರಣ, ಜನರು ಬೈಬಲ್ ಗ್ರಂಥಪಾಠದ ಪದಶಃ ಅರ್ಥವನ್ನು ಪರಿಶೀಲಿಸುವುದರಿಂದ ಹಿಂಜರಿದರು. ಬೈಬಲ್ ಸಂಬಂಧಿತ ಪದಗಳು ಮತ್ತು ವಚನಗಳಿಗೆ ಸಂಬಂಧಿಸಿದ ಮಿಥ್ಯೆಗಳು ಮತ್ತು ಕಾಲ್ಪನಿಕ ಕಥೆಗಳು ಹೇರಳವಾಗಿದ್ದವು. ಇಂತಹ ಅನೇಕ ಹೇಳಿಕೆಗಳು ಮತ್ತು ಕಥೆಗಳು ದೊಡ್ಡ ದೊಡ್ಡ ಸಂಪುಟಗಳಲ್ಲಿ ಬರೆದಿಡಲ್ಪಟ್ಟವು. ಇವುಗಳನ್ನು ಮಿದ್ರಾಷ್ ಎಂಬುದಾಗಿ ಕರೆಯಲಾಯಿತು.b
ರಾಶೀಯ ಮೊಮ್ಮಗನಾದ ರಬ್ಬಿ ಸ್ಯಾಮುವೆಲ್ ಬೆನ್ ಮೇಯಿರ್ (ರಾಷ್ಬಾಮ್) ಸಹ ಒಬ್ಬ ಬೈಬಲ್ ಪಂಡಿತನಾಗಿದ್ದನು. ಆದಿಕಾಂಡ 37:2ರ ಕುರಿತು ವ್ಯಾಖ್ಯಾನಿಸುತ್ತಾ ಅವನು ಹೇಳಿದ್ದೇನೆಂದರೆ, “ಹಿಂದಿನ ವ್ಯಾಖ್ಯಾನಕಾರರು [ರಾಶೀಯ ಮೊದಲು] . . . ಪ್ರಸಂಗಮಾಡುವ (ದೆರಾಶೋತ್) ಇಚ್ಛೆಯುಳ್ಳವರಾಗಿದ್ದು, ಇದನ್ನೇ ಅವರು ಅತ್ಯಂತ ಪ್ರಮುಖವಾದ ಉದ್ದೇಶವೆಂದು ಪರಿಗಣಿಸಿದರು. [ಆದರೆ] ಬೈಬಲಿನ ಗ್ರಂಥಪಾಠದ ಪದಶಃ ಅರ್ಥವನ್ನು ಆಳವಾಗಿ ಪರಿಶೀಲಿಸಿ ನೋಡುವ ಹವ್ಯಾಸವು ಅವರಿಗಿರಲಿಲ್ಲ.” ಈ ಪ್ರವೃತ್ತಿಯ ಕುರಿತು ಹೇಳಿಕೆ ನೀಡುತ್ತಾ, ಡಾ. ಏ. ಕೋಹನ್ (ಬೈಬಲಿನ ಸಾನ್ಸೀನೊ ಪುಸ್ತಕಗಳು ಎಂಬ ಇಂಗ್ಲಿಷ್ ಪುಸ್ತಕದ ಮುಖ್ಯ ಸಂಪಾದಕ) ಬರೆಯುವುದು: “ಗ್ರಂಥಪಾಠದ ಪೆಶಾತ್ ಇಲ್ಲವೆ ಸರಳವಾದ ಅರ್ಥಕ್ಕೆ ಅಸಂಗತವಾಗಿರುವ ಯಾವ ವಿವರಣೆಯನ್ನೂ ಸೇರಿಸಬಾರದೆಂದು ರಬ್ಬಿಗಳು ಆಜ್ಞಾಪಿಸಿದ್ದರೂ, ಆಚರಣೆಯಲ್ಲಿ ಅವರು ಈ ನಿಯಮಕ್ಕೆ ಯಾವ ಪರಿಗಣನೆಯನ್ನೂ ತೋರಿಸಲಿಲ್ಲ.” ಇಂತಹ ಧಾರ್ಮಿಕ ಪರಿಸರದಲ್ಲಿ ಒಬ್ಬ ಸಾಮಾನ್ಯ ಯೆಹೂದ್ಯನು ಬೈಬಲಿನ ಗ್ರಂಥಪಾಠವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಸ್ಸಹಾಯಕನಾಗಿದ್ದನು, ಮತ್ತು ಹೀಗೆ ವಿವರಣಾತ್ಮಕ ಗ್ರಂಥದ ಅಗತ್ಯವನ್ನು ಮನಗಂಡನು.
ರಾಶೀಯ ಗುರಿ ಮತ್ತು ವಿಧಾನಗಳು
ಹೀಬ್ರು ಶಾಸ್ತ್ರಗಳನ್ನು ಎಲ್ಲ ಯೆಹೂದ್ಯರು ಅರ್ಥಮಾಡಿಕೊಳ್ಳಬೇಕೆಂಬುದೇ ರಾಶೀಯ ಜೀವನ ಗುರಿಯಾಗಿತ್ತು. ಇದನ್ನು ಸಾಧಿಸಲು, ಅವನು ಓದುಗನಿಗೆ ಕಷ್ಟಕರವಾಗಿರಬಹುದೆಂದು ಎಣಿಸಿದ ನಿರ್ದಿಷ್ಟ ಪದಗಳು ಹಾಗೂ ವಚನಗಳ ಕುರಿತಾದ ಹೇಳಿಕೆಗಳ ಪುಸ್ತಕಗಳನ್ನು ಒಟ್ಟುಗೂಡಿಸಲಾರಂಭಿಸಿದನು. ರಾಶೀಯ ಟಿಪ್ಪಣಿಗಳಲ್ಲಿ ಅವನ ಶಿಕ್ಷಕರ ವಿವರಣೆಗಳು, ಮತ್ತು ರಬ್ಬಿಸಂಬಂಧಿತ ಸಾಹಿತ್ಯದ ಪೂರ್ಣ ವ್ಯಾಪ್ತಿಯ ಕುರಿತು ಅವನಿಗಿರುವ ಸಮಗ್ರ ಜ್ಞಾನವನ್ನು ಕಂಡುಕೊಳ್ಳಬಹುದು. ಭಾಷಾ ಸಂಶೋಧನೆಯಲ್ಲಿ ರಾಶೀ ಲಭ್ಯವಿದ್ದ ಎಲ್ಲ ಗ್ರಂಥಗಳನ್ನು ಓದಿಮುಗಿಸಿದನು. ಮ್ಯಾಸರೆಟಸ್ ಅವರ ಒತ್ತುಚಿಹ್ನೆಗಳು, ಗ್ರಂಥಪಾಠದ ಅರ್ಥವನ್ನು ಹೇಗೆ ಬಾಧಿಸುತ್ತವೆ ಎಂಬುದಕ್ಕೆ ಅವನು ಗಮನ ಹರಿಸಿದನು. ಒಂದು ಪದದ ಅರ್ಥವನ್ನು ವಿವರಿಸಲು, ಪೆಂಟಟ್ಯೂಕ್ನ ಕುರಿತಾದ ಅವನ ವ್ಯಾಖ್ಯಾನವು ಅನೇಕ ವೇಳೆ ಆ್ಯರಾಮಿಕ್ ಭಾಷಾಂತರವನ್ನು (ಟರ್ಗಮ್ ಆಫ್ ಒಂಕೆಲಾಸ್) ಉಪಯೋಗಿಸಿತು. ಉಪಸರ್ಗಗಳು, ಸಂಯುಕ್ತ ಪದಗಳು, ಕ್ರಿಯಾಪದದ ಅರ್ಥಗಳು, ಮತ್ತು ವ್ಯಾಕರಣ ಹಾಗೂ ವಾಕ್ಯ ರಚನೆಯ ಇತರ ಅಂಶಗಳನ್ನು ವಿವರಿಸುವುದರಲ್ಲಿ, ರಾಶೀ ನಮ್ಯತೆಯನ್ನು ಮತ್ತು ಜಾಣ್ಮೆಯನ್ನು ಪ್ರದರ್ಶಿಸಿದನು. ಇಂತಹ ಹೇಳಿಕೆಗಳು ಹೀಬ್ರು ಭಾಷೆಯ ವಾಕ್ಯರಚನೆ ಮತ್ತು ವ್ಯಾಕರಣವನ್ನು ತಿಳಿದುಕೊಳ್ಳುವುದರಲ್ಲಿ ಅಮೂಲ್ಯವಾದ ನೆರವನ್ನು ನೀಡಿವೆ.
ರಬ್ಬಿಸಂಬಂಧಿತ ಯೆಹೂದಿಮತದಲ್ಲಿನ ಬಲವಾದ ಪ್ರವೃತ್ತಿಗೆ ವಿರುದ್ಧವಾಗಿ, ರಾಶೀ ಯಾವಾಗಲೂ ಗ್ರಂಥಪಾಠದ ಸರಳ ಹಾಗೂ ಪದಶಃ ಅರ್ಥವನ್ನು ಒತ್ತಿಹೇಳಲು ಪ್ರಯತ್ನಿಸಿದನು. ಆದರೆ ವ್ಯಾಪಕವಾಗಿದ್ದ ಮಿದ್ರಾಷ್ ಸಂಬಂಧಿತ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವಿರಲಿಲ್ಲ. ಯೆಹೂದ್ಯರಿಗೆ ಅದು ಚಿರಪರಿಚಿತವಾಗಿತ್ತು. ರಾಶೀಯ ವ್ಯಾಖ್ಯಾನದ ಎದ್ದುಕಾಣುವ ವೈಶಿಷ್ಟ್ಯವು, ಬೈಬಲಿನ ಪದಶಃ ಅರ್ಥವನ್ನು ಅನೇಕ ವೇಳೆ ಅಸ್ಪಷ್ಟಗೊಳಿಸಿದ್ದ ಮಿದ್ರಾಷ್ ಬರಹಗಳಿಗೆ ಸಂಬಂಧ ಕಲ್ಪಿಸುವ ಶೈಲಿಯೇ ಆಗಿತ್ತು.
ಆದಿಕಾಂಡ 3:8ನ್ನು ವ್ಯಾಖ್ಯಾನಿಸುತ್ತಾ ರಾಶೀ ವಿವರಿಸಿದ್ದು: “ನಮ್ಮ ಜ್ಞಾನಿಗಳು ಬೆರೆಶಿತ್ ರಬಾ ಮತ್ತು ಇತರ ಮಿದ್ರಾಷಿಕ್ ಸಂಕಲನಗಳಲ್ಲಿ ಅನೇಕ ಆಗಾದಿಕ್c ಮಿದ್ರಾಶಿಮ್ಗಳನ್ನು ಸೂಕ್ತವಾಗಿ ಜೋಡಿಸಿದ್ದಾರೆ. ನಾನಾದರೊ, ವಚನದ ನೇರ ಅರ್ಥ (ಪೆಶಾತ್)ದ ಕುರಿತು ಮತ್ತು ವಚನದ ಪೂರ್ವಾಪರದಲ್ಲಿರುವ ಶಾಸ್ತ್ರೀಯ ವೃತ್ತಾಂತವನ್ನು ವಿವರಿಸುವಂತಹ ಆಗಾದೊತ್ನ ಕುರಿತಷ್ಟೇ ಚಿಂತಿಸುತ್ತೇನೆ.” ಒಂದು ವಚನದ ಅರ್ಥ ಇಲ್ಲವೆ ಪೂರ್ವಾಪರವನ್ನು ಸ್ಪಷ್ಟೀಕರಿಸಲು ಸಹಾಯಮಾಡಿದ ಮಿದ್ರಾಷಿಮ್ಗಳನ್ನು ಮಾತ್ರ ಆರಿಸಿಕೊಂಡು ಅವುಗಳನ್ನು ತಿದ್ದುವ ಮೂಲಕ, ರಾಶೀ ಅಸಂಬದ್ಧತೆ ಮತ್ತು ಗಲಿಬಿಲಿಯನ್ನು ಉಂಟುಮಾಡಿದ ಮಿದ್ರಾಷಿಮ್ಗಳನ್ನು ತೆಗೆದುಹಾಕಿದನು. ಈ ತಿದ್ದುವಿಕೆಯಿಂದಾಗಿ, ಯೆಹೂದ್ಯರ ಮುಂದಿನ ಸಂತತಿಗಳ ಜನರು, ರಾಶೀಯು ಮಿದ್ರಾಷಿನಿಂದ ಆಯ್ದು ತೆಗೆದಿದ್ದ ಉತ್ತಮ ದರ್ಜೆಯ ವಿಷಯಗಳನ್ನೇ ಓದಿದರು.
ತನ್ನ ಶಿಕ್ಷಕರಿಗೆ ಮನ್ನಣೆ ಕೊಡುವ ವಿಷಯದಲ್ಲಿ ರಾಶೀ ಧಾರಾಳ ಮನಸ್ಸಿನವನಾಗಿದ್ದನಾದರೂ, ಒಂದು ವಚನದ ಸ್ಪಷ್ಟವಾದ ತರ್ಕಕ್ಕೆ ಶಿಕ್ಷಕರ ವಿವರಣೆಗಳು ತದ್ವಿರುದ್ಧವಾಗಿವೆ ಎಂದು ಅವನಿಗೆ ಅನಿಸಿದಾಗ ಅದಕ್ಕೆ ಅಸಮ್ಮತಿಸಲು ಅವನು ಹಿಂಜರಿಯಲಿಲ್ಲ. ನಿರ್ದಿಷ್ಟವಾದ ಒಂದು ಭಾಗವು ತನಗೆ ಅರ್ಥವಾಗದಿದ್ದಾಗ, ಇಲ್ಲವೆ ಅದನ್ನು ಈ ಮೊದಲು ಅವನು ತಪ್ಪಾಗಿ ವಿವರಿಸಿದ್ದರೆ, ಅದನ್ನು ಒಪ್ಪಿಕೊಳ್ಳಲು ಅವನು ಸಿದ್ಧನಾಗಿದ್ದನು. ತನ್ನ ತಿಳುವಳಿಕೆಯನ್ನು ತನ್ನ ವಿದ್ಯಾರ್ಥಿಗಳು ಸರಿಪಡಿಸಿದ ಸಂದರ್ಭಗಳನ್ನು ಸಹ ಅವನು ಉಲ್ಲೇಖಿಸಿದ್ದಾನೆ.
ತನ್ನ ದಿನದ ಸನ್ನಿವೇಶಗಳಿಂದ ಪ್ರಭಾವಿಸಲ್ಪಟ್ಟವನು
ರಾಶೀ ಸಮಯೋಚಿತವಾದ ವ್ಯಕ್ತಿಯಾಗಿದ್ದನು. ಒಬ್ಬ ಗ್ರಂಥಕರ್ತನು ಇದನ್ನು ಈ ವಿಧದಲ್ಲಿ ಸಾರಾಂಶಿಸಿದನು: “ಯೆಹೂದಿ ಪರಂಪರೆಗೆ [ರಾಶೀಯ] ಮಹಾ ಕೊಡುಗೆಯು, ಎಲ್ಲ ಸುಸಂಗತ ಭಾಗಗಳನ್ನು ಆ ಸಮಯದ ದೇಶೀಯ ಭಾಷೆಗೆ ತರ್ಜುಮೆ ಮಾಡಿದ ಕಾರ್ಯವೇ ಆಗಿತ್ತು. ಆ ಭಾಷಾಂತರವು ಎಷ್ಟೊಂದು ಸ್ಪಷ್ಟ ಹಾಗೂ ತಿಳಿಯಾದ ಭಾಷೆಯಲ್ಲಿ, ಎಷ್ಟೊಂದು ಆದರ ಹಾಗೂ ಮಾನವೀಯತೆಯೊಂದಿಗೆ, ಮತ್ತು ಎಷ್ಟೊಂದು ಅಸಾಧಾರಣ ಕೌಶಲ ಹಾಗೂ ಪಾಂಡಿತ್ಯದೊಂದಿಗೆ ಮಾಡಲ್ಪಟ್ಟಿತೆಂದರೆ, ಅವನ ವ್ಯಾಖ್ಯಾನಗಳು ಶಾಸ್ತ್ರದಂತೆ ಪೂಜಿಸಲ್ಪಟ್ಟವು ಮತ್ತು ಸಾಹಿತ್ಯದ ಕೃತಿಗಳಂತೆ ಪ್ರೀತಿಸಲ್ಪಟ್ಟವು. ಹೀಬ್ರು ಭಾಷೆಯನ್ನು ರಾಶೀ ಫ್ರೆಂಚ್ ಭಾಷೆಯೊ ಎಂಬಂತೆ ಬುದ್ಧಿ ಹಾಗೂ ಲಾಲಿತ್ಯದೊಂದಿಗೆ ಬರೆದನು. ಭಾಷಾಂತರ ಮಾಡುವಾಗ ನಿರ್ದಿಷ್ಟವಾದ ಹೀಬ್ರು ಪದ ಇಲ್ಲದಿದ್ದಾಗ, ಅವನು ಫ್ರೆಂಚ್ ಪದವನ್ನು ಉಪಯೋಗಿಸಿ, ಅದನ್ನು ಹೀಬ್ರು ಭಾಷೆಯಲ್ಲಿ ಬರೆದನು.” ಹೀಗೆ ಲಿಪ್ಯಂತರ ಮಾಡಿ ರಾಶೀ ಉಪಯೋಗಿಸಿದ 3,500ಕ್ಕಿಂತಲೂ ಹೆಚ್ಚಿನ ಫ್ರೆಂಚ್ ಪದಗಳು, ಹಳೆಯ ಫ್ರೆಂಚ್ ಭಾಷಾಶಾಸ್ತ್ರ ಹಾಗೂ ಉಚ್ಚಾರಣೆಯನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯವಾದ ನಿಧಿಯಾಗಿ ಪರಿಣಮಿಸಿದೆ.
ರಾಶೀಯ ಜೀವನವು ಸಾಕಷ್ಟು ನೆಮ್ಮದಿಯ ವಾತಾವರಣದಲ್ಲಿ ಆರಂಭಿಸಿತಾದರೂ, ತರುವಾಯದ ವರ್ಷಗಳಲ್ಲಿ ಯೆಹೂದ್ಯರು ಮತ್ತು ನಾಮಮಾತ್ರದ ಕ್ರೈಸ್ತರ ನಡುವೆ ಹೆಚ್ಚುತ್ತಿರುವ ಸಂಕ್ಷೋಭೆಯನ್ನು ಅವನು ಕಣ್ಣಾರೆ ಕಂಡನು. 1096ರಲ್ಲಾದ ಪ್ರಥಮ ಧರ್ಮಯುದ್ಧವು, ರಾಶೀಯು ಅಭ್ಯಸಿಸಿದ್ದ ರೈನ್ಲೆಂಡ್ನಲ್ಲಿನ ಯೆಹೂದಿ ಸಮುದಾಯಗಳನ್ನು ಧ್ವಂಸಮಾಡಿತು. ಸಾವಿರಾರು ಯೆಹೂದ್ಯರು ಕೊಲ್ಲಲ್ಪಟ್ಟರು. ಬಹುಶಃ ಈ ಕಗ್ಗೊಲೆಯ ಸುದ್ದಿಯು ರಾಶೀಯ ಆರೋಗ್ಯವನ್ನು ಬಾಧಿಸಿತು (ಇದು ಸತತವಾಗಿ ಕೆಡುತ್ತಾ, 1105ರಲ್ಲಿ ಅವನ ಮರಣದಲ್ಲಿ ಅವಸಾನವಾಯಿತು). ಆ ಹಂತದಿಂದ, ಶಾಸ್ತ್ರದ ಕುರಿತಾದ ಅವನ ವ್ಯಾಖ್ಯಾನಗಳಲ್ಲಿ ಮಹತ್ತರವಾದ ಬದಲಾವಣೆಯು ಕಂಡುಬಂದಿತು. ಎದ್ದುಕಾಣುವ ಒಂದು ಉದಾಹರಣೆಯು, ಕಷ್ಟಾನುಭವಿಸುತ್ತಿರುವ ಯೆಹೋವನ ಸೇವಕನ ಕುರಿತು ಮಾತಾಡುವ ಯೆಶಾಯ 53ನೆಯ ಅಧ್ಯಾಯವಾಗಿದೆ. ಈ ಮೊದಲು, ಟಾಲ್ಮುಡ್ನಂತೆ ರಾಶೀ ಈ ವಚನಗಳನ್ನು ಮೆಸ್ಸೀಯನಿಗೆ ಅನ್ವಯಿಸಿದನು. ಆದರೆ ಧರ್ಮಯುದ್ಧಗಳ ನಂತರ, ಅನ್ಯಾಯವಾಗಿ ಕಷ್ಟಾನುಭವಿಸಿದ್ದ ಯೆಹೂದ್ಯರಿಗೆ ಈ ವಚನಗಳು ಅನ್ವಯಿಸಿದವೆಂದು ಅವನು ನೆನಸಿದನೆಂದು ತೋರುತ್ತದೆ. ಈ ವಚನಗಳ ಯೆಹೂದಿ ವಿವರಣೆಗೆ ಇದು ತಿರುಗು ಬಿಂದುವಾಗಿ ಪರಿಣಮಿಸಿತು.d ಹೀಗೆ ಕ್ರೈಸ್ತಪ್ರಪಂಚದ ಅಕ್ರೈಸ್ತ ವರ್ತನೆಯು, ಯೆಹೂದ್ಯರನ್ನು ಸೇರಿಸಿ ಅನೇಕರನ್ನು ಯೇಸುವಿನ ಕುರಿತಾದ ಸತ್ಯದಿಂದ ದೂರವಾಗಿಸುತ್ತಾ ಇತ್ತು.—ಮತ್ತಾಯ 7:16-20; 2 ಪೇತ್ರ 2:1, 2.
ಅವನು ಬೈಬಲ್ ಭಾಷಾಂತರದ ಮೇಲೆ ಹೇಗೆ ಪ್ರಭಾವಬೀರಿದನು?
ರಾಶೀಯ ಪ್ರಭಾವವು ಯೆಹೂದಿಮತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಫ್ರೆಂಚ್ ಫ್ರ್ಯಾನ್ಸಿಸ್ಕನ್ ಬೈಬಲ್ ವ್ಯಾಖ್ಯಾನಕಾರನಾದ ಲೈಅರ್ ಎಂಬ ಪಟ್ಟಣದ ನಿಕೋಲಸ್ (1270-1349), “ರಬ್ಬಿ ಸಾಲೊಮನ್ [ರಾಶೀ]” ಅವರ ವಿಚಾರಗಳನ್ನು ಎಷ್ಟೊಂದು ಬಾರಿ ಒತ್ತಿ ಹೇಳಿದನೆಂದರೆ, ಅವನಿಗೆ “ಸಾಲೊಮನ್ನ ಪ್ರತಿರೂಪ” ಎಂಬ ಅಡ್ಡ ಹೆಸರನ್ನು ಇಡಲಾಯಿತು. ಇದಕ್ಕೆ ಪ್ರತಿಯಾಗಿ, ಅನೇಕ ವ್ಯಾಖ್ಯಾನಕಾರರು ಮತ್ತು ಭಾಷಾಂತರಕಾರರು ಲೈಅರ್ನಿಂದ ಪ್ರಭಾವಿತರಾದರು. ಅವರಲ್ಲಿ ಇಂಗ್ಲಿಷ್ ಭಾಷೆಯ ಕಿಂಗ್ ಜೇಮ್ಸ್ ವರ್ಷನ್ನ ಅನುವಾದಕರ ಪೂರ್ವಿಕರು ಮತ್ತು ಜರ್ಮನಿಯಲ್ಲಿ ಬೈಬಲ್ ಭಾಷಾಂತರದಲ್ಲಿ ಕ್ರಾಂತಿಯನ್ನೆಬ್ಬಿಸಿದ ಸುಧಾರಕ ಮಾರ್ಟಿನ್ ಲೂಥರನೂ ಸೇರಿದ್ದನು. ಲೂಥರನು ಲೈಅರ್ನಿಂದ ಎಷ್ಟೊಂದು ಸ್ಫೂರ್ತಿಗೊಂಡನೆಂದರೆ, ಒಂದು ಜನಪ್ರಿಯ ಪ್ರಾಸದ ನುಡಿಗಳು ಹೀಗಿವೆ: “ಲೈಅರನು ಲೈರ್ ವಾದ್ಯವನ್ನು ನುಡಿಸದೆ ಹೋಗಿದ್ದಲ್ಲಿ, ಲೂಥರನು ಅವನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರಲಿಲ್ಲ.”
ಕ್ರೈಸ್ತ ಸತ್ಯಕ್ಕೆ ಸುಸಂಗತವಾಗಿರದ ರಬ್ಬಿಸಂಬಂಧಿತ ವಿಚಾರಗಳಿಂದ ರಾಶೀಯು ಬಹಳವಾಗಿ ಪ್ರಭಾವಿಸಲ್ಪಟ್ಟಿದ್ದನು. ಆದರೂ, ಬೈಬಲ್ ಸಂಬಂಧಿತ ಹೀಬ್ರು ಪದಗಳು, ವಾಕ್ಯರಚನೆ, ಮತ್ತು ವ್ಯಾಕರಣದ ಕುರಿತಾದ ಅವನ ಆಳವಾದ ಪರಿಜ್ಞಾನದೊಂದಿಗೆ, ಮತ್ತು ವಚನದ ಸರಳ ಹಾಗೂ ಪದಶಃ ಅರ್ಥವನ್ನು ತಿಳಿದುಕೊಳ್ಳಲು ಅವನು ಪಟ್ಟ ಶ್ರಮದೊಂದಿಗೆ, ರಾಶೀಯು ಬೈಬಲ್ ಸಂಶೋಧಕರಿಗೆ ಹಾಗೂ ಭಾಷಾಂತರಕಾರರಿಗೆ ತುಲನಾತ್ಮಕ ಪರೀಕ್ಷೆಯ ಒಂದು ಅರ್ಥಭರಿತ ಮೂಲವನ್ನು ಒದಗಿಸುತ್ತಾನೆ.
[ಅಧ್ಯಯನ ಪ್ರಶ್ನೆಗಳು]
a “ರಾಶೀ” ಎಂಬುದು ಹೀಬ್ರು ಪ್ರಥಮಾಕ್ಷರಿಯಾಗಿದ್ದು, ಅದು “ರಾಬೈ ಶ್ಲೋಮೊ ಯಿಟ್ಸಾಕೀ [ರಾಬೈ ಸಾಲೊಮನ್ ಬೆನ್ ಐಸಕ್]” ಎಂಬ ಪದಗಳ ಪ್ರಥಮ ಅಕ್ಷರಗಳಿಂದ ರೂಪಿಸಲ್ಪಟ್ಟಿದೆ.
b “ಮಿದ್ರಾಷ್” ಎಂಬ ಪದವು “ವಿಚಾರಿಸು, ಅಧ್ಯಯನಿಸು, ತನಿಖೆ ಮಾಡು” ಮತ್ತು ಇನ್ನೂ ವಿಶಾಲವಾಗಿ “ಪ್ರಚಾರಮಾಡು” ಎಂಬ ಅರ್ಥವುಳ್ಳ ಹೀಬ್ರು ಮೂಲಾರ್ಥದಿಂದ ಬರುತ್ತದೆ.
c ಆಗಾದಾ (ಬಹುವಚನ, ಆಗಾದೊತ್) ಎಂಬುದರ ಪದಶಃ ಅರ್ಥ “ಕಥನ,” ಎಂದಾಗಿದೆ ಮತ್ತು ಇದು ರಬ್ಬಿಸಂಬಂಧಿತ ಬರಹಗಳಲ್ಲಿರುವ ಕಾನೂನಿಗೆ ಸಂಬಂಧಿಸದ ವಿಷಯಗಳಿಗೆ ಸೂಚಿಸುತ್ತದೆ. ಇದು ಅನೇಕ ವೇಳೆ ಬೈಬಲಿನಲ್ಲಿ ಕಂಡುಬರುವ ವ್ಯಕ್ತಿಗಳ ಕುರಿತಾದ ಬೈಬಲೇತರ ಕಥೆಗಳನ್ನು ಇಲ್ಲವೆ ರಬ್ಬಿಗಳ ಕುರಿತಾದ ಕಾಲ್ಪನಿಕ ಕಥೆಗಳನ್ನು ಒಳಗೊಂಡಿರುತ್ತದೆ.
d ಈ ಶಾಸ್ತ್ರೀಯ ಉದ್ಧರಣದ ಹೆಚ್ಚಿನ ಮಾಹಿತಿಗಾಗಿ, ಯುದ್ಧರಹಿತವಾದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್) ಎಂಬ ಬ್ರೋಷರಿನ 28ನೆಯ ಪುಟದಲ್ಲಿರುವ, “ನನ್ನ ಸೇವಕ”—ಅವನು ಯಾರು? ಎಂಬ ರೇಖಾಚೌಕವನ್ನು ನೋಡಿರಿ. ಈ ಬ್ರೋಷರ್ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Text: Per gentile concessione del Ministero dei Beni Culturale e Ambientali