ವಿಧರ್ಮಿ ಅಸ್ತಿವಾರಗಳ ಮೇಲೆ ಕಟ್ಟುವುದು
ರೋಮ್ನಲ್ಲಿರುವ ಇಟಲಿಯಲ್ಲಿ, ಪ್ರವಾಸಿಗರಿಂದ ಸಂದರ್ಶಿಸಲ್ಪಡುವ ಅನೇಕ ಭವ್ಯವಾದ ಸ್ಮಾರಕ ಕಟ್ಟಡಗಳಲ್ಲಿ ಸರ್ವದೇವಮಂದಿರ (ಪ್ಯಾಂತಿಯನ್)ವು ಒಂದಾಗಿದೆ. ರೋಮನ್ ವಾಸ್ತುಶಿಲ್ಪದಲ್ಲಿ ಅತ್ಯಂತ ಶ್ರೇಷ್ಠವಾಗಿರುವ ಈ ಕಟ್ಟಡವು, ಪ್ರಾಚೀನ ಕಾಲದಲ್ಲಿ ಬಲವಾಗಿದ್ದಷ್ಟೇ ಈಗಲೂ ಬಲವಾಗಿ ಉಳಿದಿರುವ ಕೆಲವೇ ಕಟ್ಟಡಗಳಲ್ಲಿ ಒಂದಾಗಿದೆ. ಸಾ.ಶ.ಪೂ. 27ರ ಸಮಯದಲ್ಲಿ ಅಗ್ರಿಪ್ಪನಿಂದ ಕಟ್ಟಲ್ಪಟ್ಟ ಈ ಕಟ್ಟಡವನ್ನು, ಹ್ಯಾಡ್ರಿಯನ್ ಸಾ.ಶ. 120ರಲ್ಲಿ ಜೀರ್ಣೋದ್ಧಾರ ಮಾಡಿದನು. ಈ ಕಟ್ಟಡದ ಒಂದು ಎದ್ದುಕಾಣುವ ವೈಶಿಷ್ಟ್ಯವು, ಅದರ 43 ಮೀಟರ್ ವ್ಯಾಸದ ದೊಡ್ಡ ಗುಮ್ಮಟವಾಗಿದೆ. ಇದಕ್ಕಿಂತಲೂ ದೊಡ್ಡದಾದ ಗುಮ್ಮಟವನ್ನು ಇತ್ತೀಚೆಗೆ ಮಾತ್ರ ಕಟ್ಟಲಾಯಿತು. ಸರ್ವದೇವಮಂದಿರವು ಆರಂಭದಲ್ಲಿ ಒಂದು ವಿಧರ್ಮಿ ದೇವಾಲಯವಾಗಿದ್ದು, “ಸಕಲ ದೇವತೆಗಳ ಸ್ಥಳವಾಗಿತ್ತು.” ಇದು ಮೂಲಭೂತ ಗ್ರೀಕ್ ಪದದ ಅರ್ಥವೂ ಆಗಿದೆ. ಇಂದಿಗೂ, ಅದೊಂದು ರೋಮನ್ ಕ್ಯಾತೊಲಿಕ್ ಚರ್ಚಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಆಶ್ಚರ್ಯಕರವಾದ ಬದಲಾವಣೆಯು ಹೇಗೆ ಸಂಭವಿಸಿತು?
ಸಾ.ಶ. 609ರಲ್ಲಿ IVನೆಯ ಪೋಪ್ ಬೊನಿಫೇಸ್, ದೀರ್ಘಸಮಯದಿಂದ ಬಳಕೆಯಲ್ಲಿರದಿದ್ದ ಈ ದೇವಾಲಯವನ್ನು “ಕ್ರೈಸ್ತ” ಚರ್ಚಾಗಿ ಪುನರ್ಅರ್ಪಣೆ ಮಾಡಿದನು. ಆ ಸಮಯದಲ್ಲಿ, ಅದಕ್ಕೆ ಚರ್ಚ್ ಆಫ್ ದ ಸಾಂಟ ಮಾರೀಯ ರೋಟುನ್ಡಾ ಎಂಬ ಹೆಸರನ್ನು ಕೊಡಲಾಯಿತು. 1900ರಲ್ಲಿ ಲಾ ಚೀವೀಲ್ಟಾ ಕಾಟೊಲೀಕಾ ಎಂಬ ಇಟ್ಯಾಲಿಯನ್ ಜೆಸ್ಯುಯಿಟ್ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ಒಂದು ಲೇಖನಕ್ಕನುಸಾರ, “ಕ್ರೈಸ್ತಪ್ರಪಂಚದ ಎಲ್ಲ ಹುತಾತ್ಮರನ್ನು, ಅಥವಾ ಬೇರೆ ಮಾತುಗಳಲ್ಲಿ ಹೇಳುವುದಾದರೆ ಎಲ್ಲ ಸಂತರನ್ನು, ಆದರೆ ಪ್ರಪ್ರಥಮವಾಗಿ ದೇವರ ಕನ್ಯಾ ಮಾತೆಯನ್ನು ಮಹಿಮೆಪಡಿಸುವ” ವಿಶೇಷ ಉದ್ದೇಶಕ್ಕಾಗಿ ಉಪಯೋಗಿಸಬೇಕೆಂಬುದೇ ಬೊನಿಫೇಸನ ಮನಸ್ಸಿನಲ್ಲಿತ್ತು. ಸರ್ವದೇವಮಂದಿರಕ್ಕೆ ಸಾಂಟ ಮಾರೀಯ ಆಡ್ ಮಾರ್ಟೇರಸ್ ಅಥವಾ ಬದಲಿಯಾಗಿ ಸಾಂಟ ಮಾರೀಯ ರೋಟುನ್ಡಾ ಎಂಬುದಾಗಿ ಇಂದು ರೋಮನ್ ಕ್ಯಾತೊಲಿಕ್ ಚರ್ಚು ಕೊಟ್ಟಿರುವ ಹೆಸರುಗಳು, ಆ ಅಶಾಸ್ತ್ರೀಯ ಉದ್ದೇಶವನ್ನು ಪ್ರತಿಬಿಂಬಿಸುತ್ತವೆ.—ಹೋಲಿಸಿ ಅ. ಕೃತ್ಯಗಳು 14:8-15.
ಸರ್ವದೇವಮಂದಿರವನ್ನು ಅದರ ಹೊಸ ಬಳಕೆಗೆ ಸರಿಹೊಂದಿಸಲು, “ಹೆಚ್ಚಿನ ಶ್ರಮ ಪಡಬೇಕಾಗಿರಲಿಲ್ಲ” ಎಂಬುದಾಗಿ ಅದೇ ಲೇಖನವು ಮುಂದುವರಿಸುತ್ತದೆ. “ಬೊನಿಫೇಸ್ ತನ್ನ ಪೂರ್ವಾಧಿಕಾರಿಯಾದ ಸೆಂಟ್ ಗ್ರೆಗರಿ ದ ಗ್ರೇಟ್ [Iನೆಯ ಪೋಪ್ ಗ್ರೆಗರಿ] ಅವನಿಂದ ಈಗಾಗಲೇ ಸ್ಥಾಪಿಸಲ್ಪಟ್ಟಿದ್ದ ಸರಳ ಹಾಗೂ ಉದಾತ್ತ ನಿಯಮಗಳನ್ನು ಅನುಸರಿಸಿದನು. ಪೋಪ್ ಗ್ರೆಗರಿಯು ವಿಧರ್ಮಿ ದೇವಾಲಯಗಳನ್ನು ಕ್ರೈಸ್ತ ಆರಾಧನೆಗೆ ಸರಿಹೊಂದಿಸುವುದರಲ್ಲಿ ಉತ್ಕೃಷ್ಟನೂ ಆದರ್ಶಪ್ರಾಯನೂ ಆಗಿದ್ದನು.” ಅವು ಯಾವ ನಿಯಮಗಳಾಗಿದ್ದವು?
ಸಾ.ಶ. 601ರಲ್ಲಿ, ವಿಧರ್ಮಿಗಳಿಂದ ತುಂಬಿದ್ದ ಬ್ರಿಟನಿಗೆ ಹೋಗಲಿದ್ದ ಒಬ್ಬ ಮಿಷನೆರಿಗೆ ಬರೆದ ಪತ್ರದಲ್ಲಿ, ಗ್ರೆಗರಿ ಈ ಮುಂದಿನ ನಿರ್ದೇಶನವನ್ನು ನೀಡಿದನು: “ನೀವು ಹೋಗಲಿರುವ ದೇಶದಲ್ಲಿನ ದೇವಾಲಯಗಳನ್ನು ಕೆಡವಬೇಕೆಂದಿಲ್ಲ; ಅವುಗಳಲ್ಲಿರುವ ಮೂರ್ತಿಗಳನ್ನು ಕೆಡವಿದರೆ ಸಾಕು . . . ಆ ದೇವಾಲಯಗಳು ಸುಸ್ಥಿತಿಯಲ್ಲಿರುವುದಾದರೆ, ಅವುಗಳನ್ನು ದೆವ್ವಗಳ ಆರಾಧನೆಯಿಂದ ಸತ್ಯ ದೇವರ ಆರಾಧನೆಗೆ ಮಾರ್ಪಡಿಸುವ ಅಗತ್ಯವಿದೆ.” ತಮ್ಮ ದೇವಾಲಯಗಳು ಹಾಳುಮಾಡಲ್ಪಡದೇ ಇರುವುದನ್ನು ವಿಧರ್ಮಿಯರು ನೋಡುವಾಗ, ಅಲ್ಲಿಗೆ ಬರುವುದನ್ನು ಅವರು ಮುಂದುವರಿಸುವರೆಂದು ಗ್ರೆಗರಿಯು ಯೋಚಿಸಿದನು. ವಿಧರ್ಮಿಯರು “ದೆವ್ವಗಳಿಗೆ ಮಾಡುವ ಯಜ್ಞದಲ್ಲಿ ಅನೇಕ ಹೋರಿಗಳನ್ನು ಕೊಲ್ಲು”ತ್ತಿರುವ ವಿಷಯವು ಪೋಪನಿಗೆ ತಿಳಿದಿತ್ತು. ಆದರೆ ಈಗ “ಅವರು ಪ್ರಾಣಿಗಳನ್ನು ಪಿಶಾಚನಿಗಾಗಿ ಯಜ್ಞಾರ್ಪಿಸದೆ, ದೇವರಿಗೆ ಸ್ತೋತ್ರಸಲ್ಲಿಸುತ್ತಾ ತಮ್ಮ ಭೋಜನಕ್ಕಾಗಿ ಅವುಗಳನ್ನು ಕೊಲ್ಲುವರೆಂದು” ಪೋಪನು ನಿರೀಕ್ಷಿಸಿದನು.
ರೋಮನ್ ಕ್ಯಾತೊಲಿಕ್ ಧರ್ಮವು, ಚರ್ಚುಗಳನ್ನು ಸ್ಥಾಪಿಸುವ ಮೂಲಕವೂ ವಿಧರ್ಮಿ ಆರಾಧನೆಗೆ “ಪ್ರತಿಭಟನೆಯನ್ನು” ತೋರಿಸಿತು. ಈ ಚರ್ಚುಗಳು “ಕ್ರೈಸ್ತ” ಸಂತರಿಗೆ ಸಮರ್ಪಿಸಲ್ಪಟ್ಟಿದ್ದು, ಗತಕಾಲದ ದೇವಾಲಯಗಳನ್ನು ಬಹಳವಾಗಿ ಹೋಲುತ್ತಿದ್ದವು. ಪ್ರಾಚೀನ ಆಚರಣೆಗಳನ್ನು ಸ್ವೀಕರಿಸುತ್ತಾ, ಅವುಗಳಿಗೆ “ಕ್ರೈಸ್ತ” ಅರ್ಥವನ್ನು ಕೊಡಲಾಯಿತು. ಲಾ ಚೀವೀಲ್ಟಾ ಕಾಟೊಲೀಕಾ ಅದನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಿತು: “ಆದಿ ಕ್ರೈಸ್ತರ ಕೆಲವೊಂದು ಪದ್ಧತಿಗಳು ಮತ್ತು ಧಾರ್ಮಿಕ ಆಚರಣೆಗಳು, ನಿರ್ದಿಷ್ಟವಾದ ವಿಧರ್ಮಿ ಆಚರಣೆಗಳು ಹಾಗೂ ಪದ್ಧತಿಗಳಿಗೆ ನಿಕಟವಾಗಿ ಸಂಬಂಧಿಸಿದ್ದವೆಂಬುದು, ಈಗಿನ ದಿನದ ಎಲ್ಲ ವಿದ್ವಾಂಸರಿಗೆ ಗೊತ್ತಿರುವ ವಿಷಯವಾಗಿದೆ. ಇವು ಜನರ ಅಚ್ಚುಮೆಚ್ಚಿನ ಆಚರಣೆಗಳೂ, ಹಳೆಯ ಲೋಕದ ಸಾರ್ವಜನಿಕ ಹಾಗೂ ಖಾಸಗಿ ಜೀವನದಲ್ಲಿ ಆಳವಾಗಿ ಬೇರೂರಿದ ಮತ್ತು ಸಮ್ಮಿಶ್ರಗೊಂಡ ರೂಢಿಗಳೂ ಆಗಿದ್ದವು. ದಯಾಪರವೂ ವಿವೇಕಿಯೂ ಆದ ರೋಮನ್ ಕ್ಯಾತೊಲಿಕ್ ಚರ್ಚು, ಈ ಆಚರಣೆಗಳನ್ನು ಮತ್ತು ರೂಢಿಗಳನ್ನು ಕಿತ್ತೆಸೆಯಲು ಬಯಸಲಿಲ್ಲ, ಬದಲಿಗೆ ಅವುಗಳಿಗೆ ಕ್ರೈಸ್ತ ಅರ್ಥವನ್ನು ಕೊಡುವ ಮೂಲಕ ಅವುಗಳನ್ನು ಬದಲಾಯಿಸುತ್ತಾ, ಅವುಗಳಿಗೆ ಹೊಸ ಸ್ಥಾನಮಾನವನ್ನು ಕೊಟ್ಟಿತು. ಹೀಗೆ ಮಾಡಲು ಅದು ಶಕ್ತಿಶಾಲಿಯಾದ, ಆದರೆ ಕೋಮಲವಾದ ವಿಧಾನಗಳನ್ನು ಬಳಸಿ ಅವುಗಳ ಮೇಲೆ ಜಯಸಾಧಿಸಿತು. ಹೀಗೆ, ಯಾವುದೇ ಕೋಲಾಹಲವಿಲ್ಲದೆ ಜನಸಾಮಾನ್ಯರನ್ನೂ ಸುಸಂಸ್ಕೃತರನ್ನೂ ಅದು ತನ್ನೆಡೆಗೆ ಸೆಳೆದುಕೊಂಡಿತು.”
ಒಂದು ಸುಪ್ರಸಿದ್ಧ ಉದಾಹರಣೆಯು, ವಿಧರ್ಮಿ ಉತ್ಸವವಾದ ಕ್ರಿಸ್ಮಸ್ನ ಅಂಗೀಕಾರವೇ ಆಗಿದೆ. ಡಿಸೆಂಬರ್ 25, ಪ್ರಾಚೀನ ರೋಮನರು ಡೀಅಸ್ ನಾಟಾಲೀಸ್ ಸೋಲೀಸ್ ಇನ್ವಿಕ್ಟೀ, ಅಂದರೆ “ಅಜೇಯ ಸೂರ್ಯನ ಜನ್ಮದಿನ”ವನ್ನು ಆಚರಿಸಿದ ದಿನವಾಗಿತ್ತು.
ವಿಧರ್ಮಿಯರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಉದ್ದೇಶದಿಂದ, ಚರ್ಚು ಸತ್ಯಕ್ಕೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ಅದು ವಿವಿಧ ಮತಗಳ ಸಮೀಕರಣವನ್ನು, ಅಂದರೆ “ಜನಸಾಮಾನ್ಯರ ಅಚ್ಚುಮೆಚ್ಚಿನ” ವಿಧರ್ಮಿ ವಿಶ್ವಾಸಗಳು ಹಾಗೂ ರೂಢಿಗಳ ಅಂಗೀಕಾರವನ್ನು ನ್ಯಾಯವೆಂದು ಸಮರ್ಥಿಸಿತು. ಇದು, ಸತ್ಯ ಕ್ರೈಸ್ತತ್ವದ ಬೋಧನೆಗಳಿಂದ ಬಹಳಷ್ಟು ಭಿನ್ನವಾಗಿದ್ದ ಕಲಬೆರಕೆಯ ಧರ್ಮಭ್ರಷ್ಟ ಚರ್ಚಾಗಿ ಪರಿಣಮಿಸಿತು. ಇದೆಲ್ಲವನ್ನು ಪರಿಗಣಿಸುವಾಗ, “ಸಕಲ ದೇವತೆಗಳ ದೇವಾಲಯ” ಅಂದರೆ, ಸರ್ವದೇವಮಂದಿರವಾಗಿದ್ದ ಹಿಂದಿನ ರೋಮನ್ ದೇವಾಲಯವು, ಮರಿಯಳಿಗೆ ಮತ್ತು ಎಲ್ಲ “ಸಂತರಿಗೆ” ಸಮರ್ಪಿತವಾದ ರೋಮನ್ ಕ್ಯಾತೊಲಿಕ್ ಚರ್ಚಾಗಿ ಪರಿಣಮಿಸಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಆದರೆ, ಒಂದು ದೇವಾಲಯದ ಸಮರ್ಪಣೆಯನ್ನು ಇಲ್ಲವೆ ಒಂದು ಆಚರಣೆಯ ಹೆಸರನ್ನು ಕೇವಲ ಬದಲಾಯಿಸುವುದರಿಂದ, ‘ದೆವ್ವಗಳ ಆರಾಧನೆಯನ್ನು ಸತ್ಯ ದೇವರ ಆರಾಧನೆಯಾಗಿ’ ಮಾರ್ಪಡಿಸಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟವಾಗಿರಲೇಬೇಕು. “ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು?” ಎಂದು ಅಪೊಸ್ತಲ ಪೌಲನು ಕೇಳಿದನು. “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ . . . ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು ಸರ್ವಶಕ್ತನಾದ ಕರ್ತನು [“ಯೆಹೋವನು,” NW] ಹೇಳುತ್ತಾನೆ.”—2 ಕೊರಿಂಥ 6:16-18.