ಆಫ್ರಿಕದ ಸಂಸ್ಕೃತಿಯಲ್ಲಿ ವಧೂದಕ್ಷಿಣೆ
ಬೈಬಲ್ ಸಮಯಗಳಲ್ಲಿದ್ದಂತೆ, ಇಂದಿನ ಕೆಲವು ಸಂಸ್ಕೃತಿಗಳು, ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ಮದುವೆಯಾಗುವುದಕ್ಕೆ ಮೊದಲು ವಧೂದಕ್ಷಿಣೆಯನ್ನು ಕೊಡುವಂತೆ ಅಗತ್ಯಪಡಿಸುತ್ತವೆ. “ನಿನ್ನ ಕಿರೀ ಮಗಳಾದ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆಮಾಡುವೆನು” ಎಂದು ಯಾಕೋಬನು ತನ್ನ ಭಾವಿ ಮಾವನಾದ ಲಾಬಾನನಿಗೆ ಹೇಳಿದನು. (ಆದಿಕಾಂಡ 29:18) ರಾಹೇಲಳ ಕಡೆಗಿದ್ದ ತನ್ನ ಪ್ರೀತಿಯ ಕಾರಣದಿಂದ ಯಾಕೋಬನು ಅತಿ ಹೆಚ್ಚು ವಧೂದಕ್ಷಿಣೆಯನ್ನು ಕೊಟ್ಟನು—ಏಳು ವರ್ಷಗಳ ವೇತನಕ್ಕೆ ಸಮವಾದ ವಧೂದಕ್ಷಿಣೆ! ಲಾಬಾನನು ಅದನ್ನು ಸ್ವೀಕರಿಸಿದನು, ಆದರೆ ಮೊದಲಾಗಿ ತನ್ನ ಹಿರಿಯ ಮಗಳಾದ ಲೇಯಳನ್ನು ಮದುವೆ ಮಾಡಿಕೊಡುವ ಮೂಲಕ ಅವನು ಯಾಕೋಬನಿಗೆ ಮೋಸಮಾಡಿದನು. ಯಾಕೋಬನೊಂದಿಗೆ ಲಾಬಾನನು ನಡೆಸಿದ ಅನಂತರದ ವ್ಯವಹಾರಗಳು, ಯಾವಾಗಲೂ ವಂಚನಾತ್ಮಕವಾಗಿದ್ದವು. (ಆದಿಕಾಂಡ 31:41) ಆರ್ಥಿಕ ಲಾಭದ ವಿಷಯದಲ್ಲಿ ಲಾಬಾನನು ಕೊಡುತ್ತಿದ್ದ ಪ್ರಮುಖತೆಯು, ಅವನ ಪುತ್ರಿಯರು ಅವನ ಕಡೆಗಿರುವ ತಮ್ಮ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿತು. “ಅವನು ನಮ್ಮನ್ನು ಅನ್ಯರೆಂದು ಎಣಿಸುತ್ತಾನಲ್ಲಾ; ಅವನು ನಮ್ಮನ್ನು ಮಾರಿ ನಮ್ಮ ಮೂಲಕ ಸಿಕ್ಕಿದ ದ್ರವ್ಯವನ್ನು ತಾನೇ ನುಂಗಿಬಿಟ್ಟ”ನಲ್ಲಾ ಎಂದು ಅವರು ಹೇಳಿದರು.—ಆದಿಕಾಂಡ 31:15.
ದುಃಖಕರವಾಗಿ, ಪ್ರಾಪಂಚಿಕ ಮನೋಭಾವವುಳ್ಳ ಇಂದಿನ ಲೋಕದಲ್ಲಿ, ಅನೇಕ ಹೆತ್ತವರು ಲಾಬಾನನಂತೆ ಇದ್ದಾರೆ. ಮತ್ತು ಕೆಲವರು ಇನ್ನೂ ಹೆಚ್ಚು ಹಣದ ವ್ಯಾಮೋಹವುಳ್ಳವರಾಗಿದ್ದಾರೆ. ಆಫ್ರಿಕದ ಒಂದು ವಾರ್ತಾಪತ್ರಿಕೆಗೆ ಅನುಸಾರವಾಗಿ, “ಲೋಭಿ ತಂದೆಗಳಿಂದ ವಿಪರೀತ ಲಾಭವನ್ನು ಸಂಪಾದಿಸುವ ಸಲುವಾಗಿಯೇ” ಕೆಲವು ಮದುವೆಗಳು ಕುದುರಿಸಲ್ಪಡುತ್ತವೆ. ಆರ್ಥಿಕ ಒತ್ತಡವೇ ಅದಕ್ಕೆ ಇನ್ನೊಂದು ಕಾರಣವಾಗಿದೆ. ಇದು ಕೆಲವು ಹೆತ್ತವರು, ಹಣಕಾಸಿನ ಬಿಕ್ಕಟ್ಟನ್ನು ಸುಲಭಗೊಳಿಸುವ ಸಾಧನದೋಪಾದಿ ತಮ್ಮ ಪುತ್ರಿಯರನ್ನು ಪರಿಗಣಿಸುವಂತೆ ಶೋಧನೆಗೊಡ್ಡುತ್ತದೆ.a
ಕೆಲವು ಹೆತ್ತವರು ತಮ್ಮ ಪುತ್ರಿಯರ ಮದುವೆಯನ್ನು ತಡಮಾಡುತ್ತಾರೆ, ಕಾರಣವೇನೆಂದರೆ ಅವರು ಅತಿ ಹೆಚ್ಚು ಹಣವನ್ನು ಕೊಡುವವರಿಗೋಸ್ಕರ ಕಾಯುತ್ತಿರುತ್ತಾರೆ. ಇದು ಗಂಭೀರವಾದ ಸಮಸ್ಯೆಗಳನ್ನು ಉಂಟುಮಾಡಬಲ್ಲದು. ಪೂರ್ವ ಆಫ್ರಿಕದಲ್ಲಿ ಇರುವ ವಾರ್ತಾ ವರದಿಗಾರನೊಬ್ಬನು ಬರೆದುದು: “ಹಟಮಾರಿಗಳಾದ ಅತ್ತೆಮಾವಂದಿರು ಕೊಡುವಂತೆ ಒತ್ತಾಯಿಸುವ ವಿಪರೀತ ವರದಕ್ಷಿಣೆಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಯುವ ಜನರು ಒಬ್ಬರನ್ನು ಕಟ್ಟಿಕೊಂಡು ಓಡಿಹೋಗುವ ಆಯ್ಕೆಮಾಡುತ್ತಾರೆ.” ಅತಿ ಹೆಚ್ಚು ವಧೂದಕ್ಷಿಣೆಯನ್ನು ಒತ್ತಾಯಿಸುವುದರಿಂದ ಉಂಟಾಗುವ ಸಮಸ್ಯೆಗಳಲ್ಲಿ ಒಂದು, ಲೈಂಗಿಕ ಅನೈತಿಕತೆಯಾಗಿದೆ. ಇದಲ್ಲದೆ, ಕೆಲವು ಯೌವನಸ್ಥರು ಹೇಗೋ ಒಬ್ಬ ಪತ್ನಿಯನ್ನು ಕೊಂಡುಕೊಳ್ಳಲು ಶಕ್ತರಾಗುತ್ತಾರೆ, ಆದರೆ ಇದಕ್ಕೋಸ್ಕರ ವಿಪರೀತ ಸಾಲದಲ್ಲಿ ಬೀಳುತ್ತಾರೆ. “ಹೆತ್ತವರು ಯೋಗ್ಯ ಮನೋಭಾವದವರಾಗಿರಬೇಕು” ಎಂದು ದಕ್ಷಿಣ ಆಫ್ರಿಕದ ಸಮಾಜ ಸೇವಕನೊಬ್ಬನು ಉತ್ತೇಜಿಸಿದನು. “ಅವರು ಅತಿ ಹೆಚ್ಚು ಹಣವನ್ನು ಕೊಡುವಂತೆ ಒತ್ತಾಯಿಸಬಾರದು. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಜೀವನೋಪಾಯದ ಅಗತ್ಯವಿರುತ್ತದೆ. . . . ಆದುದರಿಂದ ಆ ಯೌವನಸ್ಥನನ್ನು ಏಕೆ ದಿವಾಳಿಮಾಡಬೇಕು?”
ಒಂದು ವಧೂದಕ್ಷಿಣೆಯನ್ನು ಕೊಡುವ ಅಥವಾ ಪಡೆದುಕೊಳ್ಳುವ ವ್ಯವಹಾರವನ್ನು ಕುದುರಿಸುವಾಗ, ಕ್ರೈಸ್ತ ಹೆತ್ತವರು ಹೇಗೆ ಯುಕ್ತಾಯುಕ್ತ ಪರಿಜ್ಞಾನದ ಮಾದರಿಯನ್ನು ಇಡಸಾಧ್ಯವಿದೆ? ಇದು ಗಂಭೀರವಾದ ಒಂದು ವಿಷಯವಾಗಿದೆ, ಏಕೆಂದರೆ ಬೈಬಲು ಆಜ್ಞಾಪಿಸುವುದು: “ನಿಮ್ಮ ಯೋಗ್ಯ ಮನೋಭಾವವು ಎಲ್ಲರಿಗೂ ಗೊತ್ತಾಗಲಿ.”—ಫಿಲಿಪ್ಪಿ 4:5, NW.
ಸಮಂಜಸವಾದ ಬೈಬಲ್ ಮೂಲತತ್ವಗಳು
ಕ್ರೈಸ್ತ ಹೆತ್ತವರು ವಧೂದಕ್ಷಿಣೆಯನ್ನು ಕುದುರಿಸುವ ನಿರ್ಧಾರವನ್ನು ಮಾಡಬೇಕೋ ಇಲ್ಲವೋ ಎಂಬುದು ವೈಯಕ್ತಿಕ ನಿರ್ಣಯವಾಗಿದೆ. ಹಾಗೆ ಮಾಡಲು ನಿರ್ಧರಿಸುವಲ್ಲಿ, ಬೈಬಲ್ ಮೂಲತತ್ವಗಳಿಗೆ ಹೊಂದಿಕೆಯಾಗುವಂತಹ ರೀತಿಯಲ್ಲಿ ಆ ವ್ಯವಹಾರಗಳು ಮಾಡಲ್ಪಡಬೇಕು. “ದ್ರವ್ಯಾಶೆಯಿಲ್ಲದವರಾಗಿರಿ” ಎಂದು ದೇವರ ವಾಕ್ಯವು ಹೇಳುತ್ತದೆ. (ಇಬ್ರಿಯ 13:5) ಮದುವೆಯ ವ್ಯವಹಾರಗಳಲ್ಲಿ ಈ ಮೂಲತತ್ವವು ಅನ್ವಯಿಸಲ್ಪಡದಿದ್ದಲ್ಲಿ, ತಾವು ಒಂದು ಉತ್ತಮವಾದ ಮಾದರಿಯಾಗಿಲ್ಲ ಎಂಬುದನ್ನು ಕ್ರೈಸ್ತ ಹೆತ್ತವರು ತೋರ್ಪಡಿಸುತ್ತಿರಬಹುದು. ಕ್ರೈಸ್ತ ಸಭೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಪುರುಷರು, ‘ಹಣದಾಶೆಯಿಲ್ಲದವರು’ ಅಥವಾ “ಅಪ್ರಾಮಾಣಿಕ ಲಾಭದ ಲೋಭಿಗಳು” ಆಗಿರದೆ, “ಯೋಗ್ಯ ಮನೋಭಾವದವರಾಗಿರ”ಬೇಕು. (1 ತಿಮೊಥೆಯ 3:3, 8) ಲೋಭದಿಂದ ಹಾಗೂ ಪಶ್ಚಾತ್ತಾಪದ ಮನೋಭಾವವನ್ನು ತೋರಿಸದೆ, ಅತಿ ಹೆಚ್ಚು ವಧೂದಕ್ಷಿಣೆಯನ್ನು ಕೊಡುವಂತೆ ಒತ್ತಾಯಿಸುವ ಕ್ರೈಸ್ತನೊಬ್ಬನು ಸಭೆಯಿಂದ ಬಹಿಷ್ಕರಿಸಲ್ಪಡಲೂಬಹುದು.—1 ಕೊರಿಂಥ 5:11, 13; 6:9, 10.
ಲೋಭದಿಂದ ಉಂಟಾದ ಸಮಸ್ಯೆಗಳ ಕಾರಣದಿಂದ, ತಮ್ಮ ಪ್ರಜೆಗಳು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲಿಕ್ಕಾಗಿ, ಕೆಲವು ಸರಕಾರಗಳು ನಿಯಮಗಳನ್ನು ವಿಧಿಸಿವೆ. ಉದಾಹರಣೆಗಾಗಿ, ಭಾರತದಲ್ಲಿ, ವರದಕ್ಷಿಣೆಯನ್ನು ಪಡೆದುಕೊಳ್ಳಲಿಕ್ಕಾಗಿ ಯಾವುದೇ ರೀತಿಯ ಕುದುರಿಸುವಿಕೆಗಳನ್ನು ಮಾಡುವುದು, ಅಥವಾ ವರದಕ್ಷಿಣೆಯನ್ನು ಸ್ವೀಕರಿಸುವುದು, ಕಾನೂನುಬಾಹಿರವಾದದ್ದಾಗಿ ಪರಿಗಣಿಸಲ್ಪಡುತ್ತದೆ, ಮತ್ತು ಕಾನೂನಿಗನುಸಾರ ಅಂತಹವರಿಗೆ ಶಿಕ್ಷೆವಿಧಿಸಲಾಗುತ್ತದೆ. ಭಾರತದಲ್ಲಿರುವ ಕ್ರೈಸ್ತರು ಈ ನಿಯಮವನ್ನು ಪರಿಪಾಲಿಸುತ್ತಾರೆ. ಪಶ್ಚಿಮ ಆಫ್ರಿಕದ ಟೋಗೋ ದೇಶದಲ್ಲಿನ ಒಂದು ನಿಯಮವು, ವಧೂದಕ್ಷಿಣೆಯನ್ನು “ವಸ್ತುವಿನ ರೂಪದಲ್ಲಿ ಅಥವಾ ನಗದಿನ ರೂಪದಲ್ಲಿ, ಇಲ್ಲವೆ ಎರಡೂ ವಿಧಗಳಲ್ಲಿ ತೆರಸಾಧ್ಯವಿದೆ” ಎಂದು ಹೇಳುತ್ತದೆ. ಆ ನಿಯಮವು ಕೂಡಿಸಿದ್ದು: “ಯಾವುದೇ ಸಂದರ್ಭದಲ್ಲಿ ಆ ಮೊತ್ತವು 10,000 ಎಫ್ ಸಿಎಫ್ಏ (800 ರೂಪಾಯಿಗಳು)ಗಿಂತ ಹೆಚ್ಚಾಗಿರಬಾರದು.” ಆಗಿಂದಾಗ್ಗೆ ಬೈಬಲು ಕ್ರೈಸ್ತರಿಗೆ, ನಿಯಮವನ್ನು ಪಾಲಿಸುವ ಪ್ರಜೆಗಳಾಗಿರುವಂತೆ ಆಜ್ಞಾಪಿಸುತ್ತದೆ. (ತೀತ 3:1) ಸರಕಾರವು ಅಂತಹ ಒಂದು ನಿಯಮವನ್ನು ವಿಧಿಸದಿರುವುದಾದರೂ, ನಿಜ ಕ್ರೈಸ್ತನೊಬ್ಬನು ಅದಕ್ಕೆ ವಿಧೇಯನಾಗಲು ಬಯಸುವನು. ಹೀಗೆ ಅವನು ದೇವರ ಮುಂದೆ ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳುತ್ತಾನೆ ಮತ್ತು ಇತರರನ್ನು ಮುಗ್ಗರಿಸುವಂತೆ ಮಾಡುವುದಿಲ್ಲ.—ರೋಮಾಪುರ 13:1, 5; 1 ಕೊರಿಂಥ 10:32, 33.
Subheading is not for in vernacular
ಕೆಲವು ಸಂಸ್ಕೃತಿಗಳಲ್ಲಿ, ವಧೂದಕ್ಷಿಣೆಯು ಕುದುರಿಸಲ್ಪಡುವ ವಿಧವು, ಪ್ರಮುಖವಾದ ಇನ್ನೊಂದು ಮೂಲತತ್ವದೊಂದಿಗೆ ಸಂಘರ್ಷಿಸಬಹುದು. ಬೈಬಲಿಗನುಸಾರ, ತನ್ನ ಮನೆವಾರ್ತೆಯ ಆಗುಹೋಗುಗಳಿಗೆ ತಂದೆಯು ಜವಾಬ್ದಾರನಾಗಿದ್ದಾನೆ. (1 ಕೊರಿಂಥ 11:3; ಕೊಲೊಸ್ಸೆ 3:18, 20) ಆದುದರಿಂದ, ಸಭೆಯಲ್ಲಿ ಜವಾಬ್ದಾರಿಯುತವಾದ ಸ್ಥಾನಗಳಲ್ಲಿರುವವರು, ‘ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು.’—1 ತಿಮೊಥೆಯ 3:12.
ಆದರೂ, ಪ್ರಮುಖವಾದ ವಿವಾಹ ಕುದುರಿಸುವಿಕೆಗಳನ್ನು ಕುಟುಂಬದ ತಲೆಯ ಸಂಬಂಧಿಕರಿಗೆ ಒಪ್ಪಿಸುವುದು, ಸಮುದಾಯದಲ್ಲಿ ಸಾಮಾನ್ಯ ಸಂಗತಿಯಾಗಿರಬಹುದು. ಈ ಸಂಬಂಧಿಕರು ವಧೂದಕ್ಷಿಣೆಯಲ್ಲಿ ಪಾಲನ್ನು ಕೊಡುವಂತೆ ಒತ್ತಾಯಿಸುತ್ತಾರೆ. ಇದು ಕ್ರೈಸ್ತ ಮನೆವಾರ್ತೆಗಳ ಮೇಲೆ ಶೋಧನೆಯನ್ನು ತಂದೊಡ್ಡುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಕೆಲವು ಕುಟುಂಬದ ತಲೆಗಳು, ಅವಿಶ್ವಾಸಿ ಸಂಬಂಧಿಕರು ಅತಿ ಹೆಚ್ಚು ವಧೂದಕ್ಷಿಣೆಯನ್ನು ಪಡೆದುಕೊಳ್ಳುವಂತೆ ಮಾಡುತ್ತಾರೆ. ಇದು ಕೆಲವೊಮ್ಮೆ ಕ್ರೈಸ್ತ ಹುಡುಗಿಯೊಬ್ಬಳು ಒಬ್ಬ ಅವಿಶ್ವಾಸಿಯನ್ನು ಮದುವೆಯಾಗುವಂತೆ ಮಾಡಿದೆ. ಅದು ಕ್ರೈಸ್ತರು “ಕರ್ತನಲ್ಲಿ ಮಾತ್ರವೇ” ಮದುವೆಯಾಗಬೇಕು ಎಂಬ ಬುದ್ಧಿವಾದಕ್ಕೆ ವಿರುದ್ಧವಾದದ್ದಾಗಿದೆ. (1 ಕೊರಿಂಥ 7:39, NW) ಅವಿಶ್ವಾಸಿ ಸಂಬಂಧಿಕರು ನಿರ್ಣಯಗಳನ್ನು ಮಾಡುವಂತೆ ಅನುಮತಿ ನೀಡುವ ಕುಟುಂಬದ ತಲೆಯು, ತನ್ನ ಮಕ್ಕಳ ಆತ್ಮಿಕ ಹಿತಕ್ಷೇಮಕ್ಕೆ ಅಪಾಯವನ್ನು ತಂದೊಡ್ಡುವವನಾಗಿದ್ದಾನೆ. ಇದರಿಂದಾಗಿ ಅವನನ್ನು “ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನು” ಎಂದು ಪರಿಗಣಿಸಲು ಸಾಧ್ಯವಿಲ್ಲ.—1 ತಿಮೊಥೆಯ 3:4.
ದೇವಭಯವುಳ್ಳ ಪೂರ್ವಜನಾಗಿದ್ದ ಅಬ್ರಹಾಮನ ವಿಷಯದಲ್ಲಾದಂತೆ, ಕ್ರೈಸ್ತ ತಂದೆಯೊಬ್ಬನು ತನ್ನ ಮಕ್ಕಳಲ್ಲೊಬ್ಬರ ವಿವಾಹ ಕುದುರಿಸುವಿಕೆಗಳಲ್ಲಿ ನೇರವಾಗಿ ಭಾಗವಹಿಸುವುದಿಲ್ಲವಾದರೆ ಆಗೇನು? (ಆದಿಕಾಂಡ 24:2-4) ಇದನ್ನು ಮಾಡುವಂತೆ ಬೇರೆ ಯಾರನ್ನಾದರೂ ನೇಮಿಸಿರುವಲ್ಲಿ, ಅದನ್ನು ಕುದುರಿಸುವಾತನು ಬೈಬಲಿನ ನ್ಯಾಯೋಚಿತ ಮೂಲತತ್ವಗಳಿಗೆ ಹೊಂದಿಕೆಯಲ್ಲಿರುವ ಸೂಚನೆಗಳನ್ನು ಅನುಸರಿಸುತ್ತಾನೆಂಬುದನ್ನು ಕ್ರೈಸ್ತ ತಂದೆಯು ಖಚಿತಪಡಿಸಿಕೊಳ್ಳತಕ್ಕದ್ದು. ಆದರೂ, ಒಂದು ವಧೂದಕ್ಷಿಣೆಯನ್ನು ಕುದುರಿಸಲಿಕ್ಕಾಗಿ ಯಾವುದೇ ಕ್ರಮವನ್ನು ಕೈಕೊಳ್ಳುವ ಮುಂಚೆ, ಕ್ರೈಸ್ತ ಹೆತ್ತವರು ವಿಷಯಗಳನ್ನು ಜಾಗರೂಕತೆಯಿಂದ ಆಲೋಚಿಸಬೇಕು. ಮತ್ತು ಅಸಮಂಜಸವಾದ ಸಂಪ್ರದಾಯಗಳು ಹಾಗೂ ತಗಾದೆಗಳಿಗೆ ಒಳಗಾಗುವಂತೆ ತಮ್ಮನ್ನು ಬಿಟ್ಟುಕೊಡಬಾರದು.—ಜ್ಞಾನೋಕ್ತಿ 22:3.
ಅಕ್ರೈಸ್ತ ಪ್ರವೃತ್ತಿಗಳನ್ನು ತೊರೆಯುವುದು
ಅಹಂಕಾರ ಹಾಗೂ “ಬದುಕುಬಾಳಿನ ಡಂಬ”ವನ್ನು ತೋರಿಸುವುದನ್ನು ಬೈಬಲು ಖಂಡಿಸುತ್ತದೆ. (1 ಯೋಹಾನ 2:16; ಜ್ಞಾನೋಕ್ತಿ 21:4) ಆದರೂ, ಕ್ರೈಸ್ತ ಸಭೆಯೊಂದಿಗೆ ಸಹವಾಸಮಾಡುವ ಕೆಲವು ವ್ಯಕ್ತಿಗಳು, ವಿವಾಹದ ಕುದುರಿಸುವಿಕೆಗಳಲ್ಲಿ ಈ ಪ್ರವೃತ್ತಿಗಳನ್ನು ತೋರಿಸಿದ್ದಾರೆ. ದೊಡ್ಡ ಮೊತ್ತದ ವಧೂದಕ್ಷಿಣೆ ಕೊಡುವುದನ್ನು ಅಥವಾ ಪಡೆದುಕೊಳ್ಳುವುದನ್ನು ಪ್ರದರ್ಶನಾತ್ಮಕವಾಗಿ ಮಾಡುವ ಮೂಲಕ ಕೆಲವರು ಈ ಲೋಕವನ್ನು ಅನುಕರಿಸುತ್ತಾರೆ. ಇನ್ನೊಂದು ಕಡೆಯಲ್ಲಿ, ಆಫ್ರಿಕದಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ಗಳಲ್ಲೊಂದು ಹೀಗೆ ವರದಿಸುತ್ತದೆ: “ಅತ್ತೆಮಾವಂದಿರು ತಮ್ಮ ಬೇಡಿಕೆಗಳಲ್ಲಿ ಯೋಗ್ಯ ಮನೋಭಾವದವರಾಗಿರುವಾಗ, ಕೆಲವು ಗಂಡಂದಿರು ತಮ್ಮ ಹೆಂಡತಿಯರಿಗೆ ಗೌರವವನ್ನು ತೋರಿಸಿಲ್ಲ. ಏಕೆಂದರೆ ಅವರು ಒಂದು ‘ಆಡಿ’ನ ಬೆಲೆಗೆ ಖರೀದಿಸಲ್ಪಟ್ಟಿದ್ದಾರೆ ಎಂದು ಅವರು ನೆನಸುತ್ತಾರೆ.”
ಕೆಲವು ಕ್ರೈಸ್ತರು, ಅತಿ ಹೆಚ್ಚು ವಧೂದಕ್ಷಿಣೆಗಾಗಿರುವ ಲೋಭಕ್ಕೆ ವಶವಾಗಿದ್ದಾರೆ ಮತ್ತು ಇದರಿಂದಾಗಿ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದಾರೆ. ಉದಾಹರಣೆಗೆ, ವಾಚ್ ಟವರ್ ಸೊಸೈಟಿಯ ಇನ್ನೊಂದು ಬ್ರಾಂಚ್ ಆಫೀಸಿನಿಂದ ಬಂದ ವರದಿಯನ್ನು ಪರಿಗಣಿಸಿರಿ: “ಸಾಮಾನ್ಯವಾಗಿ ಅವಿವಾಹಿತ ಸಹೋದರರು ಮದುವೆಯಾಗುವುದು ಕಷ್ಟಕರವಾಗಿದೆ ಅಥವಾ ಸಹೋದರಿಯರಿಗೆ ಗಂಡುಗಳನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ಇದರ ಫಲಿತಾಂಶವೇನೆಂದರೆ, ಲೈಂಗಿಕ ಅನೈತಿಕತೆಯ ಕಾರಣದಿಂದ ಅತ್ಯಧಿಕ ಸಂಖ್ಯೆಯಲ್ಲಿ ಜನರು ಬಹಿಷ್ಕೃತರಾಗುತ್ತಿರುವುದೇ. ಕೆಲವು ಸಹೋದರರು ಚಿನ್ನ ಅಥವಾ ವಜ್ರವನ್ನು ಹುಡುಕುತ್ತಾ ಗಣಿಗಳಿಗೆ ಹೋಗುತ್ತಾರೆ. ಏಕೆಂದರೆ ಅವುಗಳನ್ನು ಮಾರಿ, ಅದರಿಂದ ಸಾಕಷ್ಟು ಹಣವನ್ನು ಗಳಿಸಿ, ಮದುವೆ ಮಾಡಿಕೊಳ್ಳಲಿಕ್ಕಾಗಿಯೇ. ಹೀಗೆ ಮಾಡಲು ಅವರಿಗೆ ಒಂದು ಅಥವಾ ಎರಡು ಅಥವಾ ಇನ್ನೂ ಹೆಚ್ಚು ವರ್ಷಗಳು ತಗಲಬಹುದು, ಮತ್ತು ಸಹೋದರರೊಂದಿಗಿನ ಹಾಗೂ ಸಭೆಯೊಂದಿಗಿನ ಸಹವಾಸದಿಂದ ದೂರ ಹೋದಂತೆ ಅವರು ಆತ್ಮಿಕವಾಗಿ ದುರ್ಬಲರಾಗುತ್ತಾರೆ.”
ಅಂತಹ ದುಃಖಕರವಾದ ಪರಿಣಾಮಗಳನ್ನು ತಡೆಯಲಿಕ್ಕಾಗಿ, ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳ ಮಾದರಿಯನ್ನು ಕ್ರೈಸ್ತ ಹೆತ್ತವರು ಅನುಸರಿಸಬೇಕು. ಅಪೊಸ್ತಲ ಪೌಲನು ಒಬ್ಬ ಹೆತ್ತವನಾಗಿರಲಿಲ್ಲ, ಆದರೂ ತನ್ನ ಜೊತೆ ವಿಶ್ವಾಸಿಗಳೊಂದಿಗಿನ ತನ್ನ ವ್ಯವಹಾರಗಳಲ್ಲಿ ಅವನು ವಿವೇಚನಾಶೀಲನಾಗಿದ್ದನು. ಯಾರ ಮೇಲೂ ದುಬಾರಿ ವೆಚ್ಚವನ್ನು ಹೊರಿಸದಂತೆ ಅವನು ಜಾಗ್ರತೆವಹಿಸಿದ್ದನು. (ಅ. ಕೃತ್ಯಗಳು 20:33) ಖಂಡಿತವಾಗಿಯೂ, ವಧೂದಕ್ಷಿಣೆಯ ಕುದುರಿಸುವಿಕೆಗಳನ್ನು ಮಾಡುವ ಮೊದಲು, ಕ್ರೈಸ್ತ ಹೆತ್ತವರು ಅವನ ನಿಸ್ವಾರ್ಥ ಮಾದರಿಯನ್ನು ಪರಿಗಣಿಸಬೇಕು. ನಿಜವಾಗಿಯೂ ಪೌಲನು ಹೀಗೆ ಬರೆಯುವಂತೆ ದೈವಿಕವಾಗಿ ಪ್ರೇರಿಸಲ್ಪಟ್ಟನು: “ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.”—ಫಿಲಿಪ್ಪಿ 3:17.
ಯುಕ್ತಾಯುಕ್ತ ಪರಿಜ್ಞಾನದ ಮಾದರಿಗಳು
ವಿವಾಹದ ಕುದುರಿಸುವಿಕೆಗಳ ವಿಷಯದಲ್ಲಿ ಅನೇಕ ಕ್ರೈಸ್ತ ಹೆತ್ತವರು ಯುಕ್ತಾಯುಕ್ತ ಪರಿಜ್ಞಾನದ ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾರೆ. ಪೂರ್ಣಸಮಯದ ಸೌವಾರ್ತಿಕರಾಗಿ ಸೇವೆಮಾಡುತ್ತಿರುವ ಜೋಸೆಫ್ ಮತ್ತು ಮೇ ಅವರ ವಿಷಯವನ್ನು ಪರಿಗಣಿಸಿರಿ.b ಅವರು ಸಾಲೊಮನ್ ಐಲೆಂಡ್ಗಳಲ್ಲೊಂದರಲ್ಲಿ ವಾಸಿಸುತ್ತಾರೆ. ಅಲ್ಲಿ ವಧೂದಕ್ಷಿಣೆಯ ಕುದುರಿಸುವಿಕೆಗಳು ಕೆಲವೊಮ್ಮೆ ಸಮಸ್ಯೆಯನ್ನು ಒಡ್ಡುತ್ತವೆ. ಅಂತಹ ತೊಂದರೆಗಳನ್ನು ದೂರಮಾಡಲಿಕ್ಕಾಗಿ, ಜೋಸೆಫ್ ಮತ್ತು ಮೇ ಅವರು ತಮ್ಮ ಮಗಳಾದ ಹೆಲೆನಳನ್ನು ಪಕ್ಕದ ದ್ವೀಪದಲ್ಲಿರುವ ಹುಡುಗನೊಂದಿಗೆ ಮದುವೆಮಾಡಿಕೊಡಲು ಏರ್ಪಾಡನ್ನು ಮಾಡಿದರು. ತಮ್ಮ ಇನ್ನೊಬ್ಬ ಮಗಳಾದ ಎಸ್ತೆರಳಿಗೂ ಹೀಗೆಯೇ ಮಾಡಿದರು. ತನ್ನ ಅಳಿಯನಾದ ಪೀಟರನು, ಸಾಮಾನ್ಯವಾಗಿ ಅಂಗೀಕರಿಸಸಾಧ್ಯವಿರುವ ಮೊತ್ತಕ್ಕಿಂತಲೂ ಕಡಿಮೆ ವಧೂದಕ್ಷಿಣೆ ಕೊಡುವುದನ್ನು ಸಹ ಜೋಸೆಫನು ಒಪ್ಪಿಕೊಂಡನು. ಅವನು ಹೀಗೆ ಏಕೆ ಮಾಡಿದನೆಂಬುದಕ್ಕೆ ಕಾರಣವನ್ನು ಕೊಡುತ್ತಾ, ಜೋಸೆಫನು ವಿವರಿಸಿದ್ದು: “ನಾನು ನನ್ನ ಅಳಿಯನಿಗೆ ಒಂದು ಹೊರೆಯನ್ನು ಹೊರಿಸಲು ಇಷ್ಟಪಡುವುದಿಲ್ಲ, ಅವನೂ ಒಬ್ಬ ಪಯನೀಯರನಾಗಿದ್ದಾನೆ.”
ಆಫ್ರಿಕದಲ್ಲಿರುವ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಸಹ, ಯುಕ್ತಾಯುಕ್ತ ಪರಿಜ್ಞಾನದ ಒಂದು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ, ಸಾಮಾನ್ಯವಾಗಿ ಕುಟುಂಬದ ಸಂಬಂಧಿಕರು ವಧೂದಕ್ಷಿಣೆಯ ಕುದುರಿಸುವಿಕೆಗಳ ಮುಂಗಡವಾಗಿ ದೊಡ್ಡ ಮೊತ್ತದ ಹಣವನ್ನು ಕೊಡುವುದನ್ನು ನಿರೀಕ್ಷಿಸುತ್ತಾರೆ. ಮತ್ತು ಒಬ್ಬ ವಧುವನ್ನು ಸಂಪಾದಿಸುವ ಸಲುವಾಗಿ, ತನ್ನ ಭಾವಿ ವಧುವಿನ ತಮ್ಮನಿಗೆ ಭವಿಷ್ಯತ್ತಿನ ವಧೂದಕ್ಷಿಣೆಯನ್ನು ತಾನೇ ಕೊಡುತ್ತೇನೆ ಎಂದು ವರನು ವಚನ ಕೊಡುವಂತೆಯೂ ಅಪೇಕ್ಷಿಸಲಾಗುತ್ತದೆ.
ಇದಕ್ಕೆ ಬದಲಾಗಿ, ಕೋಸಿ ಮತ್ತು ಅವನ ಹೆಂಡತಿಯಾದ ಮಾರಳ ಉದಾಹರಣೆಯನ್ನು ಪರಿಗಣಿಸಿರಿ. ಅವರ ಮಗಳಾದ ಬೆಬೋಕೋ, ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕನೊಬ್ಬನನ್ನು ಇತ್ತೀಚೆಗೆ ಮದುವೆಯಾದಳು. ಮದುವೆಗೆ ಮೊದಲು, ಸಂಬಂಧಿಕರು ದೊಡ್ಡ ಮೊತ್ತದ ವಧೂದಕ್ಷಿಣೆಯಲ್ಲಿ ತಮಗೂ ಪಾಲುಕೊಡುವಂತೆ ಅವಳ ಹೆತ್ತವರ ಮೇಲೆ ಬಹಳಷ್ಟು ಒತ್ತಡವನ್ನು ಹಾಕಿದರು. ಆದರೂ, ಆ ಹೆತ್ತವರು ತಮ್ಮ ನಿರ್ಧಾರವನ್ನು ಬದಲಿಸದೆ, ಅಂತಹ ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಬದಲಿಗೆ, ತಮ್ಮ ಮಗಳಿಗಾಗಿ ತಮ್ಮ ಭಾವಿ ಅಳಿಯನಿಂದ ತೀರ ಕಡಿಮೆ ವಧೂದಕ್ಷಿಣೆಯನ್ನು ಕೇಳಿಕೊಂಡು, ಅವರೇ ನೇರವಾಗಿ ಅವನೊಂದಿಗೆ ವ್ಯವಹಾರವನ್ನು ಕುದುರಿಸಿದರು. ತದನಂತರ, ಈ ಯುವ ದಂಪತಿಗಳು ತಮ್ಮ ಮದುವೆಯ ಖರ್ಚಿಗಾಗಿ ಉಪಯೋಗಿಸಿಕೊಳ್ಳಲಾಗುವಂತೆ ಅದರಲ್ಲಿನ ಅರ್ಧ ಭಾಗವನ್ನು ಅವರಿಗೆ ಹಿಂದಿರುಗಿಸಿದರು.
ಅದೇ ದೇಶದ ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಇದು ಇಟಾಂಗೊ ಎಂಬ ಹೆಸರಿನ ಯುವ ಸಾಕ್ಷಿಯ ಉದಾಹರಣೆಯಾಗಿದೆ. ಮೊದಲಾಗಿ ಅವಳ ಕುಟುಂಬವು ಯೋಗ್ಯವಾದ ವಧೂದಕ್ಷಿಣೆಯನ್ನು ಕೊಡುವಂತೆ ಕೇಳಿಕೊಂಡಿತು. ಆದರೆ ಆ ಮೊತ್ತವನ್ನು ಇನ್ನೂ ಹೆಚ್ಚಿಸಬೇಕು ಎಂದು ಅವರ ಸಂಬಂಧಿಕರು ಒತ್ತಾಯಿಸಿದರು. ಪರಿಸ್ಥಿತಿಯು ತುಂಬ ಒತ್ತಡಕ್ಕೊಳಗಾಗಿತ್ತು, ಮತ್ತು ತಾವು ಬೇಡಿಕೊಂಡಷ್ಟೇ ವಧೂದಕ್ಷಿಣೆಯು ಈ ಸಂಬಂಧಿಕರಿಗೆ ಸಿಗುತ್ತದೋ ಏನೋ ಎಂಬಂತೆ ಕಂಡುಬಂತು. ಸ್ವಭಾವತಃ ಅಂಜುಬುರುಕಳಾದರೂ ಇಟಾಂಗೊ ಎದ್ದು ನಿಂತುಕೊಂಡಳು. ಮತ್ತು ಈ ಹಿಂದೆ ನಿರ್ಧರಿಸಲ್ಪಟ್ಟಿರುವ ಹಣಕ್ಕೇ, ಸಾಂಜೆ ಎಂಬ ಹೆಸರಿನ ಒಬ್ಬ ಅತ್ಯುತ್ಸಾಹಿ ಕ್ರೈಸ್ತನನ್ನು ತಾನು ಮದುವೆಯಾಗುವ ನಿರ್ಧಾರ ಮಾಡಿದ್ದೇನೆಂದು ಗೌರವಪೂರ್ಣಳಾಗಿ ಹೇಳಿದಳು. ಆ ಬಳಿಕ ಅವಳು ಧೈರ್ಯದಿಂದ “ಬೀ ಕೆ” (ಅಂದರೆ, “ವಿಷಯವು ಇತ್ಯರ್ಥವಾಯಿತು”) ಎಂದು ಹೇಳಿ, ಕುಳಿತುಕೊಂಡಳು. ಅವಳ ಕ್ರೈಸ್ತ ತಾಯಿಯಾದ ಸಾಂಬಿಕೋಳಿಂದ ಅವಳಿಗೆ ಬೆಂಬಲ ದೊರಕಿತು. ಹೆಚ್ಚಿನ ಚರ್ಚೆಯು ನಡೆಯಲೇ ಇಲ್ಲ, ಮತ್ತು ಈ ಮೊದಲು ಯೋಜಿಸಿದ್ದ ಹಣವನ್ನು ಕೊಟ್ಟು, ಆ ಜೋಡಿ ಮದುವೆಯಾದರು.
ಪ್ರೀತಿಪೂರ್ಣರಾದ ಕ್ರೈಸ್ತ ಹೆತ್ತವರಿಗೆ, ಒಂದು ವಧೂದಕ್ಷಿಣೆಯ ವೈಯಕ್ತಿಕ ಲಾಭಕ್ಕಿಂತಲೂ ಅತ್ಯಧಿಕ ಚಿಂತೆಯನ್ನು ಉಂಟುಮಾಡುವಂತಹ ಅನೇಕ ವಿಷಯಗಳು ಇವೆ. ಕೆಮರೂನ್ನಲ್ಲಿರುವ ಒಬ್ಬ ಪತಿಯು ವಿವರಿಸುವುದು: “ವಧೂದಕ್ಷಿಣೆಯೋಪಾದಿ ನೀನು ನನಗೆ ಕೊಡಲು ಬಯಸುವುದನ್ನು, ನನ್ನ ಮಗಳ ಭೌತಿಕ ಆರೈಕೆಗಾಗಿ ಉಪಯೋಗಿಸು ಎಂದು ನನ್ನ ಅತ್ತೆಯವರು ನನಗೆ ಸಂದರ್ಭ ಸಿಕ್ಕಿದಾಗಲೆಲ್ಲ ಹೇಳುತ್ತಾರೆ.” ಪ್ರೀತಿಪೂರ್ಣ ಹೆತ್ತವರು, ತಮ್ಮ ಮಕ್ಕಳ ಆತ್ಮಿಕ ಒಳಿತಿನ ಕುರಿತಾಗಿಯೂ ಚಿಂತಿಸುತ್ತಾರೆ. ದೃಷ್ಟಾಂತಕ್ಕಾಗಿ, ಸಿಂಬಾಬ್ವೆಯಲ್ಲಿ ವಾಸಿಸುತ್ತಿದ್ದು, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಹೆಚ್ಚು ಸಮಯವನ್ನು ಕಳೆಯುವ ಫಾರೈ ಹಾಗೂ ರೂಡೋ ಅವರನ್ನು ಪರಿಗಣಿಸಿರಿ. ಅವರು ಉದ್ಯೋಗಸ್ಥರಾಗಿರಲಿಲ್ಲ. ಆದರೂ ಅವರು ತಮ್ಮ ಪುತ್ರಿಯರನ್ನು ಸಾಮಾನ್ಯವಾದ ವಧೂದಕ್ಷಿಣೆಗಿಂತ ಕಡಿಮೆ ವಧೂದಕ್ಷಿಣೆಗೆ ಮದುವೆ ಮಾಡಿಕೊಟ್ಟರು. ಕಾರಣವೇನು? ನಿಜವಾಗಿಯೂ ಯೆಹೋವನನ್ನು ಪ್ರೀತಿಸುವ ಪುರುಷರನ್ನು ಮದುವೆಯಾಗಿ, ತಮ್ಮ ಪುತ್ರಿಯರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ಬಯಸಿದರು. “ನಮ್ಮ ಪುತ್ರಿಯರ ಹಾಗೂ ನಮ್ಮ ಅಳಿಯಂದಿರ ಆತ್ಮಿಕತೆಯನ್ನೇ ನಾವು ಹೆಚ್ಚು ಪ್ರಾಮುಖ್ಯವಾದದ್ದಾಗಿ ಪರಿಗಣಿಸಿದೆವು” ಎಂದು ಅವರು ವಿವರಿಸಿದರು. ಎಂತಹ ಚೈತನ್ಯದಾಯಕ ಮನೋಭಾವ! ತಮ್ಮ ವಿವಾಹಿತ ಮಕ್ಕಳ ಆತ್ಮಿಕ ಹಾಗೂ ಭೌತಿಕ ಹಿತಕ್ಷೇಮದ ವಿಷಯದಲ್ಲಿ ಪ್ರೀತಿಪೂರ್ಣ ಚಿಂತೆಯನ್ನು ತೋರಿಸುವ ಅತ್ತೆಮಾವಂದಿರು ಹೆಚ್ಚು ಪ್ರಶಂಸೆಗೆ ಅರ್ಹರಾಗಿದ್ದಾರೆ.
ಯೋಗ್ಯ ಮನೋಭಾವದ ಪ್ರಯೋಜನಗಳು
ಸಾಲೊಮನ್ ಐಲೆಂಡ್ನ ಜೋಸೆಫ್ ಮತ್ತು ಮೇ ಅವರು ತಮ್ಮ ಪುತ್ರಿಯರ ಮದುವೆಯನ್ನು, ಉದಾರವಾಗಿ ಹಾಗೂ ಜಾಗರೂಕತೆಯಿಂದ ನಿರ್ವಹಿಸಿದ್ದಕ್ಕಾಗಿ ಆಶೀರ್ವದಿಸಲ್ಪಟ್ಟರು. ಹೀಗೆ, ಅವರ ಅಳಿಯಂದಿರು ಸಾಲದಲ್ಲಿ ಬೀಳಲಿಲ್ಲ. ಬದಲಾಗಿ, ರಾಜ್ಯದ ಸಂದೇಶವನ್ನು ಹಬ್ಬಿಸುವ ಪೂರ್ಣಸಮಯದ ಸೇವೆಯಲ್ಲಿ ಈ ಇಬ್ಬರು ದಂಪತಿಗಳು ಅನೇಕ ವರ್ಷಗಳನ್ನು ಕಳೆಯಲು ಶಕ್ತರಾಗಿದ್ದಾರೆ. ಹಿಂದಿನದನ್ನು ನೆನಸಿಕೊಳ್ಳುತ್ತಾ, ಜೋಸೆಫ್ ಹೇಳುವುದು: “ನಾನೂ ನನ್ನ ಕುಟುಂಬವೂ ಮಾಡಿರುವ ನಿರ್ಧಾರಗಳಿಂದ ಅನೇಕ ಆಶೀರ್ವಾದಗಳು ಫಲಿಸಿವೆ. ಕೆಲವೊಮ್ಮೆ ಅದನ್ನು ಅರ್ಥಮಾಡಿಕೊಳ್ಳದವರಿಂದ ತುಂಬ ಒತ್ತಡವು ಬಂದಿತ್ತೆಂಬುದು ನಿಜ, ಆದರೂ ನನ್ನ ಮಕ್ಕಳು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರೂ ದೃಢರೂ ಆಗಿರುವುದನ್ನು ನೋಡುವಾಗ, ನನ್ನ ಮನಸ್ಸಾಕ್ಷಿಗೆ ಒಳ್ಳೆಯ ಅನಿಸಿಕೆಯಾಗುತ್ತದೆ ಮತ್ತು ಸಂತೃಪ್ತಿಯಾಗುತ್ತದೆ. ಅವರು ಸಹ ಸಂತೋಷದಿಂದಿದ್ದಾರೆ, ಮತ್ತು ನಾನು ಹಾಗೂ ನನ್ನ ಹೆಂಡತಿ ಸಹ ತುಂಬ ಸಂತೋಷದಿಂದಿದ್ದೇವೆ.”
ಇನ್ನೊಂದು ಪ್ರಯೋಜನವೇನೆಂದರೆ, ಅತ್ತೆಮಾವಂದಿರೊಂದಿಗೆ ಒಂದು ಒಳ್ಳೆಯ ಸಂಬಂಧ. ಉದಾಹರಣೆಗಾಗಿ, ಸಾಂಡೈ ಹಾಗೂ ಸಿಬೂಸೀಸೊ ಅವರು, ಸಿಂಬಾಬ್ವೆಯಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ನಲ್ಲಿ ತಮ್ಮ ಪತ್ನಿಯರೊಂದಿಗೆ ಸ್ವಯಂಸೇವಕರಾಗಿ ಕೆಲಸಮಾಡುತ್ತಾರೆ. ಅವರ ಪತ್ನಿಯರು ಸ್ವಂತ ಅಕ್ಕತಂಗಿಯರಾಗಿದ್ದಾರೆ. ಡಾಕರೈ ಎಂಬ ಹೆಸರಿನ ಅವರ ಮಾವನು, ಒಬ್ಬ ಪೂರ್ಣಸಮಯದ ಸೌವಾರ್ತಿಕನಾಗಿದ್ದಾನೆ. ಅವನು ಉದ್ಯೋಗಸ್ಥನಾಗಿಲ್ಲ. ವಧೂದಕ್ಷಿಣೆಯ ಕುದುರಿಸುವಿಕೆಗಳ ಸಮಯದಲ್ಲಿ, ತನ್ನ ಅಳಿಯಂದಿರು ಎಷ್ಟು ಕೊಡಲು ಸಮರ್ಥರೋ ಅಷ್ಟನ್ನು ಕೊಡಲಿ ಎಂದು ಅವನು ಹೇಳಿದನು. “ನಮ್ಮ ಮಾವನವರನ್ನು ನಾವು ತುಂಬ ಪ್ರೀತಿಸುತ್ತೇವೆ, ಮತ್ತು ಒಂದುವೇಳೆ ಅವರಿಗೆ ಏನಾದರೂ ಆವಶ್ಯಕತೆಯು ಉಂಟಾಗುವಲ್ಲಿ, ನಮ್ಮ ಕೈಯಿಂದಾದುದೆಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ” ಎಂದು ಸಾಂಡೈ ಹಾಗೂ ಸಿಬೂಸೀಸೊ ಹೇಳುತ್ತಾರೆ.
ಹೌದು, ವಧೂದಕ್ಷಿಣೆಯ ಕುದುರಿಸುವಿಕೆಗಳಲ್ಲಿ ಯೋಗ್ಯ ಮನೋಭಾವದವರಾಗಿರುವುದು, ಕುಟುಂಬದ ಸಂತೋಷಕ್ಕೆ ಸಹಾಯಮಾಡುತ್ತದೆ. ದೃಷ್ಟಾಂತಕ್ಕಾಗಿ, ನವದಂಪತಿಗಳು ಸಾಲದಲ್ಲಿ ಬೀಳುವುದಿಲ್ಲ; ಇದರಿಂದಾಗಿ ಅವರು ವೈವಾಹಿಕ ಜೀವಿತಕ್ಕೆ ಹೊಂದಿಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ. ಇದು ಅನೇಕ ಯುವ ದಂಪತಿಗಳಿಗೆ, ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ತುರ್ತಿನ ಕೆಲಸದಲ್ಲಿ ಪೂರ್ಣಸಮಯದ ಸೇವೆಮಾಡುವಂತಹ ಆತ್ಮಿಕ ಆಶೀರ್ವಾದಗಳನ್ನು ಬೆನ್ನಟ್ಟಲು ಶಕ್ತರನ್ನಾಗಿ ಮಾಡಿದೆ. ಹೀಗೆ ಮಾಡುವುದು, ವಿವಾಹದ ಪ್ರೀತಿಪೂರ್ಣ ಮೂಲಕರ್ತನಾದ ಯೆಹೋವ ದೇವರಿಗೆ ಮಹಿಮೆಯನ್ನು ತರುತ್ತದೆ.—ಮತ್ತಾಯ 24:14; 28:19, 20.
[ಅಧ್ಯಯನ ಪ್ರಶ್ನೆಗಳು]
a ಕೆಲವು ಸಂಸ್ಕೃತಿಗಳಲ್ಲಿ, ಸನ್ನಿವೇಶವು ತೀರ ತದ್ವಿರುದ್ಧವಾಗಿದೆ. ಅತ್ತೆಮಾವಂದಿರು ವಧುವಿನ ಹೆತ್ತವರಿಂದ ವರದಕ್ಷಿಣೆಯನ್ನು ನಿರೀಕ್ಷಿಸುತ್ತಾರೆ.
b ಈ ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
[ಪುಟ 27 ರಲ್ಲಿರುವ ಚೌಕ]
ಅವರು ವಧೂದಕ್ಷಿಣೆಯನ್ನು ಹಿಂದಿರುಗಿಸಿದರು
ಕೆಲವು ಸಮುದಾಯಗಳಲ್ಲಿ, ವಧೂದಕ್ಷಿಣೆಯು ತೀರ ಕಡಿಮೆಯಾಗಿರುವಲ್ಲಿ, ವಧುವನ್ನೂ ಅವಳ ಹೆತ್ತವರನ್ನೂ ಹೀನವಾಗಿ ಕಾಣಲಾಗುತ್ತದೆ. ಹೀಗೆ, ದುರಭಿಮಾನ ಹಾಗೂ ಕುಟುಂಬದ ಅಂತಸ್ತನ್ನು ಪ್ರದರ್ಶಿಸುವ ಬಯಕೆಯು, ಕೆಲವೊಮ್ಮೆ ಅತಿ ಹೆಚ್ಚು ವಧೂದಕ್ಷಿಣೆಯನ್ನು ಕುದುರಿಸುವಂತೆ ಮಾಡುತ್ತದೆ. ನೈಜೀರಿಯದ ಲಾಗೊಸ್ನಲ್ಲಿರುವ ಒಂದು ಕುಟುಂಬವು, ಒಂದು ಉಲ್ಲಾಸಕರ ಭಿನ್ನತೆಯನ್ನು ಒದಗಿಸುತ್ತದೆ. ಅವರ ಅಳಿಯನಾದ ಡೀಲೀ ಅದನ್ನು ಹೀಗೆ ವಿವರಿಸುತ್ತಾನೆ:
“ಬಹಳ ದುಬಾರಿಯಾದ ಉಡುಪುಗಳನ್ನು ಕೊಳ್ಳುವಂತಹ, ಸಾಂಪ್ರದಾಯಿಕ ವಧೂದಕ್ಷಿಣೆಯ ಸಂಪ್ರದಾಯದಿಂದ ಉಂಟಾಗುವ ಅನೇಕ ವೆಚ್ಚಗಳನ್ನು ನನ್ನ ಹೆಂಡತಿಯ ಕುಟುಂಬವು ನನ್ನಿಂದ ತೆಗೆದುಕೊಳ್ಳಲಿಲ್ಲ. ನನ್ನ ಕುಟುಂಬವು ಅವರಿಗೆ ವಧೂದಕ್ಷಿಣೆಯನ್ನು ಕೊಟ್ಟಾಗಲೂ, ಅವರ ಮುಂದಾಳು ಕೇಳಿದ್ದು: ‘ನೀವು ಈ ಹುಡುಗಿಯನ್ನು ಒಬ್ಬ ಹೆಂಡತಿಯಾಗಿ ಪಡೆದುಕೊಳ್ಳಲು ಬಯಸುವಿರೊ ಅಥವಾ ಒಬ್ಬ ಮಗಳಾಗಿ ಪಡೆದುಕೊಳ್ಳಲು ಬಯಸುವಿರೊ?’ ನನ್ನ ಕುಟುಂಬವು ಒಟ್ಟಾಗಿ ಉತ್ತರಿಸಿದ್ದು: ‘ನಾವು ಅವಳನ್ನು ಮಗಳಾಗಿ ಪಡೆದುಕೊಳ್ಳಲು ಬಯಸುತ್ತೇವೆ.’ ತದನಂತರ, ಅದೇ ಲಕೋಟೆಯಲ್ಲಿ ವಧೂದಕ್ಷಿಣೆಯು ನಮಗೆ ಹಿಂದಿರುಗಿಸಲ್ಪಟ್ಟಿತು.
“ಇಂದಿನ ವರೆಗೂ, ನನ್ನ ಅತ್ತೆಮಾವಂದಿರು ನಮ್ಮ ಮದುವೆಯನ್ನು ನಿರ್ವಹಿಸಿದ ವಿಧವನ್ನು ನಾನು ಗಣ್ಯಮಾಡುತ್ತೇನೆ. ಇದು ಅವರ ಕುರಿತಾದ ನನ್ನ ಗೌರವವನ್ನು ಹೆಚ್ಚಿಸಿತು. ಅವರ ಅತ್ಯುತ್ತಮವಾದ ಆತ್ಮಿಕ ಹೊರನೋಟವು, ಅವರನ್ನು ಅತ್ಯಂತ ಆಪ್ತ ಸ್ನೇಹಿತರೋಪಾದಿ ಪರಿಗಣಿಸುವಂತೆ ಮಾಡುತ್ತದೆ. ನಾನು ನನ್ನ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೇನೆಂಬುದರ ಮೇಲೆಯೂ ಅದು ಹೆಚ್ಚು ಪ್ರಭಾವವನ್ನು ಬೀರಿದೆ. ನನ್ನ ಹೆಂಡತಿಯ ಕುಟುಂಬವು ನನ್ನನ್ನು ಉಪಚರಿಸಿದ ರೀತಿಯನ್ನು ನೋಡಿ, ನಾನು ಅವಳ ಬಗ್ಗೆ ಬಹಳ ಅಭಿಮಾನವನ್ನು ಬೆಳೆಸಿಕೊಂಡಿದ್ದೇನೆ. ನಮ್ಮಲ್ಲಿ ಏನಾದರೂ ಅಸಮ್ಮತಿಯು ಉಂಟಾದಲ್ಲಿ, ಅದು ಒಂದು ಸಮಸ್ಯೆಯಾಗಿ ಬೆಳೆಯುವಂತೆ ನಾನು ಬಿಡುವುದಿಲ್ಲ. ನಾನು ಅವಳ ಕುಟುಂಬದ ಬಗ್ಗೆ ನೆನಸಿಕೊಂಡ ಕೂಡಲೆ, ಆ ಅಸಮ್ಮತಿಯು ಬೇಗನೆ ಶಮನವಾಗುತ್ತದೆ.
“ನನ್ನ ಕುಟುಂಬದ ಹಾಗೂ ಅವಳ ಕುಟುಂಬದ ಸ್ನೇಹವು ತುಂಬ ನಿಕಟವಾಗಿದೆ. ನಮ್ಮ ಮದುವೆಯಾಗಿ ಎರಡು ವರ್ಷಗಳು ಕಳೆದಿರುವುದಾದರೂ, ಈಗಲೂ ನನ್ನ ತಂದೆಯು ನನ್ನ ಹೆಂಡತಿಯ ಕುಟುಂಬಕ್ಕೆ ಉಡುಗೊರೆಗಳನ್ನು ಹಾಗೂ ಆಹಾರಪದಾರ್ಥಗಳನ್ನು ಕಳುಹಿಸುತ್ತಾರೆ.”