ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 9/15 ಪು. 21-23
  • ದೇವರು ನಿಮಗೆ ನೈಜವಾಗಿದ್ದಾನೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರು ನಿಮಗೆ ನೈಜವಾಗಿದ್ದಾನೊ?
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶಾಸ್ತ್ರಗಳನ್ನು ಅಭ್ಯಾಸಿಸಿರಿ
  • ಕ್ರಮವಾಗಿ ಮತ್ತು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿರಿ
  • ಸೃಷ್ಟಿಯನ್ನು ಗಮನಿಸಿರಿ
  • ಯೆಹೋವನೊಂದಿಗೆ ನಡೆಯಿರಿ
  • ನಾವು ಏಕೆ ಎಡೆಬಿಡದೆ ಪ್ರಾರ್ಥಿಸಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು—1998
w98 9/15 ಪು. 21-23

ದೇವರು ನಿಮಗೆ ನೈಜವಾಗಿದ್ದಾನೊ?

ವ್ಯಥೆಗೊಳಿಸುವ ಸಮಸ್ಯೆಗಳನ್ನು ಎದುರಿಸುವಾಗ, ನೀವು ಕೂಡಲೇ ದೇವರಿಗೆ ಪ್ರಾರ್ಥಿಸುತ್ತೀರೊ? ನೀವು ಹಾಗೆ ಮಾಡುತ್ತಿರುವಲ್ಲಿ, ನೀವೊಬ್ಬ ನೈಜ ವ್ಯಕ್ತಿಯೊಂದಿಗೆ ಮಾತಾಡುತ್ತಿದ್ದೀರೆಂದು ನಿಮಗನಿಸುತ್ತದೊ?

ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ತಂದೆಗೆ ಸೂಚಿಸುತ್ತಾ, ಹೇಳಿದ್ದು: “ನನ್ನನ್ನು ಕಳುಹಿಸಿದಾತನು ನಿಜವಾದವನು.” (ಯೋಹಾನ 7:28) ಹೌದು, ಯೆಹೋವ ದೇವರು ನೈಜವಾಗಿದ್ದಾನೆ, ಮತ್ತು ಆತನಿಗೆ ಪ್ರಾರ್ಥಿಸುವುದು, ಸಹಾಯ ಮತ್ತು ಬುದ್ಧಿವಾದಕ್ಕಾಗಿ ಒಬ್ಬ ಆಪ್ತ ಮಾನವ ಸ್ನೇಹಿತನ ಬಳಿ ಹೋಗುವಂತೆ ಇದೆ. ದೇವರು ನಮ್ಮ ಪ್ರಾರ್ಥನೆಗಳನ್ನು ಆಲಿಸಬೇಕಾದರೆ, ಸ್ವೀಕರಣೀಯ ಪ್ರಾರ್ಥನೆಗಾಗಿರುವ ಶಾಸ್ತ್ರೀಯ ಆವಶ್ಯಕತೆಗಳನ್ನು ಅವು ಖಂಡಿತವಾಗಿಯೂ ಪೂರೈಸಬೇಕು. ಉದಾಹರಣೆಗಾಗಿ, “ಪ್ರಾರ್ಥನೆಯನ್ನು ಕೇಳುವವ”ನನ್ನು ನಮ್ರತೆಯಿಂದ ಸಮೀಪಿಸಲು, ನಾವು ಆತನ ಮಗನಾದ ಯೇಸು ಕ್ರಿಸ್ತನ ಮೂಲಕವೇ ಪ್ರಾರ್ಥಿಸಬೇಕು.—ಕೀರ್ತನೆ 65:2; 138:6; ಯೋಹಾನ 14:6.

ದೇವರು ಅದೃಶ್ಯನಾಗಿರುವುದರಿಂದ, ಆತನಿಗೆ ವ್ಯಕ್ತಿಸ್ವರೂಪವಿಲ್ಲವೆಂದು ಕೆಲವರಿಗೆ ಅನಿಸಬಹುದು. ದೇವರನ್ನು ಅರಿಯುವುದು ಕಷ್ಟಕರವಾಗಿರುವಂತೆ ಅವರಿಗೆ ತೋರಬಹುದು. ದೇವರ ಅದ್ಭುತಕರವಾದ ಗುಣಗಳ ಕುರಿತಾಗಿ ಕಲಿತಿರಬಹುದಾದ ಕೆಲವು ಕ್ರೈಸ್ತರಿಗೂ, ಆತನು ಎಷ್ಟು ನೈಜವಾಗಿದ್ದಾನೆಂಬುದನ್ನು ಗ್ರಹಿಸಿಕೊಳ್ಳುವುದು ಕೆಲವೊಮ್ಮೆ ಕಷ್ಟಕರವಾಗಿರಬಹುದು. ಇದು ನಿಮ್ಮ ಅನುಭವವೂ ಆಗಿದೆಯೊ? ಹಾಗಿರುವಲ್ಲಿ, ಯೆಹೋವ ದೇವರು ನಿಮಗೆ ನೈಜವಾಗಿರುವಂತೆ ಯಾವುದು ಸಹಾಯಮಾಡಬಲ್ಲದು?

ಶಾಸ್ತ್ರಗಳನ್ನು ಅಭ್ಯಾಸಿಸಿರಿ

ನೀವು ಪವಿತ್ರ ಶಾಸ್ತ್ರಗಳನ್ನು ಕ್ರಮವಾಗಿ ಅಭ್ಯಾಸಿಸುತ್ತೀರೊ? ಬೈಬಲ್‌ ಅಭ್ಯಾಸಕ್ಕಾಗಿರುವ ನಿಮ್ಮ ಅವಧಿಗಳು ಎಷ್ಟು ಹೆಚ್ಚು ದೀರ್ಘವಾಗಿರುತ್ತವೊ ಮತ್ತು ಗಾಢವಾದದ್ದಾಗಿರುತ್ತವೊ, ಯೆಹೋವ ದೇವರು ನಿಮಗೆ ಅಷ್ಟೇ ಹೆಚ್ಚು ನೈಜವಾಗಿರುವನು. ಹೀಗೆ ನಿಮ್ಮ ನಂಬಿಕೆಯು ಬಲಗೊಳಿಸಲ್ಪಡುವುದು, ಮತ್ತು ಫಲಿತಾಂಶವಾಗಿ, ‘ಅದೃಶ್ಯವಾಗಿರುವಾತನನ್ನು ದೃಷ್ಟಿಸು’ವಂತೆ ಅದು ನಿಮ್ಮನ್ನು ಶಕ್ತಗೊಳಿಸುವುದು. (ಇಬ್ರಿಯ 11:6, 27) ಇನ್ನೊಂದು ಕಡೆ, ಬೈಬಲನ್ನು ಅಪರೂಪವಾಗಿ ಅಥವಾ ಇಷ್ಟಬಂದಂತೆ ಅಭ್ಯಾಸ ಮಾಡುವುದು, ನಿಮ್ಮ ನಂಬಿಕೆಯ ಮೇಲೆ ಹೆಚ್ಚು ಗಮನಾರ್ಹ ಪ್ರಭಾವವನ್ನು ಬೀರಲಾರದು.

ದೃಷ್ಟಾಂತಕ್ಕಾಗಿ: ದೀರ್ಘಕಾಲದಿಂದಿರುವ ಚರ್ಮದ ಮೇಲಿನ ಗುಳ್ಳೆಗಳನ್ನು ನಿವಾರಿಸಲು, ಒಬ್ಬ ವೈದ್ಯನು ನಿಮಗೆ ಒಂದು ಮುಲಾಮನ್ನು ದಿನಕ್ಕೆ ಎರಡು ಬಾರಿ ಹಚ್ಚುವಂತೆ ಹೇಳುತ್ತಾನೆಂದು ಊಹಿಸಿಕೊಳ್ಳಿ. ನೀವು ಆ ಮುಲಾಮನ್ನು ತಿಂಗಳಿಗೆ ಕೇವಲ ಒಂದು ಅಥವಾ ಎರಡು ಸಲ ಹಚ್ಚಿದರೆ, ನಿಮ್ಮ ಗುಳ್ಳೆಗಳು ಮಾಯವಾಗುವವೊ? ಇಲ್ಲ. ತದ್ರೀತಿಯಲ್ಲಿ, ಆತ್ಮಿಕ ಆರೋಗ್ಯಕ್ಕಾಗಿ ಕೀರ್ತನೆಗಾರನು ನಮಗೆ ಒಂದು “ಔಷಧಿಚೀಟಿಯನ್ನು” ಕೊಡುತ್ತಾನೆ. “ಹಗಲಿರುಳು” ದೇವರ ವಾಕ್ಯವನ್ನು ಓದಿರಿ. (ಕೀರ್ತನೆ 1:1, 2) ಹೆಚ್ಚುತ್ತಿರುವ ಪ್ರಯೋಜನಗಳಲ್ಲಿ ಆನಂದಿಸಲು, ನಾವು ಆ ಔಷಧಿಚೀಟಿಯನ್ನು ಅನುಸರಿಸಬೇಕು. ಅಂದರೆ, ಕ್ರೈಸ್ತ ಪ್ರಕಾಶನಗಳ ಸಹಾಯದೊಂದಿಗೆ ದೇವರ ವಾಕ್ಯವನ್ನು ದಿನನಿತ್ಯ ಪರಿಗಣಿಸುವುದೇ.—ಯೆಹೋಶುವ 1:8.

ನಿಮ್ಮ ಅಭ್ಯಾಸದ ಅವಧಿಗಳನ್ನು ಹೆಚ್ಚು ವಿಶ್ವಾಸವರ್ಧಕವನ್ನಾಗಿ ಮಾಡಲು ಬಯಸುತ್ತೀರೊ? ಇಲ್ಲಿ ಒಂದು ಸಲಹೆಯಿದೆ: ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದಿ ಹೋಲಿ ಸ್ಕ್ರಿಪ್ಚರ್ಸ್‌ ಅಥವಾ ಕ್ರಾಸ್‌ ರೆಫರೆನ್ಸ್‌ಗಳುಳ್ಳ ಬೇರೆ ಯಾವುದೇ ಬೈಬಲಿನ ಒಂದು ಅಧ್ಯಾಯವನ್ನು ಓದಿದ ನಂತರ, ಒಂದು ಆಸಕ್ತಿಕರ ವಚನವನ್ನು ಆಯ್ದು, ಉಲ್ಲೇಖಿಸಲ್ಪಟ್ಟಿರುವ ರೆಫರೆನ್ಸ್‌ ವಚನಗಳನ್ನು ತೆರೆದುನೋಡಿರಿ. ಇದು ನಿಮ್ಮ ಅಭ್ಯಾಸವನ್ನು ಅಭಿವರ್ಧಿಸುವುದು, ಮತ್ತು ನೀವು ಬೈಬಲಿನ ಆಂತರಿಕ ಸಾಮರಸ್ಯದಿಂದ ನಿಸ್ಸಂದೇಹವಾಗಿ ಪ್ರಭಾವಿತರಾಗುವಿರಿ. ಇದು, ಬೈಬಲಿನ ಲೇಖಕನಾದ ಯೆಹೋವ ದೇವರನ್ನು, ನಿಮಗೆ ಹೆಚ್ಚು ನೈಜ ವ್ಯಕ್ತಿಯನ್ನಾಗಿ ಮಾಡುವುದು.

ಕ್ರಾಸ್‌ ರೆಫರನ್ಸ್‌ಗಳನ್ನು ಉಪಯೋಗಿಸುವುದರಿಂದ, ಬೈಬಲ್‌ ಪ್ರವಾದನೆಗಳು ಮತ್ತು ಅವುಗಳ ನೆರವೇರಿಕೆಗಳು ಕೂಡ ನಿಮಗೆ ಪರಿಚಿತವಾಗುವವು. ಬಾಬೆಲಿನವರಿಂದ ಯೆರೂಸಲೇಮಿನ ನಾಶನಕ್ಕೆ ಸಂಬಂಧಿಸಿದ ಪ್ರವಾದನೆಗಳಂತಹ, ಬೈಬಲಿನ ಪ್ರಮುಖ ಪ್ರವಾದನೆಗಳೊಂದಿಗೆ ನೀವು ಪರಿಚಿತರಾಗಿರಬಹುದು. ಆದರೂ, ಬೈಬಲಿನಲ್ಲಿ ಪರಸ್ಪರ ಸಂಬಂಧಿತ ಪ್ರವಾದನೆಗಳು ಮತ್ತು ಅವುಗಳ ನೆರವೇರಿಕೆಯ ಒಂದು ಜಾಲವೇ ಇದೆ. ಇವುಗಳಲ್ಲಿ ಕೆಲವು ಅಷ್ಟೊಂದು ಪ್ರಸಿದ್ಧವಾಗಿಲ್ಲ.

ಉದಾಹರಣೆಗಾಗಿ, ಯೆರಿಕೋ ಪಟ್ಟಣವನ್ನು ಪುನಃ ಕಟ್ಟುವುದಕ್ಕಾಗಿದ್ದ ದಂಡನೆಯ ಕುರಿತಾದ ಪ್ರವಾದನೆಯನ್ನು ಓದಿರಿ ಮತ್ತು ಅನಂತರ ಅದರ ನೆರವೇರಿಕೆಯನ್ನು ಪರಿಗಣಿಸಿರಿ. ಯೆಹೋಶುವ 6:26 ತಿಳಿಸುವುದು: “ಅದೇ ಸಮಯದಲ್ಲಿ ಯೆಹೋಶುವನು ಇಸ್ರಾಯೇಲ್ಯರಿಂದ ಪ್ರಮಾಣಮಾಡಿಸಿ ಅವರಿಗೆ—ಈ ಯೆರಿಕೋಪಟ್ಟಣವನ್ನು ಕಟ್ಟುವದಕ್ಕೆ ಕೈಹಚ್ಚುವ ಮನುಷ್ಯನು ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಿರಲಿ. ಅಂಥವನು ಅದಕ್ಕೆ ಅಸ್ತಿವಾರಹಾಕುವಾಗ ತನ್ನ ಹಿರೀ ಮಗನನ್ನೂ ಬಾಗಿಲುಗಳನ್ನಿಡುವಾಗ ಕಿರೀ ಮಗನನ್ನೂ ಕಳೆದುಕೊಳ್ಳಲಿ ಎಂದು ಹೇಳಿದನು.” ಸುಮಾರು 500 ವರ್ಷಗಳ ನಂತರ ಅದರ ನೆರವೇರಿಕೆಯಾಯಿತು, ಯಾಕಂದರೆ 1 ಅರಸುಗಳು 16:34ರಲ್ಲಿ ನಾವು ಹೀಗೆ ಓದುತ್ತೇವೆ: “ಇವನ [ರಾಜ ಆಹಾಬನ] ಕಾಲದಲ್ಲಿ ಬೇತೇಲಿನವನಾದ ಹೀಯೇಲನು ಯೆರಿಕೋಪಟ್ಟಣವನ್ನು ಕಟ್ಟಿಸಿದನು. ಅವನು ಅದಕ್ಕೆ ಅಸ್ತಿವಾರಹಾಕುವಾಗ ಹಿರೀಮಗನಾದ ಅಬೀರಾಮನನ್ನೂ ಬಾಗಲುಗಳನ್ನಿಡುವಾಗ ಕಿರೀಮಗನಾದ ಸೆಗೂಬನನ್ನೂ ಕಳಕೊಂಡನು. ಹೀಗೆ ಯೆಹೋವನು ನೂನನ ಮಗನಾದ ಯೆಹೋಶುವನಿಂದ ಹೇಳಿಸಿದ ಮಾತು ನೆರೆವೇರಿತು.”a ಕೇವಲ ಒಬ್ಬ ನೈಜ ದೇವರು ಅಂತಹ ಪ್ರವಾದನೆಗಳನ್ನು ಪ್ರೇರಿಸಿ, ಅವುಗಳು ನೆರವೇರುವಂತೆ ಮಾಡಬಲ್ಲನು.

ಬೈಬಲನ್ನು ಓದುವಾಗ, ನೀವು ಒಂದು ನಿರ್ದಿಷ್ಟ ವಿಷಯದ ಕುರಿತಾಗಿ ಕುತೂಹಲಪಡಬಹುದು. ದೃಷ್ಟಾಂತಕ್ಕಾಗಿ, ಒಂದು ಪ್ರವಾದನೆ ಮತ್ತು ಅದರ ನೆರವೇರಿಕೆಯ ನಡುವೆ ಎಷ್ಟು ವರ್ಷಗಳು ಗತಿಸಿದವು ಎಂದು ನೀವು ಸೋಜಿಗಪಡಬಹುದು. ಯಾರನ್ನಾದರೂ ಕೇಳುವ ಬದಲಿಗೆ, ಅದನ್ನು ಸ್ವತಃ ನೀವೇ ಕಂಡುಹಿಡಿಯಲು ಏಕೆ ಪ್ರಯತ್ನಿಸಬಾರದು? ನಿಕ್ಷೇಪದ ಕುರಿತಾದ ಭೂಪಟವನ್ನು ಅರ್ಥಮಾಡಿಕೊಳ್ಳಲು ನೀವು ಎಷ್ಟು ಶ್ರಮವಹಿಸುತ್ತೀರೊ, ಅಷ್ಟೇ ಶ್ರಮವಹಿಸಿ, ರೇಖಾಪಟಗಳು ಮತ್ತು ಬೈಬಲ್‌ ಅಭ್ಯಾಸದ ಸಹಾಯಕಗಳ ಉಪಯೋಗದ ಮೂಲಕ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿರಿ. (ಜ್ಞಾನೋಕ್ತಿ 2:4, 5) ಉತ್ತರಗಳನ್ನು ಕಂಡುಕೊಳ್ಳುವುದು, ನಿಮ್ಮ ನಂಬಿಕೆಯ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತಾ, ಯೆಹೋವ ದೇವರನ್ನು ನಿಮಗೆ ಹೆಚ್ಚು ನೈಜವನ್ನಾಗಿ ಮಾಡುವುದು.

ಕ್ರಮವಾಗಿ ಮತ್ತು ಕಟ್ಟಾಸಕ್ತಿಯಿಂದ ಪ್ರಾರ್ಥಿಸಿರಿ

ಪ್ರಾರ್ಥನೆ ಮತ್ತು ನಂಬಿಕೆಯ ಮಹತ್ವವನ್ನು ಕಡೆಗಣಿಸದಿರಿ. ಯೇಸುವಿನ ಶಿಷ್ಯರು ಈ ನೇರವಾದ ಬೇಡಿಕೆಯನ್ನು ಮಾಡಿದರು: “ನಮ್ಮ ನಂಬಿಕೆಯನ್ನು ಹೆಚ್ಚಿಸು.” (ಲೂಕ 17:5) ಯೆಹೋವನು ನಿಮಗೆ ನೈಜವೆಂದು ಅನಿಸದಿರುವಲ್ಲಿ, ಹೆಚ್ಚಿನ ನಂಬಿಕೆಗಾಗಿರುವ ನಿಮ್ಮ ಅಗತ್ಯದ ಕುರಿತಾಗಿ ಆತನಿಗೆ ಪ್ರಾರ್ಥಿಸಬಾರದೇಕೆ? ಆತನು ನಿಮಗೆ ನೈಜವಾಗುವಂತೆ, ಭರವಸೆಯಿಂದ ನಿಮ್ಮ ಸ್ವರ್ಗೀಯ ತಂದೆಯಲ್ಲಿ ಸಹಾಯವನ್ನು ಕೇಳಿಕೊಳ್ಳಿರಿ.

ಒಂದು ಸಮಸ್ಯೆಯಿಂದಾಗಿ ನೀವು ಕಷ್ಟಪಡುತ್ತಿರುವಲ್ಲಿ, ಅದನ್ನು ನಿಮ್ಮ ಸ್ವರ್ಗೀಯ ಮಿತ್ರನಿಗೆ ಹೃತ್ಪೂರ್ವಕವಾಗಿ ವ್ಯಕ್ತಪಡಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ. ಯೇಸುವಿನ ಮರಣವು ಸಮೀಪಿಸುತ್ತಿದ್ದಾಗ, ಅವನು ತೀವ್ರವಾಗಿ ಪ್ರಾರ್ಥಿಸಿದನು. ಸಾರ್ವಜನಿಕ ಪ್ರದರ್ಶನಕ್ಕಾಗಿ ಉದ್ದವಾದ ಪ್ರಾರ್ಥನೆಗಳನ್ನು ಹೇಳುವ ಧಾರ್ಮಿಕ ಪದ್ಧತಿಯನ್ನು ಅವನು ಖಂಡಿಸಿದರೂ, ತನ್ನ 12 ಅಪೊಸ್ತಲರನ್ನು ಆರಿಸಿಕೊಳ್ಳುವ ಮುಂಚೆ, ವೈಯಕ್ತಿಕ ಪ್ರಾರ್ಥನೆಯನ್ನು ಮಾಡುತ್ತಾ ಇಡೀ ರಾತ್ರಿಯನ್ನು ಕಳೆದನು. (ಮಾರ್ಕ 12:38-40; ಲೂಕ 6:12-16) ಪ್ರವಾದಿಯಾದ ಸಮುವೇಲನ ತಾಯಿಯಾದ ಹನ್ನಳಿಂದಲೂ ನಾವು ಒಂದು ಪಾಠವನ್ನು ಕಲಿಯಬಹುದು. ಒಂದು ಗಂಡು ಸಂತಾನಕ್ಕಾಗಿ ಹಂಬಲಿಸುತ್ತಾ, “ಆಕೆಯು ಬಲು ಹೊತ್ತಿನ ವರೆಗೆ ಯೆಹೋವನ ಮುಂದೆ ಪ್ರಾರ್ಥನೆ” ಮಾಡಿದಳು.—1 ಸಮುವೇಲ 1:12.

ಈ ಉದಾಹರಣೆಗಳಲ್ಲಿರುವ ಮೂಲ ಪಾಠವೇನು? ನಿಮ್ಮ ಪ್ರಾರ್ಥನೆಗಳಿಗೆ ಉತ್ತರಗಳನ್ನು ನಿರೀಕ್ಷಿಸುವಲ್ಲಿ, ನೀವು ಶ್ರದ್ಧಾಪೂರ್ವಕವಾಗಿ, ಕಟ್ಟಾಸಕ್ತಿಯಿಂದ, ಸತತವಾಗಿ ಮತ್ತು ಖಂಡಿತವಾಗಿಯೂ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಪ್ರಾರ್ಥಿಸಬೇಕು. (ಲೂಕ 22:44; ರೋಮಾಪುರ 12:12; 1 ಥೆಸಲೊನೀಕ 5:17; 1 ಯೋಹಾನ 5:13-15) ಹೀಗೆ ಮಾಡುವುದು, ದೇವರನ್ನು ನಿಮಗೆ ನೈಜವನ್ನಾಗಿ ಮಾಡುವುದು.

ಸೃಷ್ಟಿಯನ್ನು ಗಮನಿಸಿರಿ

ಒಬ್ಬ ಕಲಾವಿದನ ವ್ಯಕ್ತಿತ್ವವನ್ನು ಅವನ ಚಿತ್ರಕಲೆಗಳಲ್ಲಿ ನೋಡಸಾಧ್ಯವಿದೆ. ತದ್ರೀತಿಯಲ್ಲಿ, ವಿಶ್ವದ ವಿನ್ಯಾಸಕನೂ ಸೃಷ್ಟಿಕರ್ತನೂ ಆದ ಯೆಹೋವನ ‘ಕಣ್ಣಿಗೆ ಕಾಣದಿರುವ ಗುಣಲಕ್ಷಣಗಳನ್ನು’ ಸೃಷ್ಟಿಯಲ್ಲಿ ಸ್ಪಷ್ಟವಾಗಿ ನೋಡಸಾಧ್ಯವಿದೆ. (ರೋಮಾಪುರ 1:20) ಯೆಹೋವನ ಕೈಕೆಲಸವನ್ನು ನಾವು ಜಾಗರೂಕತೆಯಿಂದ ಗಮನಿಸುವಾಗ, ಆತನ ವ್ಯಕ್ತಿತ್ವದ ಕುರಿತಾದ ಹೆಚ್ಚು ಉತ್ತಮವಾದ ತಿಳಿವಳಿಕೆಯನ್ನು ನಾವು ಪಡೆಯುತ್ತೇವೆ, ಮತ್ತು ಈ ರೀತಿಯಲ್ಲಿ ಆತನು ನಮಗೆ ಹೆಚ್ಚು ನೈಜವಾಗುತ್ತಾನೆ.

ದೇವರ ಸೃಷ್ಟಿಯನ್ನು ನೀವು ಹೆಚ್ಚು ನಿಕಟವಾಗಿ ಗಮನಿಸುವಲ್ಲಿ, ಆತನ ಗುಣಗಳ ವಾಸ್ತವಿಕತೆಯಿಂದ ನೀವು ಗಾಢವಾಗಿ ಪ್ರಭಾವಿಸಲ್ಪಡುವಿರಿ. ಉದಾಹರಣೆಗಾಗಿ, ಪಕ್ಷಿಗಳ ಯಾನ ಸಾಮರ್ಥ್ಯಗಳ ಕುರಿತಾದ ಮಾಹಿತಿಯು, ಯೆಹೋವನ ವಿವೇಕಕ್ಕಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸಬಹುದು. ವಿಶ್ವದ ಕುರಿತಾಗಿ ಓದುವಾಗ, ಕ್ಷೀರ ಪಥದ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಪ್ರಯಾಣಿಸಲು ಸುಮಾರು 1,00,000 ಜ್ಯೋತಿವರ್ಷಗಳು ಹಿಡಿಯುವವು, ಮತ್ತು ಇದು ಬಾಹ್ಯಾಕಾಶದಾದ್ಯಂತವಿರುವ ಸುಮಾರು 1,00,00,00,00,000 ಆಕಾಶಗಂಗೆಗಳಲ್ಲಿ ಕೇವಲ ಒಂದಾಗಿದೆ ಎಂಬುದನ್ನು ಕಲಿಯುವಿರಿ. ಸೃಷ್ಟಿಕರ್ತನ ವಿವೇಕದ ವಾಸ್ತವಿಕತೆಯನ್ನು, ಇದು ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸುವುದಿಲ್ಲವೊ?

ನಿಶ್ಚಯವಾಗಿಯೂ ಯೆಹೋವನ ವಿವೇಕವು ನೈಜವಾಗಿದೆ! ಆದರೆ ಇದು ನಿಮಗೆ ಏನನ್ನು ಅರ್ಥೈಸುತ್ತದೆ? ನಮ್ಮಲ್ಲಿ ಯಾರಾದರೂ, ಪ್ರಾರ್ಥನೆಯ ಮೂಲಕ ಹೇಳುವ ಸಮಸ್ಯೆಗಳಿಂದ ಖಂಡಿತವಾಗಿಯೂ ಆತನು ಗೊಂದಲಕ್ಕೀಡಾಗಲಾರನು. ಹೌದು, ಸೃಷ್ಟಿಯ ಕುರಿತಾದ ಅಲ್ಪವಾದ ಜ್ಞಾನ ಕೂಡ, ಯೆಹೋವನನ್ನು ನಿಮಗೆ ಹೆಚ್ಚು ನೈಜವನ್ನಾಗಿ ಮಾಡಬಲ್ಲದು.

ಯೆಹೋವನೊಂದಿಗೆ ನಡೆಯಿರಿ

ಯೆಹೋವನು ಎಷ್ಟು ನೈಜವಾಗಿದ್ದಾನೆಂಬುದನ್ನು ನೀವು ವೈಯಕ್ತಿಕವಾಗಿ ಅನುಭವಿಸಬಲ್ಲಿರೊ? ಹೌದು, ನೀವು ನಂಬಿಗಸ್ತ ಮೂಲಪಿತೃನಾದ ನೋಹನಂತೆ ಇರುವುದಾದರೆ ಅನುಭವಿಸಬಲ್ಲಿರಿ. ಅವನು ಯಾವಾಗಲೂ ಯೆಹೋವನಿಗೆ ವಿಧೇಯನಾಗಿದ್ದನು. ಎಷ್ಟರ ಮಟ್ಟಿಗೆಯೆಂದರೆ, “ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು” ಎಂದು ಹೇಳಸಾಧ್ಯವಿತ್ತು. (ಆದಿಕಾಂಡ 6:9) ಯೆಹೋವನು ತನ್ನ ಪಕ್ಕದಲ್ಲಿಯೇ ನಡೆಯುತ್ತಿದ್ದಾನೊ ಎಂಬಂತೆ ನೋಹನು ಜೀವಿಸಿದನು. ನಿಮಗೂ ದೇವರು ಅಷ್ಟು ನೈಜವಾಗಿರಬಲ್ಲನು.

ನೀವು ದೇವರೊಂದಿಗೆ ನಡೆಯುತ್ತಿರುವಲ್ಲಿ, ಶಾಸ್ತ್ರೀಯ ವಾಗ್ದಾನಗಳಲ್ಲಿ ಭರವಸೆಯನ್ನಿಡುವಿರಿ ಮತ್ತು ಅವುಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವಿರಿ. ದೃಷ್ಟಾಂತಕ್ಕಾಗಿ, ನೀವು ಯೇಸುವಿನ ಈ ಮಾತುಗಳನ್ನು ನಂಬುವಿರಿ: “ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:25-33) ನೀವು ನಿರೀಕ್ಷಿಸುವಂತಹ ರೀತಿಯಲ್ಲೇ ಯೆಹೋವನು ಯಾವಾಗಲೂ ಒದಗಿಸಲಿಕ್ಕಿಲ್ಲವೆಂಬುದು ನಿಜ. ಆದರೆ, ನೀವು ಪ್ರಾರ್ಥಿಸಿ ತದನಂತರ ದೇವರ ಸಹಾಯವನ್ನು ಪಡೆಯುವಲ್ಲಿ, ಆತನು ನಿಮಗೆ ಪಕ್ಕದಲ್ಲೇ ಇರುವ ಒಬ್ಬ ವ್ಯಕ್ತಿಯಷ್ಟೇ ನೈಜವಾಗಿರುವನು.

ದೇವರೊಂದಿಗೆ ನಡೆಯುವುದರಲ್ಲಿ ಪಟ್ಟುಹಿಡಿಯುವಾಗ, ಯೆಹೋವನೊಂದಿಗೆ ಅಂತಹ ಒಂದು ಆಪ್ತ ಸಂಬಂಧವು ಬೆಳೆಯುತ್ತದೆ. ಅಸಂಖ್ಯಾತ ಕಷ್ಟಗಳನ್ನು ತಾಳಿಕೊಂಡಿರುವ, ಸ್ಪ್ಯಾನಿಷ್‌ ಭಾಷೆಯನ್ನಾಡುವ ಒಬ್ಬ ಸಾಕ್ಷಿಯಾದ ಮಾನ್ವಾಲಾಳನ್ನು ಪರಿಗಣಿಸಿರಿ. ಅವಳು ಹೇಳುವುದು: “ನಾನು ತೊಂದರೆಯಲ್ಲಿ ಅಥವಾ ಅಗತ್ಯದಲ್ಲಿರುವಾಗ, ಜ್ಞಾನೋಕ್ತಿ 18:10ರಲ್ಲಿರುವ ಮೂಲತತ್ವವನ್ನು ಅನ್ವಯಿಸಿದ್ದೇನೆ. ನಾನು ಸಹಾಯಕ್ಕಾಗಿ ಯೆಹೋವನ ಬಳಿ ಧಾವಿಸುತ್ತೇನೆ. ಆತನು ಯಾವಾಗಲೂ ನನಗೆ ‘ಬಲವಾದ ಬುರುಜು’ ಆಗಿದ್ದಾನೆ.” ಯೆಹೋವನ ಮೇಲೆ ಆತುಕೊಂಡು, ಆತನ ಬೆಂಬಲವನ್ನು ಅನುಭವಿಸಿರುವ 36 ವರ್ಷಗಳ ಬಳಿಕ ಮಾನ್ವಾಲಾ ಇದನ್ನು ಹೇಳಸಾಧ್ಯವಾಯಿತು.

ನೀವು ಯೆಹೋವನನ್ನು ನಿಮ್ಮ ಭರವಸೆಯನ್ನಾಗಿ ಮಾಡಲು ಈಗ ತಾನೇ ಆರಂಭಿಸುತ್ತಿದ್ದೀರೊ? ಆತನೊಂದಿಗಿನ ನಿಮ್ಮ ಸಂಬಂಧವು ಹೇಗಿರಬೇಕೆಂದು ಬಯಸುತ್ತೀರೊ ಅದು ಇನ್ನೂ ಆ ಹಂತವನ್ನು ತಲಪದಿರುವಲ್ಲಿ, ನಿರುತ್ಸಾಹಗೊಳ್ಳಬೇಡಿರಿ. ದೇವರೊಂದಿಗೆ ನಡೆಯುತ್ತಿರುವ ಒಬ್ಬ ವ್ಯಕ್ತಿಯಂತೆ ಪ್ರತಿಯೊಂದು ದಿನವನ್ನು ಕಳೆಯಿರಿ. ನೀವು ನಂಬಿಗಸ್ತಿಕೆಯ ಜೀವನ ನಮೂನೆಯನ್ನು ರೂಪಿಸುತ್ತಿರುವಾಗ, ನೀವು ಯೆಹೋವನೊಂದಿಗೆ ಹೆಚ್ಚು ಆಪ್ತ ಸಂಬಂಧದಲ್ಲಿ ಆನಂದಿಸಲಾರಂಭಿಸುವಿರಿ.—ಕೀರ್ತನೆ 25:14; ಜ್ಞಾನೋಕ್ತಿ 3:26, 32.

ದೇವರೊಂದಿಗೆ ನಡೆಯುವ ಇನ್ನೊಂದು ವಿಧವು, ಆತನ ಸೇವೆಯಲ್ಲಿ ತಲ್ಲೀನರಾಗಿರುವುದೇ ಆಗಿದೆ. ರಾಜ್ಯ ಸಾರುವಿಕೆಯ ಚಟುವಟಿಕೆಯಲ್ಲಿ ನೀವು ಒಳಗೂಡುವಾಗ, ನೀವು ಯೆಹೋವನೊಂದಿಗೆ ಒಬ್ಬ ಜೊತೆಕೆಲಸಗಾರರಾಗಿದ್ದೀರಿ. (1 ಕೊರಿಂಥ 3:9) ಇದರ ಕುರಿತಾಗಿ ಅರಿವುಳ್ಳವರಾಗಿರುವುದು, ದೇವರನ್ನು ನಿಮಗೆ ಹೆಚ್ಚು ನೈಜವನ್ನಾಗಿ ಮಾಡುವುದು.

ಕೀರ್ತನೆಗಾರನು ಪ್ರೇರಿಸುವುದು: “ನಿನ್ನ . . . ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.” (ಕೀರ್ತನೆ 37:5) ನಿಮಗಿರುವ ಯಾವುದೇ ಹೊರೆಗಳನ್ನು ಅಥವಾ ಚಿಂತೆಗಳನ್ನು ಯೆಹೋವನ ಮೇಲೆ ಹಾಕಲು ಎಂದೂ ತಪ್ಪಬೇಡಿರಿ. ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಯಾವಾಗಲೂ ಆತನ ಬಳಿ ಹೋಗಿರಿ. ನೀವು ಯೆಹೋವ ದೇವರ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುವಲ್ಲಿ ಮತ್ತು ಆತನಲ್ಲಿ ಸಂಪೂರ್ಣ ಭರವಸೆಯನ್ನಿಡುವಲ್ಲಿ, ನಿಮ್ಮ ಪರವಾಗಿ ಆತನು ಕ್ರಿಯೆಗೈಯಲು ತಪ್ಪದಿರುವನೆಂಬ ಅರಿವು, ನಿಮಗೆ ಸುರಕ್ಷೆಯ ಅನಿಸಿಕೆಯನ್ನು ನೀಡುವುದು. ನಿಮ್ಮ ವೈಯಕ್ತಿಕ ಚಿಂತೆಗಳನ್ನು ಯೆಹೋವನಿಗೆ ತಿಳಿಸುವಾಗ, ನೀವು ಭರವಸೆಯುಳ್ಳವರಾಗಿದ್ದೀರೊ? ಒಂದು ವೇಳೆ ದೇವರು ನಿಮಗೆ ನೈಜವಾಗಿರುವಲ್ಲಿ, ನೀವು ಭರವಸೆಯುಳ್ಳವರಾಗಿರುವಿರಿ.

[ಅಧ್ಯಯನ ಪ್ರಶ್ನೆಗಳು]

a ಇನ್ನೊಂದು ಉದಾಹರಣೆಯೋಪಾದಿ, 1 ಅರಸುಗಳು 13:1-3ರಲ್ಲಿ ಮುಂತಿಳಿಸಲ್ಪಟ್ಟಿರುವ, ಯಾರೊಬ್ಬಾಮನ ವೇದಿಯ ಮಲಿನಗೊಳಿಸುವಿಕೆಯ ಕುರಿತಾಗಿ ಓದಿರಿ. ಆನಂತರ, 2 ಅರಸುಗಳು 23:16-18ರಲ್ಲಿ ದಾಖಲಿಸಲ್ಪಟ್ಟಿರುವ ನೆರವೇರಿಕೆಯನ್ನು ಗಮನಿಸಿರಿ.

[ಪುಟ 21 ರಲ್ಲಿರುವ ಚಿತ್ರ]

ನಿಮ್ಮ ಅಭ್ಯಾಸದ ಅವಧಿಗಳು ನಿಮ್ಮ ನಂಬಿಕೆಯನ್ನು ಬಲಪಡಿಸುವಂತಹದ್ದಾಗಿ ಇರುವಂತೆ ಮಾಡಿರಿ

[ಪುಟ 23 ರಲ್ಲಿರುವ ಚಿತ್ರ]

ಕ್ರಮವಾದ, ಕಟ್ಟಾಸಕ್ತಿಯ ಪ್ರಾರ್ಥನೆಗಾಗಿ ಸಮಯ ಬದಿಗಿಡಿರಿ

[ಪುಟ 23 ರಲ್ಲಿರುವ ಚಿತ್ರ]

ದೇವರ ಗುಣಗಳು ಸೃಷ್ಟಿಯಲ್ಲಿ ಹೇಗೆ ವ್ಯಕ್ತವಾಗಿವೆ ಎಂಬುದನ್ನು ಗಮನಿಸಿರಿ

[Credit Lines]

Hummingbird: U.S. Fish and Wildlife Service, Washington, D.C./Dean Biggins; stars: Photo: Copyright IAC/RGO 1991, Dr. D. Malin et al, Isaac Newton Telescope, Roque de los Muchachos Observatory, La Palma, Canary Islands

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ