“ತವಕದಿಂದ ನಿರೀಕ್ಷಿಸುತ್ತಾ” ಕಾಯುತ್ತಿರುವುದು
“ದೇವಪುತ್ರರು ಪ್ರಕಟವಾಗುವುದಕ್ಕಾಗಿ, ಸೃಷ್ಟಿಯು ತವಕದಿಂದ ನಿರೀಕ್ಷಿಸುತ್ತಾ ಕಾಯುತ್ತಿದೆ.”—ರೋಮಾಪುರ 8:19, NW.
1. ಇಂದಿನ ಕ್ರೈಸ್ತರು ಮತ್ತು ಪ್ರಥಮ ಶತಮಾನದ ಕ್ರೈಸ್ತರ ಪರಿಸ್ಥಿತಿಯ ನಡುವೆ ಯಾವ ಹೋಲಿಕೆಯಿದೆ?
ಇಂದು ನಿಜ ಕ್ರೈಸ್ತರ ಪರಿಸ್ಥಿತಿಯು, ಪ್ರಥಮ ಶತಮಾನದ ಕ್ರೈಸ್ತರ ಪರಿಸ್ಥಿತಿಯನ್ನು ಹೋಲುತ್ತದೆ. ಮೆಸ್ಸೀಯನು ಯಾವಾಗ ಕಾಣಿಸಿಕೊಳ್ಳುವನೆಂಬುದನ್ನು ಗುರುತಿಸಲು, ಆ ಸಮಯದಲ್ಲಿದ್ದ ಯೆಹೋವನ ಸೇವಕರಿಗೆ ಒಂದು ಪ್ರವಾದನೆಯು ಸಹಾಯಮಾಡಿತು. (ದಾನಿಯೇಲ 9:24-26) ಅದೇ ಪ್ರವಾದನೆಯು ಯೆರೂಸಲೇಮಿನ ನಾಶನದ ಕುರಿತಾಗಿ ಮುಂತಿಳಿಸಿದರೂ, ಆ ನಗರವು ಯಾವಾಗ ನಾಶವಾಗುವುದೆಂಬುದನ್ನು ಕ್ರೈಸ್ತರು ಮುಂಚಿತವಾಗಿಯೇ ತಿಳಿದುಕೊಳ್ಳುವಂತೆ ಮಾಡುವ ಯಾವುದೇ ಮೂಲಾಂಶಗಳು ಅದರಲ್ಲಿರಲಿಲ್ಲ. (ದಾನಿಯೇಲ 9:26ಬಿ, 27) ತದ್ರೀತಿಯಲ್ಲಿ, 19ನೆಯ ಶತಮಾನದ ಬೈಬಲ್ ವಿದ್ಯಾರ್ಥಿಗಳು ನಿರೀಕ್ಷಿಸುತ್ತಾ ಇರುವಂತೆ, ದೈವಾನುಗ್ರಹದಿಂದ ನೀಡಲ್ಪಟ್ಟ ಒಂದು ಪ್ರವಾದನೆಯು ಸಹಾಯಮಾಡಿತು. ದಾನಿಯೇಲ 4:25ರ “ಏಳು ಕಾಲಗಳ”ನ್ನು, “ಅನ್ಯಜನಾಂಗಗಳ ಸಮಯ”ಗಳೊಂದಿಗೆ ಸಂಬಂಧಿಸುವ ಮೂಲಕ, ಕ್ರಿಸ್ತನು 1914ರಲ್ಲಿ ರಾಜ್ಯಾಧಿಕಾರವನ್ನು ಪಡೆದುಕೊಳ್ಳುವನೆಂಬುದನ್ನು ಅವರು ನಿರೀಕ್ಷಿಸಿದರು. (ಲೂಕ 21:24, ಕಿಂಗ್ ಜೇಮ್ಸ್ ವರ್ಷನ್; ಯೆಹೆಜ್ಕೇಲ 21:25-27) ದಾನಿಯೇಲನ ಪುಸ್ತಕದಲ್ಲಿ ಅನೇಕ ಪ್ರವಾದನೆಗಳಿರುವುದಾದರೂ, ಇವುಗಳಲ್ಲಿ ಯಾವುದೇ ಪ್ರವಾದನೆಯು, ಸೈತಾನನ ಇಡೀ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುವುದೆಂಬುದನ್ನು ನಿಷ್ಕೃಷ್ಟವಾಗಿ ಲೆಕ್ಕಮಾಡಲು ಸದ್ಯದ ಬೈಬಲ್ ವಿದ್ಯಾರ್ಥಿಗಳನ್ನು ಶಕ್ತಗೊಳಿಸುವುದಿಲ್ಲ. (ದಾನಿಯೇಲ 2:31-44; 8:23-25; 11:36, 44, 45) ಆದರೆ, ನಾವು “ಅಂತ್ಯ ಕಾಲದಲ್ಲಿ” ಜೀವಿಸುತ್ತಿರುವುದರಿಂದ ಇದು ಬೇಗನೆ ಸಂಭವಿಸುವುದು.—ದಾನಿಯೇಲ 12:4.a
ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಎಚ್ಚರ
2, 3. (ಎ) ರಾಜ್ಯ ಅಧಿಕಾರದಲ್ಲಿರುವ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂಬುದರ ಪ್ರಮುಖ ರುಜುವಾತಿನಲ್ಲಿ ಏನು ಒಳಗೂಡಿದೆ? (ಬಿ) ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಕ್ರೈಸ್ತರು ಎಚ್ಚರವಾಗಿರಬೇಕೆಂಬುದನ್ನು ಯಾವುದು ತೋರಿಸುತ್ತದೆ?
2 1914ರಲ್ಲಿ ಕ್ರಿಸ್ತನಿಗೆ ರಾಜ್ಯಾಧಿಕಾರವು ಕೊಡಲ್ಪಡುವ ಮುಂಚೆಯೇ, ಒಂದು ಪ್ರವಾದನೆಯು, ಕ್ರೈಸ್ತರು ನಿರೀಕ್ಷಿಸುತ್ತಾ ಇರುವಂತೆ ಮಾಡಿತೆಂಬುದು ನಿಜ. ಆದರೆ ತನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತು ಕ್ರಿಸ್ತನು ಕೊಟ್ಟ “ಸೂಚನೆ”ಯಲ್ಲಿ, ಘಟನೆಗಳು ಪ್ರಧಾನವಾಗಿವೆ. ಮತ್ತು ಇವುಗಳಲ್ಲಿ ಹೆಚ್ಚಿನದ್ದನ್ನು, ಅವನ ಸಾನ್ನಿಧ್ಯವು ಆರಂಭಗೊಂಡ ನಂತರ ನೋಡಬಹುದಿತ್ತು. ಆ ಘಟನೆಗಳು—ಯುದ್ಧಗಳು, ಆಹಾರದ ಅಭಾವಗಳು, ಭೂಕಂಪಗಳು, ಅಂಟುರೋಗಗಳು, ಅಧಿಕ ನಿಯಮರಾಹಿತ್ಯತೆ, ಕ್ರೈಸ್ತರ ಹಿಂಸೆ, ಮತ್ತು ರಾಜ್ಯದ ಸುವಾರ್ತೆಯ ಲೋಕವ್ಯಾಪಕ ಸಾರುವಿಕೆ—ಇಂದು ರಾಜ್ಯ ಅಧಿಕಾರದಲ್ಲಿರುವ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂಬುದಕ್ಕೆ ಪ್ರಮುಖ ರುಜುವಾತಾಗಿವೆ.—ಮತ್ತಾಯ 24:3-14; ಲೂಕ 21:10, 11.
3 ಆದರೂ, ಯೇಸು ತನ್ನ ಶಿಷ್ಯರನ್ನು ಬೀಳ್ಕೊಡುವಾಗ ಕೊಟ್ಟ ಸಲಹೆಯ ತಾತ್ಪರ್ಯವು, “ನೋಡಿಕೊಳ್ಳಿರಿ, ಜಾಗರೂಕರಾಗಿರಿ . . . ಎಚ್ಚರವಾಗಿರಿ” ಎಂಬುದೇ ಆಗಿತ್ತು. (ಮಾರ್ಕ 13:33, 37; ಲೂಕ 21:36) ಎಚ್ಚರವಾಗಿರುವಂತೆ ಕೊಡಲ್ಪಟ್ಟ ಈ ಉತ್ತೇಜನದ ಪೂರ್ವಾಪರ ವಚನಗಳನ್ನು ಗಮನವಿಟ್ಟು ಓದುವಾಗ, ಕ್ರಿಸ್ತನು ತನ್ನ ಸಾನ್ನಿಧ್ಯದ ಆರಂಭದ ಸೂಚನೆಗಾಗಿ ಎಡೆಬಿಡದೆ ಗಮನಿಸುತ್ತಾ ಇರುವುದರ ಕುರಿತು ಪ್ರಮುಖವಾಗಿ ಮಾತಾಡುತ್ತಿರಲಿಲ್ಲವೆಂದು ತೋರಿಸುತ್ತದೆ. ಅದಕ್ಕೆ ಬದಲಾಗಿ, ತನ್ನ ಸಾನ್ನಿಧ್ಯದ ಸಮಯದಲ್ಲಿ ಎಚ್ಚರವಾಗಿರಬೇಕೆಂದು ಅವನು ತನ್ನ ನಿಜ ಶಿಷ್ಯರಿಗೆ ಆಜ್ಞಾಪಿಸುತ್ತಿದ್ದನು. ನಿಜ ಕ್ರೈಸ್ತರು ಯಾವುದಕ್ಕಾಗಿ ಎಚ್ಚರವಾಗಿರಬೇಕಿತ್ತು?
4. ಯೇಸು ಕೊಟ್ಟ ಸೂಚನೆಯಿಂದ ಯಾವ ಉದ್ದೇಶವು ಪೂರೈಸಲ್ಪಡಲಿದೆ?
4 “ಅದು [ಯೆಹೂದಿ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ನಡಿಸುವ ಘಟನೆಗಳು] ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [“ಸಾನಿಧ್ಯಕ್ಕೂ,” NW] ಯುಗದ ಸಮಾಪ್ತಿಗೂ [“ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ,” NW] ಸೂಚನೆಯೇನು?” ಎಂಬ ಪ್ರಶ್ನೆಗೆ ಉತ್ತರವಾಗಿ ಯೇಸು ತನ್ನ ಮಹಾ ಪ್ರವಾದನೆಯನ್ನು ಕೊಟ್ಟನು. (ಮತ್ತಾಯ 24:3) ಮುಂತಿಳಿಸಲ್ಪಟ್ಟ ಸೂಚನೆಯು, ಕ್ರಿಸ್ತನ ಸಾನ್ನಿಧ್ಯವನ್ನು ಮಾತ್ರವಲ್ಲ, ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕೆ ನಡೆಸುವ ಘಟನೆಗಳನ್ನೂ ಗುರುತಿಸಲು ಸಹಾಯಮಾಡಲಿತ್ತು.
5. ಆತ್ಮಿಕವಾಗಿ ಉಪಸ್ಥಿತನಾಗಿರುವಾಗಲೂ, ತಾನು “ಬರು”ತ್ತಿರುವೆನೆಂದು ಯೇಸು ಹೇಗೆ ತೋರಿಸಿದನು?
5 ತನ್ನ “ಸಾನ್ನಿಧ್ಯ”ದ (ಗ್ರೀಕ್, ಪಾರೂಸಿಯ) ಸಮಯದಲ್ಲಿ ತಾನು ಶಕ್ತಿ ಮತ್ತು ಮಹಿಮೆಯಿಂದ ಬರುವೆನೆಂಬುದನ್ನು ಯೇಸು ತೋರಿಸಿದನು. ಅಂತಹ “ಬರೋಣ”ದ (ಎರ್ಖೊಮಾಯ್ ಎಂಬ ಗ್ರೀಕ್ ಪದದ ವಿಭಿನ್ನ ರೂಪಗಳಿಂದ ಅರ್ಥನಿರೂಪಿಸಲ್ಪಟ್ಟಿದೆ) ಕುರಿತಾಗಿ, ಅವನು ಘೋಷಿಸಿದ್ದು: “ಆಗ ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯ ಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು. . . . ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆತನು [ಕ್ರಿಸ್ತನು] ಹತ್ತಿರದಲ್ಲಿದ್ದಾನೆ, ಬಾಗಲಲ್ಲೇ ಇದ್ದಾನೆ ಎಂದು ತಿಳುಕೊಳ್ಳಿರಿ. . . . ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. . . . ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 24:30, 32, 33, 42, 44.
ಯೇಸು ಕ್ರಿಸ್ತನು ಬರುವುದು ಏಕೆ?
6. “ಮಹಾ ಬಾಬೆಲಿನ” ನಾಶನವು ಹೇಗೆ ಸಂಭವಿಸುವುದು?
6 1914ರಿಂದ ರಾಜನಾಗಿ ಉಪಸ್ಥಿತನಾಗಿರುವುದಾದರೂ, ಅವನು ದುಷ್ಟರೆಂದು ಕಂಡುಕೊಳ್ಳುವವರನ್ನು ನಾಶಗೊಳಿಸುವ ಮುಂಚೆ, ವ್ಯವಸ್ಥೆಗಳ ಮತ್ತು ವ್ಯಕ್ತಿಗಳನ್ನು ಇನ್ನೂ ತೀರ್ಪುಮಾಡಬೇಕು. (2 ಕೊರಿಂಥ 5:10ನ್ನು ಹೋಲಿಸಿರಿ.) ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ “ಮಹಾ ಬಾಬೆಲನ್ನು” ನಾಶಗೊಳಿಸುವ ವಿಚಾರವನ್ನು, ಯೆಹೋವನು ಬಹು ಬೇಗನೆ ರಾಜಕೀಯ ಧುರೀಣರ ಮನಸ್ಸುಗಳಲ್ಲಿ ಹಾಕುವನು. (ಪ್ರಕಟನೆ 17:4, 5, 16, 17) ಯೇಸು ಕ್ರಿಸ್ತನು, “ಮಹಾ ಬಾಬೆಲಿನ” ಒಂದು ಪ್ರಮುಖ ಭಾಗವಾಗಿರುವ ಕ್ರೈಸ್ತಪ್ರಪಂಚದ ಧರ್ಮಭ್ರಷ್ಟ ಪಾದ್ರಿವರ್ಗವಾದ “ಅಧರ್ಮಸ್ವರೂಪ”ನನ್ನು ನಾಶಗೊಳಿಸುವನೆಂದು ಅಪೊಸ್ತಲ ಪೌಲನು ಸ್ಪಷ್ಟವಾಗಿ ತಿಳಿಸಿದನು. ಪೌಲನು ಬರೆದುದು: “ಅಧರ್ಮಸ್ವರೂಪನು ಕಾಣಬರುವನು; ಅವನನ್ನು ಯೇಸು ಕರ್ತನು ತನ್ನ ಬಾಯ ಉಸುರಿನಿಂದ ಕೊಲ್ಲುವನು, ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ಸಂಹರಿಸುವನು.”—2 ಥೆಸಲೊನೀಕ 2:3, 8.
7. ಮನುಷ್ಯ ಕುಮಾರನು ತನ್ನ ಮಹಿಮೆಯಲ್ಲಿ ಆಗಮಿಸುವಾಗ, ಅವನು ಯಾವ ತೀರ್ಪನ್ನು ಕೊಡುವನು?
7 ನಿಕಟ ಭವಿಷ್ಯತ್ತಿನಲ್ಲಿ, ಕ್ರಿಸ್ತನು ರಾಷ್ಟ್ರಗಳ ಜನರ ತೀರ್ಪನ್ನು ಮಾಡುವನು. ಇನ್ನೂ ಭೂಮಿಯ ಮೇಲೆ ಇರುವ ತನ್ನ ಸಹೋದರರೊಂದಿಗೆ ಆ ಜನರು ವರ್ತಿಸಿದ ರೀತಿಯ ಆಧಾರದ ಮೇಲೆ ಯೇಸು ಇದನ್ನು ಮಾಡುವನು. ನಾವು ಹೀಗೆ ಓದುತ್ತೇವೆ: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು. . . . ಅದಕ್ಕೆ ಅರಸನು [ಕುರಿಗಳಿಗೆ], “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅನ್ನುವನು. ಮತ್ತು ಇವರು [ಆಡುಗಳು] ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.”—ಮತ್ತಾಯ 25:31-46.
8. ಭಕ್ತಿಹೀನರ ಮೇಲೆ ತೀರ್ಪನ್ನು ಜಾರಿಗೊಳಿಸಲಿಕ್ಕಾಗಿರುವ ಕ್ರಿಸ್ತನ ಬರೋಣವನ್ನು ಪೌಲನು ಹೇಗೆ ವರ್ಣಿಸುತ್ತಾನೆ?
8 ಕುರಿ ಮತ್ತು ಆಡುಗಳ ಸಾಮ್ಯದಲ್ಲಿ ತೋರಿಸಲ್ಪಟ್ಟಂತೆ, ಎಲ್ಲ ಭಕ್ತಿಹೀನ ಜನರ ಮೇಲೆ ಯೇಸು ಕೊನೆಯ ತೀರ್ಪನ್ನು ಜಾರಿಗೊಳಿಸುವನು. ಬಾಧೆಪಡುತ್ತಿದ್ದ ಜೊತೆ ವಿಶ್ವಾಸಿಗಳಿಗೆ ಪೌಲನು ಈ ಆಶ್ವಾಸನೆಯನ್ನು ಕೊಟ್ಟನು: “ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ [“ಪ್ರಕಟವಾಗುವ,” NW] ಕಾಲದಲ್ಲಿ ಅದನ್ನು ಕೊಡುವನು. ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು. ಆ ದಿನದಲ್ಲಿ ಆತನು ತನ್ನ ಪವಿತ್ರರ ಮೂಲಕ ಪ್ರಭಾವಹೊಂದುವವನಾಗಿಯೂ ನಾವು ನಿಮಗೆ ಹೇಳಿದ ಸಾಕ್ಷಿಯನ್ನು ನಂಬಿದವರೆಲ್ಲರ ಮೂಲಕ ತನ್ನ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವವನಾಗಿಯೂ ಬರುವಾಗ ಅಂಥವರು ಕರ್ತನ ಸಮ್ಮುಖಕ್ಕೂ ಆತನ ಪರಾಕ್ರಮದ ವೈಭವಕ್ಕೂ ದೂರವಾಗಿ ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು.” (2 ಥೆಸಲೊನೀಕ 1:6-10) ಉದ್ರೇಕಗೊಳಿಸುವ ಈ ಎಲ್ಲ ಘಟನೆಗಳು ನಮ್ಮ ಮುಂದೆ ಇರುವುದರಿಂದ, ನಾವು ನಂಬಿಕೆಯನ್ನು ಪ್ರದರ್ಶಿಸುತ್ತಾ, ಕ್ರಿಸ್ತನ ಬರೋಣಕ್ಕಾಗಿ ತವಕಿಸುತ್ತಾ ಎಚ್ಚರವಾಗಿರಬೇಕಲ್ಲವೊ?
ಕ್ರಿಸ್ತನ ಪ್ರಕಟನೆಗಾಗಿ ತವಕದಿಂದ ಕಾಯುತ್ತಿರುವುದು
9, 10. ಭೂಮಿಯ ಮೇಲೆ ಇನ್ನೂ ಉಳಿದಿರುವ ಅಭಿಷಿಕ್ತರು, ಯೇಸು ಕ್ರಿಸ್ತನ ಪ್ರಕಟನೆಗಾಗಿ ತವಕದಿಂದ ಕಾಯುತ್ತಿರುವುದು ಏಕೆ?
9 “ಯೇಸುಕರ್ತನು ಆಕಾಶದಿಂದ ಪ್ರತ್ಯಕ್ಷನಾಗು [“ಪ್ರಕಟವಾಗು,” NW]”ವುದು, ದುಷ್ಟರ ಮೇಲೆ ನಾಶನವನ್ನು ತರಲಿಕ್ಕಾಗಿ ಮಾತ್ರವಲ್ಲ, ನೀತಿವಂತರನ್ನು ಬಹುಮಾನಿಸಲಿಕ್ಕಾಗಿಯೂ ಇರುವುದು. ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಭೂಮಿಯ ಮೇಲೆ ಇನ್ನೂ ಉಳಿದಿರುವವರು, ಕ್ರಿಸ್ತನ ಪ್ರಕಟನೆಯ ಮುಂಚೆ ಇನ್ನೂ ಕಷ್ಟಾನುಭವಿಸಬಹುದಾದರೂ, ಅವರು ತಮ್ಮ ಮಹಿಮಾಭರಿತ ಸ್ವರ್ಗೀಯ ನಿರೀಕ್ಷೆಯಲ್ಲಿ ಹರ್ಷಿಸುತ್ತಾರೆ. ಅಭಿಷಿಕ್ತ ಕ್ರೈಸ್ತರಿಗೆ ಅಪೊಸ್ತಲ ಪೇತ್ರನು ಬರೆದುದು: “ಆದರೆ ನೀವು ಎಷ್ಟರ ಮಟ್ಟಿಗೂ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷವುಳ್ಳವರಾಗಿರ್ರಿ; ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ.”—1 ಪೇತ್ರ 4:13.
10 ಅವರ ನಂಬಿಕೆಯ “ಶೋಧಿತ ಗುಣಮಟ್ಟವು,” ‘ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ಅವರಿಗೆ ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡು’ವಂತೆ, ಯೇಸು ಅವರನ್ನು ‘ತನ್ನ ಬಳಿಯಲ್ಲಿ ಕೂಡಿಸಿಕೊಳ್ಳುವ’ ತನಕ ನಂಬಿಗಸ್ತರಾಗಿರಲು ಅಭಿಷಿಕ್ತರು ದೃಢನಿರ್ಧಾರವುಳ್ಳವರಾಗಿದ್ದಾರೆ. (2 ಥೆಸಲೊನೀಕ 2:1; 1 ಪೇತ್ರ 1:7, NW) ಅಂತಹ ನಂಬಿಗಸ್ತ ಆತ್ಮಾಭಿಷಿಕ್ತ ಕ್ರೈಸ್ತರ ಕುರಿತಾಗಿ ಹೀಗೆ ಹೇಳಸಾಧ್ಯವಿದೆ: “ನೀವು ಯಾವ ಕೃಪಾವರದಲ್ಲಿಯೂ ಕೊರತೆಯಿಲ್ಲದವರಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯನ್ನು [“ಪ್ರಕಟನೆಯನ್ನು,” NW] ಎದುರುನೋಡುತ್ತಾ ಇದ್ದೀರಿ.”—1 ಕೊರಿಂಥ 1:6, 7.
11. ಯೇಸು ಕ್ರಿಸ್ತನ ಪ್ರಕಟನೆಗಾಗಿ ಕಾಯುತ್ತಿರುವಾಗ, ಅಭಿಷಿಕ್ತ ಕ್ರೈಸ್ತರು ಏನು ಮಾಡುತ್ತಾರೆ?
11 ಅಭಿಷಿಕ್ತ ಉಳಿಕೆಯವರಿಗೂ ಪೌಲನಂತಹ ಭಾವನೆಗಳಿವೆ. ಅವನು ಬರೆದುದು: “ನಮಗೋಸ್ಕರ ಮುಂದಿನ ಕಾಲದಲ್ಲಿ ಪ್ರತ್ಯಕ್ಷನಾಗುವ ಮಹಿಮಪದವಿಯನ್ನು ಆಲೋಚಿಸಿ ಈಗಿನ ಕಾಲದ ಕಷ್ಟಗಳು ಅಲ್ಪವೇ ಸರಿ ಎಂದು ಎಣಿಸುತ್ತೇನೆ.” (ರೋಮಾಪುರ 8:18) ತಮ್ಮ ನಂಬಿಕೆಯನ್ನು ಕಾಪಾಡಿಕೊಳ್ಳಲು ಅವರಿಗೆ ಸಮಯದ ಲೆಕ್ಕಾಚಾರಗಳ ಅಗತ್ಯವಿಲ್ಲ. ಅವರು ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರುತ್ತಾ, ತಮ್ಮ ಸಂಗಾತಿಗಳಾದ, “ಬೇರೆ ಕುರಿ”ಗಳಿಗಾಗಿ ಒಂದು ಅದ್ಭುತಕರವಾದ ಮಾದರಿಯನ್ನಿಡುತ್ತಾರೆ. (ಯೋಹಾನ 10:16) ಈ ದುಷ್ಟ ವ್ಯವಸ್ಥೆಯ ಅಂತ್ಯವು ಹತ್ತಿರವಿದೆಯೆಂದು ಈ ಅಭಿಷಿಕ್ತರಿಗೆ ತಿಳಿದಿದೆ, ಮತ್ತು ಅವರು ಪೇತ್ರನ ಉತ್ತೇಜನಕ್ಕೆ ಲಕ್ಷ್ಯಕೊಡುತ್ತಾರೆ: “ಆದದರಿಂದ ನೀವು ಮನಸ್ಸಿನ ನಡುವನ್ನು ಕಟ್ಟಿಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಭಾಗ್ಯದ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.”—1 ಪೇತ್ರ 1:13.
“ಸೃಷ್ಟಿಯು ತವಕದಿಂದ ನಿರೀಕ್ಷಿಸುತ್ತಾ ಕಾಯುತ್ತಿದೆ”
12, 13. ಮಾನವ ಸೃಷ್ಟಿಯು “ವ್ಯರ್ಥತ್ವಕ್ಕೆ ಒಳ”ಗಾದದ್ದು ಹೇಗೆ, ಮತ್ತು ಬೇರೆ ಕುರಿಗಳು ಯಾವುದಕ್ಕಾಗಿ ಹಾತೊರೆಯುತ್ತವೆ?
12 ತವಕದಿಂದ ನಿರೀಕ್ಷಿಸುತ್ತಾ ಇರಲು ಬೇರೆ ಕುರಿಗಳಿಗೆ ಸಹ ಏನಾದರೂ ಇದೆಯೊ? ನಿಶ್ಚಯವಾಗಿಯೂ ಇದೆ. ತನ್ನ ಆತ್ಮಾಭಿಷಿಕ್ತ “ಪುತ್ರ”ರಾಗಿ ಮತ್ತು ಸ್ವರ್ಗೀಯ ರಾಜ್ಯದಲ್ಲಿ “ಕ್ರಿಸ್ತನೊಂದಿಗೆ ಬಾಧ್ಯ”ರಾಗಿ ಯೆಹೋವನಿಂದ ಸ್ವೀಕರಿಸಲ್ಪಟ್ಟಿರುವವರ ಮಹಿಮಾಭರಿತ ನಿರೀಕ್ಷೆಯ ಕುರಿತಾಗಿ ಮಾತಾಡಿದ ಬಳಿಕ, ಪೌಲನು ಹೇಳಿದ್ದು: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು [“ಪ್ರಕಟವಾಗುವುದೆಂದು,” NW] ಜಗತ್ತು ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.”—ರೋಮಾಪುರ 8:14-21; 2 ತಿಮೊಥೆಯ 2:10-12.
13 ಆದಾಮನ ಪಾಪದಿಂದಾಗಿ ಅವನ ವಂಶಜರೆಲ್ಲರೂ, ಪಾಪ ಮತ್ತು ಮರಣದ ದಾಸತ್ವದಲ್ಲಿ ಜನಿಸುತ್ತಾ, “ವ್ಯರ್ಥತ್ವಕ್ಕೆ ಒಳ”ಗಾದರು. ಅಂತಹ ದಾಸತ್ವದಿಂದ ಅವರು ತಮ್ಮನ್ನು ಬಿಡಿಸಿಕೊಳ್ಳಲು ಅಶಕ್ತರಾಗಿದ್ದಾರೆ. (ಕೀರ್ತನೆ 49:7; ರೋಮಾಪುರ 5:12, 21) “ನಾಶದ ವಶದಿಂದ ಬಿಡುಗಡೆಯಾ”ಗಲು ಬೇರೆ ಕುರಿಗಳು ಎಷ್ಟೊಂದು ಹಾತೊರೆಯುತ್ತಾರೆ! ಆದರೆ ಅದು ಸಂಭವಿಸುವ ಮುಂಚೆ, ಯೆಹೋವನ ಕಾಲಗಳು ಮತ್ತು ಸಮಯಗಳಿಗನುಸಾರವಾಗಿ ಕೆಲವು ಸಂಗತಿಗಳು ಸಂಭವಿಸಲೇಬೇಕು.
14. ‘ದೇವಪುತ್ರರು ಪ್ರಕಟವಾಗುವುದರಲ್ಲಿ’ ಏನು ಅಡಕವಾಗಿರುವುದು, ಮತ್ತು ಮಾನವಕುಲವು “ನಾಶದ ವಶದಿಂದ ಬಿಡುಗಡೆ”ಯಾಗುವುದರಲ್ಲಿ ಇದು ಹೇಗೆ ಫಲಿಸುವುದು?
14 ಅಭಿಷಿಕ್ತ “ದೇವಪುತ್ರರ” ಉಳಿಕೆಯವರು ಪ್ರಥಮವಾಗಿ ‘ಪ್ರಕಟ’ವಾಗಬೇಕು. ಇದರಲ್ಲಿ ಏನು ಒಳಗೂಡಿದೆ? ಅಭಿಷಿಕ್ತರಿಗೆ ಕೊನೆಗೆ ‘ಮುದ್ರೆ ಒತ್ತಿಸಲ್ಪಟ್ಟು,’ ಕ್ರಿಸ್ತನೊಂದಿಗೆ ಆಳಲಿಕ್ಕಾಗಿ ಅವರು ಮಹಿಮೆಗೇರಿಸಲ್ಪಟ್ಟಿದ್ದಾರೆ ಎಂದು ದೇವರ ತಕ್ಕ ಸಮಯದಲ್ಲಿ ಬೇರೆ ಕುರಿಗಳಿಗೆ ವ್ಯಕ್ತವಾಗುವುದು. (ಪ್ರಕಟನೆ 7:2-4) ಸೈತಾನನ ದುಷ್ಟ ವ್ಯವಸ್ಥೆಯನ್ನು ನಾಶಗೊಳಿಸುವುದರಲ್ಲಿ ಕ್ರಿಸ್ತನೊಂದಿಗೆ ಜೊತೆಗೂಡುವಾಗಲೂ, ಪುನರುತ್ಥಿತ “ದೇವಪುತ್ರರು” ‘ಪ್ರಕಟಿಸಲ್ಪಡುವರು.’ (ಪ್ರಕಟನೆ 2:26, 27; 19:14, 15) ಅನಂತರ, ಕ್ರಿಸ್ತನ ಸಾವಿರ ವರ್ಷದಾಳ್ವಿಕೆಯ ಸಮಯದಲ್ಲಿ, ಮಾನವ “ಸೃಷ್ಟಿ”ಗೆ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳನ್ನು ನೀಡಲಿಕ್ಕಾಗಿ ಯಾಜಕ ಮಾಧ್ಯಮಗಳಾಗಿ ಅವರು ಇನ್ನೂ ಮುಂದಕ್ಕೆ ‘ಪ್ರಕಟಿಸಲ್ಪಡುವರು.’ ಇದು, ಮಾನವಕುಲವು “ನಾಶದ ವಶದಿಂದ ಬಿಡುಗಡೆಯಾಗಿ,” ಕಟ್ಟಕಡೆಗೆ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಪ್ರವೇಶಿಸುವುದರಲ್ಲಿ ಫಲಿಸುವುದು. (ರೋಮಾಪುರ 8:21; ಪ್ರಕಟನೆ 20:5; 22:1, 2) ಅಂತಹ ಭವ್ಯ ಪ್ರತೀಕ್ಷೆಗಳೊಂದಿಗೆ, “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು [“ಪ್ರಕಟವಾಗುವುದೆಂದು,” NW]” ಬೇರೆ ಕುರಿಗಳು “ತವಕದಿಂದ ನಿರೀಕ್ಷಿಸುತ್ತಿರು”ವುದು ಆಶ್ಚರ್ಯಗೊಳಿಸುವಂತಹ ಸಂಗತಿಯೊ?—ರೋಮಾಪುರ 8:19.
ಯೆಹೋವನ ತಾಳ್ಮೆಯು ರಕ್ಷಣೆಯನ್ನು ಅರ್ಥೈಸುತ್ತದೆ
15. ಘಟನೆಗಳ ವಿಷಯದಲ್ಲಿ ಯೆಹೋವನ ಕಾಲನಿಯಮನದ ಕುರಿತು ನಾವೇನನ್ನು ಎಂದೂ ಮರೆಯಬಾರದು?
15 ಯೆಹೋವನು ಮಹಾನ್ ಸಮಯಪಾಲಕನಾಗಿದ್ದಾನೆ. ಘಟನೆಗಳ ಸಂಬಂಧದಲ್ಲಿ ಅವನ ಕಾಲನಿಯಮನವು ನಿಷ್ಕೃಷ್ಟವಾಗಿ ಪರಿಣಮಿಸುವುದು. ನಾವು ವೈಯಕ್ತಿಕವಾಗಿ ನಿರೀಕ್ಷಿಸಿದಂತೆಯೇ ವಿಷಯಗಳು ಯಾವಾಗಲೂ ಸಂಭವಿಸಲಿಕ್ಕಿಲ್ಲ. ಆದರೆ ದೇವರ ಎಲ್ಲ ವಾಗ್ದಾನಗಳು ನೆರವೇರುವವೆಂದು ನಾವು ಸಂಪೂರ್ಣ ನಂಬಿಕೆಯಿಂದಿರಸಾಧ್ಯವಿದೆ. (ಯೆಹೋಶುವ 23:14) ವಿಷಯಗಳು ನಿರೀಕ್ಷಿಸಲ್ಪಟ್ಟಿರುವುದಕ್ಕಿಂತ ಹೆಚ್ಚು ಸಮಯ ಮುಂದುವರಿಯುವಂತೆ ಆತನು ಅನುಮತಿಸುತ್ತಿರಬಹುದು. ಆದರೆ ನಾವು ಆತನ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ ಮತ್ತು ಆತನ ವಿವೇಕವನ್ನು ಶ್ಲಾಘಿಸೋಣ. ಪೌಲನು ಬರೆದುದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ! ಕರ್ತನ ಮನಸ್ಸನ್ನು ತಿಳುಕೊಂಡವನಾರು? ಆತನಿಗೆ ಆಲೋಚನಾ ಕರ್ತನು ಯಾರು?”—ರೋಮಾಪುರ 11:33, 34.
16. ಯೆಹೋವನ ತಾಳ್ಮೆಯಿಂದ ಯಾರು ಪ್ರಯೋಜನಪಡೆಯುತ್ತಾರೆ?
16 ಪೇತ್ರನು ಬರೆದುದು: “ಪ್ರಿಯರೇ, ನೀವು ಇವುಗಳನ್ನು [ಹಳೆಯ “ಆಕಾಶಗಳ” ಮತ್ತು “ಭೂಮಿ”ಯ ನಾಶನ ಮತ್ತು ದೇವರ ವಾಗ್ದತ್ತ “ನೂತನಾಕಾಶ” ಮತ್ತು ನೂತನಭೂಮಂಡಲ”ದ ಸ್ಥಾಪನೆ] ಎದುರುನೋಡುವವರಾಗಿರುವದರಿಂದ ಶಾಂತರಾಗಿದ್ದು ಆತನೆದುರಿನಲ್ಲಿ [ಕೊನೆಯಲ್ಲಿ] ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡಿರಿ. ನಮ್ಮ ಕರ್ತನ ದೀರ್ಘಶಾಂತಿಯು [“ತಾಳ್ಮೆ,” NW] ನಮ್ಮ ರಕ್ಷಣಾರ್ಥವಾಗಿ ಅದೆ ಎಂದು ಎಣಿಸಿಕೊಳ್ಳಿರಿ.” ಯೆಹೋವನ ತಾಳ್ಮೆಯಿಂದಾಗಿ, ‘ಕಳ್ಳನಂತೆ ಬರುವ ಯೆಹೋವನ ದಿನ’ದಲ್ಲಿ ರಕ್ಷಿಸಲ್ಪಡಲು ಇನ್ನೂ ಕೋಟಿಗಟ್ಟಲೆ ಜನರಿಗೆ ಅವಕಾಶವನ್ನು ನೀಡಲಾಗುತ್ತಿದೆ. (2 ಪೇತ್ರ 3:9-15) ಆತನ ತಾಳ್ಮೆಯು, ನಮ್ಮಲ್ಲಿ ಪ್ರತಿಯೊಬ್ಬರು, ‘ಮನೋಭೀತಿಯಿಂದ ನಡುಗುವವರಾಗಿ ನಮ್ಮ ನಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳ’ಲಿಕ್ಕಾಗಿಯೂ ಅನುಮತಿಸುತ್ತದೆ. (ಫಿಲಿಪ್ಪಿ 2:12) ಯೇಸು ತೀರ್ಪಿಗಾಗಿ ಬರುವಾಗ, ನಾವು ಸ್ವೀಕರಿಸಲ್ಪಡಲು ಮತ್ತು “ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವ”ದರಲ್ಲಿ ಸಫಲರಾಗಲು, ನಾವು ‘ನಮ್ಮ ವಿಷಯದಲ್ಲಿ ಜಾಗರೂಕರಾಗಿ’ರಬೇಕು ಮತ್ತು “ಎಚ್ಚರವಾಗಿ”ರಬೇಕೆಂದು ಯೇಸು ಹೇಳಿದನು.—ಲೂಕ 21:34-36; ಮತ್ತಾಯ 25:31-33.
ತಾಳ್ಮೆಯಿಂದ ಕಾಯುತ್ತಾ ಇರ್ರಿ
17. ಅಪೊಸ್ತಲ ಪೌಲನ ಯಾವ ಮಾತುಗಳಿಗೆ ನಾವು ಲಕ್ಷ್ಯಕೊಡಬೇಕು?
17 ಪೌಲನು ತನ್ನ ಆತ್ಮಿಕ ಸಹೋದರರು, “ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು” ಲಕ್ಷಿಸುವಂತೆ ಉತ್ತೇಜಿಸಿದನು. (2 ಕೊರಿಂಥ 4:16-18) ಅವರ ಮುಂದೆ ಇಡಲ್ಪಟ್ಟಿದ್ದ ಸ್ವರ್ಗೀಯ ಬಹುಮಾನದ ಮೇಲಿನ ಅವರ ದೃಷ್ಟಿಯನ್ನು ಯಾವುದೇ ವಿಷಯವು ಮಬ್ಬುಗೊಳಿಸದಿರುವಂತೆ ಅವನು ಬಯಸಿದನು. ನಾವು ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಬೇರೆ ಕುರಿಗಳವರಾಗಿರಲಿ, ನಮ್ಮ ಮುಂದೆ ಇಡಲ್ಪಟ್ಟಿರುವ ಅದ್ಭುತಕರವಾದ ನಿರೀಕ್ಷೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳುತ್ತಾ, ಬಿಟ್ಟುಕೊಡದಿರೋಣ. ನಾವು ‘ತಾಳ್ಮೆಯಿಂದ ಕಾದುಕೊಂಡಿರುತ್ತಾ,’ “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ” ಎಂಬುದನ್ನು ರುಜುಪಡಿಸೋಣ.—ರೋಮಾಪುರ 8:25; ಇಬ್ರಿಯ 10:39.
18. ನಾವು ಸಮಯ ಮತ್ತು ಕಾಲಗಳನ್ನು ಭರವಸೆಯಿಂದ ಯೆಹೋವನ ಕೈಗಳಲ್ಲಿ ಏಕೆ ಬಿಡಬಹುದು?
18 ನಾವು ಭರವಸೆಯಿಂದ, ಸಮಯ ಮತ್ತು ಕಾಲಗಳನ್ನು ಯೆಹೋವನ ಕೈಗಳಲ್ಲಿ ಬಿಟ್ಟುಬಿಡಸಾಧ್ಯವಿದೆ. ಆತನ ವಾಗ್ದಾನಗಳ ನೆರವೇರಿಕೆಯು, ಆತನ ವೇಳಾಪಟ್ಟಿಗನುಸಾರ “ತಾಮಸವಾಗದು.” (ಹಬಕ್ಕೂಕ 2:3) ಅಷ್ಟರ ವರೆಗೆ, ತಿಮೊಥೆಯನಿಗೆ ಪೌಲನು ಕೊಟ್ಟ ಉತ್ತೇಜನವು, ನಮಗೆ ಹೆಚ್ಚು ಅರ್ಥಗರ್ಭಿತವಾಗಿರುತ್ತದೆ. ಅವನಂದದ್ದು: “ದೇವರ ಮುಂದೆ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕೆ ಬರುವ ಕ್ರಿಸ್ತ ಯೇಸುವಿನ ಮುಂದೆ ಆತನ ಪ್ರತ್ಯಕ್ಷತೆಯ ಮೇಲೆಯೂ ಆತನ ರಾಜ್ಯದ ಮೇಲೆಯೂ ಆಣೆಯಿಟ್ಟು ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ—ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು; . . . ಸೌವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸು.”—2 ತಿಮೊಥೆಯ 4:1-5.
19. ಯೆಹೋವನ ಜನರು ಈಗಲೂ ಏನನ್ನು ಮಾಡಲಿಕ್ಕಾಗಿ ಇದು ಸಮಯವಾಗಿದೆ, ಮತ್ತು ಏಕೆ?
19 ನಮ್ಮ ಸ್ವಂತ ಜೀವಗಳು ಮತ್ತು ನಮ್ಮ ನೆರೆಯವರ ಜೀವಗಳು ಗಂಡಾಂತರದಲ್ಲಿವೆ. ಪೌಲನು ಬರೆದುದು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಈ ದುಷ್ಟ ವಿಷಯಗಳ ವ್ಯವಸ್ಥೆಗೆ ತುಂಬ ಕಡಿಮೆ ಸಮಯವಿದೆ. ನಮ್ಮ ಮುಂದಿರುವ ರೋಮಾಂಚಕಾರಿ ಘಟನೆಗಳಿಗಾಗಿ ನಾವು ತವಕದಿಂದ ನಿರೀಕ್ಷಿಸುತ್ತಾ ಕಾಯುತ್ತಿರುವಾಗ, ತನ್ನ ಜನರು ರಾಜ್ಯದ ಸುವಾರ್ತೆಯನ್ನು ಸಾರುವುದಕ್ಕಾಗಿ ಇದು ಇನ್ನೂ ಯೆಹೋವನ ಸಮಯ ಮತ್ತು ಕಾಲವಾಗಿದೆಯೆಂಬುದರ ಕುರಿತಾಗಿ ನಾವು ಯಾವಾಗಲೂ ಅರಿವುಳ್ಳವರಾಗಿರೋಣ. ಆ ಕೆಲಸವು ಆತನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಮಾಡಲ್ಪಡಬೇಕು. ಯೇಸು ಅಂದಂತೆ, “ಆಗ ಅಂತ್ಯವು ಬರುವದು.”—ಮತ್ತಾಯ 24:14.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 10 ಮತ್ತು 11ನೆಯ ಅಧ್ಯಾಯಗಳನ್ನು ನೋಡಿರಿ.
ಪುನರ್ವಿಮರ್ಶೆ
◻ ಸಮಯದ ಲೆಕ್ಕಾಚಾರಗಳ ಸಂಬಂಧದಲ್ಲಿ, ನಮ್ಮ ಪರಿಸ್ಥಿತಿಯು ಪ್ರಥಮ ಶತಮಾನದ ಕ್ರೈಸ್ತರಿಗೆ ಹೇಗೆ ಹೋಲುತ್ತದೆ?
◻ ಕ್ರೈಸ್ತರು, ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲೂ “ಎಚ್ಚರ”ವಾಗಿರಬೇಕು ಏಕೆ?
◻ ‘ದೇವಪುತ್ರರು ಪ್ರಕಟವಾಗು’ವುದಕ್ಕಾಗಿ ಮಾನವ ಸೃಷ್ಟಿಯು ಏಕೆ ತವಕದಿಂದ ನಿರೀಕ್ಷಿಸುತ್ತಾ ಇದೆ?
◻ ಸಮಯ ಮತ್ತು ಕಾಲಗಳನ್ನು ನಾವು ಭರವಸೆಯಿಂದ ಯೆಹೋವನ ಕೈಗಳಲ್ಲಿ ಏಕೆ ಬಿಡಬಹುದು?
[ಪುಟ 17 ರಲ್ಲಿರುವ ಚಿತ್ರ]
ಕ್ರಿಸ್ತನ ಬರೋಣದ ನಿರೀಕ್ಷಣೆಯಲ್ಲಿ ಕ್ರೈಸ್ತರು ಎಚ್ಚರವಾಗಿರಬೇಕು
[ಪುಟ 18 ರಲ್ಲಿರುವ ಚಿತ್ರ]
ಅಭಿಷಿಕ್ತ ಉಳಿಕೆಯವರು ತಮ್ಮ ನಂಬಿಕೆಯನ್ನು ಸಮಯದ ಲೆಕ್ಕಾಚಾರಗಳ ಮೇಲೆ ಆಧಾರಿಸದೆ ಯೆಹೋವನ ಸೇವೆಯಲ್ಲಿ ಕಾರ್ಯಮಗ್ನರಾಗಿರಬೇಕು