ವ್ಯಕ್ತಿತ್ವವುಳ್ಳ ದೇವರಾದ ಯೆಹೋವನನ್ನು ತಿಳಿದುಕೊಳ್ಳಿರಿ
ದೇವರ ಕುರಿತ ಹಿಂದೂ ಕಲ್ಪನೆಯನ್ನು ಬೇರೆ ಧರ್ಮ ವ್ಯವಸ್ಥೆಗಳದ್ದಕ್ಕೆ ಹೋಲಿಸುತ್ತ, ಭಾರತದ ಡಾ. ಎಸ್. ರಾಧಾಕೃಷ್ಣನ್ ಅವಲೋಕಿಸುವುದು: “ಹೀಬ್ರುಗಳ ದೇವರು ಭಿನ್ನ ರೀತಿಯವನು. ಆತನು ವ್ಯಕ್ತಿತ್ವವುಳ್ಳವನೂ ಇತಿಹಾಸದಲ್ಲಿ ಕ್ರಿಯಾಶೀಲನೂ ಆಗಿದ್ದು, ಈ ವಿಕಾಸಶೀಲ ಜಗತ್ತಿನ ಬದಲಾವಣೆಗಳು ಮತ್ತು ಘಟನಾವಳಿಗಳಲ್ಲಿ ಆಸಕ್ತನಾಗಿದ್ದಾನೆ. ಆತನು ನಮ್ಮೊಂದಿಗೆ ಸಂಪರ್ಕ ನಡೆಸುವ ಒಬ್ಬ ವ್ಯಕ್ತಿಯಾಗಿದ್ದಾನೆ.”
ಬೈಬಲಿನ ದೇವರ ಹೀಬ್ರು ಹೆಸರು, ಸಾಮಾನ್ಯವಾಗಿ “ಯೆಹೋವ” ಎಂದು ಭಾಷಾಂತರಿಸಲ್ಪಡುವ יהוה ಆಗಿದೆ. ಆತನು ಇತರ ಎಲ್ಲ ದೇವರುಗಳಿಗೆ ಅತೀತನು. ಆತನ ಕುರಿತು ನಾವೇನು ತಿಳಿದಿದ್ದೇವೆ? ಬೈಬಲ್ ಸಮಯಗಳಲ್ಲಿ ಆತನು ಮನುಷ್ಯರೊಂದಿಗೆ ಹೇಗೆ ವ್ಯವಹರಿಸಿದನು?
ಯೆಹೋವನು ಮತ್ತು ಮೋಶೆ “ಮುಖಾಮುಖಿಯಾಗಿ”
ಮೋಶೆಗೆ ದೇವರನ್ನು ಅಕ್ಷರಾರ್ಥವಾಗಿ ನೋಡಲು ಸಾಧ್ಯವಿದ್ದಿಲ್ಲವಾದರೂ, ಯೆಹೋವ ಮತ್ತು ಆತನ ಸೇವಕನಾದ ಮೋಶೆಯ ಮಧ್ಯೆ “ಮುಖಾಮುಖಿ”ಯಾದ ಆತ್ಮೀಯತೆಯಿತ್ತು. (ಧರ್ಮೋಪದೇಶಕಾಂಡ 34:10; ವಿಮೋಚನಕಾಂಡ 33:20) ಅವನ ಯೌವನದಲ್ಲಿ, ಇಸ್ರಾಯೇಲ್ಯರು ಐಗುಪ್ತದಲ್ಲಿ ದಾಸರಾಗಿದ್ದ ಸಮಯದಲ್ಲಿ, ಮೋಶೆಯ ಹೃದಯವು ಅವರೊಂದಿಗೆ ಒಮ್ಮತದಲ್ಲಿತ್ತು. ಅವನು ಫರೋಹನ ಮನೆವಾರ್ತೆಯ ಒಬ್ಬ ಸದಸ್ಯನೋಪಾದಿ ತನ್ನ ಜೀವಿತಕ್ಕೆ ಬೆನ್ನುಹಾಕಿ, “ದೇವರ ಜನರೊಂದಿಗೆ ಕಷ್ಟವನ್ನನುಭವಿಸುವ”ದನ್ನು ಆರಿಸಿಕೊಂಡನು. (ಇಬ್ರಿಯ 11:25) ಇದರ ಪರಿಣಾಮವಾಗಿ, ಯೆಹೋವನು ಮೋಶೆಗೆ ಅನೇಕ ವಿಶೇಷ ಸುಯೋಗಗಳನ್ನು ಕೊಟ್ಟನು.
ಫರೋಹನ ಮನೆವಾರ್ತೆಯ ಒಬ್ಬ ಸದಸ್ಯನೋಪಾದಿ ಮೋಶೆ, “ಐಗುಪ್ತ ದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ”ದನು. (ಅ. ಕೃತ್ಯಗಳು 7:22) ಆದರೆ ಇಸ್ರಾಯೇಲ್ ಜನಾಂಗವನ್ನು ನಡೆಸಿಕೊಂಡುಹೋಗಲು, ಅವನಿಗೆ ದೀನತೆ, ತಾಳ್ಮೆ ಮತ್ತು ಸಾಧು ಸ್ವಭಾವವನ್ನು ಬೆಳೆಸಿಕೊಳ್ಳುವ ಅಗತ್ಯವೂ ಇತ್ತು. ಮಿದ್ಯಾನಿನಲ್ಲಿ 40 ವರ್ಷಕಾಲ ಕುರುಬನಾಗಿದ್ದಾಗ ಅವನು ಇದನ್ನು ಬೆಳೆಸಿಕೊಂಡನು. (ವಿಮೋಚನಕಾಂಡ 2:15-22; ಅರಣ್ಯಕಾಂಡ 12:3) ಯೆಹೋವನು ಅದೃಶ್ಯನಾಗಿ ಉಳಿದಿದ್ದರೂ, ತನ್ನನ್ನೂ ತನ್ನ ಉದ್ದೇಶವನ್ನೂ ಮೋಶೆಗೆ ಪ್ರಕಟಿಸಿದನು, ಮತ್ತು ದೇವದೂತರ ಮೂಲಕ ದೇವರು ಅವನಿಗೆ ದಶಾಜ್ಞೆಗಳನ್ನು ಒಪ್ಪಿಸಿದನು. (ವಿಮೋಚನಕಾಂಡ 3:1-10; 19:3–20:20; ಅ. ಕೃತ್ಯಗಳು 7:53; ಇಬ್ರಿಯ 11:27) “ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು” ಎಂದು ಬೈಬಲು ನಮಗನ್ನುತ್ತದೆ. (ವಿಮೋಚನಕಾಂಡ 33:11) ಹೌದು, ಯೆಹೋವನು ತಾನೇ ಹೇಳಿದ್ದು: “ಅವನ ಸಂಗಡ ನಾನು . . . ಪ್ರತ್ಯಕ್ಷದಲ್ಲಿ [“ಬಾಯಿಂದ ಬಾಯಿಗೆ,” NW] . . . ಮಾತಾಡುವೆನು.” ಮೋಶೆಯು, ಅದೃಶ್ಯನಾಗಿದ್ದರೂ ವ್ಯಕ್ತಿತ್ವವುಳ್ಳ ತನ್ನ ದೇವರೊಂದಿಗೆ ಎಂತಹ ಅಮೂಲ್ಯವಾದ, ಆತ್ಮೀಯ ಸಂಬಂಧವನ್ನು ಅನುಭವಿಸಿದನು!—ಅರಣ್ಯಕಾಂಡ 12:8.
ಇಸ್ರಾಯೇಲ್ ಜನಾಂಗದ ಆದಿ ಇತಿಹಾಸಕ್ಕೆ ಕೂಡಿಸಿ, ಮೋಶೆಯು ಧರ್ಮಶಾಸ್ತ್ರ ಸಂಹಿತೆಯನ್ನು ಅದರ ಶಾಖೋಪಶಾಖೆಗಳೊಂದಿಗೆ ದಾಖಲು ಮಾಡಿದನು. ಅವನಿಗೆ ಇನ್ನೊಂದು ಬೆಲೆಕಟ್ಟಲಾಗದ ಸುಯೋಗವೂ—ಆದಿಕಾಂಡ ಪುಸ್ತಕದ ಬರೆವಣಿಗೆ—ಒಪ್ಪಿಸಲ್ಪಟ್ಟಿತು. ಆ ಪುಸ್ತಕದ ದ್ವಿತೀಯಾರ್ಧವು, ಅವನ ಸ್ವಂತ ಕುಟುಂಬಕ್ಕೆ ನಿಷ್ಕೃಷ್ಟವಾಗಿ ಪರಿಚಯವಿದ್ದ ಇತಿಹಾಸವಾಗಿದ್ದುದರಿಂದ ಅದನ್ನು ದಾಖಲು ಮಾಡುವುದು ಸಾಪೇಕ್ಷವಾಗಿ ಸುಲಭವಾಗಿತ್ತು. ಆದರೆ ಮನುಷ್ಯನ ಅತಿ ಆದಿಯ ಇತಿಹಾಸದ ವಿವರಗಳು ಮೋಶೆಗೆ ಎಲ್ಲಿಂದ ದೊರೆತವು? ಮೂಲಾಧಾರವಾಗಿ ಉಪಯೋಗಿಸಲು ತನ್ನ ಪಿತೃಗಳಿಂದ ಸಂರಕ್ಷಿಸಲ್ಪಟ್ಟಿದ್ದ ಪುರಾತನ ಲಿಖಿತ ದಾಖಲೆಗಳು ಮೋಶೆಯೊಂದಿಗೆ ಇದ್ದಿರುವ ಸಾಧ್ಯತೆಯಿತ್ತು. ಇಲ್ಲವೆ, ಮೌಖಿಕ ವಹನದಿಂದ ಅಥವಾ ಯೆಹೋವನಿಂದ ಪಡೆದುಕೊಂಡ ದೈವಿಕ ಪ್ರಕಟನೆಯಿಂದ ನೇರವಾಗಿ ಅವನು ವಿವರಗಳನ್ನು ಪಡೆಯುವ ಸಾಧ್ಯತೆಯಿತ್ತು. ಎಲ್ಲ ಯುಗಗಳ ಭಯಭಕ್ತಿಯ ಜನರು, ಈ ಸಂಬಂಧದಲ್ಲಿ ಮೋಶೆಯು ದೇವರೊಂದಿಗೆ ಅನುಭವಿಸಿದ ವೈಯಕ್ತಿಕ ಸಂಬಂಧವನ್ನು ದೀರ್ಘಕಾಲದಿಂದ ಒಪ್ಪಿಕೊಂಡಿದ್ದಾರೆ.
ಯೆಹೋವ—ಎಂಬ ವ್ಯಕ್ತಿಯೋಪಾದಿ ಎಲೀಯನು ದೇವರನ್ನು ತಿಳಿದಿದ್ದನು
ಯೆಹೋವನು ವ್ಯಕ್ತಿತ್ವವುಳ್ಳ ದೇವರೆಂಬುದಾಗಿ ಪ್ರವಾದಿ ಎಲೀಯನೂ ತಿಳಿದಿದ್ದನು. ಎಲೀಯನು ಶುದ್ಧಾರಾಧನೆಗಾಗಿ ಹುರುಪುಳ್ಳವನಾಗಿದ್ದು, ಕಾನಾನ್ಯ ದೇವಗಣದ ಮುಖ್ಯ ದೇವನಾಗಿದ್ದ ಬಾಳನ ಆರಾಧಕರಿಂದ ಮಹಾ ದ್ವೇಷ ಮತ್ತು ವಿರೋಧಕ್ಕೆ ಗುರಿಯಾಗಿದ್ದರೂ ಯೆಹೋವನ ಸೇವೆಯನ್ನು ಮಾಡಿದನು.—1 ಅರಸುಗಳು 18:17-40.
ಇಸ್ರಾಯೇಲಿನ ರಾಜನಾದ ಆಹಾಬ ಮತ್ತು ಅವನ ಹೆಂಡತಿಯಾದ ಈಜೆಬೆಲಳು, ಎಲೀಯನನ್ನು ಕೊಲ್ಲಲು ಹವಣಿಸಿದರು. ಜೀವಭಯದಿಂದ, ಎಲೀಯನು ಲವಣ ಸಮುದ್ರದ ಪಶ್ಚಿಮಕ್ಕಿದ್ದ ಬೇರ್ಷೆಬಕ್ಕೆ ಓಡಿಹೋದನು. ಅಲ್ಲಿ ಅವನು ಅರಣ್ಯದಲ್ಲಿ ಅಲೆದಾಡಿ ಮರಣಕ್ಕಾಗಿ ಪ್ರಾರ್ಥಿಸಿದನು. (1 ಅರಸುಗಳು 19:1-4) ಯೆಹೋವನು ಎಲೀಯನನ್ನು ತ್ಯಜಿಸಿದ್ದನೊ? ತನ್ನ ನಂಬಿಗಸ್ತ ಸೇವಕನಲ್ಲಿ ಆತನಿಗೆ ಇನ್ನು ಮುಂದೆ ಆಸಕ್ತಿ ಇರಲಿಲ್ಲವೊ? ಎಲೀಯನು ಹಾಗೆಣಿಸಿದ್ದಿರಬಹುದಾದರೂ, ಅವನ ಆಲೋಚನೆ ಎಷ್ಟು ತಪ್ಪಾಗಿತ್ತು! ಅನಂತರ ಯೆಹೋವನು ಅವನೊಂದಿಗೆ ಮೆಲ್ಲನೆ ಮಾತಾಡುತ್ತಾ ಅವನಿಗೆ, “ಎಲೀಯನೇ, ನೀನು ಇಲ್ಲೇನು ಮಾಡುತ್ತೀ” ಎಂದು ಕೇಳಿದನು. ಪ್ರಕೃತ್ಯತೀತ ಶಕ್ತಿಯ ಒಂದು ನಾಟಕೀಯ ಪ್ರದರ್ಶನದ ಬಳಿಕ, “ಎಲೀಯನೇ, ನೀನು ಇಲ್ಲೇನು ಮಾಡುತ್ತೀ ಎಂಬ ವಾಣಿಯು [ಪುನಃ] ಕೇಳಿಸಿತು.” ತನ್ನ ಭರವಸಾರ್ಹ ಸೇವಕನನ್ನು ಪ್ರೋತ್ಸಾಹಿಸಲಿಕ್ಕಾಗಿ ಯೆಹೋವನು ಎಲೀಯನ ಕಡೆಗೆ ಈ ವ್ಯಕ್ತಿಪರವಾದ ಆಸಕ್ತಿಯನ್ನು ತೋರಿಸಿದನು. ಅವನಿಗೆ ಮಾಡಲು ಇನ್ನೂ ಹೆಚ್ಚಿನ ಕೆಲಸವು ದೇವರಲ್ಲಿತ್ತು ಮತ್ತು ಎಲೀಯನು ಆ ಕರೆಗೆ ಆತುರದಿಂದ ಓಗೊಟ್ಟನು! ಎಲೀಯನು ತನ್ನ ನೇಮಕಗಳನ್ನು ನಂಬಿಗಸ್ತಿಕೆಯಿಂದ ನೆರವೇರಿಸಿ, ವ್ಯಕ್ತಿತ್ವವುಳ್ಳವನಾಗಿದ್ದ ತನ್ನ ದೇವರಾದ ಯೆಹೋವನ ನಾಮವನ್ನು ಪವಿತ್ರೀಕರಿಸಿದನು.—1 ಅರಸುಗಳು 19:9-18.
ಇಸ್ರಾಯೇಲ್ ಜನಾಂಗವನ್ನು ತಳ್ಳಿಹಾಕಿದ ಬಳಿಕ, ಯೆಹೋವನು ಭೂಮಿಯ ಮೇಲಿದ್ದ ತನ್ನ ಸೇವಕರೊಂದಿಗೆ ಖುದ್ದಾಗಿ ಇನ್ನೆಂದಿಗೂ ಮಾತಾಡಲಿಲ್ಲ. ಆತನಿಗೆ ಅವರಲ್ಲಿದ್ದ ವ್ಯಕ್ತಿಪರವಾದ ಆಸಕ್ತಿಯು ಕುಂದಿತ್ತೆಂದು ಇದರ ಅರ್ಥವಾಗಿರಲಿಲ್ಲ. ತನ್ನ ಪವಿತ್ರಾತ್ಮದ ಮೂಲಕ ಆತನು ಇನ್ನೂ ಅವರನ್ನು ತನ್ನ ಸೇವೆಯಲ್ಲಿ ಮಾರ್ಗದರ್ಶಿಸಿ, ಬಲಪಡಿಸಿದನು. ದೃಷ್ಟಾಂತಕ್ಕೆ, ಮೊದಲು ಸೌಲನೆಂದು ಕರೆಯಲ್ಪಡುತ್ತಿದ್ದ ಅಪೊಸ್ತಲ ಪೌಲನನ್ನು ತೆಗೆದುಕೊಳ್ಳಿ.
ಪವಿತ್ರಾತ್ಮದಿಂದ ಪೌಲನ ಮಾರ್ಗದರ್ಶನ
ಪೌಲನು ಕಿಲಿಕ್ಯದ ಒಂದು ಪ್ರಧಾನ ನಗರವಾದ ತಾರ್ಸದವನು. ಅವನ ಹೆತ್ತವರು ಇಬ್ರಿಯರಾಗಿದ್ದರು. ಆದರೆ ಅವನು ರೋಮನ್ ನಾಗರಿಕನಾಗಿ ಹುಟ್ಟಿದನು. ಆದರೂ ಸೌಲನ ಪಾಲನೆಯು ಫರಿಸಾಯರ ಕಟ್ಟುನಿಟ್ಟಾದ ನಂಬಿಕೆಗಳಿಗನುಸಾರವಾಗಿತ್ತು. ತರುವಾಯ ಯೆರೂಸಲೇಮಿನಲ್ಲಿ, ಅವನಿಗೆ ಧರ್ಮಶಾಸ್ತ್ರದ ಪ್ರಮುಖ ಬೋಧಕನಾಗಿದ್ದ “ಗಮಲಿಯೇಲನ ಪಾದಸನ್ನಿಧಿಯಲ್ಲಿ” ಶಿಕ್ಷಣ ಪಡೆಯುವ ಸಂದರ್ಭವಿತ್ತು.—ಅ. ಕೃತ್ಯಗಳು 22:3, 26-28.
ಯೆಹೂದಿ ಸಂಪ್ರದಾಯದ ಕಡೆಗೆ ಸೌಲನಿಗಿದ್ದ ತಪ್ಪುರೀತಿಯ ಹುರುಪಿನ ಕಾರಣ, ಯೇಸು ಕ್ರಿಸ್ತನ ಹಿಂಬಾಲಕರ ವಿರುದ್ಧ ನಡೆಸಲ್ಪಡುತ್ತಿದ್ದ ಹಗೆಸಾಧನೆಯ ಒಂದು ಚಳವಳಿಯಲ್ಲಿ ಅವನು ಭಾಗವಹಿಸಿದನು. ಪ್ರಥಮ ಕ್ರೈಸ್ತ ಹುತಾತ್ಮನಾದ ಸ್ತೆಫನನ ಕೊಲೆಯನ್ನೂ ಅವನು ಅನುಮೋದಿಸಿದನು. (ಅ. ಕೃತ್ಯಗಳು 7:58-60; 8:1, 3) ಮೊದಲಲ್ಲಿ ದೂಷಕನೂ ಹಿಂಸಕನೂ ಅಹಂಕಾರಿಯೂ ಆಗಿದ್ದರೂ, “[ಅವನು] ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ [ಅವನ] ಮೇಲೆ ಕರುಣೆ ಉಂಟಾಯಿತು” ಎಂದು ಅವನು ತರುವಾಯ ಒಪ್ಪಿಕೊಂಡನು.—1 ತಿಮೊಥೆಯ 1:13.
ದೇವರ ಸೇವೆಮಾಡುವ ನಿಜ ಬಯಕೆಯಿಂದ ಸೌಲನು ಪ್ರಚೋದಿಸಲ್ಪಟ್ಟನು. ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಆದ ಸೌಲನ ಪರಿವರ್ತನೆಯನ್ನು ಅನುಸರಿಸಿ, ಯೆಹೋವನು ಅವನನ್ನು ವಿಶೇಷ ರೀತಿಯಲ್ಲಿ ಉಪಯೋಗಿಸಿದನು. ಒಬ್ಬ ಆದಿ ಕ್ರೈಸ್ತ ಶಿಷ್ಯನಾಗಿದ್ದ ಅನನೀಯನು ಅವನಿಗೆ ಸಹಾಯ ಮಾಡುವಂತೆ ಪುನರುತ್ಥಿತ ಕ್ರಿಸ್ತನಿಂದ ನಿರ್ದೇಶಿಸಲ್ಪಟ್ಟನು. ಆ ಬಳಿಕ ಪೌಲನು (ಸೌಲನು ಕ್ರೈಸ್ತನಾಗಿ ಜ್ಞಾತನಾದ ಅವನ ರೋಮನ್ ಹೆಸರು) ಯೂರೋಪ್ ಮತ್ತು ಏಷಿಯ ಮೈನರಿನ ಭಾಗಗಳಲ್ಲಿ ದೀರ್ಘವಾದ ಹಾಗೂ ಫಲಭರಿತ ಶುಶ್ರೂಷೆಯನ್ನು ನೆರವೇರಿಸುವಂತೆ, ಯೆಹೋವನ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟನು.—ಅ. ಕೃತ್ಯಗಳು 13:2-5; 16:9, 10.
ಇಂದು ಪವಿತ್ರಾತ್ಮದಿಂದ ಅದೇ ಮಾರ್ಗದರ್ಶನವನ್ನು ಗುರುತಿಸಸಾಧ್ಯವಿದೆಯೊ? ಹೌದು, ಸಾಧ್ಯವಿದೆ.
ನಾಸ್ತಿಕತೆ ಯೆಹೋವನ ವ್ಯಕ್ತಿಪರ ಆಸಕ್ತಿಗೆ ತಡೆಯಲ್ಲ
ಜೋಸೆಫ್ ಎಫ್. ರದರ್ಫರ್ಡ್, ವಾಚ್ ಟವರ್ ಸೊಸೈಟಿಯ ಎರಡನೆಯ ಅಧ್ಯಕ್ಷರಾಗಿದ್ದರು. ಅವರು 1906ರಲ್ಲಿ ಒಬ್ಬ ಬೈಬಲ್ ವಿದ್ಯಾರ್ಥಿ—ಯೆಹೋವನ ಸಾಕ್ಷಿಗಳು ಆಗ ಜ್ಞಾತರಾಗಿದ್ದ ಹೆಸರು—ಯಾಗಿ ದೀಕ್ಷಾಸ್ನಾನ ಹೊಂದಿದರು. ಮರುವರ್ಷ ಅವರನ್ನು ಸೊಸೈಟಿಯ ನ್ಯಾಯವಾದಿಯಾಗಿ ನೇಮಿಸಲಾಯಿತು ಮತ್ತು 1917ರ ಜನವರಿಯಲ್ಲಿ ಅವರು ಅದರ ಅಧ್ಯಕ್ಷರಾದರು. ಆದರೂ, ಈ ಯುವ ವಕೀಲರು ಒಂದು ಸಮಯದಲ್ಲಿ ನಾಸ್ತಿಕರಾಗಿದ್ದರು. ಅವರು ಯೆಹೋವನ ಅಷ್ಟೊಂದು ಪ್ರಚೋದಿತ ಕ್ರೈಸ್ತ ಸೇವಕರಾದದ್ದು ಹೇಗೆ?
ಜುಲೈ 1913ರಲ್ಲಿ, ಅಮೆರಿಕದ ಮ್ಯಾಸಚೂಸೆಟ್ಸ್ನ ಸ್ಪ್ರಿಂಗ್ಫೀಲ್ಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳ ಸಂಘದ ಅಧಿವೇಶನವೊಂದರಲ್ಲಿ ರದರ್ಫರ್ಡ್ ಅಧ್ಯಕ್ಷರಾಗಿ ಕಾರ್ಯನಡಿಸಿದರು. ದ ಹೋಮ್ಸ್ಟೆಡ್ ಎಂಬ ಸ್ಥಳಿಕ ವಾರ್ತಾಪತ್ರದ ಸುದ್ದಿಗಾರನೊಬ್ಬನು, ರದರ್ಫರ್ಡರ ಇಂಟರ್ವ್ಯೂ ಮಾಡಿ, ಆ ಪತ್ರಿಕಾಭೇಟಿಯ ವೃತ್ತಾಂತವನ್ನು ಆ ಅಧಿವೇಶನದ ಸ್ಮರಣ ವರದಿಯಲ್ಲಿ ಪುನರ್ಮುದ್ರಿಸಲಾಯಿತು.
ತಾವು ಮದುವೆಯಾಗಲು ಯೋಜಿಸುತ್ತಿದ್ದ ಸಮಯದಲ್ಲಿ ತಮ್ಮ ಧಾರ್ಮಿಕ ಅಭಿಪ್ರಾಯಗಳು ಬ್ಯಾಪ್ಟಿಸ್ಟ್ ಪಂಥದವುಗಳಾಗಿದ್ದವೆಂದೂ, ಆದರೆ ತನ್ನ ಭಾವೀ ಪತ್ನಿಯ ಅಭಿಪ್ರಾಯಗಳು ಪ್ರೆಸ್ಬಿಟೇರಿಯನ್ ಪಂಥದವುಗಳಾಗಿದ್ದವೆಂದು ರದರ್ಫರ್ಡ್ ವಿವರಿಸಿದರು. “ಆಕೆಗೆ ನಿಮಜ್ಜನವಾಗಿರದಿದ್ದರಿಂದ ಆಕೆ ನರಕಾಗ್ನಿಗೆ ಹೋಗುತ್ತಾಳೆಂದೂ ಆದರೆ ತನಗೆ ನಿಮಜ್ಜನವಾಗಿರುವುದರಿಂದ ತಾನು ನೇರ ಸ್ವರ್ಗಕ್ಕೆ ಹೋಗುವೆನೆಂದೂ” ರದರ್ಫರ್ಡರಿಗೆ ಅವರ ಪಾದ್ರಿ ಹೇಳಿದಾಗ, “ಅವರ ತರ್ಕಬದ್ಧ ಮನಸ್ಸು ದಂಗೆಯೆದ್ದು ಅವರು ನಾಸ್ತಿಕರಾದರು.”
ವ್ಯಕ್ತಿತ್ವವುಳ್ಳ ಒಬ್ಬ ದೇವರಲ್ಲಿ ನಂಬಿಕೆಯನ್ನು ಪುನಃ ಬೆಳೆಸಲು ರದರ್ಫರ್ಡರಿಗೆ ಹಲವಾರು ವರುಷಗಳ ಜಾಗರೂಕ ಸಂಶೋಧನೆ ಅಗತ್ಯವಾಗಿತ್ತು. “ಮನಸ್ಸನ್ನು ತೃಪ್ತಿಗೊಳಿಸಸಾಧ್ಯವಿಲ್ಲದಿರುವ ವಿಷಯಕ್ಕೆ ಹೃದಯವನ್ನು ತೃಪ್ತಿಗೊಳಿಸುವ ಹಕ್ಕಿರುವುದಿಲ್ಲ” ಎಂಬ ಪೂರ್ವಾಧಾರದಿಂದ ತಾನು ಕೆಲಸ ಮಾಡಿದೆನೆಂದು ಅವರಂದರು. ಕ್ರೈಸ್ತರು “ತಾವು ನಂಬಿಕೆಯಿಡುವ ಶಾಸ್ತ್ರಗಳು ಸತ್ಯವೆಂಬ ಖಾತ್ರಿಯುಳ್ಳವರಾಗಿರಬೇಕು. ತಾವು ನಿಂತಿರುವ ಅಸ್ತಿವಾರವನ್ನು ಅವರು ತಿಳಿದಿರಬೇಕು,” ಎಂದು ರದರ್ಫರ್ಡ್ ಕೂಡಿಸಿ ವಿವರಿಸಿದರು.—2 ತಿಮೊಥೆಯ 3:16, 17ನ್ನು ನೋಡಿರಿ.
ಹೌದು, ಇಂದು ಸಹ ಒಬ್ಬ ನಾಸ್ತಿಕನಿಗೆ ಅಥವಾ ಆಜ್ಞೇಯತಾವಾದಿಗೆ, ಶಾಸ್ತ್ರಗಳನ್ನು ಹುಡುಕಿನೋಡಿ, ನಂಬಿಕೆಯನ್ನು ಬೆಳೆಸಿ, ಯೆಹೋವ ದೇವರೊಂದಿಗೆ ಒಂದು ಬಲವಾದ ವ್ಯಕ್ತಿಪರ ಸಂಬಂಧವನ್ನು ವಿಕಸಿಸಲು ಸಾಧ್ಯವಿದೆ. ವಾಚ್ ಟವರ್ ಪ್ರಕಾಶನವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ಸಹಾಯದಿಂದ ಬೈಬಲನ್ನು ಜಾಗರೂಕತೆಯಿಂದ ಅಭ್ಯಸಿಸಿದ ಬಳಿಕ ಒಬ್ಬ ಯುವಕನು ಒಪ್ಪಿಕೊಂಡದ್ದು: “ನಾನು ಈ ಅಭ್ಯಾಸವನ್ನು ಆರಂಭಿಸಿದಾಗ ನನಗೆ ದೇವರಲ್ಲಿ ನಂಬಿಕೆಯಿರಲಿಲ್ಲ, ಆದರೆ ಈಗ ಬೈಬಲಿನ ಜ್ಞಾನವು ನನ್ನ ಮನಸ್ಸನ್ನು ಪೂರ್ತಿ ಬದಲಾಯಿಸಿದೆ. ನಾನು ಯೆಹೋವನನ್ನು ತಿಳಿದುಕೊಳ್ಳಲು ಮತ್ತು ಆತನಲ್ಲಿ ಭರವಸೆಯಿಡಲು ಆರಂಭಿಸಿದ್ದೇನೆ.”
“ದುರ್ಮತಿ” ಮತ್ತು ದೇವರು
ಎ ಡಿಕ್ಷನೆರಿ ಆಫ್ ದ ಬೈಬಲ್ನಲ್ಲಿ ಡಾ. ಜೇಮ್ಸ್ ಹೇಸ್ಟಿಂಗ್ಸ್ ಹೇಳುವುದು: “ಹಳೇ ಒಡಂಬಡಿಕೆ [ಹೀಬ್ರು ಶಾಸ್ತ್ರಗಳು]ಯ ಯಾವನೇ ಲೇಖಕನಿಗೆ ದೇವರ ಅಸ್ತಿತ್ವವನ್ನು ರುಜುಮಾಡುವ ಅಥವಾ ಅದಕ್ಕಾಗಿ ವಾದಿಸುವ ವಿಷಯವು ಹೊಳೆಯಲೇ ಇಲ್ಲ. . . . ದೇವರ ಅಸ್ತಿತ್ವವನ್ನು ಅಲ್ಲಗಳೆಯುವುದು ಅಥವಾ ಅದನ್ನು ರುಜುಪಡಿಸಲು ತರ್ಕಗಳನ್ನು ಉಪಯೋಗಿಸುವುದು ಸಾಮಾನ್ಯವಾಗಿ ಪುರಾತನ ಲೋಕದ ಮನೋಭಾವಕ್ಕೆ ಅನುಗುಣವಾಗಿರಲಿಲ್ಲ. ಆ ನಂಬಿಕೆಯು ಮಾನವ ಮನಸ್ಸಿಗೆ ಸ್ವಾಭಾವಿಕವೂ ಮನುಷ್ಯರೆಲ್ಲರಿಗೆ ಸಾಮಾನ್ಯವೂ ಆಗಿತ್ತು.” ಆ ಸಮಯದ ಸಕಲ ಜನರು ದೇವಭಯವುಳ್ಳವರಾಗಿದ್ದರೆಂದು ಇದರ ಅರ್ಥವಲ್ಲ. ಸಂಗತಿಯು ಭಿನ್ನವಾಗಿತ್ತು. ಕೀರ್ತನೆ 14:1 ಮತ್ತು 53:1 ಇವೆರಡೂ, ತನ್ನ ಹೃದಯದಲ್ಲಿ, “ಯೆಹೋವನಿಲ್ಲ” (NW) ಎಂದು ಹೇಳುವ “ದುರ್ಮತಿ,” ಅಥವಾ ಕಿಂಗ್ ಜೇಮ್ಸ್ ವರ್ಷನ್ ಹೇಳುವಂತೆ “ಮೂರ್ಖನ” ವಿಷಯವನ್ನು ತಿಳಿಸುತ್ತವೆ.
ಈ ಮೂರ್ಖನು, ದೇವರ ಅಸ್ತಿತ್ವವನ್ನು ಅಲ್ಲಗಳೆಯುವ ಈ ಮನುಷ್ಯನು, ಯಾವ ರೀತಿಯ ವ್ಯಕ್ತಿಯಾಗಿದ್ದಾನೆ? ಅವನು ಬೌದ್ಧಿಕವಾಗಿ ಮೂಢನಾಗಿರುವುದಿಲ್ಲ. ಬದಲಿಗೆ, ಹೀಬ್ರು ಪದವಾದ ನವಾಲ್, ನೈತಿಕ ನ್ಯೂನತೆಯನ್ನು ಸೂಚಿಸುತ್ತದೆ. ಸಮಾಂತರ ಕೀರ್ತನೆ ಪುಸ್ತಕ (ಇಂಗ್ಲಿಷ್)ಕ್ಕೆ ಬರೆದ ತನ್ನ ಟಿಪ್ಪಣಿಯಲ್ಲಿ ಪ್ರೊಫೆಸರ್ ಎಸ್. ಆರ್. ಡ್ರೈವರ್ ಹೇಳುವುದೇನಂದರೆ, ಆ ದೋಷವು “ವಿವೇಚನಾಶಕ್ತಿಯ ಕೊರತೆಯಲ್ಲ, ಬದಲಿಗೆ ನೈತಿಕ ಮತ್ತು ಧಾರ್ಮಿಕ ಭಾವಹೀನತೆ, ಪ್ರಜ್ಞೆ ಅಥವಾ ಗ್ರಹಣಶಕ್ತಿಯ ಅಜೇಯ ನ್ಯೂನತೆಯಾಗಿದೆ.”
ಇಂತಹ ಮನೋಭಾವದ ಪರಿಣಾಮವಾಗಿರುವ ನೈತಿಕ ಕುಸಿತವನ್ನು ಕೀರ್ತನೆಗಾರನು ವರ್ಣಿಸುತ್ತ ಹೋಗುತ್ತಾನೆ: “ಅವರು ಕೆಟ್ಟುಹೋದವರು; ಹೇಯಕೃತ್ಯಗಳನ್ನು ನಡಿಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.” (ಕೀರ್ತನೆ 14:1) ಡಾ. ಹೇಸ್ಟಿಂಗ್ಸ್ ಸಾರಾಂಶವಾಗಿ ಹೇಳುವುದು: “ಲೋಕದಲ್ಲಿ ದೇವರ ಈ ಗೈರುಹಾಜರಿಯ ಮೇಲೆ ಮತ್ತು ನಿರ್ಭೀತಿಯ ಮೇಲೆ ಆಧರಿಸುತ್ತಾ, ಜನರು ಭ್ರಷ್ಟರಾಗಿ ಅಸಹ್ಯ ಕೃತ್ಯಗಳನ್ನು ಮಾಡುತ್ತಾರೆ.” ಅವರು ಬಹಿರಂಗವಾಗಿ ಭಕ್ತಿಹೀನ ಸೂತ್ರಗಳನ್ನು ಅವಲಂಬಿಸಿ, ತಮಗೆ ಯಾರಿಗೆ ಲೆಕ್ಕವೊಪ್ಪಿಸಲು ಮನಸ್ಸಿಲ್ಲವೊ ಅಂತಹ ವ್ಯಕ್ತಿತ್ವವುಳ್ಳ ಒಬ್ಬ ದೇವರನ್ನು ಅಲಕ್ಷಿಸುತ್ತಾರೆ. ಆದರೆ ಇಂತಹ ಯೋಚನೆಯು ಇಂದು, ಕೀರ್ತನೆಗಾರನು ತನ್ನ ಮಾತುಗಳನ್ನು 3,000 ವರ್ಷಗಳಿಗೂ ಹೆಚ್ಚು ಹಿಂದೆ ಬರೆದಾಗ ಆಗಿದ್ದಷ್ಟೇ ಬುದ್ಧಿಹೀನವೂ ಜ್ಞಾನಹೀನವೂ ಆಗಿರುತ್ತದೆ.
ವ್ಯಕ್ತಿತ್ವವುಳ್ಳ ನಮ್ಮ ದೇವರಿಂದ ಎಚ್ಚರಿಕೆಗಳು
ನಾವೀಗ ನಮ್ಮ ಆರಂಭದ ಲೇಖನದಲ್ಲಿ ಎಬ್ಬಿಸಲ್ಪಟ್ಟ ಪ್ರಶ್ನೆಗಳಿಗೆ ಹಿಂದಿರುಗೋಣ. ಇಂದಿನ ಜಗತ್ತಿನಲ್ಲಿ ಹರಡಿರುವ ಕಷ್ಟಾನುಭವದೊಂದಿಗೆ ವ್ಯಕ್ತಿತ್ವವುಳ್ಳ ಒಬ್ಬ ದೇವರನ್ನು ಸರಿಹೊಂದಿಸಲು ಇಷ್ಟೊಂದು ಜನರು ಏಕೆ ಅಶಕ್ತರಾಗಿರುತ್ತಾರೆ?
ಬೈಬಲಿನಲ್ಲಿ, “ಪವಿತ್ರಾತ್ಮಭರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದ” ಪುರುಷರ ಲಿಖಿತ ದಾಖಲೆಯು ಅಡಕವಾಗಿದೆ. (2 ಪೇತ್ರ 1:21) ವ್ಯಕ್ತಿತ್ವವುಳ್ಳ ಯೆಹೋವ ದೇವರನ್ನು ಅದೊಂದೇ ನಮಗೆ ತಿಳಿಯಪಡಿಸುತ್ತದೆ. ಅದು ಮನುಷ್ಯರಿಗೆ ಅದೃಶ್ಯನಾಗಿರುವ, ಆದರೆ ಮಾನವ ಯೋಚನಾಶಕ್ತಿಯನ್ನು ನಿರ್ದೇಶಿಸಿ, ನಿಯಂತ್ರಿಸುವಷ್ಟು ಪ್ರಬಲನಾಗಿರುವ ಒಬ್ಬ ದುಷ್ಟ ವ್ಯಕ್ತಿ—ಪಿಶಾಚನಾದ ಸೈತಾನ—ಯ ಕುರಿತು ಸಹ ಎಚ್ಚರಿಸುತ್ತದೆ. ನ್ಯಾಯಸಮ್ಮತವಾಗಿ, ನಮಗೆ ವ್ಯಕ್ತಿತ್ವವುಳ್ಳ ಒಬ್ಬ ದೇವರಲ್ಲಿ ನಂಬಿಕೆಯಿಲ್ಲದಿರುವಲ್ಲಿ, ವ್ಯಕ್ತಿತ್ವವುಳ್ಳ ಒಬ್ಬ ಪಿಶಾಚನು ಅಥವಾ ಸೈತಾನನು ಸಹ ಇದ್ದಾನೆಂದು ನಾವು ಹೇಗೆ ನಂಬಬಲ್ಲೆವು?
ಅಪೊಸ್ತಲ ಯೋಹಾನನು ದೇವಪ್ರೇರಣೆಯಿಂದ, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ . . . ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ” ಒಬ್ಬನ ಕುರಿತು ಬರೆದನು. (ಪ್ರಕಟನೆ 12:9) ಆ ಬಳಿಕ ಯೋಹಾನನು ಹೇಳಿದ್ದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಇವು ಯೇಸುವಿನ ಮಾತುಗಳನ್ನು, ಯಾವ ಮಾತುಗಳನ್ನು ಯೋಹಾನನು ತಾನೇ ತನ್ನ ಸುವಾರ್ತೆಯಲ್ಲಿ ದಾಖಲಿಸಿದನೋ ಅವುಗಳನ್ನು ಪ್ರತಿಬಿಂಬಿಸುತ್ತವೆ: “ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವದೊಂದೂ ನನ್ನಲ್ಲಿಲ್ಲ.”—ಯೋಹಾನ 14:30.
ಈ ಶಾಸ್ತ್ರೀಯ ಬೋಧನೆಯು, ಜನರು ಈಗ ನಂಬುವುದಕ್ಕಿಂತ ಎಷ್ಟು ದೂರವರ್ತಿಯಾಗಿದೆ! ಕ್ಯಾಥೊಲಿಕ್ ಹೆರಲ್ಡ್ ಹೇಳುವುದು: “ಪಿಶಾಚನ ವಿಷಯವಾದ ಮಾತು ಇಂದು ನಿಸ್ಸಂಶಯವಾಗಿ ಹಳೆಯ ಶೈಲಿಯದ್ದಾಗಿದೆ. ನಮ್ಮ ಸಂದೇಹವಾದಿ ಮತ್ತು ವೈಜ್ಞಾನಿಕ ಯುಗವು ಸೈತಾನನಿಗೆ ಪಿಂಚಣಿಕೊಟ್ಟು ಕಳುಹಿಸಿದೆ.” ಆದರೂ, ತನ್ನನ್ನು ಕೊಲೆಮಾಡುವ ಉದ್ದೇಶವಿದ್ದ ಜನರಿಗೆ ಯೇಸು ಶಕ್ತಿಯುತವಾಗಿ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ.”—ಯೋಹಾನ 8:44.
ಸೈತಾನನ ಶಕ್ತಿಯ ಕುರಿತ ಬೈಬಲಿನ ವಿವರಣೆಯು ಅರ್ಥವತ್ತಾಗಿದೆ. ಅಧಿಕಾಂಶ ಜನರು ಶಾಂತಿ ಮತ್ತು ಸಾಮರಸ್ಯದಲ್ಲಿ ಜೀವಿಸುವ ಬಯಕೆಯುಳ್ಳವರಾಗಿರುವುದಾದರೂ, ಲೋಕವು ದ್ವೇಷ, ಯುದ್ಧಗಳು ಮತ್ತು ಡನ್ಬ್ಲೇನ್ನಲ್ಲಿ ತೋರಿಸಲ್ಪಟ್ಟಂತಹ ಅರ್ಥರಹಿತ ಹಿಂಸಾಚಾರದಿಂದ (ಪುಟಗಳು 3 ಮತ್ತು 4ರಲ್ಲಿ ಹೇಳಲ್ಪಟ್ಟಿದೆ) ಪೀಡಿಸಲ್ಪಡುತ್ತಿರುವುದು ಏಕೆಂದು ಅದು ಸ್ಪಷ್ಟಗೊಳಿಸುತ್ತದೆ. ಅಲ್ಲದೆ, ಸೈತಾನನು ನಾವು ಹೋರಾಡಬೇಕಾಗಿರುವ ಏಕಮಾತ್ರ ಶತ್ರುವಲ್ಲ. ಮಾನವಕುಲವನ್ನು ದಾರಿತಪ್ಪಿಸಿ ದುರುಪಯೋಗಿಸಲಿಕ್ಕಾಗಿ ಬಹು ಪೂರ್ವದಲ್ಲಿ ಸೈತಾನನ ಪಕ್ಷ ವಹಿಸಿದ ದುಷ್ಟಾತ್ಮ ಜೀವಿಗಳಾದ ಪಿಶಾಚರ ಅಥವಾ ದೆವ್ವಗಳ ಕುರಿತು ಕೂಡಿಸಿದ ಎಚ್ಚರಿಕೆಗಳನ್ನು ಬೈಬಲು ಕೊಡುತ್ತದೆ. (ಯೂದ 6) ಯೇಸು ಕ್ರಿಸ್ತನು ಈ ಆತ್ಮಗಳ ಶಕ್ತಿಯನ್ನು ಅನೇಕ ಬಾರಿ ಎದುರಿಸಿ, ಅವುಗಳನ್ನು ಸೋಲಿಸಶಕ್ತನಾಗಿದ್ದನು.—ಮತ್ತಾಯ 12:22-24; ಲೂಕ 9:37-43.
ಸತ್ಯ ದೇವರಾದ ಯೆಹೋವನು ಈ ಭೂಮಿಯ ದುಷ್ಟತ್ವವನ್ನು ಶುದ್ಧೀಕರಿಸಿ, ಕೊನೆಗೆ ಸೈತಾನನ ಮತ್ತು ಅವನ ದೆವ್ವಗಳ ಚಟುವಟಿಕೆಗಳನ್ನು ನಿರ್ನಾಮಮಾಡಲು ಉದ್ದೇಶಿಸಿದ್ದಾನೆ. ಯೆಹೋವನ ವಿಷಯದಲ್ಲಿ ನಮಗಿರುವ ಜ್ಞಾನದ ಆಧಾರದಿಂದ, ಆತನ ವಾಗ್ದಾನಗಳಲ್ಲಿ ನಮಗೆ ಸ್ಥಿರವಾದ ನಂಬಿಕೆ ಮತ್ತು ಭರವಸೆಯಿರಸಾಧ್ಯವಿದೆ. ಆತನು ಹೇಳುವುದು: “ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ.” ಯೆಹೋವನು, ತನ್ನನ್ನು ತಿಳಿದುಕೊಂಡು, ಆರಾಧಿಸಿ, ಸೇವಿಸುವವರಿಗೆಲ್ಲ ನಿಜವಾಗಿಯೂ ವ್ಯಕ್ತಿತ್ವವುಳ್ಳ ಒಬ್ಬ ದೇವರಾಗಿದ್ದಾನೆ. ನಾವು ನಮ್ಮ ರಕ್ಷಣೆಗಾಗಿ ಆತನ ಕಡೆಗೆ, ಆತನೊಬ್ಬನ ಕಡೆಗೆ ಮಾತ್ರವೇ ನೋಡಬಲ್ಲೆವು.—ಯೆಶಾಯ 43:10, 11.
[ಪುಟ 7 ರಲ್ಲಿರುವ ಚಿತ್ರ]
ಮೋಶೆ ದೇವಪ್ರೇರಣೆಯಿಂದ ಆದಿಕಾಂಡ 1:1ನ್ನು ಬರೆಯುವುದನ್ನು ಚಿತ್ರಿಸುವ 18ನೆಯ ಶತಮಾನದ ಒಂದು ಕೆತ್ತನೆಯ ಚಿತ್ರ
[ಕೃಪೆ]
From The Holy Bible by J. Baskett, Oxford
[ಪುಟ 8 ರಲ್ಲಿರುವ ಚಿತ್ರ]
ಯೇಸು ಕ್ರಿಸ್ತನು ಅನೇಕ ಬಾರಿ ದೆವ್ವಗಳನ್ನು ಸೋಲಿಸಿದನು