ವ್ಯಕ್ತಿತ್ವವುಳ್ಳ ದೇವರಲ್ಲಿ ನೀವು ನಂಬಿಕೆಯಿಡಬಲ್ಲಿರೋ?
“ಒಬ್ಬ ಕ್ರೈಸ್ತರಾಗಿರಬೇಕಾದರೆ ನೀವು ದೇವರಲ್ಲಿ ನಂಬಿಕೆಯಿಡಬೇಕೆಂದಿಲ್ಲ . . . ನಾವೀಗ ಒಂದು ಹೊಸ ಚಳವಳಿಯ ಭಾಗವಾಗಿದ್ದೇವೆ, ಆದರೆ 21ನೆಯ ಶತಮಾನದಲ್ಲಿ ಚರ್ಚು ಸಾಂಪ್ರದಾಯಿಕ ಅರ್ಥದಲ್ಲಿ ದೇವರಿಲ್ಲದ್ದಾಗಿರುವುದು,” ಎಂದು ಬ್ರಿಟಿಷ್ ವಿಶ್ವವಿದ್ಯಾನಿಲಯದ ಹಿರಿಯ ಪಾದ್ರಿಯೊಬ್ಬರು ಹೇಳಿದರು. ಯಾವುದನ್ನು ಕಡಮೆ ಪಕ್ಷ ನೂರು ಮಂದಿ ಬ್ರಿಟಿಷ್ ಪಾದ್ರಿಗಳು ಅನುಮೋದಿಸುತ್ತಾರೊ, ಆ ನಂಬಿಕೆಯ ಸಮುದ್ರ (ಸೀ ಆಫ್ ಫೇತ್)ವೆಂಬ ಆಂದೋಲನದ ಪರವಾಗಿ ಅವರು ಮಾತಾಡುತ್ತಿದ್ದರು. ಧರ್ಮವು ಮನುಷ್ಯಕೃತವೆಂದೂ, ಒಬ್ಬ ಸದಸ್ಯನು ಹೇಳಿದಂತೆ, ದೇವರು ಕೇವಲ “ಒಂದು ಕಲ್ಪನೆ”ಯೆಂದೂ ಈ “ಕ್ರೈಸ್ತ ನಾಸ್ತಿಕರು” ವಾದಿಸುತ್ತಾರೆ. ಪ್ರಕೃತ್ಯತೀತನಾದ ಒಬ್ಬ ದೇವರು ಇನ್ನುಮುಂದೆ ಅವರ ಆಲೋಚನಾಶಕ್ತಿಯ ವಿಧಕ್ಕೆ ಹೊಂದಿಕೊಳ್ಳುವುದಿಲ್ಲ.
“ದೇವರು ಸತ್ತಿದ್ದಾನೆ” ಎಂಬುದು 1960ಗಳ ಜನಪ್ರಿಯ ಧ್ಯೇಯಮಂತ್ರವಾಗಿತ್ತು. ಅದು ಫ್ರೀಡ್ರಿಕ್ ನೀಟ್ಚ ಎಂಬ 19ನೆಯ ಶತಮಾನದ ಜರ್ಮನ್ ತತ್ವಜ್ಞಾನಿಯ ಅಭಿಪ್ರಾಯಗಳನ್ನು ಪ್ರತಿಬಿಂಬಿಸಿ, ತಮಗೆ ಇಷ್ಟಬಂದದ್ದನ್ನು ಮಾಡುವ, ಮದುವೆಯಾಗದೆ ಕೂಡಿ ಜೀವಿಸುವ ಮತ್ತು ನೈತಿಕ ನಿರ್ಬಂಧವಿಲ್ಲದೆ ಅಮಲೌಷಧದ ದುರುಪಯೋಗವನ್ನು ಮಾಡುವ ವಿನಾಯಿತಿಗಳನ್ನು ಅನೇಕ ಯುವ ಜನರಿಗೆ ಕೊಟ್ಟಿತು. ಆದರೆ ಅಂತಹ ಸ್ವಾತಂತ್ರ್ಯವು, ಹೂಮಕ್ಕಳೆಂದು ಜ್ಞಾತರಾದವರನ್ನು ಹೆಚ್ಚು ತೃಪ್ತಿಕರವಾದ ಸಂತೋಷದ ಜೀವಿತಕ್ಕೆ ನಡೆಸಿತೊ?
ಅದೇ ದಶಕದಲ್ಲಿ, ಆ್ಯಂಗ್ಲಿಕನ್ ಬಿಷಪ್ ಜಾನ್ ಎ. ಟಿ. ರಾಬಿನ್ಸನ್, ದೇವರಾಣೆಗೂ ನಿಜ (ಇಂಗ್ಲಿಷ್) ಎಂಬ ತನ್ನ ವಿವಾದಾತ್ಮಕ ಪುಸ್ತಕವನ್ನು ಹೊರಡಿಸಿದನು. ದೇವರು “ಮಾನವ ಅನುಭವದಲ್ಲಿ ಗಹನತೆಯ ಆಯಾಮವಲ್ಲದೆ ಮತ್ತೇನೂ ಅಲ್ಲ”ವೆಂದು ಯೋಚಿಸಿದ್ದಕ್ಕೆ ಅವನ ಜೊತೆ ಪಾದ್ರಿಗಳು ಅವನನ್ನು ಟೀಕಿಸಿದರು. ದೈವಶಾಸ್ತ್ರದ ಪ್ರೊಫೆಸರ್ ಕೀತ್ ವಾರ್ಡ್ ಕೇಳಿದ್ದು: “ದೇವರಲ್ಲಿ ನಂಬಿಕೆಯು, ಈಗ ಜ್ಞಾನಿಗಳಿಂದ ತ್ಯಜಿಸಲ್ಪಟ್ಟಿರುವ ಯಾವುದೋ ರೀತಿಯ ಹಳೆಯ ಮೂಢನಂಬಿಕೆಯೊ?” ತಮ್ಮ ಸ್ವಂತ ಪ್ರಶ್ನೆಗೆ ಉತ್ತರ ಕೊಡುತ್ತ ಅವರು ಹೇಳಿದ್ದು: “ಇಂದು ಧರ್ಮದಲ್ಲಿ, ದೇವರ ಕುರಿತ ಸಾಂಪ್ರದಾಯಿಕ ಕಲ್ಪನೆಯ ಜ್ಞಾನವನ್ನು ಪುನಃ ಪಡೆದುಕೊಳ್ಳುವುದಕ್ಕಿಂತ ಇನ್ನಾವ ವಿಷಯವೂ ಹೆಚ್ಚು ಪ್ರಾಮುಖ್ಯವಲ್ಲ.”
ವ್ಯಕ್ತಿತ್ವವುಳ್ಳ ದೇವರೊಂದಿಗೆ ಕಷ್ಟಾನುಭವವನ್ನು ಸರಿಹೊಂದಿಸುವುದು
ವ್ಯಕ್ತಿತ್ವವುಳ್ಳ ದೇವರಲ್ಲಿ ನಂಬಿಕೆಯಿಡುವ ಅನೇಕರು, ತಾವು ನೋಡುವ ದುರಂತಗಳನ್ನು ಮತ್ತು ಕಷ್ಟಾನುಭವಗಳನ್ನು ತಮ್ಮ ನಂಬಿಕೆಗೆ ಹೊಂದಿಸಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ಉದಾಹರಣೆಗೆ, ಮಾರ್ಚ್ 1996ರಲ್ಲಿ 16 ಮಂದಿ ಎಳೆಯ ಮಕ್ಕಳು ತಮ್ಮ ಉಪಾಧ್ಯಾಯಿನಿಯೊಂದಿಗೆ ಸ್ಕಾಟ್ಲೆಂಡ್ನ ಡನ್ಬ್ಲೇನ್ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು. “ದೇವರ ಚಿತ್ತ ನನಗಂತೂ ಅರ್ಥವೇ ಆಗುವುದಿಲ್ಲ” ಎಂದಳು ತಳಮಳಗೊಂಡ ಒಬ್ಬಾಕೆ ಸ್ತ್ರೀ. ಆ ಮಕ್ಕಳ ಶಾಲೆಯ ಹೊರಗಡೆ ಹೂವುಗಳೊಂದಿಗೆ ಬಿಡಲ್ಪಟ್ಟಿದ್ದ ಒಂದು ಕಾರ್ಡಿನಲ್ಲಿ ಆ ದುರಂತದ ಬೇಗುದಿ ವ್ಯಕ್ತಪಡಿಸಲ್ಪಟ್ಟಿತ್ತು. ಅದರಲ್ಲಿ “ಏಕೆ?” ಎಂಬ ಒಂದೇ ಶಬ್ದವಿತ್ತು. ಇದಕ್ಕೆ ಉತ್ತರವಾಗಿ ಡನ್ಬ್ಲೇನ್ ಕಥೀಡ್ರಲ್ನ ಪಾದ್ರಿ ಹೇಳಿದ್ದು: “ಇದಕ್ಕೆ ವಿವರಣೆ ಇರಸಾಧ್ಯವಿಲ್ಲ. ಇದು ಏಕೆ ಸಂಭವಿಸಬೇಕಿತ್ತು ಎಂಬುದಕ್ಕೆ ನಮಗೆ ಉತ್ತರ ಕೊಡಸಾಧ್ಯವಿಲ್ಲ.”
ತರುವಾಯ ಅದೇ ವರ್ಷ, ಚರ್ಚ್ ಆಫ್ ಇಂಗ್ಲೆಂಡ್ನ ಒಬ್ಬ ಜನಪ್ರಿಯ ಯುವ ಪಾದ್ರಿಯು ಕ್ರೂರವಾಗಿ ಕೊಲ್ಲಲ್ಪಟ್ಟನು. ಲಿವರ್ಪೂಲ್ನ ಆರ್ಚ್ಡೀಕನ್ ಪಾದ್ರಿ, “ಏಕೆ? ಏಕೆ? ಎಂಬ ಪ್ರಶ್ನೆಗಳಿಂದ ದೇವರ ಬಾಗಿಲನ್ನು ಜೋರಾಗಿ ತಟ್ಟುವ” ಕುರಿತು ಮಾತಾಡುವುದನ್ನು ಸ್ತಂಭೀಭೂತವಾಗಿದ್ದ ಸಭೆಯು ಕೇಳಿತೆಂದು ಚರ್ಚ್ ಟೈಮ್ಸ್ ವರದಿಮಾಡಿತು. ಈ ಪಾದ್ರಿಯ ಬಳಿಯೂ ವ್ಯಕ್ತಿತ್ವವುಳ್ಳ ದೇವರಿಂದ ಸಾಂತ್ವನದ ಯಾವ ಮಾತುಗಳು ಇರಲಿಲ್ಲ.
ಹಾಗಾದರೆ, ನಾವು ಏನನ್ನು ನಂಬಬೇಕು? ವ್ಯಕ್ತಿತ್ವವುಳ್ಳ ಒಬ್ಬ ದೇವರಲ್ಲಿ ನಂಬಿಕೆಯಿಡುವುದು ತರ್ಕಸಮ್ಮತವಾಗಿದೆ. ಈ ಮೇಲೆ ಎಬ್ಬಿಸಲ್ಪಟ್ಟಿರುವ ಆಸಕ್ತಿಯನ್ನು ಕೆರಳಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಅದು ಕೀಲಿ ಕೈಯಾಗಿದೆ. ಮುಂದಿನ ಲೇಖನದಲ್ಲಿ ಕೊಡಲ್ಪಟ್ಟ ರುಜುವಾತನ್ನು ಪರಿಗಣಿಸುವರೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 3 ರಲ್ಲಿರುವ ಚಿತ್ರ]
ಆ ಕಾರ್ಡಿನಲ್ಲಿ “ಏಕೆ?” ಎಂದು ಕೇಳಲ್ಪಟ್ಟಿತು
[ಕೃಪೆ]
NEWSTEAM No. 278468/Sipa Press