ರಾಜ್ಯ ಘೋಷಕರು ವರದಿ ಮಾಡುತ್ತಾರೆ
“ಅನಿರೀಕ್ಷಿತವಾದ ಸಂಗತಿಗಳ ದೇಶ”ದಲ್ಲಿ ಪಂಥಾಹ್ವಾನಗಳನ್ನು ಜಯಿಸುವುದು
ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಹೀಗೆ ಕೇಳಿದನು: “ತುತೂರಿಯು ಗೊತ್ತಿಲ್ಲದ [“ಅಸ್ಪಷ್ಟವಾದ,” NW] ಶಬ್ದವನ್ನು ಕೊಟ್ಟರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು? ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು?”—1 ಕೊರಿಂಥ 14:8, 9.
ಪ್ಯಾಪುವ ನ್ಯೂ ಗಿನೀಯಲ್ಲಿ—ಕೆಲವೊಮ್ಮೆ ಈ ದೇಶವನ್ನು ಅನಿರೀಕ್ಷಿತ ಸಂಗತಿಗಳ ದೇಶವೆಂದು ಕರೆಯಲಾಗುತ್ತದೆ—ಯೆಹೋವನ ಸಾಕ್ಷಿಗಳು, ಬೈಬಲಿನ ಸ್ಪಷ್ಟವಾದ ಸಂದೇಶವನ್ನು ಸಾರುವುದರಲ್ಲಿ ದುಸ್ಸಾಧ್ಯವಾದ ಅಡಚಣೆಗಳನ್ನು ಎದುರಿಸುತ್ತಾರೆ. 700ಕ್ಕಿಂತಲೂ ಹೆಚ್ಚಿನ ವಿಭಿನ್ನ ಭಾಷೆಗಳನ್ನಾಡುವ ಮತ್ತು ತುಂಬ ವೈವಿಧ್ಯಮಯವಾದ ಪದ್ಧತಿಗಳನ್ನು ಹೊಂದಿರುವ ಜನರಿಗೆ ಅವರು ಸಾರುತ್ತಾರೆ. ಸಾಕ್ಷಿಗಳು, ಪರ್ವತಮಯ ಪ್ರದೇಶ, ರಸ್ತೆಗಳ ಕೊರತೆ ಮತ್ತು ಹೆಚ್ಚುತ್ತಿರುವ ಪಾತಕದ ವಿರುದ್ಧವೂ ಹೆಣಗಾಡುತ್ತಾರೆ. ಈ ಎಲ್ಲ ಕಷ್ಟಗಳಲ್ಲದೆ, ನಿರ್ದಿಷ್ಟ ಧಾರ್ಮಿಕ ಗುಂಪುಗಳಿಂದ ಮತ್ತು ಕೆಲವೊಮ್ಮೆ ಶಾಲಾ ಅಧಿಕಾರಿಗಳಿಂದಲೂ ವಿರೋಧವಿದೆ.
ಹಾಗಿದ್ದರೂ, ಒಳ್ಳೆಯ ಆತ್ಮಿಕ ಉಪದೇಶ ಮತ್ತು ಸ್ಥಳಿಕ ಭಾಷೆಗಳಲ್ಲಿ ಬೈಬಲ್ ಅಧ್ಯಯನ ಸಹಾಯಕಗಳ ಬೆಳೆಯುತ್ತಿರುವ ಪುಸ್ತಕಭಂಡಾರವು, ಸುವಾರ್ತೆಯನ್ನು ಒಂದು ಸ್ಪಷ್ಟವಾದ ತುತೂರಿ ಶಬ್ದದಂತೆ ದಾಟಿಸಲು ಸಾಕ್ಷಿಗಳನ್ನು ಸಜ್ಜುಗೊಳಿಸುತ್ತಿದೆ. ಮುಂದಿನ ವರದಿಗಳು ತೋರಿಸುವಂತೆ, ಅನೇಕವೇಳೆ ಪ್ರತಿಕ್ರಿಯೆಯು ಸಕಾರಾತ್ಮಕವಾಗಿರುತ್ತದೆ:
• ಹೊಸ ಶಾಲಾ ವರ್ಷದಾರಂಭದಲ್ಲಿ, ಯೆಹೋವನ ಸಾಕ್ಷಿಗಳ ಮಕ್ಕಳು ಏಕೆ ಧ್ವಜವಂದನೆ ಮಾಡುವುದಿಲ್ಲ ಅಥವಾ ರಾಷ್ಟ್ರಗೀತೆಯನ್ನು ಹಾಡುವುದಿಲ್ಲವೆಂಬುದನ್ನು ಒಬ್ಬ ಶಿಕ್ಷಕನು ತಿಳಿದುಕೊಳ್ಳಬಯಸಿದನು. ಅವನು ತನ್ನ ಪ್ರಶ್ನೆಯನ್ನು, ಒಬ್ಬ ಸ್ನಾನಿತ ಸಾಕ್ಷಿಯಾಗಿದ್ದ 13 ವರ್ಷ ಪ್ರಾಯದ ವಿದ್ಯಾರ್ಥಿನಿ ಮಯೋಲಳಿಗೆ ಕೇಳಿದನು. ಮಯೋಲಳು, ಒಂದು ಸ್ಪಷ್ಟವಾದ, ಶಾಸ್ತ್ರಾಧಾರಿತ ವಿವರಣೆಯನ್ನು ಕೊಟ್ಟಳು. ಆಕೆಯ ತರ್ಕಸರಣಿಯು ಬೈಬಲಿನಿಂದಾಗಿತ್ತಾದುದರಿಂದ ಆ ಶಿಕ್ಷಕನು ಅದನ್ನು ಅಂಗೀಕರಿಸಿದನು. ಆಕೆಯ ವಿವರಣೆಯನ್ನು ಶಾಲಾ ಸಿಬಂದಿಯ ಉಳಿದವರಿಗೂ ತಿಳಿಸಲಾಯಿತು.
ತದನಂತರ, ವಿದ್ಯಾರ್ಥಿಗಳಿಗೆ ಪ್ರಬಂಧಗಳನ್ನು ಬರೆಯುವ ನೇಮಕಗಳು ಕೊಡಲ್ಪಟ್ಟಾಗ, ಮಯೋಲ ತ್ರಯೈಕ್ಯದ ವಿಷಯವನ್ನು ಆರಿಸಿಕೊಂಡಳು. ತರಗತಿಯಲ್ಲಿ, ಆಕೆಯ ಪ್ರಬಂಧಕ್ಕೇ ಅತ್ಯುಚ್ಚ ಅಂಕಗಳು ದೊರೆತವು ಮತ್ತು ಆಕೆಯು ಆ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡಳೆಂದು ಆ ಶಿಕ್ಷಕನು ಆಕೆಯನ್ನು ಕೇಳಿದನು. ಇಂಗ್ಲಿಷ್ ಭಾಷೆಯಲ್ಲಿನ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ಆಕೆ ಅವನಿಗೆ ತೋರಿಸಿದಳು. ಆ ಶಿಕ್ಷಕನು ಮುಂದೆ ಹೋಗಿ, ಆ ಪುಸ್ತಕವನ್ನು ಇಡೀ ತರಗತಿಗೆ ಪ್ರಸ್ತುತಪಡಿಸಿದನು, ಮತ್ತು ಅನೇಕರು ಒಂದು ಸ್ವಂತ ಪ್ರತಿಯನ್ನು ಪಡೆದುಕೊಳ್ಳಲು ಬಯಸಿದರು. ಮರುದಿನ, ಮಯೋಲ ತನ್ನ ಶಾಲಾಸಂಗಾತಿಗಳಿಗೆ 14 ಪುಸ್ತಕಗಳನ್ನು ಮತ್ತು 7 ಪತ್ರಿಕೆಗಳನ್ನು ನೀಡಿದಳು, ಮತ್ತು ಅವರಲ್ಲಿ ಮೂವರೊಂದಿಗೆ ಆಕೆ ಬೈಬಲ್ ಅಧ್ಯಯನಗಳನ್ನು ಆರಂಭಿಸಿದಳು. ಪೂರ್ಣ ಸಮಯದ ಶುಶ್ರೂಷಕಿಯಾಗುವುದು ಮಯೋಲಳ ಗುರಿಯಾಗಿದೆ.
• ಪೋರ್ಟ್ ಮೊರ್ಸ್ಬೈ ಹತ್ತಿರದ ಒಂದು ಕರಾವಳಿ ಹಳ್ಳಿಯಲ್ಲಿ, ಯೆಹೋವನ ಸಾಕ್ಷಿಗಳ ಒಂದು ಏಕಾಂತ ಗುಂಪು, 1970ಗಳ ಆರಂಭದಿಂದ ವಿರೋಧವನ್ನು ಎದುರಿಸಿದೆ. ಆದಾಗಲೂ, ಇತ್ತೀಚೆಗೆ ಅವರು ಒಂದು ಅನಿರೀಕ್ಷಿತ ಮೂಲದಿಂದ ಸಹಾಯವನ್ನು ಪಡೆದುಕೊಂಡರು. ವಿದೇಶದಲ್ಲಿ ಶಿಕ್ಷಣ ಪಡೆದಿದ್ದ, ಪ್ಯಾಪುವ ನ್ಯೂ ಗಿನೀಯ ಒಬ್ಬ ನಿವಾಸಿಯಾದ ಅಲ್ಲಿನ ಯುನೊಯಿಟೆಡ್ ಚರ್ಚ್ನ ಬಿಷಪನು, ಒಂದು ದಿನ ಚರ್ಚಿನಲ್ಲಿ ಸಭಿಕರು ಪ್ರಶ್ನೆಗಳನ್ನು ಕೇಳುವಂತೆ ಆಮಂತ್ರಿಸಿದನು. ಒಬ್ಬ ಮನುಷ್ಯನು ಪ್ರಶ್ನಿಸಿದ್ದು: “ನಮ್ಮ ಹಳ್ಳಿಯಲ್ಲಿ ಎರಡು ಧರ್ಮಗಳಿವೆ—ಯುನೊಯಿಟೆಡ್ ಚರ್ಚ್ ಮತ್ತು ಯೆಹೋವನ ಸಾಕ್ಷಿಗಳು. ಸಾಕ್ಷಿಗಳು ನಮ್ಮ ಮನೆಬಾಗಿಲಿಗೆ ಬರುವಾಗ ನಾವೇನು ಮಾಡಬೇಕು?” ಒಂದು ದೀರ್ಘವಾದ ವಿರಾಮದ ನಂತರ, ಆ ಬಿಷಪನು ಉತ್ತರಿಸಿದ್ದು: “ನಿಮಗೆ ಏನು ಹೇಳಬೇಕೆಂದು ನನಗೆ ನಿಜವಾಗಿಯೂ ಗೊತ್ತಿಲ್ಲ. ಇತ್ತೀಚೆಗೆ, ಇಬ್ಬರು ಯುವ ಸಾಕ್ಷಿಗಳು ನನ್ನ ಮನೆಬಾಗಿಲಿಗೆ ಬಂದಿದ್ದರು. ಅವರು ನನಗೆ ಒಂದು ಪ್ರಶ್ನೆಯನ್ನು ಕೇಳಿದರು, ಮತ್ತು ನನಗೆ ವಿಶ್ವವಿದ್ಯಾನಿಲಯದ ತರಬೇತಿಯಿತ್ತಾದರೂ, ಅದರ ಉತ್ತರ ನನಗೆ ಗೊತ್ತಿರಲಿಲ್ಲ. ಆದರೆ ಅವರು ನನಗೆ ಬೈಬಲಿನಿಂದ ಸುಲಭವಾಗಿ ಉತ್ತರವನ್ನು ಕೊಟ್ಟರು. ಆದುದರಿಂದ ನೀವೇನು ಮಾಡಬೇಕೆಂಬುದನ್ನು ನಾನು ನಿಮಗೆ ಹೇಳುವುದಿಲ್ಲ—ನಾನು ಅದನ್ನು ನಿಮಗೆ ಬಿಟ್ಟುಬಿಡುತ್ತೇನೆ. ನಿಮಗೆ ಇಷ್ಟವಿಲ್ಲದಿದ್ದರೆ ಕೇಳಿಸಿಕೊಳ್ಳಲೇಬೇಕೆಂದೇನಿಲ್ಲ, ಆದರೆ ಅವರೊಂದಿಗೆ ಹಿಂಸಾತ್ಮಕವಾಗಿ ವರ್ತಿಸಬೇಡಿರಿ.”
ತದನಂತರ, ಸಾಕ್ಷಿಗಳ ಈ ಗುಂಪನ್ನು ಭೇಟಿಮಾಡಿದ್ದ, ವಾಚ್ ಟವರ್ ಸೊಸೈಟಿಯ ಒಬ್ಬ ಸಂಚರಣ ಪ್ರತಿನಿಧಿಯು ವರದಿಸಿದ್ದು: “ಸಾಕ್ಷಿಗಳು ಸಾರಲು ಹೋದಾಗ, ಹಳ್ಳಿಯಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರೂ ಅವರಿಗೆ ಕಿವಿಗೊಟ್ಟರು. ಕೆಲವರು ಅವರನ್ನು ತಮ್ಮ ಮನೆಗಳೊಳಗೂ ಆಮಂತ್ರಿಸಿದರು. ಈಗ ಅದು ಸಾರುವ ಕಾರ್ಯಕ್ಕಾಗಿ ಒಂದು ಪ್ರಮೋದವನವಾಗಿದೆ.”