ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?
“ದೇವರ ಪ್ರೀತಿಯ ಅರ್ಥವು ನಾವು ಆತನ ಆಜ್ಞೆಗಳನ್ನು ಅನುಸರಿಸಬೇಕೆಂದೇ; ಆದರೂ ಆತನ ಆಜ್ಞೆಗಳು ಭಾರವಾಗಿರುವವುಗಳಲ್ಲ.”—1 ಯೋಹಾನ 5:3, NW.
1, 2. ತನ್ನನ್ನು ಸ್ವೀಕಾರಾರ್ಹವಾಗಿ ಆರಾಧಿಸಬಯಸುವವರಿಗಾಗಿ ದೇವರು ಆವಶ್ಯಕತೆಗಳನ್ನಿಟ್ಟಿರುವುದು ಆಶ್ಚರ್ಯವಲ್ಲವೇಕೆ?
“ನನ್ನ ಧರ್ಮ ನನಗೆ ಸಾಕಷ್ಟು ತೃಪ್ತಿಕರ!” ಅನೇಕವೇಳೆ ಜನರು ಹೇಳುವುದು ಹಾಗೆಯೇ ಅಲ್ಲವೇ? ಆದರೆ ವಾಸ್ತವವಾಗಿ ಪ್ರಶ್ನೆಯು, “ನನ್ನ ಧರ್ಮ ದೇವರನ್ನು ಮೆಚ್ಚಿಸುತ್ತದೆಯೆ?” ಎಂದಾಗಿರಬೇಕು. ಹೌದು, ತನ್ನನ್ನು ಸ್ವೀಕಾರಾರ್ಹವಾಗಿ ಆರಾಧಿಸಲು ಬಯಸುವವರಿಗಾಗಿ ದೇವರು ಆವಶ್ಯಕತೆಗಳನ್ನು ಇಟ್ಟಿದ್ದಾನೆ. ಅದು ನಮ್ಮನ್ನು ಬೆರಗುಗೊಳಿಸಬೇಕೊ? ಬೆರಗುಗೊಳಿಸಬೇಕೆಂದಿಲ್ಲ. ನೀವು ಸುಂದರ ಗೃಹವೊಂದರ, ಇತ್ತೀಚೆಗೆ ಬಹಳ ಹಣ ವೆಚ್ಚಮಾಡಿ ನವೀಕರಿಸಿದ ಗೃಹವೊಂದರ ಧಣಿಯಾಗಿದ್ದೀರೆಂದು ಭಾವಿಸೋಣ. ಅಲ್ಲಿ ಯಾರೇ ಆಗಲಿ ಬಂದು ಜೀವಿಸುವಂತೆ ನೀವು ಅನುಮತಿಸುವಿರೊ? ನಿಶ್ಚಯವಾಗಿಯೂ ಇಲ್ಲ! ಭಾವೀ ಬಾಡಿಗೆದಾರನು ನಿಮ್ಮ ಆವಶ್ಯಕತೆಗಳನ್ನು ತೃಪ್ತಿಪಡಿಸುವವನಾಗಿರಲೇಬೇಕು.
2 ತದ್ರೀತಿ, ಯೆಹೋವ ದೇವರು ಮಾನವ ಕುಟುಂಬಕ್ಕೆ ಈ ಭೂಗೃಹವನ್ನು ಒದಗಿಸಿದ್ದಾನೆ. ಆತನ ರಾಜ್ಯದಾಳಿಕೆಯಲ್ಲಿ, ಭೂಮಿಯು ಶೀಘ್ರವೇ “ನವೀಕರಿಸಲ್ಪಡುವುದು”—ಸುಂದರ ಪ್ರಮೋದವನವಾಗಿ ರೂಪಾಂತರಗೊಳ್ಳುವುದು. ಯೆಹೋವನು ಇದನ್ನು ಪೂರೈಸುವನು. ಇದನ್ನು ಸಾಧ್ಯಮಾಡುವರೆ, ಆತನು ತನಗೆ ದೊಡ್ಡ ನಷ್ಟಮಾಡಿಕೊಂಡು, ತನ್ನ ಏಕಜಾತ ಪುತ್ರನನ್ನು ಕೊಟ್ಟನು. ಅಲ್ಲಿ ಜೀವಿಸುವವರ ಸಂಬಂಧದಲ್ಲಿ ದೇವರು ಆವಶ್ಯಕತೆಗಳನ್ನು ಇಟ್ಟಿರಲೇಬೇಕೆಂಬುದು ನಿಶ್ಚಯ!—ಕೀರ್ತನೆ 115:16; ಮತ್ತಾಯ 6:9, 10; ಯೋಹಾನ 3:16.
3. ದೇವರು ನಮ್ಮಿಂದ ಅಪೇಕ್ಷಿಸುವುದನ್ನು ಸೊಲೊಮೋನನು ಹೇಗೆ ಸಾರಾಂಶವಾಗಿ ಹೇಳಿದನು?
3 ದೇವರ ಆವಶ್ಯಕತೆಗಳೇನೆಂಬುದನ್ನು ನಾವು ಹೇಗೆ ಕಂಡುಹಿಡಿಯಬಲ್ಲೆವು? ಆತನು ನಮ್ಮಿಂದ ಅಪೇಕ್ಷಿಸುವುದನ್ನು ಸಾರಾಂಶವಾಗಿ ಹೇಳುವರೆ, ಯೆಹೋವನು ಜ್ಞಾನಿ ರಾಜ ಸೊಲೊಮೋನನನ್ನು ಪ್ರೇರಿಸಿದನು. ತಾನು ಬೆನ್ನಟ್ಟಿದ ಸಕಲ ವಿಷಯ—ಐಶ್ವರ್ಯವನ್ನು ಸೇರಿಸಿ, ನಿರ್ಮಾಣ ಯೋಜನೆಗಳು, ಸಂಗೀತಾಭಿರುಚಿಗಳು ಮತ್ತು ಪ್ರಣಯಪ್ರೇಮ—ಗಳನ್ನು ಪುನರಾಲೋಚಿಸಿದ ಬಳಿಕ, ಸೊಲೊಮೋನನು ಈ ಗ್ರಹಿಕೆಗೆ ಬಂದನು: “ಸಕಲವನ್ನೂ ಕೇಳಿಯಾದ ಬಳಿಕ, ವಿಷಯದ ತೀರ್ಮಾನವು ಇದೇ: ಸತ್ಯದೇವರಿಗೆ ಭಯಪಟ್ಟು, ಆತನ ಆಜ್ಞೆಗಳನ್ನು ಪಾಲಿಸು. ಏಕೆಂದರೆ ಇದು ಮನುಷ್ಯನ ಸಂಪೂರ್ಣ ಕರ್ತವ್ಯ.”—ಪ್ರಸಂಗಿ 12:13, NW.
“ಆತನ ಆಜ್ಞೆಗಳು ಭಾರವಾಗಿರುವವುಗಳಲ್ಲ”
4-6. (ಎ) “ಭಾರವಾಗಿರುವ” ಎಂದು ಭಾಷಾಂತರವಾಗಿರುವ ಗ್ರೀಕ್ ಪದದ ಅಕ್ಷರಾರ್ಥವೇನು? (ಬಿ) ದೇವರಾಜ್ಞೆಗಳು ಭಾರವಾದವುಗಳಲ್ಲವೆಂದು ನಾವೇಕೆ ಹೇಳಬಲ್ಲೆವು?
4 “ಆತನ ಆಜ್ಞೆಗಳನ್ನು ಪಾಲಿಸು.” ಮೂಲತಃ, ದೇವರು ನಮ್ಮಿಂದ ಅಪೇಕ್ಷಿಸುವುದು ಅದನ್ನೇ. ಆತನು ಹಾಗೆ ಕೇಳುವುದು ಅತಿರೇಕವೊ? ಖಂಡಿತವಾಗಿಯೂ ಇಲ್ಲ. ಅಪೊಸ್ತಲ ಯೋಹಾನನು ದೇವರ ಆಜ್ಞೆಗಳ ಅಥವಾ ಆವಶ್ಯಕತೆಗಳ ಕುರಿತು ತೀರ ಪುನರಾಶ್ವಾಸನೀಯವಾದ ಒಂದು ವಿಷಯವನ್ನು ಹೇಳುತ್ತಾನೆ. ಅವನು ಬರೆದುದು: “ದೇವರ ಪ್ರೀತಿಯ ಅರ್ಥವು ನಾವು ಆತನ ಆಜ್ಞೆಗಳನ್ನು ಅನುಸರಿಸಬೇಕೆಂದೇ; ಆದರೂ ಆತನ ಆಜ್ಞೆಗಳು ಭಾರವಾಗಿರುವವುಗಳಲ್ಲ.”—1 ಯೋಹಾನ 5:3, NW.
5 “ಭಾರವಾಗಿರುವ” ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್ ಪದದ ಅಕ್ಷರಾರ್ಥವು, “ಹೆಚ್ಚು ತೂಕದ” ಎಂದಾಗಿದೆ. ಅದು, ಹೊಂದಿಕೆಯಾಗಿ ಜೀವಿಸಲು ಕಷ್ಟಕರವಾಗಿರುವ ಅಥವಾ ನೆರವೇರಿಸಲು ಶ್ರಮಸಾಧ್ಯವಾದ ವಿಷಯವನ್ನು ಸೂಚಿಸಬಲ್ಲದು. ಮತ್ತಾಯ 23:4ರಲ್ಲಿ ಅದು, “ಭಾರವಾದ ಹೊರೆಗಳನ್ನು,” (ಓರೆಅಕ್ಷರಗಳು ನಮ್ಮವು.) ಶಾಸ್ತ್ರಿಗಳು ಮತ್ತು ಫರಿಸಾಯರು ಜನರ ಮೇಲೆ ಹೇರಿದ ಮನುಷ್ಯನಿರ್ಮಿತ ನಿಯಮ ಮತ್ತು ಸಂಪ್ರದಾಯಗಳನ್ನು ವರ್ಣಿಸಲು ಉಪಯೋಗಿಸಲ್ಪಟ್ಟಿದೆ. ವೃದ್ಧ ಅಪೊಸ್ತಲ ಯೋಹಾನನು ಏನನ್ನು ತೀರ್ಮಾನಿಸುತ್ತಿದ್ದಾನೆಂಬುದರ ಅರ್ಥ ನಿಮಗಾಗುತ್ತಿದೆಯೆ? ದೇವರ ಆಜ್ಞೆಗಳು ಭಾರವಾದ ಹೊರೆಯೂ ಅಲ್ಲ, ನಮಗೆ ಪಾಲಿಸಲು ತೀರ ಕಷ್ಟಕರವಾದವುಗಳೂ ಅಲ್ಲ. (ಧರ್ಮೋಪದೇಶಕಾಂಡ 30:11ನ್ನು ಹೋಲಿಸಿರಿ.) ಪ್ರತಿಕೂಲವಾಗಿ, ನಾವು ದೇವರನ್ನು ಪ್ರೀತಿಸುವಾಗ, ಆತನ ಆವಶ್ಯಕತೆಗಳಿಗೆ ಹೊಂದಿಕೊಳ್ಳುವುದು ನಮ್ಮನ್ನು ಹರ್ಷಿತರನ್ನಾಗಿ ಮಾಡುತ್ತದೆ. ಇದು, ಯೆಹೋವನಿಗೆ ನಮ್ಮ ಪ್ರೀತಿಯನ್ನು ಪ್ರದರ್ಶಿಸಲು ಒಂದು ಅಮೂಲ್ಯಾವಕಾಶವನ್ನು ಕೊಡುತ್ತದೆ.
6 ದೇವರಿಗೆ ನಮ್ಮ ಪ್ರೀತಿಯನ್ನು ತೋರಿಸಲು, ಆತನು ನಮ್ಮಿಂದ ನಿರ್ದಿಷ್ಟವಾಗಿ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ನಾವು ತಿಳಿಯುವುದು ಆವಶ್ಯಕ. ನಾವೀಗ ದೇವರ ಐದು ಆವಶ್ಯಕತೆಗಳನ್ನು ಚರ್ಚಿಸೋಣ. ನಾವು ಅವುಗಳನ್ನು ಚರ್ಚಿಸುವಾಗ, ‘ದೇವರ ಆಜ್ಞೆಗಳು ಭಾರವಾಗಿರುವವುಗಳಲ್ಲ’ ಎಂದು ಯೋಹಾನನು ಬರೆದುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.
ದೇವರ ಜ್ಞಾನವನ್ನು ಪಡೆದುಕೊಳ್ಳಿರಿ
7. ನಮ್ಮ ರಕ್ಷಣೆಯು ಯಾವುದರ ಮೇಲೆ ಅವಲಂಬಿಸಿದೆ?
7 ಪ್ರಥಮ ಆವಶ್ಯಕತೆಯು ದೇವರ ಜ್ಞಾನವನ್ನು ಪಡೆದುಕೊಳ್ಳುವುದು. ಯೋಹಾನ 17ನೆಯ ಅಧ್ಯಾಯದಲ್ಲಿ ದಾಖಲೆಯಾಗಿರುವ ಯೇಸುವಿನ ಮಾತುಗಳನ್ನು ಪರಿಗಣಿಸಿರಿ. ಸನ್ನಿವೇಶವು ಮಾನವನಾಗಿ ಯೇಸು ಜೀವಿಸಿದ ಕೊನೆಯ ರಾತ್ರಿಯಾಗಿತ್ತು. ಆ ಸಾಯಂಕಾಲದಲ್ಲಿ ಹೆಚ್ಚಿನ ಸಮಯವನ್ನು ಯೇಸು ತನ್ನ ನಿರ್ಗಮನಕ್ಕಾಗಿ ಅಪೊಸ್ತಲರನ್ನು ಸಿದ್ಧಮಾಡುವುದರಲ್ಲಿ ಕಳೆದಿದ್ದನು. ಅವನು ಅವರ ಭವಿಷ್ಯತ್ತಿನ ಕುರಿತಾಗಿ, ಅವರ ನಿತ್ಯ ಭವಿಷ್ಯತ್ತಿನ ವಿಷಯವಾಗಿ ಚಿಂತಿತನಾಗಿದ್ದನು. ಸ್ವರ್ಗಕ್ಕೆ ತನ್ನ ಕಣ್ಣುಗಳನ್ನೆತ್ತಿ, ಅವನು ಅವರಿಗೋಸ್ಕರ ಪ್ರಾರ್ಥಿಸಿದನು. 3ನೆಯ ವಚನದಲ್ಲಿ ನಾವು ಓದುವುದು: “ಒಬ್ಬನೇ ಸತ್ಯ ದೇವರಾದ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಅವರು ಪಡೆದುಕೊಳ್ಳುತ್ತಿರುವುದೇ ನಿತ್ಯಜೀವವು” (NW). ಹೌದು, ಅವರ ರಕ್ಷಣೆಯು, ದೇವರ ಮತ್ತು ಕ್ರಿಸ್ತನ, ಇವರಿಬ್ಬರ ‘ಜ್ಞಾನವನ್ನು ಅವರು ಪಡೆದುಕೊಳ್ಳುವುದರ’ ಮೇಲೆ ಆಧಾರಿಸಿತ್ತು. ಅದು ನಮಗೂ ಅನ್ವಯಿಸುತ್ತದೆ. ರಕ್ಷಣೆಯನ್ನು ಪಡೆದುಕೊಳ್ಳಬೇಕಾದರೆ, ನಾವು ಅಂತಹ ಜ್ಞಾನವನ್ನು ಪಡೆದುಕೊಳ್ಳಲೇಬೇಕು.
8. ದೇವರ ‘ಜ್ಞಾನವನ್ನು ಪಡೆದುಕೊಳ್ಳುವುದು’ ಎಂಬುದು ಏನನ್ನು ಅರ್ಥೈಸುತ್ತದೆ?
8 ‘ದೇವರ ಜ್ಞಾನವನ್ನು ಪಡೆದುಕೊಳ್ಳುವುದರ’ ಅರ್ಥವೇನು? “ಜ್ಞಾನವನ್ನು . . . ಪಡೆದುಕೊಳ್ಳುತ್ತಿರುವುದು” ಎಂದು ಇಲ್ಲಿ ಭಾಷಾಂತರವಾಗಿರುವ ಗ್ರೀಕ್ ಪದವು, “ತಿಳಿದು ಬರು, ಗುರುತಿಸು” ಅಥವಾ “ಸಂಪೂರ್ಣವಾಗಿ ಅರ್ಥಮಾಡಿಕೊ,” ಎಂಬುದನ್ನು ಸೂಚಿಸುತ್ತದೆ. ಮತ್ತು “ಜ್ಞಾನವನ್ನು . . . ಪಡೆದುಕೊಳ್ಳುತ್ತಿರುವುದು” ಎಂಬ ಅನುವಾದವು, ಇದೊಂದು ಮುಂದುವರಿಯುತ್ತಿರುವ ಕಾರ್ಯವಿಧಾನವಾಗಿದೆ ಎಂದು ಸೂಚಿಸುತ್ತದೆಂಬುದನ್ನು ಕೂಡ ಗಮನಿಸಿರಿ. ಹೀಗೆ ದೇವರ ಜ್ಞಾನವನ್ನು ಪಡೆದುಕೊಳ್ಳುವುದೆಂದರೆ, ಆತನನ್ನು ಮೇಲಿಂದ ಮೇಲೆ ತಿಳಿದುಕೊಳ್ಳುವುದಲ್ಲ, ಬದಲಾಗಿ ಆಪ್ತವಾಗಿ ತಿಳಿದುಕೊಳ್ಳುವುದು, ಆತನೊಂದಿಗೆ ಒಮ್ಮನಸ್ಸಿನ ಸ್ನೇಹವನ್ನು ಬೆಳೆಸಿಕೊಳ್ಳುವುದು ಎಂದರ್ಥ. ದೇವರೊಂದಿಗೆ ಮುಂದುವರಿಯುತ್ತಿರುವ ಒಂದು ಸಂಬಂಧವು, ಆತನ ಸದಾ ವರ್ಧಿಸುತ್ತಿರುವ ಜ್ಞಾನವನ್ನು ತರುತ್ತದೆ. ಈ ಕಾರ್ಯವಿಧಾನವು ನಿರಂತರಕ್ಕೂ ಮುಂದುವರಿಯಬಲ್ಲದು, ಏಕೆಂದರೆ ಯೆಹೋವನ ಕುರಿತು ತಿಳಿಯಲಿರುವ ಸಕಲವನ್ನೂ ನಾವೆಂದೂ ಕಲಿಯುವುದಿಲ್ಲ.—ರೋಮಾಪುರ 11:33.
9. ಸೃಷ್ಟಿಗ್ರಂಥದಿಂದ ನಾವು ಯೆಹೋವನ ಕುರಿತು ಏನನ್ನು ಕಲಿಯಬಲ್ಲೆವು?
9 ನಾವು ದೇವರ ಜ್ಞಾನವನ್ನು ಹೇಗೆ ಪಡೆದುಕೊಳ್ಳುತ್ತೇವೆ? ನಮಗೆ ಸಹಾಯ ಮಾಡಸಾಧ್ಯವಿರುವ ಎರಡು ಪುಸ್ತಕಗಳಿವೆ. ಒಂದು ಸೃಷ್ಟಿಗ್ರಂಥ. ಯೆಹೋವನು ಸೃಷ್ಟಿಮಾಡಿರುವ ಸಜೀವ ಮತ್ತು ನಿರ್ಜೀವ ವಸ್ತುಗಳೆರಡೂ, ಆತನು ಯಾವ ವಿಧದ ವ್ಯಕ್ತಿಯೆಂಬುದಕ್ಕೆ ತುಸು ಒಳನೋಟವನ್ನು ಕೊಡುತ್ತವೆ. (ರೋಮಾಪುರ 1:20) ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ. ಘನಗಂಭೀರವಾದ ಒಂದು ಜಲಪಾತದ ಭೋರ್ಗರೆತ, ಬಿರುಗಾಳಿಯ ಸಮಯದಲ್ಲಿ ತೆರೆನೊರೆಯ ಭಾರಿ ಹೊಡೆತ, ಒಂದು ಮಬ್ಬಿಲ್ಲದ ರಾತ್ರಿಯಲ್ಲಿ ತಾರಾಮಯ ಆಕಾಶದ ದೃಶ್ಯ—ಇಂತಹ ಸಂಗತಿಗಳು ಯೆಹೋವನು “ಅತಿ ಬಲಾಢ್ಯ”ನಾದ ದೇವರೆಂಬುದನ್ನು ನಮಗೆ ಕಲಿಸುವುದಿಲ್ಲವೊ? (ಯೆಶಾಯ 40:26) ಒಂದು ಮಗು, ನಾಯಿಮರಿ ತನ್ನ ಬಾಲವನ್ನು ತಾನೇ ಅಟ್ಟಿಸಿಕೊಂಡು ಹೋಗುವುದನ್ನು ನೋಡಿ ನಗಾಡುವಾಗ ಅಥವಾ ಒಂದು ಬೆಕ್ಕಿನ ಮರಿ ನೂಲಿನ ಚೆಂಡಿನೊಂದಿಗೆ ಆಡುವಾಗ—ಅದು “ಭಾಗ್ಯವಂತ [“ಸಂತೋಷವುಳ್ಳ,” NW]ನಾದ ದೇವ”ರಿಗೆ, ಯೆಹೋವನಿಗೆ ವಿನೋದ ಪ್ರವೃತ್ತಿಯಿದೆಯೆಂಬುದನ್ನು ತೋರಿಸುವುದಿಲ್ಲವೊ? (1 ತಿಮೊಥೆಯ 1:11) ರಸವತ್ತಾದ ಒಂದು ಊಟದ ಸ್ವಾದ, ಹುಲ್ಲುಗಾವಲಿನಲ್ಲಿ ಪುಷ್ಪಗಳ ಆಹ್ಲಾದಕರ ಸುವಾಸನೆ, ಒಂದು ಲಲಿತ ರಚನೆಯ ಪತಂಗದ ಉಜ್ವಲ ವರ್ಣಗಳು, ವಸಂತಕಾಲದಲ್ಲಿ ಹಾಡುವ ಪಕ್ಷಿಗಳ ಸ್ವರ, ಒಬ್ಬ ಪ್ರಿಯನ ಹೃದಯೋಲ್ಲಾಸಗೊಳಿಸುವ ಆಲಿಂಗನ—ಇಂತಹ ವಿಷಯಗಳಿಂದ, ನಮ್ಮ ಸೃಷ್ಟಿಕರ್ತನು ಪ್ರೀತಿಸುವ, ನಾವು ಜೀವನದಲ್ಲಿ ಆನಂದಿಸಬೇಕೆಂದು ಬಯಸುವ ದೇವರೆಂಬುದಾಗಿ ನಾವು ವಿವೇಚಿಸುವುದಿಲ್ಲವೊ?—1 ಯೋಹಾನ 4:8.
10, 11. (ಎ) ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತ ಯಾವ ಸಂಗತಿಗಳನ್ನು ನಾವು ಸೃಷ್ಟಿಗ್ರಂಥದಿಂದ ಕಲಿಯಸಾಧ್ಯವಿಲ್ಲ? (ಬಿ) ಯಾವ ಪ್ರಶ್ನೆಗಳಿಗೆ ಉತ್ತರಗಳು ಬೈಬಲಿನಲ್ಲಿ ಮಾತ್ರ ಕಂಡುಕೊಳ್ಳಲ್ಪಡುತ್ತವೆ?
10 ಆದರೂ, ಯೆಹೋವನ ಕುರಿತು ನಾವು ಸೃಷ್ಟಿಗ್ರಂಥದಿಂದ ಏನನ್ನು ಕಲಿಯಸಾಧ್ಯವಿದೆಯೊ ಅದಕ್ಕೊಂದು ಮಿತಿಯಿದೆ. ಉದಾಹರಣೆ: ದೇವರ ಹೆಸರೇನು? ಆತನು ಭೂಮಿಯನ್ನು ಸೃಷ್ಟಿಸಿ ಅದರಲ್ಲಿ ಮಾನವಕುಲವನ್ನು ಇಟ್ಟದ್ದೇಕೆ? ದೇವರು ದುಷ್ಟತ್ವವನ್ನು ಅನುಮತಿಸುವುದೇಕೆ? ಭವಿಷ್ಯತ್ತು ನಮಗಾಗಿ ಏನನ್ನು ಕಾದಿರಿಸಿದೆ? ಇಂತಹ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು, ನಾವು ದೇವರ ಜ್ಞಾನವನ್ನು ಒದಗಿಸುವ ಆ ಇನ್ನೊಂದು ಪುಸ್ತಕವಾದ ಬೈಬಲಿನ ಕಡೆಗೆ ತೆರಳಬೇಕು. ಅದರ ಪುಟಗಳಲ್ಲಿ ಯೆಹೋವನು, ತನ್ನ ಹೆಸರು, ತನ್ನ ವ್ಯಕ್ತಿತ್ವ ಮತ್ತು ತನ್ನ ಉದ್ದೇಶಗಳು ಸೇರಿರುವ, ತನ್ನ ಕುರಿತಾಗಿರುವ ವಿಷಯಗಳನ್ನು—ಇನ್ನಾವ ಮೂಲದಿಂದಲೂ ನಮಗೆ ದೊರೆಯಸಾಧ್ಯವಿಲ್ಲದ ವಿಷಯಗಳನ್ನು ತಿಳಿಯಪಡಿಸುತ್ತಾನೆ.—ವಿಮೋಚನಕಾಂಡ 34:6, 7; ಕೀರ್ತನೆ 83:18; ಆಮೋಸ 3:7.
11 ಶಾಸ್ತ್ರಗಳಲ್ಲಿ ಯೆಹೋವನು, ನಾವು ತಿಳಿಯಬೇಕಾಗಿರುವ ಇತರ ವ್ಯಕ್ತಿಗಳ ಕುರಿತೂ ಮಹತ್ವದ ಜ್ಞಾನವನ್ನು ಒದಗಿಸುತ್ತಾನೆ. ದೃಷ್ಟಾಂತಕ್ಕಾಗಿ, ಯೇಸು ಕ್ರಿಸ್ತನು ಯಾರು, ಮತ್ತು ಯೆಹೋವನ ಉದ್ದೇಶಗಳ ನೆರವೇರಿಕೆಯಲ್ಲಿ ಅವನು ಯಾವ ಪಾತ್ರವನ್ನು ವಹಿಸುತ್ತಾನೆ? (ಅ. ಕೃತ್ಯಗಳು 4:12) ಪಿಶಾಚನಾದ ಸೈತಾನನು ಯಾರು? ಅವನು ಜನರನ್ನು ತಪ್ಪುದಾರಿಗೆಳೆಯುವುದು ಹೇಗೆ? ಅವನಿಂದ ತಪ್ಪುದಾರಿಗೆಳೆಯಲ್ಪಡುವುದರಿಂದ ನಾವು ಹೇಗೆ ತಪ್ಪಿಸಿಕೊಳ್ಳಬಲ್ಲೆವು? (1 ಪೇತ್ರ 5:8) ಈ ಪ್ರಶ್ನೆಗಳಿಗಿರುವ ಜೀವರಕ್ಷಕ ಉತ್ತರಗಳು, ಬೈಬಲಿನಲ್ಲಿ ಮಾತ್ರ ಕಂಡುಬರುತ್ತವೆ.
12. ದೇವರ ಮತ್ತು ಆತನ ಉದ್ದೇಶಗಳ ಜ್ಞಾನವನ್ನು ಪಡೆದುಕೊಳ್ಳುವುದು ಒಂದು ಹೊರೆಯಾಗಿರುವುದಿಲ್ಲವೆಂಬುದನ್ನು ನೀವು ಹೇಗೆ ವಿವರಿಸುವಿರಿ?
12 ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಇಂತಹ ಜ್ಞಾನವನ್ನು ಪಡೆದುಕೊಳ್ಳುವುದು ಒಂದು ಹೊರೆಯಾಗಿದೆಯೊ? ನಿಶ್ಚಯವಾಗಿಯೂ ಇಲ್ಲ! ನೀವು ಪ್ರಪ್ರಥಮವಾಗಿ ದೇವರ ಹೆಸರು ಯೆಹೋವ, ಆತನ ರಾಜ್ಯವು ಈ ಭೂಮಿಗೆ ಪ್ರಮೋದವನವನ್ನು ಪುನಸ್ಸ್ಥಾಪಿಸುವುದು, ಆತನು ನಮ್ಮ ಪಾಪಗಳಿಗಾಗಿ ತನ್ನ ಪ್ರಿಯ ಕುಮಾರನನ್ನು ಪ್ರಾಯಶ್ಚಿತ್ತವಾಗಿ ಕೊಟ್ಟನು, ಇವೇ ಮೊದಲಾದ ಇತರ ಅಮೂಲ್ಯ ಸತ್ಯಗಳನ್ನು ತಿಳಿದುಕೊಂಡಾಗ ನಿಮಗೆ ಹೇಗನಿಸಿತೆಂಬುದನ್ನು ಜ್ಞಾಪಿಸಿಕೊಳ್ಳಬಲ್ಲಿರೊ? ಅದು ಅಜ್ಞಾನದ ಪರದೆಯನ್ನು ತೆಗೆದು, ಪ್ರಥಮ ಬಾರಿ ವಿಷಯಗಳನ್ನು ಸ್ಪಷ್ಟವಾಗಿ ನೋಡಿದಂತಿರಲಿಲ್ಲವೊ? ದೇವರ ಜ್ಞಾನವನ್ನು ಪಡೆದುಕೊಳ್ಳುವುದು ಒಂದು ಹೊರೆಯಲ್ಲ. ಅದು ಹರ್ಷಕರ!—ಕೀರ್ತನೆ 1:1-3; 119:97.
ದೇವರ ಮಟ್ಟಗಳಿಗೆ ಹೊಂದಿಕೊಳ್ಳುವುದು
13, 14. (ಎ) ನಾವು ದೇವರ ಜ್ಞಾನವನ್ನು ಪಡೆದುಕೊಂಡಂತೆ, ನಮ್ಮ ಜೀವಿತಗಳಲ್ಲಿ ಯಾವ ಬದಲಾವಣೆಗಳನ್ನು ಮಾಡುವುದು ಅಗತ್ಯ? (ಬಿ) ನಾವು ಯಾವ ಅಶುದ್ಧ ಆಚಾರಗಳನ್ನು ನಿಲ್ಲಿಸುವಂತೆ ದೇವರು ಅಪೇಕ್ಷಿಸುತ್ತಾನೆ?
13 ನಾವು ದೇವರ ಜ್ಞಾನವನ್ನು ಪಡೆದುಕೊಂಡಂತೆ, ನಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವ ಅಗತ್ಯವನ್ನು ನಾವು ಮನಗಾಣುತ್ತೇವೆ. ಇದು ನಮ್ಮನ್ನು ಎರಡನೆಯ ಆವಶ್ಯಕತೆಗೆ ತಂದು ಮುಟ್ಟಿಸುತ್ತದೆ. ನಾವು ಸಮರ್ಪಕ ನಡತೆಗಾಗಿರುವ ದೇವರ ಮಟ್ಟಕ್ಕೆ ಹೊಂದಿಕೊಂಡು, ಆತನ ಸತ್ಯವನ್ನು ಸ್ವೀಕರಿಸಬೇಕು. ಸತ್ಯವೆಂದರೇನು? ನಾವೇನು ನಂಬುತ್ತೇವೊ, ನಾವೇನು ಮಾಡುತ್ತೇವೊ ಎಂಬುದು ದೇವರಿಗೆ ಪ್ರಮುಖತೆಯದ್ದಾಗಿದೆಯೊ? ಇಂದು ಅನೇಕ ಜನರು ಅದು ಪ್ರಮುಖತೆಯದ್ದಾಗಿರುವುದಿಲ್ಲವೆಂದು ಯೋಚಿಸುತ್ತಾರೆಂಬುದು ವ್ಯಕ್ತ. ಚರ್ಚ್ ಆಫ್ ಇಂಗ್ಲೆಂಡ್ 1995ರಲ್ಲಿ ಪ್ರಕಟಿಸಿದ ವರದಿಯೊಂದು, ಮದುವೆಯಾಗದೆ ಕೂಡಿ ಜೀವಿಸುವುದನ್ನು ಪಾಪವೆಂದು ವೀಕ್ಷಿಸಬಾರದೆಂದು ಸೂಚಿಸಿತು. “‘ಪಾಪದಲ್ಲಿ ಜೀವಿಸುವುದು’ ಎಂಬ ವಾಕ್ಸರಣಿಯು ಕಳಂಕ ಹಚ್ಚುವುದರಿಂದ, ಸಹಾಯಕರವಲ್ಲ” ಎಂದರು ಒಬ್ಬ ಚರ್ಚ್ ಬಿಷಪರು.
14 ಹಾಗಾದರೆ, “ಪಾಪದಲ್ಲಿ ಜೀವಿಸುವುದು,” ಈ ಮುಂದೆ ಪಾಪವಲ್ಲವೊ? ಇಂತಹ ನಡತೆಯ ಕುರಿತು ಯೆಹೋವನ ಅನಿಸಿಕೆಯೇನೆಂಬುದನ್ನು ಆತನು ಅತಿ ಸ್ಪಷ್ಟವಾಗಿ ನಮಗೆ ತಿಳಿಸುತ್ತಾನೆ. ಆತನ ವಾಕ್ಯವಾದ ಬೈಬಲು, “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ,” ಎಂದು ಹೇಳುತ್ತದೆ. (ಇಬ್ರಿಯ 13:3, 4) ಉದಾರಮನಸ್ಸಿನ ಪುರೋಹಿತರು ಮತ್ತು ಚರ್ಚ್ಹೋಕರ ದೃಷ್ಟಿಯಲ್ಲಿ, ವಿವಾಹಪೂರ್ವ ಸಂಭೋಗವು ಪಾಪವಾಗಿರಲಿಕ್ಕಿಲ್ಲವಾದರೂ, ದೇವರ ದೃಷ್ಟಿಯಲ್ಲಿ ಅದು ಗಂಭೀರವಾದ ಪಾಪ! ವ್ಯಭಿಚಾರ, ಅಗಮ್ಯಗಮನ ಮತ್ತು ಸಲಿಂಗಿಕಾಮವೂ ಹಾಗೆಯೇ. (ಯಾಜಕಕಾಂಡ 18:6; 1 ಕೊರಿಂಥ 6:9, 10) ನಾವು ಅಂತಹ ಆಚಾರಗಳನ್ನು ನಿಲ್ಲಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಆತನು ಅವನ್ನು ಅಶುದ್ಧವೆಂದು ವೀಕ್ಷಿಸುತ್ತಾನೆ.
15. ನಾವು ಇತರರನ್ನು ಉಪಚರಿಸುವ ವಿಧ ಮತ್ತು ನಾವು ನಂಬುವ ಸಂಗತಿಗಳು—ಇವೆರಡೂ ದೇವರ ಆವಶ್ಯಕತೆಗಳಲ್ಲಿ ಹೇಗೆ ಸೇರಿರುತ್ತವೆ?
15 ಆದರೂ, ದೇವರು ಪಾಪಕರವೆಂದು ವೀಕ್ಷಿಸುವ ಆಚಾರಗಳನ್ನು ನಿಲ್ಲಿಸುವುದಷ್ಟೇ ಸಾಲದು. ನಾವು ಇತರರನ್ನು ಉಪಚರಿಸುವ ವಿಧವೂ ದೇವರ ಆವಶ್ಯಕತೆಗಳಲ್ಲಿ ಒಳಗೂಡಿದೆ. ಕುಟುಂಬದಲ್ಲಿ ಪತಿಪತ್ನಿಯರು ಪರಸ್ಪರ ಪ್ರೀತಿ, ಸನ್ಮಾನಗಳನ್ನು ತೋರಿಸಬೇಕೆಂದು ಆತನು ಅಪೇಕ್ಷಿಸುತ್ತಾನೆ. ಹೆತ್ತವರು ತಮ್ಮ ಮಕ್ಕಳ ಪ್ರಾಪಂಚಿಕ, ಆತ್ಮಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಬೇಕೆಂದು ದೇವರು ಅಪೇಕ್ಷಿಸುತ್ತಾನೆ. ತಮ್ಮ ಹೆತ್ತವರಿಗೆ ವಿಧೇಯರಾಗಿರಬೇಕೆಂದು ಆತನು ಮಕ್ಕಳಿಗೆ ಹೇಳುತ್ತಾನೆ. (ಜ್ಞಾನೋಕ್ತಿ 22:6; ಕೊಲೊಸ್ಸೆ 3:18-21) ಮತ್ತು ನಮ್ಮ ನಂಬಿಕೆಗಳ ವಿಷಯದಲ್ಲೇನು? ಮಿಥ್ಯಾರಾಧನೆಯಿಂದ ಬರುವ ಅಥವಾ ಬೈಬಲಿನಲ್ಲಿ ಕಲಿಸಲ್ಪಡುವ ಸ್ಪಷ್ಟವಾದ ಸತ್ಯಕ್ಕೆ ವಿರೋಧವಾಗಿರುವ ನಂಬಿಕೆಗಳನ್ನೂ ವಾಡಿಕೆಗಳನ್ನೂ ನಾವು ವರ್ಜಿಸುವಂತೆ ಯೆಹೋವ ದೇವರು ಬಯಸುತ್ತಾನೆ.—ಧರ್ಮೋಪದೇಶಕಾಂಡ 18:9-13; 2 ಕೊರಿಂಥ 6:14-17.
16. ಸಮರ್ಪಕ ನಡತೆಗಾಗಿರುವ ದೇವರ ಮಟ್ಟಗಳಿಗೆ ಹೊಂದಿಕೊಳ್ಳುವುದು ಮತ್ತು ಆತನ ಸತ್ಯವನ್ನು ಸ್ವೀಕರಿಸುವುದು—ಇದು ಏಕೆ ಒಂದು ಹೊರೆಯಾಗಿರುವುದಿಲ್ಲವೆಂಬುದನ್ನು ವಿವರಿಸಿರಿ.
16 ಸಮರ್ಪಕ ನಡತೆಗಾಗಿರುವ ದೇವರ ಮಟ್ಟಕ್ಕೆ ಹೊಂದಿಕೊಂಡು, ಆತನ ಸತ್ಯವನ್ನು ಸ್ವೀಕರಿಸುವುದು ನಮಗೊಂದು ಹೊರೆಯಾಗಿದೆಯೊ? ನಾವು ಪ್ರಯೋಜನಗಳನ್ನು ಪರಿಗಣಿಸುವಾಗಲಾದರೊ ಹೊರೆಯಾಗಿಲ್ಲ—ವಿವಾಹಗಳು ಅಪನಂಬಿಗಸ್ತಿಕೆಯಿಂದ ಛಿದ್ರಗೊಳ್ಳುವ ಬದಲು, ಗಂಡಹೆಂಡಿರು ಪರಸ್ಪರ ಪ್ರೀತಿ ಮತ್ತು ಭರವಸೆಯಿಂದಿರುವ ವಿವಾಹಗಳು; ಮಕ್ಕಳು ಪ್ರೀತಿಸಲ್ಪಡದಿದ್ದು, ಅಸಡ್ಡೆಮಾಡಲ್ಪಟ್ಟು, ಬೇಡವಾದವರಾಗಿರುವ ಮನೆಗಳ ಬದಲು, ಹೆತ್ತವರಿಂದ ಪ್ರೀತಿಸಲ್ಪಟ್ಟು ಬೇಕಾದವರಾಗಿ ಎಣಿಸಲ್ಪಡುವ ಮನೆಗಳು; ದೋಷಿ ಭಾವನೆಗಳು ಮತ್ತು ಏಡ್ಸ್ ಅಥವಾ ಇನ್ನಿತರ ರತಿ ರವಾನಿತ ರೋಗಗಳಿಂದ ದೇಹವು ಧ್ವಂಸಗೊಳಿಸಲ್ಪಡುವ ಬದಲು, ಶುದ್ಧ ಮನಸ್ಸಾಕ್ಷಿ ಮತ್ತು ಸದಾರೋಗ್ಯ. ಯೆಹೋವನ ಆವಶ್ಯಕತೆಗಳು, ನಾವು ಜೀವನದಲ್ಲಿ ಆನಂದಿಸುವುದಕ್ಕೆ ಬೇಕಾಗುವ ಯಾವುದನ್ನೂ ಅಪಹರಿಸುವುದಿಲ್ಲವೆಂಬುದು ನಿಶ್ಚಯ!—ಧರ್ಮೋಪದೇಶಕಾಂಡ 10:12, 13.
ಜೀವ ಮತ್ತು ರಕ್ತಕ್ಕೆ ಗೌರವವನ್ನು ತೋರಿಸಿರಿ
17. ಯೆಹೋವನು ಜೀವವನ್ನೂ ರಕ್ತವನ್ನೂ ಹೇಗೆ ವೀಕ್ಷಿಸುತ್ತಾನೆ?
17 ನೀವು ನಿಮ್ಮ ಜೀವವನ್ನು ದೇವರ ಮಟ್ಟಗಳಿಗೆ ಹೊಂದಿಸಿಕೊಳ್ಳುವಾಗ, ಜೀವವು ನಿಜವಾಗಿಯೂ ಎಷ್ಟು ಅಮೂಲ್ಯವಾದದ್ದಾಗಿದೆಯೆಂದು ನೀವು ಗಣ್ಯಮಾಡತೊಡಗುತ್ತೀರಿ. ನಾವೀಗ ದೇವರ ಮೂರನೆಯ ಆವಶ್ಯಕತೆಯನ್ನು ಚರ್ಚಿಸೋಣ. ನಾವು ಜೀವ ಮತ್ತು ರಕ್ತಕ್ಕೆ ಗೌರವವನ್ನು ತೋರಿಸಬೇಕು. ಜೀವವು ಯೆಹೋವನಿಗೆ ಪವಿತ್ರವಾಗಿದೆ. ಅದು ಪವಿತ್ರವಾಗಿರಬೇಕು, ಏಕೆಂದರೆ ಆತನು ಜೀವದ ಬುಗ್ಗೆಯಾಗಿದ್ದಾನೆ. (ಕೀರ್ತನೆ 36:9) ಅಷ್ಟೇಕೆ, ತಾಯಿಯ ಒಳಗಿರುವ ಒಂದು ಅಜಾತ ಶಿಶುವಿನ ಜೀವವು ಕೂಡ ಯೆಹೋವನಿಗೆ ಅಮೂಲ್ಯವಾಗಿದೆ! (ವಿಮೋಚನಕಾಂಡ 21:22, 23) ರಕ್ತವು ಜೀವವನ್ನು ಪ್ರತಿನಿಧಿಸುತ್ತದೆ. ಆದಕಾರಣ, ರಕ್ತವೂ ದೇವರ ದೃಷ್ಟಿಯಲ್ಲಿ ಪವಿತ್ರವಾಗಿದೆ. (ಯಾಜಕಕಾಂಡ 17:14) ಹಾಗಾದರೆ ತಾನು ವೀಕ್ಷಿಸುವಂತೆ ನಾವೂ ಜೀವ ಮತ್ತು ರಕ್ತವನ್ನು ವೀಕ್ಷಿಸಬೇಕೆಂದು ದೇವರು ಬಯಸುವುದು ಆಶ್ಚರ್ಯಕರವಾಗಿರಬಾರದು.
18. ಜೀವ ಮತ್ತು ರಕ್ತದ ಕುರಿತ ಯೆಹೋವನ ವೀಕ್ಷಣವು ನಮ್ಮಿಂದ ಏನನ್ನು ಅಪೇಕ್ಷಿಸುತ್ತದೆ?
18 ಜೀವ ಮತ್ತು ರಕ್ತಕ್ಕೆ ಗೌರವವು ನಮ್ಮಿಂದ ಏನನ್ನು ಅಪೇಕ್ಷಿಸುತ್ತದೆ? ಕ್ರೈಸ್ತರಾಗಿರುವ ನಾವು ಕೇವಲ ಭಾವೋದ್ವೇಗಕ್ಕಾಗಿ ನಮ್ಮ ಜೀವಗಳನ್ನು ಅನಾವಶ್ಯಕ ಅಪಾಯಕ್ಕೊಡ್ಡುವುದಿಲ್ಲ. ನಾವು ಸುರಕ್ಷಿತತೆಯ ಪ್ರಜ್ಞೆಯುಳ್ಳವರಾಗಿರುವುದರಿಂದ, ನಮ್ಮ ಕಾರುಗಳು ಮತ್ತು ಮನೆಗಳು ಸುರಕ್ಷಿತವೆಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. (ಧರ್ಮೋಪದೇಶಕಾಂಡ 22:8) ನಾವು ತಂಬಾಕನ್ನು ಉಪಯೋಗಿಸುವುದಿಲ್ಲ, ಅಡಿಕೆ ಜಗಿಯುವುದಿಲ್ಲ, ಚಟ ಹಿಡಿಸುವ ಅಥವಾ ಮನಸ್ಸು ಕೊಂಕಿಸುವ ಅಮಲೌಷಧಗಳನ್ನು ಸುಖಾನುಭವಕ್ಕಾಗಿ ಸೇವಿಸುವುದಿಲ್ಲ. (2 ಕೊರಿಂಥ 7:1) ‘ರಕ್ತವನ್ನು ವರ್ಜಿಸಿರಿ’ ಎಂದು ದೇವರು ಹೇಳುವಾಗ ನಾವು ಆತನಿಗೆ ಕಿವಿಗೊಡುವ ಕಾರಣ, ರಕ್ತವನ್ನು ನಮ್ಮ ಶರೀರಗಳೊಳಗೆ ಪೂರಣಮಾಡಲು ನಾವು ಅನುಮತಿಸುವುದಿಲ್ಲ. (ಅ. ಕೃತ್ಯಗಳು 15:28, 29) ನಾವು ಜೀವವನ್ನು ಪ್ರೀತಿಸುತ್ತೇವಾದರೂ, ದೇವರ ನಿಯಮವನ್ನು ಮುರಿದು, ನಮ್ಮ ಸದ್ಯದ ಜೀವವನ್ನು ರಕ್ಷಿಸಪ್ರಯತ್ನಿಸಿ, ಹೀಗೆ ನಮ್ಮ ನಿತ್ಯ ಜೀವದ ಪ್ರತೀಕ್ಷೆಗೆ ಗಂಡಾಂತರವನ್ನು ತಂದುಕೊಳ್ಳೆವು!—ಮತ್ತಾಯ 16:25.
19. ಜೀವ ಮತ್ತು ರಕ್ತಕ್ಕೆ ಗೌರವವನ್ನು ತೋರಿಸುವುದರಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆಂಬುದನ್ನು ವಿವರಿಸಿರಿ.
19 ಜೀವ ಮತ್ತು ರಕ್ತವನ್ನು ಪವಿತ್ರವಾಗಿ ವೀಕ್ಷಿಸುವುದು ನಮಗೊಂದು ಹೊರೆಯಾಗಿದೆಯೊ? ನಿಶ್ಚಯವಾಗಿಯೂ ಹೊರೆಯಲ್ಲ! ಇದರ ಕುರಿತು ಯೋಚಿಸಿರಿ. ತಂಬಾಕು ಸೇದುವುದರಿಂದಾಗಿ ಬರುವ ಶ್ವಾಸಕೋಶದ ಕ್ಯಾನ್ಸರ್ನಿಂದ ವಿಮುಕ್ತರಾಗುವುದು ಒಂದು ಹೊರೆಯಾಗಿದೆಯೊ? ಹಾನಿಕಾರಕ ಅಮಲೌಷಧಗಳಿಗೆ ಒಳಗಾಗುವ ಮಾನಸಿಕ ಹಾಗೂ ಶಾರೀರಿಕ ವ್ಯಸನಗಳಿಂದ ತಪ್ಪಿಸಿಕೊಳ್ಳುವುದು ಒಂದು ಹೊರೆಯೊ? ಏಡ್ಸ್, ಹೆಪಟೈಟಿಸ್ ಅಥವಾ ರಕ್ತಪೂರಣದಿಂದ ಬರುವ ಬೇರೆ ರೋಗವನ್ನು ಸೋಂಕಿಸಿಕೊಳ್ಳುವುದರಿಂದ ದೂರವಿರುವುದು ಒಂದು ಹೊರೆಯಾಗಿದೆಯೊ? ಗಾಸಿಗೊಳಿಸುವ ಅಭ್ಯಾಸಗಳು ಮತ್ತು ಆಚಾರಗಳಿಂದ ದೂರವಿರುವುದು, ನಮ್ಮ ಪರಮ ಹಿತಾಸಕ್ತಿಯ ಪರವಾಗಿದೆಯೆಂಬುದು ಸ್ಪಷ್ಟ.—ಯೆಶಾಯ 48:17.
20. ಜೀವದ ಕುರಿತ ದೇವರ ವೀಕ್ಷಣವಿದ್ದುದರಿಂದ ಒಂದು ಕುಟುಂಬಕ್ಕೆ ಹೇಗೆ ಪ್ರಯೋಜನವಾಯಿತು?
20 ಈ ಅನುಭವವನ್ನು ಪರಿಗಣಿಸಿರಿ. ಕೆಲವು ವರ್ಷಗಳ ಹಿಂದೆ, ಸುಮಾರು ಮೂರೂವರೆ ತಿಂಗಳುಗಳ ಗರ್ಭಿಣಿಯಾಗಿದ್ದ ಒಬ್ಬ ಸಾಕ್ಷಿ ಸ್ತ್ರೀ, ಒಂದು ಸಾಯಂಕಾಲ ರಕ್ತಸ್ರವಿಸಲಾರಂಭಿಸಿದ್ದರಿಂದ ತ್ವರೆಯಾಗಿ ಆಸ್ಪತ್ರೆಗೆ ಒಯ್ಯಲ್ಪಟ್ಟಳು. ಒಬ್ಬ ಡಾಕ್ಟರರು ಆಕೆಯನ್ನು ಪರೀಕ್ಷಿಸಿದ ಬಳಿಕ, ಅವರು ನರ್ಸ್ಗಳಲ್ಲಿ ಒಬ್ಬಳೊಂದಿಗೆ, ತಾವು ಆ ಗರ್ಭವನ್ನು ಕೊನೆಗಾಣಿಸಬೇಕಾಗುತ್ತದೆಂದು ಹೇಳುವುದನ್ನು ಆಕೆ ಕೇಳಿಸಿಕೊಂಡಳು. ಯೆಹೋವನು ಅಜಾತ ಶಿಶುವಿನ ಜೀವವನ್ನು ಹೇಗೆ ವೀಕ್ಷಿಸುತ್ತಾನೆಂದು ತಿಳಿದಿದ್ದ ಅವಳು, “ಅದು ಜೀವದಿಂದಿರುವಲ್ಲಿ ಅದನ್ನು ಹಾಗೆಯೇ ಅಲ್ಲಿರುವಂತೆ ಬಿಡಿ!” ಎಂದು ಡಾಕ್ಟರರಿಗೆ ಹೇಳುತ್ತ, ಗರ್ಭಪಾತವನ್ನು ದೃಢಮನಸ್ಸಿನಿಂದ ನಿರಾಕರಿಸಿದಳು. ಆಕೆ ಆಗಾಗ ರಕ್ತಸ್ರವಿಸುವುದನ್ನು ಮುಂದುವರಿಸಿದರೂ, ಕೆಲವು ತಿಂಗಳುಗಳ ಬಳಿಕ ಆಕೆ, ಈಗ 17 ವರ್ಷ ವಯಸ್ಸಿನವನಾಗಿರುವ ಒಬ್ಬ ಆರೋಗ್ಯವಂತ ಹುಡುಗನನ್ನು ಸಮಯಕ್ಕೆ ಮುಂಚೆ ಹೆತ್ತಳು. ಆಕೆ ವಿವರಿಸಿದ್ದು: “ಇದೆಲ್ಲವನ್ನೂ ನಮ್ಮ ಮಗನಿಗೆ ಹೇಳಿದಾಗ, ಅವನು ತನ್ನನ್ನು ಕಸದ ಬುಟ್ಟಿಗೆ ಎಸೆಯದಿದ್ದುದಕ್ಕಾಗಿ ತಾನು ಸಂತೋಷಪಡುತ್ತೇನೆಂದು ಹೇಳಿದನು. ನಾವು ಯೆಹೋವನನ್ನು ಸೇವಿಸುತ್ತಿರುವುದೇ ತಾನು ಜೀವದಿಂದಿರುವುದರ ಏಕಮಾತ್ರ ಕಾರಣವೆಂದು ಅವನಿಗೆ ತಿಳಿದದೆ.” ನಿಶ್ಚಯವಾಗಿಯೂ, ಜೀವದ ಕುರಿತ ದೇವರ ವೀಕ್ಷಣವಿರುವುದು ಈ ಕುಟುಂಬಕ್ಕೆ ಹೊರೆಯಾಗಿರಲಿಲ್ಲ!
ಯೆಹೋವನ ಸಂಘಟಿತ ಜನರೊಂದಿಗೆ ಸೇವಿಸುವುದು
21, 22. (ಎ) ನಾವು ಯಾರ ಕೂಡ ತನ್ನನ್ನು ಸೇವಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ? (ಬಿ) ದೇವರ ಸಂಘಟಿತ ಜನರನ್ನು ಹೇಗೆ ಗುರುತಿಸಸಾಧ್ಯವಿದೆ?
21 ನಮ್ಮ ಜೀವಿತಗಳನ್ನು ದೇವರ ಮಟ್ಟಗಳಿಗೆ ಹೊಂದಿಸಿಕೊಳ್ಳಲು ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದರಲ್ಲಿ ನಾವು ಒಂಟಿಗರಾಗಿರುವುದಿಲ್ಲ. ಯೆಹೋವನಿಗೆ ಈ ಭೂಮಿಯಲ್ಲಿ ಜನರಿದ್ದಾರೆ ಮತ್ತು ನಾವು ಅವರೊಂದಿಗೆ ಕೂಡಿ ತನ್ನನ್ನು ಸೇವಿಸುವಂತೆ ಆತನು ಬಯಸುತ್ತಾನೆ. ಇದು ನಮ್ಮನ್ನು ನಾಲ್ಕನೆಯ ಆವಶ್ಯಕತೆಗೆ ಕೊಂಡೊಯ್ಯುತ್ತದೆ. ನಾವು ಯೆಹೋವನ ಆತ್ಮನಿರ್ದೇಶಿತ ಸಂಸ್ಥೆಯೊಂದಿಗೆ ಆತನ ಸೇವೆಮಾಡಬೇಕು.
22 ಆದರೆ ದೇವರ ಸಂಘಟಿತ ಜನರನ್ನು ಗುರುತಿಸುವುದಾದರೂ ಹೇಗೆ? ಶಾಸ್ತ್ರದಲ್ಲಿ ಕೊಡಲ್ಪಟ್ಟಿರುವ ಮಟ್ಟಗಳಿಗನುಸಾರ, ಅವರೊಳಗೆ ನಿಜ ಪ್ರೀತಿಯೂ, ಬೈಬಲಿಗೆ ಆಳವಾದ ಗೌರವವೂ ಇರುವುದಲ್ಲದೆ, ಅವರು ದೇವರ ನಾಮವನ್ನು ಸನ್ಮಾನಿಸಿ, ಆತನ ರಾಜ್ಯದ ಕುರಿತಾಗಿ ಸಾರುತ್ತಾರೆ ಮತ್ತು ಅವರು ಈ ದುಷ್ಟ ಲೋಕದ ಭಾಗವಾಗಿರುವುದಿಲ್ಲ. (ಮತ್ತಾಯ 6:9; 24:14; ಯೋಹಾನ 13:34, 35; 17:16, 17) ಸತ್ಯ ಕ್ರೈಸ್ತತ್ವದ ಈ ಎಲ್ಲ ಗುರುತುಗಳಿರುವ ಒಂದೇ ಒಂದು ಧಾರ್ಮಿಕ ಸಂಸ್ಥೆಯು ಈ ಭೂಮಿಯ ಮೇಲಿದೆ—ಯೆಹೋವನ ಸಾಕ್ಷಿಗಳು!
23, 24. ಯೆಹೋವನನ್ನು ಆತನ ಸಂಘಟಿತ ಜನರೊಂದಿಗೆ ಸೇವಿಸುವುದು ಒಂದು ಹೊರೆಯಲ್ಲವೆಂಬುದನ್ನು ನಾವು ಹೇಗೆ ದೃಷ್ಟಾಂತಿಸಸಾಧ್ಯವಿದೆ?
23 ಯೆಹೋವನನ್ನು ಆತನ ಸಂಘಟಿತ ಜನರೊಂದಿಗೆ ಕೂಡಿ ಸೇವಿಸುವುದು ಒಂದು ಹೊರೆಯಾಗಿದೆಯೊ? ನಿಶ್ಚಯವಾಗಿಯೂ ಇಲ್ಲ! ಪ್ರತಿಕೂಲವಾಗಿ, ಕ್ರೈಸ್ತ ಸೋದರ ಸೋದರಿಯರ ಲೋಕವ್ಯಾಪಕ ಕುಟುಂಬವೊಂದರ ಪ್ರೀತಿ ಮತ್ತು ಬೆಂಬಲವಿರುವುದು ಒಂದು ಅಮೂಲ್ಯ ಸುಯೋಗವಾಗಿದೆ. (1 ಪೇತ್ರ 2:17) ಹಡಗುಒಡೆತವೊಂದನ್ನು ಪಾರಾಗಿ, ನೀರಿನಲ್ಲಿ ನಿಮ್ಮನ್ನು ಕಂಡುಕೊಂಡು, ತೇಲುತ್ತ ಇರುವ ಸಲುವಾಗಿ ಒದ್ದಾಡುತ್ತಿದ್ದೀರೆಂದು ಭಾವಿಸಿರಿ. ತೇಲುತ್ತ ಹೋಗಲು ಇನ್ನು ಮುಂದೆ ಸಾಧ್ಯವೇಇಲ್ಲವೆಂದು ನೀವು ಎಣಿಸುವಾಗ, ರಕ್ಷಣಾದೋಣಿಯೊಳಗಿಂದ ಒಂದು ಕೈ ನಿಮ್ಮ ಕಡೆಗೆ ಚಾಚಲ್ಪಡುತ್ತದೆ. ಹೌದು, ಪಾರಾಗಿರುವ ಇತರರು ಇದ್ದಾರೆ! ರಕ್ಷಣಾದೋಣಿಯಲ್ಲಿ ನೀವು ಮತ್ತು ಇತರರು ಹುಟ್ಟುಹಾಕುವ ಸರದಿಯನ್ನು ತೆಗೆದುಕೊಂಡು ತೀರದತ್ತ ಸಾಗುವಾಗ, ದಾರಿಯುದ್ದಕ್ಕೂ ಪಾರಾಗಿರುವ ಇತರರನ್ನು ಎತ್ತಿಕೊಂಡು ಹೋಗುತ್ತೀರಿ.
24 ನಾವು ತದ್ರೀತಿಯ ಸ್ಥಿತಿಗತಿಯಲ್ಲಿಲ್ಲವೆ? ಈ ದುಷ್ಟ ಲೋಕದ ಅಪಾಯಕರ “ಜಲಗಳ” ಮಧ್ಯದಿಂದ ನಮ್ಮನ್ನು ಎತ್ತಿ, ಯೆಹೋವನ ಭೂಸಂಸ್ಥೆಯ “ರಕ್ಷಣಾದೋಣಿ”ಯ ಒಳಗೆ ಹಾಕಲಾಗಿದೆ. ಅದರೊಳಗೆ, ನಾವು ನೀತಿಯ ನೂತನ ಲೋಕದ “ತೀರಗಳ” ಕಡೆಗೆ ಸಾಗುವಾಗ, ಪರಸ್ಪರ ಒತ್ತಾಗಿ ನಿಂತುಕೊಂಡು ಸೇವಿಸುತ್ತೇವೆ. ಹೀಗೆ ಸಾಗುವಾಗ ಜೀವನದ ಒತ್ತಡಗಳು ನಮ್ಮನ್ನು ದಣಿಯುವಂತೆ ಮಾಡುವಲ್ಲಿ, ನಿಜ ಕ್ರೈಸ್ತ ಒಡನಾಡಿಗಳ ನೆರವಿಗೂ ಸಾಂತ್ವನಕ್ಕೂ ನಾವೆಷ್ಟು ಕೃತಜ್ಞರು!—ಜ್ಞಾನೋಕ್ತಿ 17:17.
25. (ಎ) ಇನ್ನೂ ಈ ದುಷ್ಟ ಲೋಕದ “ಜಲಗಳ” ಮಧ್ಯೆ ಇರುವವರ ಕಡೆಗೆ ನಮಗೆ ಯಾವ ಹಂಗು ಇದೆ? (ಬಿ) ಮುಂದಿನ ಲೇಖನದಲ್ಲಿ ದೇವರ ಯಾವ ಆವಶ್ಯಕತೆಯನ್ನು ಚರ್ಚಿಸಲಾಗುವುದು?
25 ಇತರರ—ಇನ್ನೂ “ಜಲ”ದಲ್ಲಿರುವ ಪ್ರಾಮಾಣಿಕ ಹೃದಯದ ಜನರ—ಕುರಿತೇನು? ಯೆಹೋವನ ಸಂಸ್ಥೆಯೊಳಗೆ ಅವರು ಬರುವಂತೆ ಸಹಾಯಮಾಡುವ ಹಂಗು ನಮಗಿದೆ, ಅಲ್ಲವೆ? (1 ತಿಮೊಥೆಯ 2:3, 4) ದೇವರು ಅಪೇಕ್ಷಿಸುವುದನ್ನು ಕಲಿಯುವಂತೆ ಅವರಿಗೆ ಸಹಾಯದ ಅಗತ್ಯವಿದೆ. ಇದು ನಮ್ಮನ್ನು ದೇವರ ಐದನೆಯ ಆವಶ್ಯಕತೆಗೆ ಕೊಂಡೊಯ್ಯುತ್ತದೆ. ನಾವು ದೇವರ ರಾಜ್ಯದ ನಿಷ್ಠಾವಂತ ಘೋಷಕರು ಆಗಿರಬೇಕು. ಇದರಲ್ಲಿ ಏನೆಲ್ಲ ಸೇರಿದೆಯೆಂಬುದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ನಿಮಗೆ ನೆನಪಿದೆಯೆ?
◻ ದೇವರಾಜ್ಞೆಗಳು ಭಾರವಾದವುಗಳಲ್ಲವೇಕೆ?
◻ ನಾವು ದೇವರ ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆ?
◻ ಸಮರ್ಪಕ ನಡತೆಗಾಗಿರುವ ದೇವರ ಮಟ್ಟಗಳಿಗೆ ಹೊಂದಿಕೊಂಡು, ಆತನ ಸತ್ಯವನ್ನು ಸ್ವೀಕರಿಸುವುದು ಏಕೆ ಒಂದು ಹೊರೆಯಾಗಿರುವುದಿಲ್ಲ?
◻ ಜೀವ ಮತ್ತು ರಕ್ತದ ಕುರಿತ ದೇವರ ವೀಕ್ಷಣವು ನಮ್ಮಿಂದ ಏನನ್ನು ಅಪೇಕ್ಷಿಸುತ್ತದೆ?
◻ ನಾವು ಯಾರ ಕೂಡ ತನ್ನನ್ನು ಸೇವಿಸುವಂತೆ ದೇವರು ನಿರೀಕ್ಷಿಸುತ್ತಾನೆ, ಮತ್ತು ಅವರನ್ನು ಹೇಗೆ ಗುರುತಿಸಸಾಧ್ಯವಿದೆ?
[ಪುಟ 18 ರಲ್ಲಿರುವ ಚಿತ್ರ]
ನಾವು ಯೆಹೋವನ ಕುರಿತು ಸೃಷ್ಟಿಗ್ರಂಥ ಮತ್ತು ಬೈಬಲಿನಿಂದ ಕಲಿಯುತ್ತೇವೆ
[ಕೃಪೆ]
ಮೊಸಳೆ: By courtesy of Australian International Public Relations; ಕರಡಿ: Safari-Zoo of Ramat-Gan, Tel Aviv