ದೇವರ ಆವಶ್ಯಕತೆಗಳನ್ನು ಕಲಿಯಲು ಇತರರಿಗೆ ಸಹಾಯಮಾಡುವುದು
“ನನ್ನ ಮೇಲೆ ನಿರ್ಬಂಧವನ್ನು ಹಾಕಲಾಗಿದೆ. ನಿಜವಾಗಿಯೂ, ನಾನು ಸುವಾರ್ತೆಯನ್ನು ಪ್ರಕಟಿಸದಿದ್ದರೆ ನನಗೆ ಅಯ್ಯೋ!”—1 ಕೊರಿಂಥ 9:16, NW.
1, 2. (ಎ) ನಾವು ಯಾವ ಇಮ್ಮಡಿ ಉದ್ದೇಶದ ಕೆಲಸದಲ್ಲಿ ಭಾಗವಹಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ? (ಬಿ) ದೇವರ ರಾಜ್ಯದ ಪ್ರಜೆಗಳಾಗಬೇಕಾದರೆ, ಪ್ರಾಮಾಣಿಕ ಹೃದಯದ ಜನರು ಏನನ್ನು ಕಲಿಯಬೇಕು?
ಯೆಹೋವನಲ್ಲಿ ಮಾನವಕುಲಕ್ಕಾಗಿ ಸುವಾರ್ತೆಯಿದೆ. ಆತನಿಗೆ ಒಂದು ರಾಜ್ಯವಿದೆ, ಮತ್ತು ಅದರ ಕುರಿತು ಎಲ್ಲೆಡೆಗಳಲ್ಲೂ ಇರುವ ಜನರು ಕೇಳಿಸಿಕೊಳ್ಳುವಂತೆ ಆತನು ಬಯಸುತ್ತಾನೆ! ನಾವು ಯಾವಾಗ ಈ ಸುವಾರ್ತೆಯನ್ನು ತಿಳಿದುಕೊಳ್ಳುತ್ತೇವೊ ಆ ಕೂಡಲೇ ಅದನ್ನು ಇತರರಿಗೆ ಹಂಚುವಂತೆ ದೇವರು ಅಪೇಕ್ಷಿಸುತ್ತಾನೆ. ಇದು ಇಮ್ಮಡಿ ಉದ್ದೇಶಗಳ ಒಂದು ಕೆಲಸ. ಮೊದಲನೆಯದಾಗಿ, ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರಬೇಕು. “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ (NW) ಕುರಿತ ತನ್ನ ಪ್ರವಾದನೆಯಲ್ಲಿ ಯೇಸು ಹೇಳಿದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:3, 14.
2 ಈ ಕೆಲಸದ ದ್ವಿತೀಯಾಂಶದಲ್ಲಿ ರಾಜ್ಯದ ಘೋಷಣೆಗೆ ಅನುಕೂಲಕರವಾಗಿ ಪ್ರತಿವರ್ತಿಸುವವರಿಗೆ ಕಲಿಸುವುದು ಒಳಗೂಡಿದೆ. ತನ್ನ ಪುನರುತ್ಥಾನಾನಂತರ, ಯೇಸು ತನ್ನ ಶಿಷ್ಯರ ಒಂದು ದೊಡ್ಡ ಗುಂಪಿಗೆ ಹೇಳಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ [“ವಿಷಯಗಳ ವ್ಯವಸ್ಥೆಯ,” NW] ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾಯ 28:19, 20) ‘ಕ್ರಿಸ್ತನು ಆಜ್ಞಾಪಿಸಿದ ವಿಷಯಗಳು’ ಅವನಿಂದಲೇ ಬರಲಿಲ್ಲ; ದೇವರ ಆಜ್ಞೆಗಳನ್ನು ಅಥವಾ ಆವಶ್ಯಕತೆಗಳನ್ನು ಪಾಲಿಸುವಂತೆ ಅವನು ಇತರರಿಗೆ ಕಲಿಸಿದನು. (ಯೋಹಾನ 14:23, 24; 15:10) ಹೀಗೆ, ‘ಕ್ರಿಸ್ತನು ಆಜ್ಞಾಪಿಸಿರುವ ವಿಷಯಗಳನ್ನು ಪಾಲಿಸುವಂತೆ’ ಇತರರಿಗೆ ಕಲಿಸುವುದರಲ್ಲಿ, ದೇವರ ಆವಶ್ಯಕತೆಗಳನ್ನು ಅವರು ಕಲಿಯುವಂತೆ ಸಹಾಯಮಾಡುವುದೂ ಸೇರಿದೆ. ಪ್ರಾಮಾಣಿಕ ಹೃದಯದ ಜನರು ದೇವರ ರಾಜ್ಯದ ಪ್ರಜೆಗಳಾಗಬೇಕಾದರೆ, ಅವರು ದೇವರ ಆವಶ್ಯಕತೆಗಳಿಗೆ ಹೊಂದಿಕೊಳ್ಳಲೇಬೇಕು.
3. ದೇವರ ರಾಜ್ಯವೆಂದರೇನು, ಮತ್ತು ರಾಜ್ಯ ಸಂದೇಶವನ್ನು ಅಂತಹ ಸುವಾರ್ತೆಯನ್ನಾಗಿ ಮಾಡುವ ಯಾವುದನ್ನು ಅದು ಪೂರೈಸುವುದು?
3 ದೇವರ ರಾಜ್ಯವೆಂದರೇನು? ಮತ್ತು ರಾಜ್ಯ ಸಂದೇಶವನ್ನು ಅಂತಹ ಸುವಾರ್ತೆಯನ್ನಾಗಿ ಮಾಡುವ ಯಾವುದನ್ನು ಅದು ಪೂರೈಸುವುದು? ದೇವರ ರಾಜ್ಯವು ಒಂದು ಸ್ವರ್ಗೀಯ ಸರಕಾರ. ಅದು ಯೆಹೋವನ ಹೃದಯಕ್ಕೆ ಅತ್ಯಮೂಲ್ಯವಾಗಿರುತ್ತದೆ, ಏಕೆಂದರೆ ಆತನ ನಾಮಕ್ಕೆ ಹಚ್ಚಿರುವ ಸಕಲ ಕಳಂಕವನ್ನು ತೆಗೆದುಹಾಕಿ, ಅದನ್ನು ಶುದ್ಧೀಕರಿಸುವ ಮಾಧ್ಯಮ ಅದಾಗಿದೆ. ತನ್ನ ಚಿತ್ತವು ಸ್ವರ್ಗದಲ್ಲಾಗುವಂತೆಯೇ ಭೂಮಿಯ ಮೇಲೂ ಆಗುವಂತೆ ಮಾಡಲು ಯೆಹೋವನು ಉಪಯೋಗಿಸುವ ಉಪಕರಣವು ಆ ರಾಜ್ಯವಾಗಿದೆ. ಆದಕಾರಣವೇ, ದೇವರ ರಾಜ್ಯವು ಬರಲು ಪ್ರಾರ್ಥಿಸುವಂತೆ ಯೇಸು ಕಲಿಸಿ, ನಮ್ಮ ಜೀವಿತಗಳಲ್ಲಿ ಅದನ್ನು ಪ್ರಥಮವಾಗಿಡುವಂತೆ ಪ್ರೋತ್ಸಾಹಿಸಿದನು. (ಮತ್ತಾಯ 6:9, 10, 33) ನಾವು ಆತನ ರಾಜ್ಯದ ಕುರಿತು ಇತರರಿಗೆ ಕಲಿಸುವುದು ಯೆಹೋವನಿಗೆ ಅಷ್ಟೊಂದು ಪ್ರಾಮುಖ್ಯವೇಕೆಂಬುದನ್ನು ನೀವು ನೋಡುತ್ತೀರೊ?
ಪಂಥಾಹ್ವಾನ ಖರೆ, ಹೊರೆಯಲ್ಲ
4. ಸುವಾರ್ತೆಯನ್ನು ಸಾರುವ ನಮ್ಮ ಹಂಗು ಒಂದು ಹೊರೆಯಲ್ಲವೆಂಬುದನ್ನು ಹೇಗೆ ಚಿತ್ರಿಸಸಾಧ್ಯವಿದೆ?
4 ಈ ಸುವಾರ್ತೆಯನ್ನು ಸಾರುವುದು ಒಂದು ಹೊರೆಯೊ? ಕಿಂಚಿತ್ತೂ ಹೊರೆಯಲ್ಲ! ಉದಾಹರಣೆ: ಒಬ್ಬ ತಂದೆ ತನ್ನ ಕುಟುಂಬಕ್ಕೆ ಪ್ರಾಪಂಚಿಕವಾಗಿ ಒದಗಿಸಲು ಹಂಗಿಗನು. ಇದರಲ್ಲಿ ವೈಫಲ್ಯವು ಕ್ರೈಸ್ತ ನಂಬಿಕೆಯ ನಿರಾಕರಣೆಗೆ ಸಮಾನ. ಅಪೊಸ್ತಲ ಪೌಲನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಆದರೆ ಈ ಹಂಗು ಆ ಕ್ರೈಸ್ತ ಪುರುಷನಿಗೆ ಒಂದು ಹೊರೆಯಾಗಿದೆಯೆ? ಅವನು ತನ್ನ ಕುಟುಂಬವನ್ನು ಪ್ರೀತಿಸುವಲ್ಲಿ ಹಾಗಿರದು, ಏಕೆಂದರೆ ಪ್ರೀತಿಸುವಲ್ಲಿ ಅವನು ಅವರಿಗಾಗಿ ಒದಗಿಸಲು ಬಯಸುತ್ತಾನೆ.
5. ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕಾರ್ಯವು ಒಂದು ಹಂಗಾಗಿರುವುದಾದರೂ, ನಾವು ಅದರಲ್ಲಿ ಭಾಗವಹಿಸಲು ಏಕೆ ಸಂತೋಷಿಸಬೇಕು?
5 ತದ್ರೀತಿ, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವೂ ಒಂದು ಹಂಗಾಗಿದೆ, ನಮ್ಮ ಜೀವಗಳೇ ಆತುಕೊಂಡಿರುವ ಒಂದು ಆವಶ್ಯಕತೆಯಾಗಿದೆ. ಪೌಲನು ಅದನ್ನು ಈ ವಿಧದಲ್ಲಿ ಬರೆದನು: “ನನ್ನ ಮೇಲೆ ನಿರ್ಬಂಧವನ್ನು ಹಾಕಲಾಗಿದೆ; ನಿಜವಾಗಿಯೂ, ನಾನು ಸುವಾರ್ತೆಯನ್ನು ಪ್ರಕಟಿಸದಿದ್ದರೆ ನನಗೆ ಅಯ್ಯೋ!” (1 ಕೊರಿಂಥ 9:16, NW; ಹೋಲಿಸಿ ಯೆಹೆಜ್ಕೇಲ 33:7-9.) ಆದರೂ, ಸಾರುವುದಕ್ಕಿರುವ ನಮ್ಮ ಪ್ರೇರಕಶಕ್ತಿಯು ಕೇವಲ ಕರ್ತವ್ಯವಲ್ಲ, ಪ್ರೀತಿಯಾಗಿದೆ. ನಾವು ಪ್ರಧಾನವಾಗಿ ದೇವರನ್ನು ಪ್ರೀತಿಸಿದರೂ ನಮ್ಮ ನೆರೆಯವರನ್ನೂ ಪ್ರೀತಿಸುತ್ತೇವೆ, ಮತ್ತು ಅವರು ಸುವಾರ್ತೆಯನ್ನು ಆಲಿಸುವುದು ಎಷ್ಟು ಪ್ರಾಮುಖ್ಯವೆಂಬುದು ನಮಗೆ ಗೊತ್ತಿದೆ. (ಮತ್ತಾಯ 22:37-39) ಅದು ಅವರಿಗೆ ಭವಿಷ್ಯತ್ತಿನ ನಿರೀಕ್ಷೆಯೊಂದನ್ನು ಕೊಡುತ್ತದೆ. ದೇವರ ರಾಜ್ಯವು ಬೇಗನೆ ಅನ್ಯಾಯಗಳನ್ನು ತಿದ್ದಿ, ಸಕಲ ಶೋಷಣೆಯನ್ನು ನಿವಾರಿಸಿ, ಶಾಂತಿ ಮತ್ತು ಐಕ್ಯವನ್ನು ಪುನಸ್ಸ್ಥಾಪಿಸುತ್ತದೆ—ಇದೆಲ್ಲವೂ ಅದರ ನೀತಿಯ ಆಳಿಕೆಗೆ ಅಧೀನರಾಗುವವರ ನಿತ್ಯಾಶೀರ್ವಾದಕ್ಕಾಗಿರುವುದು. ಇಂತಹ ಸುವಾರ್ತೆಯನ್ನು ಇತರರಿಗೆ ಹಂಚಲು ನಾವು ಹರ್ಷಿತರು, ಹೌದು, ಪುಳಕಿತರಾಗಿರುವುದಿಲ್ಲವೊ?—ಕೀರ್ತನೆ 110:3.
6. ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಒಂದು ನಿಜ ಪಂಥಾಹ್ವಾನವನ್ನೊಡ್ಡುವುದೇಕೆ?
6 ಅದೇ ಸಮಯದಲ್ಲಿ, ಈ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕಾರ್ಯವು ಒಂದು ನಿಜ ಪಂಥಾಹ್ವಾನವನ್ನು ಒಡ್ಡುತ್ತದೆ. ಜನರು ವಿಭಿನ್ನರಾಗಿರುತ್ತಾರೆ. ಎಲ್ಲರಿಗೂ ಒಂದೇ ರೀತಿಯ ಆಸಕ್ತಿಗಳೂ ಸಾಮರ್ಥ್ಯಗಳೂ ಇರುವುದಿಲ್ಲ. ಕೆಲವರು ಒಳ್ಳೆಯ ವಿದ್ಯೆ ಪಡೆದಿರುವಾಗ ಇನ್ನು ಕೆಲವರು ಕೊಂಚವೇ ವಿದ್ಯೆಯನ್ನು ಪಡೆದಿರುತ್ತಾರೆ. ಒಮ್ಮೆ ಮೆಚ್ಚಿನ ಕಾಲಕ್ಷೇಪವಾಗಿದ್ದ ವಾಚನವು ಈಗ ಅನೇಕ ವೇಳೆ ಕೆಲಸವಾಗಿ ನೋಡಲ್ಪಡುತ್ತದೆ. ಯಾವುದನ್ನು, “ಓದಲು ಶಕ್ತರಾಗಿರುವುದಾದರೂ ಹಾಗೆ ಮಾಡಲು ಅನಾಸಕ್ತರಾಗಿರುವ ಗುಣ ಅಥವಾ ಸ್ಥಿತಿ” ಎಂದು ನಿರೂಪಿಸಲಾಗಿದೆಯೊ ಆ ಆ್ಯಲಿಟರೆಸಿ (ವಾಚನನಾಸಕ್ತಿ)ಯು, ಈಗ ಉಚ್ಚ ಸಾಕ್ಷರತಾ ಪ್ರಮಾಣವಿರುವ ದೇಶಗಳಲ್ಲಿಯೂ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಹಾಗಾದರೆ ಇಂತಹ ವಿಭಿನ್ನ ಹಿನ್ನೆಲೆಗಳೂ ಅಭಿರುಚಿಗಳೂ ಇರುವ ಜನರು ದೇವರು ಅಪೇಕ್ಷಿಸುವುದನ್ನು ಕಲಿಯುವಂತೆ ನಾವು ಹೇಗೆ ಸಹಾಯಮಾಡಬಲ್ಲೆವು?—ಹೋಲಿಸಿ 1 ಕೊರಿಂಥ 9:20-23.
ಇತರರಿಗೆ ಸಹಾಯನೀಡಲು ಯೋಗ್ಯರೀತಿಯಲ್ಲಿ ಸಜ್ಜಿತರು
7. ದೇವರ ಆವಶ್ಯಕತೆಗಳನ್ನು ಇತರರು ಕಲಿಯುವಂತೆ ಸಹಾಯಮಾಡಲು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ನಮ್ಮನ್ನು ಹೇಗೆ ಸಜ್ಜಿತರನ್ನಾಗಿ ಮಾಡಿದ್ದಾನೆ?
7 ನಿಮ್ಮಲ್ಲಿ ಯೋಗ್ಯವಾದ ಸಾಧನ ಅಥವಾ ಸಜ್ಜುಗಳಿರುವಲ್ಲಿ, ಪಂಥಾಹ್ವಾನವನ್ನೊಡ್ಡುವ ಒಂದು ಕೆಲಸವನ್ನು ಮಾಡುವುದು ಹೆಚ್ಚು ಸುಲಭ. ಬದಲಾವಣೆಗೊಳ್ಳುತ್ತಿರುವ ಆವಶ್ಯಕತೆಗಳ ಕಾರಣದಿಂದ, ಇಂದು ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು ಯೋಗ್ಯವಾಗಿರುವ ಸಾಧನವನ್ನು, ನಾಳೆ ನವೀಕರಿಸಬೇಕಾದೀತು ಅಥವಾ ಬದಲಾಯಿಸಬೇಕಾದೀತು ಕೂಡ. ದೇವರ ರಾಜ್ಯದ ಸಂದೇಶವನ್ನು ಸಾರುವ ನಮ್ಮ ಆದೇಶದ ಸಂಬಂಧದಲ್ಲಿಯೂ ಹಾಗೆಯೇ. ವರ್ಷಗಳಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮಗೆ ನಿಷ್ಕೃಷ್ಟವಾಗಿ ತಕ್ಕದಾದ ಸಾಧನಗಳನ್ನು, ಗೃಹ ಬೈಬಲ್ ಅಧ್ಯಯನಗಳನ್ನು ನಡೆಸುವಾಗ ಬಳಸಲಿಕ್ಕಾಗಿ ವಿಶೇಷವಾಗಿ ವಿನ್ಯಾಸಿಸಲ್ಪಟ್ಟ ಪ್ರಕಾಶನಗಳನ್ನು ಒದಗಿಸಿದ್ದಾನೆ. (ಮತ್ತಾಯ 24:45) ನಾವು ಹೀಗೆ, “ಸಕಲ ಜನಾಂಗ ಕುಲ . . . ಭಾಷೆ”ಗಳವರು ದೇವರ ಆವಶ್ಯಕತೆಗಳನ್ನು ಕಲಿಯುವಂತೆ ಸಹಾಯಮಾಡುವರೆ ಸಜ್ಜಿತರಾಗಿದ್ದೇವೆ. (ಪ್ರಕಟನೆ 7:9) ಆಗಿಂದಾಗ್ಗೆ, ಜಾಗತಿಕ ಕ್ಷೇತ್ರದಲ್ಲಿ ಬದಲಾವಣೆಹೊಂದುತ್ತಿರುವ ಆವಶ್ಯಕತೆಗಳಿಗೆ ಹೊಂದಿಸಿಕೊಳ್ಳಲಿಕ್ಕಾಗಿ, ಹೊಸ ಉಪಕರಣಗಳನ್ನು ಒದಗಿಸಲಾಗಿದೆ. ಕೆಲವು ಉದಾಹರಣೆಗಳನ್ನು ಪರಿಗಣಿಸೋಣ.
8. (ಎ) ಬೈಬಲ್ ಶಿಕ್ಷಣವನ್ನು ಹೆಚ್ಚಿಸುವುದರಲ್ಲಿ “ದೇವರು ಸತ್ಯವಂತನೇ ಸರಿ” ಪುಸ್ತಕಕ್ಕೆ ಯಾವ ಭಾಗವಿತ್ತು? (ಬಿ) 1968ರಲ್ಲಿ ಬೈಬಲ್ ಅಭ್ಯಾಸದ ಕಾರ್ಯಕ್ಕೆ ಯಾವ ಉಪಕರಣವನ್ನು ಒದಗಿಸಲಾಯಿತು, ಮತ್ತು ಅದು ವಿಶೇಷವಾಗಿ ವಿನ್ಯಾಸಿಸಲ್ಪಟ್ಟದ್ದು ಹೇಗೆ? (ಸಿ) ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಸತ್ಯ ಪುಸ್ತಕವು ಹೇಗೆ ನೆರವನ್ನು ನೀಡಿತು?
8 1946ರಿಂದ 1968ರ ತನಕ, “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕವು ಬೈಬಲ್ ಶಿಕ್ಷಣದಲ್ಲಿ ಒಂದು ಬಲಾಢ್ಯವಾದ ಉಪಕರಣವಾಗಿ ಉಪಯೋಗಿಸಲ್ಪಟ್ಟಿತು, ಮತ್ತು ಸುಮಾರು 1,92,50,000 ಪ್ರತಿಗಳು, 54 ಭಾಷೆಗಳಲ್ಲಿ ಪ್ರಕಟಿಸಲ್ಪಟ್ಟವು. 1968ರಲ್ಲಿ ಬಿಡುಗಡೆಯಾದ ನಿತ್ಯ ಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವು, ಆಸಕ್ತರೊಂದಿಗೆ ಬೈಬಲನ್ನು ಅಭ್ಯಸಿಸಲು ಅನೇಕ ವರ್ಷಗಳಲ್ಲಿ ಕಾರ್ಯಸಾಧಕವಾಗಿ ಬಳಸಲ್ಪಟ್ಟಿತು. ಈ ಹಿಂದೆ, ಕೆಲವರು ದೀಕ್ಷಾಸ್ನಾನ ಹೊಂದದೆ, ಯೆಹೋವನ ಸಾಕ್ಷಿಗಳೊಂದಿಗೆ ವರ್ಷಗಟ್ಟಲೆ ಅಭ್ಯಾಸಮಾಡುವುದು ಅಸಾಮಾನ್ಯವಾಗಿರಲಿಲ್ಲ. ಆದರೆ ಈ ಉಪಕರಣವು ಶಿಕ್ಷಣಾರ್ಥಿಯನ್ನು ಒಳಪಡಿಸಿಕೊಳ್ಳುವಂತೆ, ತಾನು ಕಲಿಯುತ್ತಿರುವುದನ್ನು ಅವನು ಅನ್ವಯಿಸಿಕೊಳ್ಳುವಂತೆ ಉತ್ತೇಜಿಸಲು ವಿನ್ಯಾಸಿಸಲ್ಪಟ್ಟಿತ್ತು. ಪರಿಣಾಮವೇನು? ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕ ಹೇಳುವುದು: “ಸೆಪ್ಟೆಂಬರ್ 1, 1968ರಿಂದ ಆರಂಭವಾಗಿ, ಆಗಸ್ಟ್ 31, 1971ರಲ್ಲಿ ಕೊನೆಗೊಂಡ ಮೂರು ಸೇವಾ ವರ್ಷಗಳಲ್ಲಿ, ಒಟ್ಟು 4,34,906 ವ್ಯಕ್ತಿಗಳು—ಹಿಂದಿನ ಮೂರು ಸೇವಾ ವರ್ಷಗಳಲ್ಲಿ ದೀಕ್ಷಾಸ್ನಾನ ಹೊಂದಿದ ಸಂಖ್ಯೆಯ ಇಮ್ಮಡಿಗಿಂತಲೂ ಹೆಚ್ಚು—ದೀಕ್ಷಾಸ್ನಾನ ಹೊಂದಿದರು!” ಸತ್ಯ ಪುಸ್ತಕದ ಬಿಡುಗಡೆಯಿಂದ ಹಿಡಿದು, ಅದು 117 ಭಾಷೆಗಳಲ್ಲಿ, ಬೆರಗುಗೊಳಿಸುವ 10,70,00,000ಕ್ಕೂ ಹೆಚ್ಚಿನ ಪ್ರತಿಗಳ ಚಲಾವಣೆಯನ್ನು ಹೊಂದಿದೆ.
9. ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಯಾವ ವೈಶಿಷ್ಟ್ಯವಿದೆ, ಮತ್ತು ರಾಜ್ಯ ಘೋಷಕರ ಪಂಕ್ತಿಗಳ ಮೇಲೆ ಯಾವ ಪ್ರಬಲ ಪರಿಣಾಮವನ್ನು ಅದು ಬೀರಿತು?
9 1982ರಲ್ಲಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು, ಬೈಬಲ್ ಅಧ್ಯಯನಗಳನ್ನು ನಡೆಸುವುದರಲ್ಲಿ ಪ್ರಧಾನ ಪುಸ್ತಕವಾಯಿತು. ಈ ಸಾಧನದಲ್ಲಿರುವ 150ಕ್ಕೂ ಹೆಚ್ಚಿನ ದೃಶ್ಯ ಚಿತ್ರಗಳಲ್ಲಿ ಪ್ರತಿಯೊಂದಕ್ಕೆ, ಚಿತ್ರಗಳ ಕಲಿಕೆಯ ಮುಖ್ಯಾಂಶವನ್ನು ನಿಷ್ಕೃಷ್ಟವಾಗಿ ಎತ್ತಿತೋರಿಸುವ ಅರ್ಥಗರ್ಭಿತವಾದ ಶಿರೋನಾಮಗಳಿವೆ. ಅಕ್ಟೋಬರ್ 1982ರ ನಮ್ಮ ರಾಜ್ಯದ ಸೇವೆ ಹೇಳಿದ್ದು: ‘ದೇವರು ಸತ್ಯವಂತನೇ ಸರಿ’ ಪುಸ್ತಕವು ನಮ್ಮ ಪ್ರಧಾನ ಅಧ್ಯಯನ ಪುಸ್ತಕವಾಗಿದ್ದ ಸುಮಾರು 20 ವರುಷ (1946ರಿಂದ 1960ಗಳ ಮಧ್ಯದ ತನಕ)ಗಳಲ್ಲಿ, ನಮ್ಮ ಸಂಸ್ಥೆಗೆ 10,00,000ಕ್ಕೂ ಹೆಚ್ಚು ಹೊಸ ರಾಜ್ಯ ಘೋಷಕರು ಸೇರಿಸಲ್ಪಟ್ಟರು. ಬಳಿಕ, 1968ರಲ್ಲಿ ಬಿಡುಗಡೆಯಾದ ಮೇಲೆ, ನಿತ್ಯ ಜೀವಕ್ಕೆ ನಡಿಸುವ ಸತ್ಯವು ಪುಸ್ತಕವು ನಮ್ಮ ಪ್ರಧಾನ ಅಧ್ಯಯನ ಪುಸ್ತಕವಾದಾಗ, ಇನ್ನೂ 10,00,000 ಪ್ರಚಾರಕರು ಸೇರಿಸಲ್ಪಟ್ಟರು. ನಮ್ಮ ಹೊಸ ಅಧ್ಯಯನ ಪುಸ್ತಕವಾದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬುದರ ಬಳಕೆಯಿಂದ, ರಾಜ್ಯ ಪ್ರಚಾರಕರ ಪಂಕ್ತಿಗಳಲ್ಲಿ ತದ್ರೀತಿಯ ವಿಸ್ತರಣೆಯನ್ನು ನಾವು ನೋಡುವೆವೊ? ಇದು ಯೆಹೋವನ ಚಿತ್ತವಾಗಿದ್ದರೆ, ನಿಶ್ಚಯವಾಗಿಯೂ ನೋಡುವೆವು!” ಅದು ಯೆಹೋವನ ಚಿತ್ತವಾಗಿತ್ತೆಂಬುದು ವ್ಯಕ್ತ, ಏಕೆಂದರೆ 1982ರಿಂದ 1995ರ ತನಕ, 27,00,000ಕ್ಕೂ ಹೆಚ್ಚು ಮಂದಿ ರಾಜ್ಯ ಘೋಷಕರ ಪಂಕ್ತಿಗಳಿಗೆ ಸೇರಿಸಲ್ಪಟ್ಟರು!
10. 1995ರಲ್ಲಿ ಯಾವ ಹೊಸ ಸಾಧನವು ಒದಗಿಸಲ್ಪಟ್ಟಿತು, ಮತ್ತು ಅದು ಬೈಬಲ್ ವಿದ್ಯಾರ್ಥಿಗಳು ಹೆಚ್ಚು ಶೀಘ್ರವಾಗಿ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಅವರನ್ನು ಶಕ್ತರನ್ನಾಗಿ ಮಾಡಬೇಕು ಏಕೆ?
10 “ಬೆಳೆಯು ಬಹಳ, ಕೆಲಸದವರು ಸ್ವಲ್ಪ,” ಎಂದನು ಯೇಸು. (ಮತ್ತಾಯ 9:37) ಬೆಳೆ ಬಹಳವಾಗಿರುವುದೇನೋ ನಿಶ್ಚಯ. ಮಾಡಲು ಇನ್ನೂ ಧಾರಾಳ ಕೆಲಸವಿದೆ. ಕೆಲವು ದೇಶಗಳಲ್ಲಿ ಬೈಬಲ್ ಅಧ್ಯಯನಗಳಿಗಾಗಿ ಜನರು ಕಾದಿರಿಸಿದ ಪಟ್ಟಿಯಲ್ಲಿ ಹೆಸರನ್ನು ಸೇರಿಸಬೇಕಾಗುತ್ತದೆ. ಆದುದರಿಂದ ದೇವರ ಜ್ಞಾನವನ್ನು ಹೆಚ್ಚು ವೇಗವಾಗಿ ಹರಡಿಸುವ ದೃಷ್ಟಿಯಿಂದ, 1995ರಲ್ಲಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಶೀರ್ಷಿಕೆಯುಳ್ಳ 192 ಪುಟದ ಒಂದು ಹೊಸ ಸಾಧನವನ್ನು ಒದಗಿಸಿದನು. ಈ ಅಮೂಲ್ಯ ಉಪಕರಣವು, ಸುಳ್ಳು ತತ್ತ್ವಗಳ ಮೇಲೆ ಕೇಂದ್ರೀಕರಿಸುವುದಿಲ್ಲ. ಅದು ಒಂದು ಸಕಾರಾತ್ಮಕ ವಿಧದಲ್ಲಿ ಬೈಬಲ್ ಸತ್ಯವನ್ನು ನೀಡುತ್ತದೆ. ಬೈಬಲ್ ವಿದ್ಯಾರ್ಥಿಗಳು ಹೆಚ್ಚು ಶೀಘ್ರವಾಗಿ ಆತ್ಮಿಕ ಪ್ರಗತಿಮಾಡುವಂತೆ ಇದು ಅವರನ್ನು ಶಕ್ತರನ್ನಾಗಿ ಮಾಡುವುದೆಂದು ನಿರೀಕ್ಷಿಸಲಾಗುತ್ತದೆ. ಜಾಗತಿಕ ಕ್ಷೇತ್ರದ ಮೇಲೆ ಈ ಜ್ಞಾನ ಪುಸ್ತಕವು ಈಗಾಗಲೆ ಪ್ರಬಲ ಪ್ರಭಾವವನ್ನು ಬೀರುತ್ತಿದೆ. 125 ಭಾಷೆಗಳಲ್ಲಿ, 4,55,00,000 ಪ್ರತಿಗಳು ಈಗಾಗಲೇ ಮುದ್ರಿತವಾಗಿದ್ದು, ಹೆಚ್ಚುವರಿಯ 21 ಭಾಷೆಗಳಲ್ಲಿ ಭಾಷಾಂತರವು ನಡೆಯುತ್ತಿದೆ.
11. ಅನಕ್ಷರಸ್ಥರಿಗೆ ಮತ್ತು ಓದುವ ಕೊರತೆಯಿರುವವರಿಗೆ ಕಲಿಸುವಂತೆ ಸಹಾಯಮಾಡಲು ಯಾವ ಕಾರ್ಯಸಾಧಕ ಸಾಧನವನ್ನು ಒದಗಿಸಲಾಯಿತು, ಮತ್ತು ಭೌಗೋಲಿಕ ಕಲಿಸುವ ಕಾರ್ಯಕ್ರಮದಲ್ಲಿ ಅದು ಹೇಗೆ ಪ್ರಬಲವಾದ ಗುರುತನ್ನು ಮಾಡಿದೆ?
11 ಆಗಿಂದಾಗ್ಗೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒಂದು ನಿರ್ದಿಷ್ಟ, ಅಥವಾ ಸೀಮಿತ ಜನರಿಗಾಗಿ ಸಾಧನಗಳನ್ನು ಒದಗಿಸಿದ್ದಾನೆ. ದೃಷ್ಟಾಂತಕ್ಕೆ, ತಮ್ಮ ಸಾಂಸ್ಕೃತಿಕ ಅಥವಾ ಧಾರ್ಮಿಕ ಹಿನ್ನೆಲೆಯ ಕಾರಣ ವಿಶೇಷ ಸಹಾಯದ ಅಗತ್ಯವಿರುವ ಜನರ ವಿಷಯದ ಕುರಿತೇನು? ದೇವರ ಆವಶ್ಯಕತೆಗಳನ್ನು ಅವರು ತಿಳಿಯವಂತೆ ನಾವು ಅವರಿಗೆ ಹೇಗೆ ನೆರವಾಗಬಲ್ಲೆವು? 1982ರಲ್ಲಿ, ನಮಗೆ ಬೇಕಾಗಿದ್ದದ್ದೇ ದೊರೆಯಿತು—ಭೂಮಿಯಲ್ಲಿ ಸದಾ ಜೀವನವನ್ನು ಆನಂದಿಸಿರಿ! ಎಂಬ 32 ಪುಟದ ಬ್ರೋಷರ್. ಧಾರಾಳ ಚಿತ್ರಗಳಿರುವ ಈ ಪ್ರಕಾಶನವು, ಅನಕ್ಷರಸ್ಥರಿಗೆ ಅಥವಾ ಓದುವ ನ್ಯೂನತೆಯುಳ್ಳವರಿಗೆ ಕಲಿಸಲು ಕಾರ್ಯಸಾಧಕವಾದ ಸಾಧನವಾಗಿ ಪರಿಣಮಿಸಿದೆ. ಅದರಲ್ಲಿ ಪ್ರಾಥಮಿಕ ಶಾಸ್ತ್ರೀಯ ಬೋಧನೆಗಳ ಅತಿ ಸರಳ ಹಾಗೂ ಅರ್ಥಮಾಡಿಕೊಳ್ಳಲು ಸುಲಭವಾದ ನಿರೂಪಣೆಯಿದೆ. ಅದರ ಬಿಡುಗಡೆಯಾದಂದಿನಿಂದ ಭೂಮಿಯಲ್ಲಿ ಜೀವನವನ್ನು ಆನಂದಿಸಿರಿ ಬ್ರೋಷರು, ನಮ್ಮ ಭೌಗೋಲಿಕ ಬೋಧನಾ ಕಾರ್ಯಕ್ರಮಕ್ಕೆ ಮಹತ್ತಾದ ಸಹಾಯವನ್ನು ನೀಡಿದೆ. 10,51,00,000ಕ್ಕೂ ಹೆಚ್ಚು ಪ್ರತಿಗಳು, 239 ಭಾಷೆಗಳಲ್ಲಿ ಛಾಪಿಸಲ್ಪಟ್ಟಿದ್ದು, ಇಂದಿನ ವರೆಗೆ ವಾಚ್ ಟವರ್ ಸೊಸೈಟಿಯು ತಯಾರಿಸಿರುವ ಪ್ರಕಾಶನಗಳಲ್ಲಿ ಅತಿ ವ್ಯಾಪಕವಾಗಿ ಭಾಷಾಂತರವಾಗಿರುವ ಪ್ರಕಾಶನವನ್ನಾಗಿ ಅದನ್ನು ಮಾಡಿದೆ!
12, 13. (ಎ) 1990ರಿಂದ ‘ನಂಬಿಗಸ್ತ ಆಳು’ ವ್ಯಪಕವಾದ ಶ್ರೋತೃವೃಂದವನ್ನು ತಲಪಲು ಯಾವ ನವೀನ ವಿಧವನ್ನು ಒದಗಿಸಿದ್ದಾನೆ? (ಬಿ) ನಮ್ಮ ಕ್ಷೇತ್ರ ಶುಶ್ರೂಷೆಯಲ್ಲಿ ನಾವು ಸೊಸೈಟಿಯ ವಿಡಿಯೊಗಳನ್ನು ಹೇಗೆ ಉಪಯೋಗಿಸಬಹುದು? (ಸಿ) ನಮ್ಮ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸಹಾಯ ನೀಡಲು ಯಾವ ಹೊಸ ಸಾಧನವನ್ನು ಇತ್ತೀಚೆಗೆ ಒದಗಿಸಲಾಯಿತು?
12 ಮುದ್ರಿತ ಪ್ರಕಾಶನಗಳಿಗೆ ಹೆಚ್ಚುವರಿಯಾಗಿ, 1990ರಿಂದ ಆರಂಭಗೊಂಡು, ‘ನಂಬಿಗಸ್ತ ಆಳು’ ನಮಗೆ, ವ್ಯಾಪಕವಾದ ಶ್ರೋತೃವೃಂದವನ್ನು ತಲಪಲು ಒಂದು ನವೀನ ದಾರಿಯನ್ನು ನೀಡುವ ಶಿಕ್ಷಣ ಮಾಧ್ಯಮವನ್ನು—ವಿಡಿಯೊಕ್ಯಾಸೆಟ್ಗಳನ್ನು ಒದಗಿಸಿದ್ದಾನೆ. ಆ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ, 55 ನಿಮಿಷಗಳ, ಯೆಹೋವನ ಸಾಕ್ಷಿಗಳು—ಆ ಹೆಸರಿನ ಮರೆಯಲ್ಲಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೊ—ವಾಚ್ ಟವರ್ ಸೊಸೈಟಿಯು ತಯಾರಿಸಿದ ಪ್ರಪ್ರಥಮ ವಿಡಿಯೊವನ್ನು ಬಿಡುಗಡೆಮಾಡಲಾಯಿತು. ಈ ಸುಂದರವೂ, ಬೋಧಪ್ರದವೂ ಆದ, 35 ಭಾಷೆಗಳಲ್ಲಿರುವ ಪ್ರದರ್ಶನವು, ಭೂಮಿಯಲ್ಲೆಲ್ಲ ಸುವಾರ್ತೆಯನ್ನು ಘೋಷಿಸುವುದರ ಕುರಿತಾದ ಯೇಸುವಿನ ಆಜ್ಞೆಯನ್ನು ನೆರವೇರಿಸುತ್ತಾ ಇರುವ ಯೆಹೋವನ ಅರ್ಪಿತ ಜನರ ಲೋಕವ್ಯಾಪಕವಾದ ಸಂಘಟನೆಯನ್ನು ತೋರಿಸುತ್ತದೆ. ಈ ವಿಡಿಯೊ, ನಮ್ಮ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೆರವಾಗಲು ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿದೆ. ಈ ಹೊಸ ಉಪಕರಣವನ್ನು ಕ್ಷೇತ್ರ ಶುಶ್ರೂಷೆಯಲ್ಲಿ ಬಳಸಲು ರಾಜ್ಯ ಪ್ರಚಾರಕರು ತಡಮಾಡಲಿಲ್ಲ. ಕೆಲವರು ಅದನ್ನು ತಮ್ಮ ಪುಸ್ತಕ ಚೀಲಗಳಲ್ಲಿ, ಆಸಕ್ತರಿಗೆ ತೋರಿಸಲು ಅಥವಾ ಎರವಲಾಗಿ ಕೊಡಲು ಸದಾ ಸಿದ್ಧರಾಗಿರುತ್ತ ಒಯ್ದರು. ಅದರ ಬಿಡುಗಡೆಯಾಗಿ ಸ್ವಲ್ಪದರಲ್ಲಿ, ಒಬ್ಬ ಸಂಚರಣ ಮೇಲ್ವಿಚಾರಕರು ಬರೆದುದು: “ವಿಡಿಯೊಗಳು ಲಕ್ಷಾಂತರ ಮಂದಿಯ ಮನಸ್ಸು ಮತ್ತು ಹೃದಯಗಳನ್ನು ತಲಪುವರೆ ಇರುವ 21ನೆಯ ಶತಮಾನದ ಮಾಧ್ಯಮವಾಗಿರುವುದರಿಂದ, ಸೊಸೈಟಿಯು ಲೋಕವ್ಯಾಪಕ ರಾಜ್ಯ ಕಾರ್ಯವನ್ನು ವಿಸ್ತರಿಸಲು ಉಪಯೋಗಿಸುವ ವಿಡಿಯೊಗಳ ದೀರ್ಘ ಶ್ರೇಣಿಯಲ್ಲಿ ಈ ವಿಡಿಯೊ ಪ್ರಥಮವಾಗಿರುವುದೆಂಬುದು ನಮ್ಮ ನಿರೀಕ್ಷೆಯಾಗಿದೆ.” ಹೌದು, ಹೆಚ್ಚು ವಿಡಿಯೊಗಳನ್ನು ಒದಗಿಸಲಾಗಿದೆ. ಅವುಗಳಲ್ಲಿ ಮೂರು ಭಾಗಗಳ ಲೇಖನ ಮಾಲೆಗಳಾದ, ಬೈಬಲ್—ವಾಸ್ತವ್ಯ ಮತ್ತು ಪ್ರವಾದನೆಯ ಗ್ರಂಥ (ಇಂಗ್ಲಿಷ್) ಮತ್ತು ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದೆದುರು ಸ್ಥಿರ ನಿಲ್ಲುತ್ತಾರೆ (ಇಂಗ್ಲಿಷ್) ಎಂಬ ವಿಡಿಯೊಗಳು ಸೇರಿವೆ. ಸೊಸೈಟಿಯ ವಿಡಿಯೊಗಳು ನಿಮ್ಮ ಭಾಷೆಯಲ್ಲಿ ದೊರೆಯುವುದಾದರೆ, ನೀವು ಅವುಗಳನ್ನು ನಿಮ್ಮ ಕ್ಷೇತ್ರ ಶುಶ್ರೂಷೆಯಲ್ಲಿ ಉಪಯೋಗಿಸಿದ್ದೀರೊ?a
13 ಇತ್ತೀಚೆಗೆ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು, ಒಂದು ಹೊಸ ಸಾಧನವನ್ನು, ನಮ್ಮ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೆರವು ಕೊಡುವರೆ ಒದಗಿಸಲಾಯಿತು. ಅದನ್ನು ಏಕೆ ಪ್ರಕಾಶಿಸಲಾಯಿತು? ಅದನ್ನು ಹೇಗೆ ಉಪಯೋಗಿಸಬಹುದು?
ಹೊಸ ಉಪಕರಣವನ್ನು ಪರೀಕ್ಷಿಸುವುದು
14, 15. ಅಪೇಕ್ಷೆ ಬ್ರೋಷರನ್ನು ಯಾರಿಗಾಗಿ ವಿನ್ಯಾಸಿಸಲಾಗಿದೆ, ಮತ್ತು ಅದರಲ್ಲಿ ಏನು ಸೇರಿದೆ?
14 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಹೊಸ ಪ್ರಕಾಶನವು, ದೇವರನ್ನು ಆಗಲೇ ನಂಬುವವರಿಗಾಗಿಯೂ ಬೈಬಲನ್ನು ಗೌರವಿಸುವವರಿಗಾಗಿಯೂ ವಿನ್ಯಾಸಿಸಲ್ಪಟ್ಟಿದೆ. ಈ ಬ್ರೋಷರಿನ ತಯಾರಿಯಲ್ಲಿ ಸಂಚರಣ ಮೇಲ್ವಿಚಾರಕರು ಹಾಗೂ ವರ್ಧಿಷ್ಣು ದೇಶಗಳಲ್ಲಿ ಅನೇಕ ವರ್ಷಗಳ ಅನುಭವವಿರುವ ಗಿಲ್ಯಡ್ ಶಿಕ್ಷಿತ ಮಿಷನೆರಿಗಳು ನೆರವು ಕೊಟ್ಟರು. ಅದು ಬೈಬಲಿನ ಮೂಲ ಬೋಧನೆಗಳನ್ನೊಳಗೊಂಡ ಒಂದು ವ್ಯಾಪಕ ಪಾಠಕ್ರಮವನ್ನು ಒಳಗೊಂಡಿದೆ. ಪದಪ್ರಯೋಗವು ಹಿತಕರವೂ, ಸರಳವೂ, ನೇರವೂ ಆಗಿದೆ. ಅದೇ ಸಮಯದಲ್ಲಿ, ಪಾಠವು ತೀರ ಸುಲಭವಾಗಿರುವುದಿಲ್ಲ. ಅದು “ಹಾಲು” ಮಾತ್ರ ನೀಡುವುದಿಲ್ಲ, ದೇವರ ವಾಕ್ಯದಿಂದ “ಗಟ್ಟಿಯಾದ ಆಹಾರ”ವನ್ನು, ಹೆಚ್ಚಿನ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೀಡುತ್ತದೆ.—ಇಬ್ರಿಯ 5:12-14.
15 ಇತ್ತೀಚಿನ ವರುಷಗಳಲ್ಲಿ ವಿವಿಧ ದೇಶಗಳ ರಾಜ್ಯ ಪ್ರಚಾರಕರು ಅಂತಹದ್ದೇ ಒಂದು ಪ್ರಕಾಶನಕ್ಕಾಗಿ ಕೇಳಿಕೊಂಡಿದ್ದಾರೆ. ಉದಾಹರಣೆಗೆ, ವಾಚ್ ಟವರ್ ಸೊಸೈಟಿಯ, ಪ್ಯಾಪ್ವ ನ್ಯೂ ಗಿನಿಯಲ್ಲಿರುವ ಬ್ರಾಂಚ್ ಬರೆದುದು: “ಜನರು ಪರಸ್ಪರ ವಿರುದ್ಧವಾಗಿರುವ ಧಾರ್ಮಿಕ ಬೋಧನೆಗಳಿಂದಾಗಿ ಗಲಿಬಿಲಿಗೊಂಡಿದ್ದಾರೆ. ಅವರಿಗೆ, ತಮ್ಮ ಸ್ವಂತ ಬೈಬಲ್ಗಳಲ್ಲಿ ಅವರೇ ಪರೀಕ್ಷಿಸಸಾಧ್ಯವಿರುವ, ಅನೇಕ ಬೈಬಲ್ ವಚನಗಳಿಂದ ಬೆಂಬಲಿಸಲ್ಪಡುವ ಸತ್ಯದ ಸಂಕ್ಷಿಪ್ತ ಹೇಳಿಕೆಗಳು ಅಗತ್ಯ. ದೇವರು ನಿಜ ಕ್ರೈಸ್ತರಿಂದ ಏನನ್ನು ಅಪೇಕ್ಷಿಸುತ್ತಾನೆಂಬುದರ ಮತ್ತು ಯಾವ ಪದ್ಧತಿಗಳು ಮತ್ತು ಆಚಾರಗಳು ಆತನಿಗೆ ಸ್ವೀಕಾರಯೋಗ್ಯವಾಗಿಲ್ಲ ಎಂಬುದರ ಕುರಿತಾದ ಸ್ಪಷ್ಟವಾದ ಮತ್ತು ನಿರ್ದಿಷ್ಟ ನಿರೂಪಣೆಗಳು ಅವರಿಗೆ ಅಗತ್ಯ.” ಅಂತಹವರು ದೇವರ ಆವಶ್ಯಕತೆಗಳನ್ನು ತಿಳಿಯುವಂತೆ ಸಹಾಯಮಾಡಲು ನಮಗೆ ಬೇಕಾಗಿರುವುದು ಅಪೇಕ್ಷೆ ಬ್ರೋಷರೇ.
16. (ಎ) ಆ ಹೊಸ ಬ್ರೋಷರಿನ ಸರಳ ವಿವರಣೆಗಳಿಂದ ವಿಶೇಷವಾಗಿ ಯಾರು ಪ್ರಯೋಜನಪಡೆದಾರು? (ಬಿ) ನಿಮ್ಮ ಟೆರಿಟೊರಿಯಲ್ಲಿರುವವರು ಅಪೇಕ್ಷೆ ಬ್ರೋಷರ್ನಿಂದ ಹೇಗೆ ಪ್ರಯೋಜನಪಡೆದಾರು?
16 ಈ ಹೊಸ ಉಪಕರಣವನ್ನು ನೀವು ಹೇಗೆ ಉಪಯೋಗಿಸಬಹುದು? ಮೊದಲನೆಯದಾಗಿ, ಓದಲು ಕಷ್ಟವಾಗುತ್ತಿರುವ ಅಥವಾ ಓದುವ ಪ್ರವೃತ್ತಿಯಿರದ ಜನರೊಂದಿಗೆ ಅಭ್ಯಸಿಸಲು ಅದನ್ನು ಉಪಯೋಗಿಸಸಾಧ್ಯವಿದೆ.b ಈ ಬ್ರೋಷರಿನ ಸರಳ ವಿವರಣೆಗಳಿಂದ ಅಂತಹ ವ್ಯಕ್ತಿಗಳು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಪ್ರಕಾಶನದ ಮುಂಪ್ರತಿಯೊಂದನ್ನು ಪುನರ್ವಿಮರ್ಶಿಸಿದ ಬಳಿಕ, ವಾಚ್ ಟವರ್ ಬ್ರಾಂಚ್ಗಳು ಹೀಗೆ ಬರೆದವು: “ಜನರಿಗೆ ಸವಿಸ್ತಾರವಾಗಿ ಓದುವ ಪ್ರವೃತ್ತಿಯಿಲ್ಲದ ದೇಶದ ಅನೇಕ ಭಾಗಗಳಲ್ಲಿ ಈ ಬ್ರೋಷರ್ ತುಂಬ ಉಪಯುಕ್ತವಾಗಿದೆ.” (ಬ್ರೆಸಿಲ್) “ತಮ್ಮ ದೇಶೀಯಭಾಷೆಯನ್ನು ಓದಲು ಅಸಮರ್ಥರಾದ ಮತ್ತು ಫ್ರೆಂಚ್ ಭಾಷೆಯನ್ನು ಓದಲು ಇನ್ನೂ ಕಷ್ಟಪಡುತ್ತಿರುವ ಅನೇಕ ವಲಸೆಗಾರರು ಇಲ್ಲಿದ್ದಾರೆ. ಅಂತಹವರೊಂದಿಗೆ ಅಭ್ಯಾಸಮಾಡುವ ಸಹಾಯಕವಾಗಿ ಈ ಬ್ರೋಷರ್ ಉಪಯೋಗಿಸಲ್ಪಡಬಹುದು.” (ಫ್ರಾನ್ಸ್) ನಿಮ್ಮ ಟೆರಿಟೊರಿಯಲ್ಲಿ ಅಪೇಕ್ಷೆ ಬ್ರೋಷರಿನಿಂದ ಪ್ರಯೋಜನಪಡೆದುಕೊಳ್ಳಬಹುದಾದ ಜನರ ಕುರಿತು ನೀವು ಯೋಚಿಸಬಲ್ಲಿರೊ?
17. ಅನೇಕ ದೇಶಗಳಲ್ಲಿ ಆ ಹೊಸ ಬ್ರೋಷರ್ ಯಾವ ವಿಧದಲ್ಲಿ ಉಪಯುಕ್ತವಾಗಬಹುದು, ಮತ್ತು ಏಕೆ?
17 ಎರಡನೆಯದಾಗಿ, ಎಷ್ಟೇ ವಿದ್ಯಾವಂತರಿರಲಿ, ದೇವಭಯವುಳ್ಳ ಜನರೊಂದಿಗೆ ಬೈಬಲ್ ಅಭ್ಯಾಸಗಳನ್ನು ನಡೆಸಲು ಈ ಬ್ರೋಷರನ್ನು ಅನೇಕ ದೇಶಗಳಲ್ಲಿ ಉಪಯೋಗಿಸಬಹುದು. ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿ ಅಭ್ಯಾಸವನ್ನು ಆರಂಭಿಸಲು ಪ್ರಯತ್ನಿಸಬೇಕೆಂಬುದು ನಿಶ್ಚಯ. ಆದರೆ ಕೆಲವು ಸಂದರ್ಭಗಳಲ್ಲಿ, ಒಂದು ಬ್ರೋಷರ್ನಲ್ಲಿ ಅಭ್ಯಾಸವನ್ನು ಆರಂಭಿಸುವುದು ಸುಲಭವಾಗಿರಬಹುದು. ಬಳಿಕ, ತಕ್ಕ ಕಾಲದಲ್ಲಿ, ಆ ಅಭ್ಯಾಸವನ್ನು ನಮ್ಮ ಪ್ರಧಾನ ಮತ್ತು ಪ್ರಥಮಾಯ್ಕೆಯ ಅಭ್ಯಾಸ ಸಹಾಯಕವಾದ ಜ್ಞಾನ ಪುಸ್ತಕಕ್ಕೆ ವರ್ಗಾಯಿಸಬೇಕು. ಅಪೇಕ್ಷೆ ಬ್ರೋಷರ್ನ ಉಪಯೋಗದ ಕುರಿತು ವಾಚ್ ಟವರ್ ಬ್ರಾಂಚುಗಳು ಬರೆದುದು: “ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು ಕಷ್ಟಕರ, ಮತ್ತು ಪ್ರಚಾರಕರು ಬ್ರೋಷರ್ನಲ್ಲಿ ಆರಂಭಿಸುವುದಾದರೆ, ಅಭ್ಯಾಸವನ್ನು ಆರಂಭಿಸುವ ಅವಕಾಶಗಳು ಹೆಚ್ಚೆಂದು ಕಂಡುಬರುತ್ತದೆ.” (ಜರ್ಮನಿ) “ಈ ವಿಧದ ಬ್ರೋಷರ್ ಹೊಸ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಅತಿ ಕಾರ್ಯಸಾಧಕವಾಗಿರುವುದು ಮತ್ತು ಬಳಿಕ ಅಭ್ಯಾಸವನ್ನು ಜ್ಞಾನ ಪುಸ್ತಕದಲ್ಲಿ ಮುಂದುವರಿಸಸಾಧ್ಯವಿದೆ.” (ಇಟಲಿ) “ಜಪಾನೀಯರಲ್ಲಿ ವಿದ್ಯಾಮಟ್ಟವು ಉಚ್ಚವಾಗಿದ್ದರೂ, ಹೆಚ್ಚಿನವರಿಗೆ ಬೈಬಲ್ ಮತ್ತು ಅದರ ಮೂಲ ಬೋಧನೆಗಳ ಸೀಮಿತ ಜ್ಞಾನವಿದೆ. ಈ ಬ್ರೋಷರ್ ಜ್ಞಾನ ಪುಸ್ತಕಕ್ಕೆ ಉತ್ತಮವಾದ ಮೆಟ್ಟುಗಲ್ಲಾಗಿರಬೇಕು.”—ಜಪಾನ್.
18. ದೇವರ ಆವಶ್ಯಕತೆಗಳನ್ನು ತಲಪುವುದರ ಕುರಿತಾಗಿ ನಾವು ಏನನ್ನು ಜ್ಞಾಪಕದಲ್ಲಿಡಬೇಕು?
18 ಲೋಕದ ಸುತ್ತಲಿರುವ ಸೊಸೈಟಿಯ ಬ್ರಾಂಚ್ಗಳು ಈ ಬ್ರೋಷರನ್ನು ವಿನಂತಿಸಿವೆ, ಮತ್ತು ಅದನ್ನು 221 ಭಾಷೆಗಳಲ್ಲಿ ಭಾಷಾಂತರಿಸಲು ಒಪ್ಪಿಗೆಯನ್ನು ಕೊಡಲಾಗಿದೆ. ಯೆಹೋವ ದೇವರು ಅವರಿಂದ ಅಪೇಕ್ಷಿಸುವುದನ್ನು ಇತರರು ಕಲಿಯುವುದರಲ್ಲಿ ನೆರವಾಗುವಂತೆ ಈ ಹೊಸ ಪ್ರಕಾಶನವು ನಮಗೆ ಸಹಾಯಮಾಡುವುದರಲ್ಲಿ ಬೆಲೆಯುಳ್ಳದ್ದಾಗಿ ಪರಿಣಮಿಸುವಂತಾಗಲಿ. ನಮ್ಮ ಪಾಲಿಗಾದರೊ, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆ ಸೇರಿರುವ ದೇವರ ಆವಶ್ಯಕತೆಗಳನ್ನು ಮುಟ್ಟುವುದು, ನಾವು ಯೆಹೋವನನ್ನು ಎಷ್ಟು ಪ್ರೀತಿಸುತ್ತೇವೆಂದು ಆತನಿಗೆ ತೋರಿಸಲು ನಮಗೆ ಅಮೂಲ್ಯಾವಕಾಶವನ್ನು ಕೊಡುತ್ತದೆ ಎಂಬುದನ್ನು ನೆನಪಿನಲ್ಲಿಡೋಣ. ಹೌದು, ದೇವರು ನಮ್ಮಿಂದ ಅಪೇಕ್ಷಿಸುವಂತಹದ್ದು ಒಂದು ಹೊರೆಯಾಗಿರುವುದಿಲ್ಲ. ಅದು ಜೀವಿಸುವ ಅತ್ಯುತ್ತಮ ಮಾರ್ಗವೇ ಸರಿ!—ಕೀರ್ತನೆ 19:7-11.
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಪುಸ್ತಕವು ಹೇಳುವುದು: “ಖಂಡಿತವಾಗಿಯೂ ವಿಡಿಯೊಕ್ಯಾಸೆಟ್ಗಳು, ಮುದ್ರಿತ ಪುಟ ಅಥವಾ ವೈಯಕ್ತಿಕ ಸಾಕ್ಷಿಯ ಸ್ಥಳಭರ್ತಿಮಾಡುವುದಿಲ್ಲ. ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಸೊಸೈಟಿಯ ಪ್ರಕಾಶನಗಳು ಮಹತ್ವದ ಪಾತ್ರವನ್ನು ವಹಿಸುತ್ತ ಮುಂದುವರಿಯುತ್ತವೆ. ಯೆಹೋವನ ಸಾಕ್ಷಿಗಳ ಮನೆಮನೆಯ ಕಾರ್ಯವು ಅವರ ಶುಶ್ರೂಷೆಯ ದೃಢವಾಗಿ ನಿಂತಿರುವ ಶಾಸ್ತ್ರೀಯ ಅಂಶವಾಗಿಯೇ ಇರುತ್ತದೆ. ಆದರೂ, ಈಗ ಇವುಗಳಿಗೆ ವಿಡಿಯೊಕ್ಯಾಸೆಟ್ಗಳು, ಯೆಹೋವನ ಅಮೂಲ್ಯ ವಾಗ್ದಾನಗಳಲ್ಲಿ ನಂಬಿಕೆಯನ್ನು ಬೆಳೆಸುವರೆ ಮತ್ತು ಆತನು ನಮ್ಮ ದಿನಗಳಲ್ಲಿ ಭೂಮಿಯ ಮೇಲೆ ಏನನ್ನು ಮಾಡಿಸುತ್ತಿದ್ದಾನೊ ಅದಕ್ಕೆ ಗಣ್ಯತೆಯನ್ನು ಉತ್ತೇಜಿಸುವರೆ ಬೆಲೆಬಾಳುವ ಸಾಧನಗಳಾಗಿ ಕೂಡಿಸಲ್ಪಡುತ್ತವೆ.”
b ಅಪೇಕ್ಷೆ ಬ್ರೋಷರ್ನಲ್ಲಿ ಅಭ್ಯಾಸವನ್ನು ಹೇಗೆ ನಡೆಸುವುದು ಎಂಬುದರ ವಿವರಣೆಗಾಗಿ, “ದೇವರ ಆವಶ್ಯಕತೆಗಳನ್ನು ಕಲಿಯುವರೆ ಜನರಿಗೆ ಸಹಾಯ ನೀಡಲು ಒಂದು ಹೊಸ ಸಾಧನ” ಎಂಬ ಲೇಖನವನ್ನು, 16-17ನೆಯ ಪುಟಗಳಲ್ಲಿ ಓದಿರಿ.
ನೀವು ವಿವರಿಸಬಲ್ಲಿರೊ?
◻ ಯಾವ ಇಮ್ಮಡಿ ಉದ್ದೇಶದ ಕೆಲಸದಲ್ಲಿ ತನ್ನ ಸೇವಕರು ಭಾಗವಹಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ?
◻ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ಹಂಗು ನಮಗೆ ಏಕೆ ಒಂದು ಹೊರೆಯಾಗಿರುವುದಿಲ್ಲ?
◻ ನಮ್ಮ ಸಾರುವ ಮತ್ತು ಶಿಷ್ಯರನ್ನಾಗಿಮಾಡುವ ಕೆಲಸದಲ್ಲಿ ಉಪಯೋಗಿಸುವರೆ, ಯಾವ ಸಾಧನಗಳನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸಿದ್ದಾನೆ?
◻ ಅಪೇಕ್ಷೆ ಬ್ರೋಷರನ್ನು ಯಾರಿಗಾಗಿ ವಿನ್ಯಾಸಿಸಲಾಗಿದೆ, ಮತ್ತು ನಮ್ಮ ಶುಶ್ರೂಷೆಯಲ್ಲಿ ನಾವು ಅದನ್ನು ಹೇಗೆ ಉಪಯೋಗಿಸಬಹುದು?
[ಪುಟ 24 ರಲ್ಲಿರುವ ಚಿತ್ರ]
ನಮ್ಮ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಹೊರೆಯಾಗಿರುವುದಿಲ್ಲ
[ಪುಟ 26 ರಲ್ಲಿರುವ ಚಿತ್ರಗಳು]
“ದೇವರು ಸತ್ಯವಂತನೇ ಸರಿ” (1946, ಪರಿಷ್ಕೃತ 1952): 1,92,50,000 ಪ್ರತಿಗಳು, 54 ಭಾಷೆಗಳಲ್ಲಿ (ಇಂಗ್ಲಿಷ್ ತೋರಿಸಲ್ಪಟ್ಟಿದೆ)
“ನಿತ್ಯ ಜೀವಕ್ಕೆ ನಡಿಸುವ ಸತ್ಯವು” (1968): 10,70,00,000 ಪ್ರತಿಗಳು, 117 ಭಾಷೆಗಳಲ್ಲಿ (ಫ್ರೆಂಚ್ ತೋರಿಸಲ್ಪಟ್ಟಿದೆ)
“ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ” (1982): 8,09,00,000 ಪ್ರತಿಗಳು, 130 ಭಾಷೆಗಳಲ್ಲಿ (ರಷ್ಯನ್ ತೋರಿಸಲ್ಪಟ್ಟಿದೆ)
“ನಿತ್ಯಜೀವಕ್ಕೆ ನಡೆಸುವ ಜ್ಞಾನ” (1995): 4,55,00,000 ಪ್ರತಿಗಳು, 125 ಭಾಷೆಗಳಲ್ಲಿ (ಜರ್ಮನ್ ತೋರಿಸಲ್ಪಟ್ಟಿದೆ)