ದೇವರ ಆವಶ್ಯಕತೆಗಳನ್ನು ಕಲಿಯುವರೆ ಜನರಿಗೆ ಸಹಾಯ ನೀಡಲು ಒಂದು ಹೊಸ ಸಾಧನ
“ಅದರ ಸರಳ, ನೇರ, ಹಾಗೂ ದಯಾಪರ ಸಮೀಪಿಸುವಿಕೆಯು, ನಿರೀಕ್ಷೆಗಳಿಗೆ ಮೀರಿದ ಫಲಿತಾಂಶಗಳನ್ನು ಉತ್ಪಾದಿಸುವುದು. ವಿಷಯಗಳು ಎಂಥ ಒಂದು ಜಟಿಲವಲ್ಲದ ಹಾಗೂ ಆಹ್ಲಾದಕರವಾದ ವಿಧದಲ್ಲಿ ಸಾದರಪಡಿಸಲ್ಪಟ್ಟಿವೆಯೆಂದರೆ, ಯಾವನೇ ಪ್ರಾಮಾಣಿಕ, ಅನ್ವೇಷಕ ವ್ಯಕ್ತಿಯು ಹೀಗೆ ಹೇಳಲು ಪ್ರೇರಿಸಲ್ಪಡುವನು, ‘ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ.’” (1 ಕೊರಿಂಥ 14:25) ಥೈಲೆಂಡ್ನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಹೊಸ ಬ್ರೋಷರಿನ ಕುರಿತು ವರ್ಣಿಸುತ್ತಿದ್ದಾಗ ಹೀಗೆ ಹೇಳಿದನು. ಇದು ವಾಚ್ ಟವರ್ ಸೊಸೈಟಿಯಿಂದ 1996/1997ರ ಅವಧಿಯಲ್ಲಿ “ದೈವಿಕ ಶಾಂತಿಯ ಸಂದೇಶವಾಹಕರು” ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಗೊಳಿಸಲ್ಪಟ್ಟಿತು.
ಈ 32 ಪುಟದ, ಪೂರ್ಣ ವರ್ಣರಂಜಿತ ಬ್ರೋಷರ್, ಬೈಬಲ್ ಅಭ್ಯಾಸದ ಕೋರ್ಸ್ ಆಗಿ ವಿನ್ಯಾಸಿಸಲ್ಪಟ್ಟಿದೆ. ಇದು ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುತ್ತದೆ. ಶಬ್ದಪ್ರಯೋಗವು ಸರಳವೂ ಸಂಕ್ಷಿಪ್ತವೂ ಆಗಿದೆ. ಇದು ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂಬುದನ್ನು ಸ್ಫುಟವಾಗಿ ವಿವರಿಸುತ್ತದೆ. ವಾಚಕರಿಗೆ ಅದನ್ನು ಅರ್ಥಮಾಡಿಕೊಳ್ಳಲು ಯಾವುದೇ ಕಷ್ಟವಿರಬಾರದು. ಈ ಹೊಸ ಬ್ರೋಷರಿನಲ್ಲಿ ಒಂದು ಬೈಬಲ್ ಅಭ್ಯಾಸವನ್ನು ನೀವು ಹೇಗೆ ನಡೆಸಬಹುದು?
ಪ್ರಶ್ನೆಗಳನ್ನು ಉಪಯೋಗಿಸಿರಿ. ಪ್ರತಿಯೊಂದು ಪಾಠದ ಪ್ರಾರಂಭದಲ್ಲಿ ಪ್ರಶ್ನೆಗಳಿವೆ. ಪ್ರತಿಯೊಂದು ಪ್ರಶ್ನೆಯ ನಂತರ ಆವರಣ ಚಿಹ್ನೆಗಳಲ್ಲಿ, ಉತ್ತರಗಳು ಕಂಡುಬರುವ ಪ್ಯಾರಗ್ರಾಫ್ಗಳ ಸಂಖ್ಯೆಗಳನ್ನು ನೀವು ಕಂಡುಕೊಳ್ಳುವಿರಿ. ಈ ಪ್ರಶ್ನೆಗಳನ್ನು ಪೂರ್ವಾವರ್ತನೆಯೂ ಪುನರಾವರ್ತನೆಯೂ ಆದ ಕಲಿಕೆಯ ನೆರವಾಗಿ ಉಪಯೋಗಿಸಬಹುದು. ಉದಾಹರಣೆಗೆ, ಒಂದು ಗೃಹ ಬೈಬಲ್ ಅಭ್ಯಾಸದ ಆರಂಭದಲ್ಲಿ, ವಿದ್ಯಾರ್ಥಿಯ ಹೇಳಿಕೆಗಳನ್ನು ಪಡೆದುಕೊಳ್ಳಲು ನೀವು ಅವನಿಗೆ ಪ್ರಶ್ನೆಗಳನ್ನು ಕೇಳಬಹುದು. ಯಾವುದೇ ತಪ್ಪಾದ ಉತ್ತರಗಳನ್ನು ತತ್ಕ್ಷಣವೇ ಸರಿಪಡಿಸುವ ಬದಲಿಗೆ, ನೀವು ಅಭ್ಯಾಸದೊಂದಿಗೆ ಮುಂದೆ ಸಾಗಸಾಧ್ಯವಿದೆ. ಪಾಠದ ಕೊನೆಯಲ್ಲಿ, ಈಗ ವಿದ್ಯಾರ್ಥಿಯು ಬೈಬಲಿನ ಸಾಮರಸ್ಯದಲ್ಲಿ ಅವುಗಳನ್ನು ಉತ್ತರಿಸಶಕ್ತನೋ ಎಂಬುದನ್ನು ನೋಡಲು ಪುನಃ ಪ್ರಶ್ನೆಗಳನ್ನು ಕೇಳಸಾಧ್ಯವಿದೆ.
ಶಾಸ್ತ್ರವಚನಗಳನ್ನು ತೆರೆದು ನೋಡಿರಿ. ಪ್ರತಿಯೊಂದು ಪಾಠದಲ್ಲಿ, ಬೈಬಲ್ ಸತ್ಯಗಳ ಚುಟುಕು ಹೇಳಿಕೆಗಳು ಬೆಂಬಲಿಸುವ ಶಾಸ್ತ್ರವಚನಗಳಿಂದ ಜೊತೆಗೂಡಿವೆ. ಈ ಶಾಸ್ತ್ರವಚನಗಳಲ್ಲಿ ಹೆಚ್ಚಿನವು ಉದ್ಧರಿಸಲ್ಪಟ್ಟಿರದೆ, ಉಲ್ಲೇಖಿಸಲ್ಪಟ್ಟಿರುವುದರಿಂದ, ವಿದ್ಯಾರ್ಥಿಯು ತನ್ನ ಸ್ವಂತ ಬೈಬಲಿನಿಂದ ಈ ವಚನಗಳನ್ನು ತೆರೆದು ನೋಡುವಂತೆ ಉತ್ತೇಜಿಸುವುದು ಪ್ರಾಮುಖ್ಯವಾಗಿದೆ. ಅವನು ದೇವರ ವಾಕ್ಯವನ್ನು ಜೀವಿತದಲ್ಲಿ ಅನ್ವಯಿಸಿಕೊಳ್ಳಸಾಧ್ಯವಿರುವ ಮುನ್ನವೇ ಅವನು ಅದನ್ನು ಓದಿ, ಮನನ ಮಾಡುವ ಅಗತ್ಯವಿದೆ.—ಯೆಹೋಶುವ 1:8.
ಚಿತ್ರಗಳನ್ನು ಎತ್ತಿತೋರಿಸಿರಿ. ಈ ಬ್ರೋಷರ್ ಛಾಯಚಿತ್ರಗಳು ಹಾಗೂ ವರ್ಣಚಿತ್ರಗಳಿಂದ ಹೇರಳವಾಗಿ ಚಿತ್ರಿಸಲ್ಪಟ್ಟಿದೆ—ಒಟ್ಟಾರೆ 50ಕ್ಕಿಂತಲೂ ಹೆಚ್ಚು ಕಲಾಕೃತಿಗಳು. ಇವು ದೃಷ್ಟಿರಂಜಕವಾಗಿ ಮಾತ್ರವಲ್ಲ, ಬದಲಾಗಿ ಹೆಚ್ಚಿನ ಕಲಿಸುವಿಕೆಯ ಸಹಾಯಕಗಳಾಗಿಯೂ ಒದಗಿಸಲ್ಪಟ್ಟಿವೆ. ಉದಾಹರಣೆಗೆ, ಕೊನೆಯ ಎರಡು ಪಾಠಗಳಿಗೆ (ಪ್ರತಿಯೊಂದು ಒಂದು ಪುಟ, ಎದುರೆದುರಿಗಿರುವ ಪುಟಗಳು) “ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು” ಮತ್ತು “ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ” ಎಂಬ ಶೀರ್ಷಿಕೆಯು ಕೊಡಲ್ಪಟ್ಟಿದೆ. ಎರಡು ಪುಟಗಳುದ್ದಕ್ಕೂ ಇರುವ ಛಾಯಾಚಿತ್ರಗಳು, ಅದೇ ವ್ಯಕ್ತಿಯ ಆತ್ಮಿಕ ಪ್ರಗತಿಯನ್ನು ರೇಖಿಸುತ್ತವೆ. ಅವನು ಅನೌಪಚಾರಿಕವಾಗಿ ಸಾಕ್ಷಿನೀಡುತ್ತಿರುವುದು, ಮನೆಮನೆಯ ಕಾರ್ಯದಲ್ಲಿ ಪಾಲುತೆಗೆದುಕೊಳ್ಳುತ್ತಿರುವುದು, ತನ್ನ ಸಮರ್ಪಣೆಯನ್ನು ಮಾಡಿಕೊಳ್ಳುತ್ತಿರುವುದು, ಮತ್ತು ಅಂತಿಮವಾಗಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರುವುದನ್ನು ಅವು ತೋರಿಸುತ್ತವೆ. ಈ ಚಿತ್ರಗಳಿಗೆ ವಿದ್ಯಾರ್ಥಿಯ ಗಮನವನ್ನು ಸೆಳೆಯುತ್ತಾ, ದೇವರನ್ನು ಸೇವಿಸುವುದಕ್ಕಾಗಿ ಅವಶ್ಯವಿರುವ ಹೆಜ್ಜೆಗಳನ್ನು ನೋಡುವಂತೆ ಅವನಿಗೆ ನೀವು ಸಹಾಯಮಾಡುತ್ತೀರಿ.
ಒಬ್ಬ ಆಸಕ್ತ ವ್ಯಕ್ತಿಯು ಚೆನ್ನಾಗಿ ಓದುವುದಿಲ್ಲ ಇಲ್ಲವೇ ಅವನಿಗೆ ಓದಲಿಕ್ಕೇ ಬಾರದಿದ್ದರೆ ಆಗೇನು? ಸೊಸೈಟಿಯು ಈ ಹೊಸ ಬ್ರೋಷರ್ ಅನೇಕ ಭಾಷೆಗಳಲ್ಲಿ ಆಡಿಯೋಕ್ಯಾಸೆಟ್ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಕ್ಯಾಸೆಟ್, ಬ್ರೋಷರಿನ ವಿಷಯವನ್ನು ಹಾಗೂ ಉಲ್ಲೇಖಿಸಲ್ಪಟ್ಟ ಅನೇಕ ಶಾಸ್ತ್ರವಚನಗಳನ್ನು ಒಳಗೊಂಡಿದೆ. ಅದು ಮುಂದೆ ತಿಳಿಸಲ್ಪಟ್ಟಿರುವಂತೆ ರೆಕಾರ್ಡ್ ಮಾಡಲ್ಪಟ್ಟಿದೆ: ಪ್ರಥಮವಾಗಿ ಪ್ರಶ್ನೆಯನ್ನು ಓದಲಾಗುತ್ತದೆ, ಆಮೇಲೆ ಉಲ್ಲೇಖಿಸಲ್ಪಟ್ಟ ಶಾಸ್ತ್ರವಚನಗಳಲ್ಲಿ ಕೆಲವು ವಚನಗಳೊಂದಿಗೆ ಅದನ್ನು ಉತ್ತರಿಸುವ ಪ್ಯಾರಗ್ರಾಫ್ (ಅಥವಾ ಪ್ಯಾರಗ್ರಾಫ್ಗಳು) ಅನ್ನು ಓದಲಾಗುತ್ತದೆ. ಅನಂತರ ಮುಂದಿನ ಪ್ರಶ್ನೆಯನ್ನು ಓದಲಾಗುತ್ತದೆ, ಆಮೇಲೆ ಅದನ್ನು ಉತ್ತರಿಸುವ ವಿಷಯ ಮತ್ತು ಶಾಸ್ತ್ರವಚನಗಳನ್ನು ಓದಲಾಗುತ್ತದೆ. ಹೀಗೆ ಮುಂದುವರಿಯುತ್ತದೆ. ವಿದ್ಯಾರ್ಥಿಯು ಅಭ್ಯಾಸಕ್ಕಾಗಿ ತಯಾರಿಸುವಾಗ ರೆಕಾರ್ಡಿಂಗ್ ಅನ್ನು ಅವನು ಆಲಿಸಸಾಧ್ಯವಿದೆ. ಅಭ್ಯಾಸವನ್ನು ನಡೆಸುತ್ತಿರುವಾಗಲೂ ಕ್ಯಾಸೆಟ್ ಅನ್ನು ಉಪಯೋಗಿಸಸಾಧ್ಯವಿದೆ.
ಅಧಿವೇಶನದಲ್ಲಿ ಉಪಸ್ಥಿತರಿದ್ದವರು ಈ ಹೊಸ ಬ್ರೋಷರನ್ನು ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲು ಅತ್ಯುತ್ಸಾಹವುಳ್ಳವರಾಗಿದ್ದರು. ಉದಾಹರಣೆಗೆ, ಬ್ರೋಷರನ್ನು ಪಡೆದ ಕೆಲವೇ ದಿನಗಳ ಅನಂತರ, ಅಮೆರಿಕದ ಇಬ್ಬರು ಪಯನೀಯರರು (ಪೂರ್ಣ ಸಮಯದ ಸೌವಾರ್ತಿಕರು) ತಾವು ಭೇಟಿಯಾಗುತ್ತಿದ್ದ ಒಬ್ಬ ಯುವ ದಂಪತಿಗಳಿಗೆ ಅದನ್ನು ಕೊಟ್ಟರು. ಆ ದಂಪತಿಗಳು ಪರಿವಿಡಿಯ ಪಟ್ಟಿಯನ್ನು ನೋಡಿದಾಗ, “ದೇವರು ದ್ವೇಷಿಸುವ ಆಚರಣೆಗಳು” ಎಂಬ ಪಾಠವು ಅವರ ಗಮನವನ್ನು ಸೆಳೆಯಿತು. “ದೇವರು ಎಂದೂ ದ್ವೇಷಿಸುವುದಿಲ್ಲ—ಆತನು ಪ್ರೀತಿಸ್ವರೂಪಿಯಾಗಿದ್ದಾನೆ ಎಂದು ನನಗೆ ಯಾವಾಗಲೂ ಕಲಿಸಲಾಗಿತ್ತು” ಎಂಬುದಾಗಿ ಆ ಯುವ ಸ್ತ್ರೀ ಹೇಳಿದಳು. “ನಾನು ಮೊದಲು ಓದುವುದು ಇದನ್ನೇ.” ಆ ಇಬ್ಬರು ಪಯನೀಯರರು ಮುಂದಿನ ವಾರ ಹಿಂದಿರುಗಿಹೋದಾಗ, ಆ ಯುವ ಸ್ತ್ರೀ ಹೇಳಿದ್ದು: “ನಾನು ಹೊಸ ಬ್ರೋಷರನ್ನು ಓದುತ್ತಿದ್ದೆ. ನಾವು ಮಾಡಬೇಕಾಗಿರುವ ಎಲ್ಲ ವಿಷಯಗಳನ್ನು ಮಾಡುವುದು ಬಹಳ ಕಷ್ಟಕರವಾಗಿದೆ. ಯೆಹೋವನು ನಮ್ಮೊಂದಿಗೆ ಪ್ರಸನ್ನನಾಗಿರುವುದಿಲ್ಲ—ನಾವು ವಿವಾಹವಾಗಿಲ್ಲ. ಆದರೆ ನಾವು ಒಂದು ನಿರ್ಣಯವನ್ನು ಮಾಡಿದ್ದೇವೆ. ಮುಂದಿನ ಶುಕ್ರವಾರ ನಾವು ವಿವಾಹವಾಗಲು ಏರ್ಪಾಡುಗಳನ್ನು ಮಾಡಿದ್ದೇವೆ.” ಪಯನೀಯರ್ ದಂಪತಿಗಳನ್ನು ಅಪ್ಪಿಕೊಳ್ಳುತ್ತಾ, ಅವರು ಕೂಡಿಸಿದ್ದು: “ಕ್ರಮವಾದ ಅಭ್ಯಾಸವನ್ನು ಮಾಡುತ್ತಿಲ್ಲವಾದುದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವಾದರೂ ವಿವಾಹವಾಗಲಿಕ್ಕಾಗಿ ಮಾಡಿರುವ ಈ ನಿರ್ಧಾರವು ನಮ್ಮ ದೊಡ್ಡ ಹೊರೆಯನ್ನು ಕೆಳಗಿಳಿಸಿದೆ.”
ಖಂಡಿತವಾಗಿ, ಹೊಸ ಅಪೇಕ್ಷೆ ಬ್ರೋಷರನ್ನು ಉಪಯೋಗಿಸಿರಿ. ಇದು ದೇವರ ಆವಶ್ಯಕತೆಗಳನ್ನು ಕಲಿಯುವರೆ ಜನರಿಗೆ ಸಹಾಯ ನೀಡಲು ಒಂದು ಉತ್ತಮ ಸಾಧನವಾಗಿದೆ.
[ಪುಟ 17 ರಲ್ಲಿರುವ ಚಿತ್ರ]
ಈ ಹೊಸ ಬ್ರೋಷರನ್ನು ನೀವು ಹೇಗೆ ಉಪಯೋಗಿಸುವಿರಿ?