ನೀವು ಬಾಳುವ ಗೆಳೆತನಗಳನ್ನು ಅನುಭವಿಸಬಲ್ಲಿರಿ
ಗೆಳೆತನಗಳಿಗೆ ಪ್ರತಿಬಂಧಕಗಳಿವೆ. ಈ “ಕಡೇ ದಿವಸಗಳಲ್ಲಿ” ಪ್ರೀತಿ, ಸ್ವಾಭಾವಿಕ ವಾತ್ಸಲ್ಯ, ಮತ್ತು ನಿಷ್ಠೆಯ ಒಂದು ಕೊರತೆಯಿರುವುದೆಂದು ಬೈಬಲು ವಾಸ್ತವದಲ್ಲಿ ಮುಂತಿಳಿಸಿತ್ತು. (2 ತಿಮೊಥೆಯ 3:1-5; ಮತ್ತಾಯ 24:12) ಈ ಪರಿಸ್ಥಿತಿಗಳು ತಮ್ಮೊಂದಿಗೆ ಹಿಂದೆಂದೂ ಇರದ ಒಂಟಿತನದ ಒಂದು ಪೀಡೆಯನ್ನು ತಂದಿವೆ. ಒಬ್ಬ ವ್ಯಕ್ತಿಯು ಹೇಳಿದ್ದು: “ನನ್ನ ನೆರೆಹೊರೆಯು ನೋಹನ ನಾವೆಯಂತೆ ಇದೆ. ನೀವು ಒಬ್ಬ ದಂಪತಿಯಾಗಿರದಿದ್ದಲ್ಲಿ, ನಿಮ್ಮನ್ನು ಹೊರಗಿಡಲಾಗುತ್ತದೆ.” ಇದಕ್ಕೆ ಎಲ್ಲಾ ದೋಷವನ್ನು ಪ್ರತಿಯೊಬ್ಬ ಒಂಟಿ ವ್ಯಕ್ತಿಯ ಮೇಲೆ ಹೊರಿಸಲು ಸಾಧ್ಯವಿಲ್ಲ. ಲೋಕದ ಕೆಲವು ಭಾಗಗಳಲ್ಲಿ ಬಾಳುವ ಗೆಳೆತನಗಳಿಗಿರುವ ಪಂಥಾಹ್ವಾನಗಳಲ್ಲಿ, ಜನರು ಹೆಚ್ಚು ಪದೇ ಪದೇ ಸ್ಥಳಾಂತರಿಸುವುದು, ಕುಟುಂಬಗಳು ಒಡೆದು ಹೋಗುತ್ತಿರುವದು, ಭಾವಶೂನ್ಯ ಮತ್ತು ಅಪಾಯಕರ ನಗರಗಳು ಹಾಗೂ ಬಿಡುವಿನ ಸಮಯದಲ್ಲಿ ಒಂದು ಗಮನಾರ್ಹವಾದ ಇಳಿತ, ಇಂಥವುಗಳು ಸೇರಿವೆ.
ಆಧುನಿಕ ದಿನದ ಒಬ್ಬ ನಗರ ವಾಸಿಯು, 18ನೇ ಶತಮಾನದ ಒಬ್ಬ ಹಳ್ಳಿಗನು ಒಂದು ವರ್ಷದಲ್ಲಿ ಅಥವಾ ಒಂದು ಜೀವಮಾನದಲ್ಲೂ ನೋಡಿರುವ ಜನರಿಗಿಂತ ಹೆಚ್ಚು ಜನರನ್ನು ಒಂದು ವಾರದಲ್ಲಿ ನೋಡುತ್ತಾನೆ! ಆದರೂ, ಇಂದು ಅನೇಕ ಸಲ ಸಂಬಂಧಗಳು ಮೇಲುಮೇಲಿನದ್ದಾಗಿರುತ್ತವೆ. ಅನೇಕರು ಸತತವಾಗಿ ಸಾಮಾಜಿಕ ಗೋಷ್ಠಿಗಳಲ್ಲಿ ಮತ್ತು ಮಜಾ ಮಾಡುವ ಪ್ರಯತ್ನಗಳಲ್ಲಿ ತಮ್ಮನ್ನು ಮಗ್ನಗೊಳಿಸಿಕೊಳ್ಳುತ್ತಾರೆ. ಆದಾಗಲೂ, ಕೆಟ್ಟದ್ದಾಗಿ ಆರಿಸಲ್ಪಟ್ಟ ಒಡನಾಡಿಗಳೊಂದಿಗೆ ಟೊಳ್ಳಾದ ಸಂತೋಷ ಸಮಾರಂಭಗಳು, ಇಂಧನಕ್ಕಾಗಿ ಮುಳ್ಳುಗಳನ್ನು ಉಪಯೋಗಿಸುವಂತೆ ಇದೆಯೆಂಬುದನ್ನು ನಾವು ಒಪ್ಪತಕ್ಕದ್ದು. ಪ್ರಸಂಗಿ 7:5, 6 ಹೇಳುವುದು: “ಅಜ್ಞಾನಿಗಳ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು. ಮೂಢರ ನಗುವಾಟವು ಹಂಡೆಯ ಕೆಳಗೆ ಉರಿಯುವ ಮುಳ್ಳಿನ ಚಟಪಟ ಶಬ್ದದ ಹಾಗೆ ಇದೂ ವ್ಯರ್ಥ.” ಮುಳ್ಳುಗಳು ಸ್ವಲ್ಪ ಸಮಯಕ್ಕೆ ಒಂದು ಉಜ್ವಲ ಮತ್ತು ಗದ್ದಲದ ಬೆಂಕಿಯನ್ನು ಮಾಡುತ್ತವೆ, ಆದರೆ ನಮ್ಮನ್ನು ಬೆಚ್ಚಗಿಡುವಷ್ಟು ಸತ್ತ್ವವನ್ನು ಅವು ಹೊಂದಿರುವುದಿಲ್ಲ. ಅದರಂತೆ, ಆರ್ಭಟದ, ನಗಾಡುವ ಸಂಗಾತಿಗಳು ನಮ್ಮನ್ನು ಕ್ಷಣಿಕವಾಗಿ ಅಪಕರ್ಶಿಸಬಹುದು, ಆದರೆ ಅವರು ಎಲ್ಲಾ ಒಂಟಿತನವನ್ನು ನಿರ್ಮೂಲಗೊಳಿಸಿ ನಿಜ ಗೆಳೆಯರಿಗಾಗಿರುವ ನಮ್ಮ ಅಗತ್ಯವನ್ನು ತೃಪ್ತಿಪಡಿಸರು.
ಏಕಾಂತತೆಯು ಒಂಟಿತನದಿಂದ ಭಿನ್ನವಾಗಿದೆ. ನಮ್ಮನ್ನೇ ಚೈತನ್ಯಗೊಳಿಸಲು ಮತ್ತು ಹೀಗೆ ಒಬ್ಬ ಗೆಳೆಯನಾಗಿ ನೀಡಲಿಕ್ಕಾಗಿ ಹೆಚ್ಚನ್ನು ಹೊಂದಿರಲು ಸ್ವಲ್ಪ ಏಕಾಂತತೆಯು ಅವಶ್ಯ. ಒಂಟಿತನದೊಂದಿಗೆ ಎದುರಿಸಲ್ಪಟ್ಟಾಗ, ಅನೇಕರು ತತ್ಕ್ಷಣ ಯಾವುದಾದರೂ ಒಂದು ವಿಧದ ಎಲೆಕ್ಟ್ರಾನಿಕ್ ಮನೋರಂಜನೆಯ ಮೊರೆ ಹೋಗುತ್ತಾರೆ. ಒಂಟಿತನಕ್ಕೆ ಅತಿ ಸಾಮಾನ್ಯ ಪ್ರತಿಕ್ರಿಯೆಗಳಲ್ಲಿ ಒಂದು, ಟೆಲಿವಿಷನ್ ವೀಕ್ಷಿಸುವುದು ಆಗಿದೆಯೆಂದು ಒಂದು ಅಧ್ಯಯನವು ಕಂಡುಹಿಡಿಯಿತು. ಆದರೂ, ನಮಗೆ ಒಂಟಿತನದ ಭಾವನೆಯಿರುವಾಗ ನಾವು ಮಾಡಸಾಧ್ಯವಿರುವ ಅತ್ಯಂತ ಕೆಡುಕಿನ ಸಂಗತಿ ಲಂಬಿಸಿದ ಟೆಲಿವಿಷನ್ ವೀಕ್ಷಣವೆಂದು ಆ ಸಂಶೋಧಕರು ತೀರ್ಮಾನಿಸಿದರು. ಅದು ನಿಷ್ಕ್ರಿಯತೆ, ಬೇಸರ, ಮತ್ತು ಭ್ರಾಂತಿಯನ್ನು ಪ್ರವರ್ಧಿಸುತ್ತಾ, ಇತರ ಜನರೊಂದಿಗೆ ಮುಖಾಮುಖಿ ಪರಸ್ಪರ ಕ್ರಿಯೆಗೆ ಒಂದು ಕೊರತೆಯುಳ್ಳ ಬದಲಿಯಾಗುತ್ತದೆ.
ವಾಸ್ತವವಾಗಿ, ನಾವು ಒಂಟಿಯಾಗಿರುವ ಸಮಯವನ್ನು ರಚನಾತ್ಮಕವಾಗಿ ಉಪಯೋಗಿಸುವಲ್ಲಿ, ಏಕಾಂತತೆಯು ತುಂಬಾ ಅಮೂಲ್ಯವಾಗಿರಸಾಧ್ಯವಿದೆ. ನಾವು ಇದನ್ನು ಓದುವ ಮೂಲಕ, ಪತ್ರಗಳನ್ನು ಬರೆಯುವ ಮೂಲಕ, ವಸ್ತುಗಳನ್ನು ರಚಿಸುವ ಮೂಲಕ ಮತ್ತು ವಿಶ್ರಮಿಸುವ ಮೂಲಕ ಮಾಡಬಹುದು. ರಚನಾತ್ಮಕ ಏಕಾಂತತೆಯು, ದೇವರಿಗೆ ಪ್ರಾರ್ಥಿಸುವುದನ್ನು, ಬೈಬಲನ್ನು ಅಭ್ಯಾಸಿಸುವುದನ್ನು ಮತ್ತು ಅದರ ಮೇಲೆ ಧ್ಯಾನಿಸುವುದನ್ನು ಒಳಗೂಡುತ್ತದೆ. (ಕೀರ್ತನೆ 63:6) ಇವು, ನಮ್ಮ ಅತ್ಯಂತ ಮಹಾ ಗೆಳೆಯನಾಗಬಹುದಾದ, ಯೆಹೋವ ದೇವರಿಗೆ ಹೆಚ್ಚು ನಿಕಟ ಬರುವ ಮಾರ್ಗಗಳಾಗಿವೆ.
ಗೆಳೆತನಗಳ ಬೈಬಲ್ ಸಂಬಂಧಿತ ಉದಾಹರಣೆಗಳು
ಅನೇಕ ಜನರೊಂದಿಗೆ ಸ್ನೇಹಪರರಾಗಿರುವುದು ಒಳ್ಳೆಯದಾಗಿರುವುದಾದರೂ, “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂದು ಬೈಬಲು ನಮಗೆ ನೆನಪು ಹುಟ್ಟಿಸುತ್ತದೆ. (ಜ್ಞಾನೋಕ್ತಿ 18:24) ನಮ್ಮ ಕುರಿತಾಗಿ ನಿಜವಾಗಿಯೂ ಕಾಳಜಿ ವಹಿಸುವ, ಯಾರ ಗೆಳೆತನವು ನಮಗೆ ಆನಂದ, ಬಲ ಮತ್ತು ಶಾಂತಿಯನ್ನು ಕೊಡುತ್ತವೊ ಅಂತಹ ಕೆಲವು ಆಪ್ತ ಗೆಳೆಯರ ಅಗತ್ಯ ನಮಗೆಲ್ಲರಿಗಿದೆ. ಅಂತಹ ನಿಜ ಗೆಳೆತನಗಳು ಇಂದು ಅಸಾಮಾನ್ಯವಾಗಿರಬಹುದಾದರೂ, ಕೆಲವು ಪುರಾತನ ಉದಾಹರಣೆಗಳು ಬೈಬಲಿನಲ್ಲಿ ವಿಶೇಷವಾಗಿ ದಾಖಲಿಸಲ್ಪಟ್ಟಿವೆ. ಉದಾಹರಣೆಗಾಗಿ, ದಾವೀದ ಮತ್ತು ಯೋನಾತಾನರ ನಡುವಿನ ಗಮನಾರ್ಹ ಗೆಳೆತನವಿತ್ತು. ನಾವು ಅದರಿಂದ ಏನನ್ನು ಕಲಿಯಬಲ್ಲೆವು? ಅವರ ಗೆಳೆತನವು ಏಕೆ ಬಾಳಿತು?
ಒಂದು ವಿಷಯವೇನಂದರೆ, ದಾವೀದ ಮತ್ತು ಯೋನಾತಾನರಿಗೆ ಸಾಮಾನ್ಯವಾದ ಪ್ರಾಮುಖ್ಯ ಅಭಿರುಚಿಗಳು ಇದ್ದವು. ಎಲ್ಲಕ್ಕಿಂತ ಮಿಗಿಲಾಗಿ, ಅವರು ಯೆಹೋವ ದೇವರಿಗೆ ಆಳವಾಗಿ ಅನಿಸಿದ ಭಕ್ತಿಯಲ್ಲಿ ಭಾಗಿಗಳಾಗಿದ್ದರು. ದೇವರಲ್ಲಿ ದಾವೀದನ ನಂಬಿಕೆ ಮತ್ತು ಯೆಹೋವನ ಜನರ ರಕ್ಷಣೆಗಾಗಿ ಅವನ ಕೃತ್ಯಗಳನ್ನು ಗಮನಿಸಿದ ಬಳಿಕ, “ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ಇವನನ್ನು ಪ್ರಾಣದಂತೆಯೇ ಪ್ರೀತಿಸ ತೊಡಗಿದನು.” (1 ಸಮುವೇಲ 18:1) ಹಾಗಾದರೆ, ದೇವರಿಗಾಗಿ ಅನ್ಯೋನ್ಯ ಪ್ರೀತಿ, ಗೆಳೆಯರನ್ನು ಒಬ್ಬರು ಇನ್ನೊಬ್ಬರೊಂದಿಗೆ ಬಂಧಿಸಲು ಸಹಾಯ ಮಾಡುತ್ತದೆ.
ಯೋನಾತಾನ ಮತ್ತು ದಾವೀದರು, ದೈವಿಕ ಸೂತ್ರಗಳಿಗನುಸಾರ ಜೀವಿಸಿದ ಧೀರ ವ್ಯಕ್ತಿಗಳಾಗಿದ್ದರು. ಆದುದರಿಂದಲೇ ಅವರು ಒಬ್ಬರನ್ನೊಬ್ಬರು ಗೌರವಿಸಸಾಧ್ಯವಿತ್ತು. (1 ಸಮುವೇಲ 19:1-7; 20:9-14; 24:6) ಶಾಸ್ತ್ರೀಯ ಸೂತ್ರಗಳಿಂದ ನಡಿಸಲ್ಪಡುವ ದೈವ ಭಕ್ತಿಯ ಗೆಳೆಯರು ನಮಗಿರುವಲ್ಲಿ ನಾವು ಖಂಡಿತವಾಗಿಯೂ ಆಶೀರ್ವದಿತರಾಗಿದ್ದೇವೆ.
ದಾವೀದ ಮತ್ತು ಯೋನಾತಾನರ ಗೆಳೆತನಕ್ಕೆ ನೆರವು ನೀಡಿದ ಇತರ ಅಂಶಗಳಿದ್ದವು. ಅವರ ಸಂಬಂಧವು ಪ್ರಾಮಾಣಿಕವೂ ಮುಚ್ಚುಮರೆಯಿಲ್ಲದ್ದೂ ಆಗಿತ್ತು, ಮತ್ತು ಪ್ರತಿಯೊಬ್ಬನು ಇನ್ನೊಬ್ಬನಲ್ಲಿ ಭರವಸೆಯಿಟ್ಟನು. ಯೋನಾತಾನನು ನಿಷ್ಠೆಯಿಂದ ದಾವೀದನ ಹಿತಾಸಕ್ತಿಗಳನ್ನು ತನ್ನವುಗಳಿಗಿಂತ ಮುಂದಿಟ್ಟನು. ದಾವೀದನಿಗೆ ಅರಸುತನವು ವಾಗ್ದಾನಿಸಲ್ಪಟ್ಟದ್ದರಿಂದ ಅವನು ಈರ್ಷ್ಯೆಪಡಲಿಲ್ಲ; ಬದಲಾಗಿ, ಯೋನಾತಾನನು ಅವನನ್ನು ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ಬೆಂಬಲಿಸಿದನು. ಮತ್ತು ದಾವೀದನು ಅವನ ಸಹಾಯವನ್ನು ಸ್ವೀಕರಿಸಿದನು. (1 ಸಮುವೇಲ 23:16-18) ಶಾಸ್ತ್ರೀಯವಾಗಿ ಯೋಗ್ಯವಾದಂತಹ ವಿಧಗಳಲ್ಲಿ, ದಾವೀದ ಮತ್ತು ಯೋನಾತಾನರು ಒಬ್ಬರು ಇನ್ನೊಬ್ಬರಿಗಾಗಿರುವ ತಮ್ಮ ಅನಿಸಿಕೆಗಳನ್ನು ತಿಳಿಯಪಡಿಸಿದರು. ಅವರ ದೈವಿಕಭಕ್ತಿಯ ಗೆಳೆತನವು ನಿಜವಾದ ಗಣ್ಯತೆ ಮತ್ತು ವಾತ್ಸಲ್ಯದ ಮೇಲೆ ಆಧಾರಿಸಿತ್ತು. (1 ಸಮುವೇಲ 20:41; 2 ಸಮುವೇಲ 1:26) ಅದು ಮುರಿಯಲಾರದ್ದಾಗಿತ್ತು ಯಾಕಂದರೆ ಇಬ್ಬರೂ ಪುರುಷರು ದೇವರಿಗೆ ನಂಬಿಗಸ್ತರಾಗಿ ಉಳಿದರು. ಅಂತಹ ಸೂತ್ರಗಳನ್ನು ಕಾರ್ಯರೂಪಕ್ಕೆ ಹಾಕುವುದು ನಮಗೆ ನಿಜ ಗೆಳೆತನಗಳನ್ನು ಕಟ್ಟಲು ಮತ್ತು ಉಳಿಸಿಕೊಳ್ಳಲು ಸಹಾಯ ಮಾಡಬಲ್ಲವು.
ಗೆಳೆತನಗಳನ್ನು ಬೆಳೆಸಿಕೊಳ್ಳುವ ವಿಧ
ನಿಜ ಗೆಳೆಯರಿಗಾಗಿ ನೀವು ಹುಡುಕುತ್ತಿದ್ದೀರೊ? ನೀವು ತುಂಬಾ ದೂರ ಹುಡುಕಬೇಕಾಗಿರಲಿಕ್ಕಿಲ್ಲ. ನಿಮ್ಮ ಸ್ವಂತ ಪ್ರತಿನಿತ್ಯದ ಒಡನಾಡಿಗಳೊಳಗೆ ಕೆಲವರು ನಿಮ್ಮ ಗೆಳೆಯರಾಗಿರಸಾಧ್ಯವಿದೆ, ಮತ್ತು ಅವರಿಗೆ ನಿಮ್ಮ ಗೆಳೆತನದ ಅಗತ್ಯವಿರಬಹುದು. ವಿಶೇಷವಾಗಿ ಜೊತೆ ಕ್ರೈಸ್ತರ ವಿಷಯದಲ್ಲಿ “ವಿಶಾಲ”ಗೊಳ್ಳುವ ಪೌಲನ ಸಲಹೆಯನ್ನು ಅನ್ವಯಿಸುವುದು ವಿವೇಕಯುತವಾಗಿದೆ. (2 ಕೊರಿಂಥ 6:11-13) ಆದಾಗಲೂ, ಒಬ್ಬ ಗೆಳೆಯನನ್ನು ಮಾಡುವ ಪ್ರತಿಯೊಂದು ಪ್ರಯತ್ನವು ಒಂದು ಆಳವಾದ ಬಂಧದಲ್ಲಿ ಪರಿಣಮಿಸದಿದ್ದಲ್ಲಿ ಪರಿತಪಿಸಬೇಡಿರಿ. ಒಂದು ಗೆಳೆತನವನ್ನು ಬೆಳಸಲು ಸಾಮಾನ್ಯವಾಗಿ ಸಮಯ ತಗಲುತ್ತದೆ, ಮತ್ತು ಪ್ರತಿಯೊಂದು ಸಂಬಂಧವು ಸಮಾನವಾಗಿ ಆಳವಾಗಿರದು. (ಪ್ರಸಂಗಿ 11:1, 2, 6) ನಿಶ್ಚಯವಾಗಿಯೂ, ಪ್ರಾಮಾಣಿಕ ಗೆಳೆತನಗಳನ್ನು ಅನುಭವಿಸಲು ನಾವು ನಿಸ್ವಾರ್ಥಿಗಳಾಗಿರತಕ್ಕದ್ದು, ಮತ್ತು ನಾವು ಯೇಸುವಿನ ಸಲಹೆಯನ್ನು ಅನುಸರಿಸುವ ಅಗತ್ಯವಿದೆ: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾಯ 7:12.
ಯಾರಿಗೆ ನಿಮ್ಮ ಗೆಳೆತನದ ಆವಶ್ಯಕತೆ ಇದೆ? ನಿಮ್ಮ ಸ್ವಂತ ವಯಸ್ಸಿನವರನ್ನು ಬಿಟ್ಟು, ಎಳೆಯರು ಅಥವಾ ವೃದ್ಧ ಜನರ ಕುರಿತಾಗಿ ಏನು? ದಾವೀದ ಮತ್ತು ಯೋನಾತಾನ, ರೂತ್ ಮತ್ತು ನೊವೊಮಿ, ಹಾಗೂ ಪೌಲ ಮತ್ತು ತಿಮೊಥೆಯರ ಗೆಳೆತನಗಳು, ಎಲ್ಲವೂ ವಯಸ್ಸಿನಲ್ಲಿ ಸ್ವಲ್ಪ ಭಿನ್ನತೆಯನ್ನು ಒಳಗೂಡಿದ್ದವು. (ರೂತಳು 1:16, 17; 1 ಕೊರಿಂಥ 4:17) ನಿಮ್ಮ ಗೆಳೆತನವನ್ನು ವಿಧವೆಯರಿಗೆ ಮತ್ತು ಇತರ ಅವಿವಾಹಿತ ಜನರಿಗೆ ನೀವು ವಿಸ್ತರಿಸಬಹುದೋ? ನಿಮ್ಮ ಕ್ಷೇತ್ರದಲ್ಲಿ ಹೊಸಬರಾಗಿರುವವರ ಕುರಿತಾಗಿಯೂ ಯೋಚಿಸಿರಿ. ಸ್ಥಳಾಂತರಿಸುವ ಮೂಲಕ ಅಥವಾ ತಮ್ಮ ಜೀವನ ಶೈಲಿಯನ್ನು ಬದಲಾಯಿಸುವ ಮೂಲಕ ಅವರು ತಮ್ಮ ಗೆಳೆಯರಲ್ಲಿ ಹೆಚ್ಚಿನವರ ಅಥವಾ ಎಲ್ಲರ ಸಹವಾಸವನ್ನು ಬಿಟ್ಟುಕೊಟ್ಟಿರಬಹುದು. ಇತರರು ನಿಮ್ಮನ್ನು ಹುಡುಕಲಿಕ್ಕಾಗಿ ಕಾಯಬೇಡಿರಿ. ನೀವೊಬ್ಬ ಕ್ರೈಸ್ತರಾಗಿರುವಲ್ಲಿ, ಪೌಲನ ಸಲಹೆಯನ್ನು ಅನ್ವಯಿಸುವ ಮೂಲಕ ಬಾಳುವ ಗೆಳೆತನಗಳನ್ನು ಮಾಡಿರಿ: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾಪುರ 12:10.
ನಾವು ಗೆಳೆತನಗಳನ್ನು ಕೊಡುವಿಕೆಯ ಒಂದು ರೂಪವಾಗಿ ಯೋಚಿಸಸಾಧ್ಯವಿದೆ. ನಾವು ಕೊಡುವುದನ್ನು ಅಭ್ಯಾಸಿಸಿದರೆ, ಜನರು ನಮಗೆ ಕೊಡುವರೆಂದು ಯೇಸು ಹೇಳಿದನು. ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆಯೆಂದೂ ಆತನು ಸೂಚಿಸಿದನು. (ಲೂಕ 6:38; ಅ. ಕೃತ್ಯಗಳು 20:35) ನಾನಾ ವಿಧದ ಹಿನ್ನೆಲೆಗಳ ಜನರನ್ನು ನೀವು ಭೇಟಿಯಾಗಿದ್ದೀರೊ? ದೇವರ ಆರಾಧನೆಯು ಅವರಿಗೆ ಒಂದು ಸಾಮಾನ್ಯವಾದ ವಿಷಯವಾಗಿರುವಾಗ ವಿಭಿನ್ನ ಸಂಸ್ಕೃತಿಗಳ ಜನರು ನಿಜವಾದ ಮತ್ತು ಬಾಳುವ ಗೆಳೆತನಗಳನ್ನು ರಚಿಸಬಲ್ಲರು ಎಂಬುದನ್ನು ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಗಳು ರುಜುಪಡಿಸಿವೆ.
ಗೆಳೆತನಗಳನ್ನು ಅಖಂಡವಾಗಿರಿಸುವುದು
ದುಃಖಕರವಾಗಿ, ಗೆಳೆಯರೆಂದು ಎಣಿಸಲ್ಪಟ್ಟವರು ಕೆಲವೊಮ್ಮೆ ಒಬ್ಬರು ಇನ್ನೊಬ್ಬರಿಗೆ ನೋವನ್ನುಂಟುಮಾಡುತ್ತಾರೆ. ಹಾನಿಕರವಾದ ಹರಟೆ, ವಿಶ್ವಾಸಘಾತ, ಗಣ್ಯತೆಯ ಕೊರತೆ—ಇವು ಒಬ್ಬ ನಿಜ ಗೆಳೆಯರೆಂದು ನೀವು ಎಣಿಸಿದ್ದವರಿಂದ ಬರುವಾಗ ತುಂಬಾ ನೋವನ್ನುಂಟುಮಾಡುವ ವಿಷಯಗಳಲ್ಲಿ ಸೇರಿರುತ್ತವೆ. ಅಂತಹ ಪರಿಸ್ಥಿತಿಗಳಲ್ಲಿ ಏನನ್ನು ಮಾಡಸಾಧ್ಯವಿದೆ?
ಒಂದು ಒಳ್ಳೆಯ ಮಾದರಿಯನ್ನಿಡಿರಿ. ಅನಾವಶ್ಯಕವಾದ ನೋವನ್ನುಂಟುಮಾಡುವುದನ್ನು ಹೋಗಲಾಡಿಸಲು ನಿಮ್ಮಿಂದಾದದ್ದೆಲ್ಲವನ್ನು ಮಾಡಿರಿ. ಕೆಲವು ಸ್ಥಳಗಳಲ್ಲಿ ಗೆಳೆಯರು ಒಬ್ಬರು ಇನ್ನೊಬ್ಬರ ಕುಂದುಗಳ ಕುರಿತಾಗಿ ಚೇಷ್ಟೆ ಮಾಡುವುದು ಜನಸಾಮಾನ್ಯವಾಗಿದೆ. ಆದರೆ, ಅವರು “ವಿನೋದವಾಡು”ತ್ತಾರಾದರೂ, ಕಠೋರ ಉಪಚಾರ ಅಥವಾ ಕುಟಿಲತೆಯು ಗೆಳೆಯರನ್ನು ಒಟ್ಟಿಗೆ ನಿಕಟ ಸೆಳೆಯಲಾರದು.—ಜ್ಞಾನೋಕ್ತಿ 26:18, 19.
ಗೆಳೆತನಗಳನ್ನು ಕಾಪಾಡಲು ಕಠಿನವಾಗಿ ಶ್ರಮಿಸಿರಿ. ಗೆಳೆಯರು ಒಬ್ಬರು ಇನ್ನೊಬ್ಬರಿಂದ ತೀರ ಹೆಚ್ಚನ್ನು ನಿರೀಕ್ಷಿಸುವಾಗ ಕೆಲವೊಮ್ಮೆ ಮನಸ್ತಾಪಗಳು ಏಳುತ್ತವೆ. ಅಸ್ವಸ್ಥನಾಗಿರುವ ಅಥವಾ ಒಂದು ಗಂಭೀರ ಸಮಸ್ಯೆಯ ಕಾರಣ ತೀರ ಕಾರ್ಯಮಗ್ನನಾಗಿರುವ ಒಬ್ಬ ಗೆಳೆಯನು ಎಂದಿನಷ್ಟು ಹೃದಯೋಲ್ಲಾಸವನ್ನು ತೋರಿಸಲು ಪ್ರಾಯಶಃ ಶಕ್ತನಾಗಿರನು. ಹಾಗಿರುವಾಗ, ಅಂತಹ ಸಮಯಗಳಲ್ಲಿ ತಿಳಿವಳಿಕೆಯುಳ್ಳವರು ಮತ್ತು ಬೆಂಬಲಿಸುವವರು ಆಗಿರುವಂತೆ ಪ್ರಯತ್ನಿಸಿರಿ.
ಸಮಸ್ಯೆಗಳನ್ನು ಕ್ಷಿಪ್ರವಾಗಿ ಮತ್ತು ದಯೆಯಿಂದ ಬಗೆಹರಿಸಿರಿ. ಸಾಧ್ಯವಿರುವಲ್ಲಿ ಅದನ್ನು ಖಾಸಗಿಯಾಗಿ ಮಾಡಿರಿ. (ಮತ್ತಾಯ 5:23, 24; 18:15) ನೀವು ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಬಯಸುತ್ತೀರಿ ಎಂಬುದು ನಿಮ್ಮ ಗೆಳೆಯನಿಗೆ ತಿಳಿದಿರುವುದನ್ನು ಖಚಿತಮಾಡಿಕೊಳ್ಳಿರಿ. ಪ್ರಾಮಾಣಿಕ ಗೆಳೆಯರು ಒಬ್ಬರನ್ನೊಬ್ಬರು ಕ್ಷಮಿಸುತ್ತಾರೆ. (ಕೊಲೊಸ್ಸೆ 3:13) ನೀವು ಆ ವಿಧದ—ಸಹೋದರಿನಿಗಿಂತಲೂ ಹತ್ತಿರ ಅಂಟಿಕೊಳ್ಳುವ—ಗೆಳೆಯರಾಗಿರುವಿರೊ?
ಗೆಳೆತನಗಳ ಕುರಿತಾಗಿ ಓದುವುದು ಮತ್ತು ಯೋಚಿಸುವುದು ಕೇವಲ ಒಂದು ಆರಂಭವಾಗಿದೆ. ನಾವು ಒಂಟಿತನವನ್ನು ಅನುಭವಿಸುತ್ತಿರುವುದಾದರೆ, ನಾವು ಸೂಕ್ತ ಕ್ರಮವನ್ನು ತೆಗೆದುಕೊಳ್ಳೋಣ ಮತ್ತು ನಾವು ಹೆಚ್ಚು ದೀರ್ಘ ಸಮಯಕ್ಕೆ ಒಂಟಿಗರಾಗಿರೆವು. ನಾವು ಎಟಕಿಸಿಕೊಳ್ಳುವುದಾದರೆ, ನಾವು ನಿಜ ಗೆಳೆಯರನ್ನು ಮಾಡಸಾಧ್ಯವಿದೆ. ಅವರಲ್ಲಿ ಕೆಲವರೊಂದಿಗೆ ನಾವು ಒಂದು ವಿಶೇಷ ಬಂಧವನ್ನು ರಚಿಸುವೆವು. ಆದರೆ ಅತ್ಯಂತ ಮಹಾ ಗೆಳೆಯನಾದ, ದೇವರ ಸ್ಥಾನವನ್ನು ಅವರಲ್ಲಿ ಯಾರೂ ತೆಗೆದುಕೊಳ್ಳಲಾರರು. ಕೇವಲ ಯೆಹೋವನೊಬ್ಬನೇ ನಮ್ಮನ್ನು ಸಂಪೂರ್ಣವಾಗಿ ಗ್ರಹಿಸಿ, ತಿಳಿದುಕೊಂಡು ಬೆಂಬಲಿಸಬಲ್ಲನು. (ಕೀರ್ತನೆ 139:1-4, 23, 24) ಇನ್ನೂ ಹೆಚ್ಚಾಗಿ, ಆತನ ವಾಕ್ಯವು ಭವಿಷ್ಯತ್ತಿಗಾಗಿ—ಎಲ್ಲಿ ಸದಾಕಾಲಕ್ಕೂ ನಿಜ ಗೆಳೆಯರನ್ನು ಹೊಂದಸಾಧ್ಯವಿದೆಯೊ ಆ ಒಂದು ಹೊಸ ಲೋಕದ—ಅದ್ಭುತಕರವಾದ ನಿರೀಕ್ಷೆಯನ್ನು ನೀಡುತ್ತದೆ.—2 ಪೇತ್ರ 3:13.
[ಪುಟ 5 ರಲ್ಲಿರುವ ಚಿತ್ರಗಳು]
ದಾವೀದ ಮತ್ತು ಯೋನಾತಾನರು ನಿಜ ಗೆಳೆತನವನ್ನು ಅನುಭವಿಸಿದರು, ಮತ್ತು ನಾವೂ ಅನುಭವಿಸಬಲ್ಲೆವು