ಯುವ ಜನರು ಪ್ರಶ್ನಿಸುವುದು . . .
ನಾನು ಮಿತ್ರರೊಂದಿಗೆ ಏಕೆ ಸ್ನೇಹದಿಂದಿರಲಾರೆ?
“ನನ್ನ ಗೆಳತಿಯೂ ನಾನೂ ಅನೇಕ ಅಭಿರುಚಿಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಪಾಲ್ಗೊಂಡೆವು; ನಾವು ಒಟ್ಟಿಗೆ ಸಮಯವನ್ನು ಕಳೆಯುವುದರಲ್ಲಿ ಆನಂದಿಸಿದೆವು. ಆದರೆ ಥಟ್ಟನೆ ನಮ್ಮ ಗೆಳೆತನವು ಹೆಚ್ಚೆಚ್ಚು ನೀರಸವಾಗಿ ಪರಿಣಮಿಸಿತು. ಅದು ನನ್ನನ್ನು ನಿಜವಾಗಿಯೂ ಖಿನ್ನಳನ್ನಾಗಿ ಮಾಡಿತು.”—ಮಾರೀಯ.
ನಿಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ನಿಮ್ಮ ಕುರಿತಾಗಿ ತಪ್ಪಾಗಿ ನಿರ್ಧರಿಸದಿರುವ ಒಬ್ಬರನ್ನು—ಒಬ್ಬ ಮಿತ್ರನನ್ನು—ನೀವು ಕಟ್ಟಕಡೆಗೆ ಕಂಡುಕೊಂಡಿದ್ದೀರಿ. ತದನಂತರ, ಅನಿರೀಕ್ಷಿತವಾಗಿ ನಿಮ್ಮ ಸ್ನೇಹವು ಮೆಲ್ಲಗೆ ಜಾರಿಕೊಳ್ಳಲಾರಂಭಿಸುತ್ತದೆ. ಅದನ್ನು ಕಾಪಾಡಿಕೊಳ್ಳಲು ನೀವು ಪ್ರಯತ್ನಿಸುತ್ತೀರಾದರೂ, ಯಶಸ್ವಿಯಾಗುವುದಿಲ್ಲ.
ಒಬ್ಬ ನಿಷ್ಠಾವಂತನಾದ ಮಿತ್ರನು ಅಮೂಲ್ಯನಾಗಿದ್ದಾನೆ. (ಜ್ಞಾನೋಕ್ತಿ 18:24) ಮತ್ತು ಒಬ್ಬ ಮಿತ್ರನನ್ನು ಕಳೆದುಕೊಳ್ಳುವುದು ಒಂದು ವೇದನಾಭರಿತವಾದ ಅನುಭವವಾಗಿರಸಾಧ್ಯವಿದೆ. ಯೋಬನು ತನ್ನ ಮಿತ್ರರಿಂದ ತೊರೆಯಲ್ಪಟ್ಟಾಗ, ಅವನು ಹೀಗೆ ಪ್ರಲಾಪಿಸಿದನೆಂದು ಬೈಬಲು ನಮಗೆ ಹೇಳುತ್ತದೆ: “ನನ್ನ ಬಂಧುಗಳು ನನ್ನನ್ನು ಬಿಟ್ಟುಬಿಟ್ಟಿದ್ದಾರೆ, ನನಗೆ ಪರಿಚಯವಿದ್ದವರು ನನ್ನನ್ನು ಮರೆತಿದ್ದಾರೆ.” (ಯೋಬ 19:14) ಇತ್ತೀಚೆಗೆ ನಿಮ್ಮ ಸ್ನೇಹವೊಂದು ಅವನತಿಹೊಂದಿರುವುದಾದರೆ, ನೀವೂ ತದ್ರೀತಿಯ ಬೇಗುದಿಯನ್ನು ಅನುಭವಿಸಿರಬಹುದು. ಯುವ ಪ್ಯಾಟ್ರಿಕ್ ಹೇಳುವಂತೆ, “ನೀವು ಪ್ರೀತಿಸುವ ಯಾರೋ ಒಬ್ಬರು ಸತ್ತಿದ್ದಾರೆಂಬಂತಹ ಅನಿಸಿಕೆಯಾಗುತ್ತದೆ.” ಆದರೆ ಕಾರ್ಯತಃ ನಿಮಗೆಂದಾದರೂ ಇದ್ದಂತಹ ಪ್ರತಿಯೊಂದು ಸ್ನೇಹವು ವಿಫಲವಾಗಿರುವುದಾದರೆ ಆಗೇನು?
ಭಿದುರ ಸ್ನೇಹಗಳು
ಹದಿಪ್ರಾಯದ ಸ್ನೇಹಗಳು, “ಮಿತ್ರರು ದೂರವಾಗುವಾಗ ಅನಿರೀಕ್ಷಿತವಾದ, ನಾಟಕೀಯ ಬದಲಾವಣೆಗಳಿಂದ ಮತ್ತು ಕಹಿಭಾವನೆಗಳಿಂದಾಗಿ ಅಸ್ಥಿರವಾಗುವ ಪ್ರವೃತ್ತಿಯುಳ್ಳವುಗಳಾಗಿರುತ್ತವೆ” ಎಂದು ಈಸ್ಟ್ವುಡ್ ಆ್ಯಟ್ವಾಟರ್ರಿಂದ ಬರೆಯಲ್ಪಟ್ಟ ಆ್ಯಡೊಲೆಸೆನ್ಸ್ ಪುಸ್ತಕವು ಗಮನಿಸುತ್ತದೆ. ಹದಿಪ್ರಾಯದ ಸ್ನೇಹಗಳನ್ನು ಇಷ್ಟು ಭಿದುರವಾಗಿ ಯಾವುದು ಮಾಡುತ್ತದೆ? ನೀವು ಹೆಚ್ಚು ವಯಸ್ಸಿನವರಾದಂತೆ, ನಿಮ್ಮ ಭಾವನೆಗಳು, ದೃಷ್ಟಿಕೋನಗಳು, ಗುರಿಗಳು, ಮತ್ತು ಅಭಿರುಚಿಗಳು ಬದಲಾಗಲಾರಂಭಿಸುತ್ತವೆ ಎಂಬುದು ಒಂದು ಕಾರಣವಾಗಿದೆ. (1 ಕೊರಿಂಥ 13:11ನ್ನು ಹೋಲಿಸಿರಿ.) ಕೆಲವು ವಿಷಯಗಳಲ್ಲಿ ನೀವು ನಿಮ್ಮ ಸಮಾನಸ್ಥರಿಗಿಂತಲೂ ಮುಂದುವರಿಯುತ್ತಿರುವುದನ್ನು ಅಥವಾ ಹಿಂದುಳಿಯುತ್ತಿರುವುದನ್ನು ನೀವೇ ಕಂಡುಕೊಳ್ಳಸಾಧ್ಯವಿದೆ.
ಆದುದರಿಂದ ಮಿತ್ರರು ಬೆಳೆಯುವಾಗ, ಅವರು ಕೆಲವೊಮ್ಮೆ ವಿಮುಖರಾಗಿ ಬೆಳೆಯುತ್ತಾರೆ—ಅವರು ಪರಸ್ಪರ ಕೋಪಗೊಂಡಿದ್ದಾರೆಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರು ವಿಭಿನ್ನ ಗುರಿಗಳು, ಅಭಿರುಚಿಗಳು, ಮತ್ತು ಮೌಲ್ಯಗಳನ್ನು ವಿಕಸಿಸಿಕೊಳ್ಳುವುದರಿಂದಲೇ. ಒಂದು ಸಂಬಂಧವು ಕೊನೆಗೊಳ್ಳುವುದು ಅತ್ಯುತ್ತಮವಾದದ್ದೂ ಆಗಿರಬಹುದು. ನಿಮಗೆ ಹೆಚ್ಚು ವಯಸ್ಸಾದಂತೆ ಮತ್ತು ಆತ್ಮಿಕ ವಿಷಯಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾರಂಭಿಸಿದಂತೆ, ನಿಮ್ಮ ಹಿಂದಿನ ಮಿತ್ರರಲ್ಲಿ ಕೆಲವರು ಹಿತಕರವಾದ ಪ್ರಭಾವವಾಗಿದ್ದಿರಲಿಲ್ಲವೆಂಬುದನ್ನು ನೀವು ಗ್ರಹಿಸಬಹುದು. (1 ಕೊರಿಂಥ 15:33) ನೀವು ಅವರ ಕುರಿತಾಗಿ ಕಾಳಜಿವಹಿಸುತ್ತೀರಿ, ಆದರೆ ನೀವು ಒಮ್ಮೆ ಆನಂದಿಸಿದಂತೆ ಅವರ ಸಹವಾಸದಲ್ಲಿ ನೀವು ಆನಂದಿಸುವುದಿಲ್ಲ.
ಸ್ನೇಹಗಳನ್ನು ಕೆಡಿಸುವ ವಿಷಯಗಳು
ಆದರೂ, ನೀವು ಸ್ನೇಹದಿಂದಿರಲು ಇಷ್ಟಪಡುವ ಮಿತ್ರರು—ಸಂಬಂಧಗಳನ್ನು ನೀವು ಸತತವಾಗಿ ಕಳೆದುಕೊಳ್ಳುತ್ತಿರುವುದಾದರೆ ಆಗೇನು? ಮುಚ್ಚುಮರೆಯಿಲ್ಲದೆ, ನೀವು ಜಯಿಸಬೇಕಾಗಿರುವಂತಹ ಕೆಲವು ವ್ಯಕ್ತಿತ್ವ ದೋಷಗಳು ನಿಮ್ಮಲ್ಲಿವೆಯೆಂಬುದನ್ನು ಅದು ಅರ್ಥೈಸಸಾಧ್ಯವಿದೆ. ಉದಾಹರಣೆಗಾಗಿ, ಈರ್ಷ್ಯೆಯು ಸ್ನೇಹಗಳನ್ನು ಕೆಡಿಸುತ್ತದೆ. ನಿಮಗಿಂತಲೂ ಹೆಚ್ಚು ಐಶ್ವರ್ಯವಂತನಾದ, ಹೆಚ್ಚು ವರದಾನವುಳ್ಳ, ಹೆಚ್ಚು ಆಕರ್ಷಕನಾದ, ಅಥವಾ ಹೆಚ್ಚು ಜನಪ್ರಿಯನಾದ ಒಬ್ಬ ಮಿತ್ರನು ನಿಮಗಿದ್ದಾನೆಂದು ಊಹಿಸಿಕೊಳ್ಳಿರಿ. ಅವನು ಅಥವಾ ಅವಳು ಪಡೆದುಕೊಳ್ಳಬಹುದಾದ ಹೆಚ್ಚಿನ ಗಮನಕ್ಕಾಗಿ ನೀವು ಅಸಮಾಧಾನಗೊಳ್ಳುತ್ತೀರೊ? “ಕ್ರೋಧವು [“ಈರ್ಷ್ಯೆಯು,” NW] ಎಲುಬಿಗೆ ಕ್ಷಯವು.” (ಜ್ಞಾನೋಕ್ತಿ 14:30) “ನನ್ನ ಮಿತ್ರನ ಜನಪ್ರಿಯತೆ ಮತ್ತು ನನ್ನ ಬಳಿಯಲ್ಲಿ ಇರದಿದ್ದ, ಅವನ ಬಳಿಯಲ್ಲಿ ಇದ್ದ ಎಲ್ಲಾ ವಿಷಯಗಳಿಗಾಗಿ ನಾನು ನಿಜವಾಗಿಯೂ ಅಸೂಯೆಗೊಂಡೆ, ಮತ್ತು ಇದು ನಮ್ಮ ಸ್ನೇಹವನ್ನು ಬಾಧಿಸಿತು” ಎಂಬುದಾಗಿ ಯುವ ಕೀನನ್ ಒಪ್ಪಿಕೊಳ್ಳುತ್ತಾನೆ.
ಸ್ವಾಮ್ಯತ್ವವು ಇನ್ನೊಂದು ನಾಶಕಾರಕ ಗುಣವಾಗಿರಸಾಧ್ಯವಿದೆ. ಒಬ್ಬ ಮಿತ್ರನು ಇತರರೊಂದಿಗೆ ಹೆಚ್ಚೆಚ್ಚು ಸಮಯವನ್ನು ಕಳೆಯುತ್ತಿದ್ದಾನೆ ಮತ್ತು ನಿಮ್ಮೊಂದಿಗೆ ತೀರ ಕಡಿಮೆ ಸಮಯವನ್ನು ಕಳೆಯುತ್ತಿದ್ದಾನೆಂಬುದನ್ನು ನೀವು ತಿಳಿದುಕೊಳ್ಳುವುದಾದರೆ ಆಗೇನು? ಒಬ್ಬ ಯುವತಿಯು ಒಪ್ಪಿಕೊಂಡದ್ದು: “ನನ್ನ ಮಿತ್ರರಲ್ಲಿ ಕೆಲವರೊಂದಿಗೆ ಇತರರು ಮಾತಾಡಿದರೂ ನಾನು ಈರ್ಷ್ಯೆಗೊಳ್ಳುತ್ತಿದ್ದೆ.” ಇತರರೊಂದಿಗಿನ ನಿಮ್ಮ ಮಿತ್ರನ ಸಹವಾಸವನ್ನು ಒಂದು ವಿಶ್ವಾಸಘಾತುಕ ಕೃತ್ಯದೋಪಾದಿ ನೀವು ಗ್ರಹಿಸಬಹುದು.
ಪರಿಪೂರ್ಣತಾಸಿದ್ಧಿವಾದವು ಸಹ ಒಂದು ಸ್ನೇಹದ ವೈಫಲ್ಯವನ್ನು ಉಂಟುಮಾಡಬಲ್ಲದು. ಉದಾಹರಣೆಗಾಗಿ, ಬಹುಶಃ ನಿಮ್ಮ ಗುಟ್ಟಿನ ವಿಷಯಗಳನ್ನೂ ಪ್ರಕಟಪಡಿಸುವುದರ ಮೂಲಕವಾಗಿ, ನಿಮ್ಮ ಮಿತ್ರನು ನಿಮ್ಮ ಕುರಿತಾಗಿ ಹರಟಿದ್ದಾನೆಂಬುದನ್ನು ನೀವು ಕಂಡುಹಿಡಿಯುತ್ತೀರಿ. (ಜ್ಞಾನೋಕ್ತಿ 20:19) “ನಾನು ಅವನಲ್ಲಿ/ಅವಳಲ್ಲಿ ಇನ್ನೆಂದಿಗೂ ಭರವಸೆಯಿಡಲಾರೆ!” ಎಂದು ನೀವು ಕೋಪದಿಂದ ಉದ್ಗರಿಸುತ್ತೀರಿ.
ಸ್ನೇಹ—ಇದು ವಿಷಯಗಳನ್ನು ಸ್ವೀಕರಿಸುವುದರ ಅಥವಾ ಕೊಡುವುದರ ವಿಚಾರವಾಗಿದೆಯೊ?
ಈರ್ಷ್ಯೆ, ಸ್ವಾಮ್ಯತ್ವ, ಅಥವಾ ಪರಿಪೂರ್ಣತಾಸಿದ್ಧಿವಾದವು ನಿಮ್ಮ ಸ್ನೇಹಗಳನ್ನು ತಿರುಚಿರುವುದಾದರೆ, ‘ಒಂದು ಸ್ನೇಹದಿಂದ ನಾನು ಏನನ್ನು ಬಯಸುತ್ತೇನೆ?’ ಎಂದು ಸ್ವತಃ ನಿಮ್ಮನ್ನು ಕೇಳಿಕೊಳ್ಳಿರಿ. ಯಾರಾದರೊಬ್ಬರು ನಿಮ್ಮ ಆಜ್ಞಾವರ್ತಿಯಾಗಿದ್ದು, ನೀವು ಕೇಳಿಕೊಳ್ಳುವ ಎಲ್ಲಾ ವಿಷಯಗಳನ್ನು ಮಾಡುವ ಒಂದು ರೀತಿಯ ಸೇವಕನಂತಿರುವುದನ್ನು ಸ್ನೇಹವು ಒಳಗೊಳ್ಳುತ್ತದೆಂದು ನೀವು ಊಹಿಸುತ್ತೀರೊ? ಘನತೆ, ಜನಪ್ರಿಯತೆ, ಅಥವಾ ಲಾಭಕ್ಕಾಗಿ ನೀವು ಮಿತ್ರರನ್ನು ಹುಡುಕುತ್ತೀರೊ? ಆ ಸಂಬಂಧದಲ್ಲಿ ಇತರರಿಗಾಗಿ ಸಂದರ್ಭವನ್ನು ಕೊಡದಿರುವ ಮೂಲಕ, ಒಬ್ಬ ಮಿತ್ರನಿಂದ ನೀವು ಪಾಲಿಲ್ಲದ ಭಕ್ತಿಯನ್ನು ನಿರೀಕ್ಷಿಸುತ್ತೀರೊ? ಹಾಗಾದರೆ ನೀವು ಸ್ನೇಹದ ಕುರಿತಾದ ನಿಮ್ಮ ನೋಟವನ್ನು ಸರಿಹೊಂದಿಸಿಕೊಳ್ಳುವ ಅಗತ್ಯವಿದೆ.
ಇತರರೊಂದಿಗಿನ ಒಳ್ಳೆಯ ಸಂಬಂಧಗಳು, ಸ್ವೀಕರಿಸುವುದರಿಂದ ಅಲ್ಲ, ಬದಲಾಗಿ ಕೊಡುವುದರಿಂದ ಫಲಿಸುತ್ತವೆಂಬುದನ್ನು ಬೈಬಲ್ ಬೋಧನೆಗಳಿಂದ ನಾವು ಕಲಿಯುತ್ತೇವೆ! ಮತ್ತಾಯ 7:12ರಲ್ಲಿ ಸ್ವತಃ ಯೇಸು ಕ್ರಿಸ್ತನು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” ಮಿತ್ರರಿಂದ ನಿರ್ದಿಷ್ಟ ವಿಷಯಗಳನ್ನು ನಿರೀಕ್ಷಿಸುವುದು ತೀರ ಸ್ವಾಭಾವಿಕವಾಗಿದೆ. ಅಂಡರ್ಸ್ಟ್ಯಾಂಡಿಂಗ್ ರಿಲೇಶನ್ಶಿಪ್ಸ್ ಎಂಬ ಪುಸ್ತಕವು ಒಪ್ಪಿಕೊಳ್ಳುವುದು: “ಒಬ್ಬ ಮಿತ್ರನು, ಪ್ರಾಮಾಣಿಕನೂ, ಬಿಚ್ಚುಮನಸ್ಸಿನವನೂ, ಮಮತೆ ತೋರಿಸುವವನೂ, ಅವನ ಅಥವಾ ಅವಳ ರಹಸ್ಯಗಳನ್ನು ಮತ್ತು ಸಮಸ್ಯೆಗಳನ್ನು ನಮಗೆ ಹೇಳುವವನೂ, ನಮಗೆ ಅಗತ್ಯವಿರುವಾಗ ಸಹಾಯವನ್ನು ಕೊಡುವವನೂ, ನಮ್ಮ ಮೇಲೆ ಭರವಸೆಯಿಡುವವನೂ ಹಾಗೂ . . . ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದರ ಕಡೆಗೆ ಕ್ರಿಯೆಗೈಯಲು ಸಿದ್ಧನೂ ಆಗಿರುವಂತೆ ನಾವು ಕ್ರಮವಾಗಿ ನಿರೀಕ್ಷಿಸುತ್ತೇವೆ.” ಹಾಗಿದ್ದರೂ, ಅದು ವಿಷಯದ ಅಂತ್ಯವಾಗಿರುವುದಿಲ್ಲ. ಆ ಪುಸ್ತಕವು ಕೂಡಿಸುವುದು: “ಜನರು, ಮಿತ್ರನೊಬ್ಬನು ತಮಗಾಗಿ ಮಾಡುವಂತೆ ನಿರೀಕ್ಷಿಸುವ ಮತ್ತು ಪ್ರತಿಯಾಗಿ ಮಿತ್ರನಿಗಾಗಿ ಮಾಡುವಂತೆ ನಿರೀಕ್ಷಿಸುವ ವಿಷಯಗಳು ಇವುಗಳಾಗಿವೆ.”—ಓರೆಅಕ್ಷರಗಳು ನಮ್ಮವು.
ತನಗೆ ಆಪ್ತರಾಗಿದ್ದವರನ್ನು ಸ್ವತಃ ಯೇಸುವು ಉಪಚರಿಸಿದ ವಿಧವನ್ನು ಗಮನಿಸಿ. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ.” ಆದರೆ ತನ್ನ ಶಿಷ್ಯರೊಂದಿಗಿನ ಯೇಸುವಿನ ಸ್ನೇಹವು, ಅವರು ತನಗಾಗಿ ಮಾಡಸಾಧ್ಯವಿರುವ ವಿಷಯಗಳ ಮೇಲೆ ಆಧಾರಿಸಿತ್ತೊ? ಇದಕ್ಕೆ ವ್ಯತಿರಿಕ್ತವಾಗಿತ್ತು. ಅವನು ಹೇಳಿದ್ದು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13, 15) ಹೌದು, ಸ್ನೇಹಕ್ಕಾಗಿರುವ ನಿಜ ಆಧಾರವು ಸ್ವತ್ಯಾಗದ ಪ್ರೀತಿಯಾಗಿದೆ! ಪ್ರೀತಿಯು ತಳಪಾಯವಾಗಿರುವಾಗ, ಒಂದು ಸಂಬಂಧವು ಜಗಳಗಳನ್ನೂ ಸಮಸ್ಯೆಗಳನ್ನೂ ಪಾರಾಗಿ ಉಳಿಯಬಲ್ಲದು.
ಸಮಸ್ಯೆಗಳು ಏಳುವಾಗ
ಉದಾಹರಣೆಗಾಗಿ, ನಿಮ್ಮ ಮಿತ್ರನು ನಿಮಗಿಂತಲೂ ಹೆಚ್ಚು ಹಣ, ಬುದ್ಧಿಚಾತುರ್ಯ, ಅಥವಾ ಕೌಶಲದೊಂದಿಗೆ ಸಂಪನ್ನನಾಗಿದ್ದಾನೆಂದಿಟ್ಟುಕೊಳ್ಳಿರಿ. ನಿಮ್ಮ ಮಿತ್ರನೊಂದಿಗೆ ಹರ್ಷಿಸುವಂತೆ ನಿಸ್ವಾರ್ಥ ಪ್ರೀತಿಯು ನಿಮಗೆ ಸಹಾಯ ಮಾಡುತ್ತದೆ. ಎಷ್ಟೆಂದರೂ, “ಪ್ರೀತಿಯು ಈರ್ಷ್ಯೆಪಡುವುದಿಲ್ಲ” ಎಂಬುದಾಗಿ ಬೈಬಲು ಹೇಳುತ್ತದೆ.—1 ಕೊರಿಂಥ 13:4, NW.
ಅಥವಾ ನಿಮ್ಮ ಮಿತ್ರನು ನಿಮ್ಮ ಭಾವನೆಗಳಿಗೆ ನೋವನ್ನುಂಟುಮಾಡುವ ಏನನ್ನಾದರೂ ಹೇಳುತ್ತಾನೆ ಅಥವಾ ಮಾಡುತ್ತಾನೆಂದು ಭಾವಿಸಿಕೊಳ್ಳಿರಿ. ನಿಮ್ಮ ಸ್ನೇಹವು ದುರ್ಗತಿಗೆ ಇಳಿದಿದೆಯೆಂಬುದನ್ನು ಇದು ಅರ್ಥೈಸುತ್ತದೊ? ಅರ್ಥೈಸುವ ಅಗತ್ಯವಿಲ್ಲ. ಮಿಷನೆರಿ ಪ್ರಯಾಣವೊಂದರಲ್ಲಿ ತನ್ನ ಮಿತ್ರನಾದ ಮಾರ್ಕನು ತನ್ನನ್ನು ತೊರೆದಾಗ, ಅಪೊಸ್ತಲ ಪೌಲನು ಬಹಳ ಮನಗುಂದಿದವನಾಗಿದ್ದನು. ಅವನು ಎಷ್ಟರಮಟ್ಟಿಗೆ ಮನಗುಂದಿದವನಾಗಿದ್ದನೆಂದರೆ, ತನ್ನ ಮುಂದಿನ ಪ್ರಯಾಣದಲ್ಲಿ ಮಾರ್ಕನನ್ನು ತನ್ನೊಂದಿಗೆ ಕರೆದೊಯ್ಯಲು ಅವನು ನಿರಾಕರಿಸಿದನು! ಈ ವಿಷಯಕ್ಕಾಗಿಯೇ, ಪೌಲನು ಮಾರ್ಕನ ಸೋದರನಂಟನಾದ ಬಾರ್ನಬನೊಂದಿಗೆ ತೀಕ್ಷ್ಣವಾದ ಮಾತುಗಳನ್ನೂ ವಿನಿಮಯಿಸಿಕೊಂಡನು. ಆದರೂ, ಅನೇಕ ವರ್ಷಗಳ ತರುವಾಯ, ಪೌಲನು ಮಾರ್ಕನ ಕುರಿತಾಗಿ ಅಕ್ಕರೆಯಿಂದ ಮಾತಾಡಿ, ತನಗೆ ಶುಶ್ರೂಷೆಯಲ್ಲಿ ನೆರವಾಗುವಂತೆ ಅವನನ್ನು ರೋಮ್ಗೆ ಆಮಂತ್ರಿಸಿದನು ಕೂಡ. ಸುವ್ಯಕ್ತವಾಗಿಯೇ, ಅವರು ತಮ್ಮ ಭಿನ್ನತೆಗಳನ್ನು ಬಗೆಹರಿಸಿಕೊಂಡಿದ್ದರು.—ಅ. ಕೃತ್ಯಗಳು 15:37-39; 2 ತಿಮೊಥೆಯ 4:11.
ನಿಮ್ಮ ಸ್ನೇಹಗಳಲ್ಲಿ ಸಮಸ್ಯೆಗಳು ಏಳುವಾಗ ಇದನ್ನೇ ಮಾಡಲು ಏಕೆ ಪ್ರಯತ್ನಿಸಬಾರದು? ವಿಷಯಗಳನ್ನು ಮನಸ್ಸಿನಲ್ಲಿ ಉಲ್ಬಣಗೊಳ್ಳುವಂತೆ ಅನುಮತಿಸದಿರಿ. (ಎಫೆಸ 4:26) ತ್ವರಿತವಾದ ತೀರ್ಮಾನಗಳನ್ನು ಮಾಡುವ ಅಥವಾ ಕೋಪದ ದೋಷಾರೋಪಣೆಗಳನ್ನು ಮಾಡುವ ಮೊದಲು, ಆ ವಿಷಯದ ಕುರಿತಾಗಿ ನಿಮ್ಮ ಮಿತ್ರನಿಗೆ ಹೇಳಲಿಕ್ಕಿರುವುದನ್ನು ಆಲಿಸಿರಿ. (ಜ್ಞಾನೋಕ್ತಿ 18:13; 25:8, 9) ಯಾವುದೋ ತಪ್ಪಭಿಪ್ರಾಯ ಇದ್ದಿರಬಹುದು. ಆದರೆ ನಿಮ್ಮ ಮಿತ್ರನು ವಾಸ್ತವವಾಗಿ ವಿವೇಚನಾಶಕ್ತಿಯ ಕೊರತೆಯನ್ನು ತೋರಿಸಿರುವುದರ ದೋಷಿಯಾಗಿರುವುದಾದರೆ ಆಗೇನು? ನಿಮ್ಮ ಮಿತ್ರನು ಮನುಷ್ಯಮಾತ್ರನಾಗಿದ್ದಾನೆಂಬುದನ್ನು ನೆನಪಿನಲ್ಲಿಡಿರಿ. (ಕೀರ್ತನೆ 51:5; 1 ಯೋಹಾನ 1:10) ಮತ್ತು ನಾವೆಲ್ಲರೂ ತದನಂತರ ವಿಷಾದಪಡುವ ವಿಷಯಗಳನ್ನು ಹೇಳುವ ಅಥವಾ ಮಾಡುವುದರ ದೋಷಿಗಳಾಗಿದ್ದೇವೆ.—ಪ್ರಸಂಗಿ 7:21, 22ನ್ನು ಹೋಲಿಸಿ.
ಆದರೂ, ನಿಮ್ಮ ಮಿತ್ರನ ಕೃತ್ಯಗಳು ಎಷ್ಟರಮಟ್ಟಿಗೆ ನಿಮಗೆ ನೋವನ್ನುಂಟುಮಾಡಿವೆ ಎಂಬುದನ್ನು ನೀವು ಬಹಿರಂಗವಾಗಿ ವ್ಯಕ್ತಪಡಿಸಸಾಧ್ಯವಿದೆ. ಅದು ನಿಮ್ಮ ಮಿತ್ರನು ಒಂದು ನಿಷ್ಕಪಟವಾದ ಕ್ಷಮಾಯಾಚನೆಯನ್ನು ಮಾಡುವಂತೆ ಪ್ರಚೋದಿಸಬಹುದು. ಪ್ರೀತಿಯು “ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ”ವಾದುದರಿಂದ, ನೀವು ಆ ವಿಷಯದ ಕುರಿತಾಗಿ ಚಿಂತಿಸುವುದನ್ನು ನಿಲ್ಲಿಸಬಹುದು. (1 ಕೊರಿಂಥ 13:5) ಕಳೆದುಹೋದ ಒಂದು ಸ್ನೇಹದ ಕಡೆಗೆ ಹಿನ್ನೋಟ ಬೀರುತ್ತಾ, ಯುವ ಕೀನನ್ ಹೇಳುವುದು: “ನನಗೆ ಪುನಃ ಹಾಗೆ ಮಾಡುವ ಸಂದರ್ಭವಿರುತ್ತಿದ್ದಲ್ಲಿ, ನಾನು ನಮ್ಮ ಸ್ನೇಹದಿಂದ ಪರಿಪೂರ್ಣತೆಯನ್ನು ಅಪೇಕ್ಷಿಸುತ್ತಿದ್ದಿರಲಿಲ್ಲ. ನಾನು ಅವನಿಗೆ ಹೆಚ್ಚು ಕಿವಿಗೊಡುತ್ತಿದ್ದೆ ಮತ್ತು ಅವನಿಗೆ ಬೆಂಬಲ ನೀಡುತ್ತಿದ್ದೆ ಮತ್ತು ಅವನ ದೋಷಗಳನ್ನು ಎತ್ತಿತೋರಿಸುತ್ತಿದ್ದಿರಲಿಲ್ಲ. ಯಶಸ್ವಿಕರವಾದ ಸ್ನೇಹವನ್ನು ಉಂಟುಮಾಡುವ ವಿಷಯವು, ಪರೀಕ್ಷೆಗಳು ಹಾಗೂ ಪಂಥಾಹ್ವಾನಗಳನ್ನು ಬಗೆಹರಿಸುವುದೇ ಆಗಿದೆ ಎಂಬುದನ್ನು ನಾನು ಈಗ ಅರ್ಥಮಾಡಿಕೊಳ್ಳುತ್ತೇನೆ.”
ಆದರೆ ನಿಮ್ಮ ಮಿತ್ರನು ಈ ಹಿಂದೆ ನಿಮ್ಮೊಂದಿಗೆ ವ್ಯಯಿಸುತ್ತಿದ್ದಷ್ಟು ಸಮಯವನ್ನು ಅಥವಾ ನೀವು ಇಷ್ಟಪಡುವಷ್ಟು ಹೆಚ್ಚು ಸಮಯವನ್ನು ಈಗ ವ್ಯಯಿಸದಿರುವುದಾದರೆ ಆಗೇನು? ಅದು ನೀವು ನಿಮ್ಮ ಮಿತ್ರನ ಸಮಯ ಹಾಗೂ ಗಮನದ ಅತಿರೇಕ ಸ್ವಾಮ್ಯತ್ವವನ್ನು ಪಡೆಯುವವರಾಗಿರುವ ಕಾರಣದಿಂದಾಗಿರಸಾಧ್ಯವೊ? ಇದು ಒಂದು ಸಂಬಂಧವನ್ನು ನಿಗ್ರಹಿಸಬಲ್ಲದು. ಸ್ವಸ್ಥಕರವಾದ ಸಂಬಂಧಗಳಲ್ಲಿರುವ ಜನರು, ತಾವು ಮಾಡಲು ಇಷ್ಟಪಡುವ ವಿಷಯಗಳನ್ನು ಮಾಡಲು ಪರಸ್ಪರ ಸ್ವಾತಂತ್ರ್ಯವನ್ನು ಕೊಡುತ್ತಾರೆ. (ಜ್ಞಾನೋಕ್ತಿ 25:17ನ್ನು ಹೋಲಿಸಿರಿ.) ಬೇರೆ ಜನರ ಆನಂದಕ್ಕಾಗಿ ಅವರು ಬೇಕಾದಷ್ಟು ಅವಕಾಶವನ್ನು ಕೊಡುತ್ತಾರೆ! ಎಷ್ಟೆಂದರೂ, ತಮ್ಮ ಸ್ನೇಹಗಳಲ್ಲಿ “ವಿಶಾಲವಾಗಿರು”ವಂತೆ ಬೈಬಲು ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. (2 ಕೊರಿಂಥ 6:13) ಆದುದರಿಂದ, ಒಬ್ಬ ಮಿತ್ರನು ಇದನ್ನು ಮಾಡುವಾಗ, ಅವನನ್ನು ಅಥವಾ ಅವಳನ್ನು ನಿಷ್ಠಾರಹಿತರೆಂದು ವೀಕ್ಷಿಸುವ ಅಗತ್ಯವಿರುವುದಿಲ್ಲ.
ವಾಸ್ತವವಾಗಿ, ಹೇಗಿದ್ದರೂ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ವಿಪರೀತ ಅವಲಂಬಿಗಳಾಗಿ ಪರಿಣಮಿಸುವುದು, ಒಂದು ಒಳ್ಳೆಯ ವಿಚಾರವಾಗಿರುವುದಿಲ್ಲ. (ಕೀರ್ತನೆ 146:3) ನಿಮ್ಮ ಹೆತ್ತವರು, ಹಿರಿಯರು, ಮತ್ತು ಇತರ ಹಿತಾಸಕ್ತ, ಜವಾಬ್ದಾರ ವಯಸ್ಕರಂತಹ, ನಿಮ್ಮ ಸಮಾನಸ್ಕಂಧರ ಗುಂಪಿನ ಹೊರಗಿನವರೊಂದಿಗೆ, ಸ್ನೇಹಗಳನ್ನು ಬೆಳೆಸಿಕೊಳ್ಳುವುದು ವಿವೇಕಯುತವಾದದ್ದಾಗಿದೆ. ಆ್ಯನ ಅಕ್ಕರೆಯಿಂದ ಹೇಳುವುದು: “ನನ್ನ ತಾಯಿ ನನ್ನ ಅತ್ಯಾಪ್ತ ಮಿತ್ರರಾಗಿದ್ದಾರೆ. ನಾನು ಅವರೊಂದಿಗೆ ಎಲ್ಲಾ ವಿಷಯಗಳನ್ನು ಮಾತಾಡಬಲ್ಲೆ.”
ಬಾಳಿಕೆಬರುವ ಸ್ನೇಹಗಳು ಆನಂದಿಸಲ್ಪಡಸಾಧ್ಯವಿದೆ!
ಬೈಬಲು 1 ಪೇತ್ರ 3:8 (NW)ರಲ್ಲಿ ಹೇಳುವುದು: “ಕೊನೆಯದಾಗಿ, ನೀವೆಲ್ಲರೂ ಸಹಾನುಭೂತಿಯನ್ನು ತೋರಿಸುತ್ತಾ, ಸಹೋದರ ಪ್ರೀತಿಯುಳ್ಳವರಾಗಿಯೂ, ಕೋಮಲ ಕರುಣೆಯುಳ್ಳವರಾಗಿಯೂ, ದೀನಮನಸ್ಸುಳ್ಳವರಾಗಿಯೂ ಇದ್ದು, ಸಮಾನಮನಸ್ಕರಾಗಿರಿ.” ಹೌದು, ಇತರರಿಗಾಗಿ ದಯಾಪರತೆ, ಸಹಾನುಭೂತಿ, ನೈತಿಕ ಸಮಗ್ರತೆ, ಮತ್ತು ಯಥಾರ್ಥವಾದ ಚಿಂತೆಯನ್ನು ತೋರಿಸಿರಿ, ಮತ್ತು ನೀವು ಯಾವಾಗಲೂ ಮಿತ್ರರನ್ನು ಆಕರ್ಷಿಸುವಿರಿ! ಬಾಳಿಕೆಬರುವ ಸ್ನೇಹಗಳು, ಪ್ರಯತ್ನ ಮತ್ತು ದೃಢನಿಶ್ಚಯವನ್ನು ಅಗತ್ಯಪಡಿಸುತ್ತವೆಂಬುದು ಒಪ್ಪತಕ್ಕದ್ದೇ. ಆದರೆ ಪ್ರತಿಫಲಗಳು ಅವುಗಳನ್ನು ಪ್ರಯತ್ನಕ್ಕೆ ಅರ್ಹವನ್ನಾಗಿ ಮಾಡುತ್ತವೆ.
ಆಸಕ್ತಿಕರವಾಗಿ, ಬೈಬಲು ದಾವೀದ ಮತ್ತು ಯೋನಾತಾನರ ಕುರಿತಾಗಿ ಹೇಳುತ್ತದೆ. ಅವರು ಎದ್ದುಕಾಣುವಂತಹ ರೀತಿಯ ಸ್ನೇಹದಲ್ಲಿ ಆನಂದಿಸಿದರು. (1 ಸಮುವೇಲ 18:1) ಅವರು ಕ್ಷುಲ್ಲಕವಾದ ಈರ್ಷ್ಯೆ ಮತ್ತು ವ್ಯಕ್ತಿತ್ವ ದೋಷಗಳನ್ನು ಜಯಿಸಲು ಶಕ್ತರಾಗಿದ್ದರು. ದಾವೀದ ಮತ್ತು ಯೋನಾತಾನರಿಬ್ಬರೂ, ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವ ದೇವರೊಂದಿಗೆ ಸ್ನೇಹ ಮತ್ತು ನಿಷ್ಠೆಯನ್ನು ಇಟ್ಟಿದ್ದರಿಂದ, ಇದು ಸಾಧ್ಯವಾಯಿತು. ಹಾಗೆಯೇ ಮಾಡಿರಿ, ಮತ್ತು ದೇವಭಯವುಳ್ಳ ಮಿತ್ರರೊಂದಿಗೆ ಸ್ನೇಹದಿಂದಿರುವುದರಲ್ಲಿ ನಿಮಗೆ ತೊಂದರೆಯೇ ಇರುವುದಿಲ್ಲ!
[ಪುಟ 36 ರಲ್ಲಿರುವ ಚಿತ್ರಗಳು]
ಬೇರೆ ಮಿತ್ರರಿರುವುದು ನಿಷ್ಠಾರಹಿತವಾದದ್ದಾಗಿದೆಯೆಂದು ಒಬ್ಬರಿಗೆ ಅನಿಸುವಾಗ, ಸ್ನೇಹಗಳು ಅನೇಕವೇಳೆ ಕೊನೆಗೊಳ್ಳುತ್ತವೆ