ತಮ್ಮ ಅತ್ಯಂತ ಮಹಾ ಗೆಳೆಯನಿಂದ ಆಧಾರಿಸಲ್ಪಟ್ಟಿರುವುದು
ಯೆಹೋವನ ಸಾಕ್ಷಿಗಳಿಗೆ ವಿಶೇಷವಾಗಿ ಆಧಾರ ಕೊಡುವಂತಹ ಒಂದು ಗೆಳೆತನವಿದೆ. ಅದು ತಮ್ಮ ಅತ್ಯಂತ ಮಹಾ ಗೆಳೆಯನಾದ, ಯೆಹೋವ ದೇವರೊಂದಿಗಿರುವ ಅವರ ಅಮೂಲ್ಯ ಸಂಬಂಧವಾಗಿದೆ. (ಯಾಕೋಬ 2:23ನ್ನು ಹೋಲಿಸಿ.) ಅವನು ಅವರನ್ನು ನಂಬಿಕೆಯ ಮಹತ್ತಾದ ಪರೀಕ್ಷೆಗಳ ಸಮಯದಲ್ಲಿ ಬೆಂಬಲಿಸುತ್ತಾನೆ.
ಸರ್ವಾಧಿಕಾರಿ ಆಳಿಕೆಗಳ ಕೆಳಗೆ ಸಾಕ್ಷಿಗಳ ಸಮಗ್ರತೆಯ ದಾಖಲೆಯು ಅನೇಕ ಪ್ರೇಕ್ಷಕರಿಂದ ಹೊಗಳಲ್ಪಟ್ಟಿದೆ. ಅವರಲ್ಲಿ, ಕಮ್ಯೂನಿಸ್ಟ್ ಕೂಟ ಶಿಬಿರಗಳಲ್ಲಿ ಅನೇಕ ವರ್ಷಗಳನ್ನು ಕಳೆದ ಬಳಿಕ 1968ರಲ್ಲಿ ಚೆಕೊಸ್ಲಾವಾಕಿಯಾದಿಂದ ವಲಸೆಹೋದ ತತ್ವಜ್ಞಾನ ಮತ್ತು ನೈಸರ್ಗಿಕ ವಿಜ್ಞಾನಗಳ ಒಬ್ಬ ವೈದ್ಯರಾದ, ಯಿರ್ಸೇ ಕ್ರುಪಿಕ್ಕಾ ಒಬ್ಬರಾಗಿದ್ದಾರೆ. ರೆನಿಸೆನ್ಸ್ ರೊಸುಮು (ಬುದ್ಧಿಶಕ್ತಿಯ ಪುನರುಜ್ಜೀವನ) ಎಂಬ ತಮ್ಮ ಪುಸ್ತಕದಲ್ಲಿ, ತಮ್ಮ ತಾಟಸ್ಥ್ಯಕ್ಕಾಗಿ ಸೆರೆಗೆ ಹಾಕಲ್ಪಟ್ಟ ಸಾಕ್ಷಿಗಳ ಕಷ್ಟಾನುಭವ ಹಾಗೂ ಸ್ಥಿರಚಿತ್ತತೆಯ ಕುರಿತಾಗಿ ಅವರು ಹೇಳಿಯನ್ನೀಯುತ್ತಾರೆ.
ಕಮ್ಯೂನಿಸ್ಟ್ ಸರಕಾರದ ಕೆಳಗೆ, ಅನೇಕ ಸಾಕ್ಷಿಗಳಿಗೆ ಅವರ ನಂಬಿಕೆಯ ಕಾರಣದಿಂದ ಸೆರೆಮನೆ ಶಿಕ್ಷೆ ವಿಧಿಸಲಾಯಿತು. ಸೆರೆಯಲ್ಲಿ ಹಾಕಲ್ಪಟ್ಟಿದ್ದರೂ ಅವರು ಯುದ್ಧದ ಉದ್ದೇಶಕ್ಕೋಸ್ಕರ ಯುರೇನಿಯಂ ಅನ್ನು ಗಣಿತೋಡಲು ನಿರಾಕರಿಸಿದರು. (ಯೆಶಾಯ 2:4) 1952ರಲ್ಲಿ ಈ ಗಣಿಗಳಲ್ಲೊಂದರ ಬದಿಯಲ್ಲಿ ತಾವು ನೋಡಿದ ಒಂದು ದೃಶ್ಯವನ್ನು ಕ್ರುಪಿಕ್ಕಾ ವರ್ಣಿಸುತ್ತಾರೆ. ಕೊರೆಯುವ ಚಳಿ ಹವಾಮಾನದಲ್ಲಿ ಮಂಜುಗಡ್ಡೆಯ ಪ್ರತಿಮೆಗಳಂತೆ ನಿಂತಿದ್ದ ಎರಡು ದೇಹಾಕೃತಿಗಳನ್ನು ಅವರು ಕಂಡರು. ಲೋಹದ ಪೀಪಾಯಿಗಳು ಅವರ ತಲೆಗಳನ್ನು ಮತ್ತು ದೇಹದ ಮೇಲಿನ ಭಾಗಗಳನ್ನು ಮುಚ್ಚಿದ್ದವು.
ಕ್ರುಪಿಕ್ಕಾ ಬರೆಯುವುದು: “ಅವರು ಮುಂಜಾನೆಯಿಂದ ಅಲ್ಲಿ ಹೊರಗೆ ಸೆರೆಮನೆಯ ಚಿಂದಿ ಉಡುಪುಗಳಲ್ಲಿ ನಿಂತುಕೊಂಡಿದ್ದರು. ಸೆಡೆತುಕೊಂಡಿದ್ದ ಕಾಲುಗಳಲ್ಲಿ ಅವರು ಅಷ್ಟು ಸಮಯ ಹೇಗೆ ನಿಲ್ಲಶಕ್ತರಾಗಿದ್ದರು? ನಂಬಿಕೆಯ ಶಕ್ತಿಯಿಂದಲೇ. ಪೀಪಾಯಿಗಳು ಹಳೆಯದ್ದೂ ತುಕ್ಕು ಹಿಡಿದಿದ್ದವೂ ಆಗಿದ್ದವು. ಒಬ್ಬ ಕ್ರೂರ ವ್ಯಕ್ತಿಯು ಅವರ ತಲೆಗಳ ಮತ್ತು ಹೆಗಲುಗಳ ಮೇಲೆ ಅವರನ್ನು ಎಷ್ಟು ಬಿರುಸಾಗಿ ಹೊಡೆದನೆಂದರೆ ಮೊನಚಾದ ಅಂಚು ಮನುಷ್ಯನ ಜಾಕೆಟನ್ನು ಕತ್ತರಿಸಿ, ಆ ಪುರುಷರಲ್ಲೊಬ್ಬನ ಚರ್ಮವನ್ನು ಸೀಳಿಹಾಕಿತು ಮತ್ತು ಅವನ ತೋಳಿನಿಂದ ರಕ್ತವು ತೊಟ್ಟಿಕ್ಕುತ್ತಿತ್ತು.
“ಸಿಪಾಯಿಯು ನಮ್ಮ ಸಾಲನ್ನು ಅವರ ಮುಂದೆ ನಿಲ್ಲಿಸಿದನು ಮತ್ತು ಕಮಾಂಡರ್ ನಮಗೆ ಒಂದು ಚಿಕ್ಕ ಭಾಷಣವನ್ನು ಕೊಟ್ಟರು. ಕೆಲಸ ಮಾಡಲು ನಿರಾಕರಿಸುವುದು ದಂಗೆಯಾಗಿದೆ ಮತ್ತು ಅದರಂತೆ ಶಿಕ್ಷೆಕೊಡಲಾಗುತ್ತದೆ ಎಂದು ಅವರು ಹೇಳಿದರು. ಯುದ್ಧ ಮತ್ತು ಕೊಲ್ಲುವಿಕೆಯ ಕುರಿತಾದ ಯಾವುದೇ ರಸಭಾವಾತಿರೇಕವುಳ್ಳ ಹುಚ್ಚು ಮಾತು ಈ ಆಕ್ಷೇಪಕರನ್ನು, ಸಮಾಜವಾದದ ಈ ಶತ್ರುಗಳನ್ನು ಸಹಾಯ ಮಾಡದು.”
ಕಮಾಂಡರರು ಒಂದು ಲೋಹದ ಸಲಾಕಿಯನ್ನು ಎತ್ತಿಕೊಂಡು ಪೀಪಾಯಿಗಳಲ್ಲಿ ಒಂದನ್ನು ಹೊಡೆದರು. ತನ್ನ ತಲೆಯನ್ನು ಇನ್ನೂ ಮುಚ್ಚಿಕೊಂಡಿದ್ದ ಪೀಪಾಯಿಯೊಂದಿಗೆ, ಅದರಲ್ಲಿದ್ದ ಮನುಷ್ಯನು ಕುಸಿದುಬಿದ್ದನು. ಮುಂದೆ ನಡೆದಂತಹ ಸಂಗತಿಯು ಕ್ರುಪಿಕ್ಕಾರವರ ಸ್ಮರಣೆಯಲ್ಲಿ ಆಳವಾಗಿ ಕೆತ್ತಲ್ಪಟ್ಟಿದೆ.
ಅವರು ತಿಳಿಸುವುದು: “ಪೀಪಾಯಿಗಳೊಳಗಿಂದ ಹಾಡುಗಳು ಬರುತ್ತಿದ್ದವು. ಮೆತ್ತಗಿನ ಶಬ್ದಗಳು, ಎಲ್ಲಿಂದಲೂ ಯಾವುದನ್ನೂ—ಹಳೆಯ, ತುಕ್ಕು ಹಿಡಿದ ಯುರೇನಿಯಂ ಪೀಪಾಯಿಗಳೊಳಗಿಂದ ಪ್ರಯತ್ನಿಸಲ್ಪಟ್ಟ ಹಾಡುವಿಕೆಯನ್ನೂ—ಕೇಳಸಾಧ್ಯವಿರುವ ದೇವರಿಗೆ ಪಿಸುಗುಟ್ಟಲ್ಪಟ್ಟ ಒಂದು ಪ್ರಾರ್ಥನೆ. ಅದು ಅವನಿಗೆ ಒಂದು ದೊಡ್ಡ ಚರ್ಚಿನಲ್ಲಿ ಹಾಡಲ್ಪಡುವ ಒಂದು ಸ್ತುತಿಗಾನಕ್ಕಿಂತಲೂ ಗಟ್ಟಿಯಾಗಿ ಕೇಳುತ್ತದೆ.”
ಸೆಪ್ಟೆಂಬರ್ 1, 1993ರಂದು ಚೆಕ್ ರಿಪಬ್ಲಿಕ್ನಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸವು ಅಧಿಕೃತ ಕಾನೂನುಬದ್ಧ ಮನ್ನಣೆಯನ್ನು ಪಡೆಯಿತು. ಚೆಕ್ ಸಾಕ್ಷಿಗಳು ತಮ್ಮ ಕ್ರೈಸ್ತ ಶೈಕ್ಷಣಿಕ ಕೆಲಸವನ್ನು ಸ್ವಾತಂತ್ರ್ಯದಲ್ಲಿ ಮುಂದುವರಿಸಲು ಈಗ ಉಲ್ಲಾಸಿಸುತ್ತಾರೆ. ಹೌದು, ತಮ್ಮ ಅತ್ಯಂತ ಮಹಾ ಗೆಳೆಯನಾದ ಯೆಹೋವನ ಕುರಿತಾಗಿ ಇತರರಿಗೆ ತಿಳಿಸಲು ಅವರು ಹರ್ಷಿತರಾಗಿದ್ದಾರೆ.
[ಪುಟ 7 ರಲ್ಲಿರುವ ಚಿತ್ರ]
ಚೆಕ್ ರಿಪಬ್ಲಿಕ್ನಲ್ಲಿ ಅಧಿವೇಶನಗಾರರು