ಸಿಂಗಾಪುರವು ಆರಾಧನಾ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ನಡೆಸುತ್ತದೆ
ಫೆಬ್ರವರಿ 24, 1995ರ ಸಾಯಂಕಾಲದಂದು, ಸಿಂಗಾಪುರ ನಗರದಲ್ಲಿ ನಾಲ್ಕು ಮನೆಗಳ ಮೇಲೆ ಪೊಲೀಸರು ದಾಳಿಮಾಡಿದರು. ಒಟ್ಟಿಗೆ 69 ಜನರು ದಸ್ತಗಿರಿ ಮಾಡಲ್ಪಟ್ಟರು.a ಅವರಲ್ಲಿ ಒಬ್ಬ 71 ವರ್ಷ ಪ್ರಾಯದ ಹೆಂಗಸು ಮತ್ತು 15 ವರ್ಷ ಪ್ರಾಯದ ಇಬ್ಬರು ಹುಡುಗಿಯರಿದ್ದರು. ಯಾಕೆ? ಪಾತಕೀಯ ಅಥವಾ ಸರಕಾರವಿರೋಧಿ ಚಟುವಟಿಕೆಯ ಕಾರಣದಿಂದಲೊ? ಅಲ್ಲ. ಕೊಂಚ ಅರ್ಥದಲ್ಲೂ ಅಪಾಯಕಾರಿ, ಅನೈತಿಕ ಅಥವಾ ಸಮಾಜವಿರೋಧಿಯೆಂದು ಪರಿಗಣಿಸಲ್ಪಡಬಹುದಾದ ಯಾವ ವಿಷಯದಲ್ಲೂ ಅವರಲ್ಲಿ ಒಬ್ಬರೂ ತೊಡಗಿರಲಿಲ್ಲ. ತಮ್ಮ ಜೊತೆ ಸಿಂಗಾಪುರದವರ ನೈತಿಕ ಮೌಲ್ಯಗಳು, ಸುರಕ್ಷೆ, ಮತ್ತು ಹಿತಕ್ಕೆ ಯಾವ ಬೆದರಿಕೆಯನ್ನು ಅವರು ಒಡ್ಡಿರಲಿಲ್ಲ. ಆದರೂ, ಆ ನಾಲ್ಕು ಮನೆಗಳನ್ನು ಶೋಧಿಸಿದ ನಂತರ, ಬೈಬಲ್ ಅಧ್ಯಯನ ಮಾಡಲು ಮತ್ತು ಒಂದು ಸಾಮಾಜಿಕ ಗೋಷ್ಠಿಯಲ್ಲಿ ಆನಂದಿಸಲು ಜೊತೆಗೂಡಿದ್ದ 69 ಜನರನ್ನು ಪೊಲೀಸರು, ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವರನ್ನು ಇಡೀ ರಾತ್ರಿ ಇಟ್ಟು, ಪ್ರಶ್ನಿಸಲಾಯಿತು, ಬೆರಳೊತ್ತುಗಳನ್ನು ಪಡೆಯಲಾಯಿತು, ಮತ್ತು ಛಾಯಾಚಿತ್ರಗಳನ್ನು ತೆಗೆಯಲಾಯಿತು—ಹೌದು, ಸಾಮಾನ್ಯ ಪಾತಕಿಗಳಂತೆ ಭಯಹುಟ್ಟಿಸಲಾಯಿತು! ಈ ಸಮಯದಲ್ಲಿ—18 ತಾಸುಗಳಷ್ಟು ದೀರ್ಘಸಮಯ ಕೀಳುಮಟ್ಟದ ಪರಿಸ್ಥಿತಿಗಳಲ್ಲಿ—ಅವರಿಗೆ ಶಾಸನಬದ್ಧ ಸಲಹೆಯನ್ನು ಪಡೆಯಲು ನಿರಾಕರಿಸಲಾಯಿತು ಮತ್ತು ಕುಟುಂಬ ಸದಸ್ಯರಿಗೆ ತಾವು ಎಲ್ಲಿದ್ದೇವೆಂದು ಹೇಳಲಿಕ್ಕಾಗಿ ಒಂದು ಫೋನ್ ಕರೆಯನ್ನು ಮಾಡುವುದನ್ನು ಸಹ ನಿಷೇಧಿಸಲಾಯಿತು. ಅಂತಹ ಕ್ಷಿಪ್ರ ಕ್ರಿಯೆಯು ಈ ಶಾಂತಿಯುತ, ನಿಯಮವನ್ನು ಪಾಲಿಸುವ ನಾಗರಿಕರನ್ನು ಹೇಗೆ ಬಾಧಿಸಿತೆಂದು ಒಬ್ಬನು ಕೇವಲ ಊಹಿಸಬಲ್ಲನು!
ಆ ದೃಶ್ಯವು, ನಾಸಿ ಜರ್ಮನಿ ಮತ್ತು ಸೋವಿಯೆಟ್ ಒಕ್ಕೂಟ ಮತ್ತು ಪೂರ್ವ ಯೂರೋಪಿನ ಘೋರ ಸಮತಾವಾದಿ ಯುಗದ ಅಂಧಕಾರದ ದಿನಗಳ ಸಮಯದಲ್ಲಿನ ಪರಿಸ್ಥಿತಿಗಳನ್ನು ಜ್ಞಾಪಕಕ್ಕೆ ತರುತ್ತದೆ. ಸಿಂಗಾಪುರಕ್ಕೆ ಒಬ್ಬ ಅನಿಯತ ಸಂದರ್ಶಕನು, ಆ ತುಂಬ ಶುಚಿಯಾದ ಮತ್ತು ಸಂಪತ್ಸಮೃದ್ಧ ನಗರ-ರಾಷ್ಟ್ರದಲ್ಲಿ ಕಂಡುಕೊಳ್ಳಲು ನಿರೀಕ್ಷಿಸುವ ಒಂದು ಸಂಗತಿ ಅದಾಗಿರುವುದಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಸಂಬಂಧದಲ್ಲಿ 20 ನೆಯ ಶತಮಾನದ ಒಂದು ಅದ್ಭುತವೆಂಬ ಖ್ಯಾತಿಯನ್ನು, ಸಿಂಗಾಪುರವು ಬೆಳೆಸಿಕೊಂಡಿದೆ. ತನ್ನ ನಾಗರಿಕರಿಗೆ, ವಾಕ್ಶಕ್ತಿ, ಧರ್ಮ ಮತ್ತು ಕೂಡಿಬರುವ ಸ್ವಾತಂತ್ರ್ಯವನ್ನು ಒಳಗೂಡಿರುವ, ಮೂಲಭೂತ ಮಾನವ ಹಕ್ಕುಗಳ ಖಾತರಿಯನ್ನು ಕೊಡುವ ಸಂವಿಧಾನವೊಂದನ್ನು ಹೊಂದಿರುವ ಒಂದು ಘೋಷಿತ ಪ್ರಜಾಪ್ರಭುತ್ವವು ಅದಾಗಿದೆ.
ಆದರೂ, ಫೆಬ್ರವರಿಯಲ್ಲಿ ದಸ್ತಗಿರಿ ಮಾಡಲ್ಪಟ್ಟವರು, ಬೈಬಲನ್ನು ಅಧ್ಯಯನಿಸಲು ಮತ್ತು ಕ್ರೈಸ್ತ ಒಡನಾಟದಲ್ಲಿ ಪಾಲಿಗರಾಗಲು ಕೂಡಿಬಂದಿದ್ದ ಯೆಹೋವನ ಸಾಕ್ಷಿಗಳಾಗಿದ್ದ ಏಕಮಾತ್ರ ಕಾರಣದಿಂದ ಗುರಿಹಲಗೆಗಳಾಗಿ ಮಾಡಲ್ಪಟ್ಟಿದ್ದರು. “ಕಾನೂನುಬಾಹಿರ ಸಂಸ್ಥೆಯೊಂದರ ಒಂದು ಕೂಟವನ್ನು ಹಾಜರಾಗುತ್ತಿದ್ದದ್ದು” ಅವರ ವಿರುದ್ಧವಾದ ಆರೋಪವಾಗಿತ್ತು.
ವಾಸ್ತವದಲ್ಲಿ, ಯಾವಾಗ ಸಿಂಗಾಪುರದ ಸಭೆಯು ಅಧಿಕೃತ ನೋಂದಣಿ ಪುಸ್ತಕದಿಂದ ರದ್ದುಮಾಡಲ್ಪಟ್ಟು, ಬೈಬಲುಗಳನ್ನು ಒಳಗೊಂಡು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಸಾಹಿತ್ಯವು ನಿಷೇಧಿಸಲ್ಪಟ್ಟಿತೋ, ಆ 1972 ರಿಂದ ಯೆಹೋವನ ಸಾಕ್ಷಿಗಳಿಗೆ ಕಾನೂನುಬದ್ಧ ಸ್ವೀಕರಣೆಯನ್ನು ನಿರಾಕರಿಸಲಾಗಿದೆ. ಯಾವುದರ ಆಧಾರದ ಮೇಲೆ ಆ ಕ್ರಮವನ್ನು ಕೈಕೊಳ್ಳಲಾಗಿತ್ತೊ, ಆ ಊಹೆಗಳನ್ನು ಪ್ರಶ್ನಿಸಲು ಯಾವ ಅವಕಾಶವೂ ಅನುಮತಿಸಲ್ಪಡಲಿಲ್ಲ. ಪ್ರತಿಬಂಧಿಸಲ್ಪಟ್ಟಿದ್ದ ಬೈಬಲ್ ಸಾಹಿತ್ಯವನ್ನು ಹೊಂದಿರುವುದಕ್ಕಾಗಿ ಫೆಬ್ರವರಿ 1994 ರಲ್ಲಿ ಕೈದುಮಾಡಲ್ಪಟ್ಟಿದ್ದ ನಾಲ್ಕು ಸಾಕ್ಷಿಗಳ ಕೇಸಿನಲ್ಲಿ, ಈ ಅಧಿಕೃತ ಭೇದಭಾವದ ನ್ಯಾಯಸಮ್ಮತತೆಯು, ಇತ್ತೀಚೆಗೆ ಸಿಂಗಾಪುರದ ನ್ಯಾಯಾಲಯಗಳಲ್ಲಿ ಪ್ರಶ್ನಿಸಲ್ಪಟ್ಟಿತು. ಅವರ ಅಪರಾಧ ನಿರ್ಣಯಗಳ ವಿರುದ್ಧವಾದ ಅಪ್ಪೀಲು, ಆಗಸ್ಟ್ 1994 ರಲ್ಲಿ ಕೇಳಲ್ಪಟ್ಟಿತು ಮತ್ತು ಶೀಘ್ರವಾಗಿ ತಳ್ಳಿಹಾಕಲ್ಪಟ್ಟಿತು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ, ಯಾಂಗ್ ಪೆಂಗ್ ಹೌ ಮುಂದಿನ ತಿಂಗಳಲ್ಲಿ ತಮ್ಮ ಅಭಿಪ್ರಾಯವನ್ನು ಹೊರಡಿಸಿದರು. ಅದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿರಲಿಲ್ಲ ಮತ್ತು ಯೆಹೋವನ ಸಾಕ್ಷಿಗಳ ಸದಸ್ಯರು ಮಿಲಿಟರಿ ಕಾರ್ಯದಲ್ಲಿ ಭಾಗವಹಿಸದ ಕಾರಣದಿಂದ, ಅವರು ರಾಷ್ಟ್ರೀಯ ಭದ್ರತೆಗೆ ಒಂದು ಬೆದರಿಕೆಯಾಗಿದ್ದರೆಂಬ ಆಧಾರದ ಮೇಲೆ ಆ ಅಪರಾಧ ನಿರ್ಣಯಗಳು ನ್ಯಾಯ ಸಮರ್ಥಿಸಲ್ಪಟ್ಟವೆಂದು ಅವರು ಅಭಿಪ್ರಯಿಸಿದರು. ಫೆಬ್ರವರಿ 17, 1995 ರಂದು, ಆ ನಾಲ್ಕು ಸಾಕ್ಷಿಗಳು ಈ ಪ್ರತಿಕೂಲ ನಿರ್ಣಯವನ್ನು ಸಿಂಗಾಪುರದ ಕೋರ್ಟ್ ಆಫ್ ಅಪ್ಪೀಲ್ಗೆ ಅಪ್ಪೀಲು ಮಾಡಲು ಅನುಮತಿಯನ್ನು ಕೇಳಿದರು. ಆ ಅರ್ಜಿಯು ನಿರಾಕರಿಸಲ್ಪಟ್ಟಿತು.
ಸರಕಾರ ನಿಯಂತ್ರಿತ ಸಿಂಗಾಪುರ ವೃತ್ತಪತ್ರಕೆಯಲ್ಲಿ, ಈ ಕೊನೆಯ ನಿರ್ಣಯಕ್ಕೆ ಪ್ರಾಧಾನ್ಯವನ್ನು ಕೊಡಲಾಯಿತು. ನಿಸ್ಸಂದೇಹವಾಗಿ, ನ್ಯಾಯಾಲಯದ ಈ ನಿರ್ಣಯ ಮತ್ತು ಪರಿಣಮಿಸಿದ ಬಹಿರಂಗ ಪ್ರಕಟನೆಯು, ಹಿಂಬಾಲಿಸಿದಂತಹ ಘಟನೆಗಳನ್ನು ಮುನ್ಚಿತ್ರಿಸಿತು. ಒಂದು ವಾರದೊಳಗೆ ಆ 69 ಸಾಕ್ಷಿಗಳ ದಸ್ತಗಿರಿ ನಡೆಯಿತು. ಇವರಲ್ಲಿ, ಬ್ರಿಟನ್, ಫ್ರಾನ್ಸ್ ಮತ್ತು ಲಕ್ಸೆಮ್ಬರ್ಗಿನ ನಾಗರಿಕರಾಗಿದ್ದ ನಾಲ್ವರ ವಿರುದ್ಧ ಇದ್ದ ಆರೋಪಗಳನ್ನು ತರುವಾಯ ರದ್ದುಮಾಡಲಾಯಿತು. ಆದಾಗಲೂ, ಇವರಿಗೂ ಆ ಅನುಭವವು ಭಯಹುಟ್ಟಿಸುವಂತಹದ್ದಾಗಿತ್ತು. ಒಬ್ಬ ಮನುಷ್ಯನು ತನ್ನ ಹೆಂಡತಿಯೊಂದಿಗೆ ಹಲವಾರು ವರ್ಷಗಳಿಂದ ಸಿಂಗಾಪುರದಲ್ಲಿ ಜೀವಿಸಿ ಕೆಲಸಮಾಡಿದ್ದನು. ಅವರು ತಮ್ಮ ಉದ್ಯೋಗಗಳನ್ನು ಮತ್ತು ಬಾಡಿಗೆಯ ಮನೆಯನ್ನು ಕಳೆದುಕೊಂಡರು ಮತ್ತು ಅನೇಕ ಆಪ್ತ ಮಿತ್ರರಿಗೆ ವಿದಾಯ ಹೇಳಲು ಒತ್ತಾಯಿಸಲ್ಪಟ್ಟರು.
ಉಳಿದಂತಹ 63 ವಯಸ್ಕರು ಒಂದು ನಿಷೇಧಿತ ಸಂಸ್ಥೆಯ ಭಾಗವಾಗಿರುವುದಾಗಿ ಆರೋಪಿಸಲ್ಪಟ್ಟರು, ಮತ್ತು ಕೆಲವರು ಪ್ರತಿಬಂಧಿಸಲ್ಪಟ್ಟ ಸಾಹಿತ್ಯವನ್ನು ಹೊಂದಿರುವುದಕ್ಕಾಗಿ ಸಹ ಆರೋಪಿಸಲ್ಪಟ್ಟರು. ಅವರು ಅಧಿಕತಮ ಮೂರು ವರ್ಷಗಳ ಸೆರೆವಾಸ ಅಥವಾ 3,000 ಡಾಲರುಗಳ ದಂಡ ಅಥವಾ ಎರಡನ್ನೂ ಎದುರಿಸುತ್ತಾರೆ. ಆ ಇಬ್ಬರು 15 ವರ್ಷ ಪ್ರಾಯದ ಹುಡುಗಿಯರು ಪ್ರತ್ಯೇಕವಾಗಿ ಬಾಲಕರ ನ್ಯಾಯಾಲಯದಲ್ಲಿ ಹಾಜರಾದರು.
ರಾಷ್ಟ್ರೀಯ ಗುರುತು ಅಥವಾ ಐಕ್ಯಕ್ಕೆ ಬೆದರಿಕೆಯಿಲ್ಲ
ಲೋಕದ ಸುತ್ತಲೂ, ಅವರೆಲ್ಲಿ ವಾಸಿಸುತ್ತಾರೋ ಆ 200 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು, ಮಾನ್ಯರು, ಪ್ರಾಮಾಣಿಕರು, ನಿಯಮವನ್ನು ಪಾಲಿಸುವ ಜನರಾಗಿ ಪ್ರಸಿದ್ಧರಾಗಿದ್ದಾರೆ. ಯಾವುದೇ ರೀತಿಯ, ಸರಕಾರವನ್ನು ಉರುಳಿಸುವ, ಸರಕಾರವಿರೋಧಿ ಚಟುವಟಿಕೆಯಲ್ಲಿ—ಅವರು ಬಹಿಷ್ಕರಿಸಲ್ಪಡುವುದರಲ್ಲಿ ಅಥವಾ ಹೊರಹಾಕಲ್ಪಡುವುದರಲ್ಲಿ ಪರಿಣಮಿಸಬಲ್ಲ ಅಕ್ರೈಸ್ತ ಕಾರ್ಯದಲ್ಲಿ—ಭಾಗವಹಿಸಲು ಅವರ ದೃಢನಿಶ್ಚಯದ ನಿರಾಕರಣೆಗಾಗಿ ಅವರನ್ನು ಗುರುತಿಸಲಾಗುತ್ತದೆ. ನಿಜವಾಗಿಯೂ, ಅವರ ಕುರಿತಾಗಿ ಭಯಗೊಳ್ಳಲು ಸಿಂಗಾಪುರದ ಸರಕಾರಕ್ಕೆ ಯಾವುದೇ ಕಾರಣವಿಲ್ಲ. ಅವರು ಸಿಂಗಾಪುರದ ರಾಷ್ಟ್ರೀಯ ಭದ್ರತೆಗೆ ಅಥವಾ ರಾಷ್ಟ್ರೀಯ ಗುರುತು ಮತ್ತು ಐಕ್ಯಕ್ಕೆ ಯಾವುದೇ ರೀತಿಯಲ್ಲಿ ಒಂದು ಬೆದರಿಕೆಯಾಗಿರುವುದಿಲ್ಲ. (ರೋಮಾಪುರ 13:1-7) ಇದು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾದ, ಮಿಲ್ಟನ್ ಜಿ. ಹೆನ್ಶಲ್ರವರಿಂದ, ಸಿಂಗಾಪುರದ ಪ್ರಧಾನ ಮಂತ್ರಿಯಾದ ಗಾ ಚಾಕ್ ಟಾಂಗ್ ರವರಿಗೆ ಬರೆಯಲ್ಪಟ್ಟ ಮಾರ್ಚ್ 21, 1995ರ ತಾರೀಖಿನ ಪತ್ರದಲ್ಲಿ ಸ್ಪಷ್ಟವಾಗಿಗಿ ತಿಳಿಸಲ್ಪಟ್ಟಿತ್ತು. ಈ ಪತ್ರವು ನಮ್ಮ ವಾಚಕರ ಪ್ರಯೋಜನಕ್ಕಾಗಿ ಇಲ್ಲಿ ನಕಲು ಮಾಡಲ್ಪಟ್ಟಿದೆ.
ವ್ಯಾಪಾರ, ಸರಕಾರ ಮತ್ತು ಖಾಸಗಿ ವಿಭಾಗದಲ್ಲಿರುವ ಸ್ವಾತಂತ್ರ್ಯ ಪ್ರಿಯ ಜನರು, ಸಿಂಗಾಪುರದಲ್ಲಿರುವ ಈ ಸನ್ನಿವೇಶವು ಹೇಗೆ ವಿಕಸಿಸುವುದೆಂದು ಆಸಕ್ತಿಯಿಂದ ಗಮನಿಸುತ್ತಿರುವರು. ತನ್ನ ಸ್ವಂತ ಸಂವಿಧಾನ ಹಾಗೂ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಮುದಾಯದಿಂದ ಸಮರ್ಥಿಸಲ್ಪಟ್ಟಿರುವ ಮೂಲ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಹೊಂದಿಕೆಯಲ್ಲಿ ಸಿಂಗಾಪುರದ ಸರಕಾರವು ಕ್ರಿಯೆಗೈಯುವುದೋ? ನಿಶ್ಚಯವಾಗಿಯೂ, ಲೋಕದ ಸುತ್ತಲಿರುವ ಯೆಹೋವನ ಸಾಕ್ಷಿಗಳು, ಸಿಂಗಾಪುರದಲ್ಲಿರುವ ತಮ್ಮ ಜೊತೆ ಆರಾಧಕರ ಕುರಿತಾಗಿ ಆಳವಾಗಿ ಚಿಂತಿತರಾಗಿದ್ದಾರೆ. ಇವರು ಅವರನ್ನು ತಮ್ಮ ಪ್ರಾರ್ಥನೆಗಳಲ್ಲಿ ನೆನಪಿಸುತ್ತಾರೆ ಮತ್ತು ಬೈಬಲಿನಲ್ಲಿ ಕಂಡುಕೊಳ್ಳಲ್ಪಡುವ ಈ ಆಶ್ವಾಸನೆಯನ್ನು ಮನಸ್ಸಿನಲ್ಲಿಡುತ್ತಾರೆ: “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ.”—ಕೀರ್ತನೆ 37:28.
[ಅಧ್ಯಯನ ಪ್ರಶ್ನೆಗಳು]
a ಈ 69 ಸಾಕ್ಷಿಗಳು ದಸ್ತಗಿರಿ ಮಾಡಲ್ಪಟ್ಟ ನಂತರದ ತಿಂಗಳುಗಳಲ್ಲಿ, ಇನ್ನೂ 11 ಸಾಕ್ಷಿಗಳು ದಸ್ತಗಿರಿ ಮಾಡಲ್ಪಟ್ಟಿದ್ದಾರೆ ಮತ್ತು ಕಾನೂನುಬಾಹಿರ ಸಾಹಿತ್ಯವನ್ನು ಹೊಂದಿರುವದಕ್ಕಾಗಿ ಆರೋಪಿಸಲ್ಪಟ್ಟಿದ್ದಾರೆ.
[ಪುಟ 30 ರಲ್ಲಿರುವ ಚೌಕ]
ಮಾರ್ಚ್ 21, 1995
ಗಾ ಚಾಕ್ ಟಾಂಗ್
ಪ್ರಧಾನ ಮಂತ್ರಿ
ಇಸಾನ್ಟಾ ಆನೆಕ್ಸ್
ಸಿಂಗಾಪುರ 0923
ರಿಪಬ್ಲಿಕ್ ಆಫ್ ಸಿಂಗಾಪುರ್
ಲೀ ಕಾನ್ವ್ ಯ್ಯು
ಸೀನಿಯರ್ ಮಿನಿಸ್ಟ
ಪ್ರಧಾನ ಮಂತ್ರಿಯವರ ಕಛೇರಿ
460 ಅಲೆಕ್ಸಾಂಡ್ರಾ ರೋಡ್
37-00 ಪಿಎಸ್ಎ ಬಿಲ್ಡಿಂಗ್
ಸಿಂಗಾಪುರ 0511
ರಿಪಬ್ಲಿಕ್ ಆಫ್ ಸಿಂಗಾಪುರ್
ಪ್ರಿಯ ಮಹನೀಯರೇ:
ಸಿಂಗಾಪುರದಿಂದ ಬಂದ ಫೆಬ್ರವರಿ 25, 1995ರ ತಾರೀಖಿನ ಇತ್ತೀಚಿನ ಒಂದು ರಾಯರ್ಟ್ ವರದಿಯು ತೀರ ಕ್ಷೋಭೆಗೊಳಿಸುವಂತಹದ್ದಾಗಿತ್ತು. ಯೆಹೋವನ ಸಾಕ್ಷಿಗಳ ಬೈಬಲ್ ಅಧ್ಯಯನ ಕೂಟಗಳು ಪೊಲೀಸರಿಂದ ರದ್ದುಗೊಳಿಸಲ್ಪಟ್ಟು 69 ಜನರು ದಸ್ತಗಿರಿ ಮಾಡಲ್ಪಟ್ಟಿದ್ದರೆಂಬುದನ್ನು ಅದು ವರದಿಸಿತು. 20 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಅವರ ಚಟುವಟಿಕೆಗಳು ಮತ್ತು ಸಾಹಿತ್ಯವು ಎಲ್ಲಿ ನಿಷೇಧಿಸಲ್ಪಟ್ಟಿದೆಯೋ, ಆ ಸಿಂಗಾಪುರದಲ್ಲಿರುವ ಯೆಹೋವನ ಸಾಕ್ಷಿಗಳ ಪರಿಸ್ಥಿತಿಯ ಮೇಲೆ ಅದು ಲೋಕದ ಗಮನವನ್ನು ಕೇಂದ್ರೀಕರಿಸಿದೆ.
200 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ನಿಯಮದ ಪೂರ್ಣ ಸಂರಕ್ಷಣೆಯೊಂದಿಗೆ ಬಹಿರಂಗವಾಗಿ ಕಾರ್ಯನಡಿಸುವ ಒಂದು ಧಾರ್ಮಿಕ ಸಂಸ್ಥೆಯು, ಪ್ರಜಾಪ್ರಭುತ್ವದ ಸೂತ್ರಗಳನ್ನು ಸಮರ್ಥಿಸುವ ಒಂದು ರಾಷ್ಟ್ರವಾದ ಸಿಂಗಾಪುರದಲ್ಲಿ ಯಾಕೆ ನಿಷೇಧಿಸಲ್ಪಟ್ಟಿರಬೇಕೆಂದು ಗ್ರಹಿಸುವುದು ಕಷ್ಟಕರ. ತನ್ನ ನಾಗರಿಕರಿಗಾಗಿ ಆರಾಧನಾ ಸ್ವಾತಂತ್ರ್ಯದ ಸಿಂಗಾಪುರದ ಸಂವಿಧಾನೀಯ ಖಾತರಿಯ ನೋಟದಲ್ಲಿ ಇದು ಇನ್ನೂ ಹೆಚ್ಚು ಕ್ಷೋಭೆಗೊಳಿಸುವಂತಹದ್ದಾಗಿದೆ.
ಯೆಹೋವನ ಸಾಕ್ಷಿಗಳು ಎಲ್ಲಿಯೂ ರಾಷ್ಟ್ರೀಯ ಭದ್ರತೆಗೆ ಯಾವುದೇ ಬೆದರಿಕೆಯನ್ನು ಎಂದೂ ಒಡ್ಡಿರುವುದಿಲ್ಲ. ನಿಜವಾಗಿ, ಅವರು ಶಾಂತಿಯುತರು, ಶ್ರಮಜೀವಿಗಳು, ನೈತಿಕವಾಗಿ ಪ್ರಾಮಾಣಿಕರು ಮತ್ತು ನಿಯಮ ಪಾಲಕರು—ನಿಮ್ಮ ದೇಶದಲ್ಲಿ ನೀವು ಪ್ರವರ್ಧಿಸುತ್ತೀರೆಂದು ನನಗೆ ಖಾತ್ರಿಯಿರುವಂತಹ ಗುಣಗಳು—ಆಗಿರುವ ಖ್ಯಾತಿಯನ್ನು ಲೋಕದಾದ್ಯಂತ ಹೊಂದಿದ್ದಾರೆ.
ಕ್ರೈಸ್ತರಿಗಾಗಿರುವ ಬೈಬಲ್ ಮಟ್ಟಗಳಿಗೆ ಅವರ ಕಟ್ಟುನಿಟ್ಟಿನ ಅವಲಂಬನೆಯಿಂದಾಗಿ, ಯೆಹೋವನ ಸಾಕ್ಷಿಗಳ ಸ್ಥಾನವು ಕೆಲವೊಮ್ಮೆ ತಪ್ಪಾಗಿ ಅಭಿಪ್ರಯಿಸಲ್ಪಟ್ಟಿದೆ ಅಥವಾ ತಪ್ಪಾಗಿ ಪ್ರತಿನಿಧಿಸಲ್ಪಟ್ಟಿದೆಯೆಂಬುದು ನಿಜ. ಆದರೆ, ತನ್ನ ದಿನದ ಸರಕಾರವಾಗಿದ್ದ “ಕೈಸರನ” ವಿರುದ್ಧವಾಗಿದ್ದನೆಂದು ತಪ್ಪಾಗಿ ಪ್ರತಿನಿಧಿಸಲ್ಪಟ್ಟಿದ್ದ ಕ್ರೈಸ್ತತ್ವದ ಸ್ಥಾಪಕನ ಕುರಿತಾಗಿಯೂ ಅದು ಸತ್ಯವಾಗಿರಲಿಲ್ಲವೊ? ಯೆಹೋವನ ಸಾಕ್ಷಿಗಳು ಕೇವಲ ಯೇಸುವಿನ ಮತ್ತು ಆದಿ ಕ್ರೈಸ್ತರ ಮಾದರಿಯನ್ನು ಅನುಸರಿಸುತ್ತಾರೆ. ಅವರು ಎಲ್ಲಿ ಜೀವಿಸುತ್ತಾರೋ ಅಲ್ಲಿನ ಸರಕಾರವನ್ನು ಗೌರವಿಸುತ್ತಾರೆ, ತಮ್ಮ ತೆರಿಗೆಗಳನ್ನು ತೆರುತ್ತಾರೆ, ಮತ್ತು ಒಳ್ಳೆಯ ನೀತಿತತ್ತಗ್ವಳನ್ನು ಪ್ರವರ್ಧಿಸುತ್ತಾರೆ. ಅವರು ನ್ಯಾಯನಿಷ್ಠ ಮತ್ತು ಪ್ರಾಮಾಣಿಕ ನಾಗರಿಕರಾಗಿದ್ದಾರೆ. ಯಾವುದೇ ರಾಷ್ಟ್ರದಲ್ಲಿ ಯೆಹೋವನ ಸಾಕ್ಷಿಗಳು ಸರಕಾರವನ್ನು ಉರುಳಿಸುವಂತಹ ಯಾವುದೇ ವಿಧದ ಚಟುವಟಿಕೆಯಲ್ಲಿ ಎಂದೂ ಭಾಗವಹಿಸಿಲ್ಲ ಮತ್ತು ಸಿಂಗಾಪುರದಲ್ಲಿ ಅವರ ಉಪಸ್ಥಿತಿಯು ನಿಮ್ಮ ದೇಶದ ರಾಷ್ಟ್ರೀಯ ಅಭಿರುಚಿಗಳಿಗೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲವೆಂದು ನಾನು ನಿಮಗೆ ಆಶ್ವಾಸನೆಯನ್ನು ನೀಡಬಲ್ಲೆ.
ಇತ್ತೀಚಿನ ವಾರ್ತಾಮಾಧ್ಯಮ ವರದಿಗಳಿಂದಾಗಿ, ಸಿಂಗಾಪುರದಲ್ಲಿರುವ ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ನಿಮ್ಮ ಸರಕಾರದಿಂದ ಕೈಕೊಳ್ಳಲ್ಪಟ್ಟಿರುವ ತಡೆಗಟ್ಟುವ ಕ್ರಮಗಳು ಈಗ ಸಾಮಾನ್ಯವಾಗಿ ಪ್ರಸಿದ್ಧವಾಗಿವೆ. ಇದು ವಿಶೇಷವಾಗಿ ಲೋಕದ ಸುತ್ತಲಿರುವ ಅವರ 1.2 ಕೋಟಿ ಒಡನಾಡಿಗಳಿಗೆ ಚಿಂತೆಯ ವಿಷಯವಾಗಿದೆ. ಪರಿಸ್ಥಿತಿಯನ್ನು ಬಗೆಹರಿಸಲು ಮತ್ತು ನಿಮ್ಮ ದೇಶದಲ್ಲಿ ಯೆಹೋವನ ಸಾಕ್ಷಿಗಳಿಗೆ ಸಂವಿಧಾನದಿಂದ ಖಾತರಿಗೊಳಿಸಲ್ಪಟ್ಟಿರುವ ಆರಾಧನಾ ಮತ್ತು ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ದಯಪಾಲಿಸಲು, ನಿಮ್ಮ ಅಧಿಕಾರ ಹುದ್ದೆಯನ್ನು ಸದುಪಯೋಗಿಸುವಂತೆ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
ಯೆಹೋವನ ಸಾಕ್ಷಿಗಳ ಪ್ರತಿನಿಧಿಗಳೊಂದಿಗೆ ಒಂದು ಮುಚ್ಚುಮರೆಯಿಲ್ಲದ ಚರ್ಚೆಯು, ನಮ್ಮ ಸಂಸ್ಥೆ ಮತ್ತು ಚಟುವಟಿಕೆಯ ಕುರಿತಾಗಿ ಯಾವುದೇ ತಪ್ಪಭಿಪ್ರಾಯಗಳನ್ನು ತೊಲಗಿಸಲು ಸಹಾಯ ಮಾಡುವುದು ಮತ್ತು ಸಿಂಗಾಪುರದ ಸರಕಾರವು ಯೆಹೋವನ ಸಾಕ್ಷಿಗಳ ಕುರಿತಾಗಿ ಭಯಪಡಲು ಯಾವುದೇ ಕಾರಣವಿಲ್ಲವೆಂದು ನಿಮಗೆ ಪುನರಾಶ್ವಾಸನೆ ನೀಡುವುದೆಂದು ನಾನು ನಂಬುತ್ತೇನೆ. ಅಂತಹ ಒಂದು ಕೂಟಕ್ಕಾಗಿ ಏರ್ಪಾಡನ್ನು ಮಾಡಲು ನಾನು ಸಂತೋಷಿತನಾಗಿರುವೆ.
ನಿಮ್ಮ ಉತ್ತರವನ್ನು ನಾನು ಎದುರುನೋಡುತ್ತೇನೆ.
ಇಂತಿ ಗೌರವ ತೋರಿಸುವ,
ಮಿಲ್ಟನ್ ಜಿ. ಹೆನ್ಶಲ್
ಅಧ್ಯಕ್ಷರು
[ಪುಟ 31 ರಲ್ಲಿರುವ ಚಿತ್ರ ಕೃಪೆ]
Nik Wheeler/H. Armstrong Roberts