ನಿಮ್ಮ ತುರ್ತುಪ್ರಜ್ಞೆಯನ್ನು ಕಾಪಾಡಿರಿ
ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುತ್ತಾ ಮುಂದುವರಿಯಲು ಇರುವ ಒಂದು ಖಾತರಿಯಾದ ದೇವಾನುಮೋದಿತ ದಾರಿಯು ಯಾವುದು? ನಮ್ಮ ಹೃದಯಾಂತರಾಳಗಳಲ್ಲಿ ಒಂದು ಅಪ್ಪಟವಾದ ತುರ್ತುಪ್ರಜ್ಞೆಯನ್ನು ಹೊಂದಿರುವುದೇ. ದೇವರನ್ನು ಪೂರ್ಣಪ್ರಾಣದ ರೀತಿಯಲ್ಲಿ ಸೇವಿಸುವುದೆಂದರೆ ನಮ್ಮ ಇಡೀ ಅಸ್ತಿತ್ವದಿಂದ ಸೇವಿಸುವುದೆಂದರ್ಥ, ಮತ್ತು ಇದಕ್ಕೆ ನಾವು ಮಾಡಬೇಕೆಂದು ಆತನು ಕೇಳುವ ಪ್ರತಿಯೊಂದು ವಿಷಯಕ್ಕೂ ಶ್ರದ್ಧಾಪೂರ್ವಕವಾದ ಪೂರ್ಣ ವಿಧೇಯತೆ ಅವಶ್ಯ.
ಪ್ರವಾದಿ ಮೋಶೆಯು ಇಸ್ರಾಯೇಲ್ ಜನಾಂಗಕ್ಕೆ ಉಪದೇಶಮಾಡಿದಾಗ ಈ ಆವಶ್ಯಕತೆಯನ್ನು ಒತ್ತಿಹೇಳಿದನು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಧರ್ಮೋಪದೇಶಕಾಂಡ 6:5) ಶತಮಾನಗಳ ಅನಂತರ ಅದೇ ಆಜ್ಞೆಯು ಕ್ರಿಸ್ತ ಯೇಸುವಿನಿಂದ ಪುನರಾವೃತ್ತಿಸಲ್ಪಟ್ಟಿತು: “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW] ನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಅಪೊಸ್ತಲ ಪೌಲನು ಎಫೆಸದವರಿಗೆ, ಅವರು “ದೇವರ ಚಿತ್ತವನ್ನು ಮನಃಪೂರ್ವಕವಾಗಿ” ಮಾಡಬೇಕೆಂದು ಹೇಳಿದಾಗ ಮತ್ತು “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತ [“ಯೆಹೋವ,” NW] ನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ” ಎಂದು ಕೊಲೊಸ್ಸೆಯವರನ್ನು ಪ್ರೋತ್ಸಾಹಿಸಿದಾಗ ಅದೇ ಆವಶ್ಯಕತೆಯ ಕುರಿತು ಪ್ರಸ್ತಾವಿಸಿದನು.—ಎಫೆಸ 6:6; ಕೊಲೊಸ್ಸೆ 3:23.
ಆದರೂ, ನಮ್ಮ ಆಂತರ್ಯದೊಳಗೆ ತುರ್ತಿನ ಅನಿಸಿಕೆಯು ಇಲ್ಲವಾದರೆ ಅಥವಾ ನಮ್ಮಲ್ಲಿ ಒಮ್ಮೆ ಇದ್ದ ತುರ್ತುಪ್ರಜ್ಞೆಯು ಈಗ ಮೊಂಡಾಗಿದ್ದರೆ—ಪ್ರಾಯಶಃ ಪೂರ್ತಿಯಾಗಿ ನಷ್ಟವಾಗಿರುವುದಾದರೆ— ದೇವರ ಸೇವೆಗೆ ನಮ್ಮ ಹೃದಯ ಮತ್ತು ಪ್ರಾಣವನ್ನು ಹಾಕುವುದು ಕಷ್ಟಕರ. ಇಂದು ನಾವು, ಮಾನವ ಇತಿಹಾಸದ ಇನ್ನಾವ ಅವಧಿಗೂ ಸಾಟಿಯಿಲ್ಲದ ತುರ್ತಿನ ಸಮಯದಲ್ಲಿ ಜೀವಿಸುತ್ತೇವೆ.
ತುರ್ತಿನ ನಿರ್ದಿಷ್ಟ ಅವಧಿಗಳು
ಕ್ರೈಸ್ತಪೂರ್ವ ಕಾಲಗಳಲ್ಲಿ ತುರ್ತಿನ ಅನೇಕ ಅವಧಿಗಳಿದ್ದವು. ನೋಹನ ದಿನ ಮತ್ತು ಸೋದೋಮ್ ಗೊಮೋರಗಳ ನಾಶನಕ್ಕೆ ನಡೆಸಿದ ಅವಧಿಯು ನಿಶ್ಚಯವಾಗಿಯೂ ನಿಜ ತುರ್ತಿನ ಸಮಯಗಳಾಗಿದ್ದವು. (2 ಪೇತ್ರ 2:5, 6; ಯೂದ 7) ಜಲಪ್ರಳಯ ಪೂರ್ವದ ವರುಷಗಳು ತುರ್ತಿನ ಚಟುವಟಿಕೆಯಿಂದ ತುಂಬಿಕೊಂಡಿದ್ದವು ಎಂಬುದು ನಿಸ್ಸಂದೇಹ. ಜಲಪ್ರಳಯವು ನಿಖರವಾಗಿ ಯಾವಾಗ ಆರಂಭವಾಗುವುದೆಂದು ನೋಹನಿಗೂ ಅವನ ಕುಟುಂಬಕ್ಕೂ ತಿಳಿದಿರದಿದ್ದರೂ, ಅವರ “ಭಯಭಕ್ತಿಯು” ಅವರು ಕಾಲಹರಣ ಮಾಡದೆ ಇದ್ದರೆಂಬುದಕ್ಕೆ ಭರವಸೆಕೊಟ್ಟಿದ್ದಿರಸಾಧ್ಯವಿದೆ.—ಇಬ್ರಿಯ 11:7.
ತತ್ಸಮಾನವಾಗಿ, ಸೋದೋಮ್ ಗೊಮೋರಗಳ ನಾಶನಕ್ಕೆ ಮೊದಲು, ದೇವದೂತರು ಲೋಟನನ್ನು “ತರ್ವೆಪಡಿಸಿ,” ಅವನಿಗೆ “ಓಡಿಹೋಗು, ಪ್ರಾಣವನ್ನು ಉಳಿಸಿಕೋ” ಎಂದು ಹೇಳಿದರು. (ಆದಿಕಾಂಡ 19:15, 17) ಹೌದು, ಆ ಸಂದರ್ಭದಲ್ಲಿ ಕೂಡ, ತುರ್ತು ನೀತಿವಂತ ಜೀವಗಳನ್ನು ರಕ್ಷಿಸಿತು. ಶತಮಾನಗಳಾನಂತರ, ಬಾಬೆಲಿನಲ್ಲಿದ್ದಂತಹ ಯೆಹೂದಿ ಕೈದಿಗಳಿಗೆ, “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ,” ಎಂದು ಎಚ್ಚರಿಕೆ ಕೊಡಲಾಯಿತು. (ಯೆಶಾಯ 52:11) ಸಾ.ಶ.ಪೂ. 537ರಲ್ಲಿ ಸುಮಾರು 2,00,000 ದೇಶಭ್ರಷ್ಟರು ಆ ತುರ್ತಿನ ಪ್ರವಾದನಾ ಆಜೆಗ್ಞೆ ವಿಧೇಯರಾಗುತ್ತಾ ಅವಸರದಿಂದ ಬಾಬೆಲನ್ನು ಬಿಟ್ಟು ಹೊರಟುಹೋದರು.
ಆ ಸನ್ನಿವೇಶಗಳಲ್ಲಿ ಪ್ರತಿಯೊಂದರಲ್ಲಿನ ತುರ್ತುಪ್ರಜ್ಞೆಯು, ತಾವು ತುರ್ತಿನ ಸಮಯಗಳಲ್ಲಿ ಜೀವಿಸುತ್ತಿದ್ದೇವೆಂದು ನೆನಸಿ, ಆ ಮನವರಿಕೆಯನ್ನು ಸಜೀವವಾಗಿಟ್ಟವರಿಂದ ಪೂರ್ಣಪ್ರಾಣದ ಸೇವೆಯಲ್ಲಿ ಪರಿಣಮಿಸಿತು.
ಕ್ರೈಸ್ತ ಸಮಯಗಳಲ್ಲಿ ತುರ್ತು
ತುರ್ತಿನ ಪ್ರತಿಧ್ವನಿಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳಾದ್ಯಂತವೂ ಕೇಳಸಾಧ್ಯವಿದೆ. “ನೋಡಿಕೊಳ್ಳಿರಿ,” “ಜಾಗರೂಕರಾಗಿರಿ,” “ಎಚ್ಚರವಾಗಿರಿ,” “ಸಿದ್ಧವಾಗಿರ್ರಿ,”—ಕ್ರಿಸ್ತ ಯೇಸು ತನ್ನ ಹಿಂಬಾಲಕರಲ್ಲಿ ಯೋಗ್ಯವಾದ ತುರ್ತುಪ್ರಜ್ಞೆಯನ್ನು ತುಂಬುವಂತೆ ಉಪಯೋಗಿಸಿದ ಪದಸರಣಿಗಳಿವು. (ಮತ್ತಾಯ 24:42-44; ಮಾರ್ಕ 13:32-37) ಇದಕ್ಕೆ ಕೂಡಿಸಿ, ಹತ್ತು ಮಂದಿ ಕನ್ಯೆಯರು, ಕೆಟ್ಟ ಆಳು, ತಲಾಂತುಗಳು, ಆಡುಗಳಿಂದ ಕುರಿಗಳನ್ನು ಪ್ರತ್ಯೇಕಿಸುವುದು—ಇವುಗಳ ಕುರಿತ ದೃಷ್ಟಾಂತಗಳೆಲ್ಲ ಮುಂಭಾವನೆಯನ್ನು ಉದ್ರೇಕಿಸಿ ಒಂದು ತುರ್ತಿನ ಅನಿಸಿಕೆಯನ್ನು ಹುಟ್ಟಿಸುತ್ತವೆ.—ಮತ್ತಾಯ 25:1, 14, 15, 32, 33.
ತುರ್ತಿನ ಕುರಿತು ಯೇಸುವು ಮಾತಾಡಿದ್ದು ಮಾತ್ರವಲ್ಲ, ತನ್ನ ಮಾತುಗಳ ನಿಜತ್ವವನ್ನು, ಕೆಲಸವನ್ನು ತುರ್ತಿನಿಂದ ಮಾಡುವ ಮೂಲಕ ಸಹ ಅವನು ಬೆಂಬಲಿಸಿದನು. ಒಂದು ಸಂದರ್ಭದಲ್ಲಿ ಜನರ ಗುಂಪುಗಳು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅವನು, “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ ಎಂದು ಹೇಳಿದನು.” (ಲೂಕ 4:42, 43) ಅಲ್ಲದೆ, “ಬೆಳೆಯು ಬಹಳ, ಕೆಲಸದವರು ಕೊಂಚ” ವಾಗಿರುವುದರಿಂದ, ಬೆಳೆಯ ಯಜಮಾನನು ಆತನ ಬೆಳೆಗೆ ಹೆಚ್ಚು ಮಂದಿ ಕೆಲಸಗಾರರನ್ನು ಕಳುಹಿಸಲು ಬೇಡಿಕೊಳ್ಳುವಂತೆ ಅವನು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು. (ಮತ್ತಾಯ 9:37, 38) ದೇವರಿಗೆ ಮಾಡುವ ಅಂತಹ ಒಂದು ಪ್ರಾರ್ಥನಾಪೂರ್ವಕವಾದ ಬಿನ್ನಹವು ತುರ್ತಿನ ಆತ್ಮವನ್ನು ವ್ಯಕ್ತಪಡಿಸುವುದು ನಿಶ್ಚಯ.
ಅಂತಹ ತುರ್ತು ಅನುಚಿತವಾಗಿತ್ತೊ?
ಮುಂತಿಳಿಸಲ್ಪಟ್ಟ “ಮಹಾ ಸಂಕಟವು” ಶತಮಾನಗಳು ಗತಿಸಿದ ಬಳಿಕ ಬರಲಿತ್ತಾದರೆ, ಯೇಸುವಿನ ಸಮಯದಲ್ಲಿ ಅಂತಹ ತುರ್ತುಪ್ರಜ್ಞೆಯ ಆವಶ್ಯಕತೆ ಏಕಿತ್ತು? ಎಂಬ ನ್ಯಾಯೋಚಿತವಾದ ಪ್ರಶ್ನೆಯನ್ನು ಕೆಲವರು ಎತ್ತಾರು.—ಮತ್ತಾಯ 24:21.
ಇದು, ತನ್ನ ಶಿಷ್ಯರು ಸಾರುವ ಮತ್ತು ಬೋಧಿಸುವ ಕಾರ್ಯದಲ್ಲಿ ಮಗ್ನರಾಗಿರುವಂತೆ ಮಾಡಲು ಯೇಸು ಉಪಯೋಗಿಸಿದ ಒಂದು ತಂತ್ರವಲ್ಲವೆಂದು ನಾವು ನಿಶ್ಚಯತೆಯಿಂದಿರಬಲ್ಲೆವು. ಅಲ್ಲ, ಕ್ರಿಸ್ತನಿಗೆ ತನ್ನ ಶಿಷ್ಯರೆಡೆಗಿದ್ದ ಪ್ರೀತಿ ಹಾಗೂ ಸಮಯದ ಕುರಿತ ಯೆಹೋವನ ವೀಕ್ಷಣದ ಕುರಿತು ಅವನಿಗಿದ್ದ ಪರಿಪೂರ್ಣ ಗ್ರಹಿಕೆಯು ತುರ್ತಿನ ಕುರಿತ ಅವನ ಸಲಹೆಯ ಆಧಾರವಾಗಿತ್ತು. ಹೌದು, ದೇವರ ಉದ್ದೇಶಕ್ಕನುಸಾರ ಯೆಹೋವನ ಚಿತ್ತವನ್ನು ನೆರವೇರಿಸಲು ತುರ್ತಿನಾತ್ಮದ ಆವಶ್ಯಕತೆಯನ್ನು ಕ್ರಿಸ್ತ ಯೇಸು ತಿಳಿದಿದ್ದನು. ಇದಲ್ಲದೆ, ತನ್ನ ಹಿಂದಿರುಗೋಣದ ತನಕ ಒಂದು ತುರ್ತಿನಾತ್ಮವನ್ನು ಕಾಪಾಡಿಕೊಳ್ಳುವುದರಿಂದಾಗಿ ತನ್ನ ಶಿಷ್ಯರು ಆತ್ಮಿಕವಾಗಿ ಪ್ರಯೋಜನ ಹೊಂದುವರೆಂದು ಅವನು ತಿಳಿದಿದ್ದನು.
ಲೋಕವ್ಯಾಪಕವಾದ ಸಾಕ್ಷಿ ಕೆಲಸವೊಂದನ್ನು ಸಾಧಿಸಲಿಕ್ಕಿತ್ತು ಮತ್ತು ಒಂದು ಪರಿಮಿತ ಸಮಯದೊಳಗೆ ಅದನ್ನು ಮಾಡಬೇಕಿತ್ತು ಎಂಬುದನ್ನು ಯೇಸು ಕ್ರಿಸ್ತನು ಸ್ಪಷ್ಟವಾಗಿಗಿ ಸೂಚಿಸಿದ್ದನು. (ಮತ್ತಾಯ 24:14; ಮಾರ್ಕ 13:10) ಈ ನೇಮಕದ ಪ್ರಗತಿಪರವಾದ ಹಂತಗಳು ಆ ಕೆಲಸವು ತೆರೆದಂತೆ ಮಾತ್ರ ಪ್ರಕಟವಾದವು. ಆದರೆ ಪ್ರತಿಯೊಂದು ಹೆಜ್ಜೆಯನ್ನು ನೆರವೇರಿಸಲು ತುರ್ತಿನ ಆವಶ್ಯಕತೆಯಿತ್ತು. “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು,” ಎಂದು ಯೇಸು ಹೇಳಿದಾಗ ಈ ನೇಮಕದ ಪ್ರಗತಿಯನ್ನು ಆತನು ಸೂಚಿಸಿದನು. (ಅ. ಕೃತ್ಯಗಳು 1:8) ಮತ್ತು ಸದ್ಯದ ತನಕವೂ ಆ ನೇಮಕವು ವಿಶದವಾಗಿರುವುದು ಹಾಗೆಯೇ. ಇದು ದೇವರ ಸೇವಕರಿಗೆ ದಾರಿಯಲ್ಲಿ ಕೆಲವು ಆಶ್ಚರ್ಯಗಳನ್ನು ತಂದೊಡ್ಡಿ, ಕೆಲವೊಮ್ಮೆ ಅರ್ಥಗ್ರಹಿಸುವಿಕೆಯಲ್ಲಿ ಅವರು ಹೊಂದಿಕೊಳ್ಳುವಂತೆ ಅವಶ್ಯಪಡಿಸಿದೆ.
ಕ್ರೈಸ್ತ ತುರ್ತಿನ ಆತ್ಮವು ಯೆಹೋವನ ಉದ್ದೇಶಗಳನ್ನು ನಿರ್ವಹಿಸಲು ಸಹಾಯ ಮಾಡಿದೆ. ಕ್ರಿಸ್ತನ ಶಿಷ್ಯರು ತಮ್ಮ ನೇಮಕಗಳ ಪ್ರಗತಿಯನ್ನು, ಯೆಹೋವನ ಗುರಿತಪ್ಪದ ವೇಳಾಪಟ್ಟಿಗನುಸಾರವಾಗಿ ನಿರ್ವಹಿಸುವಂತೆ ಇದು ಸಹಾಯ ಮಾಡಿದೆ. ಮತ್ತು ಇಂದು, ಸುಮಾರು 2,000 ವರುಷಗಳನ್ನು ನಾವು ಹಿಂದೆ ತಿರುಗಿ ನೋಡುವಾಗ, ನಾವು ಆ ದೈವಿಕ ವೇಳಾಪಟ್ಟಿಯನ್ನು ಹೆಚ್ಚು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ.
ಯಾವಾಗ ಇಸ್ರಾಯೇಲಿನ ಕಡೆಗಿದ್ದ ವಿಶೇಷ ಅನುಗ್ರಹವು ಅಂತ್ಯಗೊಂಡಿತೊ, ಆ ಸಾ.ಶ. 36ಕ್ಕೆ ಮೊದಲು, ಯೆರೂಸಲೇಮ್, ಯೂದಾಯ, ಸಮಾರ್ಯದಲ್ಲಿ ಮತ್ತು ಚದರಿದ್ದ ಯೆಹೂದ್ಯರಿಗೆ ಪರಿಷ್ಕಾರವಾದ ಸಾಕ್ಷಿಯನ್ನು ಕೊಡಲು ಕ್ರೈಸ್ತ ತುರ್ತು ಸಹಾಯ ಮಾಡಿತು. (ದಾನಿಯೇಲ 9:27; ಅ. ಕೃತ್ಯಗಳು 2:46, 47) ತದ್ರೀತಿ, ಆದಿ ಸಭೆಯು ಯೆಹೂದ್ಯರಿಗೆ, ಅವರ ವ್ಯವಸ್ಥೆಯ ಬೇಗನೆ ಅಂತ್ಯಗೊಳ್ಳುವುದೆಂಬ ಸ್ಪಷ್ಟವಾಗಿದ ಎಚ್ಚರಿಕೆಯನ್ನು ಕೊಡುವುದರಲ್ಲಿ ಕ್ರೈಸ್ತ ತುರ್ತು ನೆರವಾಯಿತು. (ಲೂಕ 19:43, 44; ಕೊಲೊಸ್ಸೆ 1:5, 6, 23) ಮತ್ತು ಅದು ಅನಿರೀಕ್ಷಿತವಾಗಿ ಸಾ.ಶ. 70 ರಲ್ಲಿ ಅಂತ್ಯಗೊಂಡಾಗ, ಕ್ರಿಸ್ತನ ಒಂದನೆಯ ಶತಮಾನದ ಸಾಕ್ಷಿಗಳು, ಮುಂತಿಳಿಸಲ್ಪಟ್ಟಿದ್ದ ಧರ್ಮಭ್ರಷ್ಟತೆಯು ತನ್ನ ರೋಗಸೂಚಕ ಮುಸುಕನ್ನು ಹರಡುವ ಮೊದಲು ಸ್ವರ್ಗೀಯ ನಿರೀಕ್ಷೆಯನ್ನು ಅನೇಕರಿಗೆ ಘೋಷಿಸುವಂತೆ ಸಹಾಯ ನೀಡಿತು. (2 ಥೆಸಲೊನೀಕ 2:3; 2 ತಿಮೊಥೆಯ 4:2) ಬಳಿಕ, ಅಂಧಕಾರ ಯುಗಗಳ ಶತಮಾನಗಳಲ್ಲಿ, ಕ್ರಿಸ್ತ ಯೇಸುವು ಮುಂತಿಳಿಸಿದ್ದಂತೆ, ಕೆಲವೇ ಗೋದಿಸದೃಶ ಕ್ರೈಸ್ತರು ರಾಜ್ಯ ನಿರೀಕ್ಷೆಯನ್ನು ಸಜೀವವಾಗಿಟ್ಟರು. (ಮತ್ತಾಯ 13:28-30) ಅಂತಿಮವಾಗಿ, ಯೆಹೋವನು ತನ್ನ ನಿಯಮಿತ ಸಮಯದಲ್ಲಿ, ಈ ಅಂತಿಮ ಸಂತತಿಯಲ್ಲಿ ಬದುಕುವವರಿಗಾಗಿರುವ ತನ್ನ ನ್ಯಾಯತೀರ್ಪಿನ ತುರ್ತಿನ ವಾರ್ತೆಯಿಂದ ಪ್ರಚೋದಿಸಲ್ಪಟ್ಟ ಹುರುಪಿನ, ಆಧುನಿಕ ದಿನದ ಸಭೆಯನ್ನು ಎಬ್ಬಿಸಿದನು.—ಮತ್ತಾಯ 24:34.
ಪೂರ್ವಕಾಲದ ದಾನಿಯೇಲನಂತೆ, ಆಧುನಿಕ ದಿನದ ದೇವರ ನಂಬಿಗಸ್ತ ಸಾಕ್ಷಿಗಳಿಗೆ, ಯೆಹೋವನನ್ನು, “ನೀನು ಏನು ಮಾಡುತ್ತೀ?” ಎಂಬ ಪ್ರಶ್ನೆಯನ್ನು ಕೇಳುವ ಸಾಹಸವು ಎಂದಿಗೂ ಇರುವುದಿಲ್ಲ. (ದಾನಿಯೇಲ 4:35) ಯೆಹೋವನಿಗೆ ತನ್ನ ಕೆಲಸವನ್ನು ಪಟ್ಟಿಗನುಸಾರವಾಗಿ ಮಾಡಿ ಮುಗಿಸಲು ನಿಖರವಾಗಿ ಏನು ಅಗತ್ಯವಿದೆಯೆಂದು ಗೊತ್ತಿದೆಯೆಂಬ ಭರವಸೆ ಅವರಿಗಿದೆ. ಆದಕಾರಣ, ವಿಷಯಗಳನ್ನು ಏರ್ಪಡಿಸುವ ಯೆಹೋವನ ವಿಧಾನವನ್ನು ಪ್ರಶ್ನಿಸುವ ಬದಲು, ಈ ಪ್ರಾಮುಖ್ಯ ಸಮಯಗಳಲ್ಲಿ ದೇವರು ತನ್ನ ಸಂಗಡ ಕೆಲಸ ಮಾಡುವ ಸುಯೋಗವನ್ನು ಅವರಿಗೆ ಕೊಟ್ಟದ್ದಕ್ಕಾಗಿ ಅವರು ಹರ್ಷಿಸುತ್ತಾರೆ.—1 ಕೊರಿಂಥ 3:9.
ತುರ್ತಿಗೆ ಇನ್ನೂ ಹೆಚ್ಚಿನ ಒಂದು ಪ್ರೋತ್ಸಾಹನೆ
ತುರ್ತಿಗಿರುವ ಇನ್ನೊಂದು ಕಾರಣವು, ಮಹಾ ಸಂಕಟದ ಹಠಾತ್ತಾದ ತಲೆದೋರುವಿಕೆಯ ನಿಖರವಾದ ದಿನ ಮತ್ತು ತಾಸು ಇದೇ ಎಂದು ತೋರಿಸಲು ನಮಗಿರುವ ಅಸಾಮರ್ಥ್ಯವೇ. ಆ ಸಂದಿಗ್ಧ ಸಂಭವದ ಪೂರ್ವನಿರ್ಧರಿತ ದಿನ ಮತ್ತು ತಾಸು ಭೂಮಿಯಲ್ಲಿರುವ ಯಾವನಿಗೂ ತಿಳಿಯದೆಂಬುದರ ಕುರಿತು ಕ್ರಿಸ್ತ ಯೇಸುವಿಗೆ ಖಂಡಿತವಿತ್ತು. (ಮತ್ತಾಯ 24:36) ಇನ್ನೊಂದು ಸಂದರ್ಭದಲ್ಲಿ ತವಕದಿಂದಿದ್ದ ತನ್ನ ಅಪೊಸ್ತಲರಿಗೆ ಅವನಂದದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” (ಅ. ಕೃತ್ಯಗಳು 1:7) ಹೌದು, ಫಲಿತಾಂಶವು ಸ್ಪಷ್ಟವಾಗಿಗಿದ್ದರೂ ವಿವರಗಳನ್ನೆಲ್ಲ ತಿಳಿಯುವುದು ನಮಗೆ ಸೇರಿದ್ದಾಗಿಲ್ಲ.
ಅಪೊಸ್ತಲ ಪೌಲನಿಗೆ ತುರ್ತಿನ ವಿಷಯದಲ್ಲಿ ಸರಿಯಾದ ಮನೋಭಾವವಿತ್ತು. ಅವನು ಥೆಸಲೊನೀಕದವರಿಗೆ ಕ್ರಿಸ್ತನ ಸಾನ್ನಿಧ್ಯದ ಕುರಿತು ಬರೆದಾಗ ಪ್ರಾಯಶಃ ಅವನ ಮನಸ್ಸಿನಲ್ಲಿ ಯೇಸುವಿನ ಈ ಮಾತುಗಳಿದ್ದವು: “ಸಹೋದರರೇ, ಈ ಸಂಗತಿಗಳು ನಡೆಯಬೇಕಾದ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವದು ಅವಶ್ಯವಿಲ್ಲ.” (1 ಥೆಸಲೊನೀಕ 5:1) ಅವನು ಈ ಪತ್ರವನ್ನು, “ನೀವು . . . ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು,” ಎಂದು ಯೇಸು ಹೇಳಿ ಸುಮಾರು 17 ವರ್ಷಗಳ ಬಳಿಕ ಬರೆದನು. (ಅ. ಕೃತ್ಯಗಳು 1:8) ಆ ಸಮಯಗಳಲ್ಲಿ ಅದಕ್ಕಿಂತ ಹೆಚ್ಚಿನದ್ದೇನನ್ನೂ ಬರೆಯಸಾಧ್ಯವಿರಲಿಲ್ಲ, ಏಕೆಂದರೆ ಹೆಚ್ಚಿನದ್ದೇನೂ ಪ್ರಕಟಗೊಂಡಿರಲಿಲ್ಲ. ಹಾಗಿದ್ದರೂ ಯೆಹೋವನ ದಿನವು, “ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ,” ಕ್ರೈಸ್ತರು ತುರ್ತಿನಿಂದ ಇನ್ನೂ ಸಾರುತ್ತಿರುವಾಗ ಖಂಡಿತವಾಗಿ ಬರುವುದೆಂದು ಅವರು ಭರವಸದಿಂದಿರಸಾಧ್ಯವಿತ್ತು.—1 ಥೆಸಲೊನೀಕ 5:2.
ಈ ಮಾತುಗಳು ಮನಸ್ಸಿನಲ್ಲಿದ್ದವರಾಗಿ, ಒಂದನೆಯ ಶತಮಾನದ ಕ್ರೈಸ್ತರು, ಯೆಹೋವನ ದಿನವು ಶತಮಾನಗಳಷ್ಟು ದೂರದಲ್ಲಿದೆಯೆಂದು ನೆನಸಿದರೆಂಬುದು ಅಸಂಭವನೀಯ. ನಿಜ, ದೂರದ ದೇಶಕ್ಕೆ ಹೋದ ಒಬ್ಬ ಅರಸನ ಮತ್ತು ಪರದೇಶಕ್ಕೆ ಹೋದ ಒಬ್ಬ ಮನುಷ್ಯನ ಕುರಿತ ಯೇಸುವಿನ ದೃಷ್ಟಾಂತಗಳ ವಿಷಯ ಅವರು ಅರಿತಿದ್ದರು. ಆ ಅರಸನು “ಆ ಮೇಲೆ” ಹಿಂದಿರುಗುವನೆಂದೂ ಆ ಪ್ರಯಾಣಿಕನು, “ಬಹುಕಾಲದ ಮೇಲೆ” ಬರುವನೆಂದೂ ಅವರು ತಿಳಿದಿದ್ದರು. ಆದರೆ “ಆ ಮೇಲೆ” ಎಂದರೆ ಯಾವಾಗ? ಮತ್ತು “ಬಹುಕಾಲದ ಮೇಲೆ” ಎಂಬುದರ ಅರ್ಥವೇನು? ಹತ್ತು ವರುಷಗಳೊ? ಇಪ್ಪತ್ತು ವರುಷಗಳೊ? ಐವತ್ತು ವರುಷಗಳೊ? ಅಥವಾ ಇನ್ನೂ ಹೆಚ್ಚು ದೀರ್ಘವೊ? ಎಂಬ ಪ್ರಶ್ನೆಗಳ ಕುರಿತು ಅವರು ತಬ್ಬಿಬ್ಬಾಗಿದ್ದರೆಂಬುದು ನಿಸ್ಸಂದೇಹ. (ಲೂಕ 19:12, 15; ಮತ್ತಾಯ 25:14, 19) ಯೇಸುವಿನ ಈ ಮಾತುಗಳು ಅವರ ಕಿವಿಗಳಲ್ಲಿ ಘಣಘಣಿಸುತ್ತಾ ಮುಂದುವರಿಯಲಿದ್ದವು: “ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಲೂಕ 12:40.
ತುರ್ತಿನ ಸಕಾರಾತ್ಮಕ ಪರಿಣಾಮ
ಹೌದು, ಒಂದನೆಯ ಶತಮಾನದ ಕ್ರೈಸ್ತರ ಮೇಲೆ ಆ ದೇವೋತ್ತೇಜಿತ ತುರ್ತುಪ್ರಜ್ಞೆಯು ಅದ್ಭುತಕರವಾಗಿ ಪ್ರೋತ್ಸಾಹಕರವಾದ ಪರಿಣಾಮವನ್ನು ಮಾಡಿ, ಸರ್ವಪ್ರಧಾನವಾದ ಸಾರುವ ಮತ್ತು ಬೋಧಿಸುವ ಕೆಲಸದಲ್ಲಿ ಅವರು ಮಗ್ನರಾಗಿರುವಂತೆ ಸಹಾಯ ಮಾಡಿತು. ಇಂದು ಅನೇಕ ವಿಧಗಳಲ್ಲಿ ಅದು ನಮ್ಮನ್ನು ಪ್ರೋತ್ಸಾಹಿಸುತ್ತಾ ಮುಂದುವರಿಯುತ್ತದೆ. ಅದು ನಮ್ಮನ್ನು ಸ್ವಸಂತೃಪ್ತರಾಗುವುದರಿಂದ ಅಥವಾ ‘ಒಳ್ಳೆಯದನ್ನು ಮಾಡುವುದರಲ್ಲಿ ಬಳಲುವುದರಿಂದ’ ತಡೆಯುತ್ತದೆ. (ಗಲಾತ್ಯ 6:9, ಕಿಂಗ್ ಜೇಮ್ಸ್ ವರ್ಷನ್) ಅದು ಲೋಕದಲ್ಲಿ ಮತ್ತು ಅದರ ವಂಚನೆಯ ಪ್ರಾಪಂಚಿಕತೆಯಲ್ಲಿ ನಾವು ಮಿತಿಮೀರಿ ಸಿಕ್ಕಿಕೊಳ್ಳುವುದರಿಂದ ನಮ್ಮನ್ನು ಕಾಪಾಡುತ್ತದೆ. “ವಾಸ್ತವವಾದ ಜೀವ”ದ ಮೇಲೆ ಅದು ನಮ್ಮ ಮನಸ್ಸನ್ನಿರಿಸುತ್ತದೆ. (1 ತಿಮೊಥೆಯ 6:19) ತನ್ನ ಶಿಷ್ಯರು “ತೋಳಗಳ ನಡುವೆ ಕುರಿಗಳ” ಹಾಗಿರುವರೆಂದು ಕರ್ತನಾದ ಯೇಸು ಹೇಳಿದನು, ಮತ್ತು ಲೋಕದೊಂದಿಗೆ ಹೋರಾಡಲು ನಮಗೆ ದೃಢನಿಶ್ಚಯತೆಯ ಸ್ಥಿರವಾದ ವೀಕ್ಷಣವು ಅಗತ್ಯವೆಂದು ಅವನಿಗೆ ತಿಳಿದಿತ್ತು. ಹೌದು, ನಮ್ಮ ಕ್ರಿಸ್ತೀಯ ತುರ್ತುಪ್ರಜ್ಞೆಯಿಂದ ನಾವು ಕಾಪಾಡಲ್ಪಟ್ಟಿದ್ದೇವೆ, ರಕ್ಷಿಸಲ್ಪಟ್ಟಿದ್ದೇವೆ.—ಮತ್ತಾಯ 10:16.
ಯೆಹೋವನು ತನ್ನ ಅಪಾರ ವಿವೇಕದಿಂದ, ತನ್ನ ಸೇವಕರು ತಮ್ಮ ತುರ್ತುಪ್ರಜ್ಞೆಯನ್ನು ಸಜೀವವಾಗಿಡುವಂತೆ ಅವರಿಗೆ ಯಾವಾಗಲೂ ಸಾಕಷ್ಟು ಮಾಹಿತಿಯನ್ನು ಕೊಟ್ಟಿದ್ದಾನೆ. ನಾವು ಈ ಭ್ರಷ್ಟ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಇದ್ದೇವೆಂದು ಆತನು ನಮಗೆ ದಯೆಯಿಂದ ಆಶ್ವಾಸನೆ ನೀಡಿದ್ದಾನೆ. (2 ತಿಮೊಥೆಯ 3:1) ನಾವು ಜೀವಿಸುವ ಈ ಸಂತತಿಯು, ಯಾವುದರ ಪರಾಕಾಷ್ಠೆಯು ಹರ್ಮಗೆದೋನ್ನಲ್ಲಾಗುತ್ತದೋ, ಆ ಮಹಾ ಸಂಕಟದಲ್ಲಿ ದಾಟಿಹೋಗುವ ತನಕ ನಾವು ಬೆಳಕುಕೊಡುವವರಾಗಿ ಬೆಳಗಬೇಕೆಂದು ನಮಗೆ ಸತತವಾಗಿ ಮರುಜ್ಞಾಪನವು ನೀಡಲ್ಪಡುತ್ತಾ ಇದೆ.—ಫಿಲಿಪ್ಪಿ 2:15; ಪ್ರಕಟನೆ 7:14; 16:14, 16.
ಹೌದು, ದೈವಭಕ್ತಿಯುಳ್ಳ ತುರ್ತುಪ್ರಜ್ಞೆಯು ಯೆಹೋವನಿಗೆ ಪೂರ್ಣಪ್ರಾಣದ ಸೇವೆಯ ಒಂದು ಆವಶ್ಯಕ ಭಾಗ ಆಗಿದೆ. ದೇವರ ಸೇವಕರು, “ಮನಗುಂದಿದವರಾಗಿ ಬೇಸರ” ಗೊಳ್ಳುವಂತೆ ಮಾಡುವ ಸೈತಾನನ ಪ್ರಯತ್ನಗಳನ್ನು ಅದು ದೂರಗೊಳಿಸಿ, ಅವಕ್ಕೆ ಭಂಗತರಲು ಸಹಾಯ ಮಾಡುತ್ತದೆ. (ಇಬ್ರಿಯ 12:3) ಶಾಶ್ವತತೆಯಲ್ಲೆಲ್ಲ, ಪೂರ್ಣಪ್ರಾಣದ ಭಕ್ತಿಯು, ಯೆಹೋವನ ಸೇವಕರು ಆತನಿಗೆ ವಿಧೇಯರಾಗುವಂತೆ ಮಾಡುವುದು, ಆದರೆ ಈಗ, ಅರ್ಮಗೆದೋನ್ ಪೂರ್ವದ ಈ ದಿನಗಳಲ್ಲಿ, ಆಳವಾದ ಅಪ್ಪಟ ತುರ್ತುಪ್ರಜ್ಞೆಯು ನಮ್ಮ ಪೂರ್ಣಪ್ರಾಣದ ಭಕ್ತಿಯ ಆವಶ್ಯಕ ಭಾಗವಾಗಿದೆ.
ನಾವು ಅಪೊಸ್ತಲ ಯೋಹಾನನ ಮಾತುಗಳನ್ನು ಪ್ರತಿಧ್ವನಿಸಿ, “ಹಾಗೆಯೇ ಆಗಲಿ, ಕರ್ತನಾದ ಯೇಸುವೇ, ಬಾ” ಎಂದು ಹೇಳುತ್ತಾ ಮುಂದುವರಿಯುವಾಗ ನಮ್ಮ ದೇವರಾದ ಯೆಹೋವನು ನಮ್ಮ ತುರ್ತುಪ್ರಜ್ಞೆಯನ್ನು ಕಾಪಾಡುವಂತೆ ನಮ್ಮೆಲ್ಲರಿಗೆ ಸಹಾಯ ಮಾಡುವಂತಾಗಲಿ.—ಪ್ರಕಟನೆ 22:20.