“ಯಾವ ಗಾಳಿಯೂ ತಕ್ಕದಾದ್ದ ಗಾಳಿಯಾಗಿಲ್ಲ” ದಿರುವಾಗ
“ಒಬ್ಬ ಮನುಷ್ಯನಿಗೆ ಯಾವ ಬಂದರು ತನ್ನ ಗಮ್ಯಸ್ಥಾನವಾಗಿದೆಯೆಂದು ತಿಳಿಯದಿರುವಾಗ, ಯಾವ ಗಾಳಿಯೂ ತಕ್ಕದಾದ್ದ ಗಾಳಿಯಾಗಿಲ್ಲ.” ಪ್ರಥಮ ಶತಮಾನದ ರೋಮನ್ ತತ್ವಜ್ಞಾನಿ ಲೂಕ್ಯುಸ್ ಅನೈಯುಸ್ ಸೇನಿಕಗೆ ಸೇರಿದ್ದೆಂದು ಹೇಳಲಾಗುವ ಈ ಮಾತುಗಳು, ಬಹು ಸಮಯದಿಂದ ಅಂಗೀಕರಿಸಲ್ಪಟ್ಟ ಒಂದು ಸತ್ಯವನ್ನು ಎತ್ತಿತೋರಿಸುತ್ತವೆ: ಜೀವನಕ್ಕೆ ಮಾರ್ಗದರ್ಶನವಿರಲು, ಗುರಿಗಳು ಅತ್ಯಾವಶ್ಯಕ.
ಆದಾಗಲೂ, ಜೀವನವು ಹೆಚ್ಚಾಗಿ ಒಂದು ಗುರಿಯಿಲ್ಲದ ದಿಕ್ಚ್ಯುತಿಯಾಗಿದೆ. ಅನೇಕರು ದಿನನಿತ್ಯ ಜೀವನದ ಬಂಡೆಗಳು ಮತ್ತು ಸುಳಿಗಳನ್ನು ಹೋಗಲಾಡಿಸುವುದರಲ್ಲಿ ಮಾತ್ರ ತೃಪ್ತರಾಗಿದ್ದಾರೆ. ಯಾವುದೇ ನಿರ್ಧರಿತ ಸ್ಥಾನವಿಲ್ಲದೆ, ಅವರು “ಒಂದು ಕ್ಷಣದಲ್ಲಿ ಮುಂದಕ್ಕೆ ಮತ್ತು ಇನ್ನೊಂದು ಕ್ಷಣದಲ್ಲಿ ಹಿಂದಕ್ಕೆ ಒಯ್ಯಲ್ಪಡುವ” ಅಲೆಗಳಂತೆ ಆಗುತ್ತಾರೆ. (ಯಾಕೋಬ 1:6, “ಫಿಲಿಪ್ಸ್”) ಅಂತಹ ಜನರಿಗೆ “ಯಾವ ಗಾಳಿಯೂ ತಕ್ಕದಾದ್ದ ಗಾಳಿ” ಆಗಿರುವುದಿಲ್ಲ.
ಉದ್ದೇಶಾಭಿಮುಖರಾಗಿದವ್ದರ ಮಾದರಿಗಳನ್ನು ಬೈಬಲ್ ಒದಗಿಸುತ್ತದೆ. ಹೀಗೆ ಅವರು ಇಂದು ಕ್ರೈಸ್ತರಿಗೆ ಆದರ್ಶ ಮಾದರಿಗಳೋಪಾದಿ ಕಾರ್ಯನಡಿಸುತ್ತಾರೆ. ಮೋಶೆಯು “ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.” (ಇಬ್ರಿಯ 11:26) ಪೌಲನು ಬರೆದುದು: “ಬಹುಮಾನವನ್ನು ಗಳಿಸಲಿಕ್ಕೋಸ್ಕರ ನಾನು ಗುರಿಯ ಕಡೆಗೆ ನೇರವಾಗಿ ಓಡುತ್ತೇನೆ.” ಜೊತೆ ವಿಶ್ವಾಸಿಗಳು “ಇದೇ ರೀತಿಯ ಮನೋಭಾವವನ್ನು ಹೊಂದುವಂತೆ” ಅವನು ಉತ್ತೇಜಿಸಿದನು.—ಫಿಲಿಪ್ಪಿ 3:14, 15, “ಟುಡೇಸ್ ಇಂಗ್ಲಿಷ್ ವರ್ಷನ್.”
ಬೈಬಲಿನ ವಾಗ್ದಾನಗಳ ಮೇಲೆ ನಮ್ಮ ಕಣ್ಣುಗಳನ್ನು ತೀವ್ರಾಭಿಲಾಷೆಯಿಂದ ನೆಟ್ಟಿರುವದರೊಂದಿಗೆ, ಅಂತಹ ಉದ್ದೇಶಾಭಿಮುಖ ಪುರುಷರ ನಂಬಿಕೆಯನ್ನು ನಾವು ಅನುಕರಿಸೋಣ.—ಇಬ್ರಿಯ 13:7ನ್ನು ಹೋಲಿಸಿರಿ.