ಭಕ್ತಿಹೀನ ಸಂಪ್ರದಾಯಗಳನ್ನು ಎದುರಿಸಿರಿ
“ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು,” ಎಂದು ಹೇಳಿದನು ಯೇಸು ಕ್ರಿಸ್ತನು. (ಯೋಹಾನ 8:32) ಹೌದು, ಕ್ರೈಸ್ತತ್ವವು ಜನರನ್ನು ಬಿಡುಗಡೆ ಮಾಡುತ್ತದೆ—ಮೂಢನಂಬಿಕೆಗಳ ದಾಸ್ಯದಿಂದ ಬಿಡುಗಡೆ, ಸುಳ್ಳು ಬೋಧನೆಗಳ ಮತ್ತು ನಿರೀಕ್ಷೆಗಳ ನಂಬಿಕೆಯಿಂದ ಬಿಡುಗಡೆ, ನೀತಿಭ್ರಷ್ಟ ಪದ್ಧತಿಗಳ ಬಂಧನದಿಂದ ಬಿಡುಗಡೆ.
ಆದರೂ ಪುರಾತನ ಕಾಲದಂತೆ, ಕ್ರೈಸ್ತರು ಇಂದು ಹಿಂದಿನ ಸಂಪ್ರದಾಯಗಳಿಗೆ ಹಿಂದಿರುಗುವ ಒತ್ತಡವನ್ನು ಆಗಿಂದಾಗ್ಗೆ ಎದುರಿಸುತ್ತಾರೆ. (ಗಲಾತ್ಯ 4:9, 10) ಜನಪ್ರಿಯವಾದ ಪದ್ಧತಿಗಳೆಲ್ಲ ಹಾನಿಕರವೆಂದು ಇದರ ಅರ್ಥವಲ್ಲ. ಹಿತಕರವೂ ಉಪಯುಕ್ತವೂ ಆಗಿರುವ ಸ್ಥಳಿಕ ಪದ್ಧತಿಗಳನ್ನು ಪಾಲಿಸಲು ಕ್ರೈಸ್ತನೊಬ್ಬನು ಆರಿಸಿಕೊಳ್ಳಬಹುದು ನಿಶ್ಚಯ. ಆದರೆ ಪದ್ಧತಿಯು ದೇವರ ವಾಕ್ಯಕ್ಕೆ ವಿರುದ್ಧವಾಗಿರುವಾಗ, ಕ್ರೈಸ್ತರು ರಾಜಿಮಾಡಿಕೊಳ್ಳುವುದಿಲ್ಲ. ಯೆಹೋವನ ಸಾಕ್ಷಿಗಳು ಹೀಗೆ ಕ್ರಿಸ್ಮಸ್ ಆಚರಣೆಗಳಲ್ಲಿ, ಹುಟ್ಟುಹಬ್ಬಗಳಲ್ಲಿ, ಮತ್ತು ದೇವರ ವಾಕ್ಯಕ್ಕೆ ವಿರುದ್ಧವಾದ ಇತರ ಪದ್ಧತಿಗಳಲ್ಲಿ ಪಾಲಿಗರಾಗಲು ನಿರಾಕರಿಸುವುದಕ್ಕೆ ಖ್ಯಾತರಾಗಿದ್ದಾರೆ.
ಅವರ ಈ ಧೀರ ನಿಲುವು ಪರಿಚಯಸ್ಥರಿಂದ, ನೆರೆಯವರಿಂದ, ಮತ್ತು ಅವಿಶ್ವಾಸಿ ಸಂಬಂಧಿಕರಿಂದ ಬಹಳಷ್ಟು ಅಪಹಾಸ್ಯವನ್ನೂ ವಿರೋಧವನ್ನೂ ಆಗಿಂದಾಗ್ಗೆ ತಂದಿದೆ. ಇದು ಕೆಲವು ಆಫ್ರಿಕನ್ ದೇಶಗಳಲ್ಲಿ, ಎಲ್ಲಿ ಶವಸಂಸ್ಕಾರಗಳಲ್ಲಿ, ಮದುವೆಗಳಲ್ಲಿ, ಮತ್ತು ಜನನಗಳಲ್ಲಿ ವಿವಿಧ ಪ್ರಕಾರದ ಸಂಪ್ರದಾಯಗಳು ಸರ್ವಸಾಮಾನ್ಯವಾಗಿ ಆಚರಿಸಲ್ಪಡುತವ್ತೊ ಅಲ್ಲಿ, ವಿಶೇಷವಾಗಿ ನಿಜವಾಗಿದೆ. ಹೊಂದಿಕೊಳ್ಳಲು ಹಾಕಲ್ಪಡುವ ಒತ್ತಡಗಳು—ಹೆಚ್ಚಾಗಿ ಬೆದರಿಕೆಗಳು ಮತ್ತು ಹಿಂಸಾತ್ಮಕ ಕೃತ್ಯಗಳು ಸೇರಿ—ದುಸ್ಸಾಧ್ಯವಾಗಿರಬಲ್ಲವು. ಕ್ರೈಸ್ತರು ಅಲ್ಲಿ ಹೇಗೆ ದೃಢರಾಗಿ ನಿಲ್ಲಬಲ್ಲರು? ರಾಜಿಯಾಗುವ ಹೊರತು ಮುಕಾಬಿಲೆಯನ್ನು ವರ್ಜಿಸಸಾಧ್ಯವೊ? ಈ ಪ್ರಶ್ನೆಗೆ ಉತ್ತರವಾಗಿ, ಅಶಾಸ್ತ್ರೀಯ ಪದ್ಧತಿಗಳೊಂದಿಗೆ ನಂಬಿಗಸ್ತ ಕ್ರೈಸ್ತರು ಹೇಗೆ ವ್ಯವಹರಿಸಿದ್ದಾರೆಂಬುದನ್ನು ನಾವು ಪರೀಕ್ಷಿಸೋಣ.
ಮೂಢನಂಬಿಕೆಯ ಶವಸಂಸ್ಕಾರ ಪದ್ಧತಿಗಳು
ದಕ್ಷಿಣ ಆಫ್ರಿಕದಲ್ಲಿ ಶವಸಂಸ್ಕಾರಗಳು ಮತ್ತು ಹೂಣಿಡುವಿಕೆಗಳಿಗೆ ಸಂಬಂಧಿಸಿದ ಹಲವಾರು ಸಂಪ್ರದಾಯಗಳಿವೆ. ಶೋಕಿಸುವವರು ಸಾಮಾನ್ಯವಾಗಿ ಇಡೀ ರಾತ್ರಿಯನ್ನು—ಅಥವಾ ಹಲವಾರು ರಾತ್ರಿಗಳನ್ನು—ಎಲ್ಲಿ ಬೆಂಕಿಯನ್ನು ಸತತವಾಗಿ ಉರಿಸಲಾಗುತ್ತದೋ ಆ ಶೋಕದ ಮನೆಯಲ್ಲಿ ಕಳೆಯುತ್ತಾರೆ. ಶವಸಂಸ್ಕಾರ ಮುಗಿಯುವ ತನಕ ವಿಯೋಗಿಗಳಿಗೆ ಅಡಿಗೆ ಮಾಡಲು, ಕ್ಷೌರಮಾಡಲು, ಸ್ನಾನಮಾಡಲು ಕೂಡ ನಿಷೇಧವಿದೆ. ತದನಂತರ, ಮೂಲಿಕೆಗಳ ಒಂದು ವಿಶೇಷ ಮಿಶ್ರಣದಿಂದ ಅವರು ತಮ್ಮನ್ನು ತೊಳೆದುಕೊಳ್ಳಬೇಕು. ಅಂತಹ ಪದ್ಧತಿಗಳು ಕ್ರೈಸ್ತರಿಗೆ ಸ್ವೀಕರಣೀಯವೊ? ಇಲ್ಲ. ಅವೆಲ್ಲವೂ ಆತ್ಮದ ಅಮರತ್ವದಲ್ಲಿ ನಂಬಿಕೆಯನ್ನು ಮತ್ತು ಮೃತರ ಕುರಿತ ಅಸಹಜವಾದ ಭಯವನ್ನು ಪ್ರತಿಬಿಂಬಿಸುತ್ತವೆ.
ಪ್ರಸಂಗಿ 9:5 ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ. ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” ಈ ಸತ್ಯವನ್ನು ತಿಳಿಯುವುದು ಒಬ್ಬನನ್ನು ‘ಮೃತರ ಆತ್ಮಗಳ’ ಭಯದಿಂದ ಬಿಡುಗಡೆ ಮಾಡುತ್ತದೆ. ಆದರೆ ಕ್ರೈಸ್ತನು ಅಂತಹ ಪದ್ಧತಿಗಳಲ್ಲಿ ಭಾಗವಹಿಸುವಂತೆ ಅವನನ್ನು ಯಾ ಅವಳನ್ನು ಸದ್ಭಾವನೆಯ ಸಂಬಂಧಿಕರು ನಿರ್ಬಂಧಿಸುವಾಗ ಅವರೇನು ಮಾಡಬೇಕು?
ಯಾರ ತಂದೆ ತೀರಿಕೊಂಡನೋ ಆ ಆಫ್ರಿಕನ್ ಸಾಕ್ಷಿಯಾದ ಜೇನ್ ಎಂಬವಳ ಅನುಭವವನ್ನು ಗಮನಿಸಿರಿ. ಶವಸಂಸ್ಕಾರದ ಮನೆಗೆ ಬಂದಾಗ, ಅವಳೂ ಅವಳ ಇತರ ಕುಟುಂಬಸ್ಥರೂ ಮೃತನ ಪ್ರಾಣದ ಶಾಂತಿಗಾಗಿ ಹೆಣದ ಸುತ್ತಲೂ ಇಡೀ ರಾತ್ರಿ ಕುಣಿಯಬೇಕೆಂದು ಕೂಡಲೆ ಅವಳಿಗೆ ಹೇಳಲಾಯಿತು. “ಯೆಹೋವನ ಸಾಕ್ಷಿಯೋಪಾದಿ ನಾನು ಅಂತಹ ಪದ್ಧತಿಗಳಲ್ಲಿ ಭಾಗಿಯಾಗಲಾರೆ ಎಂದು ನಾನು ಅವರಿಗೆ ಹೇಳಿದೆ,” ಎನ್ನುತ್ತಾಳೆ ಜೇನ್. “ಆದರೂ, ಶವಸಂಸ್ಕಾರದ ಮರುದಿನ, ಮೃತನ ಪ್ರಾಣದ ವಿರುದ್ಧವಾಗಿ ವಿಯೋಗಿಗಳಿಗೆ ಹೆಚ್ಚಿನ ಸುರಕ್ಷೆ ನೀಡಲು ಅವರಿಗೆ ಸ್ನಾನಮಾಡಿಸಲಿದ್ದೇವೆಂದು ವೃದ್ಧ ಸಂಬಂಧಿಕರು ಹೇಳಿದರು. ನಾನು ಭಾಗವಹಿಸಲು ಪುನಃ ನಿರಾಕರಿಸಿದೆ. ಅದೇ ಸಮಯ ತಾಯಿಯವರನ್ನು ಒಂದು ಮನೆಯಲ್ಲಿ ಏಕಾಂತದಲಿಡ್ಲಲಾಗಿತ್ತು. ಅವರನ್ನು ನೋಡಲು ಬಯಸುವ ಯಾವನಾದರೂ ಆ ಉದ್ದೇಶಕ್ಕಾಗಿ ತಯಾರಿಸಿದ ಮದ್ಯವನ್ನು ಮೊದಲು ಕುಡಿಯಬೇಕಿತ್ತು.
“ಇದರಲ್ಲಿ ಯಾವುದರಲ್ಲೂ ಒಳಗೊಳ್ಳಲು ನಾನು ನಿರಾಕರಿಸಿದೆ. ಬದಲಾಗಿ ನಾನು ಸ್ವಲ್ಪ ಊಟ ತಯಾರಿಸಲು ಮನೆಗೆ ಹೋದೆ, ಮತ್ತು ಅದನ್ನು ತಾಯಿ ಇದ್ದ ಮನೆಗೆ ಒಯ್ದೆ. ಇದು ನಿಜವಾಗಿಯೂ ನನ್ನ ಕುಟುಂಬವನ್ನು ನಿರಾಶೆಗೊಳಿಸಿತು. ನಾನು ಸ್ವಸ್ಥ ಸ್ಥಿತಿಯಲ್ಲಿಲ್ಲವೆಂದು ನನ್ನ ಸಂಬಂಧಿಕರು ನೆನಸಿದರು.” ಅದಲ್ಲದೆ, ಅವರು ಅವಳನ್ನು ನಿಂದಿಸಿದರು, ಅವಳ ಮೇಲೆ ಕೇಡು ಎರಗಲಿ ಎಂದು ಹಾರೈಸುತ್ತಾ, “ನಿನ್ನ ಧರ್ಮದ ಕಾರಣ ನಮ್ಮ ಸಂಪ್ರದಾಯವನ್ನು ನೀನು ತಿರಸ್ಕರಿಸಿದುದರಿಂದ, ನಿನ್ನ ತಂದೆಯ ಪ್ರಾಣವು ನಿನ್ನನ್ನು ಕಾಡುವುದು. ವಾಸ್ತವದಲ್ಲಿ, ನಿನಗೆ ಮಕ್ಕಳು ಕೂಡ ಆಗಲಿಕ್ಕಿಲ್ಲ” ಎಂದು ಹೇಳಿದರು. ಮತ್ತೂ ಜೇನ್ ಹೆದರಿಸಲ್ಪಡಲು ಒಪ್ಪಲಿಲ್ಲ. ಪರಿಣಾಮ? ಅವಳನ್ನುವುದು: “ಶವಸಂಸ್ಕಾರದ ಸಮಯದಲ್ಲಿ ನನಗೆ ಇದ್ದ ಮಕ್ಕಳು ಇಬ್ಬರು. ಈಗ ಆರು ಮಂದಿ ಇದ್ದಾರೆ! ನನಗಿನ್ನು ಮಕ್ಕಳೇ ಹುಟ್ಟಲಾರವೆಂದು ವಿಧಿಸಿದವರನ್ನು ಇದು ನಾಚಿಕೆಗೀಡುಮಾಡಿದೆ.”
ಲೈಂಗಿಕ “ಶುದ್ಧೀಕರಣ”
ಒಬ್ಬನ ವಿವಾಹ ಜೊತೆಯ ಮರಣಾನಂತರ, ಸಾಂಸ್ಕಾರಿಕ ಶುದ್ಧೀಕರಣವನ್ನು ಒಳಗೊಳ್ಳುವ ಇನ್ನೊಂದು ಪದ್ಧತಿಯಿದೆ. ಪತ್ನಿಯು ಸತ್ತಲ್ಲಿ, ಅವಳ ಕುಟುಂಬವು ಒಬ್ಬ ನಾದಿನಿಯನ್ನು ಅಥವಾ ಸತ್ತ ಹೆಂಡತಿಯ ಆಪ್ತ ಸಂಬಂಧದ ಇನ್ನೊಬ್ಬ ಹೆಂಗಸನ್ನು ವಿಧುರನ ಬಳಿಗೆ ತರುತ್ತದೆ. ಅವಳೊಂದಿಗೆ ಲೈಂಗಿಕ ಸಂಭೋಗಮಾಡಲು ಅವನು ಹಂಗಿಗನಾಗುತ್ತಾನೆ. ಆಮೇಲೆ ಮಾತ್ರ ಅವನು ತನಗಿಷ್ಟವಾದವರನ್ನು ಮದುವೆಯಾಗಬಲ್ಲನು. ಹೆಂಗಸಿನ ಗಂಡನು ಸಾಯುವಾಗ ಸಹ ಹೀಗೆಯೆ ನಡೆಯುತ್ತದೆ. ಈ ಪದ್ಧತಿಯು ಬದುಕಿರುವ ಜೊತೆಯನ್ನು ಸತ್ತ ಜೊತೆಯ “ಆತ್ಮ” ದಿಂದ ಶುದ್ಧೀಕರಿಸುತ್ತದೆಂದು ನೆನಸಲಾಗುತ್ತದೆ.
ಇಂತಹ “ಶುದ್ಧೀಕರಣ” ವನ್ನು ಮಾಡಿಕೊಳ್ಳಲು ನಿರಾಕರಿಸುವ ಯಾವನಾದರೂ ಸಂಬಂಧಿಕರ ಕ್ರೋಧಕ್ಕೆ ತನ್ನನ್ನು ಗುರಿಪಡಿಸಿಕೊಳ್ಳುತ್ತಾನೆ. ಅವನನ್ನು ಅಥವಾ ಅವಳನ್ನು ಏಕಾಂತವಾಸಕ್ಕೊಡ್ಡಿ, ಅಪಹಾಸ್ಯಕ್ಕೆ ಮತ್ತು ದುರ್ಗತಿಯ ಪ್ರಕಟನೆಗಳಿಗೆ ಗುರಿಮಾಡಬಹುದು. ಆದರೂ, ಕ್ರೈಸ್ತರು ಈ ಪದ್ಧತಿಯನ್ನು ಅನುಸರಿಸಲು ನಿರಾಕರಿಸುತ್ತಾರೆ. ಖಂಡಿತವಾಗಿಯೂ ಅದು ಒಂದು ರೀತಿಯ “ಶುದ್ಧೀಕರಣ” ಅಲ್ಲವೆಂದೂ, ಮದುವೆಯ ಹೊರಗಿನ ಲೈಂಗಿಕ ಸಂಭೋಗವು ಯೆಹೋವನ ದೃಷ್ಟಿಯಲ್ಲಿ ಅಪವಿತ್ರವೆಂದೂ ಅವರಿಗೆ ತಿಳಿದಿದೆ. (1 ಕೊರಿಂಥ 6:18-20) ಅದಲ್ಲದೆ, ಕ್ರೈಸ್ತರು “ಕರ್ತನಲ್ಲಿ ಮಾತ್ರ” ಮದುವೆಯಾಗುತ್ತಾರೆ.—1 ಕೊರಿಂಥ 7:39.
ಒಬ್ಬ ಸಾಂಬಿಯನ್ ಕ್ರೈಸ್ತ ಹೆಂಗಸಾದ ವೈಲೆಟ್ ತನ್ನ ಗಂಡನನ್ನು ಕಳೆದುಕೊಂಡಳು. ತದನಂತರ ಅವಳ ಸಂಬಂಧಿಕರು, ಒಬ್ಬ ಗಂಡಸನ್ನು ಅವಳ ಬಳಿಗೆ ತಂದು ಅವನೊಂದಿಗೆ ಲೈಂಗಿಕ ಸಂಭೋಗ ಮಾಡುವಂತೆ ಅವಳನ್ನು ಒತ್ತಾಯಿಸಿದರು. ವೈಲೆಟ್ ನಿರಾಕರಿಸಿದಳು, ಶಿಕ್ಷೆಯೋಪಾದಿ ಅವಳಿಗೆ ಸಾರ್ವಜನಿಕ ಬಾವಿಯಿಂದ ನೀರು ಸೇದುವುದನ್ನು ಪ್ರತಿಬಂಧಿಸಲಾಯಿತು. ಮುಖ್ಯ ಬೀದಿಯಲ್ಲಿ ಅವಳು ನಡೆಯಬಾರದು, ನಡೆದರೆ ಅವಳಿಗೆ ಕೇಡು ಸಂಭವಿಸುವುದೆಂದೂ ಎಚ್ಚರಿಸಲಾಯಿತು. ಹಾಗಿದ್ದರೂ, ಆಕೆ ನೆರೆಯವರಿಂದ ಮತ್ತು ಜೊತೆ ಹಳ್ಳಿಗರಿಂದ ಬೆದರಿಸಲ್ಪಡಲು ಬಿಟ್ಟುಕೊಡಲಿಲ್ಲ.
ತರುವಾಯ ವೈಲೆಟ್ ಸ್ಥಳಿಕ ಕೋರ್ಟಿಗೆ ಕರೆಯಲ್ಪಟ್ಟಳು. ನಿಷಿದ್ಧ ಸಂಭೋಗದಲ್ಲಿ ಭಾಗಿಯಾಗಲು ನಿರಾಕರಿಸಿದುದಕ್ಕೆ ತನ್ನ ಶಾಸ್ತ್ರೀಯ ಕಾರಣವನ್ನು ಅಲ್ಲಿ ಅವಳು ನಿಶ್ಚಂಚಲಳಾಗಿ ವಿವರಿಸಿದಳು. ಕೋರ್ಟು ಅವಳ ಪರವಾಗಿ ತೀರ್ಪನ್ನೀಯುತ್ತಾ, ಅವಳ ನಂಬಿಕೆಗಳಿಗೆ ವಿರುದ್ಧವಾಗಿರುವ ಸ್ಥಳಿಕ ಪದ್ಧತಿಗಳನ್ನು ಮತ್ತು ಸಂಪ್ರದಾಯಗಳನ್ನು ಅವಲಂಬಿಸುವಂತೆ ಅದು ಅವಳನ್ನು ಒತ್ತಾಯಿಸಲು ಸಾಧ್ಯವಿಲ್ಲವೆಂದಿತು. ಆಸಕ್ತಿಕರವಾಗಿ, ರಾಜಿಮಾಡಲು ಅವಳ ದೃಢ ನಿರಾಕರಣೆಯು, ತದನಂತರ ಅದೇ ಪ್ರಶ್ನೆಯನ್ನು ಎದುರಿಸಿದ ಹಳ್ಳಿಯ ಇತರ ಸಾಕ್ಷಿಗಳ ಮೇಲಿನ ಒತ್ತಡವನ್ನು ಕಡಿಮೆಮಾಡಿತು.
ತದ್ರೀತಿಯ ಒತ್ತಡವನ್ನು ಮಾನಿಕ ಎಂಬ ಆಫ್ರಿಕನ್ ಸಾಕ್ಷಿಯು ತನ್ನ ಗಂಡನ ಮರಣಾನಂತರ ಎದುರಿಸಿದಳು. ಆ ಮನುಷ್ಯನ ಕುಟುಂಬವು ಅವಳಿಗೆ ಇನ್ನೊಬ್ಬ ಗಂಡನನ್ನು ಕೊಡಲು ಒತ್ತಾಯಿಸಿತು. ಮಾನಿಕ ಹೇಳುವುದು: “1 ಕೊರಿಂಥ 7:39ರ ಆಜ್ಞೆಯನ್ನು ಪಾಲಿಸಲು ದೃಢನಿಶ್ಚಯದಿಂದಿದ್ದು, ನಾನು ನಿರಾಕರಿಸಿದೆ.” ಆದರೂ ಒತ್ತಡ ನಿಲ್ಲಲಿಲ್ಲ. “ಅವರು ನನ್ನನ್ನು ಬೆದರಿಸಿದರು,” ಎಂದು ಮಾನಿಕ ಮರುಜ್ಞಾಪಿಸಿಕೊಳ್ಳುತ್ತಾಳೆ. “ಅವರಂದದ್ದು: ‘ನೀನು ಇವನನ್ನು ಮದುವೆಯಾಗಲು ನಿರಾಕರಿಸಿದಲ್ಲಿ, ಪುನಃ ಎಂದಿಗೂ ನೀನು ಮದುವೆಯಾಗದಿರುವಿ.’ ನನ್ನ ಜೊತೆ ಕ್ರೈಸ್ತರಲ್ಲಿ ಕೆಲವರು ಗುಪ್ತವಾಗಿ ಈ ರೀತಿ ಸಾಂಸ್ಕಾರಿಕವಾಗಿ ಶುದ್ಧೀಕರಣ ಹೊಂದಿದ್ದರೆಂದೂ ಅವರು ವಾದಿಸಿದರು.” ಆದಾಗ್ಯೂ ಮಾನಿಕ ದೃಢಳಾಗಿ ನಿಂತಳು. “ಎರಡು ವರ್ಷಗಳ ತನಕ ನಾನು ಅವಿವಾಹಿತೆಯಾಗಿ ಉಳಿದೆ, ತದನಂತರ ಕ್ರೈಸ್ತ ರೀತಿಯಲ್ಲಿ ನಾನು ಪುನರ್ವಿವಾಹವಾದೆ,” ಎನ್ನುತ್ತಾಳೆ ಅವಳು. ಮಾನಿಕ ಈಗ ಒಬ್ಬ ಕ್ರಮದ ಪಯನೀಯರಳಾಗಿ ಸೇವೆ ಮಾಡುತ್ತಾಳೆ.
ಅಕಾಲ ಪ್ರಸವಗಳು ಮತ್ತು ಮೃತ ಜನನಗಳು
ದಕ್ಷಿಣ ಆಫ್ರಿಕದ ಕ್ರೈಸ್ತರಿಗೆ ಅಕಾಲ ಪ್ರಸವಗಳು ಮತ್ತು ಮೃತ ಜನನಗಳನ್ನು ಆವರಿಸಿರುವ ಪದ್ಧತಿಗಳೊಂದಿಗೂ ವ್ಯವಹರಿಸಲಿಕ್ಕಿದೆ. ಅಂತಹ ದುರಂತ ಸಂಭವಗಳು ಮಾನವ ಅಸಂಪೂರ್ಣತೆಯ ಫಲಿತಾಂಶಗಳು—ದೈವಿಕ ದಂಡನೆಯವುಗಳಲ್ಲ. (ರೋಮಾಪುರ 3:23) ಆದರೆ ಒಬ್ಬ ಸ್ತ್ರೀಗೆ ಅಕಾಲ ಪ್ರಸವವಾದಲ್ಲಿ, ಅವಳನ್ನು ಒಂದು ಕಾಲಾವಧಿಯ ತನಕ ಬಹಿಷ್ಕೃತಳಂತೆ ಉಪಚರಿಸಬೇಕೆಂದು ಕೆಲವು ಆಫ್ರಿಕನ್ ಸಂಪ್ರದಾಯಗಳು ನಿರ್ಬಂಧಿಸುತ್ತವೆ.
ಹೀಗೆ ಈಚೆಗೆ ಅಕಾಲ ಪ್ರಸವವಾಗಿದ್ದ ಸ್ತ್ರೀಯೊಬ್ಬಳು, ತನ್ನ ಮನೆಯ ಕಡೆಗೆ ಒಬ್ಬ ಸಾಕ್ಷಿಯು ಬರುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಳು. ಅವನು ಹತ್ತಿರವಾದಂತೆ, ಅವಳು ಅವನನ್ನು ಕೂಗಿ ಕರೆದು, “ಇಲ್ಲಿಗೆ ಬರಬೇಡಿ! ನಮ್ಮ ಸಂಪ್ರದಾಯಕ್ಕನುಸಾರ, ಇತ್ತೀಚೆಗೆ ಅಕಾಲ ಪ್ರಸವವಾಗಿದ್ದ ಸ್ತ್ರೀಯನ್ನು ಸಂದರ್ಶಿಸಲಿಕ್ಕಿಲ್ಲ,” ಎಂದು ಹೇಳಿದಳು. ಆದರೂ ಸಾಕ್ಷಿಯು ಅವಳಿಗೆ, ಯೆಹೋವನ ಸಾಕ್ಷಿಗಳು ಬೈಬಲ್ ಸಂದೇಶವನ್ನು ಎಲ್ಲ ವಿಧದ ಜನರಿಗೆ ಕೊಂಡೊಯ್ಯುತ್ತಾರೆಂದೂ, ಅಕಾಲ ಪ್ರಸವಗಳ ಸಂಬಂಧವಾದ ಸ್ಥಳಿಕ ಪದ್ಧತಿಗಳನ್ನು ಅವರು ಅನುಸರಿಸುವುದಿಲ್ಲವೆಂದೂ ಹೇಳಿದನು. ಅನಂತರ ಅವನು ಯೆಶಾಯ 65:20, 23ನ್ನು ಅವಳಿಗೆ ಓದಿ, ದೇವರ ರಾಜ್ಯದ ಕೆಳಗೆ ಅಕಾಲ ಪ್ರಸವಗಳೂ ಮೃತ ಜನನಗಳೂ ಸಂಭವಿಸವೆಂದು ವಿವರಿಸಿದನು. ಪರಿಣಾಮವಾಗಿ, ಆ ಸ್ತ್ರೀ ಒಂದು ಗೃಹ ಬೈಬಲಧ್ಯಯನವನ್ನು ಸ್ವೀಕರಿಸಿದಳು.
ಮೃತಜಾತ ಕೂಸುಗಳ ಶವಸಂಸ್ಕಾರದಲ್ಲೂ ಮೂಢನಂಬಿಕೆಯ ಪದ್ಧತಿಗಳು ಜತೆಗೂಡಬಹುದು. ಜೋಸೆಫ್ ಎಂಬ ಸಾಕ್ಷಿಯು ಅಂತಹ ಒಂದು ಶವಸಂಸ್ಕಾರಕ್ಕೆ ಹಾಜರಾದಾಗ, ಉಪಸ್ಥಿತರೆಲ್ಲರೂ ಒಂದು ಬೇರು ಮದ್ದಿನಲ್ಲಿ ಕೈತೊಳೆದುಕೊಂಡು ಅದನ್ನು ಎದೆಗೆ ಲೇಪಿಸಬೇಕೆಂದು ಅವನಿಗೆ ಹೇಳಲಾಯಿತು. ಇದು ಕೂಸಿನ “ಆತ್ಮ”ವು ಮರಳದಂತೆ ಮತ್ತು ಅವರಿಗೆ ಕೇಡನ್ನು ಮಾಡದಂತೆ ತಡೆಯುತ್ತದೆಂದು ಹೇಳಲಾಯಿತು. ಜೋಸೆಫ್, ಮೃತರು ಜೀವಿತರಿಗೆ ಹಾನಿಮಾಡಶಕ್ತರಲ್ಲ ಎಂಬ ಬೈಬಲ್ ಬೋಧನೆಯನ್ನು ತಿಳಿದವನಾಗಿ, ಗೌರವಪೂರ್ವಕವಾಗಿ ಒಲ್ಲೆನೆಂದನು. ಮತ್ತೂ ಕೆಲವರು ಮದ್ದನ್ನು ಹಚ್ಚುವಂತೆ ಒತ್ತಯಾಮಾಡಲು ಪ್ರಯತ್ನಿಸಿದರು. ಜೋಸೆಫನು ಪುನಃ ನಿರಾಕರಿಸಿದನು. ಈ ಕ್ರೈಸ್ತನ ನಿರ್ಭೀತ ನಿಲುವನ್ನು ಕಂಡು ಹಾಜರಾದ ಬೇರೆಯವರೂ ತದ್ರೀತಿ ಬೇರು ಮದ್ದನ್ನು ನಿರಾಕರಿಸಿದರು.
ಮುಕಾಬಿಲೆಗಳನ್ನು ವರ್ಜಿಸಿರಿ, ಆದರೆ ದೃಢರಾಗಿ ನಿಲ್ಲಿ
ಜೀವಿತರ ಭಯ ಮತ್ತು ಬಹಿಷ್ಕೃತನಾಗಿ ಮಾಡಲ್ಪಡುವ ಅಂಜಿಕೆ, ಇವು ರಾಜಿಮಾಡಿಕೊಳ್ಳುವುದಕ್ಕೆ ಪ್ರಬಲವಾದ ಶಕಿಗ್ತಳಾಗಿರಬಲ್ಲವು. ಜ್ಞಾನೋಕ್ತಿ 20:25 ಹೇಳುವುದು: “ಮನುಷ್ಯನ ಭಯ ಉರುಲು.” ಮೇಲಿನ ಅನುಭವಗಳು ಈ ವಚನದ ಕಡೆಯ ಭಾಗದ ಸತ್ಯತೆಯನ್ನು ಪ್ರದರ್ಶಿಸುತ್ತವೆ: “ಯೆಹೋವನ ಭರವಸ ಉದ್ಧಾರ.”
ಆದಾಗ್ಯೂ, ಮುಕಾಬಿಲೆಯನ್ನು ಅನೇಕವೇಳೆ ವರ್ಜಿಸಸಾಧ್ಯವಿದೆ. ದೃಷ್ಟಾಂತಕ್ಕಾಗಿ, ಸಂಬಂಧಿಕನೊಬ್ಬನ ಶವಸಂಸ್ಕಾರಕ್ಕೆ ಕ್ರೈಸ್ತನೊಬ್ಬನು ಆಮಂತ್ರಿಸಲ್ಪಟ್ಟಲ್ಲಿ, ಒಂದು ರಾಜಿಮಾಡುವ ಸಂಭವನೀಯ ಸನ್ನಿವೇಶದಲ್ಲಿ ತನ್ನನ್ನು ಕಂಡುಕೊಳ್ಳುವ ತನಕ ಅವನು ಕಾಯಬಾರದು. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 27:12.
ಯಾವ ಪದ್ಧತಿಗಳು ಅನುಸರಿಸಲ್ಪಡುವವೆಂದು ಜಾಣತನದಿಂದ ಒಂದಿಷ್ಟು ಕೇಳುವುದು ಬುದ್ಧಿವಂತಿಕೆಯಾಗಿರುವುದು. ಇದು ಆಕ್ಷೇಪಣೀಯವಾಗಿದ್ದಲ್ಲಿ, ಕ್ರೈಸ್ತನು ಆ ಸಂದರ್ಭವನ್ನುಪಯೋಗಿಸಿ, ‘ಸೌಮ್ಯ ಭಾವದಿಂದಲೂ ಆಳವಾದ ಗೌರವದಿಂದಲೂ,’ ತಾನೇಕೆ ಭಾಗವಹಿಸಲಾರೆನೆಂದು ವಿವರಿಸಸಾಧ್ಯವಿದೆ. (1 ಪೇತ್ರ 3:15) ಕ್ರೈಸ್ತನು ಗೌರವಪೂರ್ವಕವಾಗಿ ತನ್ನ ಬೈಬಲಾಧಾರಿತ ನಿಲುವನ್ನು ಮುಂಚಿತವಾಗಿ ವಿವರಿಸುವಾಗ, ಅವನ ಸಂಬಂಧಿಕರು ಸಾಮಾನ್ಯವಾಗಿ ಅವನ ನಂಬಿಕೆಯನ್ನು ಗೌರವಿಸಲು ಹೆಚ್ಚು ಪ್ರವೃತ್ತರಾಗುತ್ತಾರೆ ಮತ್ತು ಭಯಸೂಚನೆಗಳು ಮತ್ತು ಬೆದರಿಕೆಯನ್ನು ಬಳಸಲು ಕಡಿಮೆ ಪ್ರವೃತ್ತರಾಗುತ್ತಾರೆ.
ಸಂಬಂಧಿಕರ ಪ್ರತಿಕ್ರಿಯೆಯು ಹೇಗೆಯೆ ಇರಲಿ—ಯಾವದೇ ಬೆದರಿಕೆಗಳು ಅಥವಾ ಬೈಗುಳಗಳು ಅವನ ಮೇಲೆ ಹೇರಲ್ಪಡಲಿ—ಕ್ರೈಸ್ತನು ದೇವರಿಗೆ ಅಗೌರವ ತರುವ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ರಾಜಿಮಾಡಿಕೊಳ್ಳಲು ಸಾಧ್ಯವೇಇಲ್ಲ. ನಾವು ಮೂಢನಂಬಿಕೆಯ ಭಯದಿಂದ ಬಿಡುಗಡೆ ಮಾಡಲ್ಪಟ್ಟಿದ್ದೇವೆ. ಅಪೊಸ್ತಲ ಪೌಲನು ಪ್ರಚೋದಿಸಿದ್ದು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.”—ಗಲಾತ್ಯ 5:1.
[ಪುಟ 29 ರಲ್ಲಿರುವ ಚಿತ್ರ]
ಆಗತಾನೇ ಸತ್ತ ಒಬ್ಬ ವ್ಯಕ್ತಿಯು ಒಂದು ಮಧ್ಯವರ್ತಿಯಾಗಿ ವರ್ತಿಸಿ, ದೀರ್ಘಕಾಲದಿಂದ ಸತ್ತಿರುವ ಸಂಬಂಧಿಕರಿಗೆ ಸಂದೇಶಗಳನ್ನು ಒಯ್ಯಬಲ್ಲನೆಂದು ಅನೇಕರು ನಂಬುತ್ತಾರೆ