ಶ್ರೀಲಂಕಾದಲ್ಲಿ ನಂಬಿಗಸ್ತ ಕುಟುಂಬಗಳು ವೃದ್ಧಿಯನ್ನು ತರ್ವೆಗೊಳಿಸುತ್ತವೆ
ಸಿಲೋನ್ ಎಂಬುದಾಗಿ 1972ರ ತನಕ ಕರೆಯಲ್ಪಟ್ಟ ಶ್ರೀಲಂಕಾ, ತಾಳೆಮರಗಳ ಸಾಲಿನಿಂದಾವೃತವಾದ ಕಡಲತೀರಗಳು, ಪರ್ವತ ಶ್ರೇಣಿಗಳು, ಮತ್ತು ಚಿಕ್ಕ ಮರಳುಗಾಡುಗಳಿಂದ ಕೂಡಿದ ಒಂದು ಸುಂದರ ದ್ವೀಪವಾಗಿದೆ. ಮೇಲ್ನಾಡಿನಲ್ಲಿ, 2243 ಮೀಟರ್ ಎತ್ತರದ ಆ್ಯಡಮ್ಸ್ ಪೀಕ್, ನಾಲ್ಕು ಮುಖ್ಯ ಧರ್ಮಗಳಿಗೆ ಪವಿತ್ರವಾದ ಸ್ಥಳವಾಗಿರುತ್ತದೆ.a ಹತ್ತಿರದಲ್ಲೇ ವರ್ಲ್ಡ್ಸ್ ಎಂಡ್ ಎಂಬ ಕಡಿದಾದ ಕಟ್ಟೆಯಲ್ಲಿ 1500 ಮೀಟರ್ಗಿಂತಲೂ ಹೆಚ್ಚು ಆಳಕ್ಕೆ ಕುಸಿಯುವ ಪ್ರಪಾತವಿದೆ. ಈ ನಿವೇಶನವು ಶ್ರೀಲಂಕಾದ ಅತ್ಯಂತ ನಯನಮನೋಹರ ದೃಶ್ಯಗಳಲ್ಲಿ ಒಂದನ್ನು ನೀಡುತ್ತದೆ.
ಶ್ರೀಲಂಕಾದ 1.8 ಕೋಟಿ ನಿವಾಸಿಗಳು ಒಂದು ಆಸಕ್ತಿಕರ ಹಿನ್ನೆಲೆಯಲ್ಲಿ ಪಾಲಿಗರಾಗುತ್ತಾರೆ. ಸಾ.ಶ.ಪೂ. ಐದನೆಯ ಶತಮಾನದಿಂದ, ಉತ್ತರ ಭಾರತದ ಇಂಡೋ-ಯೂರೋಪಿಯನ್ ಬುಡಕಟ್ಟಿನ ಜನರು ಆ ದ್ವೀಪವನ್ನು ತುಂಬಿಸಿರುತ್ತಾರೆ. ಅವರೇ ಸಿಂಹಳೀಯರು, ಇವರು ಈಗ ಜನಸಂಖ್ಯೆಯ ಮುಕ್ಕಾಲು ಪಾಲನ್ನು ರಚಿಸುತ್ತಾರೆ. ಬಳಿಕ ಸುಮಾರು 12 ನೆಯ ಶತಮಾನದ ಸಮಯದಲ್ಲಿ ದಕ್ಷಿಣ ಭಾರತದಿಂದ ತಮಿಳರ ಪ್ರವಾಹವು ಒಳಬಂತು; ಇವರು ಈಗ ಮುಖ್ಯವಾಗಿ ದ್ವೀಪದ ಉತ್ತರ ಮತ್ತು ಪೂರ್ವ ಭಾಗದಲ್ಲಿ ವಾಸಿಸುತ್ತಾರೆ. ಪೋರ್ಚುಗೀಸರು, ಡಚ್ಚರು, ಮತ್ತು ಬ್ರಿಟಿಷರು ಸಹ ತಮ್ಮ ನೆಲಸುನಾಡಿನ ದಿನಗಳಿಂದ ತಮ್ಮ ಗುರುತನ್ನು ಬಿಟ್ಟುಹೋಗಿರುತ್ತಾರೆ. ಅದಲ್ಲದೆ, ಅರೇಬಿಯನ್ ಮತ್ತು ಮಲಯನ್ ದ್ವೀಪಕಲ್ಪಗಳ ಸಮುದ್ರ ಸಂಚಾರದ ವ್ಯಾಪಾರಿಗಳು ಸ್ಥಳಿಕ ಜನರೊಂದಿಗೆ ನೆಲೆನಿಂತಿರುತ್ತಾರೆ. ಯೂರೋಪಿಯನರು, ಪಾರ್ಸಿಗಳು, ಚೀನೀಯರು ಮತ್ತು ಇತರರ ನಿವೇಶನಗಳೂ ಅಲ್ಲಿವೆ.
ಈ ಜಾತೀಯ ಬೆರೆಸುವಿಕೆಯ ಜೊತೆಯಲ್ಲಿ, ಶ್ರೀಲಂಕಾದಲ್ಲಿ ಭಾಷೆ ಮತ್ತು ಧರ್ಮವು ಅದರ ವಿವಿಧ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ದ್ವೀಪದ ಪ್ರಧಾನ ಭಾಷೆಗಳು ಸಿಂಹಳೀಸ್, ತಮಿಳು, ಮತ್ತು ಇಂಗ್ಲಿಷ್. ಈ ಮೂರರಲ್ಲಿ ಕಡಿಮೆಪಕ್ಷ ಎರಡನ್ನು ಶ್ರೀಲಂಕಾದ ಅನೇಕ ಜನರು ಆಡುತ್ತಾರೆ. ಕುಲ ಸಂಬಂಧವಾದ ಹಿನ್ನೆಲೆಗಳು ಸಹ ಜನರ ಧರ್ಮಗಳಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಹೆಚ್ಚಿನ ಸಿಂಹಳೀಯರು ಬೌದ್ಧರಾಗಿರುವಾಗ, ಅಧಿಕಾಂಶ ತಮಿಳರು ಹಿಂದೂಗಳು. ಅರೇಬಿಕ್ ಮತ್ತು ಮಲಯನ್ ಸಂಬಂಧವಿರುವವರು ಸಾಮಾನ್ಯವಾಗಿ ಇಸ್ಲಾಂ ಅವಲಂಬಿಗಳು, ಮತ್ತು ಯೂರೋಪಿಯನ್ ಹಿನ್ನೆಲೆಯವರು ಸಾಮಾನ್ಯವಾಗಿ ಕ್ರೈಸ್ತಪ್ರಪಂಚದ ಚರ್ಚುಗಳ ಸದಸ್ಯರಾದ ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು.
ಪಂಥಾಹ್ವಾನವನ್ನು ಎದುರಿಸುವುದು
ಇವೆಲ್ಲವು ಯೆಹೋವನ ಸಾಕ್ಷಿಗಳಿಗೆ ಶ್ರೀಲಂಕಾದಲ್ಲಿ ಪ್ರಚಂಡ ಪಂಥಾಹ್ವಾನವನ್ನು ನೀಡುತ್ತವೆ. ಯೇಸುವಿನ ಆದೇಶವನ್ನು ಪೂರೈಸಲಿಕ್ಕಾಗಿ ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ: “ಪರಲೋಕರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಸುವಾರ್ತೆಯ ಪ್ರಚಾರಕರಿಗೆ ಹಲವಾರು ಭಾಷೆಗಳನ್ನು ನಿರ್ವಹಿಸಲಿಕ್ಕಿರುವುದು ಮಾತ್ರವಲ್ಲದೆ—ಕೆಲವೇ ತಾಸುಗಳ ಸಾರುವಿಕೆಯಲ್ಲಿ—ಬೌದ್ಧರು, ಹಿಂದೂಗಳು, ಕ್ರೈಸ್ತಪ್ರಪಂಚದ ಚರ್ಚ್ ಸದಸ್ಯರು, ಹಾಗೂ ನಾಸ್ತಿಕರು ಮಾತಾಡಲು ಸಿಕ್ಕಲೂಬಹುದು.
ಪ್ರಚಾರಕರು ತಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರಬೇಕಾದರೆ ತಮ್ಮೊಂದಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಹಾಗೂ ತಮಿಳು, ಸಿಂಹಳೀಸ್, ಮತ್ತು ಇಂಗ್ಲಿಷ್ ಭಾಷೆಗಳ ಬೇರೆ ಬೈಬಲ್ ಸಾಹಿತ್ಯವನ್ನೊಯ್ಯಲೇಬೇಕು. ಭಾರವಾದ ಹೊರೆಯನ್ನೊಯ್ಯಲು ಸಾಕಷ್ಟು ಶಕ್ತರಾದವರು ಆ ಭಾಷೆಗಳ ಬೈಬಲುಗಳನ್ನೂ ಸಂಗಡ ಒಯ್ಯುತ್ತಾರೆ. ಇತ್ತೀಚೆಗೆ, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಮತ್ತು ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಬ್ರೋಷರುಗಳು, ಹಾಗೂ ಈ ಲೋಕವು ಪಾರಾಗಿ ಉಳಿಯುವುದೋ? ಎಂಬ ಕಿರುಹೊತ್ತಗೆಯು ಏಕಕಾಲದಲ್ಲಿ, ಮೂರು ಭಾಷೆಗಳಲ್ಲಿ ಬಿಡುಗಡೆ ಹೊಂದಿದಾಗ ಪ್ರಚಾರಕರು ಅತ್ಯಾನಂದಪಟ್ಟರು. ಇದು ಶುಶ್ರೂಷೆಗಾಗಿ ಅಧಿಕ ಉಪಕರಣಗಳ ಅರ್ಥದಲ್ಲಿದೆ.
ಇಂಟರ್ನ್ಯಾಷನಲ್ ಬೈಬಲ್ ಸೂಡ್ಟೆಂಟ್ಸ್ ಅಸೋಸಿಯೇಷನಿನ ಆಗಿನ ಅಧ್ಯಕ್ಷರಾದ ಚಾರ್ಲ್ಸ್ ಟೇಸ್ ರಸಲರು, 1912 ರಲ್ಲಿ ಸಿಲೋನಿಗೆ ಒಂದು ಸಂಕ್ಷಿಪ್ತ ಸಂದರ್ಶನವನ್ನಿತ್ತಂದಿನಿಂದ, ಸಾಕ್ಷಿಗಳು ಇಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೂ ಗಮನಾರ್ಹ ಬೆಳವಣಿಗೆಗಾಗಿ, 1947 ರಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಪದವೀಧರರ ಆಗಮನದ ತನಕ ಕಾಯಬೇಕಾಗಿತ್ತು. ಅಂದಿನಿಂದ ಶ್ರೀಲಂಕಾದ ಪ್ರಚಾರಕರು ತಮ್ಮ ಸಾರುವ ಕಾರ್ಯದ ಉತ್ತಮ ಫಲಗಳಲ್ಲಿ ಆನಂದಿಸಿದ್ದಾರೆ. 1994 ರಲ್ಲಿ 1,866 ರಾಜ್ಯದ ಪ್ರಚಾರಕರು ಪ್ರತಿ ತಿಂಗಳು ಸರಾಸರಿ 2,551 ಗೃಹ ಬೈಬಲಧ್ಯಯನಗಳನ್ನು ನಡೆಸಿದ್ದಾರೆ. ಮತ್ತು ಸ್ಮಾರಕಾಚರಣೆಯ 6,930 ಹಾಜರಿಯು, ಎಲ್ಲ ಸಭೆಗಳ ಪ್ರಚಾರಕರ ಒಟ್ಟು ಸಂಖ್ಯೆಯ ಸುಮಾರು ನಾಲ್ಕು ಪಟ್ಟು. ಎಂತಹ ಆಶ್ಚರ್ಯಕರ ಆಶೀರ್ವಾದ!
ಬೇರೆ ಕೆಲವು ದೇಶಗಳಿಗೆ ತುಲನಾತ್ಮಕವಾಗಿ, ಶ್ರೀಲಂಕಾದ ಪ್ರಗತಿಯು ನಿಧಾನವೆಂಬುದಾಗಿ ಕಂಡೀತು. ಬಲವಾದ ಕುಟುಂಬ ಸಂಬಂಧಗಳು ಇದಕ್ಕೆ ಒಂದು ಕಾರಣವಾಗಿರುವಂತೆ ತೋರುತ್ತದೆ. ಆದರೂ, ಕುಟುಂಬ ಸಂಬಂಧಗಳು ಪ್ರಯೋಜನಕರವಾಗಿರಬಲ್ಲವು. ರೋಮನ್ ಸೇನಾಧಿಕಾರಿ ಕೊರ್ನೇಲ್ಯನು ಸತ್ಯಕ್ಕಾಗಿ ತನ್ನ ನಿಲುವನ್ನು ತೆಗೆದುಕೊಂಡಾಗ, ಅವನ ಮನೆಯವರು ಅವನೊಂದಿಗೆ ಜತೆಗೂಡಿದರು. (ಅ. ಕೃತ್ಯಗಳು 10:1, 2, 24, 44) ಅಪೊಸ್ತಲರ ಕೃತ್ಯಗಳು ಪುಸ್ತಕವು ಲುದ್ಯಳ, ಕ್ರಿಸ್ಪನ, ಹಾಗೂ ಪೌಲ ಮತ್ತು ಸೀಲನ ಜೈಲಿನಧಿಕಾರಿಯ ಕುಟುಂಬಗಳನ್ನಲ್ಲದೆ, ಬೇರೆ ಬಲವಾದ ಕ್ರೈಸ್ತ ಕುಟುಂಬಗಳನ್ನೂ ತಿಳಿಸುತ್ತದೆ.—ಅ. ಕೃತ್ಯಗಳು 16:14, 15, 32-34; 18:8.
ಎಲ್ಲಿ ಸಂಘಟನೆ ಮತ್ತು ನಂಬಿಗಸ್ತಿಕೆಯ ಪಟ್ಟುಹಿಡಿಯುವಿಕೆ ಇದೆಯೋ ಅಲ್ಲಿ ಬಲವಾದ ಕುಟುಂಬ ಸಂಬಂಧಗಳು ಪ್ರಯೋಜನಕರವಾಗಿರಬಲ್ಲವು ನಿಶ್ಚಯ. ಯೆಶಾಯ 60:22ನ್ನು ಮನಸ್ಸಿನಲ್ಲಿಟ್ಟವರಾಗಿ, ದೀರ್ಘಕಾಲದ ಮಿಷನೆರಿಯಾದ ರೇ ಮ್ಯಾಥ್ಯೂಸ್ ವೀಕ್ಷಿಸುವುದು: “ಯೆಹೋವನು ಈಗ ಯೋಗ್ಯ ಸಮಯದಲ್ಲಿ ವಿಷಯಗಳನ್ನು ಬಲುಬೇಗನೆ ನಡಿಸುತ್ತಾನೆಂದು ತೋರುತ್ತದೆ, ಕೇವಲ ಒಬ್ಬೊಬ್ಬ ವ್ಯಕ್ತಿಗಳಿಂದ ಮಾತ್ರವಲ್ಲ ಕುಟುಂಬಗಳಿಂದಲೂ.”
ಸಂಘಟಿತ ಕುಟುಂಬವು ಸುತ್ತಿಯನ್ನು ತರುತ್ತದೆ
ಇಂದು ಶ್ರೀಲಂಕಾದಲ್ಲಿ ನಿಶ್ಚಯವಾಗಿಯೂ ಅಂತಹ ನಂಬಿಗಸ್ತ ಕುಟುಂಬಗಳಿವೆ. ಉದಾಹರಣೆಗೆ, ಶ್ರೀಲಂಕಾದ ಪ್ರಧಾನ ಪಟ್ಟಣವಾದ ಕೊಲಂಬೊದ ಒಂದು ವಲಯವಾದ ಕೋಟಹೆನದಲ್ಲಿ ಸುವ್ಯವಸ್ಥಿತ ಸಿನ್ನಪ್ಪ ಕುಟುಂಬವು ವಾಸಿಸುತ್ತದೆ. ಕುಟುಂಬದ ತಲೆಯಾದ ಮಾರಿಯಾನ್ ಸ್ವಲ್ಪ ಸಮಯದ ಹಿಂದೆ ತೀರಿಕೊಂಡನಾದರೂ, ಅವನ ಪತ್ನಿ ಅನ್ನಮ್ಮ ಮತ್ತು ಅವರ 15 ಮಕ್ಕಳಲ್ಲಿ 12 ಮಂದಿ, 13 ರಿಂದ 33 ವಯಸ್ಸಿನವರು, ಒಂದು ಕುಟುಂಬವಾಗಿ ಯೆಹೋವನನ್ನು ಸೇವಿಸುತ್ತಾ ಇದ್ದಾರೆ. ಇದನ್ನು ಬರೆದ ಸಮಯದಲ್ಲಿ, ಮಕ್ಕಳಲ್ಲಿ ಎಂಟು ಮಂದಿಗೆ ಸದ್ಯ ದೀಕ್ಷಾಸ್ನಾನವಾಗಿತ್ತು, ಅವರಲ್ಲಿ ಮೂವರು ಕ್ರಮದ ಪಯನೀಯರರಾಗಿ ಪೂರ್ಣಸಮಯದ ಸೇವೆಯಲಿದ್ದರು. ಬೇರೆ ಮೂವರು ಆಗಿಂದಾಗ್ಗೆ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಿದ್ದರು. ಕುಟುಂಬದ ಎಳೆಯವರಲ್ಲಿ ನಾಲ್ವರು ಅಸ್ನಾತ ಪ್ರಚಾರಕರಾಗಿದ್ದರು. ಅಷ್ಟಲ್ಲದೆ, ನಾಲ್ವರು ಮೊಮ್ಮಕ್ಕಳು, ಇನ್ನೂ ಅತಿ ಚಿಕ್ಕ ವಯಸ್ಸಿನವರಿದ್ದರೂ, ಬೈಬಲ್ ಅಧ್ಯಯನ ಮಾಡುತ್ತಾ, ಯೆಹೋವನ ಸಾಕ್ಷಿಗಳ ಕೊಲಂಬೊ ನಾರ್ತ್ ಸಭೆಯಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದರು.
ರಾಜ್ಯ ಸುವಾರ್ತೆಯನ್ನು ಅನ್ನಮ್ಮ ಮೊದಲಾಗಿ ಕೇಳಿದ್ದು, ಅವಳು ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು 1978 ರಲ್ಲಿ ಸ್ವೀಕರಿಸಿದಾಗಲೇ. ಒಂದು ಬೈಬಲಧ್ಯಯನ ಪ್ರಾರಂಭಿಸಲ್ಪಟ್ಟಿತು, ಮತ್ತು ನಿತ್ಯಜೀವಕ್ಕೆ ನಡಿಸುವ ಸತ್ಯವು ಎಂಬ ಅಭ್ಯಾಸ ಸಹಾಯಕವನ್ನು ಮುಗಿಸಿದ ಬಳಿಕ, ಅನ್ನಮ್ಮ, ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿ ದೀಕ್ಷಾಸ್ನಾನ ಪಡೆದುಕೊಂಡಳು, ಹೀಗೆ ತನ್ನ ಕುಟುಂಬದ ಅನೇಕರಿಗೆ ಆರಂಭದ ಮಾದರಿಯನ್ನಿಟ್ಟಳು.
ಸೇನಾ ಮನುಷ್ಯನಾದ ಕೊರ್ನೇಲ್ಯನಂತೆ, ಅನ್ನಮ್ಮ ತನ್ನ ಕುಟುಂಬದಲ್ಲಿ ಸುವ್ಯವಸ್ಥೆಯನ್ನಿಡುತ್ತಾಳೆ. “ಕ್ರೈಸ್ತ ಕೂಟಗಳಿಗಾಗಿ ಮತ್ತು ಸಮ್ಮೇಳನಗಳಿಗಾಗಿ ನಮಗೆ ಯೋಜನೆ ಮಾಡಲಿಕ್ಕಿತ್ತು—ಶಾಲೆಯದ್ದು ಹೇಳಬೇಕಾದುದಿಲ್ಲ,” ಎಂದು ನೆನಪಿಸಿಕೊಳ್ಳುತ್ತಾಳೆ ಅನ್ನಮ್ಮ. “ಬಟ್ಟೆಬರೆಗಳ ಸಮಸ್ಯೆಯಿತ್ತು, ಆದರೆ ಯೆಹೋವನ ಆಶೀರ್ವಾದದಿಂದ ಪ್ರತಿ ಸಮ್ಮೇಳನಕ್ಕೆ ಕೆಲವು ಹೊಸ ವಸ್ತ್ರಗಳನ್ನು ನಾವು ಮಾಡಶಕ್ತರಾದೆವು. ಇಡೀ ಕುಟುಂಬವು ಮೈತುಂಬ ಬಟ್ಟೆ ಮತ್ತು ತುಂಬು ಹೊಟ್ಟೆಯಿಂದ—ಗೆಲವಾಗಿ ನಗುತ್ತಲೂ ಆಗಮಿಸುತ್ತಿತ್ತು.”
ಮಕ್ಕಳು ತಮ್ಮ ಕುಟುಂಬದ ವ್ಯವಸ್ಥೆಯನ್ನು ಅಕ್ಕರೆಯಿಂದ ನೆನಪಿಸಿಕೊಳ್ಳುತ್ತಾರೆ. ಕ್ರೈಸ್ತ ಕೂಟಗಳನ್ನು ಹಾಜರಾಗಲು ಇಡೀ ಕುಟುಂಬಕ್ಕೆ ನೆರವಾಗಲಿಕ್ಕಾಗಿ, ದೊಡ್ಡವರಿಗೆ ಸಾಮಾನ್ಯವಾಗಿ ವಿಶೇಷ ಜವಾಬ್ದಾರಿಗಳು ಕೊಡಲ್ಪಟ್ಟವು. ಉದಾಹರಣೆಗೆ, ಮಂಗಲ, ಬಟ್ಟೆ ಒಗೆದಳು ಮತ್ತು ವಿನ್ಫ್ರೆಡಾ, ಇಸ್ತ್ರಿ ಮಾಡಿದಳು. ಎಳೆಯರಿಗೆ ವಸ್ತ್ರತೊಡಲು ಸಹ ಸಹಾಯ ಮಾಡಿದ ವಿನ್ಫ್ರೆಡಾ ಹೇಳುವುದು: “ಮನೆಯನ್ನು ಬಿಟ್ಟು ಹೊರಟಾಗ ಎಲ್ಲರೂ ನಿಜವಾಗಿ ಚೆನ್ನಾಗಿ ಕಾಣುತ್ತಿದ್ದರು.”
ಆತ್ಮಿಕ ಒದಗಿಸುವಿಕೆಗಳು ತತ್ಸಮಾನವಾಗಿ ಸುವ್ಯವಸ್ಥಿತವಾಗಿದ್ದವು. ಈಗ ಕ್ರಮದ ಪಯನೀಯರಳಾಗಿರುವ ಮಗಳು ಪುಷ್ಪಂ ನೆನಪಿಸಿಕೊಳ್ಳುವುದು: “ಪ್ರತಿ ದಿನ ನಮ್ಮ ಕುಟುಂಬವು ಬೈಬಲ್ ವಾಚನ ಮತ್ತು ದಿನದ ವಚನದ ಪುನರ್ವಿಮರ್ಶೆಯಲ್ಲಿ ಆನಂದಿಸಿತು.” ಅನ್ನಮ್ಮ ಕೂಡಿಸುವುದು: “ಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಅವನ ಸ್ವಂತ ಬೈಬಲ್, ಕಾವಲಿನಬುರುಜು, ಮತ್ತು ಇತರ ಪ್ರಕಾಶನಗಳಿವೆ. ಕೂಟಗಳಲ್ಲಿ ಅವರೆಲ್ಲರು ಕೊಡುವ ಉತ್ತರಗಳನ್ನು ನಾನು ಜಾಗ್ರತೆಯಿಂದ ಕೇಳುತ್ತೇನೆ. ಅವಶ್ಯವೆಂದು ತೋರುವಲ್ಲಿ, ಹಿಂಬಾಲಿಸಿ, ಉತ್ತೇಜನ ಮತ್ತು ತಿದ್ದುಪಾಟನ್ನು ನಾನು ಮನೆಯಲ್ಲಿ ನೀಡುತ್ತೇನೆ. ರಾತ್ರಿಯಲ್ಲಿ ನಾವು ಒಟ್ಟುಗೂಡಿ ಕುಟುಂಬ ಪ್ರಾರ್ಥನೆಯಿಂದ ದಿನವನ್ನು ಮುಗಿಸುತ್ತೇವೆ.”
ಕುಟುಂಬದ ಎಲ್ಲರಿಗೆ ಕ್ರೈಸ್ತ ಸುಶಿಕ್ಷಣವನ್ನು ಒದಗಿಸಲು ಅನ್ನಮ್ಮಳಿಗೆ ದೊಡ್ಡ ಮಕ್ಕಳು ಅಮೂಲ್ಯ ಸಹಾಯ ನೀಡುತ್ತಾರೆ. ಆದರೂ, ಈ ಬಿಗುವಾದ ಕಾರ್ಯತಖ್ತೆಯು ಮನೆಯ ಹೊರಗೆ ಸುವಾರ್ತೆಯನ್ನು ಹಂಚುವ ಅವರ ಅಪೇಕ್ಷೆಯನ್ನು ತಡೆಯುವುದಿಲ್ಲ. ಒಟ್ಟಿಗೆ ಕುಟುಂಬದ ಬೇರೆ ಬೇರೆ ಸದಸ್ಯರು ನೆರೆಹೊರೆಯ ಜನರೊಂದಿಗೆ 57 ಗೃಹ ಬೈಬಲಧ್ಯಯನಗಳನ್ನು ನಡೆಸುತ್ತಾರೆ. ಅಳಿಯ ರಾಜನ್ ಹೇಳುವುದು: “ಕುಟುಂಬವು ಪ್ರಗತಿಪರ ಬೈಬಲಧ್ಯಯನಗಳನ್ನು ನಡೆಸುತ್ತದೆ. ನನ್ನ ಪತ್ನಿ ಪುಷ್ಪಂಗೆ, ಈಗಾಗಲೆ ಅವಳ ವಿದ್ಯಾರ್ಥಿಗಳಲ್ಲೋಬ್ಬಳು ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸುವುದನ್ನು ಕಾಣುವ ಸುಯೋಗ ಸಿಕ್ಕಿದೆ.”
ಇಷ್ಟು ದೊಡ್ಡದಾದ ಒಂದು ಕುಟುಂಬವು ರೋಮನ್ ಕ್ಯಾತೊಲಿಕ್ ಚರ್ಚನ್ನು ತೊರೆದಾಗ, ಅದು ಕೋಟಹೆನದಲ್ಲಿ ದೊಡ್ಡ ಕೋಲಾಹಲವನ್ನುಂಟುಮಾಡಿತು. ಅವರು ಚರ್ಚನ್ನು ಬಿಟ್ಟದ್ದೇಕೆಂದು ಕಂಡುಹಿಡಿಯಲು ಪಾದ್ರಿ ತಾನೇ ಕುಟುಂಬವನ್ನೆಂದೂ ಸಂದರ್ಶಿಸದಿದ್ದರೂ, ವಿಚಾರಣೆ ನಡೆಸುವಂತೆ ಚರ್ಚ್ ಸದಸ್ಯರನ್ನು ಕೇಳಿಕೊಂಡನು. ಹಲವಾರು ಚರ್ಚೆಗಳು ಆದವು, ಹೆಚ್ಚಾಗಿ ತ್ರಯೈಕ್ಯ ಬೋಧನೆಯ ಕುರಿತು. ಅನ್ನಮ್ಮ ಯಾವಾಗಲೂ ತನ್ನ ನಂಬಿಕೆಯನ್ನು ಸಮರ್ಥಿಸಲು ಯೆಹೋವನ ಮೇಲೆ ಮತ್ತು ಬೈಬಲಿನ ಮೇಲೆ ಆತುಕೊಂಡಳು. ಈ ಚರ್ಚೆಗಳಲ್ಲಿ ಅವಳ ಅಚ್ಚುಮೆಚ್ಚಿನ ವಚನವು ಯೋಹಾನ 17:3 ಆಗಿತ್ತು.
ವ್ಯವಸ್ಥೆ ಮತ್ತು ಹೊಂದಿಕೆಯುಳ್ಳ ಪ್ರಯತ್ನವು ಸಂತೃಪ್ತಿಕರ ಫಲಗಳನ್ನು ತರಬಲ್ಲದೆಂಬುದನ್ನು ಸಿನ್ನಪ್ಪ ಕುಟುಂಬವು ಸ್ಪಷ್ಟವಾಗಿಗಿ ತೋರಿಸಿಕೊಡುತ್ತದೆ. ಅವರ ಹುರುಪಿನ ಯತ್ನಗಳಿಂದಾಗಿ, ರಾಜ್ಯ ಪ್ರಚಾರಕರ ಒಂದು ಹೊಸ ಸಂತತಿಯು, ಎಲ್ಲವೂ ಯೆಹೋವನ ಸುತ್ತಿಗಾಗಿ, ಬೆಳೆಯುತ್ತಾ ಇದೆ.
ವಿರೋಧವು ಕುಟುಂಬವನ್ನು ಸತ್ಯಾರಾಧನೆಯಲ್ಲಿ ಒಂದುಗೂಡಿಸುತ್ತದೆ
ಸಿನ್ನಪ್ಪ ಕುಟುಂಬದಿಂದ ಕೆಲವೇ ಕಿಲೊಮೀಟರ್ ದೂರದ, ಕೊಲಂಬೊದ ಇನ್ನೊಂದು ವಲಯವಾದ ನಾರೆನ್ಪಿಟ್ಯದಲ್ಲಿ, ರತ್ನಂ ಕುಟುಂಬವು ವಾಸಿಸುತ್ತದೆ. ಇವರೂ ಮುಂಚೆ ರೋಮನ್ ಕ್ಯಾತೊಲಿಕರಾಗಿದ್ದರು. ಹಿರಿಯ ಮಗಳಾದ ಫಾತಿಮಳ ಗಂಡ ಬಾಲೇಂದ್ರನ್ನನ್ನು ಸಾಕ್ಷಿಗಳು ತಮ್ಮ ಮನೆಮನೆಯ ಶುಶ್ರೂಷೆಯಲ್ಲಿ 1982 ರಲ್ಲಿ ಸಂಪರ್ಕಿಸಿದರು. ಇಡೀ ಕುಟುಂಬದೊಂದಿಗೆ ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು. ಬೇಗನೆ ಅವರ ಮೂವರು ಮಕ್ಕಳು ಅಜಿಯ್ಜಾದ ಇಗ್ನಾಸಿಯಮ್ಮಾಳ್ಳೊಂದಿಗೆ ದೇವರ ಹೆಸರಿನ ಕುರಿತು ಕೇಳತೊಡಗಿದರು. “ಯೆಹೋವ” ಎಂಬ ಉತ್ತರವನ್ನು ಮಕ್ಕಳು ತಾವೇ ಒದಗಿಸಿದಾಗ, ಅವರು ಅಜಿಯ್ಜ ಆಸಕ್ತಿಯನ್ನು ಎಬ್ಬಿಸಿದರು, ಮತ್ತು ಅವಳೊಂದಿಗೆ ಒಂದು ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು. ಬಳಿಕ ಅವಳ ಇಬ್ಬರು ಹೆಣ್ಣು ಮಕ್ಕಳು, ಜೀವಕಲಾ ಮತ್ತು ಸೆಲ್ಟ ಅಭ್ಯಾಸದಲ್ಲಿ ಜತೆಗೂಡಿದರು, ಮತ್ತು 1988 ರೊಳಗೆ ಮೂವರಿಗೂ ದೀಕ್ಷಾಸ್ನಾನವಾಯಿತು.
ಈ ಮಧ್ಯೆ, ಬಾಲೇಂದ್ರನ್ ಮತ್ತು ಫಾತಿಮ, ಫಾತಿಮಳ ಇನ್ನೊಬ್ಬ ತಂಗಿ ಮಲ್ಲಿಕ ಮತ್ತು ಅವಳ ಗಂಡ ಯೋಗನಾತನ್ನೊಂದಿಗೆ ಸತ್ಯವನ್ನು ಹಂಚಿದರು. ಈ ದಂಪತಿಗಳು 1987 ರೊಳಗೆ ದೀಕ್ಷಾಸ್ನಾನ ಪಡೆದುಕೊಂಡರು, ಮತ್ತು ತಮ್ಮ ಇಬ್ಬರು ಮಕ್ಕಳಲ್ಲಿ ಯೆಹೋವನಿಗಾಗಿ ಬೆಳೆಯುವ ಪ್ರೀತಿಯನ್ನು ತುಂಬಿದ್ದಾರೆ. ಆಮೇಲೆ ಫಾತಿಮಳ ಇನ್ನೊಬ್ಬ ತಂಗಿ ಪುಷ್ಪ ಸತ್ಯಕ್ಕೆ ಬಂದಳು. ಅವಳು ಸಮರ್ಪಣೆಯನ್ನು ಮಾಡಿಕೊಂಡು 1990 ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಟೋಕಿಯೊದಲ್ಲಿರುವಾಗ, ಅವಳ ಗಂಡ ಏಕ, ಒಂದು ಇಂಗ್ಲಿಷ್ ಸಭೆಯೊಂದಿಗೆ ಸೇವೆಮಾಡಿದನು, ಮತ್ತು ಪುಷ್ಪ ಅವರ ಎಳೆಯ ಮಗ ಆಲ್ಫ್ರೆಡ್ಗೆ ಯೆಹೋವನ ಮಾರ್ಗದಲ್ಲಿ ಬೆಳೆಯುವಂತೆ ಸಹಾಯ ಮಾಡಿದಳು.
ಇಷ್ಟರ ವರೆಗೆ ರತ್ನಂ ಕುಟುಂಬದ ಹತ್ತು ಮಕ್ಕಳಲ್ಲಿ ನಾಲ್ವರು ಸತ್ಯಾರಾಧನೆಗಾಗಿ ತಮ್ಮ ಸ್ಥಾನವನ್ನು ತೆಗೆದುಕೊಂಡರು. ಸಂತೋಷಕರವಾಗಿ, ಇನ್ನೂ ಮೂವರು ತಮ್ಮ ವೈಯಕ್ತಿಕ ಬೈಬಲಧ್ಯಯನಗಳಲ್ಲಿ ಒಳ್ಳೇ ಪ್ರಗತಿಯನ್ನು ಮಾಡುತ್ತಿದ್ದಾರೆ. 11 ಮಂದಿ ಮೊಮ್ಮಕ್ಕಳಲ್ಲಿ, ಒಬ್ಬ ಹುಡುಗಿಯಾದ ಪ್ರದೀಪ, ಈಗಾಗಲೆ ದೀಕ್ಷಾಸ್ನಾನ ಪಡೆದಿದ್ದಾಳೆ. ಬೇರೆ ಏಳು ಮಂದಿ ಎಳೆಯರಿಗೆ ಅವರ ಕುಟುಂಬ ಬೈಬಲಧ್ಯಯನದ ಮೂಲಕ ಕ್ರಮವಾದ ಉಪದೇಶವನ್ನು ನೀಡಲಾಗುತ್ತಿದೆ. ಅಷ್ಟಲ್ಲದೆ, ನೆರೆಹೊರೆಯ ಆಸಕ್ತ ಜನರೊಂದಿಗೆ 24 ಗೃಹ ಬೈಬಲಧ್ಯಯನಗಳು ನಡೆಸಲ್ಪಡುತ್ತಿವೆ.
ಇವೆಲ್ಲವು ಸುಲಭವಾಗಿಯೆ ಸಂಭವಿಸಲಿಲ್ಲ. ಆರಂಭದಲ್ಲಿ, ಕುಟುಂಬ ವಿರೋಧವಿತ್ತು. ತಮ್ಮ ಕುಟುಂಬದಲ್ಲಿ ಯಾರೂ ಕೂಟಗಳಿಗೆ ಹಾಜರಾಗುವುದನ್ನು ಮತ್ತು ಸಾರ್ವಜನಿಕವಾಗಿ ಸಾರುವ ಕಾರ್ಯದಲ್ಲಿ ಭಾಗವಹಿಸುವುದನ್ನು, ತಂದೆ ಮುತ್ತುಪಿಳ್ಳೆ ಮತ್ತು ಅಣ್ಣಂದಿರು ಅತಿಯಾಗಿ ವಿರೋಧಿಸಿದ್ದರು. ಸ್ವಲ್ಪ ವಿರೋಧವು ವೈಯಕ್ತಿಕ ಸುರಕ್ಷೆಯ ಚಿಂತೆಯ ಕಾರಣದಿಂದಿದ್ದರೂ, ಮುತ್ತುಪಿಳ್ಳೆ ಕೂಡಿಸುವುದು: “ನಾನು ‘ಸಂತರಿಗೆ’ ಸಂಪೂರ್ಣವಾಗಿ ಬದ್ಧನಾಗಿದ್ದೆ ಮತ್ತು ನನ್ನ ಕುಟುಂಬವು ಕ್ಯಾತೊಲಿಕ್ ಚರ್ಚನ್ನು ತ್ಯಜಿಸುವುದನ್ನು ನಾನು ಒಪ್ಪಲಿಲ್ಲ.” ಆದರೂ ಈಗ, ಅವರು ಸತ್ಯ ದೇವರನ್ನು ಆರಾಧಿಸುತ್ತಾರೆಂದು ಅವನು ನಂಬುತ್ತಾನೆ ಯಾಕೆಂದರೆ ಅವರ ನಂಬಿಕೆಯು ಅವರಿಗೆ ತಂದ ಪ್ರಯೋಜನಗಳನ್ನು ಅವನು ಕಾಣಬಲ್ಲನು.
ದೃಷ್ಟಾಂತಕ್ಕಾಗಿ, ಒಮ್ಮೆ ಅವರ ಬೌದ್ಧ ಜಮೀನುದಾರನು ಅವರಿಗೆ ಮಂತ್ರಮಾಡುವ ಮೂಲಕ, ಅವರನ್ನು ತನ್ನ ಜಮೀನಿನಿಂದ ಹೊರಗಟ್ಟಲು ಪ್ರಯತ್ನಿಸಿದನು. ಒಂದು ರಾತ್ರಿ ಅವನು “ಮಂತ್ರಹಾಕಿದ” ಲಿಂಬೆ ಹಣ್ಣುಗಳನ್ನು ಅವರ ಮನೆಯ ಸುತ್ತಲೂ ಹಾಕಿಹೋದನು. ಮೂಢನಂಬಿಕೆಯ ನೆರೆಹೊರೆಯವರು ಭಯಭೀತರಾದರು, ರತ್ನಂ ಕುಟುಂಬಕ್ಕೆ ಯಾವುದೊ ಅಶುಭ ಘಟನೆಯು ಹೊಡೆಯುವುದನ್ನು ಅವರೆಲ್ಲರೂ ನಿರೀಕ್ಷಿಸುತ್ತಿದ್ದರು. ಇಗ್ನಾಸಿಯಮ್ಮಾಳ್ಗೆ ಇದು ತಿಳಿದಾಗಲಾದರೊ, ಅವಳು ಮತ್ತು ಅವಳ ಮಕ್ಕಳು ಯಾವುದೇ ಭಯ ಅಥವಾ ತಲ್ಲಣವಿಲ್ಲದೆ ಆ ಹಣ್ಣುಗಳನ್ನು ಕೇವಲ ತೆಗೆದುಬಿಟ್ಟರು, ಮತ್ತು ಯಾವುದೇ ಕೆಡುಕು ಅವರಿಗೆ ಸಂಭವಿಸಲಿಲ್ಲ. ಅವರ ನಿರ್ಭೀತ ಕೃತ್ಯವು ಆ ಕ್ಷೇತ್ರದಲ್ಲಿ ದೊಡ್ಡ ಸಾಕ್ಷಿಯಾಗಿ ಪರಿಣಮಿಸಿ, ಜನರು ಅವರಿಗೆ ಅತಿ ಮರ್ಯಾದೆ ಕೊಡುವಂತೆ ಅದು ಮಾಡಿತು. ಸೆಲ್ಟ ಪಕ್ಕದ ಮನೆಗಳಲ್ಲಿ ಎರಡು ಬೈಬಲಧ್ಯಯನಗಳನ್ನು ಆರಂಭಿಸಶಕ್ತಳಾದಳು. ಇದರಿಂದ ಪ್ರೋತ್ಸಾಹಿತಳಾದ ಸೊಸೆ ನಸೀರ ಸಹ ಒಂದು ಬೈಬಲಧ್ಯಯನವನ್ನು ಸ್ವೀಕರಿಸಿದಳು.
ತನ್ನ ಕುಟುಂಬಕ್ಕೆ ಬಂದ ಅನೇಕ ಆಶೀರ್ವಾದಗಳನ್ನು ಮರುಜ್ಞಾಪಿಸುತ್ತಾ, ಇಗ್ನಾಸಿಯಮ್ಮಾಳ್ ಅವಲೋಕಿಸುವುದು: “ಕುಟುಂಬದೊಳಗಿನ ಆತ್ಮಿಕ ಬೆಳವಣಿಗೆಯನ್ನು ಕಾಣಲು ನಾನು ಸಂತೋಷಿಸುತ್ತೇನೆ. ಯೆಹೋವನು ನಮ್ಮನ್ನು ಆಶೀರ್ವದಿಸಿದ್ದಾನೆ ಯಾಕೆಂದರೆ ಕುಟುಂಬ ವಿರೋಧವು ಶಾಂತವಾಗಿದೆ, ಮತ್ತು ನಮ್ಮ ಕುಟುಂಬದ ಐಕ್ಯವು ವೃದ್ಧಿಯಾಗಿರುತ್ತದೆ.”
ಈ ದೊಡ್ಡ ಕುಟುಂಬಗಳು ಎಂತಹ ಆಶೀರ್ವಾದವಾಗಿ ಪರಿಣಮಿಸಿವೆ. ಅವರು ತಮ್ಮ ಧ್ವನಿಗಳನ್ನು, ಶ್ರೀಲಂಕಾ ಎಂಬ ಹೆಸರಿನ ಅರ್ಥವಾಗಿರುವ “ದೇದೀಪ್ಯಮಾನ ದೇಶ” ದಲ್ಲಿ, ರಾಜ್ಯದ ಸುವಾರ್ತೆಯ ಘೋಷಣೆಯನ್ನು ತರ್ವೆಗೊಳಿಸಲು ಶ್ರಮಿಸುವಂತಹ ಚಿಕ್ಕ ಚಿಕ್ಕ ಕುಟುಂಬಗಳ, ಏಕಹೆತ್ತವರಿರುವ ಕುಟುಂಬಗಳ, ಮತ್ತು ಒಬ್ಬಂಟಿಗ ಕ್ರೈಸ್ತರ ಧ್ವನಿಗಳಿಗೆ ಜತೆಗೂಡಿಸಿದ್ದಾರೆ. ಜಗದ್ವ್ಯಾಪಕವಾಗಿ ತಮ್ಮ ಜೊತೆ ಕ್ರೈಸ್ತರೊಂದಿಗೆ ಒಂದುಗೂಡುತ್ತಾ, ಶ್ರೀಲಂಕಾದ ಸಾಕ್ಷಿಗಳು ಪ್ರಮೋದವನದ ಪುನಃಸ್ಥಾಪನೆಗಾಗಿ ಮುನ್ನೋಡುತ್ತಿದ್ದಾರೆ, ಅದನ್ನು ಸುಂದರ ಶ್ರೀಲಂಕಾದ ಕಡಲತೀರಗಳು ಮತ್ತು ಬೆಟ್ಟಗಳಲ್ಲಿ ನಾವು ನೋಡುವಂತೆ, ಈಗಲೂ ನಾವು ಅದನ್ನು ಮನಸ್ಸಿಗೆ ತರಬಹುದು.
[ಅಧ್ಯಯನ ಪ್ರಶ್ನೆಗಳು]
a ಅಲ್ಲಿರುವ ಒಂದು ದೊಡ್ಡ ತಗ್ಗು, ಅನುಕ್ರಮವಾಗಿ ಮುಸ್ಲಿಮ್, ಬೌದ್ಧ, ಹಿಂದೂ, ಮತ್ತು ಚರ್ಚ್ ಪುರಾಣ ಕಥೆಗಳಲ್ಲಿ ಆದಾಮ, ಬುದ್ಧ, ಶಿವ, ಮತ್ತು “ಸಂತ” ತಾಮಸನ ಹೆಜ್ಜೆಯ ಗುರುತೆಂದು ಅಭಿಪ್ರಯಿಸಲಾಗುತ್ತದೆ.
[ಪುಟ 24,25 ರಲ್ಲಿರುವಚಿತ್ರಗಳು]
ಶ್ರೀಲಂಕಾದಲ್ಲಿರುವ ಅನೇಕರು ಕ್ರೈಸ್ತ ಸಾರುವಿಕೆ ಮತ್ತು ಕಲಿಸುವಿಕೆಗೆ ಪ್ರತಿಕ್ರಿಯಿಸುತ್ತಿದ್ದಾರೆ