ಬಹು ಬೆಲೆಯುಳ್ಳ ಒಂದು ಮುತ್ತು ನಮಗೆ ಕೊಡಲ್ಪಟ್ಟಿತು
ರಿಚರ್ಡ್ ಗನ್ತರ್ ಹೇಳಿದಂತೆ
ಸಪ್ಟಂಬರ್ 1959. ನ್ಯೂ ಯಾರ್ಕ್ನಿಂದ ಸ್ಪೆಯ್ನ್ನ ಕಡಿಸ್ಗೆ, ಅಟ್ಲಾಂಟಿಕ್ ಮಹಾಸಾಗರವನ್ನು ದಾಟುತ್ತಿದ್ದ ಜೂಲ್ಯೊ ಸೀಸರ್ ಎಂಬ ಇಟಾಲಿಯನ್ ಹಡಗಿನ ಮೇಲೆ ನಾವಿದ್ದೆವು. ವಾಚ್ ಟವರ್ ಸೊಸೈಟಿಯು ನನ್ನ ಹೆಂಡತಿ ರೀಟ ಮತ್ತು ನನ್ನೊಂದಿಗೆ, ಇನ್ನೊಬ್ಬ ಮಿಷನೆರಿ ದಂಪತಿಗಳಾದ ಪಾಲ್ ಮತ್ತು ಎವ್ಲಿನ್ ಹಂಡರ್ಮ್ಟಾರ್ಕ್ರನ್ನು ಆ ಐಬೀರಿಯನ್ ರಾಷ್ಟ್ರಕ್ಕೆ ನೇಮಿಸಿತ್ತು. ನಾವು ಅನೇಕ ಪಂಥಾಹ್ವಾನಗಳನ್ನು ಎದುರಿಸಲಿದ್ದೆವು. ಆದರೆ ನಾವು ಒಂದು ಮಿಷನೆರಿ ಜೀವನಪಥದಲ್ಲಿ ತೊಡಗಿದ್ದು ಹೇಗೆ?
ರೀಟ ಮತ್ತು ನಾನು ಅಮೆರಿಕದ ನ್ಯೂ ಜರ್ಸಿಯಲ್ಲಿ 1950 ರಲ್ಲಿ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಹೊಂದಿದೆವು. ಬಹು ಬೆಲೆಯುಳ್ಳ ಒಂದು ಮುತ್ತು ಸಕಾಲದಲ್ಲಿ ನಮ್ಮ ಹಸ್ತಗಳಲ್ಲಿ ಇಡಲಿದ್ದ ಒಂದು ನಿರ್ಣಯವನ್ನು ನಾವು ಸ್ವಲ್ಪ ಸಮಯದಲ್ಲೇ ಮಾಡಿದೆವು. ಟೆರಿಟೊರಿಯನ್ನು ಆವರಿಸಲು ಸಾಕಷ್ಟು ಸಹೋದರಸಹೋದರಿಯರಿದ್ದ ಒಂದು ಸಭೆಯಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದೆವು. ಆದುದರಿಂದ ಸುರ್ವಾತಿಕರ ಹೆಚ್ಚಿನ ಅಗತ್ಯವಿರುವಲ್ಲಿ ನೀಡಿಕೊಳ್ಳಲು ನಾವು ಹಂಗಿನವರೆಂದು ನೆನಸಿದೆವು. 1958ರ ಬೇಸಗೆಯಲ್ಲಿ ನ್ಯೂ ಯಾರ್ಕ್ ನಗರದಲ್ಲಿನ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರಿಯ ಸಮ್ಮೇಳನದಲ್ಲಿ, ನಾವು ಮಿಷನೆರಿ ಸೇವೆಗಾಗಿ ಅರ್ಜಿ ಸಲ್ಲಿಸಿದೆವು.
ತದನಂತರ ಸ್ವಲ್ಪ ಸಮಯದಲ್ಲೇ, ನಾವು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಆಮಂತ್ರಿಸಲ್ಪಟ್ಟೆವು ಮತ್ತು ಒಂದು ವರ್ಷದೊಳಗೆ ನಾವು ಸ್ಪೆಯ್ನ್ಗೆ ಮಿಷನೆರಿಗಳಾಗಿ ಹೋಗುವ ಕಾರ್ಯಗತಿಯಲ್ಲಿದ್ದೆವು. ಅನೇಕ ಏರ್ಪಾಡುಗಳಲ್ಲಿ ತೀರ ಒಳಗೂಡಿದ್ದು ಉದ್ರೇಕದಿಂದ ತುಂಬಿದವರಾಗಿದುದರಿಂದ, ನಮಗೆ ಏನು ಕೊಡಲ್ಪಟ್ಟಿತ್ತೋ ಅದರ ಮೌಲ್ಯವನ್ನು ನಾವು ಆ ಸಮಯದಲ್ಲಿ ಗ್ರಹಿಸಲಿಲ್ಲ. ಯೇಸು ಬಹು ಬೆಲೆಯುಳ್ಳ ಒಂದು ಮುತ್ತಿನ ಕುರಿತಾಗಿ ಮಾತಾಡಿದ್ದನು. (ಮತ್ತಾಯ 13:45, 46) ನಮ್ಮ ಮಿಷನೆರಿ ಸುಯೋಗವು ಅವನ ಸಾಮ್ಯದ ಅರ್ಥವಾಗಿರದಿದ್ದರೂ, ಮಿಷನೆರಿಗಳಾಗಿ ಸೇವೆ ಸಲ್ಲಿಸುವ ನಮ್ಮ ಸುಯೋಗವು ನಮಗೆ ಒಂದು ಮುತ್ತಿಗೆ ಹೋಲುವಂತಹದ್ದಾಗಿತ್ತು. ಹಿಂದಿರುಗಿ ನೋಡುವಾಗ, ಯೆಹೋವನ ಸಂಸ್ಥೆಯಲ್ಲಿ ಸೇವೆಯ ಈ ಅಮೂಲ್ಯ ಕೊಡುಗೆಯನ್ನು ನಾವು ಇನ್ನೂ ಹೆಚ್ಚು ಗಣ್ಯಮಾಡುತ್ತೇವೆ.
ಒಂದು ಸ್ಮರಣೀಯ ಅನುಭವ
ಆ ಸಮಯದಲ್ಲಿ ಗಿಲ್ಯಡ್ ಮಿಷನೆರಿ ಪಾಠಕ್ರಮವು, ನ್ಯೂ ಯಾರ್ಕ್ ರಾಜ್ಯದ ಫಿಂಗರ್ ಲೇಕ್ಸ್ ಪ್ರದೇಶದ, ಸುಂದರ ಗ್ರಾಮೀಣ ಪರಿಸರಗಳಲ್ಲಿ ನಡಿಸಲ್ಪಟ್ಟಿತ್ತು. ಈ ಲೋಕದ ವ್ಯವಹಾರಗಳು ಮತ್ತು ಸಮಸ್ಯೆಗಳಿಂದ ಪ್ರತ್ಯೇಕವಾಗಿ, ಬೈಬಲ್ ಅಭ್ಯಾಸದಲ್ಲಿ ಮತ್ತು ನಿಜ ಕ್ರೈಸ್ತ ಸಹವಾಸದಲ್ಲಿ ಸಂಪೂರ್ಣವಾಗಿ ಮಗ್ನರಾಗಿರುತ್ತಾ ಆರು ಅದ್ಭುತಕರ ತಿಂಗಳುಗಳನ್ನು ನಾವು ಅಲ್ಲಿ ಕಳೆದೆವು. ಆಸ್ಟ್ರೇಲಿಯ, ಬೊಲಿವಿಯ, ಬ್ರಿಟನ್, ಗ್ರೀಸ್, ಮತ್ತು ನ್ಯೂ ಸೀಲೆಂಡನ್ನು ಒಳಗೂಡಿಸಿ, ನಮ್ಮ ಜೊತೆವಿದ್ಯಾರ್ಥಿಗಳು ಲೋಕದ ಅನೇಕ ಭಾಗಗಳಿಂದ ಬಂದಿದ್ದರು. ಆದಾಗಲೂ, ಬೇಗನೇ ಪದವಿ ಪ್ರಾಪ್ತಿ ದಿನ ಬಂತು. 1959ರ ಆಗಸ್ಟ್ನಲ್ಲಿ ನಾವು ನಮ್ಮ ಮಿಷನೆರಿ ನೇಮಕಗಳಿಗೆ ನಮ್ಮ ಸಮುದ್ರ ಪ್ರಯಾಣವನ್ನು ಆರಂಭಿಸಿದಾಗ ಕಣ್ಣೀರಿನೊಂದಿಗೆ ವಿದಾಯ ಹೇಳಿದೆವು. ಒಂದು ತಿಂಗಳ ನಂತರ ನಾವು ಸ್ಪೆಯ್ನ್ನಲ್ಲಿ ಆಗಮಿಸಿದೆವು.
ಒಂದು ಹೊಸ ಸಂಸ್ಕೃತಿ
ಬಹು ದೊಡ್ಡದಾಗಿರುವ ರಾಕ್ ಆಫ್ ಜಿಬ್ರಾಲ್ಟರ್ನ ಬಳಿಯಲ್ಲಿ, ದಕ್ಷಿಣದ ಆಲ್ಜಸಿರಸ್ ಬಂದರಿನಲ್ಲಿ ನಾವು ಇಳಿದೆವು. ಆ ರಾತ್ರಿ ನಾವು ನಾಲ್ವರು, ಹಂಡರ್ಮ್ಟಾರ್ಕ್ ದಂಪತಿಗಳೊಂದಿಗೆ ರೀಟ ಮತ್ತು ನಾನು, ಮಡ್ರಿಡ್ಗೆ ಹೋಗಲು ಒಂದು ರೈಲನ್ನು ಹತ್ತಿದೆವು. ಸಂಸ್ಥೆಯ ಗುಪ್ತ ಶಾಖಾ ಆಫೀಸಿನ ಸದಸ್ಯರಿಂದ ಸಂಪರ್ಕಿಸಲ್ಪಡುವ ತನಕ ಕಾಯಲು, ನಾವು ಹೋಟೇಲ್ ಮೆರ್ಕಾಡೊರ್ಗೆ ಹೋದೆವು. ಸ್ಪೆಯ್ನ್ ಜನರಲಿಸಿಮೊ ಫ್ರಾನ್ಸಿಸ್ಕೊ ಫ್ರಾಂಕೋನ ನಿರಂಕುಶಾಧಿಕಾರಿ ಅಧಿಪತ್ಯದ ಕೆಳಗೆ ಇತ್ತು. ರಾಷ್ಟ್ರದಲ್ಲಿ ಕಾನೂನುಬದ್ಧವಾಗಿ ಅಂಗೀಕರಿಸಲ್ಪಟ್ಟಿದ್ದ ಏಕಮಾತ್ರ ಧರ್ಮವು ರೋಮನ್ ಕ್ಯಾತೊಲಿಕ್ ಚರ್ಚಾಗಿತ್ತೆಂದು ಇದರ ಅರ್ಥವಾಗಿತ್ತು. ಬೇರೆ ಯಾವುದೇ ಧರ್ಮವನ್ನು ಬಹಿರಂಗವಾಗಿ ಆಚರಿಸುವುದು ಕಾನೂನುಬಾಹಿರವಾಗಿತ್ತು, ಮತ್ತು ಯೆಹೋವನ ಸಾಕ್ಷಿಗಳ ಮನೆಯಿಂದ ಮನೆಯ ಸಾರುವ ಕಾರ್ಯವು ನಿಷೇಧಿಸಲ್ಪಟ್ಟಿತ್ತು. ಧಾರ್ಮಿಕ ಕೂಟಗಳು ಸಹ ಪ್ರತಿಷೇಧಿಸಲ್ಪಟ್ಟಿದ್ದರಿಂದ, ಆ ಸಮಯದಲ್ಲಿ ಸ್ಪೆಯ್ನ್ನಲ್ಲಿ 30 ಸಭೆಗಳಲ್ಲಿದ್ದ ಸುಮಾರು 1,200 ಯೆಹೋವನ ಸಾಕ್ಷಿಗಳಿಗೆ, ಇತರ ದೇಶಗಳಲ್ಲಿದ್ದಂತೆ ರಾಜ್ಯ ಸಭಾಗೃಹಗಳಲ್ಲಿ ಕೂಡಲು ಸಾಧ್ಯವಿರಲಿಲ್ಲ. ನಾವು ಗುಪ್ತವಾಗಿ ಖಾಸಗಿ ಮನೆಗಳಲ್ಲಿ ಕೂಡಬೇಕಾಗಿತ್ತು.
ಸ್ಪ್ಯಾನಿಷ್ ಭಾಷೆಯನ್ನು ಕಲಿಯುವುದು ಮತ್ತು ಆರಂಭಿಸುವುದು
ನಮ್ಮ ಮೊದಲ ಪಂಥಾಹ್ವಾನವು ಭಾಷೆಯನ್ನು ಕಲಿಯುವುದಾಗಿತ್ತು. ಮೊದಲ ತಿಂಗಳನ್ನು ನಾವು ದಿನವೊಂದಕ್ಕೆ 11 ತಾಸುಗಳನ್ನು ಸ್ಪಾನಿಷ್ ಕಲಿಯುವುದರಲ್ಲಿ ಕಳೆದೆವು—ಪ್ರತಿ ಬೆಳಗ್ಗೆ ಸ್ಪ್ಯಾನಿಷ್ ತರಗತಿಯಲ್ಲಿ 4 ತಾಸುಗಳು, ನಂತರ 7 ತಾಸುಗಳು ನಮ್ಮಷ್ಟಕ್ಕೇ ಅಭ್ಯಾಸಿಸುವುದು. ಎರಡನೆಯ ತಿಂಗಳು ಬೆಳಗ್ಗಿನ ಸಮಯಗಳಲ್ಲಿ ಅದೇ ಶೆಡ್ಯೂಲ್, ಆದರೆ ಮಧ್ಯಾಹ್ನಗಳು ಮನೆ ಮನೆಯ ಸಾರುವಿಕೆಗೆ ಮೀಸಲಾಗಿಡಲ್ಪಟ್ಟಿದ್ದವು. ನೀವು ಊಹಿಸಬಲ್ಲಿರೋ? ಇನ್ನೂ ಭಾಷೆಯನ್ನು ತಿಳಿದಿರದೆ, ಒಂದು ಕಾರ್ಡಿನ ಮೇಲೆ ಬರೆಯಲ್ಪಟ್ಟಿದ್ದ ಬಾಯಿಪಾಠ ಮಾಡಲ್ಪಟ್ಟ ಒಂದು ಪ್ರಸ್ತಾವನೆಯೊಂದಿಗೆ ರೀಟ ಮತ್ತು ನಾನು ನಮ್ಮಷ್ಟಕ್ಕೇ ಮನೆಯಿಂದ ಮನೆಯ ಕಾರ್ಯಕ್ಕೆ ಹೊರಟೆವು!
ಮಡ್ರಿಡ್ನ ಒಂದು ಕೂಲಿಕೆಲಸ ಮಾಡುವವರ ವಿಭಾಗವಾದ ವಾಯಕಸ್ನಲ್ಲಿ ಒಂದು ಬಾಗಿಲನ್ನು ತಟ್ಟಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ಒಂದು ವೇಳೆ ಅವಶ್ಯಬೀಳಬಹುದು ಎಂಬ ಕಾರಣದಿಂದ, ಕೈಯಲ್ಲಿ ನನ್ನ ಕಾರ್ಡನ್ನು ಹಿಡಿಯುತ್ತಾ, ನಾನು ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿದೆ: “ನಮಸ್ಕಾರ. ನಾವೊಂದು ಕ್ರಿಸ್ತೀಯ ಕೆಲಸವನ್ನು ಮಾಡುತ್ತಿದ್ದೇವೆ. ಬೈಬಲು ಹೀಗೆ ಹೇಳುತ್ತದೆ (ನಾವೊಂದು ವಚನವನ್ನು ಓದುತ್ತಿದ್ದೆವು). ನೀವು ಈ ಪುಸ್ತಿಕೆಯನ್ನು ಹೊಂದಿರುವಂತೆ ನಾವು ಇಷ್ಟಪಡುತ್ತೇವೆ.” ಒಳ್ಳೇದು, ಆ ಹೆಂಗಸು ಕೇವಲ ದಿಟ್ಟಿಸುದಳು, ನಂತರ ಆ ಪುಸ್ತಿಕೆಯನ್ನು ತೆಗೆದುಕೊಂಡಳು. ನಾವು ಪುನರ್ಭೇಟಿಯನ್ನು ಮಾಡಿದಾಗ ಅವಳು ನಮ್ಮನ್ನು ಒಳಗೆ ಆಮಂತ್ರಿಸಿದಳು ಮತ್ತು ನಾವು ಮಾತಾಡುತ್ತಾ ಇದ್ದಂತೆ ಅವಳು ಕೇವಲ ದಿಟ್ಟಿಸುದಳು. ನಮ್ಮ ಸೀಮಿತ ಸ್ಪ್ಯಾನಿಷ್ ಭಾಷೆಯಲ್ಲಿ ನಾವು ಅವಳೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದೆವು, ಮತ್ತು ಅಭ್ಯಾಸಗಳ ಸಮಯದಲ್ಲಿ ಅವಳು ಕೇವಲ ಕಿವಿಗೊಟ್ಟಳು ಮತ್ತು ದಿಟ್ಟಿಸುದಳು. ಸ್ವಲ್ಪ ಸಮಯದ ನಂತರ ಅವಳು ಕೊನೆಗೆ ನಮಗೆ ಹೇಳಿದ್ದೇನಂದರೆ, ನಮ್ಮ ಪ್ರಥಮ ಭೇಟಿಯಲ್ಲಿ ನಾವೇನನ್ನು ಹೇಳಿದ್ದೆವೊ ಅದು ಅವಳಿಗೆ ಅರ್ಥವಾಗಿರಲಿಲ್ಲ, ಆದರೆ ಅವಳು ಡಿಯಾಸ್ (ದೇವರು) ಎಂಬ ಶಬ್ದವನ್ನು ಕೇಳಿದ್ದಳು, ಮತ್ತು ಇದು ಒಂದು ಒಳ್ಳೆಯ ವಿಷಯವಾಗಿದೆಯೆಂದು ಅವಳಿಗೆ ತಿಳಿಯಲು ಸಾಕಾಗಿತ್ತು. ಸಕಾಲದಲ್ಲಿ, ಅವಳು ಗಣನೀಯವಾಗಿ ಬೈಬಲ್ ಸಂಬಂಧಿತ ಜ್ಞಾನವನ್ನು ತೆಗೆದುಕೊಂಡಳು ಮತ್ತು ದೀಕ್ಷಾಸ್ನಾನ ಪಡೆಯುತ್ತಾ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಳು.
ಸ್ಪ್ಯಾನಿಷ್ ಭಾಷೆಯನ್ನು ಕಲಿಯುವುದು ನನಗೆ ವಿಪರೀತವಾಗಿ ಕಷ್ಟಕರವಾಗಿತ್ತು. ನಗರದಲ್ಲಿ ಪ್ರಯಾಣಿಸುತ್ತಿದ್ದಾಗ ನಾನು ಕ್ರಿಯಾಧಾತು ಸಂಯೋಜನಗಳನ್ನು ಬಾಯಿಪಾಠಮಾಡಿಕೊಳ್ಳುತ್ತಿದ್ದೆ. ನಾನು ಒಂದು ವಾರದಲ್ಲಿ ಬಾಯಿಪಾಠಮಾಡಿಕೊಂಡಂತಹದ್ದನ್ನು ಇನ್ನೊಂದು ವಾರದಲ್ಲಿ ಮರೆಯುತ್ತಿದ್ದೆ! ಅದು ತುಂಬ ನಿರುತ್ಸಾಹದಾಯಕವಾಗಿತ್ತು. ಹಲವಾರು ಸಲ, ನಾನು ಕಲಿಯುವುದನ್ನು ಸುಮಾರು ಬಿಟ್ಟುಬಿಡುವುದರಲ್ಲಿದ್ದೆ. ನಾನು ಅವರ ಮಧ್ಯೆ ನಾಯಕತ್ವ ವಹಿಸುತ್ತಿದ್ದುದರಿಂದ ಸ್ಪ್ಯಾನಿಷ್ ಸಹೋದರರು ತುಂಬ ತಾಳ್ಮೆಯುಳ್ಳವರಾಗಿರಬೇಕಿತ್ತು ಯಾಕಂದರೆ ನಾನು ಅಂತಹ ಭಯಂಕರ ಸ್ಪ್ಯಾನಿಷ್ ಭಾಷೆಯನ್ನು ಆಡುತ್ತಿದ್ದೆ. ಒಂದು ಜಿಲ್ಲಾ ಅಧಿವೇಶನದಲ್ಲಿ, ವೇದಿಕೆಯಿಂದ ಓದಿ ಹೇಳುವಂತೆ ಒಂದು ಹಸ್ತಲಿಖಿತ ಪ್ರಕಟನೆಯನ್ನು ಒಬ್ಬ ಸಹೋದರನು ನನಗೆ ಕೊಟ್ಟನು. ಅವನ ಬರವಣಿಗೆಯನ್ನು ಓದಲು ಕಷ್ಟಪಡುತ್ತಾ, ನಾನು ಘೋಷಿಸಿದ್ದು: “ನಾಳೆ ನಿಮ್ಮ ಮೂಲೆಟಾಸ್ಗಳನ್ನು (ಕಂಕುಳುಕೋಲುಗಳು) ಸ್ಟೇಡಿಯಂಗೆ ತನ್ನಿರಿ.” ಅದು ನಿಜವಾಗಿ “ನಾಳೆ ನಿಮ್ಮ ಮಾಲೆಟಾಸ್ಗಳನ್ನು (ಲಗೆಜ್) ಸ್ಟೇಡಿಯಂಗೆ ತನ್ನಿರಿ” ಎಂದು ಆಗಬೇಕಿತ್ತು. ಖಂಡಿತವಾಗಿಯೂ, ಜನಸಮೂಹವು ನಕ್ಕಿತು, ಮತ್ತು ಸ್ವಾಭಾವಿಕವಾಗಿಯೆ ನಾನು ಪೇಚಾಟಕ್ಕೊಳಗಾದೆ.
ಮಡ್ರಿಡ್ನಲ್ಲಿ ಆರಂಭಿಕ ಪರೀಕ್ಷೆಗಳು
ಮಡ್ರಿಡ್ನಲ್ಲಿನ ಆ ಪ್ರಥಮ ಕೆಲವು ವರ್ಷಗಳು ರೀಟ ಮತ್ತು ನನಗೆ ಭಾವನಾತ್ಮಕವಾಗಿ ತುಂಬ ಕಷ್ಟಕರವಾಗಿದ್ದವು. ನಮ್ಮ ಮನೆ ಮತ್ತು ನಮ್ಮ ಸ್ನೇಹಿತರನ್ನು ನಾವು ತುಂಬ ಸ್ಮರಿಸುತ್ತಿದ್ದೆವು. ಅಮೆರಿಕದಿಂದ ನಾವು ಒಂದು ಪತ್ರವನ್ನು ಪಡೆಯುತ್ತಿದ್ದ ಪ್ರತಿಯೊಂದು ಸಲ, ಮನೆಯ ಗೀಳು ನಮಗೆ ಹತ್ತುತ್ತಿತ್ತು. ಮನೆಯ ಹಂಬಲದ ಆ ಅವಧಿಗಳು ತಡೆಯಲಸಾಧ್ಯವಾಗಿದ್ದವು, ಆದರೆ ಅವು ದಾಟಿಹೋದವು. ಎಷ್ಟೆಂದರೂ ನಾವು ಅವುಗಳ ಸ್ಥಾನದಲ್ಲಿ ಹೆಚ್ಚಿನ ಬೆಲೆಯುಳ್ಳ ಒಂದು ಮುತ್ತನ್ನು ಪಡೆಯಲು ಮನೆ, ಕುಟುಂಬ, ಮತ್ತು ಸ್ನೇಹಿತರನ್ನು ಬಿಟ್ಟುಬಂದಿದ್ದೆವು. ನಾವು ಹೊಂದಿಸಿಕೊಳ್ಳುವ ಅಗತ್ಯವಿತ್ತು.
ನಾವು ಮೊದಲು ಮಡ್ರಿಡ್ನಲ್ಲಿ ವಾಸಿಸಿದಾಗ, ನಾವು ತುಂಬ ದುಸ್ಥಿತಿಯಲ್ಲಿದ್ದ ಒಂದು ಭೋಜನಗೃಹದಲ್ಲಿ ಅಥವಾ ಭೋಜನ ಶಾಲೆಯಲ್ಲಿ ಜೀವಿಸುತ್ತಿದ್ದೆವು. ನಮಗೆ ಒಂದು ಕೋಣೆಯಿತ್ತು ಮತ್ತು ದಿನಕ್ಕೆ ಮೂರು ಊಟಗಳಿದ್ದವು. ಅದೊಂದು ಚಿಕ್ಕ ಕತ್ತಲೆಯ ಕೋಣೆಯಾಗಿತ್ತು, ಮತ್ತು ಹಾಸಿಗೆಗಳು ಒಣ ಹುಲ್ಲಿನಿಂದ ಮಾಡಲ್ಪಟ್ಟವುಗಳಾಗಿದ್ದವು. ತಿಂಗಳ ಬಾಡಿಗೆಯು ನಮ್ಮ ಮಿತವಾದ ಮಾಸಿಕ ಭತ್ಯವನ್ನು ಮುಗಿಸುತ್ತಿತ್ತು. ನಾವು ಸಾಮಾನ್ಯವಾಗಿ ಮಧ್ಯಾಹ್ನ ಅಲ್ಲಿ ಊಟಮಾಡುತ್ತಿದ್ದೆವು, ಮತ್ತು ನಾವು ರಾತ್ರಿ ತಡವಾಗಿ ಬರುವಾಗ ನಮಗೆ ತಿನ್ನಲು ಏನಾದರೂ ಇರುವಂತೆ, ಮನೆಯೊಡತಿಯು ನಮ್ಮ ಸಂಜೆಯೂಟವನ್ನು ಬೆಚ್ಚಗೆಡಲು ಒಲೆಯಲ್ಲಿ ಇಡುತ್ತಿದ್ದಳು. ಹಾಗಿದ್ದರೂ, ದಿನದಲ್ಲಿ ಮತ್ತು ಸಂಜೆಯಲ್ಲಿ ಸುವಾರ್ತಾ ಕಾರ್ಯದಲ್ಲಿ ರಸ್ತೆಗಳಲ್ಲಿ ನಡೆಯುತ್ತಾ, ನಮಗೆ ತುಂಬಾ ಹಸಿವಾಗುತ್ತಿತ್ತು. ನಮ್ಮಲ್ಲಿ ಯಾವುದೇ ಭತ್ಯ ಉಳಿಯದಿದ್ದಲ್ಲಿ, ನಾವು ಕಂಡುಹಿಡಿಯಬಹುದಾದ ಅತ್ಯಂತ ಕಡಿಮೆ ಬೆಲೆಯ ಚಾಕೊಲೆಟ್ಗಳನ್ನು ಕೊಳ್ಳಲು ನಮ್ಮ ಸೀಮಿತವಾದ ವೈಯಕ್ತಿಕ ಹಣವನ್ನು ಖರ್ಚುಮಾಡುತ್ತಿದ್ದೆವು. ಆದಾಗಲೂ, ಸೊಸೈಟಿಯ ವಲಯ ಮೇಲ್ವಿಚಾರಕರ ಭೇಟಿಯೊಂದಿಗೆ ಈ ಪರಿಸ್ಥಿತಿಯು ಬೇಗನೇ ಬದಲಾಯಿತು. ಅವರು ನಮ್ಮ ಅವಸ್ಥೆಯನ್ನು ನೋಡಿ, ಒಂದು ಮಿಷನೆರಿ ಗೃಹವಾಗಿ ಉಪಯೋಗಿಸಲು ನಾವು ಒಂದು ಚಿಕ್ಕ ವಾಸದ ಕೋಣೆಯನ್ನು ಹುಡುಕಸಾಧ್ಯವಿದೆಯೆಂದು ಹೇಳಿದನು. ಒಳ್ಳೇದು, ಇದು ಅಡಿಗೆ ಕೋಣೆಯಲ್ಲಿ ನೆಲದ ಮೇಲೆ ಒಂದು ಗೋಳಾಕಾರದ ತೊಟ್ಟಿಯಲ್ಲಿ ನಿಂತು ಸ್ನಾನಮಾಡುವದಕ್ಕಿಂತ ತುಂಬ ಉತ್ತಮವಾಗಿತ್ತು. ಈಗ ನಾವು ವೃಷ್ಟಿಸ್ನಾನದ ಉಪಕರಣ, ಆಹಾರವನ್ನಿಡಲು ಒಂದು ಶೀತಕ, ಮತ್ತು ನಮ್ಮ ಊಟಗಳನ್ನು ತಯಾರಿಸಲು ಒಂದು ಇಲೆಕ್ಟಿಕ್ರ್ ಬರ್ನರನ್ನು ಹೊಂದಲಿದ್ದೆವು. ಈ ಪರಿಗಣನೆಗಾಗಿ ನಾವು ತುಂಬ ಆಭಾರಿಗಳಾಗಿದ್ದೆವು.
ಮಡ್ರಿಡ್ನಲ್ಲಿ ಅದ್ಭುತಕರ ಅನುಭವಗಳು
ಮನೆಯಿಂದ ಮನೆಯ ಸಾರುವಿಕೆಯು ತುಂಬ ಜಾಗರೂಕತೆಯಿಂದ ನಡಿಸಲ್ಪಡುತ್ತಿತ್ತು. ಮಡ್ರಿಡ್ನಲ್ಲಿನ ದಿನನಿತ್ಯದ ಗಲಭೆಯು ಒಂದು ಪ್ರಯೋಜನವಾಗಿತ್ತು, ಏಕೆಂದರೆ ಅದು ನಾವು ಕಣ್ಣಿಗೆ ಬೀಳದಂತೆ ನಮ್ಮನ್ನು ಮರೆ ಮಾಡುತ್ತಿತ್ತು. ನಾವು ವಿದೇಶೀಯರೋಪಾದಿ ಗಮನ ಸೆಳೆಯದಂತೆ ನಾವು ಇತರರಂತೆ ಉಡುಪನ್ನು ಧರಿಸಲು ಮತ್ತು ವರ್ತಿಸಲು ಪ್ರಯತ್ನಿಸಿದೆವು. ಒಂದು ವಾಸದ ಕಟ್ಟಡವನ್ನು ಪ್ರವೇಶಿಸಿ, ಒಂದು ಮನೆಯ ಬಾಗಿಲನ್ನು ತಟ್ಟಿ, ವ್ಯಕ್ತಿಯೊಂದಿಗೆ ಮಾತಾಡಿ ಅನಂತರ ಆ ಕಟ್ಟಡ, ಬೀದಿ ಮತ್ತು ಕ್ಷೇತ್ರವನ್ನು ಬಿಟ್ಟುಹೋಗುವುದು, ನಾವು ಮನೆಬಾಗಿಲಿಂದ ಮನೆಬಾಗಿಲಿಗೆ ಸಾರುವ ವಿಧಾನವಾಗಿತ್ತು. ಮನೆಯವನು ಪೊಲೀಸರನ್ನು ಕರೆಕಳುಹಿಸುವ ಸಾಧ್ಯತೆ ಯಾವಾಗಲೂ ಇತ್ತು, ಈ ಕಾರಣದಿಂದ ಆ ನೆರೆಹೊರೆಯಲ್ಲಿ ಉಳಿಯುವುದು ವಿವೇಕದ ಸಂಗತಿಯಾಗಿರಲಿಲ್ಲ. ವಾಸ್ತವದಲ್ಲಿ, ಈ ವಿಧಾನವನ್ನು ಬಳಸುವುದರಲ್ಲಿ ಅವರು ಎಷ್ಟು ಜಾಗರೂಕರಾಗಿದ್ದರೂ, ಪಾಲ್ ಮತ್ತು ಎವ್ಲಿನ್ ಹಂಡರ್ಮ್ಟಾರ್ಕ್ ಬಂಧಿಸಲ್ಪಟ್ಟು 1960 ರಲ್ಲಿ ದೇಶದಿಂದ ಹೊರದಬ್ಬಲ್ಪಟ್ಪರು. ಅವರು ನೆರೆಯ ದೇಶದ ಪೋರ್ಚುಗಲ್ಗೆ ಹೋದರು. ಪಾಲ್, ಗುಪ್ತ ಶಾಖಾ ಆಫೀಸಿನ ಕಾರ್ಯಭಾರ ವಹಿಸುತ್ತಾ ಹಲವಾರು ವರ್ಷಗಳಿಗೆ ಅಲ್ಲಿ ಸೇವೆ ಸಲ್ಲಿಸಿದರು. ಇಂದು ಅವರು ಕ್ಯಾಲಿಫೋರ್ನಿಯದ ಸ್ಯಾನ್ ಡಿಯೇಗೋವಿನಲ್ಲಿ ನಗರ ಮೇಲ್ವಿಚಾರಕರಾಗಿದ್ದಾರೆ.
ಹಾಗಿದ್ದರೂ, ನಮಗೆ ಒಂದು ಸಮಾನತ್ವವು ಸಂಭವಿಸಿತು. ಕೇವಲ ಕೆಲವೇ ತಿಂಗಳುಗಳ ನಂತರ, ಪೋರ್ಚುಗಲ್ಗೆ ನೇಮಿಸಲ್ಪಟ್ಟಿದ್ದ ಆರು ಮಿಷನೆರಿಗಳು ಆ ದೇಶವನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಲ್ಪಟ್ಟರು! ಇದು ಒಂದು ಸಂತೋಷಕರ ಬೆಳವಣಿಗೆಗೆ ಕಾರಣವಾಯಿತು ಏಕೆಂದರೆ ಗಿಲ್ಯಾಡಿನ ನಮ್ಮ ತರಗತಿಯಲ್ಲಿದ್ದ ಎರಿಕ್ ಮತ್ತು ಹೇಸಲ್ ಬೆವರಿಜ್, ಈಗ ಪೋರ್ಚುಗಲನ್ನು ಬಿಟ್ಟು ಸ್ಪೆಯ್ನ್ಗೆ ಬರಲು ನಿರ್ದೇಶಿಸಲ್ಪಟ್ಟಿದ್ದರು. ಆದುದರಿಂದ ಫೆಬ್ರವರಿ 1962 ರಲ್ಲಿ ನಾವು ಪುನಃ ಒಮ್ಮೆ ಹೋಟೇಲ್ ಮೆರ್ಕಾಡೊರ್ನಲ್ಲಿ ಇದ್ದೆವು—ಈ ಸಲ ಎರಿಕ್ ಮತ್ತು ಹೇಸಲ್ ಆಗಮಿಸಿದಂತೆ ಅವರನ್ನು ಸ್ವಾಗತಿಸಲಿಕ್ಕಾಗಿ.
ಮಡ್ರಿಡ್ನಲ್ಲಿ ಈ ಆರಂಭದ ದಿನಗಳಲ್ಲಿಯೇ ರೀಟ ಮತ್ತು ನಾನು ಧಾರ್ಮಿಕ ಕಪಟಾಚರಣೆಯೊಂದಿಗಿನ ಒಂದು ವೈಯಕ್ತಿಕ ಅನುಭವವನ್ನು ಹೊಂದಿದೆವು. ಬೆರ್ನಾರ್ಡೊ ಮತ್ತು ಮಾರಿಯಾ ಎಂಬ ದಂಪತಿಗಳೊಂದಿಗೆ ನಾವು ಬೈಬಲನ್ನು ಅಭ್ಯಾಸಿಸುತ್ತಿದ್ದೆವು. ಅವರು, ಬೆರ್ನಾರ್ಡೊ ಕಂಡುಹಿಡಿಯಸಾಧ್ಯವಿದ್ದ ಕಟ್ಟುವಿಕೆಯ ಸಾಮಗ್ರಿಗಳ ಯಾವುದೇ ಎಸೆಯಲ್ಪಟ್ಟ ವಸ್ತುಗಳಿಂದ ಕಟ್ಟಲ್ಪಟ್ಟ ಒಂದು ಗುಡಿಸಿಲಿನಲ್ಲಿ ಜೀವಿಸುತ್ತಿದ್ದರು. ನಾವು ಅವರೊಂದಿಗೆ ರಾತ್ರಿ ತುಂಬ ತಡವಾಗಿ ಅಭ್ಯಾಸಿಸುತ್ತಿದ್ದೆವು, ಮತ್ತು ಅಭ್ಯಾಸದ ನಂತರ ಅವರು ನಮಗೆ ರೊಟ್ಟಿ, ದ್ರಾಕ್ಷಾಮದ್ಯ ಮತ್ತು ಸ್ವಲ್ಪ ಗಿಣ್ಣು ಅಥವಾ ಅವರಲ್ಲಿ ಏನು ಇರುತ್ತಿತ್ತೋ ಅದನ್ನು ನೀಡುತ್ತಿದ್ದರು. ಆ ಗಿಣ್ಣು ಅಮೆರಿಕನ್ ಗಿಣ್ಣಿನಂತೆಯೇ ಇತ್ತೆಂದು ನಾನು ಗಮನಿಸಿದೆ. ಒಂದು ರಾತ್ರಿ ಅಭ್ಯಾಸದ ನಂತರ, ಆ ಗಿಣ್ಣು ಯಾವುದರಲ್ಲಿ ಬರುತ್ತಿತ್ತೋ ಆ ಡಬ್ಬಿಯನ್ನು ಹೊರತಂದರು. ಅದರ ಮೇಲೆ ಇಂಗ್ಲಿಷ್ನಲ್ಲಿ ದೊಡ್ಡ ಅಕ್ಷರಗಳಲ್ಲಿ ಹೀಗೆ ಬರೆಯಲ್ಪಟ್ಟಿತ್ತು: “ಅಮೆರಿಕನ್ ಜನರಿಂದ ಸ್ಪ್ಯಾನಿಷ್ ಜನರಿಗೆ—ಮಾರಲ್ಪಡಬಾರದು.” ಈ ಬಡ ಕುಟುಂಬವು ಆ ಗಿಣ್ಣನ್ನು ಹೇಗೆ ಪಡೆಯಿತು? ಬಡವರಿಗೆ ಅದನ್ನು ಹಂಚಲಿಕ್ಕಾಗಿ ಕ್ಯಾತೊಲಿಕ್ ಚರ್ಚು ಸರಕಾರದಿಂದ ಬಳಸಲ್ಪಟ್ಟಿತ್ತು. ಆದರೆ ಪಾದ್ರಿಯು ಅದನ್ನು ಮಾರುತ್ತಿದ್ದನು!
ಮಿಲಿಟರಿಯೊಂದಿಗೆ ಫಲದಾಯಕ ಶುಶ್ರೂಷೆ
ನಮಗೆ ಮತ್ತು ಇತರರಿಗೆ ಒಂದು ಸಮೃದ್ಧ ಆಶೀರ್ವಾದವಾಗಿ ಪರಿಣಮಿಸಲಿದ್ದ ಒಂದು ಅದ್ಭುತಕರ ವಿಷಯವು ಬೇಗನೆ ಸಂಭವಿಸಿತು. ಮಡ್ರಿಡ್ನಿಂದ ಕೆಲವು ಕಿಲೊಮೀಟರುಗಳ ದೂರದಲ್ಲಿ ಇದ್ದ ಟಾರೆಜಾನ್ನಲ್ಲಿದ್ದ, ಅಮೆರಿಕದ ವಾಯು ದಳದ ಮೂಲಠಾಣ್ಯದಲ್ಲಿ ಇರುತ್ತಿದ್ದ ವಾಲರ್ಟ್ ಕೀಡ್ಯಾಷ್ ಎಂಬ ಹೆಸರಿನ ಒಬ್ಬ ಯುವ ಪುರುಷನನ್ನು ನಾವು ಭೇಟಿಮಾಡುವಂತೆ ಕೇಳಿಕೊಂಡ ನೋಟೀಸೊಂದನ್ನು ನಾವು ಶಾಖಾ ಆಫೀಸಿನಿಂದ ಪಡೆದೆವು. ನಾವು ಅವನನ್ನು ಮತ್ತು ಅವನ ಹೆಂಡತಿಯನ್ನು ಭೇಟಿಮಾಡಿ ಅವರೊಂದಿಗೆ ಹಾಗೂ ಅಲ್ಲಿನ ವಾಯು ದಳದ ಇನ್ನೊಬ್ಬ ದಂಪತಿಗಳೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದೆವು.
ಆ ಸಮಯದಲ್ಲಿ, ನಾನು ಅಮೆರಿಕದ ವಾಯು ದಳದ ಸಿಬ್ಬಂದಿಯೊಂದಿಗೆ, ಐದು ಬೈಬಲ್ ಅಭ್ಯಾಸಗಳನ್ನು ಸಹಜವಾಗಿ ಎಲ್ಲವನ್ನು ಇಂಗ್ಲಿಷಿನಲ್ಲಿ ನಡಿಸುತ್ತಿದ್ದೆ. ಅವರಲ್ಲಿ ಏಳು ಮಂದಿ ಅನಂತರ ದೀಕ್ಷಾಸ್ನಾನ ಪಡೆದುಕೊಂಡರು, ಮತ್ತು ಅಮೆರಿಕಕ್ಕೆ ಹಿಂದಿರುಗಿದ ನಂತರ ಆ ಪುರುಷರಲ್ಲಿ ನಾಲ್ವರು ಸಭಾ ಹಿರಿಯರಾದರು.
ನಮ್ಮ ಕೆಲಸದ ಮೇಲಿದ್ದ ನಿಷೇಧದ ಕಾರಣದಿಂದಾಗಿ ಪುಸ್ತಕಗಳನ್ನು, ಪತ್ರಿಕೆಗಳನ್ನು, ಮತ್ತು ಬೈಬಲುಗಳನ್ನು ದೇಶದೊಳಗೆ ತರಲು ತುಂಬ ಕಡಿಮೆ ಮಾರ್ಗಗಳಿದ್ದ ಒಂದು ಸಮಯವು ಇದಾಗಿತ್ತು. ಹಾಗಿದ್ದರೂ, ಸ್ವಲ್ಪ ಸಾಹಿತ್ಯವು ಪ್ರವಾಸಿಗರಿಂದ ಮತ್ತು ನಮ್ಮ ಅಮೆರಿಕದ ಸಂಪರ್ಕ ವ್ಯಕ್ತಿಗಳಿಂದ ಒಳತರಲ್ಪಟ್ಟಿತ್ತು. ಒಂದು ಗುಪ್ತ ಸಾಹಿತ್ಯ ಉಗ್ರಾಣವನ್ನು ನಡಿಸಲು ನಾನು ಶಾಖೆಯಿಂದ ನೇಮಿಸಲ್ಪಟ್ಟೆ. ಅದು ವಾಯಕಸ್ನ ಲೇಖನ ಸಾಮಾಗ್ರಿಗಳ ಒಂದು ಅಂಗಡಿಯ ಹಿಂಬದಿಯಲ್ಲಿದ್ದ ಒಂದು ಉಗ್ರಾಣ ಕೋಣೆಯಲ್ಲಿತ್ತು. ಮಾಲಿಕನ ಹೆಂಡತಿ ಒಬ್ಬ ಯೆಹೋವನ ಸಾಕ್ಷಿಯಾಗಿದಳ್ದು. ಒಬ್ಬ ಸಾಕ್ಷಿಯಾಗಿರದಿದ್ದರೂ, ಮಾಲೀಕನು ನಮ್ಮ ಕೆಲಸವನ್ನು ಗೌರವಿಸಿದನು, ಮತ್ತು ತನಗೆ ಹಾಗೂ ತನ್ನ ವ್ಯಾಪಾರಕ್ಕೆ ಮಹತ್ತಾದ ಅಪಾಯದಲ್ಲೂ, ದೇಶದಾದ್ಯಂತವಾಗಿ ನಗರಗಳಿಗೆ ಕಳುಹಿಸಲು ಸಾಹಿತ್ಯದ ಕಟ್ಟುಗಳನ್ನು ತಯಾರಿಸಲು ಈ ಹಿಂಬದಿಯ ಕ್ಷೇತ್ರವನ್ನು ನಾನು ಉಪಯೋಗಿಸುವಂತೆ ಅವನು ಅನುಮತಿಸಿದನು. ಈ ಕೋಣೆಯು ಯಾವಾಗಲೂ ಅದು ಆಗಿರಬೇಕಾಗಿದ್ದ—ಧೂಳು ತುಂಬಿದ, ಕಾರ್ಟನ್ಗಳಿಂದ ಅಸ್ತವ್ಯಸ್ತಗೊಂಡಿರುವ ಒಂದು ಕೋಣೆ—ಸ್ಥಳವಾಗಿ ತೋರಬೇಕಾದುದರಿಂದ, ಕ್ಷಣಗಳಲ್ಲಿ ಕೆಲಸಕ್ಕೆ ತಯಾರಾಗಿರಬಲ್ಲ ಹಾಗೂ ಅಡಗಿಸಬಹುದಾದ ಒಂದು ಮೇಜು ಮತ್ತು ಪುಸ್ತಕಗಳನ್ನು ಇಡುವ ಅಂತಸ್ತು ಹಲಗೆಗಳನ್ನು ನಾನು ಕಟ್ಟಬೇಕಾಗಿತ್ತು. ದಿನದ ಅಂತ್ಯದಲ್ಲಿ, ಅಂಗಡಿಯಲ್ಲಿ ಯಾರೂ ಇಲ್ಲದಿರುವ ಸಮಯಕ್ಕಾಗಿ ಕಾಯುತ್ತಿದ್ದೆ ಮತ್ತು ಕೂಡಲೇ ನಾನು ನನ್ನ ಕಟ್ಟುಗಳೊಂದಿಗೆ ಹೊರಬರುತ್ತಿದ್ದೆ.
ದೇಶದಲ್ಲೆಲ್ಲಾ ಇರುವ ಸಭೆಗಳಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಮತ್ತು ಇತರ ಸಾಹಿತ್ಯದಂತಹ ಆತ್ಮಿಕ ವಿಷಯವನ್ನು ವಿತರಿಸುವುದರಲ್ಲಿ ಒಂದು ಪಾಲು ಇರುವುದು ನಿಜವಾದ ಒಂದು ಸುಯೋಗವಾಗಿತ್ತು. ಅವು ಉದ್ರೇಕಕಾರಿ ಸಮಯಗಳಾಗಿದ್ದವು.
ರೀಟಳಿಗೆ 16 ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವ ಆನಂದವಿತ್ತು, ಅವರಲ್ಲಿ ಸುಮಾರು ಅರ್ಧದಷ್ಟು ಮಂದಿ ಯೆಹೋವನ ದೀಕ್ಷಾಸ್ನಾನಿತ ಸಾಕ್ಷಿಗಳಾದರು. ಡೊಲೋರೆಸ್ ಒಬ್ಬ ಯುವ ವಿವಾಹಿತೆಯಾಗಿದ್ದಳು. ಹೃದಯದ ಒಂದು ಸಮಸ್ಯೆಯಿಂದಾಗಿ ಅವಳು ಚಳಿಗಾಲಗಳನ್ನು ಮಂಚದಲ್ಲಿ ಕಳೆಯುತ್ತಿದ್ದಳು. ವಸಂತಕಾಲದಲ್ಲಿ ಅವಳು ಎದ್ದು ಸ್ವಲ್ಪ ಕ್ರಿಯಾಶೀಲಳಾಗಿರುತ್ತಿದ್ದಳು. ಡೊಲೋರೆಸಳ ನಂಬಿಕೆಯು ಬಲವಾಗಿತ್ತು, ಆದುದರಿಂದ ಫ್ರಾನ್ಸ್ನ ಟುಲೂಸ್ನಲ್ಲಿದ್ದ ನಮ್ಮ ಜಿಲ್ಲಾ ಅಧಿವೇಶನದ ಸಮಯ ಬಂದಾಗ, ಅವಳು ಹೋಗಲು ತುಂಬ ಬಯಸಿದಳು. ಅವಳ ಹೃದಯದ ಸ್ಥಿತಿಯ ಕಾರಣ ಅದು ಅವಿವೇಕದ ಸಂಗತಿಯಾಗಿರುವದೆಂದು ವೈದ್ಯರು ಅವಳನ್ನು ಎಚ್ಚರಿಸಿದರು. ತನ್ನ ಗಂಡ, ತಾಯಿ ಮತ್ತು ಇತರರಿಗೆ ವಿದಾಯ ಹೇಳಲು ಅವಳು ತನ್ನ ಮನೆಯ ಉಡುಪು ಹಾಗೂ ಚಪ್ಪಲಿಗಳಲ್ಲಿ, ಯಾವ ಲಗೇಜ್ ಇಲ್ಲದೆ ರೈಲು ನಿಲ್ದಾಣಕ್ಕೆ ಹೋದಳು. ಅವಳ ಕಣ್ಣುಗಳಲ್ಲಿ ಅಶ್ರುಗಳೊಂದಿಗೆ, ಅವರು ತನ್ನನ್ನು ಬಿಟ್ಟು ಹೋಗುವುದನ್ನು ಅವಳಿಗೆ ಸಹಿಸಲಾಗಲಿಲ್ಲ, ಆದುದರಿಂದ ಅವಳು ರೈಲನ್ನು ಹತ್ತಿ ಅವಳು ಸಹ ಫ್ರಾನ್ಸಿಗೆ ಹೋದಳು! ಇದು ಸಂಭವಿಸಿದೆಯೆಂದು ರೀಟಳಿಗೆ ತಿಳಿದಿರಲಿಲ್ಲ. ಆದರೆ ಅಧಿವೇಶನದಲ್ಲಿ, ಅವಳ ಮುಖದ ಮೇಲೆ ಒಂದು ದೊಡ್ಡ ನಗುವಿದ್ದ ಡೊಲೋರೆಸಳನ್ನು ಅವಳು ನೋಡಿದಾಗ ಅವಳಿಗಾಶ್ಚರ್ಯ!
ಒಂದು ಅಸಾಮಾನ್ಯ ಬೈಬಲ್ ಅಭ್ಯಾಸ
ಡಾನ್ ಬೆನೀಗ್ನೊ ಫ್ರಾಂಕೋ, “ಎಲ್ ಪ್ರೊಫೆಸೊರ್” (ಪ್ರೊಫೆಸರರು) ಇವರನ್ನು ಒಳಗೂಡಿಸದೆ, ನಮ್ಮ ಮಡ್ರಿಡ್ ನೇಮಕದ ಈ ವೃತ್ತಾಂತವನ್ನು ನಾವು ಕೊನೆಗೊಳಿಸಲಾರೆವು. ಒಬ್ಬ ಸ್ಥಳಿಕ ಸಾಕ್ಷಿಯು ನನ್ನನ್ನು ಒಂದು ತೀರ ಬಡ ವಾಸದ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ಜೀವಿಸುತ್ತಿದ್ದ ಒಬ್ಬ ವೃದ್ಧ ಮಹಾಶಯನನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ನಾನು ಅವನೊಂದಿಗೆ ಒಂದು ಅಧ್ಯಯನವನ್ನು ಆರಂಭಿಸಿದೆ. ಅವರೊಂದಿಗೆ ಒಂದೂವರೆ ವರ್ಷ ಅಭ್ಯಾಸಿಸಿದ ನಂತರ ಅವನು ದೀಕ್ಷಾಸ್ನಾನ ಹೊಂದಿ ಒಬ್ಬ ಯೆಹೋವನ ಸಾಕ್ಷಿಯಾಗಲು ಕೇಳಿಕೊಂಡನು.
ಈ ವೃದ್ಧ ಮಹಾಶಯನಾದ, ಡಾನ್ ಬೆನೀಗ್ನೊ ಫ್ರಾಂಕೋ, ಆ ಸಮಯದಲ್ಲಿ ಸ್ಪೆಯ್ನ್ನ ನಿರಂಕುಶಾಧಿಕಾರಿಯಾಗಿದ್ದ ಫ್ರಾನ್ಸಿಸ್ಕೊ ಫ್ರಾಂಕೋನ ಸೋದರ ಸಂಬಂಧಿಯಾಗಿದ್ದನು. ಡಾನ್ ಬೆನೀಗ್ನೊ ಯಾವಾಗಲೂ ಸ್ವಾತಂತ್ರ್ಯಪ್ರಿಯ ವ್ಯಕ್ತಿಯಾಗಿದ್ದನೆಂದು ತೋರುತ್ತದೆ. ಸ್ಪ್ಯಾನಿಷ್ ಅಂತರ್ಯುದ್ಧದ ಸಮಯದಲ್ಲಿ ಆತನು ಪ್ರಜಾಪ್ರಭುತ್ವದೊಂದಿಗೆ ಸಹಮತದಲ್ಲಿದ್ದನು ಮತ್ತು ಯಾರು ಯುದ್ಧದಲ್ಲಿ ವಿಜಯಿಯಾಗಿ ಒಂದು ಕ್ಯಾತೊಲಿಕ್ ನಿರಂಕುಶಾಧಿಕಾರವನ್ನು ಸ್ಥಾಪಿಸಿದನೋ ಆ ತನ್ನ ಸೋದರ ಸಂಬಂಧಿಯ ವಿರುದ್ಧವಾಗಿದ್ದನು. 1939 ರಿಂದ, ಕೆಲಸಮಾಡುವ ಹಕ್ಕು ನಿರಾಕರಿಸಲ್ಪಟ್ಟಿದ್ದ ಡಾನ್ ಬೆನೀಗ್ನೊ ಒಂದು ತೀರ ಅತ್ಯಲ್ಪವಾದ ಜೀವನೋಪಾಯಕ್ಕೆ ಸೀಮಿತಗೊಳಿಸಲ್ಪಟ್ಟಿದ್ದನು. ಈ ರೀತಿಯಲ್ಲಿ ಸ್ಪೆಯ್ನ್ನ ಮುಖಂಡ, ಜನರಲಿಸಿಮೊ ಫ್ರಾನ್ಸಿಸ್ಕೊ ಫ್ರಾಂಕೋನ ಸೋದರ ಸಂಬಂಧಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದನು.
ಆಶ್ಚರ್ಯಗೊಳಿಸಿದ ಆಮಂತ್ರಣ
1965 ರಲ್ಲಿ ಸ್ಪೆಯ್ನ್ನ ಶಾಖಾ ಆಫೀಸು, ಬಾರ್ಸಲೋನದಲ್ಲಿ ಸಂಚರಣ ಕಾರ್ಯದಲ್ಲಿ ಪ್ರಯಾಣವನ್ನು ಆರಂಭಿಸಲು ನಮ್ಮನ್ನು ಆಮಂತ್ರಿಸಿತು. ಇದರ ಅರ್ಥ ನಾವು ಮಡ್ರಿಡ್ನಲ್ಲಿ ಯಾರೊಂದಿಗೆ ಅಷ್ಟು ನಿಕಟವಾಗಿದ್ದೆವೋ ಆ ಎಲ್ಲಾ ಪ್ರೀತಿಯ ಸಹೋದರರನ್ನು ನಾವು ಬಿಟ್ಟುಹೋಗುವುದು. ಈಗ ಕೇವಲ ಒಂದು ಹೊಸ ಅನುಭವವಲ್ಲ ನನಗಾದರೋ ಒಂದು ಪರೀಕ್ಷೆ ಆರಂಭವಾಗಲಿತ್ತು. ಈ ಅನುಭವವು ಭಯಗೊಳಿಸುವಂತಹದ್ದಾಗಿತ್ತು, ಯಾಕಂದರೆ ನಾನು ಯಾವಾಗಲೂ ನನ್ನ ಸಾಮರ್ಥ್ಯವನ್ನು ಸಂದೇಹಿಸಿದ್ದೆ. ಸೇವೆಯ ಈ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿರಲು ನನ್ನನ್ನು ಶಕ್ತನನ್ನಾಗಿ ಮಾಡಿದವನು ಯೆಹೋವನೇ ಎಂದು ನನಗೆ ಚೆನ್ನಾಗಿ ತಿಳಿದಿದೆ.
ಪ್ರತಿ ವಾರ ಒಂದು ಸಭೆಯನ್ನು ಸಂದರ್ಶಿಸುವುದು, ಸಹೋದರರ ಮನೆಗಳಲ್ಲಿ ತಂಗುವುದರ ಅರ್ಥದಲ್ಲಿತ್ತು. ನಮಗೆ ಒಂದು ಚಿರಸ್ಥಾಯಿ ಮನೆಯಿರಲಿಲ್ಲ, ಮತ್ತು ಪ್ರತಿ ಎರಡು ವಾರಕ್ಕೊಮ್ಮೆ, ನಾವು ಇನ್ನೊಂದು ಮನೆಗೆ ಸ್ಥಳಾಂತರಿಸುತ್ತಿದ್ದೆವು. ಇದು ವಿಶೇಷವಾಗಿ ಒಬ್ಬ ಹೆಂಗಸಿಗೆ ಕಷ್ಟಕರವಾಗಿರುತ್ತದೆ. ಆದರೆ ಸ್ಪಲ್ಪ ಸಮಯದಲ್ಲೇ, ಬಾರ್ಸಲೋನದಲ್ಲಿ ಜೀವಿಸುತ್ತಿದ್ದ ಹೋಸೆ ಮತ್ತು ರೋಸರ್ ಎಸ್ಕೂಡೆ ಒಂದು ಸಮಯದಲ್ಲಿ ನಿರಂತರವಾಗಿ ಹಲವಾರು ದಿನಗಳ ತನಕ ಅವರೊಂದಿಗಿರಲು ನಮ್ಮನ್ನು ಆಮಂತ್ರಿಸಿದರು. ಇದು ಅವರ ವತಿಯಿಂದ ತುಂಬ ಪ್ರೀತಿಯನ್ನು ವ್ಯಕ್ತಮಾಡುವುದಾಗಿತ್ತು, ಯಾಕಂದರೆ ಇದು ನಾವು ನಮ್ಮ ಸಾಮಾನುಗಳನ್ನು ಇಡಲು ಒಂದು ಚಿರಸ್ಥಾಯಿ ಸ್ಥಳವಿರುವಂತೆ ಮಾಡಿತು ಮತ್ತು ಭಾನುವಾರ ಸಾಯಂಕಾಲಗಳಂದು ಮನೆಗೆ ಬರಲು ಒಂದು ನಿಯತ ನಿವೇಶನವನ್ನು ಒದಗಿಸಿತು.
ಭೂಮಧ್ಯ ಸಮುದ್ರದ ಕರಾವಳಿಯಲ್ಲಿದ್ದ, ಕ್ಯಾಟಲೋನ್ಯ ಪ್ರಾಂತದಲ್ಲಿ ಸಂಚರಣ ಕಾರ್ಯದಲ್ಲಿ ರೀಟ ಮತ್ತು ನಾನು ನಾಲ್ಕು ವರ್ಷಗಳನ್ನು ಕಳೆದೆವು. ನಮ್ಮ ಎಲ್ಲಾ ಬೈಬಲ್ ಕೂಟಗಳು ಖಾಸಗಿ ಮನೆಗಳಲ್ಲಿ ಗುಪ್ತವಾಗಿ ನಡಿಸಲ್ಪಡುತ್ತಿದ್ದವು, ಮತ್ತು ನಮ್ಮ ಮನೆಯಿಂದ ಮನೆಯ ಸಾರುವಿಕೆಯೂ ಸಹ ಗಮನವನ್ನು ಸೆಳೆಯದಂತೆ ವಿವೇಚನೆಯೊಂದಿಗೆ ಮಾಡಲ್ಪಡುತ್ತಿತ್ತು. ಕೆಲವೊಮ್ಮೆ ವಿಶೇಷವಾಗಿ ಒಂದು ಸರ್ಕಿಟ್ ಸಮ್ಮೇಳನವನ್ನು ನಡಿಸುತ್ತಿದ್ದಾಗ ಇಡೀ ಸಭೆಯು “ಪಿಕ್ನಿಕ್” ಗಾಗಿ ಅರಣ್ಯದಲ್ಲಿ ಆದಿತ್ಯವಾರದಂದು ಕೂಡಿಬರುತ್ತಿತ್ತು.
ಸಭೆಗಳನ್ನು ಐಕ್ಯ ಮತ್ತು ಕ್ರಿಯಾಶೀಲವಾಗಿಡಲು ಶ್ರಮವಹಿಸುತ್ತಾ, ತಮ್ಮ ಉದ್ಯೋಗಗಳು ಮತ್ತು ಸ್ವಾತಂತ್ರ್ಯವನ್ನು ಗಂಡಾಂತರಕ್ಕೆ ಹಾಕಿದ ಅನೇಕ ಬದ್ಧರಾಗಿದ್ದ ಆತ್ಮಿಕ ಸಹೋದರರನ್ನು ನಾವು ಯಾವಾಗಲೂ ಶಾಘ್ಲಿಸುತ್ತಿರುವೆವು. ನಗರದ ಹೊರಗಿನ ಪಟ್ಟಣಗಳಲ್ಲಿ ಕಾರ್ಯವನ್ನು ವಿಸ್ತರಿಸುವುದರಲ್ಲಿ ಅವರಲ್ಲಿ ಅನೇಕರು ಮುಂದಾಳುತ್ವವನ್ನು ವಹಿಸಿದರು. 1970 ರಲ್ಲಿ ನಿಷೇಧವು ತೆಗೆಯಲ್ಪಟ್ಟು ಧಾರ್ಮಿಕ ಸ್ವಾತಂತ್ರ್ಯವು ನೀಡಲ್ಪಟ್ಟಾಗ ಸ್ಪೆಯ್ನಿನಲ್ಲಾದ ಮಹತ್ತಾದ ವೃದ್ಧಿಗೆ ಇದು ಆಧಾರವನ್ನು ರೂಪಿಸಿತು.
ನಮ್ಮ ವಿದೇಶೀ ನೇಮಕವನ್ನು ಬಿಡಬೇಕಾದದ್ದು
ಸ್ಪೆಯ್ನ್ನಲ್ಲಿ ನಾವು ಕಳೆದ ಹತ್ತು ವರ್ಷಗಳಲ್ಲಿ, ಯೆಹೋವನನ್ನು ಸೇವಿಸುವ ಈ ವಿಶೇಷ ಆಶೀರ್ವಾದದ ನಮ್ಮ ಆನಂದಿಸುವಿಕೆಯು ನಮ್ಮ ಹೆತ್ತವರ ಪರಿಸ್ಥಿತಿಯಿಂದಾಗಿ ಮಿತಮಾಡಲ್ಪಟ್ಟಿತ್ತು. ಅನೇಕ ಸಂದರ್ಭಗಳಲ್ಲಿ, ನನ್ನ ತಾಯಿ ಮತ್ತು ತಂದೆಯನ್ನು ಪರಾಮರಿಸಲಿಕ್ಕಾಗಿ ನಾವು ನಮ್ಮ ನೇಮಕವನ್ನು ಬಿಟ್ಟು ಬಹುಮಟ್ಟಿಗೆ ಮನೆಗೆ ಹೋಗಬೇಕಾಗಿದ್ದ ಸಂದರ್ಭಗಳಿದ್ದವು. ಆದಾಗಲೂ ನನ್ನ ಹೆತ್ತವರ ಹತ್ತಿರವಿದ್ದ ಸಭೆಗಳಲ್ಲಿದ್ದ ಪ್ರೀತಿಯ ಸಹೋದರಸಹೋದರಿಯರಿಂದಾಗಿ, ನಾವು ಸ್ಪೆಯ್ನ್ನಲ್ಲಿ ಮುಂದುವರಿಯಲು ಶಕ್ತರಾಗಿದ್ದೆವು. ಹೌದು, ಆ ವರ್ಷಗಳಲ್ಲಿ ಮಿಷನೆರಿ ಕಾರ್ಯದಲ್ಲಿ ಸೇವಿಸುವ ಆ ಸುಯೋಗವು, ನಮ್ಮೊಂದಿಗೆ ದೇವರ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡಲು ಜೊತೆಗೂಡಿದ ಇತರರಿಂದಾಗಿ ಭಾಗಶಃ ಸಾಧ್ಯವಾಯಿತು.
ಕೊನೆಗೆ, ದಶಂಬರ 1968 ರಲ್ಲಿ ನನ್ನ ತಾಯಿಯನ್ನು ಪರಾಮರಿಸಲು ನಾವು ಮನೆಗೆ ಹೋದೆವು. ಅದೇ ತಿಂಗಳಲ್ಲಿ ನನ್ನ ತಂದೆ ತೀರಿಹೋದರು ಮತ್ತು ಈಗ ನನ್ನ ತಾಯಿ ಒಬ್ಬಂಟಿಗರಾಗಿದ್ದರು. ಇನ್ನೂ ಪೂರ್ಣ ಸಮಯ ಸೇವೆ ಮಾಡಲು ಸಂಬಂಧಿತವಾಗಿ ಬಿಡುವಿದುದ್ದರಿಂದ ಈ ಸಲ ಅಮೆರಿಕದಲ್ಲಿ ಸಂಚರಣ ಕಾರ್ಯದಲ್ಲಿ ಸೇವೆ ಮಾಡುವ ಒಂದು ನೇಮಕವನ್ನು ನಾವು ಪಡೆದೆವು. ಮುಂದಿನ 20 ವರ್ಷಗಳಲ್ಲಿ ನಾವು ಸ್ಪ್ಯಾನಿಷ್ ಸರ್ಕಿಟುಗಳಲ್ಲಿ ಸೇವೆ ಸಲ್ಲಿಸಿದೆವು. ಬಹು ಬೆಲೆಯುಳ್ಳ ನಮ್ಮ ಮಿಷನೆರಿ ಮುತ್ತನ್ನು ನಾವು ಕಳೆದುಕೊಂಡಿದ್ದರೂ, ಇನ್ನೊಂದು ಮುತ್ತು ನಮ್ಮ ಕೈಗಳಲ್ಲಿ ಇಡಲ್ಪಟ್ಟಿತ್ತು.
ಅಮಲೌಷಧಗಳ ಮತ್ತು ಹಿಂಸಾಚಾರದ ಮಧ್ಯೆ ಸಾರುವುದು
ನಗರಗಳ ಪಾತಕ ತುಂಬಿರುವ ಭಾಗಗಳಲ್ಲಿ ಜೀವಿಸುತ್ತಿದ್ದ ಹಲವಾರು ಸಹೋದರಸಹೋದರಿಯರ ಪಕ್ಕಪಕ್ಕದಲ್ಲಿ ನಾವು ಈಗ ಸೇವೆ ಸಲ್ಲಿಸುತ್ತಿದ್ದೆವು. ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿ ಸಂಚರಣ ಕಾರ್ಯದಲ್ಲಿ ಮೊದಲನೆಯ ವಾರದಲ್ಲೇ ರೀಟಳ ಕೈಚೀಲವು ಅವಳಿಂದ ಕಸಿದುಕೊಳ್ಳಲ್ಪಟ್ಟಿತ್ತು.
ಒಂದು ಸಂದರ್ಭದಲ್ಲಿ ರೀಟ ಮತ್ತು ನಾನು ನ್ಯೂ ಯಾರ್ಕ್ ನಗರದ ಇನ್ನೊಂದು ವಿಭಾಗದಲ್ಲಿ ಒಂದು ಗುಂಪಿನೊಂದಿಗೆ ಮನೆ ಮನೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೆವು. ಒಂದು ಬೀದಿಯ ತಿರುವಿನಲ್ಲಿ ತಿರುಗುತ್ತಿದ್ದಾಗ, ತೊರೆಯಲ್ಪಟ್ಟಿದ್ದ ಒಂದು ಕಟ್ಟಡದ ಗೋಡೆಯಲ್ಲಿದ್ದ ಒಂದು ರಂಧ್ರದ ಮುಂದೆ ಕೆಲವು ಜನರು ಸಾಲಾಗಿ ನಿಂತಿರುವುದನ್ನು ನಾವು ಗಮನಿಸಿದೆವು. ಬೀದಿಯಲ್ಲಿ ನಾವು ಮುಂದೆ ಕೆಲವು ದಾಪುಗಾಲು ಇಟ್ಟಾಗ, ಪಕ್ಕದಾರಿಯಲ್ಲಿ ಒಬ್ಬ ಯುವ ವ್ಯಕ್ತಿ ನಿಂತು ನಮ್ಮ ಕಡೆಯೆ ದಿಟ್ಟಿಸುತ್ತಿರುವುದನ್ನು ಗಮನಿಸಿದೆವು. ಇನ್ನೊಂದು ದೂರದ ತಿರುವಿನಲ್ಲಿ ಪೊಲೀಸ್ ಕಾರುಗಳಿಗಾಗಿ ನಿಗಾ ಇಡುತ್ತಿದ್ದ ಇನ್ನೊಬ್ಬನಿದ್ದನು. ನಾವು ಒಂದು ಅಮಲೌಷಧ ಕಾರ್ಯಾಚರಣೆಯ ಮಧ್ಯೆ ನಡೆದಿದ್ದೆವು! ಕಾವಲಿಡುವವರಲ್ಲಿ ಮೊದಲನೆಯವನು ಬೆಚ್ಚಿಬಿದ್ದನು, ಆದರೆ ಅನಂತರ ಕಾವಲಿನಬುರುಜು ಪತ್ರಿಕೆಯನ್ನು ನೋಡಿ ಉಪಶಮನ ಹೊಂದಿದನು. ಎಷ್ಟೆಂದರೂ, ನಾನೊಬ್ಬ ಪೊಲೀಸ್ ಅಧಿಕಾರಿಯಾಗಿರಸಾಧ್ಯವಿತ್ತು! ಅವನು ಅನಂತರ ಸ್ಪ್ಯಾನಿಷ್ ಭಾಷೆಯಲ್ಲಿ “¡ಈಲೊಸ್ ಅಟಲಾಯಾಸ್! ¡ಈಲೊಸ್ ಅಟಲಾಯಾಸ್!” (ಕಾವಲಿನಬುರುಜುಗಳು! ಕಾವಲಿನಬುರುಜುಗಳು!) ಎಂದು ಕೂಗಾಡಿದನು. ಪತ್ರಿಕೆಯೊಂದಿಗೆ ನಮ್ಮನ್ನು ಗುರುತಿಸುತ್ತಾ ನಾವು ಯಾರಾಗಿದ್ದೇವೆಂದು ಅವರಿಗೆ ತಿಳಿದಿತ್ತು, ಮತ್ತು ಎಲ್ಲವು ಸರಿಹೋಯಿತು. ನಾನು ಅವನನ್ನು ದಾಟಿಹೋದಂತೆ, “¿ಬೆನ್ವೊಸ್ ಡಿಆಸ್, ಕೊಮೊ ಎಸ್ಟಾ?” (ನಮಸ್ಕಾರ, ನೀನು ಹೇಗಿದ್ದಿ?) ಎಂದು ಹೇಳಿದೆ. ಅವನಿಗಾಗಿ ಪ್ರಾರ್ಥಿಬೇಕೆಂದು ನನ್ನನ್ನು ಕೇಳಿಕೊಳ್ಳುವ ಮೂಲಕ ಅವನು ಉತ್ತರಿಸಿದನು!
ಒಂದು ಕಷ್ಟಕರ ನಿರ್ಣಯ
1990 ರಲ್ಲಿ, ನಾನು ಪ್ರತಿದಿನವೂ ನನ್ನ ತಾಯಿಯೊಂದಿಗೆ ಇರಬೇಕಾಗುವುದೆಂದು ವ್ಯಕ್ತವಾಯಿತು. ಸಂಚರಣಾ ಕೆಲಸದಲ್ಲಿ ಉಳಿಯಲು ನಾವು ತುಂಬ ಪ್ರಯತ್ನಿಸಿದ್ದೆವು, ಆದರೆ ಎರಡೂ ಹಂಗುಗಳನ್ನು ಪೂರೈಸುವುದು ಸಾಧ್ಯವಿಲ್ಲವೆಂದು ವಿವೇಕವು ಹೇಳಿಕೊಟ್ಟಿತು. ತಾಯಿಯು ಪ್ರೀತಿಪೂರ್ವಕವಾಗಿ ಪರಾಮರಿಸಲ್ಪಟ್ಟಿದ್ದಾರೆಂಬದನ್ನು ಖಚಿತಪಡಿಸಲು ನಾವು ನಿಶ್ಚಯವಾಗಿ ಬಯಸಿದೆವ್ದು. ಆದರೆ ಪುನಃ ಒಮ್ಮೆ ಬಹು ಬೆಲೆಯುಳ್ಳ ಒಂದು ಮುತ್ತನ್ನು, ನಮಗೆ ತುಂಬ ಅಮೂಲ್ಯವಾಗಿದ್ದಂತಹದ್ದನ್ನು ನಾವು ಬಿಟ್ಟುಕೊಡಬೇಕಾಯಿತು. ಯೆಹೋವನ ಸಂಸ್ಥೆಯಲ್ಲಿ ಒಬ್ಬ ಮಿಷನೆರಿಯಾಗಿ ಅಥವಾ ಒಬ್ಬ ಸಂಚರಣ ಮೇಲ್ವಿಚಾರಕನಾಗಿ ಸೇವಿಸುವ ರತ್ನಗಳೊಂದಿಗೆ ಹೋಲಿಕೆಯಲ್ಲಿ, ಲೋಕದಲ್ಲಿರುವ ಎಲ್ಲಾ ಅಕ್ಷರಶಃ ರತ್ನಗಳು ಮತ್ತು ಅವು ಒಬ್ಬನಿಗಾಗಿ ಮಾಡಬಹುದಾದದೆಲ್ದವ್ಲು ತೀರ ಕೊಂಚವಾಗಿದೆ.
ರೀಟ ಮತ್ತು ನಾನು ಈಗ ನಮ್ಮ 60 ಗಳ ವಯಸ್ಸಿನಲ್ಲಿದ್ದೇವೆ. ನಾವು ತುಂಬ ತೃಪ್ತರಾಗಿದ್ದೇವೆ ಮತ್ತು ಸ್ಪ್ಯಾನಿಷ್ ಮಾತಾಡುವ ಒಂದು ಸ್ಥಳಿಕ ಸಭೆಯೊಂದಿಗೆ ಸೇವೆ ಸಲ್ಲಿಸುವುದರಲ್ಲಿ ಆನಂದಿಸುತ್ತೇವೆ. ಯೆಹೋವನ ಸೇವೆಯಲ್ಲಿ ನಾವು ಕಳೆದಂತಹ ವರ್ಷಗಳನ್ನು ನಾವು ನೆನಪಿಸಿಕೊಂಡಂತೆ, ಬಹು ಬೆಲೆಯುಳ್ಳ ಕೆಲವು ಮುತ್ತುಗಳನ್ನು ನಮಗೆ ವಹಿಸಿ ಕೊಟ್ಟದ್ದಕ್ಕಾಗಿ ನಾವು ಅವನಿಗೆ ಉಪಕಾರ ಸಲ್ಲಿಸುತ್ತೇವೆ.
[ಪುಟ 23 ರಲ್ಲಿರುವ ಚಿತ್ರ]
ಮಡ್ರಿಡ್ನ ಗೂಳಿಕಾಳಗದ ಕಣದ ಹೊರಗೆ ರೀಟ ಹಾಗೂ ಪಾಲ್ ಮತ್ತು ಎವ್ಲಿನ್ ಹಂಡರ್ಮ್ಟಾರ್ಕ್ರೊಂದಿಗೆ (ಬಲಬದಿ)
[ಪುಟ 24 ರಲ್ಲಿರುವ ಚಿತ್ರ]
ಕಾಡಿನೊಳಗೆ ಒಂದು “ಪಿಕ್ನಿಕ್” ನಲ್ಲಿ ಒಂದು ಸಭೆಗೆ ಸೇವೆ ಸಲ್ಲಿಸುತ್ತಿರುವುದು