ಬಹುಮಾನದ ಮೇಲೆ ಕಣ್ಣುಗಳನ್ನು ಮತ್ತು ಹೃದಯವನ್ನು ನೆಟ್ಟಿರುವುದು
ಇಡಿತ್ ಮೈಕಲ್ ಹೇಳಿದಂತೆ
ಆರಂಭದ 1930ಗಳಲ್ಲಿ, ನಾವು ಅಮೆರಿಕದ ಮಿಸೋರಿಯ, ಸೆಂಟ್ ಲೂಯಿಸ್ನ ಬಳಿ ಜೀವಿಸುತ್ತಿದ್ದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಭೇಟಿನೀಡಿದರು. ಆಗ ತಾನೇ ಬಟ್ಟೆಹಗ್ಗವು ಹರಿದು, ತಾಯಿಯ ಥಳಥಳಿಸುವ ಬಿಳಿಯ ಬಟ್ಟೆಗಳನ್ನು ಕೆಸರಿನಲ್ಲಿ ಬೀಳಿಸಿತು. ಆ ಸಾಕ್ಷಿಯು ಅಲ್ಲಿಂದ ಹೋಗುವಳೆಂಬ ಕಾರಣಕ್ಕಾಗಿ ಮಾತ್ರ ನೀಡಲ್ಪಟ್ಟ ಪುಸ್ತಕಗಳನ್ನು ಅವರು ಸ್ವೀಕರಿಸಿದರು, ಮತ್ತು ಕಪಾಟಿನ ಮೇಲೆ ಇಡುತ್ತಾ ಅವುಗಳ ಕುರಿತು ಮರೆತುಬಿಟ್ಟರು.
ಅವು ಆರ್ಥಿಕ ಕುಸಿತದ ವರ್ಷಗಳಾಗಿದ್ದವು, ಮತ್ತು ತಂದೆಯವರು ನಿರುದ್ಯೋಗಸ್ಥರಾಗಿದ್ದರು. ಮನೆಯಲ್ಲಿ ಓದಲು ಏನಾದರೂ ಇದೆಯೊ ಎಂದು ಅವರು ಒಂದು ದಿನ ಕೇಳಿದರು. ತಾಯಿಯವರು ಆ ಪುಸ್ತಕಗಳ ಕುರಿತು ಅವರಿಗೆ ಹೇಳಿದರು. ಅವರು ಅವುಗಳನ್ನು ಓದಲಾರಂಭಿಸಿದರು, ಮತ್ತು ಸ್ವಲ್ಪ ಸಮಯದ ನಂತರ, “ಪ್ರಿಯೆ, ಇದು ಸತ್ಯವೇ ಸರಿ!” ಎಂಬುದಾಗಿ ಅವರು ಉದ್ಗರಿಸಿದರು.
“ಓಹ್, ಇದು ಇತರ ಎಲ್ಲ ಧರ್ಮಗಳಂತೆ ಹಣವನ್ನು ಬಯಸುವ ಯಾವುದೊ ಧರ್ಮವಾಗಿದೆ ಅಷ್ಟೆ,” ಎಂದು ತಾಯಿಯವರು ಉತ್ತರಿಸಿದರು. ಹಾಗಿದ್ದರೂ, ತಮ್ಮೊಡನೆ ಕುಳಿತುಕೊಂಡು ಶಾಸ್ತ್ರವಚನಗಳನ್ನು ತೆರೆದು ನೋಡುವಂತೆ ತಂದೆ ಅವರನ್ನು ಒತ್ತಾಯಿಸಿದರು. ಅವರು ಹಾಗೆ ಮಾಡಿದಾಗ, ಅವರು ಸಹ ಮನಗಾಣಿಸಲ್ಪಟ್ಟರು. ತದನಂತರ ಅವರು ಸಾಕ್ಷಿಗಳಿಗಾಗಿ ಹುಡುಕಲಾರಂಭಿಸಿದರು ಮತ್ತು ಸೆಂಟ್ ಲೂಯಿಸ್ನ ಕೇಂದ್ರಸ್ಥಾನದ ಬಳಿ, ಒಂದು ಬಾಡಿಗೆಯ ಸಭಾಗೃಹ—ನೃತ್ಯಗಳಿಗೆ ಹಾಗೂ ಇತರ ಕಾರ್ಯಕ್ರಮಗಳಿಗೂ ಉಪಯೋಗಿಸಲ್ಪಡುತ್ತಿದ್ದ ಒಂದು ಸಭಾಗೃಹ—ದಲ್ಲಿ ಅವರು ಕೂಡಿಬಂದರೆಂಬುದನ್ನು ಕಂಡುಹಿಡಿದರು.
ತಂದೆ ಮತ್ತು ತಾಯಿಯು ನನ್ನನ್ನು—ನಾನು ಸುಮಾರು ಮೂರು ವರ್ಷದವಳಾಗಿದ್ದೆ—ಜೊತೆಯಲ್ಲಿ ಕರೆದುಕೊಂಡು ಹೋಗಿ, ಸಭಾಗೃಹವನ್ನು ಕಂಡುಕೊಂಡರು, ಆದರೆ ಅಲ್ಲೊಂದು ನೃತ್ಯವು ನಡೆಯುತ್ತಿತ್ತು. ಕೂಟಗಳನ್ನು ಯಾವಾಗ ನಡೆಸಲಾಗುತ್ತದೆ ಎಂಬುದನ್ನು ತಂದೆಯವರು ತಿಳಿದುಕೊಂಡರು, ಮತ್ತು ನಾವು ಕೂಟಗಳಿಗಾಗಿ ಹಿಂದಿರುಗಿ ಬಂದೆವು. ನಾವು ಜೀವಿಸಿದ ಸ್ಥಳದ ಹತ್ತಿರ ಒಂದು ಸಾಪ್ತಾಹಿಕ ಬೈಬಲ್ ಅಧ್ಯಯನಕ್ಕೂ ನಾವು ಹಾಜರಾಗಲಾರಂಭಿಸಿದೆವು. ಅದು ನಮ್ಮನ್ನು ಪ್ರಥಮವಾಗಿ ಭೇಟಿಮಾಡಿದ ಸ್ತ್ರೀಯ ಮನೆಯಲ್ಲಿ ನಡೆಸಲ್ಪಡುತ್ತಿತ್ತು. “ನಿನ್ನ ಹುಡುಗರನ್ನೂ ನೀನು ಏಕೆ ಕರೆದುಕೊಂಡು ಬರುವುದಿಲ್ಲ?” ಎಂದು ಆಕೆ ಕೇಳಿದಳು. ಅವರಿಗೆ ಪಾದರಕ್ಷೆಗಳು ಇರಲಿಲ್ಲವೆಂದು ಹೇಳಲು ತಾಯಿಗೆ ನಾಚಿಕೆಯಾಯಿತು. ಕೊನೆಗೆ ಅವರು ವಿವರಣೆನೀಡಿದಾಗ, ಪಾದರಕ್ಷೆಗಳು ಒದಗಿಸಲ್ಪಟ್ಟವು ಮತ್ತು ನನ್ನ ಸಹೋದರರು ನಮ್ಮೊಂದಿಗೆ ಕೂಟಗಳಿಗೆ ಹಾಜರಾಗುವುದನ್ನು ಆರಂಭಿಸಿದರು.
ತಾಯಿಗೆ ನಮ್ಮ ಮನೆಯ ಹತ್ತಿರ ಒಂದು ಸಾರುವ ಟೆರಿಟೊರಿಯು ಕೊಡಲ್ಪಟ್ಟಿತು, ಮತ್ತು ಅವರು ಮನೆ ಮನೆಯ ಶುಶ್ರೂಷೆಯನ್ನು ಆರಂಭಿಸಿದರು. ನಾನು ಅವರ ಹಿಂದೆ ಅಡಗಿಕೊಳ್ಳುತ್ತಾ, ಜೊತೆಯಲ್ಲಿ ಹೋದೆ. ಅವರು ಒಂದು ಕಾರನ್ನು ಚಲಾಯಿಸಲು ಕಲಿಯುವ ಮುಂಚೆ, ನಮ್ಮನ್ನು ಸೆಂಟ್ ಲೂಯಿಸ್ನಲ್ಲಿನ ಕೂಟಗಳಿಗೆ ಕರೆದೊಯ್ದ ಒಂದು ಬಸ್ಸನ್ನು ಹಿಡಿಯಲು, ನಾವು ಸುಮಾರು ಒಂದು ಕಿಲೊಮೀಟರಿಗಿಂತಲೂ ಹೆಚ್ಚು ದೂರ ನಡೆಯುತ್ತಿದ್ದೆವು. ಮಂಜುಗಡ್ಡೆಯೂ ಹಿಮವೂ ಇದ್ದಾಗಲೂ, ನಾವು ಎಂದೂ ಕೂಟಗಳನ್ನು ತಪ್ಪಿಸಲಿಲ್ಲ.
1934ರಲ್ಲಿ, ತಾಯಿ ಮತ್ತು ತಂದೆಯವರು ದೀಕ್ಷಾಸ್ನಾನಪಡೆದರು. ನಾನೂ ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸಿದೆ, ಮತ್ತು ಅದರ ಕುರಿತು ಒಬ್ಬ ಹಿರಿಯ ಸಾಕ್ಷಿಯು ನನ್ನೊಂದಿಗೆ ಮಾತಾಡುವಂತೆ ತಾಯಿಯು ಕೇಳುವ ತನಕ ನಾನು ಆಗ್ರಹಮಾಡುತ್ತಾ ಇದ್ದೆ. ನಾನು ಅರ್ಥಮಾಡಿಕೊಳ್ಳಸಾಧ್ಯವಿರುವ ವಿಧಾನದಲ್ಲಿ ಅವನು ಅನೇಕ ಪ್ರಶ್ನೆಗಳನ್ನು ಕೇಳಿದನು. ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ನಾನು ತಡೆಯಲ್ಪಡಬಾರದೆಂದು ನಂತರ ಅವನು ನನ್ನ ಹೆತ್ತವರಿಗೆ ಹೇಳಿದನು; ಅದು ನನ್ನ ಆತ್ಮಿಕ ಬೆಳವಣಿಗೆಯನ್ನು ಹಾನಿಗೊಳಿಸಬಹುದಿತ್ತು. ಆದುದರಿಂದ ಮುಂದಿನ ಬೇಸಗೆಯಲ್ಲಿ, ನಾನು ಇನ್ನೂ ಆರು ವರ್ಷದವಳಾಗಿದ್ದಾಗ ದೀಕ್ಷಾಸ್ನಾನ ಪಡೆದುಕೊಂಡೆ.
ಮನೆ ಮತ್ತು ಸಂತೋಷ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ನಾನು ಇಷ್ಟಪಡುತ್ತಿದ್ದೆ, ಅದನ್ನು—ಮಲಗುವಾಗಲೂ ನನ್ನ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಾ—ಎಲ್ಲ ಸಮಯಗಳಲ್ಲಿ ನನ್ನೊಂದಿಗೆ ಇಟ್ಟುಕೊಂಡಿರುತ್ತಿದ್ದೆ. ಅದು ನನಗೆ ಬಾಯಿಪಾಠವಾಗುವ ತನಕ ಅದನ್ನು ನನಗೆ ಓದಿ ಹೇಳುವಂತೆ ನಾನು ತಾಯಿಯನ್ನು ಮತ್ತೆ ಮತ್ತೆ ಬೇಡಿದೆ. ಅದರ ಹಿಂದಿನ ಪುಟದಲ್ಲಿ, ಪ್ರಮೋದವನದಲ್ಲಿ ಒಂದು ಸಿಂಹದೊಂದಿಗಿರುವ ಒಬ್ಬ ಚಿಕ್ಕ ಹುಡುಗಿಯ ಚಿತ್ರವೊಂದಿತ್ತು. ಆ ಚಿಕ್ಕ ಹುಡುಗಿಯು ನಾನಾಗಿದ್ದೇನೆಂದು ನಾನು ಹೇಳಿದೆ. ಆ ಚಿತ್ರವು, ದೇವರ ಹೊಸ ಲೋಕದಲ್ಲಿ ಜೀವನದ ಬಹುಮಾನದ ಮೇಲೆ ನನ್ನ ಕಣ್ಣುಗಳನ್ನು ನೆಟ್ಟಿರುವಂತೆ ಸಹಾಯಮಾಡಿದೆ.
ನಾನು ಬಹಳ ನಾಚಿಕೆಯ ಸ್ವಭಾವದವಳಾಗಿದ್ದೆ, ಆದರೆ ನಾನು ನಡಗುತ್ತಾ ಇರುತ್ತಿದ್ದರೂ, ಸಭಾ ಕಾವಲಿನಬುರುಜು ಅಭ್ಯಾಸದಲ್ಲಿ ಯಾವಾಗಲೂ ಪ್ರಶ್ನೆಗಳಿಗೆ ಉತ್ತರನೀಡಿದೆ.
ವಿಷಾದಕರವಾಗಿ, ತಾವು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವರೆಂದು ತಂದೆಯವರು ಭಯಪಟ್ಟರು, ಆದುದರಿಂದ ಸಾಕ್ಷಿಗಳೊಂದಿಗೆ ಸಹವಸಿಸುವುದನ್ನು ಅವರು ಬಿಟ್ಟುಬಿಟ್ಟರು. ನನ್ನ ಸಹೋದರರೂ ಹಾಗೆಯೇ ಮಾಡಿದರು.
ಪೂರ್ಣ ಸಮಯದ ಶುಶ್ರೂಷೆ
ನಮ್ಮ ಹಿತ್ತಿಲಿನಲ್ಲಿ ಪಯನೀಯರರು, ಅಥವಾ ಪೂರ್ಣ ಸಮಯದ ಶುಶ್ರೂಷಕರು ತಮ್ಮ ಬಂಡಿ (ಟ್ರೇಲರ್)ಗಳನ್ನು ನಿಲ್ಲಿಸುವಂತೆ ತಾಯಿ ಅನುಮತಿಸಿದ್ದರು, ಮತ್ತು ಶಾಲೆಯ ನಂತರ ಶುಶ್ರೂಷೆಯಲ್ಲಿ ನಾನು ಅವರನ್ನು ಸೇರಿದೆ. ಬೇಗನೆ ನಾನು ಪಯನೀಯರ್ ಸೇವೆ ಮಾಡಲು ಬಯಸಿದೆ, ಆದರೆ ನಾನು ಹೆಚ್ಚಿನ ಐಹಿಕ ಶಿಕ್ಷಣವನ್ನು ಪಡೆಯಬೇಕೆಂದು ನಂಬುತ್ತಾ, ತಂದೆಯು ಇದನ್ನು ವಿರೋಧಿಸಿದರು. ಪಯನೀಯರ್ ಸೇವೆ ಮಾಡಲು ನನಗೆ ಅನುಮತಿ ನೀಡುವಂತೆ ತಾಯಿಯವರು ಕೊನೆಯದಾಗಿ ಅವರನ್ನು ಒಪ್ಪಿಸಿದರು. ಆದುದರಿಂದ ಜೂನ್ 1943ರಲ್ಲಿ ನಾನು 14 ವರ್ಷದವಳಾಗಿದ್ದಾಗ, ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆ. ಮನೆವಾರ್ತೆಯ ವೆಚ್ಚಗಳಿಗೆ ಹಣಸಹಾಯಮಾಡಲು, ನಾನು ಅಂಶಕಾಲಿಕ ಐಹಿಕ ಕೆಲಸವನ್ನು ಮಾಡಿದೆ ಮತ್ತು ಕೆಲವೊಮ್ಮೆ ನಾನು ಪೂರ್ಣ ಸಮಯ ಕೆಲಸಮಾಡಿದೆ. ಆದರೂ ಸಾರುವ ಕೆಲಸದಲ್ಲಿ ನಾನು 150 ತಾಸುಗಳ ಮಾಸಿಕ ಗುರಿಯನ್ನು ತಲಪಿದೆ.
ಸಕಾಲದಲ್ಲಿ ನಾನು ಒಬ್ಬಾಕೆ ಪಯನೀಯರ್ ಜೊತೆಗಾರ್ತಿ, ಯಾರು 17 ವರ್ಷದವಳಾಗಿದ್ದಾಗ ಜನವರಿ 1943ರಲ್ಲಿ ಪಯನೀಯರಿಂಗ್ ಕೆಲಸವನ್ನು ಆರಂಭಿಸಿದ್ದಳೊ, ಆ ಡಾರಥಿ ಕ್ರೇಡನಳನ್ನು ಕಂಡುಕೊಂಡೆ. ಆಕೆ ಒಬ್ಬ ನಿಷ್ಠಾವಂತ ಕ್ಯಾತೊಲಿಕಳಾಗಿದ್ದಳಾದರೂ, ಆರು ತಿಂಗಳುಗಳ ಬೈಬಲ್ ಅಧ್ಯಯನದ ತರುವಾಯ, ಆಕೆ ದೀಕ್ಷಾಸ್ನಾನ ಪಡೆದುಕೊಂಡಳು. ಅನೇಕ ವರ್ಷಗಳ ವರೆಗೆ ಆಕೆ ನನಗೆ ಉತ್ತೇಜನ ಹಾಗೂ ಬಲದ ಮೂಲವಾಗಿದ್ದಳು ಮತ್ತು ನಾನು ಆಕೆಗೆ ಉತ್ತೇಜನದ ಮೂಲವಾಗಿದ್ದೆ. ನಾವು ಅಕ್ಕತಂಗಿಯರಿಗಿಂತಲೂ ಹೆಚ್ಚು ಆಪ್ತರಾದೆವು.
1945ರಲ್ಲಿ ಆರಂಭಿಸುತ್ತಾ, ಎಲ್ಲಿ ಸಭೆಗಳಿರಲಿಲ್ಲವೊ ಆ ಮಿಸೋರಿಯಲ್ಲಿನ ಸಣ್ಣ ಪಟ್ಟಣಗಳಲ್ಲಿ ನಾವು ಒಟ್ಟಿಗೆ ಪಯನೀಯರ್ ಸೇವೆಮಾಡಿದೆವು. ಬೌಲಿಂಗ್ ಗ್ರೀನ್ ಎಂಬ ಪಟ್ಟಣದಲ್ಲಿ ಒಂದು ಕೂಟದ ಸಭಾಗೃಹವನ್ನು ನಾವು ಸುವ್ಯವಸ್ಥಿತಗೊಳಿಸಿದೆವು; ತಾಯಿಯು ಬಂದು ನಮಗೆ ಸಹಾಯ ಮಾಡಿದರು. ನಂತರ ನಾವು ಪ್ರತಿ ವಾರ ಪಟ್ಟಣದಲ್ಲಿನ ಎಲ್ಲ ಮನೆಗಳಿಗೆ ಭೇಟಿನೀಡಿ, ಸೆಂಟ್ ಲೂಯಿಸ್ನಿಂದ ಸಹೋದರರು ಬಂದು ಭಾಷಣಕೊಡುವಂತೆ ನಾವು ಏರ್ಪಡಿಸಿದ ಒಂದು ಬಹಿರಂಗ ಭಾಷಣಕ್ಕಾಗಿ ಜನರನ್ನು ಆಮಂತ್ರಿಸಿದೆವು. ನಮ್ಮಲ್ಲಿ 40ರಿಂದ 50 ಜನರ ಸಾಪ್ತಾಹಿಕ ಹಾಜರಿಯಿತ್ತು. ತದನಂತರ ನಾವು ಲೂಯಿಸಿಯಾನದಲ್ಲಿಯೂ ಹಾಗೆಯೇ ಮಾಡಿದೆವು, ಅಲ್ಲಿ ಒಂದು ಮೆಸೋನಿಕ್ ದೇವಾಲಯವನ್ನು ನಾವು ಬಾಡಿಗೆಗೆ ಪಡೆದುಕೊಂಡೆವು. ಸಭಾಗೃಹಗಳ ಬಾಡಿಗೆಯ ವೆಚ್ಚವನ್ನು ಭರ್ತಿಮಾಡಲು, ನಾವು ಕಾಣಿಕೆಯ ಪೆಟ್ಟಿಗೆಗಳನ್ನು ಹೊರಗೆ ಇಟ್ಟೆವು ಮತ್ತು ಪ್ರತಿ ವಾರ ಎಲ್ಲ ವೆಚ್ಚಗಳು ಸಲ್ಲಿಸಲ್ಪಟ್ಟವು.
ಮುಂದೆ ನಾವು ಮಿಸೋರಿಯ ಮೆಕ್ಸಿಕೊ ನಗರಕ್ಕೆ ಹೋದೆವು, ಅಲ್ಲಿ ಒಂದು ಅಂಗಡಿಯ ಕೋಣೆಯನ್ನು ಬಾಡಿಗೆಗೆ ಪಡೆದುಕೊಂಡೆವು. ಅಲ್ಲಿದ್ದ ಚಿಕ್ಕ ಸಭೆಯು ಉಪಯೋಗಿಸುವಂತೆ ನಾವು ಅದನ್ನು ಸುವ್ಯವಸ್ಥಿತಗೊಳಿಸಿದೆವು. ಆ ಕಟ್ಟಡಕ್ಕೆ ಸೇರಿಕೊಂಡಿದ್ದ ಕೋಣೆಗಳಿದ್ದವು, ಅವುಗಳಲ್ಲಿ ನಾವು ವಾಸಿಸಿದೆವು. ಮೆಕ್ಸಿಕೊದಲ್ಲಿ ಬಹಿರಂಗ ಭಾಷಣಗಳಿಗಾಗಿ ಏರ್ಪಡಿಸಲು ಸಹ ನಾವು ಸಹಾಯ ಮಾಡಿದೆವು. ನಂತರ ನಾವು ರಾಜ್ಯದ ರಾಜಧಾನಿಯಾದ ಜೆಫರ್ಸನ್ ನಗರಕ್ಕೆ ಹೋದೆವು, ಅಲ್ಲಿ ವಾರದ ಪ್ರತಿಯೊಂದು ದಿನ ಬೆಳಗ್ಗೆ, ನಾವು ಸಾರ್ವಜನಿಕ ಅಧಿಕಾರಿಗಳನ್ನು ಅವರ ಆಫೀಸುಗಳಲ್ಲಿ ಸಂಪರ್ಕಿಸಿದೆವು. ನಾವು ರಾಜ್ಯ ಸಭಾಗೃಹದ ಮೇಲಿನ ಒಂದು ಕೋಣೆಯಲ್ಲಿ ಸ್ಟೆಲ್ಲಾ ವಿಲ್ಲಿಯೊಂದಿಗೆ ವಾಸಿಸಿದೆವು, ಆಕೆ ನಮಗೆ ತಾಯಿಯಂತೆ ಇದ್ದಳು.
ಅಲ್ಲಿಂದ ನಾವು ಮೂವರೂ, ಒಂದಕ್ಕೊಂದು ಹತ್ತಿರವಿದ್ದ ಫೆಸ್ಟಸ್ ಪಟ್ಟಣಗಳಿಗೆ ಮತ್ತು ಕ್ರಿಸ್ಟಲ್ ನಗರಕ್ಕೆ ಹೋದೆವು. ಒಂದು ಆಸಕ್ತ ಕುಟುಂಬದವರ ಮನೆಯ ಹಿಂದೆ, ಪರಿವರ್ತಿಸಲ್ಪಟ್ಟಿದ್ದ ಕೋಳಿಯ ಹಂಜರದಲ್ಲಿ ನಾವು ವಾಸಿಸಿದೆವು. ದೀಕ್ಷಾಸ್ನಾನ ಪಡೆದಿದ್ದ ಪುರುಷರು ಅಲ್ಲಿರದಿದ್ದ ಕಾರಣ, ಎಲ್ಲ ಕೂಟಗಳನ್ನು ನಾವು ನಡೆಸಿದೆವು. ಅಂಶಕಾಲಿಕ ಕೆಲಸಕ್ಕಾಗಿ ನಾವು ಪ್ರಸಾಧನವಸ್ತುಗಳ ಮಾರಾಟ ಮಾಡಿದೆವು. ಪ್ರಾಪಂಚಿಕವಾಗಿ ನಮ್ಮಲ್ಲಿ ಬಹಳ ಕೊಂಚವಿತ್ತು. ವಾಸ್ತವದಲ್ಲಿ, ನಮ್ಮ ಪಾದರಕ್ಷೆಗಳಲ್ಲಿದ್ದ ತೂತುಗಳನ್ನು ಮುಚ್ಚಲು ನಮ್ಮಲ್ಲಿ ಹಣವಿರಲಿಲ್ಲ, ಆದುದರಿಂದ ಪ್ರತಿದಿನ ಬೆಳಗ್ಗೆ ಅವುಗಳಲ್ಲಿ ಹೊಸ ರಟ್ಟನ್ನು ಹಾಕಿದೆವು, ಮತ್ತು ರಾತ್ರಿ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಏಕಮಾತ್ರ ಉಡುಪನ್ನು ಒಗೆದೆವು.
1948ರ ಆದಿ ಭಾಗದಲ್ಲಿ, ನಾನು 19 ವರ್ಷದವಳಾಗಿದ್ದಾಗ, ಡಾರಥಿ ಹಾಗೂ ನನಗೆ, ಮಿಷನೆರಿಗಳಿಗಾಗಿದ್ದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 12ನೆಯ ತರಗತಿಗೆ ಆಮಂತ್ರಣಗಳು ದೊರೆತವು. ಐದು ತಿಂಗಳುಗಳ ಪಾಠಕ್ರಮದ ತರುವಾಯ, ಒಂದು ನೂರು ವಿದ್ಯಾರ್ಥಿಗಳು 1949, ಫೆಬ್ರವರಿ 6ರಂದು ಪದವಿಪ್ರಾಪ್ತರಾದರು. ಅದು ಬಹಳ ಸಂತೋಷದ ಸಮಯವಾಗಿತ್ತು. ನನ್ನ ಹೆತ್ತವರು ಕ್ಯಾಲಿಫೋರ್ನಿಯಕ್ಕೆ ಸ್ಥಳಾಂತರಿಸಿದ್ದರು, ಮತ್ತು ಉಪಸ್ಥಿತರಾಗಿರಲು ತಾಯಿ ಅಷ್ಟೊಂದು ದೂರದ ಸ್ಥಳದಿಂದ ಬಂದರು.
ನಮ್ಮ ನೇಮಕಕ್ಕೆ ಮುಂದರಿದದ್ದು
ಇಪ್ಪತ್ತೆಂಟು ಪದವೀಧರರು ಇಟಲಿಗೆ—ಡಾರಥಿ ಮತ್ತು ನನ್ನನ್ನು ಸೇರಿಸಿ ಆರು ಜನರು, ಮಿಲನ್ ನಗರಕ್ಕೆ—ನೇಮಿಸಲ್ಪಟ್ಟರು. 1949, ಮಾರ್ಚ್ 4ರಂದು, ವಲ್ಕೇನಿಯಾ ಎಂಬ ಇಟ್ಯಾಲಿಯನ್ ಹಡಗಿನಲ್ಲಿ ನಾವು ನ್ಯೂ ಯಾರ್ಕನ್ನು ಬಿಟ್ಟೆವು. ಸಂಚಾರಕ್ಕೆ 11 ದಿನಗಳು ಹಿಡಿದವು, ಮತ್ತು ಬಿರುಸಾದ ಸಮುದ್ರಗಳಿಂದ ನಮ್ಮಲ್ಲಿ ಹೆಚ್ಚಿನವರು ಕಡಲರೋಗಕ್ಕೆ ಗುರಿಯಾದೆವು. ಸಹೋದರ ಬೇನಾನ್ಟಿ ನಮ್ಮನ್ನು ಸಂಧಿಸಲು ಮತ್ತು ರೈಲುಗಾಡಿಯ ಮೂಲಕ ಪುನಃ ಮಿಲನ್ಗೆ ಕರೆದುಕೊಂಡು ಹೋಗಲು, ಜಿನೋಆದ ರೇವು ಪಟ್ಟಣಕ್ಕೆ ಬಂದರು.
ಮಿಲನ್ನಲ್ಲಿದ್ದ ಮಿಷನೆರಿ ಮನೆಯನ್ನು ನಾವು ಬಂದು ತಲಪಿದಾಗ, ನಮ್ಮಲ್ಲಿ ಪ್ರತಿಯೊಬ್ಬರ ಕೋಣೆಗಳಲ್ಲಿ ಒಬ್ಬಾಕೆ ಚಿಕ್ಕ ಇಟ್ಯಾಲಿಯನ್ ಹುಡುಗಿಯು ಹೂವುಗಳನ್ನು ಇಟ್ಟದ್ದನ್ನು ನಾವು ಕಂಡುಕೊಂಡೆವು. ವರ್ಷಗಳ ತರುವಾಯ ಈ ಹುಡುಗಿ, ಮಾರಿಯಾ ಮೆರಾಫಿನ, ಗಿಲ್ಯಡ್ಗೆ ಹೋಗಿ, ಇಟಲಿಗೆ ಹಿಂದಿರುಗಿದಳು, ಮತ್ತು ಆಕೆ ಹಾಗೂ ನಾನು ಒಟ್ಟಿಗೆ ಒಂದು ಮಿಷನೆರಿ ಮನೆಯಲ್ಲಿ ಸೇವೆ ಸಲ್ಲಿಸಿದೆವು!
ನಾವು ಮಿಲನ್ ಅನ್ನು ಸೇರಿದ ಮರುದಿನ ಬೆಳಗ್ಗೆ, ಸ್ನಾನದ ಕೋಣೆಯ ಕಿಟಕಿಯಿಂದ ಹೊರಗೆ ನೋಡಿದೆವು. ನಮ್ಮ ಮನೆಯ ಹಿಂಭಾಗದಲ್ಲಿದ್ದ ರಸ್ತೆಯಲ್ಲಿ, ಬಾಂಬಿನಿಂದ ಧ್ವಂಸಗೊಂಡಿದ್ದ ಒಂದು ದೊಡ್ಡದಾದ ವಾಸದ ಕಟ್ಟಡವಿತ್ತು. ಒಂದು ಅಮೆರಿಕನ್ ಬಾಂಬ್ ವಿಮಾನವು, ಅಲ್ಲಿ ಜೀವಿಸುತ್ತಿದ್ದ ಎಲ್ಲ 80 ಕುಟುಂಬಗಳನ್ನು ಕೊಂದುಹಾಕಿದ ಒಂದು ಬಾಂಬನ್ನು ಆಕಸ್ಮಿಕವಾಗಿ ಬೀಳಿಸಿತು. ಇನ್ನೊಂದು ಬಾರಿ, ಕಾರ್ಖಾನೆಯೊಂದು ಬಾಂಬುಗಳ ಗುರಿಯಿಂದ ತಪ್ಪಿಹೋಗಿ, ಆ ಬಾಂಬುಗಳು ಒಂದು ಶಾಲೆಗೆ ತಗಲಿ, 500 ಮಕ್ಕಳನ್ನು ಕೊಂದವು. ಆದುದರಿಂದ ಜನರು, ಅಮೆರಿಕದವರನ್ನು ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.
ಜನರು ಯುದ್ಧದಿಂದ ಬೇಸತ್ತು ಹೋಗಿದ್ದರು. ಮತ್ತೊಂದು ಯುದ್ಧವು ತೊಡಗುವಲ್ಲಿ, ತಾವು ಬಾಂಬಿನಿಂದ ಆಶ್ರಯ ಪಡೆಯುವ ಸ್ಥಳಗಳಿಗಲ್ಲ, ಬದಲಿಗೆ ಮನೆಯಲ್ಲಿಯೇ ಉಳಿದು, ಗ್ಯಾಸನ್ನು ಆನ್ ಮಾಡಿ, ಅಲ್ಲಿಯೇ ಸಾಯುವೆವೆಂದು ಅನೇಕರು ಹೇಳಿದರು. ನಾವು ಅಮೆರಿಕ ದೇಶವನ್ನಾಗಲಿ, ಬೇರೆ ಯಾವುದೇ ಮಾನವ ನಿರ್ಮಿತ ಸರಕಾರವನ್ನಾಗಲಿ ಪ್ರತಿನಿಧಿಸಲು ಅಲ್ಲ, ಬದಲಿಗೆ ಎಲ್ಲ ಯುದ್ಧಗಳನ್ನು ಹಾಗೂ ಅವುಗಳು ತರುವ ಕಷ್ಟಾನುಭವವನ್ನು ಕೊನೆಗೊಳಿಸಲಿರುವ ದೇವರ ರಾಜ್ಯವನ್ನು ಪ್ರತಿನಿಧಿಸಲು ಅಲ್ಲಿದ್ದೇವೆಂಬ ಆಶ್ವಾಸನೆಯನ್ನು ನಾವು ಅವರಿಗೆ ನೀಡಿದೆವು.
ದೊಡ್ಡ ನಗರವಾದ ಮಿಲನ್ನಲ್ಲಿ, ಸುಮಾರು 20 ಜನರಿದ್ದ ಏಕೈಕ ಸಭೆಯು ಮಿಷನೆರಿ ಮನೆಯಲ್ಲಿ ಸಂಧಿಸಿತು. ಅಷ್ಟರ ವರೆಗೂ ಸಾರುವ ಟೆರಿಟೊರಿಗಳನ್ನು ರೂಪಿಸಿರಲಿಲ್ಲ, ಆದುದರಿಂದ ಒಂದು ದೊಡ್ಡದಾದ ವಾಸದ ಕಟ್ಟಡದಲ್ಲಿ ಸಾಕ್ಷಿನೀಡುವುದನ್ನು ನಾವು ಆರಂಭಿಸಿದೆವು. ಪ್ರಥಮ ಬಾಗಿಲಿನಲ್ಲಿ ನಾವು, ಯಾರು ತನ್ನ ಹೆಂಡತಿಯು ಚರ್ಚನ್ನು ಬಿಟ್ಟುಬಿಡಬೇಕೆಂಬುದನ್ನು ಬಯಸಿದರೊ, ಆ ಶ್ರೀ. ಜಾನ್ಡಿನೋಟಿ ಅವರನ್ನು ಭೇಟಿಯಾದೆವು, ಆದುದರಿಂದ ಅವರು ನಮ್ಮ ಪ್ರಕಾಶನಗಳಲ್ಲಿ ಒಂದನ್ನು ಸ್ವೀಕರಿಸಿದರು. ಶ್ರೀಮತಿ ಜಾನ್ಡಿನೋಟಿ ಹಲವಾರು ಪ್ರಶ್ನೆಗಳಿದ್ದ ಒಬ್ಬ ಪ್ರಾಮಾಣಿಕ ಸ್ತ್ರೀಯಾಗಿದ್ದರು. “ನೀನು ಇಟ್ಯಾಲಿಯನ್ ಭಾಷೆಯನ್ನು ಕಲಿತಾಗ ನಾನು ಸಂತೋಷಿಸುವೆ,” ಎಂದು ಅವರು ಹೇಳಿದರು, “ಆಗ ನೀನು ನನಗೆ ಬೈಬಲನ್ನು ಕಲಿಸಬಲ್ಲೆ.”
ಅವರ ವಾಸದ ಕೋಣೆಯಲ್ಲಿನ ಒಳಮಾಳಿಗೆಗಳು ಎತ್ತರವಾಗಿದ್ದು, ಬೆಳಕು ಮಂದವಾಗಿತ್ತು, ಆದುದರಿಂದ ಬೈಬಲನ್ನು ಓದುವ ಸಲುವಾಗಿ ಬೆಳಕಿಗೆ ಹತ್ತಿರವಿರಲು, ಅವರು ಮೇಜಿನ ಮೇಲೆ ತಮ್ಮ ಕುರ್ಚಿಯನ್ನು ಹಾಕಿಕೊಳ್ಳುತ್ತಿದ್ದರು. “ನಾನು ನಿಮ್ಮೊಂದಿಗೆ ಬೈಬಲನ್ನು ಅಭ್ಯಸಿಸುವುದಾದರೆ, ನಾನು ಆಗಲೂ ಚರ್ಚಿಗೆ ಹೋಗಸಾಧ್ಯವಿದೆಯೊ?” ಎಂದು ಅವರು ಕೇಳಿದರು. ಅದು ಅವರಿಗೆ ಬಿಟ್ಟದ್ದೆಂದು ನಾವು ಹೇಳಿದೆವು. ಅವರು ರವಿವಾರ ಬೆಳಗ್ಗೆಗಳಲ್ಲಿ ಚರ್ಚಿಗೆ ಹೋದರು ಮತ್ತು ಮಧ್ಯಾಹ್ನಗಳಲ್ಲಿ ನಮ್ಮ ಕೂಟಗಳಿಗೆ ಬಂದರು. ಅನಂತರ ಒಂದು ದಿನ, “ನಾನು ಇನ್ನೆಂದಿಗೂ ಚರ್ಚಿಗೆ ಹೋಗುವುದಿಲ್ಲ,” ಎಂದು ಅವರು ಹೇಳಿದರು.
“ಏಕೆ?” ಎಂದು ನಾವು ಕೇಳಿದೆವು.
“ಏಕೆಂದರೆ ಅವರು ಬೈಬಲನ್ನು ಕಲಿಸುತ್ತಿಲ್ಲ, ಮತ್ತು ನಾನು ನಿಮ್ಮೊಂದಿಗೆ ಬೈಬಲನ್ನು ಅಭ್ಯಸಿಸುವ ಮೂಲಕ ಸತ್ಯವನ್ನು ಕಂಡುಕೊಂಡಿದ್ದೇನೆ.” ಅವರು ದೀಕ್ಷಾಸ್ನಾನ ಪಡೆದುಕೊಂಡರು ಮತ್ತು ಪ್ರತಿದಿನ ಚರ್ಚಿಗೆ ಹೋಗುತ್ತಿದ್ದ ಅನೇಕ ಸ್ತ್ರೀಯರೊಂದಿಗೆ ಅವರು ಅಭ್ಯಸಿಸಿದರು. ಅವರು ಚರ್ಚಿಗೆ ಹೋಗಬಾರದೆಂದು ನಾವು ಅವರಿಗೆ ಹೇಳಿರುತ್ತಿದ್ದಲ್ಲಿ, ಅವರು ಅಭ್ಯಸಿಸುವುದನ್ನು ನಿಲ್ಲಿಸಿ, ಬಹುಶಃ ಸತ್ಯವನ್ನು ಎಂದಿಗೂ ಕಲಿಯುತ್ತಿರಲಿಲ್ಲವೆಂದು ಅವರು ತದನಂತರ ನಮಗೆ ಹೇಳಿದರು.
ಹೊಸ ನೇಮಕಗಳು
ಸಕಾಲದಲ್ಲಿ ಇತರ ನಾಲ್ಕು ಮಿಷನೆರಿಗಳ ಜೊತೆಗೆ, ಡಾರಥಿ ಮತ್ತು ನಾನು, ಇಟ್ಯಾಲಿಯನ್ ನಗರವಾದ ಟ್ರಿಯೆಸ್ಟ್ಗೆ ನೇಮಿಸಲ್ಪಟ್ಟೆವು. ಆ ಸಮಯದಲ್ಲಿ ಬ್ರಿಟಿಷ್ ಮತ್ತು ಅಮೆರಿಕನ್ ಸೇನಾಪಡೆಗಳು ಅಲ್ಲಿದ್ದವು. ಸುಮಾರು ಹತ್ತು ಸಾಕ್ಷಿಗಳು ಮಾತ್ರ ಅಲ್ಲಿದ್ದರು, ಆದರೆ ಈ ಸಂಖ್ಯೆಯು ಬೆಳೆಯಿತು. ನಾವು ಮೂರು ವರ್ಷಗಳ ಕಾಲ ಟ್ರಿಯೆಸ್ಟ್ದಲ್ಲಿ ಸಾರಿದೆವು, ಮತ್ತು ಆ ಸ್ಥಳವನ್ನು ನಾವು ಬಿಡುವಾಗ ಅಲ್ಲಿ 40 ರಾಜ್ಯ ಪ್ರಚಾರಕರಿದ್ದರು, ಅವರಲ್ಲಿ 10 ಜನರು ಪಯನೀಯರರಾಗಿದ್ದರು.
ನಮ್ಮ ಮುಂದಿನ ನೇಮಕವು ವೆರೋನ ನಗರವಾಗಿತ್ತು, ಅಲ್ಲಿ ಯಾವ ಸಭೆಯೂ ಇರಲಿಲ್ಲ. ಆದರೆ ಚರ್ಚು ಐಹಿಕ ಅಧಿಕಾರಿಗಳ ಮೇಲೆ ಒತ್ತಡವನ್ನು ಹಾಕಿದಾಗ, ನಾವು ಆ ಸ್ಥಳವನ್ನು ಬಿಡುವಂತೆ ಒತ್ತಾಯಿಸಲ್ಪಟ್ಟೆವು. ಡಾರಥಿ ಮತ್ತು ನಾನು ರೋಮ್ಗೆ ನೇಮಿಸಲ್ಪಟ್ಟೆವು. ಅಲ್ಲಿ ಸಜ್ಜುಗೊಳಿಸಿದ ಒಂದು ಕೋಣೆಯನ್ನು ನಾವು ಬಾಡಿಗೆಗೆ ಪಡೆದುಕೊಂಡೆವು, ಮತ್ತು ವ್ಯಾಟಿಕನ್ಗೆ ಹತ್ತಿರವಿದ್ದ ಟೆರಿಟೊರಿಯಲ್ಲಿ ನಾವು ಕೆಲಸಮಾಡಿದೆವು. ನಾವು ಅಲ್ಲಿ ಇರುವಾಗಲೆ, ಜಾನ್ ಚಿಮಿಕ್ಲಿಸ್ನನ್ನು ಮದುವೆಯಾಗಲು ಡಾರಥಿ ಲೆಬನಾನ್ಗೆ ಹೋದಳು. ನಾವು ಸುಮಾರು 12 ವರ್ಷಗಳ ವರೆಗೆ ಒಟ್ಟಿಗೆ ಇದ್ದೆವು, ಮತ್ತು ಅವಳಿಲ್ಲದುದಕ್ಕೆ ನಾನು ನಿಜವಾಗಿಯೂ ವಿಷಾದಪಟ್ಟೆ.
1955ರಲ್ಲಿ, ರೋಮ್ನ ಮತ್ತೊಂದು ಭಾಗದಲ್ಲಿನ ನ್ಯೂ ಆ್ಯಪ್ಪಿಯನ್ ವೇ ಎಂಬ ರಸ್ತೆಯಲ್ಲಿ, ಒಂದು ಹೊಸ ಮಿಷನೆರಿ ಮನೆಯು ತೆರೆಯಲ್ಪಟ್ಟಿತು. ಆ ಮನೆಯಲ್ಲಿದ್ದ ನಾಲ್ವರಲ್ಲಿ ಒಬ್ಬಳು, ನಾವು ಮಿಲನ್ ಅನ್ನು ತಲಪಿದ ರಾತ್ರಿಯಂದು ನಮ್ಮ ಕೋಣೆಗಳಲ್ಲಿ ಹೂವುಗಳನ್ನಿಟ್ಟ ಹುಡುಗಿ, ಮಾರಿಯಾ ಮೆರಾಫಿನ ಆಗಿದ್ದಳು. ನಗರದ ಈ ಕ್ಷೇತ್ರದಲ್ಲಿ ಒಂದು ಹೊಸ ಸಭೆಯು ರೂಪುಗೊಂಡಿತು. ಆ ಬೇಸಗೆಯ ಕಾಲದಲ್ಲಿ, ರೋಮ್ನಲ್ಲಾದ ಅಂತಾರಾಷ್ಟ್ರೀಯ ಅಧಿವೇಶನದ ನಂತರ, ಜರ್ಮನಿಯ ನ್ಯೂರಮ್ಬರ್ಗ್ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗುವ ಸುಯೋಗವು ನನ್ನದಾಗಿತ್ತು. ಹಿಟ್ಲರನ ಆಳಿಕೆಯ ಕೆಳಗೆ ಬಹಳಷ್ಟು ಹಿಂಸೆಯನ್ನು ತಾಳಿಕೊಂಡಿದ್ದವರನ್ನು ಸಂಧಿಸುವುದು ಎಂತಹ ಒಂದು ರೋಮಾಂಚನ!
ಪುನಃ ಅಮೆರಿಕಕ್ಕೆ
1956ರಲ್ಲಿ, ಆರೋಗ್ಯ ಸಮಸ್ಯೆಗಳ ಕಾರಣ, ಕಾಯಿಲೆ ರಜೆಯ ಮೇಲೆ ನಾನು ಅಮೆರಿಕಕ್ಕೆ ಹಿಂದಿರುಗಿದೆ. ಆದರೆ ಯೆಹೋವನನ್ನು ಈಗ ಮತ್ತು ಆತನ ನೂತನ ಲೋಕದಲ್ಲಿ ಅಂತ್ಯರಹಿತವಾಗಿ ಸೇವಿಸುವುದರ ಬಹುಮಾನದ ಮೇಲಿನಿಂದ ನನ್ನ ಕಣ್ಣುಗಳನ್ನು ನಾನು ಎಂದಿಗೂ ತೆಗೆಯಲಿಲ್ಲ. ಇಟಲಿಗೆ ಹಿಂದಿರುಗುವುದರ ಕುರಿತು ನಾನು ಯೋಜಿಸಿದೆ. ಆದರೆ, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ, ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡುತ್ತಿದ್ದ ಆರ್ವಿಲ್ ಮೈಕಲ್ ಅನ್ನು ನಾನು ಸಂಧಿಸಿದೆ. ನ್ಯೂ ಯಾರ್ಕ್ ನಗರದಲ್ಲಾದ 1958ರ ಅಂತಾರಾಷ್ಟ್ರೀಯ ಅಧಿವೇಶನದ ಬಳಿಕ ನಾವು ಮದುವೆಯಾದೆವು.
ಇದಾದ ಸ್ವಲ್ಪ ಸಮಯದ ನಂತರ ನಾವು ವರ್ಜಿನಿಯದ ಫ್ರಂಟ್ ರಾಯಲ್ಗೆ ಸ್ಥಳಾಂತರಿಸಿದೆವು. ಅಲ್ಲಿ ಒಂದು ಸಣ್ಣ ಸಭೆಯೊಂದಿಗೆ ಸೇವೆಮಾಡುವುದರಲ್ಲಿ ನಾವು ಆನಂದಿಸಿದೆವು. ರಾಜ್ಯ ಸಭಾಗೃಹದ ಹಿಂದೆಯಿದ್ದ ಒಂದು ಚಿಕ್ಕ ವಾಸದ ಕೋಣೆಯಲ್ಲಿ ನಾವು ವಾಸಿಸಿದೆವು. ಅಂತಿಮವಾಗಿ, ಮಾರ್ಚ್ 1960ರಲ್ಲಿ, ಬ್ರೂಕ್ಲಿನ್ಗೆ ಹಿಂದಿರುಗಿ, ನಮ್ಮ ಬೆಲೆಪಟ್ಟಿಗಳಿಗೆ ಹಣ ಸಲ್ಲಿಸುವ ಸಲುವಾಗಿ ಐಹಿಕ ಕೆಲಸವನ್ನು ಕಂಡುಕೊಳ್ಳುವುದು ಅಗತ್ಯವಾಯಿತು. ನಾವು ಪೂರ್ಣ ಸಮಯದ ಸೇವೆಯಲ್ಲಿ ಉಳಿಯಸಾಧ್ಯವಿರುವಂತೆ, ವಿಭಿನ್ನ ಬ್ಯಾಂಕುಗಳಲ್ಲಿ ರಾತ್ರಿಯ ಸಮಯಗಳಲ್ಲಿ ಕೆಲಸಮಾಡಿದೆವು.
ನಾವು ಬ್ರೂಕ್ಲಿನ್ನಲ್ಲಿರುವಾಗ, ನನ್ನ ತಂದೆಯವರು ತೀರಿಕೊಂಡರು, ಮತ್ತು ನನ್ನ ಗಂಡನ ತಾಯಿಯವರು, ಲಘುವಾದ ಪಾರ್ಶ್ವವಾಯುವಿನ ಹೊಡೆತವನ್ನು ಅನುಭವಿಸಿದರು. ಆದುದರಿಂದ ನಮ್ಮ ತಾಯಂದಿರ ಹತ್ತಿರವಿರಲು ನಾವು ಆರೆಗಾನ್ಗೆ ಸ್ಥಳಾಂತರಿಸಲು ನಿರ್ಧರಿಸಿದೆವು. ನಾವಿಬ್ಬರೂ ಅಂಶಕಾಲಿಕ ಐಹಿಕ ಕೆಲಸವನ್ನು ಕಂಡುಕೊಂಡೆವು ಮತ್ತು ಅಲ್ಲಿ ಪಯನೀಯರ್ ಶುಶ್ರೂಷೆಯಲ್ಲಿ ಮುಂದುವರಿದೆವು. 1964ರ ಶರತ್ಕಾಲದಲ್ಲಿ, ಪೆನ್ಸಿಲ್ವೇನಿಯದ ಪಿಟ್ಸಬರ್ಗ್ನಲ್ಲಿರುವ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ವಾರ್ಷಿಕ ಕೂಟಕ್ಕೆ ಹಾಜರಾಗಲು, ನಾವು ಮತ್ತು ನಮ್ಮ ತಾಯಂದಿರು ಅಮೆರಿಕಕ್ಕೆ ಪ್ರಯಾಣಿಸಿದೆವು.
ರೋಡ್ ದ್ವೀಪಕ್ಕೆ ನಾವು ಭೇಟಿನೀಡಿದ ಸಂದರ್ಭದಲ್ಲಿ, ರಾಜ್ಯದ ರಾಜಧಾನಿಯಾದ ಪ್ರಾವಿಡೆನ್ಸ್ಗೆ—ಎಲ್ಲಿ ರಾಜ್ಯ ಪ್ರಚಾರಕರಿಗಾಗಿ ಅಗತ್ಯವು ಹೆಚ್ಚಾಗಿತ್ತೊ ಅಲ್ಲಿಗೆ—ಸ್ಥಳಾಂತರಿಸುವಂತೆ ಒಬ್ಬ ಸರ್ಕಿಟ್ ಮೇಲ್ವಿಚಾರಕರಾದ ಆರ್ಲೆನ್ ಮೇಯರ್ ಮತ್ತು ಅವರ ಹೆಂಡತಿಯಿಂದ ನಾವು ಉತ್ತೇಜಿಸಲ್ಪಟ್ಟೆವು. ಈ ಹೊಸ ನೇಮಕವನ್ನು ಸ್ವೀಕರಿಸುವಂತೆ ನಮ್ಮ ತಾಯಂದಿರು ನಮ್ಮನ್ನು ಒತ್ತಾಯಿಸಿದರು, ಆದುದರಿಂದ ಆರೆಗನ್ಗೆ ಹಿಂದಿರುಗಿದ ಮೇಲೆ, ನಮ್ಮ ಮನೆವಾರ್ತೆಯ ವಸ್ತುಗಳಲ್ಲಿ ಹೆಚ್ಚಿನವುಗಳನ್ನು ನಾವು ಮಾರಿ, ಸ್ಥಳಾಂತರಿಸಿದೆವು.
ಪುನಃ ಗಿಲ್ಯಡ್ ಶಾಲೆಗೆ
1965ರ ಬೇಸಗೆಯ ಕಾಲದಲ್ಲಿ, ಯಾನ್ಕಿ ಸ್ಟೇಡಿಯಂನಲ್ಲಿ ನಡೆದ ಒಂದು ಅಧಿವೇಶನಕ್ಕೆ ನಾವು ಹಾಜರಾದೆವು. ಅಲ್ಲಿ ನಾವು ವಿವಾಹಿತ ದಂಪತಿಗಳೋಪಾದಿ ಗಿಲ್ಯಡ್ ಶಾಲೆಗೆ ಅರ್ಜಿಗಳನ್ನು ಸಲ್ಲಿಸಿದೆವು. ಸುಮಾರು ಒಂದು ತಿಂಗಳಿನ ನಂತರ, ನಾವು ಗಿಲ್ಯಡ್ ಅರ್ಜಿಗಳನ್ನು ಪಡೆದಾಗ ಆಶ್ಚರ್ಯಗೊಂಡೆವು. ಅವುಗಳನ್ನು 30 ದಿನಗಳಲ್ಲಿ ಹಿಂದಿರುಗಿಸಬೇಕಿತ್ತು. ತಾಯಿಯು ಒಳ್ಳೆಯ ಆರೋಗ್ಯದಲ್ಲಿರದ ಕಾರಣ, ದೂರದ ದೇಶಕ್ಕೆ ಹೋಗುವುದರ ಕುರಿತು ನಾನು ಚಿಂತಿತಳಾಗಿದ್ದೆ. ಆದರೆ ಅವರು ನನ್ನನ್ನು ಉತ್ತೇಜಿಸಿದರು: “ಆ ಅರ್ಜಿಗಳನ್ನು ತುಂಬಿಸು. ಯೆಹೋವನು ನೀಡುವ ಯಾವುದೇ ಸೇವಾ ಸುಯೋಗವನ್ನು ಯಾವಾಗಲೂ ಸ್ವೀಕರಿಸಬೇಕೆಂಬುದು ನಿನಗೆ ತಿಳಿದಿದೆ!”
ವಿಷಯವನ್ನು ಅದು ಬಗೆಹರಿಸಿತು. ನಾವು ಅರ್ಜಿಗಳನ್ನು ತುಂಬಿಸಿ, ಕಳುಹಿಸಿದೆವು. 1966, ಏಪ್ರಿಲ್ 25ರಂದು ಆರಂಭಗೊಂಡ 42ನೆಯ ತರಗತಿಗೆ ಆಮಂತ್ರಣಗಳನ್ನು ಪಡೆಯುವುದು ಎಂತಹ ಒಂದು ಆಶ್ಚರ್ಯವಾಗಿತ್ತು! ಗಿಲ್ಯಡ್ ಶಾಲೆಯು ಆಗ ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿತ್ತು. ಐದು ತಿಂಗಳುಗಳಿಗೆ ಸ್ವಲ್ಪ ಮುಂಚಿತವಾಗಿ, ನಮ್ಮಲ್ಲಿ 106 ಜನರು 1966, ಸೆಪ್ಟಂಬರ್ 11ರಂದು ಪದವಿಪ್ರಾಪ್ತರಾದೆವು.
ಆರ್ಜೆಂಟೀನಕ್ಕೆ ನೇಮಿಸಲ್ಪಟ್ಟದ್ದು
ಪದವಿಪ್ರಾಪ್ತಿಗೊಂಡ ಎರಡು ದಿನಗಳ ತರುವಾಯ, ನಾವು ಪೆರುವಿಯನ್ ಏರ್ಲೈನ್ಸ್ನ ಮುಖಾಂತರ, ಆರ್ಜೆಂಟೀನಗೆ ಹೋಗುವ ನಮ್ಮ ದಾರಿಯಲ್ಲಿದ್ದೆವು. ಬ್ಯೂನಸ್ ಏರೆಸ್ ಅನ್ನು ನಾವು ತಲಪಿದಾಗ, ಬ್ರಾಂಚ್ ಮೇಲ್ವಿಚಾರಕರಾದ ಚಾರ್ಲ್ಸ್ ಐಸನ್ಹೊವರ್ ನಮ್ಮನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ಸುಂಕದ ಖಾತೆಯಿಂದ ಹೊರಬರಲು ಅವರು ನಮಗೆ ಸಹಾಯ ಮಾಡಿದರು ಮತ್ತು ನಮ್ಮನ್ನು ಬ್ರಾಂಚಿಗೆ ಕರೆದುಕೊಂಡು ಹೋದರು. ನಮ್ಮ ಸಾಮಾನುಗಳನ್ನು ಹೊರಕ್ಕೆ ತೆಗೆಯಲು ಮತ್ತು ವ್ಯವಸ್ಥಿತಗೊಳ್ಳಲು ನಮಗೆ ಒಂದು ದಿನವಿತ್ತು; ನಂತರ ನಮ್ಮ ಸ್ಪ್ಯಾನಿಷ್ ಭಾಷೆಯ ತರಗತಿಗಳು ಆರಂಭಿಸಿದವು. ಪ್ರಥಮ ತಿಂಗಳು ನಾವು ದಿನಕ್ಕೆ 11 ತಾಸುಗಳ ವರೆಗೆ ಸ್ಪ್ಯಾನಿಷ್ ಭಾಷೆಯನ್ನು ಕಲಿತೆವು. ಎರಡನೆಯ ತಿಂಗಳು, ನಾವು ಭಾಷೆಯನ್ನು ದಿನಕ್ಕೆ ನಾಲ್ಕು ತಾಸುಗಳ ವರೆಗೆ ಅಭ್ಯಸಿಸಿದೆವು ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಲು ತೊಡಗಿದೆವು.
ನಾವು ಬ್ಯೂನಸ್ ಏರಸ್ನಲ್ಲಿ ಐದು ತಿಂಗಳುಗಳ ಕಾಲ ಇದ್ದೆವು ಮತ್ತು ಅನಂತರ ರೈಲುಗಾಡಿಯಿಂದ ಸುಮಾರು ನಾಲ್ಕು ತಾಸುಗಳು ತಗಲುವ, ಉತ್ತರಕ್ಕಿರುವ ಒಂದು ದೊಡ್ಡ ಪಟ್ಟಣವಾದ ರೊಸಾರಿಯೊಗೆ ನೇಮಿಸಲ್ಪಟ್ಟೆವು. ಅಲ್ಲಿ 15 ತಿಂಗಳುಗಳ ವರೆಗೆ ಸೇವೆ ಸಲ್ಲಿಸಿದ ಬಳಿಕ, ಇನ್ನೂ ಉತ್ತರಕ್ಕಿರುವ ಸ್ಯಾಂಟಿಯೆಗೊ ಡೆಲ್ ಏಸ್ಟೆರೊ—ಸುಡುವ ಮರುಳುಗಾಡಿನ ಪ್ರಾಂತದಲ್ಲಿರುವ ಒಂದು ನಗರ—ಕ್ಕೆ ನಾವು ಕಳುಹಿಸಲ್ಪಟ್ಟೆವು. ನಾವು ಅಲ್ಲಿದ್ದಾಗ, ಜನವರಿ 1973ರಲ್ಲಿ ನನ್ನ ತಾಯಿಯು ತೀರಿಕೊಂಡರು. ನಾಲ್ಕು ವರ್ಷಗಳಲ್ಲಿ ಅವರನ್ನು ನಾನು ನೋಡಿಯೇ ಇರಲಿಲ್ಲ. ನನ್ನ ದುಃಖವನ್ನು ತಾಳಿಕೊಳ್ಳುವಂತೆ ಸಹಾಯ ಮಾಡಿದ್ದು—ಪುನರುತ್ಥಾನದ ನಿಶ್ಚಿತವಾದ ನಿರೀಕ್ಷೆ ಅಷ್ಟೇ ಅಲ್ಲದೆ ನಾನು ಎಲ್ಲಿರಬೇಕೆಂದು ತಾಯಿಯು ಬಯಸುತ್ತಿದ್ದರೊ ಅಲ್ಲಿ ನಾನು ಸೇವೆಮಾಡುತ್ತಿದ್ದೇನೆಂಬ ತೃಪ್ತಿಯೇ.—ಯೋಹಾನ 5:28, 29; ಅ. ಕೃತ್ಯಗಳು 24:15.
ಸ್ಯಾಂಟಿಯೆಗೊ ಡೆಲ್ ಏಸ್ಟೆರೊದಲ್ಲಿದ್ದ ಜನರು ಸ್ನೇಹಭಾವದವರಾಗಿದ್ದರು, ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು ಸುಲಭವಾಗಿತ್ತು. ನಾವು 1968ರಲ್ಲಿ ಬಂದು ತಲಪಿದಾಗ, ಸುಮಾರು 20 ಅಥವಾ 30 ಜನರು ಕೂಟಗಳಿಗೆ ಹಾಜರಾಗುತ್ತಿದ್ದರು, ಆದರೆ ಎಂಟು ವರ್ಷಗಳ ತರುವಾಯ ನಮ್ಮ ಸಭೆಯಲ್ಲಿ ನೂರಕ್ಕಿಂತಲೂ ಹೆಚ್ಚಿನ ಜನರಿದ್ದರು. ಇದಕ್ಕೆ ಸೇರಿಸಿ, ಹತ್ತಿರದ ಪಟ್ಟಣಗಳಲ್ಲಿ 25ರಿಂದ 50 ಪ್ರಚಾರಕರಿರುವ ಎರಡು ಹೊಸ ಸಭೆಗಳಿದ್ದವು.
ಮತ್ತೊಮ್ಮೆ ಅಮೆರಿಕಕ್ಕೆ ಹಿಂದಿರುಗುವುದು
ಆರೋಗ್ಯ ಸಮಸ್ಯೆಗಳಿಂದಾಗಿ, ನಾವು 1976ರಲ್ಲಿ ವಿಶೇಷ ಪಯನೀಯರರೋಪಾದಿ ಅಮೆರಿಕ—ಫೆಯೆಟ್ವಿಲ್, ಉತ್ತರ ಕ್ಯಾರೊಲೈನಾ—ಕ್ಕೆ ಮತ್ತೊಮ್ಮೆ ನೇಮಿಸಲ್ಪಟ್ಟೆವು. ಅಲ್ಲಿ ಕೇಂದ್ರೀಯ ಹಾಗೂ ದಕ್ಷಿಣ ಅಮೆರಿಕ, ಡೊಮಿನಿಕನ್ ರಿಪಬ್ಲಿಕ್, ಪೋರ್ಟರೀಕೊ, ಮತ್ತು ಸ್ಪೆಯಿನ್ನಿಂದಲೂ ಬಂದ ಸ್ಪ್ಯಾನಿಷ್ ಭಾಷೆಯನ್ನು ಮಾತಾಡುವ ಅನೇಕ ಜನರಿದ್ದರು. ಅನೇಕ ಬೈಬಲ್ ಅಧ್ಯಯನಗಳು ನಮಗಿದ್ದವು, ಮತ್ತು ಸಕಾಲದಲ್ಲಿ ಒಂದು ಸ್ಪ್ಯಾನಿಷ್ ಸಭೆಯು ಆರಂಭಗೊಂಡಿತು. ನಾವು ಆ ನೇಮಕದಲ್ಲಿ ಬಹುಮಟ್ಟಿಗೆ ಎಂಟು ವರ್ಷಗಳನ್ನು ಕಳೆದೆವು.
ಹಾಗಿದ್ದರೂ, ಬಹಳಷ್ಟು ವೃದ್ಧರೂ ಅಶಕ್ತರೂ ಆಗಿದ್ದ ನನ್ನ ಅತ್ತೆಯ ಹತ್ತಿರವಿರುವ ಅಗತ್ಯವು ನಮಗಿತ್ತು. ಅವರು ಆರೆಗಾನ್ನ ಪೋರ್ಟಲೆಂಡ್ನಲ್ಲಿ ವಾಸಿಸುತ್ತಿದ್ದರು, ಆದುದರಿಂದ ನಮಗೆ ವಾಷಿಂಗ್ಟನ್ನ ವ್ಯಾನ್ಕೂವರ್ನಲ್ಲಿರುವ ಸ್ಪ್ಯಾನಿಷ್ ಭಾಷೆಯ ಸಭೆಗೆ—ಇದು ಪೋರ್ಟಲೆಂಡ್ನಿಂದ ದೂರವಿರುವುದಿಲ್ಲ—ಒಂದು ಹೊಸ ನೇಮಕವು ದೊರೆಯಿತು. ನಾವು 1983ರ ಡಿಸೆಂಬರ್ ತಿಂಗಳಿನಲ್ಲಿ ಬಂದು ತಲಪಿದಾಗ ಸಭೆಯು ಚಿಕ್ಕದಾಗಿತ್ತು, ಆದರೆ ಅನೇಕ ಹೊಸಬರನ್ನು ನಾವು ನೋಡುತ್ತಿದ್ದೇವೆ.
ಜೂನ್ 1996ರಲ್ಲಿ, ನಾನು 53 ವರ್ಷಗಳ ಪೂರ್ಣ ಸಮಯದ ಸೇವೆಯನ್ನು ಪೂರ್ತಿಗೊಳಿಸಿದೆ, ಮತ್ತು ನನ್ನ ಗಂಡ 1996, ಜನವರಿ 1ರಂದು 55 ವರ್ಷಗಳನ್ನು ಪೂರ್ತಿಗೊಳಿಸಿದನು. ಈ ಅನೇಕ ವರ್ಷಗಳ ಅವಧಿಯಲ್ಲಿ, ನೂರಾರು ಜನರು ದೇವರ ವಾಕ್ಯದ ಸತ್ಯದ ಜ್ಞಾನಕ್ಕೆ ಬರುವಂತೆ ಮತ್ತು ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಸಹಾಯ ಮಾಡುವ ಸುಯೋಗವು ನನ್ನದಾಗಿತ್ತು. ಇವರಲ್ಲಿ ಅನೇಕರು ಈಗ ಹಿರಿಯರು ಮತ್ತು ಪೂರ್ಣ ಸಮಯ ಶುಶ್ರೂಷಕರೋಪಾದಿ ಸೇವೆ ಸಲ್ಲಿಸುತ್ತಾರೆ.
ಕೆಲವೊಮ್ಮೆ ಮಕ್ಕಳಿರದ ಅಭಾವವು ನನಗಾಗುತ್ತದೊ ಎಂಬುದಾಗಿ ನನ್ನನ್ನು ಕೇಳಲಾಗಿದೆ. ನಿಜತ್ವವೇನೆಂದರೆ, ಯೆಹೋವನು ನನ್ನನ್ನು ಅನೇಕ ಆತ್ಮಿಕ ಮಕ್ಕಳು ಮತ್ತು ಮೊಮ್ಮಕ್ಕಳಿಂದ ಆಶೀರ್ವದಿಸಿದ್ದಾನೆ. ಹೌದು, ನನ್ನ ಜೀವಿತವು ಯೆಹೋವನ ಸೇವೆಯಲ್ಲಿ ಅರ್ಥಭರಿತವೂ ಪ್ರತಿಫಲದಾಯಕವೂ ಆಗಿದೆ. ಯೆಪ್ತಾಹನ ಮಗಳಿಗೆ ನಾನು ಸಂಬಂಧ ಕಲ್ಪಿಸಿಕೊಳ್ಳಸಾಧ್ಯವಿದೆ. ಆಕೆ ದೇವಾಲಯದ ಸೇವೆಯಲ್ಲಿ ತನ್ನ ಜೀವನವನ್ನು ವ್ಯಯಿಸಿದಳು ಮತ್ತು ಸೇವೆಯ ಆ ಮಹಾ ಸುಯೋಗದ ಕಾರಣ ಎಂದಿಗೂ ಮಕ್ಕಳನ್ನು ಪಡೆಯಲಿಲ್ಲ.—ನ್ಯಾಯಸ್ಥಾಪಕರು 11:38-40.
ನಾನು ಕೇವಲ ಒಬ್ಬ ಚಿಕ್ಕ ಹುಡುಗಿಯಾಗಿದ್ದಾಗ ಯೆಹೋವನಿಗೆ ಮಾಡಿದ ಸಮರ್ಪಣೆಯನ್ನು ನಾನು ಇನ್ನೂ ಜ್ಞಾಪಿಸಿಕೊಳ್ಳುತ್ತೇನೆ. ಪ್ರಮೋದವನದ ಚಿತ್ರವು ಆಗ ಎಷ್ಟು ಸುಸ್ಪಷ್ಟವಾಗಿತ್ತೊ ಇಂದು ಸಹ ಅಷ್ಟೇ ಸುಸ್ಪಷ್ಟವಾಗಿದೆ. ನನ್ನ ಕಣ್ಣುಗಳು ಮತ್ತು ಹೃದಯವು ದೇವರ ನೂತನ ಲೋಕದಲ್ಲಿನ ಅಂತ್ಯರಹಿತ ಜೀವಿತದ ಬಹುಮಾನದ ಮೇಲೆ ಇನ್ನೂ ನೆಟ್ಟಿರುತ್ತದೆ. ಹೌದು, ಸುಮಾರು 50 ವರ್ಷಗಳಿಗೆ ಮಾತ್ರವಲ್ಲ ಬದಲಿಗೆ ಅನಂತವಾಗಿ—ಆತನ ರಾಜ್ಯಾಳಿಕೆಯ ಕೆಳಗೆ—ಯೆಹೋವನ ಸೇವೆ ಮಾಡುವುದು ನನ್ನ ಬಯಕೆಯಾಗಿದೆ.
[ಪುಟ 23 ರಲ್ಲಿರುವ ಚಿತ್ರ]
ನನ್ನ ಭುಜಗಳ ಮೇಲೆ ಕೈಗಳನ್ನಿಟ್ಟಿರುವ ಡಾರಥಿ ಕ್ರೇಡನ್, ಮತ್ತು ಜೊತೆ ಪಯನೀಯರರು, 1943ರಲ್ಲಿ
[ಪುಟ 23 ರಲ್ಲಿರುವ ಚಿತ್ರ]
ಇಟಲಿಯ ರೋಮ್ನಲ್ಲಿ, ಜೊತೆ ಮಿಷನೆರಿಗಳೊಂದಿಗೆ, 1953ರಲ್ಲಿ
[ಪುಟ 25 ರಲ್ಲಿರುವ ಚಿತ್ರ]
ನನ್ನ ಗಂಡನೊಂದಿಗೆ